ಅಧ್ಯಕ್ಷ ಪದವಿಯ ಈ ಗೌರವವನ್ನು ನಾನು ಬಯಸಿರಲಿಲ್ಲ; ನಿರೀಕ್ಷಿಸಿಯೂ ಇರಲಿಲ್ಲ. ಅಲ್ಲದೆ ಕೊಂಚ ಸೋಮಾರಿಯೂ, ಏನನ್ನಾದರೂ ಬರೆದು ಓದಬೇಕೆಂದರೆ ಹಿಂಜರಿಯುವನೂ, ಜನರೆದುರು ನಿಂತನಿಲುವಿನಲ್ಲಿ ಆಲೋಚಿಸುತ್ತಲೇ ಹೊಳೆದಂತೆ ಮಾತಾಡುವುದರಲ್ಲಿ ಹೆಚ್ಚು ಸುಖ ಕಾಣುವವನೂ ಆದ ನಾನು ಈ ಭಾಷಣವನ್ನು ನನ್ನೊಳಗೇ ಅಂದುಕೊಳ್ಳುತ್ತ, ತಿದ್ದಿಕೊಳ್ಳುತ್ತ, ಆಡಬೇಕೆಂದು ಅನ್ನಿಸುವ ಮಾತುಗಳು ಸಹಸ್ರಾರು ಕನ್ನಡಿಗರಿಗೆ ಎಷ್ಟು ಪ್ರಸ್ತುತವಾದೀತು ಎಂದು ಆತಂಕಪಡುತ್ತ, ಅಧ್ಯಕ್ಷನಾಗಿ ಆಯ್ಕೆಯಾದದ್ದನ್ನು ತಿಳಿದ ದಿನದಿಂದಲೂ ಈಗ ಇಲ್ಲಿ ನಿಮ್ಮೆದುರು ಮಾತಾಡಲು ನಿಂತಿರುವ ಕ್ಷಣವನ್ನು ದಿಗಿಲಿನಲ್ಲಿ ಊಹಿಸಿಕೊಳ್ಳುತ್ತ ಕಳೆದಿದ್ದೇನೆ. ಹೀಗಾಗಿ ನನಗೆ ಸಿಕ್ಕಿರುವ ಈ ಗೌರವ ಅಷ್ಟೇನೂ ಸಂಭ್ರಮಪಡುವ ವಿಷಯವಾಗಲಿಲ್ಲ. ಬದಲಾಗಿ, ನನ್ನನ್ನೇ  ನಾನು ಶೋಧಿಸಿಕೊಳ್ಳುವ ಧ್ಯಾನವಾಯಿತು. ಈ ವೇದಿಕೆಯಿಂದಲೇ ನಮ್ಮ ಕಾಲದ, ಯಾಕೆ ಎಲ್ಲ ಕಾಲದ, ಮಹಾಪುರುಷರಲ್ಲಿ ಒಬ್ಬರಾದ ಮಹಾತ್ಮ ಗಾಂಧೀಜಿಯವರು ನಾನು ಹುಟ್ಟುವುದಕ್ಕಿಂತ ಮುಂಚೆ ಮಾತಾಡಿದ್ದರೆಂದು ತಿಳಿದ ಮೇಲಂತೂ ‘ಶಬ್ದಸೂತಕ’ವಿಲ್ಲದ ನಿಜದ ಮಾತಿಗಾಗಿ ಪರದಾಡುವಂತಾಯಿತು.

ವೈಯಕ್ತಿಕವಾಗಿ ಇನ್ನೂ ಒಂದು ಮಾತನ್ನು ನಾನು ಹೇಳಲೇಬೇಕು. ಹೃದಯದ ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದ, ಮನೆ ಬಿಟ್ಟು ಕದಲಲು ಅಸ್ವಾಭಾವಿಕವಾಗಿ ಅಂಜುತ್ತಿದ್ದ ನನ್ನನ್ನು ಕರ್ನಾಟಕದ ಮುಖ್ಯವಾಹಿನಿಯಲ್ಲಿ ಒಬ್ಬನೆನ್ನುವಂತೆ ಕಂಡು ಇಲ್ಲಿತಂದು ನಿಲ್ಲಿಸಿದ ಪರಿಷತ್ತಿನ ಸದಸ್ಯರಿಗೂ, ತುಮಕೂರಿನ ಮಹಾಜನತೆಗೂ ನಾನು ಋಣಿಯಾಗಿದ್ದೇನೆ. ಆರೋಗ್ಯವಂತನೆಂಬ, ಯಾವ ಔಷಧದಿಂದಲೂ ಸಿಗಲಾರದ, ಭಾವನೆಯನ್ನು ನಿಮ್ಮ ಪ್ರೀತಿ ನನಗೆ ಕೊಟ್ಟಿದೆ.

೧೯೧೫ ರಲ್ಲಿ, ಅಂದರೆ, ಅದೆಷ್ಟೋ ವರ್ಷಗಳ ಹಿಂದೆ ಎಂದು ಈಗ ಭಾವಿಸಿಕೊಳ್ಳಬಹುದಾದ ಕಾಲದಲ್ಲಿ, ಶ್ರೀ ಎಚ್.ವಿ. ನಂಜುಂಡಯ್ಯನವರು ಮಾಡಿದ ಮೊದಲನೆಯ ಭಾಷಣವನ್ನು ಓದುತ್ತಿದ್ದಂತೆ ಅವರು ಸೂಚ್ಯವಾಗಿ ಹೇಳಿರದ ಯಾವ ಹೊಸ ವಿಷಯವೂ ನನಗೆ ಹೇಳಲೇಬೇಕೆನ್ನಿಸುವಂತೆ ಉಳಿದಿಲ್ಲವೆನ್ನಿಸಿತು. ಆಮೇಲಿನ ಎಲ್ಲ ಅಧ್ಯಕ್ಷರ ಭಾಷಣಗಳನ್ನು ಓದುತ್ತ ಹೋದಂತೆ ಕನ್ನಡದ ಬಹು ದೊಡ್ಡದಾದೊಂದು ಪರಂಪರೆಗೆ ವಿನಯದಲ್ಲಿ ತಲೆಬಾಗುವಂತೆ ಆಯಿತು. ನಾನು ಈಗ ಆಡುವ ಕೆಲವು ಮಾತುಗಳು ನನ್ನ ಪೂರ್ವಸೂರಿಗಳು ಸೃಷ್ಟಿಸಿದ ಪರಂಪರೆಗೆ ಸೇರುವಷ್ಟು ಯೋಗ್ಯವಾಗಲಿ ಎಂಬ ಪ್ರಾರ್ಥನಾ ಭಾವದಲ್ಲಿ ನಿಮ್ಮೆದುರು ನಿಂತಿದ್ದೇನೆ. ನನಗಿಂತ ದೊಡ್ಡ ಶಕ್ತಿಯೊಂದು ನನ್ನ ಮೂಲಕ ಮಾತಾಡಬಹುದು ಎಂಬ ನಿರೀಕ್ಷೆಯಲ್ಲೇ ನಾನು ಬರಹಗಾರನಾಗಿರುವುದು; ಇವತ್ತು ನಿಮ್ಮೆದುರು ನಿಂತು ಮಾತಾಡುತ್ತಿರುವುದೂ ಕೂಡ ಅದೇ ನಿರೀಕ್ಷೆಯಲ್ಲಿ.

ಕನ್ನಡದೊಳ್ ಭಾವಿಸಿದ ಜನಪದಂ

ಸಾವಿರ ವರ್ಷಗಳಿಗೂ ಹೆಚ್ಚು ಹಿಂದಿನ ಶ್ರೀವಿಜಯನ ‘ಕವಿರಾಜಮಾರ್ಗ’ದ ಕೆಲವು ವಿಚಾರಗಳು ಇವತ್ತಿಗೂ ಹೇಗೆ ಪ್ರಸ್ತುತವಾಗಿ ಉಳಿದಿವೆ ಎಂಬುದನ್ನು ಗೆಳೆಯ ಸುಬ್ಬಣ್ಣನವರ ಬರಹದಿಂದ ತಿಳಿದು ನಾನು ಮುಂದಿನ ಮಾತುಗಳನ್ನಾಡುತ್ತಿದ್ದೇನೆ. (ನೋಡಿ: ‘ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು’, ಶೆಲ್ಡನ್ ಪೊಲಾಕ್ ಬರೆದಿರುವ ಲೇಖನಗಳು)

ನಮ್ಮ ಜನಪದವು ಕರ್ನಾಟಕ ಪ್ರದೇಶದಲ್ಲಿ ಭವಿಸಿದ್ದು, ಮತ್ತು ಕನ್ನಡತ್ವದಲ್ಲಿ ಭಾವಿಸಿದ್ದು ಎಂಬುದು ಹೆಚ್ಚು ಕಡಿಮೆ ಎಲ್ಲ ಸಮ್ಮೇಳನಾಧ್ಯಕ್ಷರ ಚಿಂತನೆಯ ಹಿಂದಿದೆ ಎನ್ನಬಹುದು. ಮೊದಲೇ ಹೇಳಿಬಿಡಬೇಕೆಂದು ನನಗೆ ಅನ್ನಿಸಿದ ಇನ್ನೊಂದು ವಿಷಯವೆಂದರೆ: ಕವಿರಾಜಮಾರ್ಗಕಾರನ ಕಾಲದಿಂದಲೂ ನಾವು ಈ ಕನ್ನಡತ್ವವನ್ನು ಕಟ್ಟಿಕೊಳ್ಳುತ್ತ ಹೋದದ್ದು ಸಂಘರ್ಷದ ಮಾರ್ಗದಲ್ಲಿ ಅಲ್ಲ; ಅನುಸಂಧಾನದ ಮಾರ್ಗದಲ್ಲಿ ಎಂಬುದು. ಇದು ತುಂಬ ಗಮನಾರ್ಹ ಎಂದುಕೊಂಡಿದ್ದೇನೆ. ಕನ್ನಡಿಗರನ್ನು ಇತರರು ಮೆಚ್ಚುವುದಕ್ಕೂ, ನಮಗೇ ಬೇಸರದಲ್ಲಿ ಕೆಲವೊಮ್ಮೆ ಇದೊಂದು ನಮ್ಮ ದೌರ್ಭಾಗ್ಯವೆಂದು ಅನ್ನಿಸುವುದಕ್ಕೂ ಹಿಂದೆ ಕನ್ನಡದ ತಾಳುವ ಈ ಗುಣವಿದೆ.

ತಮಿಳಿನಂತೆ ಅಲ್ಲದೆ ಕನ್ನಡ ತನ್ನ ಸದ್ಯದ ನುಡಿಗೆ ಅನಗತ್ಯವಾದರೂ ದೇವನಾಗರಿಯ ಎಲ್ಲ ಲಿಪಿಯನ್ನೂ ಉಳಿಸಿಕೊಂಡು ಅನ್ಯಭಾಷೆಗಳ ಮಾತುಗಳನ್ನು ಬಳಸಿಕೊಳ್ಳಲು ಅವಕಾಶಮಾಡಿಕೊಂಡದ್ದರಲ್ಲೇ ಇದನ್ನು ಕಾಣಬಹುದೆಂದು ಸುಬ್ಬಣ್ಣ ಸೂಚಿಸುತ್ತಾರೆ. ತಮಾಷೆಗೆ ಹೇಳುವುದಾದರೆ ಕನ್ನಡದಲ್ಲಿ ಗಾಂಧಿ, ಅದೇ ಮಹಾತ್ಮನಾದ ಗುಜರಾತಿನ ಗಾಂಧಿಯಾಗಿಯೇ ಇದ್ದಾನು: ಕ್ಲಿಂಟನ್ ಕರ್ಕಶನಾಗದೆ ಬಂದುಹೋದಾನು. ದೇಜಗೌರಿಂದ ಒಮ್ಮೆ ನಾನು ಕೇಳಿಸಿಕೊಂಡ ಮಾತಿದು; ಕನ್ನಡದ ಉಕಾರ ಕನ್ನಡದ ಕೊಂಬೇ; ಅದನ್ನು ಲಗತ್ತಿಸಿದರೆ ಯಾವ ಶಬ್ದವಾದರೂ ಕನ್ನಡದ ಶಬ್ದವೇ ಆಗಿಬಿಡುತ್ತದೆ. ಚೇರ್ ಚೇರು ಆದಂತೆ. ನಾವೀಗ ನಡೆಸುತ್ತಿರುವುದು ಕನ್ನಡದ ಕಾನ್ಫರೆನ್ಸು.

