ಜಿ.ಎಸ್.ಎಸ್. ಮೇಷ್ಟ್ರು. ಕುವೆಂಪು, ಬೇಂದ್ರೆ ಕೂಡಾ. ನಾವೆಲ್ಲ ಮಾಸ್ತರರೇ. ಆದರೆ ಕನ್ನಡಕ್ಕೆ ಕೆಲವರು ದ್ರೋಣರಿದ್ದಾರೆ. ನಮ್ಮ ಕಾಲದ ದ್ರೋಣರೆಂದರೆ ಜಿ.ಎಸ್.ಎಸ್.ಕನ್ನಡದಲ್ಲಿ ಹೊಸ ರೀತಿಯ ಚಿಂತನೆ ಎದ್ದಿದೆ. ಕೆಲವು ವಿಶ್ವವಿದ್ಯಾನಿಲಯಗಳಿಗೆ ಇಂತಹ ಚಿಂತನೆಗಳನ್ನು ಕಂಡು ಈ ಯುವಕರೇನೋ ಅಧಿಕ ಪ್ರಸಂಗ ಮಾಡುತ್ತಿದ್ದಾರೆ, ಇವರಿಗೆ ಯಾವ ಜಾಗವನ್ನೂ ಕೊಡಬಾರದು ಎನ್ನುವ ಧೋರಣೆ ಇದೆ. ಆದರೆ ನಿಜವಾಗಿಯೂ ಬಹಳ ರಿಸ್ಕ್ ತೆಗೆದುಕೊಂಡು, ಹೊಸಕಾಲಕ್ಕೆ ಅಗತ್ಯವಾದ ಒಂದು ಇಲಾಖೆಯನ್ನು ಕಟ್ಟಿದ ಮಹಾನುಭಾವರು ಜಿ.ಎಸ್.ಎಸ್.ಇದು ಇಡೀ ಕರ್ನಾಟಕದಲ್ಲಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ನಡೆದ ಏಕೈಕ ಘಟನೆ. ಹಾಗಾಗಿ ಜಿ.ಎಸ್.ಎಸ್. ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ಬಹಳ ಮುಖ್ಯರಾಗುತ್ತಾರೆ.

ಜಿ.ಎಸ್.ಎಸ್. ಅವರ ಎಷ್ಟೋ ಸಭೆಗಳಲ್ಲಿ ನಾವೆಲ್ಲ ಸಾಕಷ್ಟು ಜಗಳಮಾಡಿದ್ದೇವೆ. ಇದಕ್ಕೆಲ್ಲ, ನೋಡಲು ಗಂಭೀರ ಸ್ವಭಾವದವರಂತೆ ಕಾಣುವ ಜಿ.ಎಸ್.ಎಸ್. ಹೇಗೆ ಅನುವು ಮಾಡಿಕೊಟ್ಟರೆಂಬುದು ಇಂದಿಗೂ ಅಚ್ಚರಿಯ ಸಂಗತಿ. ಹೀಗೆ ಸಾಹಿತ್ಯಕ್ಕೊಂದು ನಿಜವಾದ ಕಳೆ, ಜೀವ, ಪ್ರಾಣ ಬಂದದ್ದು ಜಿ.ಎಸ್.ಎಸ್. ಅವರಿಂದ. ನಾವು ಅವರು ಕಟ್ಟಿಕೊಟ್ಟ ವೇದಿಕೆಯಲ್ಲಿ ಜಗಳ ಆಡುತ್ತಿದ್ದುದಲ್ಲದೆ, ಊಟಕ್ಕೆ ಹೋದಾಗ, ಬೀದಿಯಲ್ಲೂ ಜಗಳ ಮಾಡಿಕೊಂಡು ನಮ್ಮ ಸ್ನೇಹಗಳನ್ನು ಗಟ್ಟಿಮಾಡಿಕೊಂಡೆವು. ಬಹುಶಃ ಭಾರತದ ಇತರೆ ಯಾವ ಭಾಷೆಯಲ್ಲೂ ಇಷ್ಟು ಜಗಳವಾಡಿಕೊಂಡು ಮಾತಾಡುವ ಸಾಹಿತಿಗಳು ಕಡಿಮೆ.

