‘ಇಪ್ಪತ್ತನೆಯ ಶತಮಾನ ಕನ್ನಡದ ಅತ್ಯುತ್ತಮ ಕಾಲ’ ಎಂದು ಜಿ.ಎಸ್. ಶಿವರುದ್ರಪ್ಪ ಹೇಳುತ್ತಾರೆ. ಈ ಸಾಧನೆಯ ಶ್ರೀಮಂತಿಕೆಯಿಂದಾಗಿಯೇ ಒದಗಿದ ಆತ್ಮವಿಶ್ವಾಸದಲ್ಲಿ ನಮ್ಮ ಹಿರಿಯರ ಸಾಧನೆ ಎಂತದ್ದು? ಎಂಬ ಬಗ್ಗೆ ಒಂದು ಹದವಾದ ನಿರ್ಣಯಕ್ಕೆ ನಾವು ಈಚೆಗೆ ಬಂದಿರುವಂತೆ ಕಾಣುತ್ತದೆ. ಅವರ ಗುಣದೋಷಗಳು ನಮ್ಮ ಮೆಚ್ಚುಗೆಯ ಒಂದಂಶವಾಗಿಯೇ ಕಾಣಬಹುದಾದ ದೂರವನ್ನು ಅವರಿಂದ ನಾವೀಗ ಪಡೆದುಕೊಂಡಿದ್ದೇವೆ.

ಕನ್ನಡದ ಹಿರಿಯರಲ್ಲಿ ನಿಸ್ಸಂದೇಹವಾಗಿ ಪು.ತಿ.ನ ಅವರೂ ಒಬ್ಬರು, ಮಾತ್ರವಲ್ಲ ವಿಶಿಷ್ಟರು. ಈ ಕವಿಯ ಬಗ್ಗೆ ಎಲ್ಲರೂ ಒಂದಲ್ಲ ಒಂದು ಕಾರಣಕ್ಕಾಗಿ ಮೆಚ್ಚುಗೆಯನ್ನು ತೋರಿಸುತ್ತಾರಾದರೂ ಬೇಂದ್ರೆ, ಕುವೆಂಪು, ಕಾರಂತರ ಬಗ್ಗೆ ತೋರಿಸುವ ಉತ್ಸಾಹವನ್ನು ತೋರಿದಂತೆ ಕಾಣುವುದಿಲ್ಲ. ನಮ್ಮಲ್ಲೊಂದು ‘ಹುಚ್ಚು ಹಿಡಿಯುವ’ ಮಾತಿದೆ. ಬೇಂದ್ರೆಗೂ, ಕುವೆಂಪುಗೂ ಜನ ಹುಚ್ಚರಾದಂತೆ ಪು.ತಿ.ನ.ರಿಗೆ ಹುಚ್ಚಾದವರು ಕೆಲವೇ ಕೆಲವು ಜನರಿದ್ದಾರೆ. ಕೂಡಲೇ ನೆನಪಾಗುವವರು ಹಿರಿಯ ಲೇಖಕ ಸುಜನಾ ಮತ್ತು ಯುವ ಕವಿ ಮಂಜುನಾಥ.

ಎಲ್ಲ ಸಾಹಿತ್ಯ ವಿಮರ್ಶೆಯೂ ತನ್ನ ಕಾಲದ ಅಗತ್ಯಗಳಿಗೆ ಅನುಸಾರವಾಗಿ ವ್ಯಕ್ತಗೊಳ್ಳುತ್ತದೆ. ಆಯಾ ಕಾಲಕ್ಕೆ ತಕ್ಕ ಬರವಣಿಗೆಯ ಜರೂರಿನ ಹಾಗೆಯೇ ಓದುಗರ ಉತ್ಸಾಹದ ಹುಚ್ಚೂ ಇರುತ್ತದೆ. ಆದರೆ ಈ ಹುಚ್ಚು ಅಲ್ಪಾಯುವ ಆಗಿರಬಹುದು ಎಂಬುದನ್ನು ನಾವು ಮರೆಯಬಾರದು. ಕಾಲ ಬದಲಾದಂತೆ ನಮ್ಮ ಆಯ್ಕೆಯು ಬದಲಾಗುತ್ತದೆ. ಇದಕ್ಕೆ ಪ್ರಸಿದ್ಧ ಉದಾಹರಣೆಯೆಂದರೆ. ಇಂಗ್ಲಿಷಿನ ಮೆಟಫಿಸಿಕಲ್ ಕವಿಗಳು. ಹತ್ತೊಂಬತ್ತನೆಯ ಶತಮಾನದಲ್ಲಿ ಇವರನ್ನು ತೀರಾ ಕ್ಲಿಷ್ಟವೆಂದು ಕಡೆಗಣಿಸಲಾಗಿತ್ತು. ಅವರ ಭಾವಪ್ರಪಂಚ ರೊಮ್ಯಾಂಟಿಕ್ ಯುಗದ ಆವೇಶಿತರಿಗೆ ಕೃತಕವೆನ್ನಿಸಿತ್ತು. ಆದರೆ ಎಲಿಯಟ್‌ನ ಕಾಲದಲ್ಲಿ ಎಲ್ಲವೂ ಬದಲಾಗಿಬಿಟ್ಟಿತು. ಹಲವರಿಗೆ ಡನ್ ಮತ್ತು ಹರ್ಬರ್ಟ್ ಕವಿಗಳು ತಮ್ಮ ದ್ವಂದ್ವಗಳನ್ನು ಪ್ರಕಟಿಸಲು ಮಾದರಿಯಾಗಿಬಿಟ್ಟರು.