ಸಂಘರ್ಷವಾಗದ ಅನುಸಂಧಾನದಲ್ಲಿ ಕವಿರಾಜಮಾರ್ಗಕಾರ ಸಂಸ್ಕೃತದ ಮಾರ್ಗದ ಜೊತೆ ಕನ್ನಡದ ದೇಸಿ ಶಕ್ತಿ ಕಳೆಗುಂದದಂತೆಯೂ, ಗೊಂದಲ ಹುಟ್ಟಿಸುವಷ್ಟು ಅತಿಯಾಗದಂತೆಯೂ, ಪೂರ್ವಕಾಲದ್ದು ಎಂಬ ಗೀಳಿನಿಂದಾಗಿ ಹಳಗನ್ನಡಕ್ಕೆ ಜೋತುಬೀಳದಂತೆಯೂ, ತನ್ನ ನುಡಿಯನ್ನು ಕಟ್ಟಿಕೊಳ್ಳುತ್ತಾನೆ. ಹೀಗೆ ಕಟ್ಟಿಕೊಳ್ಳುವ ಅನುಸಂಧಾನ ಹಿಂದಿರುವ ಪ್ರೇರಣೆಯನ್ನು ನಾನು ಸಾತತ್ಯ ಕೆಡದಂತೆ ಆಧುನಿಕವಾಗುವ ಪ್ರೇರಣೆಯೆಂದರೆ ತಪ್ಪಾಗಲಾರದೆಂದು ತಿಳಿದಿದ್ದೇನೆ. ಕನ್ನಡದ ಹಿರಿಯರೆಲ್ಲರೂ-ಬಿ.ಎಂ.ಶ್ರೀ., ಕುವೆಂಪು, ಕಾರಂತ, ಬೇಂದ್ರೆ, ಅಡಿಗ- ಈ ಎಲ್ಲರೂ ಕವಿರಾಜಮಾರ್ಗಕಾರನ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹಳಗನ್ನಡ ಸಾಹಿತ್ಯದ ಬಗ್ಗೆ ಪ್ರೀತಿ, ಆದರೆ ಅದರ ಶೈಲಿ, ಭಾಷಾ ಪ್ರಯೋಗಗಳು ನಮ್ಮ ಕಾಲಕ್ಕೆ ಸಲ್ಲದೆಂಬ ವಿವೇಕ, ಸಂಸ್ಕೃತದ ಬಗ್ಗೆ ಗೌರವ, ಆದರೆ ಈ ಭಾಷೆ ವರ್ತಮಾನ ಕಾಲದ ಜ್ಞಾನದಾಹವನ್ನು ತೀರಿಸಲಾರದೆಂಬ ಎಚ್ಚರ, ಇಂಗ್ಲಿಷ್ ನಮ್ಮ ಬೆಳವಣಿಗೆಗೆ ಅತ್ಯಗತ್ಯವೆಂಬ ನಂಬಿಕೆ, ಆದರೆ ಇಂಗ್ಲಿಷಿನಿಂದ ನಾವು ಪಡೆಯುವ ಲಾಭವೆಲ್ಲವೂ ನಮ್ಮ ಜನಪದಕ್ಕೆ ಕನ್ನಡದ ಮೂಲಕ ಸಿಗಲೇಬೇಕೆಂದು ಆತಂಕಪೂರ್ಣವಾದ ಛಲ-ಇವು ನಮ್ಮ ಎಲ್ಲ ಹಿರಿಯ ಸಾಹಿರಿಗಳಲ್ಲೂ ಕೆಲಸ ಮಾಡಿವೆ. ಕರ್ನಾಟಕದ ಏಕೀಕರಣದ ಹೋರಾಟದಲ್ಲಿ, ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿಯೂ, ಆಡಳಿತ ಭಾಷೆಯನ್ನಾಗಿ ಮಾಡಬೇಕೆಂಬ ಒತ್ತಾಯದಲ್ಲಿ, ಭಾರತದ ಎಲ್ಲ ಸುಖ ದುಃಖಗಳಲ್ಲೂ ಪಾಲುದಾರರಾಗಿದ್ದು ತಮ್ಮ ವಿಶಿಷ್ಟತೆಯನ್ನು ಉಳಿಸಿಕೊಳ್ಳಬೇಕೆಂಬ ಆತ್ಮಾಭಿಮಾನದಲ್ಲಿ ಕನ್ನಡದ ಚೈತನ್ಯ ಈವರೆಗೂ ತನ್ನ ಕನಸುಗಳನ್ನು ಪ್ರತಿ ಸಮ್ಮೇಳನದಲ್ಲೂ ಪುನರುಚ್ಚರಿಸಿಕೊಂಡು ಬಂದಿದೆ.

ಕನ್ನಡದ ಮೂರು ಹಸಿವುಗಳು

ಅನಗತ್ಯ ಸಂಘರ್ಷದ ಹುಂಬತನಕ್ಕೆ ಎಡೆಗೊಡದಂತೆ, ಅಗತ್ಯವಾದರೆ ಸಂಘರ್ಷಕ್ಕೆ ಹಿಂಜರಿಯದಂತೆ ಕೆಲಸ ಮಾಡುವ ಕನ್ನಡದ ಚೈತನ್ಯದ ಹಿಂದೆ ಇರುವ ಹಸಿವುಗಳಲ್ಲಿ ಮೂರನ್ನು ಮುಖ್ಯವೆಂದು ನಾನು ಭಾವಿಸುತ್ತೇನೆ. ಇದರಲ್ಲಿ ಹೊಸ ಮಾತೇನೂ ಇಲ್ಲ. ಪೂರ್ವಸೂರಿಗಳ ಎಲ್ಲ ಮಾತುಗಳನ್ನೂ ಸಂಗ್ರಹಿಸುವಾಗ ನನಗೆ ಹೊಳೆದದ್ದು ಇದು.

. ಸಮಾನತೆಯ ಹಸಿವು : ನಮ್ಮ ದೇಶ ಉಳಿದ ದೇಶಗಳಿಗೆ ಸಮಾನವಾಗಿ ತಲೆಯೆತ್ತಿ ಬದುಕಬೇಕೆಂಬ ಹಸಿವು ಮಾತ್ರವಲ್ಲದೆ, ನಮ್ಮ ಜನಪದದಲ್ಲಿ ಹಿಂದುಳಿದವರು ನಾಗರಿಕತೆಯ ಸವಲತ್ತುಗಳನ್ನು ಗಳಿಸಿಕೊಳ್ಳಬೇಕೆಂಬ ಹಸಿವು. ದಲಿತರಲ್ಲೂ, ಸ್ತ್ರೀಯರಲ್ಲೂ ಹುಟ್ಟಿರುವ ಸ್ವಾಭಿಮಾನದ ಹಸಿವು. ಇವೇ ಬಂಡಾಯ. ದಲಿತ ಇತ್ಯಾದಿ ಈಚಿನ ಸಾಹಿತ್ಯ ಚಳವಳಿಗಳಲ್ಲಿ ಕಾಣಿಸುವ ಹಸಿವು ಕೂಡ.

. ಆಧ್ಯಾತ್ಮಿಕ ಹಸಿವು : ವಚನಕಾರರಲ್ಲೂ, ಬೇಂದ್ರೆ, ಕುವೆಂಪು, ಪುತಿನರಂತಹ ಕವಿಗಳಲ್ಲೂ ಎದ್ದು ಕಾಣಿಸುವ ಹಸಿವು ಇದು. ಇದು ಮತೀಯವಲ್ಲ; ಕೋಮುವಾದಿಗಳಲ್ಲಿ ಹುಟ್ಟುವ ಹಸಿವು ಖಂಡಿತ ಇದಲ್ಲ. ಆಧುನಿಕತೆಯ ಹಸಿವಿನ ಜೊತೆಗೇ ಈ ಹಸಿವು ಹುಟ್ಟಿಕೊಂಡಾಗ, ಸರ್ವೋದಯದ ಬಯಕೆ ಇದರಲ್ಲಿ ಅಡಗಿದಾಗ ಮತೀಯತೆಯ ಮಿತಿಗಳಿಂದ ಆಧ್ಯಾತ್ಮಿಕತೆ ಮೀರಿ  ನಿಲ್ಲುತ್ತದೆ. ಶಿಶುನಾಳ ಶರೀಫರಿಂದ ಬೇಂದ್ರೆಯವರೆಗೆ, ಈಚೆಗೆ ಎಡಪಂಥೀಯ ನಿಲುವಿನ ಹಲವು ಯುವ ಕವಿಗಳಲ್ಲಿ ಕನ್ನಡದ ದೇಸಿ ಶಕ್ತಿಯನ್ನು ವಿಶ್ವಾತ್ಮಕ ದರ್ಶನದಲ್ಲಿ ತೊಡಗಿಸುವ ಶೋಧವಾಗಿದೆ ಇದು.

. ಆಧುನಿಕವಾಗಬೇಕೆಂಬ ಹಸಿವು : ಬಿ.ಎಂ.ಶ್ರೀ.ಯವರಲ್ಲಿ ಪ್ರತ್ಯಕ್ಷಗೊಂಡು, ನವ್ಯರಲ್ಲಿ ಅಧಿಕವೆನ್ನುವಷ್ಟು ಬೆಳೆದು, ಬೇಂದ್ರೆ, ಕಂಬಾರರಂಥವರಲ್ಲಿ ಸಂಕೀರ್ಣರೂಪ ತಾಳಿ ಎಲ್ಲರಲ್ಲೂ-ನಮ್ಮ ರಾಜಕಾರಣಿಗಳಲ್ಲೂ, ಸುಧಾರಕರಲ್ಲೂ, ‘ತೇಲಿಬರುವ ಜಾಸ್ ಗಾನ/ನಮ್ಮ ಕುಣಿತಕಲ್ಲವೇನ’ ಎಂದುಕೊಳ್ಳುವ ಹೊಸಕಾಲದ ಯುವಕ ಯುವತಿಯರಲ್ಲೂ – ಪ್ರೇರಕ ಶಕ್ತಿಯಾಗಿ ಕೆಲಸ ಮಾಡುವ ಹಸಿವು ಇದು. ತನ್ನ ಶಿಷ್ಯರು ಇಂಗ್ಲಿಷ್ ಭಾಷೆಯಲ್ಲಿ ಚರ್ಚಿಸುವುದನ್ನು ಕೇಳಿಸಿಕೊಳ್ಳುವುದರಲ್ಲಿ ಸಂತೋಷ ಪಡುತ್ತಿದ್ದ ರಾಮಕೃಷ್ಣ ಪರಮಹಂಸರು ತನ್ನ ಕಾಲದ ಈ ಹಸಿವನ್ನು ಗುರುತಿಸಿದ್ದರು ಮಾತ್ರವಲ್ಲ. ಆಳುವ ಬಿಳಿಜನರ ಭಾಷೆಯನ್ನು ಕಲಿತುಬಿಟ್ಟಮೇಲೆ ‘ನೌಕರಿ’ಯಲ್ಲಿ ತಮ್ಮ ಸರ್ವಸ್ವವನ್ನು ಕಂಡುಕೊಳ್ಳುವ ಬಂಗಾಳೀ ಬಾಬಾಗಳ ಒಣಗರ್ವವನ್ನೂ ಮೃದುವಾದ ಹಾಸ್ಯದಲ್ಲಿ ಟೀಕಿಸಬಲ್ಲವರಾಗಿದ್ದರು. ಒಬ್ಬ ಯುವಕನನ್ನು ಕುರಿತು ಅವರು ಆಡಿದ ಮಾತು ನೆನಪಿಗೆ ಬರುತ್ತದೆ; ಓಹೋ, ಅವನು ಇಂಗ್ಲಿಷನ್ನು ಕಲಿತುಬಿಟ್ಟನೋ? ಹಾಗಾದರೆ ಇನ್ನು ಮುಂದೆ ಅವನು ಸಿಳ್ಳೆಹೊಡೆಯುತ್ತ, ಶಬ್ದಮಾಡುವ ಬೂಟ್ಟು ತೊಟ್ಟೇ ಓಡಾಡುವುದು’ ಎಂದಿದ್ದರಂತೆ. ಸಿಳ್ಳೆ ಹೊಡೆಯುತ್ತ ನಡೆದಾಡುವುದರ ನಿರ್ಭಿಡೆಯ ಯುವಸಹಜ ಸೊಕ್ಕಿನಲ್ಲಿ ಇಂಗ್ಲಿಷ್ ಕಲಿಕೆಯಿಂದ ನಾವು ಬಿಡುಗಡೆ ಹೊಂದಬಹುದೆಂಬ ಭ್ರಮೆ ಕೆಲಸ ಮಾಡುವುದನ್ನು ಪರಮಹಂಸರು ಅದೆಷ್ಟು ಮನೋಜ್ಞವಾಗಿ ಚಿತ್ರಿಸಿದ್ದಾರೆ ನೋಡಿ. (ಮೊದಲ ಎರಡು ಹಸಿವುಗಳನ್ನು ಒಳಗೊಳ್ಳದಂತೆ ಬೆಳೆಯಬಹುದಾದ ಈ ಹಸಿವು ಕಳೆದ ಶತಮಾನ ಕೊನೆಯಾಗುತ್ತಿದ್ದಂತೆ ವಿಕಾರಗೊಂಡಿದ್ದನ್ನು ಮುಂದೆ ಚರ್ಚಿಸಲಿದ್ದೇನೆ.)

