ಸಹೃದಯರೇ,

ಪ್ರೊ. ಎ.ಸಿ. ದೇವೇಗೌಡರು ಖ್ಯಾತ ಶಿಕ್ಷಣ ತಜ್ಞರು. ಅವರು ಶಿಕ್ಷಣದ ವಿವಿಧ ಹಂತಗಳಲ್ಲಿ ದುಡಿದವರು. ಹೆಸರಾಂತ ಶ್ರೀಮಂತ ಕುಟುಂಬದಿಂದ ಬಂದಿದ್ದರೂ ತಮ್ಮನ್ನು ಶಿಕ್ಷಣ ಕ್ಷೇತ್ರಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಂಡವರು. ವಿಶೇಷವಾಗಿ ಪ್ರಶಿಕ್ಷಣ (Teacher Education) ಕ್ಷೇತ್ರದಲ್ಲಿ ಮತ್ತು ಸಂಶೋಧನ ಕ್ಷೇತ್ರದಲ್ಲಿ ಅವರಿಗೆ ಅಪಾರ ಆಸಕ್ತಿ. ಸರಕಾರವು ನೇಮಿಸಿಕ ಕರ್ನಾಟಕ ಸಮಗ್ರ ಶಿಕ್ಷಣ ಕಾಯಿದೆಯು ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಸಮಿತಿಯ ವರದಿಯನ್ನೇ ಆಧರಿಸಿದೆ. ಅವರ ಹೆಸರಿನಲ್ಲಿ ಸ್ಥಾಪಿಸಿದ ದತ್ತಿಯ ವತಿಯಿಂದ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ಈ ಸಂಸ್ಥೆಯು ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ದತ್ತಿಯವರು ದೇವೇಗೌಡರು ಹೆಸರಿನಲ್ಲಿ ಪ್ರತಿವರ್ಷವೂ ಅವರ ಜನ್ಮದಿನದಂದು ಅವರ ಸ್ಮರಣಾರ್ಥ ಉಪನ್ಯಾಸವನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಇಂತಹ ೧೮ನೇ ಉಪನ್ಯಾಸವನ್ನು ‘ಸಾಹಿತ್ಯದ ಅಭ್ಯಾಸ’ ಎಂಬ ಶೀರ್ಷಿಕೆ ಅಡಿಯಲ್ಲಿ ನೀಡಲು ನನಗೆ ಅವಕಾಶ ನೀಡಿರುವುದು ನಿಜಕ್ಕೂ ಸಂತೋಷದ ವಿಷಯ.

ಸಾಹಿತ್ಯದಿಂದ ನಾವೇನನ್ನು ಬಯಸುತ್ತೇವೆ? ಸಾಹಿತ್ಯದ ಅಭ್ಯಾಸದಿಂದ ಅದನ್ನು ಕಲಿಯುವ ವಿದ್ಯಾರ್ಥಿಗಳಲ್ಲಿ ಯಾವ ಬದಲಾವಣೆಯನ್ನು ನಿರೀಕ್ಷಿಸುತ್ತೇವೆ? ಈ ಪ್ರಶ್ನೆಗಳನ್ನು ಮೊದಲು ಕೇಳಿಕೊಳ್ಳೋಣ.

ಕವಿ ವಾಲ್ಮೀಕಿ ಶ್ರೀರಾಮಚಂದ್ರನನ್ನು ‘ಪರಿಪೂರ್ಣ ಮಾನವ’ ಎಂದು ಬಣ್ಣಿಸಲು ಅವನಲ್ಲಿರುವ ಹಲವು ಗುಣಗಳನ್ನು ಪಟ್ಟಿ ಮಾಡುತ್ತಾನೆ. ಈ ಗುಣಗಳಲ್ಲಿ ನಾನು ಆಶ್ಚರ್ಯಪಟ್ಟ ಗುಣವೊಂದನ್ನು ನಿಮ್ಮ ಗಮನಕ್ಕೆ ತರುತ್ತೇನೆ. ಅದೆಂದರೆ ಈ ಮರ್ಯಾದಾಪುರುಷೋತ್ತಮನಾದ ರಾಮ ‘ಪೂರ್ವಭಾಷಿ’. ಅಂದರೆ ಯಾರನ್ನಾದರೂ ಸಂಧಿಸಿದಾಗ ಶ್ರೀರಾಮಚಂದ್ರ ತಾನೇ ಮೊದಲು  ಮಾತನ್ನು ಶುರು ಮಾಡುತ್ತಿದ್ದನಂತೆ.

