ಐವತ್ತರ ದಶಕದ ಪ್ರಾರಂಭದ ವರ್ಷಗಳು. ನನ್ನ ಎಳೆಯ ಮನಸ್ಸು ಅರಳಿದ ಕಾಲ. ಆ ದಿನಗಳಲ್ಲಿ ಶಾಂತವೇರಿ ಗೋಪಾಲಗೌಡ, ಸದಾಶಿವರಾವ್, ವೈ.ಆರ್. ಪರಮೇಶ್ವರಪ್ಪ ನನ್ನನ್ನು ಸಮಾಜವಾದಿ ಸಿದ್ಧಾಂತಕ್ಕೆ ಒಲಿಯುವಂತೆ ಮಾಡಿದ್ದರು. ಹಲವು ವಾಗ್ವಾದಗಳಿಗೆ ನಮ್ಮ ಮನಸ್ಸನು ಆ ದಿನಗಳಲ್ಲಿ ತೆರೆದಿದ್ದವು. ಪ್ರೊಫೆಸರ್ ರಂಗನಾಥ್‌ರಾವ್, ಶ್ರೀ ದೀಕ್ಷಿತರು ರಾಯ್‌ವಾದಿಗಳು. ನಾನು ಸಮಾಜವಾದಿಯಾಗಿ ಯಾವುದಾದರೊಂದು ಸಭೆಯಲ್ಲಿ ಮಾತನಾಡಿದೆನಾದರೆ, ಅನಂತರ ಪಾರ್ಕಿನಲ್ಲಿ ನನ್ನನ್ನು ಕೂರಿಸಿಕೊಂಡು ನಾನು ಉಪಯೋಗಿಸಿದ ಪ್ರತಿ ಶಬ್ದವನ್ನೂ ದೇಶ, ರಾಷ್ಟ್ರ, ಸಮಾಜ, ಪಕ್ಷ-ವಿಶ್ಲೇಷಣೆಗೆ ಒಡ್ಡಿ, ನನ್ನ ಭಾವುಕತೆಯನ್ನು ಮೆಚ್ಚುತ್ತಲೇ ಅದರ ಅತಿರೇಕಕ್ಕೆ ನಾನು ನಾಚುವಂತೆ ಮಾಡುತ್ತಿದ್ದರು. ಈ ರಾಯ್‌ವಾದಕ್ಕೆ ತದ್ವಿರುದ್ಧವಾದ ಕಮ್ಯುನಿಸ್ಟ್ ಸಿದ್ಧಾಂತವೂ ನಮಗೆ ಭದ್ರಾವತಿಯ ಕೆಲವು ಮಿತ್ರರಿಂದ ಚರ್ಚೆಗೆ ದೊರೆಯುತ್ತಿತ್ತು. ಕೊಂಚ ರಾಯ್‌ವಾದಕ್ಕೆ ಒಲಿದಿದ್ದ ಆದರೆ ಸಾಹಿತ್ಯದಲ್ಲಿ ಆಸಕ್ತನಾದ ಬಿಳಿಗಿರಿ ನನ್ನನ್ನು ಎಲ್ಲದರಿಂದ ದೂರ ಒಯ್ದು ಪು.ತಿ.ನ., ಅಡಿಗರಿಗೆ ಹತ್ತಿರವಾಗುವಂತೆ ಮಾಡುತ್ತಿದ್ದ. ಈ ಎಲ್ಲರ ನಡುವೆ ಶ್ರೀ ಬದ್ರಿ ನಾರಾಯಣರಾಯರಂತಹ ಹಿರಿಯ ಸಜ್ಜನ ಕಾಂಗ್ರೆಸ್ಸಿಗರು ಇದ್ದರು. ಆದರೆ ಇವರು ವಾದಾತೀತರಂತೆ, ನೆಹರೂ ಅನಯಾಯಿಗಳಾಗಿ, ನಿಜರಾಜಕಾರಣದಲ್ಲಿ ತನ್ಮಯರಾಗಿದ್ದರು.