ಬ್ರಿಟಿಷರು ಆಳುತ್ತಿದ್ದ ಕಾಲದಲ್ಲಂತೂ ಇಂಗ್ಲಿಷ್ ಭಾಷೆಯಲ್ಲಿ ತಜ್ಞರಾಗಬೇಕೆಂಬುದು ಕೇವಲ ಸ್ವಂತ ಉದ್ಧಾರದ ಆಸೆಯಾಗಬಹುದಾಗಿತ್ತು. ಆದರೆ, ಆಶ್ಚರ್ಯವೆಂದರೆ, ಹಾಗಾಗಲಿಲ್ಲ. ಇಂಗ್ಲಿಷ್ ಕಲಿಕೆ ಕೇವಲ ಮೋಹದ, ಅಥವಾ ಸ್ವಾರ್ಥದ ಕಲಿಕೆಯಾಗಲಿಲ್ಲ. ಇಂಗ್ಲಿಷ್ ಭಾಷೆಯನ್ನೇ ನಮ್ಮ ಮಕ್ಕಳ ಮಾತೃಭಾಷೆಯಾಗುವಂತೆ ಯಾಕೆ ಪ್ರಯತ್ನಿಸಬಾರದೆಂದು ತನ್ನ ಒಬ್ಬ ಸ್ನೇಹಿತರು ವಾದಿಸುತ್ತಾರೆ ಎಂದು ಆಶ್ಚರ್ಯದಲ್ಲಿ ಮಾಸ್ತಿಯವರು, ತಮಗೆ ಸಹಜವಾದ ಮೃದು ಮಾತಿನಲ್ಲಿ ಗೇಲಿಮಾಡುತ್ತಾರೆ. (ನೋಡಿ: ಅಧ್ಯಕ್ಷ ಭಾಷಣ, ಸಂ ೧) ಎಲ್ಲೆಲ್ಲೂ ಇಂಗ್ಲಿಷ್ ಮಾಧ್ಯಮದ ಮೋಹ ಹರಡುತ್ತಿರುವ ಈ ವಿಕಾರಗೊಂಡ ಆಧುನಿಕತೆಯ ಕಾಲದಲ್ಲಿ ‘ಆಂಗ್ಲ’ಗೊಳ್ಳುವ ಈ ಪ್ರಯತ್ನ ಹಾಸ್ಯಾಸ್ಪದ ಎನ್ನುವಂತಿಲ್ಲ.

ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಮೆಕಾಲೆಯ ಮಾನಸಪುತ್ರರೂ ಹೀಗೆ ಯೋಚಿಸುತ್ತಿರಲಿಲ್ಲ. ಇದಕ್ಕೆ ಮುಖ್ಯ ಕಾರಣ: ಆಧುನಿಕವಾಗಬೇಕೆಂಬ ತೀವ್ರ ಬಯಕೆಯಲ್ಲೂ ನಮ್ಮ ಎಲ್ಲ ಕನ್ನಡ ಸಾಹಿತಿಗಳಲ್ಲಿ ಕಂಡುಬರುತ್ತಿದ್ದ ಜನಪರ ನಿಲುವು. ತಾವು ಕಲಿತದ್ದನ್ನು ಕನ್ನಡಕ್ಕೆ ಧಾರೆಯೆರೆಯಬೇಕೆಂಬ ರೂಪದಲ್ಲಿ ಆಧುನಿಕತೆಯ ಹಸಿವು-ಈಗ ನಾವು ಸುಲಭದಲ್ಲಿ ತಳ್ಳಿಬಿಡುವ ಮೈಸೂರಿನ ರಾಜಸೇವಾಸಕ್ತರಲ್ಲೂ- ಬೆಳೆದುಕೊಂಡಿತ್ತು. ಅತ್ಯಾಧುನಿಕವಾದ ಐರೋಪ್ಯ ‘ಥಿಯರಿ’ಗಳಿಗೆ ಮನಸೋತ ಎಷ್ಟೋ ಎಡಪಂಥೀಯ ಬುದ್ಧಿಜೀವಿಗಳಲ್ಲಿ ಕೂಡ ಈಚೆಗೆ ಬಹುಜನ ಸಮ್ಮುಖವಾಗಿ ಅವರವರ ಭಾಷೆಗಳಲ್ಲಿ ಕ್ರಿಯಾಶೀಲವಾಗುವ ಶಕ್ತಿ ಕಾಣಿಸುತ್ತಿಲ್ಲ. ಅವರು ನಡೆಸುವ ಸಂವಾದ ಅಂತರರಾಷ್ಟ್ರೀಯ ಮಟ್ಟದಲ್ಲಿ-ತಮ್ಮ ಸಮಾನರಾದ ಇತರ ‘ಥಿಯರೆಟಿಷಿಯನ್‌’ಗಳ ನಡುವೆ. ಇವರ ಕ್ರಾಂತಿ ಜರುಗುವುದು ಸೆಮಿನಾರುಗಳಲ್ಲಿ, ಇವರಲ್ಲಿ ಸೂಕ್ಷ್ಮಜ್ಞರು ತಮ್ಮ ಭಾಷೆಯಲ್ಲಿ ಬರೆಯಲಾರೆವೆಂದು ಸಂಕೋಚಪಡುವುದು ಉಂಟು.

ಜನಭಾಷೆಯಲ್ಲಿ ಹಿಂದಿದ್ದ ಆಸ್ಥೆ ಈಗ ಯಾಕೆ ಸೊರಗಿದೆ? ಸ್ವಾತಂತ್ರ್ಯ ಪ್ರಾಪ್ತಿಯಾದ ಮೇಲೆ, ಕರ್ನಾಟಕದ ಏಕೀಕರಣವಾದಮೇಲಂತೂ ಯಾಕದು ಕಾಣೆಯಾಗುತ್ತಿದೆ? ಎಂಬುದು ಮುಂದೆ ನನ್ನ ಚಿಂತನೆಯ ವಿಷಯವಾಗಲಿದೆ.

ನುಡಿಯನ್ನೂ, ನಾಡನ್ನೂ ಕಟ್ಟಿದವರಲ್ಲಿ ಜಾಗೃತವಾಗಿದ್ದ ಮೂರು ಹಸಿವುಗಳ ಬಗ್ಗೆ ಇನ್ನೊಂದು ಮುಖ್ಯ ಮಾತನ್ನು ಹೇಳಬೇಕು. ಮೂರು ಹಸಿವುಗಳೂ ನಮ್ಮ ಹಿರಿಯರ ಕಲ್ಪನಾ ಶಕ್ತಿಯಲ್ಲಿ – ಯಾವುದೋ ಒಂದು ಒಬ್ಬರಲ್ಲಿ ಹೆಚ್ಚೆಂದೋ, ಇನ್ನೊಬ್ಬರಲ್ಲಿ ಕಡಿಮೆಯೆಂದೋ ಅನ್ನಿಸಿದರೂ ಸಹ-ಒಟ್ಟಾಗಿ ಜಾಗೃತವಾಗಿದ್ದವು. ಕನ್ನಡ ಮಾತಾಡುವ ಜನರ ಮನಸ್ಸು ಅರಳುವುದು, ಅದರ ಬದುಕೂ ಬೆಳಗುವುದು ಕನ್ನಡದ ಮುಖೇನ ಮಾತ್ರ ಸಾಧ್ಯವೆಂದೂ, ಇಂಗ್ಲಿಷಾಗಲೀ ಹಿಂದಿಯಾಗಲೀ ಸಂಸ್ಕೃತವಾಗಲೀ ಈ ಕೆಲಸವನ್ನು ಮಾಡಲಾಗದೆಂದೂ ಎಲ್ಲರೂ ಅರಿತಿದ್ದರು.

ಬಹು ಹಿಂದಿನಿಂದಲೂ ಕನ್ನಡದ ಪರಂಪರೆಯಲ್ಲೇ ಇಂಥ ಸಮತ್ವದ ನಿಷ್ಠೆ ಜಾಗೃತವಾಗಿ ಉಳಿದು ಬಂದಿದೆ. ಪಂಪನಿಗೆ ಮನುಜ ಕುಲ ಒಂದೇ; ಕವಿರಾಜ- ಮಾರ್ಗಕಾರನಿಗೆ ಪರರ ವಿಚಾರಗಳನ್ನೂ, ಮತಧರ್ಮಗಳನ್ನೂ ಸಹನೆಯಿಂದ ನೋಡುವುದು ಬಂಗಾರ; ಕನಕನ ರಾಗಿ ಅಕ್ಕಿ ಜಗಳದಲ್ಲಿ ಕೊನೆಗೆ ಗೆಲ್ಲುವುದು ರಾಗಿಯೇ. ಪ್ರಾಯಶಃ ಪ್ರಪಂಚದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ಬಗ್ಗೆ ಇರುವ ವಿರಳವಾದ ಅದ್ಭುತವಾದ ಅಲಿಗರಿ ಇದು. ಬಸವರಂತೂ ‘ಸ್ಥಾವರಕ್ಕಳಿವುಂಟು/ಜಂಗಮಕ್ಕಳಿವಿಲ್ಲ’ ಎಂದು ಹನ್ನೆರಡನೆಯ ಶತಮಾನದಲ್ಲಿ ವ್ಯವಸ್ಥೆಯ ಕುರುಹಾಗಿ- ಬಿಟ್ಟಿದ್ದ ದೇವಾಲಯಗಳಿಗಿಂತ ಓಡಾಡುವ, ಹುಟ್ಟಿಸಾಯುವ ಮನುಷ್ಯನ ದೇಹ ಹೆಚ್ಚು ಪವಿತ್ರವಾದ್ದು ಎಂದು ತಿಳಿದವರು. ಈ ಬಗೆಯ ಆಯ್ಕೆಗಳಿಗೂ ಜನಜೀವನದ ಅಸ್ತಿತ್ವದ ಭಾಷೆಯನ್ನು ಇಹಕ್ಕೂ ಪರಕ್ಕೂ ಒಟ್ಟಾಗಿ ಆಯುವುದಕ್ಕೂ ಸಂಬಂಧವಿದೆ ಎಂದು ನಾನು ತಿಳಿದಿದ್ದೇನೆ.

