ತುರ್ತು ಪರಿಸ್ಥಿತಿಯನ್ನು ಹೇರಿದಾಗ ಅದನ್ನು ‘ಫ್ಯಾಸಿಸ್ಟ್’ ಎಂದರು ಕರೆದೆವು. ಆ ಶಬ್ದ ಸ್ವಲ್ಪ ಹೆಚ್ಚಾಯಿತು. ನಾವು ದೊಡ್ಡ ಶಬ್ದಗಳನ್ನು ಗಂಭೀರವಾದ ಸಂದರ್ಭದಲ್ಲಿ ಉಪಯೋಗಿಸದೆ ಎಲ್ಲದಕ್ಕೂ ಉಪಯೋಗಿಸಿಬಿಟ್ಟರೆ ಆಗಬಹುದಾದ ಅನಾಹುತ ಇದು. ನಿಜವಾದ ಫ್ಯಾಸಿಸಂ ಬಂದಾಗ ಅದನ್ನು ಏನೆಂದು ಕರೆಯಬೇಕು ಎಂದು ನಮಗೆ ಗೊತ್ತಾಗುವುದಿಲ್ಲ. ಇದೊಂದು ರೀತಿ ‘ಹುಲಿ ಬಂತು ಹುಲಿ’ ದೃಷ್ಟಾಂತದಂಥದ್ದು. ಪತ್ರಿಕೆಯವರೂ ಅಷ್ಟೇ; ನಾವೂ ಅಷ್ಟೇ ಶಬ್ದಗಳನ್ನು ಉಪಯೋಗಿಸುವುದರಲ್ಲಿ ಒಂದು ಎಚ್ಚರವನ್ನು ಇಟ್ಟುಕೊಳ್ಳಬೇಕು. ಇಂದಿರಾಗಾಂಧಿ ಇಂಪೋಸ್ ಮಾಡಿದ್ದು ಫ್ಯಾಸಿಸ್ಟ್ ರೂಲ್ ಅಲ್ಲ. ಅದು ಒಂದು ರೀತಿಯ ಸರ್ವಾಧಿಕಾರ.

ಆ ಸರ್ವಾಧಿಕಾರವನ್ನು ಜಾರಿ ಮಾಡುವುದಕ್ಕಿಂತ ಮುಂಚೆ ದೊಡ್ಡದೊಂದು ಚಳವಳಿಯನ್ನು ಜೆ.ಪಿ.ಯವರು ಮಾಡಿದ್ದರು. ಅದು ಭ್ರಷ್ಟಾಚಾರದ ವಿರುದ್ಧದ ಚಳವಳಿಯಾಗಿತ್ತು. ಅದೇ ಮಟ್ಟದ ಭ್ರಷ್ಟಾಚಾರ ಇವತ್ತಿಗೂ ಇದೆ. ಜೆ.ಪಿ.ಯವರ ಚಳವಳಿಯಲ್ಲಿ ಭಾಗವಹಿಸಿದ ದಿನಗಳಲ್ಲಿ ನಾವೆಲ್ಲಾ ಯಾರೋ ಕೆಲವರು ಅನೀತಿವಂತರು ಅಧಿಕಾರದಲ್ಲಿ ಇರುವುದರಿಂದ ಭ್ರಷ್ಟಾಚಾರವಿದೆ ಎಂದು ಭಾವಿಸಿದ್ದೆವು. ಅದೆಷ್ಟು ತಪ್ಪು ಗ್ರಹಿಕೆಯಾಗಿತ್ತು ಎಂಬುದು ಈಗ ಅರ್ಥವಾಗುತ್ತಿದೆ. ಅಂದು ನಾವು ಯಾರ ವಿರುದ್ಧ ಹೋರಾಡಿದೆವೋ ಅವರ ಹೃದಯ ಪರಿವರ್ತನೆಯಂತೂ ಆಗಲಿಲ್ಲ. ಮತ್ತೆ ಅದೇ ಬಗೆಯ ಜನ ಈಗಲೂ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ. ಅದೇ ಭ್ರಷ್ಟಾಚಾರ ಮುಂದುವರಿಯುತ್ತಿದೆ.

ನಾವು ನಮ್ಮ ವ್ಯವಸ್ಥೆಯಲ್ಲೇ ಇರುವ ದೋಷ ಯಾವುದು ಎಂಬುದನ್ನು ನೋಡುವುದರ ಬದಲಿಗೆ ಕೇವಲ ವ್ಯಕ್ತಿಗಳ ಮೇಲೆ ಆರೋಪ ಹೊರಿಸಿಬಿಡುತ್ತೇವೆ. ಇದಕ್ಕೊಂದು ಉದಾಹರಣೆ ದೇವರಾಜ ಅರಸು.  ತುರ್ತು ಪರಿಸ್ಥಿತಿಯ ಮತ್ತು ಅದಕ್ಕೂ ಮೊದಲಿನ ದಿನಗಳಲ್ಲಿ ದೇವರಾಜ ಅರಸು ಭ್ರಷ್ಟಾಚಾರದ ದೊಡ್ಡ ಕೂಪದಂತೆ ಕಾಣಿಸುತ್ತಿದ್ದರು. ಈಗ ಅವರು ನಮಗೆ ಹಲವು ಸಾಮಾಜಿಕ ಬದಲಾವಣೆಗಳನ್ನು ಮಾಡಿದ ಹೀರೋ ಆಗಿದ್ದಾರೆ. ಅವರನ್ನು ಬೈಯುತ್ತಾ ಇದ್ದವರೇ ಅವರನ್ನು ಹೊಗಳಿದ್ದನ್ನು ನಾನು ಕೇಳಿದ್ದೇನೆ.

