ಈಗಿನ ವಿದ್ಯಾರ್ಥಿಗಳು ಡಿ.ವಿ.ಜಿ.ಯವರಂತಹ ಒಬ್ಬ ಲೇಖಕರನ್ನು ಓದುವ ಹಾಗೆ ಮಾಡುವುದು ಬಹಳ ದೊಡ್ಡ ವಿಷಯ. ಬಹಲ ಹಿಂದೆ ಕುವೆಂಪು ಅವರು ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗವನ್ನು ಓದಿ ನನ್ನ ತಲೆಯ ಮೇಲೆ ಎತ್ತಿಟ್ಟುಕೊಂಡೆ ಎನ್ನುತ್ತಾರೆ. ನಮ್ಮ ಕಾಲದ ಎಲ್ಲ ಮುಖ್ಯ ರಾಜಕಾರಣಿಗಳಿಗೆ ಮಂಕುತಿಮ್ಮನ ಕಗ್ಗದ ಹತ್ತು-ಹದಿನೈದು ಪದ್ಯಗಳಾದರೂ ಬಾಯಿಗೆ ಬರುತ್ತವೆ. ಭಾಷಣಗಳಲ್ಲಿ ಉದ್ಧರಿಸಲು ಕಗ್ಗದಷ್ಟೇ ಚೆನ್ನಾಗಿರುವ ಒಳ್ಳೆಯ ಕೃತಿ ಎಂದರೆ ಸರ್ವಜ್ಞನ ಪದ್ಯಗಳು.

ಆದರೆ ಸಾಹಿತಿಗಳ ನಡುವೆ ಮಂಕುತಿಮ್ಮನ ಕಗ್ಗ ಒಂದು ನೀತಿಯನ್ನು ಹೇಳುವ  ಗ್ರಂಥವೆಂದೂ, ಅಷ್ಟು ದೊಡ್ಡ ಕಾವ್ಯವಲ್ಲವೆಂದೂ ಪ್ರತೀತಿ ಇದೆ. ಆದರೆ ಜನಸಾಮಾನ್ಯರ ದೃಷ್ಟಿಯಿಂದ ನಾವು ತಿಳಿದಿರುವ ಬಹಳ ದೊಡ್ಡ ಕಾವ್ಯಕ್ಕಿಂತ ಹೆಚ್ಚು ಅವರ ಮನಸ್ಸನ್ನು ಡಿ.ವಿ.ಜಿ ಯವರ ಕಗ್ಗ ಮುಟ್ಟಿದೆ. ಹಳ್ಳಿಗಳಲ್ಲಿ ಇರುವ ಹಿಂದಿನ ಪಟೇಲರು, ಶಾನುಭೋಗರು ಯಾರೇ ಆಗಲಿ ಮಂಕುತಿಮ್ಮನ ಕಗ್ಗದಿಂದ ಕೆಲವು ಸಾಲುಗಳನ್ನಾದರೂ ಉದ್ಧರಿಸಬಲ್ಲವರಾಗಿರುತ್ತಾರೆ.

ತುಳಸಿ ರಾಮಾಯಣದ ಬಗ್ಗೆಯೂ ಈ ಮಾತನ್ನು ನಾನು ಕೇಳಿದ್ದೇನೆ. ಮಕ್ಕಳಿಗೆ ಹೊಟ್ಟೆ ನೋವಾದರೆ ಏನುಮಾಡಬೇಕು ಎನ್ನುವುದನ್ನು ತುಳಸಿ ರಾಮಾಯಣದಲ್ಲಿ ಹುಡುಕುವುದುಂಟು. ಉದಾತ್ತವಾದ ಭಾವನೆಗಳಿಗೂ ನಿತ್ಯದ ಪ್ರಯೋಜನಕ್ಕೂ ಬಳಸಿಕೊಳ್ಳಬಹುದಾದ ಇಂತಹ ಒಂದು ಕೃತಿ ಎದುರಾದಾಗ, ಇದು ಕೇವಲ ನೀತಿಕಾವ್ಯ ಎಂದು ಜಾರಿಕೊಳ್ಳುವುದು ಸೇರಿ ಅಲ್ಲವೇನೋ ಎಂದು ನನಗೆ ಈಚೆಗೆ ಅನ್ನಿಸುತ್ತಿದೆ.

ನಮ್ಮ ಪ್ರಾಚೀನ ಕಾವ್ಯ ಮೀಮಾಂಸಕರನ್ನಾಗಲೀ ಅಥವಾ ಪಾಶ್ಚಾತ್ಯ ಮೀಮಾಂಸಕರನ್ನಾಗಲೀ ಆಧಾರವಾಗಿಟ್ಟುಕೊಂಡು ಈ ಪ್ರಶ್ನೆಗೆ ಉತ್ತರವನ್ನು ಪಡೆಯುವುದು ಸುಲಭವಲ್ಲ. ನಾನೇ ಹುಡುಗನಾಗಿದ್ದಾಗ ಬಾಯಿಪಾಠ ಮಾಡುತ್ತಿದ್ದುದು. ಇಂತದೇ ಕೃತಿಗಳನ್ನು. ನೆನಪಿನಿಂದ ಹೇಳುವುದಾದರೆ ಇವು ನೀತಿಯನ್ನು, ಸಂತೋಷವನ್ನು ಒಟ್ಟಾಗಿ ಕೊಡುವ ಕೃತಿಗಳಾಗಿರುತ್ತಿದ್ದವು. ಕಗ್ಗದ ಬಗ್ಗೆ ಇಷ್ಟು ಹೇಳಿದರೆ ಸಾಲದು. ನನಗೆ ಗೊತ್ತಿರುವ, ಹಲವು ನೀತಿ ಹೇಳುವ ಸಂಸ್ಕೃತ ಶ್ಲೋಕಗಳಿಗಿಂತ ಮಂಕುತಿಮ್ಮನ ಕಗ್ಗದಲ್ಲಿ ನೀತಿ ಹೇಳುವ ಕ್ರಮವೇ ಬೇರೆ. ನೀತಿ ಶ್ಲೋಕಗಳಲ್ಲಿ ಇದು ಹೀಗೆಯೇ ಇರತಕ್ಕದ್ದು, ‘ಇದಮಿತ್ಥಂ’ ಎನ್ನುವ ಕ್ರಮ ಇರುತ್ತದೆ. ಇದು ನಂಬಿಕೆಯಿಂದ ಹುಟ್ಟಿದ್ದಾಗಿರುತ್ತದೆ. ಆದರೆ ಕಗ್ಗದ ಬಹಳ ಮೌಲಿಕವಾದ ಭಾಗಗಳು ಅನುಮಾನದಿಂದಲೇ ಹುಟ್ಟುವ ಮಾತುಗಳು. ಮೊದಲನೆಯ ಪದ್ಯವನ್ನೇ ನೋಡಿ..

