ಬೇಂದ್ರೆ ಮಹಾ ಮಾತುಗಾರು: ಅಕ್ಷಯ ಬತ್ತಳಿಕೆಯಿಂದ ಎನ್ನುವಂತೆ ಅವರ ಮಾತುಗಳು ಸತತವಾಗಿ ಹೊಮ್ಮುತ್ತಿದ್ದವು. ಅವರ ಮಾತಿಗೆ ಅವರೇ ಬೆರಗಾಗುವಂತೆ ಕಾಣುತ್ತಿತ್ತು. ಕೆದರಿದ ಕೂದಲಿನ, ಮಾಸಿದ ಕೋಟಿನ ಹೋಲೆಯುವ ಕಣ್ಣಿನ ಒಬ್ಬ ಮಾಂತ್ರಿಕನಂತೆ ಎಲ್ಲೆಲ್ಲಿಂದಲ್ಲೋ ಬರುವ ಸಂಜ್ಞೆಗಳನ್ನು ಮನೋಗತ ಮಾಡಿಕೊಳ್ಳುತ್ತಲೇ, ಹಾಗೆ ಹಾಗೇ ಆಡಿ ಆಡಿ ನುಡಿಕೊಡುವಂತೆ ಅವರು ಕಾಣುತ್ತಿದ್ದರು.

ನನ್ನಂತಹ ಹೊಸ ಬರಹಗಾರರಿಗೆ ಈ ಸಾನ್ನಿಧ್ಯವನ್ನು ದೊರೆಯುವಂತೆ ಮಾಡುತ್ತಿದ್ದವರು ಬೀಜಿಯವರು. ಮನೋಹರ ಗ್ರಂಥಮಾಲೆಯ ಮಹಡಿ ಮೇಲೆ ಒಂದು ಕೈಯಲ್ಲಿ ಕೊಡೆ ಹಿಡಿದು, ಇನ್ನೊಂದರಲ್ಲಿ ಚೀಲಹಿಡಿದು ಚುರುಕಾಗಿ ಮಹಡಿ ಹತ್ತುವ ಬೇಂದ್ರೆಯವರನ್ನು ನೆನೆಯುವಾಗ ಅವರ ಹಿಂದೆ ಸದ್ದಿಲ್ಲದೆ ಹಿಂಬಾಲಿಸುವ ಜೀಬಿ ನೆನಪಾಗುತ್ತಾರೆ. ಅವರ ಕಪ್ಪು ಟೋಪಿ, ಕಚ್ಚೆ ಹಾಕಿದ ಪಂಚೆ, ಅವರ ಬರಿಗಾಲು, ತೂಕದ ನಡಿಗೆ, ತುಂಟ ನಗೆ ನೆನಪಾಗುತ್ತದೆ. ಜೀಬಿಯ ಜೊತೆಯೇ ಅವರ ಮಗ ರಾಮ ಮತ್ತು ಕೀರ್ತಿ ನೆನಪಾಗುತ್ತಾರೆ. ಈ ಮೂವರನ್ನು ಫಾದರ್, ಸನ್ ಮತ್ತು ಹೋಲಿ ಘೋಸ್ಟ್ ಎಂದು ಕುಶಾಲಿನ ಮೆಚ್ಚುಗೆಯಲ್ಲಿ ವರ್ಣಿಸುತ್ತಿದ್ದ ವೈಎನ್ಕೆ ನೆನಪಾಗುತ್ತಾರೆ.

ಮಾವಿನ ಹಣ್ಣಿನ ಸೀಕರಣೆ, ಉಪಚಾರದ ಒತ್ತಾಯದಲ್ಲಿ ಮಾಡುತ್ತಿದ್ದ ಊಟ, ಕೀರ್ತಿ ಜೊತೆ ಇಡೀ ರಾತ್ರಿ ಕೂತು ಮಾಡುತ್ತಿದ್ದ ಸಾಹಿತ್ಯದ ಚರ್ಚೆ ನೆನಪಾಗುತ್ತದೆ. ಜೀಬಿ ಗದರಿಸುವ ತನಕ ಈ ಹರಟೆ ಮುಂದುವರಿಯುತ್ತಿತ್ತು. ಒಂದೆರಡು ಗಂಟೆ ನಿದ್ದೆ ಮುಗಿಸಿ ಬೆಳಗಿನ ಜಾವ ರಾತ್ರಿ ನಿಂತಲ್ಲಿಂದ ಅದು ಮುಂದುವರಿಯುತ್ತಿತ್ತು.

