ಫಾ.ಕಪ್ಪನ್ ಅವರನ್ನು ನಾನು ಮೊದಲು ಸಂಧಿಸಿದ್ದು ಕೊಟ್ಟಾಯಮ್‌ನಲ್ಲಿ. ಶ್ರೇಷ್ಠ ದಾರ್ಶನಿಕರೂ, ಚಿಂತಕರೂ ಆಗಿರುವ ಪ್ರೊ. ದಯಾಕೃಷ್ಣ ಒಮ್ಮೆ, ಕೇಂಬ್ರಿಡ್ಜ್‌ನಿಂದ ಗ್ರೀಕ್ ಚಿಂತಕನೋರ್ವನನ್ನು ಕರೆಸಿದ್ದರು. ಅವರೊಡನೆ ಕೇರಳದ ಶ್ರೇಷ್ಠ ಮನಸ್ಸುಗಳ ಜೊತೆಗೆ ಒಂದು ಸಂವಾದವನ್ನು ಏರ್ಪಡಿಸುವಂತೆ ನನ್ನನ್ನು ಕೇಳಿದ್ದರು. ನಾನಾಗ ಫಾ.ಕಪ್ಪನ್ ಅವರ ಕೆಲವು ಲೇಖನಗಳನ್ನು ಓದಿದ್ದೆ. ಹೀಗಾಗಿ ಅವರನ್ನೂ ಸಂವಾದಕ್ಕೆ ಆಹ್ವಾನಿಸಿದ್ದೆ. ಆಗ ಫಾ.ಕಪ್ಪನ್‌ರ ಆರೋಗ್ಯ ಸರಿಯಿರಲಿಲ್ಲ. ಅಂದು ದೇಶದ ಶ್ರೇಷ್ಠ ಜ್ಞಾನಿಯೊಬ್ಬನನ್ನು ಮಾತ್ರವಲ್ಲ; ಮಾರ್ಮಿಕವಾದ ಅಂತರಂಗದ ಸ್ನೇಹಜೀವಿಯನ್ನು ಕಂಡ ಅನುಭವ ನನಗಾಯಿತು. ಅವರು ಋಷಿ ಸದೃಶವಾದ ವ್ಯಕ್ತಿತ್ವದವರು, ತನಗನ್ನಿಸಿದ್ದನ್ನು ಏಕಾಂಗಿಯಾಗಿಯೇ ನಿಂತು ಹೇಳಬಲ್ಲ ಧೈರ್ಯ ಉಳ್ಳವರು. ಬೇರೊಬ್ಬರನ್ನು ಆಕ್ರಮಿಸಿ ತನ್ನ ತಿಳಿವನ್ನು ಹೇರಿ ಪ್ರಭಾವಿಸಲು ಅವರು ಎಂದೂ ಪ್ರಯತ್ನಿಸಿದವರಲ್ಲ. ಫಾ. ಕಪ್ಪನ್ ಅವರ Tradition Modernity Counter Culture – An Asian Perspective ಕೃತಿಯನ್ನು ನನಗೆ ಒದಗಿಸಿದ ಜಾನ್ ಅವರಿಗೆ ಆಭಾರಿಯಾಗಿದ್ದೇನೆ. ಅದೊಂದು ಅಮೂಲ್ಯವಾದ ಪುಸ್ತಕ. ನಾನು ಇಂದು ಹೇಳಲಿರುವ ಸಂಗತಿಗಳು ಒಂದು ರೀತಿಯಲ್ಲಿ ಅಲ್ಲಿಂದ ಪಡೆದುಕೊಂಡವುಗಳೇ ಎನ್ನಬಹುದು. ಅಂದರೆ ನಾನೀಗ ಹೇಳಲಿರುವುದು ಫಾ. ಕಪ್ಪನ್ ಹೇಳಿರುವ ವಿಷಯದ ಮುಂದುವರಿಕೆಯ ಮಾತುಗಳು.

*

ನಮ್ಮ ಸಂಸ್ಕೃತಿಗೆ ಮುಖಾಮುಖಿಯಾಗುವ ಸಂದರ್ಭದಲ್ಲಿ ನಾವು ಮೊದಲು ಎದುರಿಸುವ ವಿರೋಧಾಭಾಸಗಳ ಬಗ್ಗೆ ವಿವೇಚಿಸಲು ಪ್ರಯತ್ನಿಸುತ್ತೇನೆ. ಸಾಮಾನ್ಯವಾಗಿ ನಾನು ನಮ್ಮ ಸಂಸ್ಕೃತಿಯೊಳಗಣ ಸಾಂಪ್ರದಾಯಿಕ  ಸ್ತ್ರೀ-ಪುರುಷರ ಬಗ್ಗೆ ಮಾತನಾಡುವಾಗೆಲ್ಲ ಕಟು ಟೀಕಾಕಾರನಾಗಿರುತ್ತೇನೆ. ಹಾಗೆ ವಾದಿಸುವಾಗ ನಾನೋರ್ವ ಆಧುನಿಕತಾವಾದಿಯಾಗಿಬಿಟ್ಟೆನೋ ಎಂಬ ಆತಂಕವೂ ಆಗುತ್ತದೆ. ಆದರೆ ಸರ್ವಜ್ಞ ಗರ್ವದ ಯೂರೋ ಕೇಂದ್ರಿತ ಆಧುನಿಕತಾವಾದಿಯೊಬ್ಬನನ್ನು ಭೇಟಿಯಾದಾಗಲೆಲ್ಲ-ಸಂಪ್ರದಾಯದ ಟೀಕಾಕಾರನಾದ ನಾನು-ಹಿಂದಿನಷ್ಟು ತೀವ್ರವಾಗಿ, ಕಟುವಾಗಿ ಸಂಪ್ರದಾಯಸ್ಥರನ್ನು ಟೀಕಿಸಲಾರದವನಂತೆ ಕಾಣಲು ಶುರುವಾಗುತ್ತೇನೆ.

ರಿವೈವಲಿಸ್ಟ್ ಹಾಗೂ ಆಧುನಿಕತಾವಾದಿಗಳ ನಡುವೆ ಜಗತ್ತು ವಿಭಜನೆಯಾದಂತೆ ಕಾಣುತ್ತದೆ. ರಿವೈವಲಿಸ್ಟರು ಸಂಸ್ಕೃತಿಯೊಳಗೆ ಹುದುಗಿರುವ ಅನ್ಯಾಯ, ಅಸಮಾನತೆ, ಅರ್ಥಹೀನ ಮೂಢನಂಬಿಕೆಗಳತ್ತ ಕುರುಡರಾಗಿರುತ್ತಾರೆ. ಇಂಥವರನ್ನು ಮುಖಾಮುಖಿಯಾದಾಗ, ನಿಮಗರಿವಿಲ್ಲದಂತೆಯೇ ಆಧುನಿಕ ಯೂರೋಪ್‌ನ ವೈಚಾರಿಕ ನೆಲೆಯಲ್ಲಿ ನೀವು ನಿಂತಿರುತ್ತೀರಿ. ಆದರೆ ಯೂರೋಪ್‌ನ ವಿಚಾರವಾದ, ಅದರ ಸರ್ವಜ್ಞ ಗರ್ವದಲ್ಲಿ, ಅರಿವಿನ ಹಾಗು ಇರುವಿಕೆಯ ಇತರ ದಾರಿಗಳಿಗೆ, ಆಲೋಚನಾಕ್ರಮಗಳಿಗೆ ತನ್ನ ಸಂವೇದನೆಯನ್ನು ಕಳೆದುಕೊಂಡಿದೆ ಎಂಬುದರ ಅರಿವು ನಮಗಿರುವುದಿಲ್ಲ. ಇದ್ದರೂ ಅದರು ಕ್ಷೀಣವಾಗಿರುತ್ತದೆ. ಹೀಗೆ ವಿಘಟನೆಗೆ ಒಳಗಾದ ಸಂಸ್ಕೃತಿಯಲ್ಲಿ ಬದುಕುತ್ತಿರುವ ನಮಗೆ ನಮ್ಮ ಕಾಣ್ಕೆಯ ಬಗ್ಗೆ ಪ್ರಾಮಾಣಿಕವಾಗಿರುವುದು ಕಷ್ಟಕರವಾಗಿದೆ.

ನಾನು ಬೆಳೆಯುತ್ತಿದ್ದ ಸಮಯದಲ್ಲಿ, ಅಂದರೆ ಐವತ್ತು ಮತ್ತು ಅರವತ್ತರ ದಶಕದಲ್ಲಿ, ನನಗೆ ಇನ್ನೊಂದು ದೊಡ್ಡ ತೊಂದರೆ ಕಾಣಿಸಿತು. ರಾಜಕೀಯ, ಸಾಹಿತ್ಯ ಅಥವಾ ಸಂಸ್ಕರತಿಗಳ ಬಗ್ಗೆ ಮಾತನಾಡುವಾಗಲೆಲ್ಲಾ ಅಮೆರಿಕನ್ ಪರವೋ ಅಥವಾ ರಷ್ಯನ್ ಪರವೋ ಬ್ರಾಂಡ್ ಆಗಿಬಿಡುವ ಸಾಧ್ಯತೆಗಳಿದ್ದವು. ಉದಾಹರಣೆಗೆ ನನಗೆ ಬಹು ಪ್ರಿಯರಾಗಿದ್ದ ಪ್ರೊ. ಎ. ಬಿ. ಷಾರಂತಹವರೂ ತಮಗೇ ಗೊತ್ತಿಲ್ಲದಂತೆ ಸಿ.ಐ.ಎ. ಮಸಲತ್ತುಗಳ ಸಮ್ಮತಿ ಸೂಚಕರಾಗಿ ಕಾಣತೊಡಗಿದ್ದರು. ಸಿಐಎ ಜೊತೆಗಿನ ಸ್ಟೀಪನ್ ಸ್ಪೆಂಡರ್‌ನ (ಬ್ರಿಟಿಷ್‌ಕವಿ) ಪ್ರಕರಣ ನಿಮಗೆ ಗೊತ್ತಿರಬಹುದು. ಆತ ಸಿ.ಐ.ಎ. ದುಡ್ಡಿನಿಂದಲೇ ‘ಎನ್‌ಕೌಂಟರ್‌’ ಪತ್ರಿಕೆಯನ್ನು ನಡೆಸುತ್ತಿದ್ದ. ಅವನಿಗೆ ಅದು ಗೊತ್ತಾಗುವಾಗ ಬಹಳ ತಡವಾಗಿತ್ತು. ಆಮೇಲೆ ಪಶ್ಚಾತ್ತಾಪಪಟ್ಟ. ನಿಜಕ್ಕೂ ಅವನು ಪೂರ್ವ ಯೂರೋಪಿನ ಬರಹಗಾರರ ಪರವಾಗಿ, ಅವರ ಸ್ವಾತಂತ್ರ್ಯದ ಕುರಿತಾಗಿ ಅದ್ಭುತವಾದ ಕೆಲಸಗಳನ್ನು ಮಾಡಿದ್ದ. ವ್ಯಂಗ್ಯವೆಂದರೆ ಈ ಕೆಲಸ ನಡೆದದ್ದು ಸಿ.ಐ.ಎ. ನಿಧಿಯಿಂದ. ಹಾಗೆಯೇ ಕಮ್ಯುನಿಸ್ಟ್‌ಚೈನಾ ಮತ್ತು ಸೋವಿಯತ್‌ಯೂನಿಯನ್‌ಕೂಡ ತಮ್ಮ ಪರವಾದ ಇಂಥದ್ದೇ ಕೆಲವೊಂದು ಸಂಘ-ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಹಣಕಾಸಿನ ನೆರವು ನೀಡುತ್ತಿತ್ತು. ಅದರಲ್ಲೂ ಕೆಲವು ಭಾರತೀಯ ಬರಹಗಾರರೂ-ಅವರು ನಿಜಕ್ಕೂ ಭೀಷ್ಮ ಸಹಾನಿಯವರಂತೆ ಒಳ್ಳೆಯ ಬರಹಗಾರರು ಆಗಿದ್ದರೂ ಕೂಡ-ಸೊವಿಯತ್‌ಲ್ಯಾಂಡ್‌ಗೆ ಹೋಗಿ, ಕೆಲಕಾಲ ಅಲ್ಲೇ ನೆಲೆಸಿ, ಅಲ್ಲಿನ ಉಸಿರುಗಟ್ಟುವಿಕೆಯನ್ನು, ಕ್ರೌರ್ಯವನ್ನು, ಭಯವನ್ನು ಪ್ರತ್ಯಕ್ಷವಾಗಿ ನೋಡಿದರೂ, ಅದರ ವಿರುದ್ಧ ಒಂದು ಮಾತೂ ಆಡಿರಲಿಲ್ಲ. ಏಕೆಂದರೆ ಅವರೆಲ್ಲರೂ ತಾವು ಕಮ್ಯೂನಿಸಂನ ಪ್ರಣಾಲಿಕೆಗಳಿಗೆ ಬದ್ಧರಾಗಿರಬೇಕೆಂದುಕೊಂಡವರು. ಸೋವಿಯತ್‌ಯೂನಿಯನ್ನಿನಲ್ಲಿ ಕೆಲವು ನ್ಯೂನತೆ, ಬಿರುಕುಗಳಿದ್ದರೂ, ಜನಪರ ಕ್ರಾಂತಿ-ವಿರೋಧಿಗಳ ಟೀಕೆಗೆ ಗುರಿಯಾಗಬಾರದೆಂದು, ಅವನ್ನು ಮೃದುವಾಗಿ ಪರಿಗಣಿಸಿ ವಿನಾಯಿತಿ ಕೊಡಬೇಕು ಎಂದು ನಂಬಿದ್ದರು. ಹಾಗೆಯೇ ತಾವು ಲಿಬರಲ್ ಎಂದು ತಿಳಿದವರ ನಡುವೆ ವಿಯೆಟ್ನಾಂನಲ್ಲಿ ಅಮೆರಿಕಾ ನಡೆಸುತ್ತಿರುವ ಕಾರ್ಯಾಚರಣೆಯ ಬಗ್ಗೆ ಒಂದು ಬಗೆಯ ಪೂರ್ಣ ಮೌನ ಆವರಿಸಿತ್ತು. ಪ್ರಜಾಸತ್ತೆಯ ವಿರೋಧೀ ಶಕ್ತಿಗಳನ್ನು ಸದೆಬಡಿಯಲು ವಿಯೆಟ್ನಾಂನಲ್ಲಿ ಅಂತಹ ಘೋರ ಯುದ್ಧ ನಡೆಯಿತು ಎಂದು ನಾನು ವಿಶೇಷವಾಗಿ ಗೌರವಿಸುವ ನನ್ನ ಆತ್ಮೀಯನೊಬ್ಬ ಹೇಳುತ್ತಾನೆ. ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವ ನಾವೂ, ಈಗಲೂ ಯಾವುದೋ ಒಂದು ನಿಲುವಿಗೆ ಬದ್ಧರಾಗಿ ಸತ್ಯಕ್ಕೆ ಕುರುಡಾಗಿ ಮಾತನಾಡಬಹುದೆಂಬ ಭಯ ನನಗಿದೆ.