ಹಾಗಾದರೆ ದೇವರಾಜ ಅರಸರು ಭ್ರಷ್ಟಾಚಾರದ ಕೂಪವೋ ಅಥವಾ ಭ್ರಷ್ಟಾಚಾರವನ್ನು ಬಳಸಿಕೊಂಡೇ ಹಲವು ಬದಲಾವಣೆಗಳನ್ನು ತಂದ ಒಬ್ಬ ದೊಡ್ಡ ಕ್ರಾಂತಿಕಾರನೋ? ಇದು ಯಾರಿಗೂ ಸ್ಪಷ್ಟವಾಗಿಲ್ಲ. ನನಗೂ ಕೆಲವು ಅಸ್ಪಷ್ಟತೆಗಳಿವೆ. ಇವೆಲ್ಲಾ ಸ್ಪಷ್ಟವಾಗದ ಹೊರತು ನಮ್ಮ ರಾಜಕೀಯ ಚಿಂತನೆಗೆ ಒಂದು ನಿಜವಾದ ಮೊನಚು ದೊರೆಯುವುದಿಲ್ಲ. ನಮಗೆ ಎಷ್ಟು ಗೊಂದಲಗಳಿದ್ದವು! ಒಂದು ನಿರ್ದಿಷ್ಟ ರಾಜಕೀಯ ನಿಲುವಿನ ಮೂಲಕವೇ ತುರ್ತು ಪರಿಸ್ಥಿತಿಯನ್ನು ನೋಡಿದ್ದರೂ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಿದ್ದೆವು ಎಂದು ಹೇಳಲು ಸಾಧ್ಯವಿಲ್ಲ. ಕಮ್ಯುನಿಸ್ಟರಲ್ಲಿ ಸಿ.ಬಿ.ಐ.ನಲ್ಲಿದ್ದವರು ಇಂದಿರಾ ಗಾಂಧಿಯನ್ನು ಬೆಂಬಲಿಸಿದ್ದರು. ಸಿ.ಪಿ.ಎಂ. ಸೇರಿದಂತೆ ಉಳಿದವರು ಅದನ್ನು ವಿರೋಧಿಸಿದರು. ಮಾರ್ಕ್ಸ್‌ವಾದ ತುರ್ತು ಪರಿಸ್ಥಿತಿಯ ಬೆಂಬಲಕ್ಕೆ ವಿರೋಧಕ್ಕೂ ಬಳಕೆಯಾಯಿತು. ಗಾಂಧೀವಾದಿಗಳಲ್ಲಿ ವಿನೋಬಾಭಾವೆ ತುರ್ತು ಪರಿಸ್ಥಿತಿಯನ್ನು ‘ಸದ್ಯದ ಅಗತ್ಯ’ ಎಂದರು. ಜಯಪ್ರಕಾಶ್ ನಾರಾಯಣ್ ವಿರೋಧಿಸಿದರು. ಅಂದರೆ ಗಾಂಧೀವಾದವೂ ತುರ್ತು ಪರಿಸ್ಥಿತಿಯ ಬೆಂಬಲಕ್ಕೂ ವಿರೋಧಕ್ಕೂ ಬಳಕೆಯಾಯಿತು. ಒಂದು ವೇಳೆ ಇಂದಿರಾ ಗಾಂಧಿಯವರ ನಿಲುವು ಸಂಪೂರ್ಣ ಫ್ಯಾಸಿಸ್ಟ್ ಆಗಿದ್ದರೆ ಈ ಬಗೆಯ ಗೊಂದಲಗಳು ಇರುತ್ತಿರಲಿಲ್ಲ. ಆದ್ದರಿಂದ ತುರ್ತು ಪರಿಸ್ಥಿತಿ ಫ್ಯಾಸಿಸ್ಟ್ ಆಗಿರಲಿಲ್ಲ.

