‘ಜವಾಬ್ದಾರಿ’ ಎನ್ನುವ ಪದ ನನಗೆ ಅಷ್ಟು ಹಿಡಿಸುವುದಿಲ್ಲ. ಅದು ಸ್ವಲ್ಪ ಪೊಳ್ಳಾಗಿ ಮತ್ತು ಭಾರವಾಗಿ ಕೇಳಿಸುತ್ತದೆ. ಇನ್‌ಕಂಟ್ಯಾಕ್ಸ್ ಅರ್ಜಿಗಳನ್ನು ತುಂಬುವಾಗ ಆಗುವಂತೆ. ಸೃಜನಶೀಲ ಸಾಹಿತ್ಯವನ್ನು ಓದುವುದು / ಬರೆಯುವುದು ತನ್ನಷ್ಟಕ್ಕೆ ತಾನೇ ಒಂದು ಸಂತೋಷ ಕೊಡುವ ಕ್ರಿಯೆಯಾಗಿರದಿದ್ದರೆ ಅದು ನಿರರ್ಥಕ. ಕೆಟ್ಟ ಸಾಹಿತ್ಯ ಒಳ್ಳೆಯ ರಾಜಕೀಯವಾಗಲಾರದು. ಈ ಹಿಂದೆ ಅಸ್ತಿತ್ವದಲ್ಲಿದ್ದ ಸೋವಿಯತ್ ಒಕ್ಕೂಟದ ಪ್ರಭುಗಳಂತೆ, ಸಾಹಿತ್ಯದ ಸರಕಾರೀ ಪೋಷಕರು ಅನೇಕ ಬಾರಿ ಮರೆಯುವ ಅಥವಾ ಬೇಕೆಂದೇ ಉಪೇಕ್ಷೆ ಮಾಡುವ ಸ್ವತಃ ಸಿದ್ಧ ಸತ್ಯ ಇದು.

ಆದರೂ ‘ಜವಾಬ್ದಾರಿ’ಯಂತಹ ವಿಚಾರದ ಅಗತ್ಯ ಇದೆ. ಯಾಕೆಂದರೆ ಯಾವ ಲೇಖಕನೂ ಶೂನ್ಯದಲ್ಲಿ ಜೀವಿಸುವುದಿಲ್ಲ, ಸೃಷ್ಟಿಸುವುದೂ ಇಲ್ಲ. ಒಬ್ಬಾತ ಒಂದು ಭಾಷೆ ಬಳಸಿದ ಕ್ಷಣದಲ್ಲೇ ಅದನ್ನು ಸಜೀವವಾಗಿಟ್ಟಿರುವ ಸಮುದಾಯಕ್ಕೆ ಸಂಬಂಧಿಸಿದವನಾಗುತ್ತಾನೆ. ರೆನೇಸಾನ್ಸ್ ಕಾಲದ ಇಂಗ್ಲಿಷ್ ಭಾಷೆಯ ಮಿಡಿತ ಶೇಕ್‌ಸ್ಪಿಯರ್‌ನನ್ನು ಸಾಧ್ಯವಾಗಿಸಿತು. ಆ ಕಾಲದ ಜನ ಸುತ್ತಲಿನ ವಿಷಯಗಳಿಗೆ ಸ್ಪಂದಿಸುತ್ತಾ, ಚುರುಕಾಗಿ, ಸೂಕ್ಷ್ಮವಾಗಿ ಇದ್ದ ಕಾರಣ ಭಾಷೆಯೂ ಜೀವಂತವಾಗಿ ಮಿಡಿಯುತ್ತಿತ್ತು. ಆದ್ದರಿಂದ ಎಲ್ಲ ಒಳ್ಳೆಯ ಲೇಖಕರಿಗೂ ಈ ಜನರ ಋಣ ಮತ್ತು ತಮ್ಮನ್ನು ತಾಳಿಕೊಳ್ಳುವ ಭಾಷೆಯ ಋಣದ ಅರಿವು ಇದ್ದೇ ಇರುತ್ತದೆ. ಭಾಷೆ, ಜನರಿಗೆ ಭೂತಕಾಲದ ಜತೆ, ಒಂದು ನಾಡು ನುಡಿಯ ಜನ ಕಂಡ ಕನಸುಗಳ, ಸಾಧನೆಗಳ ಜತೆ ಸಾತತ್ಯ ಕಲ್ಪಿಸುತ್ತದೆ. ಭೂತದೊಂದಿಗಿನ ನಮ್ಮೆಲ್ಲ ನೆನಪುಗಳು ನಮ್ಮ ದೇಶಗಳಲ್ಲಿ ಜನಪದ ಕತೆ, ಹಾಡು, ಆಟ ಮತ್ತು ಪುರಾಣಗಳಲ್ಲಿ ಸಂರಕ್ಷಿಸಲ್ಪಟ್ಟಿವೆ.