ಲಂಕೇಶರು ಪುತಿನರ ಕಾವ್ಯವನ್ನು ‘ಅಳುಬುರುಕ’ ಕಾವ್ಯ ಎನ್ನುತ್ತಾರೆ. ಈ ಮಾತು ಪು.ತಿ.ನ.ರ ಬಗ್ಗೆ ಒಂದು ಅಂತಿಮ ಸತ್ಯ ಎಂದು ಮಾತ್ರ ತಿಳಿಯಬಾರದು. ಲಂಕೇಶರು ತನ್ನ ಸೃಜನಶಿಲ ಪ್ರಕ್ಷುಬ್ಧತೆಗೆ ಯಾವ ಬಗೆಯ ಸಾಹಿತ್ಯವನ್ನು ಆಯುತ್ತಾರೆ ಎಂಬುದನ್ನೂ ಇದು ತೋರಿಸುತ್ತದೆ. ಲಂಕೇಶರನ್ನೇ ತಿಳಿಯಲು ಅವರ ಪು.ತಿ.ನ ಗ್ರಹಿಕೆ ಮುಖ್ಯವಾಗುತ್ತದೆ. ನಮ್ಮ ಭಾವಲೋಕದಲ್ಲಿ ನಮ್ಮನ್ನೇ ವ್ಯಕ್ತಗೊಳಿಸಿಕೊಳ್ಳಲು ನಾವು ಬೇರೆ ಲೇಖಕರನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ.

ನಮ್ಮ ಕಾಲದಲ್ಲಿ ಕೆ.ವಿ. ಸುಬ್ಬಣ್ಣನವರು ಪು.ತಿ.ನರ ಗೋಕುಲ ನಿರ್ಗಮನವನ್ನು ಓದಿ, ಭಾವಿಸಿಕೊಂಡ ಕ್ರಮ ಮತ್ತು ಅದಕ್ಕೆ ಬಿ.ವಿ.ಕಾರಂತರು ಕೊಟ್ಟ ರೂಪ ಬಹಳ ಗಮನಾರ್ಹವಾದದ್ದು. ಪು.ತಿ.ನ. ಅವರ ಒಳನೋಟಗಳು ನಮ್ಮ ಈ ಕಾಲಕ್ಕೆ ಪ್ರಸ್ತುತವಾಗುವಂತೆ ಕಾರಂತರು ನಾಟಕವನ್ನು ನಿರ್ದೇಶಿಸಿದರು. ಇಲ್ಲಿಯೂ ನಾವು ಗಮನಿಸಬೇಕಾದ ಇನ್ನೊಂದು ಮಾತಿದೆ. ತನ್ನ ಹಾಡುಗಳನ್ನು ಯಾವ ರಾಗದಲ್ಲಿ, ಹೇಗೆ ಹಾಡಬೇಕೆಂಬ ಪು.ತಿ.ನ. ರನ್ನು ನಮ್ಮ ಕಾಲದವರನ್ನಾಗಿ ಮಾಡಲು ಸಾಧ್ಯವಾಯಿತು. ಅಂದರೆ ಪು.ತಿ.ನರಿಗೇ ಇರುವ ತಾನು ಯಾರು? ತಾನು ಏನು? ಎನ್ನುವ ಕಲ್ಪನೆಯನ್ನು ಅವರ ಓದುಗರಾಗಿ ನಾವು ಪ್ರಶ್ನಿಸಬಹುದು. ಪು.ತಿ.ನರಿಗೆ ಗೊತ್ತಿಲ್ಲದ ಇನ್ನೊಬ್ಬ ಪು.ತಿ.ನ ರನ್ನು ನಾವು ಸೃಷ್ಟಿಸಿಕೊಳ್ಳಬಹುದು. ಬಹಳ ದೊಡ್ಡ ಕವಿಗಳ ಬಗ್ಗೆ ಮಾತ್ರ ಈ ಬಗೆಯ ಅನುಸಂಧಾನ ಸಾಧ್ಯ.

