ವಾಕ್ ಮತ್ತು ಅರ್ಥ – ಇವುಗಳ ನಡುವಿನ ಸಂಬಂಧವನ್ನು ಹೇಳುವಾಗ ಕಾಳಿದಾಸ ಒಂದು ಧಾರ್ಮಿಕ ಸಂಕೇತವನ್ನು ಬಳಸುತ್ತಾನೆ.

ವಾಗರ್ಥಾವಿನ ಸಂಪೃಕ್ತೌ |
ವಾಗರ್ಥಃ ಪ್ರತಿಪತ್ತಯೇ ||
ಜಗತಃ ಪಿತರೌ ವಂದೇ |
ಪಾರ್ವತೀ ಪರಮೇಶ್ವರೌ ||

ಪಾರ್ವತೀ ಪರಮೇಶ್ವರರು ಹೇಗೆ ಏಕವಾಗಿರುತ್ತಾರೋ, ಹಾಗೇ ವಾಕ್ ಮತ್ತು ಅರ್ಥ ಒಂದಕ್ಕೊಂದು ಸಂಬಂಧಪಟ್ಟುಕೊಂಡು ಇರುವ ಹಾಗೆ ಕೃಪೆ ಮಾಡು ಪಾರ್ವತೀಪರಮೇಶ್ವರ ಅಥವಾ ಅರ್ಧನಾರೀರ್ಶವರ ಕೂಡ ಭಾರತದಲ್ಲಿ ಮಾತ್ರ ಸಿಗುವಂಥ ಒಂದು ಕಲ್ಪನೆ. ಇಡೀ ಯೂರೋಪ್ ಗಂಡು-ಹೆಣ್ಣು ಎನ್ನುವ ವಿರೋಧದಲ್ಲಿ ಚರ್ಚೆ ನಡೆಸುತ್ತಿರಬೇಕಾದರೆ, ಪ್ರಾಚೀನ ಭಾರತ ಗಂಡು ಮತ್ತು ಹೆಣ್ಣು ಒಂದೇ ಆಗಿರುವ ಸ್ವರೂಪದಲ್ಲಿ ದೇವರನ್ನು ಕಲ್ಪಿಸಿಕೊಂಡಿತು.

ವಾಗರ್ಥದ ಮಾತಿಗೆ ಬಂದರೆ, ಪ್ರಪಂಚದ ಯಾವುದೇ ಒಂದು ಪದ್ಯದಲ್ಲಿ ಏಕಕಾಲದಲ್ಲಿ ಧಾರ್ಮಿಕವಾದ ಒಂದು ಭಾವವನ್ನೂ ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ಸೂತ್ರವನ್ನು ಒಂದೇ ಎನ್ನುವಂತೆ ಹೇಳಿದ್ದು ಕಾಳಿದಾಸ ಮಾತ್ರ. ಮಾತಿನ ಜೊತೆ ಅರ್ಥ ಇರಲೇಬೇಕು ಎಂದೇನಿಲ್ಲ. ಎಷ್ಟೋ ಸಲ ಅರ್ಥವನ್ನು ಮುಚ್ಚುವುದಕ್ಕೋಸ್ಕರ ಮಾತಾಡುವುದೂ ಉಂಟು. ಹಾಗೆ ಸುಳ್ಳನ್ನು ಹೇಳುವುದಕ್ಕೆ ಸಾಧ್ಯವಿರೋದು ಭಾಷೆಯಲ್ಲಿ ಮಾತ್ರ. ಹಾಗೇ ಸತ್ಯವನ್ನು ಹೇಳೋದಕ್ಕೂ ಭಾಷೆಯಲ್ಲಿ ಮಾತ್ರ ಸಾಧ್ಯ ಭಾಷೆಯಲ್ಲಿ ಎರಡನ್ನೂ ಹೇಳೋಕೆ ಸಾಧ್ಯವಿರೋದರಿಂದ ಸಾಹಿತ್ಯ ಮತ್ತು ಧರ್ಮದ ಸಂಬಂಧವನ್ನು ಕುರಿತು ತುಂಬ ಗಾಢವಾಗಿಯೇ ಚಿಂತಿಸಬೇಕಾಗುತ್ತದೆ. ಯಾಕೆಂದರೆ ಮಾತು ಬಹಳ ಸಲೀಸಾದಾಗ ಅದು ಸತ್ಯವನ್ನು ಹೇಳುತ್ತೋ ಇಲ್ಲವೋ ಎನ್ನುವ ಅನುಮಾನ. ಅದು ತುಂಬ ಸುಲಲಿತವಾದಾಗ ಅದು ಸತ್ಯವನ್ನು ಮರೆಮಾಚಬಹುದು ಎಂಬ ಅನುಮಾನ.