ಸಾಹಿತ್ಯದ ಶಿಕ್ಷಣದಿಂದ ವಿದ್ಯಾರ್ಥಿಗಳ ನಡತೆಯಲ್ಲಿ, ಅವರ ಒಟ್ಟು ವರ್ತನೆಯಲ್ಲಿ ಏನಾದರೊಂದು ಮುಖ್ಯ ಬದಲಾವಣೆಯಾಗುವುದಾದರೆ, ಹೀಗೆ ಪೂರ್ವ ಭಾಷಿಯಾಗಬಹುದಾದ ಸೌಜನ್ಯವೂ ಒಂದು.

ಪೂರ್ವ ಭಾಷಿಯಾದರೆ ಮಾತ್ರ ಸಾಲದು; ಹೇಗೆ ಮಾತನಾಡುತ್ತೀರಿ ಎನ್ನುವುದೂ ಬಹಳ ಮುಖ್ಯ. ರಾಮಾಯಣದಲ್ಲಿ ಒಂದು ಅದ್ಭುತವಾದ ಪ್ರಸಂಗವಿದೆ. ರಾಮ ಕಾಡಿನಲ್ಲಿ ಅಲೆಯುತ್ತಾ ಸೀತೆಯನ್ನು ಹುಡುಕುತ್ತಿರುವಾಗ ಅವನ ಬಳಿಗೆ ಸುಗ್ರೀವನ ಪ್ರತಿನಿಧಿಯಾಗಿ ಆಂಜನೇಯ ಬರುತ್ತಾನೆ. ರಾಮಾಯಣದ ಕವಿಯ ಪ್ರಕಾರ ಆಂಜನೇಯನಲ್ಲಿದ್ದ ಬಹು ದೊಡ್ಡ ಗುಣ ಅವನ ಮಾತಿನಲ್ಲಿದ್ದ ವಿನಯ ಮತ್ತು ಕೌಶಲ.

ವಾಲ್ಮೀಕಿ ಅಚ್ಚರಿಯಿಂದ, ಅಭಿಮಾನದಿಂದ ಆಂಜನೇಯನ ವಾಕ್‌ಸಿದ್ಧಿಯನ್ನು ವರ್ಣಿಸುತ್ತಾನೆ. ಎಲ್ಲಿಯೂ ಅವನು ವ್ಯಾಕರಣದ ತಪ್ಪು ಮಾಡುವುದಿಲ್ಲ. ಒಂದು ಅಪಶಬ್ದವನ್ನೂ ನುಡಿಯುವುದಿಲ್ಲ. ಮಾತನ್ನು ಅತಿ ವಿಸ್ತರಿಸುವುದಿಲ್ಲ. ಹೇಳಬೇಕಾದ್ದನ್ನೆಲ್ಲ ಕಡಿಮೆ ಮಾತುಗಳಲ್ಲಿ ಹೇಳುತ್ತಾನೆ. ಮಾತು ಕಡಿಮೆಯಾದರೂ ಆಡಿದ ಮಾತಿನಲ್ಲಿ ಸಂಧಿಗ್ಧವಿಲ್ಲ. ಮಾತನ್ನು ಲಂಬಗೊಳಿಸುವುದಿಲ್ಲ. ಕೀರಲು ದನಿಯಲ್ಲಿ ಮಾತನಾಡದೆ, ಕೇಳಲು ಹಿತವಾಗುವಂತೆ, ಮಧ್ಯಸ್ತರದಲ್ಲಿ ಮಾತನಾಡುತ್ತಾನೆ. ಹೀಗೆ ಮಾತನಾಡುವಾಗ ಬೇಗ ಬೇಗನೆ ಮಾತನಾಡುವುದಿಲ್ಲ. ಇನ್ನೂ ಒಂದು ದೊಡ್ಡ ಗುಣವೆಂದರೆ ಮಾತಿನ ಕ್ರಮ. ಏನು ಮಾತನಾಡಬೇಕು, ಅದರಲ್ಲಿ ಮೊದಲು ಏನನ್ನು ಹೇಳಬೇಕು, ಅದಕ್ಕೆ ಸಂಬಂಧಪಟ್ಟಂತೆ ತಾರ್ಕಿಕವಾಗಿ ಮುಂದೇನು ಬರಬೇಕು, ನಂತರ ಏನು ಬರಬೇಕು – ಹೀಗೆ ಒಂದು ಕ್ರಮ ಇರುತ್ತದೆ. ಅವನ ಉಚ್ಛಾರ ವಾಲ್ಮೀಕಿಯ ಮಾತಿನಲ್ಲಿ ಹೃದಯ ಹಾರಿಣಿ.