ಲೇಖಕರಾಗಿ ಭೂತಕ್ಕೆ ನಾವು ಕೃತಜ್ಞರಾಗಿರುವಂತೆಯೇ, ನಮ್ಮ ಸಾಹಿತ್ಯಿಕ ಪರಂಪರೆಯಲ್ಲಿ ಉತ್ಕೃಷ್ಟವಾದುದನ್ನು ಕೇವಲ ಅನುಕರಣೆ ಮಾಡದೆ ಅದರೊಂದಿಗೆ ಸೃಜನಾತ್ಮಕವಾಗಿ ಒಡನಾಡುತ್ತಾ ಮುಂದುವರಿಸಿಕೊಂಡು ಬಂದಿರುವ ವರ್ತಮಾನಕ್ಕೂ ಋಣಿಗಳಾಗಿರಬೇಕು. ‘ನಮ್ಮೊಂದಿಗೆ ನಾವು ಆಡಿಕೊಳ್ಳುವ ಜಗಳಗಳಿಂದ ನಾವು ಕಾವ್ಯ ಸೃಜಿಸುತ್ತೇವೆ’ ಎಂದ ಯೇಟ್ಸ್. ಆದರೆ ರಾಜಕೀಯ ನಿರ್ಮಾಣವಾಗುವುದು ನಾವು ಬೇರೊಬ್ಬರೊಡನೆ ಆಡುವ ಜಗಳದಿಂದ. ಇವತ್ತಿನ ಅಸ್ಥಿರತೆ ಮತ್ತು ಬದಲಾವಣೆಗಳ ಕಾಲದಲ್ಲಿ ಈ ಎರಡೂ ಜಗಳಗಳನ್ನು ನಾವು ನಮ್ಮ ಪರಂಪರೆಯೊಂದಿಗೆ ಕೂಡ ಮಾಡಬೇಕಾಗಬಹುದು. ಅಷ್ಟೇ ಅಲ್ಲದೆ, ಇವು ಸಾಹಿತ್ಯಿಕ ಸೋದರ ವರ್ಗಗಳ ನಡುವೆ ನಡೆಯಬೇಕಾದ ಸಲ್ಲಾಪವೂ ಆಗಬೇಕೆಂದು ನಾವು ಎಚ್ಚರಿಕೆ ವಹಿಸಬೇಕು.

ಅಷ್ಟಲ್ಲದೇ ನಾವೇಕೆ ಹೀಗೆ ಸಮಾವೇಶಗೊಳ್ಳಬೇಕು ಮತ್ತು ನೀವು ಇಂಡಿಯಾದಿಂದ ಬಂದ ನನ್ನಂತಹ ಸಹಲೇಖಕನನ್ನು ಏಕೆ ಆಹ್ವಾನಿಸಬೇಕು? ಈ ಪಾರಸ್ಪರಿಕ ಅಪರಿಚಿತತೆ ದುರದೃಷ್ಟಕರ. ನಮ್ಮ ವಿದ್ಯಾಭ್ಯಾಸ ನಮಗೆ ಇಂತಹ ಭ್ರಾಂತಿ ಹುಟ್ಟಿಸಿದೆ; ನಾವು ಪರಸ್ಪರ ಹತ್ತಿರವಾಗಿರುವುದಕ್ಕಿಂತ ಹೆಚ್ಚು ಯೂರೋಪ್‌ಗೆ ಸಮೀಪದವರು ಎನ್ನುವ ಭ್ರಾಂತಿ. ಆದರೆ ಆಧುನೀಕರಣಗೊಂಡ ಯೂರೋಪ್‌ನೊಂದಿಗೆ ಹಂಚಿಕೊಳ್ಳುವುದಕ್ಕಿಂತ ನಮ್ಮ ನಮ್ಮ ನಡುವೆ ಹಂಚಿಕೊಳ್ಳಬೇಕದದ್ದೇ ಬಹಳಷ್ಟಿದೆ ಎನ್ನುವುದು ವಾಸ್ತವ. ಉದಾಹರಣೆಗೆ, ಮೂಲಭೂತವಾಗಿ ಒಂದೇ ಆದ ನಮ್ಮ ಪ್ರಾಚೀನ ಪರಂಪರೆ ಮತ್ತು ಪರಂಪರೆಯ ಶ್ರೇಷ್ಠ ಅಂಶಗಳನ್ನು ಕಾಪಾಡಿಕೊಂಡೇ ಆಧುನಿಕರಾಗಬೇಕಾದ ನಮ್ಮ ಅವಶ್ಯಕತೆ, ಅದರಿಂದ ಉಂಟಾಗುವ ಉದ್ವಿಗ್ನತೆ ಇವೆಲ್ಲ ಮಹತ್ವದ ಸಂವಾದಕ್ಕೆ ಕಾರಣವಾಗಬಹುದು. ಈ ಬಗೆಯ ಅಸ್ವಾಭಾವಿಕ ದೂರ ನಮ್ಮ ಭಾರತೀಯ ಭಾಷೆಗಳ ಲೇಖಕರ ನಡುವೆಯೇ, ಅದೂ ಸ್ವಾತಂತ್ರ್ಯೋತ್ಸವದ ದಿನಗಳಲ್ಲಿ ಸ್ವಲ್ಪಜಾಸ್ತಿ ಪ್ರಮಾಣದಲ್ಲಿ ಇರುವುದೂ ಒಂದು ವಿರೋಧಾಭಾಸ.

ಏಷ್ಯಾದ ಲೇಖಕರು – ನಾವು ಪರಸ್ಪರ ಕಲಿಯುವಂತಹವರಾದರೆ- ಬಹುಶಃ ಯೂರೋಪ್‌ನ ಸಮಕಾಲೀನ ಮಹತ್ವದ ಲೇಖಕರೊಂದಿಗೆ ಸಾಹಿತ್ಯಿಕ ಸಾಹಸದಲ್ಲಿ ಈಗಿರುವುದಕ್ಕಿಂತ ಹೆಚ್ಚು ಒಳ್ಳೆಯ ರೀತಿಯಲ್ಲಿ ಸಹಭಾಗಿಗಳಾಗಬಹುದೇನೋ. ಈ ಸಮ್ಮೇಳನದಲ್ಲಿ ಭಾಗವಹಿಸಿರುವ ಕೆಲವರನ್ನಾದರೂ ಈ ಪ್ರಶ್ನೆ ಕಾಡಬಹುದು ಎಂದು ನನಗೆ ಭರವಸೆ ಇದೆ.

