ಸದಾಶಿವರಾಯರ ಒಂದು ಮಾತು ನೆನಪಾಗುತ್ತದೆ. ‘ವ್ಯವಹಾರಕ್ಕೆ ಜಾತಿ ಇಲ್ಲ; ವ್ಯಭಿಚಾರಕ್ಕೆ ಜಾತಿ ಇಲ್ಲ. ಆದರೆ ರಾಜಕೀಯಕ್ಕೆ ಯಾಕೆ ಜಾತಿ ಬಂತು? ಹೇಳಿ’. ಗಾಂಧೀಜಿಯ ತತ್ವಗಳಲ್ಲಿ ನಿಷ್ಠೆಯುಳ್ಳವರಾಗಿ, ಬ್ರಿಟಿಷರ ವಿರುದ್ಧ ಸತ್ಯಾಗ್ರಹದಲ್ಲಿ ಜೈಲಿಗೆ ಹೋದವರೆಲ್ಲ ಜನನಾಯಕರು ಎಂದು ತಿಳಿದಿದ್ದ ಕಾಲ ಮಾಯವಾಗಲು ಶುರುವಾದ ಕಾಲದ ಮಾತು ಇದು. ಅಂದರೆ-ಅದು ಚುನಾವಣೆಗಳಲ್ಲಿ ಜಾತಿ ಮುಖ್ಯವಾಗತೊಡಗಿದ್ದ ಕಾಲ. ಜನತಂತ್ರದಲ್ಲಿ ಅಧಿಕಾರ ಹಿಡಿಯಲು ಗಾಂಧಿ ತತ್ವಾನುನಿಷ್ಠೆ ಮಾತ್ರ ಸಾಲದು ಎಂದು ನಿಷ್ಠುರವಾಗಿ, ಪ್ರಾಮಾಣಿಕವಾಗಿ ತಿಳಿಯಲು ಬಹಳ ಕಾಲ ಬೇಕಾಯಿತು. ತಮಾಷೆಯೆಂದರೆ ಯಾರೂ ಹೀಗೆಂದು ಹೇಳುತ್ತಿರಲಿಲ್ಲ; ಅದನ್ನೊಂದು ಸತ್ಯವಾಗಿ ಕಂಡು ವೈಚಾರಿಕವಾಗಿ ಚರ್ಚಿಸಿರಲಿಲ್ಲ. ಮಾತಿನಲ್ಲಿ ಏನೋ ಹೇಳಿ ಕ್ರಿಯೆಯಲ್ಲಿ ಇನ್ನೊಂದು ಬಗೆಯಲ್ಲಿ ವರ್ತಿಸಲು ತೊಡಗಿದ್ದ ಕಾಲ ಅದು. ‘ಹಿಪೋಕ್ರಸಿ’ ಹುಟ್ಟಿಕೊಳ್ಳುವುದು ಈ ಬಗೆಯ ಮನಸ್ಸಿನ ಸೋಮಾರಿತನದಿಂದಲೂ ಇರಬಹುದು. ಇರುವ ‘ಜಾತಿ’ ಸತ್ಯವನ್ನು ಕಂಡು, ಅದಕ್ಕೆ ಎದಿರಾಗಿ ಅದನ್ನು ಮೀರದೇ, ಅದನ್ನು ಗುಪ್ತವಾಗಿ ಬಳಸುವ ಹಿಪೋಕ್ರಸಿ ನಮ್ಮ ಜೀವನದಲ್ಲಿ ಪಾದಾರ್ಪಣೆ ಮಾಡಿದಂತೆ ಅನ್ನಿಸಿದ್ದರಿಂದ ಸದಾಶಿವರಾಯರಂತವರು ಸಿಟ್ಟಾಗಿದ್ದರು.

ಸದಾಶಿವರಾಯರು ಈ ಸಿಟ್ಟಿನಲ್ಲೇ ಮುಂದುವರೆದಿದ್ದರೆ, ಹಲವು ಬ್ರಾಹ್ಮಣ ವರ್ಗದ ಸ್ವಾತಂತ್ರ್ಯ ಹೋರಾಟಗಾರರಂತೆ ಇವರೂ ಜಾಣ ಸಿನಿಕರಾಗಿಬಿಡಬಹುದಿತ್ತು.