ಆಂಜನೇಯನ ಉದಾಹರಣೆಯಿಂದ ನಮಗೆ ತಿಳಿಯುವುದೇನೆಂದರೆ, ಇನ್ನೊಬ್ಬನನ್ನು ಒಲಿಸಿಕೊಳ್ಳುವ ಹಾಗೆ ಮಾತನಾಡುವ ಯುಕ್ತ ಮತ್ತು ಶಕ್ತಿ ಸಾಹಿತ್ಯಾಭ್ಯಾಸದ ಮುಖ್ಯ ಉಪಯೋಗಗಳಲ್ಲಿ ಒಂದು. ವಚನಕಾರರಲ್ಲಿಯೂ ಇದು ಬರುತ್ತದೆ. ‘ನುಡಿದರೆ ಮುತ್ತಿನ ಹಾರದಂತಿರಬೇಕು; ಲಿಂಗ ಮೆಚ್ಚಿ ಅಹುದು ಅಹುದು ಎನ್ನಬೇಕು.’

ಹೇಳಿದ್ದು ನಿಜ ಎನಿಸುವಂತೆ ಮಾತಾಡುವುದು ಎಲ್ಲ ಕಾಲದಲ್ಲಿಯೂ ಸಾಧ್ಯವಲ್ಲದಿದ್ದರೂ ನಾವು ಕೇಳಿಸಿಕೊಂಡಿದ್ದು ನಿಜವಿರಬಹುದೇ ಎಂದು ಆಳವಾಗಿ ನಾವು ನಮಗೇ ಪ್ರಶ್ನೆಯನ್ನು ಕೇಳಿಕೊಳ್ಳುವಂತೆ ಇರಬೇಕು.

ಇಷ್ಟಾದರೂ ಅನಿಸದಿದ್ದ ಮಾತುಗಳು ಸವಕಲು ಮಾತುಗಳಾಗಿರುತ್ತವೆ. ಸಾಹಿತ್ಯದಿಂದ ನಾವು ಕಲಿಯುವ ಒಂದು ದೊಡ್ಡ ಪಾಠವೆಂದರೆ ಮಾತಿನಲ್ಲಿ ಯಾವುದು ಸಾಚಾ, ಯಾವುದು ಮೋಸ ಎಂದು ವಿಂಗಡಿಸಿ ನೋಡುವ ಶಕ್ತಿ.

ಗಾಂಧೀಜಿಯವರು ಸಾಹಿತ್ಯಪ್ರಿಯರು. ಇಂಗ್ಲಿಷ್ ಸಾಹಿತ್ಯವನ್ನು, ಗುಜರಾತಿ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡವರು. ಟಾಲ್‌ಸ್ಟಾಯ್ ಕಥೆಗಳನ್ನು ಗುಜರಾತಿಗೆ ಭಾಷಾಂತರಿಸಿದ್ದವರು. ಅವರ ಕಾಲದಲ್ಲಿ ಮಾತಿನ ಸಾಚಾತನವನ್ನು ಸಾಧಿಸಿಕೊಂಡವರಲ್ಲಿ ಗಾಂಧೀಜಿ ಮುಖ್ಯರು. ಮತ್ತೆ ಮತ್ತೆ ನೆನೆಸಿಕೊಳ್ಳುವ ಹಾಗೆ ಅವರು ಮಾತಾಡಬಲ್ಲವರಾಗಿದ್ದರು. ತನ್ನದೊಂದು ತಪ್ಪನ್ನು ಅವರು ‘ಹಿಮಾಲಯನ್ ಬ್ಲಂಡರ್’ ಎಂದು ಕರೆದುಕೊಂಡಿದ್ದರು. ಇದು ಸಂತನ ಪ್ರಾಯಶ್ಚಿತ್ತದ ಮಾತು ಮಾತ್ರವಾಗಿರದೆ ಕವಿಯ ಮಾತೂ ಆಗಿತ್ತು.

ಗಾಂಧೀಜಿಯ ಜೊತೆಗೆ ನನಗೆ ನೆನಪಾಗುವ ಇನ್ನೊಬ್ಬರು ರಾಜಾಜಿ. ಹಿತವಾಗಿ, ಮಿತವಾಗಿ, ನಿರ್ಭಯವಾಗಿ ತನಗನ್ನಿಸಿದ್ದನ್ನು ಅವರು ಹೇಳಬಲ್ಲವರಾಗಿದ್ದರು.

