ಚಾರುಮಜಂದಾರ್ ಕಾಲದ ನಕ್ಸಲ್‌ವಾದಕ್ಕೂ ಈಗಿನದ್ದಕ್ಕೂ ನಡುವೆ ಸೈದ್ಧಾಂತಿಕ ಭಿನ್ನತೆ ಇದೆ ಎಂದು ಕೇಳಿದ್ದೇನೆ. ಹೌದಾದರೆ ಅದನ್ನು ತಿಳಿಯದೆಯೇ ಆಂಧ್ರದಲ್ಲೂ ಕರ್ನಾಟಕದಲ್ಲೂ ಬೆಳೆಯುತ್ತಿರುವ ಅವರ ಚಟುವಟಿಕೆಗಳ ಸವಾಲನ್ನು ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆ ಎದುರಿಸಲಾರದು. ಪೊಲೀಸ್ ಎನ್‌ಕೌಂಟರ್ ಎಂದು ಅವರನ್ನು ಅಟ್ಟಿ ಕೊಲ್ಲುವುದರಿಂದ ನಮ್ಮ ಸಭ್ಯಸಮಾಜದ ಮರ್ಯಾದೆ ಕುಗ್ಗುತ್ತ ಹೋಗುತ್ತದೆ. ಸಭ್ಯ ಸಮಾಜದ ಮುಂದುವರಿಕೆಗೆ ಅಗತ್ಯವಾದ ಕಾನೂನುಪಾಲನೆ ಮಾಡದವರನ್ನು ಹುಡುಕಿ ಹಿಡಿದು ನ್ಯಾಯಸಮ್ಮತವಾದ ರೀತಿಯಲ್ಲಿ ಶಿಕ್ಷೆಗೆ ಗುರಿಮಾಡುವುದರ ಬದಲು ಹೀಗೆ ಅಟ್ಟಿ ಕೊಲ್ಲುವುದರಿಂದ ನಮ್ಮ ನ್ಯಾಯವ್ಯವಸ್ಥೆಯೇ ಕುಸಿಯತೊಡಗುತ್ತದೆ.

ಈ ‘ಕ್ರಾಂತಿಕಾರರು’ ಬೆಳೆಯುತ್ತಿರುವುದಕ್ಕೆ ಕಾರಣವಾದರೂ ಏನಿರಬಹುದು? ನಮ್ಮ ಆಳುವ ವ್ಯವಸ್ಥೆ ಭರವಸೆ ಕೊಟ್ಟು ಮಾಡದೇ ಇರುವುದನ್ನು ಅವರು ಮಾಡಿ ತೋರಿಸುತ್ತಿದ್ದಾರೆ – ಆಂಧ್ರದಲ್ಲಿ ಮುಖ್ಯವಾಗಿ. ತಮ್ಮ ಕಾರ್ಯನಿರ್ವಹಣೆಯಲ್ಲಿ ಹಿಂಸೆಗೂ, ಭಯೋತ್ಪಾದನೆಗೂ ಅವರು ಹಿಂದೆಗೆಯುವುದಿಲ್ಲ. ಮೇಲಿನವರಲ್ಲಿ ಜೀವ ಭಯವನ್ನು ಹುಟ್ಟಿಸಿ ಸೋಮಾರಿ, ಅಥವಾ ಭ್ರಷ್ಟ ಅಧಿಕಾರಿಗಳು ಕೊಡದ ಪರಿಹಾರವನ್ನು ತಾವು ಗನ್ನಿನ ಆಶ್ರಯದಲ್ಲಿ ಈಗಿಂದೀಗಲೇ ಕೊಡಬಲ್ಲೆವು, ಎಂದು ತೋರಿ ಜನಸಾಮಾನ್ಯರ ಹೃದಯವನ್ನೂ ಮನಸ್ಸನ್ನೂ ಅವರು ಗೆಲ್ಲುತ್ತ ಹೋಗುತ್ತಿದ್ದಾರೆ. ಹೀಗೆ ಅವರೇ ಒಂದು ಪ್ರತಿಸರಕಾರವಾಗಿ ಬೆಳೆಯುತ್ತಿದ್ದಾರೆ.

ಗಾಂಧಿಯನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳಿಕೊಳ್ಳುವ ನಾವು ಜಡ್ಡುಕಟ್ಟಿ ಸ್ಪಂದಿಸುತ್ತದೆ ಎಂಬುದನ್ನು ವಿವೇಚಿಸಿದಾಗ ನಮ್ಮ ಹೃದಯಹೀನ ಜಡತ್ವಕ್ಕೆ ಹೇಸಿಗೆಪಡಬೇಕಾಗುತ್ತದೆ. ನರ್ಮದಾ ಚಳವಳಿಯಲ್ಲಿ ಸತತವಾಗಿ ತೊಡಗಿಸಿಕೊಂಡಿರುವ ಮೇಧಾಪಾಟ್ಕರ್ ಈ ಕಾಲದ ಶ್ರೇಷ್ಠ ಗಾಂಧಿವಾದಿಯಾದ ಹೋರಾಟಗಾರರು. ಜಯಪ್ರಕಾಶರ ನಂತರ ಮೇಧಾರವರು ಇಡೀ ಜಗತ್ತಿನ ಸೃಜನಶೀಲ ಚಿಂತಕರ ದೃಷ್ಟಿ ನಮ್ಮ ಹತಾಶ ಬಡಜನರ ಕಡೆ, ಗಿರಿಜನರ ಕಡೆ ಹರಿಯುವಂತೆ ಮಾಡಿದ್ದಾರೆ. ಭಾರತದ ಸಂವಿಧಾನದ ಆಶಯಗಳು ಜೀವಂತವಾಗಿರುವುದು ಅವರ ಹೋರಾಟದಲ್ಲಿ. ಅಭಿವೃದ್ಧಿಯ ತಪ್ಪು ಕಲ್ಪನೆಯಲ್ಲಿ ಕಟ್ಟುತ್ತಿರುವ ವಿನಾಶಕಾರಕವಾದ ಆಣೆಕಟ್ಟುಗಳ ಎತ್ತರ ಹೆಚ್ಚಿದಷ್ಟೂ ನಿರಾಶ್ರಿತರಾಗಿ ನೆಲೆಯಿಲ್ಲದೆ ನಿಷ್ಪ್ರಯೋಜಕರಾಗಿಯೋ, ದಿನಕೂಲಿಗಳಾಗಿಯೇ ನರಳುವವರ ಪರವಾಗಿ ನಿಂತು ಇವರು ಸತತ ಸತ್ಯಾಗ್ರಹಿಯಾಗಿ, ಏಕೋದ್ದೇಶದ ವೀರ ತಪಸ್ವಿಯಾಗಿ ಕೆಲಸಮಾಡುತ್ತಿದ್ದಾರೆ.