ನಮ್ಮ ಹಿರಿಯರ ಬಗ್ಗೆ ಪು.ತಿ.ನರನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಮಾತನಾಡೋಣ. ಕುವೆಂಪು ಅಪ್ಪಟ ಆಧುನಿಕ. ಅವರು ಯಾವುದೇ ಪುರಾಣವನ್ನು ತೆಗೆದುಕೊಂಡರೂ ಅದನ್ನು ಆಧುನಿಕ ಕಾಲಕ್ಕೆ ಒಗ್ಗಿಸಿಕೊಳ್ಳುತ್ತಾರೆ. ಬೇಂದ್ರೆಯ ಜಾನಪದದಲ್ಲೂ ಅದರ ನುಡಿಗಟ್ಟಿನ ಸದ್ಯತೆಯಿಂದಾಗಿ ಒಂದು ಬಗೆಯ ಆಧುನಿಕತೆ ಇದೆ. ಇಬ್ಬರಿಗೂ ಭಿನ್ನರಾದವರು ಪು.ತಿ.ನ. ಅವರದು ‘ಕ್ಲಾಸಿಕಲ್ ಮಾರ್ಗ’ ಎನ್ನಬಹುದು. ಎತ್ತಿಕೊಳ್ಳುತ್ತಾರೆ. ಪು.ತಿ.ನರಿಗೆ ರಿಚುಯಲ್‌ಗಳು ಒಂದು ಬಗೆಯ ಸೌಂದರ್ಯವನ್ನು ಅಭಿವ್ಯಕ್ತಿಸುವ ನಾಟಕವಾಗುತ್ತವೆ. ನಾವು ಇರುವ ಜಾಗವೇ, ಇರುವ ಕಾಲವೇ ಧಾರ್ಮಿಕ ರಿಚುಯಲ್‌ಗಳಿಗೆ ಒಳಪಟ್ಟಾಗ-ವಿಶಿಷ್ಟಗೊಂಡು ಪಾವಿತ್ರ್ಯದ ಪ್ರಭೆಯ ಅನನ್ಯತೆಯನ್ನು ಆವಾಹಿಸಿಕೊಳ್ಳುವ ರಂಗವಾಗುತ್ತದೆ. ಪರಿಚಿತವೆಂದುಕೊಂಡದ್ದು ಅಪರಿಚಿತ ಶೋಭೆ ಪಡೆಯುತ್ತದೆ. ಒಂದು ಮಣೆಯ ಮೇಲೆ ಕೂತು, ಸುತ್ತ ರಂಗವಲ್ಲಿ ಇಟ್ಟು, ದೀಪ ಹಚ್ಚಿ, ನೈವೇದ್ಯದ ಸಾಮಾನುಗಳನ್ನು ಪಕ್ಕದಲ್ಲಿಟ್ಟುಕೊಂಡು ಪೂಜೆಗೆಂದು ಕೂತವನ್ನೊಬ್ಬ ತನ್ನದೇ ಆದ ಒಂದು ಕಾಲವನ್ನು, ಒಂದು ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತಾನೆ. ಪು.ತಿ.ನ.ರಿಗೆ ಇದೊಂದು ಅತ್ಯಂತ ಸುಖದ ಅನುಭವ. ರಿಲಿಜನ್ ಎಂದರೆ ಇನ್ನೊಂದನ್ನು ಮುಟ್ಟುವುದು ಅತವಾ ಹಲವು ಸಂಬಂಧಗಳನ್ನು ಪುನಃ ಸೃಷ್ಟಿಸಿಕೊಳ್ಳುವುದು ಎನ್ನುವುದಾದರೆ-ಹೀಗೆ ಕೂತಿರುವ ಜಾಗವನ್ನೇ ಪ್ರತ್ಯೇಕಗೊಳಿಸಿ ಪವಿತ್ರಗೊಳಿಸಿಕೊಳ್ಳುವ ಉಪಾಯಗಳು. ನಿತ್ಯದ ಜಡ್ಡಿನ ಪರಿಚಿತವನ್ನು ದಿವ್ಯಗೊಳಿಸುವ ಕ್ರಮಗಳು ರಿಚುಯಲ್‌ನಲ್ಲಿ ಇವೆ ಎಂದು ಪು.ತಿ.ನ. ತಿಳಿದಿದ್ದರು. ಆಧುನಿಕವಾಗಿಬಿಟ್ಟು ಎಲ್ಲ ರಿಉಯಲ್‌ಗಳನ್ನು ಅಸಡ್ಡೆಯಿಂದ ನೋಡುತ್ತ ಸೆಕ್ಯುಲರ್ ರಂಗಭೂಮಿಯನ್ನು ಮಾತ್ರ ಸಹಿಸಿ ಮೆಚ್ಚುವ ನನ್ನಂತಹವರಿಗೆ ಮನಸ್ಸನ್ನು ತಿದ್ದಬಲ್ಲ ಗುರುವಿನಂತೆ ಇದ್ದವರು ನಮ್ಮ ಕಾಲದಲ್ಲಿ ಪು.ತಿ.ನ.

