ಅವನ ಹೆಸರು ಜನಾರ್ಧನ ಎಂದುಕೊಳ್ಳೋಣ. ನಮ್ಮಂತೆಯೇ ಮಧ್ಯಮ ವರ್ಗದ, ರಜದ ದಿನ ಸಂಸಾರ ಸಮೇತ ಸಿನಿಮಾ ನೋಡಲು ಹೋಗುವ ಒಬ್ಬ ಸಜ್ಜನ. ಅವನಲ್ಲಿ ನಾವು ನಮ್ಮನ್ನೇ ಗುರುತಿಸಿಕೊಳ್ಳಬಹುದೆಂದು ತಿಳಿದು ಮುಂದುವರೆಯುತ್ತೇನೆ.

ಜನಾರ್ದನ ಒಳ್ಳೆಯ ಸಂಸಾರಿಗ. ತನ್ನ ಕುಟುಂಬವನ್ನು ಪ್ರೀತಿಸುತ್ತಾನೆ. ಅತಿ ಮಡಿವಂತರಾದ ತನ್ನ ಜಾತಿಯವರನ್ನು ಗೊಡ್ಡೆಂದು ನಾವೆಲ್ಲರೂ ಟೀಕಿಸುವಂತೆ ಅವನೂ ಟೀಕಿಸುತ್ತಾನೆ. ಆದರೆ ತನ್ನ ಜಾತಿಯ ಹಿರಿಮೆಯ ಬಗ್ಗೆ ಅವನಿಗೆ ಆದರವಿದೆ. ಆದರೆ ಇದು ವ್ಯಕ್ತವಾಗುವುದು ತನ್ನ ಜಾತಿಯ ಪರಮಾಪ್ತರ ಜೊತೆಗಿದ್ದಾಗ ಮಾತ್ರ. ರಾಜಕೀಯ ವಿಚಾರಗಳಲ್ಲಿ ಎಲ್ಲರೂ ಓದುವ ವೃತ್ತಪತ್ರಿಕೆಯ ಧೋರಣೆಗಳೇ ಅವನವು ಕೂಡ. ಹೀಗೆ ತನ್ನ ರಾಜಕೀಯ ನಿಲುವುಗಳಲ್ಲಿ ಅವನು ಅಗತ್ಯವಾದಷ್ಟು (ತೊಂದರೆಗೆ ಒಳಗಾಗದಷ್ಟು) ಆಧುನಿಕ.

ಒಟ್ಟಿನಲ್ಲಿ ಹೇಳುವುದಾದರೆ, ನಾವೆಲ್ಲರೂ ಇಷ್ಟಪಡುವ ಒಬ್ಬ ಸದ್ಗೃಹಸ್ಥ ಅವನು. ಉದಾರ ಧೋರಣೆಗಳಿಂದ ಎಲ್ಲರಿಗೂ ಇಷ್ಟವಾಗುವ ಇವನು, ತನ್ನ ಮಗಳೇ ಬೇರೊಂದು ಜಾತಿಯವನನ್ನು ಮದುವೆಯಾಗುವುದಾದರೆ ಒಪ್ಪಲಾರ. ಆದರೆ ದುಃಖಪಡುತ್ತ ಕೊನೆಯಲ್ಲಿ ಒಪ್ಪಿಕೊಂಡಾನು. ನಾವು ಬಹಳ ಮಂದಿ ಇರುವುದು ಹೀಗೇ.

ಅವನಿಗೆ ಸೋದರರಿದ್ದಾರೆ. ಇವನಷ್ಟು ವಿದ್ಯಾವಂತರಲ್ಲ ಅವರು. ಆದರೆ ಹೆಚ್ಚು ಸಾಹಸಿಗರು. ಗಲ್ಫ್‌ಗೆ ಹೋಗಿ ಹಗಲು ರಾತ್ರಿ ದುಡಿದು ಚೆನ್ನಾಗಿ ಗಳಿಸಿದ್ದಾರೆಂಬುದನ್ನು ಜನಾರ್ದನನ ಮನೆಯಲ್ಲಿ ನೀವು ನೋಡಬಹುದು. ಅವನ ಪಡಸಾಲೆಯಲ್ಲಿ ಬೇರೆ ಯಾವುದಕ್ಕೂ ಜಾಗವಿಲ್ಲದಂತೆ ಒಂದು ಟಿ.ವಿ., ಒಂದು ರೆಫ್ರಿಜೆರೆಟರ್, ಒಂದು ಟೇಪ್ ರೆಕಾರ್ಡರ್, ಒಂದು ಮ್ಯೂಸಿಕ್ ಸಿಸ್ಟಮ್, ಒಂದು ವಿಡಿಯೋ ಕ್ಯಾಮೆರ ತುಂಬಿಕೊಂಡಿವೆ. ಆದರೆ ಪುಸ್ತಕದ ಕಪಾಟಿಲ್ಲ.

ಇಂಥವೇ ಇನ್ನಷ್ಟು ಸಾಮಾನುಗಳು ತುಂಬಲಿವೆ, ಮದುವೆಯಾಗದ ಅವನ ಪ್ರೀತಿಯ ಸಹೋದರ- ಎಲ್ಲರಿಗಿಂತ ಚಿಕ್ಕವ – ಮುಂದಿನ ಬಾರಿ ಗಲ್ಫ್‌ನಿಂದ ರಜೆಗೆ ಬಂದಾಗ.

ವೃದ್ಧ ತಾಯ್ತಂದೆಯರನ್ನು ಜನಾರ್ದನನೇ ನೋಡಿಕೊಳ್ಳುತ್ತಿದ್ದಾನೆಂದು ಗಲ್ಫ್‌ನಲ್ಲಿ ಸಂಪಾದಿಸುತ್ತಿರುವ ಅವನ ತಮ್ಮಂದಿರು ಕೃತಜ್ಞರಾಗಿದ್ದಾರೆ. ಜನಾರ್ದನನ ಮಡದಿಯಂತೂ ಅವರ ಕಣ್ಣಲ್ಲಿ ಬಂಗಾಳಿ ಲೇಖಕ ಶರಶ್ಚಂದ್ರ ಚಟರ್ಜಿಯ ಕಾದಂಬರಿಗಳಲ್ಲಿ ಬರುವ ಸ್ತ್ರಿ ರತ್ನವೇ. ಹಳೆಯ ಟ್ರಂಕೊಂದರಲ್ಲಿ ಇವರು ಹುಡುಗರಿದ್ದಾಗ ಓದುತ್ತಿದ್ದ, ಹರಿದುಹೋದ ಹಾಳೆಗಳ ಶರಶ್ಚಂದ್ರರ ಕಾದಂಬರಿಗಳಿವೆ. ಈಗ ಓದುವ ಪುರುಸೊತ್ತಿಲ್ಲ; ಇಂಡಿಯಾ ಟುಡೆ, ಸುಧಾಗಳೆ ಇಡೀ ವಾರ ಅವರ ಬಿಡುವಿನಲ್ಲಿ ಹಬ್ಬಿಕೊಳ್ಳುತ್ತವೆ.

