ಕುವೆಂಪು ಒಬ್ಬ ದಾರ್ಶನಿಕ ಲೇಖಕರು. ವರ್ತಮಾನದ ನಿತ್ಯವನ್ನೂ, ತ್ರಿಕಾಲದ ಭವ್ಯವನ್ನೂ, ಭೂಮವನ್ನೂ, ಅಲ್ಪವನ್ನೂ ಒಂದು ಪೂರ್ಣ ದೃಷ್ಟಿಯಲ್ಲಿ ಒಳಗೊಳ್ಳಲು ಪ್ರಯತ್ನಿಸಿದ ತಪಸ್ವಿಗಳು. ನಿತ್ಯದ ಸತ್ಯವನ್ನು ಉತ್ಸಾಹದಲ್ಲಿ ಎದುರಾಗಿ ಕಾಣುವುದು ಜರ್ನಲಿಸ್ಟನ ಕಾಳಜಿ; ನಿತ್ಯವನ್ನು ಭ್ರಮೆಯೆಂದು, ಮಾಯೆಯೆಂದು ಕಡೆಗಣಿಸಿ ಅಭೂತವಾದ ಅನಂತತೆಯನ್ನು ಆರಾಧಿಸುವುದು ಭಾರತೀಯ ದಾರ್ಶನಿಕತೆಯ ಪ್ರಲೋಭನೆ. ಕುವೆಂಪುರವರ ಕಾದಂಬರಿಗಳಲ್ಲಿ ನಿತ್ಯದ ಸತ್ಯಗಳು ಇವೆ; ದೈನಿಕ ವಿವರಗಳ ದಟ್ಟತೆ ಇದೆ. ಜೊತೆಗೆ ಒಂದು ಜೀವ ತನ್ನ ಅಂತರಂಗದಲ್ಲಿ ತ್ರಿಕಾಲ ಸಲ್ಲುವ ಭೂಮವಾದದ್ದು ಸಂಭವಿಸಬೇಕೆಂದು ಹಂಬಲಿಸುವ ಆರ್ತಪ್ರಾರ್ಥನೆಯೂ ಇದೆ. ಕುವೆಂಪು ಏಕಕಾಲದಲ್ಲಿ ಅಪ್ಪಟ ಕಲೆಗಾರರೂ, ಅರವಿಂದ ಪ್ರೇರಿತ ತಾತ್ವಿಕ ಚಿಂತಕರೂ ಆದವರಾದ್ದರಿಂದ ಹಲವರಲ್ಲಿ ಒಡೆದು ತೋರುವುದು ಅವರಲ್ಲಿ ಒಟ್ಟಾಗಿ ಸಂಭವಿಸುತ್ತದೆ.

ಭಾವಗೀತೆಯ ಅಂತರ್ಮುಖೀ ಒಳಸುಳಿಯನ್ನೂ, ಕಥನದ ಬಹಿರ್ಮುಖೀ ಹರಿಯುವಿಕೆಯನ್ನೂ ಒಟ್ಟಾಗಿ ಸಾಧಿಸುವ ಕುವೆಂಪು ಶೈಲಿ ಈ ಬಗೆಯ ಭವ್ಯ ನಿತ್ಯಗಳ ಸಂಗಮಕ್ಕೆ ಎಡೆಮಾಡಿಕೊಡುತ್ತದೆ. ಕಲ್ಲಿನ ಅಹಲ್ಯೆಯ ಪ್ರಾಣ ಕಾದಿರುತ್ತದೆ.