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ |
ದೇವ ಸರ್ವೇಶ ಪರಬೊಮ್ಮನೆಂದು ಜನಂ |
ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ |
ಆ ವಿಚಿತ್ರಕೆ ನಮಿಸೊ ಮಂಕುತಿಮ್ಮ ||

ಇದೊಂದು ಅತ್ಯಂತ ಆಧುನಿಕವಾದ ಮಾತು.

ಡಿ.ವಿ.ಜಿ.ಯವರ ಮಗ ಶ್ರೀ ಬಿ.ಜಿ.ಎಲ್.ಸ್ವಾಮಿ ನನಗೆ ಬಹಳ ಪ್ರಿಯರಾದವರು. ಅವರು ತಮ್ಮ ತಂದೆಯವರು ನೋಟ್ಸ್ ಮಾಡಿದ ಒಂದು ಹಸ್ತಪ್ರತಿಯನ್ನು ನನಗೆ ಕೊಟ್ಟಿದ್ದರು. ಅವರು ಇಂಗ್ಲಿಷಿನಲ್ಲಿ ಬರೆದ ಲೇಖನವೂ ಇದರಲ್ಲಿ ಇತ್ತು. ಈ ಟಿಪ್ಪಣಿಗಳು ಮುಖ್ಯವಾಗಿ ‘ಅನುಮಾನ’, ‘ಪ್ರಶ್ನೆ’, ‘ವಿಜ್ಞಾನ’, ‘ಧರ್ಮ’ಗಳ ಬಗ್ಗೆಯೇ ಇವೆ. ಪ್ರಾಯಶಃ ಈ ಪ್ರಶ್ನೆಗಳು ಇಷ್ಟು ವ್ಯಾಪಕವಾಗಿ ಡಿ.ವಿ.ಜಿಯವರನ್ನು ಕಾಡಿದಷ್ಟು ಬಿ.ಎಂ.ಶ್ರೀ., ಮಾಸ್ತಿಯವರನ್ನು ಒಂದು ತಾತ್ವಿಕತೆಯ ನೆಲೆಗಟ್ಟಿನಲ್ಲಿ ಕಾಡಿರಲಿಲ್ಲ. ಮ್ಯಾಥ್ಯೂ ಆರ್ನಾಲ್ಡ್ ಡಿ.ವಿ.ಜಿಯವರಿಗೆ ಪ್ರಿಯನಾದ ಲೇಖಕ. ಅವನಂತೆ ಡಿ.ವಿ.ಜಿಯವರಿಗೂ ತಾತ್ವಿಕವಾಗಿ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ತವಕ ಇತ್ತು. ಇದನ್ನು ತಿಳಿಯುವ ಪ್ರಯತ್ನ ಮಾಡದೆ ನಾವು ಡಿ.ವಿ.ಜಿಯವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.

ಡಿ.ವಿ.ಜಿಯವರು ‘ಧರ್ಮ’ ಮತ್ತು ‘ಧಾರ್ಮಿಕತೆ’ಗಳನ್ನು ಬೇರೆಯೇ ರೀತಿಯಲ್ಲಿ ನೋಡುತ್ತಿದ್ದರು.ಅ ವರ ಕೃತಿಶ್ರೇಣಿಯ ಕೊನೆಯಲ್ಲಿ ಒಂದು ದೇವರ ಬಗ್ಗೆ ಇದೆ, ಇನ್ನೊಂದು ಋತದ ಬಗ್ಗೆ ಇದೆ. ಡಿ.ವಿ.ಜಿ ಋತ ಎನ್ನುವ ಶಬ್ದವನ್ನು ಸತ್ಯಕ್ಕೆ ಸಮಾನವಾಗಿ ಉಪಯೋಗಿಸುತ್ತಾರೆ. ಋತಕ್ಕೆ ಯಾವುದೋ ವಿಶೇಷವಾದ ಅರ್ಥ ಇದೆ, ಅದನ್ನು ಹುಡಕಬೇಕು ಎಂಬುದು ಅವರ ನಿಲುವು.