ಭಾರತದ ವಿಷಯಕ್ಕೇ ಬರುವುದಾದರೆ, ನಮ್ಮ ಚರಿತ್ರೆಯಲ್ಲೇ ಮೊದಲ ಬಾರಿಗೆ ನಾವು ಯೂರೋಪಿಯನ್ನರು ಅರ್ಥೈಸುವ ಶತಮಾನದಲ್ಲಿ-೨೦ನೆಯ ಶತಮಾನದಲ್ಲಿ-ಬದುಕುತ್ತಿದ್ದೇವೆಂದು ಭಾವಿಸಿಕೊಂಡಿರುವುದು ಈ ಶತಮಾನದಲ್ಲಿಯೇ. ಭಾರತೀಯರಿಗೆ ತಮ್ಮ ೧೯ನೆಯ ಶತಮಾನದ ಬದುಕು, ಅದರಲ್ಲೂ ವಿಶೇಷವಾಗಿ ೧೯ನೆಯ ಶತಮಾನದ ಆರಂಭದ ಬದುಕು, ಯೂರೋಪಿನ ೧೯ನೆಯ ಶತಮಾನದ್ದು ಎಂದು ಅನಿಸಿಯೇ ಇರಲಿಲ್ಲ. ಆದರೆ ಇಡೀ ಯೂರೋಪ್‌, ಅದು ಜರ್ಮನಿ ಇರಬಹುದು, ಫ್ರಾನ್ಸ್ ಇರಬಹುದು, ಇಟಲಿ ಇರಬಹುದು, ತಾನು ೧೯ನೆಯ ಶತಮಾನದಲ್ಲಿದ್ದೇನೆಂಬ ತಿಳುವಳಿಕೆಯನ್ನು ಹೊಂದಿತ್ತು. ಆದರೆ ಇತ್ತ, ಭಾರತದಲ್ಲಿ, ೧೯ನೆಯ ಶತಮಾನದ ಆರಂಭದಲ್ಲಿ ನಾವು ನಮ್ಮದೇ ಆದ ತುಂಬಾ ಭಿನ್ನವಾದ ಗ್ರಹಿಕೆಗಳನ್ನು ನಮ್ಮ ಕಾಲದ ಬಗ್ಗೆ ಹೊಂದಿದ್ದೆವು. ಹೀಗಾಗಿ ನಾವು ಯೂರೋಪಿನಲ್ಲಿ ನಡೆಯುತ್ತಿದ್ದ ಯಾವುದೋ ಸಂವಾದ, ಜಗಳ ನಮ್ಮ ಜಗಳ ಕೂಡ ಎಂದು ತಿಳಿದು ಒಡೆದುಕೊಳ್ಳುತ್ತಿರಲಿಲ್ಲ. ಈ ದಿನಗಳಲ್ಲಿ ನಮ್ಮ ವಿಚಾರ ಮತ್ತು ಅಸ್ತಿತ್ವ ಬೇರೆ ಯಾರದೋ ಜಗಳದಲ್ಲಿ ಯಾರ ಪರ ನಾವಿದ್ದೇವೆ ಎಂದು ಗುರುತಿಸಿಕೊಳ್ಳುವುದರಲ್ಲೇ ನಿರ್ಧರಿತವಾಗುತ್ತದೆ. ನಾವಾಗಿಯೇ ಮೂಗು ತೂರಿಸಿ ನಮ್ಮನ್ನು ಅಸಡ್ಡೆಯಿಂದ ಕಾಣುವವರ ಕಣ್ಣಿಗೆ ಬರಲು ಆಸೆಪಡುತ್ತೇನೆ. ಅಂಥ ಶತಮಾನದ ಕೊನೆಯಲ್ಲಿ ನಿಂತು ನಾವೀಗ ಮಾತನಾಡುತ್ತಿದ್ದೇವೆ.

ಇಂದಿನ ಬಹುದೊಡ್ಡ ಅಪಾಯವೆಂದರೆ, ಒಬ್ಬ ವ್ಯಕ್ತಿ ತಾನು ಆಧುನಿಕನೆಂದು ಸಾರಿಕೊಳ್ಳುತ್ತಲೇ ಸಾಂಪ್ರದಾಯಿಕ ಶಕ್ತಿಗಳನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು. ಉದಾಹರಣೆಗೆ: ನಮ್ಮ ಪ್ರಗತಿಪರರೆನಿಸಿಕೊಂಡ ರಾಜಕಾರಣಿಗಳನ್ನೇ ನೋಡಿ. ಅವರಿಗೆ ತಾವು ಆಧುನಿಕ ಜಗತ್ತಿನಲ್ಲಿ ಬದುಕುತ್ತಿದ್ದೇವೆಂಬುದು ಗೊತ್ತು. ಆದರೂ ಅವರೆಲ್ಲರೂ ಜಾತಿ, ಧರ್ಮ ಮತ್ತು ಇತರ ಸಾಂಪ್ರದಾಯಿಕ ಸಂಕೇತಗಳನ್ನು ಬಳಸಿಕೊಳ್ಳುತ್ತಲೇ ಇದ್ದಾರೆ. ಕಾಣುವುದಕ್ಕೆ ಅವರೆಲ್ಲರೂ ಆಧುನಿಕರು, ವಿಚಾರವಾದಿಗಳು ಮತ್ತು ಐರೋಪ್ಯ ಆಕರ್ಷಣೆಗೆ ಒಳಗಾದವರು. ಆದರೆ ಅವರ ಶಕ್ತಿಮೂಲಗಳು ಸಮಾನತೆಯ ತಿಳುವಳಿಕೆಯಿಂದಾಗಲೀ, ನ್ಯಾಯದ ತಿಳುವಳಿಕೆಯಿಂದಾಗಲೀ ಕಾರ್ಯ ಪ್ರವೃತ್ತವಾಗುವುದಿಲ್ಲ. ಬದಲಿಗೆ ಸಾಂಪ್ರದಾಯಿಕ ಗೃಹೀತಗಳಿಂದಲೇ ನಿರ್ದೇಶಿಸಲ್ಪಡುತ್ತವೆ. ಇದು ಉತ್ತರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು ಹೀಗೆ ಹೆಚ್ಚಿನೆಲ್ಲಾ ಪ್ರದೇಶಗಳ ರಾಜಕೀಯ ಸತ್ಯವೇ ಆಗಿದೆ. ಅಚ್ಚರಿಯೆಂದರೆ, ಕೇರಳದಂಥ ಕೇರಳವೂ ಇದರಿಂದ ಮುಕ್ತವಾಗಿಲ್ಲ ಎನ್ನುವುದು. ಕೇರಳದ ಮಣ್ಣು ಸಾಮಾಜಿಕ ನ್ಯಾಯಕ್ಕಾಗಿ ಸಾಕಷ್ಟು ಹೋರಾಡಿ ಹದಗೊಂಡಿರುವಂಥದ್ದು. ಕೇರಳ ವರ್ಗರಾಜಕೀಯವನ್ನು ಮಾಡುತ್ತಿದ್ದರೂ ಅದನ್ನು ನಿಯಂತ್ರಿಸುತ್ತಿರುವುದು ಜಾತಿರಾಜಕೀಯವೇ ಆಗಿದೆ. ಇಲ್ಲೊಂದು ನಾಯರ್ ಪರ ಪಕ್ಷವಿದೆ, ಕ್ರಿಶ್ಚಿಯನ್ ಪರ ಪಕ್ಷವಿದೆ. ಹಾಗೆಯೇ ಎಳವಾ ಪರ ಪಕ್ಷವೂ ಇದೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ದೇವರಾಜ ಅರಸರು ಮಾಡಿದ್ದೂ ಅದನ್ನೇ-‘ಜಾತಿ ರಾಜಕೀಯ’. ಆದರೆ ಅದು ವರ್ಗ ಸಂಘರ್ಷದ ರಾಜಕೀಯವಾಗಿ ಪರಿವರ್ತನೆ-ಗೊಂಡಿತು. ನಿಜಕ್ಕೂ ಜಾತಿ ರಾಜಕೀಯವು ವರ್ಗ ರಾಜಕೀಯವಾಗಿಯೂ, ವರ್ಗ ರಾಜಕೀಯವು ಜಾತಿ ರಾಜಕೀಯವಾಗಿಯೂ ಪರಿವರ್ತನೆಗೊಳ್ಳುವುದೆಂದರೆ ಏನು? ಇದು ಏನನ್ನು ಹೇಳುತ್ತದೆ? ಸಂಪ್ರದಾಯ ಹಾಗು ಆಧುನಿಕತೆ ಕುರಿತ ಸರಿಯಾದ ಧೋರಣೆ ಏನು? ಇವೆಲ್ಲವೂ ತುಂಬಾ ಗೊಂದಲಕಾರಿಯಾದದ್ದು.

ಅದು ಹಾಗಿರಲಿ, ನಾವೀಗ ನಮ್ಮ ಶತಮಾನದ ಕಡೆಗೆ ನೋಡೋಣ. ೫೦ ಮತ್ತು ೬೦ರ ದಶಕಗಳಲ್ಲಿ ನಮಗೆ ಅತ್ಯಂತ ನಿರ್ಧಾರಾತ್ಮಕವಾದ ಮತ್ತು ಅಚಲವಾದ ನಿಲುವೊಂದನ್ನು ಹೊಂದಲು ಸಾಧ್ಯವೆಂಬ ದಿಟ್ಟತನವಾದರೂ ಇತ್ತು. ಈಗ ನಾವೆಲ್ಲರೂ ಶತಮಾನದ ಕೊನೆಗೆ ಬಂದು ನಿಂತು ನೋಡುವಾಗ ಹಿಂದಿನ ದಿಟ್ಟ ನಿಲುವುಗಳು ಸಾಧ್ಯವಿಲ್ಲ ಎಂದೋ ಅಥವಾ ಸಾಧುವಲ್ಲ ಎಂದೋ ತಿಳಿಯುವ ಸ್ಥಿತಿ ತಲುಪಿದ್ದೇವೆ.