ಇಂದಿರಾ ಗಾಂಧಿಯನ್ನು ಸಂಸತ್‌ನ ಸದಸ್ಯತ್ವದಿಂದ ಅನರ್ಹಗೊಳಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ನೋಡೋಣ: ಅವರ ವಿರುದ್ಧ ಸ್ಪರ್ಧಿಸಿದ್ದ ರಾಜ್ ನಾರಾಯಣ್ ಒಂದು ಮೊಕದ್ದಮೆ ಹೂಡಿದ್ದರು. ಇದರಲ್ಲಿದ್ದ ಮುಖ್ಯ ಆರೋಪ ಇಂದಿರಾ ಗಾಂಧಿ ಆಡಳಿತ ಯಂತ್ರವನ್ನು ಬಳಸಿಕೊಂಡು ಚುನಾವಣಾ ಅಕ್ರಮ ಎಸಗಿದ್ದಾರೆ ಎಂಬುದು. ಇಂದಿರಾ ಗಾಂಧಿ ಚುನಾವಣಾ ಪ್ರಚಾರದ ಒಂದು ವೇದಿಕೆ ನಿರ್ಮಿಸಲು ಸರಕಾರೀ ಅಧಿಕಾರಿಯ ಸಹಾಯ ಪಡೆದಿದ್ದರು ಎಂಬುದು ಸಾಬೀತಾಗಿ ಇಂದಿರಾ ಗಾಂಧಿಯವರ ಆಯ್ಕೆಯನ್ನು ಅಲಹಾಬಾದ್ ಹೈಕೋರ್ಟ್‌ಅನರ್ಹಗೊಳಿಸಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾರ್ಡಿಯನ್ ಪತ್ರಿಕೆಯಲ್ಲಿ ಜೇಮ್ಸ್ ಕ್ಯಾಮರೂನ್ ಬರೆದ ಸಾಲುಗಳು ನೆನಪಾಗುತ್ತಿವೆ- it is as though a head of the Governament should go back for a parking ticket ನಾವು ಯಾವ ತಾಂತ್ರಿಕ ಕಾರಣಕ್ಕಾಗಿ ಇಂದಿರಾ ಗಾಂಧಿ ಅಧಿಕಾರ ತ್ಯಜಿಸಬೇಕು ಎಂದು ಹೇಳಿದೆವೋ ಅದು ನಮ್ಮ ಎಲ್ಲಾ ನೈತಿಕವಾದ ಆಕ್ರೋಶವನ್ನು ಪ್ರತಿನಿಧಿಸುವಂತೆ ಇರಲಿಲ್ಲ. ಇಷ್ಟಾಗಿಯೂ ಜೆ.ಪಿ.ಯವರು ಮಾತ್ರ ‘ಇಡೀ ದೇಶದ ಪರಿವರ್ತನೆ ಸಾಧ್ಯ’ ಎನ್ನುವ ನಂಬಿಕೆಯಿಂದ ಹೋರಾಟವನ್ನು ಆರಂಭಿಸಿದ್ದರು. ಆದರೆ ಅದು ರಾಜಕೀಯವಾಗಿ ಎಂತೆಂಥಾ ಮುಖಗಳನ್ನು ಪಡೆಯಿತು ಎಂದರೆ ‘ತಾಂತ್ರಿಕ ಕಾರಣಕ್ಕಾಗಿ ಇಂದಿರಾ ಗಾಂಧಿ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸುವ ಮಟ್ಟಕ್ಕೆ ಹೋಯಿತು. ಇದನ್ನು ನಿವಾರಿಸಿಕೊಳ್ಳಲು ಇಂದಿರಾ ಗಾಂಧಿ ಕೂಡಾ ಬ್ರಹ್ಮಾಸ್ತ್ರವನ್ನೇ ಬಳಸಿದರು – ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಅಂದರೆ, ಈಗ ಟಿ.ವಿ.ಯಲ್ಲಿ ಬರುತ್ತಲ್ಲಾ ‘ಇಂಡಿಯನ್ ತಮಾಷಾ’ ಹಾಗೆಯೇ ಆ ಕಾಲದ ರಾಜಕೀಯ ಬೆಳವಣಿಗೆಗಳೂ ‘ಇಂಡಿಯನ್ ತಮಾಷಾ’ ಆಗಿಬಿಟ್ಟವು. ಒಂದು ಬೆಳವಣಿಗೆ ಇಂಥಾ ರೂಪ ಪಡೆದಿರುವಾಗಲೂ ಅದನ್ನು ನಿಜವಾಗಿ ನಂಬುವವರೂ, ವಿರೋಧಿಸುವವರೂ ಇರುತ್ತಾರೆ. ಅಂತಹ ಜನ ಈ ಹೊತ್ತಿನಲ್ಲಿ ಬಹಳ ತೊಂದರೆ ಅನುಭವಿಸಿಬಿಡುತ್ತಾರೆ.

ತುರ್ತು ಪರಿಸ್ಥಿತಿಯಿಂದ ಕೆಲ ಲಾಭಗಳೂ ಆದವು. ಇದರಿಂದ ಹೊಸ ರಾಜಕಾರಣಿಗಳು ಬಂದರು. (ಲಾಲೂ ಪ್ರಸಾದ್ ಯಾದವ್ ಇದರ ಫಲ) ಅಮೃತಕ್ಕಾಗಿ ಸಮುದ್ರ ಮಥನ ಮಾಡಿದಾಗ ಅಮೃತವೂ, ಕಾಲಕೂಟವೂ ಹುಟ್ಟಿದಂತೆ ತುರ್ತು ಪರಿಸ್ಥಿತಿಯ ಮಂಥನದಲ್ಲಿ ಬಹಳ ಜನರಿಗೆ ಜೀವ ಬಂತು. ಉತ್ತರ ಪ್ರದೇಶ, ಬಿಹಾರದಲ್ಲಿರುವ ರಾಜಕಾರಣಿಗಳೆಲ್ಲಾ ಅದರಿಂದಲೇ ಹುಟ್ಟಿಬಂದವರು. ಅದೇ ಪ್ರಮಾಣದಲ್ಲಿ ದಕ್ಷಿಣ ಭಾರತದಲ್ಲಿ ಬಹಳ ದೊಡ್ಡ ರಾಜಕಾರಣಿಗಳು ತುರ್ತು ಪರಿಸ್ಥಿತಿಯಿಂದಾಗಿ ಹುಟ್ಟಿಬರಲಿಲ್ಲ. ಹೀಗೆ ಹುಟ್ಟಿ ಬಂದ ರಾಜಕಾರಣಿಗಳು ಬಹಳ ‘ಲಾಭ’ ಮಾಡಿಕೊಳ್ಳುತ್ತಿದ್ದಾರೆ. ತುರ್ತು ಪರಿಸ್ಥಿತಿಯ ಪೂರ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಯಾವ ಆಂದೋಲನವನ್ನು ಮಾಡಬೇಕಾಗಿತ್ತೋ ಅದೇ ಆಂದೋಲನವನ್ನು ಈಗ ಇವರ ವಿರುದ್ಧ ಮಾಡಬೇಕಾಗಿದೆ.