ಈ ಅನುಮಾನದ ನಡುವೆಯೇ ಸುಮಾರು ಹತ್ತೊಂಬತ್ತನೆಯ ಶತಮಾನದಲ್ಲಿ ಯೂರೋಪಿನಲ್ಲಿ ಒಂದು ಚರ್ಚೆ ಆರಂಭವಾಯಿತು. ಅದು ‘ಅಥೆಂಟಿಸಿಟಿ’ ಮತ್ತು ‘ಸಿನ್ಸಿಯಾರಿಟಿ’ಗೆ ಸಂಬಂಧಿಸಿದ ಸಂವಾದ. ಮಾತಿನಲ್ಲಿರುವ ‘ಪ್ರಾಮಾಣಿಕತೆ’ ಮತ್ತು ‘ಅಧಿಕೃತತೆ’ಗೆ ಸಂಬಂಧಪಟ್ಟ ಆ ಮಾತುಗಳನ್ನು ಓದುವಾಗ ನನಗೆ ಎದುರಾದದ್ದು ಮುಕ್ತಾಯಕ್ಕ ಮತ್ತು ಅಲ್ಲಮರ ನಡುವಿನ ಸಂವಾದ. ಆ ಸಂದರ್ಭ ಹೀಗಿದೆ; ಮುಕ್ತಾಯಕ್ಕ ದುಃಖದಲ್ಲಿದ್ದಾಳೆ. ಆಕೆಯ ಸೋದರ, ಮಾತೇ ಆಡೋಲ್ಲ ಅಂತ ವ್ರತ ಹಿಡಿದಿದ್ದವನು ಸತ್ತುಹೋಗಿದ್ದಾನೆ. ಅವನು ಒಂದು ಸಾರಿ ಕಾಡಿಗೆ ಹೋಗಿದ್ದಗ ಒಂದು ಸರ್ಪ ರತ್ನವನ್ನು ಮುಚ್ಚಿಟ್ಟುಕೊಳ್ಳಬೇಕು ಎಂದು ನಿಯಮ ಮಾಡಿಕೊಳ್ತಾನೆ. ಮುಂದೊಂದು ದಿವಸ ಅಕ್ಕಿಯ ಮೂಟೆಯನ್ನೋ ಏನೋ ಹೊರುವಾಗ ಅದು ನೊಸಲಿಗೆ ತಾಗಿ ‘ಶಿವ’ ಅಂದು ಪ್ರಾಣಬಿಡ್ತಾನೆ. ಶಿವ ಅಂತಲೂ ಹೇಳಬಾರದು ಅನ್ನೋದು ಅವನ ವ್ರತವಾಗಿತ್ತು.

ಈ ಹೊತ್ತಲ್ಲಿ ಅಲ್ಲಮ ಬಂದು ಮುಕ್ತಾಯಕ್ಕನ ಹತ್ತಿರ ‘ಈ ಜೀವ ಶಾಶ್ವತ ಅಲ್ಲ, ಆತ್ಮ ಶಾಶ್ವತ’ ಮುಂತಾದ ಮಾತುಗಳನ್ನು ಹೇಳ್ತಾನೆ. ಆಗ ಮುಕ್ತಾಯಕ್ಕ ಹೇಳ್ತಾಳೆ; ಇಂಥ ಮಾತುಗಳನ್ನು ಯಾರು ಬೇಕಾದರೂ ಹೇಳಬಹುದು. ಇದನ್ನೆಲ್ಲ ಸುಲಭವಾಗಿ ಯಾರಿಗೆ ಹೇಳೋಕೆ ಬರೋದಿಲ್ಲ ಹೇಳು? ಒಂದು ಮಾತು ಆಡಿ ನನ್ನ ಸೋದರ ತನ್ನ ಪ್ರಾಣವನ್ನೇ ಕಳಕೊಂಡಿದ್ದಾನೆ. ಹಾಗಿರುವಾಗ ನೀನು ಆತ್ಮ ಶಾಶ್ವತ, ಜೀವ ನಶ್ವರ ಅಂತ ಹೇಳೋದರಲ್ಲಿ ಏನು ಅರ್ಥವಿದೆ? ನಮ್ಮ ಎಲ್ಲ ಮಠಾಧೀಶರಿಗೆ ಇರುವ ಸಮಸ್ಯೆಯೂ ಇದೇ. ಅವರು ಹೇಳೋಕೆ ಶುರು ಮಾಡೋದನ್ನೆಲ್ಲ ನಾವು ಮೊದಲೇ ಕೇಳಿರ‍್ತೇವೆ. ಒಂದು ಕಿವೀಲಿ ಕೇಳಿ ಇನ್ನೊಂದು ಕಿವೀಲಿ ಬಿಡ್ತೇವೆ. ಮನಸ್ಸಿಗೆ ನಾಟೋ ಹಾಗೆ ಗಾಢವಾಗಿ ಹೇಳೋದು ಹೇಗೆ? ಅದೊಂದು ಅನುಭವ ಆಗೋ ಹಾಗೆ ಹೇಳೋದು ಹ್ಯಾಗೆ?