ಬೃಹತ್ತಾಗಿ ಕಟ್ಟು ಅಣೆಕಟ್ಟುಗಳ ಉಪಯೋಗ ಅಲ್ಪವಾದದ್ದು ಮತ್ತು ಇವುಗಳ ಪರಿಣಾಮ ಹಾನಿಕಾರವಾದದ್ದು ಎಂಬುದು ಈಗಾಗಲೇ ಸಾಬೀತಾಗಿದೆ. ಕುಲ್ದೀಪ್ ನಯ್ಯರ್ ಈ ಬಗ್ಗೆ ಈಚೆಗೆ ಬರೆದದ್ದು ನೋಡಿ:

ಸ್ವತಂತ್ರ ಭಾರತದ ಅಭಿವೃದ್ಧಿಯ ಸಂಕೇತದಂತಿರುವ ಭಾಕ್ರಾ ಅಣೆಕಟ್ಟಿನ ಸುತ್ತಣ ಭ್ರಾಮಕ ಕಥನಗಳ ಯಥಾರ್ಥತೆ ಈಗ ಅಧ್ಯಯನಗಳಿಂದ ಅನಾವರಣಗೊಂಡಿದೆ. ಅಣಕೆಟ್ಟಿನ ಎತ್ತರವನ್ನು ಹೆಚ್ಚಿಸದೆ ನರ್ಮದಾ ನದಿಯಿಂದ ಇನ್ನೂ ಅಧಿಕ ನೀರು ಹಾಗೂ ವಿದ್ಯುಚ್ಛಕ್ತಿಯನ್ನು ಪಡೆಯಬಹುದಾದ ಸಾಧ್ಯತೆಗಳನ್ನು ಹುಡುಕೊಳ್ಳುವುದು ಈಗ ಮುಖ್ಯವಾಗಿದೆ. ಪಂಜಾಬ್ ಹಾಗೂ ಹರಿಯಾಣಾಗಳ ನೀರಾವರಿ ಸಮೃದ್ಧಿಗೆ, ಭಾಕ್ರಾದ ಕೊಡುಗೆಗಿಂತ ಮಿಗಿಲಾಗಿ, ಅಂತರ್ಜಲದ ಮಟ್ಟ ಹಾಗೂ ವ್ಯಾಪಕವಾಗಿ ಸುಧಾರಣೆಗೊಂಡ ವ್ಯವಸಾಯ ಕ್ರಮವು ಮುಖ್ಯ ಕಾರಣವೆಂದು ಭಾಕ್ರಾ ಅಣೆಕಟ್ಟಿನ ಅಧ್ಯಯನಗಳು ತಿಳಿಸುತ್ತವೆ. ಪಂಜಾಬಿನ ಶೇ. ೨೦ ಹಾಗೂ ಹರಿಯಾಣಾದ ಶೇ ೩೧ ರಷ್ಟು ಕೃಷಿಭೂಮಿಗಳ ನೀರಾವರಿಗಷ್ಟೇ ಭಾಕ್ರಾ ನೆರವಾಗುತ್ತಿದೆ. ಅಣಕೆಟ್ಟಿನಿಂದ ನಿರಾಶ್ರಿತರಾದವರು ೫೦ ವರ್ಷಗಳ ಅನಂತರವೂ ತಮ್ಮ ಯಥಾಸ್ಥಿತಿಗೆ ಮರಳಿಲ್ಲ.