ತುರ್ತು ಪರಿಸ್ಥಿತಿಯ ಮೊದಲ ಐದಾರು ತಿಂಗಳು ದೇವರಾಜ ಅರಸು ಸರಕಾರವನ್ನು ನಡೆಸಿದ ರೀತಿಯನ್ನು ವಿರೋಧಿಸುವುದಕ್ಕೆ ನಮ್ಮಲ್ಲಿ ಕಾರಣವೇ ಇರಲಿಲ್ಲ. ವಿಧವೆಯರಿಗೆಲ್ಲಾ ಪೆನ್ಶನ್ ಕೊಟ್ಟರು. ಭೂ ಕಾಯ್ದೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದ್ದು ಈ ಕಾಲದಲ್ಲಿಯೇ. ದೇವರಾಜ ಅರಸು ರೀತಿಯಲ್ಲೇ ಎಲ್ಲರೂ ವರ್ತಿಸಿದ್ದರೆ ತುರ್ತು ಪರಿಸ್ಥಿತಿ ಜನವಿರೋಧಿ ಅನ್ನಿಸಿಕೊಳ್ಳುತ್ತಲೇ ಇರಲಿಲ್ಲ ಎಂಬ ಮಾತು ಆಗಲೂ ಕೇಳಿಬಂದಿತ್ತು. ಪ್ರಾಯಶಃ ಆಮೇಲೆ ತುರ್ತು ಪರಿಸ್ಥಿತಿಯನ್ನು ವಿರೋಧಿಸುವ ಒಂದಷ್ಟು ಶಕ್ತಿಗಳು ಬೆಳೆದವು. ಇದರ ಒಂದು ವಿಭಾಗ ನಮ್ಮಂಥವರದ್ದು. ಪ್ರಜಾಸತ್ತೆಯಲ್ಲಿ ನಂಬಿಕೆಯಿಟ್ಟವರದ್ದು. ಇನ್ನೊಂದು ಶಕ್ತಿ ದೇವರಾಜ ಅರಸು ಅವರ ಕಾಲದಲ್ಲಿ ಭೂಕಾಯ್ದೆ ಇತ್ಯಾದಿಗಳಿಂದ ನಷ್ಟ ಅನುಭವಿಸಿದ್ದ ಮೇಲ್ವರ್ಗದ್ದು. ನನ್ನ ಅನೇಕ ಸ್ನೇಹಿತರಿದ್ದ ಜನತಾ ಪಾರ್ಟಿ ಅಧಿಕಾರಕ್ಕೆ ಬಂದದ್ದೇ ಇಂಥ ಶಕ್ತಿಗಳನ್ನು ಬಳಸಿಕೊಂಡು. ಹಳ್ಳಿಯ ಜಮೀನ್ದಾರರಂಥ ಮೇಲ್ಜಾತಿಯ, ಮೇಲ್ವರ್ಗದ ಶಕ್ತಿಗಳು ಇಂದಿರಾ ಗಾಂಧಿ ವಿರುದ್ಧ ಒಟ್ಟಾದವು. ಅವರು ಬಡವರ ಪರ ಅನ್ನಿಸಿಕೊಳ್ಳಲು ಈ ‘ಒಗ್ಗಟ್ಟು’ ಒಂದು ಕಾರಣವಾಯಿತು.

ಇಂದಿರಾ ಗಾಂಧಿ ಮಾಡಿದ ಎರಡು ದೊಡ್ಡ ಕೆಲಸಗಳನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಒಂದು ಬ್ಯಾಂಕುಗಳ ರಾಷ್ಟ್ರೀಕರಣ, ಮತ್ತೊಂದು ರಾಜಧನ ರದ್ಧತಿ. ಬ್ಯಾಂಕಿನ ರಾಷ್ಟ್ರೀಕರಣವಾದಾಗ ಆದ ಬದಲಾವಣೆಯನ್ನು ನಾನೇ ಕಂಡಿದ್ದೇನೆ. ನನ್ನ ಅನುಭವದಿಂದಲೇ ಹೇಳುವುದಾದರೆ ಅಲ್ಲಿಯವರೆಗೂ ಬ್ಯಾಂಕು ಅಂದರೆ ನಮ್ಮಂಥ ಮಧ್ಯಮ ವರ್ಗದವರೂ ಹೆದರುತ್ತಲೇ ಹತ್ತಿರ ಹೋಗಬೇಕಾಗಿದ್ದ ಒಂದು ವ್ಯವಸ್ಥೆ. ನಾನು ಉಪನ್ಯಾಸಕನಾಗಿದ್ದಾಗ ನನಗೊಂದು ಅಕೌಂಟ್ ಓಪನ್ ಮಾಡುವುದೂ ಕಷ್ಟವಾಗಿತ್ತು. ಒಂದು ಸ್ಕೂಟರ್ ಸಾಲ ತೆಗೆದುಕೊಳ್ಳುವುದಕ್ಕೇ ಬಹಳ ಒದ್ದಾಡಬೇಕಾಯಿತು. ಇಂದಿರಾ ಗಾಂಧಿ ಬ್ಯಾಂಕ್ ರಾಷ್ಟ್ರೀಕರಣ ಮಾಡಿದ ಮೇಲೆ ಅವು ಸುಲಭವಾಗಿ ಸಾಲ ಕೊಡಲು ಆರಂಭಿಸಿದವು. ಆಗ ಒಬ್ಬ ಮೋಚಿಗೂ ಅಲ್ಲೊಂದು ಅಕೌಂಟ್ ತೆರೆಯಲು ಸಾಧ್ಯವಾಯಿತು. ಆ ಕಟ್ಟಡಗಳ ಒಳಕ್ಕೆ ಯಾವ ಮನುಷ್ಯನೂ ಹೋಗಬಹುದು ಎಂಬ ವಾತಾವರಣ ಸೃಷ್ಟಿಯಾಯಿತು.