ಆಗ ಅಲ್ಲಮ ‘ಶಬ್ದಸೂತಕ’ ಎನ್ನುವ ಒಂದು ಪದವನ್ನು  ಬಳಸುತ್ತಾನೆ. ಶಬ್ದಲ್ಲೊಂದು ಸೂತಕ ಇದೆ ಎನ್ನುವುದು ಬಹುಶಃ ಅಲ್ಲಮನನ್ನು ಬಿಟ್ಟರೆ ಶೇಕ್ಸ್‌ಪಿಯರ್‌ಗೆ ಗೊತ್ತಿತ್ತು. ಆತನ ಒಂದು ನಾಟಕದಲ್ಲಿ ‘ಯಾರು ಪ್ರೀತಿಯನ್ನು ಹೇಳಿಕೊಳ್ಳೋಕೆ ಸಂಕೋಚಪಡುತ್ತಾರೋ ಅವರಲ್ಲೇ ಅಗಾಧವಾದ ಪ್ರೀತಿ ಇರುತ್ತೆ’ ಎಂಬ ಮಾತು ಬರುತ್ತದೆ.

ಯಾರು ಸುಲಭವಾಗಿ ಪ್ರೀತಿನ ಹೇಳಿಕೊಳ್ತಾರೋ ಅಲ್ಲಿ ಅಷ್ಟು ಪ್ರೀತಿ ಇರೋಲ್ಲ. ಮಾತು ಹೇಗೆ ನಿಜವಾಗುತ್ತೆ ಎನ್ನುವ ಸಮಸ್ಯೆ ಅಲ್ಲಮನನ್ನು ಗಾಢವಾಗಿ ಕಾಡಿತು. ಆತ ಮಾತಲ್ಲಿ ಸಿನ್ಸಿಯಾರಿಟಿ ಇದೆಯೋ ಇಲ್ಲವೋ ಕೇಳಲಿಲ್ಲ, ಅಧಿಕೃತತೆ ಇದೆಯೋ ಅಂತ ನೋಡಿದ. ಆದ್ದರಿಂದಲೇ ಭಾಷೆಯನ್ನು ವಕ್ರವಾಗಿ ಬಳಸದೇಹೋದರೆ ಅದು ನಿಜವನ್ನು ಹೇಳಲಾರದು ಎಂದು ಅವನಿಗೆ ಗೊತ್ತಿತ್ತು. ಅದು ಸಾಕ್ರಟೀಸ್‌ಗೂ ಗೊತ್ತಿತ್ತು. ಆತನನ್ನು ಯಾರಾದರೂ ಸಂಜೆ ‘ನಮ್ಮನೆಗೆ ಊಟಕ್ಕೆ ಬಾ’ ಎಂದು ಕರೆದರೆ, ಆತ ‘ಬರ‍್ತೀನಿ, ಬರೋಲ್ಲ’ ಎಂದು ಹೇಳುತ್ತಿರಲಿಲ್ಲ. ‘ನಿಮ್ಮ ಮನೆಗೆ ಊಟಕ್ಕೇಂತ ಹೊರಟು ಹೊರಗೆ ಬರುವ ಹೊತ್ತಿಗೆ ನಮ್ಮ ಮನೆ ಮುಂದಿನ ರೆಂಬೆ ತುಂಡಾಗಿ ತಲೆಮೇಲೆ ಬಿದ್ದು ನಾನು ಸಾಯದೇ ಇದ್ರೆ ಬರ್ತೀನಿ’ ಎನ್ನುತ್ತಿದ್ದ. ಇದರಲ್ಲೊಂದು ಒಳಾರ್ಥ ಇದೆ. ಯಾವನಿಗೆ ಮೃತ್ಯುಪ್ರಜ್ಞೆ ಇದೆಯೋ ಅವನು ‘ಸಂಜೆ ಬರ್ತೀನಿ’ ಎಂದು ಹೇಳೋದಿಲ್ಲ. ಯಕ್ಷಪ್ರಶ್ನೆಯಲ್ಲಿ ಧರ್ಮರಾಯ ಕೊಟ್ಟ ಉತ್ತರವೋ ಅದೆ. ಸಾಯ್ತೀನಿ ಅಂತ ಗೊತ್ತಿದ್ದೂ ಅಮರರು ಅಂತ ಅಂದ್ಕೋತಾರಲ್ಲ ಅದೇ ಆಶ್ಚರ್ಯ ಅಂತ.

