ನಾವು ಬಹಳ ವರ್ಷಗಳಿಂದ ಬಲ್ಲವರಲ್ಲಿ ಯಾವ ಗುಣ ಎದ್ದು ಕಾಣುತ್ತದೆ ಎಂದು ಯೊಚಿಸಿದಾಗ ಕೆಲವು ಘಟನೆಗಳು ನೆನಪಾಗುತ್ತವೆ. ನಮ್ಮ ಸಂಬಂಧ ಆಳವಾದದ್ದಾರೆ ಹೀಗೆ ಕಾಣುವ ಗುಣಗಳು ಅವರಲ್ಲಿ ನಾವು ಹುಡುಕಿದ್ದೂ ಆಗಿರುತ್ತದೆ; ಜೊತೆಗೇ, ಈ ಗುಣಗಳು ಅವರು ನಮ್ಮ ಮೆಚ್ಚುಗೆಗೆಂದು ತೋರಿಸಿಕೊಂಡದ್ದು ಆಗಿರದೆ. ನಾವು ಇಷ್ಟಪಡುವ ವ್ಯಕ್ತಿಯಲ್ಲಿ ಅಂತರ್ಗತವಾದದ್ದೂ ಆಗಿರುತ್ತದೆ. ಇದೊಂದು ಅರ್ಥಪೂರ್ಣ ಸಂಬಂಧದ ಫಲವಾಗಿ ಒದಗುವ ಪುಣ್ಯವಿಶೇಷ.

ಹೆಗಡೆಯವರ ಜೊತೆಯ ಸಂಬಂಧದಲ್ಲಿ ನಾನೂ ಒಬ್ಬ ಪುಣ್ಯಶಾಲಿ. ಬಹಳ ವರ್ಷಗಳ ಹಿಂದೆ ರಾಮಕೃಷ್ಣ ಹೆಗಡೆಯವರು ಯುವ ಮಂತ್ರಿಯಾಗಿದ್ದಾಗ ಶಾಂತವೇರಿ ಗೋಪಾಲಗೌಡರು ವಿರೋಧ ಪಕ್ಷದ ನಾಯಕ. ಸಜ್ಜನಿಕೆ ಕಳೆದುಕೊಳ್ಳದಂತೆ ಸ್ಪಷ್ಟವಾಗಿ, ದಿಟ್ಟವಾಗಿ, ನಿಷ್ಟುರವಾಗಿ ಮಾತಾಡುತ್ತಿದ್ದ ನಾಯಕ ಇವರು. ಶಾಂತವೇರಿ ನನಗೆ ಹೇಳಿದ್ದು ನೆನಪಾಗುತ್ತದೆ: ‘ರಾಮಕೃಷ್ಣ ಹೆಗಡೆಯನ್ನು ನೀನು ನೋಡಬೇಕು ಕಣೊ. ನಿನಗವರು ಇಷ್ವಾಗುತ್ತಾರೆ.’ ಆದರೆ ರಾಮಕೃಷ್ಣ ಹೆಗಡೆ ಅಧಿಕಾರ ಕಳೆದುಕೊಂಡು, ಎಮರ್ಜೆನ್ಸಿಯಲ್ಲಿ ಜೈಲು ಅನುಭವಿಸಿ ಹೊರಬರುವ ತನಕ ನಾನು ಅವರನ್ನು ಖುದ್ದಾಗಿ ನೋಡಿರಲಿಲ್ಲ.

ಮೊದಲಮೊದಲು ಹೆಗಡೆಯವರನನ್ನು ಇಷ್ಟಪಡದೇ ಇದ್ದ ನನ್ನ ಗೆಳೆಯ ಜೆ.ಎಚ್.ಪಟೇಲರೂ ಕ್ರಮೇಣ ಹೆಗಡೆಯವರಿಗೆ ಹತ್ತಿರವಾದರು. ನೀರುಸಾಬರೆಂದು ಖ್ಯಾತರಾದ ನಸೀರ್ ಸಾಬರು ತಮ್ಮ ಕೆಲಸದಲ್ಲಿ ಯಶಸ್ವಿಯಾಗಲು ಇಬ್ಬರು ಕಾರಣ ಎನ್ನಬಹುದಾದರೆ ಅವರು ಪಟೇಲರು ಮತ್ತು ಹೆಗಡೆಯವರು. ಪಟೇಲ್ ತುಂಬ ಆಳವಾಗಿ ಯೋಚಿಸಿ ನನಗೇ ಆಶ್ಚರ್ಯವಾಗುವಂತೆ ಒಮ್ಮೆ ಹೇಳಿದ್ದರು. ‘ಈ ಹೆಗಡೆಯಲ್ಲಿ ತಾಯಿಯ ಗುಣ ಇದೆ ಕಣೋ. ಅಂಥಹವರು ರಾಜಕೀಯದಲ್ಲಿ ಕಡಿಮೆ.’