ಹೀಗೆ ಕಣ್ಣಿಗೆ ಕಾಣುವ ಕೆಲವು ಬದಲಾವಣೆಗಳನ್ನು ಇಂದಿರಾ ಗಾಂಧಿ ಮಾಡಿದರು. ಇದರಲ್ಲಿ ಬಹಳ ಮುಖ್ಯವಾದ ಒಂದಂಶವಿದೆ. ಇಷ್ಟರವರೆಗೆ ಎಲ್ಲಾ ರಾಜಕೀಯ ಪಕ್ಷಗಳೂ ಹುಟ್ಟು ಹಾಕಿದ ಘೋಷಣೆಗಳಿಗಿಂತ ಅರ್ಥಪೂರ್ಣವಾದ ಘೋಷಣೆ ಎಂದರೆ ‘ಗರೀಬೀ ಹಟಾವೊ’. ಆ ಸ್ಲೋಗನ್ ಪ್ರಕಾರ ಅವರೇನೂ ಮಾಡಲೇ ಇಲ್ಲ. ಮಾಡದೇ ಇದ್ದರೂ ಅದನ್ನು ಮಾಡುತ್ತಾರೆ ಎಂದು ಬಡವರು ನಂಬಿದ್ದರು. (ಈಗಲೂ ಅದನ್ನು ನಂಬಿದ್ದಾರೆ) ಆ ಭರವಸೆ ಹೇಗೆ ಮೂಡಿದೆಯೆಂದರೆ – ಜನರಿಗಿರುವ ಒಂದು ರಾಜಕೀಯ ಪ್ರಜ್ಞೆಯ ಆಳಕ್ಕೆ ಇಳಿದುಬಿಟ್ಟಿದೆ. ಭಾರತಕ್ಕೆ ಏನೇನೋ ಆಗಬೇಕು, ಏನೇನೋ ಮಾಡಬೇಕು ಎಂಬ ಆಕಾಂಕ್ಷೆಗಳನ್ನೆಲ್ಲಾ ಇಂದಿರಾ ಗಾಂಧಿ ಪ್ರತಿನಿಧಿಸುತ್ತಿದ್ದರು. ನಾವು ಆಕೆಯನ್ನು ಮತ್ತೊಂದು ಸಾರಿ ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಈಗಿನ ಸ್ಥಿತಿಯನ್ನು ನೋಡಿದರೇ ಇದು ಅರ್ಥವಾಗುತ್ತದೆ. ತುರ್ತು ಪರಿಸ್ಥಿತಿಯ ದಿನಗಳಲ್ಲಿ ಇಂದಿರಾ ಗಾಂಧಿಗೆ ಬಹಳ ವಿರೋಧಿಯಾಗಿದ್ದ ಆರ್.ಎಸ್.ಎಸ್. ‘ಇಂದಿರಾ ಗಾಂಧಿ ನಮ್ಮ ದೇಶದ ಮಹಾನಾಯಕಿ’ ಎಂದು ಹೇಳುತ್ತಿದೆ. ನನಗೆ ಈ ಅನುಮಾನ ತುರ್ತು ಪರಿಸ್ಥಿತಿಯ ಕಾಲದಲ್ಲೂ ಇತ್ತು. ಮಧ್ವರಾವ್ ಎನ್ನುವ ಆರ್.ಎಸ್.ಎಸ್.ನ ಹಿರಿಯ ಕಾರ್ಯಕರ್ತರಿದ್ದರು. ಅವರ ಜತೆ ಮಾತನಾಡುವಾಗ ಕೇಳಿದೆ : ‘ನೀವು ಯಾಕೆ ಇಂದಿರಾ ಗಾಂಧಿಯನ್ನು ವಿರೋಧಿಸುತ್ತೀರಿ? ನಿಮ್ಮ ಸಂಘ ಹೇಳುವ ಅಷ್ಟೂ ಕೆಲಸವನ್ನು ಆಕೆ ಮಾಡಿದ್ದಾಳಲ್ಲಾ?’ ಎಂದು.