ಇದಕ್ಕೆ ಕಾರಣ ತುಂಬ ಸರಳವಾದದ್ದು; ಆದರೆ ಗಾಢವಾದದ್ದು. ಕಂಡು-ಕೊಂಡವರಿಗೆ ವಾದಾತೀತವಾದ ಒಳಗಿನ ಸತ್ಯವಾಗಿ ಭಾಸವಾಗುವಂಥದ್ದು. ಅದೆಂದರೆ ನಾವಿರುವ ಸ್ಥಳವೇ ನಿಜವಾದ ವಿಶ್ವವೆಂಬುದು. ಮಗುವಿನ ತೆರೆದ ಬಾಯಿಯಲ್ಲಿ ತಾಯಿಯ ಯಶೋಧೆಗೆ ಬೆರಗು ಹುಟ್ಟಿಸುವಂತೆ ಕಾಣುವಂಥದು ಈ ವಿಶ್ವಭಾವ. ಕಾರಂತರ ದಕ್ಷಿಣ ಕನ್ನಡ ಜಿಲ್ಲೆ, ಕುವೆಂಪು ಅವರ ಮಲೆನಾಡು, ಬೇಂದ್ರೆಯವರ ಧಾರವಾಡ, ರಾವ್ ಬಹದ್ದೂರರ ಗ್ರಾಮ-ಇವೆಲ್ಲವೂ ಇಡೀ ವಿಶ್ವವನ್ನು ತಮ್ಮೊಳಗೆ ಗರ್ಭೀಕರಿಸಿಕೊಂಡ ಸೋಜಿಗದ ಸ್ಥಳಗಳೇ. ಕವಿರಾಜಮಾರ್ಗಕಾರನ ‘ಕನ್ನಡದೊಳ್ ಭಾವಿಸಿದ ಜನಪದ’ ವಸುಧೆಯ ಒಳಗಿನ ಒಂದು ಕಿರು ಬಿಂದುವಾಗಿದ್ದೂ ತನ್ನ ವಿಶಿಷ್ಟತೆಯನ್ನು ಕಳೆದುಕೊಳ್ಳದಂತೆ ವಸುಧೆಯನ್ನೇ ತನ್ನೊಳಗೆ ಅರಗಿಸಿಕೊಳ್ಳಬಲ್ಲುದು. (ನೋಡಿ: ಸುಬ್ಬಣ್ಣ;೧೪) ಕನ್ನಡತನವನ್ನು ಕಳೆದುಕೊಳ್ಳದಂತೆ ಮಿಲ್ಟನ್, ಶೇಕ್ಸಪಿಯರ್, ವರ್ಡ್ಸ್‌ವರ‍್ತ್, ಲಾರೆನ್ಸ್, ಟಾಲ್‌ಸ್ಟಾಯ್, ಎಲಿಯಟ್-ಎಲ್ಲರನ್ನೂ ಕನ್ನಡ ಲೇಖಕರ ಉಜ್ವಲ ಸಂವೇದನೆಯಲ್ಲಿ ಕನ್ನಡ ಪಡೆದುಕೊಂಡಿತು. ಹಿಂದೆ ಕಾಳಿದಾಸನನ್ನೂ ರಾಮಾಯಣ ಭಾರತಗಳನ್ನೂ ಪಡೆದುಕೊಂಡಂತೆ. ಉಪನಿಷತ್ತಿನ ಸಾರವನ್ನು ವಚನಗಳಲ್ಲಿ ಪಡೆದು ಬೆಳಸಿಕೊಂಡಂತೆ. ಭಾರತದ ಒಂದು ಮೂಲೆಯಲ್ಲಿದ್ದ ಅಲ್ಲಮ ಇಡೀ ಭಾರತದ ತತ್ವ ಚಿಂತನೆಯನ್ನು ತನ್ನ ರೂಪಕ ಪ್ರತಿಭೆಯ ವಾಗ್ವಾದದಲ್ಲಿ ಹೇಗೆ ಬೆಳೆಸಿ ಬಳಸುತ್ತಾನೆಂಬುದನ್ನು ಗತಿಸಿದ ಗೆಳೆಯ ಡಿ.ಆರ್. ನಾಗರಾಜರು ತಮ್ಮ ಆಚಾರ್ಯಕೃತಿಯಾದ ‘ಅಲ್ಲಮ ಮತ್ತು ಶೈವ ಪ್ರತಿಭೆ’ಯಲ್ಲಿ ಚಿತ್ರಿಸಿದ್ದಾರೆ.

ಈಗ ನೀವು ಅಮೆರಿಕದ ಯೂನಿವರ್ಸಿಟಿಯಲ್ಲಿ ಯಾವನೋ ಒಬ್ಬ ವಿದ್ಯಾರ್ಥಿಯನ್ನು ಸಂದರ್ಶಿಸಿ ಅವನಿಗೆ ಕಾಳಿದಾಸ ಗೊತ್ತೇ ಎಂದರೆ ಪ್ರಾಯಶಃ ಗೊತ್ತಿರುವುದಿಲ್ಲ. ಅವನು ಸಂಸ್ಕೃತದ ವಿದ್ಯಾರ್ಥಿಯಾಗಿದ್ದಲ್ಲಿ ಮಾತ್ರ ಗೊತ್ತಿರುತ್ತದೆ. ಆದರೆ ನಮ್ಮ ನಾಡಿನ ಯಾವುದೋ ಒಂದು ಪಟ್ಟಣದಲ್ಲಿ ಓದುವ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಶೇಕ್ಸ್‌ಪಿಯರ್ ಯಾರೆಂದು ಖಂಡಿತ ಗೊತ್ತಿರುತ್ತದೆ. ಬಡತನದ ಮೂರನೆಯ ಜಗತ್ತಿಗೆ ಭಾಗ್ಯಶಾಲಿಯಾದ ಮೊದಲ ಜಗತ್ತಿನ ಸಾಂಸ್ಕೃತಿಕ ಸಾಧನೆ ಗೊತ್ತಿರುತ್ತದೆ; ಆದರೆ ಅದರ ರಾಜಕಾರಣ, ಮಾರುಕಟ್ಟೆಯ ವಹಿವಾಟುಗಳು ತಿಳಿದಿರುವುದಿಲ್ಲ. ಅವರ ಚರಿತ್ರೆಯೂ ತಿಳಿದಿರುವುದಿಲ್ಲ. ಸಾಂಸ್ಕೃತಿಕವಾಗಿಯೂ ವೈಜ್ಞಾನಿಕವಾಗಿಯೂ ಬಹಳ ಎತ್ತರಕ್ಕೇರಿದಂತೆ ತೋರುವ ಪಾಶ್ಚಿಮಾತ್ಯರು ಹೇಗೆ ಕ್ರಿಶ್ಚಿಯನ್ ಮತದ ಉದಾತ್ತ ತತ್ವಗಳನ್ನು ಬಳಸಿಕೊಂಡೇ, ತಮ್ಮ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡೇ, ಮುಗ್ಧರೂ, ಪ್ರಕೃತಿಯ ಆರಾಧಕರೂ, ಜೀವಜಾಲವಾದ ಈ ಜಗತ್ತಿನ ಗ್ರಹಿಕೆಯಲ್ಲಿ ಐರೋಪ್ಯರಿಗಿಂತ ಹೆಚ್ಚು ಸೂಕ್ಷ್ಮರೂ ಆಗಿದ್ದ ಅಮೆರಿಕಾದ ಮುಲನಿವಾಸಿಗಳನ್ನೂ, ಆಸ್ಟ್ರೇಲಿಯಾದ ಮೂಲನಿವಾಸಿಗಳನ್ನೂ ಮೋಸದಿಂದ ಸೋಲಿಸಿ, ಅವರ ಗಾಢವಾದ ಧಾರ್ಮಿಕ ಆಚರಣೆಗಳನ್ನು ನಾಶಮಾಡಿ, ಅವರನ್ನು ಸ್ವಂತದ ಭಾಷೆಯಿಲ್ಲದ ಮೂಕರನ್ನಾಗಿಸಿ, ಮನುಕುಲದ ಚರಿತ್ರೆಯಿಂದಲೇ ಹೊರಗಿಟ್ಟರು ಎಂಬುದನ್ನು ನಾವು ಅರಿಯದೆ ಪಾಶ್ಚಿಮಾತ್ಯರ ಸಾಧನೆಯನ್ನು ಕೊಂಡಾಡುತ್ತೇವೆ.

ಬಹು ಭಾಷೆಗಳಲ್ಲೂ, ಬಹು ದೇವ ದೇವಿಯರ ಆರಾಧನೆಯಲ್ಲೂ, ಬಹು ರುಚಿಗಳಲ್ಲೂ, ಜೊತೆಗೇ ವಿಶಿಷ್ಟವಾದೊಂದು ನಾಗರಿಕತೆಯ ಜೀವನದೃಷ್ಟಿಯ ಏಕತೆಯಲ್ಲೂ ಸಾವಿರಾರು ವರ್ಷಗಳಿಂದ ಬದುಕಿ ಉಳಿಯಲು ಕಲಿತಿದ್ದ ಭಾರತವನ್ನು ಮಾತ್ರ ಅವರಿಗೆ ಐರೋಪ್ಯಗೊಳಿಸಲಾಗಲಿಲ್ಲ. ತಮ್ಮ ಜೀವನಕ್ರಮದ ಏಕತಾನತೆಯಿಂದ ಕೆಲದಿನಗಳ ಮಟ್ಟಿಗಾದರೂ ತಪ್ಪಿಸಿಕೊಳ್ಳಲು ಯತ್ನಿಸುವ ಈ ಪಾಶ್ಚಿಮಾತ್ಯರಿಗೆ ನಮ್ಮ ಸಂಸ್ಕೃತಿಯ ಅರಿವು ಟೂರಿಸ್ಟ್ ಮಟ್ಟದ್ದಾಗಿ ಮಾತ್ರ ಇರುತ್ತದೆ. ನಾನಿಲ್ಲಿ ಎಕ್ಸ್‌ಪರ್ಟ್‌ಗಳ ಬಗ್ಗೆಯಾಗಲೀ, ಭಾರತವನ್ನು ನಿಜವಾಗಿ ಪ್ರೀತಿಸಬಲ್ಲ ಸೂಕ್ಷ್ಮಜ್ಞರ ಬಗ್ಗೆಯಾಗಲೀ ಮಾತಾಡುತ್ತಿಲ್ಲ.

ತಾತ್ಪರ್ಯದಲ್ಲಿ ನಾನು ಹೇಳಲು ಪ್ರಯತ್ನಿಸುತ್ತಿರುವುದು ಇಷ್ಟು; ನಾವು ಕನ್ನಡಿಗರು, ನಾವಿರುವ ಸ್ಥಳದಲ್ಲೇ ಜಗತ್ತನ್ನು ಪಡೆದುಕೊಳ್ಳುವಂತೆ ಕವಿರಾಜ ಮಾರ್ಗಕಾರನ ಕಾಲದಿಂದ ಸಾವಿರ ವರ್ಷದಷ್ಟು ಕಾಲ ಬೆಳೆದುಬಂದೆವು. ಜಾಗತೀಕರಣದ ಈ ದಿನಗಳಲ್ಲಿ ಜಗತ್ತೇ ಸ್ಥಳವಾಗಿಬಿಡುತ್ತದೆಂಬ ಭ್ರಾಂತಿಯನ್ನು ಬೆಳೆಸುವ ಸಂಚು ನಡೆದಿದೆ. ಜಾಗತೀಕರಣವೆಂದರೆ ನಿಜದಲ್ಲಿ ಅಮೆರಿಕೀಕರಣ. ನಾವೆಲ್ಲರೂ ಒಂದು ಮಾರುಕಟ್ಟೆಯಾಗಿ ಮುಂದುವರಿದ ರಾಷ್ಟ್ರಗಳಿಗೆ ಒದಗಿ, ನಮ್ಮ ಪರಿಸರವನ್ನು ನಾಶಮಾಡಿಕೊಂಡು, ಕುದುರೆಮುಖದ ಜೀವಜಾಲಸಂಪನ್ನ ಬೆಟ್ಟಗಳ ಅದಿರನ್ನು ಇರಾನಿಗೋ, ಜಪಾನಿಗೋ ಮಾರಿ, ನದಿಗಳನ್ನು ಚರಂಡಿಗಳಾಗಿ ಪರಿವರ್ತಿಸಿ, ವರ್ಲ್ಡ್‌‌ಬ್ಯಾಂಕ್‌ಸರ್ಟಿಫಿಕೇಟ್ ಪಡೆದು ಬೀಗಿ, ನಮ್ಮ ಭಾಷೆಗಳನ್ನು ಕಳೆದುಕೊಂಡು, ನಮ್ಮ ರಾಜಕಾರಣವನ್ನು ಅನ್ಯರ ಆದೇಶದಂತೆ ನಡೆಸಿಕೊಳ್ಳುತ್ತ ಕನ್ಸೂಮರ್ ಸ್ವರ್ಗದಲ್ಲಿ ಕೆಲವು ಕಾಲವಿದ್ದು ಮುಂದೊಂದು ದಿನ ಅಜೇಂಟೈನಾದಂತೆ ಆಗುವುದು. ಇರುಳು ಕಂಡ ಬಾವಿಯಲ್ಲಿ ಹಗಲು ಬೀಳುವುದು.