ಪು.ತಿ.ನ. ಇಂತಹ ರಿಚುಯಲ್‌ಗಳಲ್ಲಿ ಮನುಷ್ಯನಾಗಿ ಪಾಲುದಾರ: ಆದರೆ ಕವಿಯಾಗಿ ಸಾಕ್ಷಿ. ಅವರಿಗೆ ಇದ್ದ ಈ ಪವಿತ್ರವಾದ ರಿಚುಯಲ್ ಕಲ್ಪನೆಗಳು ನಮಗೆ ಯಾಕಿಲ್ಲವೆಂದು ಪಶ್ಚಾತ್ತಾಪವಿಲ್ಲದಂತೆಯೂ ನನಗೆ ಹೇಳಬೇಕೆನಿಸುತ್ತದೆ. ಈ ಬಗೆಯ ರಿಚುಯಲ್‌ಗಳಿಂದ ಉತ್ತಮ ಜಾತಿ ತಾನೆಂದು ತನ್ನನ್ನು ಪ್ರತ್ಯೇಕಿಸಿಕೊಂಡ ಒಂದು ಮಾನವ  ವರ್ಗ ತಮ್ಮಂತಹ ಕೆಲವು ಮನುಷ್ಯರನ್ನೇ ಅಸ್ಪೃಶ್ಯರು ಎಂದು ಕಾಣುವುದು ಹೇಗೆ ಸಾಧ್ಯವಾಯಿತು ಎಂದು ನೆನಪಾದ ಕೂಡಲೆ ಪು.ತಿ.ನ ನನ್ನಲ್ಲಿ ಹುಟ್ಟಿಸಿದ ಬೆರಗು ಮಾಯವಾಗಿಬಿಡುತ್ತದೆ.

ಪು.ತಿ.ನ. ಒಮ್ಮೆ ಹೇಳಿದ್ದರು: ‘ನನ್ನ ಹಣೆಯ ಮೇಲಿನ ಈ ನಾಮದಿಂದ ಇಡೀ ಪಾಶ್ಚಿಮಾತ್ಯ ನಾಗರಿಕತೆಯನ್ನು ನಾನು ಹೊರಗಿಟ್ಟಿದ್ದೇನೆ’ ಎಂದು. ಆದರೆ ಈ ನಾಮಧಾರಿಗಳಲ್ಲಿ ಹಲವರು ಈಗ ಅಮೆರಿಕದ ಪ್ರಜೆಗಳೇ ಆಗಿಬಿಟ್ಟಿದ್ದಾರೆ. ಪು.ತಿ.ನರಿಗೂ ಇದರ ಅರಿವಿತ್ತು. ಇಂಗ್ಲಿಷನ್ನು ಕಲಿಸುವ ಶಾಲೆಯಲ್ಲಿನ ಮಕ್ಕಳು, ಸಂಸ್ಕೃತ ಕಲಿಸುವ ಶಾಲೆಯಲ್ಲಿನ ಮಕ್ಕಳು, ಸಂಸ್ಕೃತ ಕಲಿಸುವ ಶಾಲೆಯಲ್ಲಿನ ಮಕ್ಕಳಿಗಿಂತ ಎಷ್ಟು ಹೆಚ್ಚು ಖುಷಿಯಾಗಿರುತ್ತಾರೆ ಎಂಬುದನ್ನು ಗಮನಿಸುವ ಪ್ರಬಂಧವನ್ನು ಪು.ತಿ.ನ ಬರೆದಿದ್ದಾರೆ. ಆದ್ದರಿಂದ ಆಧುನಿಕತೆಯ ಮೋಹ, ಪರಂಪರೆಗಳನ್ನು ಕಳೆದುಕೊಳ್ಳುವ ಸಂಕಟ-ಈ ಎಲ್ಲದರ ಬಗ್ಗೆ ಅಥೆಂಟಿಕ್ ಎನ್ನಿಸುವಂತೆ ಆಡಬಲ್ಲವರಾಗಿದ್ದ ಪು.ತಿ.ನ. ನಮಗೆ ಮುಖ್ಯ.