ಹೀಗೆ ನಮ್ಮ ಜನಾರ್ದನ ಅತಿ ಸಂಪ್ರದಾಯಸ್ಥನಲ್ಲದಿದ್ದರೂ ಮರ್ಯಾದೆಗೆ ಹೆದರುವಾತ. ಅತಿ ಆಧುನಿಕನಲ್ಲದಿದ್ದರೂ ಕಾಲಕ್ಕೆ ಹೊಂದಿಕೊಂಡವನು. ಅತಿ ಶ್ರೀಮಂತನಲ್ಲದಿದ್ದರೂ ಕತ್ತಿನಲ್ಲೊಂದು ಚಿನ್ನದ ಚೈನ್ ಧರಿಸುವ, ಸಫಾರಿಸೂಟ್‌ನಲ್ಲಿ ಹೊರಗೆ ಕಾಣಿಸಿಕೊಳ್ಳುವ ಗಟ್ಟಿ ಕುಳ. ಹೀಗೆ ಅವನು ನಮ್ಮ ಕಾಲದ ಭಾರತೀಯ ಸಮಾಜದ ಒಬ್ಬ ಸರಾಸರಿ ಮನುಷ್ಯ.

ಈಚೆಗೆ ಅವನ ವೃದ್ಧಳಾದ ತಾಯಿ ತೀರಿಕೊಂಡಳು. ಅವಳು ತೀರಿಕೊಂಡಾಗ ಜನಾರ್ದನ ಮನೆಯಲ್ಲಿರಲಿಲ್ಲ. ಸುದ್ದಿ ತಿಳಿದೊಡನೆಯೇ ಅವಸರವಾಗಿ ಹಿಂದಕ್ಕೆ ಬಂದರೂ ತಡವಾಗಿತ್ತು. ಮುಖದರ್ಶನಕ್ಕಾಗಿ ಮಾತ್ರ ತಾಯಿ ಸಿಕ್ಕಂತಾಯಿತು. ಇದಾದ ಕೆಲವು ದಿನಗಳ ನಂತರ ನಾನು ಅವನನ್ನು ನೋಡಿದ್ದೆ. ನನ್ನ ಕೈಯಲ್ಲಿ ಒಂದು ನುಣುಪಾದ ಹೊಳೆಯುವ ಅಲ್ಬಮನ್ನು ಇಟ್ಟು ಹೇಳಿದ :

‘ನನ್ನ ಹೆಂಡತಿ ಎಷ್ಟು ಪೂರ್ವಾಲೋಚನೆ ಮಾಡಿ ಎಲ್ಲ ತಯಾರಿ ನಡೆಸಿದ್ದಳು ಎನ್ನುವುದನ್ನು ಇಲ್ಲಿ ನೋಡಿ. ಅವಳ ಇಂಜಿನಿಯರ್ ಸಹೋದರನ ಸಹಾಯ ಪಡೆದು ಶವ ಸಂಸ್ಕಾರದ ಮೊದಲಿನ ಎಲ್ಲ ಕಾರ್ಯಗಳನ್ನೂ ಅವಳೇ ನಿರ್ವಹಿಸಿದ್ದಳು. ಈ ಸೆಕೆಯಲ್ಲಿ ಹೆಚ್ಚು ಕಾಲ ಶವವನ್ನು ಇಟ್ಟುಕೊಳ್ಳುವಂತಿಲ್ಲವಲ್ಲ ಅಲ್ಲವೇ? ಆದ್ದರಿಂದ ನಾನು ಹಿಂದಿರುಗುವುದು ಎಷ್ಟು ಹೊತ್ತಾಗುತ್ತದೋ ಎಂದು ಕೆಲವು ಶಾಸ್ತ್ರಗಳನ್ನೆಲ್ಲ ಅವಳೇ ಮಾಡಿಸಿ ಎಲ್ಲವನ್ನೂ ವಿಡಿಯೋನಲ್ಲಿ ಹಿಡಿದು ಫೋಟೋಗಳನ್ನು ತೆಗೆದುಕೊಂಡು ಇಟ್ಟಿದ್ದಾಳೆ ನೋಡಿ. ನನ್ನ ತಮ್ಮಂದಿರು ಇರುವುದು ಗಲ್ಫ್‌ನಲ್ಲಿ; ದುಡಿಮೆ ಬಿಟ್ಟು ಬರುವಂತರಿಲ್ಲ, ರಜವೂ ಇಲ್ಲ. ಅವರಿಗಾಗಿ ಇವೆಲ್ಲವನ್ನೂ ಅವಳು ತಯಾರಿಸಿಟ್ಟಿದ್ದಾಳೆ. ಇವನ್ನು ಬಳಸುವ ಎಲ್ಲ ತಾಂತ್ರಿಕ ಸಲಕರಣೆಗಳೂ ಅವರ ಬಳಿ ಇವೆ.’

ಆ ಬಣ್ಣದ ಫೋಟೋಗಳಲ್ಲಿ, ಬಿಳಿಯ ಬಣ್ಣದ ಬಟ್ಟೆಯಲ್ಲಿ ಸುತ್ತಿದ್ದ ಆ ಮುದುಕಿಯ ಶವದ ಸುತ್ತ ಹೂಗಳನ್ನು ಹಿಡಿದುಕೊಂಡು ತಲೆಬಾಗಿ ನಿಂತಿದ್ದ ಗಣ್ಯ ವ್ಯಕ್ತಿಗಳನ್ನು ನೋಡುತ್ತಿದ್ದಂತೆ ನನ್ನಲ್ಲಿ ವಿಚಿತ್ರ ಗೊಂದಲ ಶುರುವಾಯಿತು; ನಾನೇನು ಯಾವುದೋ ಮದುವೆಯ ಸಮಾರಂಭದಲ್ಲಿ ಅಂದವಾಗಿ ತೆಗೆದ ಫೋಟೋಗಳನ್ನು ಆನಂದದಿಂದ ನೋಡುತ್ತಿರುವವನಂತೆ ಕಾಣಿಸುತ್ತಿದ್ದೇನೆಯೇ? ಶವದ ಮೇಲೆ ಹಾರ ಹಾಕುತ್ತಿರುವ ಸ್ಥಳೀಯ ಮಂತ್ರಯನ್ನು ಫೋಟೋದಲ್ಲಿ ನೋಡುವಾಗ ನನ್ನ ಮುಖ ಯಾವ ‘ಸಮಂಜಸ’ ಭಾವನೆಗಳನ್ನು ವ್ಯಕ್ತಪಡಿಸುತ್ತಿರಬೇಕು? ನನ್ನ ಆತಂಕ ಅನಗತ್ಯವೆನ್ನಿಸುವಂತೆ ಹೇಳಿದ :

‘ನೀವಿನ್ನೂ ವೀಡಿಯೋ ನೋಡಬೇಕು ಸಾರ್, ಶ್ರಾದ್ಧ ನಡೆಯುತ್ತಿರುವ ಜಾಗದಲ್ಲೇ ನೀವು ಇದ್ದೀರೇನೋ ಅಂತ ಭಾಸವಾಗುತ್ತದೆ. ನಮ್ಮ ಸ್ಥಳೀಯ ಎಮ್.ಎಲ್.ಎ.ಗೆ, ಉಕ್ಕುತ್ತಿದ್ದ ದುಃಖವನ್ನು ತಡೆದುಕೊಳ್ಳಲಾಗಲೇ ಇಲ್ಲ. ನನ್ನ ಅಮ್ಮ, ಮನೆಗೆ ಯಾರೇ ಬಂದರೂ, ತಾನೇ ಕೈಯಾರೆ ಮಾಡಿದ ಕಾಫಿಯನ್ನು ಕೊಡದೇ ಹಾಗೇ ಕಳುಹಿಸುತ್ತಲೇ ಇರಲಿಲ್ಲ. ಅದನ್ನು ನೆನಸಿ ಅವರು ಅತ್ತದ್ದೂ ರೆಕಾರ್ಡ್‌ ಆಗಿಬಿಟ್ಟಿದೆ.’