ತುರ್ತು ಪರಿಸ್ಥಿತಿಯಲ್ಲಿ ಗಾಂಧಿವಾದವಾಗಲೀ, ಮಾರ್ಕ್ಸ್‌‌ವಾದವಾಗಲೀ ಸರಿಯಾದ ನಿಲುವು ಏನೆಂಬುದನ್ನು ನಮಗೆ ಹೇಳಲಿಲ್ಲ. ಜೆ.ಪಿ. ತುರ್ತು ಪರಿಸ್ಥಿತಿಯ ವಿರೋಧಿಯಾದರೆ ವಿನೋಬ ಅದರ ಪರವಾದರು. ಸಿ.ಪಿ.ಐ.(ಎಂ) ವಿರೋಧಿಯಾದರೆ, ಸಿ.ಪಿ.ಐ. ಪರವಾಯಿತು. ಗಾಂಧಿವಾದವೇ ಒಂದು ತಾತ್ವಿಕ ಸ್ಪಷ್ಟತೆಯನ್ನು ಅಂದಿನ ದಿನಗಳಲ್ಲಿ ತಾಳಲಾರದೆ, ವಾದವಾಗಿ ಅಸಮರ್ಥವಾಯಿತು. ವಿನೋಬಾ ತುರ್ತು ಪರಿಸ್ಥಿತಿಯ ಪರವಾಗಿದ್ದ ತಮ್ಮ ನಿಲುವನ್ನು ಆಮೇಲೆ ಹಿಂತೆಗೆದುಕೊಂಡರು. ಕರಾಳ ಪರಿಸ್ಥಿತಿಯ ಆರಂಭದ ದಿನಗಳಲ್ಲಿಯ ಅವರ ಬೆಂಬಲ ಅಶಿಸ್ತಿನ ವಿರೋಧದಿಂದ ಹುಟ್ಟಿರುವಂಥದ್ದು. ಇಂದಿರಾಗಾಂಧಿ ಬಹಳ ಸಂತೋಷದಿಂದಲೇ ತುರ್ತು ಪರಿಸ್ಥಿತಿಯನ್ನು ಕುರಿತ ವಿನೋಬಾರ ಬೆಂಬಲವನ್ನು ತೆಗೆದುಕೊಂಡರೂ, ತರುವಾಯ ವಿನೋಬಾರು ತುರ್ತು ಪರಿಸ್ಥಿತಿಯನ್ನು ಅಂತ್ಯಗೊಳಿಸಲು ಕರೆಕೊಟ್ಟಾಗ ಆಕೆ ವಿನೋಬಾರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಗಾಂಧೀವಾದವೇ ಅಸ್ಪಷ್ಟಗೊಂಡು ನಮಗೆ ಮಾರ್ಗದರ್ಶನ ಮಾಡಲು ವಿಫಲವಾದಾಗ, ಅದರಲ್ಲೂ ಜೆಪಿ-ವಿನೋಬಾರ ಪರಸ್ಪರ ವಿರುದ್ಧದ ನೆಲೆಗಳನ್ನು ನೋಡಿದ ನಮ್ಮಂಥವರಿಗೆ ಯಾವ ನೆಲೆಯನ್ನು ಆಯ್ದು-ಕೊಳ್ಳಬೇಕೆಂಬುದರ ಬಗೆಗೆ (ವಾದದಲ್ಲಿ) ಖಾಚಿತ್ಯವಿರಲಿಲ್ಲ; ಅಂದರೆ ನೈತಿಕವಾಗಿ ಆಯ್ಕೆ ಅಸ್ಪಷ್ಟವಾಗಿತ್ತು.

ಮಾರ್ಕ್ಸ್‌ವಾದಿಗಳದ್ದೂ ಇಂಥದೇ ಕಥೆ. ಮಾರ್ಕ್ಸ್‌ವಾದಿಗಳ ಒಂದು ಗುಂಪು ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದರೆ, ಇನ್ನೊಂದು ವಿರೋಧಿಸಿತು. ಒಂದು ತತ್ವ ಸಿದ್ಧಾಂತವಾಗಿ ಮಾರ್ಕ್ಸ್‌ವಾದಕ್ಕೆ ನಮ್ಮನ್ನು ಯಾವ ಕಡೆ ಕೊಂಡೊಯ್ಯಬೇಕೆಂಬ ಕುರಿತು ಸ್ಪಷ್ಟತೆಯಿರಲಿಲ್ಲ. ವಾಸ್ತವ ಸಂಗತಿಯೆಂದರೆ, ನೈತಿಕವಾಗಿ ಮತ್ತು ತಾತ್ವಿಕವಾಗಿ ೨೦ನೆಯ ಶತಮಾನದ ಯಾವ ಐಡಿಯಾಲಜಿಗೂ ಯಾವುದು ತಪ್ಪು, ಯಾವುದು ಸರಿ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಮ್ಮ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಪರಿಕಲ್ಪನೆಗಳು ನಮ್ಮೊಳಗಿನಿಂದಲೇ-ನಮ್ಮ ಭಾವನಾತ್ಮಕ, ನೈತಿಕ ನೆಲೆಗಳಿಂದಲೇ-ಹುಟ್ಟಿ ಬರಬೇಕು. ಕೇವಲ ವೈಚಾರಿಕತೆ, ವಾದ, ಯೋಚನೆ ಮತ್ತು ವಿಶ್ಲೇಷಣೆ ಇವೇ ಸಾಕಾಗುವುದಿಲ್ಲ; ನಾವು ಚರ್ಚೆ ಮಾಡಿ ಸತ್ಯ ತಿಳಿಯುತ್ತೇವೆಂದು ಭಾವಿಸಿಕೊಂಡಿರುತ್ತೇವೆ ಅಷ್ಟೆ! ಮಾರ್ಕ್ಸ್‌ವಾದವು ಬಹಳ ವೈಜ್ಞಾನಿಕ, ಎಂದಿಗೂ ದಾರಿ ತಪ್ಪದೆಂದು ಮಾರ್ಕ್ಸ್‌ವಾದಿಗಳು ಭಾವಿಸಿಕೊಂಡಿದ್ದಾರೆ. ಆದರೆ ಇಂದು ಮಾರ್ಕ್ಸ್‌ವಾದ ದಾರಿ ತಪ್ಪಿದೆ. ಇದು ಏಕೆ ಮತ್ತು ಹೇಗೆ ಆಯಿತೆಂದು ನಾವು ನೋಡಿಕೊಳ್ಳಬೇಕಿದೆ. ಪ್ರಾಯಶಃ ಅದರ ಕಾರಣ ಹೀಗಿರಬಹುದು; ನಾವು ವೈಚಾರಿಕರಾದ ಕೂಡಲೇ ನಮ್ಮ ಆಧ್ಯಾತ್ಮಿಕ, ನೈತಿಕ ಕಾಳಜಿಗಳು ಕುಂದತೊಡಗುತ್ತವೆ. ನಾವು ‘ಜಾಣ’ರಾಗಿಬಿಡುತ್ತೇವೆ. ಇದಕ್ಕೆ ವಿರೋಧವಾಗಿ, ನಾವು ಅಧ್ಯಾತ್ಮವಾದಿಗಳಾದಾಗಲೂ ರಾಜಕೀಯ, ಆರ್ಥಿಕ ಸತ್ಯಗಳಿಗೆ ಕುರುಡಾಗುತ್ತ ನಮ್ಮ ಗುಂಗಿನಲ್ಲೇ ನಾವಿದ್ದುಬಿಡುತ್ತೇವೆ. ಹಾಗಾಗಿ ನಮ್ಮ ಸಾಂಪ್ರದಾಯಿಕತೆ, ಆಧುನಿಕತೆಯ ವಾಗ್ವಾದಗಳು ಆರಂಭದಲ್ಲೇ ತಪ್ಪು ಹೆಜ್ಜೆಗಳನ್ನಿಟ್ಟಿವೆ. ಏಕೆಂದರೆ ಎರಡು ನೆಲೆಗಳಲ್ಲಿಯೂ ನಮಗೆ ಸಮಗ್ರದೃಷ್ಟಿ ಸಿಗಲಾರದು. ಇಂಥ ಸನ್ನಿವೇಶದಲ್ಲೇ ಗಾಂಧಿ ನಮಗೆ ಮುಖ್ಯರಾಗುವುದು.

ಗಾಂಧಿ, ನಮ್ಮ ೨೦ನೆಯ ಶತಮಾನದ ಸವಾಲುಗಳನ್ನು ಎದುರಿಸಬಲ್ಲ, ಒಂದು ಪರ್ಯಾಯ ವ್ಯವಸ್ಥೆಯ ಬಗ್ಗೆ ನಿರಂತರವಾಗಿ ಯೋಚಿಸುತ್ತಿದ್ದರು. ಅವರ ‘ಹಿಂದ್ ಸ್ವರಾಜ್’ ಇಂಥ ಪರ್ಯಾಯಗಳ ದೂರದರ್ಶಿತ್ವ ಹೊಂದಿರುವಂಥ ಮಹತ್ವದ ಪುಸ್ತಕ. ಗಾಂಧಿಗೆ ಅದನ್ನು ನೆಹರು ಓದಬೇಕೆಂಬ ಆಸೆ ಇತ್ತು. ನೆಹರೂ ಓದಿದರೋ ಇಲ್ಲವೋ ನನಗೆ ಗೊತ್ತಿಲ್ಲ. ಅದೇನಿದ್ದರೂ ಗಾಂಧಿ ನೆಹರೂಗೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಪೂರ್ವದಲ್ಲೇ ಒಂದು ಪತ್ರ ಬರೆದಿದ್ದರು. ಅವರು ಆ ಪತ್ರವನ್ನು ಹೀಗೆ ಆರಂಭಿಸಿದ್ದರು- ‘ನೀವು ನನ್ನ ಪುಸ್ತಕವನ್ನು ಓದಿದ್ದೀರೋ? ನಾನು ಅದನ್ನು ನಿಮಗೆ ಹಿಂದೂಸ್ಥಾನಿಯಲ್ಲಿ ಬರೆಯಬೇಕಿತ್ತೋ, ಇಂಗ್ಲಿಷ್‌ನಲ್ಲಿ ಬರೆಯಬೇಕಿತ್ತೋ ಎಂದು ಯೋಚಿಸುತ್ತಿದ್ದೇನೆ’ ಇತ್ಯಾದಿ. ಈಗಲೂ ನನಗೆ ಗೊತ್ತಿಲ್ಲ, ಅವರು ಅದನ್ನು ಹಿಂದೂಸ್ಥಾನಿಯಲ್ಲಿ ಬರೆದರೋ ಅಥವಾ ಇಂಗ್ಲಿಷ್‌ನಲ್ಲಿ ಬರೆದರೋ ಎಂದು. ಯಾಕೆಂದರೆ ಅದನ್ನು ನಾನು ಓದಿದ್ದು ಇಂಗ್ಲಿಷ್‌ನಲ್ಲಿ.