ನಾವು ಅನೇಕ ಸಾರಿ ಪ್ರಮಾಣಿಕವಾಗಿಯೇ ಮಾತಾಡ್ತೀವಿ. ಅದು ನಿಜವಾಗಬೇಕಾದರೆ ಅದಕ್ಕೆ ಇನ್ನೇನೋ ಒಂದು ಸೇರಬೇಕು. ಧರ್ಮದ ಅನುಭವ ನಿಜವಾಗಬೇಕಾದರೆ, ಅದು ಸಾಹಿತ್ಯದಲ್ಲಿ ವ್ಯಕ್ತವಾಗಬೇಕಾದರೆ ಭಾಷೆ ಮತ್ತು ಅರ್ಥಕ್ಕಿರಬೇಕಾದ ಸಂಬಂಧ ಗಾಢವಾಗಿರಬೇಕು. ಅದನ್ನೇ ಕಾಳಿದಾಸ ಬೇಡಿದ್ದು.

ಭಾರತದಲ್ಲಿ ಸಾಹಿತ್ಯಕ್ಕೂ ಧರ್ಮಕ್ಕೂ ಒಡಕೆಂಬುದೇ ಇಲ್ಲ. ಈ ಇಡೀ ಭಾರತದಲ್ಲಿ ನೂರಾರು ಭಾಷೆ ಇದ್ದರೂ ಎಲ್ಲರಿಗೂ ಅರ್ಥವಾಗುವ ಎರಡು ಭಾಷೆಯಿದೆ; ರಾಮಾಯಣ ಮತ್ತು ಮಹಾಭಾರತ. ಕನ್ನಡದಲ್ಲೇ ಒಂದು ಸಾವಿರ ರಾಮಾಯಣಗಳಿವೆ. ಅವೆಲ್ಲ ಜನಪದ ರಾಮಾಯಣಗಳು. ಎ.ಕೆ.ರಾಮಾನುಜನ್ ಇಂಥದ್ದೊಂದು ಜನಪದ ರಾಮಾಯಣದ ಕತೆ ಹೇಳುತ್ತಿದ್ದರು. ಒಂದು ಜನಪದ ಕಥೆಯಲ್ಲಿ ಸೀತೆ ರಾಮನ ಹತ್ತಿರ ತಾನೂ ಕಾಡಿಗೆ ಬರ್ತೀನಿ ಎಂದು ವಾದ ಮಾಡ್ತಿರ್ತಾಳೆ. ರಾಮ ‘ನೀನು ರಾಜಕುಮಾರಿ, ಕಾಡಿಗೆ ಬರಕೂಡದು’ ಎಂದು ವಾದಿಸ್ತಾನೆ. ಜನಪದದ ಸೀತೆ ಕೇಳ್ತಾಳೆ. ‘ನಾನು ಕೇಳಿದ ಎಲ್ಲಾ ರಾಮಾಯಣದಲ್ಲೂ ಸೀತೆ ಕಾಡಿಗೆ ಹೋಗ್ತಾಳೆ. ನಾನು ಯಾಕೆ ಕಾಡಿಗೆ ಬರಕೂಡದು?’ ಇದನ್ನು ಸಾಹಿತ್ಯದಲ್ಲಿ ಅಂತರ್‌ಪಠ್ಯ ಅಂತಾರೆ. ಅಕ್ಷರ ಬರದ ಸೀತೆಗೂ ವಾಲ್ಮೀಕಿ ರಾಮಾಯಣ ಗೊತ್ತಿರುತ್ತದೆ. ಹೋಮರ ಈಲಿಯಡ್ ಓದಿದರೆ ಉಂಟು, ಇಲ್ಲದಿದ್ದರೆ ಇಲ್ಲ. ಆದರೆ ನಾವು ಯಾರೂ ಮಹಾಭಾರತ, ರಾಮಾಯಣಗಳನ್ನು ಪ್ರಥಮ ಬಾರಿಗೆ ಓದೋದಿಲ್ಲ. ಅದು ನಮಗೆ ಗೊತ್ತಿರುತ್ತದೆ.

ಹೀಗಾಗಿ ನಮ್ಮ ರಾಮಾಯಣ, ಮಹಾಭಾರತಗಳು ಧರ್ಮದ ಪಠ್ಯವೂ ಹೌದು. ಸಾಹಿತ್ಯ ಕೃತಿಯೂ ಹೌದು. ಯಾವ ಮತಧರ್ಮದಲ್ಲೂ ಒಂದು ಧಾರ್ಮಿಕ ಕೃತಿ ಸಾಹಿತ್ಯ ಕೃತಿಯೂ ಆಗಿರುವ ಉದಾಹರಣೆ ಅಪರೂಪ. ದೊಡ್ಡ ದಾರ್ಶನಿಕರಲ್ಲಿ ಅದು ಸಾಧ್ಯವಾಗಿದೆ.

