‘ವಿಶ್ವವಿದ್ಯಾನಿಲಯಗಳು ನಕ್ಸಲೀಯ ಚಟುವಟಿಕೆಗಳು ಚಿಗುರೊಡೆಯುವ ತಾಣ, ಇಂತಹ ಚಟುವಟಿಕೆಗಳಲ್ಲಿ ವಿ.ವಿ. ಅಧ್ಯಾಪಕರ ಪಾತ್ರ ಇದೆ’ ಮುಂತಾದವು ಮಿಥ್ಯಾರೋಪಗಳು. ಇದನ್ನು ಕೇಳಿದಾಗ ಅಮೆರಿಕಾದ ಸೆನೆಟರ್ ಮೆಕಾರ್ಥಿಯ ನೆನಪಾಗುತ್ತದೆ. ಆತ ಎರಡನೆಯ ಯುದ್ಧ ಆದಮೇಲೆ, ಪ್ರಗತಿಪರವಾಗಿ ಯೋಚಿಸುವವರನ್ನು ರಷ್ಯಾದ ಏಜೆಂಟರು ಎಂದು ಆರೋಪ ಹೊರಿಸಿ ವಿಚಾರಣೆಗೆ ಒಳಪಡಿಸಲು ಶುರುಮಾಡಿದ. ಇದರಿಂದ ಎಷ್ಟು ಭಯೋತ್ಪಾದನೆಯನ್ನು ಮೆಕಾರ್ಥಿ ಮಾಡಿದನೆಂದರೆ ಕೆಲವು ಧೀಮಂತರು, ಬುದ್ಧಿಜೀವಿಗಳು ಆತ್ಮಹತ್ಯೆ ಕೂಡಾ ಮಾಡಿಕೊಂಡಿದ್ದರು. ದುಷ್ಟ ಬಲಪಂಥೀಯರು ಯಾವಾಗಲೂ ಇಂತಹ ಕೆಲಸ ಮಾಡುತ್ತಿರುತ್ತಾರೆ. ಇದು ಪ್ರಜಾತಂತ್ರಕ್ಕೆ ಅಪಾಯಕಾರಿ. ಕಂಡದ್ದನ್ನು ಹೇಳುವ ಧೈರ್ಯ ಇರುವವರೇ ಈ ದೇಶದಲ್ಲೇ ಕಡಿಮೆ. ಇರುವವರು ಬಾಯಿಮುಚ್ಚಿ ಕೂತಿರಬೇಕೆಂಬ ಹುನ್ನಾರ ಇದರಲ್ಲಿ ಇದೆ. ಇಲ್ಲಿನ ಬಲಪಂಥೀಯರಿಗೆ ನಾವು ಉತ್ತರ ಕೊಡಬೇಕಾಗಿದೆ.