ಈ ಎಲ್ಲರ ನಡುವೆ ನಾನು ಆಗೀಗ ನೋಡುತ್ತಿದ್ದ, ಕೇಳಿಸಿಕೊಳ್ಳುತ್ತಿದ್ದ ವಿಲಕ್ಷಣ ವ್ಯಕ್ತಿಯೆಂದರೆ ಭೂಪಾಳಂ ಚಂದ್ರಶೇಖರಯ್ಯನವರು. ಅವರ ಕಚ್ಚೆ ಪಂಚೆಯ ಶುಭ್ರತೆ, ತಲೆಯ ಮೇಲಿನ ಗರಿಯಾದ ಕೇಸರಿಟೋಪಿ, ಶಲ್ಯ, ಹಸನ್ಮುಖ-ಈಗಲೂ ಮನಸ್ಸಿಗೆ ಹಿತವೆನ್ನಿಸುವಂತೆ ನೆನಪಾಗುತ್ತದೆ.

ನಾನು ಅವರೆದುರು ತೀರಾ ಸಣ್ಣವನು. ಆದರೂ ಗಂಭೀರವಾದ ಚರ್ಚೆಗೆಂದು ಅವರು ನನ್ನನ್ನು ಒಂದು ದಿನ ರಾಮಣ್ಣಶೆಟ್ಟಿ ಪಾರ್ಕಿನಲ್ಲಿ ಹಿಡಿದು ನಿಲ್ಲಿಸಿಕೊಂಡದ್ದು ನೆನಪಾಗುತ್ತದೆ. ಅವರ ಅಗಾಧವಾದ ನೆನಪಿನಕೋಶದಿಂದ ಮಹಾತ್ಮಗಾಂಧಿ ಮತ್ತು ನೆಹರೂರನ್ನು ಹೊರತಂದು ತನ್ನ ಕಣ್ಣಿಗೆ ಕಟ್ಟುವಂತೆ ನಿಲ್ಲಿಸಿ, ಓಡಾಡಿಸಿ, ನನಗೂ ತೋರುವಂತೆ ಮಾಡಿದ್ದರು. ಗಾಂಧೀಜಿಯ ಅಪಾರ ಕರುಣೆ, ಅದರ ಜೊತೆಗೆ ನಿಷ್ಠುರತೆಯನ್ನು ತಿಳಿಹೇಳುವ ಘಟನೆಗಳನ್ನು ಅವರು ನೆನೆಸಿಕೊಂಡರು.

ನನ್ನನ್ನು ಹಿಂದೂ ಮಹಾಸಭಾ ಪಂಥಕ್ಕೆ ಎಳೆದುಕೊಳ್ಳಬೇಕೆಂಬ ಉಪಾಯ ಅವರ ವಾದದಲ್ಲಿ ಇರಲಿಲ್ಲ. ಆದರೆ ಮಹಾತ್ಮರ ದೈವಸದೃಶ ವ್ಯಕ್ತಿತ್ವವೂ ಜಿನ್ನಾರ ಮನಸ್ಸನ್ನು ಒಲಿಸಲಾರದೆ ಹೋದದ್ದನ್ನು ನೆನೆದ ಅವರು ಹಿಂದೂಗಳು ಮತ್ತು ಮುಸ್ಲಿಮರು ಒಂದೇ ರಾಷ್ಟ್ರವಾಗಬಹುದೆಂಬ ಎಲ್ಲರ ಕನಸು ನುಚ್ಚು ನೂರಾದದ್ದರ ದುರಂತವನ್ನು ವಿವರಿಸುತ್ತಿದ್ದರು. ನನಗೆ ತಿಳಿವು ಸಾಲದು. ಆದರೂ ನನ್ನಲ್ಲೊಂದು ಪ್ರಶ್ನೆಯಿತ್ತು. ಮುಸ್ಲಿಮರು ಹಿಂದೂಗಳಾದ ನಮ್ಮನ್ನು ಅನುಮಾನಿಸುವಂತೆ ನಾವೂ ಮತೀಯತೆಯನ್ನು ಅತಿರೇಕಕ್ಕೆ ತೆಗೆದುಕೊಂಡು ಹೋದದ್ದು ಇದೆಯೆ? ಈ ಪ್ರಶ್ನೆಯನ್ನ್ನ ಕೇಳಲು ಪ್ರಯತ್ನಿಸಿ ಆರೆಸ್ಸೆಸ್‌ನಿಂದ ಪೆಟ್ಟು ತಿಂದಿದ್ದ ನಾನು, ಹಿರಿಯರಾದ ಸಮಾಧಾನಿ ಭೂಪಾಳಂರನ್ನು ಕೆಣಕಿ ಪ್ರಶ್ನಿಸಿರಲಿಲ್ಲ.