ಪು.ತಿ.ನ. ಅವರು ಮೈಸೂರು ಯೂನಿರ್ವಸಿಟಿಯಲ್ಲಿದ್ದಾಗ ನಾವು ಕಾಫಿ ಕುಡಿಯಲೆಂದು ಆಗಾಗ ಸೇರುತ್ತಿದ್ದೆವು. ಒಮ್ಮೆ ಪು.ತಿ.ನ. ಅವರ ಮೆಚ್ಚಿನ ಶಿಷ್ಯರಾದ ಸುಜನಾ, ನಾನು ಜೊತೆಗಿದ್ದೆವು. ಆ ದಿನ ಪು.ತಿ.ನ. ಒಂದು ಒಂದು ಪದ್ಯ ಓದಿ, ಅದರ ಬಗ್ಗೆ ನನ್ನ ಪ್ರತಿಕ್ರಿಯೆ ಕೇಳಿದರು. ನಾನು ಏನೋ ಹೇಳಿದೆ. ಸೌಜನ್ಯದಲ್ಲಿ ನಾನು ಆಡಿದ್ದನ್ನು ಗಮನಿಸಿದ ಪು.ತಿ.ನ.,

‘ನಿನಗೆ ಪದ್ಯ ಇಷ್ಟವಾಗಲಿಲ್ಲವಾ? ಎಂದು ಕೇಳಿದರು.

ನಾನು ‘ಇಷ್ಟವಾಯಿತು ಸಾರ್’ ಎಂದಷ್ಟೇ ಹೇಳಿದೆ.

ಮುಂದುವರೆದ ಅವರು ಹೇಳಿದರು ‘ಹೌದು, ನಿನಗೆ ಇಷ್ಟವಾಗಿದೆ. ಆದರೆ ಉತ್ಸಾಹವಿಲ್ಲ ಅಲ್ಲವೇ?’ ಎಂದು.

‘ನಾನು ಹೌದು’ ಎಂದು ತಲೆ ಅಲ್ಲಾಡಿಸಿದೆ.

ಅವರು ಹೇಳಿದರು: ‘ನಾನು ಸಂಸ್ಕೃತ ಸಂಪ್ರದಾಯದವನು, ನಿಮ್ಮ ಬಿ.ಎಂ. ಶ್ರೀಕಂಠಯ್ಯ ಸಂಪ್ರದಾಯದವನಲ್ಲ. ನಿಮಗೆ ಹಿಡಿಸುವ ಲಯಗಳು ನನ್ನಲ್ಲಿಲ್ಲ. ನನ್ನದೇನಿದ್ದರೂ ಸಂಸ್ಕೃತದ ಲಯ. ನಾನು ಹಿರಿಯಣ್ಣನ ಕಾಲದವನು.