ನರ್ಮದಾ ನದಿಯ ವ್ಯಾಪ್ತಿಯಿಂದ ನಿರಾಶ್ರಿತವಾದ ೫೦,೦೦೦ ಕುಟುಂಬಗಳಿಗೆಹೆಚ್ಚಿನ ಭೂಮಿಯನ್ನೇನೂ ಹೊಂದಿರದಉತ್ತರ ಪ್ರದೇಶ, ಮದ್ಯಪ್ರದೇಶ, ಮಹಾರಾಷ್ಟ್ರಗಳು ಹೇಗೆ ಆಶ್ರಯವನ್ನು ನೀಡಬಲ್ಲವು? ಉತ್ತರ ಪ್ರದೇಶ ಹಾಗೂ ಕೇಂದ್ರ ಸರ್ಕಾರಗಳೆರಡರ ನಿರ್ಲಕ್ಷ್ಯಕ್ಕೂ ಒಳಗಾದ, ತೆಹ್ರಿ ಅಣೆಕಟ್ಟಿನ ಬಲಿಪಶುಗಳಾದ, ನಿರಾಶ್ರಿತರ ಸ್ಥಿತಿಯಂತೂ ಇನ್ನೂ ದಾರುಣವಾದುದು. ಭಾಕ್ರಾದಂತಹ ಅಣೆಕಟ್ಟನ್ನು ನಿರ್ಮಿಸುವಾಗ, ಬೃಹತ್ಯೋಜನೆಗಳಿಂದ ಹೇಗೆ ಒಳಿತಿಗಿಂತ ಹೆಚ್ಚಾಗಿ ಕೆಡುಕೇ ಒದಗಿಬಿಡುತ್ತದೆ ಎನ್ನುವುದನ್ನು, ನಾವು ಯೋಚಿಸಲಿಲ್ಲ, ನಿಜ. ಆದರೆ ನರ್ಮದಾ ತೆಹ್ರಿಯಂತಹ ಅಣೆಕಟ್ಟನ್ನು ನಿರ್ಮಿಸಲಾರಂಭಿಸುವ ಮುನ್ನ ನಮ್ಮ ಹಿಂದಿನ ತಪ್ಪುಗಳಿಂದ ಪಾಠವನ್ನೂ ಕಲಿಯಬೇಕಲ್ಲವೆ? ಬೃಹತ್ ಅಣೆಕಟ್ಟುಗಳ ಅವಶ್ಯಕತೆಯೇನೂ ಇಲ್ಲ; ಸಣ್ಣಸಣ್ಣ ಅಣೆಕಟ್ಟುಗಳಿಂದ, ಕಡಿಮೆ ಖರ್ಚಿನಲ್ಲೇ ಸಾಕಷ್ಟು ನೀರು, ವಿದ್ಯುಚ್ಛಕ್ತಿಗಳನ್ನು ಪಡೆದು, ಪ್ರವಾಹ ಇತ್ಯಾದಿಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಿತ್ತು. ನರ್ಮದೆಗಾಗಿ ಈಗಾಗಲೇ ೧೭,೦೦೦ ಕೋಟಿ ಖರ್ಚಾಗಿದೆ ಹಾಗೂ ಆಗಬೇಕಾದ ಕೆಲಸವೂ ಇನ್ನೂ ಸಾಕಷ್ಟಿದೆ.

ಹಿಂಸಾತ್ಮಕ ಕ್ರಾಂತಿಯನ್ನು ನಂಬುವ ಈ ನಮ್ಮ ಜನಸಮರವಾದಿ ಕ್ರಾಂತಿಕಾರರು ಮೇಧಾ ಪಾಟ್ಕರ್ ನಡೆಸಿರುವ ಆಂದೋಳನ ಅರಣ್ಯರೋಧನವಾಗುತ್ತಿರುವ ಸನ್ನಿವೇಶದಲ್ಲಿ ಬಲವಾಗುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಬೃಹತ್ ಯೋಜನೆಗಳಿಂದ ದೇಶದ ಉದ್ಧಾರ ಸಾಧ್ಯವೆಂದು ತಿಳಿದಿರುವ ನಮ್ಮ ರಾಜಕೀಯ ಪಕ್ಷಗಳು ನರ್ಮದಾ ಆಂದೋಳನಕ್ಕೆ ಪ್ರತಿಸ್ಪಂದಿಸಲಿಲ್ಲ. ಆದರೆ ಹಿಂಸಾತ್ಮಕವಾಗಿ ನಡೆಯುತ್ತಿರುವ ‘ನಕ್ಸಲ್’ವಾದಿ ಆಂದೋಳನಕ್ಕೆ ಸ್ಪಂದಿಸಲೇಬೇಕಾಗಿ ಬಂದವರಂತೆ ಕಾಣುತ್ತಿದ್ದಾರೆ.

ರಾಜ್ಯ ವ್ಯವಸ್ಥೆ ಯಾವಾಗ, ಏಕೆ, ಯಾವ ತುರ್ತಿನಲ್ಲಿ ಸ್ಪಂದಿಸುತ್ತದೆ ಎಂಬ ಬಗ್ಗೆ ಯಾರ ಧೋರಣೆ ಸತ್ಯವಾಯಿತು ಹಾಗಾದರೆ? ಭ್ರಷ್ಟ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಹಿಂಸೆಯನ್ನು ಬಳಸುವುದು ಅನಿವಾರ್ಯವೆಂದು ತಿಳಿದವರ ವಾದವೋ? ಅಥವಾ ಸತ್ಯಾಗ್ರಹದ ಮುಖೇನ ಹೃದಯ ಪರಿವರ್ತನೆಯಲ್ಲಿ ನಂಬುವ ಗಾಂಧೀವಾದಿಗಳದೊ? ಈ ಬಗ್ಗೆ ತೀರಾ ಸಂಕಟದೊಂದಿಗೆ ಯೋಚಿಸಬೇಕಾದ ಅಗತ್ಯವಿದೆ.

