ಅರವತ್ತರ ದಶಕದಲ್ಲಿ ರಾಜೀವ ತಾರಾನಾಥ ನನ್ನನ್ನು ನನಗೆ ಸಾಧ್ಯವಾದ ಎತ್ತರಕ್ಕೆ ಏರುವಂತೆ ಪ್ರಚೋದಿಸಿದ ಗೆಳೆಯ; ಗೆಳೆಯ ಮಾತ್ರನಲ್ಲ, ಗುರು. ಮೊದಲಲ್ಲಿ ನನ್ನನ್ನು ಲೇಖಕನೆಂದು ಗುರುತಿಸಿದ ಹಿರಿಯರು ಅಡಿಗರು; ತಿದ್ದಿ ತೀಡಿ ಹಂಗಿಸಿ ವಿಸ್ತರಿಸಿ ಹೊಗಳಿ ಬೆಳೆಸಿದವನು ರಾಜೀವ. ‘ಪ್ರಶ್ನೆ’ ಸಂಕಲನದ ಒಂದೊಂದು ಕಥೆಯೂ ರೂಪುಗೊಂಡಿದ್ದು ರಾಜೀವ ಅತೃಪ್ತಿಯಲ್ಲಿ. ಹೀಗೆ ತನ್ನ ನಿಲುವಿನಲ್ಲೂ ನನಗಿಂತ ಎತ್ತರದ-ಪಡೆದುದಕ್ಕಿಂತ ಹೆಚ್ಚು ಕೊಡಬಲ್ಲ ರಾಜೀವನ ಔದಾರ್ಯದಲ್ಲಿ ತೊದಲುತ್ತಿದ್ದ ನನ್ನ ಸೃಜನಶೀಲತೆ ಬೆಳೆಯಿತು. ಬರವಣಿಗೆಯಲ್ಲಿ ಮಾತ್ರವಲ್ಲ; ನಾನು ಧೈರ್ಯಮಾಡಿ ಮದುವೆಯಾಗಿದ್ದೂ ರಾಜೀವನ ನೆರವಿನಲ್ಲಿ. ನಾವಿಬ್ಬರೂ ನಮ್ಮ ಮೊದಲನೆಯ ಮಗನನ್ನು ಪಡೆದದ್ದೂ ಒಂದೇ ಕಾಲದಲ್ಲಿ. ನಮ್ಮ ಹಲವು ಸಂಜೆಗಳನ್ನು ಕಳೆದದ್ದು ಮೈಸೂರಿನ ಒಂದು ಕಾಫಿ ಹೌಸಿನಲ್ಲಿ; ಮಾರ್ಕೆಟ್ಟಿನಿಂದ ತರಕಾರಿಯನ್ನೂ, ಇಂದಿರಾಭವನದಿಂದ ಮಕ್ಕಳಿಗೆ ಸಿಹಿತಿಂಡಿಯನ್ನೂ ಒಂದು ಚೀಲದಲ್ಲಿ ತುಮಬಿಕೊಂಡು, ನಮ್ಮ ಜೊತೆ ಕೂತು ಸಿಗರೇಟು ಸೇದಿ, ಕಾಫಿಯನ್ನು ಹಲವು ಅರ್ಧ ಕಪ್ಪುಗಳಲ್ಲಿ ಕುಡಿದು ಇಡೀ ಸಂಜೆಯನ್ನು ಮಾತಿನ ಲಹರಿಯಲ್ಲಿ ಕಳೆಯುತ್ತಿದ್ದ ಅಡಿಗರ ತೀವ್ರತೆಯಲ್ಲಿ.