ದುರದೃಷ್ಟವೆಂದರೆ ‘ಹಿಂದ್ ಸ್ವರಾಜ್‌’ನ ಆಶಯಗಳು ನೆಹರೂಗೆ ಮುಖ್ಯ ಎನಿಸಲೇ ಇಲ್ಲ. ‘ಹಿಂದ್ ಸ್ವರಾಜ್‌’ನಲ್ಲಿ ನಾವು ಗಾಂಧಿಯನ್ನು ಪ್ರಗತಿ ಎಂಬ ಕಲ್ಪನೆಯ ಟೀಕಾಕಾರರನ್ನಾಗಿ ಕಾಣುತ್ತೇವೆ. ಇಂದು ನಾವು ಆಧುನಿಕ ಎಂದು ಕರೆಯುವ ವ್ಯವಸ್ಥೆಯ ಕಟುಟೀಕಾಕಾರರಾಗಿದ್ದರು ಗಾಂಧಿ. ಅವರು ಆಧುನಿಕ ನಾಗರಿಕತೆಯೇ ಒಂದು ರೋಗ; ಈ ರೋಗ ಹತ್ತಿದ ಇಂಗ್ಲೆಂಡನ್ನು ನಾವು ಗುಣಪಡಿಸಬೇಕು ಎಂದೇ ಬಗೆದಿದ್ದರು. ನಾವು ಆಧುನಿಕ ನಾಗರಿಕತೆಯನ್ನು ಪ್ರೀತಿಸುತ್ತಿರುವುದರಿಂದಲೇ ಬ್ರಿಟಿಷರು ಇನ್ನೂ ಭಾರತದಲ್ಲಿದ್ದಾರೆ ಎಂಬುದು ಗಾಂಧಿಯ ಆಲೋಚನೆಯಾಗಿತ್ತು. ಅವರು ಬ್ರಿಟಿಷರನ್ನು ದೂಷಿಸುವುದಿಲ್ಲ; ಬದಲಿಗೆ ನಮ್ಮೊಳಗಿನ ವ್ಯಾಮೋಹವನ್ನೇ ಪರಿಶೀಲಿಸಿಕೊಳ್ಳಬೇಕು ಎನ್ನುತ್ತಾರೆ. ಇನ್ನೂ ಮುಂದುವರೆಯುತ್ತಾ, ಆಧುನಿಕ ನಾಗರಿಕತೆ ನಮಗೆ ಮಾತ್ರವಲ್ಲ; ಬ್ರಿಟಿಷರಿಗೂ ಕೆಟ್ಟದ್ದು ಎನ್ನುತ್ತಾರೆ. ಹಾಗಾಗಿ ಬಿಡುಗಡೆಯ ಹೋರಾಟ ಕೇವಲ ಭಾರತೀಯರದ್ದಲ್ಲ, ಬ್ರಿಟಿಷರಿಗೂ ಬಿಡುಗಡೆಯ ಹೋರಾಟದ ಅಗತ್ಯವಿದೆ ಎಂಬುದು ಅವರ ನಿಲುವು. ಭಾರತ ಐತೋಪ್ಯ ಮಾದರಿಯಲ್ಲಿ ಸಂಘಟನೆಗೊಂದು ಅತ್ಯಂತ ಪ್ರಬಲ ರಾಷ್ಟ್ರವಾಗಿ ಮೂಡಿಬರಬೇಕು ಎಂಬ ತಿಲಕ್ ಹಾಗೂ ಬಂಕಿಮರ ಆಲೋಚನೆಗಿಂತ ಗಾಂಧಿಯವರ ನಿಲುವುಗಳು ರಾಡಿಕಲ್ ಆಗಿ ತುಂಬಾ ಭಿನ್ನವಾಗಿವೆ. ಕೃಷ್ಣನನ್ನು ಕುರಿತ ತಮ್ಮ ಮಹತ್ವದ ಪುಸ್ತಕವೊಂದರಲ್ಲಿ ಬಂಕಿಮರು ಮಗೆ ಆಧ್ಯಾತ್ಮಿಕ ಕೃಷ್ಣ ಬೇಕಾಗಿಲ್ಲ, ಬದಲಿಗೆ ಮಹಾಭಾರತದ ‘ರಾಜಕಾರಣಿ ಕೃಷ್ಣ’ ಬೇಕಾಗಿದ್ದಾನೆ ಎನ್ನುತ್ತಾರೆ. ಹಾಗಾದಾಗ ನಮ್ಮ ಸಂಘಟನೆ ಸದೃಢಗೊಂಡು ಬ್ರಿಟಿಷರನ್ನು ಹೊರದೂಡಬಹುದೆಂಬ ಗ್ರಹಿಕೆ ಅವರದು. ಭಾರತೀಯರು ಬ್ರಿಟಿಷರ ಕೆಲವೊಂದು ಗುಣವನ್ನು ಮೈಗೂಡಿಸಿಕೊಂಡು, ಅವರ ತಂತ್ರವನ್ನು ಕಲಿತು ಅದನ್ನು ಅವರಿಗೇ ತಿರುಗಿಸಿ ಅವರನ್ನು ಇಲ್ಲಿಂದ ಉಚ್ಛಾಟಿಸಬಹುದು ಎಂದು ಗಾಂಧಿ ಯೋಚಿಸಿದ್ದರು. ಆದರೆ ಇಲ್ಲಿ ಅವರ ನಿಲುವು ತುಂಬಾ ಭಿನ್ನವಾಗಿದೆ. ಗಾಂಧಿ ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದರು. ಅವರ ಪ್ರತಿಯೊಂದು ಮಾತು ಹಾಗೂ ಕ್ರಿಯೆ -ಪರ್ಯಾಯ ಸಾಂಸ್ಕೃತಿಕತೆಯನ್ನು ಸಾರುತ್ತಿತ್ತು.

ಗಾಂಧಿಗೆ ರಾಷ್ಟ್ರವೆಂಬ ಕಲ್ಪನೆಯ ಬಗ್ಗೆ ಅನುಮಾನಗಳಿದ್ದವು. ಹಿಟ್ಲರ್‌, ಮುಸೊಲಿನಿ ತರಹದವರ ರಾಷ್ಟ್ರೀಯತೆಯನ್ನು ಗಾಂಧಿ ಮತ್ತು ಟಾಗೋರ್ ಸ್ವಲ್ಪ ಅನುಮಾನದಿಂದಲೇ ನೋಡುತ್ತಿದ್ದರು. ಅದರಲ್ಲೂ ಟಾಗೋರ್ ಇಂತಹ ರಾಷ್ಟ್ರೀಯತೆಯ ಕಟು ಟೀಕಾಕಾರರಾಗಿದ್ದರು. ಗಾಂಧಿಯಾದರೋ ತುಂಬಾ ಪ್ರಾಕ್ಟಿಕಲ್ ಆದ ವ್ಯಕ್ತಿ. ಅವರು ಬ್ರಿಟಿಷರ ವಿರುದ್ಧ ಹೋರಾಡಲು ಹಲವು ಮಾದರಿಗಳನ್ನು ಶೋಧಿಸುತ್ತಿದ್ದರು. ಹಾಗಾಗಿ ಅವರಿಗೆ ಜನರನ್ನು ಒಗ್ಗೂಡಿಸಲು ರಾಷ್ಟ್ರವೆಂಬ ಕಲ್ಪನೆ ಒಂದು ನೆಪವಾಗಿರುತ್ತಿತ್ತು. ಸಮಗ್ರವಾಗಿ ನೋಡುವುದಾದರೆ ಗಾಂಧಿಯ ಆಶಯ ಮಾನವ ಸಮುದಾಯ ಕೇಂದ್ರಿತವಾಗಿತ್ತು.

ಗಾಂಧಿಗೆ ಮೂರು ಮಹತ್ವಾಕಾಂಕ್ಷೆಗಳಿದ್ದವು : ೧. ಅಸ್ಪೃಶ್ಯತೆಯನ್ನು ಕೊನೆಗಾಣಿಸುವುದು, ೨. ಹಿಂದೂ ಮುಸ್ಲಿಂ ಐಕ್ಯತೆ, ೩. ಚರಕ-ಖಾದಿ ಉಪಯೋಗವನ್ನು ಉದ್ದೀಪನಗೊಳಿಸುವುದು. ಇದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಒಬ್ಬ ವ್ಯಕ್ತಿ ಒಂದು ಬಲಿಷ್ಠ ರಾಜ್ಯವನ್ನು ನಿರ್ಮಾಣ ಮಾಡುವುದಕ್ಕಿಂತಲೂ ಒಂದು ನಾಗರಿಕ ಸಮಾಜವನ್ನು ರೂಪಿಸಲು ಪ್ರಯತ್ನ-ಪಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲದೇ ಬ್ರಿಟಿಷರ ಆಳ್ವಿಕೆಯನ್ನು ಅನಗತ್ಯಗೊಳಿಸುವ ಉಪಾಯವೂ ಇದರಲ್ಲಿತ್ತು. ಅದು ೨೦ನೆಯ ಶತಮಾನದ ಬಹಳ ದೊಡ್ಡ ಸಮಸ್ಯೆಗೆ ಉದಾತ್ತವಾದ ಪರಿಹಾರವೇ ಆಗಿತ್ತು.

ಬ್ರಿಟಿಷರು ಭಾರತದಲ್ಲಿರುವಂತೆ ಮಾಡಿರುವುದು ಯಾವುದು? ಮೊದಲನೆಯದಾಗಿ ಹಿಂದೂ ಮುಸ್ಲಿಮರ ಅನೈಕ್ಯತೆ. ನಿಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣ ನಾವು ನಿಮ್ಮನ್ನಾಳುತ್ತಿದ್ದೇವೆ ಎಂದು ಬ್ರಿಟಿಷರು ಹೇಳುತ್ತಿದ್ದರು. ಹಾಗಾಗಿ ಹಿಂದೂ ಮುಸ್ಲಿಮರು ಒಂದಾದರೆ ಅವರು ಈ ದೇಶದಲ್ಲಿರುವ ಅಗತ್ಯವೇ ಇರುತ್ತಿರಲಿಲ್ಲ. ಎರಡನೆಯದು ಅಸ್ಪೃಶ್ಯತೆ. ಭಾರತೀಯ ಬದುಕಿನೊಳಗಿನ ಒಂದು ಕೆಟ್ಟ ವ್ಯವಸ್ಥೆ ಇದು. ಹಿಂದುತ್ವವು ಅಸ್ಪೃಶ್ಯತೆಯ ಆಚರಣೆಯನ್ನು ತಾತ್ವಿಕವಾಗಿ ಒಪ್ಪಿದ್ದೇ ಆದರೆ ಹಿಂದೂ ಧರ್ಮವನ್ನೇ ಆಮೂಲಾಗ್ರ ಬದಲಾಯಿಸಬೇಕೆಂದು ಗಾಂಧಿ ತಿಳಿದಂತಿತ್ತು. ಯೂರೋಪಿನ ರೀತಿಯ ಅಭಿವೃದ್ಧಿ ನಮಗೆ ಬೇಕಿಲ್ಲವೆಂಬುದನ್ನು ಗಾಂಧಿ ಬಹು ಆಳವಾಗಿ ಕಂಡಿದ್ದರು. ಅದರ ಬಗೆಗಿನ ನಮ್ಮ ಹಂಬಲವೇ ಬ್ರಿಟಿಷರು ನಮ್ಮನ್ನು ಆಳುವಂತೆ ಮಾಡಿದ್ದು. ‘ಬೃಹತ್‌ಪ್ರಮಾಣದ ಉತ್ಪಾದನೆ ಬೇಕಿಲ್ಲ; ನಮಗೆ ಬೇಕಾದದ್ದು ಸಾಮೂಹಿಕ ಉತ್ಪಾದನೆ’ ಎಂದು ಮತ್ತೆ ಮತ್ತೆ ಅವರು ಹೇಳುತ್ತಿದ್ದರು. ಇದೂ ಒಂದು ಅರ್ಥಶಾಸ್ತ್ರವೇ.

ಆದರೆ ಗಮನಿಸಿ : ಮೇಲಿನ ಗಾಂಧಿಯ ಮೂರು ಆಶಯಗಳಲ್ಲಿ (ಹಿಂದೂ ಮುಸ್ಲಿಂ ಸಖ್ಯ, ಅಸ್ಪೃಶ್ಯತೆಯ ನಿವಾರಣೆ, ಖಾದಿ) ತನ್ನ ಉದ್ದೇಶ ಬ್ರಿಟಿಷ್ ಅಧಿಕಾರದ ಬದಲಾವಣೆ ಎನ್ನುವ ಮಾತೇ ಇಲ್ಲ. ಆ ಕಾಲದ ಯಾವ ರಾಜಕಾರಣಿಯ ಹೇಳಿಕೆಯನ್ನು ಗಮನಿಸಿದರೂ ಅಧಿಕಾರದ ಬದಲಾವಣೆಯ ಮಾತನ್ನೇ ನಿರೀಕ್ಷಿಸುತ್ತೀರಿ. ಗಾಂಧಿ ಅಧಿಕಾರದ ಬದಲಾವಣೆಯ ಮಾತನ್ನೇ ಆಡದೆ ಮೇಲಿನ ಮೂರು ಅಂಶಗಳನ್ನು ಸರಿಯಾಗಿ ಪರಿಶೀಲಿಸುವುದೇ ತನ್ನ ಬದುಕಿನ ಮಹತ್ವಾಕಾಂಕ್ಷೆಯೆಂದು ತಿಳಿಯುತ್ತಾರೆ. ಏಕೆಂದರೆ ಈ ಮೂರು ಅಂಶಗಳು ಸರಿಯಾಗಿ ಜಾರಿಗೆ ಬಂದರೆ ಅಧಿಕಾರದ ಬದಲಾವಣೆ ತಾನಾಗಿಯೇ ಆಗುತ್ತದೆ. ನಿಜವಾದ ಪ್ರಜಾರಾಜ್ಯವು ತಳಮಟ್ಟದಿಂದ ಸಮರ್ಪಕವಾಗಿ ಬೆಳೆಯುವ ಕ್ರಮ ಎಂಬುದನ್ನು ಸರಿಯಾಗಿ ಮನವರಿಕೆ ಮಾಡಿಕೊಳ್ಳುವುದೇ ಅಂದಿನ ಗಾಂಧಿ ರಾಜಕಾರಣದ ಗುರಿಯಾಗಿತ್ತು.