ಒಟ್ಟಿನಲ್ಲಿ ಹೇಳಬೇಕಾದ ಮಾತಿದು: ಜಾಗತೀಕರಣದ ಈ ದಿನಗಳಲ್ಲಿ ವಿಶ್ವವೇ ಒಂದು ಹಳ್ಳಿಯಾಗುತ್ತಿದೆಯೆಂಬ ಉತ್ಸಾಹವನ್ನೂ ಭರವಸೆಯನ್ನೂ ಸಾಮಾನ್ಯ ಮುಗ್ಧರಲ್ಲಿ ಹುಟ್ಟಿಸುವ ಪ್ರಚಾರ ನಡೆಯುತ್ತಿದೆ. ದೊಡ್ಡಸ್ಥಾನದಲ್ಲಿ ಇರುವವರೊಬ್ಬರು ಒಮ್ಮೆ ನನಗೆ ಹೇಳಿದ್ದರು ‘ಆಫ್ರಿಕಾದಲ್ಲಿ ಜನ ಹಸಿದು ಸಾಯುತ್ತಿದ್ದಾರೆಂದು ನಮ್ಮ ಅಂತಃಕರಣ ಈಗ ಮಿಡಿಯಲು ಸಾಧ್ಯವಾಗಿರುವುದು ಜಾಗತೀಕರಣ ತಂದಿರುವರಿವಿನಿಂದ ಅಲ್ಲವೆ?’ ಈ ಹಿರಿಯ ಅರ್ಥಶಾಸ್ತ್ರಜ್ಞರಿಗೆ ನಾನು ವಿನದಯಲ್ಲಿ ಸೂಚಿಸಿದೆ; ‘ಅವರು ಹಸಿದು ಸಾಯುತ್ತಿರುವುದಕ್ಕೂ ಜಾಗತೀಕರಣದ ಶೋಷಣೆ ಕಾರಣವಾಗಿರಬಹುದಲ್ಲವೆ?’ ನನ್ನದು ವಿತಂಡವಾದವಾಗಿ ಅವರಿಗೆ ತೋರಿರಬೇಕು.

ಇರಲಿ. ಇದು ಸದ್ಯ ಹಲವರಲ್ಲಿ ಶಕ್ತಿಯುತವಾಗಿ, ಆಶಾದಾಯಕವಾಗಿ ಮಿಡಿಯುತ್ತಿರುವ ಭ್ರಮೆ. ಗಾಂಧೀಜಿಯ ಭಾರತವೂ ಮಾವೋನ ಚೀನವೂ ಈ ಭ್ರಮೆಯ ಬೆನ್ನು ಹತ್ತಿದೆ. ಶ್ರೀಮಂತರಾಷ್ಟ್ರಗಳು ತಮ್ಮ ಲಾಭಕ್ಕಾಗಿ ನಮ್ಮ ಮೇಲೆ ಹೇರುವ ಜಾಗತೀಕರಣದಿಂದಾಗಿ ನಾವು ಎಲ್ಲೂ ಊರದವರಾಗಿ, ಊರೇ ಇಲ್ಲದವರಾಗಿ ಅನಾಥರಾಗುತ್ತಿದ್ದೇವೆ ಅಷ್ಟೆ. ಎಲ್ಲ ವಸ್ತುಗಳೂ, ವಿಚಾರಗಳೂ ಎಲ್ಲೆಲ್ಲೂ ದೊರಕುವ, ದೂರಗಳೇ ಅಪ್ರಸ್ತುತವಾಗಿಬಿಡುವ ಟೆಲಿವಿಷನ್ನಿನ ಗ್ಲಾಮರಿನ ಈ ವಿಶ್ವವೇ ಹಳ್ಳಿಯಾಗುತ್ತದೆ ಎಂಬ ಈಗಿನ ಸುಳ್ಳಿನ ಬದಲಾಗಿ ಹಿಂದೆ ಇರುವ ಹಳ್ಳಿಯೇ ವಿಶ್ವವಾಗಿರುತ್ತಿತ್ತು.

ಜನಪರವಾದ ಸಮಾನತೆಯ ಹಸಿವು ಮತ್ತು ಆತ್ಮಸಾಕ್ಷಾತ್ಕಾರದ ಆಧ್ಯಾತ್ಮಿಕ ಹಸಿವಿನಿಂದ ಹೊರತಾಗಿ ಆಧುನೀಕರಣದ ಹಸಿವು ಬೆಳೆದರೆ ಏನಾಗಬಹುದೆಂಬುದನ್ನು ಈ ದಿನಗಳಲ್ಲಿ ನಾವು ನೋಡುತ್ತಿದ್ದೇವೆ. ನಮ್ಮ ನಡುವಿನ ಪ್ರತಿಭಾವಂತ ಲೇಖಕರಲ್ಲಿ ಕೆಲವರು ಈ ಸಾಹಿತ್ಯ ರಚನೆಯನ್ನೂ ರಫ್ತಿಗಾಗಿ ಇಂಗ್ಲಿಷಿನಲ್ಲೇ ಮಾಡುತ್ತಾರೆ. ಎಂಬುದೂ, ಇಡೀ ವಿಶ್ವದಲ್ಲೇ ಇನ್ನೆಲ್ಲೂ, ಮಾರುಕಟ್ಟೆಯನ್ನು ಪರದೇಶಗಳಲ್ಲಿ ಹುಡುಕುವ ಉದ್ಯಮಶೀಲರಾಗಿಬಿಟ್ಟ ಇಂಥ ನುರಿತ ಲೇಖಕರು ಇಲ್ಲವೆಂಬುದೂ ಗಮನಿಸಬೇಕಾದ ವಿಷಯವಾಗಿದೆ. ಭಾರತೀಯ ಭಾಷೆಗಳಲ್ಲಿ ಉತ್ತಮ ಸಾಹಿತ್ಯವೇ ಇಲ್ಲವೆಂದೂ, ಇರುವುದೆಲ್ಲಾ ತನ್ನ ನನಗೆ ಬರೆಯುವ ಭಾರತಾಂಗ್ಲರ ಬರವಣಿಗೆ ಎಂದೂ ಹೇಳಿದ ಲೇಖಕನೊಬ್ಬ ಪಾಶ್ಚಾತ್ಯ ವಿಮರ್ಶಕರ, ಪ್ರಕಾಶಕರ ಕಣ್ಮಣಿಯಾಗಿದ್ದಾನೆ.

ಆಧುನಿಕವಾಗಬೇಕೆಂಬ ಬಯಕೆ ಕನ್ನಡವನ್ನು ಮೂಲೆಗೊತ್ತುವ ಪ್ರೇರಣೆಯಾಗುತ್ತಿರುವ ಈ ಸಂದರ್ಭದಲ್ಲಿ ಯಾವ ಅನುಸಂಧಾನದ ಮುಖೇನ ನಾವು ಕನ್ನಡವನ್ನು ಉಳಿಸಿಕೊಂಡು ಬೆಳೆಸಬಹುದಾಗಿದೆ ಎಂಬುದನ್ನು ಶೋಧಿಸಿಕೊಳ್ಳಲೆಂದು ಒಬ್ಬ ಲೇಖಕನಾಗಿ ನನ್ನಲ್ಲೇ ಕೆಲಸಮಾಡಿದ ಆಧುನಿಕತೆಯ ಈವರೆಗಿನ ಪ್ರೀತಿಯನ್ನು ವಿಶ್ಲೇಷಿಸಿಕೊಳ್ಳಬಯಸುತ್ತೇನೆ. ಇದು ಆತ್ಮ ಕಥನವೇ ಹೊರತು ನಾನು ಬೆಳೆದ ಕಾಲದ ಒಟ್ಟು ಕನ್ನಡದ ಕಥನವಲ್ಲ.

ನನ್ನ ಇಂಗ್ಲಿಷ್, ನನ್ನ ಕನ್ನಡ

ನಾನು ಓದಿದ ತೀರ್ಥಹಳ್ಳಿ ಮಿಡ್ಲ್‌ಸ್ಕೂಲಿನಲ್ಲಿ ಕುವೆಂಪು ವಿದ್ಯಾರ್ಥಿಯಾಗಿದ್ದ ದಿನಗಳನ್ನು ನೆನಪುಮಾಡಿಕೊಂಡು ಅವರ ತುಂಟಾಟಗಳನ್ನು ರಸವತ್ತಾದ ಕಥೆಗಳನ್ನಾಗಿ ಮಾಡಿ ನಮ್ಮನ್ನು ರಂಜಿಸುತ್ತಿದ್ದ ನಮ್ಮೆಲ್ಲರ ಹೀರೋ ಅರೆಕೊಪ್ಪನೆಂಬುವನೊಬ್ಬ ಈಗಲೂ ಕಣ್ಣಿಗೆ ಕಟ್ಟುತ್ತಾನೆ. ಹುಲುಸಾಗಿ ಬೆಳೆದ ಮೀಸೆಯನ್ನು ಹುರಿಮಾಡಿ ಮೇಲಕ್ಕೆತ್ತರಿಸಿ, ಕಪ್ಪುಟೋಪಿ ಹಾಕಿರುತ್ತಿದ್ದ ಈತ ನಮಗೆ ಕುವೆಂಪು ಕಥೆ ಹೇಳಿ ಮಾತ್ರ ಹೀರೋ ಆದದ್ದಲ್ಲ; ಹಾವನ್ನು ಬರಿಗೈಯಲ್ಲಿ ಅದರ ಬಾಲದಿಂದ ಅನಾಮತ್ತಾಗಿ ಹಿಡಿದೆತ್ತಿ, ಗರಗರನೆ ಗಾಳಿಯಲ್ಲಿ ಬೀಸಿ ನಮ್ಮಬಾಯಿಗಳು ಗಾಬರಿಯಲ್ಲೂ ಮೆಚ್ಚುಗೆಯಲ್ಲೂ ತೆರೆಯುವಂತೆ ಮಾಡುತ್ತಿದ್ದ. ಮಳೆಗಾಲದಲ್ಲಿ ನಮ್ಮ ಕೊಡೆಗಳನ್ನು ಮುಚ್ಚಿಟ್ಟು ಕಾಡಿಸಿ ಕೊಡುತ್ತಿದ್ದ.

ಅದೇ ನಮ್ಮ ತುಂಗಾನದಿಯ ಆಚೆದಡದಲ್ಲಿರುವುದೇ ಬೊಮ್ಮನಹಳ್ಳಿ. ಶೇಷಕ್ಕನ ಫಣಿವೇಣಿ ‘ಬೆಳಗಾಗೇಳುತ ಕನ್ನಡಿ ನೋಡಲು’ ನುಣ್ಣಗಾದದ್ದು ಅಲ್ಲೇ; ಕಿಂದರಿಜೋಗಿಯ ಕಥೆ ನಡೆದದ್ದು ಅಲ್ಲೇ- ಎಂದುಕೊಂಡು ನಮ್ಮ ವಾಸ್ತವಲೋಕದಲ್ಲೇ ನಮ್ಮ ಕಲ್ಪನೆಯ ಸಾಮ್ರಾಜ್ಯವನ್ನೂ ನಾವು ಕಂಡುಕೊಳ್ಳುತ್ತಿದ್ದೆವು. ಮುಂದಿನ ದಿನಗಳಲ್ಲಿ ಹೂವಯ್ಯ ರಾಮಯ್ಯರು ನಮ್ಮ ಮಗ್ಗುಲಿಗಿಲ್ಲದೆ ನಾವು ತುಂಗೆಯ ಕಲ್ಲು ಸಾರವನ್ನು ದಾಟಿದ್ದಿಲ್ಲ.

ಹೈಸ್ಕೂಲಿಗೆ ಬಂದಮೇಲೆ ಸೊಹ್ರಾಬ್ ರುಸ್ತುಂ ಮೇಲೆ ಪದ್ಯ ಬರೆದಿದ್ದ ಪಂಡಿತ ನರಸಿಂಹ ಶಾಸ್ತ್ರಿಗಳು ನಮ್ಮಲ್ಲಿ ಕಾವ್ಯದ ರುಚಿ ಬೆಳೆಸಿದರು. ಚಿಕ್ಕವಯಸ್ಸಲ್ಲೇ ಗತಿಸಿದ ನನ್ನೊಬ್ಬ ಮಿತ್ರ ಕೃಷ್ಣಮೂರ್ತಿಭಟ್ಟ-ಬೇಂದ್ರೆ, ಕುವೆಂಪು ಅವರ ಕವನಗಳನ್ನು ಮೈನವಿರೇಳುವಂತೆ ಭಾವವಶನಾಗಿ ಹಾಡುತ್ತಿದ್ದ. ಸಾಹಿತ್ಯ ಪ್ರೇಮಿಯಾಗಿದ್ದ ನಮ್ಮ ಸ್ಕೂಲಿನ ಒಡನಾಡಿ ಹಾ. ಮಾ. ನಾಯಕರು ಬೇಂದ್ರೆಯವರನ್ನು ಕರೆಸಿದ್ದು ನೆನಪಾಗುತ್ತದೆ. ಕವಿ ಬೇಂದ್ರೆಯವರು ಕನ್ನಡಿಯ ಎದುರು ಕೂತು ಮುಖ ಕ್ಷೌರಮಾಡಿಕೊಳ್ಳುತ್ತ ‘ಇದು ಮಂದಿಗಾಗಿ’ ಎಂದು ತನ್ನ ಶೋಕಿಯನ್ನು ವರ್ಣಿಸಿಕೊಂಡಿದ್ದು ಕಣ್ಣಿಗೆ ಕಟ್ಟುತ್ತದೆ. ಮೈಕ್ ಇರದ ನಮ್ಮ ಶಾಲೆಯ ಅಂಗಳದಲ್ಲಿ ನಿಂತು ಅವರು ಬೆಳಗನ್ನೇ ಸಾಕ್ಷಾತ್ಕರಿಸಿ ತೋರುವಂತೆ ಕೈಗಳನ್ನು ಕಾಶದಲ್ಲಿ ಆಡಿಸುತ್ತ ‘ಬೆಳಗು’ ಕವನವನ್ನು ಓದಿದ್ದನ್ನಂತೂ ಮರೆಯಲಾರೆ. ಕಾವ್ಯದ ಮಾಂತ್ರಿಕ ಶಕ್ತಿಯನ್ನು ನನ್ನ ಅನುಭವಕ್ಕೆ ತಂದ ಕ್ಷಣ ಅದೇ ಇರಬೇಕು. ಸಾಹಿತ್ಯದ ಅನುಭವ ಮಾತ್ರವಲ್ಲ; ಗುಡ್ಡಕಾಡುಗಳ ನಡುವೆ ಹುಲಿಗಳು ಸಂಚರಿಸುತ್ತಿದ್ದ ಮಲೆನಾಡಿನ ಶಾಲೆಯಲ್ಲಿದ್ದು ನಾವು ಮೈಸೂರಿನ ವಿಶ್ವವಿದ್ಯಾಲಯದಿಂದ ಬಂದವರೊಬ್ಬರಿಂದ ಡಾರ್ವಿನ್ನಿನ ಸಿದ್ಧಾಂತ ಕೇಳಿಸಿಕೊಂಡು ಬೆರಗಾಗಿದ್ದೆವು.