ಭೂಪಾಳಂ ಶಿವಮೊಗ್ಗದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದಕ್ಕಾಗಿ ಕೆಲಸ ಮಾಡಿದವರು ಎಂದು ನನಗೆ ಗೊತ್ತಿತ್ತು. ೧೯೩೩ನೆಯ ಇಸವಿಯ ದಂಗೆಯೊಂದರಲ್ಲಿ ಹಿಂದೂ-ಮುಸ್ಲಿಂರ ಪ್ರಾಣಗಳನ್ನು ಅವರು ರಕ್ಷಿಸಿದ್ದವರು, ಸ್ವಂತ ಜೀವವನ್ನೇ ಅಪಾಯಕ್ಕೆ ಒಡ್ಡಿದವರು. ಕಾಂಗ್ರೆಸ್ಸಿಗರಾಗಿದ್ದು ಕ್ರಮೇಣ ಹಿಂದೂ ಮಹಾಸಭೆಗೆ ಒಲಿದು ಅದರ ಸದಸ್ಯರಾದವರು. ಒಂದು ಜನಾಂಗವಾಗಿ ಮುಸ್ಲಿಮರ ಬಗ್ಗೆ ಅವರು ಕ್ರೂರವಾಗಿ ಮಾತನಾಡುತ್ತಿರಲಿಲ್ಲ. ಆದರೆ ಅವರನ್ನು ಅನುಮಾನಿಸುತ್ತಿದ್ದರು ಎಂದು ನನಗೆ ಅನ್ನಿಸಿತ್ತು. ಹಾಗೆ ನೋಡಿದರೆ ಕಾಂಗ್ರೆಸ್ಸಿಗರೂ ಸಹ ಅವರ ಖಾಸಗಿ ಮಾತುಗಳಲ್ಲಿ ಮುಸ್ಲಿಮರನ್ನು ಅನುಮಾನಿಸುವವರೇ. ಇವತ್ತಿಗೂ ರಾಜಕೀಯ ಹೀಗೇ ಉಳಿದಿದೆ.

ನಾನು ಲೋಹಿಯಾವಾದಿಯಾಗಿ ಭೂಪಾಳಂ ಜೊತೆ ಮಾತನಾಡುತ್ತಿದ್ದೆ. ಲೋಹಿಯಾ ಹೇಳಿದೊಂದು ಮಾತು ನಮಗೆ ಆ ದಿನಗಳಲ್ಲಿ ಮುಖ್ಯವಾಗಿತ್ತು. ಲೋಹಿಯಾ ತನ್ನನ್ನು ‘pro-Muslim, Anti-Pakistan’ ಎಂದು ಕರೆದು ಕೊಂಡಿದ್ದರು. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ‘Anti-Muslim, Pro-Pakistan’ ಎಂದುಕರೆದಿದ್ದರು. ಲೋಹಿಯಾ ಪ್ರಕಾರ ತಾನು ಮುಸ್ಲಿಂ ಪರ, ಪಾಕಿಸ್ತಾನ್ ವಿರೋಧದ ಬಣದವನು, ಆದರೆ ಆರ್.ಎಸ್.ಎಸ್.ಮುಸ್ಲಿಂ ವಿರೋಧಿ, ಪಾಕಿಸಾನೀ ಪರ ಬಣದವರು. ಕಾರಣ ಇಷ್ಟೆ: ಮತದ ಮೇಲೆ ರಾಷ್ಟ್ರ ನಿರ್ಮಾಣ ಮಾಡಬೇಕೆನ್ನುವ ಪಾಕಿಸ್ತಾನ್‌ವಾದಿಗಳಂತೆಯೇ, ಆರ್.ಎಸ್.ಎಸ್.ನವರೂ ಮತದ ಮೇಲೆ ರಾಷ್ಟ್ರ ಕಟ್ಟಬೇಕೆನ್ನುವವರು. ಆದ್ದರಿಂದ ಇಬ್ಬರನ್ನೂ ಪಾಕಿವಾದಿಗಳೆಂದು ಲೋಹಿಯಾ ಗುರುತಿಸಿದ್ದರು.