*

ನಮ್ಮ ಪರಂಪರೆಗಳಿಗೆ ‘ವಿಮರ್ಶಾತ್ಮಕ ಒಳಗಿನವರಾಗಿ’ ನಾವು – ವಿಶೇಷವಾಗಿ ಏಷ್ಯಾದ ಲೇಖಕರು – ಇರಬೇಕಾದ ಅಗತ್ಯವಿದೆ. ವಿಮರ್ಶಾತ್ಮಕ ಎಚ್ಚರವಿಲ್ಲದೆ ಕೇವಲ ಒಳಗಿನವರಾಗುವುದು ಅನೇಕ ಸಲ ಅರ್ಥಹೀನ, ಪ್ರಶಂಸನಾತ್ಮಕ, ಸಂಭ್ರಮದ ಬರವಣಿಗೆ, ಅಲಂಕಾರಿಕ ಸ್ತುತಿ ಮತ್ತ ಅತಿಯಾಗಿ ಬಳಸುವ ಕ್ಲೇಶಗಳಿಗೆ ಎಡೆಮಾಡಿಕೊಡುತ್ತದೆ. ಇದನ್ನು ಹೀರುವುದು ಎಷ್ಟು ಸುಲಭವೋ ಅಷ್ಟೇ ಇದು ಕ್ಷುಲ್ಲಕ ಸಹ. ನಮ್ಮ ಸ್ತೋತ್ರ ಪರಂಪರೆಯ ಕಾರಣ, ಹಿಂದಿನಿಂದ ಅನುವಂಶಿಕವಾಗಿ ಬಂದ ಆಸ್ಥಾನ ವಿದ್ವಾಂಸರ ವರ್ತನೆ ಮತ್ತು ಇತ್ತೀಚಿನ ವಸಾಹತುಶಾಹಿ ಆಳ್ವಿಕೆಯಿಂದ ನಮ್ಮಲ್ಲಿ ಬಹಳ ಜನ ಈ ಬಗೆಯ ಅರ್ಥಹೀನ ಬರವಣಿಗೆಗೆ ಜಾರುತ್ತಿದ್ದರೆ. ‘ನವ್ಯ’ರೆನಿಸಿಕೊಂಡ ನಾವು (ಕೆಲವು ಜನ) ಈ ಬಗೆಯ ವೈಭವಯುಕ್ತ ಸ್ತುತ್ಯ ಬರವಣಿಗೆಯನ್ನು ಟೀಕಿಸುತ್ತಾ ಬಂದಿದ್ದೇವೆ.

ಪರಂಪರೆಯನ್ನು ಕುರುಡಾಗಿ ಟೀಕಿಸುತ್ತಾ ಇರುವುದೂ, ಇನ್ನೊಂದು ಬಗೆಯಲ್ಲಿ, ನಮ್ಮಲ್ಲಿರುವ ಒಳ್ಳೆಯದನ್ನೆಲ್ಲಾ ಮರೆತು ಕುರುಡಾಗಿ ಪಾಶ್ಚಾತ್ಯೀಕರಣಗೊಳ್ಳುವುದರಲ್ಲಿ ಕೊನೆಯಾಗಬಹುದು. ಇಂಡಿಯಾದ ೧೨ನೆಯ ಶತಮಾನದ ಅನುಭಾವಿ ಕವಿ ಬಸವ, ವಿಧಿಬದ್ಧ ಮತ್ತು ಮೌಢ್ಯದಿಂದ ಕೂಡಿದ ದೇವಸ್ಥಾನದ ಪೂಜೆಗಳು ಮತ್ತು ಜಾತಿ-ಪದ್ಧತಿಯ ವಿರುದ್ಧ ಬಂಡೆದ್ದ ವಿಮರ್ಶಾತ್ಮಕ ಎಚ್ಚರ ಇಟ್ಟುಕೊಂಡ  ಒಳಗಿನವನಾಗಿದ್ದಾನೆ.

ಮರಾಠಿ ಕವಿ ತುಕಾರಾಂ ಮತ್ತು ಹಿಂದಿ ಕವಿ ಕಬೀರ್ ಕೂಡಾ ಹೀಗೇ. ಮಧ್ಯಕಾಲೀನ ಸಂತ ಕವಿಗಳೆಲ್ಲ ಇಂತಹ ವಿಮರ್ಶಾತ್ಮಕ ಎಚ್ಚರಹೊಂದಿದ್ದ ಒಳಗಿನವರೇ ಆಗಿದ್ದರು. ಮಹಾತ್ಮಾ ಗಾಂಧಿ ಇಂಥ ಪರಂಪರೆಗೆ ಸೇರಿದವರು. ನಿಮ್ಮಲ್ಲೂ ತಮಿಳು ಮತ್ತು ಸಿಂಹಳೀ ಪರಂಪರೆಗಳಲ್ಲಿ ಇಂತಹ ಅನೇಕ ಉದಾಹರಣೆಗಳು ಇರಲೇಬೇಕು.

ನಮ್ಮ ಭಾಷೆಗಳ ಸ್ವಭಾವದಲ್ಲಿರುವ ಇನ್ನೂ ಒಂದು ಅಂಶ ಕೂಡ ನಮ್ಮ (ಏಷ್ಯನ್) ಲೇಖಕರ ಸಂದರ್ಭವನ್ನು ಖಂಡಿತ ವಿಶಿಷ್ಟವಾಗಿಸುತ್ತದೆ. ಇಲ್ಲಿಯತನಕ ಪ್ರಪಂಚದ ಭಾಷೆಗಳಲ್ಲಿ ಎರಡು ದೊಡ್ಡ ಕ್ರಾಂತಿಗಳು ಸಂಭವಿಸಿವೆ. ಸುಮಾರು ಐನೂರು ವರ್ಷಗಳ ಹಿಂದೆ ಲ್ಯಾಟಿನ್, ಯೂರೋಪ್‌ನಲ್ಲಿ ವಿಶ್ವಭಾಷೆಯಾಗಿತ್ತು. ಇದು ಯೂರೋಪ್‌ನ ಪ್ರಾಂತೀಯ ಭಾಷೆಗಳಿಗೆ ಜಾಗ ಬಿಟ್ಟುಕೊಟ್ಟಿತು. ಈ ಸಾಂಸ್ಕೃತಿಕ ವಿಕೇಂದ್ರೀಕರಣ ಯೂರೋಪ್‌ನ ಪ್ರಾದೇಶಿಕ ಭಾಷೆಗಳ ಅಗಾಧ ಸೃಷ್ಟ್ಯಾತ್ಮಕತೆಯ ಫಲ ನೀಡಿತು. ಇಂಗ್ಲಿಷ್‌ನಲ್ಲಿ ಶೇಕ್ಸ್‌ಪಿಯರ್ ಮತ್ತು ಇಟಾಲಿಯನ್‌ನಲ್ಲಿ ಡಾಂಟೆ ಹುಟ್ಟಿಕೊಂಡರು (ಈ ವಿಷಯದ ತಿಳಿವಳಿಕೆಗಾಗಿ ನಾನು ಡಾ. ಶೆಲ್ಡನ್ ಪೋಲಾಕ್‌ರ ಬರವಣಿಗೆಗೆ ಋಣಿ).