ಸಾಮಾಜಿಕ/ಆರ್ಥಿಕ ಸುಧಾರಣೆಗಳ ಮೂಲಕ ಹಿಂಸಾತ್ಮಕ ಕ್ರಾಂತಿಯನ್ನು ಅನಗತ್ಯಗೊಳಿಸಬಹುದೆಂದು ನಮ್ಮ ವ್ಯವಸ್ಥೆಯ ಸಜ್ಜನರು ಈಚೆಗೆ ಚಿಂತಿಸಲು ತೊಡಗಿದ್ದಾರೆ. ಈ ಬಗ್ಗೆ ನಾವು ಸಿನಿಕರಾಗಬಾರದು. ಆದರೆ ವಾಸ್ತವವೇನೆಂದು ನೋಡಬೇಕು. ಎಲ್ಲೆಲ್ಲಿ ದುಡ್ಡು ಓಡಾಡಲು ಶುರುವಾಗುತ್ತದೋ, ಅಲ್ಲೆಲ್ಲ ಅದನ್ನು ಬಾಚಿ ತುಂಬಿಕೊಳ್ಳುವವರು ಇರುತ್ತಾರೆ. ಈ ನುಗ್ಗಾಟದಲ್ಲಿ ಸೋರಿದಷ್ಟು ಮಾತ್ರ ಬಡಜನರ ಕೈಸೇರುತ್ತದೆ. ಈ ಪ್ರಕ್ರಿಯೆಯಲ್ಲಿ ಪೈಪೋಟಿ ಉಂಟಾಗಿ ಬಡವರೂ ಭ್ರಷ್ಟತನದಲ್ಲಿ ಪಾಲುದಾರರಾಗುತ್ತಾರೆ. ಪರಿಣಾಮವೆಂದರೆ ಹಿಂಸಾತ್ಮಕ ಕ್ರಾಂತಿಯ ಪ್ರತಿಪಾದನೆ ಇನ್ನಷ್ಟು ಬಲವಾಗುತ್ತದೆ.

ಹಳ್ಳಿ ಹಳ್ಳಿಯಲ್ಲೂ ಜಬರದಸ್ತಿನ ಅಲ್ಪ ಸ್ಥಿತಿವಂತರಿರುತ್ತಾರೆ. ದೇಶದ ಬಲಾಢ್ಯರಿಗೆ ಹೋಲಿಸಿದರೆ ಇವರು ಸಣ್ಣಪುಟ್ಟ ಜನರೇ. ಆದರೆ ಅದಿಕಾರದ ಜೊತೆ ಇವರಿಗೆ ವಿಧೇಯ ನಂಟು ಇರುತ್ತದೆ. ಜನರಿಗೆ ಕಾನೂನಿನ ಪ್ರಕಾರ ಸಲ್ಲಬೇಕಾದ್ದನ್ನೇ ಇವರು ಕಾಣಸಿಗದಂತೆ ನುಂಗುತ್ತಾರೆ; ಅಥವಾ ತಡೆಯುತ್ತಾರೆ; ಅಥವಾ ‘ಕಮಿಷನ್’ ಪಡೆದು ಹಂಚುತ್ತಾರೆ. ಓಟಿನ ರಾಜಕೀಯದ ಹಳ್ಳಿ ಧುರೀಣರು ಇವರು. ಎಲ್ಲ ಪಕ್ಷಗಳಿಗೂ ಈ ಪುಡಾರಿಗಳು ಮಾತ್ರ ಪರಿಚಿತರು. ಹಿಂಸಾತ್ಮಕ ಕ್ರಾಂತಿಕಾರರು ಈ ಆಸೆಬುರುಕರ ಅಲ್ಪ ಯಜಮಾನಿಕೆಯನ್ನು ಭಯೋತ್ಪಾದನೆಯ ಮೂಲಕ ಜನರ ಕಣ್ಣೆದುರಿಗೇ ಹೀಯಾಳಿಸಿ ಕರಗಿಸಿ ಹೀರೋಗಳಾಗುತ್ತಾರೆ. ನ್ಯಾಯವಾಗಿ ಜನರಿಗೆ ಸಲ್ಲಬೇಕಾದ್ದು ಸಲ್ಲುವಂತೆ (ಕ್ರಾಂತಿ ಭಿಕ್ಷೆಯನ್ನೂ ಪಡೆದು?) ಒತ್ತಾಯಿಸುತ್ತಾರೆ. ಆಗೀಗ ವ್ಯವಸ್ಥೆಯ ಪಾಪದ ಕೊಂಡಿಗಳಾದ ಇವರನ್ನು ‘ಜನವೈರಿ’ಗಳೆಂದು ಕರೆದು ಕೊಲ್ಲುವುದು ಅವಶ್ಯವೆನ್ನಿಸಿದರೆ ಕೊಲ್ಲುತ್ತಾರೆ. ಕೊಂದು ಅಟ್ಟಹಾಸ ಪಡುತ್ತಾರೆ. ಅಂದರೆ ತಾವು ಪ್ರತಿಸರಕಾರ ಸ್ಥಾಪಿಸಿದೆವೆಂದುಕೊಳ್ಳುತ್ತಾರೆ.

ಮಾಧ್ಯಮಗಳಲ್ಲಿ ಮಿಂಚುವ ವೋಟ್ ಬ್ಯಾಂಕಿನ ಭ್ರಷ್ಟ ರಾಜಕಾರಣಿಗಳು ಇನ್ನೂ ಕಣ್ಣೆತ್ತಿ ನೋಡದ ಸತ್ಯ ಇದು : ‘ಯಾವತ್ತೋ ಆಗುವ ಭರವಸೆಯ ಕ್ರಾಂತಿ ತಮ್ಮದಲ್ಲ; ಈಗಿಂದೀಗಲೇ ಜನರ ಇಚ್ಛಾಶಕ್ತಿಯ ಬಲದಿಂದಲೂ, ಅದನ್ನು ಹೊಮ್ಮಿಸುವ ಗನ್ನಿನ ಬಲದಿಂದಲೂ ಜಾರಿಗೆ ತರಬಹುದಾದ್ದು’ ಎಂದು ತೋರಿ ಜನರ ಹೃದಯವನ್ನು ಈ ಅಡಗಿಕೂತವರು ಗೆಲ್ಲುತ್ತಾರೆ.