ಡಾರ್ವಿನ್ ವಿಕಾಸವಾದವನ್ನು ಬೋಧಿಸಿದ ತರುವಾಯ ಇಂಗ್ಲೆಂಡಿನಲ್ಲೊಂದು ಕ್ರೈಸಿಸ್ ಶುರುವಾಯ್ತು. ವಿಕಾಸವಾದದ ಪ್ರಕಾರ ಈ ಜಗತ್ತು ಆಡಮ್ ಮತ್ತು ಈವ್‌ರಿಂದ ಶುರುವಾಗಿದ್ದಲ್ಲ. ಅಂದ ಮೇಲೆ ಬೈಬಲ್ ನಿಜವೇ ಎನ್ನುವ ಪ್ರಶ್ನೆ ಮೂಡಿತು. ಆದರೆ ನಮ್ಮಲ್ಲಿ ಯಾವಾಗಲೂ ರಾಮಾಯಣ, ಮಹಾಭಾರತ ನಿಜವೇ ಎನ್ನುವ ಪ್ರಶ್ನೆ ಬರಲಿಲ್ಲ. ಅದು ಉಪಯುಕ್ತವೇ ಎನ್ನುವ ಪ್ರಶ್ನೆ ಮೂಡಿರಬಹುದು. ಹೀಗಾಗಿ ಇನ್ನು ಮುಂದೆ ಧಾರ್ಮಿಕ ಗ್ರಂಥಗಳನ್ನೆಲ್ಲ ಸಾಹಿತ್ಯ ಗ್ರಂಥಗಳೆಂದು ಓದಬೇಕು ಎಂದು ಒಬ್ಬ ಲೇಖಕ ಹೇಳಿದ. ಬೈಬಲ್ ಕುರಾನ್‌ಗಳನ್ನು ಸಾಹಿತ್ಯ ಕೃತಿಗಳೆಂದು ಓದಿದಾಗ ಆಗುವ ಅನುಭವವೇ ಬೇರೆ. ಆದರೆ ಭಾರತದಲ್ಲಿ ಅಂಥ ಸಮಸ್ಯೆ ಬರಲೇ ಇಲ್ಲ. ಯಾಕೆಂದರೆ ನಮ್ಮ ರಾಮಾಯಣ, ಮಹಾಭಾರತ ಮತ್ತು ವೇದೋಪನಿಷತ್ತುಗಳು ವಾಚ್ಯಾರ್ಥದಲ್ಲಿ ಓದುವುದಕ್ಕಿರುವ ಗ್ರಂಥಗಳೇ ಅಲ್ಲ. ಅದು ಅನುಭವವಾಗುವುದು ವಾಗರ್ಥ ಪ್ರತಿಪತ್ತಿಯಲ್ಲಿ. ಅದು ನಮ್ಮನ್ನು ಸಾಂಕೇತಿಕವಾಗಿ ಬಂದು ಸೇರುತ್ತದೆ.

ಆದ್ದರಿಂದಲೇ ಅನುಭಾವಿಗಳಿಗೆ ವಾಚಾಳಿತನ ಎಂದರೆ ಅನುಮಾನ. ಉದಾಹರಣೆಗೆ ಝೆನ್. ಅದರ ಒಂದು ಕತೆಯಲ್ಲಿ ಒಬ್ಬ ಗಾಡಿ ಚಕ್ರ ಮಾಡೋನು ಬರ್ತಾನೆ. ಅವನೂ ಕೂಡ ಅನುಭಾವಿಯೇ. ಒಂದು ಗಾಡಿಯ ಚಕ್ರ ಮಾಡೋವಾಗ ಮೊದಲು ಮರವನ್ನು ಧ್ಯಾನಮಾಡಿ, ಅದಕ್ಕೆ ಯಾವ ಉಳಿ, ಯಾವ ಹತಾರ ಬಳಸಬೇಕು ಅಂತ ಧ್ಯಾನಿಸಿ ಅದು ಯಾವ ಸ್ವರೂಪ ಪಡೀಬೇಕು, ಯಾವ ಉಪಯೋಗಕ್ಕೆ ಬರಬೇಕು ಎಂದು ಯೋಚಿಸುತ್ತಾನೆ. ಅವನೊಬ್ಬ ತತ್ವಜ್ಞಾನಿಯನ್ನು ನೋಡ್ತಾನೆ. ಆತ ಸತ್ತು ಹೋಗಿರೋ ಮತ್ತೊಬ್ಬ ತತ್ವಜ್ಞಾನಿಯ ಪುಸ್ತಕ ಓದ್ತಾ ಕೂತಿರ‍್ತಾನೆ. ಆಗ ಗಾಡಿ ಮಾಡುವವನು ಹೇಳ್ತಾನೆ : ‘ನಿಮ್ಮ ಮೇಲೆ ನನಗೆ ಗೌರವ. ಆದರೆ ನೀವು ಮೂಖ್ರು. ಸತ್ತು ಹೋಗಿರುವ ತತ್ವಜ್ಞಾನಿಯ ಪುಸ್ತಕ ಓದ್ತಿದ್ದೀರಿ. ನನ್ನನ್ನೇ ತಗೊಳ್ಳಿ. ನಾನು ಗಾಡಿ ಮಾಡುವಾಗ ತೀರಾ ಯೋಚನೆ ಮಾಡಿದ್ರೂ ಆಗಲ್ಲ, ಯೋಚನೆ ಮಾಡದೇ ಇದ್ರೂ ಆಗಲ್ಲ. ಹೀಗಾಗಿ ಈ ಗಾಡಿ ಚಕ್ರ ಮಾಡೋ ಕೆಲಸ ಪ್ರಾಮಾಣಿಕತೆಯ ಮೇಲೆ ನಿಂತಿಲ್ಲ, ಅಧಿಕೃತತ್ವ ಬೇಕು. ಸಾಹಿತ್ಯದಲ್ಲೂ ಹಾಗೇ; ಒಳ್ಳೆಯ ಸಾಹಿತ್ಯ ಯಾವುದು, ತೋರಿಕೆಯ ಸಾಹಿತ್ಯ ಯಾವುದು ಅಂತ ಗುರುತಿಸೋದಕ್ಕೆ ಅಧಿಕೃತತ್ವಬೇಕು.