ಆದರೆ ಶಿವಮೊಗ್ಗ ಜಿಲ್ಲೆಯ ಪುಣ್ಯದಿಂದ ಅದು ತಪ್ಪಿತು. ಸದಾಶಿವರಾಯರು ಸದಾ ಗೊಣಗುವ-ಸತ್ಪ್ರಜೆಯಾಗಿ ಮಾತ್ರ ಉಳಿಯಲಿಲ್ಲ. ಜಿಲ್ಲೆಯ ಬಡ ರೈತರ ಸಮಸ್ಯೆ ಆಗಿನ ಕೆಲವು ಸ್ವಾತಂತ್ರ್ಯ ಹೋರಾಟಗಾರರಿಗೆ ಮುಖ್ಯವಾಯಿತು. ತೀರಾ ಕೆಳವರ್ಗದವರಾಗಿ ‘ದೀವ’ ಜನಾಂಗದವರಿದ್ದರು ಒಕ್ಕಲಿಗರಲ್ಲೂ ಶ್ರೀಮಂತರೇ ಬೇರೆಯಾಗಿ ಬಡವರೇ ಬೇರೆಯಾಗಿ ಕಾಣತೊಡಗಿದ್ದರು. ಬ್ರಾಹ್ಮಣರಲ್ಲೂ ಬಡವರಿದ್ದರು. ಈ ಪ್ರಜ್ಞೆಯನ್ನು ತನ್ನದಾಗಿಸಿಕೊಂಡು ಶಾಂತವೇರಿ ಗೋಪಾಲಗೌಡರು ಬೆಳೆಯಲು ತೊಡಗಿದ್ದರು. ಗೋಪಾಲಗೌಡರಿಗೆ ಬೆಂಬಲವಾಗಿ ತೀರ್ಥಹಳ್ಳಿಯ ‘ಅಲೆಮಾರಿ’ ಕಾಂಗೈನ ರಾಘವೇಂದ್ರರಾಯರಿದ್ದರು.

ಲೋಹಿಯಾ ಒಂದು ಕಡೆ, ಬ್ರಾಹ್ಮಣರು ಕೆಳಜಾತಿಯವರನ್ನು ಪೋಷಿಸುವ ಗೊಬ್ಬರವಾಗಬೇಕು ಎಂದು ಹೇಳಿದ್ದಾರೆ. ಸದಾಶಿವರಾಯರು ಬೆಳೆಯುತ್ತಿದ್ದ ಶಾಂತವೇರಿ ಗೋಪಾಲಗೌಡರ ಬುಡವನ್ನು ಭದ್ರಮಾಡುವ ಗೊಬ್ಬರವಾದರು. ಶಾಂತವೇರಿ ಮೊದಲ ಬಾರಿಗೆ ಶಾಸಕಾಂಗದ ಸದಸ್ಯರಾದಾಗ ಎಲ್ಲ ಕಾನೂನು ಪುಸ್ತಕಗಳನ್ನು ಓದಿ ಅವರಿಗೆ ಬೇಕಾದ ಮಾಹಿತಿಗಳನ್ನು ಸಂಗ್ರಹಿಸಿಕೊಡುತ್ತಿದ್ದವರು ಸದಾಶಿವರಾಯರು. ಹಾಗೆಯೇ ತನ್ನ ಪ್ರತಿ ತಿಂಗಳ ವರಮಾನದಲ್ಲಿ ಬಹುದೊಡ್ಡ ಪಾಲನ್ನು ಗೋಪಾಲಗೌಡರು ನೇರವಾಗಿ ಸದಾಶಿವರಾಯರ ಮನೆಗೆ ಹೋಗಿ ಅವರ ಹೆಂಡತಿಗೆ ಕೊಟ್ಟು ಬರುತ್ತಿದ್ದರು.