‘ಕಾನೂರು ಹೆಗ್ಗಡತಿ’ ಓದಿದ ಮೇಲೆ ನನ್ನ ಮಡಿವಂತ ಮನೆಯಲ್ಲೇ ಮಳೆಬಿದ್ದ ಮಣ್ಣಿನ ವಾಸನೆ, ಹುರಿದ ಮೀನು, ಹೆಂಡದ ವಾಸನೆಗಳನ್ನು ಅನುಭವಿಸಿದ್ದೆ. ಅಂತೆಯೇ ಮುಂದಿನ ದಿನಗಳಲ್ಲಿ ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಇಣುಕುವ ಸೂರ್ಯೋದಯ ಬರಿ ಬೆಳಕಾಗಿ ನನಗೆ ಉಳಿಯಲಿಲ್ಲ.

ತುಂಗಾ ತೀರಿದ ಅಗ್ರಹಾರದಿಂದ ನಿತ್ಯ ನಡೆದು ಸ್ಕೂಲಿಗೆ ಬಂದು ಹೋಗುತ್ತಿದ್ದ ನನ್ನಲ್ಲಿ ಕನ್ನಡದ ಓದು ಆ ದಿನಗಳಲ್ಲಿ ಹುಟ್ಟಿಸಿದ ಪ್ರಜ್ಞೆ ಇವತ್ತಿಗೂ ಮುಖ್ಯವಾಗಿ ಉಳಿದಿದೆ. ಕಾರಂತರ ‘ಚೋಮನದುಡಿ’ ಓದಿದ ನಾನು ಮಡಿವಂತ ಪರಿಸರದ ಎಲ್ಲ ನಡಾವಳಿಯನ್ನೂ ನನ್ನೊಳಗೇ ಪ್ರಶ್ನಿಸಲು ತೊಡಗಿದೆ. ಕನ್ನಡದಿಂದ ಪಡೆಯುತ್ತಿದ್ದ ಈ ಹೊಸ ಪ್ರಜ್ಞೆಯ ಹಿಂದೆ ನಮ್ಮ ಪರಂಪರೆಯಲ್ಲೇ ಹುಟ್ಟಿಕೊಂಡ ಬಸವ ಬುದ್ಧರಂಥವರ ಕ್ರಾಂತಿಕಾರಕ ವಿಚಾರಗಳಿಗಿಂತ ಮಿಗಿಲಾಗಿ, ಇಂಗ್ಲಿಷ್ ಆಳ್ವಿಕೆ ತಂದಿದ್ದ ಆಧುನಿಕತೆ ಕೆಲಸ ಮಾಡುತ್ತಿತ್ತು. ಜೊತೆಗೇ ಗಾಂಧೀಜಿಯವರ ವಿಚಾರಗಳೂ ಹಿನ್ನೆಲೆಗಿದ್ದವು. ಕಾಣದಂತಹ ಜುಟ್ಟನ್ನೂ, ಎದ್ದುಕಾಣುವ ಹಾಗೆ ಕ್ರಾಪನ್ನೂ ಬಿಟ್ಟ, ಆಚಾರದಲ್ಲಿ ಮಡಿವಂತರಾದರೂ ವಿಚಾರದಲ್ಲಿ ದಿಟ್ಟರಾದ, ಸ್ವಂತ ಪರಿಶ್ರಮದಿಂದ ವಿದ್ಯಾವಂತರಾಗಿದ್ದ ನನ್ನ ತಂದೆಯವರು ಗಾಂಧಿಯವರ ಹರಿಜನ ಪತ್ರಿಕೆಯನ್ನು ತರಿಸಿಕೊಂಡು ಓದಿ ಹೇಳುತ್ತಿದ್ದರು; ಹಳ್ಳಿಯ ಅವರ ಮಿತ್ರರು ಮಹಾತ್ಮರ ವಿಚಾರದಿಂದ ದಿಗ್ಬ್ರಾಂತರಾಗುತ್ತಿದ್ದರು. ಪೂರ್ವ-ಪಶ್ಚಿಮಗಳ ಆಚಾರ ವಿಚಾರಗಳ ದ್ವಂದ್ವದಲ್ಲಿದ್ದ ನನ್ನ ತಂದೆಯವರು ನನಗೆ ಉಪನಯನ ಮಾಡಿದ ಬಳಿಕ ಹೆಚ್ಚು ಉತ್ಸಾಹ ತೋರಿಸಿದ್ದು ನಾನು ಪುರುಷಸೂಕ್ತವನ್ನು ಬಾಯಿಪಾಠ ಮಾಡುವುದರಲ್ಲಿ ಅಲ್ಲ; ಎಡ್ಮಂಡ್ ಬರ‍್ಕನ Impeachment of Warren Hastings ಎಂಬ ಸುದೀರ್ಘ ಭಾಷಣವನ್ನು ಉರುಹಚ್ಚುವುದರಲ್ಲಿ. ಇಂಗ್ಲಿಷ್ ಜನರ ನ್ಯಾಯಪರತೆಗೆ ಈ ಭಾಷಣ ಕುರುಹಾಗಿ ಕಾಣುತ್ತಿತ್ತೆಂಬುದೂ, ನಮ್ಮ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬ್ರಿಟಿಷರ ಆಳ್ವಿಕೆಯಿಂದ ಉದ್ಭವಿಸಿದ ಶೋಷಣೆಯಿಂದ ನಾವು ವಿಚಲಿತರಾಗುವುದರ ಜೊತೆಗೇ, ಅದು ತರುತ್ತಿದ್ದ ಆಧುನಿಕತೆ ನಮ್ಮನ್ನು ಸಂಪ್ರದಾಯಗಳ ಇಕ್ಕಟ್ಟುಗಳಿಂದ ಪಾರುಮಾಡುವಂತೆಯೂ ಕಂಡು ನಾವು ಅದನ್ನು ಆದರಿಸುತ್ತಿದ್ದುವೆಂಬುದೂ ನನ್ನ ಬೆಳವಣಿಗೆಯಲ್ಲೇ ನನ್ನ ಅನುಭವಕ್ಕೆ ಬಂದ ವಿಷಯಗಳು. ಲೌಕಿಕವಾಗಿ ಪಶ್ಚಿಮದ (ಈಗ ಅಮೆರಿಕದ) ಪರವಾಗಿಯೂ, ಪಾರಮಾರ್ಥಿಕ ವಿಷಯಗಳಲ್ಲಿ ಸನಾತನಿಗಳಾಗಿಯೂ ನಾವು ಇಂದಿಗೂ ಉಳಿದುಬಿಟ್ಟಿದ್ದೇವೆ ಎಂಬುದು ಬಸ್ಸು, ರೈಲು ಪ್ರಯಾಣಗಳಲ್ಲಿ ಅಪರಿಚಿತರ ಜೊತೆಗಿನ ಹರಟೆಗಳಲ್ಲೂ ಪ್ರತ್ಯಕ್ಷವಾಗುವ ಸಂಗತಿ.

‘ಚೋಮನ ದುಡಿ’ಯ ನಂತರ ನಾನು ಓದಿದ ಎಲ್ಲ ಕಾದಂಬರಿಗಳು ನನ್ನ ನಿತ್ಯದ ಪರಿಸರವನ್ನೇ ವಿಚಿತ್ರವಾದ ಶೋಭೆಯಲ್ಲಿ ತೊಯ್ದದ್ದನ್ನಾಗಿ ಮಾಡಿತು. ಯಾರನ್ನೂ ಕೇವಲ ಇಂಥ ಜಾತಿಯವನೆಂದೋ, ಕುಲದವನೆಂದೋ ಮಾತ್ರ ಗುರುತಿಸದೆ, ಅವರವರ ಅಂತರಂಗದಲ್ಲಿ ಗಹನವಾದ ಭಾವನೆಗಳನ್ನು ಅಡಗಿಸಿಕೊಂಡವರೆಂದು ಕಾಣುವಂತೆ ಮಾಡಿತು; ಜೊತೆಗೇ ನನ್ನ ಪರಿಸರದಲ್ಲಿ ಪವಿತ್ರವೆಂದು ಕಾಣುವ ದೈವಗಳನ್ನೂ, ಅವುಗಳ ಸುತ್ತ ಹೆಣೆದುಕೊಂಡ ನಂಬಿಕೆಗಳನ್ನೂ ಪ್ರಶ್ನಿಸುವಂತೆ ಮಾಡಿತು. ಗೃಹೀತವಾದದ್ದನ್ನು ಮೀರಿದ ನೈಜವಾಗಿ ಪವಿತ್ರವಾದದ್ದರ ಹುಡುಕಾಟ ಅಂದಿನಿಂದಲೇ ಪ್ರಾರಂಭವಾಯಿತು. ಹೀಗೆ ನನ್ನ ಪಾಲಿಗೆ ಆ ಕಾಲದಲ್ಲಿ ಆಧುನಿಕತೆ, ಬ್ರಿಟಿಷ್ ಆಳ್ವಿಕೆಯ ಒಳಿತು- ಕೆಡುಕುಗಳ ಹೊಟ್ಟೆಯಲ್ಲೇ ಹುಟ್ಟಿದ್ದಾದರೂ, ಕನ್ನಡದ ಮೂಲಕವೇ ಒದಗಿಬಂತು.