ಅದಕ್ಕೆ ಜಿ.ಎಸ್.ಎಸ್. ಕಟ್ಟಿಕೊಟ್ಟ ವಾತಾವರಣ ಕೂಡಾ ಮುಖ್ಯವಾದುದು. ಇಲ್ಲಿ ಸಾಂಸ್ಥಿಕತೆಯನ್ನು ವಿರೋಧಿಸುವ ಸಾಹಿತ್ಯಿಕ ಚಳವಳಿ ಹುಟ್ಟಿತು. ಸಾಂಸ್ಥಿಕತೆಯನ್ನೇ ವಿರೋಧಿಸುವ ಚಳವಳಿಯಾದರೂ ಅಂತಹ ಸಾಹಿತ್ಯ ಚಳವಳಿಗೂ ಒಂದು ಸಂಸ್ಥೆಯ ಅಗತ್ಯವಿತ್ತು. ಆ ಸಂಸ್ಥೆಯ ಅಗತ್ಯವನ್ನು ಜಿ.ಎಸ್.ಎಸ್. ಪೂರೈಸಿದರು. ಇಲ್ಲದಿದ್ದರೆ ಅವು ಒಟ್ಟಾಗುತ್ತಿರಲಿಲ್ಲ. ಬೆಳೆಯುತ್ತಿರಲಿಲ್ಲ, ನಮ್ಮ ಆಲೋಚನೆಗಳು ಹರಿತವಾಗುತ್ತಿರಲಿಲ್ಲ. ಇದು ಮೊದಲನೆಯ ಸಂಗತಿ.

ಇನ್ನೊಂದು, ಚಾರಿತ್ರಿಕವಾಗಿ ನಾವು ಯಾವ ಮುಚ್ಚುಮರೆಯೂ ಮಾಡದೆ ಹೇಳಬೇಕಾದ ಒಂದು ವಿಷಯವಿದೆ. ಕಂಬಾರರು ಎಂ.ಎಸ್.ಪಾಸ್ ಮಾಡಿಕೊಂಡಾಗ ಅವರನ್ನು ಮೈಸೂರು ವಿ.ವಿ.ಗೆ ಸೇರಿಸಬೇಕೆಂದು ಗೋಪಾಲಗೌಡರೂ ನಾನೂ ಹೋಗಿ ಪ್ರಯತ್ನಪಟ್ಟೆವು. ಆಗಲಿಲ್ಲ. ಅವರನ್ನು ಜಿ.ಎಸ್.ಎಸ್. ತಮ್ಮ ಇಲಾಖೆಗೆ ತೆಗೆದುಕೊಂಡರು. ಅಷ್ಟೇ ಅಲ್ಲ; ಅವರು ಇಲಾಖೆಗೆ ತೆಗೆದುಕೊಂಡ ಕಿ.ರಂ.ನಾಗರಾಜ್, ಡಿ.ಆರ್.ನಾಗರಾಜ್ ಇವರೆಲ್ಲರೂ ಒಂದೇ ಇಲಾಖೆಯಲ್ಲಿ ಒಂದು ಶಿಸ್ತಿನಲ್ಲಿ ಇಡಲಿಕ್ಕೆ ಕಷ್ಟವಾದ ವ್ಯಕ್ತಿಗಳೇ, ಬಹಳ ಬುದ್ಧಿವಂತರು. ಅಂತಹ ಕಷ್ಟಗಳನ್ನೆಲ್ಲ ಜಿ.ಎಸ್.ಎಸ್. ಎದುರಿಸಿದ್ದಾರೆ. ಇವರಲ್ಲಿ ಬೇರೆ ಬೇರೆ ರೀತಿಯ ಆಲೋಚನಾ ಕ್ರಮಗಳಿದ್ದವು. ಅಷ್ಟೂ ಜನರನ್ನು ಜಿ.ಎಸ್.ಎಸ್. ಒಟ್ಟಿಗೇ ಇಟ್ಟು ನಿರ್ವಹಿಸಿದ ಕ್ರಮದಿಂದಾಗಿ, ನಮ್ಮ ಕಾಲದ ಸಂಸ್ಥೆಗಳನ್ನು ಕಟ್ಟಿದ ಚರಿತ್ರೆಯನ್ನು ಬರೆಯುವಾಗ ಜಿ.ಎಸ್.ಎಸ್. ಎಲ್ಲರ ನಡುವೆ ದೊಡ್ಡವರಾಗುತ್ತಾರೆಂದು ನಾನು ತಿಳಿದಿದ್ದೇನೆ. ಆದ್ದರಿಂದಲೇ ನಮ್ಮ ಕಾಲದಲ್ಲಿ ಅವರು ದ್ರೋಣನ ಕೆಲಸ ಮಾಡಿದವರು.

