ಐವತ್ತರ ದಶಕದ ಪ್ರಾರಂಭದಲ್ಲಿ ನಾನು ಶರ್ಮರ ಜತೆ ಹೆಚ್ಚು ಗುರುತಿಸಿಕೊಂಡು, ಆಮೇಲೆ ಅಡಿಗರ ಜತೆ ಹೆಚ್ಚು ಗುರುತಿಸಿಕೊಳ್ಳುತ್ತ ಬೆಳೆದವನು. ಮೈಸೂರಿನ ಚಾಮುಂಡಿಪುರಂನಲ್ಲಿದ್ದ ಸಾರ್ವಜನಿಕ ವಿದ್ಯಾರ್ಥಿನಿಲಯದಲ್ಲಿ ನನ್ನ ಊಟ; ಆದರೆ ನನ್ನ ಸಾಹಿತ್ಯ ಪ್ರೀತಿಯಿಂದ ಗಳಿಸಿಕೊಂಡ ಹಲವು ಗೆಳೆಯರ ಜೊತೆ ಹರಟಲು ಅಗತ್ಯವಾದ ಖಾಸಗೀತನಕ್ಕಾಗಿ (ಮತ್ತು ಸಿಗರೇಟ್ ಸೇದುವುದಕ್ಕಾಗಿ) ಬಾಡಿಗೆಗೆ ಪಡೆದುಕೊಂದು ಕೋಣೆಯಲ್ಲಿ ನನ್ನ ವಾಸ. ಎಲ್ಲೆಲ್ಲೂ ಪುಸ್ತಕಗಳು ಹರಡಿಕೊಂಡ ಈ ಪುಟ್ಟ ಕೋಣೆಯಲ್ಲೇ ನಿರಂಜನರ ಜೊತೆ ಕೂತು ನನ್ನ ಪ್ರಗತಿಶೀಲತೆಗೆ ತಕ್ಕ ಹುರುಪಿನ ಶೈಲಿಯನ್ನು ಹುಡುಕಿಕೊಳ್ಳುತ್ತಿದ್ದ ಭಾವುಕತೆಯ ದಿನಗಳಲ್ಲೇ ನಾನು ರಾಮಚಂದ್ರ ಶರ್ಮರ ಯೌವನದ ಉಲ್ಲಾಸದ ಕಾವ್ಯಕ್ಕೆ ಮಾರು ಹೋದದ್ದು.

ನಾನು ಆನರ್ಸ್ ಓದುತ್ತಿದ್ದ ಮಹಾರಾಜ ಕಾಲೇಜಿನಲ್ಲಿ ‘ಸಹೃದಯೀ ಬಳಗ’ ಎಂಬ ಸಾಹಿತ್ಯಿಕ ಸಂಘವನ್ನು ಕಟ್ಟಿಕೊಂಡು ಅದರಲ್ಲಿ ಶರ್ಮರ ಮೊದಲ ಪದ್ಯಗಳನ್ನು ಉತ್ಸಾಹದಲ್ಲಿ ವಿಮರ್ಶಿಸಿದ್ದು ನೆನಪಾಗುತ್ತದೆ. ಈ ಸಭೆಯಲ್ಲಿ ಮುಂದೆ ಶರ್ಮನ್ನು ಮದುವೆಯಾದ ನನ್ನ ಸಹಪಾಠಿಯಾಗಿದ್ದ ಶ್ರೀಮತಿ ಪದ್ಮಾ ಇದ್ದರೆಂದು ನೆನಪು. ನಾವೆಲ್ಲರೂ ಆರಾಧನಾಭಾವದಿಂದ ನೋಡುತ್ತಿದ್ದ ಒಂದು ಸೂಕ್ಷ್ಮಮನಸ್ಸಿನ ಮತ್ತು ಆಕರ್ಷಕವಾದ ರೂಪದ ಪದ್ಮಾ ಜೊತೆಗಿಲ್ಲದೆ ನಮ್ಮ ಯಾವ ಸಾಹಿತ್ಯಿಕ ಚಟುವಟಿಕೆಗಳೂ ನಡೆಯುತ್ತಿರಲಿಲ್ಲ.