*

ಡಿ. ವಿ. ಗುಂಡಪ್ಪನವರು ಸಾಹಿತ್ಯಾಭ್ಯಾಸದಿಂದ ಪಡೆಯಬಹುದಾದ ಕೆಲವು ಗುಣಗಳನ್ನು ಹೀಗೆ ಸೂಚಿಸಿದ್ದಾರೆ. ಮೊದಲನೆಯದು ಯುಕ್ತಾಯುಕ್ತ ವಿವೇಚನೆ, ಎರಡನೆಯದು ತಾರತಮ್ಯ ಗಣನೆ. ಈಗ ಎರಡನೆಯದರ ಬಗ್ಗೆ ಸ್ವಲ್ಪ ಯೋಚಿಸೋಣ. ಯಾರನ್ನಾದರೂ ಹೊಗಳಬೇಕೆಂದು ನಿಮಗೆ ಅನ್ನಿಸಿತು ಎಂದುಕೊಳ್ಳೋಣ. ಬಹಳ ದೊಡ್ಡ ಮಾತಿನಲ್ಲಿ ಎಲ್ಲರನ್ನೂ ಹೊಗಳುವುದಾದರೆ ಆಗ ಯಾರನ್ನೂ ಹೊಗಳಿದಂತೆ ಆಗುವುದಿಲ್ಲ. ಹೊಗಳಿಕೆ ಮಾತ್ರವಲ್ಲದೆ ಬೈಗುಳದಲ್ಲಿಯೂ ಇದು ನಿಜವಾಗಿಬಿಡುತ್ತದೆ.

ಒಂದು ಘಟನೆ ನನಗೆ ನೆನಪಾಗುತ್ತದೆ. ಕೃಪಲಾನಿಯವರು ಪಾರ್ಲಿಮೆಂಟ್ ಮೆಂಬರ್ ಆಗಿದ್ದರು. ಬಹಳ ದೊಡ್ಡ ರಾಜಕಾರಣಿಗಳಲ್ಲಿ ಪ್ರಾಯಶಃ ಕೊನೆಯ ಮನುಷ್ಯ ಈ ಜೆ.ಬಿ. ಕೃಪಲಾನಿ. ನೆಹರೂರ ಜೊತೆಗಾರರಾಗಿದ್ದ ಕೃಪಲಾನಿ, ಅವರ ವಿರೋಧಿಯಾಗಿ ಪಾರ್ಲಿಮೆಂಟ್‌ನಲ್ಲಿ ಕುಳಿತಾಗ ನಡೆದ ಘಟನೆ ಇದು. ಆ ಸಂದರ್ಭದಲ್ಲಿ ಕೃಪಲಾನಿಯವರಿಗೆ ಕೋಪ ನೆತ್ತಿಗೇರಿತ್ತು. ಅಂತಹ ಕೋಪದಲ್ಲೂ ಆಡಿದ ಮಾತೆಂದರೆ ‘ನೀವು ಹೀಗೆ ವರ್ತಿಸಿದರೆ ನಾನು ವಾಕೌಟ್ ಮಾಡಬೇಕಾಗುತ್ತದೆ.’ ಇದರ ಬಗ್ಗೆ ಒಂದು ಕ್ಷಣ ಯೋಚಿಸಿ ನೋಡಿ. ಕೃಪಲಾನಿಗೆ ಇದ್ದ ದೊಡ್ಡ ಆಯುಧ ಕೂಗುವುದಿಲ್ಲ, ಕಿರುಚುವುದಲ್ಲ, ಪಾರ್ಲಿಮೆಂಟ್ ಮುಂದುವರಿಯದಂತೆ ಸ್ಪೀಕರ್ ಎದುರು ಜಮಾಯಿಸಿ ನಿಲ್ಲುವುದಲ್ಲ, ಕೇವಲ ವಾಕೌಟ್ ಮಾಡುವುದು. ತಾನು ಇರುವ ಸಂಸ್ಥೆಯ ಬಗ್ಗೆ ಅಷ್ಟು ಆಳವಾದ ಗೌರವ ಕೃಪಲಾನಿಗೆ.