ನಾನು ಬರೆಯುವ ಭಾಷೆ ಕನ್ನಡಕ್ಕೆ ಸಂಬಂಧಿಸಿದ್ದಷ್ಟನ್ನೇ ಮಾತಾಡುವೆ. ಒಂದು ಸಾವಿರ ವರ್ಷಗಳ ಹಿಂದೆ ವಿಶ್ವಭಾಷೆಯಾಗಿದ್ದ ಸಂಸ್ಕೃತದ ಜಾಗಕ್ಕೆ ಭೌಗೋಳಿಕತೆಯಿಂದ ಸೀಮಿತಗೊಂಡ ಕನ್ನಡ ದೇಶದ ‘ಕನ್ನಡ’ ಬಂತು. ಇದನ್ನು ಒಂದು ಸಾವಿರ ವರ್ಷಗಳ ಹಿಂದಿನ ಅಭಿಜಾತ ಕಾವ್ಯ ‘ಕವಿರಾಜಮಾರ್ಗ’ದಲ್ಲಿ ಗಹನವಾಗಿ ವಿಚಾರಮಾಡಲಾಗಿದೆ. ಇದರ ಕರ್ತೃ ಶ್ರೀವಿಜಯ. ಕನ್ನಡ ಭಾಷೆಗೆ ಭೌಗೋಳಿಕ ಪರಿಮಿತಿ ಇದ್ದರೂ ವಿಶ್ವಕ್ಕೆ ಸಂಬಂಧಿಸಿದಂತೆ ಈ ಭಾಷೆಯ ಲೇಖಕರ ಸೃಷ್ಟಿಗೆ ಪರಿಮಿತಿ ಇಲ್ಲ ಎಂದು ಪರಿಭಾವಿಸುತ್ತಾನೆ. ಇದು ಮುಖ್ಯ ಅಂಶ. ಸೃಷ್ಟಿಶೀಲತೆಯ ವಿಕೇಂದ್ರೀಕರಣ ಭೂತದೊಂದಿಗೆ ಸಂಬಂಧ ಹರಿದು ಕೊಳ್ಳಲೂ ಇಲ್ಲ ಮತ್ತು ತುಂಡು ನೋಟಗಳನ್ನು ನೀಡಲೂ  ಇಲ್ಲ ಎನ್ನುವುದನ್ನು ನಾನಿಲ್ಲಿ ಮರೆಯಲಾರದು. ಯಾಕೆಂದರೆ ಇಟಾಲಿಯನ್‌ನಲ್ಲಿ ಬರೆದ ಡಾಂಟೆಗೆ ಲ್ಯಾಟಿನ್ ಭಾಷೆಯ ವರ್ಜಿಲ್ ಮಾರ್ಗದರ್ಶಕನಾಗಿದ್ದ. ಹಾಗೇ ಕನ್ನಡದ ಪಂಪನಿಗೆ ಒಂದು ಸಾವಿರ ವರ್ಷಗಳ ಹಿಂದೆ ಸಂಸ್ಕೃತದಲ್ಲಿ ಬರೆದ ಕಾಳಿದಾಸ ಮಾದರಿಯಾಗಿದ್ದ.

ಇದು ತಮಿಳಿನಲ್ಲಿ ಇನ್ನೂ ಬೇಗ ಆಯಿತು. ಪ್ರಾಚೀನ ಭಾರತದಲ್ಲಿ ಬುದ್ಧದೇವ ಜನರ ಭಾಷೆಯಲ್ಲಿ ಮಾತಾಡಿದ. ನಮ್ಮ ಯುಗದ ಸೃಜನಶೀಲತೆ ಈ ಜನರ ಭಾಷೆಗಳು, ಪ್ರಾಂತೀಯ ಭಾಷೆಗಳು (ಇದನ್ನು ತಾಂತ್ರಿಕ ಅರ್ಥದಲ್ಲಲ್ಲದೆ ಬೇರೆ ಬಗೆಯಲ್ಲಿ ಬಳಸಲು ನನಗೆ ಒಂದು ಚೂರೂ ಇಷ್ಟವಿಲ್ಲ) ಅಧಿಕಾರಯುತವಾದದ್ದಕ್ಕೆ ಬಹಳ ಋಣಿಯಾಗಿದೆ.