ನಮ್ಮ ಅನೇಕ ಧಾರ್ಮಿಕ ನಂಬಿಕೆಗಳನ್ನು ನಾವು ಮೂಢನಂಬಿಕೆಗಳು ಅಂತೀವಿ. ನಮ್ಮ ಮುಂದೆ ಅನೇಕ ವಿಜ್ಞಾನಿಗಳು ಇದ್ರೆ ಅವರ ಒಪ್ಪಿಗೆಗಾಗಿ ಎಲ್ಲವನ್ನೂ ಮೂಢನಂಬಿಕೆ ಅಂತ ಕರೀತೀವಿ. ಆದರೆ ಅಡಿಗರ ಒಂದು ಪಂದ್ಯದಲ್ಲಿ ಗರುಡನ ಚಿತ್ರ ಬರುತ್ತೆ: ‘ಗಾಳಿ ಕಡೆಯಲು ಸೆಟೆದ ಬೆಳ್ಳಿ ಮಂತು’ ಅಂತ ಅವರು ಗರುಡನನ್ನು ಕರೀತಾರೆ. ಆಕಾಶದಲ್ಲಿ ಹಾರೋ ಗರುಡ ಕೆಳಗಿನಿಂದ ನೋಡಿದರೆ ಬೆಳ್ಳಗೆ ಕಾಣಿಸುತ್ತೆ. ಗಾಳಿಯನ್ನು ಮಂಥನ ಮಾಡುವ ಕಡಗೋಲು ಅನ್ನಿಸುತ್ತೆ. ನಾನು ಚಿಕ್ಕಂದಿನಲ್ಲಿ ಹೈಸ್ಕೂಲಿಗೆ ನಡಕೊಂಡು ಬರುವಾಗ ಒಬ್ಬರು ಸೈಕಲ್ ಪಂಚೆ ಹಾಕಿಕೊಂಡ ಹಿರಿಯರು ಸೈಕಲ್ಲಿನಲ್ಲಿ ಬಂದು ಒಂದು ಕಡೆ ನಿಂತು ಗರುಡನಿಗಾಗಿ ಕಾಯೋರು. ಗರುಡ ಬಂದ ನಂತರ ಅದಕ್ಕೆ ನಮಸ್ಕಾರ ಮಾಡಿ ಹೊರಟು ಹೋಗ್ತಿದ್ರು. ಅಡಿಗರ ಪದ್ಯ ಓದಿದಾಗ ಆ ಸಾಲುಗಳು ಅನುಭವ ನನಗೊಂದು ದೃಶ್ಯವಾಗಿ ಆಗ್ತಿತ್ತು. ಆದರೆ ಅದಕ್ಕೊಂದು ಶೋಭೆ ಬರೋದು ನಾನು ಗರುಡನನ್ನು ದೇವತಾಸ್ವರೂಪ ಅಂತ ತಿಳಿಯುವ ಸಂಪ್ರದಾಯದಿಂದ ಬಂದಾಗ. ಒಂದು ಪಕ್ಷಿಯನ್ನು ಕೂಡಾ ದೇವತಾ ಸ್ವರೂಪ, ಅದು ವಿಷ್ಣುವಿನ ವಾಹನ, ಅಂತ ತಿಳಿಯುವ ಸಂಪ್ರದಾಯದಿಂದ ಬಂದ ಮನಸ್ಸಿಗೆ ಕಾವ್ಯ ಕೂಡ ಹೆಚ್ಚು ಅರ್ಥವಾಗುತ್ತೆ. ಮತ್ತೊಂದು ಉದಾಹರಣೆ – ಅಡಿಗರೇ ಬರೆದ ಇನ್ನೊಂದು ಸಾಲು : ‘ಹನುಮದ್ದಿಕಾಸಕ್ಕೆ ಇಲ್ಲ ಎಲ್ಲೆ’. ರಾಮಾಯಣ ಗೊತ್ತಿದ್ದವನಿಗೆ ಮಂಗ-ಅಂದರೆ ಹನುಮಂತ ಅನ್ನೋದು ಗೊತ್ತಿರುತ್ತೆ. ಅವನು ಬೆಳೆದು ವಿಕಾಸಗೊಂಡದ್ದು ಗೊತ್ತಿರುತ್ತೆ. ಮಂಗನಂಥ ಮಗನಿಗೆ ವಿಕಾಸ ಸಾಧ್ಯವೇ ಹೊರತು ಅವನನ್ನು ನೈತಿಕವಾಗಿ ಜಡ್ಜ್ ಮಾಡುವ ಅಪ್ಪನಿಗೆ ಸಾಧ್ಯವಿಲ್ಲ ಅನ್ನೋದು ಹೊಳೆಯುತ್ತೆ. ಹೀಗೆ ನಮ್ಮ ಸೌಂದರ್ಯಾನುಭೂತಿಯನ್ನು ಉಳಿಸಿರೋದು ಧಾರ್ಮಿಕ ನಂಬಿಕೆಗಳೇ.