ಕಾವ್ಯ ತನ್ನ ಶ್ರೀಮದ್ಗಾಂಭೀರ್ಯವನ್ನು ಕಳೆದುಕೊಂಡು, ಕಚ್ಚೆ ಪಂಚೆಯ ಬದಲು ಪ್ಯಾಂಟು ತೊಟ್ಟು, ಚೆಲುವಿಗೆಷ್ಟೊ ಅಷ್ಟೇ ಚೆಲ್ಲಾಟಕ್ಕೂ ನುಡಿ ಕೊಡಬಲ್ಲ ಬೆರಗನ್ನು ಶರ್ಮ ನಮಗೆ ಅವರ ಕಾವ್ಯದಲ್ಲಿ ಒದಗಿಸಿದ್ದರು. ಕಾವ್ಯದ ಲಯವನ್ನೇ ಬದಲಿಸಬೇಕಾಗಿ ನಮಗೆ ಕಾಣುತ್ತಿದ್ದ ಕಾಲದಲ್ಲಿ ವಿ.ಜಿ.ಭಟ್ಟರು, ಎಕ್ಕುಂಡಿ, ಶರ್ಮ, ಬಿಳಿಗಿರಿ, ಅಡಿಗ ಮುಖ್ಯರಾಗಿ ಕಾಣುತ್ತಿದ್ದರು.

ಇವರೆಲ್ಲರೂ ಕಾವ್ಯದ ಭಾವುಕ ಉಬ್ಬರಗಳನ್ನು, ಫೋಸುಗಳನ್ನು ಗೇಲಿ ಮಾಡಬಲ್ಲವರಾಗಿದ್ದರು. ‘ಪುಷ್ಪ ಕವಿಯ ಪರಾಕು’ವಿನಲ್ಲಿ ಅಡಿಗರು ಮೃದು ಮಧುರ ಮಾತಿನ, ಸುಳ್ಳು ಪೋಷಾಕು ತೊಟ್ಟ ಕವಿತೀಟೆಯನ್ನು ಹಾಸ್ಯ ಮಾಡಿದ್ದರು. ವಿ.ಜಿ. ಭಟ್ಟರು ಆತ್ಮವನ್ನು ಎಲ್ಲೆಲ್ಲೂ ಹುಡುಕಿ, ಅದು ಸಿಗದೆ, ಕೊನೆಯಲ್ಲಿ ಕಿಟ್ಟೆಲ್‌ಶಬ್ದಕೋಶದ ಪುಟವೊಂದರಲ್ಲಿ ಅದನ್ನು ಕಂಡು ಕೃತಾರ್ಥರಾಗಿದ್ದರು. ಬಿಳಿಗಿರಿ ಪ್ರಗತಿಶೀಲ ಭಾವುಕ ಭಂಗಿಗಳನ್ನು ನಿರ್ದಯವಾಗಿ ಬೆತ್ತಲೆಗೊಳಿಸಿದ್ದರು. ಇವರ ನಡುವೆ ನಮಗೆ ಬಹು ಪ್ರಿಯರಾಗಿದ್ದ, ಆದರೆ ಮುಂದಿನ ದಿನಗಳಲ್ಲಿ ಪರಮಭಾಗವತರಾಗಿ ನಮ್ಮೆಲ್ಲರ ಟೀಕೆಗೊಳಗಾದ-ಎಕ್ಕುಂಡಿ ಇದ್ದರು.