ಹೆಗಡೆಯವರು ತುಂಬ ಜಾಣರು ಎಂಬುದು ಈ ಕಾಲದ ಪ್ರಜಾತಂತ್ರದ ನೂಕು ನುಗ್ಗಲಿನಲ್ಲಿ ಹಲವರ ಸಂಶಯಕ್ಕೆ ಕಾರಣವಾಗುವುದನ್ನು ನಾನು ಗಮನಿಸಿದ್ದೇನೆ. ಅವರು ಜಾಣರು ಎನ್ನುವುದರ ಜೊತೆಗೆ ಅವರು ಜಾತಿಯಲ್ಲಿ ಬ್ರಾಹ್ಮಣರು ಎಂಬುದೂ ಸೇರಿಕೊಂಡು, ಅವರ ಸಮಕಾಲೀನ ರಾಜಕಾರನಿಗಳ ನಡುವೆ ಹೆಗಡೆಯವರಿಗೆ ಹಲವು ಕಷ್ಟಗಳನ್ನು ತಂದೊಡ್ಡಿದೆ.ಹೆಗಡೆಯವರ ಹಿರಿಯರಲ್ಲಿ ಅವರನ್ನು ಗುರುತಿಸಿ ಬೆಳೆಸಿದ ನಿಜಲಿಂಗಪ್ಪನವರು ಇದಕ್ಕೆ ವಿನಾಯಿತಿ. ಹಾಗೆಯೇ ಮೈನಾರಿಟಿ ಗೆ ಸೇರಿದ ಹಲವು ರಾಜಕಾರಣಿಗಳಿಗೆ ಹೆಗಡೆ ಬಲುಪ್ರಿಯರು. ಈ ಸಂದರ್ಭದಲ್ಲಿ ನಾನೊಂದು ಮಾತನ್ನು ನಿಸ್ಸಂಕೋಚವಾಗಿ ಹೇಳಬಲ್ಲೆ. ಹೆಗಡೆಯವರ ಜಾಣತನ ‘ಉಳ್ಳವರ’ ಪರವಾಗಿ ರಾಜಕೀಯದಲ್ಲಿ ಕೆಲಸ ಮಾಡಿಲ್ಲ. ಅವರು ಪ್ರಜಾತಂತ್ರವನ್ನು ನೆಚ್ಚಿದವರು. ವಿಕೇಂದ್ರೀಕರಣದಲ್ಲಿ ನಂಬಿಕೆಯಿಟ್ಟವರು. ರಾಜಕೀಯವಾಗಿ ನೆಹರೂ ಪರಂಪರೆಯವರು. ವಾಸ್ತವವಾದದ್ದನ್ನು ಗ್ರಹಿಸಿ, ಮುಂದಿನ ಹೆಜ್ಜೆಯಿಡುವುದರಲ್ಲಿ ಮಾತ್ರ ಅವರ ಜಾಣತನವಿರುವುದು; ಕೆಲವರ ಹಿತವನ್ನು ಮಾತ್ರ ಏನಕೇನ ಸಾಧಿಸುವುದರಲ್ಲಿ ಅಲ್ಲ.

ಜಾತಿಯ ವಿಷಯಕ್ಕೆ ಬಂದರಂತೂ ಹೆಗಡೆಯವರನ್ನು ಮೀರಿಸುವ ಜಾತ್ಯತೀತ ರಾಜಕಾರಣಿಯನ್ನು ನಾನು ನೋಡಿಲ್ಲ. ಅವರ ಪ್ರತಿಯೊಂದು ಕ್ರಿಯೆಯಲ್ಲೂ ಇದನ್ನು ಕಾಣಬಹುದು. ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಆಪ್ತ ಅಧಿಖಾರವರ್ಗದಲ್ಲಿ ಯಾವ ಬ್ರಾಹ್ಮಣನೂ ಇರಲಿಲ್ಲ. ಅವರ ಅತ್ಯಂತ ಆಪ್ತ ಗೆಳೆಯರಲ್ಲಿ ಬ್ರಾಹ್ಮಣರು ಹೆಚ್ಚಿಲ್ಲ; ಎಲ್ಲ ಜಾತಿಗಳ, ಎಲ್ಲ ವರ್ಗಗಳ, ಎಲ್ಲ ಕಸುಬುಗಳ ಜನರೂ, ಹಲವು ಧೀಮಂತರೂ ಅವರ ಸುತ್ತ ಇದ್ದರು. ಅವರ ಆತಿಥ್ಯದ ಔದಾರ್ಯವೂ, ಅತಿಥಿಗಳ ಅಗತ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವರು ಮಾಡುವ ಹಿತಮಿತವಾದ ಉಪಚಾರವೂ ಜಗಜ್ಜನಿತವಾದದ್ದು. ಕೈತೊಳೆಯುವಾಗ ನಿಮ್ಮ ಹಿಂದೆ ನಗು  ಮುಖದ ಹೆಗಡೆ ಟವಲ್ ಹಿಡಿದು ನಿಂತಿದ್ದರೆ ಅಶ್ಚರ್ಯವಿಲ್ಲ.