ಇಂಡಿಯಾದ ಅತ್ಯುತ್ತಮ ತತ್ವಶಾಸ್ತ್ರಜ್ಞರಲ್ಲಿ ಒಬ್ಬರಾದ ಪ್ರೊ|| ಮೆಹತಾ ಅವರು ಜರ್ಮನ್ ತತ್ವಜ್ಞಾನಿ ಹೈಡೆಗರ್ ಬಗ್ಗೆ ಬರೆದ ಪುಸ್ತಕ, ತಾತ್ವಿಕ ಚಿಂತನೆಯ ದೃಷ್ಟಿಯಿಂದ ಬಹಳ ಮಹತ್ವದ ಪುಸ್ತಕ. ಹೈಡೆಗರ್‌ನ ತಾತ್ವಿಕತೆಯನ್ನು ಆಧಾರವಾಗಿಟ್ಟುಕೊಂಡು ಪ್ರೊ|| ಮೆಹತಾ ಋತದ ಬಗ್ಗೆ ಕೆಲವು ಮಾತುಗಳನ್ನು ಹೇಳಿದ್ದರು. ಹೈಡೆಗರ್‌ನ ಒಂದು ವಿಚಾರಧಾರೆಯ ಪ್ರಕಾರ ಅನೇಕ ನಾಗರಿಕತೆಗಳು ಪ್ರಾರಂಭದಲ್ಲಿ ಯಾವುದೋ ಒಂದು ಬಿಂದುವಿನಲ್ಲಿ, ಏನನ್ನೋ ‘ಹೀಗೆ’ ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ಹೊರಟು. ಅದೇ ದಿಕ್ಕಿನಲ್ಲಿ ಬೆಳೆದುಬಿಟ್ಟವು. ಆ ನಾಗರಿಕತೆ ಯಾವ ಮೂಲದಿಂದ ಹೊರಟರೋ ಆ ಮೂಲಕ್ಕೆ ಹೋಗಿ, ಆ ಮೂಲದಲ್ಲಿ ತಾವು ಮಾಡಿದ ಆಯ್ಕೆಯನ್ನು ಮತ್ತೆ ಪ್ರಶ್ನೆ ಮಾಡಬೇಕು. ಹೈಡೆಗರ್ ಪ್ರಕಾರ ಇಡೀ ಪಾಶ್ಚಾತ್ಯ ಸಂಸ್ಕೃತಿ ತಾಂತ್ರಿಕ ಕೌಶಲದ ಮೇಲೆ ನಿಂತಿದೆ. ಇಡಿಯ ಪ್ರಕೃತಿಯನ್ನು ನಮ್ಮ ಕೈಯಲ್ಲಿ ಇಟ್ಟುಕೊಳ್ಳುವ ಟೆಕ್ನಾಲಜಿ ಇದೆಯಲ್ಲ ಅದೇ ತಾಂತ್ರಿಕ ಕೌಶಲ. ಈ ಋತ ಎನ್ನುವ ಶಬ್ದಕ್ಕೆ ಅಂತಹ ಯಾವುದಾದರೂ ಶಕ್ತಿ ಇದೆಯೇ ಎನ್ನುವುದು ಮೆಹತಾರ ಹುಡುಕಾಟದ ಕೇಂದ್ರ ಬಿಂದು. ಡಿ.ವಿ.ಜಿಯವರ ಕಾಳಜಿಯೂ ಅದೇ ಆಗಿತ್ತು.

ಋತ ಶಬ್ದವನ್ನು ನಾವು ಒಂದು ಮೂಲಭೂತವಾದ ತರತಮ ವ್ಯವಸ್ಥೆ ಎನ್ನುವ ಅರ್ಥದಲ್ಲಿ ಬಳಸುತ್ತೇವೆ. ಈ ಪ್ರಪಂಚವನ್ನು  ಯಾವುದು ಕಾಪಾಡುತ್ತದೆಯೋ, ಒಂದನ್ನು ಇನ್ನೊಂದಕ್ಕೆ  ಹೊಂದಿಸಿದೆಯೋ, ಒಂದಕ್ಕೊಂದು ತಾಳೆ ಮಾಡಿದೆಯೋ. ಋತ. ಇರುವುದನ್ನು ಇರುವಂತೆ ಕಾಐಉವ ಒಂದು ಶಕ್ತಿ. ಈ ನಿಟ್ಟಿನಲ್ಲಿ ಭಾರತ ಒಂದು ಇಡಿಯ ನಾಗರಿಕತೆಯನ್ನು ಕಾಪಾಡುವುದಕ್ಕೆ ಯಾವ ಯಾವ ರೀತಿಯ ಏರ್ಪಾಡುಗಳ ಬೇಕೋ ಅವನ್ನೆಲ್ಲಾ ಮಾಡಿತು. ವರ್ಣಾಶ್ರಮ. ವರ್ಣವಿಂಗಡಣೆ ಇತ್ಯಾದಿ ಹೀಗೆ ಹುಟ್ಟಿದವು.’

ಆದರೆ ಇದಕ್ಕೆ ಬದಲಾಗಿ ಋತ ಎನ್ನುವುದನ್ನು ‘ಸತ್ಯ’ ಎಂದು ಅರ್ಥೈಸಿಕೊಂಡರೆ ಏನಾಗುತ್ತದೆ ನೋಡೋಣ. ಅನೇಕ ಸಾರಿ ಸತ್ಯದ ಹುಡುಕಾಟ ಎನ್ನುವುದು ನಾವು ಒಪ್ಪಿಕೊಂಡು ಬಂದಿರುವ, ಅನಿವಾರ್ಯವೆನ್ನಿಸುವ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡುತ್ತದೆ. ಆ ಸತ್ಯದ ಹುಡುಕಾಟ ಎಷ್ಟು ಕ್ರೂರವಾಗಿ ಇರಬಹುದೆಂದರೆ, ಕಾಫ್ಕನಂತಹವನಿಗೆ ಒಂದು ಬೆಳಗ್ಗೆ ಎದ್ದಾಗ, ತಾನು ಹುಳುವಾಗಿಬಿಟ್ಟಿದ್ದೇನೆ ಎನ್ನುವ ಭಾವನೆ, ಈವರೆಗೆ ಕಾನದ ಸತ್ಯಗಳನ್ನು ತೋರಿಸುತ್ತದೆ. ಸತ್ಯದ ಹುಡುಕಾಟ ಕೆಲವೊಮ್ಮೆ ನಮಗೆಲ್ಲ ನಾಚಿಕೆಯಾಗುವಂತಹ, ಸಂಕಟವಾಗುವಂತಹ, ಕಷ್ಟವಾಗುವಂತಹ, ನಾವು ನಂಬಿಕೊಂಡು ಬಂದಿರುವ ಅನೇಕ ಸಂಬಂಧಗಳಲ್ಲಿ ಅನುಮಾನವನ್ನು ಹುಟ್ಟಿಸುವಂತಹ ದಿಕ್ಕಿಗೂ ನಮ್ಮನ್ನು ಒಯ್ದುಬಿಡುತ್ತದೆ.

ಡಿ.ವಿ.ಜಿ.ಯವರು ದೊಡ್ಡ ಸಾಹಿತ್ಯ ಹೇಗೆ ಸೃಷ್ಟಿಯಾಗುತ್ತದೆ ಎಂದು ಬರೆಯುವ ಸಂದರ್ಭದಲ್ಲಿ, ಕನ್ನಡದಲ್ಲಿ ದೊಡ್ಡ ಸಾಹಿತ್ಯ ಬರುವುದಿಲ್ಲ. ಏಕೆಂದರೆ ನಾವೆಲ್ಲರೂ ವ್ಯವಸ್ಥೆಯನ್ನು ನಂಬಿ ಕೂತವರು ಎನ್ನುವ ಮಾತನ್ನು ಹೇಳುತ್ತಾರೆ. ನಾವು ದೊಡ್ಡ ಪ್ರಶ್ನೆಗಳನ್ನು ಕೇಳದ ಹೊರತು, ಅನುಮಾನಗಳನ್ನು ವ್ಯಕ್ತಪಡಿಸದ ಹೊರತು ದೊಡ್ಡವರ ಸೃಷ್ಟಿ ಸಾಧ್ಯವಿಲ್ಲ. ಜಗತ್ತಿನ ಅತ್ಯುತ್ತಮ ಮನಸ್ಸುಗಳಿಗೆ ಬೌದ್ಧಿಕ ಸಂಕಟ ಇರುತ್ತದೆ.