ಸಾಹಿತ್ಯದಲ್ಲಿ ಕೃತಿಯೊಂದನ್ನು ರಾಜೀವ ಅದರ ನೇಯ್ಗೆಯ ಒಪ್ಪದಲ್ಲೂ, ಸ್ನಿಗ್ಧತೆಯಲ್ಲೂ, ಅದು ಒಟ್ಟಾಗಿ ಪಡೆಯುವ ಆಕಾರದಲ್ಲೂ ನೋಡಬಲ್ಲ ಧೀಮಂತ, ಇದಕ್ಕೆ ಕಾರಣ ಅವನ ಸಂಗೀತ ಜ್ಞಾನವೇ ಇರಬೇಕು. ಬಡೇ ಗುಲಾಂ ಅಲಿ ಖಾನರು ಪ್ರಸಿದ್ಧರಾದ ಮರಾಠಿ ಕವಿಗೆ ಹೇಳಿದರೆನ್ನುವ ಮಾತೊಂದನ್ನು ನಾನು ಕೇಳಿಸಿಕೊಂಡಿದ್ದೇನೆ. ಮರಾಠಿ ಕವಿಯೊಬ್ಬರು ಒಂದು ಗಂಟೆಗೂ ಹೆಚ್ಚು ಕಾಲ ಖಾನರು ಹಾಡುವುದನ್ನು ಕೇಳಿಸಿಕೊಂಡರಂತೆ. ಅಷ್ಟೊಂದು ವಿಸ್ತಾರದಲ್ಲಿ ಎಲ್ಲೆಲ್ಲೋ ಅನ್ನಿಸುವಂತೆ, ಅನಿರೀಕ್ಷಿತವಾಗಿ ಅಲೆದಾಡುತ್ತ, ಆದರೆ ಒಟ್ಟಂದವಾಗಿ ಬೆಳೆದು ನಿಂತ ಅನುಭವದಲ್ಲಿ ರೋಮಾಂಚಿತವರಾದ ಕವಿಗೆ ಖಾನರು ಹೇಳಿದರಂತೆ; ‘ಸಂಗೀತ ಒಂದು ಸರ್ವಾಂಗ  ಸೌಷ್ಠವದ ವಿಗ್ರಹವಿದ್ದಂತೆ; ಕೊಂಚ ಕಮ್ಮಿಯಾದರೂ ತುಂಬ ಕಮ್ಮಿಯಾಯಿತು ಎನ್ನಿಸಬೇಕು; ಕೊಂಚ ಹೆಚ್ಚಾದರೂ ತುಂಬ ಹೆಚ್ಚಾಯಿತು ಎನ್ನಿಸಬೇಕು’.

ರಾಜೀವ ಎಲ್ಲವನ್ನೂ ಸಂಗೀತದ ಕಣ್ಣಿನಿಂದ ನೋಡುತ್ತಾನೆ; ಸಾಹಿತ್ಯದ ಬಗೆಗಿನ ರಾಜೀವ ಒಳನೊಟಗಳು ಅವನನ್ನು ನಾನು ಕಂಡ ಅತ್ಯುತ್ತಮ ಮನಸ್ಸುಗಳ ಸಾಲಿನಲ್ಲಿ ನಿಲ್ಲಿಸುತ್ತದೆ. ಆದರೆ ನನಗೆ ದುಃಖದ ವಿಷಯವೆಂದರೆ ಅವನು ಸಾಹಿತ್ಯವನ್ನು ತಿಳಿಯುವ ಆಳದಲ್ಲಿ ಅವನ ಸಂಗೀತವನ್ನು ವಿಶ್ಲೇಷಿಸುವಂತೆ ನಾನು ಬೆಳೆಯಲಿಲ್ಲ. ಅವನಿಂದ ಪಡೆದಷ್ಟು ನಾನು ಅವನಿಗೆ ಕೊಡಲಿಲ್ಲ.