ಇನ್ನೊಂದು ಮುಖ್ಯ ವಿಷಯವೆಂದರೆ, ಹೆಗಡೆಯವರು ತಿಳಿಯುವಂತೆ ಅವರಿಗೆ ವೈರಿಗಳಿಲ್ಲ; ಆದರೆ ರಾಜಕೀಯ ವಿರೋಧಿಗಳಿದ್ದಾರೆ. ಈ ವ್ಯತ್ಯಾಸ ಹೆಗಡೆಯವರ ರಾಜಕೀಯ ವರ್ತನೆಯಲ್ಲಿ ಬಹಳ ಮುಖ್ಯವಾದದ್ದು; ಗಂಭೀರವಾದದ್ದು. ಆದ್ದರಿಂದ ತಮ್ಮ ವಿರೋಧಿಗಳನ್ನು ಸಜ್ಜನಿಕೆಯಲ್ಲಿ ಸತ್ಕರಿಸಬಲ್ಲ ಸಂವೇನೆ ಹೆಗಡೆಯವರದು. ಇದನ್ನು ಅರಿಯದ ಕೆಲವರ ಒರಟುತನದಿಂದ ಹೆಗಡೆ ನೋಯಬಲ್ಲರು; ಆದರೆ ಕ್ರಮೇಣ ಅದನ್ನು ಮರೆತು ವ್ಯವಹರಿಸಲೂ ಬಲ್ಲರು.

ನಮ್ಮ ಜಾತಿಗಳಿಗೂ ನಮ್ಮ ದೃಷ್ಟಿಕೋನಕ್ಕೂ ಇರಬಹುದಾದ ಸಂಬಂಧಗಳನ್ನು ಹುಡುಕುವುದರಲ್ಲಿ ತಪ್ಪೇನೂ ಇಲ್ಲ. ಸರ್. ಎಂ. ವಿಶ್ವೇಶ್ವರಯ್ಯನವರು ಮೀಸಲಾತಿಯನ್ನು ವಿರೋಧಿಸಿದರು. ಅದಕ್ಕೆ ಕಾರಣ, ಅವರು ತಾನೇ ಸ್ವಂತ ಶ್ರಮದಿಂದ ಗಳಿಸಿಕೊಂಡ ಮೆರಿಟ್‌ನಲ್ಲಿ ನಂಬಿಕೆಯಿಟ್ಟುಕೊಂಡದ್ದೂ, ಎಲ್ಲರಿಗೂ ಮೆರಿಟ್ ಶ್ರಮಸಾಧ್ಯವೆಂದು ನಂಬುವ ಬ್ರಾಹ್ಮಣರಾದದ್ದೂ ಇರಬಹುದೋ ಎನೋ. ಆದರೆ ಅವರು ಕಟ್ಟಿದ ಕನ್ನಂಬಾಡಿ ಮಂಡ್ಯದ ಒಕ್ಕಲಿಗರ ಒಟ್ಟು ಬದುಕನ್ನೇ ಬದಲಾಯಿಸಿಬಿಟ್ಟಿತು. ಮೀಸಲಾತಿಯಿಂದ ಅಲ್ಲೊಬ್ಬ ಇಲ್ಲೊಬ್ಬನಿಗೆ ಕೆಲಸ ಸಿಗಬಹುದಾಗಿದ್ದರೆ, ಕನ್ನಂಬಾಡಿ ಸಹಸ್ರಾರು ಜನರನ್ನು ಮೇಲೆತ್ತಿತ್ತು. ಇಂತಹ ವಿಪರ್ಯಾಸಗಳನ್ನು ಗಮನಿಸದೇ ಜಾತಿಗೂ ದೃಷ್ಟಿಕೋನಕ್ಕೂ ಇರುವ ಸಂಬಂಧದ ಬಗ್ಗೆ ನಿರ್ಣಾಯಕವೆನ್ನುವಂತೆ ಮಾತಾಡುವುದು ಸರಳಿಕರಣವಾಗಿ ಬಿಡುತ್ತದೆ ಅಥವಾ ಅದೂ ಒಂದು ಸದ್ಯದ ಲಾಭದ ರಾಜಕೀಯವಾಗಿಬಿಡುತ್ತದೆ.