ನನ್ನ ನಿರೂಪಣೆಯಲ್ಲಿನ ವ್ಯಂಗ್ಯ ಹಾಗೂ ವಿಷಾಧಗಳ ಧ್ವನಿಯನ್ನು ಓದುಗ ಮನ್ನಿಸಬೇಕು. ಅಪೇಕ್ಷಿತ ಪರಿಣಾಮಕ್ಕೋ, ಅಥವಾ ಸಹಾನುಭೂತಿಗೋ, ನಮ್ಮ ಭಾವನೆಗಳನ್ನು ಆಡಿ ತೋರುವಾಗ, ಈ ಭಾವನೆಗಳನ್ನು ಉದಾತ್ತೀಕರಿಸುವ ಚೇಷ್ಟೆಗಳನ್ನು ನಾವು ನೀವೆಲ್ಲರೂ ಒಂದಲ್ಲ ಒಂದು ಸಲ ಮಾಡಿಯೇ ಇರುತ್ತೇವಲ್ಲವೇ? ಆದರೆ ಒಂದು ವೀಡಿಯೋ ಕ್ಯಾಮೆರ ಅಥವ ಫೋಟೋ ಇದೇ ಕೆಲಸವನ್ನು ಆತ್ಮಸಾಕ್ಷಿಯ ಗೊಂದಲವಿಲ್ಲದೇ ಮಾಡಬಲ್ಲದು. ಕಾಣುವುದಕ್ಕೆ ಅದು ಹಿಂದಣ ಸಂಗತಿಗಳ ಒಂದು ಅಧಿಕೃತ ದಾಖಲೆ ಮಾತ್ರ. ‘ನಾನು ನಿನ್ನ ಮೆಚ್ಚುಗೆಗೆ ಪಾತ್ರವಾಗಬೇಕಾದ ಪದಾರ್ಥ’ವೆಂದು ಫೋಟೋದೊಳಗಿನ ಚಿತ್ರಗಳು ಸೂಚಿಸುತ್ತಿರುವಂತೆ ಕಂಡರೂ, ನೋಡುತ್ತಿರುವ ನನಗೆ ಈ ಚಿತ್ರವನ್ನು ನೋಡುವ, ನೋಡದಿರುವ ಸ್ವಾತಂತ್ರ್ಯವಂತೂ ಇದ್ದೇ ಇದೆ.

ತಂತ್ರಜ್ಞಾನದಿಂದ ಫಲಿತವಾದ ಈ ಪ್ರದರ್ಶನಕ್ಕೆ ನಾನು ಹೇಗೆ ಸರಿಯಾಗಿ ಪ್ರತಿಕ್ರಿಯಿಸಬೇಕೆಂದು ತೋಚದೆ ಸ್ವಲ್ಪ ವಿಚಲಿತನಾದೆ. ಈ ಕ್ಯಾಮೆರಾ, ಮತ್ತು ವೀಡಿಯೋದ ಕಣ್ಣುಗಳು ಕಾಣಲು ಸಾಧ್ಯವಿಲ್ಲದ ಸಾವಿನಂತಹ ಅನುಭವದ ವಿಚಿತ್ರ ನಿಗೂಢಗಳನ್ನು ಕುರಿತು ನಾನು ಆಲೋಚಿಸುತ್ತಿದ್ದೆ. ಈ ಉಪದ್ವ್ಯಾಪದಲ್ಲಿ ಒಡನಾಡಿಯೊಬ್ಬರನ್ನು ಕಳೆದುಕೊಂಡದ್ದರಿಂದ ಉಂಟಾಗುವ ಅವನ ಖಾಲಿತನವೂ ನನ್ನ ಸಂವೇದನೆಗೆ ಸಿಗದಂತಾಯಿತು. ಆದರೆ ನನ್ನ ಗೆಳೆಯ ಮೃತಳಾದ ತನ್ನ ತಾಯಿಯನ್ನು ಮನಸ್ಸಿನಲ್ಲಿ ಅದೆಷ್ಟು ತುಂಬಿಕೊಂಡವನಂತೆಯೂ ‘ಕಾಣುವುದಕ್ಕೆ’ ಕಂಡನೆಂದರೆ, ನನ್ನ ಮೇಲಿನ ಅನುಮಾನ ನನಗೆ ಅಪ್ರಕೃತವೆನಿಸಿಬಿಟ್ಟಿತು.

ಒಟ್ಟಿನಲ್ಲಿ ಹೇಳುವುದಾದರೆ, ನನ್ನ ಸ್ನೇಹಿತ ಶ್ರಾದ್ಧವಿಧಿಗಳ ಜೊತೆಗೆ ಫೋಟೋ ವಿಡಿಯೋ ಚಿತ್ರಣದ ವಿಧಿಗಳನ್ನೂ ಸೇರಿಸಿದ್ದ. ಆದರೆ ಆ ಹಿಂದಿನ ‘ವಿಧಿ’ ಮತ್ತು ಈ ‘ವಿಧಿ’ಗಳ ಪಾತ್ರವೇನು? ಒಳ್ಳೆಯ ಚಿತ್ರ ಅವನನ್ನೂ, ಅವನ ದೂರದ ಸಹೋದರರನ್ನೂ ಸಮಾಧಾನಪಡಿಸಬಹುದಾದರೆ, ಪಾರಂಪರಿಕ ಸಂಪ್ರದಾಯದ ಪಾತ್ರವೇನು? ಅವುಗಳ ಉದ್ದೇಶವೂ ದುಃಖಿತರ ಖಾಲಿತನವನ್ನು ಮರೆಸಿ (ಸಮಾಧಾನಪಡಿಸಿ೦, ಅನಿರ್ವಚನೀಯವಾದ ಸಾವಿನ ನಿಗೂಢಗಳಿಂದ ಅವರನ್ನು ದೂರಕೊಯ್ಯುವುದೇ ಅಲ್ಲವೆ? ಅವು ಕೂಡ ಏನು ಮಾಡಬೇಕೆಂದು ತಿಳಿಯದವನ ಕೈಯ್ಯಲ್ಲಿ  ವಿಧಿವತ್ತಾಗಿ ಏನನ್ನಾದರೂ ಮಾಡಿಸುವ ಸಮಾಧಾನಗಳಷ್ಟೆ?