ಸದ್ಯದ ತುರ್ತಿರುವುದು ಇಹದ ನಿತ್ಯದಲ್ಲಿ. ಈ ವರ್ತಮಾನದ ನಿತ್ಯಗಳು ಭಾರತದಲ್ಲಿ ಸಂಕೀರ್ಣವಾದ ಸಾಮಾಜಿಕ ಜೀವನದ ಹಲವು ಕಷ್ಟಗಳಿಗೂ ಆತಂಕಗಳಿಗೂ ಕಾರಣವಾಗಿವೆ. ಐರೋಪ್ಯ ನಾಗರಿಕತೆಯ ವೈಜ್ಞಾನಿಕ ಶೋಧದ ವಿಚಾರಗಳು, ಭಾರತದ ಅರಣ್ಯ ವಾಸಿಗಳಾದ ಋಷಿಗಳು ಹುಟ್ಟುಹಾಕಿದ ಆತ್ಮತತ್ವಗಳು, ಸಾಮಾನ್ಯರ ಕಾಲ್ಪನಿಕ ಜಗತ್ತಿನಲ್ಲಿ ಇವೇ ಕಥನಗಳಾಗುವ ಪುರಾಣಗಳು, ಮೂಢನಂಬಿಕೆಗಳು, ಆಚರಣೆಗಳು ಇವೆಲ್ಲವೂ ವರ್ತಮಾನದ ನಿತ್ಯ ಸತ್ಯಗಳು. ಆತಂಕಕ್ಕೂ, ಉತ್ಕರ್ಷಕ್ಕೂ ಕಾರಣವಾಗುವ ಸತ್ಯಗಳು. ನಾಯಿಗುತ್ತಿ, ಹೂವಯ್ಯ, ಓಬಯ್ಯನಂಥವರ ಲೋಕದಲ್ಲಿ ಈ ವರ್ತಮಾನದ ನಿತ್ಯಗಳು ಎದುರಾಗುತ್ತವೆ. ಜೊತೆಗೆ ಸಾಮಾನ್ಯರೂ ಭೂಮವಾದ ಪಾರಮಾರ್ಥಿಕ ಸತ್ಯಗಳಿಗೆ ತಿಳಿದೋ ತಿಳಿಯದೆಯೋ ಎದುರಾಗುತ್ತಾರೆ.

ಹೀಗೆ ಎದುರಾದಾಗ ಕುವೆಂಪು ತಾನು ಭಾರತೀಯ ಎನ್ನುವ ಕಾರಣಕ್ಕಾಗಿ ನಮ್ಮ ಪರಂಪರೆಯ ಎಲ್ಲವನ್ನೂ ಸ್ವೀಕರಿಸುವುದಿಲ್ಲ, ನಿರಾಕರಿಸುವುದೂ ಇಲ್ಲ. ವರ್ತಮಾನದ ತುರ್ತಿಗೂ, ತ್ರಿಕಾಲಕ್ಕೂ, ಭೂಮವೆನ್ನಿಸುವ ಪಾರಮಾರ್ಥಕ್ಕೂ ಸ್ಪಂದಿಸುವ ಕುವೆಂಪು ಅವರ ಆಧುನಿಕತೆಯ ಜಾಗೃತ ವಿಮರ್ಶಾಪ್ರಜ್ಞೆ ವಿವೇಕ-ಯುತವಾಗಿ ಮಾನವ ಕಲ್ಯಾಣಕ್ಕೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳುತ್ತದೆ.

ಭಾರತೀಯತೆಯಲ್ಲೂ, ಐರೋಪ್ಯ ನಾಗರಿಕತೆಯಲ್ಲೂ ಮಾನವ ವಿಕಾಸಕ್ಕೆ ಅಗತ್ಯವಾದದ್ದನ್ನು ಕುವೆಂಪು ಆಯ್ಕೆ ಮಾಡಿಕೊಳ್ಳಲು ಬಗೆಯನ್ನು ನೋಡೋಣ; ದಾರ್ಶನಿಕ ಮನೋಜ್ಞತೆ ಮತ್ತು ಆಧುನಿಕ ಮನಃಶಾಸ್ತ್ರಗಳ ಒಳನೋಟಗಳಿಂದ ಕುವೆಂಪು ರಾಮಾಯಣ ದರ್ಶನ ಒಡಮೂಡಿದೆ. ರಾವಣ ತನ್ನ ಕನಸಿನಲ್ಲಿ ಕಾಮದಲ್ಲಿ ತಾನು ಹಂಬಲಿಸಿದ ಸೀತೆಯನ್ನು ತಾಯಾಗಿ ಪಡೆಯುತ್ತಾನೆ. ಮಂಥರೆ ಪ್ರೇಮದ ಕುರುಡಿಯಾಗುತ್ತಾಳೆ. ತಾನು ಮೆಚ್ಚುವ ಹೋಮರನ ಕಲೆ ಪಿರಿದಾದರೂ ಅವನ ಕಥೆ ಪಿರಿದಲ್ಲ ಎಂದು ತನ್ನ ಯೌವ್ವನದಲ್ಲೇ ಕಂಡುಕೊಂಡ ಕುವೆಂಪು, ವಿಮರ್ಶಾ ಪ್ರಜ್ಞೆಯಲ್ಲಿ ಏನನ್ನೂ ಕಳಕೊಳ್ಳದ ಮುಕ್ತ ಸ್ವೀಕಾರದ ದೊಡ್ಡ ಮನಸ್ಸಾಗಿ ಬೆಳೆದು ನಿಲ್ಲುತ್ತಾರೆ. ಹೀಗೆ ಅವರು ಪೂರ್ವ ಪಶ್ಚಿಮದ ಸಂಗಮವಾಗುತ್ತಾರೆ.