ಈ ಕಾಲದಲ್ಲಿಯೇ ಇನ್ನೊಂದು ಪ್ರಮುಖವಾದ ಚರ್ಚೆ ಎದ್ದಿತು. ಸಾಮಾಜಿಕ ಬದಲಾವಣೆ ಆದ್ಯವೋ, ಸ್ವಾತಂತ್ರ್ಯ ಆದ್ಯವೋ ಎನ್ನುವ ವಾಗ್ವಾದವದು. ಅಂಬೇಡ್ಕರ್ ಪ್ರಕಾರ ಹಳ್ಳಿಗಳು ಅಸ್ಪೃಶ್ಯರಿಗೆ ನರಕವಿದ್ದಂತೆ. ಹಾಗಾಗಿ ಅಂಬೇಡ್ಕರ್‌ಬ್ರಿಟಿಷ್ ಅಧಿಕಾರದ ಬದಲಾವಣೆಗೆ ಮುನ್ನ ಸಾಮಾಜಿಕ ಕ್ರಾಂತಿಯಾಗಬೇಕು ಎಂದರು.

ಇನ್ನೊಂದೆಡೆ ತಿಲಕರು ಬ್ರಿಟಿಷರಿಂದ ಬಿಡುಗಡೆ ಪಡೆಯುವುದನ್ನು ಮೊದಲ ಆದ್ಯತೆಯೆಂದು ಪರಿಗಣಿಸಿದರು. ಎಲ್ಲಕ್ಕಿಂತ ಮೊದಲು ಭಾರತ ಒಂದು ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳಬೇಕೆಂಬುದು ಅವರ ಧ್ಯೇಯವಾಗಿತ್ತು. ಸಾಮಾಜಿಕ ಕ್ರಾಂತಿ ಸ್ವಾತಂತ್ರ್ಯವನ್ನು ಹಿಂಬಾಲಿಸಿಕೊಂಡು ಬಂದೇ ಬರುತ್ತದೆ ಎಂಬುದು ಅವರ ವಾದದ ಮುಖ್ಯ ತಿರುಳಾಗಿತ್ತು. ಈ ಮಹತ್ವದ ವಾಗ್ವಾದವನ್ನು ನಾನು ಸರಳೀಕರಿಸುತ್ತಿದ್ದೇನೆ ಎಂದು ಬಲ್ಲೆ; ಈ ದ್ವಂದ್ವಗಳನ್ನು ಸ್ಥೂಲವಾಗಿ ಪರಿಚಯಿಸಿಕೊಳ್ಳಲು ನಾವಿದನ್ನು ಸರಳಗೊಳಿಸುತ್ತಿದ್ದೇನೆ.

ಈ ಸನ್ನಿವೇಶದಲ್ಲಿ ಗಾಂಧಿ ತೆಗೆದುಕೊಂಡ ನಿಲುವು ವಿಶಿಷ್ಟವಾದುದು. ಅವರು ಒಂದೆಡೆ ‘ಭಾರತವನ್ನು ಬಿಟ್ಟು ತೊಲಗಿ’ ಎಂದು ಬ್ರಿಟನ್ನಿಗೆ ಹೇಳುವ ಮುಲಕ ಭಾರತವನ್ನು ಒಂದು ರಾಷ್ಟ್ರವನ್ನಾಗಿಯೂ ಕಂಡರು; ಜೊತೆಗೇ, ಈ ಧ್ಯೇಯ ಸಾಧನೆಯ ಒಂದಂಶವಾಗಿಯೇ ಅವರು ದೇವಸ್ಥಾನಗಳು ಅಸ್ಪೃಶ್ಯರಿಗೂ ಮುಕ್ತವಾಗಬೇಕೆಂದು ಬಯಸಿದರು. ಹೀಗೆ ದೇಶೀಯರನ್ನೇ ಎದುರು ಹಾಕಿಕೊಳ್ಳುವ ಹೋರಾಟ ಸ್ವಾತಂತ್ರ್ಯ ಹೋರಾಟಗಾರರಿಗೆ ಮುಜುಗರವುಂಟುಮಾಡಿತು. ಅವರೆಲ್ಲ ‘ಈ ಗಾಂಧಿ ಸಮಗ್ರ ಆಂದೋಲನಕ್ಕೆ ಅಗತ್ಯವಾದ ಐಕ್ಯತೆಯ ಶಕ್ತಿಯನ್ನೇ ಶಿಥಿಲಗೊಳಿಸುತ್ತಿದ್ದಾರೆ’ ಎಂದು ತಿಳಿದರು. ಆದರೆ ವಾಸ್ತವವಾಗಿ ಈ ನಿಲುವಿನಿಂದ ಹಾಗೂ ಚಳುವಳಿಯಿಂದ ಗಾಂಧಿ ತಮ್ಮ ಸಾಮ್ರಾಜ್ಯಶಾಹಿಯ ಹೋರಾಟಕ್ಕೆ ಆಳವನ್ನೂ, ವಿಸ್ತಾರವನ್ನೂ ಪಡೆದುಕೊಂಡರು. ಬ್ರಿಟಿಷರ ಮೇಲುಗಾರಿಕೆಯ ಅಟ್ಟಹಾಸ ಹೇಯವಾದರೆ ನಾವು ಆಚರಿಸುವ ಅಸ್ಪೃಶ್ಯತೆಯೂ ಅಷ್ಟೇ ಹೇಯವಾದದ್ದು. ಸಾಮಾಜಿಕ ಬದಲಾವಣೆಗೆ ಮೊದಲ ಆದ್ಯತೆ ನೀಡಬೇಕೋ ಅಥವಾ ರಾಷ್ಟ್ರದ ವಿಮೋಚನೆಗೆ ಮೊದಲ ಆದ್ಯತೆಯೋ ಎಂಬ ಚರ್ಚೆ ಬಿರುಸಾಗಿ ನಡೆಯುತ್ತಿದ್ದ ಕಾಲದಲ್ಲಿ ಗಾಂಧಿ ಈ ದ್ವಂದ್ವನ್ನು ಮೀರಿದರು. ಅವರ ಮಾರ್ಗದಲ್ಲಿ ಈ ದ್ವಂದ್ವಕ್ಕೆ ಅವಕಾಶವೇ ಇರಲಿಲ್ಲ. ಎರಡನ್ನೂ ಏಕಕಾಲಕ್ಕೆ ಮುಖ್ಯವೆಂದು ಭಾವಿಸಿದ್ದರಿಂದ ಎರಡರ ಶಕ್ತಿಯೂ ಬಿಡುಗಡೆಯಾಯಿತು.

ಸೃಜನಶೀಲ ಮನಸ್ಸನ್ನು ಹೊಂದಿದ್ದ ಗಾಂಧಿ ತಮ್ಮ ಬೇರನ್ನು ಮಣ್ಣಿನಾಳದಲ್ಲಿ ಬಿಟ್ಟು ಜಗತ್ತಿಗೆ ಅಭಿಮುಖವಾದರು. ನಿಮ್ಮ ಆಲೋಚನೆಗಳನ್ನು ಹೊರ ಜಗತ್ತಿನ ಕಡೆಗೆ ತೆರೆದಿಟ್ಟರೆ ಮಾತ್ರ ನೀವು ಒಬ್ಬ ಕಾಸ್ಮೊಪಾಲಿಟನ್ ಇಂಟಲೆಕ್ಚುಯಲ್ ಆಗಿ ಬೆಳೆಯುತ್ತೀರಿ. ನೀವು ನಿಮ್ಮ ಸಂಸ್ಕೃತಿಯಲ್ಲಿ ಮಾತ್ರ ಬೇರು ಬಿಟ್ಟವರಾದರೆ, ನೀವು ಯಾವ ಬದಲಾವಣೆಗೂ ಒಲ್ಲದವರಾಗಿಬಿಡುತ್ತೀರಿ. ಗಾಂಧಿ ಕೇರಳದ ವೈಕಂ ಸತ್ಯಾಗ್ರಹದಲ್ಲಿ ಪಾಲ್ಗೊಂಡಾಗ ಸ್ಥಳೀಯರಾದ ನಂಬೂದರಿ ಬ್ರಾಹ್ಮಣರು ಮತ್ತು ನಾಯರ್ ನಾಯಕರನ್ನು ಒಲಿಸಿಕೊಳ್ಳಲು ತುಂಬ ಪ್ರಯತ್ನಿಸುತ್ತಾರೆ. ಅವರು ನಂಬುವ ಶಾಸ್ತ್ರಗಳನ್ನೇ ಆಧಾರವಾಗಿಟ್ಟುಕೊಂಡು ಅವರ ಜೊತೆ ಪರಿಪರಿಯಾಗಿ ಶಾಸ್ತ್ರಾರ್ಥಕ್ಕೆ ಆಹ್ವಾನಿಸುತ್ತಾರೆ. ಅವರೆಲ್ಲರೂ ಗಾಂಧಿಯ ಮಾನವೀಯ ವಿಚಾರಗಳಿಗೆ ಕಿವುಡರೂ, ಕುರುಡರೂ ಆಗಿ ಮೂರ್ಖರಂತೆ ತೋರುತ್ತಾರೆ. ಅವರು ತಮ್ಮ ಸಂಸ್ಕೃತಿಯಲ್ಲೇ ಬೇರು ಬಿಟ್ಟವರು. ಗಾಂಧಿ ಅವರ ವಿರುದ್ಧವೇ ಹೋರಾಡಿದರು, ಸತ್ಯಾಗ್ರಹ ಘೋಷಿಸಿದರು. ಆದ್ದರಿಂದ ನಾವು ನಮ್ಮ ನೆಲ್ಲದಲ್ಲಿ ಬೇರೂರಿದ್ದವರಾದರೆ ಮಾತ್ರ ಸಾಲದು. ಅಥವಾ ಯಾವ ಹಂಗಿಲ್ಲದ ವೈಚಾರಿಕರಾಗಿದ್ದರೂ ಸಾಲದು. ಎರಡನ್ನು ಒಂದುಗೂಡಿಸಲು ಸಾಧ್ಯವಾಗಬೇಕು. ಬಹುತೇಕ ಪ್ರಾದೇಶಿಕ ಭಾಷೆಗಳ ಸಾಹಿತ್ಯದಲ್ಲಿ ಇದು ಸಾಧ್ಯವಾಗಿದೆ.

ಭಾರತದ ಭಾಷೆಗಳೆಲ್ಲವೂ ಆಯಾ ಭಾಷೆಗಳನ್ನು ಮಾತನಾಡುವ ಕೆಳಜಾತಿ, ಜನಾಂಗಗಳ ಅನಕ್ಷರಸ್ಥರಿಂದಲೇ ಇಂದಿಗೂ ಉಳಿದುಕೊಂಡುಬಂದಿದೆ ಎಂದು ನಾನು ಆಗಾಗ ಹೇಳುತ್ತಿರುತ್ತೇನೆ. ಸದ್ಯಕ್ಕೆ ಬೆಂಗಳೂರಿನಂಥ ನಗರದ ಸ್ಥಿತಿಯನ್ನೇ ತೆಗೆದುಕೊಳ್ಳೋಣ. ಅಲ್ಲಿ ಓದಿದವರೆಲ್ಲರೂ ಹೆಚ್ಚು ಇಂಗ್ಲಿಷ್ ಮಾತನಾಡುತ್ತಾರೆ. ಇಲ್ಲಿ ನಿಮಗೆಷ್ಟು ಕಡಿಮೆ ಭಾಷೆಗಳು ಗೊತ್ತಿವೆಯೋ ಅಷ್ಟು ನೀವು ವಿದ್ಯಾವಂತರೆಂದು ಅರ್ಥ. ಆದರೆ ಮೈಸೂರಿನ ಬಸ್ ನಿಲ್ದಾಣದಲ್ಲಿರುವ ಅನಕ್ಷರಸ್ಥನೂ ಆಗಿರಬಹುದಾದ ಒಬ್ಬ ಕೂಲಿ ತಮಿಳು, ತೆಲುಗು, ಮಲಯಾಳಂ, ಉರ್ದು ಮತ್ತು ಕನ್ನಡದಲ್ಲಿ ಮಾತನಾಡಬಲ್ಲ ಮತ್ತು ಕೆಲಮಟ್ಟಿಗೆ ಇಂಗ್ಲಿಷ್‌ನ್ನು ಅರ್ಥಮಾಡಿಕೊಳ್ಳಬಲ್ಲ. ನೀವು ಒಂದು ವೇಳೆ ಹಿರಿಯ ಶ್ರೇಣಿಯ ಐ.ಎ.ಎಸ್. ಅಧಿಕಾರಿಯೋ, ಸಾಫ್ಟ್‌ವೇರ್ ಇಂಜಿನಿಯರೋ ಆದರೆ ನೀವು ಮಾಡಬಹುದಾದ ಎಲ್ಲವನ್ನೂ ಇಂಗ್ಲಿಷ್‌ನಲ್ಲಿ ಮಾತ್ರ ಮಾಡುತ್ತಿರುತ್ತೀರಿ. ನಮ್ಮ ಹೆಂಡತಿ ಮತ್ತು ಮಕ್ಕಳು ಚೂರುಪಾರು ಸ್ಥಳೀಯ ಭಾಷೆಗಳನ್ನು ಕಲಿತಿರಬಹುದು. ಅದೂ ಹೇಗೆಂದರೆ, ಹೆಂಡತಿಗೆ ಮಾರುಕಟ್ಟೆಯಲ್ಲಿ ವ್ಯವಹರಿಸಬೇಕಾಗುತ್ತದೆ; ಮಕ್ಕಳಿಗೆ ಹೊರಗಡೆ ಆಟ ಆಡಬೇಕಾಗಿರುತ್ತದೆ. ಆಧುನಿಕ ಫುಡ್‌ವರ್ಲ್ಡ್‌‌ಗಳು, ಪ್ರೈವೇಟ್ ಸ್ಕೂಲ್‌ಗಳು ಶುರುವಾದ ಮೇಲೆ ನೀವಿರುವ ನಗರದ ಬೀದಿ ಸಂಪರ್ಕವೂ ಅನಗತ್ಯವಾಗಿಬಿಡುತ್ತಿದೆ- ಇದೊಂದು ಬಹಳ ವಿಚಿತ್ರ ಸನ್ನಿವೇಶ.