ಇವತ್ತು ಪ್ರಗತಿಪರವಾಗಿ ಯೋಚಿಸುವವರೆಲ್ಲಾ ನೆನಪಿಟ್ಟುಕೊಳ್ಳಬೇಕಾದ ಒಂದು ಪಾಠವಿದೆ. ಹಿಂಸಾತ್ಮಕವಾಗಿ ಮಾಡುವ ಯಾವ ಬದಲಾವಣೆಯೂ ನಿಜವಾದ ಬದಲಾವಣೆ ಆಗುವುದಿಲ್ಲ. ಉದಾಹರಣೆಗೆ ರಷ್ಯಾದಲ್ಲಿ ಲೆನಿನ್ ಕ್ರಾಂತಿಗೆ ಅನಿವಾರ್ಯ ಎಂದು ಶುರುಮಾಡಿದ ಹಿಂಸಾಚಾರವನ್ನು ಸ್ಟಾಲಿನ್ ಅಧಿಕಾರದಲ್ಲಿ ಇರುವುದಕ್ಕೇ ಅಗತ್ಯವೆಂದು ಭಾವಿಸಿ ರಷ್ಯಾವನ್ನು ನರಕ ಮಾಡಿದ. ಇನ್ನು ಚೈನಾದಲ್ಲಿ ಮನುಷ್ಯನ ಬದಲಾವಣೆಗೆ ಹಿಂಸಾಚಾರ ಅಗತ್ಯ ಎಂದು ಕಂಡ ಮಾವೊ ಕೆಲವು ಕಾಲ ಚೀನಾವನ್ನು ಭಯಗ್ರಸ್ತ ನರಕವನ್ನಾಗಿ ಮಡಿದ. ಎಷ್ಟೋ ಉದಾತ್ತ ಧ್ಯೇಯ ಇಟ್ಟುಕೊಂಡಿದ್ದರೂ ಮಾವೋ ಮತ್ತು ಲೆನಿನ್ ಒಂದು ಪರ್ಯಾಯ ವ್ಯವಸ್ಥೆಯನ್ನು ಮಾಡುವುದರಲ್ಲಿ ವಿಫಲವಾದದ್ದನ್ನು ನಾವೇ ಕಂಡಿದ್ದೇವೆ. ಹಿಂಸೆಯಲ್ಲಿ ಇನ್ನೊಂದು ಅಪಾಯ ಇದೆ. ಗಾಢವಾಗಿ, ನಿಜವಾಗಿ ಕ್ರಾಂತಿಯನ್ನು ಬಯಸುವವರು ಹಿಂಸೆಯನ್ನು ಒಂದು ಶಸ್ತ್ರಚಿಕಿತ್ಸೆ ಎಂದು ತಿಳಿದು ಶುರುಮಾಡುತ್ತಾರೆ. ಆದರೆ ಕ್ರಮೇಣ ಹಿಂಸೆ ಮಾಡುವುದರಲ್ಲೇ ಒಂದು ರುಚಿ ಅವರಿಗೆ ಸಿಗಲಿಕ್ಕೆ ಶುರುವಾಗುತ್ತದೆ. ಇದರಿಂದಾಗಿ ಸಮಾಧಾನದಲ್ಲಿ ಮಾಡಬೇಕಾದ ಬದುಕು ದುಸ್ವಪ್ನವಾಗಿಬಿಡುತ್ತದೆ ಸಾಮಾನ್ಯರಿಗೆ.

ನಮ್ಮ ದೇಶದಲ್ಲಿ ಕಾಣುತ್ತಿರುವ ಹಿಂಸೆಯಲ್ಲಿ ಎರಡು ವಿಧ ಇದೆ. ಒಂದು ನಕ್ಸಲೀಯ ಹಿಂಸೆ. ಇನ್ನೊಂದು ಕೋಮುವಾದಿ ಹಿಂಸೆ. ನಕ್ಸಲೀಯ ಹಿಂಸೆ ಭ್ರಷ್ಟಾಚಾರದಿಂದ ಕಂಗೆಟ್ಟಿರುವ ಜನಸಮುದಾಯದ ಶರೀರದಲ್ಲೇ ಕಾಣಿಸಿಕೊಳ್ಳುವ ಕ್ಯಾನ್ಸರ್ ಇದ್ದ ಹಾಗೆ. ಕೋಮುವಾದಿ ಹಿಂಸೆ ಕಂಡದ್ದನ್ನು ಕಚ್ಚುವ ಹುಚ್ಚು ನಾಯಿಯ ರೇಬಿಸ್ ತರಹ. ಕ್ಯಾನ್ಸರಿಗೂ ರೇಬಿಸ್‌ಗೂ ಇರುವ ವ್ಯತ್ಯಾಸವನ್ನು ತಿಳಿದು ನಾವು ಈ ಬಗೆಯ ಹಿಂಸೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಬದಲಾಗಿ ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಮಾತಾಡುವ ಎಲ್ಲಾ ಚಿಂತಕನ್ನೂ ನಕ್ಸಲೀಯರೆಂದು ದೂರುವುದು ಅಮೆರಿಕದ ಮೆಕಾರ್ಥಿಯ ಪಿಡುಗಿನಂತೆ ನಮ್ಮ ದೇಶದ ಪ್ರಜಾತಂತ್ರಕ್ಕೆ ಮಾರಕವಾಗುವುದು.

ಸುಧಾ ವಾರಪತ್ರಿಕೆಯಲ್ಲಿ (೩೧ ಮಾರ್ಚ್ ೨೦೦೫) ವಿಚಾರ ಸಂಕಿರಣದಲ್ಲಿ ಪ್ರಕಟವಾದ ಲೇಖನ.
ನಿರೂಪಣೆ : ಬಾಲಕೃಷ್ಣ ಹೊಸಂಗಡಿ.

* * *