ಮೀನುಪೇಟೆಯಲ್ಲಿ ಮೀನು ಮಾರುತ್ತ ಕುಳಿತ ಬಡಪಾಯಿ ಹೆಣ್ಣೊಬ್ಬಳನ್ನು ಇವರು ವರ್ಣಿಸಿದ್ದು ಹೀಗೆ:

ಕುಳಿತರಿಲ್ಲಿ ಮತ್ಸ್ಯ ಗಂಧಿ
ಉಟ್ಟುಕೊಂಡು ಹರಕು ಚಿಂದಿ

ಗಂಭೀರವಾದದ್ದನ್ನು ಅಣಕ ಮಾಡಿ ಬರೆಯುವುದು ಸಾಧ್ಯ. ಬೇಂದ್ರೆಯವರೇ ‘ಬೆಕ್ಕು ಹಾರುತಿದೆ ನೋಡಿದಿರಾ’ ಎಂದು ತನ್ನನ್ನೇ ಅಣಕ ಮಾಡಿಕೊಂಡು ಬರೆದಿದ್ದರು. ಆದರೆ ಅಣಕ ಪದ್ಯಗಳ ಮಿತಿಯೆಂದರೆ, ಅವನ್ನು ನಾವು ಮತ್ತೆ ಅಣಕ ಮಾಡುವಂತಿಲ್ಲ. ರಾಮಾನುಜರ ಪದ್ಯಗಳನ್ನು ಅಣಕ ಮಾಡುವಂತಿಲ್ಲ ಎಂದು ಕೀರ್ತಿನಾಥ ಕುರ್ತಕೋಟಿಯವರ ಹೇಳಿದ್ದು ನೆನಪಾಗುತ್ತದೆ.

ಎಕ್ಕುಂಡಿ ಮತ್ತು ರಾಮಚಂದ್ರ ಶರ್ಮ, ಅಡಿಗರು ಕೂಡ, ಕೇವಲ ಅಣಕಕಾರರಲ್ಲ. ತನ್ನ ಮಾತನ್ನು ಗಮನಿಸಲೇಬೇಕಾಗುವಂತೆ, ಗಮನಿಸಿದ್ದನ್ನು ಸ್ಮೃತಿಯಲ್ಲಿಟ್ಟುಕೊಳ್ಳುವಂತೆ, ಆಡಿದ ಮಾತು ತೀವ್ರತೆಯಲ್ಲಿ ಆಡಬಹುದಾದ ಮಾತು, ಆಡಲೇಬೇಕಾದ ಮಾತು ಎನ್ನಿಸುವಂತೆ ಮಾಡಬಲ್ಲವರು ನಿಜವಾದ ಕವಿಯೆನ್ನಿಸುವ ಕಾಲದಲ್ಲಿ ಶರ್ಮರು ನಮಗೆ ಮುಖ್ಯರಾದರು. ಅವರ ‘ಏಳು ಸುತ್ತಿನ ಕೋಟೆ’ ಸಂಕಲನದ ಪದ್ಯಗಳು ಮಾನವ ಜೀವನದಲ್ಲಿ ಕಾಮದ ಪ್ರವೇಶವನ್ನು ಓದುವ ಉಲ್ಲಾಸದಲ್ಲಿ ಅನುಭವಿಸುವಂತೆ ರಚಿತವಾಗಿದೆ. ಕನ್ನಡ ಕಾವ್ಯಲೋಕದ ನಿರ್ಣಾಯಕವಾದ ಘಟ್ಟಗಳನ್ನು ನಿರ್ಮಿಸಿದ ಮುಖ್ಯ ಸಂಕಲನಗಳಲ್ಲಿ ಇದೂ ಒಂದು ಎನ್ನಬಹುದೇನೋ?