ಭೂಪಾಳಂರವರು ಕುವೆಂಪುರವರಿಗೆ ಸ್ನೇಹಿತರೆಂಬುದೂ ನನಗೆ ಮುಖ್ಯವಾಗಿ ಕಂಡಿತ್ತು-ಆ ದಿನಗಳಲ್ಲಿ. ಕುವೆಂಪು ಆತ್ಮಚರಿತ್ರೆಯಲ್ಲಿ ಭೂಪಾಳಂ ಒಬ್ಬ ಮುಖ್ಯ ವಿದ್ಯಾರ್ಥಿ ದೆಸೆಯ ಸ್ನೇಹಿತರಾಗಿ ಬರುತ್ತಾರೆ. ಪರಮಹಂಸರನ್ನು ಕುವೆಂಪು ಓದುವಂತೆ ಮಾಡಿದವರು ಭೂಪಾಳಂ. ಇಡೀ ರಾತ್ರೆ ಕುವೆಂಪು ಭೂಪಾಳಂ ರೂಮಿನಲ್ಲಿ ಕೂತು ಓದುತ್ತಾರೆ. ‘ನಿಮಗಾಗಿಯೇ ನಾನು ಆ ಪುಸ್ತಕ ತಂದಿದ್ದು’-ಎಂದು ಹೇಳಿ ಕುವೆಂಪು ಕೊಂಚ ನಿದ್ದೆ ಹೋಗುವಂತೆ ಭೂಪಾಳಂ ಮಾಡುತ್ತಾರೆ.

ಹಿಂದೂ ಮಹಾಸಭೆಯ ಆದರ್ಶದಂತೆ ಭೂಪಾಳಂ ನಡೆದುಕೊಳ್ಳುತ್ತಿದ್ದರು; ಅಸ್ಪೃಶ್ಯತೆಯನ್ನು ವಿರೋಧಿಸುತ್ತಿದ್ದರು. ಹಿಂದೂಗಳು ಜಾತಿಗಳಾಗಿ ಒಡೆದುಕೊಂಡಿರುವುದ ನಮ್ಮ ರಾಷ್ಟ್ರದ ದುರ್ಬಲತೆಗೆ ಮುಖ್ಯ ಕಾರಣವೆಂದು ತಿಳಿದಿದ್ದರು. ನಾನು ಕ್ರಿಶ್ಚಿಯನ್ ಹುಡುಗಿಯನ್ನು ಸುಮಾರು ೪೨ ವರ್ಷಗಳ ಹಿಂದೆ ಮದುವೆಯಾದಾಗ, ಮತಾಂತರವಾಗಲಿಲ್ಲವೆಂದು ಸಂತೋಷಪಟ್ಟಿದ್ದರೆಂದು ಕೇಳಿದ್ದೇನೆ.