ಸದಾಶಿವರಾಯರದು ಶಿಸ್ತಿನ ಚಿಂತನೆ, ಗೋಪಾಲಗೌಡರದು ಸೃಜನಶೀಲ ಮುಕ್ತಚಿಂತನೆ. ಇಬ್ಬರೂ ಒಬ್ಬರಿಗೊಬ್ಬರು ಪೂರಕವಾದರು. ಸದಾಶಿವರಾಯರು ಜಾತಿಯ ರಾಜಕಾರಣಕ್ಕೆ ವಿರೋಧಿಗಳಾಗಿ ಮಾತಾಡುತ್ತಿದ್ದರೂ ಶಿವಮೊಗ್ಗ ಜಿಲ್ಲೆಯಲ್ಲಿ ಬಡವರಾದ ಬ್ರಾಹ್ಮಣರು, ದೀವರು, ಒಕ್ಕಲಿಗರಿಗೆ ಗೋಪಾಲಗೌಡ ನಾಯಕರಾಗಿ ಬೆಳೆಯಬೇಕೆಂದು ಆಶಿಸಿದ್ದರು. ಹೀಗಾಗಿ ಅವರು ನಂಬಿದ ಸಮಾಜವಾದೀ ಚಿಂತನೆಗಳಿಗೆ ಕೆಳವರ್ಗದಿಂದಲೂ, ಕೆಳಜಾತಿಯಿಂದಲೂ, ಬಂದವರೊಬ್ಬರು ನಾಯಕರಾದ್ದರಿಂದ ಅಮೂರ್ತ ತತ್ವಕ್ಕೆ ಮಣ್ಣಿನಲ್ಲಿ ಊರಿದ ಬೇರುಗಳು ಸಿಗುವಂತಾಯಿತು.

ಸದಾಶಿವರಾಯರಿಗೆ ತೀರ್ಥಹಳ್ಳಿಯಲ್ಲಿ ಬೆಂಬಲ ಸಿಕ್ಕೀತೆಂದು ಮೊದಲ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲಿಸಲಾಗಿತ್ತು. ಇವರ ವಿರುದ್ಧ ಕಾಂಗ್ರೆಸ್ಸಿನಿಂದ ನಿಂತವರು ಕಡಿದಾಳ್ ಮಂಜಪ್ಪಗೌಡರು. ಇನ್ನೊಬ್ಬ ಅಭ್ಯರ್ಥಿ ಸದಾಶಿವರಾಯರ ಹತ್ತಿರದ ನೆಂಟರಾದ ಕಾಸರವಳ್ಳಿ ಸಾಹುಕಾರರು, ಜನಸಂಘದ ಅಭ್ಯರ್ಥಿ ಅವರು. ಗೋಪಾಲಗೌಡರು ನಿಂತಿದ್ದು ಸಾಗರದಿಂದ. ಆಗ ಇಂಟರ್ ಮೀಡಿಯೇಟ್ ಮುಗಿಸಿದ್ದ ನಾನು ಹಳ್ಳಿ ಹಳ್ಳಿ ತಿರುಗಿ ಸದಾಶಿವರಾಯರಿಗಾಗಿ ಪ್ರಚಾರ ಮಾಡಿದ್ದೆ. ಎಳ್ಳಮಾವಾಸ್ಯೆ ಜಾತ್ರೆಯಲ್ಲಂತೂ ತೀರ್ಥಹಳ್ಳಿ ಚೌಕದ ಮಹಡಿ ಮೇಲೊಂದು ಮೈಕ್ ಇಟ್ಟುಕೊಂಡು ನಾನು ಸತತವಾಗಿ ಭಾಷಣ ಬಿಗಿಯುತ್ತಿದ್ದೆ. ನನ್ನ ಪಕ್ಕದಲ್ಲಿ ಸಮಾಜವಾದಿ ಗೆಳೆಯ ಸಿನ್ಹಾ ಕೂತು ನನಗೆ ಕಿವಿಯಲ್ಲಿ ಹಲವು ವಿಚಾರಗಳನ್ನು ಪಿಸುಗುಟ್ಟಿ ಹೇಳಿ-ನನ್ನಿಂದ, ಬಳಸಿ ಮಾತಾಡಿಸುತ್ತಿದ್ದರು. ನನಗಿನ್ನೂ ನೆನಪಿದೆ-ಸತತವಾಗಿ ನಾನು ಹೇಳುತ್ತಿದ್ದ ಒಂದು ಮಾತು ಇದು: ‘ಸದಾಶಿವರಾಯರಿಗೇ ಓಟು ಕೊಡಿ; ಒಂದೊಮ್ಮೆ ನೀವು ಕೊಡಲು ಇಚ್ಛಿಸದಿದ್ದರೆ, ಕಾಂಗ್ರೆಸ್‌ನ ಕಡಿದಾಳ್‌ರಿಗೆ ಕೊಡಿ. ಆದರೆ ಜನಸಂಘಕ್ಕೆ ಮಾತ್ರ ಕೊಡಬೇಡಿ’.