ಲೆನಿನ್ ಮತ್ತು ಮಾವೋ ಪ್ರಣೀತವಾದ ಮಾರ್ಗವೂ ಮೂಲತಃ ಇದೇ. ಕ್ರಾಂತಿಗೆ ದೇಶದ ವಾಸ್ತವ ಸ್ಥಿತಿ ಸಜ್ಜಾಗಿದ್ದರೂ, ಜನರ ಇಚ್ಛಾಶಕ್ತಿ ಸಜ್ಜಾಗಿಲ್ಲ. ಆದ್ದರಿಂದ ಕ್ರಾಂತಿಕಾರಕ ನಿಲುವಿನ ಮುಂಚೂಣಿಯಲ್ಲಿರುವ ಪಕ್ಷ ತನ್ನ ಶಿಸ್ತಿನಲ್ಲಿ ಕ್ರಾಂತಿಸಂಕಲ್ಪದಿಂದ ಸ್ಫೋಟಕ್ಕೆ ಅವಶ್ಯವಾದಷ್ಟು ಹಿಂಸೆಗೂ ಸಿದ್ಧವಾಗಿರಬೇಕು, ಜನಶಕ್ತಿಯನ್ನು ಮೂಲಕ ಪ್ರಚೋದಿಸಿ ಅರಳಿಸಬೇಕು ಎಂಬುದೇ ಒಟ್ಟಿನಲ್ಲಿ ಈ ಸಿದ್ಧಾಂತರದ ಲೆನಿನ್ ಪ್ರಣೀತ ತಳಹದಿ. ಜನಸಮರ ಸಾರಿದ ಆಂಧ್ರದ ಗುಂಪಿನದೂ ಇದೇ ಸಿದ್ಧಾಂತವಿರಬಹುದು ಎಂದು ನನ್ನ ಊಹೆ.

ಆದರೆ ಲೆನಿನ್‌ರ ಈ ಮಾರ್ಗವನ್ನು ದೇಶದ ಕಮ್ಯುನಿಸ್ಟ್ ಪಕ್ಷಗಳು ಕೈಬಿಟ್ಟು ಪ್ರಜಾತಂತ್ರದ ದಾರಿಹಿಡಿದಿವೆ. ಅಲ್ಲದೆ ಸಂಘಟಿಸಬಲ್ಲ ಕೂಲಿ ಕಾರ್ಮಿಕರನ್ನು, ನೌಕರವರ್ಗಗಳನ್ನು ಮಾತ್ರ ಸಂಘಟಿಸಿ ತಮ್ಮ ನೆಲೆಯಲ್ಲಿ ಭದ್ರವಾಗಿ ಬೆಳೆಯುತ್ತಿವೆ. ಉಳಿದ ಪಕ್ಷಗಳಲ್ಲಿ ಕಾಣಿಸುವಷ್ಟು ಅಲ್ಲದಿದ್ದರೂ ಸತತವಾದ ಅಧಿಕಾರದ ಫಲವಾಗಿ, ಅವರು ಆಳುತ್ತಿರುವ ದೇಶಗಳಲ್ಲಿ, ಭ್ರಷ್ಟ ಪುಡಾರಿಗಳು ಕಾಣಿಸಿಕೊಳ್ಳತೊಡಗಿದ್ದಾರೆ. ಎಲ್ಲ ಪಕ್ಷಗಳಂತೆ ತಾನಾಗಬಾರದೆಂಬ ಆತಂಕದಲ್ಲಿದ್ದು ಅವರು ಜಾರುತ್ತಿದ್ದಾರೆ. ಜನಸಮರವಾದಿಗಳು ನಿರೀಕ್ಷಿಸುವುದೂ (ಆಶಿಸುವುದು ಕೂಡ?) ಇದನ್ನೇ ಇರಬಹುದು. ಒಣಗಿದ್ದು ಉದುರದೆ ಹೊಸಚಿಗುರು ಇಲ್ಲ ಎಂದು ನಂಬುವ ಈ ಹಠಮಾರಿಗಳಿಗೆ ಒಣಗಿದೆಲೆಯೂ ಹೊಸಚಿಗುರೂ ಒಟ್ಟೊಟ್ಟಿಗೆ ಬಾಳುವ ಭಾರತೀಯ ವೃಕ್ಷದ ಸಹನೆ ತಿಳಿಯದೆಂಬ ಸಮಾಧಾನದಲ್ಲಿ ನಾವು ಬಹಳ ಜನ ಬದುಕುತ್ತ ಹೋಗುವುದು.