ಗಾಂಧೀಜಿಯವರು ಭಾರತದ ರಾಜಕಾರಣದೊಳಗೆ ಪ್ರವೇಶಿಸಿದ ನಂತರ ಎಲ್ಲ ವರ್ಗದ, ಎಲ್ಲ ವರ್ಣದ ಜನರೂ ಅವರ ಪ್ರಭಾವಕ್ಕೆ ಒಳಗಾದರು. ಹೀಗೆ ಒಳಗಾದವರು ತಮ್ಮ ತಮ್ಮ ಜಾತಿ ಮತ್ತು ವರ್ಗಗಳ ಗುಣಾವಗುಣಗಳನ್ನು ಪಡೆದುಕೊಂಡಿದ್ದೂ ಕ್ರಮೇಣ ಬದಲಾದರು. ದೇಶಪ್ರೇಮ ಮತ್ತು ಹೋರಾಟದ ಒತ್ತಾಯಗಳು ಈ ಎಲ್ಲರನ್ನೂ ಕಿಂಚಿತ್ತಾದರೂ ಬದಲು ಮಾಡಿತು. ಈ ಬದಲಾಗುವ ಪ್ರಕ್ರಿಯೆಯಲ್ಲಿ ಬ್ರಾಹ್ಮಣೇತರ ಕಾಮರಾಜರೂ ಎಲ್ಲರಿಗೂ ಮುಖ್ಯರಾದರು. ಬ್ರಾಹ್ಮಣ ರಾಜಾಜಿಯೂ ಎಲ್ಲರಿಗೂ ಮುಖ್ಯರಾದರು. ಪಟೇಲರು ನೆಹರೂಗೆ ಸರಿಸಮಾನರಾದ ನಾಯಕರಾದರು. ಹರಿಜನರಾದ ಜಗಜೀವನರಾಮ್ ಅನನ್ಯ ನಾಯಕರಾದರು. ಜಾತಿ ವಿನಾಶವಾಗದಿದ್ದರೂ, ಅದರ ಅಂತಸ್ತುಗಳು ಕ್ರಮೇಣ ಸಡಿಲಾಗುತ್ತಿರುವ ಪ್ರಕ್ರಿಯೆಯಲ್ಲಿ ದೇವರಾಜ ಅರಸುರಂಥವರು ಹುಟ್ಟಿಕೊಂಡರು. ಹೆಗಡೆಯವರಲ್ಲಿ ಇರುವಂತೆ ಕಾಣುವ ನಯ ನಾಜೂಕಿನ ಆಧುನಿಕತೆ ಅವರ ಬ್ರಹ್ಮಣ್ಯದಿಂದ ಬಂದಂತೆ ತೋರುವುದಾದರೆ ನಮ್ಮ ಈಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರೂ ಹೆಗಡೆಯವರಿಗಿಂತ ಕಡಿಮೆಯೇನೂ ಅಲ್ಲ.

ಮುಖ್ಯವಾದ ಮಾತು ಇದು: ಸಂಪ್ರದಾಯವಾದಿಯಾದ (ಆಧುನಿಕನಲ್ಲದ) ಕೇವಲ ಬ್ರಾಹ್ಮಣ ಈಗಿನ ರಾಜಕೀಯ ಪ್ರಕ್ರಿಯೆಯಲ್ಲಿ ಕಾಣೆಯಾಗಿದ್ದಾನೆ. ಈಗ ಇರುವವರೆಲ್ಲರೂ ಆಧುನಿಕರು. ಈ ಆಧುನಿಕರ ನಡುವೆ ಎಲ್ಲ ಜಾತಿಯವರೂ ಇದ್ದಾರೆ. ಜಾಣತನದಲ್ಲಿ, ಸದ್ಯೋಜಾತವಾದ ಮಾತಿನ ಚಕಮಕಿಯಲ್ಲಿ, ಅಧಿಕಾರದ ನಿರ್ವಹಣೆಯ ಸಾಮರ್ಥ್ಯದಲ್ಲಿ ಗತಿಸಿದ ಜಗಜೀವನರಾಂಗಿಂತ ಹೆಚ್ಚು ಜಾಣರು ಸಿಗಲಾರರು. ಅಂಬೇಡ್ಕರರನ್ನು ಮೀರಿಸುವ ಸಮಾಜಬದ್ಧನಾದ ಧೀಮಂತ ಕಳೆದ ಶತಮಾನದಲ್ಲಿ ಭಾರತದಲ್ಲಿ ಹುಟ್ಟಿರಲಾರರು.

ರಾಮಕೃಷ್ಣ ಹೆಗಡೆಯವರು ಕೆಂಗಲ್ ಹನುಮಂತಯ್ಯನವರ ನಂತರ ಮುಖ್ಯಮಂತ್ರಿಯಾಗಿ ನಮ್ಮ ಸಂಸ್ಕೃತಿಗೆ ಹೆಚಚು ಸ್ಪಂದಿಸಿದವರು. ಎಲ್ಲ ಕಲಾಪ್ರಕಾರಗಳಲ್ಲೂ ರುಚಿಯಿರುವ ರಾಜಕಾರಣಿ ಇವರು. ಎಂ.ಪಿ. ಪ್ರಕಾಶ್‌ರಂತಹ ಮಂತ್ರಿಗಳನ್ನು ಪಡೆದುಕೊಂಡು ಹೆಗಡೆಯವರು ಕರ್ನಾಟಕದ ಎಲ್ಲ ಕಲಾವಿದರಿಗೂ ಬೇಕಾದವರಾದರು. ಇವರ ನಾಯಕತ್ವದಲ್ಲಿ ಸಿಂಧ್ಯಾ, ಸಿದ್ಧರಾಮಯ್ಯನಂತಹವರು ಬೆಳೆದರು. ಇವರಲ್ಲಿ ಯಾರು ಮುಖ್ಯಮಂತ್ರಿಯಾಗಬಹುದು ಎಂಬುದೇ ಜನತಾದಳದ ಸಮಸ್ಯೆಯಾಯಿತು. ಅಷ್ಟು ಪ್ರತಿಭೆಗಳಿಗೆ ಬೆಳೆಯುವ ಅವಕಾಶವಿರುವಂತೆ ಹೆಗಡೆ ತಮ್ಮ ಸರ್ಕಾರವನ್ನು ನಡೆಸಿದರು.