ನಾನು ಸುಮ್ಮನಿದ್ದೆ. ಅವರೇ ಮುಂದುವರೆದು ತಮ್ಮ ಬರವಣಿಗೆಯ ಬಗ್ಗೆಯೇ ವಿಮರ್ಶೆ ಮಾಡಿದರು: ‘ನನಗೂ ನನ್ನ ಬರವಣಿಗೆ ಕೆಲವೊಮ್ಮೆ ಸರಿಹೋಗುವುದಿಲ್ಲ. ನಾನು ಬಹಳ ಮೃದುವಾದದ್ದರ ಮೇಲೆ ಏನೋ ಬರೆಯಲಿಕ್ಕೆ ಹೋದರೆ, ಅದು ಇಬ್ಬನಿ ಬಿದ್ದ ಹುಲ್ಲಿನ ಮೇಲೆ ರೋಡ್ ರೋಲರ್ ಹೋದಂತೆ ಆಗುತ್ತೆ… ನಮ್ಮ ಮೇಲುಕೋಟೆಯಲ್ಲಿ ನಾವೆಲ್ಲರೂ ಬೆರಕೆಯ ಕೆಟ್ಟ ತಮಿಳನ್ನು ಮಾತನಾಡಿಕೊಂಡಿದ್ದವರು. ನಾನು ಅಯ್ಯಂಗಾರ್ ಕುಟುಂಬದಿಂದ ಬಂದವನು. ನನಗೆ ಕನ್ನಡಕ್ಕಿಂತ ಸಂಸ್ಕೃತದ ಪ್ರಭಾವವೇ ಹೆಚ್ಚಾಗಿತ್ತು’ ಎಂದರು. ಒಬ್ಬ ಕವಿಗೆ ಏನೆಲ್ಲ ಕಷ್ಟಗಳು ಕಾಲದೇಶಗಳಿಂದ ಒದಗಿ ಬರುತ್ತವೆ ಎನ್ನುವುದಕ್ಕೆ ಇದು ಉದಾಹರಣೆ. ಕವಿತೆ ಬರೆಯುವಾಗ ಸಂತೋಷವಾಗುತ್ತದೆ. ಆಮೇಲೆ ತಾನೇ ಅದನ್ನು ಓದಿದಾಗ ತನಗೆ ಅನ್ನಿಸಿದ್ದನ್ನು ಹೇಳಲಾಗಲಿಲ್ಲವಲ್ಲ ಎಂಬ ಕೊರಗು ಉಳಿದುಬಿಡುತ್ತದೆ.

ಪು.ತಿ.ನ.ರನ್ನು ನಾವು ಅಧ್ಯಯನ ಮಾಡುವಾಗ ಅವರು ಬರೆಯುತ್ತಿದ್ದ ಕಾಲ ಘಟ್ಟವನ್ನು  ಮನಸ್ಸಿಗೆ ತಂದುಕೊಳ್ಳಬೇಕು. ಏಕೆಂದರೆ ಸಂಸ್ಕೃತದಿಂದ ಪ್ರಭಾವಿತವಾದ ಮನಸ್ಸಿಗೂ ಕೂಡ ಅದು ಕಾವ್ಯವಾಗಿ ವ್ಯಕ್ತವಾಗುವಾಗ ಕನ್ನಡಕ್ಕೆ ಶರಣು ಹೋಗಬೇಕಾದ ಕಾಲಘಟ್ಟದಲ್ಲಿ ಪು.ತಿ.ನ ಬರೆಯುತ್ತಿದ್ದರು. ಸಂಸ್ಕೃತವನ್ನೂ ಬಿಡದೆ ಕನ್ನಡದ ಮೂಲಕವೇ ಎಲ್ಲವೂ ಆಗಬೇಕೆಂದಿದ್ದ ಸಂದರ್ಭ ಅದು.

ಜಿ.ರಾಜಶೇಖರ ಪು.ತಿ.ನ.ರ ‘ಅಹಲ್ಯೆ’ ಮತ್ತು ಜಾನಪದ ನಾಟಕ ‘ಸಂಗ್ಯಾ ಬಾಳ್ಯಾ’ ವನ್ನು ತೆಗೆದುಕೊಂಡು ಇವೆರಡರಲ್ಲೂ ವ್ಯಕ್ತವಾಗುವ ಪ್ರೇಮ ಮತ್ತು ಕಾಮದ ಬಗೆಗೆ ಚರ್ಚಿಸುತ್ತಾರೆ. ಪು.ತಿ.ನ. ಅವರಲ್ಲಿ ಅಮೂರ್ತವಾಗಿ ರಸೋತ್ಪತ್ತಿಗೆ ಕಾರಣವಾಗುವ ಕಾಮಕ್ಕೂ ಇರುವ ವ್ಯತ್ಯಾಸಗಳನ್ನು ಗುರುತಿಸಿಕೊಂಡಾಗ ತಾನು ಸಂಗ್ಯಾ ಬಾಳ್ಯಾದ ಕಡೆಗಿರುವುದಾಗಿ ಹೇಳುತ್ತಾರೆ. ಆದರೆ ಅಕ್ಷರನಂತಹವರಿಗೆ ಅಂತಹ ಸಮಸ್ಯೆ ಇಲ್ಲ. ಎರಡೂ ನಾಟಕಗಳು ಈ ಸಮಸ್ಯೆಯನ್ನು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ಸಮಾನ ಅಂತರದಿಂದ ನೋಡಲು ಅವರಿಗೆ ಸಾಧ್ಯವಾಗುತ್ತದೆ. ಹೀಗೆ ಪ್ರಶ್ನೆಗಳನ್ನು ಎತ್ತುವುದು ಮತ್ತು ಉತ್ತರಗಳನ್ನು ಕಂಡುಕೊಳ್ಳುವುದು ಬಹಳ ಮುಖ್ಯ.