ಆದರೆ ನಿತ್ಯವನ್ನು ಪ್ರತಿನಿತ್ಯವೂ ಎದುರಿಸಬೇಕಾದ ಇವತ್ತಿನ ಎಲ್ಲ ರಾಜಕೀಯ ಪಕ್ಷಗಳಿಗೆ – ಮುಖ್ಯವಾಗಿ ಎಡಪಕ್ಷಗಳಿಗೆ- ಈ ‘ನಕ್ಸಲ್‌’ ಬೆಳವಣಿಗೆ ಒಂದು ಸವಾಲಾಗಿದೆ. ಈ ಸವಾಲು ಆರ್ಥಿಕ ಸ್ವರೂಪದ್ದು ಮಾತ್ರ ಎಂದು ತಿಳಿಯುವುದು ಒಂದೋ ಮೂರ್ಖತನ; ಅಥವಾ ಸೋಮಾರಿತನ. ಸದ್ಯದ ವ್ಯವಸ್ಥೆಯನ್ನೇ ನಂಬಿರುವ, ಅಥವಾ ಬೃಹತ್ ಯೋಜನೆಗಳಲ್ಲಿ ಸರ್ವೋದ್ಧಾರದ ಕನಸು ಕಾಣುವ ಎಲ್ಲ ರಾಜಕೀಯ ಪಕ್ಷಗಳೂ, ಎಡಪಕ್ಷಗಳೂ, ನೈತಿಕವಾಗಿ ಟೊಳ್ಳಾಗಿವೆ. ಬದಲಾವಣೆ ಸಾಧ್ಯವೆಂದೂ, ಸಾಧುವೆಂದೂ ಈಗಾಗಲೇ ಕಂಡ ಜನ ಕುದಿಯುತ್ತಿದ್ದಾರೆ. ನೆರೆಹೊರೆಯ ಬಲಿಷ್ಠರ ಸುಖಜೀವನ ಕಂಡು ಕರುಬುತ್ತಾರೆ. ಕಾವಿ ತೊಟ್ಟವರು, ಖಾಕಿ ತೊಟ್ಟವರು, ರೇಷ್ಮೆ ತೊಟ್ಟವರು ತಮ್ಮ ನಡುವೆಯೇ ಬಾಚಿ ಉಣ್ಣುವುದನ್ನು ನೋಡುತ್ತಾರೆ. ನಾಚಿಕೆಯಿಲ್ಲದೆ ಉದಾತ್ತವಾದ ಮಾತುಗಳನ್ನು ಎಲ್ಲೆಂದರಲ್ಲಿ ಮಾಧ್ಯಮಗಳ ಸಮ್ಮುಖದಲ್ಲಿ ಎಲ್ಲರೂ ಆಡುವುದನ್ನು ಕೇಳುತ್ತಾರೆ. ಈ ನಡುವೆ ಹತಾಶರಾದವರು ಯಾರ ಮಾತಿಗೆ ನಿಜವಾಗಿ ಕಿವಿಗೊಡುತ್ತಾ ಹೋದಾರು ಎಂಬ ಬಗ್ಗೆ ನಾವು ನಮ್ಮ ಅಂತರಂಗವನ್ನೇ ಶೋಧಿಸಿಕೊಳ್ಳಬೇಕು.

ಹಿಂಸೆಯನ್ನು ಬಳಸುವ ಈ ಕ್ರಾಂತಿವಾದಿಗಳ ಮನಸ್ಸಿನಲ್ಲಿರುವ ಭವಿಷ್ಯದ ಸಮಾಜದ ಸ್ವರೂಪವೇನೆಂಬುದನ್ನೂ ನಾವು ನಿಷ್ಠುರವಾಗಿ ಶೋಧಿಸಬೇಕು. ಈವರೆಗೆ ಹಿಂಸೆಯನ್ನು ಬಳಸಿ ಅಧಿಕಾರ ಹಿಡಿದ ಇವರ ಅಣ್ಣಂದಿರೆಲ್ಲರೂ ಸಾಧಿಸಿದ್ದಾದರೂ ಏನೆಂಬುದನ್ನು ನೋಡಬೇಕು. ಮಾವೋನ ಲಾಂಗ್ ಮಾರ್ಚ್ ಕೊನೆಯಾದದ್ದು ಕೋಕೋಕೋಲಾದ ಸ್ವರ್ಗದಲ್ಲಿ. ಲೆನಿನ್ ಅಗತ್ಯವೆಂದು ಕೊಳ್ಳುತ್ತಲೇ ಅನಗತ್ಯವಾಗಿ ಮಾಡಿದ ಹಿಂಸೆಯಿಂದ ಪಡೆದ ಪ್ರಭುತ್ವ ರಷ್ಯಾದಲ್ಲಿ ತಾನು ಮಾತ್ರ ಅಧಿಕಾರದಲ್ಲಿ ಉಳಿಯಲೆಂದು ಸ್ಟಾಲಿನ್ ಮಾಡಿದ ಹಿಂಸೆಯ ಭೀಕರ ದುಸ್ವಪ್ನವಾಯಿತು. ಈಗ ಈ ಎರಡು ರಾಷ್ಟ್ರಗಳೂ, ತಣ್ಣಗಾಗಿ, ಅಮೆರಿಕಾದ ಹಾದಿಯಲ್ಲೇ ಇವೆ.

ಗಾಂಧಿಯನ್ನು ರಾಷ್ಟ್ರಪಿತನೆಂದು ತಿಳಿದು ಹುಟ್ಟಿದ ಭಾರತದ ಪ್ರಭುತ್ವಕೂಡ ಪಶ್ಚಿಮದ ನಾಗರಿಕತೆಗೆ ಬದಲಾದ ಒಂದು ಪರ್ಯಾಯ ವ್ಯವಸ್ಥೆಯನ್ನು ಹುಡುಕಿಕೊಳ್ಳಲಾರದೆ ಅಮೆರಿಕಾದ ಹಾದಿಯಲ್ಲೇ ಇದೆ. ಅಂದರೆ ಇಲ್ಲಿನ ಉಳ್ಳವರನ್ನು ಆ ಹಾದಿಯಲ್ಲಿ ಉದ್ಧಾರಗೊಳ್ಳುವಂತೆ ಹಚ್ಚಿದೆ. ಇದಕ್ಕೆ ಹೊರತಾದ ಅಸಂಖ್ಯರು ತಮ್ಮ ಬದುಕೂ ಬೆಳಗಬಹುದೆಂಬ ಕನಸನ್ನು ಕಾಣಬಲ್ಲ ವಾತಾವರಣದಲ್ಲಿ ಉಸಿರಾಡುತ್ತಿದ್ದು, ಅದರ ಮಾರ್ಗ ಕಾಣದೆ ಕಂಗೆಟ್ಟಿದ್ದಾರೆ. ಹೀಗೆ ಹದಗೊಂಡ ನೆಲವನ್ನು ಉತ್ತಿ ಬಿತ್ತಿ ಬೆಳೆಯುವ ಕನಸನ್ನು ಕೋವಿಯ ಸಹಾಯದಲ್ಲಿ ಕೆಲವು ಕ್ರಾಂತಿಕಾರರು ಕಾಣುತ್ತಿದ್ದಾರೆ.