ಶರ್ಮ ಸತತವಾಗಿ, ಆದರೆ ಒಬ್ಬಂಟಿಯಾಗಿ, ಬೆಳೆಯುತ್ತ ಹೋದ ಕವಿ. ನವ್ಯ ಸಾಹಿತ್ಯದ ಹಲವು ಧೋರಣೆಗಳನ್ನು ನಾವು ಕೆಲವರು ಅನುಮಾನಿಸಿದಂತೆ ಅವರು ಅನುಮಾನಿಸಲಿಲ್ಲ. ಕಾವ್ಯ ತನ್ನ ಚೈತನ್ಯವನ್ನು ಹೊಸ ಬಗೆಗಳಲ್ಲಿ ಕಂಡುಕೊಳ್ಳಲು ಅದರ ಲಯ ಮತ್ತು ಬಂಧಗಳು ಸಡಿಲವಾಗಬೇಕೆಂಬ ವಾದವನ್ನು ಅವರು ಒಪ್ಪಿಕೊಂಡಂತೆ ಕಾಣುವುದಿಲ್ಲ. ಭಾವಗೀತೆಯ ಕ್ಯಾಸೆಟ್ಟಿನಲ್ಲಿ. ಹಲವು ವಾದ್ಯಗಳ ಸನ್ನಿಧಿಯಲ್ಲಿ, ನುಸುಳುವ ಕಾವ್ಯವನ್ನಂತೂ ಅವರು ಒಪ್ಪಲೇ ಇಲ್ಲ. ಕಣ್ಣಿಟ್ಟು ಹುಡುಕಿ ಕಾಣುವ ಅರ್ಥಗಳಿಗೆ ಕಾವ್ಯ ವೇದಿಕೆಯೆಂದು ಅವರು ನಂಬಿದ್ದರು.

ಕಾಮೋದಯದ ಉಲ್ಲಾಸದ ಕಾವ್ಯದ ನಂತರ ಶರ್ಮರು ಅಭಿವ್ಯಕ್ತಿಸುತ್ತ ಹೋದದ್ದು ಕ್ಲಿಷ್ಟವಾದ ಬಂಧಗಳಲ್ಲಿ ಮಾನವನ ಅಸ್ತಿತ್ವದ ಕೆಲವು ಸಂಕಟದ ಸ್ಥಿತಿಗಳನ್ನು ಅಧ್ಯಾತ್ಮದ ಕಡೆ ಎಂದೂ ಮುಖ ತಿರುಗಿಸಿ ನೋಡದ ಶರ್ಮ ಸುಲಭ ಸಾಂತ್ವನಗಳನ್ನು ಯಾವತ್ತೂ ಒಪ್ಪಿಕೊಳ್ಳಲಿಲ್ಲ. ಅತ್ತ ಕುದುರೆಯೂ ಅಲ್ಲದ, ಇತ್ತ ಕತ್ತೆಯೂ ಅಲ್ಲದ ಹೇಸರಗತ್ತೆಯ ನಿರ್ಭೀತೆ ಅವರ ಹಲವು ಕವನಗಳ ಕೇಂದ್ರ ಕತ್ತೆಯೂ ಅಲ್ಲದ ಹೇಸರಗತ್ತೆಯ ನಿರ್ಬೀಜತೆ ಅವರ ಹಲವು ಕವನಗಳ ಕೇಂದ್ರ ಧ್ಯಾನವಾಯಿತು. ಕರ್ನಾಟಕ ಬಿಟ್ಟು ಆಪ್ರಿಕಾದಲ್ಲೂ, ಇಂಗ್ಲೆಂಡಿನಲ್ಲೂ ಬದುಕಬೇಕಾಗಿ ಬಂದ ಶರ್ಮರು ಕನ್ನಡವನ್ನು ಹೊಸ ಅನುಭವದ ಪರಕೀಯ ವಲಯಗಳಿಗೆ ಒಗ್ಗಿಸಿಕೊಳ್ಳಲು ಸತತವಾಗಿ ಶ್ರಮಿಸಿದರು. ಅವರ ನುಡಿಗಟ್ಟು ಕನ್ನಡದ ಅಪ್ಪಟ ಮಾತಿನ ಕ್ರಮಗಳನ್ನು ಮೀರಿ ಹೋಗಬೇಕಾಯಿತು. ಆದರೆ ಅವರ ನುಡಿಗಟ್ಟು ಬದಲಾದರೂ, ಅವರ ಕಾವ್ಯದ ಬಂಧ ಮತ್ತು ಲಯ ಬೇರಾಗಲಿಲ್ಲ. ಅವರ ಯಾವ ಪದ್ಯವೇ ಆಗಲಿ ಅವರದೇ ಎನ್ನಿಸುವ ಛಾಪು ಅದರ ಪ್ರತಿ ಸಾಲಿನಲ್ಲೂ ಇರುತ್ತದೆ. ನಮ್ಮ ನಡುವೆ ಬಿಗಿಯಾದ ಬಂಧದ ಸಾನೆಟ್ಟುಗಳನ್ನು ಬರೆದವರೂ ಇವರೇ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕು.

ಕನ್ನಡ ಭಾಷೆಯೊಳಗೆ ಅಪರಿಚಿತವಾದ ಹೊಸ ಲೋಕಗಳನ್ನು ತರಲು ಶರ್ಮ ಪ್ರಯತ್ನಿಸಿದ್ದು ಮಾತ್ರವಲ್ಲದೆ ಹಲವು ಸಮಕಾಲೀನ ಇಂಗ್ಲಿಷ್ ಕವಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದರು. ಹಲವು ಒಳ್ಳೆಯ ಸಣ್ಣ ಕಥೆಗಳನ್ನು ಬರೆದರು. ಕನ್ನಡದ ಹಲವು ಮುಖ್ಯ ಕೃತಿಗಳನ್ನು ಅವರ ಸಂಗಾತಿ ಪದ್ಮಾರ ಜೊತೆ ಇಂಗ್ಲಿಷಿನಲ್ಲಿ ಭಾಷಾಂತರಿಸಿ ಪ್ರಕಟಿಸಿದರು. ಹೀಗೆ ಇಡೀ ಭಾರತದಲ್ಲಿ ಗೊತ್ತಿರುವ, ಕನ್ನಡದ ಒಂದು ಮುಖ್ಯ ಹೆಸರಾದರು.

ಲಂಡನ್ನಿನಲ್ಲಿ ನಾನು ಓದುತ್ತಿದ್ದಾಗ ಇವರ ಜೊತೆ ಕಳೆದ ದಿನಗಳು ನೆನಪಾಗುತ್ತವೆ. ಒಂದು ಇಡೀ ರಾತ್ರಿ ಟ್ಯಾಕ್ಸಿ ಸಿಗದೆ ಬ್ರಿಟಿಷ್ ಮ್ಯೂಸಿಯಂನಿಂದ ಹೊರಟು ಅವರಿದ್ದ ಮನೆಯತನಕ ನಡೆದು ಬೆಳಗಿನ ಜಾವ ಐದು ಗಂಟೆಗೆ ತಲುಪಿದ್ದೆವು. ಆವತ್ತಿನ ನಮ್ಮ ತೀವ್ರ ವಾಗ್ವಾದದ ಫಲವಾಗಿ ಅವರು ಬರೆದೊಂದು ಪದ್ಯವೂ ಇದೆ. ನಾನು ‘ಸಂಸ್ಕಾರ’ವನ್ನು ಇಂಗ್ಲೆಂಡಿನಲ್ಲಿ ಬರೆದು, ಓದಲು ಮೊದಲು ಕೊಟ್ಟಿದ್ದು ಶರ್ಮರಿಗೆ. ಶರ್ಮರ ಮನೋಭೂಮಿಕೆ-ಹಿಂದೆ ಕೈಲಾಸಂರವರಿದ್ದಂತೆ-ಒಬ್ಬ ‘ಬೊಹಿಮಿಯನ್’ನದು ಎಂದು ನಾನು ಬರೆದೊಂದು ಮಾತನ್ನು ವಿರೋಧಿಸಲು ಇವರು ನಾನಿದ್ದ ಮೈಸೂರಿಗೆ ಬಂದು ಎರಡು ದಿನಗಳ ಕಾಲ ನಮ್ಮ ಮನೆಯಲ್ಲೇ ಇದ್ದರು. ಶರ್ಮರ ಜೊತೆ ನಾನು ವಾದಿಸಿದಷ್ಟು ಅಡಿಗರ ಜೊತೆ ವಾದಿಸಿಲ್ಲ. ನಮ್ಮ ಕಾಲದ ಕಾವ್ಯ ರಚನೆಯ ಮಹೋಪಾಸಕರಲ್ಲಿ ಶರ್ಮರೂ ಒಬ್ಬರು. ಅವರು ಈಗ ಕಣ್ಮುಚ್ಚಿದ್ದಾರೆ. ಇಲ್ಲವಾದಲ್ಲಿ ನನ್ನ ಈ ಮಾತನ್ನು ಓದಿ ಅವರು ಗಹಗಹಿಸಿ ನಗುತ್ತಿದ್ದರು.