ದಾಸ್ತೋವ್‌ಸ್ಕಿಯಂತಹ ಮಹಾನ್ ಲೇಖಕನನ್ನೇ ನಾವು ತೆಗೆದುಕೊಳ್ಳೋಣ. ಜೈಲಿನಲ್ಲಿದ್ದ ದಾಸ್ತೋವ್‌ಸ್ಕಿ ಕೊನೆಯ ಗಳಿಗೆಯಲ್ಲಿ ಸಾವಿನ ಶಿಕ್ಷೆಯಿಂದ ತಪ್ಪಿಸಿ-ಕೊಂಡು ಉಳಿಯುತ್ತಾನೆ.ಜೈಲಿನಲ್ಲಿದ್ದಾಗ ತನ್ನ ಉತ್ಕಟವಾದ ಶ್ರದ್ಧೆಯನ್ನೇ ಪ್ರಶ್ನಿಸುವ ಮಿಲ್ ಮತ್ತು ಬೆಂಥಮರಂತಹ ಇಂಗ್ಲಿಷ್ ವೈಚಾರಿಕ ಪುಸ್ತಕಗಳಿಗಾಗಿ ಹಾತೊರೆಯುತ್ತಾನೆ. ತನ್ನ ಜೀವ ಆ ಪುಸ್ತಕಗಳ ಮೇಲೆ ನಿಂತಿದೆ, ಕಳುಹಿಸು ಎಂದು ತನ್ನ ತಮ್ಮನಿಗೆ ಬರೆಯುತ್ತಾನೆ. ದಾಸ್ತೋವ್‌ಸ್ಕಿ ದೇವರನ್ನು ನಂಬಿದವನು, ಈ ಪ್ರಪಂಚವನ್ನೆಲ್ಲ ನಡೆಸುವ ಒಂದು ಮೂಲ ಸೂತ್ರರೂಪದ ಸತ್ಯ ಇದೆ ಎನ್ನುವುದೇ ಆ ನಂಬಿಕೆ. ಆದರೆ ಈ ದೈವಶ್ರದ್ಧೆಯನ್ನೇ ಬುಡಮೇಲು ಮಾಡಬಲ್ಲ ನಂಬಿಕೆಗಳಿಗೆ ಸದಾ ತನ್ನ ತ್ರಾಣಶಕ್ತಿಯನ್ನು ಒಡ್ಡಿಕೊಂಡು ಬದುಕಿದವನು. ಹೀಗೆ ತನ್ನ ನಂಬಿಕೆಗಳನ್ನು ಅನುಮಾನದ ಅಗ್ನಿದಿವ್ಯದ ಪರೀಕ್ಷೆಗೆ ಸದಾ ಒಡ್ಡಿದವನು.

ಆದರೆ ನಮ್ಮ ಹಲವು ಲೇಖಕರು ಹೀಗಿಲ್ಲ. ಈಗ ಯಾವುದು ಅನುಕೂಲವೋ, ಸುಲಭಗಮ್ಯವೋ ಅದರಿಂದಲೇ ಪ್ರಪಂಚ ನಡೆಯುತ್ತದೆ ಎನ್ನುವ ಹೊಸ ಸಿದ್ಧಾಂತ ಬಂದಿದೆ. ಇದು ದೇವರಲ್ಲಿ ನಂಬಿಕೆ ಅಥವಾ ಅನುಮಾನ ಎರಡರ ಅಗತ್ಯವೂ ಅಷ್ಟು ಇಲ್ಲದೇ ಇರುವ ನಿಲುವು. ಹಾಗೆ ಒಂದು ವೇಳೆ ದೇವರ ಅಗತ್ಯ ಇದ್ದರೂ ಅದನ್ನು ಬೆಳಗಿನ ಹೊತ್ತು ಸ್ವಲ್ಪ ಜಪಕ್ಕೆ, ಭಾನುವಾರ ಒಂದು ಹೊತ್ತು ಚರ್ಚಿಗೆ ಹೋಗುವುದಕ್ಕೋ ಇಟ್ಟುಕೊಳ್ಳುತ್ತೇವೆ. ಮುಖ್ಯವಾಗಿ ಈ ಪ್ರಪಂಚ ನಡೆಯುವುದು ಅರ್ಥಶಾಸ್ತ್ರದ ಸಿದ್ಧಾಂತಗಳ ಮೇಲೆ. ಇಂತಹ ಮಾತುಗಳು ನಮ್ಮ ಮಟ್ಟಿಗೂ ನಿಜ ಎನ್ನುವ ಸತ್ಯ ಗೊತ್ತಾದಾಗ ಸಂಕಟ ಹುಟ್ಟುತ್ತದೆ. ನಾನು ವಿರೋಧಿಸುವ ಮಾತು ಆಗುತ್ತದೆ. ಮ್ಯಾಕ್‌ಬೆತ್ ಮನೆಗೆ ಬಂದ ಅತಿಥಿಯಾದ ದೊರೆಯನ್ನು ಕೊಲ್ಲುವ ಸಂದರ್ಭದಲ್ಲಿ, ನಾನೂ ಹೀಗೆಯೇ ಕೊಲ್ಲಬಹುದಾಗಿತ್ತು ಎನ್ನುವ ಸತ್ಯ ಹೊಳೆದಾಗ ಸಂಕಟ ಉಂಟಾಗುತ್ತದೆ. ಇಂತಹ ಸಂಕಟ ಇಲ್ಲದೆ ಸಾಹಿತ್ಯ ಹುಟ್ಟುವುದಿಲ್ಲ. ಅರ್ಜುನನಿಗೆ ಅನುಮಾನ ಬರದೇ ಇದ್ದಿದ್ದರೆ ಭಗವದ್ಗೀತೆ ಹುಟ್ಟುತ್ತಿರಲಿಲ್ಲ.