ನೈತಿಕವಾದ ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ನನ್ನಂಥವರು ನಮ್ಮ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಿಂದ ಹೇಸಿ ಹೊರಬರುವ ಕನಸನ್ನು ಕಾಣುತ್ತಿದ್ದೇವೆ.

ಸಾಂಸಾರಿಕತೆಯ ಜೀವಕಣಿವೆಯ ಸುಖ ದುಃಖದಲ್ಲಿ ಭಾಗಿಯಾಗಿ ಪಕ್ವವಾಗುತ್ತ ಹೋಗಬೇಕಾದ ನಮ್ಮ ಹಾಗಿನ ನರಮನುಷ್ಯರೇ ಈ ಯೌವನದ ಕನಸುಗಾರ ಕ್ರಾಂತಿಕಾರರು. ಬದುಕಿನ ಮುಖ್ಯ ಪ್ರವಾಹದಿಂದ ದೂರವಾಗಿ, ಕಾಡಿನಲ್ಲೋ ಗುಹೆಯಲ್ಲೋ ಬಡಕುಟೀರದಲ್ಲೋ ಅಡಗಿದ್ದು ಭಯವನ್ನೂ, ಹಿಂಸೆಯನ್ನೂ ಬಳಸಿ ಕಲ್ಯಾಣಕಾರಿಯಾದದ್ದನ್ನು ಸಾಧಿಸುತ್ತೇವೆಂದು ತಿಳಿದ ಇವರು ಭವಿಷ್ಯದ ಸರ್ವೋತ್ಪಾತದ ಭ್ರಮೆಯಲ್ಲೇ ಬದುಕಬೇಕಾಗುತ್ತದೆ. ತಮ್ಮ ಹಿಂದೆ ಚೀನಾದಲ್ಲೂ, ರಷ್ಯಾದಲ್ಲೂ ನಡೆದ ಹಿಂಸೆಯ ಪಾಠವನ್ನು ಇವರು ಕಲಿಯಲಾರರು. ಕೊಳಕನ್ನು ಕತ್ತರಿಸುವ ಸರ್ಜಿಕಲ್ ಹಿಂಸೆ ಕ್ರಮೇಣ ಅವರ ಅಸ್ತಿತ್ವದ ಗುರುತಾದೀತು. ಈ ಹಿಂಸೆಯಲ್ಲಿ ಅವರಿಗೆ ರುಚಿಯೂ ಹತ್ತೀತು. ಸ್ವಾಭಾವಿಕವಾಗಿ ಹಿಂಸೆಯಲ್ಲೇ ರುಚಿಯಿರುವ, ಎಗ್ಗಿಲ್ಲದ ಜನ ತಮ್ಮ ಲಾಭಕ್ಕಾಗಿ ಇವರೊಂದಿಗೆ ಸೇರಿಕೊಂಡಾರು. ಇನ್ನಷ್ಟು ಕೋವಿಗಳಿಗಾಗಿ ಜೀವಿಶತೃಗಳನ್ನು ಇವರು ಅವಲಂಬಿಸಬೇಕಾದೀತು. ಡ್ರಗ್ ಮಾರುವವರು, ಬಂದೂಕು ಮಾರುವವರು, ಕಾಡುಗಳ್ಳರು – ಇಂಥವರೇ ನಮ್ಮಂತಹ ಸಂಸಾರಿಗಳಿಗಿಂತ ಇವರಿಗೆ ಹತ್ತಿರವಾಗುವ ಅನಿವಾರ್ಯತೆ ಒದಗೀತು. ಹಾಗಾದಲ್ಲಿ ಯಾರ ಹಿತಕ್ಕಾಗಿ ಇವರ ಕ್ರಾಂತಿ?

ಭಯೋತ್ಪಾದಕರ ಪಾಡೇ ಇದು. ಇವರು ಇರುವುದು ಹತ್ತಿಪ್ಪತ್ತು ಜನರಾದರೂ ಇದೊಂದು ‘ಮಾಸ್ ಮೂವ್‌ಮೆಂಟು’ ಎನ್ನುವ ಭ್ರಮೆಯನ್ನು ಇವರಂತೆಯೇ ಗನ್ನಿನಲ್ಲಿ ನಂಬಿಕೆಯಿರುವ ರಾಜ್ಯ ವ್ಯವಸ್ಥೆಗೆ ಹುಟ್ಟಿಸುತ್ತಾರೆ. ಹಿಂಸೆಯ ವಿಷಯದಲ್ಲಿ ಇವರು ಅನ್ಯೋನ್ಯರಾದಂತೆ ಕಂಡು, ಜನ ಕಂಗೆಡುತ್ತಾರೆ.