ದೊಡ್ಡ ಲೇಖಕರಿಗೆಲ್ಲ ಇರುವ ದಿಟ್ಟವಾದ, ತನ್ನ ಸೃಜನಶೀಲತೆಗೆ ಬೇಕಾದ್ದನ್ನು ಆಯುವ, ವಿಮರ್ಶಾ ಪ್ರಜ್ಞೆ ಕುವೆಂಪು ಅವರಿಗಿತ್ತು. ತಾನು ಬಹುವಾಗಿ ಮೆಚ್ಚುವ, ಅನುವಾದಿಸಿಯೂ ಇರುವ ಶೇಕ್ಸ್‌ಪಿಯರನಿಗೆ ದಾರ್ಶನಿಕ ಪ್ರತಿಭೆ ಕಡಿಮೆ ಇತ್ತು ಎಂದು ವಾದಿಸಿ ಭಾರತೀಯ ಋಷಿಯಂತೆ ಕಾಣುವ ವರ್ಡ್ಸ್‌ವರ್ತ್‌ನನ್ನು ಕುವೆಂಪು ಮೆಚ್ಚುತ್ತಾರೆ. ಟಾಲ್‌ಸ್ಟಾಯ್ ಅವರ ಶೇಕ್ಸ್‌ಪಿಯರ್ ವಿಮರ್ಶೆಯಂತೆಯೇ ಕುವೆಂಪು ಅವರ ವಿಮರ್ಶೆಯೂ ಗಮನಾರ್ಹ. ಸದ್ಯ ಪ್ರಚಾರದಲ್ಲಿರುವ ಯಾವ ಭಾವನೆಯನ್ನೂ ಕುವೆಂಪು ಕಣ್ಣುಮುಚ್ಚಿ ಸ್ವೀಕರಿಸಿದವರಲ್ಲ. ಗುರು ದೇವರೆಂದು ಭಾವಿಸುವ ಟಾಗೂರರನ್ನು ಅವರು ವಿಮರ್ಶಿಸಿದ್ದಾರೆ. ಬ್ರಹ್ಮ ಸಮಾಜ ಹಿಂದೂ ನಾಗರಿಕತೆಯ ಪುರಾಣಗಳನ್ನೆಲ್ಲ ಅವಜ್ಞೆಯಿಂದ ಕಾಣುವುದರಿಂದಾಗಿ ಟಾಗೋರರಿಗೆ ಮಹಾಕಾವ್ಯ ಬರೆಯಲು ಸಾಧ್ಯವಾಗಲಿಲ್ಲ; ಕೇವಲ ಭಾವಗೀತೆಯ ಕವಿಯಾಗಿ ತನ್ನ ಎತ್ತರಕ್ಕೆ ಅರ್ಹವಾದ ದೀರ್ಘಕೃತಿ ನಿರ್ಮಾನ ಮಾಡಲಾರದೆ ಹೋದರು ಎಂದಿದ್ದಾರೆ. ಪ್ಯೂರಿಟನ್ ಆಗಿದ್ದ ಕವಿ ಮಿಲ್ಟನ್ ಕ್ರಿಶ್ಚಿಯನ್ ಮಠಗಳ ಅಂಧಶ್ರದ್ಧೆಯನ್ನೂ, ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರೋಧಿಯಾದ ದಾಸ್ಯ ಪ್ರವೃತ್ತಿಯನ್ನೂ ಖಂಡಿಸುತ್ತಲೇ ಬೈಬಲ್ ಆಧಾರದ ‘ಪ್ಯಾರಡೈಸ್ ಲಾಸ್ಟ್’ ಬರೆದಂತೆ ಟಾಗೋರ್ ಯಾಕೆ ಬರೆಯಲಾರದೆ ಹೋದರು ಎಂದು ಪ್ರಶ್ನಿಸುತ್ತಾರೆ.