ಡಿ.ವಿ.ಜಿ. ಸಾಹಿತ್ಯದ ಅಭ್ಯಾಸದಿಂದ ಕಾಣುವ ಇನ್ನೊಂದು ಪ್ರಯೋಜನ ‘ಪರೇಂಗಿತಂ ಪರಿಜ್ಞಾನ.’ ‘ನನಗೇನು ಅನ್ನಿಸುತ್ತದೆ’ ಎಂದು ತಿಳಿದರೆ ಮಾತ್ರ ಸಾಲದು; ‘ನಿಮಗೇನು, ಅನ್ನಿಸುತ್ತದೆ’ ಎಂದು ಗೊತ್ತಾಗಬೇಕು. ಇದನ್ನು ‘ಪರಕಾಯ ಪ್ರವೇಶ’ ಎಂದೂ ಕರೆಯಬಹುದು.

ಉದಾಹರಣೆಗೆ ಷೇಕ್ಸ್‌ಪಿಯರ್‌ನನ್ನು ನೋಡಿ, ಕಿಂಗ್‌ಲಿಯರ್ ನಾಟಕದ ಗುಣ ಸಂಪನ್ನೆಯಾದ ಲಿಯರ್‌ನ ಮಗಳು ಕಾರ್ಡೀಲಿಯ ಹೇಗೆ ಭಾವಿಸುತ್ತಾಳೆ ಎಂದು ಕವಿಗೆ ಗೊತ್ತಿಗೆ; ಹಾಗೆಯೇ ರಾಕ್ಷಸೀ ಮನಸ್ಸಿನ ಗಾನೆರಿಲ್ ಮತ್ತು ರೀಗನ್ ಹೇಗೆ ಯೋಚಿಸುತ್ತಾರೆ ಎಂಬುದೂ ಆತನಿಗೆ ಗೊತ್ತಿದೆ. ಒಬ್ಬ ಪಾತಕಿ, ಒಬ್ಬ ಸಂತ ಎರಡು ವಿಭಿನ್ನ ಮನಸ್ಸುಗಳ ಒಳಗೂ ಇದ್ದು, ನೋಡುವ ಶಕ್ತಿ ಬಹು ದೊಡ್ಡ ಕವಿಗೆ ಇರುತ್ತದೆ. ಈ ಕಾಲ್ಪನಿಕ ಶಕ್ತಿಯನ್ನೇ ಪರೇಂಗಿತ ಪರಿಜ್ಞಾನ ಎನ್ನುವುದು.

ನಾವೆಲ್ಲರೂ ಒಂಟಿ ಜೀವಿಗಳು ಎನ್ನುವುದರಲ್ಲಿ ಸತ್ಯವಿದೆ. ಆದರೆ ಒಂಟಿ ಜೀವಿಯಾದ ಮನುಷ್ಯ ಪರೇಂಗಿತ ಪರಿಜ್ಞಾನದಿಂದ ವಿಸ್ತಾರವಾಗುತ್ತ ಹೋಗುತ್ತಾನೆ. ಹಲವು ಜೀವಿಗಳ ವಿಸ್ತಾರ ತಮ್ಮ  ಕುಟುಂಬದ ಮಿತಿಯಲ್ಲೋ ಅದಕ್ಕೂ ಹೆಚ್ಚೆಂದರೆ ತಮ್ಮ ಜಾತಿಯ ಮಿತಿಯಲ್ಲೋ, ಇನ್ನೂ ಹೆಚ್ಚೆಂದರೆ ತಮ್ಮ ನಾಡಿನ ಮಿತಿಯಲ್ಲೋ ಇರಬಹುದು. ಆದರೆ ಸಾಹಿತ್ಯದ ಓದಿನಿಂದಾಗಿ ಇಡೀ ವಿಶ್ವವೇ ನಮ್ಮದಾಗುತ್ತದೆ.