ಹೌದು ಮತ್ತು ಅಲ್ಲ. ಶ್ರಾದ್ಧಗಳನ್ನು ಎಷ್ಟೇ ಯಾಂತ್ರಿಕವಾಗಿ ಮಾಡಲಿ, ಅವುಗಳ ಗುರಿ ನಮ್ಮ ಸ್ವಂತದ ಸಮಾಧಾನ ಮಾತ್ರವಲ್ಲ; ಸತ್ತವರಿಗೆ ಸದ್ಗತಿ ಪ್ರಾಪ್ತವಾಗಲಿ ಎಂದು ಅವರ ರಕ್ತಸಂಬಂಧಿಗಳಾಗಿ ನಾವು ಸಲ್ಲಿಸುವ ಋಣ ಎಂದು ತಿಳಿದಾದರೂ ನಾವು ಇರಬಹುದು. ನಮ್ಮವರಾಗಿದ್ದು ಸತ್ತವರು ಪ್ರೇತವಾಗಿ ಅಲೆದಾರೆಂಬ ಆತಂಕವಿದೆ ಇದರಲ್ಲಿ. ಸೂರಿನಿಂದ ಇಳಿಬಿಟ್ಟ ದಾರದ ಕೆಳಗೆ ಇಡುವ ಹಾಲನ್ನು ಅವರು ಕುಡಿಯಲು ಬರುತ್ತಾರೆಂಬ ಮೋಹವೂ ಇದೆ ಅದರಲ್ಲ. ಪಾರಂಪರಿಕ ಶ್ರದ್ಧೆಯ ರಿಚುವಲ್‌ಗಳು- ಯಾಕೆ, ಹೌದೆ, ನಿಜವೆ- ಇತ್ಯಾದಿಯಾಗಿ ಯಾವ ಪ್ರಶ್ನೆಗಳನ್ನೂ ಕೇಳಬೇಕಾದ ಅಗತ್ಯವೇ ಇಲ್ಲದಂತೆ ನಾವು ‘ಮಾಡಿಬಿಡುವ’ ಕ್ರಿಯೆಗಳು. ಇಲ್ಲಿ ನಂಬುವುದಾಗಲೀ, ನಂಬದಿರುವುದಾಗಲೀ ಉದ್ಭವವೇ ಆಗುವುದಿಲ್ಲ.

ಆದರೆ ಆಧುನಿಕಗೊಂಡ ಹೊಸಕಾಲದ ಮನಸ್ಸು ಆತ್ಮ ಪರಿವೀಕ್ಷಣೆಯಲ್ಲಿ ಶ್ರದ್ಧೆಯಿರುವಂಥದು. ಅಂದರೆ ಎಲ್ಲ ಆಚರಣೆಗಳನ್ನೂ ನಿಜವ ವೈಚಾರಿಕತೆಯ ನಿಕಷದಲ್ಲಿಟ್ಟು, ನೋಡಿ, ‘ನಂಬುವುದು ಸರಿಯೆ?’ ಎನ್ನುವ ಪ್ರಶ್ನೆಯನ್ನು ಸದಾ ಎತ್ತಿ ಅಂತರಂಗದ ಸಾಕ್ಷಿಯಲ್ಲಿ ನಡೆದುಕೊಳ್ಳಲು ಯತ್ನಿಸುವಂಥದು. ಯಾವುದು ಪ್ರಾಮಾಣಿಕ, ಯಾವುದು ಅಪ್ರಾಮಾಣಿಕ ಎಂಬುದು ಇಂತಹ ಮನಸ್ಸಿಗೆ ಬಹಳ ಅಗತ್ಯ. ಒಂದೋ ಹಿಪ್ರೊಕ್ರಸಿಯಲ್ಲಿ, ಅಥವಾ ನೈತಿಕ ಅಹಂಕಾರದಲ್ಲಿ, ಅಥವಾ ಇತರರಿಗೆ ಬೋರ್ ಹೊಡಿಸುವ ಆತ್ಮ ವಿಶ್ಲೇಷಣೆಯಲ್ಲಿ ಈ ಬಗೆಯ ಮನಸ್ಸುಗಳು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುತ್ತಲೇ ಇರುತ್ತವೆ.

ನಾನು ಮಾಡುತ್ತಿರುವ ಜನಾರ್ಧನ ಕಥನದಲ್ಲಿ ಆತ್ಮಪರಿವೀಕ್ಷಣವಿರಲಿ selfconsciousness ಕೂಡ ಇಲ್ಲ. ಸತ್ತವರಿಗೆ ಸದ್ಗತಿ ಪ್ರಾಪ್ತಿಯಾಗಬೇಕೆಂಬ ಶ್ರದ್ಧೆ ಅಷ್ಟಿಷ್ಟಿದ್ದೀತು; ಆದರೆ ಅದರ ಸುತ್ತಲಿನ ಮಡಿ ಮತ್ತು ವಿಶೇಷತೆ ಕಾಣೆಯಾಗಿದೆ. ಮಂತ್ರಗಳು ತಮ್ಮ ದೈವಿಕ ಪ್ರಭೆಯಲ್ಲಿ ತಮ್ಮ ಕೆಲಸವನ್ನು ಮಾಡುತ್ತಿವೆಯೆಂದು ಸಂಬಂಧಿಸಿದವರು ತಿಳಿಯುತ್ತಿರಬಹುದಾದ ಸಮಯದಲ್ಲೇ, ವಿಡಿಯೋ ಮತ್ತು ಫೋಟೋಗ್ರಫಿ ಇಡೀ ಸಾವಿರ ಸುತ್ತಲಿನ ವಿಧಿಗಳನ್ನು ‘ಸುಂದರ’ವಾದ ಪ್ರದರ್ಶನವಾಗಿ ಪರಿವರ್ತಿಸುವ ಕ್ರಿಯೆಯಾಗಿ ಜೊತೆಗಿರುತ್ತವೆ.

ವಿಡಿಯೋ ಅದರ ಉದ್ದೇಶದಲ್ಲೇ ಸತ್ತವರಿಗಾಗಿ ಅಲ್ಲ; ಅದನ್ನು ತೋರಿಸುವ ಮತ್ತು ನೋಡುವ ನಮಗಾಗಿ ಮಾತ್ರ. ತಾನು ಮುಟ್ಟುತ್ತೇನೆ ಎಂದು ತಿಳಿಯುವ ಮಂತ್ರದ ಕಣ್ಣಿಗೆ ಕಾಣದಿದ್ದರೂ ತಾನು ಮುಟ್ಟಬಲ್ಲೆನೆಂಬ ವಿಶ್ವಾಸದ ಪ್ರಪಂಚವೊಂದು ಇದೆ. ಅನುಮಾನಕ್ಕೆ ತುತ್ತಾಗಬಲ್ಲ ನಂಬಿಕೆ ಇದಲ್ಲ. ಆಂಗಿಕ ಅಭಿನಯದಂತೆ ವಾಕ್‌ನ ಅಭಿನಯವೇ ಮಂತ್ರ.

ಸಂಪ್ರದಾಯಕ್ಕಿಂತಲೂ, ಆಧುನಿಕ ತಂತ್ರಜ್ಞಾನಗಳೇ ಸಾವಿನ ನಿಗೂಢಗಳನ್ನು ಹೆಚ್ಚು ಅವಜ್ಞೆಗೈದು ಒಂದು ಪ್ರದರ್ಶನವನ್ನಾಗಿ ಪರಿವತಿಸಿವೆ. ಪ್ರಜಾಪ್ರಭುತ್ವದ ರಾಜಕಾರಣವೂ ಒಬ್ಬ ಜನನಾಯಕನ ಸಾವನ್ನು ಪ್ರದರ್ಶನದ ಮಟ್ಟಕ್ಕೆ ಇಳಿಸಿದೆ. ಶ್ರೀಮತಿ ಇಂದಿರಾ ಗಾಂಧಿಯವರ ಸಂಸ್ಕಾರದ ಸಂದರ್ಭದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ರಾಜೀವ ಗಾಂಧಿಯವರ ಮೈಮೇಲೆ ಉದ್ದಿಶ್ಯವಾಗಿಯೋ, ನಿರುದ್ದಿಶ್ಯವಾಗಿಯೋ, ಜನಿವಾರವೂ ಗೋಚರಿಸುತ್ತಿತ್ತು. ನೈಜ ದುಃಖದ ನಡುವೆಯೂ ಕ್ಯಾಮರಾದ ಕಣ್ಣು ಅವರು ಯಾರೆಂದು ಜನಸಮುದಾಯಕ್ಕೆ ತೋರಿಸುತ್ತಿತ್ತು.