ಸಾವಿರ ವರ್ಷಗಳು ಉರುಳಿದ ಮೇಲೆ ನಾವು ಜಾಗತೀಕರಣದ ಪ್ರಭಾವದಡಿ ಇನ್ನೊಂದು ಚಕ್ರ ಕಾಣುತ್ತಿದ್ದೇವೆ. ಜನರ ಭಾಷೆಗಳಿಗೆ ಅಪಾಯ ಕಾಣಿಸಿಕೊಂಡಿದೆ. ಅವುಗಳ ಶಕ್ತಿ ನಶಿಸುತ್ತಿದೆ. ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರ ಅಮೆರಿಕ ಇಂಗ್ಲಿಷ್ ಭಾಷೆ ಬಳಸುತ್ತಿರುವುದರಿಂದ ಬಹುಶಃ ಇಡೀ ಜಗತ್ತು ಇಂಗ್ಲಿಷನ್ನು ವಿಶ್ವ-ಭಾಷೆಯಾಗಿಸಿಕೊಳ್ಳುವತ್ತ ಸಾಗುತ್ತಿದೆ. ಶೇಕ್‌ಸ್ಪಿಯರ್ ಆ ಭಾಷೆಯಲ್ಲಿ ಬರೆದ ಎಂಬ ಕಾರಣಕ್ಕಾಗಿ ಖಂಡಿತ ಅಲ್ಲ.

ನಮ್ಮ ಭಾಷೆಗಳ ಬರಹಗಾರರಿಗೆ, ತನ್ನದೇ ಇತಿಹಾಸ ಹೊಂದಿರುವ ಮತ್ತು ಇತಿಹಾಸದಲ್ಲಿ ಮನುಷ್ಯನಾಗಿರುವುದು ಹೇಗಿತ್ತು ಎನ್ನುವುದರ ಕುರಿತು ಮೌಲಿಕ ನೆನಪಿನ ಸಾತತ್ಯ ಹೊಂದಿರುವ ಜನರ ಭಾಷೆಗಳು ಉಳಿಯುತ್ತವೆಯೇ ಎಂದು ನೋಡಿಕೊಳ್ಳುವ ಜವಾಬ್ದಾರಿ ಇದೆ ಎಂದು ನಾನು ಭಾವಿಸುವೆ. ಇದೊಂದು ರಾಜಕೀಯ ಕಾರ್ಯಾಚರಣೆ ಆಗಿರುವಷ್ಟೇ ಸಾಂಸ್ಕೃತಿಕವಾದದ್ದೂ ಆಗಿದೆ.

ಇದರಲ್ಲಿ ಅನೇಕ ಸಂಗತಿಗಳು ಇವೆ. ಮೊದಲನೆಯದಾಗಿ ಆರ್ಥಿಕತೆಯ ವಿಕೇಂದ್ರೀಕರಣ ಮತ್ತು ಗ್ರಾಮೀಣ ಜನತಾಂತ್ರಿಕ ಸಂಸ್ಥೆಗಳಿಗೆ ಅಧಿಕಾರ. ತತ್ಫಲವಾಗಿ ನಿಜವಾದ ಅರ್ಥದ ಒಕ್ಕೂಟ ರೀತಿಯ ಸರಕಾರಗಳು. ಸಾಂಸ್ಕೃತಿಕ ಅಸ್ತಿತ್ವ ಸ್ಥಾಪಿಸಿಕೊಳ್ಳಲಷ್ಟೇ ಅಲ್ಲ; ಒಳ್ಳೆಯ ಮತ್ತು ಸಮರ್ಪಕ ಆಡಳಿತ ವ್ಯವಸ್ಥೆಗಾಗಿ ಈ ಬಗೆಯ ದೃಢನಿರ್ಧಾರದ ರಾಜಕೀಯ ಕಾರ್ಯಾಚರಣೆಯ ಅಗತ್ಯವಿದೆ.

ನಮ್ಮ ವಿವಿಧತೆಯ ಒಂದು ಅಂಶವೇ ಭಾಷೆಗಳು. ವಿವಿಧತೆಯಿದ್ದೆಡೆ ಪ್ರಜಾಸತ್ತಾತ್ಮಕತೆಗೆ ಖಂಡಿತ ಅವಕಾಶವಿದೆ. ಭಾರತದ ನಮ್ಮ ನಾಗರಿಕತೆಯನ್ನು ವಿವರಿಸಲು ನಾವು ‘ವಿವಿಧತೆಯಲ್ಲಿ ಏಕತೆ’ ಎನ್ನುವ ಪದಗುಚ್ಛ ಬಳಸುತ್ತೇವೆ. ಇದರ ಅರ್ಥವೆಂದರೆ ಒಬ್ಬ ಸರ್ವಾಧಿಕಾರಿ ಆಡಳಿತಗಾರ ಕೇಂದ್ರೀಕೃತ ಆಳ್ವಿಕೆ ಬೇಕೆನ್ನುವ ಆಶಯಕ್ಕಾಗಿ ಏಕತೆಯನ್ನು ಒತ್ತಾಯಿಸತೊಡಗಿದ ಕೂಡಲೇ ನಮ್ಮ ನಮ್ಮ ಭಿನ್ನತೆಗಳ ಬಗ್ಗೆ ನಾವು ಹೆಚ್ಚು ಜಾಗೃತರಾಗುತ್ತೇವೆ. ಉದಾಹರಣೆಗೆ ಇದು ಅಸ್ಸಾಂನಲ್ಲಿ, ಪಂಜಾಬಿನಲ್ಲಿ, ತಮಿಳುನಾಡಿನಲ್ಲಿಯೂ ಆಯ್ತು. ಕ್ರಮೇಣ ತುರ್ತು ಪರಿಸ್ಥಿತಿಗೆ ಹಾಗಿ ಮಾಡಿಕೊಟ್ಟಿತು. ಅದೇ ವೇಳೆಯಲ್ಲಿ, ಭಿನ್ನತೆಯ ಹೆಸರಲ್ಲಿ ಪ್ರತ್ಯೇಕತೆಯನ್ನು ಅತಿಯಾಗಿ ಹೇರಿ ಯುಗೋಸ್ಲಾವಿಯಾದಂತಹ ಸಂದರ್ಭ ಸೃಷ್ಟಿಯಾದಾಗ ನಾವು ನಮ್ಮ ನಾಗರಿಕತೆಯ ಏಕತೆ ಕುರಿತು ಬಹಳ ಆಳವಾಗಿ ಜಾಗೃತರಾಗುತ್ತೇವೆ. ಅದಕ್ಕಾಗೇ ಇಂಡಿಯಾದಂತಹ ದೇಶಗಳಲ್ಲಿ ಅತಿಯಾಗಿ ಕೇಂದ್ರೀಕರಣಗೊಂಡಾಗ ನಾವು ಹಿನ್ನಡೆಯಬಹುದು. ಟಾಗೋರ್ ಒಬ್ಬ ಬೆಂಗಾಲಿ ಕವಿಯಾಗಿದ್ದಂತೆಯೇ ಒಬ್ಬ ಮಹಾನ್ ಭಾರತೀಯ ಕವಿಯಾಗಿರುವುದು, ಗಾಂಧಿ ಒಬ್ಬ ಗುಜರಾತಿಯಾಗಿದ್ದಂತೆಯೇ ಒಂದು ಅಸಾಮಾನ್ಯ ಭಾರತೀಯ ಚೇತನವಾಗಿರುವುದು ನಮಗಿರುವ ತುಂಬ ಸಂತಸದ ಸನ್ನಿವೇಶ.