ವಿರೋಧದ ಬಿಕ್ಕಟ್ಟಿನಲ್ಲಿ ಜನತಾದಳ ಇದ್ದಾಗಲೂ ಶ್ರೀ ದೇವೇಗೌಡರು ಹೇಳಿದ್ದು ನನೆಪಾಗುತ್ತದೆ: ‘ಹೆಗಡೆಯವರ ನಾಯಕತ್ವದಲ್ಲಿ ನನ್ನ ಕೆಲಸಕ್ಕೆ ಯಾವ ಅಡ್ಡಿಯೂ ಇರಲಿಲ್ಲ. ಅವರ ಸಹಕಾರದಿಂದಲೇ ನಾನು ಎಲ್ಲ ಕೆಲಸವನ್ನೂ ಮಾಡಿದೆ.’ ಅದೇ ಸಮಯದಲ್ಲಿ ಹೆಗಡೆ ಹೇಳಿದ್ದೂ ನೆನಪಾಗುತ್ತದೆ: ‘ನನ್ನ ಮಂತ್ರಿಮಂಡಲದ ಬಹು ಸಮರ್ಥ ಮಂತ್ರಿಯೆಂದರೆ ದೇವೇಗೌಡರು’. ಇವತ್ತಿಗೂ ಮುಂದುವರೆದಿರುವ ಇವರ ನಡುವಿನ ಬಿಕ್ಕಟ್ಟಿನಲ್ಲಿ ನನಗೆ ಇದನ್ನು ನೆನಪಿಸಿಕೊಳ್ಳಬೇಕೆಂದು ಅನ್ನಿಸುತ್ತಿದೆ.

ಈಗಲೂ ನಾನು ಹೆಗಡೆಯವರ ಹತ್ತಿರ ದೇವೇಗೌಡರ ರಾಜಕೀಯ ಛಲವನ್ನು ಮೆಚ್ಚಿವಾದಿಸಬಲ್ಲೆ. ತುರ್ತು ತೋರದ ಹೆಗಡೆಯವರ ಸಮಾಧಾನವನ್ನು ಟೀಕಿಸಬಲ್ಲೆ. ಹೆಗಡೆಯವರು ನಿರ್ಮಮವಾಗಿ ಅದನ್ನು ಸ್ವೀಕರಿಸಬಲ್ಲರು; ಸ್ವೀಕರಿಸಿ ವಾದಿಸಬಲ್ಲರು. ಹೆಗಡೆಯವರನ್ನು ಬಿಟ್ಟರೆ ಪಟೇಲರ ಜೊತೆ ಮಾತ್ರ ಈ ಸ್ವಾತಂತ್ರ್ಯ ನನಗೆ ಇತ್ತು.

ಹೆಗಡೆಯಲ್ಲಿರುವ ಈ ಆತ್ಮವಿಮರ್ಶೆಯ ಗುಣ ಅವರನ್ನು ಎಲ್ಲರಿಗಿಂತ ದೊಡ್ಡವರಾಗಿ ನಿಲ್ಲಿಸುತ್ತದೆ. ಈ ಗುಣದಿಂದಾಗಿಯೇ ಹೆಗಡೆಯವರು ಭಾರತದ ಪ್ರಧಾನಿಯಾಗಬಲ್ಲ ಶಕ್ತಿಯನ್ನು ಪಡೆದವರು ಎಂದು ನಾವು ಮಾತ್ರವಲ್ಲದೆ ಕರ್ನಾಟಕದ ಹೊರಗಿನ ಹಲವು ಭಾರತೀಯರೂ ತಿಳಿದಿದ್ದಾರೆ.

*

‘ನಿಮ್ಮ  ಮೇಲೆ ಗಾಢವಾದ ಪ್ರಭಾವ ಬೀರಿದವರು ಯಾರು?’ ಎಂದು ಒಮ್ಮೆ ನಾನು ಹೆಗಡೆಯವರನ್ನು ಕೇಳಿದೆ. ಹೆಗಡೆಯವರು ಹೇಳಿದರು: ‘ನೆಹರೂ, ವಿನೋಬ, ಜಯಪ್ರಕಾಶ ನಾರಾಯಣ ಮತ್ತು ನನ್ನ ಅತ್ತಿಗೆ.’