ಕುವೆಂಪು ಅವರನ್ನು ಕೇವಲ ಸಾಂಪ್ರದಾಯಿಕ ವೈದಿಕ ದೃಷ್ಟಿಯಿಂದಲೂ ಅರ್ಥಮಾಡಿಕೊಳ್ಳಲಾರೆವು. ಅಂತೆಯೇ ಕೇವಲ್ ವಿಜ್ಞಾನ ಪ್ರೇರಿತವಾದ ವೈಚಾರಿಕತೆಯಿಂದಲೂ ಅರ್ಥಮಾಡಿಕೊಳ್ಳಲಾರೆವು. ಅವರ ಪೂರ್ಣದೃಷ್ಟಿಯಲ್ಲಿ ಪೂರ್ವ ಪಶ್ಚಿಮದ ಮಿಲನ ಮಾತ್ರವಲ್ಲದೆ ವೈಜ್ಞಾನಿಕ ವೈಚಾರಿಕತೆ ಎಷ್ಟಿದೆಯೋ ಅಷ್ಟೇ ಪಾರಮಾರ್ಥಿಕ ಲೌಕಿಕ ಘಟನೆಯ ಸಂಭಾವ್ಯತೆಗೂ ಅವಕಾಶವಿತ್ತು. ಇದನ್ನು ನಾವು ಈ ಅವಸರಗಳ ಕಾಲದಲ್ಲಿ ಗ್ರಹಿಸಲಾರದೆ ಹೋಗಿದ್ದೇವೆ.

ರಾಮಕೃಷ್ಣ ಪರಮಹಂಸರನ್ನು ಒಬ್ಬ ಚಾರಿತ್ರಿಕ ವ್ಯಕ್ತಿ ಎಂದೂ, ಅಲೌಕಿಕವಾದ ದೈವೀಕ ಮಹಾಪುರುಷನೆಂದೂ ಕುವೆಂಪು ತಿಳಿಯಬಲ್ಲವರಾದ್ದರಿಂದಲೇ ಅವರಿಗೆ ನಿತ್ಯದ ಲೌಕಿಕವನ್ನೂ, ಚಿರಸತ್ಯದ ಅಲೌಕಿವನ್ನೂ, ಒಟ್ಟಾಗಿ ಗ್ರಹಿಸುವುದು ಸಾಧ್ಯವಾದದ್ದು.

ಜಿಲೇಬಿಯೆಂದರೆ ಮಕ್ಕಳಂತೆ ಇಷ್ಟಪಡುವ, ಹಾಡಿ, ಕುಣಿದು, ನಕ್ಕು ನಗಿಸಿ, ಕಥೆಯ ಮೇಲೋಂದು ಕಥೆಯನ್ನು ಹೇಳಿ, ಬ್ರಹ್ಮಸಮಾಜದ ಅನುಯಾಯಿಗಳನ್ನು ಬೆರಗುಗೊಳಿಸುವ, ಕ್ಯಾನ್ಸರ್‌ನಿಂದ ಎಲ್ಲ ಮನುಷ್ಯರಂತೆ ನರಳುವಾಗಲೂ ದೈವವಶರಾಗಿ ಸಮಾಧಿಗೇರಬಲ್ಲ ಪರಮಹಂಸರು ಏಕಕಾಲದಲ್ಲಿ ಮರ್ತ್ಯನೂ ಹೌದು, ಅವರತಾರವೂ ಹೌದು ಎಂದು ಕಾಣಲು ಸಾಧ್ಯವಾದ ಕಾಣ್ಕೆ ಕುವೆಂಪು ಅವರದು. ಇದರಿಂದಾಗಿಯೇ ಕುವೆಂಪು ದಾರ್ಶನಿಕತೆಯಲ್ಲಿರುವ ಇಹಪರಗಳ ಬೆಸುಗೆ ಸಾಧ್ಯವಾದದ್ದು. ಸೆಮಿಟಿಕ್ ಧರ್ಮಗಳಿಗೂ ಐರೋಪ್ಯ ಚಿಂತನಶೀಲತೆಗೂ ಅಸಾಧ್ಯವಾದ ಎಲ್ಲೆಲ್ಲೂ, ಎಲದರಲ್ಲೂ ದೇವರನ್ನು ಕಾಣುವ ಭಾರತೀಯ ದೃಷ್ಟಿಕೋನದ ಒಂದು ಉತ್ತಮ ನಿದರ್ಶನ ಕುವೆಂಪುರವರಲ್ಲಿ ಇದೆ.

ಕುವೆಂಪು ಹೀಗಿದ್ದೂ ಆಧುನಿಕರೂ ಹೌದು ಎನ್ನುವುದು ವಿಪರ್ಯಾಸವಲ್ಲ. ಆಪತ್ಕಾಲದಲ್ಲೋ, ಬದುಕಿನ ಆಸಾಧಾರಣ ಸಂದರ್ಭಗಳಲ್ಲೋ , ಇದ್ದಕ್ಕಿದ್ದಂತೆ ಸಾವು ಎದುರಾದಾಗಲೋ ಗಾಢವಾಗಿ ನಮ್ಮನ್ನು ಆತ್ಮಶೋಧನೆಗೆ ಹಚ್ಚುವ ಬೆರಗಿನ ವಿದ್ಯಮಾನ ಅದು. ನನ್ನ ತಾರ್ಕಿಕ ಅನುಮಾನಗಳನ್ನು ಮೀರಿ ನಾನು ಆಡಿರುವ ಮಾತು ಇದು.