ಜಿ.ಎಸ್.ಎಸ್. ಅವರಿಗೆ ಒಂದು ಅನ್ಯಾಯ ಮಾಡಿದ್ದೇವೆ. ಸಮನವ್ಯ ಕವಿಗಳೆಂದು ಜಿ.ಎಸ್.ಎಸ್. ಮತ್ತು ಕಣವಿಯವರನ್ನೂ ಕರೆದಿದ್ದೇವಲ್ಲ, ಅದು ತರ್ಕಬದ್ಧವಾದ ವಿಚಾರವಲ್ಲ. ಈ ‘ಸಮನ್ವಯ’ ಎನ್ನುವುದನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಲು ಸಾಧ್ಯ. ಒಂದು-ನಾವೆಲ್ಲಾ ಯಾವುದೋ ದೊಡ್ಡ ಸತ್ಯದ ಪರವಾಗಿ ಹೋರಾಡುತ್ತಿದ್ದಾಗ ಇವರು ರಾಜಿ ಮಾಡಿಕೊಳ್ಳುವ ಕವಿಗಳು ಎಂದು ಹೇಳಿದಂತಾಗುತ್ತದೆ. ಅಥವಾ ಉಳಿದವರೆಲ್ಲ ಅತಿರೇಕಕ್ಕೆ ಹೋಗುತ್ತಿರುವುದರಿಂದ ಇವರೇ ನಿಜವಾಗಿ ದೊಡ್ಡಕವಿಗಳು, ಸಮನ್ವಯ ಕವಿಗಳು ಎಂದಂತೆ ಆಗುತ್ತದೆ. ಆದರೆ ಹೀಗೆ ಬಳಸುವುದು ಸರಿಯಲ್ಲ. ಯಾಕೆಂದರೆ ಒಬ್ಬ ಒಳ್ಳೆಯ ಸಾಹಿತಿ ಯಾವ ಕಾಲದಲ್ಲೇ ಇರಲಿ, ಅವನು ಬೇರೆ ಬೇರೆ ರೀತಿಯ ಸಮನ್ವಯಗಳನ್ನು ಮಾಡಿಯೇ ಇರುತ್ತಾನೆ. ಅದು ಎಲ್ಲ ಕಾಲದ ಕಾವ್ಯಕ್ಕೂ ಇರಬೇಕಾದ ಒಂದು ಗುಣ.

