ಕೆಲವು ದಿನಗಳ ಹಿಂದೆಯಷ್ಟೇ ಫೋನುಮಾಡಿ ಜೀಬಿ ಜನ್ಮಶತಾಬ್ದಿಗೆ ಬರಗೊಡದ ನನ್ನ ಆರೋಗ್ಯವನ್ನು ಕೀರ್ತಿನಾಥ ಕುರ್ತಕೋಟಿ ವಿಚಾರಿಸಿಕೊಂಡಿದ್ದರು. ತನ್ನ ಹೆಂಡತಿಗೆ ಅಷ್ಟೇನೂ ಆರೋಗ್ಯ ಸರಿಯಿಲ್ಲವೆಂದೂ, ತಾನೀಗ ಚೇತರಿಸಿಕೊಂಡಿದ್ದೇನೆಂದೂ ಹೇಳಿ, ಈ ಕೆಲವು ಕ್ಷಣಗಳ ಕ್ಷೇಮಸಮಾಚಾರದ ನಮ್ಮ ಮಾತು ಮುಗಿಯುತ್ತಿದ್ದಂತೆ, ಯಾವತ್ತಿನ ಹಾಗೆ, ನಮ್ಮ ಗಮನ ಸಾಹಿತ್ಯದ ಕಡೆ ತಿರುಗಿತ್ತು. ವಚನಗಳಲ್ಲಿ ಅಂಕಿತದ ಬಳಕೆಯನ್ನು ಕುರಿತು ಅವರು ಬರೆದ ಒಂದು ಲೇಖನವನ್ನು ನಾನು ಮೆಚ್ಚಿದೆನೆಂದು ಕೀರ್ತಿ ಖುಷಿಯಾದರು. ನಾನು ಪಟ್ಟ ಉಲ್ಲಾಸದಲ್ಲಿ ಹೇಳಿದ್ದೆ: ‘ಏ ಕೀರ್ತಿ, ಎಷ್ಟು ಹರಿತವಾಗಿ ನೀವು ಯೋಚಿಸಿ ಬರೀತೀರಪ್ಪ! ಯೂರೋಪಿನ ಯಾವ ಲಿಟರರಿ ಥಿಯರಿಟಿಶಿಯನ್ನಿಗೂ ನೀವು ಕಡಿಮೆಯಲ್ಲರಿ’.

ಕೀರ್ತಿ ಒಬ್ಬ ಹೊಗಳಿಸಿಕೊಂಡ ಹುಡುಗನಂತೆ ಹಿಗ್ಗಿದ್ದರು: ‘ಇದನ್ನ ನೀವು ಬರೆದು ಹೇಳಬೇಕು’. ಹೀಗೆ ಹೇಳಿ, ಹೇಳಿದ್ದು ಲಘುವಾಗುವಂತೆ ನಕ್ಕಿದ್ದರು. ‘ಅಯ್ಯೋ ಬರೀಲೇಬೇಕು. ಆದರೆ ಮೌಖಿಕ ಸಂಪ್ರದಾಯದಲ್ಲಿ ನಮ್ಮ ಶ್ರದ್ಧೆಯನ್ನ ಈ ಕಾಲದಲ್ಲಿ ಬೆಳೆಸಿದವರೂ ನೀವೇ ಅಲ್ವ? ಗ್ರೇಪ್ ವೈನ್‌ನಂತೆ ನಮ್ಮ ಅನ್ನಿಸಿಕೆಗಳು ಹಬ್ಬಿ ಹರಡತಾವೆ ಬಿಡಿ’ ಎಂದಿದ್ದೆ. ಕೊಂಚ ದೂರುವಂತೆ ನಟಿಸುವ ಅವರ ಸ್ನೇಹದ ಮಾತನ್ನು ಲೇವಡಿ ಮಾಡುವ ಧಾಟಿಯಲ್ಲಿ ನಾನೂ ಹಿಗುತ್ತ ಹೇಳಿದ್ದೆ. ನಿಜಕ್ಕೂ ಕೀರ್ತಿ ಈ ಕಾಲದ ಸಾಹಿತ್ಯ ಪ್ರಪಂಚದ ಮುಖ್ಯ ತಾತ್ವಿಕರಲ್ಲಿ ಒಬ್ಬರು. ಅವರು ಬದುಕಿದ್ದಾಗ ನಾನಿದನ್ನು ಬರೆಯಲಿಲ್ಲವೆಂದು ದುಃಖವಾಗುತ್ತಿದೆ.

