ಭಾರತ ಹಿಂದೆಂದೂ ಕಂಡಿರಿಯದಂತಹ ಬಿಕ್ಕಟ್ಟಿಗೆ ಇಂದು ಸಿಲುಕಿದೆ.  ದೇಶದ ಬಹುಜನರ ಭಾವನೆ ಮತ್ತು ಬದುಕಿಗೆ ತೀವ್ರ ಸವಾಲೊಡ್ಡಿರುವ ಕೋಮುವಾದ ವ್ಯಾಪಕವಾಗುತ್ತಿದೆ. ಪರಸ್ಪರ ಸ್ನೇಹ-ಸಹಬಾಳ್ವೆ ಮತ್ತು ಶಾಂತಿಯುತ ಬದುಕಿಗೆ ಹೆಸರಾಗಿದ್ದ ಭಾರತೀಯ ಸಮಾಜ ಈಗ ಕ್ಷೋಭೆಗೊಳಗಗಿ ನರಳುತ್ತಿದೆ. ಧರ್ಮದ ಹೆಸರಿನಲ್ಲಿ ಜನರನ್ನು ಪಡೆದು ಛಿದ್ರಗೊಳಿಸಲಾಗುತ್ತಿದೆ. ಕೋಮುವಾದಿ ರಾಜಕೀಯ ಪಕ್ಷಗಳು ದೇವರು ಮತ್ತು ಧರ್ಮದ ಹೆಸರಿನಲ್ಲಿ ಜನರನ್ನ ಪರಸ್ಪರ ಎತ್ತಿಕಟ್ಟಿ ತಮ್ಮ ಅಧಿಕಾರ ದಾಹವನ್ನು ತೀರಿಸಿಕೊಳ್ಳುವ ಹವಣಿಕೆಯಲ್ಲಿವೆ. ಇಂಥ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರಿಕರು ದೇಶದ ಈ ಘೋರ ದುರಂತವನ್ನು ತಡೆಯಲೇಬೇಕಾದ ಅನಿವಾಯ್ತೆ ಮೂಡಿದೆ.

ಮತಾಂಧತೆ, ನಿಜವಾಗಿಯೂ ದೇವರ ವಿರುದ್ಧವಾದುದು. ದೇವರ ಹೆಸರನ್ನು ರಾಜಕೀಯಕ್ಕೆ ಉಪಯೋಗಿಸುವವರು, ದೇವರಿಗೆ ವಿರೋಧವಾದವರು. ನಿಜವಾಗಿಯೂ ದೈವಭಕ್ತರಾದವರು, ದೇವರ ಜೊತೆ ಒಂದು ಸಂವಾದವನ್ನು ಹೂಡಿರುತ್ತಾರೆ. ಹಾಗೆ ಸಂವಾದವನ್ನು ಹೂಡಿದ ಎಲ್ಲ ಸಂತರಿಗೂ, ಎಲ್ಲ ಮನುಷ್ಯರು ಒಂದೇ ಆಗಿ ಕಾಣುತ್ತಾರೆ. ಅದು ತುಕಾರಾಮ ಇರಬಹುದು, ಅದು ಬಸವ ಇರಬಹುದು, ಅದು ಅಲ್ಲಮ ಇರಬಹುದು. ರಾಮ ಎಂಬುವನು ಅಯೋಧ್ಯೆಯಲ್ಲಿ ಇಂತಹ ತಾರೀಖು ಹುಟ್ಟಿದ ಎನ್ನುವುದು ಹಿಂದೂಗಳು ಯೋಚನೆ ಮಾಡುವ ಕ್ರಮವೇ ಅಲ್ಲ. ನನಗೆ ನೆನಪಿದೆ. ನಾನು ಆಗ ಕೇರಳದಲ್ಲಿದ್ದೆ. ನಾಯನಾರ್‌ಅವರು ಅಲ್ಲಿ ಮುಖ್ಯಮಂತ್ರಿ ಆಗಿದ್ದರು. ಅವರು ಕಮ್ಯುನಿಸ್ಟರು. ಈ ಜನ್ಮಭೂಮಿಯ ವಿವಾದ ಎದ್ದಾಗ ‘ಅರೆರೇ, ರಾಮ ಹುಟ್ಟಿದ್ದು ಕೇರಳದಲ್ಲಿ ಅಂತ ತಿಳಿದಿದ್ದೆ…’ ಎಂದರು.