ನಮ್ಮದೇ ಆದ ಅನುಭವವೊಂದನ್ನು ಉದಾಹರಣೆಯಾಗಿ ನಿಮ್ಮೆದುರು ನಿವೇದಿಸುತ್ತೇನೆ. ನಾನೊಂದು ಮಡಿವಂತ ಬ್ರಾಹ್ಮಣ ಅಗ್ರಹಾರದಲ್ಲಿ ಬೆಳೆದವನು. ನನ್ನ ಮನೆಯ ಕೊಟ್ಟಿಗೆಯಲ್ಲಿ ಒಬ್ಬ ದಲಿತ ಸಗಣಿ ಎತ್ತಲು ಬರುತ್ತಿದ್ದ. ನನ್ನ ಕಣ್ಣಿಗೆ ಅವನೊಬ್ಬ ಹೀನಜಾತಿಯ ಅಸ್ಪೃಶ್ಯ ಅಷ್ಟೇ ಆಗಿದ್ದ. ನಾನು ಸ್ಕೂಲಿಗೆ ಹೋಗುತ್ತಿದ್ದಾಗ ಕಾರಂತರ ಚೋಮನದುಡಿಯನ್ನು ಅಕಸ್ಮಾತ್ ಓದಿಬಿಟ್ಟೆ. ಹೀಗೆ ಓದಿದ್ದರಿಂದ ನಮ್ಮ ಮನೆಯಲ್ಲಿ ಸಗಣಿ ಎತ್ತಲು ಬರುತ್ತಿದ್ದ ದಲಿತನಿಗೂ ಒಂದು ಒಳಜೀವನ ಇರುವುದು ಸಾಧ್ಯ ಎನಿಸಿತು. ಅವನನ್ನು ನಾನು ಕಾಣುವ ಬಗೆಯೇ ಬದಲಾಯಿತು. ಯಾವ ನೀತಿ ಪಾಠದಿಂದಲೂ ಆಗಲಾರದ ವಿಸ್ತಾರ ಇದು.

ಇನ್ನೊಂದು ಉದಾಹರಣೆ ಕೊಡುತ್ತೇನೆ. ನಮ್ಮ ಅಕ್ಕಪಕ್ಕದ ಮನೆಯ ಹೆಣ್ಣೊಬ್ಬಳು, ತನ್ನ ತನ್ನ ಕುಟುಂಬವನ್ನು ಧಿಕ್ಕರಿಸಿ ಯಾರನ್ನಾದರೂ ಪ್ರೀತಿಸಿದರೆ ಆಕೆ ಕೇವಲ ನೀತಿಗೆಟ್ಟವಳಾಗಿ ಮಾತ್ರ ಕಾಣುತ್ತಾಳೆ. ಆದರೆ ನೀವು ಟಾಲ್‌ಸ್ಟಾಯ್‌ನ ಅನ್ನಾಕರೆನೀನಾ ಕಾದಂಬರಿಯನ್ನೋ ಅಥವಾ ಫ್ಲಾಬೆ ಬರೆದ ಮದಾಂ ಬಾವರಿಯನ್ನೊ ಓದಿದಿರಿ ಎನ್ನಿ. ಆಗ ಕೇವಲ ನೀತಿಗೆಟ್ಟವಳಾಗಿ ಕಾಣುವ ಹೆಣ್ಣು ತನ್ನ ಒಳಜೀವನದಲ್ಲಿ ಏನನ್ನು ಬಯಸಿ, ಪಡೆದೋ ಪಡೆಯದೆಯೋ ನೋಯುತ್ತಿರಬಹುದೇ ಎಂಬ ಅನುಮಾನ ನಿಮ್ಮನ್ನು ಕಾಡಬಹುದು. ಅಂದರೆ ನಾವು ಇರುವುದಕ್ಕಿಂತ ಹೆಚ್ಚು ಮಾನವೀಯರಾಗುತ್ತೇವೆ ಎಂದು ನನಗನ್ನಿಸುತ್ತದೆ.