ಬಹುಶಃ ಇಂದಿರಾ ಗಾಂಧಿ ಮಾಡಿದ ಆ ಎಲ್ಲಾ ಕೆಲಸಗಳನ್ನು ಜನಸಂಘ ಅಧಿಕಾರದಲ್ಲಿದ್ದರೂ ಮಾಡಲು ಸಾಧ್ಯವಿರಲಿಲ್ಲವೇನೋ? ಪಾಕಿಸ್ತಾನವನ್ನು ಒಡೆದು ಬಾಂಗ್ಲಾದೇಶ ಮಾಡಿದ್ದು ಇಂದಿರಾ. ಸಿಕ್ಕಿಂ ಅನ್ನು ಭಾರತಕ್ಕೆ ಸೇರಿಸಿಕೊಂಡಿದ್ದು ಇಂದಿರಾ. ತಮಿಳುನಾಡಿನಲ್ಲಿ ದ್ರಾವಿಡ ಐಡಿಯಾಲಜಿಯ ಸರಕಾರವನ್ನು ಕಿತ್ತುಹಾಕಿದ್ದು ಇಂದಿರಾ. ಜನಸಂಖ್ಯಾ ನಿಯಂತ್ರಣಕ್ಕೆ ಕ್ರೂರ ವಿಧಾನ ಬಳಸಿದ್ದೂ ಇಂದಿರಾ. ಜನಸಂಘ ಅಧಿಕಾರದಲ್ಲಿದ್ದಿದ್ದರೆ ಇದಕ್ಕಿಂತ ಅತಿಯಾದ ಯಾವುದನ್ನು ಮಾಡಬಹುದಿತ್ತು?

ಮಧ್ವರಾಯರೂ ಸ್ವಲ್ಪ ಯೋಚನೆ ಮಾಡುವ ಮನುಷ್ಯ. ಅವರು – ‘ಹೌದು ನಾವು ಯಾಕೆ ವಿರೋಧಿಸುತ್ತಿದ್ದೇವೆ?’ ಎಂದಷ್ಟೇ ಹೇಳಿದರು. ನಾನಂದೆ ‘ಹೌದು ನೀವು ಮಾಡುತ್ತಿದ್ದೀರಿ. ನಾವೂ ಮಾಡುತ್ತಿದ್ದೇವೆ’. ಆರ್.ಎಸ್.ಎಸ್.ಗೆ ಕೊನೆಯ ತನಕ ಇಂದಿರಾ ಗಾಂಧಿಯನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ಅನ್ನಿಸಿತ್ತು.

ಸಮಾಜವಾದಿಗಳ ವಿಷಯಕ್ಕೆ ಬಂದರೂ ಹೀಗೆಯೇ ಇದೆ. ಅವರ ದೃಷ್ಟಿಯಲ್ಲಿ ಎಲ್ಲವೂ ರಾಷ್ಟ್ರೀಕರಣವಾಗಬೇಕಿತ್ತು. ಇಂದಿರಾ ಅದನ್ನು ಮಾಡಿದರಲ್ಲ! ಇದು ನಮ್ಮಲ್ಲಿದ್ದ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿತು. ಆದರೆ ಈಗ ನನಗನ್ನಿಸುತ್ತಿರುವುದೇ ಬೇರೆ. ಸ್ಟೇಟ್ ಅಥವಾ ಪ್ರಭುತ್ವದ ಶಕ್ತಿಯನ್ನು ಯಾರು ಅನುಮಾನದಿಂದ ನೋಡುತ್ತಿದ್ದರೋ ಅವರಿಗೆ ‘ಇದು ಏನು?’ ಎಂದು ಅರ್ಥವಾಗುತ್ತದೆ.

ಯೂರೋ‌ಪ್‌ನಲ್ಲಿಯೂ ರೂಸೋನಿಂದ ಇದು ನಡೆಯಿತು. ಆತ ಮನುಷ್ಯನ ಒಳ್ಳೆಯತನದಂಥ ವಿಷಯಗಳಲ್ಲಿ ನಂಬಿಕೆ ಇಟ್ಟವನಲ್ಲ. ‘ಮನುಷ್ಯರ ಮಧ್ಯೆ ಹೊಂದಾಣಿಕೆ ಸಾಧ್ಯವಿಲ್ಲ. ಬಹಳ ಕ್ರೂರವಾದ ರೀತಿಯಲ್ಲಿ ವರ್ತಿಸಿಬಿಡುತ್ತಾನೆ. ಆದ್ದರಿಂದ ಬಲವಾದ ಪ್ರಭುತ್ವ ಬೇಕು’ ಎಂದು ಅಭಿಪ್ರಾಯಪಟ್ಟ. ನಮ್ಮನ್ನೆಲ್ಲಾ ಕೆದಕಿ ನೋಡಿದರೆ ನಾವೂ ಇದೇ ರೀತಿಯ ಅಭಿಪ್ರಾಯವನ್ನು ನಂಬಿರುತ್ತೇವೆ. ಏನೇನೋ ಮಾತನಾಡುತ್ತೇವೆ. ಇವತ್ತು ಸ್ಟೇಟ್‌ಗೆ ಎಷ್ಟು ಬಲ ಇದೆ ಎಂದರೆ ಪ್ರತಿಯೊಬ್ಬನೂ ಬಾಯಿ ಮುಚ್ಚಿಕೊಂಡು ತೆರಿಗೆ ಪಾವತಿಸುತ್ತಾನೆ. ಅದನ್ನೂ ವಂಚಿಸಬೇಕು ಎಂದು ನಾವು ಪ್ರಯತ್ನಿಸುತ್ತೇವೆ. ಆದರೆ ಸ್ಟೇಟ್ ವಂಚನೆಗಳಿಗೆ ಅತೀತವಾಗಿ ಕೆಲಸ ಮಾಡುತ್ತಿರುತ್ತದೆ. ನಾವು ನಮಗೆ ಗೊತ್ತೇ ಇಲ್ಲದಂತೆ ಎಷ್ಟು ನಿಯಮಗಳನ್ನು ಪಾಲಿಸುತ್ತೇವೆ ಎಂದರೆ ಪ್ರಭುತ್ವ ಎನ್ನುವುದು ಎಲ್ಲದಕ್ಕಿಂತ ದೊಡ್ಡದು ಎಂದುಕೊಂಡುಬಿಟ್ಟಿದ್ದೇವೆ.