ಈ ಪ್ರಪಂಚವೇ ಪರಮಸತ್ಯವೆಂದೂ, ಮಾನವ ತನ್ನ ಆರ್ಥಿಕ ಪ್ರಗತಿಯಲ್ಲೇ ಪರಿಪೂರ್ಣತೆಯನ್ನು ಪಡೆಯುತ್ತಾನೆಂದೂ ತಿಳಿದಿರುವ ಈ ಐಹಿಕವಾದಿಗಳು ಕಠಿಣ ಸಂಕಲ್ಪದ ಜನರು. ಹಿಂಸಾತ್ಮಕ ಕ್ರಾಂತಿಯ ಜಾಗರಣೆಯಲ್ಲಿ ಕ್ರಮೇಣ ತಾವು ಮನುಷ್ಯ ಮಾತ್ರರಲ್ಲವೆಂದು ಬೀಗುತ್ತ, ಚರಿತ್ರೆಯನ್ನು ತಮ್ಮ ಪೂರ್ವನಿರ್ಧಾರಿತ ಒಕ್ಕಣಿಗೆ ತಕ್ಕಂತೆ ಕಟ್ಟುತ್ತೇವೆಂಬ ಇವರು ಭ್ರಮಾಬ್ರಹ್ಮರು. ಮಾವೋ ಮತ್ತು ಸ್ಟಾಲಿನ್ ಆದದ್ದು ಹೀಗೇ. ಕೊಂಚ ಭಿನ್ನ ಒಕ್ಕಣೆಗೆ ಅನುಸಾರವಾಗಿ ನಡೆಯಲು ಹೊರಟ ಇತರ ಕನಸುಗಾರರನ್ನು ಬಲಿಕೊಟ್ಟು ಕೊನೆಗೆ ತಾವೇ ಬಲಿಯಾದವರು ಇವರು.

ದೀನದಲಿತರ ಒಳ್ಳೆಯ ಜೀವನದ ಆಸೆಯ ಕಿಚ್ಚನ್ನು ಕೇವಲ ಹೊಟ್ಟೆಕಿಚ್ಚಾಗಿ ಪರಿವರ್ತಿಸುವ ಕ್ರಾಂತಿ ರಷ್ಯಾ ಮತ್ತು ಚೀನಾ ಮಾದರಿಯದು. ಆಸೆಬುರುಕ ಅಮೆರಿಕನ್ ಸಂಸ್ಕೃತಿಯನ್ನೇ ಅದು ಕೊನೆಯಲ್ಲಿ ಸೃಷ್ಟಿಸುವುದು. ಬಂಡವಾಳಶಾಹಿಗಳೂ ಕ್ರಾಂತಿಕಾರರೂ ಪೂಜಿಸುವುದು ಒಂದೇ ದೇವರನ್ನು – ಅದು ಕುರುಡು ಕಾಂಚಾಣ. ಸಂಪನ್ಮೂಲಗಳ ನಿರ್ದಯವಾದ ಸತತ ಶೋಷಣೆಯಿಂದ ಮಾತ್ರ ಐಶ್ವರ್ಯದ ಮದ ಸಾಧ್ಯವಾದೀತು. ಆದರೆ ಇಡೀ ಜೀವಸಂಕುಲವನ್ನೂ ಅಲ್ಪಾಯುಷಿ ಮಾಡಬಲ್ಲ ವಿಷಯ ಈ ಬಗೆಯ ವಸ್ತುಲೋಕದ ಆರಾಧನೆಯಲ್ಲಿ ಅಡಗಿದೆ. ರಷ್ಯಾ ಮತ್ತು ಚೀನಾಗಳನ್ನು ಸೃಷ್ಟಿಸಿದ ಕ್ರಾಂತಿಕಾರರಿಂದ ಪ್ರಭಾವಿತರಾದವರು. ಎಷ್ಟು ಅಪ್ಪಟವಾಗಿ ಜನರನ್ನು ಪ್ರೀತಿಸುತ್ತೇವೆಂದುಕೊಂಡರೂ, ಗಾಂಧಿ ಕಂಡ ಕನಸಿನ ಪರ್ಯಾಯ ವ್ಯವಸ್ಥೆಯನ್ನು ಸೃಷ್ಟಿಸಲಾರರು. ವಿನಾಶಕಾರಕ ಬೃಹತ್ ತಂತ್ರಜ್ಞಾನದ ನೆರವು ಪಡೆದು ಬೆಳೆಯುತ್ತಿರುವ ಆಧುನಿಕ ನಾಗರಿಕತೆಯನ್ನು ಆಮೂಲಾಗ್ರವಾಗಿ ಪ್ರಶ್ನಿಸುವುದು ಹೊಸದೊಂದು ಜಗತ್ತಿನ ಸೃಷ್ಟಿಗೆ ಅಗತ್ಯವಾದದ್ದು.

‘ನಕ್ಸಲ್’ ಎಂದು, ನಮಗೆ ಹೊರಗಿನದು ಎಂದು ನಾವು ತಿಳಿದಿರುವ ಹಿಂಸೆ ಈ ಆಸೆಬುರುಕ ನಾಗರಿಕತೆಯ ಹೊಟ್ಟೆಯಲ್ಲೇ ಹುಟ್ಟಿಕೊಂಡಿರುವ ಕ್ಯಾನ್ಸರ್. ಇಡೀ ದೇಹವನ್ನದು ವ್ಯಾಪಿಸದಂತೆ ಗುಣಪಡಿಸುವ ಚಿಕಿತ್ಸೆಗೆ ನಮ್ಮ ವ್ಯವಸ್ಥೆಯನ್ನು ಕಾಯುವ ರಾಜಕಾರಣಿಗಳು ಮುಂದಾಗಬೇಕು.

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ದಿನಾಂಕ ೧೩ ಮತ್ತು ೧೪೦೫೦೫ ರಂದು ಪ್ರಕಟವಾದ ಲೇಖನ.

* * *