ಸಂಗ್ಯಾ ಬಾಳ್ಯಾವನ್ನು ಇಷ್ಟಪಡುವ ಮನಸ್ಸು. ಕೃತಿಯಲ್ಲಿ ಮಾಂಸಲವಾದ ಅಭಿವ್ಯಕ್ತಿ ಇದ್ದರೆ, ನಿತ್ಯ ಜೀವನದ ಎಲ್ಲಾ ವಾಸನೆಗಳನ್ನು ಅದು ಪಡೆದಿದ್ದರೆ ಮಾತ್ರ ಗಟ್ಟಿಯಾದದ್ದೆಂದು ನಂಬುತ್ತದೆ. ಶೇಕ್ಸ್‌ಪಿಯರ್‌ದು ಈ ಬಗೆಯ ಕಾವ್ಯ. ಇನ್ನೊಂದು ರೀತಿಯ ಕಾವ್ಯವೂ ಉಂಟು-ಸೂಕ್ಷ್ಮಾತಿಸೂಕ್ಷ್ಮದಲ್ಲಿ ನಮ್ಮ ಅತ್ಯಂತ ಗಾಢವಾದ ಭಾವನೆಯನ್ನು ಹೇಳಬೇಕಾದರೆ ಅತಿ ವಿವರಗಳಲ್ಲಿ ಅದನ್ನೂ ಸೂಚಿಸುವಂತೆ ಇರಬಾರದು. ವಿವರಗಳಲ್ಲೇ ನಾವು ಮಗ್ನಗೊಳ್ಳದಂತೆ ‘ವಾಸನೆ’ಗಳಿಂದ ಮುಕ್ತವಾಗಿರಬೇಕು. ಅಂದರೆ ಕೇವಲ ರಾಗಗಳಲ್ಲಿಯೇ ಎಲ್ಲವನ್ನು ಹೇಳುವಂತಹ ಕಾವ್ಯ ಸಂಗೀತದಂತೆ. ಇಂತಹ ಕಾವ್ಯ ಪು.ತಿ.ನ.ರದ್ದು.

ಮೇಲಿನ ನನ್ನ ವ್ಯಾಖ್ಯೆಯನ್ನು ಕೊಂಚ ತಿದ್ದಿಕೊಳ್ಳಲು ಒಂದು ಅನುಭವವನ್ನು ಹೇಳಬೇಕು:

ನಾನು ಆನರ್ಸ್ ಓದುತ್ತಿದ್ದಾಗ ಸುಬ್ಬಣ್ಣನ ಜೊತೆಯಲ್ಲಿ ಪು.ತಿ.ನ. ಅವರ ಮನೆಗೆ ಹೋಗಿದ್ದೆ. ನನಗೆ ಪು.ತಿ.ನ ಅವರ ಪರಿಚಯವಿರಲಿಲ್ಲ, ಸುಬ್ಬಣ್ಣನಿಗೆ ಇತ್ತು. ಅವರು ಮನೆಯ ಮುಂದೆ ಛೇರ್‌ನಲ್ಲಿ ಕುಳಿತಿದ್ದರು. ನಮ್ಮನ್ನು ಕಂಡ ಕೂಡಲೇ ಅವರಿಗೆ ಸಂತೋಷವಾಯಿತು. ನಮ್ಮಿಬ್ಬರನ್ನೂ ಹತ್ತಿರ ಕರೆದು ಕೂಡಿಸಿಕೊಂಡು ಮಾತನಾಡಿದರು. ವಿಶೇಷವೆಂದರೆ ಆ ದಿನ ಒಂದು ಘಂಟೆಯ ಕಾಲ ವಾಲ್ಮೀಕಿ ರಾಮಾಯಣದ ಬಗ್ಗೆ ಹೇಳಿದರು. ಅಂತಹ ಅದ್ಭುತ ಮಾತುಗಳನ್ನು ನಾನು ಕೇಳಿಸಿಕೊಂಡಿರುವುದು ಅಪರೂಪ. ನಂತರ ಬೇಂದ್ರೆ ಕಾವ್ಯದ ಬಗೆಗೆ ಮಾತನಾಡುತ್ತಾ ‘ನೋಡಪ್ಪಾ… ಬೇಂದ್ರೆ ತಾನು ಹೇಲಬೇಕಾದುದೆಲ್ಲವನ್ನೂ ಕವಿತೆಯಾಗುವ ಹಾಗೆ ಮಾಡಿಬಿಡುತ್ತಾನೆ. ಹೀಗಾಗಿ ನನಗೆ ಬೇಂದ್ರೆ ಕಂಡರೆ ಅಸೂಯೆಯಾಗುತ್ತೆ. ಆದರೆ ಅವರ ಕರುಳಿನ ವಚನಗಳನ್ನು ಓದುವಾಗ-ಎಂತಹ ಗ್ರೇಟ್ ಪೊಯಟ್ರಿ ಅನಿಸಿಬಿಡುತ್ತದೆ. ಅವನ್ನು ನಾನೇ ಬರೆದೆ ಎನ್ನಿಸುವಷ್ಟು ಖುಷಿಯಾಗುತ್ತದೆ’ ಎಂದರು.

ದಟ್ಟವಾಸನೆಯ ಕವಿ ಬೇಂದ್ರೆ ಪು.ತಿ.ನ.ರಿಗಿಂತ ಭಿನ್ನ; ಆದರೂ ಪು.ತಿ.ನರ ರಸಿಕತೆಗೆ ಸಾಧ್ಯವಾದ ಅವರ ಒಳ ಒಲವನ್ನು ಗಮನಿಸಿ.

ಪು.ತಿ.ನ.ರಂತಹ ಕವಿಗಳು ಬೇರೆ ಭಾಷೆಯಲ್ಲಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಕನ್ನಡ ವಿಶಿಷ್ಟವಾದ ಭಾಷೆ. ಅದು ಸಂಸ್ಕೃತಕ್ಕೆ, ಜಾನಪದಕ್ಕೆ, ಇಂಗ್ಲಿಷಿಗೆ ಕೂಡ ಹತ್ತಿರವಾಗಬಲ್ಲ ಭಾಷೆ. ಹೀಗಾಗಿ ಎಲ್ಲ ಶೈಲಿಯ ಬರವಣಿಗೆಗಳು ನಮ್ಮಲ್ಲಿ ಬಂದಿವೆ. ಈ ಬೆರಗಿನಲ್ಲಿ-ಬೆರಗನ್ನು ಉಂಟುಮಾಡುವುದು ಚೈತನ್ಯ ತಾನೇ-ಪು.ತಿ.ನ.ರನ್ನು ಅವರ ಕಾವ್ಯದ ‘ಹುಚ್ಚನಂತೆಯೂ’ ಓದುವ ಸಾಧ್ಯತೆಗಳಿಗಾಗಿ ಕಾದಿದ್ದೇನೆ.

ಕನ್ನಡ ಯಾವ ಸಂಪರ್ಕದಲ್ಲೂ ತನ್ನ ಕನ್ಯತ್ವ ಕಳೆದುಕೊಳ್ಳದ ಅಪ್ಸರೆಯಂತಹ ಭಾಷೆಯೆಂದು ಒಮ್ಮೆ ಪು.ತಿ.ನ. ಹೇಳಿದ್ದು ನನಗೆ ನೆನಪಾಗುತ್ತಿದೆ.

ಪು.ತಿ. ಜನ್ಮಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಶ್ರೀ ಎಚ್.ಎಸ್.ರಾಘವೇಂದ್ರರಾಯರು ಸಂಪಾದಿಸಿದ ಭಂಗಮಾರ್ಗಕೃತಿಯನ್ನು ಬಿಡುಗಡೆಗೊಳಿಸಿ ಮಾಡಿದ ಸಮಾರೋಪ ಭಾಷಣ. (೧೮..೨೦೦೫)
ಬರಹ ರೂಪ: ಶ್ರೀಮತಿ ಪುಷ್ಪಾ ಪಶುಪತಿ.

* * *