ಯಾರು ಯಾರು ರಾಮ ಹುಟ್ಟಿದ್ದು ನಮ್ಮೂರಲ್ಲಿ ಎಂದು ತಿಳಿಯುತ್ತಾರೋ ಅವರು ರಾಮನನ್ನು ನಿಜವಾಗಿಯೂ ಪಡೆದವರು. ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ ಮಾತ್ರ ಎನ್ನುವವರು ಅವನನ್ನು ಒಬ್ಬ ಇತಿಹಾಸ ಪುರುಷನನ್ನಾಗಿ ನೋಡಿದಂತಾಗುತ್ತದೆ. ನಾವು ರಾಮನನ್ನು ಪುರಾಣ ಪುರುಷನನ್ನಾಗಿ ನೋಡುತ್ತೇವೆ. ಒಬ್ಬ ಮನುಷ್ಯನಾಗಿದ್ದು ದೇವತೆಯಾದಂತಹ, ದೇವರ ಯೋಗ್ಯತೆಯನ್ನು ಪಡೆದ ಮನುಷ್ಯನನ್ನಾಗಿ ನೋಡುತ್ತೇವೆ. ಅಷ್ಟೇ ಅಲ್ಲ, ಇವತ್ತಿಗೂ ಅವನ ಬಗ್ಗೆ ಜಗಳವನ್ನೂ ಆಡುತ್ತೇವೆ. ನೀನು ಸೀತೆಯನ್ನು ಬೆಂಕಿ ಮೇಲೆ ನಡೆಸಿದ್ದು ಸರಿಯೇನಪ್ಪಾ? ಅವಳನ್ನು ಕಾಡಿಗೆ ಕಳಿಸಿದ್ದು ಸರಿಯಾ? ಶಂಭೂಕನನ್ನು ನೀನು ಶಿಕ್ಷೆ ಮಾಡುವುದಕ್ಕೆ ಹೊರಟಿದ್ದು ಸರಿಯಾ? ಅಂತ ನಾವು ನಮ್ಮ ದೇವರನ್ನು ಪ್ರಶ್ನೆ ಮಾಡುತ್ತೇವೆ. ಯಾವ ದೇವರನ್ನು ನಾವು ಪ್ರಶ್ನೆ ಮಾಡುತ್ತೇವೆಯೋ ಆ ದೇವರ ಜತೆ ನಮಗೆ ಸಾಮೀಪ್ಯವಿದೆ ಎಂದು ಅರ್ಥ. ಒಂದು ಅನ್ಯೋನ್ಯತೆ ಇದೆ ಎಂದು ಅರ್ಥ. ನಮ್ಮನ್ನೇ ನಾವು ಪ್ರಶ್ನೆ, ಮಾಡಿಕೊಳ್ಳುತ್ತಿದ್ದೇವೆಂದು ಅರ್ಥ. ನಮ್ಮ ದೇವತಾ ಕಲ್ಪನೆ, ನಮ್ಮ ಕಲ್ಪನೆಯನ್ನಾಧರಿಸಿರುತ್ತದೆ. ಆ ಕಲ್ಪನೆಯಲ್ಲಿರುವ ಎಲ್ಲಾ ದೋಷಗಳು ನಮ್ಮ ದೇವತಾ ಕಲ್ಪನೆಯಲ್ಲೂ ಇರುತ್ತವೆ. ಅದಕ್ಕೆ ಗಾಂಧೀಜಿ, ಅಷ್ಟೂ ದೇವರ ಜತೆ ಸಂಭಾಷಣೆಯನ್ನು ನಡೆಸಿದವರು ಎಲ್ಲ ಧರ್ಮಗಳೂ ಅಪರಿಪೂರ್ಣ ಎಂದರು. ಯಾವ ಧರ್ಮವೂ ಪರಿಪೂರ್ಣವಲ್ಲ. ಆದ್ದರಿಂದ ಎಲ್ಲ ಧರ್ಮವೂ ಬೇಕು. ಪ್ರತಿಯೊಂದು ಧರ್ಮವೂ ಒಂದಲ್ಲ ಒಂದು ಕಾರಣದಿಂದ ಅಪರಿಪೂರ್ಣವಾಗಿರುತ್ತದೆ. ಆದ್ದರಿಂದ ಮತೀಯತೆ ಎನ್ನುವುದು ‘ನಮ್ಮ ಧರ್ಮ ಎಲ್ಲದಕ್ಕೂ ಶ್ರೇಷ್ಠವಾದುದು, ಇದನ್ನು ಮೀರಿದ ಇನ್ನೊಂದು ಧರ್ಮವೇ ಇಲ್ಲ, ಇದನ್ನು ಯಾರು ಪಾಲಿಸುವುದಿಲ್ಲವೋ, ಅವರು ಈ ದೇಶದಲ್ಲಿ ಪ್ರಜೆಗಳಾಗಿರುವುದಕ್ಕೆ ಅಯೋಗ್ಯರು’ ಇತ್ಯಾದಿ ನಾವು ಮಾತಾಡಲಿಕ್ಕೆ ಶುರು ಮಾಡುತ್ತೇವೆ. ಆದರೆ ಚುನಾವಣೆಯಲ್ಲಿ ನಾವು ಯಾವ ಯಾವ ಪ್ರಶ್ನೆಯನ್ನು ಎದುರಿಸಬೇಕೋ ಅವನ್ನು ಎದುರಿಸುತ್ತಿಲ್ಲ.