ವಿನೋಬರಿಂದ ಅವರೇನು ಕಲಿತರು ಎಂಬುದು ವಿಶಿಷ್ಟವಾದದ್ದು. ಹೆಗಡೆ ಅವರಿಗೆ ಮುಂದೆ ಓದುವ ಆಸೆ; ಆದರೆ ಮನೆಯ ಹಿರಿಯರಿಗೆ, ಅವರು ಆಸ್ತಿವಂತರಾದದ್ದರಿಂದ, ಇದು ಬೇಡ. ಹೆಗಡೆಯವರು ಅವರ ಅಕ್ಕನ ಮೂಲಕ ವಿನೋಬ ಆಶ್ರಮ ಸೇರಿದರು. ಪ್ರತಿನಿತ್ಯ ಬೆಳಗಿನ ಹೊತ್ತು ವಿನೋಬಾಜಿಯವರು ಹೆಗಡೆಯವರನ್ನು ಒಂದು ಬಕೆಟ್ ಹಿಡಿದುಕೊಂಡು ಆಶ್ರಮದ ಹೊರಗೆ ಕರೆದೊಯ್ಯುತ್ತಿದ್ದರು. ನಡೆಯುವಾಗ ಗೀತೆ, ಉಪನಿಷತ್ತುಗಳನ್ನು ಬೋಧಿಸುತ್ತಿದ್ದರು. ಇಬ್ಬರೂ ಕೈಯಲ್ಲಿ ಪೊರಕೆಯನ್ನೂ ಬಕೆಟ್ಟನ್ನೂ ಒಯ್ಯುತ್ತಿದ್ದುದರ ಕಾರಣ ಹೀಗಿತ್ತು;

ಹಳ್ಳಿಯ ಜನ ಎಲ್ಲೆಂದರಲ್ಲಿ ಕೂತು ತಮ್ಮ ಪ್ರಾತಃವಿಧಿಗಳಲ್ಲಿ ತೊಡಗುತ್ತಿದ್ದುದನ್ನು ತಪ್ಪಿಸಲೆಂದು ಗಾಂಧಿಪ್ರಣೀತವಾದ ಕಕ್ಕಸ್ಸುಗಳನ್ನು ವಿನೋಬಾಜಿ ನಿರ್ಮಿಸಿದ್ದರು. ಈ ವಾರ್ಧಾ ಮಾದರಿಯ ಕಕ್ಕಸುಗಳು ಉದ್ದ ತೋಡಿದ ಚರಂಡಿಗಳ ಮೇಲೆ ನಾಲ್ಕು ಗಾಲಿಗಳಿಂದ ಕೂಡಿದ, ಬಿದಿರಿನ ತಟ್ಟಿ ಮುಚ್ಚಿದ ಗೂಡುಗಳು. ಅದನ್ನು ಉಪಯೋಗಿಸಿದ ನಂತರ ಅಕ್ಕಪಕ್ಕದ ಮಣ್ಣಿನಿಂದ ಕಕ್ಕಸನ್ನು ಮುಚ್ಚಿ ಚರಂಡಿಯ ಮೇಲಿನ ಗೂಡನ್ನು ಕೊಂಚ ಮುಂದೆ ತಳ್ಳುವುದು ಕ್ರಮ.

ಆದರೆ ಹಳ್ಳಿಯ ಜನ ಇದನ್ನು ಬಳಸದೇ, ಅಭ್ಯಾಸಗತವಾಗಿ, ಅಲ್ಲಿ ಇಲ್ಲಿ ಮಾಡಿದ ಗಲೀಜನ್ನು ವಿನೋಬಾರವರ ಜೊತೆ ಹೆಗಡೆಯವರು ಬಕೆಟ್ಟಿನಲ್ಲಿ ಎತ್ತಿಕೊಂಡು, ಅದಕ್ಕಾಗಿ ನಿರ್ಮಿಸಲಾದ ಚರಂಡಿಗೆ ಹಾಕಿ ಮಣ್ಣು ಮುಚ್ಚಬೇಕು. ಹೀಗೆ ಮುಚ್ಚಿದ್ದು ಕ್ರಮೇಣ ಹಳ್ಳಿಯವರಿಗೆ ಗೊಬ್ಬರವೂ ಆಗುತ್ತದೆ ಎಂಬುದನ್ನು ಹಳ್ಳಿಯಜನ ತಿಳಿಯಬೇಕು.