ಅವರ ವೈಚಾರಿಕತೆಯನ್ನು ನಾನು ಒಪ್ಪಿಕೊಂಡಿರದಿದ್ದರೂ ಅವರಿಗಿದ್ದ ಮಲೆನಾಡಿನ ಆರ್ಥಿ-ಸಾಮಾಜಿಕ ಸ್ಥಿತಿಯ ಜ್ಞಾನ ಅಪಾರವಾದದ್ದೆಂದು ನನಗೆ ಯಾವತ್ತೂ ಅನ್ನಿಸುತ್ತಿತ್ತು. ಅವರು ಹೇಳಿದೊಂದು ಕಥೆ ನನ್ನ ಮನಸ್ಸಿನಲ್ಲಿ ಊರಿ ಎಷ್ಟೋ ವಿಚಾರಗಳು ನನಗೆ ಸ್ಪಷ್ಟವಾಗುವಂತೆ ಮಾಡಿವೆ. ಅಂತಹ ರೂಪಕ ಶಕ್ತಿ ಅವರು ಹೇಳಿದ ಕಥೆಗೆ ಇದೆ.

ಒಮ್ಮೆ ಬ್ರಿಟಿಷ್ ಅಧಿಕಾರಿಯೊಬ್ಬ ಶಿವಮೊಗ್ಗೆಗೆ ಬರುತ್ತಾನೆ. ದಿವಾನ್ ಪೂರ್ಣಯ್ಯ ಅವರ ಕಾಲವದು. ಪೂರ್ಣಯ್ಯನವರೂ ಜೊತೆಗೆ ಆಗ ಇದ್ದರೆಂದು ಅವರ ಕಥೆಯಿಂದ ನನಗೆ ನೆನಪು. ಆ ಕವಲೇದುರ್ಗದ ಬಡಜನರು ಒಬ್ಬ ಬ್ರಿಟಿಷ್ ಅಧಿಕಾರಿಯಲ್ಲಿ ತಮ್ಮ ಅಹವಾಲನ್ನು ಒಪ್ಪಿಸುತ್ತಾರೆ. ಈ ಬಡ ಜನ ಕ್ರಮೇಣ ಕಡುಬಡವರಾಗಲು ಕಾರಣ ಇಷ್ಟೆ. ಮೊದಲು ಉಳಲು ಅಷ್ಟೋ ಇಷ್ಟೋ ಗದ್ದೆಗಳ ಜೊತೆ ಕುಲುಮೆ ಕೆಲಸವೂ ಅವರಿಗೆ ಇತ್ತು. ರೈತರಿಗೆ ಬೇಕಾದ ಕತ್ತಿ, ಗುದ್ದಲಿ, ನೇಗಿಲಮೊನೆ (ಗುಳ) ಇತ್ಯಾದಿಗಳನ್ನು ಅವರೇ ತಮಗೆ ಸಿಗುವ ಸ್ಥಳೀಯ ಕಬ್ಬಿಣದ ಅದಿರಿನಿಂದ ತಯಾರುಮಾಡಿ ಮಾರುತ್ತಿದ್ದರು. ಈಗ ಅದು ನಿಂತಿದೆ. ಹೊಟ್ಟೆಪಾಡು ಕಷ್ಟವಾಗಿದೆ. ಇರುವ ಭೂಮಿ ಉಳುಮೆಗೆ ಸಾಲದು-ಇತ್ಯಾದಿ.

ಆಗ ಬ್ರಿಟಿಷ್ ಅಧಿಕಾರಿ ಹೇಳುತ್ತಾನೆ: ನಿಮ್ಮ ನೆಲದ ಅದಿರಿಗಿಂತ ತುಂಬ ಉತ್ತಮವಾದ ಅದಿರಿನಿಂದ ಬರ್ಮಿಂಗ್ ಹ್ಯಾಮ್‌ನಲ್ಲಿ ತಯಾರಿಸಿದ ಉಪಕರಣಗಳನ್ನು ನಿಮಗೆ ನಾವು ಒದಗಿಸುತ್ತಿದ್ದೇವೆ. ಈ ಸಲಕರಣೆಗಳಿಗೆ ಸಮಾನವಾದದ್ದನ್ನು ನೀವು ತಯಾರುಮಾಡಲಾರಿರಿ. ಮತ್ತೆ ಯಾಕೆ ಚಿಂತೆ?