ಆಧುನಿಕ ತಂತ್ರಜ್ಞಾನವು ಹೊಸ ಅಗತ್ಯಗಳನ್ನು ಸೃಷ್ಟಿಸುವಂತೆಯೂ ಕಾಣಿಸುತ್ತಿದೆ. ಜನಾರ್ದನನ ಕುಟುಂಬದವರು ಜೀವನೋಪಾಯಕ್ಕಾಗಿ ಪರಸ್ಪರರನ್ನು ಅಗಲಿ ದೂರದ ದೇಶಗಳಲ್ಲಿ ವಾಸಿಸಲು ಅಪೇಕ್ಷಿಸುವಂತೆ ಹಾಗೂ ಸಾಧ್ಯವಾಗುವಂತೆ ಮಾಡಿದ್ದು ತಂತ್ರಜ್ಞಾನವೇ ಅಲ್ಲವೆ? ಇಲ್ಲದಿದ್ದರೆ ಕೃಷಿಯಾಧಾರಿತವಾದ ಸರಳವಾದ ಆರ್ಥಿಕತೆಯಲ್ಲಿ ಅವರೆಲ್ಲರೂ ಒಗ್ಗಟ್ಟಾಗಿ ಹೇಗೋ ಬದುಕಿಕೊಂಡಿರುತ್ತಿದ್ದರು. ಸಾವಿನಂತಹ ಒಂದು ಸನ್ನಿವೇಶವನ್ನು ಫೋಟೋಗ್ರಾಫ್ ಮಾಡುವ ಸಾಧ್ಯತೆಯಾಗಲಿ ಅಗತ್ಯವಾಗಲಿ ಅವರಿಗೆ ಬರುತ್ತಿರಲಿಲ್ಲ.

ನಾನೇ ಉದಾಹರಣೆಯಾಗಿ ಹೇಳುವೆ. ನನ್ನದೇ ಬದುಕಿನ ಶೈಶವ ಹಾಗು ಬಾಲ್ಯಾವಸ್ಥೆಯ ಸನ್ನಿವೇಶಗಳು ಮತ್ತು ನನ್ನ ಕುಟುಂಬದ ಹಿರಿಯ ವಿಷಯಗಳು ಕೇವಲ ನನ್ನ ನೆನಪುಗಳಲ್ಲಿ ಮಾತ್ರ ಉಳಿದಿವೆ. ಅವು ಐತಿಹಾಸಿಕ ದಾಖಲೆಗಳ ರೂಫದಲ್ಲಿರದೆ ಹೇಳುತ್ತ ಕೇಳುತ್ತ ಪುರಾಣಗಳಾಗಿ, ಹೇಳಿ ಕೇಳಿ ಉಳಿಯುವುದರಿಂದಲೇ ಕಥನದಲ್ಲಿ ಬದಲಾಗುತ್ತ, ಪುನಃ ಪುನಃ ಹೇಳುವುದರಿಂದ ಇನ್ನೂ ಉಜ್ವಲಗೊಳ್ಳುತ್ತ ನನ್ನ ಮನಸ್ಸಿನಲ್ಲಿ ಪ್ರಕಟವಾಗುತ್ತವೆ.

ನನ್ನ ಬಾಲ್ಯ ವಿಡಿಯೋ ಇಲ್ಲದ ಕಾಲ; ಕ್ಯಾಮರಾ ಇದ್ದರೂ ಹಳ್ಳಿಯಲ್ಲಿ ಅದು ಇರದ ಕಾಲ. ಸುಣ್ಣ ಬಳಿದ ಗೋಡೆಯ ಮೇಲೆ ಮದುವೆಯಾಗಿ ಹೋದ ಹುಡುಗಿಯರ ಮುದ್ರೆಯೊತ್ತಿದ ಕೆಂಬಣ್ಣದ ಹಸ್ತ ಮಾತ್ರ ಆಗಿನ ಕಾಲದ ಉಳಿಸಿಕೊಳ್ಳುವ ಗುರುತು. ಬಲ್ಲವರಿಗೆ ಪ್ರೀತಿಸಿದ ಹುಡುಗಿಯನ್ನು ಕಾಣಿಸಲು ಒಂದು ಹಸ್ತಮುದ್ರಿಕೆ ಸಾಕು.

*

ಇನ್ನು ಮುಂದೆ ಶ್ರೀಮಂತ ಕುಟುಂಬಗಳಲ್ಲಿ ವಿಡಿಯೋದಲ್ಲಿ ಸೆರೆಹಿಡಿಯದೆ ಮದುವೆಗಳು ನಡೆಯುವಂತಿಲ್ಲ. ಛಾಯಾಗ್ರಾಹಕನು ಪುರೋಹಿತನಷ್ಟೇ ಮುಖ್ಯನಾಗುತ್ತಾನೆ. ಪುರೋಹಿತನ ಕೆಲಸ ಪವಿತ್ರ ಆಚರಣೆ ಮಾತ್ರವಲ್ಲದೆ ಒಂದು ಪ್ರದರ್ಶನವೂ ಆಗುತ್ತದೆ. ಗಾಯತ್ರೀ ಮಂತ್ರವು ಇನ್ನು ಮುಂದೆ ಮಗನಿಗೆ ದೀಕ್ಷೆ ನೀಡುವಾಗ ಕಿವಿಯಲ್ಲಿ ಉಸುರುವ ಪವಿತ್ರ ಮಂತ್ರವಾಗದೇ ಎತ್ನಿಕ್ ಕೆಫೆಗಳಲ್ಲಿ ಹಿನ್ನೆಲೆ ಸಂಗೀತದ ಸ್ಥಾನ ಪಡೆಯುತ್ತದೆ. ಸಿನೆಮಾ ನೋಡುವ ವ್ಯಕ್ತಿಯಲ್ಲಿ ಸುಪ್ತವಾಗಿರುವ, ನಾನೂ ಮುಂದೊಮ್ಮೆ ಹೀರೋ ಆಗಬೇಕೆನ್ನುವ ಬಯಕೆ ಒಂದು ದಿನದಮಟ್ಟಿಗೆ- ಅವನ ಮದುವೆಯ ಆರತಕ್ಷತೆಯ ದಿನದಮಟ್ಟಿಗೆ ಈಡೇರುತ್ತದೆ. ಶ್ರೀಸಾಮಾನ್ಯನು ತನ್ನ ಸಾಮಾನ್ಯತ್ವವನ್ನು ಮೀರಿ ದಿವ್ಯ ಪದವಿಯನ್ನೇರಲು ತಂತ್ರಜ್ಞಾನದಿಂದ ಸಾಧ್ಯವಾಗಿಬಿಟ್ಟಿದೆ.

ಸಾಮಾನ್ಯರು ದಿವ್ಯತ್ವ ಪಡೆಯುವ ಪ್ರಕ್ರಿಯೆ ಪ್ರಾರಂಭವಾದದ್ದು ವರ್ಣಮಾಲೆಯ ಅನ್ವೇಷಣೆಯಿಂದ, ನಂತರ ಮುದ್ರಣದಿಂದ, ಅನಂತರ ಜನಪ್ರಿಯ ಕಾದಂಬರಿಗಳ ಮೂಲಕ, ಈಗ ಸಿನೆಮಾದಿಂದ.