ಮಾತು ಕಡಿಮೆಯಾದಂತೆ ಮಾತಿನ ಶಕ್ತಿ ಹೆಚ್ಚಾಗುತ್ತೆ ಅನ್ನೋದು ಸಾಹಿತ್ಯದ ನಂಬಿಕೆ. ಮಾತು ಕಡಿಮೆಯಾಗ್ತಾ ಹೋದಂತೆ ಅದಕ್ಕೆ ಮಂತ್ರದ ಗುಣ ಬರುತ್ತೆ. ಧರ್ಮ ಮೇಲ್ಜಾತಿಯವರ ಧರ್ಮಷ್ಟೇ ಆಗಿದ್ದಾಗ ಸಂಸ್ಕೃತ ಸಾಕಾಗಿತ್ತು. ಆದರೆ ಜನಸಮುದಾಯಕ್ಕೆ ಧರ್ಮವನ್ನು ತಲುಪಿಸಬೇಕಾಗಿ ಬಂದಾಗ ಅದು ಜನಸಮುದಾಯದ ಭಾಷೆಯಲ್ಲೂ ಹೊರ ಹೊಮ್ಮಿತು. ಅಕ್ಷರ ಬಾರದವರೂ ಅನೇಕ ಸಂದರ್ಭದಲ್ಲಿ ಸುಸಂಸ್ಕೃತರಾಗಿರ‍್ತಾರೆ. ಅಕ್ಷರ ಬಾರದ ಸೀತೆಗೆ ರಾಮಾಯಣ ಗೊತ್ತಿರುವ ಹಾಗೆ ಅವರಿಗೆ ಎಲ್ಲವೂ ಗೊತ್ತಿರುತ್ತದೆ.

ಪುತಿನ ಕಾವ್ಯಕ್ಕೆ ಇರುವಂತೆ ಪೂಜಾವಿಧಿಗೂ ಒಂದು ಧ್ವನಿಶಕ್ತಿ ಇರುತ್ತೆ ಅಂತ ಹೇಳಿದರು. ನಿತ್ಯದ ವಸ್ತುಗಳಾದ ಒಂದು ತುಳಸಿ, ಒಂದು ಅಕ್ಕಿಕಾಳು, ಒಂದು ಪತ್ರೆ ಎಲ್ಲವೂ ಆ ಗುಣಗಳನ್ನು ಮೀರುವ ಹಾಗೆ ಮಾಡೋದು ದೈವಿಕತೆ. ಅಲ್ಲಿ ಅಕ್ಕಿಕಾಳು ಮಂತ್ರಾಕ್ಷತೆಯಾಗುತ್ತೆ. ಪೂಜೆ ಮತ್ತು ಉತ್ಸವಗಳಿಗೆ ದೈನಿಕದ ಅಗತ್ಯಗಳನ್ನೂ ನಾವು ಮೀರುವ ಹಾಗೆ, ದೈನಿಕದ ವಸ್ತುವಿಗೂ ಒಂದು ಪರವಸ್ತುವಿನ ಗುಣ ದೊರಕುವ ಹಾಗೆ ಮಾಡುವ ಶಕ್ತಿ ಇದೆ. ಅದರಲ್ಲಿ ನಂಬಿಕೆ ಹೊರಟು ಹೋದರೆ ಕಾವ್ಯದಲ್ಲಿ ನಂಬಿಕೆ ಉಳಿಯೋಕೆ ಸಾಧ್ಯವಿಲ್ಲ ಅಂತ ಪುತಿನ ಹೇಳ್ತಿದ್ರು. ನಾವು ಎಲ್ಲವನ್ನೂ ಕೇವಲ ಶುದ್ಧ ಕಾವ್ಯದಲ್ಲಿ ಪಡೀತೀನಿ ಅಂದುಕೊಳ್ಳೋದು ತಪ್ಪು. ಧರ್ಮ ಅದನ್ನು ಉಳಿಸಿರುತ್ತೆ.