ಹೀಗೆ ಭಾಷಣ ಮಾಡುತ್ತಾ ಅಲೆದಾಡಿದ ನಾನು ಒಮ್ಮೆ ಕಾಸರವಳ್ಳಿಯಲ್ಲಿ ಜ್ವರ ಬಂದು ರಾಮಕೃಷ್ಣರಾಯರ ಮನೆಯಲ್ಲೇ ಮಲಗಬೇಕಾಯಿತು. ಅಲ್ಲಿಯೂ ಸಿಕ್ಕ ಆಳು ಕಾಳುಗಳಿಗೆ ನನ್ನ ‘ಸಂದೇಶ’ವನ್ನು ಮುಜುಗರವಿಲ್ಲದೆ ಮುಟ್ಟಿಸುತ್ತಿದ್ದೆ. ಜೊತೆಗೇ ಸಾಹುಕಾರರ ಮನೆಯವರ ಅಪಾರವಾದ ಔದಾರ್ಯದ ಚಿಕಿತ್ಸೆಯನ್ನು ಪಡೆದಿದ್ದೆ. ಈ ಬಗೆಯ ನಿಚ್ಚಳವಾದ ಮುಜುಗರವಿಲ್ಲದ ತತ್ವ ನಿಷ್ಠೆಯನ್ನು ಆ ಎಳೆಯ ವಯಸ್ಸಿನಲ್ಲಿ ನಾನು ಪಡೆದದ್ದು ಸದಾಶಿವರಾಯರು, ಗೋಪಾಲಗೌಡರು-ಇಂಥವರ ಸಹವಾಸದಿಂದ.

ಅದೇ ಒಂದು ಕಾಲ!-ಎಂದು ಉದ್ಗರಿಸುವ ಆ ಕಾಲದ ನೆನಪಿರುವ ಕೆಲವೇ ಕೆಲವು ಜನ ಈಗ ಉಳಿದಿದ್ದಾರೆ. ಇವರೆಲ್ಲರೂ ಸದಾಶಿವರಾಯರ ರಾಜಕೀಯ ಸರಿ ತಪ್ಪುಗಳನ್ನು ನಿಷ್ಠುರವಾಗಿ ಗಂಟೆಗಟ್ಟಲೆ ಸದಾಶಿವರಾಯರ ಜೊತೆಯೇ ಚರ್ಚಿಸಿದ್ದಾರೆ. ಸಮಾಜವಾದಿ ಪಕ್ಷ ಪಿ.ಎಸ್.ಪಿ. ಜೊತೆ ವಿಲೀನವಾಗಬೇಕೆಂಬ ನಿರ್ಣಯವನ್ನು ಸದಾಶಿವರಾಯರು ಬೆಂಗಳೂರಿನಲ್ಲಿ ತೆಗೆದುಕೊಂಡು ಶಿವಮೊಗ್ಗೆಗೆ ಬಂದ ದಿನ ನೆನಪಾಗುತ್ತದೆ. ನಾವೆಲ್ಲರೂ ಸದಾಶಿವರಾಯರ ಮೇಲೆ ಕಂಡ ಕಾರಿದೆವು. ಸದಾಶಿವರಾಯರು ಆಗಲೇ ಹೊಂದಾಣಿಕೆಯ ರಾಜಕೀಯ ಯಾಕೆ ಸಮಯೋಚಿತ ಎಂದು ವಾದಿಸಿದ್ದರು….