ಈಗ ಎಲ್ಲಾ ಕಡೆ ಏನು ಹೇಳುತ್ತಾರೆ ಎಂದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಟಲಿಯಲ್ಲಿ ಹುಟ್ಟಿದವಳು, ಇಲ್ಲಿ ಪ್ರಧಾನಿ ಆಗಬಾರದು ಎಂದು. ನನಗಿದು ತಮಾಷೆ ಎನಿಸುತ್ತದೆ. ಈ ಕಾಂಗ್ರೆಸ್ ಎ.ಓ.ಹ್ಯೂಂ ನೇತೃತ್ವದಲ್ಲಿ ಹುಟ್ಟಿದ್ದು. ಅವನೊಬ್ಬ ಆಂಗ್ಲ. ಅದರಲ್ಲಿ ಅನಿಬೆಸೆಂಟ್ ಕೂಡ ಇದ್ದಳು. ಒಬ್ಬ ಫಾರಿನರ್ ಎನ್ನುವುದು ಇಶ್ಯೂ ಆಗಬಾರದು. ಏಕೆಂದರೆ ನಾನು ಎಲ್ಲೋ ಒಂದು ಕಡೆ ತಮಾಷೆಗೆ ಹೇಳಿದೆ – ಈಗ ಉದಾಹರಣೆಗೆ ಸೋನಿಯಾಗಾಂಧಿಯವರನ್ನೇ ತೆಗೆದುಕೊಳ್ಳೋಣ. ಅವರು ಹುಟ್ಟಿದ್ದು ಇಟಲಿಯಲ್ಲಿಯೇ ಆದರೂ ತಾನು ಹುಟ್ಟಿದ್ದು ಅಲಹಾಬಾದ್‌ನಲ್ಲಿ ಎನ್ನುವ ರೀತಿ ವರ್ತಿಸುತ್ತಾರೆ. ಹಿಂದೆ ಭಾಷೆಯನ್ನೂ ಕಲಿತುಕೊಂಡಿದ್ದಾರೆ. ಆದರೆ ನಮ್ಮ ಬೆಂಗಳೂರಿನಲ್ಲಿ ಹುಟ್ಟಿದವರು ಇಂಡಿಯಾ ಶೈನಿಂಗ್ ಎಂಬ ಈ ಕಾಲದಲ್ಲಿ ನಾವು ಹುಟ್ಟಿದ್ದು ನ್ಯೂಯಾರ್ಕ್‌‌ನಲ್ಲಿ ಅಂತ ತಿಳಿಯುತ್ತಾರೆ. ತಮ್ಮ ಧ್ವನಿಯನ್ನು ಬದಲಾಯಿಸಿಕೊಂಡು ಕಾಲ್ ಸೆಂಟರ್‌ನಲ್ಲಿ ಮಾತನಾಡುತ್ತಾರೆ. ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳುತ್ತಾರೆ. ಇಲ್ಲಿಯೇ ಇದ್ದು ತಾನು ಎಂದಾದರೂ ಒಂದು ದಿನ ನ್ಯೂಯಾರ್ಕ್‌‌ಗೆ ಹೋಗಿ ಅಲ್ಲಿ ಅಮೆರಿಕನ್ ಸಿಟಿಜನ್ ಆಗುವ ಕನಸನ್ನು ಕಾಣುವ ಭಾರತೀಯರೇ ಇಂದು ಹೆಚ್ಚು. ಈಗ ಅವರೇ ಹೇಳುತ್ತಿದ್ದಾರೆ ಸೋನಿಯಾ ಗಾಂಧಿ ನಮ್ಮ ದೇಶದವಲು ಅಲ್ಲ ಎಂದು.