ಜಾಗತೀಕರಣದ ಹೆಸರಿನ ಈ ಅಮೆರಿಕಿಕರಣ ಜೋಪಾನವಾಗಿ ಕಾದಿಟ್ಟುಕೊಂಡು ಬಂದ, ನಮ್ಮ ಅನೇಕ ಪರೀಕ್ಷಿತ ಮೌಲ್ಯಗಳಿಗೆ ಒಂದು ಬೆದರಿಕೆ. ನಮ್ಮ ಭಾಷೆಗಳ ಲೇಖಕರು ಈ ಬೆದರಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ನಮ್ಮ ಭಾಷೆಗಳಿಗೆ ಭವಿಷ್ಯವೇ ಇಲ್ಲ. ಅವು ಅಡುಗೆ ಮನೆಯ ಭಾಷೆಗಳಾಗಿಯಷ್ಟೇ ಉಳಿದುಬಿಡಬಹುದು.

ನಮ್ಮ ಕಾಲದ ಜಗತ್ತಿನ ಕೆಲವು ಶ್ರೇಷ್ಠ ಲೇಖಕರನ್ನು ಕಾಡುವ ಇನ್ನೊಂದು ಪ್ರಶ್ನೆಯನ್ನು ಈಗ ನೋಡೋಣ. ನಮ್ಮ ಸಂಸ್ಕೃತಿಯ ಜತೆ ಅನ್ಯ ಸಂಸ್ಕೃತಿಗಳನ್ನು ಭಾವನಾತ್ಮಕವಾಗಿ ಅರ್ಥಮಾಡಿಕೊಳ್ಳುವ ಬೇಡಿಕೆಯೊಡ್ಡುವ ಮಹತ್ವದ ಪ್ರಶ್ನೆ ಇದು. ಇದರ ಕೊರತೆ, ಬಹಳಷ್ಟು ಸಾರಿ, ಸರಿಯಾದ ಮಾರ್ಗದರ್ಶನ ಇಲ್ಲದವರನ್ನು ಭಾವುಕ ಸ್ವಸಾತ್ವಿಕತೆ ಮತ್ತು ಹುತಾತ್ಮತೆಯತ್ತಲೂ ದೂಡುತ್ತ ಅಮಾನವೀಯ ಕ್ರೌರ್ಯ, ಬರ್ಬರತೆ ಮತ್ತು ನಾಗರಿಕ ಮೌಲ್ಯಗಳ ವಿನಾಶದ ಫಲ ನೀಡುತ್ತಿದೆ. ಸಂಸ್ಕೃತಿ ಮತ್ತು ನಾಗರಿಕತೆಗಳಿಲ್ಲದೆ ಸಾಹಿತ್ಯ ಇಲ್ಲ, ನಾಟಕ ಇಲ್ಲ, ಕಾವ್ಯವಿಲ್ಲ. ಎಲ್ಲ ಜೀವರೂಪಗಳೆಡೆಗೆ ಮತ್ತು ಅವನ್ನು ಹೊಂದಿರುವ, ಪೋಷಿಸುವ ಈ ಭೂಮಿ, ಆಗಸಗಳ ಕುರಿತು ಪ್ರೀತಿ ಮತ್ತು ಕರುಣೆಯಿಲ್ಲದಿದ್ದರೆ ನಾಗರಿಕತೆಯಿಲ್ಲ.