ತಮ್ಮ ಕಕ್ಕಸನ್ನು ವಿನೋಬಾರವರೇ ಎತ್ತುವುದನ್ನು ನೋಡಿ ಹಳ್ಳಿಯವರು ಇಂದಲ್ಲ ನಾಳೆ ಬದಲಾಗುವುದು ಖಂಡಿತ-ಎಂಬ ಈ ಭರವಸೆಯ ಕಾಯಕದಲ್ಲಿ ಕಕ್ಕಸನ್ನು ಎತ್ತುವುದರ ಜೊತೆ ಜೊತೆಯಲ್ಲೇ ಗೀತೆಯ ಅಭ್ಯಾಸವೂ ನಡೆದಿತ್ತು.

shit ಮತ್ತು soul-ಎರಡಕ್ಕೂ ಗಮನ ಕೊಡುವ ದೇಹದ ಶುದ್ಧಿ, ಆತ್ಮದ ಶುದ್ಧಿಗಳ ಅನ್ಯೋನ್ಯತೆಯ ಪಾಠ ಇದರಲ್ಲಿದೆ. ಗಾಂಧಿಯಿಂದ ವಿನೋಬ, ವಿನೋಬರಿಂದ ನಮ್ಮ ಹೆಗಡೆ ಪಡೆದದ್ದು ಇದು.

ಗ್ರಾಮೀಣ ಪ್ರದೇಶದ ಜಮೀನುದಾರಿಕೆಯ ಗರ್ವದಿಂದ ಹೊರನಡೆದ ವೈದಿಕ ಹೆಗಡೆಯವರಿಗೆ ಇದೊಂದು ದೊಡ್ಡ ಪಾಠವೇ ಆಗಿತ್ತು. ಅವರ ಮುಂದಿನ ಎಲ್ಲ ರಾಜಕೀಯ ಒಳನೋಟಗಳ ಹುಟ್ಟು ಇಲ್ಲದೆ ಎನ್ನಬಹುದು.

*

ಲೋಹಿಯಾವಾದದಿಂದ ಪ್ರಭಾವಿತನಾದ ನನ್ನವ ಮತ್ತು ನೆಹರೂವಾದಿಯಾದ ಹೆಗಡೆಯವರ ನಡುವೆ ಹಲವು ವಾಗ್ವಾದಗಳಾಗಿವೆ. ಲೋಹಿಯಾವಾದಿಗಳ ಅರಾಜಕ ವರ್ತನೆಯಿಂದ ಬೇಸತ್ತ ನಾನು ವೈಚಾರಿಕ ಮೂಲದಲ್ಲಿ ಲೋಹಿಯಾ ಪರವಾಗಿಯೇ ಇದ್ದೆ. ಹಾಗೆಯೇ ನೆಹರೂವಾದಿಗಳ ಭ್ರಷ್ಟಾಚಾರದಿಂದಲೂ, ನೆಹರೂ ವಂಶಕ್ಕೆ ನಾಯಕತ್ವವನ್ನು ಸೀಮಿತಗೊಳಿಸುವ ಪ್ರಜಾತಂತ್ರಕ್ಕೆ ವಿರೋಧವಾದ ಕಾಂಗ್ರೆಸ್ ವರ್ತನೆಯಿಂದಲೂ ಹೆಗಡೆಯವರೂ ಬೇಸತ್ತಿದ್ದರು. ಆದರೂ ನಾನು ಲೋಹಿಯಾ ವಾದಿಯಾಗಿ ಉಳಿದಂತೆಯೇ, ಹೆಗಡೆಯವರೂ ನೆಹರೂವಾದಿಯಾಗಿಯೇ ಉಳಿದಿದ್ದರು. ಮಾತಿಗೆ ಮಾತು ಬೆಳೆದು ಒಮ್ಮೆ ನಾನು ‘ಹಳೆಯ ಕಾಂಗ್ರೆಸ್ಸಿಗರಾದ ನಮಗೆ ಯಾವ Passion ಇಲ್ಲ, ನೀವು ಮಾಡುವುದು ಕೇವಲ ಶಕ್ತಿ ರಾಜಕಾರಣ, ವಿಚಾರಗಳಿಲ್ಲದ ಶಕ್ತಿ ರಾಜಕಾರಣ’ ಎಂದಿದ್ದೆ. ಅದಕ್ಕೆ ಹೆಗಡೆಯವರು ಬಲು ಸೌಮ್ಯವಾಗಿ ಕೊಟ್ಟ ಉತ್ತರವನ್ನು ನಾನು ಮರೆಯಲಾರೆ: `Passion ಇಲ್ಲದಿದ್ದರೆ ಇಷ್ಟು ವರ್ಷಗಳ ಕಾಲ ರಾಜಕಾರಣದಲ್ಲಿರುವುದು ನನಗೆ ಸಾಧ್ಯವೇ ಆಗುತ್ತಿರಲಿಲ್ಲ. ನನ್ನ Passion ಏನು ಹೇಳಲೇ? ಅದು ವಿಕೇಂದ್ರೀಕರಣ ಮತ್ತು ಸಹಕಾರ’