ನಾವು ಇಡೀ ಭಾರತದ ತಾತ್ವಿಕ ಇತಿಹಾಸವನ್ನು ಗಮನಿಸಿದರೆ, ಒಂದೊಂದಕ್ಕೂ ಎಷ್ಟೊಂದು ಅಂತರಪಠ್ಯಗಳಿರುತ್ತವೆ ಎಂಬುದು ಗೊತ್ತಾಗುತ್ತದೆ. ಒಂದು ವಸ್ತುವಿಗೆ ಎರಡು ಪಠ್ಯಗಳಿದ್ದರೆ, ಇನ್ನೊಂದು ಹೊಸದರಲ್ಲಿ ಇವೆರಡೂ ಸೇರಿರುತ್ತವೆ. ನಮ್ಮ ಹಿಂದಿನವರೆಲ್ಲ ನಮ್ಮೊಳಗಿರುತ್ತಾರೆ. ಹೀಗೆ ಒಂದು ರೀತಿಯ ಸಮನ್ವಯ ಕಾರ್ಯ ನಡೆಯುತ್ತಲೇ ಇರುತ್ತದೆ. ಇದು ದೇಸೀ ಮೂಲದಿಂದ ಬಂದಿದೆ, ಇಲ್ಲಿ ಎಲ್ಲವೂ ದೇಸಿಯದ್ದೇ ಎಂದುಕೊಂಡಿದ್ದರೆ, ಅದು ಮಾರ್ಗದಿಂದ ಬಂದದ್ದನ್ನು ಡೊಮೆಸ್ಟಿಕೇಟ್ ಮಾಡಿಬಿಟ್ಟಿರುತ್ತದೆ, ಪಳಗಿಸಿ ತನ್ನೊಳಗೆ ಸೇರಿಸಿಕೊಂಡಿರುತ್ತದೆ; ತದ್ಭವಗೊಳಿಸಿರುತ್ತದೆ. (ಅನೇಕ ತತ್ಸಮಗಳು ತದ್ಭವಗಳಾಗಿ ಒಳಗೆ ಬರುತ್ತ ಇರುತ್ತವೆ.) ತದ್ಭವಗಳು ತತ್ಸಮಗಳು ಜಾಗದಲ್ಲಿ ಹೋಗಿ ಕೂತಿರುತ್ತವೆ. ಈ ರೀತಿಯ ಅಂತರ್‌ಪಠ್ಯ ಆಗುತ್ತಲೇ ಇರುತ್ತದೆ. ಇದು ಕಾವ್ಯದ ಮುಖ್ಯಗುಣ. ಆದ್ದರಿಂದಲೇ ಈ ಎಲ್ಲ ಮುಖ್ಯ ಕವಿಗಳನ್ನೂ ಸಮನ್ವಯ ಕವಿಗಳೆಂದು ಕರೆಯಬಹುದು.