ಇದನ್ನು ಸ್ವಲ್ಪ ವಿವರಿಸುತ್ತೇನೆ : ನಾವು ಪ್ರಭುತ್ವದ ಹೊರಗಿರುವುದನ್ನು ಒಪ್ಪಿಕೊಳ್ಳಲಾರದ ಸ್ಥಿತಿಗೆ ತಲುಪಿದ್ದೇವೆ. ಮೊನ್ನೆ ಕುಂದಾಪುರದ ಹತ್ತಿರ ಯಾರೋ ಇಬ್ಬರನ್ನು ಕೊಂದರು. ಅವರು ಯಾರು? ನಕ್ಸಲರು ಹೌದೋ, ಅಲ್ಲವೋ? ಅವರನ್ನು ಹಿಡಿದು ಜೈಲಿಗೆ ಹಾಕಬಹುದಾಗಿತ್ತು. ವಿಚಾರಣೆ ನಡೆಸಬಹುದಾಗಿತ್ತು. ಅದನ್ನು ನಾವು ಯೋಚಿಸುತ್ತಲೇ ಇಲ್ಲ. ಅಷ್ಟರಮಟ್ಟಿಗೆ ಪ್ರಭುತ್ವವನ್ನು ಒಪ್ಪಿಕೊಳ್ಳಲು ಬರುವ ಮನುಷ್ಯನ ಸ್ಥಿತಿ ಇದೆಯಲ್ಲಾ ಅದು ಭಯಾನಕವಾದದ್ದು. ಪ್ರಭುತ್ವ ಆಗ ಏನುಬೇಕಾದರೂ ಮಾಡುತ್ತದೆ.

ಈ ಅಪಾಯ ನಮ್ಮ ಮಹಾನುಭಾವರಿಗೆ ಗೊತ್ತಿತ್ತು. ಆ ಮಹಾನುಭಾವರು ಇಬ್ಬರೇ ಇಬ್ಬರು: ಒಬ್ಬರು ಗಾಂಧಿ ಮತ್ತೊಬ್ಬರು ಟ್ಯಾಗೋರ್. ಗಾಂಧಿ ‘ನ್ಯಾಶನಲಿಸಂ’ ಅನ್ನು ವಿರೋಧಿಸಿದರು. ಟ್ಯಾಗೋರ್ ನೇಶನ್ ಸ್ಟೇಟನ್ನು ಅನುಮಾನದಿಂದ ನೋಡಿದರು. ಕಾರಣ ಎರಡು ಮಹಾಯುದ್ಧಗಳಲ್ಲಿ ಈ ನೇಶನ್ ಸ್ಟೇಟ್ ಯೂರೋಪಿನಲ್ಲಿ ಏನು ಮಾಡಿತು ಎಂದು ಅವರಿಗೆ ಗೊತ್ತಿತ್ತು. ಭಾರತದ ಸಂದರ್ಭದಲ್ಲಿ ನೇಶನ್ ಸ್ಟೇಟ್ ಹೊರತಾದ ಒಂದು ವ್ಯವಸ್ಥೆಯನ್ನು ಈ ಇಬ್ಬರೂ ಮಹಾನುಭಾವರು ಪ್ರತಿಪಾದಿಸಿದರು. ಆದರೆ ಕೊನೆಗೆ ‘ಪಾಕಿಸ್ತಾನ’ ಮತ್ತು ‘ಭಾರತ’ ಆದಾಗ ಎರಡೂ ನೇಶನ್ ಸ್ಟೇಟ್‌ಗಳಾಗಿಬಿಟ್ಟವು. ಇಂದಿರಾ ಗಾಂಧಿ ತನ್ನ ಕಾಲದಲ್ಲಿ ನೇಶನ್ ಸ್ಟೇಟ್‌ಗೆ ಬೇಕಾದ ಎಲ್ಲಾ ಬಲವನ್ನು ತಂದುಕೊಟ್ಟರು. ಇದೇ ಕಾರಣಕ್ಕೆ ಆರ್.ಎಸ್.ಎಸ್. ಇಂದಿರಾ ಗಾಂಧಿಯನ್ನು ಹೊಗಳುತ್ತದೆ. ನಮ್ಮ ನಿತ್ಯದ ಕೆಲಸಗಳಿಗೆ, ಒಬ್ಬರು ಮತ್ತೊಬ್ಬರನ್ನು ಶೋಷಿಸದೆ ಇರಲು ಕಾನೂನು ಬೇಕು, ವ್ಯವಸ್ಥೆ ಬೇಕು ಎಂದುಕೊಳ್ಳುತ್ತಲೇ ನಾವು ಪ್ರಭುತ್ವವನ್ನು ಬಲಪಡಿಸಿಬಿಡುತ್ತೇವೆ. ಆದರೆ ಪ್ರಭುತ್ವ ಇವ್ಯಾವುದನ್ನೂ ಮಾಡದೇ ತನಗೆ ಬೇಕಾದುದನ್ನು ಮಾಡಿಬಿಡುತ್ತದೆ.