ತಂತ್ರಜ್ಞಾನದ ಯುಗದಲ್ಲಿ ಕಲೆ ಹಾಗೂ ಸಂಸ್ಕೃತಿಗಳನ್ನು ನಾವು ಪರಿಶೀಲಿಸುವ ಕ್ರಮದಲ್ಲುಂಟಾಗಿರುವ ಬದಲಾವಣೆಗಳನ್ನು ಗುರುತಿಸಿರುವ ವಾಲ್ಟರ್ ಬೆಂಜಮಿನ್ ಈ ನಿಟ್ಟಿನಲ್ಲಿ ಕೆಲವು ವಿಶಿಷ್ಟ ಒಳನೋಟಗಳನ್ನು ನೀಡುತ್ತಾನೆ. ಫ್ಯಾಸಿಸಂಗೆ ಬಲಿಯಾಗಿ ೧೯೪೦ ರಲ್ಲಿ ತೀರಿಕೊಂಡ ಬೆಂಜಮಿನ್ ತನ್ನ ಕೆಲವು ವಿವೇಚನೆಗಳಿಂದ ಭವಿಷ್ಯದ ದಾರ್ಶನಿಕ ಎನಿಸಿಕೊಂಡಿದ್ದಾನೆ. ತನ್ನ ಕವಿಹೃದಯ, ಅನುಭಾವಿಯ ತವಕ ಹಾಗೂ ಸೂಕ್ಷ್ಮ ಮಾರ್ಕ್ಸಿಸ್ಟ್ ವಿಶ್ಲೇಷಣಾ ಕ್ರಮಗಳಿಂದ ಇಂದಿನ ಕಾಲ ಹಾಗೂ ಪರಿಸರದಲ್ಲಿ ನಮ್ಮ ಅಸ್ತಿತ್ವಕ್ಕೆ ಕಾರಣವಾಗಿರುವ ಭೌತಿಕ ಹಾಗೂ ಐತಿಹಾಸಿಕ ಸಂಗತಿಗಳನ್ನು ಪರಿಶೀಲಿಸುತ್ತಾನೆ. (ನೋಡಿ : ‘Illuminations’)

ತಂತ್ರಜ್ಞಾನದಿಂದ ಬಹುತ್ಪನ್ನ ಸಾಧ್ಯವಾಗುತ್ತದೆ. ಅದೇ ವಸ್ತು ಅದೇ ಅದೇ ಎನ್ನಿಸುವಂತೆ ನೂರಾರು ಪ್ರತಿಕೃತಿಗಳಾಗುತ್ತವೆ. ಮ್ಯೂಸಿಯಮ್ಮಿಗೇ ಹೋಗಿ ನೋಡಬೇಕಾದ ಮೋನಾಲೀಸಾ ಹಲವು ಅತ್ಯುತ್ತಮ ಪ್ರಿಂಟ್‌ಗಳಾಗಿ ಮನೆ ಗೋಡೆಗಳ ಮೇಲೆ, ಬಾತ್‌ರೂಮಿನ ಏಕಾಂತಕ್ಕೂ ಒದಗುವಂತೆ, ನೇತಾಡುತ್ತವೆ. ಹೀಗೆ ಏಕಮೇವವೆನ್ನಿಸುವಂತೆ ಇದ್ದ ವಸ್ತು ಅತಿ ಪರಿಚಯದಿಂದ ಅವಜ್ಞೆಗೆ ಒಳಗಾಗುತ್ತದೆ. ಅಥವಾ ಸಾಮಾನ್ಯವಾಗುತ್ತದೆ. ಹೀಗೆ ಸತತ ಉತ್ಪನ್ನವನ್ನೂ, ಪ್ರತಿಕೃತಿಯನ್ನೂ ಸಾಧ್ಯಗೊಳಿಸಿದ ಯಂತ್ರದ ತಂತ್ರಜ್ಞಾನದಿಂದ ನಾಶವಾದದ್ದು – ವಾಲ್ಟರ್ ಬೆಂಜಮಿನ್‌ನ ವಿಶಿಷ್ಟವಾದ ಮಾತುಗಳನ್ನೇ ಹೇಳುವುದಾದರೆ- ಕಲಾಕೃತಿಗಳನ್ನು ಆವರಿಸಿಕೊಂಡಿರು ಪ್ರಭೆ (aura). ಕಳಾಹೀನವಾಗಿ ಸಾಮಾನ್ಯನಿಗೆ ಎಟಕುವಂತಾಗುವುದನ್ನು ಪ್ರಜಾಸತ್ತೆಯನ್ನು ನಂಬುವ ಬೆಂಜಮಿನ್ ಸ್ವಾಗತಿಸುತ್ತಾನೆ. (ಅವನೊಳಗಿದ್ದ ಅನುಭಾವಿ ‘ಪ್ರಭೆ’ಗಾಗಿ ಇನ್ನೆಲ್ಲೋ ಹುಡುಕುತ್ತಾನೆ, ಆ ಮಾತು ಬೇರೆ)

ಆಧುನಿಕ ಉತ್ಪಾದನಾ ತಂತ್ರವು ಉತ್ಪನ್ನವನ್ನು ಮಾನವ ಸ್ಪರ್ಶದ ಹಾಗೂ ಕಾಯಕ ಪರಂಪರೆಯ ನೆಲೆಯಿಂದಾಚೆಗೆ ನಿಲ್ಲಿಸುತ್ತದೆ. ಸತತವಾದ ಉತ್ಪಾದನೆಯು ಪದಾರ್ಥದ ವಿಶಿಷ್ಟತೆಗೆ ಬದಲು ಪದಾರ್ಥ ಬಾಹುಳ್ಯಕ್ಕೆ ಪ್ರಾಮುಖ್ಯವನ್ನು ನೀಡುತ್ತದೆ. ನೋಡುವ ಅಥವಾ ಕೇಳುವ ವ್ಯಕ್ತಿಯ ಅನನ್ಯತೆಯನ್ನು ತಲುಪುವ ಬದಲು, ಕೇವಲ ಉತ್ಪಾದಿತ ವಸ್ತುಗಳ ಪುನಶ್ಚಾಲನೆಯ ವಹಿವಾಟು ಶುರುವಾಗುತ್ತದೆ. ಈ ಎರಡು ಪ್ರಕ್ರಿಯೆಗಳು ಮಾನವೀಯ ಪರಂಪರೆಯ ವಿಕ್ಷಿಪ್ತತೆಗೂ, ಮಾನವನಿಗೂ ಅವನು ಬಳಸುವ ವಸ್ತುಗಳ ನಡುವಿನ ಪರಕೀಯತೆಗೂ ಕಾರಣವಾಗಿವೆ.

ಇದರ ಇನ್ನೊಂದು ಆಯಾಮ ಮಾನವಕುಲದ ಇನ್ನೊಂದು ಬಗೆಯ ಪುನಶ್ಚೇತನದ – ಅಂದರೆ ಸಾಮಾನ್ಯದ ದಿವ್ಯೀಕರಣದ – ಹುಡುಕಾಟವೂ ಆಗಿದೆ. ಈ ಎರಡೂ ಪ್ರಕ್ರಿಯೆಗಳು ಸಮಕಾಲೀನ ಸಾಮೂಹಿಕ ಪ್ರಜಾತಾಂತ್ರಿಕ ಚಳುವಳಿಯೊಂದಿಗೆ ಸಮನ್ವಯಗೊಂಡಿವೆ. ಈ ಬಗ್ಗೆ ಒಂದು ವಿವರಣೆ ಕೊಡುವೆ.