ದೇವರಾಜ ಅರಸರು ಕರ್ನಾಟಕದ ಬಡಜನರಿಗೆ ಒದಗಿಬಂದರು-ನಿಜ. ಅವರು ಮನೆ ಮನೆಗೊಂದು ಭಾಗ್ಯಜ್ಯೋತಿ ಕೊಟ್ಟರು; ಆದರೆ ಮನೆಯಲ್ಲಿ ಚಿಮಿಣಿ ದೀಪವಿತ್ತು. ಸಿಮೆಂಟ್ ಮನೆ ಕೊಟ್ಟರು; ಆದರೆ ಅಲ್ಲಿ ಗುಡಿಸಲು ಇತ್ತು. ಆದರೆ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ನಸೀರ್‌ಸಾಬರ ಜೊತೆ ಅವರು ಬಡ ಜನರಿಗೆ ಇಲ್ಲದೇ ಇದ್ದದ್ದನ್ನು ಕೊಟ್ಟರು. ಪಂಚಾಯಿತಿ ರಾಜ್ಯದಲ್ಲಿ ಸಾವಿರಾರು ಹೆಣ್ಣು ಮಕ್ಕಳಿಗೆ ಅಧಿಕಾರ ಕೊಟ್ಟರು; ಎಲ್ಲ ಜಾತಿಯವರಿಗೆ ಪ್ರಾತಿನಿಧ್ಯ ಕೊಟ್ಟರು. ಮಾತಾಡುವ ಶಕ್ತಿ ಕೊಟ್ಟರು. ಬಡಜನರೂ ದೇಶದ ಪ್ರಜೆಗಳಾದರು. ಜೊತೆಗೇ ಇನ್ನೊಂದು ಮಹತ್ವದ ಸಂಗತಿಯೆಂದರೆ ರಾಜ್ಯಗಳಿಗೂ ಕೇಂದ್ರಕ್ಕೂ ಇರಬೇಕಾದ ಸಂಬಂಧವನ್ನು ಸ್ಪಷ್ಟಪಡಿಸಲು ಹೆಗಡೆ ಅಧಿಕಾರದಲ್ಲಿದ್ದಾಗ ಹೆಣಗಿದರು.

*

ಭಾರತದ ರಾಜಕಾರಣದ ಅತ್ಯಂತ ಆಕರ್ಷಕವಾದ ಮುಖಗಳಲ್ಲಿ ಹೆಗಡೆ ಅವರದೂ ಒಂದು. ದಕ್ಷಿಣ ಭಾರತದಲ್ಲಿ ರಾಜಾಜಿ ಮತ್ತು ಕಾಮರಾಜರ ನಂತರ ಹುಟ್ಟಿಬಂದ ಮುಖ್ಯಪ್ರವಾಹದ ರಾಷ್ಟ್ರನಾಯಕರೆಂದರೆ ಹೆಗಡೆಯವರು. ನಂಬೂದಿರಿಪಾಡ್‌ರು ಇನ್ನೊಬ್ಬ ದೊಡ್ಡ ನಾಯಕರು, ವೈಚಾರಿಕವಾಗಿ.

ಹೆಗಡೆಯಂಥವರು ನಮ್ಮ ರಾಷ್ಟ್ರಕ್ಕೆ ಹೆಚ್ಚು ಉಪಯುಕ್ತರಾಗಬೇಕೆಂದರೆ ಎರಡು ಪಕ್ಷಗಳು ಮಾತ್ರ ಮುಖ್ಯವಾಗಬೇಕು. ವಿ.ಪಿ.ಸಿಂಗ್, ಚಂದ್ರಶೇಕರ್, ಹೆಗಡೆ ಇಂಥ ಮಾಜಿ ಕಾಂಗ್ರೆಸ್ಸಿಗರೆಲ್ಲರನ್ನೂ ಕೂಡಿಕೊಂಡ ಕಾಂಗ್ರೆಸ್ ಇರಬೇಕು. ಇದಕ್ಕೆ ವಿರೋಧವಾಗಿ, ಹೇಗೂ ಬಿ.ಜೆ.ಪಿ. ಇದ್ದೇ ಇರುತ್ತದೆ. ಬಡವರಪರವಾಗಿ ಒತ್ತಡ ತರುವ ಕಮ್ಯುನಿಸ್ಟರು ಇದ್ದೇ ಇರುತ್ತಾರೆ. ಆದರೆ ಇಲ್ಲಿ ಇರಬೇಕಾದವರು ಅಲ್ಲಿ ಇರುವ ಗೊಂದಲ ಮಾಯವಾಗಬೇಕು. ಈ ಸಂದರ್ಭದಲ್ಲಿ ಹೆಗಡೆಯಂಥವರು ಸ್ಟೇಟ್ಸ್‌ಮನ್ ಆಗಿ ಚಿಂತಿಸಿದರೆ, ಅಂಥ ಚಿಂತನೆಯನ್ನು ನಾವು ಬೆಳೆಯಗೊಟ್ಟರೆ ದೇಶಕ್ಕೆ ಒಳ್ಳೆಯದಾದೀತು. ಇದು ನನ್ನಂಥವರ ಕನಸು.

ರಾಮಕೃಷ್ಣ ಹೆಗಡೆ ಸಂಸ್ಮರಣಾ ಗ್ರಂಥ ಬಿಡುಗಡೆ ಸಂದರ್ಭದಲ್ಲಿ ಆಡಿದ ಮಾತುಗಳು

* * *