ಹಾಗೆಯೇ ರಾಜಕೀಯ ಚಿಂತನೆ ಇಲ್ಲದೇ ಇದ್ದರೆ ಸಾಹಿತ್ಯದ ಸ್ವರೂಪ ದರ್ಶನ ಆಗಲಾರದು. ಉದಾಹರಣೆಗೆ ಡಿ.ವಿ.ಜಿಯವರು ಭಾಷೆಯ ಸೂಕ್ಷ್ಮ ರಾಜಕೀಯವನ್ನು ತಿಳಿದುಕೊಳ್ಳಬಲ್ಲವರಾಗಿದ್ದರು. ಸಂಸ್ಕೃತ ಬೇಕೋ, ಇಂಗ್ಲಿಷ್ ಬೇಕೋ ಎನ್ನುವ ತುಮುಲ ಡಿ.ವಿ.ಜಿಯವರಿಗೆ ಇತ್ತು. ಸಂಸ್ಕೃತವೂ ಬೇಕು, ಇಂಗ್ಲಿಷೂ ಬೇಕು. ಆದರೆ ಎರಡರಲ್ಲಿ ಎಲ್ಲವೂ ಬೇಕಾಗಿಲ್ಲ. ಮುಖ್ಯವಾಗಿ  ೧೯೨೦ರಲ್ಲಿ ಕನ್ನಡ ಬೆಳೆಯುತ್ತಿದ್ದ ಕಾಲದಲ್ಲಿ ಬಹಳಷ್ಟು ಪ್ರಶ್ನೆಗಳು ಡಿ.ವಿ.ಜಿಯವರನ್ನು ಕಾಡಿದ್ದವು. ‘ಕನ್ನಡ ಸಾಹಿತ್ಯದಲ್ಲಿ ಬದಲಾವಣೆ ಆಗಬೇಕು, ನಾವು ಹೊಸದನ್ನು ಓದಬೇಕು. ಶೆಲ್ಲಿ, ಕೀಟ್ಸ್ ಮೊದಲಾದವರನ್ನು ತಿಳಿದುಕೊಳ್ಳಬೇಕು. ನಮ್ಮ ಆಚಾರ ವಿಚಾರಗಳಲ್ಲಿ ಮಡಿ-ಮೈಲಿಗೆಗಳಲ್ಲಿ ಬದಲಾವಣೆ ಆಗಬೇಕು’ ಎನ್ನುವುದು ಡಿ.ವಿ.ಜಿಯವರ ಆಶಯವಾಗಿತ್ತು.

ಅವರ ಹತ್ತಿರದ ಸ್ನೇಹಿತರಾದ ಫಿಸಿಕ್ಸ್ ಪ್ರೊಫೆಸರ‍್ ಬೆಳ್ಳಾವೆ ವೆಂಕಟನಾರಾಯಣಪ್ಪ, ಇನ್ನೊಬ್ಬ ಸ್ನೇಹಿತ ಶ್ರೀಮಿರ್ಜಾ ಇಸ್ಮಾಯಿಲ್ ಮುಂತಾದವರು ಯಾವ ರೀತಿ ಮಡಿವಂತರು, ಹಠವಾದಿಗಳು ಎಂಬುದನ್ನು ಡಿ.ವಿ.ಜಿಯವರು ಮಾಡುತ್ತಾರೆ ಎನ್ನುವುದನ್ನು ನೋಡಿದ್ದಾರೆ, ಹಾಗೆಯೇ ಅವರು ಎಷ್ಟು ಒಳ್ಳೆಯವರಾಗಿರುತ್ತಾರೆ ಎನ್ನುವುದನ್ನೂ ನೋಡಿದ್ದಾರೆ. ಇವೆರಡನ್ನು ನೋಡಲು ಸಾಧ್ಯವಾದಾಗಲೇ ಸಾಹಿತ್ಯ ಹುಟ್ಟುತ್ತದೆ.

*

ಮಾಸ್ತಿಯವರ ‘ಆಚಾರ್ಯರ ಪತ್ನಿ’ ಕತೆಯನ್ನು ಓದಿದಾಗ ಅವರಿಗೆ ಕಾಮದ ಬಗ್ಗೆ ಎಂತಹ ಗಾಢವಾದ ಅನುಮಾನಗಳು, ಭಯಗಳು, ಆಕರ್ಷಣೆಗಳು ಇದ್ದವು ಎನ್ನುವುದು ತಿಳಿಯುತ್ತದೆ. ಬೇಂದ್ರೆಯವರಲ್ಲಿ ಇದು ಯಾವುದೇ ಮುಚ್ಚುಮರೆಯಿಲ್ಲದೆ ವ್ಯಕ್ತವಾಗುತ್ತದೆ. ಡಿ.ವಿ.ಜಿಯವರೂ ಜೀವನದಲ್ಲಿ ಮುಖ್ಯವಾಗಿ ಎರಡು ಗುಣಗಳು ಬೇಕು ಎಂದು ಹೇಳುತ್ತಾರೆ. ಒಂದು ಕೋಪ, ಇನ್ನೊಂದು ಕಾಮ. ಇವೆರಡರಿಂದಲೇ ಮನಸ್ಸು ಬೆಳೆಯುತ್ತದೆ ಎನ್ನುತ್ತಾರೆ. ಆದರೆ ಇವರೆಡನ್ನೂ ನಿಗ್ರಹದಲ್ಲಿ ಇಟ್ಟುಕೊಂಡಾಗಲೇ ನಾಗರಿಕತೆ ಬೆಳೆಯುತ್ತದೆ. ಸೃಜನಶೀಲತೆಗೆ ಕೋಪವೂ ಬೇಕು, ಕಾಮವೂ ಬೇಕು.