ಕೀರ್ತಿಯ ಅಸಾಮಾನ್ಯ ಮಾತುಗಾರಿಕೆಯಲ್ಲಿ ಒಂದು ವಿಶೇಷವಿತ್ತು. ಸಹೃದಯತೆಯಲ್ಲಿ ಮಾತ್ರಗಾರಿಕೆಯಲ್ಲಿ ಒಂದು ವಿಶೇಷವಿತ್ತು. ಸಹೃದಯತೆಯಲ್ಲಿ ಮಾತ್ರ ಅವರು ಒಬ್ಬ ಬಾಲಕನಂತೆ ಹಿಗ್ಗಬಲ್ಲವರಾಗಿದ್ದರು. ನಮ್ಮ ನಡುವೆ ಸಭೆಯಲ್ಲಿ ಒಬ್ಬ ಸಿನಿಕನಿದ್ದರೂ ಕೀರ್ತಿ ಮೌನಿಯಾಗಿಬಿಡುತ್ತಿದ್ದರು. ವಾಗ್ವಾದದ ಸಂಘಷಕ್ಕೆ ಹಿಂಜರಿಯುತ್ತಿದ್ದ ಅವರ ರಸಿಕ ಮನೋಧರ್ಮವನ್ನು ನಾನು ಅವರ ಎದುರೇ ಹಿಂದೆ ಅನುಮಾನಿಸಿದ್ದಿದೆ. ಆದರೆ ಅಹಂಜನ್ಯವಾದ ನಮ್ಮ ಎಷ್ಟೋ ವಾಗ್ವಾದಗಳಲ್ಲಿ ಕಾಲಹರಣ ಮಾಡಿರುವ ನನಗೆ ಕೀರ್ತಿ ಕ್ರಮೇಣವಾಗಿ ನಮ್ಮ ಒಟ್ಟು ಸೃಜನಶೀಲತೆಯನ್ನು ಪೊರೆಯುವ ತಾಯಿಯಂತೆ ಕಾಣತೊಡಗಿದ್ದರು. ಕೀರ್ತಿ ತನ್ನ ಅಭಿಪ್ರಾಯಗಳನ್ನು ಬಿತ್ತರಿಸುತ್ತ ಹೋದವರಲ್ಲ; ಅಭಿಪ್ರಾಯಗಳ ಬದಲಾಗಿ ಅವರಲ್ಲಿ ಇದ್ದುದು ಒಳನೋಟಕ್ಕೆ ಕಾರಣವಾಗಬಲ್ಲ ವಿಚಾರಗಳು. ಅವರು ನಮ್ಮಂತೆ ತೀರಾ ಸಾಮಾಜಿಕ ಅಗತ್ಯದ ದೃಷ್ಟಿಯಿಂದ ಸಾಹಿತ್ಯವನ್ನು ನೋಡಿದವರಲ್ಲ. ಅವರ ಕಾಣ್ಕೆ ತಾತ್ವಿಕವಾದದ್ದು; ಕಾಣುವ ಕ್ರಮ ರಸಿಕತೆಯದು. ಕೀರ್ತಿ ತಾನೂ ತುಂಬುತ್ತ ತನಗೆ ಪ್ರಿಯರಾದವರನ್ನೂ ತುಂಬಿ ಬೆಳೆಸಿದರು. ಕೀರ್ತಿ ಹೊತ್ತಿಸಿದ ದೀಪಗಳು ನಮ್ಮ ಕಾಲದ ಅತ್ಯುತ್ತಮ ಪ್ರತಿಭೆಗಳಾಗಿ ಬೆಳೆದಿವೆ.

ಕೀರ್ತಿ ನಮ್ಮ ನಡುವಿನ ದೊಡ್ಡ ಪ್ರವಚನಕಾರರು. ಸಭೆಯಲ್ಲಿ ಯಾರನ್ನಾದರೂ ಮಂತ್ರಮುಗ್ಧಗೊಳಿಸುವಂತೆ ಅವರು ಬೇಂದ್ರೆ ಕಾವ್ಯದ ಬಗ್ಗೆಯೂ, ಕುಮಾರವ್ಯಾಸನ ಬಗ್ಗೆಯೂ ಮೈಮರೆತು ಮಾತಾಡಬಲ್ಲವರಾಗಿದ್ದರು. ಆದರೆ ಈ ಮಾತಿಗೆ ಸೇರಿಸಬೇಕಾದ ಮಾತೊಂದಿದೆ. ಅದೇ ಕೀರ್ತಿಯ ವಿಶೇಷ. ಉಕ್ಕಿ ಹೊಮ್ಮುವಂತೆ ಕಾಣುವ ಅವರ ಪ್ರವಚನದಲ್ಲೂ ತೀಕ್ಷ್ಣವಾದ, ಆಳವಾದ ಚಿಂತನೆಯ ಫಲವಾದ ವಿಮರ್ಶಕಪ್ರಜ್ಞೆ ಕೆಲಸ ಮಾಡುತ್ತಿತ್ತು. ಇದು ಇವತ್ತಿನ ಇಂಗ್ಲಿಷ್ ಭಾಷೆಯ ಸಾಹಿತ್ಯ ಚಿಂತಕರಲ್ಲಿ ಕಾಣದ ಗುಣ. ಒಂದೋ ಸಲೀಸಾದ ಜನಪ್ರಿಯ ವಾಗ್ವಿಲಾಸ ಅಥವಾ ರಸಹೀನವಾದ ಜಿಗಟಿನ ಚಿಂತನೆಯಲ್ಲಿ ಸಾಹಿತ್ಯದ ಕುರಿತಾದ ಮಾತುಗಳು ಹುಟ್ಟುತ್ತಿರುವ ಈ ಕಾಲದಲ್ಲಿ ಕುಮಾರವ್ಯಾಸ ಪ್ರತಿಭೆಯ ಸಾಹಿತ್ಯ ಪಂಡಿತನೆಂದರೆ ಕೀರ್ತಿಯವರು. ಅವರಿಗಿರುವ ಬಹುಶ್ರುತತ್ವವನ್ನು ನಾನು ಕಂಡಿರುವುದು ಅಪರೂಪ. ಪೂರ್ವಕಾಲದ ಋಷಿಗಳು, ಅತ್ಯಾಧುನಿಕ ಜ್ಞಾನಿಗಳು, ಜಾನಪದದ ಅನಾಮಧೇಯರು, ಪುರಾಣಗಳು, ಆಚರಣೆಗಳು, ಹಬ್ಬಹರಿದಿನಗಳು, ಊಟ ಉಡಿಗೆ ತೊಡುಗೆಗಳು-ಈ ಎಲ್ಲವೂ ಒಂದಕ್ಕೊಂದು ಸಂಬಂಧವಿರುವಂತೆ ಅವರ ಚಿಂತನಾವಿಲಾಸದ ಸಾಮಗ್ರಿಗಳಾಗಿ ಇರುತ್ತಿದ್ದವು. ಕೀರ್ತಿ ಕೂತ ಚಾವಡಿಯಲ್ಲಿ ಜಗತ್ತಿನ ಯಾರ ಯಾರನ್ನೋ ಸಂಧಿಸಿದ ಅನುಭವ ನಮಗೆ ಆಗುತ್ತಿತ್ತು.