ಇಲ್ಲಿ ನಾನು ಸೇರಿಸಬೇಕಾದ ಮಾತೊಂದಿದೆ; ಸವೆದ ಜಾಡಾಗಿಬಿಡುವ ಮತಧರ್ಮಗಳ ಒಳಗಿನ ಸತ್ಯಗಳು ಮತ್ತೆ ನನಗೆ ಬೆಳಗುವಂತೆ ಆದದ್ದು ದೇಶೀಯವಾದ ಹಳ್ಳಿಯ ಹೆಂಗಸರು ಹಾಡುವ ಭಕ್ತಿ ಕಾವ್ಯ ಅಥವಾ ಸಂಗೀತದ ಪ್ರಭೆಯಲ್ಲಿ, ಹರಿಕಥೆಗಳಲ್ಲಿ, ಯಕ್ಷಗಾನದ ಆಟಗಳಲ್ಲಿ. ಆದರೆ ನನ್ನನ್ನು ಬದಲಿಸುವಂತೆ ಇವು ಆಧುನಿಕತೆಯ ಸದ್ಯತನವನ್ನು ಪಡೆದ ಮಾಧ್ಯಮಗಳಾಗಿರಲಿಲ್ಲ. ನನ್ನ ವೈಚಾರಿಕತೆ ಬೆಳೆದದ್ದು ವಾಸ್ತವವಾದೀ ಪರಂಪರೆಯಲ್ಲಿ ಹುಟ್ಟಿದ ಕನ್ನಡದ ಕಥಾನಕಗಳಲ್ಲಿ, ಅಥವಾ ಮುಂದೆ ನವ್ಯಕಾವ್ಯದಲ್ಲಿ. ನನ್ನ ಎಳೆಯದಿನಗಳಲ್ಲಿ ಕಾರಂತರಿಂದ, ಕುವೆಂಪುವಿನಿಂದ, ಬೇಂದ್ರೆಯಿಂದ, ಬೆಳೆದ ಮೇಲೆ ವಚನಕಾರರಿಂದ, ಮುಂದೆ ನನ್ನ ಮೈಸೂರಿನ ದಿನಗಳಲ್ಲಿ ಅನುಮಾನದ ನಿಕಷದಲ್ಲಿ ಅನುಭವಗಳನ್ನು ಪರೀಕ್ಷಿಸುವ ಅಡಿಗರಿಂದ ನಾನು ತುಂಬ ಕಲಿತೆ. ಆದರೆ ಒಟ್ಟು ವ್ಯಕ್ತಿತ್ವದ ನಿರ್ಮಾಣದಲ್ಲಿ ನಮ್ಮ ಸಂಸ್ಕೃತಿಯ ಎರಡು ಎಳೆಗಳೂ-ದೇಶೀಯವಾದ್ದು ಮತ್ತು ನಮ್ಮ ವಸಾಹತುಶಾಹಿ ಸಂದರ್ಭದಲ್ಲಿ ವಿದೇಶೀಯ ಮೂಲದಿಂದ ನಮಗೆ ಅಗತ್ಯವೆಂದು ಕಂಡದ್ದನ್ನು ನಾವೇ ಆಯ್ದದ್ದು- ಕನ್ನಡದ ಹೆಚ್ಚು ಲೇಖಕರ ಮೇಲೆ ಪರಿಣಾಮ ಬೀರಿ ಅವರ ಒಳಗು ಹೊರಗುಗಳಿಗೆ, ಅಂತರಂಗ ಲೋಕಕ್ಕೂ ಸಾಮಾಜಿಕ ಸಂದರ್ಭಕ್ಕೂ, ನಂಟಿರುವಂತೆ ಆತಂಕಗೊಳಿಸುತ್ತಲೇ ಕಾಪಾಡುತ್ತವೆ ಎಂದು ನನ್ನ ಭಾವನೆ. ನಮ್ಮ ವೈಚಾರಿಕತೆಯನ್ನು ಬೆಳೆಸಿದ ಲೇಖಕರಲ್ಲೂ ಭಾವುಕವಾಗಿ ಪೂರ್ವ, ವೈಚಾರಿಕವಾಗಿ ಪಶ್ಚಿಮ, ಒಂದನ್ನು ಇನ್ನೊಂದು ತಿದ್ದುವಂತೆ, ಪ್ರಮಾಣೀಕರಿಸುವಂತೆ ಬೆಸುಗೆಯಾಗಿರುತ್ತವೆ.

ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಕುವೆಂಪು. ಇಂಗ್ಲಿಷ್ ಇಲ್ಲದಿದ್ದರೆ ತಾನು ಕೊಟ್ಟಿಗೆಯಲ್ಲಿ ಗೊಬ್ಬರ ಹೊತ್ತು ಬದುಕಬೇಕಾಗಿ ಬರುತ್ತಿತ್ತು ಎನ್ನುವ ಕುವೆಂಪು, ಇಂಗ್ಲಿಷ್ ತಂದ ಆಧುನಿಕತೆಯಿಂದ ಉಪಕೃತವಾಗಿರುವಂತೆಯೇ, ಪ್ರಾಯಶಃ ರಾಮಕೃಷ್ಣ ಪರಮಹಂಸರಿಗೂ, ವಿವೇಕಾನಂದರಿಗೂ, ಅರವಿಂದರಿಗೂ ಋಣಿಯೆಂಬುದನ್ನು ಮರೆಯಬಾರದು. ಕುವೆಂಪು ಅವರ ಆಧ್ಯಾತ್ಮಿಕ ಆಯಾಮವನ್ನು ತನ್ನಶೋಧದಲ್ಲಿ ಕಾಣದ ವಿಚಾರವಾದಿ ಕಾರಂತರು ಕೂಡಾ ಭಾವುಕವಾಗಿ ಯಕ್ಷಗಾನದಲ್ಲಿ ಆಸಕ್ತರಾಗಿದ್ದರು. ಅಂತೆಯೇ, ಎಲ್ಲರಿಗಿಂತ ಮಿಗಿಲಾಗಿ ಅಗೋಚರವಾದ ಶಕ್ತಿಗಳಿಗೆ ಕಣ್ತೆರೆದವರಂತೆ ಬರೆಯುತ್ತಿದ್ದ ಬೇಂದ್ರೆಯವರು ‘ಕುರುಡು ಕಾಂಚಾಣ’ವನ್ನೂ, ‘ಪುಟ್ಟ ವಿಧವೆ’ಯನ್ನೂ ಬರೆದು ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಚುರುಕುಗೊಳಿಸಿದ್ದರು.

ಕನ್ನಡ ಮಾತಿನ ಸೊಗಸನ್ನು ತಮ್ಮ ಹಾಸ್ಯಮಯವಾದ ಮಾತುಗಾರಿಕೆಯಲ್ಲಿ ಬೆಳೆಯಿಸಬಲ್ಲ ಪರಮೇಶ್ವರ ಭಟ್ಟರು ಶಿವಮೊಗ್ಗದ ಇಂಟರ‍್ಮೀಡಿಯೇಟ್ ಕಾಲೇಜಿನಲ್ಲಿ ನಮಗೆ ಸಿಕ್ಕರು. ಸಂಸ್ಕೃತದ ಕ್ಲಾಸಿಗೆ ಚಕ್ಕರ್ ಹಾಕಿ ನಾನು ಕನ್ನಡದ ಕ್ಲಾಸಿನಲ್ಲಿ ಕೂರುತ್ತಿದ್ದೆ. ಹೈಸ್ಕೂಲಿನಲ್ಲಿ ಹುಟ್ಟಿದ ಎಚ್ಚರ ಮತ್ತು ಗೊಂದಲಗಳಿಗೆ ಶಿವಮೊಗ್ಗದಲ್ಲಿ ಒಂದು ಸ್ಪಷ್ಟತೆ ಮೂಡಲು ಕಾರಣ ನನ್ನ ಜೀವನದಲ್ಲಿ ಪ್ರವೇಶ ಮಾಡಿದ ಶಾಂತವೇರಿ ಗೋಪಾಲ ಗೌಡರ ಪ್ರಭಾವ. ಲೋಹಿಯಾರ ವಿಚಾರ, ಅವರ ಬೆನ್ನಲ್ಲೇ ಕುಮಾರವ್ಯಾಸ, ಕುವೆಂಪು, ಅಡಿಗ, ಬೇಂದ್ರೆಯವರ ಕಾವ್ಯ, ಅದು ಮುಗಿಯುತ್ತಿದ್ದಂತೆ ಸರ್ಕಲ್ಲಿನ ಸಾಹೇಬರ ಹೋಟೆಲಿನಲ್ಲಿ ಚಹಾ ಕುಡಿದು ಮಾರ್ಕ್ಸ್, ರಾಯ್ ವಿಚಾರ- ಹೀಗೆ ನಮ್ಮಲ್ಲಿ ಎಲ್ಲವೂ ಒಂದಕ್ಕೊಂದು ಬೆಸೆದು ಸಾಹಿತ್ಯವನ್ನು ರಾಜಕೀಯ ಚಿಂತನೆಯೂ, ರಾಜಕಾರಣವನ್ನು ಸಾಹಿತ್ಯದ ಒಳನೋಟಗಳೂ ಬೆಳಗಿ ಬೆಳೆಸುತ್ತಿದ್ದವು. ಮುಂದೆ ಇದೇ ಶಿವಮೊಗ್ಗದಲ್ಲಿ ಜೆ.ಹೆಚ್. ಪಟೇಲ್ ಮತ್ತು ಶಂಕರನಾರಾಯಣ ಭಟ್ಟರ ಸ್ನೇಹದಲ್ಲಿ ಮುಂದುವರಿಯಿತು.

ಪಟೇಲ್ ಆ ದಿನಗಳಲ್ಲಿ ಸಾಹಿತ್ಯ ಮತ್ತು ರಾಜಕೀಯ-ಎರಡು ಕ್ಷೇತ್ರದಲ್ಲೂ ಸಾಕಷ್ಟು ಓದಿಕೊಂಡ ರಸಿಕರು. ನಿಜಲಿಂಗಪ್ಪನವರಿಗೆ ಪ್ರಿಯರಾದ ಬಂಧು-ವರ್ಗದವರಾದರೂ ಕಾಂಗ್ರೆಸ್ ಸೇರದೆ, ಸಮಾಜವಾದಿ ಪಕ್ಷವನ್ನು ಗೋಪಾಲಗೌಡರ ಜೊತೆ ಕಟ್ಟಬೇಕೆಂಬ ಹಠದ ಆದರ್ಶವಾದಿಗಳು. ಅನುಕೂಲವಂತರಾದ ಶಂಕರನಾರಾಯಣ ಭಟ್ಟರು ‘ಉಳುವವನೇ ನೆಲದೊಡೆಯನಾಗಬೇಕು’ ಎಂಬ ಚಳವಳಿಯಲ್ಲಿ ತೊಡಗಿದ್ದು, ಕ್ರಮೇಣ ತನ್ನ ಜಮೀನನ್ನು ಕಳೆದುಕೊಂಡವರು. ಹಾಸ್ಯ ಪ್ರಿಯರಾದ ಇವರು ಮುಂದಿನ ದಿನಗಳಲ್ಲಿ ತನ್ನನ್ನು ವರ್ಣಿಸಿಕೊಳ್ಳುತ್ತಿದ್ದುದು ಹೀಗೆ: ‘ನಾನೊಬ್ಬ ಲ್ಯಾಂಡ್-ಹೋಲ್ಡರ್’. ಅಂದರೆ ‘ನೆಲ ಹಿಡಿದವನು’.

ಮಾತಾಡುವುದು ಮಾತ್ರವಲ್ಲ, ಕಾಗೋಡು ರೈತಸತ್ಯಾಗ್ರಹವೂ, ಅದಕ್ಕಾಗಿ ನಾನು ಕರಪತ್ರಗಳನ್ನು ಬರೆಯುವುದೂ, ಬರೆದದ್ದನ್ನು ನನ್ನ ತಂದೆಯವರು ಶುರುಮಾಡಿದ ಪ್ರೆಸ್ಸಿನಲ್ಲಿ ನಾನೇ ಟ್ರೆಡಲ್ ಮೆಶೀನಿನಲ್ಲಿ ತುಳಿದು ಅಚ್ಚುಮಾಡುವುದೂ, ಮಹಡಿಮೇಲೆ ಚಾಪೆ ಹಾಸಿ ಎ.ವಿ.ಶ್ರೀನಿವಾಸ, ಪಕ್ಕದ ಮನೆಯ ಮುಸ್ಲಿಮ್ ಕ್ಷೌರಿಕ, ಅಣ್ಣಯ್ಯ, ಗೋಪಾಲಗೌಡ- ಇತ್ಯಾದಿ ಸೋಷಲಿಸ್ಟ್ ಗೆಳೆಯರ ಜೊತೆ ಬೆಳಗಿನ ಜಾವದ ತನಕ ಹರಟುವುದೂ ಮೊದಲಾಯಿತು.