ನನ್ನ ಸಾಹಿತ್ಯದ ಪ್ರೀತಿ ಗಾಢವಾದದ್ದು ಮನೋಹರ ಗ್ರಂಥಮಾಲೆಯ ಮಹಡಿಯಲ್ಲಿ; ಜೀಬಿಯವರ ಊಟದ ಮನೆಯಲ್ಲಿ; ಮನೆಯ ಹಿಂದಿನ ಒಂದು ಸಣ್ಣ ರೂಮಿನ ನೆಲದ ಮೇಲಿನ ಶಯ್ಯೆಯಲ್ಲಿ.

*

ಬೇಂದ್ರೆ ಮತ್ತು ಕೀರ್ತಿ ಸತತ ಮಾತಾಡುವವರಾದರೆ ಜೀಬಿ ಸತತ ಸುಮ್ಮನಿರುವವರು. ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದಾರೊ ಇಲ್ಲವೋ ಎಂದು ಅನುಮಾನವಾಗುವಷ್ಟು ಅಲ್ಲೇ ಇರದವರ ಹಾಗೆ ಇರುತ್ತಿದ್ದವರು. ಬೇಂದ್ರೆ ಗುರುತಿಸಿದಂತೆ ಪ್ರತಿಭೆ ಅಜ್ಞಾತದಲ್ಲಿ, ನಿದ್ದೆಯಲ್ಲಿ, ಕನಸಿನಲ್ಲಿ ಅರಳುವಂಥದ್ದು. ಅವರು ಹೆತ್ತ ಕೃತಿಗಳಿಗಿಂತ ಅವರು ಹೆರಿಸಿದ ಕೃತಿಗಳೇ ಅಪಾರ. ಬರಿಗಾಲಲ್ಲಿ ನಡೆದಾಡಿ ಇಡೀ ಕರ್ನಾಟಕದ ಮೂಲೆ ಮೂಲೆಗೆ ನಮ್ಮೆಲ್ಲರ ಕೃತಿಗಳನ್ನು ಮುಟ್ಟಿಸಿದ ಮಹಾನುಭಾವ ಈ ಜೋಷಿ. ಅವರು ಪ್ರಕಟಿಸಿದ ಪುಸ್ತಕ ಪಠ್ಯಪುಸ್ತಕವೇನಾದರೂ ಆದರೆ ಮರುಮುದ್ರಣಕ್ಕೆ ಅದನ್ನು ಅವರು ಮುಟ್ಟರು. ಎಲ್ಲ ಪ್ರಕಾಶಕರು ಪಠ್ಯ ಪುಸ್ತಕವಾಗಲೆಂದೇ, ಆಗುವಂಥದ್ದನ್ನೇ ಪ್ರಕಟಿಸಿದರೆ ಜೀಬಿಯವರ ಕಣ್ಣು ಬರೆಯಬಲ್ಲ ಹೊಸಬರ ಮೇಲೆ. ಪ್ರಕಾಶನ ಪ್ರಪಂಚದಲ್ಲಿ ಜೀಬಿಯಂತಹ ಇನ್ನೊಬ್ಬ ಪ್ರಾಣಿ ಇರಲಿಕ್ಕಿಲ್ಲ.

ಲೇಖಕರಾಗಿ ಜೀಬಿ ಬಗ್ಗೆ ಅಡಿಗರು ಹೇಳಿದೊಂದು ಮಾತನ್ನು ನೆನೆಯುತ್ತೇನೆ. ಬೇಂದ್ರೆ ಬಳಗದಲ್ಲಿ ಮಧುರಚೆನ್ನರನ್ನು ಬಿಟ್ಟರೆ ಇನ್ನೊಬ್ಬ ಸೃಜನಶೀಲನೆಂದರೆ ಜೀಬಿಯೇ. ನನ್ನ ಪಾಲಿಗೆ ಕನ್ನಡದ್ದೇ ಆದ ನಾಟಕಗಳೆಂದರೆ ಜೀವಿ ಬರೆದವು.

ಜಿ.ಬಿ. ಜೋಶಿ ಶತಮಾನೋತ್ಸವ ಸಂದರ್ಭದಲ್ಲಿ ಬರೆದ ಲೇಖನ.

* * *