ಶರ್ಮ ಮಹಾಚೇಷ್ಟೆಯ, ಕಿಲಾಡಿ ಮನುಷ್ಯ; ಆದರೆ ಅಪ್ಪಟ ಸ್ನೇಹಿತ. ಮನುಷ್ಯ ಸಂಬಂಧಗಳಲ್ಲಿ ಯಾವತ್ತೂ ಅವರು ಅಪ್ರಾಮಾಣಿಕವಾಗಿ ವರ್ತಿಸಿದ್ದಿಲ್ಲ. ಅವರು ಮುಂದೊಂದು ಮಾತು, ಹಿಂದೊಂದು ಮಾತು-ಎಂದೂ ಆಡಿದವರಲ್ಲ. ಕೆಲವು ದಿನಗಳ ಹಿಂದೆ ಅವರನ್ನು ನಾನು ನೋಡಲು ಹೋದಾಗ ಕೋಲು ಹಿಡಿದು ಬಂದು ನನ್ನ ಎದುರು ಕೂತು ತನ್ನ ಸ್ಥಿತಿಯನ್ನು ಹಾಸ್ಯ ಮಾಡಿಕೊಂಡಿದ್ದರು. ಏನೇನೋ ಖುಷಿಯಲ್ಲಿ ನೆನೆಸಿಕೊಳ್ಳುತ್ತ ನನ್ನನ್ನು ಗೇಲಿ ಮಾಡಿದ್ದರು. ಕನ್ನಡ ಸಾಹಿತ್ಯದ ಹಿರಿಯರಲ್ಲಿ, ಅವರ ಹಾಸ್ಯಪ್ರಜ್ಞೆಯಿಂದಾಗಿ, ಜೊತೆಗೇ ಕೃತಕವಾದ ಗಾಂಭೀರ್ಯದ ನಿರಾಕರಣೆಯಿಂದಾಗಿ, ಅವರು ಅನನ್ಯರು. ಯುವಜನರಿಗೆ ಈ ಕಾರಣದಿಂದಾಗಿ ಯಾವತ್ತೂ ಹತ್ತಿರವಾಗಿದ್ದು, ಪತ್ತೆಯೇ ಆಗದಂತೆ ಕ್ರಮೇಣ ವಯಸ್ಸಾಗಿ ಸರಿದು ಹೋದವರು.

ಇಹದ ಸತ್ಯಗಳಿಗೆ ಮಾತ್ರ ತಾನು ಬದ್ಧನೆನ್ನುವಂತೆ ಬರೆದುಕೊಂಡಿದ್ದ ಶರ್ಮರು ಎಷ್ಟು ಹಗುರಾಗಿ ಯಾರಿಗೂ ಭಾರವಾಗದಂತೆ ಇಹದಿಂದ ಬಿಡುಗಡೆಯಾಗಿ ಹೋದರು ಎನ್ನುವುದನ್ನು ಕಂಡು ಬೆರಗಾಗುತ್ತದೆ.

ಕನ್ನಡಪ್ರಭ ಪತ್ರಿಕೆಯಲ್ಲಿ (೨೪೨೦೦೫) ಪ್ರಕಟವಾದ ಲೇಖನ

* * *