ಗೆಳೆಯರೆ ನಾವೆಲ್ಲ ಒಂದು ಕ್ಷಣ ಮೌನವಾಗಿ ಕುಳಿತು ಯೋಚಿಸೋಣ. ನಮ್ಮ ಭಾಷೆಗಳನ್ನು ಶತಶತಮಾನಗಳುದ್ದಕ್ಕೂ ಕಾಪಾಡಿಕೊಂಡು ಬಂದವರು ಯಾರು? ಭಾರತದಲ್ಲಿ ಪ್ರತಿಯೊಬ್ಬರೂ ಸಾಕ್ಷರರಾಗಿದ್ದರೆ ಪ್ರಾಯಶಃ ಸಂಸ್ಕೃತ ನಮ್ಮೆಲ್ಲರ ಭಾಷೆಯಾಗಿರುತ್ತಿತ್ತು. ಅನಂತರದ ಸ್ಥಾನವನ್ನು ಪರ್ಷಿಯನ್ ಹಾಗೂ ಇಂಗ್ಲಿಷ್ ಪಡೆಯುತ್ತಿತ್ತು. ನಮ್ಮ ಇತರೆ ಭಾಷೆಗಳು ಬದುಕಿದ್ದೇ ಒಂದು ಸಮೂಹ ಅದನ್ನು ನಿರಂತರವಾಗಿ ಬಳಸುತ್ತಾ ಬಂದುದರಿಂದ. ಈ ಸಮೂಹವೇ ನಮ್ಮ ಸಂಸ್ಕೃತಿಯ ಬೃಹತ್ ಕಥನ ಮತ್ತು ಕಾವ್ಯಗಳ ವಾಹಕವಾಗಿತ್ತು.

ದಿ| ಎ.ಕೆ. ರಾಮಾನುಜನ್ ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದ ಒಂದು ಕತೆ ಹೇಳುತ್ತೇನೆ. ಆ ಕತೆ ಹೇಗೆ ನಮ್ಮ ಸಮೂಹ ಸಂಸ್ಕೃತಿ ಮತ್ತು ವಿದ್ಯಾವಂತ ವರ್ಗದ ಸಂಸ್ಕೃತಿಗಳ ನಡುವೆ ಒಂದು ಬಗೆಯ ಅಂತರ್ ಪಠ್ಯಸಂಬಂಧವಿದೆ ಎನ್ನುವುದನ್ನು ಹೇಳುತ್ತದೆ. ಕನ್ನಡದಲ್ಲಿ ಕೆಲವು ಸಾವಿರ ರಾಮಾಯಣಗಳಿವೆ. ಅವಾವುವೂ ಬರಹ ರೂಪದಲ್ಲಿಲ್ಲ, ನಿರೂಪಣೆಯ ರೂಪದಲ್ಲಿವೆ. ಅಂತಹ ಒಂದು ಜನಪದ ರಾಮಾಯಣದಲ್ಲಿ ಸ್ಥಳೀಯ ಸೀತೆ, ರಾಮ ಕಾಡಿಗೆ ಹೋಗುವ ಮುನ್ನ ಆತನೊಂದಿಗೆ ವಾದ ಮಾಡುತ್ತಾಳೆ. ರಾಮ ಸೀತೆಗೆ ‘ನೀನು ಕಾಡಿಗೆ ಬರಬೇಡ, ನೀನು ರಾಜಕುಮಾರಿ, ನಿನ್ನ ಪಾದಗಳು ಬಹಳ ಕೋಮಲವಾಗಿವೆ. ಹಾಗಾಗಿ ನಿನಗೆ ನೋವುಂಟಾಗಬಹುದು. ಅಲ್ಲಿ ಹುಲಿ, ಸಿಂಹ, ಹಾವುಗಳೆಲ್ಲ ಇವೆ. ನೀವು ಬರುವುದು ಬೇಡ’ ಎನ್ನುತ್ತಾನೆ. ಆಗ ಆಕೆ ‘ಇಲ್ಲ ನಾನು ನಿಮ್ಮ ಪತ್ನಿ ಮತ್ತು ನಾನು ಬಂದೇ ಬರುತ್ತೇನೆ’ ಎಂದು ಹಠ ಮಾಡುತ್ತಾಳೆ. ಆಮೇಲೆ ರಾಮ ಆಕೆ ತನ್ನನ್ನು ಹಿಂಬಾಲಿಸುವುದನ್ನು ಮತ್ತೆ ಮತ್ತೆ ವಿರೋಧಿಸಿದಾಗ ‘ಪ್ರತಿಯೊಂದು ರಾಮಾಯಣದಲ್ಲೂ ಸೀತೆ ರಾಮನ ಜೊತೆ ಕಾಡಿಗೆ ಹೋಗೋದು ನನಗೆ ಗೊತ್ತು. ಹಾಗಿರುವಾಗ ನೀನು ಹೇಗೆ ನನ್ನನ್ನು ಬಿಟ್ಟು ಹೋಗುತ್ತೀಯ?’ ಎಂದು ನಮ್ಮ ಅನಕ್ಷರಸ್ಥ ಸೀತೆ ಕೇಳುತ್ತಾಳೆ. ಇಲ್ಲಿಯ ಸೀತೆಗೆ ಇತರ ರಾಮಾಯಣಗಳ ಪರಿಚಯವೂ ಇದೆ. ವಾಸ್ತವಿಕವಾಗಿ ಗೆಳೆಯ ಸುಬ್ಬಣ್ಣ ಹೇಳುವಂತೆ ಭಾರತದಲ್ಲಿ ಇರುವ ಸಾವಿರಾರು ಭಾಷೆಗಳ ಜೊತೆಗೆ ಇನ್ನೂ ಎರಡು ಭಾಷೆಗಳಿವೆ. ಅವೇ ರಾಮಾಯಣ ಮತ್ತು ಮಹಾಭಾರತ. ಅವು ದೇಶದ ಬೌದ್ಧಿಕ-ವರ್ಗವನ್ನು ಮಾತ್ರ ಜೋಡಿಸುವುದಿಲ್ಲ, ಜನಸಮೂಹವನ್ನೂ ಜೋಡಿಸುತ್ತವೆ. ನಮ್ಮ ತುಲಸೀದಾಸ ಅಥವಾ ಎಳುತ್ತಚ್ಚನ್ ಜನರಿಗಾಗಿ ಬರೆದರು. (ನಿಮಗೆ ಗೊತ್ತಿರುವ ಹಾಗೆ ಎಳುತ್ತಚ್ಚನ್ ಕೆಳಜಾತಿಯ ವ್ಯಕ್ತಿ)

ಎಳುತ್ತಚ್ಚನ್ ಕುರಿತು ಕೇರಳದಲ್ಲಿ ಬೇಕಾದಷ್ಟು ಕತೆಗಳಿವೆ. ಮೈ ನವಿರೇಳಿಸುವಂಥ ಕತೆಗಳು ಅವುಗಳಲ್ಲೊಂದು ಸಂಸ್ಕೃತದಲ್ಲಿ ಬರೆಯುವ ಶ್ರೇಷ್ಠ ನಂಬೂದರಿ ಕವಿ ಭಟ್ಟತ್ತಿರಿಪ್ಪಾಡ್‌ನೊಂದಿಗಿನ ಆತನ ಭೇಟಿ. ಸಂಸ್ಕೃತದ ಆ ದೊಡ್ಡ ಕವಿಗೆ ತನ್ನ ‘ಭಾಗವತ’ವನ್ನು ಹೇಗೆ ಆರಂಭಿಸಬೇಕೆನ್ನುವುದು ಗೊತ್ತಿರಲಿಲ್ಲ. ಮಲಯಾಳಿಗಳು ಈ ಕತೆಯನ್ನು ನಿರೂಪಿಸುವುದು ಬಹಳ ಚೆನ್ನಾಗಿದೆ. ಕೇರಳದ ಪ್ರತಿಯೋರ್ವನೂ ಊಟವನ್ನು ಮೀನು ತಿನ್ನುವುದರೊಂದಿಗೆ ಆರಂಭಿಸುತ್ತಾನೆ. ಭಟತ್ತಿರಿಪ್ಪಾಡ್ ತನ್ನ ಭಾಗವತವನ್ನು ಹೇಗೆ ಪ್ರಾರಂಭಿಸುವುದೆಂದು ತಿಳಿಯದೆ ನಿರ್ವಿಣ್ಣವಾಗಿ ಕುಳಿತಾಗ ಎದುರಾದ ಶೂದ್ರಕವಿ ಎಳುತ್ತಚ್ಚನ್‌ನನ್ನು ‘ಭಾಗವತವನ್ನು ಹೇಗೆ ಆರಂಭಿಸಲಿ?’ ಎಂದು ಕೇಳುತ್ತಾನೆ. ಆಗ ಎಳುತ್ತಚ್ಚನ್ ‘ಶುರುವಾಗುವುದೆಲ್ಲ ಮೀನಿನಿಂದಲ್ಲವೆ?’ ಎಂದು ನಗುತ್ತಾನೆ. ಬ್ರಾಹ್ಮಣ ಭಟ್ಟತ್ತಿರಿಗೆ ಥಟ್ಟನೆ ಹೊಳೆಯುತ್ತದೆ; ಮತ್ಸ್ಯಾವತಾರದೊಂದಿಗೆ ಆರಂಭಿಸು ಎಂಬ ಸೂಚನೆ.

ಇಂಥದ್ದೇ ಇನ್ನೊಂದು ಕಥೆ, ಅದೂ ಭಟ್ಟತ್ತಿರಿಪ್ಪಾಡ್‌‌ಗೆ ಸಂಬಂಧಿಸಿದ್ದು. ಸಂಸ್ಕೃತದಲ್ಲಿ ಭಾಗವತವನ್ನು ಬರೆದು ಅವನು ತನ್ನ ಸಂಧಿವಾತವನ್ನು ನಿವಾರಿಸಿಕೊಂಡ. ಇನ್ನೊಬ್ಬ ಕವಿ (ಪುಂತಾನಂ) ಮಲೆಯಾಳಂನಲ್ಲಿ ಬರೆದ ಭಾಗವತವನ್ನು ಓದಲು ಕೊಟ್ಟಾಗ ಅದು ಮಲೆಯಾಳದಲ್ಲಿದೆಯೆಂದು ಓದಲು ನಿರಾಕರಿಸಿದ್ದರಿಂದ ಪುನಃ ಸಂಧಿವಾತಕ್ಕೊಳಗಾದ. ಆಗ ದೇವರು ಪ್ರತ್ಯಕ್ಷನಾಗಿ ‘ನಿನ್ನದು ಕೇವಲ ವಿಭಕ್ತಿ; ಮಲೆಯಾಳಿ ಕವಿಯದು ಭಕ್ತಿ’ ಎಂದು ಬ್ರಾಹ್ಮಣನ ಗರ್ವವನ್ನು ಮುರಿಯುತ್ತಾನೆ.