ಮಾಸ್ತಿಯವರದೊಂದು ಕಥೆ ಇದೆ. ಸ್ವಂತ ಜೀವನದಲ್ಲಿ ಸಂಪ್ರದಾಯಸ್ಥರು ಎಂದು ನಾವೆಲ್ಲ ತಿಳಿದಿರುವ ಹಿರಿಯರು ಈ ಮಾಸ್ತಿ ವೆಂಕಟೇಶ ಅಯ್ಯಂಗಾರರು. ಆದರೆ ಇವರೇ ಬರೆದ ಆಚಾರ್ಯರ ಪತ್ನಿ ಎನ್ನುವ ಕಥೆಯನ್ನು ನೋಡಿ. ತಮ್ಮ ಪರಮಗುರುಗಳಾದ ಶ್ರೀರಾಮಾನುಜರ ಬಗ್ಗೆ ಇರುವ ಕಥೆಯಿದು. ರಾಮಾನುಜರು ಸನ್ಯಾಸವನ್ನು ತೆಗೆದುಕೊಳ್ಳಲು ಕಾರಣ ಅವರ ಭಗವದ್ಭಕ್ತಿ, ಮಾತ್ರವಲ್ಲದೆ ಅವರ ಹೆಂಡತಿಯ ಕಿರಿಕಿರಿಯೂ ಕಾರಣ ಎಂದು ಒಂದು ಅನುಮಾನವಿದೆ. ಆಚಾರ್ಯರು ಮನೆಯಲ್ಲಿಲ್ಲದಾಗ ಅವರನ್ನು ನೋಡಲು ಬಂದ ಶೂದ್ರ ಸಂತನನ್ನು ಆಚಾರ್ಯರ ಹೆಂಡತಿ ಚೆನ್ನಾಗಿ ಸತ್ಕರಿಸಲಿಲ್ಲವೆಂದು ಆಚಾರ್ಯರು ಬೇಸರಪಟ್ಟು ಸನ್ಯಾಸ ತೆಗೆದುಕೊಂಡರು ಎಂಬ ಕಥೆಯ ಹಿನ್ನೆಲೆಯಲ್ಲಿ ಮಾಸ್ತಿಯವರ ಕಥೆ ಜರಗುತ್ತದೆ. ಆಗ ಈ ಕಥೆಯಲ್ಲಿ ಆಚಾರ್ಯರು ಜ್ವರಪೀಡಿತರಾಗಿದ್ದಾರೆ. ಅವರ ಆರೈಕೆಯನ್ನು ಒಂದು ಕುಟುಂಬ ಮಾಡುತ್ತಿರುತ್ತದೆ. ಅಲ್ಲಿಗೆ ಒಬ್ಬ ಅಪರಿಚಿತ ಹೆಣ್ಣು ಮಗಳು ಬಂದು ತಾನು ಒಂದು ರಾತ್ರಿ ಜ್ವರಪೀಡಿತ ಸನ್ಯಾಸಿಯ ಶುಶ್ರೂಷೆ ಮಾಡುವೆನೆಂದು ಹೇಳಿಕೊಂಡು ಆಚಾರ್ಯರ ಕಾಲನ್ನು ಒತ್ತುತ್ತಾಳೆ. ಆಚಾರ್ಯರಿಗೆ ಆ ಜ್ವರದಲ್ಲೂ ಇದು ಯಾವುದೋ ಪರಿಚಿತವಾದ ಕೈ ಎನ್ನಿಸಿ ಹಿತವೆನ್ನಿಸುತ್ತದೆ. ಆಚಾರ್ಯರ ಜ್ವರ ಇಳಿಯುತ್ತದೆ. ಅಪರಿಚಿತ ಹೆಣ್ಣಾಗಿ ಬಂದಿದ್ದ ಅವರ ಪೂರ್ವಾಶ್ರಮದ ಪತ್ನಿ ಸಾಯುತ್ತಾಳೆ.

ತನ್ನ ಪರಮಗುರು ರಾಮಾನುಜರಲ್ಲೂ ಸಂಸಾರಕ್ಕೆ ಸಂಬಂಧಪಟ್ಟ ಕೆಲವು ವಾಸನೆಗಳು ಇನ್ನೂ ಉಳಿದಿರಬಹುದೇನೋ ಎಂದು ಗೌರವದಿಂದಲೇ ಅನುಮಾನಿಸುವಂತೆ ಈ ಕಥೆ ರಚನೆಯಾಗಿದೆ. ಅಸಾಮಾಜಿಕ ಎನ್ನಿಸುವ ಜೀವನದ ರಹಸ್ಯ ಇರುವುದು ಈ ಪರಂಗಿತ ಪರಿಜ್ಞಾನದ ಶಕ್ತಿಯಲ್ಲಿ.