*

ನಮ್ಮ ಓದುವ ಹವ್ಯಾಸವನ್ನು ಕ್ರಮೇಣ ನಾಶಗೊಳಿಸುವ ಟೀವಿ ಮಾಧ್ಯಮ್ಕೆಕ ನಾವು ತೋರಿಸುವ ನಿರಸ ಪ್ರತಿಕ್ರಿಯೆಯನ್ನು ಕುರಿತು ಒಂದು ವಿಶ್ವವಿದ್ಯಾಯದಲ್ಲಿ ನಾನು ಮಾತನಾಡಿದ್ದೆ. ತನ್ನ ವಿಶಿಷ್ಟ ಚಿಂತನೆಗೆ ಹಾಗೂ ಜಾತಿಪದ್ಧತಿಯನ್ನು ಕುರಿತ ವಿರೋಧದ ನಿಲುವುಗಳಿಗೆ ಹೆಸರಾದ ಲೇಖಕರೊಬ್ಬರ ಮಾತುಗಳು ನನ್ನನ್ನು ಇನ್ನೊಂದು ದಿಕ್ಕಿನಲ್ಲಿ ಚಿಂತಿಸುವಂತೆ ಪ್ರೇರೇಪಿಸಿತು. ಅವರೆಂದರು : ‘ನಾನು ಟೀವಿ ಸಂಸ್ಕೃತಿಯನ್ನು ಸ್ವಾಗತಿಸುತ್ತೆನೆ. ಮುಂದಿನ ದಿನಗಳಲ್ಲಿ ಇದು ನಮ್ಮ ಜಾತಿಪದ್ಧತಿಗಳನ್ನು ಹಾಗೂ ಪರಂಪರೆಯ ವಿವಿಧ ಶ್ರೇಣೀಕ್ರಮಗಳನ್ನು ಇಲ್ಲವಾಗಿಸುತ್ತದೆ.’

ಸಮೂಹ ಮಾಧ್ಯಮಗಳು ವರ್ಗಗಳ ಪ್ರತ್ಯೇಕತೆಯನ್ನು ವಿಶಿಷ್ಟತೆಗಳನ್ನು ಇಲ್ಲವಾಗಿಸುತ್ತವೆ-ಕೊನೆಯ ಪಕ್ಷ ಅಭಿರುಚಿಗಳ ಮಟ್ಟಿಗೆ. ಹಿಂದೆ ಬೇರೆ ಬೇರೆ ಜಾತಿಗಳಿಗೆ ಬೇರೆ ಬೇರೆ ಸಂಗೀತಗಳಿದ್ದವು, ಬೇರೆ ಬೇರೆ ರುಚಿಗಳು ಇದ್ದವು, ಹಲವು ಜಾತಿಗಳಿಗೆ ಹಲವು ರಂಗಮಂದಿರಗಳಿದ್ದವು. ಕನ್ನಡದ ‘ಸಂಗ್ಯಾ ಬಾಳ್ಯಾ’ದಂತಹ ನಾಟಕಗಳು ಮೇಲ್ಜಾತಿಗಳಿಗೆ ನಿಷಿದ್ಧವಾಗಿದ್ದವು. ಮೇಲ್ಜಾತಿಯ ಯುವಕರು ಇಂಥ ನಾಟಕಗಳ ಪ್ರೇಮಪ್ರಸಂಗದ, ಅಕ್ರಮ ಕಾಮಸಂಬಂಧದ ಸನ್ನಿವೇಶಗಳನ್ನು ನೋಡಲು, ಕದ್ದು ಮುಚ್ಚಿ ಹೋಗುತ್ತಿದ್ದರು. ಆದರೆ ಇಂದು ಅದೆಲ್ಲ ಸಂಪೂರ್ಣ ಬದಲಾಗಿದೆ. ಹಾಗೆಯೇ, ಬಸ್ಸು-ರೈಲುಗಳಲ್ಲಿ ಓಡಾಡುವುದು, ಹೊಟೇಲ್‌ಗಳಲ್ಲಿ ತಿಂಡಿ ತಿನ್ನುವುದು ಮೈಲಿಗೆ ಎಂಬ ಭಾವನೆಯೂ, ಅಸ್ಪೃಶ್ಯತೆಯಂತಹ ಪದ್ಧತಿಗಳೂ ಇಂದು ಕಡಿಮೆಯಾಗಲೇಬೇಕಾದ ಪರಿಸ್ಥಿತಿ ಒದಗಿದೆ.

ನನಗಿನ್ನೂ ನೆನಪಿದೆ, ಅರೆ-ಮಡಿವಂತರಾದ, ಆದರೆ ಸಂಪ್ರದಾಯಸ್ಥರಾದ, ನನ್ನ ತಂದೆ ಕೋರ್ಟ್ ಕೆಲಸಗಳಿಗೆಂದು ಆಗಾಗ ಬೆಂಗಳೂರಿಗೆ ಹೋಗುತ್ತಿದ್ದರು. ಅಲ್ಲಿ ಅವರು ಇಳಿದುಕೊಳ್ಳುತ್ತಿದ್ದ ಹೊಟೇಲ್‌ನಲ್ಲಿ ಬ್ರಾಹ್ಮಣರಿಗೇ ಪ್ರತ್ಯೇಕವಾಗಿ ಬಾಳೆ ಎಲೆಯಲ್ಲಿ ಊಟದ ವ್ಯವಸ್ಥೆಯಿರುತ್ತಿತ್ತು. ಆದರೆ ನನ್ನ ತಂದೆ ಇನ್ನೂ ರುಚಿಯಾಗಿ ಅಡುಗೆ ಮಾಡುವ ಆಧುನಿಕ ಹೊಟೇಲ್‌ಗಳ ಎಲ್ಲ ಸೌಲಭ್ಯಗಳನ್ನು ಪಡೆಯಲು ಆಮೇಲೆ ತನ್ನ ಮಡಿವಂತಿಕೆಯನ್ನು ಬಿಟ್ಟರು.