ಪರಂಪರೆ-ಆಧುನಿಕತೆಗಳೆರಡನ್ನೂ ಸಂವಹಿಸಬಲ್ಲ ಈ ಭಾರತೀಯ ಭಾಷೆಗಳಲ್ಲಿ ಅಸಾಧಾರಣ ಸಾಹಿತ್ಯಿಕ ಚಟುವಟಿಕೆ ನಡೆದದ್ದನ್ನು ೨೦ನೆಯ ಶತಮಾನ ಕಂಡಿದೆ. ನಾನಿದನ್ನು ನನ್ನದೇ ಉದಾಹರಣೆಯಿಂದ ಆರಂಭಿಸುತ್ತೇನೆ. ನಾನು ತಿಳಿದಿರುವ ನನ್ನ ಪರಂಪರೆ ಹೆಚ್ಚು ಕಡಿಮೆ ನನ್ನ ಅಪ್ರಜ್ಞಾನವಸ್ಥೆಯಲ್ಲೋ, ಅರೆಪ್ರಜ್ಞಾವಸ್ಥೆಯಲ್ಲೋ ಇರುವಂತಹುದು. ನೀವು ಭಾಷೆಯನ್ನು ಬಳಸುವಾಗ ಮಾತ್ರ ನಿಮಗೆ ಅದರ ಶಕ್ತಿಯ ಬೋಧೆಯಾಗುವುದು, ಅದನ್ನು ಅಂತರ್ಗತಮಾಡಿಕೊಳ್ಳಲು ಸಾಧ್ಯವಾಗುವುದು. ಭಾಷೆಯ ಸಾಮರ್ಥ್ಯ ನಿಮ್ಮ ನೆನಪಿನ ಶಕ್ತಿಯಿಂದ ಹೊರಬರುವಂತಹದು. ನೀವು ಹಳ್ಳಿಯಲ್ಲಿ ಬೆಳೆದವರಾದರೆ, ಅದರ ಎಲ್ಲ ನೆನಪುಗಳು ನಿಮ್ಮೊಡನೆ ಬಂದಿರುತ್ತವೆ. ನಿಮಗೊಂದು ಕುತೂಹಲಕರ ಅನುಭವವನ್ನು ಹೇಳುತ್ತೇನೆ. ನಾನು ಸರಿಸುಮಾರು ಮೂರು ವರ್ಷ ಇಂಗ್ಲೆಂಡಿನಲ್ಲಿದ್ದೆ. ಅಲ್ಲಿ ಎಲ್ಲ ಸಮಯದಲ್ಲೂ ನಾನು ಇಂಗ್ಲಿಷ್ ಮಾತನಾಡಬೇಕಾಗಿತ್ತು. ಇದರಿಂದ ಸುಸ್ತಾಗುತ್ತಿತ್ತು. ಒಮ್ಮೆ ನಾನು ಬಹಳ ದೊಡ್ಡ ಗಾಂಧಿವಾದಿ ಮಾರ್ಟಿನ್ ಗ್ರೀನ್‌ರ ಜೊತೆ ಪ್ರಯಾಣ ಹೊರಟೆ. ಅವರು ನನ್ನನ್ನು ಉತ್ತರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅವರ ಜೊತೆ ಅಷ್ಟು ಆತ್ಮೀಯವಾಗಿ ಇರತೊಡಗಿದ್ದರಿಂದ ಒಮ್ಮೆ ನನಗರಿವಿಲ್ಲದೆ ನಾನು ಅವರ ಜೊತೆ ಕನ್ನಡದಲ್ಲಿ ಮಾತನಾಡುವುದಕ್ಕೆ ತೊಡಗಿದೆ. ತತ್‌ಕ್ಷಣವೆ ಅವರಿಗೆ ಕನ್ನಡ ಬರುವುದಿಲ್ಲವೆಂದು ನೆನಪಾಯಿತು.

ಹೀಗೆ ಬರ್ಮಿಂಗಂನಲ್ಲಿ -ಇಂಗ್ಲಿಷ್ ಮಾತಾಡಿ ಮಾತಾಡಿ ಸುಸ್ತಾದವನು – ನನ್ನ ಸಂಸ್ಕಾರ ಕಾದಂಬರಿಯನ್ನು ಕೆಲವು ದಿನಗಳಲ್ಲಿ ಬರೆದು ಮುಗಿಸುವಾಗಿನ ಹುರುಪು ಖುಷಿಗಳನ್ನು ಮರೆಯಲಾರೆ. ಏಕೆಂದರೆ ನನ್ನ ಭಾಷೆ ಸಂಪೂರ್ಣವಾಗಿ ನನ್ನ ಬಳಿ ವಾಪಸು ಬಂದಿತ್ತು.

ನಮ್ಮ ಭಾಷೆಗಳಲ್ಲಿ ಬರೆಯುವಾತ ಪರಂಪರೆಯನ್ನು ಮೈಗೂಡಿಸಿಕೊಳ್ಳದೆ ಇದ್ದರೆ, ಅಂದರೆ ತನ್ನ ಭಾಷೆ ತನಗೆ ಒದಗಿ ಬರದೇಹೋದರೆ ಏನನ್ನೂ ಹೇಳಲಾರದವನಾಗುತ್ತಾನೆ; ಹಾಗೆಯೇ ಅವನು ಹೊಸ ವಿಚಾರಗಳಿಗೆ ತೆರೆದುಕೊಳ್ಳದೇ ತನ್ನ ಸೃಜನಶೀಲತೆಯನ್ನು ಹೊಸ ವಲಯಗಳಲ್ಲಿ ದುಡಿಸಿಕೊಳ್ಳಲಾರದೇ ಹೋಗುತ್ತಾನೆ. ಈ ಎರಡರ ನಡುವಣ ಒತ್ತಡ ತುಂಬಾ ಗಾಢವಾದುದು. ಇಂಥದನ್ನು ಬೇಂದ್ರೆಯಲ್ಲಿ, ಕುವೆಂಪುವಿನಲ್ಲಿ, ಮಾಸ್ತಿಯಲ್ಲಿ ಕಾಣಬಲ್ಲಿರಿ. ಪರಂಪರೆ- ಆಧುನಿಕತೆಗಳ ನಡುವಣ ಈ ಒಕ್ಕೂಟ ಮತ್ತು ದ್ವಂದ್ವಗಳನ್ನು ನಮ್ಮ ಕಾಲದ ಎಲ್ಲ ದೊಡ್ಡ ಬರಹಗಾರರಲ್ಲೂ ನೀವು ಕಾಣುತ್ತೀರಿ.

ಪರಂಪರೆ ಹಾಗೂ ಆಧುನಿಕತೆಗಳೆರಡನ್ನೂ ಬಿಡದಂತೆ ಈ ಎರಡರ ನಡುವಣ ಒತ್ತಡವನ್ನು ನಿಭಾಯಿಸುವ ಬಗೆ ಹೇಗೆ? ಯಾವುದೇ ಕ್ಷಣದಲ್ಲಿ ನಾನು ಆಧುನಿಕತೆಯ ವಿರೋಧಿಯಂತೆ ತೋರಬಹುದು. ಆದರೆ ಮರುಕ್ಷಣವೇ ನನ್ನ ಅಗತ್ಯಗಳು, ನಾನು ಓದಬಯಸುವ ಪುಸ್ತಕಗಳು, ನೋಡಲಿಚ್ಛಿಸುವ ಸ್ನೇಹಿತರು ಆಧುನಿಕತೆಗೆಗೆ ತೆರೆದು ಕೊಂಡವರಾಗಿರುತ್ತಾರೆ. ಈ ಕುರಿತು ಕೆಲವು ಸ್ವಾರಸ್ಯಕರವಾದ ಕಥೆಗಳಿವೆ. ಕನ್ನಡದ ಸಂಪ್ರದಾಯಸ್ಥ ಬರಹಗಾರರಂತೆ ಕಾಣಿಸುವ, ಬಹು ದೊಡ್ಡ ಗಾಂಧಿವಾದಿಯಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಒಮ್ಮೆ ನನ್ನೊಡನೆ ಮಾತನಾಡುತ್ತಾ ಹೇಳಿದ್ದರು : ‘ನಾನು ಇಂಗ್ಲಿಷ್ ಓದಿದ ವಿದ್ಯಾವಂತನನ್ನು ಭೇಟಿಯಾದಾಗಲೆಲ್ಲ ಇಂಗ್ಲಿಷ್‌ನಲ್ಲಿ ಏನಿದೆ ಮಣ್ಣು? ನೀನು ಕಾಳಿದಾಸನನ್ನು, ಭಾಸನನ್ನು, ಭವಭೂತಿಯನ್ನು ಮತ್ತು ಭಾಗವತವನ್ನು ಓದಬೇಕು ಎನ್ನುತ್ತೇನೆ; ಅದೇ ವೇಳೆ ಒಬ್ಬ ಸಂಸ್ಕೃತ ವಿದ್ವಾಂಸನನ್ನು ಭೇಟಿಯಾದರೆ ನೀನು ಸಂಸ್ಕೃತವನ್ನಷ್ಟೆ ಓದಿದರೆ ಸಾಕಾಗುವುದಿಲ್ಲ. ಶೇಕ್ಸ್‌ಪಿಯರ್ ಮತ್ತು ಇತರ ಐರೋಪ್ಯ ಬರಹಗಾರರನ್ನು ಓದು ಎನ್ನುತ್ತೇನೆ’ ಎಂದು.

೧೯ನೆಯ ಶತಮಾನದ ರಷ್ಯನ್ ಬುದ್ಧಿಜೀವಿಗಳು ಕೂಡ ಇಂಥದೇ ಸನ್ನಿವೇಶದಲ್ಲಿದ್ದರು. ಅವರು ಪಾಶ್ಚಾತ್ಯೀಕರಣ ಹಾಗೂ ರಷ್ಯನ್ ಸೆಳೆತಗಳ ನಡುವೆ ಸಿಲುಕಿಕೊಂಡಿದ್ದರು. ಆಧುನಿಕ ಪೀಟರ್ಸ್‌‌ಬರ್ಗ್‌‌ನಲ್ಲಿ ಬದುಕುವುದನ್ನಿಷ್ಟಪಡುತ್ತಿದ್ದ ದಾಸ್ತೊವಸ್ಕಿಯಂಥವರು ಅದೇ ಹೊತ್ತಿಗೆ ರಷ್ಯನ್ ಸಂಸ್ಕೃತಿಯ ಕೇಂದ್ರವಾದ ಮಾಸ್ಕೋವನ್ನು ಬಿಟ್ಟಿರಲಾರದವರಾಗಿದ್ದರು. ೧೯ನೆಯ ಶತಮಾನದ ಬಹು ಮಹತ್ವದ ಕೃತಿಗಳು ಈ ಒತ್ತಡದಲ್ಲೇ ಹುಟ್ಟಿದವುಗಳಾಗಿವೆ. ನೀವು ಟಾಲ್ಸ್‌ಟಾಯ್‌ನನ್ನು ಓದಿದರೆ ತಿಳಿಯುತ್ತದೆ. ಅಲ್ಲಿನ ಕೆಲವು ಪಾತ್ರಗಳು ಭಾರತದ ಶ್ರೀಮಂತ ಹೆಂಗಸರ ಪಾತ್ರಗಳಂತೆಯೇ ಕಾಣಿಸುತ್ತವೆ. ಅವರು ತಮ್ಮ ಗಂಡ ಮತ್ತು ಮಕ್ಕಳೊಂದಿಗೆ ರಷ್ಯನ್ ಭಾಷೆಯಲ್ಲಿ ಮಾತನಾಡುತ್ತಿರಲಿಲ್ಲ, ಬದಲಿಗೆ ಫ್ರೆಂಚ್ ಬಳಸುತ್ತಿದ್ದರು. ಏಕೆಂದರೆ ಅದೊಂದು ರೀತಿಯಲ್ಲಿ ತಮ್ಮ ಉನ್ನತ ದರ್ಜೆಯನ್ನು ತೋರಿಸುವುದಕ್ಕೂ ಹೌದು; ಹಾಗೆಯೇ ಸಂಸಾರದ ಜಗಳಗಳನ್ನು ಮನೆಗೆಲಸದ ಆಳುಗಳಿಂದ ಮುಚ್ಚಿಡುವುದಕ್ಕೂ ಹೌದು. ಈ ದೃಷ್ಟಿಯಲ್ಲಿ ರಷ್ಯನ್ನರು ಹೆಚ್ಚು ಕಡಿಮೆ ನಮ್ಮ ಹಾಗೆ. ಆದರೆ ಈ ಸೃಜನಶೀಲತೆ ಬಹಳ ಸಲ ಯೂರೋಕೇಂದ್ರಿತವಾಗಿರುತ್ತಿತ್ತು ಎಂಬುದೂ ಗಮನಾರ್ಹ.