ಯಾವುದೇ ಚಳವಳಿ ಇರಲಿ, ಅಲ್ಲಿ ಎಲ್ಲರೂ ಇರುತ್ತಾರೆ. ಆದರೆ ನಾವು ಕಾವ್ಯಲೋಕದ ಒಳಗೆ ಬರುವಾಗ ಒಂದು ವಿಶೇಷ ದೃಷ್ಟಿಕೋನ ಇಟ್ಟುಕೊಂಡು ಬರಬೇಕು. ಆ ವಿಶೇಷ ಏನಾದರೂ ಇರಲಿ, ಈ ಅಂತರ್‌ಪಠ್ಯಗಳ ಅಥವಾ ಆಗುತ್ತಾ ಹೋಗುವ ಈ ಕಾವ್ಯದ ಸತತ ಪ್ರಕ್ರಿಯೆಯಲ್ಲಿ ಎಲ್ಲರೂ ತಮ್ಮದೇ ಆಯ್ಕೆಯ ಒಂದು ಮುಖ್ಯವಾಹಿನಿಯಲ್ಲಿ ಬರೆಯಬೇಕು. ಯಾಕೆಂದರೆ ಜಿ.ಎಸ್.ಎಸ್. ಬರೆದ ‘ಜಡೆ’ ಕವನವಾಗಲೀ, ಕೃಷ್ಣನ ಸಾವಿನ ಬಗ್ಗೆ ಬರೆದಿರುವ ಕವನವಾಗಲೀ, ಅವು ನವೋದಯ ಕಾಲದ ದೊಡ್ಡ ಚಳವಳಿ ಇಲ್ಲದೇ ಇದ್ದರೆ ಬರುತ್ತಿರಲಿಲ್ಲ. ನವ್ಯ ಚಳವಳಿ ಇಲ್ಲದೆ ಇದ್ದರೂ ಬರುತ್ತಿರಲಿಲ್ಲ., ಬಂಡಾಯ ಚಳವಳಿ ಇಲ್ಲದೇ ಇದ್ದರೂ ಬರ‍್ತಿರಲಿಲ್ಲ. ಅಂದರೆ ಜಿ.ಎಸ್.ಎಸ್. ಸೃಜನಶೀಲರಾದದ್ದರಿಂದ ತಮಗಿಂತ ಕಿರಿಯರಿಂದಲೂ ಕಲಿತಿದ್ದಾರೆ ಎಂದು ನಾನು ಗೌರವದಿಂದ ಹೇಳಬಯಸುತ್ತೇನೆ. ಅದೇನು ಕಡಿಮೆಯ ಸಂಗತಿ ಅಲ್ಲ. ಯೇಟ್ಸ್ ಬಹಳ ಮುದುಕನಾಗಿದ್ದಾಗ ಕಿರಿಯರನ್ನು ಕಂಡು ಹೊಟ್ಟೆಕಿಚ್ಚು ಪಡುತ್ತಿದ್ದ ಹಾಗೆ, ಹಿರಿಯರಿಗೆ ಕಿರಿಯರನ್ನು ಕಂಡು ಪ್ರೀತಿ-ವಾತ್ಸಲ್ಯಗಳಿಂದ ಕೂಡಿದ ಅಸೂಯೆ ಇದ್ದರೆ ಅವರಿನ್ನೂ ಜೀವಂತವಾಗಿದ್ದಾರೆ ಎಂದು ಅರ್ಥ ಅಸೂಯತೀತನಾದ ಮನುಷ್ಯ ಒಮ್ಮೊಮ್ಮೆ ಜಡನಾಗಿಬಿಟ್ಟ ಎನ್ನಿಸಬಹುದು.

ಜಿ.ಎಸ್.ಎಸ್. ಸ್ಪಂದಿಸುವ ಗುಣವನ್ನು ಉಳಿಸಿಕೊಂಡಿದ್ದಾರೆ. ಆದುದರಿಂದ, ಅವರ ಕಾವ್ಯ ಎಷ್ಟು ಒಳ್ಳೆಯದು ಎನ್ನುವುದನ್ನು ಚರ್ಚಿಸುವಾಗ ಜಿ.ಎಸ್.ಎಸ್ ರವರು ಎದುರಿಗಿದ್ದರೂ ಮುಕ್ತವಾಗಿ ಚರ್ಚಿಸಬಹುದು. ಅಲ್ಲದೆ, ಹಾಗೆ ಚರ್ಚಿಸುವಾಗ ಇಡೀ ಕನ್ನಡ ಕಾವ್ಯವನ್ನೇ ದೃಷ್ಟಿಯಲ್ಲಿಟ್ಟುಕೊಂಡು, ಈ ಕಾವ್ಯ ಹೇಗೆ ವಿಶಿಷ್ಟವಾಗಿದೆ, ಹೊಸದಾಗಿದೆ, ಯಾವ ಪ್ರಸಾದಗುಣವನ್ನು ಅದು ಕನ್ನಡ ಕಾವ್ಯಕ್ಕೆ ತರುತ್ತದೆ ಎನ್ನುವುದರ ಜೊತೆಗೆ, ಯಾವ ಪ್ರಸನ್ನತೆ? ಎಷ್ಟು ಕಷ್ಟದ ಸನ್ನಿವೇಶದಲ್ಲಿ? ಎಷ್ಟು ಆಳವಾಗಿ ಸಂಪಾದಿಸಿಕೊಂಡಿದ್ದಾಗಿದೆ ಎನ್ನುವುದು ಮುಖ್ಯ. ಯಾಕೆಂದರೆ ಪ್ರಸನ್ನತೆ ಇದ್ದರೂ ಆಳವಿಲ್ಲದಿರಬಹುದು, ಸುಲಭವಾಗಿ ಹುಟ್ಟಿದ್ದಿರಬಹುದು, ದಟ್ಟವಾದ ಜೀವಾನುಭವದಲ್ಲಿ, ನೊಂದು ಬೆಂದು ಅದು ಏನನ್ನೂ ಹೇಳದೆ ತತ್ಫಲವಾಗಿ ಹುಟ್ಟಿದ ಪ್ರಸನ್ನತೆಯನ್ನು ನಮಗೆ ಕೊಡುತ್ತಿರಬಹುದು. ಅವೆಲ್ಲವನ್ನೂ ನಾವು ಗಮನಿಸಬೇಕು. ಅದು ನಿಜವಾಗಿಯೂ ಒಬ್ಬ ಕವಿಗೆ ಕೊಡಬೇಕಾದ ಗೌರವ. ಆದರೆ ಕನ್ನಡದಲ್ಲಿ ಯಾವಾಗಲೂ ಒಂದು ತೊಂದರೆ ಇದೆ. ಬರೆಯುವವರು ಅಧಿಕಾರದ ಸ್ಥಾನದಲ್ಲಿದ್ದಾಗ, ಜನ ಸತ್ಯವನ್ನು ಹೇಳುವುದಿಲ್ಲ. ಆದರೆ ಜಿ.ಎಸ್.ಎಸ್. ಬಗೆಗೆ ನಮಗೆಂದೂ ಹಾಗೆನ್ನಿಸಿಯೇ ಇಲ್ಲ. ಆ ಸೌಲಭ್ಯವನ್ನು ತಮ್ಮ ಸುತ್ತಮುತ್ತ ಉಳಿದವರಿಗೆ ಅವರು ಕೊಟ್ಟಿದ್ದಾರೆ. ಅದು ಅವರ ಪ್ರಸಾದ ಗುಣಕ್ಕೆ ಒಂದು ಉದಾಹರಣೆ.