ಕಟುವಾದ ವಿಶ್ಲೇಷಣೆಯಲ್ಲಿ ಭೂತಕಾಲದ ಜಾತಿಸಂಬಂಧವಾದ ಸಂಕೋಲೆಗಳಿಂದ ಕಿತ್ತುಕೊಂಡು ಹೊರಬರುವ ಆಶಯದ ಜೊತೆ ಜೊತೆಯಲ್ಲೇ ಪಾಶ್ಚಾತ್ಯರ ವೈಚಾರಿಕತೆಯನ್ನು ಪ್ರಶ್ನಿಸಬಲ್ಲ, ಭಾರತೀಯ ಸತ್ಯದಲ್ಲಿ ಬೇರೂರಿದ ಲೋಹಿಯಾದ ಹೊಸ ಚಿಂತನೆಯಿಂದ ಪ್ರಭಾವಿತವಾಗಿದ್ದ ಚಳವಳಿಗಳು ನಮಗೆ ಪ್ರಿಯವಾದುವು. ಈಗಿಂದೀಗಲೇ ದ್ವಿಜೇತರ ಜಾತಿಗಳ ಒಕ್ಕೂಟದಲ್ಲಿ, ರೈತರ ಹೋರಾಟದಲ್ಲಿ, ಇಂಗ್ಲಿಷ್ ಹಠಾವೋ ಚಳವಳಿಯಲ್ಲಿ ಪಾಲುದಾರರಾಗಿ ನಮ್ಮ ಭೂತಕಾಲದಿಂದಲೂ, ಪಾಶ್ಚಾತ್ಯರ ಸದ್ಯದ ದರ್ಪದಿಂದಲೂ ಮುಕ್ತವಾದ ಒಂದು ಪರ್ಯಾಯ ನಾಗರಿಕತೆಯಾಗಿ ಭಾರತ ರೂಪುಗೊಳ್ಳುವಂತೆ ಮಾಡಬೇಕೆಂಬ ಹಂಬಲದ ಈ ರಾಜಕೀಯ ಚಳವಳಿಗಳು ಏಕಕಾಲದಲ್ಲಿ ಸಾಮಾಜಿಕ ಆರ್ಥಿಕ ಆಶಯಗಳನ್ನೂ, ಸಾಂಸ್ಕೃತಿಕ ಆಶಯಗಳನ್ನೂ ಪಡೆದುವಾಗಿದ್ದವು. ದ್ರಾವಿಡ ಕಜ್ಜಗಂನಂತೆಯೋ, ಸಿಖ್ಖರ ಚಳವಳಿಯಂತೆಯೋ, ಅಸ್ಸಾಮ್‌ನಲ್ಲಿ ವಿದ್ಯಾರ್ಥಿಗಳು ಪ್ರಾರಂಭಿಸಿದ ಚಳವಳಿಯಂತೆಯೋ ಇವು ಅಲ್ಪ ಉದ್ದೇಶದ ಚಳವಳಿಗಳಾಗಿರಲಿಲ್ಲ. ಈ ಚಳವಳಿಗಳು ರಾಜಕೀಯ ಕಾರ್ಯಾಚರಣೆಯ ಸದ್ಯತನವನ್ನೂ, ಸಾಹಿತ್ಯದ ಧ್ಯಾನಶೀಲತೆಯನ್ನೂ ಒಟ್ಟಾಗಿ ಬೇಡುವಂತಹವಾಗಿದ್ದವು, ನಮ್ಮ ಪಾಲಿಗೆ.

ಈ ಚಳವಳಿಯ ಫಲವನ್ನಾಗಿ ಕೆಲವರು ಬಿಹಾರದ ಲಾಲು ಪ್ರಸಾದರನ್ನು ಕಾಣುವುದುಂಟು. ಇದು ನ್ಯಾಯವಲ್ಲ. ಆದರೆ ಅದರ ವಿಶ್ಲೇಷಣೆ ಈಗ ಬೇಡ. ನನಗೆ ಇಲ್ಲಿ ಮುಖ್ಯವಾದ ಸಂಗತಿಯೆಂದರೆ ಇದು; ಇವತ್ತಿನ ನನ್ನ ಮುಖ್ಯ ಒಳನೋಟಗಳನ್ನು ನನಗೆ ಒದಗಿಸುತ್ತಿರುವುದು ಪಾಶ್ಚಾತ್ಯರಲ್ಲಿ ಬೆಳೆದ ಮಾರ್ಕ್ಸ್ ಪ್ರಣೀತ ಚಿಂತನೆಯಲ್ಲ; ಏಕಕಾಲದಲ್ಲಿ ಸ್ಥಳೀಯವೂ, ಜಾಗತಿಕವೂ ಎಂಬಂತೆ ಕೂಡಿಕೊಂಡ, ಗಾಂಧೀಜಿ ಮತ್ತು ಮಾರ್ಕ್ಸ್ ಇಬ್ಬರಿಗೂ ಸ್ಪಂದಿಸುವ ಚಿಂತನೆಯಿಂದ ಹುಟ್ಟಿದ್ದು ಅದು.

ತೀರ್ಥಹಳ್ಳಿಯ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಜಾರ್ಜ್ ಬರ್ನಾರ್ಡ್‌ಶಾನ ನಾಟಕಗಳ ಮುಖಾಂತರ ಸಿನ್ಹ ಎಂಬ ಹಿರಿಯರೊಬ್ಬರು ನನ್ನಲ್ಲಿ ಹುಟ್ಟಿಸಿದ್ದ ವೈಚಾರಿಕತೆಯ ಪ್ರೀತಿಯೇ ಮುಂದೆ ಗೋಪಾಲಗೌಡರು, ಶಿವಮೊಗ್ಗದ ರಾಯಿಸ್ಟರು, ಭದ್ರಾವತಿ ಕಾರ್ಖಾನೆಯ ಕಮ್ಯುನಿಸ್ಟರು, ನನ್ನ ಅಗ್ರಹಾರದ ಪರಿಸರದ ವೇದಾಂತಿಗಳನ್ನು ಪ್ರಶ್ನಿಸುತ್ತಿದ್ದ ಆರ್ಯ ಸಮಾಜದ ಚಿಂತಕರು – ಇವರ ಜೊತೆಗಿನ ವಾಗ್ವಾದಗಳಲ್ಲಿ ಎತ್ತೆತ್ತಲೋ ಬೆಳೆಯುತ್ತ ನನ್ನ ಸಂವೇದನೆಯನ್ನು ಮುಕ್ತವಾಗಿರುವಂತೆ ಕಟ್ಟಿತು. ಮಲೆನಾಡೇ, ಸುಮಾರು ಅರವತ್ತು ಕಿಲೋಮೀಟರಿನಷ್ಟು ಪ್ರದೇಶವೇ ನನಗೆ ಇಡೀ ವಿಶ್ವವನ್ನು ಪರಿಚಯಿಸಿದ ಕ್ಷೇತ್ರವಾಯಿತು. ಅಗ್ರಹಾರದಲ್ಲಿ ಪಂಡಿತರ ಪರಂಪರೆಯಲ್ಲಿ ಬೆಳೆದಿದ್ದವರೊಬ್ಬರು ಕನ್ನಡದ ನವೋದಯದ ಬರಹಗಾರರನ್ನು ಧಿಕ್ಕರಿಸಿ ಎಷ್ಟೇ ಹಾಸ್ಯಮಾಡುತ್ತಿದ್ದರೂ, ಅವರ ಕಂದ ವೃತ್ತಗಳಿಗೆ ಬದಲಾಗಿ ಎಳೆಯನಾದ ನಾನು ಮನಸೋತದ್ದು ಬೇಂದ್ರೆಯ ಕಾವ್ಯಕ್ಕೆ; ಅಂತರ್ಜಾತೀಯ ಮದುವೆಯಾಗಿ ಬ್ರಾಹ್ಮಣರ ಕಣ್ಣಲ್ಲಿ ಜಾತಿಗೆಟ್ಟು ಹಿಂಡಗಲಿದ ಕಾರಂತರ ಬರವಣಿಗೆ ಮತ್ತು ವಿಚಾರಗಳಿಗೆ ಮತ್ತು ನಿರಂಕುಶಮತಿಗಳಾಗಿ ಎಂದು ಕರೆಯಿತ್ತ ಕುವೆಂಪುವಿಗೆ.

ಹೀಗೆ ಆಧುನಿಕತೆಗೆ ಒಡ್ಡಿಕೊಂಡು ತನ್ನ ಮೂಲದ ಸತ್ವವನ್ನು ಕಳೆದುಕೊಳ್ಳದ ಕನ್ನಡದ ಮುಲಕವೇ ನನಗೆ ಮನಸ್ಸಿನ ಬೆಳವಣಿಗೆಗೂ, ವಿಸ್ತಾರಕ್ಕೂ ಅಗತ್ಯವಾದದ್ದು ಸಿಗುತ್ತಿತ್ತು. ಇಂಗ್ಲೆಂಡಿನಲ್ಲಿ ನಾನು ಓದುತ್ತಿದ್ದ ಕಾಲದಲ್ಲಂತೂ ನನಗಾದ ಎಲ್ಲ ಅನುಭವಗಳೂ ‘ಸಂಸ್ಕಾರ’ ‘ಮೌನಿ’ ‘ಕ್ಲಿಪ್ ಜಾಯಿಂಟ್‌’ನಂತಹ ಕೃತಿಗಳ ರಚನೆಗೆ ಕಾರಣವಾದವು. ಅದು ನ್ಯೂ ಲೆಫ್ಟ್ ಬೆಳೆದು ನಿಂತಿದ್ದ ಕಾಲ; ವಿಯೆಟ್ನಾಂ ಯುದ್ಧಕ್ಕೆ ತೀವ್ರ ವಿರೋಧವಿದ್ದ ಕಾಲ. ನನ್ನ ಪ್ರಾಚಾರ್ಯರಾದ ರಿಚರ್ಡ್‌ ಹಾಗರ್ಟ್‌ರವರ ಎಡಪಂಥೀಯ ಮುಕ್ತಸಂವೇದನೆ, ತನ್ನ ಕಾರ್ಮಿಕ ಹಿನ್ನೆಲೆಯಿಂದ ಅವರು ತಂದ ಅನುಭವಗಳು, ಮಾಲ್ಕಂ ಬ್ರಾಡ್ಬರಿ ಮತ್ತು ಡೇವಿಡ್ ಲಾಡ್ಜ್ ಅವರ ಸಾಹಿತ್ಯಿಕ ಒಳನೋಟಗಳು ನನ್ನನ್ನು ಇನ್ನೂ ಹೆಚ್ಚು ಕನ್ನಡದಲ್ಲಿ ಊರಿದವು.

ನಮ್ಮನ್ನು ನಾವು ಗುರುತಿಲ್ಲದಂತೆ ಕಳೆದುಕಂಡುಬಿಡಬಹುದಾದ ಅಮೆರಿಕನ್ ನಾಗರಿಕತೆಯ ಇಂದಿನ ಆಧುನಿಕತೆಗಿಂತ ಕೆಲವೇ ಕೆಲವು ವರ್ಷಗಳ ಹಿಂದೆ, ಅಂದರೆ ಸುಮಾರು ನಲವತ್ತು ವರ್ಷಗಳ ಹಿಂದೆ, ಆಧುನಿಕತೆಯ ಸ್ವರೂಪ ಹೇಗಿತ್ತು ಎಂಬುದನ್ನು ಕಥಿಸಲು ನಾನು ಹೀಗೆ ನನ್ನ ಅನುಭವಗಳನ್ನೇ ಹೆಕ್ಕುತ್ತಿದ್ದೇನೆ.

ನಿಮ್ಮ ಅನುಮತಿ ಬೇಡಿ ಕಾಲದಲ್ಲಿ ಮತ್ತೆ ಹಿಂದಕ್ಕೆ ಹೋಗುವೆ. ಹೈಸ್ಕೂಲಿನಲ್ಲಿ ನಮ್ಮ ಮುಖ್ಯೋಪಾಧ್ಯಾಯರಾಗಿದ್ದ ಯೋಗಾನರಸಿಂಹರೆಂಬುವರು ಎಳೆಯರಾದ ನಮಗೆ ಶೇಕ್ಸ್‌ಪಿಯರನ್ನೂ, ನೆಹರೂ ಮತ್ತು ಗಾಂಧಿಯವರ ವಿಚಾರಗಳನ್ನೂ ಮನದಟ್ಟಾಗುವಂತೆ ಕನ್ನಡದಲ್ಲಿ ವಿವರಿಸುತ್ತಿದ್ದರು. ಹಳ್ಳಿಯಿಂದ ನಡೆದು ಶಾಲೆಗೆ ಬಂದ ನಮಗೆ ಗಾಂಧೀಜಿಯವರ ಸಾವನ್ನು ತಿಳಿಸುವಾಗ ಪೇಟವನ್ನು ತೊಟ್ಟ ದಿಟ್ಟನಿಲುವಿನ ಹೆಡ್ ಮಾಸ್ತರರೇ ಕಣ್ಣೀರು ಹಾಕಿದ್ದರೆಂಬುದು ಅವರ ವಿಚಾರಗಳು ನನಗೆ ಆತ್ಮೀಯವಾಗುವಂತೆ ಮಾಡಿದ್ದವು. ಭಗವದ್ಗೀತೆಯ ತಾತ್ವಿಕ ಮಹತ್ವಕ್ಕಿಂತ ಹೆಚ್ಚಾಗಿ ಅದರ ಮರೆಯಲಾಗದ ಮಾತುಗಳನ್ನು ನಾದಮಯವಾಗಿ ನಮ್ಮ ಕಿವಿಗೆ ಹತ್ತಿಸಿದವರು ಅವರು.