‘ಪ್ರಭೆ’ಯ ವಿಚಾರಕ್ಕೆ ಪುನಃ ಹಿಂದಿರುಗುವುದಾದರೆ, ಉತ್ಪಾದನಾಬಾಹುಳ್ಯಕ್ಕೆ ನೆರವಾದ ತಂತ್ರಜ್ಞಾನವು, ಒಂದು ನಿರ್ದಿಷ್ಟ ಕಾಲದೇಶದಲ್ಲಷ್ಟೇ ಸಿಗಬಲ್ಲ, ವಿಶಿಷ್ಟ ವಸ್ತುಗಳ ಅನನ್ಯತೆಯ ಸಾಧ್ಯತೆಯನ್ನೇ ಅಳಿಸಿಹಾಕಿತು. ಜೊತೆಗೇ, ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಇದಕ್ಕೆ ವಿರುದ್ಧವಾದದ್ದು ಆಯಿತು. ಈ ‘ಪ್ರಭೆ’ಯ ಪ್ರಭಾವದಿಂದ ವಿನಾಶಕಾರಕ ಶಕ್ತಿಗಳ ಸೃಷ್ಟಿಯೂ ಆಯಿತು. ಮುಸೊಲಿನಿ, ಹಿಟ್ಲರ್, ಸ್ಟಾಲಿನ್ ಮದಲಾದವರು ಜನರ ಕಣ್ಣಿನಲ್ಲಿ ತಮ್ಮ ಕಾಲದಲ್ಲಿ ‘aura’ ಪಡೆದ ವಿಶೇಷ ವ್ಯಕ್ತಿಗಳು. ಹಿಟ್ಲರನ ‘aura’ವನ್ನು ಚಾರ್ಲಿ ಚಾಪ್ಲಿನ್ ಗೇಲಿಮಾಡುವುದು ಆ ಕಾಲದ ದೊಡ್ಡ ನೈತಿಕ ಕ್ರಿಯೆಯಾಯಿತು. ಈ ರಾಕ್ಷಸರನ್ನು ಬೆತ್ತಲೆಗೊಳಿಸಿ ನೋಡದ ಹೊರತು ಮಾನವ ಕುಲಕ್ಕೆ ಶಾಂತಿಯಿಲ್ಲದಂತಾಯಿತು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಂದಿರದ ‘ಪ್ರಭೆ’ಯಿಂದ, ಭ್ರಮೆಗಳು ಹುಟ್ಟಲೂ ದಾರಿಯಾಯಿತು. ತತ್ಪರಿಣಾಮವಾಗಿ, ‘ಪ್ರಭೆ’ಯ ವಿರುದ್ಧವಾಗಿ ಸಾಮಾನ್ಯನ ಪ್ರಭುತ್ವಕ್ಕಾಗಿ ಹೋರಾಟ ಮಾಡಬೇಕಾಯಿತು.

ನಮ್ಮ ಹಳೆಯ ದೇವಸ್ಥಾನಗಳಲ್ಲಿ, ಗಭಗುಡಿಯೆಂಬ ಕತ್ತಲೆಯ ‘ಪವಿತ್ರ’ವಾದ ಜಾಗದಲ್ಲಿ ಸಣ್ಣ ಹಣತೆಯ ಬೆಳಕಿನಲ್ಲಷ್ಟೇ ಕಾಣಿಸುತ್ತಿದ್ದ ದೇವರ ವಿಗ್ರಹಗಳು ಆರತಿಯ ಬೆಳಕಿನೊಂದಿಗೆ ಇನ್ನಷ್ಟು ಕಣ್ಣಿಟ್ಟು ನೋಡಿದರೆ ಮಾತ್ರ ಕಾಣಿಸುವಂತೆ ‘ಹೊಳೆಯು’ತ್ತಿದ್ದವು. ಆದರೆ ಇಂದು ಅವು ಪ್ರಜ್ವಲವಾದ ವಿದ್ಯುದ್ದೀಪಗಳಲ್ಲಿ ಝಗಮಗಿಸುತ್ತಿವೆ; ಸಾಂಪ್ರದಾಯಿಕ ಆಚರಣೆಗಳು ಸೂಕ್ತ ವೀಕ್ಷಕ ವಿವರಣೆಯೊಡನೆ ಪ್ರಸಾರವಾಗುತ್ತಿವೆ. ರಮಣರು ತಮಿಳಿನಲ್ಲಿ, ರಾಮಕೃಷ್ಣರು ಬಂಗಾಳಿಯಲ್ಲಿ – ಅದೂ ಪಕ್ಕಾ ದೇಸೀ ಧಾಟಿಯಲ್ಲಿ – ಮಾತನಾಡುತ್ತಿದ್ದರು. ಆದರೆ ಇಂದು ಆಧುನಿಕ ಗುರುಗಳೆಲ್ಲ ಆಕರ್ಷಕ ಬಟ್ಟೆಗಳನ್ನು ಧರಿಸಿದ, ವೈಜ್ಞಾನಿಕ ಮನೋಭಾವನೆಯನ್ನು ಹೊಂದಿರುವ ತಮ್ಮ ಶಿಷ್ಯರೊಡನೆ ಅಚ್ಚುಕಟ್ಟಾಗಿ ಇಂಗ್ಲಿಷ್ ಮಾತನಾಡಬಲ್ಲರು. ಇಂದು ಒಳ್ಳೆಯ ಕೆತ್ತನೆಯ ‘ಅಕ್ರಾಲಿಕ್’ ಗಣೇಶನ ವಿಗ್ರಹಗಳು ಎಲ್ಲರ ಮನೆಯ ದಿವಾನಖಾನೆಗಳಲ್ಲೂ ಕಾಣಸಿಗುತ್ತವೆ.

ಕೇವಲ ಮನುಷ್ಯರಾದ ನಮ್ಮಲ್ಲಿ ಪ್ರಭೆಯ ಬಗ್ಗೆ ಗುಪ್ತವಾದ ‘ವಾಸನೆ’ ಇದ್ದೇ ಇರುತ್ತದೆ. ಅದನ್ನು ಒಂದಲ್ಲ ಒಂದರಲ್ಲಿ – ಕಾವ್ಯ, ಕಲೆ, ಸಂಗೀತ ಇತ್ಯಾದಿಗಳಲ್ಲಿ – ಹುಡುಕುತ್ತಲೇ ಇರುತ್ತೇವೆ. ನಮಗೆ ಅತ್ಯಂತ ಆತ್ಮೀಯರೆನಿಸಿಕೊಂಡವರಲ್ಲೂ ಹುಡುಕುತ್ತಿರುತ್ತೇವೆ. ದೇವಾಲಯಗಳನ್ನೊಪ್ಪದ ಅದ್ವೈತಿಗಳ ಬ್ರಹ್ಮನಲ್ಲಿ. ಬೌದ್ಧರ ನಿರ್ವಾಣದಲ್ಲಿ ಹುಡುಕುತ್ತೇವೆ. ಬಾಹ್ಯಾಕಾಶದಲ್ಲಿ ಚಂದ್ರನ ಒರಟಾದ ಕಲ್ಲುಗಳ ಮೇಲೆ ನಮ್ಮ ವಿಜ್ಞಾನಿಗಳು ತಮ್ಮ ಅಡಿಗಳನ್ನಿಟ್ಟರೂ, ಪ್ರೇಮಿಯೊಬ್ಬನಿಗೆ ಚಂದ್ರನಿನ್ನೂ ಚಂದ್ರನೇ ಆಗಿದ್ದಾನೆ.

ಅತಿಪರಿಚಿತಗೊಂಡ ಲೋಕದಲ್ಲಿ ಕೇವಲ ಸಾಮಾಜಿಕ ವ್ಯಕ್ತಿಯಾಗಿಬಿಟ್ಟಿರುವಂತೆ ಕಾಣಿಸುವ ಜನಾರ್ದನನೂ ತನಗೆ ಅಪರಿಚಿತವಾದ ಪ್ರಭೆಯನ್ನು ಸ್ಪರ್ಶಿಸಲು ಕಾದೇ ಇದ್ದಾನು. ಅದು ನನಗೆ ಹೊಳೆಯಲು ಅವನು ನಾನು ಬರೆಯಬಹುದಾದ ಕಥೆಯಾಗಬೇಕು. ನನ್ನ ಈ ಬಗೆಯ ವಿಶ್ಲೇಷಣೆಗೆ ಬದಲಾಗಿ ರೂಪಕವಾಗಬೇಕು.

ದೇಶ ಕಾಲ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

* * *