ಇವತ್ತು ದಿನಬೆಳಗಾಗಿ ದಿನಪತ್ರಿಕೆಗಳನ್ನು ನೋಡಿದರೆ ಅತ್ಯಂತ ಹೊಲಸಾದ ರಾಜಕೀಯವನ್ನು ನೋಡುತ್ತೇವೆ. ಅವನ್ನೆಲ್ಲ ನೋಡಿದರೆ ಏನೂ ಮಾಡುವುದೇ ಬೇಡ ಎನ್ನಿಸುತ್ತದೆ. ಆದರೆ ಜಗತ್ತಿನ ಅತ್ಯಂತ ಶ್ರೇಷ್ಠ ಸಾಹಿತ್ಯ ಇಂತಹ ಕಾಲಗಳಲ್ಲೇ ಹುಟ್ಟೋದು. ಅದಕ್ಕೆ ಗಟ್ಟಿತನ ಬೇಕು; ಸದ್ಯದಲ್ಲೇ ನಾನು ಸಲ್ಲಬೇಕು ಎನ್ನುವ ಆಸೆ ಇರಬಾರದು; ತುಂಬಾ ಅನ್‌ಪಾಪ್ಯುಲರ್ ಆಗುವ ಧೈರ್ಯ ಇರಬೇಕು. ನಮಗೆ ನಿಜವಾಗಿ ಅನ್ನಿಸಿದ್ದನ್ನು ಯಾರು ಏನೆಂದುಕೊಂಡರೂ ವ್ಯಕ್ತಗೊಳಿಸಬೇಕು ಎನ್ನುವ ಧೈರ್ಯವಿರಬೇಕು. ಯಾಕೆಂದರೆ ಇಂದು ಸಾತತ್ಯವನ್ನು ಪಡೆಯುವುದು ಬಹಳ ಕಷ್ಟದ ಕೆಲಸ. ಹಿಂದಿನವರಿಗೆ ಸಾತತ್ಯ ಸುಲಭವಾಗಿ ದೊರಕುತ್ತಿತ್ತು. ಆದರೆ ಸಾತತ್ಯವಾದದ್ದನ್ನು ಹುಡುಕದೇ ಇದ್ದರೆ ನಾವು ಸಾಹಿತ್ಯದಲ್ಲಿ ಚಿಲ್ಲರೆ ರಾಜಕಾರಣಿಗಳ ಹಾಗಾಗಿಬಿಡುತ್ತೇವೆ. ಹಾಗೇ ಸುಲಭವಾದ ಸಾತತ್ಯವನ್ನು ಪಡಕೊಂಡರೆ ನಾವು ಗೊಡ್ಡಾಗಿರುತ್ತೇವೆ. ಇನ್ನೊಂದು ಮಾತು. ಸಾಹಿತ್ಯದಲ್ಲಿ ಮಾತ್ರ ‘ಪ್ರಗತಿಪರ’ ಎನ್ನುವ ಬಗ್ಗೆ ನನಗೆ ಅನುಮಾನಗಳಿವೆ. ಕನ್ನಡದಲ್ಲಿ ಯಾರು ಪ್ರಗತಿಪರನಲ್ಲ ನೋಡೋಣ.