ಇಗ್ನೇಶಿಯೊ ಸಿಲೋನ್‌ನ ‘ಫಾಂಟಮಾರ’ ಕಾದಂಬರಿಯ ಒಂದು ಪಾತ್ರ ಹಣ ಮತ್ತು ರಾಜ್ಯವೆಂಬ, ಕೀಟಗಳಷ್ಟೇ ಪ್ರಾಚೀನ, ಕೊಳಕು ಕೆಡಕುಗಳ ಬಗ್ಗೆ, ಮತ್ತವು ಒಂದು ಮಿತಿಯಲ್ಲಿರುವವರೆಗೆ ಸಹ್ಯ ಎನ್ನುವುದರ ಬಗ್ಗೆ ಹೇಳುತ್ತದೆ. ಆದರೆ ಹಣ ಮತ್ತು ರಾಜ್ಯ ಎರಡೂ ಏಕಮನಸ್ಸಿನಿಂದ ನಿಷ್ಠರಾಗಿರುವ ಕೆಲ ಭಾವಾತಿರೇಕದ ಜನರನ್ನು ತಲುಪುವ ಸಾಧ್ಯತೆಯಿದೆ. ರಾಜಕಾರಣ ಮತ್ತು ದೊಡ್ಡ ವಹಿವಾಟುಗಳಲ್ಲಿರುವ ಈ ಜನ ತಮ್ಮ ಸ್ವಕೇಂದ್ರಿತ ಅಧಿಕಾರ ಬೆನ್ಹತ್ತುವ ಕ್ರಿಯೆಯಲ್ಲಿ ಸ್ವಸಾತ್ವಿಕತೆ ಹೊಂದಿರಬಹುದು ಮತ್ತು ಎಂತಹುದೇ ಅನೈತಿಕ ಕ್ರಿಯೆಯನ್ನೂ ಜನರ ಕ್ಷೇಮದ  ಹೆಸರಲ್ಲಿ ಸಮರ್ಥಿಸಿಕೊಳ್ಳಬಹುದು. ಉದಾಹರಣೆಗೆ ಸಂಪತ್ತು ಮತ್ತು ಬಲಯುಕ್ತ ರಾಜ್ಯದ ಹೆಸರಲ್ಲಿ ನಿಧಾನ ಗತಿಯಲ್ಲಿ ಸಂಭವಿಸುವ ಪರಿಸರ ವಿನಾಶವನ್ನು ಬೆಂಬಲಿಸುವುದು. ಈ ವಿಷಯಗಳಲ್ಲಿನ ಪರಿಣಿತರು, ದೇಶಚ್ಛೇದದ ಸಮಯದಲ್ಲಿ ಸಂಭವಿಸಿದ ಕೋಮು ಸಂಬಂಧಿತ ವಿನಾಶಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಸ್ವಾತಂತ್ರ್ಯೋತ್ತರ ಸಮಯದಲ್ಲಿ ಆಧುನಿಕತೆ ಮತ್ತು ಅಭಿವೃದ್ಧಿಯ ವೇಷದಲ್ಲಿ ಜನ ನಿರ್ಗತಿಕರಾಗಿ, ವಸತಿಹೀನರಾಗಿ ಸಂಕಷ್ಟಕ್ಕೀಡಾದದ್ದನ್ನು ಹೇಳುತ್ತಾರೆ.

ಮಹಾತ್ಮಾ ಗಾಂಧಿ ಮತ್ತು ಟಾಗೋರ್ ಈ ಕಾರಣದಿಂದಲೇ ಯೂರೋಪಿಯನ್ ವಿಚಾರಧಾರೆಯ ರಾಷ್ಟ್ರ-ರಾಜ್ಯ ಪರಿಕಲ್ಪನೆಯನ್ನು ತಿರಸ್ಕರಿಸಿದ್ದರು, ಅನೇಕತೆಗಳ ನಾಗರಿಕತೆಯಾದ ಭಾರತಕ್ಕೆ ಸರಿಹೊಂದುವ ರಾಷ್ಟ್ರೀಯತೆ ಆರಿಸಿಕೊಂಡಿದ್ದರು. ನನ್ನ ದೇಶದ ಈ ಇಬ್ಬರು ದಾರ್ಶನಿಕರ ಸಂದೇಶದಲ್ಲಿ ಇಂದಿನ ಕದಡಿಹೋದ ಜಗತ್ತಿಗೆ ಒಂದುಪಾಠ ಇರಬಹುದು. ಆದರೆ ಹಣ ಮತ್ತು ಬಲಯುಕ್ತ ಸರಕಾರಗಳ ಬೆಂಬತ್ತಿರುವ ನಾವು ಅವರನ್ನು ಲಕ್ಷಿಸುತ್ತಲೇ ಇಲ್ಲ. ಇಂದು ಗುಜರಾತ್ ಸರಕಾರವೇ ಹರಿಬಿಟ್ಟ ಕೋಮು ವೈಷಮ್ಯದ ಉನ್ಮಾದ. ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಸಿಕ್ಕುತ್ತಿರುವ ಕುಮ್ಮಕ್ಕು ಮತ್ತು ಒಂದಕ್ಕೆ ಉತ್ತರವಾಗಿ ಇನ್ನೊಂದೆಂಬಂತೆ ಇವೆರಡರ ಸಮರ್ಥನೆ ನಮ್ಮನ್ನು ಹೆದರಿಸುತ್ತದೆ.

ನಮ್ಮ ಕಾಲದ ಈ ಸವಾಲುಗಳಿಗೆ ವಿಶ್ವಸಾಹಿತ್ಯ ಪ್ರತಿಕ್ರಿಯಿಸಬೇಕು. ಇದಕ್ಕೆ ಕರುಣಿ, ಕಾಣ್ಕೆ ಮತ್ತು ಆಳವಾದ ಆತ್ಮನಿರೀಕ್ಷಣೆ ಬೇಕು. ನಾವು ಲೇಖಕರಾಗಿ, ನಮ್ಮ ಕಾಲದ ಭಯಾನಕ ಘಟನೆಗಳಿಗೆ ಸಾಕ್ಷಿಪ್ರಜ್ಞೆಯಾಗಿ ವರ್ತಿಸಬೇಕಷ್ಟೇ ಅಲ್ಲ, ನಾಗರಿಕರಾಗಿ ಕರುಣೆ ಮತ್ತು ಪ್ರಜ್ಞಾವಂತಿಕೆ ಮರಳಿ ಸ್ಥಾಪಿಸಲು ಕೆಲಸ ಮಾಡಬೇಕು.