ಇಂಥ ವಾದ ವಿವಾದಗಳ ಸುಳಿಯಲ್ಲಿ ಬೆಳೆದ ಸಮಾಜವಾದಿ ಚಿಂತನೆ ಮತ್ತೆ ಶಿವಮೊಗ್ಗ ಜಿಲ್ಲೆಯಲ್ಲಿ ಜೀವಂತವಾಗಬೇಕೆಂದು ನನ್ನ ಆಸೆ. ತನ್ನ ಎಲ್ಲ ಆಸ್ತಿಯನ್ನು ಕಳೆದುಕೊಂಡು, ಜೀವನ ಸಂತೋಷ ಕಳೆದುಕೊಳ್ಳದೆ ಜನರ ನಡುವೆ ಬದುಕಿದ ಸದಾಶಿವರಾಯರನ್ನು ಅವರ ಎಲ್ಲ ಇತಿಮಿತಿಗಳಲ್ಲೂ ಅರಿಯವುದು ಅಗತ್ಯ. ಇಂಥ ಅಪ್ಪಟ ವ್ಯಕ್ತಿಗಳನ್ನು ಪಡೆದುಕೊಂಡಿದ್ದ ಒಂದು ಪಕ್ಷ ಯಾಕೆ ಬೆಳೆಯಲಿಲ್ಲ? ಸಂಘಟನೆಯ ಶಿಸ್ತಿಗೆ ಒಗ್ಗದ ನಮ್ಮ ಸಮಾಜವಾದಿಗಳು ಕೇವಲ ಅನಾರ್ಕಿಸ್ಟರೇ?

ಸದಾ ನಗುವ ಕಣ್ಣುಗಳ ಸದಾಶಿವರಾಯರು ಚುರುಕಾದ ಮಾತಿನವರು. ಹಾಸ್ಯ ಪ್ರಜ್ಞೆ ಇದ್ದೂ ಪ್ರೀತಿ, ಜಗಳಗಂಟತನ ಸಿಟ್ಟುಗಳಲ್ಲಿ ತೊಳಲಾಡಿದವರು. ಜೇಬಿನಲ್ಲಿರುವ ಹಣ ತೀರುವ ತನಕ ಹಿಂದಿನ ಸಾಹುಕಾರಿಕೆಯ ಗತ್ತಿನಲ್ಲಿ ಉದಾರಿಗಳಾಗುತ್ತಿದ್ದರು. ಇದು ತನ್ನದು ಎಂಬ ವ್ಯಾಮೋಹವಿಲ್ಲದೇ ಬದುಕಿದವರು. ತನ್ನಂತವರ ಅಗತ್ಯವಿಲ್ಲದಂತೆ ಬೆಳೆಯ ತೊಡಗಿದ. ರಾಜಕೀಯ ವ್ಯವಸ್ಥೆಯಿಂದ ದಿಗ್ಭ್ರಾಂತರಾದ ನನ್ನ ಪ್ರೀತಿಯ ಹಿರಿಯರಲ್ಲಿ ಒಬ್ಬರು.

ಕೃಪೆ: ಕಾಗೋಡು ಸತ್ಯಾಗ್ರಹಗಳ ಪರಿಚಯದ ಪುಸ್ತಕಮಾಲೆ
ಗುಬ್ಬಿಗ ಜಿ.ಸದಾಶಿವರಾವ್ಒಂದು ನೆನಪು
ಸಂ: ಕಲ್ಲೂರು ಮೇಘರಾಜ
ಪ್ರ: ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ೨೦೦೪

* * *