ಭಗವದ್ಗೀತೆ ಒಂದು ಪವಿತ್ರ ಗ್ರಂಥ, ನಿಜ. ಅದನ್ನೊಂದು ಸ್ವತಂತ್ರ ಪಠ್ಯವೆಂದು ಓದಿಕೊಂಡಾಗ ಅದು ಹಲವು ಘನಸತ್ಯಗಳನ್ನು ಹೇಳುತ್ತದೆ. ಗೀತೆಯ ಉಪದೇಶವನ್ನು ಕೇಳಿಸಿಕೊಳ್ಳುವ ಅರ್ಜುನನಿಗೆ ಕವಿಯ ಮೂಲಕ ನೈತಿಕ ಸತ್ಯಗಳು ಲಭ್ಯವಾಗುವುದು ಮಾತ್ರವಲದಲೆ, ಅವನ ಕಣ್ಣಿಗೆ ಸಾಕ್ಷಾತ್ ವಿರ್ಶವರೂಪ – ದರ್ಶನವಾಗುತ್ತದೆ. ಆದರೆ ಇಡೀ ಮಹಾಭಾರತದಲ್ಲಿ ಅಡಕವಾದ ಪಠ್ಯ ಭಗವದ್ಗೀತೆ ಎಂದು ತಿಳಿದು ನೋಡಿದಾಗ ನಮಗನ್ನಿಸುವ ಸತ್ಯಗಳೇ ಬೇರೆ. ಅಗಾಧವಾದ ಸತ್ಯಗಳು ಅವು. ನೋಡಿ, ಕೇಳಿ, ತಿಳಿದೂ ಅರ್ಜುನ ಮತ್ತೆ ಮತ್ತೆ ತಪ್ಪು ಮಾಡುತ್ತಾನೆ; ಭಗವಾನ್ ಕೃಷ್ಣ ಬೇಡ ಬಿಟ್ಟ ಬಾಣ ತಗುಲಿ ಒಂಟಿಯಾಗಿ ಸಾಯುತ್ತಾನೆ.

ಸಾಹಿತ್ಯದಲ್ಲಿ ಮಾತ್ರ ನಾವು ಕಾಣುವ ಸತ್ಯದ ಈ ಬಹುಮುಖೀ ವಿಸ್ತಾರವನ್ನು ಯಾವ ಮತೀಯ ಪಠ್ಯದಲ್ಲೂ ಕಾಣಲಾರೆವು ಎಂದು ನನಗನ್ನಿಸುತ್ತದೆ.

ಸಾಹಿತ್ಯದ ಬಹಳ ದೊಡ್ಡ ಪ್ರಯೋಜನವೆಂದರೆ ಅದರ ಅಭ್ಯಾಸದಿಂದಾಗಿ ಮನುಷ್ಯ ಸತ್ಯವಾದಿಯೂ, ನಾಚಿಕೆ ಉಳ್ಳವನೂ; ಅನಹಂಕಾರಿಯೂ ಆಗಬಹುದು ಎಂಬುದು.

ಕೊನೆಯದಾಗಿ ಒಂದು ಮಾತು. ಸಾಹಿತ್ಯವನ್ನು ಕಲಿಸುವುದೆಂದರೆ ನೀತಿಬೋಧನೆ ಮಾಡುವುದಲ್ಲ. ನಮ್ಮ ಒಳಜಗತ್ತನ್ನು ವಿಸ್ತಾರಗೊಳಿಸುವ ಅನುಭವಕ್ಕೆ ನಮ್ಮ ಕಲ್ಪನಾಶಕ್ತಿಯನ್ನು ಒಡ್ಡಿಕೊಳ್ಳುವುದು ಹೇಗೆ ಎಂಬುದನ್ನು ಕಲಿಸುವುದು. ಮನುಷ್ಯನಿಗೆ ತಿಳುವಳಿಕೆ ಮತ್ತು ಸುಖ ಎರಡನ್ನು ಒಟ್ಟೊಟ್ಟಾಗಿ ತರಬಲ್ಲ ಪಠ್ಯಗಳು ಸಾಹಿತ್ಯದ ಪಠ್ಯಗಳು ಎಂಬುದನ್ನು ನಮ್ಮ ಬೋಧಕರು ತಿಳಿದಿರುವುದು ಮುಖ್ಯ. ಸಾಹಿತ್ಯದಿಂದ ತಾವೇ ಹಿಗ್ಗಬಲ್ಲ ಬೋಧಕರು ಮಾತ್ರ ವಿದ್ಯಾರ್ಥಿಗಳನ್ನು ನಾನು ಈ ಮೊದಲೇ ಸೂಚಿಸಿದ ಎಲ್ಲ ಅರ್ಥಗಳಲ್ಲೂ ಹಿಗ್ಗಿಸಬಲ್ಲರು.

೩೦೨೦೦೪ ರಂದು ಮಾಡಿದ ಪ್ರೊ. .ಸಿ.ದೇವೇಗೌಡ ಸ್ಮಾರಕ ಭಾಷಣ.
ಪ್ರ..ಸಿ.ದೇವೇಗೌಡ ಮತ್ತು ಶಿವಮ್ಮ ಶೈಕ್ಷಣಿಕ ಟ್ರಸ್ಟ್ ಬೆಂಗಳೂರು.

* * *