ಕಡೆಗೆ ನಮ್ಮ ಕಾಲದ ಕೆಲವು ಅಸಂಬದ್ಧ, ಪ್ರಜ್ಞಾಹೀನ ಭಾವೋದ್ರೇಕಗಳ ಕುರಿತು – ಇದಕ್ಕೆ ನಮ್ಮಲ್ಲೇ ಯಾರಾದರೂ ಅಥವಾ ನಮ್ಮ ಪ್ರೀತಿಪಾತ್ರರು ಬಲಿಯಾಗುವ ಎಲ್ಲ ಸಾಧ್ಯತೆ ಇದೆ. ಲೇಖಕ ಕರಹಾಸನ್ ಬೋಸ್ನಿಯನ್ ಜೋಕ್ ಒಂದರ ಮೂಲಕ ಮನೋಸ್ಥಿತಿಯೊಂದರ ಕ್ರೌರ್ಯ ಮತ್ತು ಅಸಂಬದ್ಧತೆಗಳನ್ನು ಹೀಗೆ ತೆರೆದಿಸುತ್ತಾನೆ:

ಈ ಜೋಕ್ ಬೋಸ್ನಿಯಾದ್ದು ಅಂತ ಹೇಳಿದರೂ ಜ್ಯೂಯಿಷ್ ಥರ ಕೇಳಿಸುತ್ತೆ, ಇದರಲ್ಲಿ ಐವೆಕ್ ಒಂದು ಸ್ಥಳೀಯ ಛತ್ರದಲ್ಲಿ ಇರುತ್ತಾನೆ. ತನ್ನ ಬದಿಯಲ್ಲಿ ನಿಂತಿದ್ದ ಮನುಷ್ಯನ ಹೆಸರು ಮೋಶೆ ಎಂದು ಗೊತ್ತಾದ ತಕ್ಷಣ ಯಾವ ಯೋಚನೆಯನ್ನೂ ಮಾಡದೆ ಅವನನ್ನು ಕೊಲ್ಲುತ್ತಾನೆ. ನಂತರ ಪೋಲೀಸರಲ್ಲಿ ಕೊಲೆಯನ್ನು ಒಪ್ಪಿಕೊಳ್ಳುತ್ತಾ ಹೀಗೆ ಹೇಳುತ್ತಾನೆ: ‘ಮತ್ತದು… ಅವರು ನಮ್ಮ ಜೀಸಸ್‌ಗೆ ಮಾಡಿದ್ದು, ಅದು ಸರೀನಾ?’.

‘ಆದರೆ ಅದು ಎರಡು ಸಾವಿರ ವರ್ಷಗಳ ಹಿಂದೆ!’ ಪೊಲೀಸ್ ಅಧಿಕಾರಿ ಉದ್ಗರಿಸಿದಾಗ ಇವ ಹೇಳುತ್ತಾನೆ : ‘ಹೌದು, ಆದರೆ ನಾನು ಅದನ್ನು ಕೇಳಿದ್ದು ನಿನ್ನೆಯಷ್ಟೇ.’

ಕೊಂದ ಮನುಷ್ಯನನ್ನು ತನ್ನದೇ ಇತಿಹಾಸ, ತನ್ನದೇ ಅತಿಕ್ರಮಿಸಲಾರದ ಭೌತಿಕ ದೇಹ ಇರುವ ಒಬ್ಬ ವ್ಯಕ್ತಿಯಾಗಿ ಪರಿಗಣಿಸುವುದು ಮಾಯವಾಗಿದೆ. ಪ್ರತಿಯೊಬ್ಬ, ನನ್ನ ಹಾಗೆ ಕಾಣಿಸದಿರುವವನು, ಅಥವಾ ಪೂಜಿಸದಿರುವವನು ವಿದ್ವೇಷದ ‘ಬೇರೆಯವನು’. ಈ ‘ಬೇರೆಯವನು’ ವಯಸ್ಕ ಗಂಡಸು ಅಥವಾ ಹೆಂಗಸಾಗಿ ಇರಬೇಕೆಂದೇನೂ ಇಲ್ಲ. ಒಂದು ಮಗೂ ಕೂಡಾ ಈ ಅಮೂರ್ತ ‘ಅನ್ಯ’. ಇಂತಹ ಮನಸ್ಥಿತಿ ಮೈ ನಡುಗಿಸುವಂಥದ್ದು.

ಸಾಹಿತ್ಯ ಸಲ್ಲಿಸುವ ಮಹೋನ್ನತ ಕಾಣಿಕೆಯೇನಾದರೂ ಇದ್ದರೆ ಅದು ಇದು: ಅದು ನಿಮ್ಮನ್ನು, ಸಾರಾಸಗಟುತನವನ್ನು ಅನುಮಾನಿಸುವಂತೆ ಮಾಡುತ್ತದೆ. ಅದು ಒಬ್ಬ ಹ್ಯಾಮ್ಲೆಟ್‌ನನ್ನು ತನ್ನದೇ ತಂದೆಯ ಕೊಲೆಗಾರನನ್ನು ಕೊಲ್ಲಲು ಹಿಂಜರಿಯುವಂತೆ ಮಾಡುತ್ತದೆ.

ನಾವು ಏನನ್ನೋ ಪ್ರತಿನಿಧಿಸುವುದಷ್ಟೇ ಅಲ್ಲ, ನಮಗೆ ಉಸಿರಾಡುವ ದೇಹ ಮತ್ತು ಸಜೀವ ಇತಿಹಾಸಗಳಿವೆ – ವ್ಯಕ್ತಿಗಳಾಗಿ ಮತ್ತು ಅದೇ ವೇಳೆ ಸಮುದಾಯವೊಂದರ ಸದಸ್ಯರಾಗಿ. ಎಲ್ಲ ಶ್ರೇಷ್ಠ ಸಾಹಿತ್ಯಗಳ ಶ್ರೇಷ್ಠ ಪಾಠ ಅದೇ.

೩೦೨೦೦೨ ರಂದು ಕೊಲಂಬೊದಲ್ಲಿ ನಡೆದ ಬರಹಗಾರರ ವಾರ್ಷಿಕ ಸಮ್ಮೇಳನದಲ್ಲಿ ಮಾಡಿದ ಭಾಷಣದ ಕನ್ನಡ ರೂಪ.

ಕನ್ನಡಕ್ಕೆ : ವಿ.ಎನ್. ವೆಂಕಟಲಕ್ಷ್ಮಿ. ಕೃಪೆ ; ವಿಜಯ ಕರ್ನಾಟಕ (೧೭೧೧೨೦೦೨)

* * *