ಆದರೆ ನನಗೊಂದು ಗೊಂದಲ ಇದೆ. ಇಷ್ಟು ದೊಡ್ಡ ಧರ್ಮದಲ್ಲಿ ಅಸ್ಪೃಶ್ಯತೆ ಅನ್ನೋದು ಹೇಗೆ ಬಂತು? ಅದು ಎಲ್ಲರ ಮನೇಲೂ ಇದೆ ಅನ್ನೋದು ಮತ್ತೊಂದು ವಿಚಾರ. ನಮ್ಮ ಮನೆಯಲ್ಲಿ ಅಮ್ಮ ಸ್ನಾನ ಮಾಡಿ, ನಾನು ಮಾಡದೇ ಇದ್ರೆ ಅವಳ ಮಟ್ಟಿಗೆ ನಾನು ಅಸ್ಪೃಶ್ಯ. ಬಸವಣ್ಣ ಈ ಅಸ್ಪೃಶ್ಯತೆಯನ್ನೇ ಪ್ರಶ್ನೆ ಮಾಡಿದ್ದು, ಶಾಸ್ತ್ರ ಗೋತ್ತಿದ್ದವರನ್ನು ಕೇಳಿದರೆ ಅವರು ಇದಕ್ಕೆ ಏನೇನೋ ಸಮಜಾಯಿಷಿ ಕೊಡ್ತಾರೆ. ಆದ್ದರಿಂದ ಇದನ್ನು ತೊಲಗಿಸೋಕೆ ಶಾಸ್ತ್ರ ಸಾಲದು, ಅನುಭಾವ ಬೇಕು.

ಭಾರತದಲ್ಲಿ ಆದ ಬಹುದೊಡ್ಡ ಜಾಗೃತಿ ಅಂದರೆ ಜಾತಿ ಮತ್ತು ಅಸ್ಪೃಶ್ಯತೆಯನ್ನು ಪ್ರಶ್ನೆ ಮಾಡಿದ್ದು. ಈ ಪ್ರಶ್ನೆಯ ಬೆಳಕಲ್ಲಿ ನೋಡಿದಾಗ ಪುರಾತನರಲ್ಲಿ ಯಾರು ಮುಖ್ಯ ಅಂತ ಗೊತ್ತಾಗುತ್ತೆ. ಇದನ್ನೊಂದು ಧಾರ್ಮಿಕ ಪ್ರಶ್ನೆ ಅಂತಲೇ ನಾವು ಕಂಡುಕೊಳ್ಳಬೇಕಾಗುತ್ತೆ. ಒಂದು ಬಾರಿ ಗಾಂಧೀಜಿ ಸಂತರ ಕಣ್ಣಲ್ಲಿ ಎಲ್ಲರೂ ಸಮಾನರು ಅಂದಾಗ ಅಂಬೇಡ್ಕರ್ ಉತ್ತರಿಸಿದರಂತೆ: ‘ಸಂತರ ಕಣ್ಣಲ್ಲಿ ಎಲ್ಲರೂ ಸಮಾನರೇ ಇರಬಹುದು. ಹುಲುಮಾನವರ ಕಣ್ಣಲ್ಲೂ ಎಲ್ಲರೂ ಸಮಾನರಾಗಬೇಕು.’

ಇದು ಈ ಕಾಲದ ಪ್ರಶ್ನೆ. ಇದನ್ನು ಸಾಹಿತ್ಯ ಮತ್ತು ಧರ್ಮ ಎರಡೂ ಎದುರಿಸಬೇಕಾಗಿದೆ.

ಊಟಿಯಲ್ಲಿ ನಡೆದ ಮಠಾಧೀಶರ ಸಮ್ಮೇಳನದಲ್ಲಿ ಮಾಡಿದ ಭಾಷಣದ ಸಾರ ಸಂಗ್ರಹ, ೨೦೦೩ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಿತ.

* * *