*

ಈ ಎಲ್ಲವೂ ನಮ್ಮ ಮಹಾಗ್ರಂಥಗಳಲ್ಲಿ ಇವೆ ಎನ್ನುವುದು ಡಿ.ವಿ.ಜಿಯವರ ತಿಳುವಳಿಕೆಯಾಗಿತ್ತು. ಡಿ.ವಿ.ಜಿಯವರನ್ನು ಓದುತ್ತ ಹೋದಂತೆ ಅವರೊಬ್ಬ ಬಹಳ ಆಡುವ ಸಲಿಗೆಯೂ ಮೂಡುತ್ತದೆ. ಅವರ ಬರವಣಿಗೆಗಳನ್ನು ಓದುತ್ತಿರುವಾಗ ಎಷ್ಟೋ ಕಡೆಗಳಲ್ಲಿ ಇಲ್ಲಿ ಗಾಂಧಿಯ ಬಗ್ಗೆ ಹೇಳಬೇಕಾಗಿತ್ತಲ್ಲವೇ ಎನಿಸುತ್ತದೆ. ಆ ಕಾಲದವರಿಗೆ ಬಹಳ ಕಷ್ಟ ಇದ್ದದ್ದು ಗಾಂಧಿಯ ಆಯ್ಕೆ. ಬಿ.ಎಂ.ಶ್ರೀ ಗಾಂಧಿಯವರನ್ನು ಆಯ್ಕೆ ಮಾಡಿದ್ದರೆ ಏನಾಗುತ್ತಿತ್ತು? ಬೇಂದ್ರೆಗೆ ಅರವಿಂದರಷ್ಟೇ ಗಾಂಧಿ ಮುಖ್ಯರಾದರೆ? ಮಾಸ್ತಿ ಅವರಿಗೆ ಗಾಂಧಿ ಬಗ್ಗೆ ಗೌರವ ಇತ್ತು. ಆದರೆ ಕ್ಷಾತ್ರದಿಂದ ಮುಖ ತಿರುಗಿಸಿದ ಗಾಂಧಿಯ ಒಟ್ಟು ನಿಲುವಿನಲ್ಲಿ ಅವರಿಗೆ ಶ್ರದ್ಧೆಯಿತ್ತೇ? ಒಂದು ಸಲ ನಾನು ಗಾಂಧಿ ಬಗ್ಗೆ ಮಾತಾಡಿದ್ದನ್ನೆಲ್ಲ ಕೇಳಿಸಿಕೊಂಡು ಎಲ್ಲರೂ ಹೋದ ಮೇಲೆ ‘ಸ್ವಲ್ಪ ಇರು’ ಎಂದು ನನ್ನನ್ನು ಹತ್ತಿರ ಕೂರಿಸಿಕೊಂಡು ‘ನೀನು ಹೇಳಿದ್ದು ಸರಿ, ಅವನು ಮಹಾತ್ಮನೇ, ಆದರೆ ಕ್ಷತ್ರಿಯ ಧರ್ಮವನ್ನು ಪಾಲಿಸಬೇಕೆಂಬುದನ್ನು ನಾವು ಗಾಂಧಿಜಿಯಿಂದ ಹೇಗೆ ಕಲಿಯಲು ಸಾಧ್ಯ? ರಾಜ್ಯ ಹೇಗೆ ನಡೆಸಬೇಕು ಅಂತ ಒಂದು ಧರ್ಮ ಇದೆಯಲ್ಲ, ಅದನ್ನು ಗಾಂಧಿ ಗೌರವಿಸಲಿಲ್ಲ’ ಎಂದರು. ಆದರೆ ನನ್ನ ಪ್ರಕಾರ ಗಾಂಧಿಯ ಮಹತ್ವಿರುವುದೇ ಅವರು ತನ್ನನೈತಿಕ ನಿಲುವನ್ನು ಬಿಟ್ಟುಕೊಡದಿರುವುದರಲ್ಲಿ ಎಂದಿದ್ದೆ. ಒಂದು ದೊಡ್ಡ ಪ್ರಯೋಗ ನಡೆದದ್ದು ಗಾಂಧೀಜಿಯ ಈ ನಿಲುವಿನಲ್ಲೇ. ಅವರು ಸೋತರು ಎನ್ನುವುದು ನಮಗೆ ಮುಖ್ಯವಲ್ಲ. ಗಾಂಧಿ ತೀವ್ರವಾಗಿ ಕಾಡಿದ್ದು ಅಡಿಗರನ್ನು ಅಡಿಗರು ತಮ್ಮ ಕವನವೊಂದರಲ್ಲಿ

‘ಗಾಂಧಿ, ಗಾಂಧಿ, ಗಾಂಧಿ!
ಈ ಬಚ್ಚಲ ಕಗ್ಗವಿಯಲಿ
ತಮದ ಸಂತೆ ಗದ್ದಲದಲಿ
ಬಂತೆಲ್ಲಿಂದೆಂತು ಹೇಳು
ಈ ಅಮೂಲ್ಯ ಮಾಲು?’