ಅದೇ ಭೂಪಾಳಂರಿಗೆ ನಮ್ಮ ದೇಶದ ದುರಂತಕ್ಕೆ ಕಾರಣವೆಂದು ಅನ್ನಿಸಿತ್ತು. ಸ್ಥಳೀಯ ತಂತ್ರಜ್ಞಾನವನ್ನು ಬ್ರಿಟಿಷರು ನಾಶಮಾಡಿದ್ದರು. ತಾವೇ ಕತ್ತಿ, ನೇಗಿಲು, ಗುದ್ದಲಿ ತಯಾರಿಸುತ್ತಿದ್ದಾಗ ಕವಲೇದುರ್ಗದ ರೈತರು ತಮ್ಮ ತಂತ್ರಜ್ಞಾನವನ್ನು ಬೆಳೆಸಿಕೊಂಡು ಹೋಗಬಲ್ಲವರಾಗಿದ್ದರು ಮಾತ್ರವಲ್ಲ, ಅವರ ಹೊಟ್ಟೆಪಾಡಿಗೂ ಈ ಉದ್ಯಮ ಅಗತ್ಯವಾಗಿತ್ತು. ಭಾರತದಲ್ಲಿ ಇರುವ ಭೂಮಿಯ ವ್ಯವಸಾಯದಿಂದ ಮಾತ್ರ ಹಳ್ಳಿಗಳು ಊರ್ಜಿತವಾಗಬಾರದು. ಅವರದೇ ಆದ ಕೈಗಾರಿಕೆಯೂ ಬೇಕು (ಗಾಂಧಿಯ ಚರಕದ ಮಹತ್ವ ಇರುವುದು ಇಲ್ಲೇ). ಅದನ್ನು ಬ್ರಿಟಿಷರು ನಾಶ ಮಾಡಿದರು. ನಮ್ಮ ಮೂಲ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಂಡು, ಸಿದ್ಧ ವಸ್ತುಗಳನ್ನು ನಮಗೆ ರಫ್ತು ಮಾಡಿ ನಮ್ಮ ತಂತ್ರಜ್ಞತೆಯನ್ನು ಕೊಂದರು.

ಭೂಪಾಳಂ ಈ ವಿಷಯದಲ್ಲಿ ನಿಜವಾಗಿ, ವಿಕೇಂದ್ರೀಕರಣದಲ್ಲಿ ನಂಬಿಕೆ ಇಟ್ಟವರಾಗಿದ್ದರು. ಇಷ್ಟು ಜಾಣರೂ, ಅನುಭವಿಗಳೂ ಆದ ಭೂಪಾಳಂ ರಾಜಕೀಯದಲ್ಲಿ ಮಾತ್ರ ವ್ಯವಹಾರಜ್ಞರಾಗಿರಲಿಲ್ಲ. ಕಾಂಗ್ರೆಸ್ ಬಿಟ್ಟರು ಸರಿ,, ಆದರೆ ಯಾಕೆ ಜನಸಂಘ ಸೇರಲಿಲ್ಲವೋ? ಹೀಗಾಗಿ ಅಧಿಕಾರ ಹಿಡಿಯುವ ರಾಜಕೀಯದಿಂದ ದೂರವೇ ಉಳಿದುಬಿಟ್ಟರು. ಕರ್ನಾಟಕದ ಮುಖ್ಯಮಂತ್ರಿ ಆಗಬಲ್ಲಷ್ಟು ಹಿರಿಯರಾಗಿದ್ದವರು ಈ ಭೂಪಾಳಂ ಚಂದ್ರಶೇಖರಯ್ಯ.

ಭೂಪಾಳಂಬದುಕು ಪ್ರ ಸಂ: ಬಳ್ಳೆಕೆರೆ ಹನುಮಂತಪ್ಪ
ಸಂ: ಭೂಪಾಳಂ ಸಿ.ಪ್ರಭಾಕರ,
ಪ್ರ: ಭೂಪಾಳಂ ಚಂದ್ರಶೇಖರಯ್ಯ ಸ್ಮಾರಕ ಪ್ರಕಾಶನ ಬೆಂಗಳೂರು. ೨೦೦೪

* * *