ರಾಜೀವನ ಮೇಲೆ ಮಹತ್ವದ ಪರಿಣಾಮ ಬೀರಿದವರು ಇಬ್ಬರು: ಅವನ ತಂದೆ ಪಂಡಿತ ತಾರಾನಾಥರು ಮತ್ತು ಅವನ ಗುರು ಅಲಿ ಅಕ್ಬರ್ ಖಾನರು. ಈ ಇಬ್ಬರ ಬಗ್ಗೆಯೂ ರಾಜೀವ ಕಥಿಸುವುದರಲ್ಲಿನ ಬೆರಗನ್ನು ಬಲ್ಲವರು ಮಾತ್ರ ಬಲ್ಲರು. ಇಬ್ಬರೂ ಈ ಲೋಕದವರೇ ಆಗಿದ್ದು ರಾಜೀವನ ತಹತಹದ ಕಣ್ಣಿನಲ್ಲಿ ದೈವಿಕ ಆಯಾಮ ಪಡೆಯುತ್ತಾರೆ. ರಾಜೀವನಿಗೆ ಅವನು ಮೀರಲಾರದ ಗುರಿಗಳಾಗಿ ಇವರು ನಮಗೆ ಪ್ರತ್ಯಕ್ಷರಾಗುತ್ತಾರೆ. ನಾವು ರಾಜೀವನನ್ನೇ ಅನನ್ಯನೆಂದು ಮೆಚ್ಚಿಕೊಳ್ಳುವ ಸಂದರ್ಭದಲ್ಲೇ ತನಗಿಂತ ದೊಡ್ಡವರನ್ನು ನಮ್ಮ ಎದುರಿಗೆ ಇವನು ಇಡುತ್ತಾನೆ. ರಾಜೀವ ಆತ್ಮಪ್ರತ್ಯಯ ಹಾಗೂ ಅವನ ವಿನಯ ಒಟ್ಟಾಗಿ ನಮಗೆ ಹೀಗೆ ಭಾಸವಾಗುತ್ತದೆ.

ಪಂಡಿತ ತಾರಾನಾಥರು ಮತ್ತು ಅಲಿ ಅಕ್ಬರ್ ಖಾನರು-ಇಬ್ಬರೂ ನಮ್ಮ ಪರಂಪರೆಯಲ್ಲಿ ಅತ್ಯುತ್ತಮವಾದದ್ದನ್ನು ಮೈಗೂಡಿಸಿಕೊಂಡವರು; ಮೈಗೂಡಿಸಿಕೊಂಡು ಮೀರಿದವರು. ಒಬ್ಬರು ಕಲೆಯ ಆವಿಷ್ಕಾರದಲ್ಲಿ; ಇನ್ನೊಬ್ಬರು ಸಾಂಸ್ಕೃತಿಕ ಅಭಿವ್ಯಕ್ತಿಯಲ್ಲಿ. ಒಬ್ಬರು ನೆನಪಾಗಿ ರಾಜೀವವನ್ನು ಕಾಡಿದರೆ ಇನ್ನೊಬ್ಬರು ಸತತ ಸಾಧನೆಯ ನಿಕಷವಾಗಿ ಅವನಿಗೆ ಉಳಿದಿದ್ದಾರೆ. ತೃಪ್ತನಾದ ರಾಜೀವನನ್ನು ನಾನೆಂದೂ ಊಹಿಸಲಾರೆ.

ನಾವಿಬ್ಬರೂ ಒಬ್ಬರ ಬಗ್ಗೆ ಒಬ್ಬರು ಸಿಟ್ಟಾದದ್ದಿದ್ದೆ;  ನಿಷ್ಕಾರಣವಾಗಿ ಹಲವು ಸಲ, ಕಾರಣ ಸಹಿತವಾಗಿ ಕೆಲವು ಸಲ. ಇವತ್ತು ನಾನು ಇಲ್ಲವೆಂದು ಅವನು ಸಿಟ್ಟಾದರೆ ನನಗೆ ಸಂತೋಷವೇ. ಏಕೆಂದರೆ ನಲವತ್ತು ವರ್ಷಗಳ ಹಿಂದಿನ ನಮ್ಮ ಪ್ರೀತಿ ಒಬ್ಬರನ್ನೊಬ್ಬರು ಆಗೀಗ ಹಿಂದಿನಂತೆ ನೋಡದಿದ್ದರೂ ಹಾಗೆ ಉಳಿದಿದೆ ಎಂದು ಅದರ ಅರ್ಥ.

ಈ ಎತ್ತರದ ಮನುಷ್ಯ ನಮ್ಮ ನಡುವೆ ಹಲವು ಕಾಲ ಬಾಳಲಿ.

ಆಗಸ್ಟ್ ೨೦೦೩ರಂದು ಭಾರತೀಯ ವಿದ್ಯಾಭವನದಲ್ಲಿ ರಾಜೀವ ತಾರಾನಾಥರ ಅಭಿನಂದನಾ ಸಮಾರಂಭದಲ್ಲಿ ಆಡಿದ ಮಾತು.
ಕೃಪೆ: ಅನ್ವೇಷಣೆ.

* * *