ಸೋನಿಯಾ ಗಾಂಧಿಯ ಯೋಗ್ಯತೆ ರಾಜಕಾರಣಿಯಾಗಿ ಏನು ಎಂಬುದು ಬೇರೆ ಪ್ರಶ್ನೆ. ಆ ಪ್ರಶ್ನೆಗೆ ಬಂದಾಗ ನಾನು ಚರ್ಚೆ ಮಾಡಲು ಸಿದ್ಧನಿದ್ದೇನೆ. ಆದರೆ ಈ ಫಾರಿನರ್ ಎನ್ನುವ ಇಶ್ಯೂ ಏಕೆ ಎತ್ತುತ್ತಿದ್ದಾರೆಂದರೆ ಈ ಮತಾಂಧತೆಯನ್ನು ಮತ್ತು ನಮ್ಮೆಲ್ಲರ ಒಳಮನಸ್ಸಿನಲ್ಲಿ ಹುದುಗಿರಬಹುದಾದ ಜಾತೀಯತೆಯನ್ನು ಪ್ರಕ್ಷುಬ್ಧಗೊಳಿಸುವುದಕ್ಕೋಸ್ಕರ. ಇದೊಂದು ಅಪಾಯ. ಇವರು ಹೇಳುವುದು ಹಿಂದುತ್ವ, ನಡೆಯುವುದು ಸಂಪೂರ್ಣವಾಗಿ ಅಮೆರಿಕಕ್ಕೆ ದಾಸಾನುದಾಸರಂತೆ. ಆದ್ದರಿಂದ ಯಾರಿಗೆ ಸ್ವದೇಶ ಪ್ರೇಮ ಇದೆ? ಹಿಂದೂ ಧರ್ಮದ ತತ್ವಗಳು ಎಷ್ಟು ಉದಾತ್ತವಾದುದೆಂದರೆ, ನೀವು ಹಿಂದೂ ಧರ್ಮ ಎಂದೆನಾದರೂ ಕರೆಯುವುದಾದರೆ ಆ ಶಬ್ದವೇ ತಪ್ಪು. ಕರೆಯುವ ಹಾಗಿದ್ದರೆ ದೇವರ ಅಗತ್ಯವೇ ಇಲ್ಲದ ಜೈನಧರ್ಮ ಇದೆ. ದೇವರ ಬಗ್ಗೆ ಏನೂ ಮಾತನಾಡದಂತಹ ಬೌದ್ಧಧರ್ಮ ಇದೆ. ಮತ್ತು ದೇವರೇ ಇಲ್ಲ ಎನ್ನುವ ವಾದಕ್ಕೂ ಹಿಂದೂ ಧರ್ಮದಲ್ಲೇ ಅವಕಾಶ ಇದೆ. ಎಲ್ಲವನ್ನೂ ಪ್ರಶ್ನೆ ಮಾಡುವಂತಹ ಅಲ್ಲಮ ಇದ್ದಾನೆ. ಇಷ್ಟು ವೈವಿಧ್ಯಮಯ ಸಂಸ್ಕೃತಿಯನ್ನು ಏಕ ಸಂಸ್ಕೃತಿಯನ್ನಾಗಿ ಮಾಡಿ, ನಮ್ಮ ಜನರ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತಿ ಬಿಜೆಪಿ ನಮ್ಮ ಮನಸ್ಸನ್ನು ಕೆಡಿಸುತ್ತಿದೆ. ಇದು ಒಳಗಿನ ಬಹುದೊಡ್ಡ ಭ್ರಷ್ಟಾಚಾರ. ನಮ್ಮ ಮನಸ್ಸನ್ನೇ ಭ್ರಷ್ಟಗೊಳಿಸುವ – ಈ ಭ್ರಷ್ಟಾಚಾರವನ್ನು ನಾವು ಮೊದಲು ನಿರ್ಮೂಲನೆ ಮಾಡಬೇಕು. ದೇಶದಲ್ಲಿ ತನ್ನ ಸರ್ಕಾರವನ್ನು ಸ್ಥಾಪಿಸುವುದಕ್ಕೊಸ್ಕರ ಹಿಂದೆ ಕಾಂಗ್ರೆಸ್ ಎಲ್ಲರನ್ನೂ ಸೇರಿಸಿಕೊಂಡು ಹೇಗೆ ಬೆಳೆಯುತ್ತಿತ್ತೋ ಹಾಗೆ ಬಿಜೆಪಿ ಕೂಡ ಎಲ್ಲರನ್ನೂ ಸೇರಿಸಿಕೊಳ್ಳುತ್ತಿದೆ – ಬಹಳ ಜನ ಕಾಂಗ್ರೆಸ್‌ನವರನ್ನೂ ಕೂಡ. ಅದೂ ಕಾಂಗ್ರೆಸ್‌ನ ರೀತಿಯೇ ಆಗುತ್ತಿದೆ. ಆದರೆ ಬಿಜೆಪಿ ಕಾಂಗ್ರೆಸ್ ರೀತಿಯಂತಾದರೂ, ಕಾಂಗ್ರೆಸ್ ಆಗುವುದಿಲ್ಲ. ಅದಕ್ಕೆ ಒಂದು ತಿರುಳಿದೆ. ಅದಕ್ಕೊಂದು ಕೋರ್ ಇದೆ. ಅದರಲ್ಲಿ ಆರ್‌ಎಸ್‌ಎಸ್ ಇದೆ. ಸಂಘ ಪರಿವಾರ ಇದೆ. ಸಾತ್ವಿಕವಾದ ವಾಜಪೇಯಿಯವರ ಮುಖ ಇದೆ. ಬಹಳ ಕ್ರೂರವಾದ ಮೋದಿ ಮುಖ ಇದೆ. ಇನ್ನೂ ಕ್ರೂರವಾದ ತೊಗಾಡಿಯಾ ಮುಖ ಇದೆ. ಇವೆಲ್ಲವುಗಳ ಮುಖಾಂತರ ಅವರು ಮತವನ್ನು ಯಾಚಿಸುತ್ತಾರೆ. ಅದಕ್ಕೆ ಅವರು ಬಹಳ ಅಪಾಯಕಾರಿಯಾದವರು. ಬಹಳ ದುಃಖದ ಸಂಗತಿಯೆಂದರೆ ಹೆಣ್ಣು ಮಕ್ಕಳಿಗೆ – ಬಡ ಹೆಣ್ಣು ಮಕ್ಕಳಿಗೆ ಸೀರೆ ಕೊಡಿಸುತ್ತೇವೆ ಎಂದು ಸಾವಿರಾರು ಸಂಖ್ಯೆಯಲ್ಲಿ ಸೇರಿಸಿ, ವಾಜಪೇಯಿಯನ್ನು ಗೆಲ್ಲಿಸುವುದಕ್ಕೆ ಹೊರಟಂತಹ ಒಬ್ಬ ಬಿಜೆಪಿ ನಾಯಕ-ಟಂಡನ್ ಎಂಬುವವನು – ಆ ಸೀರೆಗಳನ್ನು ಬಡಜನರ ನಡುವೆ ಎಸೆದು ನೂಕು ನುಗ್ಗಲಾಗಿ ೨೫ ಜನ ಸತ್ತರು ಎಂದು ಪತ್ರಿಕೆಯಲ್ಲಿ ಬಂದಿದೆ. ವಾಜಪೇಯಿ ಅವರಿಗೇನಾದರೂ ಕವಿ ಹೃದಯ ಇದ್ದರೆ, ನಾನು ಈ ಸಾರಿ ಎಲೆಕ್ಷನ್‌ಗೆ ನಿಲ್ಲುವುದಿಲ್ಲ ಎಂದು ಹೇಳಬೇಕಾದಂತಹ ಬಲಿ ಅಲ್ಲಿ ಆಗಿದೆ. ಬಹಳ ದುಃಖದ ಸಂಗತಿ ಇದು. ನಾನು ದ್ರೌಪದಿಯ ಮಾನಾಪಹರಣ ಓದುತ್ತೇವೆ. ಸೀರೆಯನ್ನು ಎಳೆದು ಅವಳ ಮಾನ ಕಳೆಯುವುದಕ್ಕೆ ನೋಡಿದರು. ಇವರು ಸೀರೆಯನ್ನು ಕೊಡಲು ಹೋಗಿ ಪ್ರಾಣವನ್ನು ಕಳೆದಿದ್ದಾರೆ. ಅಲ್ಲಿ ಮಾನಹಾನಿ ಇತ್ತಷ್ಟೆ. ಈ ಪ್ರಾಣಹಾನಿ ಶಿಕ್ಷಾರ್ಹವಾದುದು. ಇಂತಹ ಸ್ಥಿತಿಯಲ್ಲಿ ನಾವು ಜನಾಂದೋಲನವನ್ನು ಮಾಡಬೇಕು ಎಂದು ನನ್ನ ಪ್ರಾರ್ಥನೆ.

ಸಂವಾದ (ಮೇ ೨೦೦೪) ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

* * *