ಪಂಪ ಪ್ರಗತಿಪರನಲ್ಲವೆ, ಬಸವಣ್ಣ, ಕುಮಾರವ್ಯಾಸ ಯಾರು ಪ್ರಗತಿಪರರಲ್ಲ?- ಬೇಂದ್ರೆ, ಕುವೆಂಪು, ಮಾಸ್ತಿ, ಕಾರಂತ, ಪು.ತಿ.ನ ಎಲ್ಲರೂ ಪ್ರಗತಿಪರರೇ. ಇಂದು ಕನ್ನಡದಲ್ಲಿ ‘ಬರೆಯುವುದೇ’ ಒಂದು ಬಂಡಾಯ ಆಗುವ ಸ್ಥಿತಿಗೆ ನಾವು ಮುಟ್ಟಿದ್ದೇವೆ. ಈ ಜಾಗತೀಕರಣದ ಆಂಗ್ಲ ಅಟ್ಟ ಹಾಸದ ದಿನಗಳಲ್ಲಿ ಕನ್ನಡದಲ್ಲಿಯೂ ಅತ್ಯುತ್ತಮವಾದುದನ್ನು, ಬರೆಯಲಿಕ್ಕೆ, ಹೇಳಲಿಕ್ಕೆ, ಪಾಠ ಮಾಡಲಿಕ್ಕೆ ಸಾಧ್ಯ ಎನ್ನುವುದೇ ಬಂಡಾಯ; ಕನ್ನಡದಲ್ಲಿರುವ ಲೇಖಕರೆಲ್ಲ ಮುಖ್ಯರು, ನಾವೂ ಒಂದು ಮುಖ್ಯ ಪ್ರವಾಹದಲ್ಲಿದ್ದೇವೆ ಎನ್ನುವುದು ಬಂಡಾಯ.

ಜಿ.ಎಸ್.ಎಸ್. ಒಮ್ಮೆ ಹೀಗೆ ಹೇಳಿದರು ‘ಕನ್ನಡದಲ್ಲಿ ಅತ್ಯಂತ ಹೆಚ್ಚು ಸೃಜನಶೀಲರು ಬಂದ ಕಾಲ ಇದು. ಎಲ್ಲ ಜಾತಿಗಳಿಂದಲೂ  ಸಾಹಿತಿಗಳು ಬಂದ ಕಾಲ ಇದು’.

ಅಂತಹವರನ್ನು ಸೃಷ್ಟಿಸಿದ ದ್ರೋಣರಲ್ಲಿ ಇವರೂ ಒಬ್ಬರು.

ಕೃಪೆ: ಹಣತೆ (ಜಿಎಸ್ಎಸ್ ಅಭಿನಂದನಾ ಗ್ರಂಥ) ಸಂ ಡಿ. ಎಸ್. ನಾಗಭೂಷಣ, ಲೋಹಿಯಾ ಪ್ರಕಾಶನ. ೨೦೦೧

* * *