ಭಾರತೀಯವಾದ ಎಲ್ಲ ಭಾಷೆಗಳ ಆರಂಭದ ಕಾದಂಬರಿಗಳನ್ನು ಗಮನಿಸಿದ. ಆ ಕಾದಂಬರಿಕಾರರೆಲ್ಲರೂ ಪರಂಪರೆಯ ಬಗ್ಗೆ ಮುನಿಸಿಕೊಂಡವರೇ ಆಗಿದ್ದರು. ಅವರು ಮೂಢನಂಬಿಕೆ, ಅನ್ಯಾಯಗಳ ವಿರುದ್ಧ ಸಾಕಷ್ಟು ವ್ಯಗ್ರರಾಗಿದ್ದರು. ಅಷ್ಟೇ ಅಲ್ಲ ಅವರಲ್ಲಿ ಹೆಚ್ಚಿನವರು ಶುದ್ಧ ವೈಚಾರಿಕರಾಗಿದ್ದರು. ಅವರೆಲ್ಲರೂ ನಮ್ಮಲ್ಲೊಬ್ಬ ಕುಮಾರವ್ಯಾಸ, ಪಂಪ, ಎಳುತ್ತಚ್ಚನ್ ಇಲ್ಲವೇ ಇಲ್ಲ ಎಂಬಂತೆ, ನಮಗೆಲ್ಲರಿಗೂ ಒಂದು ಭವ್ಯ ಪರಂಪರೆಯೇ ಇಲ್ಲವೆಂಬಂತೆ ಬರೆದರು. ಅವರಿಗೆ ಪರಂಪರೆಯೆಂಬುದು ನಿಷ್ಪ್ರಯೋಜಕ, ದುರದೃಷ್ಟವೆಂದರೆ ಆ ಕಾಲಕ್ಕೆ ಅವರಿಗೆ ಒಬ್ಬ ಮೂರನೆಯ ದರ್ಜೆಯ ಬ್ರಿಟಿಷ್ ಬರಹಗಾರ ಮಾದರಿಯಾಗಿರುತ್ತಿದ್ದ; ಶೇಕ್ಸ್‌ಪಿಯರ್ ಅಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಸಾಮಾಜಿಕ ಬದಲಾವಣೆ, ಅನ್ಯಾಯದ ವಿರುದ್ಧದ ಹೋರಾಟ, ಸಶಕ್ತ ರಾಷ್ಟ್ರವೊಂದರ ನಿರ್ಮಾಣ ಇವೆಲ್ಲ ಬಹಳ ಅಗ್ಗವಾದ ಐರೋಪ್ಯ ಮೂಲಗಳಿಂದ ಸ್ವೀಕರಿಸಿದ ಮಾಲುಗಳು. ನಾನು ಬೆಳೆಯುತ್ತಿದ್ದ ಕಾಲದಲ್ಲಿ ಇಂಗರ್‌ಸಾಲ್ ಬಹು ದೊಡ್ಡ ಹೆಸರು, ಅವನನ್ನು ಮಹಾ ಮೇಧಾವಿಯೆಂದು ಪರಿಗಣಿಸಲಾಗಿತ್ತು. ಇಂದು ಅಮೆರಿಕಾದಲ್ಲಿ ಯಾರಾದರೂ ಆ ಹೆಸರನ್ನು ಕೇಳಿದ್ದರೋ ಎಂಬ ಅನುಮಾನ ನನಗೆ. ಹಾಗೆಯೆ ರೆನಾಲ್ಡ್ ಎಂಬ ಇನ್ನೊಬ್ಬ ಮೂರನೆಯ ದರ್ಜೆಯ ಬ್ರಿಟಿಷ್ ಕಾದಂಬರಿಕಾರ- (ಇಂಥವರೆಲ್ಲಾ ಆ ಕಾಲಕ್ಕೆ ದೊಡ್ಡ ಹೀರೋಗಳಾಗಿಬಿಟ್ಟಿದ್ದರು) ಆತನನ್ನು ಇಂಗ್ಲೆಂಡಿನಿಂದ ಬಹಿಷ್ಕರಿಸಲಾಗಿತ್ತು. ಆದರೆ ಅವನು ನಮಗೆ ಆದರ್ಶ. ಇದು ವಿಚಿತ್ರವೆನಿಸಬಹುದು. ಆಧುನಿಕತೆಯ ಗಾಳಿ ಮೊದಲ ಬಾರಿಗೆ ನಮ್ಮತ್ತ ಬೀಸಿದಾಗ ನಾವು ನಮ್ಮ ಪರಂಪರೆಯನ್ನು ಸಂಪೂರ್ಣ ಮರೆತಿದ್ದಂತೆ ತೋರುತ್ತದೆ. ಮ್ಯಾಕ್ಸ್‌ಮುಲ್ಲರ್‌ರಂತಹವರಿಂದ ನಮ್ಮ ಪರಂಪರೆಯ ವಿಶಿಷ್ಟತೆಯ ಅರಿವಾಯಿತು. ಆಗಲೂ ನಮ್ಮ ಪ್ರತಿಕ್ರಿಯೆ ಹೇಗಿತ್ತೆಂದರೆ ‘ನಮ್ಮ ವೇದಗಳು ತುಂಬಾ ಮಹತ್ವದ್ದಿರಬೇಕು, ಏಕೆಂದರೆ ನೋಡಿ, ಒಬ್ಬ ಐರೋಪ್ಯನು ಅವುಗಳನ್ನು ಅನುವಾದಿಸಿದ್ದಾನೆ’ ಎಂದು. ಈಗಲೂ ಈ ಧೋರಣೆ ಬದಲಾಗಿಲ್ಲ.

ಹೊಸ ಶತಮಾನದ ಹೊಸ್ತಿಲಿನಲ್ಲಿ ನಿಂತಿರುವ ನಾವು ಈಗಲೂ ಈ ಪರಂಪರೆ ಹಾಗೂ ಆಧುನಿಕತೆಗಳ ನಡುವಣ ಒತ್ತಡವನ್ನು ಬಗೆಹರಿಸಿಕೊಂಡಿದ್ದೇವೆ ಎಂದು ನನಗನ್ನಿಸುವುದಿಲ್ಲ. ನನ್ನ ವಾದದಲ್ಲಿ ತರಬೇಕಾಗಿರುವ ಬಹು ಮುಖ್ಯವಾದ ಅಂಶ ಇದೆಂದು ನಾನು ಭಾವಿಸಿದ್ದೇನೆ. ನಾನು ಮೈಸೂರಿನಲ್ಲಿದ್ದಾಗ ಅಯ್ಯಪ್ಪಸ್ವಾಮಿಯ ದೀಕ್ಷೆ ಎಲ್ಲ ಥರದ ಜನರನ್ನೂ ಆಕರ್ಷಿಸುತ್ತಿದ್ದುದನ್ನು ಗಮನಿಸಿದ್ದೆ. ನಾನು ಹತ್ತಿರದಿಂದ ನೋಡಿದ್ದ, ಪ್ರತಿದಿನ ಕುಡಿದು ಹೆಂಡತಿಯನ್ನು ಹೊಡೆಯುತ್ತಿದ್ದ ಹರಿಜನ ವ್ಯಕ್ತಿ ಒಂದು ದಿನ ಅಯ್ಯಪ್ಪನ ದೀಕ್ಷೆ ಪಡೆದು, ಭಕ್ತನಾಗಿ ೪೦ ದಿನಗಳ ಕಾಲ ವ್ರತವನ್ನಾಚರಿಸಿ, ಹೆಂಡತಿಯಿಂದ ದೂರ ಇದ್ದು, ಸ್ನೇಹಿತರೊಡನೆ ಶಬರಿಮಲೆಗೆ ಯಾತ್ರೆ ಹೋಗಿ ಬಂದಿದ್ದ. ತನ್ನ ಗಂಡ ೪೦ ದಿವಸಗಳ ಕಾಲವಾದರ ಸಭ್ಯನಾಗಿರುತ್ತಾನಲ್ಲ ಎಂದು ಅವನ ಹೆಂಡತಿಗೆ ಸಮಾಧಾನ. ಅವನು ಹೋಗಿ ಬಂದ ಮೇಲೆ ಹೇಗಿರುತ್ತಾನೆಂದು ನಾನು ಆಕೆಯನ್ನು ಕೇಳಿದೆ. ‘ಅಯ್ಯೋ, ಅವನು ಯಥಾಪ್ರಕಾರ ಹಳೆಯ ದಾರಿಯನ್ನೇ ಮತ್ತೆ ಹಿಡಿಯುತ್ತಾನೆ. ಮುಂದಿನ ವರ್ಷ ಮತ್ತೆ ಶಬರಿಮಲೆ ವ್ರತ ಬರುತ್ತದಲ್ಲ’ ಎಂಬ ಸಮಾಧಾನ ಆಕೆಗೆ. ಭಕ್ತಚಳವಳಿಯ ಎಲ್ಲ ಗುಣಗಳೂ ಈ ಅಯ್ಯಪ್ಪನ ವ್ರತಕ್ಕಿದೆ ಎಂದು ಆಗ ನನಗೆ ಹೊಳೆಯಿತು. ಅವೆರಡರ ನಡುವೆ ನೀವು ಕೆಲವು ಸಮಾನ ಅಂಶಗಳನ್ನು ಕಾಣಬಹುದು; ಎಲ್ಲ ಭಕ್ತರೂ ಒಂದೆಡೆ ಸೇರುತ್ತಾರೆ, ಹಾಡಿ, ಕುಣಿದು ಭಜನೆ ಮಾಡುತ್ತಾರೆ. ಇನ್ನೊಂದು ಅಂಶವೆಂದರೆ ಹೆಣ್ಣು, ಹೆಂಡಗಳಿಂದ ದೂರ ಇರುವುದು. ಮೂರನೆಯದು ಸಮಾನತೆ. ಅಯ್ಯಪ್ಪನ ಭಕ್ತನಾದವನನ್ನು ‘ಸ್ವಾಮಿ’ ಎಂದು ಕರೆಯಲಾಗುತ್ತದೆ. ಇಲ್ಲಿ ಜಾತಿಭೇದಗಳಿಲ್ಲ (ಹೊರಗೆ ಇರಬಹುದು) ಆದರೆ ಆ ನಲವತ್ತು ದಿವಸಗಳ ಕಾಲ ಯಾವ ಜಾತಿ ಪದ್ಧತಿಗಳೂ ಇರುವುದಿಲ್ಲ. ಹೀಗೆ ಮೇಲ್ನೋಟಕ್ಕೆ ಅಯ್ಯಪ್ಪನ ವ್ರತ ನನಗೆ ಭಕ್ತಿ ಚಳವಳಿಯಂತೆ ತೋರಿತು. ಈ ಚಳವಳಿ ಎಷ್ಟೇ ಬೆಳೆದರೂ, ಇದರ ಬಗ್ಗೆ ನನಗೆ ಎಷ್ಟೇ ಕುತೂಹಲ ಹುಟ್ಟಿದರೂ ಇದರೊಡನೆ ನನ್ನನ್ನು ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಭಾರತದ ಚರಿತ್ರೆ ಇದಕ್ಕಿಂತ ಭಿನ್ನವಾದುದು ಎನಿಸಿತು. ಭಾರತದಲ್ಲಿ ಶ್ರಮಣರ ಆಂದೋಲನವಿತ್ತು; ವೈದಿಕರ ಆಂದೋಲನವಿತ್ತು. ೧೯ನೆಯ ಶತಮಾನದಲ್ಲಿ ಮ್ಯಾಥ್ಯೂ ಆರ್ನಾಲ್ಡ್ ಐರೋಪ್ಯ ಸಮಾಜದ ಬಗ್ಗೆ ಮಾತನಾಡುತ್ತ, ಅದು ಹೆಬ್ರಾಯಿಕ್, ಹೆಲೆನಿಕ್ ಎರಡೂ ಆಗಿತ್ತು ಎಂದು ಹೇಳುತ್ತಾನೆ. ಈ ಪದಗಳು ಗ್ರೀಕ್ ಮೂಲದವು. ಹೆಬ್ರಾಯಿಕ್ ಅಂದರೆ ಧಾರ್ಮಿಕವಾದುದು, ಹೆಲೆನಿಕ್ ಸರಿಪಡಿಸುತ್ತದೆ; ಧರ್ಮ ಅತಿ-ಪಾವಿತ್ರ್ಯವಾಗಲು ಯತ್ನಿಸಿದಾಗಲೆಲ್ಲ ಹೆಲೆನಿಸಂ ಅದನ್ನು ಸರಿಪಡಿಸುತ್ತದೆ ಎಂದು ಆರ್ನಾಲ್ಡ್ ವಾದಿಸುತ್ತಾನೆ.