ಎನ್ನುತ್ತಾ ಗಾಂಧಿಯನ್ನು ‘ಒಂದು ಮಾಲು’ ಎಂದು ಕರೆಯುತ್ತಾರೆ. ೧೯೨೪ರಲ್ಲಿ ಡಿ.ವಿ.ಜಿಯವರು ಗಾಂಧಿಯನ್ನು ಬಹಳ ಗೌರವದಿಂದ ಇಲ್ಲಿಗೆ ಬರಮಾಡಿಕೊಂಡಿದ್ದರು. ನಾನು ಇಲ್ಲಿ ಎತ್ತುತ್ತಾ ಇರುವುದು ಸಣ್ಣ ಪ್ರಶ್ನೆಯಲ್ಲ. ಅದೊಂದು ದೊಡ್ಡ ರಾಜಕೀಯ ನೈತಿಕತೆಯ ಪ್ರಶ್ನೆ. ಡಿ.ವಿ.ಜಿಯವರ ಪಕ್ವ ವಯಸ್ಸಿನಲ್ಲಿ ಅವರ ಕೊನೆಯ ಆಯ್ಕೆಗಳು ಏನಾಗಿದ್ದವು? ಬಹಳ ಆಧುನಿಕರಾದವರೂ ಅವರಿಗೆ ಗೊತ್ತು, ಸಂಪ್ರದಾಯವಾದಿಗಳೂ ಗೊತ್ತು. ಅದರ ಬಗ್ಗೆ ಒಂದು ಘಟನೆಯನ್ನು ನಿರೂಪಿಸುತ್ತೇನೆ. ಕೆಲವು ಮಿತ್ರರು ನನಗೆ ಹೇಳಿದ್ದು. ಬಹಳ ಗೌರವದಿಂದ ಇವರು ಡಿ.ವಿ.ಜಿಯವರನ್ನು ನೋಡಲು ಹೋದರು. ಈ ಹೊಸಬರನ್ನು ಮಾತಾಡಿಸುತ್ತ ಡಿ.ವಿ.ಜಿಯವರು ‘ನೀವು ಯಾವ ಜಾತಿಯಪ್ಪ’ ಎಂದು ಕೇಳಿದರು. ಈ ಸ್ನೇಹಿತರಿಗೆ ಬಹಳ ಸಿಟ್ಟು ಬಂತು. ‘ನಾವು ನಿಮ್ಮನ್ನು ಬಹಳ ದೊಡ್ಡವರೆಂದು ನೋಡುವುದಕ್ಕೆ ಬಂದರೆ ಜಾತಿ ಯಾವುದು? ಅಂತ ಕೇಳುತ್ತೀರಲ್ಲ ನೀವು’ ಎಂದು ಕೇಳಿದರು. ಅದಕ್ಕೆ ಡಿ.ವಿ.ಜಿ. ‘ನೋಡಪ್ಪಾ ನಾನು ಹಳೆಯ ಕಾಲದವನು, ಇಂಥಾ ಜಾತಿ ಅಂತ ನೀನು ಹೇಳಿದರೆ ನಿಮ್ಮತಾತ, ಅಜ್ಜ, ಮುತ್ತಾತ ಯಾರು? ನಿಮ್ಮ ನಡಾವಳಿ ಏನು, ನಿಮ್ಮ ಚರಿತ್ರೆ ಏನು? ನೀವೇನು ಇಲ್ಲಿ ಊಟ ಮಾಡುವವರೋ ಅಲ್ಲವೋ ಇತ್ಯಾದಿ ಗೊತ್ತಾಗುತ್ತದೆ’ ಎಂದರಂತೆ. ನಾವು ತಿಳಿದುಕೊಳ್ಳುವ ಜಾತೀಯತೆ ಅದರಲ್ಲಿ ಇಲ್ಲ.

ಡಿ.ವಿ.ಜಿಯವರು ಎಲ್ಲ ಜಾತಿಯ ಜನರನ್ನೂ ಬಲ್ಲವರು, ಅವರ ಬಗ್ಗೆ ಆತ್ಮೀಯವಾಗಿ ಬರೆಯಬಲ್ಲರು. ಹಾಗೆಯೇ ಇದೇ ಹೊತ್ತಿನಲ್ಲಿ ಜಾತಿಯಿಂದ ವಿಮುಕ್ತರಾಗಬೇಕು ಎನ್ನುವುದೂ ಅವರಿಗೆ ಗೊತ್ತು. ಎಷ್ಟೋ ಸಲ ಕ್ರಾಂತಿಕಾರಕನಾಗಿ ಯೋಚಿಸುವವನು. ಇರುವುದನ್ನು ನಿರಾಕರಿಸುತ್ತಾನೆ. ಈ ನಿರಾಕರಣೆಯಿಂದಾಗಿ ಇರುವ ವಾಸ್ತವದಿಂದ ದಕ್ಕಬಲ್ಲ ಪ್ರೀತಿ, ಸ್ನೇಹ, ಸಂತೋಷ ಎಲ್ಲದರಿಂದಲೂ ದೂರವಾಗುತ್ತಾನೆ. ಭವಿಷ್ಯದಲ್ಲಿ ರೂಪ ಪಡೆಯುವ ಸತ್ಯಕ್ಕೆ ಹಂಬಲಿಸುತ್ತಾನೆ. ಆದರೆ ಹಲವು ಸಾರಿ ನಾವು ಇರುವುದನ್ನು ಜರೆಯುತ್ತಿದ್ದರೂ, ಅದು ಮಾಯವಾಗಿ ಹೋಗುತ್ತಿದ್ದಂತೆ ಹೋದದ್ದಕ್ಕಾಗಿ ಹಂಬಲಿಸುತ್ತೇವೆ. ಮುಂದೆ ಬರಬೇಕೆಂದು ಹಠದಲ್ಲಿ ವಾದಿಸುವ ಸಂಗತಿಗಳು ಬರತೊಡಗಿದೊಡನೆಯೇ ಅವುಗಳಿಗೆ ಹೊಂದಿಕೊಳ್ಳಲಾರದೆ ಕಸಿವಿಸಿ ಪಡುತ್ತೇವೆ. ಡಿ.ವಿ.ಜಿಯವರು ಸತ್ಯಗಳನ್ನು ಕಾಣುವ ರೀತಿಯೂ ವಿಶಿಷ್ಟವಾದದ್ದು. ಅವರ ದೃಷ್ಟಿಯಲ್ಲಿ ನಮಗೆ ಸ್ನೇಹಕ್ಕಾಗಿ ಇಂಗ್ಲಿಷ್ ಬೇಕು, ಮರ್ಯಾದೆಗಾಗಿ ಇಂಗ್ಲಿಷ್ ಬೇಕು. ಭಾರತವನ್ನು ಟೀಕಿಸಲು, ವಿಮರ್ಶಿಸಲು ಅವರಿಗೆ ಪ್ರಾಚೀನ ಸಂಸ್ಕೃತ ಗ್ರಂಥಗಳು ಬೇಕು. ಉಪನಿಷತ್ತಿನಿಂದ, ಗೀತೆಯಿಂದ, ಮನುಸ್ಮೃತಿಯಿಂದ ಈ ಕೆಲಸ ಮಾಡುತ್ತಾರೆ. ಈ ಟೀಕೆಗಳನ್ನು ಮಾಡುವಾಗಲೂ ಅವರ ಮನಸ್ಸಿನಲ್ಲಿರುವ ಆದರ್ಶ, ತಾರ್ಕಿಕ ದೃಷ್ಟಿಯಿಂದ ಪಾಶ್ಚಾತ್ಯ ಸಂಸ್ಕೃತಿಯೇ. ಪಾರಮಾರ್ಥಿಕವಾಗಿ ಆದರ್ಶ ಭಾರತೀಯ ಸಂಸ್ಕೃತಿ.