ಈ ಅಪಾಯವನ್ನು ತಪ್ಪಿಸಿಕೊಳ್ಳುವುದಕ್ಕೆ ಇರುವುದು ಒಂದೇ ಒಂದು ಮಾರ್ಗ. ಪ್ರಭುತ್ವದ ಯಾವ ಒತ್ತಡವೂ ಇಲ್ಲದೆ ಸಭ್ಯ ಸಮಾಜವನ್ನು ನಿರ್ಮಾಣ ಮಾಡುವುದು ಸಾಧ್ಯವೇ ಎನ್ನುವ ಹುಡುಕಾಟದಲ್ಲಿ ತೊಡಗಬೇಕಾಗುತ್ತದೆ. ಇದು ನಿರಂತರವಾದ ಹುಡುಕಾಟ. ಇದು ಎಷ್ಟೆಷ್ಟು ಹೆಚ್ಚಾಗುತ್ತದೋ ಅಷ್ಟಷ್ಟು ಪ್ರಭುತ್ವದ ಅಗತ್ಯ ಕಡಿಮೆಯಾಗುತ್ತದೆ. ಹಾಗೆ ಪ್ರಭುತ್ವದ ಅಗತ್ಯ ಕಡಿಮೆಯಾಗುವ ವಿಧಾನವನ್ನು ಪ್ರಾಚೀನ ಭಾರತ ಹುಡುಕಿತ್ತು. ಆದರೆ ಅದು ಜಾತಿ ಪದ್ಧತಿಯಾಗುವಷ್ಟಕ್ಕೆ ಸೀಮಿತವಾಗಿಬಿಟ್ಟಿತು. ಅದು ಒಳಗಿನ ಸತ್ವವನ್ನು ಕಳೆದುಕೊಂಡಿತು. ಗ್ರಾಮಗಳು ಅಂಬೇಡ್ಕರ್‌ರಂಥವರಿಗೆ ನರಕಗಳಾಗಿ ಕಾಣಿಸಿದವು. ನಗರೀಕರಣವೇ ದಲಿತರ ವಿಮೋಚನೆಯ ಹಾದಿಯಂತೆ ತೋರಿತು. ನೆಹರೂ ಅಂಥಾ ಪ್ರಭುತ್ವವನ್ನು ಅತ್ಯಂತ ಪ್ರಜಾಸತ್ತಾತ್ಮಕವಾಗಿಯೇ ಬಲಪಡಿಸಿಕೊಂಡು ಮನುಷ್ಯನ ನಡುವಿನ ಎಲ್ಲಾ ಭಿನ್ನತೆಗಳನ್ನು ತೊಡೆಯಬಹುದು ಎಂದು ಕನಸು ಕಂಡರು. ತಮಾಷೆಯೆಂದರೆ ಈ ಎಲ್ಲಾ ಪ್ರಯತ್ನಗಳೂ ಪ್ರಭುತ್ವವನ್ನು ಬಲಪಡಿಸಿದವು. ಎಲ್ಲಾ ರಾಜಕೀಯ ಪಕ್ಷಗಳೂ ಇದೇ ಹಾದಿಯಲ್ಲಿರುತ್ತವೆ. ಹುತಾತ್ಮರಾಗಲು ಹೊರಟ ನಕ್ಸಲೀಯರ ದೃಷ್ಟಿಯಲ್ಲಿರುವುದೂ ಇದೇ. ನಾವೀಗ ಈ ಸ್ಥಾಪಿತ ಚಿಂತನಾ ವಿಧಾನಗಳಿಗಿಂತ ಭಿನ್ನವಾಗಿ ಯೋಚಿಸುವ ಅಗತ್ಯವಿದೆ. ಇಂತಹ ಚಿಂತನೆಗಳು ಕವಿಗಳಲ್ಲಿ, ಲೇಖಕರಲ್ಲಿ ದೇವರನ್ನು ಪ್ರೀತಿಸುವ ಸಂತರಲ್ಲಿ, ಪ್ರೇಮಿಗಳಲ್ಲಿದೆ. ನಮ್ಮ ಪರಿಸರ ಚಳವಳಿಗಳು, ನೈಸರ್ಗಿಕ ಕೃಷಿ, ಜೈವಿಕ ಕೃಷಿಯ ಆಂದೋಲನಗಳು ಮುಂತಾದವುಗಳಲ್ಲಿ ಈ ಭಿನ್ನ ಚಿಂತನೆಯ ಸುಳಿವುಗಳು ಕಾಣಿಸುತ್ತಿವೆ.

೨೬೨೦೦೫ ಉದಯವಾಣಿಯಲ್ಲಿ ಪ್ರಕಟಿತ ಲೇಖನ.
ನಿರೂಪಣೆ : ಎನ್..ಎಂ. ಇಸ್ಮಾಯಿಲ್

* * *