ನಿನ್ನೆಯಷ್ಟೇ ಅನ್ನಿಸುವ ಆವತ್ತು, ಫೋನಿನಲ್ಲಿ ನನ್ನ ಮಾತಿನಿಂದ ಅರಳಿ ಅವರು ಆಡಿದ ಮಾತಿನಲ್ಲಿ ಅವರು ಬಾಯಿ ತುಂಬ ತುಂಬಿಕೊಂಡ ಕವಳವನ್ನು ನಾನು ಊಹಿಸಿಕೊಂಡಿದ್ದೆ. ತುಸುವೇ ಎತ್ತಿದ ಅವರ ಚೂಪು ಮುಖದಲ್ಲಿ ಕಿರಿದಾಗುವಂತೆ ಅರೆ ಮುಚ್ಚಿ ಮಿಂಚುವ ಅವರ ಕಣ್ಣುಗಳ ಬೆಳಕನ್ನು ಕಂಡಿದ್ದೆ. ಎದುರಿಗಿದ್ದಿದ್ದರೆ ಕೊಂಚ ಹೊಗೆಸೊಪ್ಪನ್ನು ಅವರಿಂದ ಪಡೆದು ನಾನೂ ಬಾಯಿಗೆ ಹಾಕಿಕೊಳ್ಳುತ್ತಿದ್ದೆ. ಈ ಜಗತ್ತಿನ ದೊಡ್ಡದೊಂದು ಪ್ರತಿಭೆಗೆ ನನ್ನನ್ನು ಒಡ್ಡಿಕೊಳ್ಳುವ ಸರಸಕ್ಕೆ ತಯಾರಾಗುತ್ತಿದ್ದೆ.

ಅರವತ್ತರ ದಶಕದಿಂದ ಅವರೊಟ್ಟಿಗೆ ಒದಗುತ್ತಿದ್ದ ಪ್ರತಿ ಘಳಿಗೆಯಲ್ಲೂ ಪ್ರಜ್ಞಾವಿಸ್ತಾರದ ಈ ಉಲ್ಲಾಸವನ್ನು ನಾನು ಅನುಭವಿಸಿದ್ದೇನೆ. ಅದೇ ಕೀರ್ತಿ ಅನ್ನಿಸುತ್ತಿದ್ದಂತೆಯೇ, ಇದು ನಾನು ಈವರೆಗೆ ಕಾಣದ ಕೀರ್ತಿ ಅನ್ನಿಸುವಂತೆ ಅವರ ಒಳನೋಟಗಳು ನನ್ನನ್ನು ಬೆರಗುಗೊಳಿಸುತ್ತಿದ್ದವು.

ಪ್ರತಿ ಘಳಿಗೆ ಸತ್ತು ಮರುಹುಟ್ಟು ಪಡೆಯುತ್ತಿದ್ದ ಕೀರ್ತಿನಾಥ ಕುರ್ತುಕೋಟಿ ನಮ್ಮಿಂದ ಕಣ್ಮರೆಯಾಗಿದ್ದಾರೆ. ಆದರೆ ಅವರ ಬದುಕು, ಅವರ ಬರಹ ನಮ್ಮ ಲೇಖಕರಿಗೆ ಸದಾ ಸತ್ತು ಹುಟ್ಟಬೇಕಾದ ಒಳ ಬದುಕಿನ ದಿವ್ಯಕ್ಕೆ ಸ್ಫೂರ್ತಿಯಾಗಿ ಉಳಿದಿರುತ್ತದೆ.

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

* * *