ಈ ಬಿಕ್ಕಟ್ಟನ್ನು ನಾವೆಲ್ಲರೂ ಅನುಭವಿಸಿದ್ದೇವೆ. ನೆಹರೂ ಪಕ್ಷವನ್ನು ಭಾವನಾತ್ಮಕವಾಗಿ ಇಷ್ಟಪಡದಿದ್ದರೂ, ಬೌದ್ಧಿಕವಾಗಿ ಒಂದರ್ಥದಲ್ಲಿ ಪಶ್ಚಿಮದ ದಾಸ. ಹಾಗೆ ನೋಡಿದರೆ ಗಾಂಧೀಜಿಯವರಿಗೆ ಭಾವನಾತ್ಮಕವಾಗಿ ಪಶ್ಚಿಮದ ಬಗ್ಗೆ ಯಾವ ದ್ವೇಷವೂ ಇರಲಿಲ್ಲ. ಅವರಿಗೆ ಮನುಷ್ಯರೆಲ್ಲರೂ ಒಂದೇ. ಆದರೆ ಬೌದ್ಧಿಕವಾಗಿ ಅವರು ಪಶ್ಚಿಮದ ವಿರೋಧಿ. ಅವರು ‘ಹಿಂದ್ ಸ್ವರಾಜ್’ ಬರೆದಾಗ ಇಂಗ್ಲೆಂಡನ್ನು ಬದಲಾಯಿಸುವುದೂ ಅವರ ಬರಹದ ಉದ್ದೇಶವಾಗಿತ್ತು. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೂ ಈ ಸಮಸ್ಯೆ ಇದೆ. ಅವರು ಭಾರತದ ಪ್ರಾಚೀನ ದರ್ಶನ ಕ್ರಿಶ್ಚಿಯಾನಿಟಿಗಿಂತ ಕಡಿಮೆಯಲ್ಲಿ ಎಂದು ವಾದಿಸುವದರಲ್ಲಿ ಬಹಳ ಉತ್ಸಾಹ ತೋರುತ್ತಾರೆ. ಅಂದರೆ ಪಾಶ್ಚಾತ್ಯರ ದೃಷ್ಟಿಗೆ ಒಪ್ಪುವ ಹಾಗೆ ಭಾರತದ ಪ್ರಾಚೀನವನ್ನು ಕಟ್ಟಿಕೊಡುತ್ತಾರೆ.

ಡಿ.ವಿ.ಜಿ. ಕೂಡ ಪಶ್ಚಿಮದ ಕನ್ನಡಿಯಲ್ಲಿ ಭಾರತದ ಅತ್ಯುತ್ತಮವಾದದ್ದನ್ನು ಹರಡುತ್ತಾರೆ. ಹಾಗೆ ನೋಡಿದರೆ ಈ ವರಸೆ ನಮ್ಮೆಲ್ಲರನ್ನೂ ಇದೆ. ಯಾರು ನಮ್ಮನ್ನು ಆಳುತ್ತಾರೋ, ಅವರ ಆದರ್ಶ ಯಾವುದೋ ಅದಕ್ಕೆ ತತ್ಸಮವಾದ ಗುಣವನ್ನೇ ನಾವೂ ನಮ್ಮೊಳಗೆ ಹುಡುಕುತ್ತಿರುತ್ತೇವೆ. ನಮ್ಮನ್ನು ಆಳಿದವರ ಇತಿಹಾಸದಿಂದ ನಾವಿನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ದೇವರು ಇದ್ದಾನೆಯೇ ಎನ್ನುವ ಪ್ರಶ್ನೆಯನ್ನು ಡಿ.ವಿ.ಜಿ. ಎತ್ತಿಕೊಳ್ಳುವಾಗಲೂ ಕೂಡ ‘ಪಾಶ್ಚಾತ್ಯರು ಬಂದು ನನ್ನನ್ನು ಕೇಳಿದರೆ ನನ್ನಲ್ಲಿ ಉತ್ತರವೇನಿದೆ’ ಎಂದೇ ಹೇಳುತ್ತಾರೆ. ಈ ಪಾಶ್ಚಾತ್ಯರು ಯಾರು? ಅವರಿಗೆ ಉತ್ತರ ಕೊಡುವ ತುರ್ತಿಗೆ ನಾವು ಯಾಕೆ ಒಳಗಾಗಬೇಕು?

ಡಿ.ವಿ.ಜಿ.ಯವರಿಗೆ ಭಾರತದ ಸಮಾಜ ವ್ಯವಸ್ಥೆನ್ನು ನಿಷ್ಠುರವಾಗಿ ಟೀಕಿಸುವುದೂ, ಪಾಶ್ಚಾತ್ಯ ಸಂಸ್ಕೃತಿಯನ್ನು ಅಷ್ಟೇ ನಿಷ್ಠುರವಾಗಿ ಟೀಕಿಸುವುದೂ ಏಕಕಾಲದಲ್ಲಿ ಸಾಧ್ಯವಾದದಂತೆ, ನಮಗೂ ಅದು ಸಾಧ್ಯವಾದರೆ ಭಾರತದ ಮನಸ್ಸು ವಸಾಹತುಶಾಹಿಯಿಂದ ಮುಕ್ತವಾದಂತೆ. ಡಿ.ವಿ.ಜಿ.ಯನ್ನು ನಾವು ಗೌರವಿಸುತ್ತಲೇ ಇಷ್ಟಪಡುತ್ತಲೆ ಅವರ ಜೊತೆ ಈ ಜಗಳ ಎತ್ತಬೇಕು. ಅಂದರೆ ಇದು ನಮ್ಮ ಜೊತೆ ನಾವೇ ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ಈ ಹೊತ್ತಿನಲ್ಲಿ ಹೂಡಬೇಕಾದ ಜಗಳ.

ಸುರಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಡಿ.ವಿ.ಜಿಯವರನ್ನು ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಭಾಷಣ.
ಕೃಪೆ : ಡಿ.ವಿ.ಜಿ. ಬದುಕು ಬರಹ.
ಪ್ರ: ಕನ್ನಡ ಸಾಹಿತ್ಯ ಪರಿಷತ್ತು.

* * *