ಮತೀಯತೆಯನ್ನು ಮೀರಿದ ಪಾರಮಾರ್ಥಿಕವಾದ ದೃಷ್ಟಿ ಇಟ್ಟುಕೊಳ್ಳುವುದು ಪರಮಹಂಸರಿಂದ ಕುವೆಂಪುಗೆ ಸಾಧ್ಯವಾದದ್ದು. ಮಾನವ ಜನ್ಮಿಯಾದ್ದು ದೈವ ಸದೃಶರಾದ ಪರಮಹಂಸರ ಮುಖೇನ ಮತೀಯತೆಯನ್ನೂ ಜಾತಿ ಭೇಧವನ್ನೂ ಮೀರಿದ ದೃಷ್ಟಿಯ ತನ್ನ ನೆಲೆಯಲ್ಲಿ ಕುವೆಂಪುರವರು ಪೂರ್ವ ಪಶ್ಚಿಮಗಳನ್ನು ಬೆಸೆದದ್ದು ಮಾತ್ರವಲ್ಲ-ತಾನು ಇಷ್ಟಪಡುವ ಐಹಿಕ ಘಟನೆಗಳನ್ನು ಚಿಂತನಶೀಲ ಅನುಮಾನದಿಂದಲೂ ನೋಡಬಲ್ಲವರಾಗಿದ್ದರು. ಪ್ರಗತಿಶೀಲರ ಕಾಲದಲ್ಲಿ ಪ್ರೇಮ್‌ಚಂದ್‌ರಿಂದ ಮೊದಲಾಗಿ ಭೀಷಮ್‌ಸಹಾನಿ, ಶ್ರೀ ಶ್ರೀ-ಯಾರೂ ಕಾಣದ ಅನುಮಾನದಲ್ಲಿ ಸೋವಿಯತ್ ರಷ್ಯಾದ ವ್ಯವಸ್ಥೆಯ ಸುಳ್ಳನ್ನು ಕುವೆಂಪು ‘ಕೋಗಿಲೆ ಮತ್ತು ಸೋವಿಯತ್ ರಷ್ಯಾ’ದಲ್ಲಿ ಬಲು ಸೊಗಸಾಗಿ ಕಂಡರು. ಹೀಗೆ ಇಡೀ ಒಂದು ಕಾಲವನ್ನು ಕುವೆಂಪು ಕಂಡು ಎದುರಾದ ಕ್ರಮದಿಂದಾಗಿ ಜಗತ್ತಿನ ಮುಖ್ಯ ಲೇಖಕರಲ್ಲಿ ಒಬ್ಬರಾಗುತ್ತಾರೆ.

ಕುವೆಂಪು ಕಾಲದ ನಮ್ಮ ಹಿರಿಯರು ಲೇಖಕರು ಕನ್ನಡ ಭಾಷೆ ಎದುರಿಸುತ್ತಿರುವ  ಆಧುನಿಕ ಕಾಲದ ಸವಾಲುಗಳನ್ನು ಹಲವು ದೃಷ್ಟಿಕೋನಗಳಲ್ಲಿ ಬರವಣಿಗೆಯ ವಿನ್ಯಾಸಗಳಲ್ಲಿ, ಶೈಲಿಗಳಲ್ಲಿ ಎದುರಾದರು. ಭಾಷಾ ಪ್ರಯೋಗದಲ್ಲಿ ಕನ್ನಡವನ್ನು ಹಿಗ್ಗಿಸಿ ಏನನ್ನಾದರೂ ಹೇಳಬಲ್ಲ ಭಾಷೆಯಾಗಿ ಬೆಳೆಸಿದರು. ಹೀಗೆ ಬೆಳೆಯುತ್ತ ಹೋದ ಕನ್ನಡಕ್ಕೆ ಹಿಂದಿನ ಪಂಪ, ರನ್ನ, ಕುಮಾರವ್ಯಾಸ, ವಚನಕಾರರ ನಂಟನ್ನು ಉಳಿಸಿಕೊಂಡರು. ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಪು.ತಿ.ನ., ಡಿ.ವಿ.ಜಿ., ಶ್ರೀರಂಗ, ಅಡಿಗ, ನರಸಿಂಹಸ್ವಾಮಿ-ಈ ನವರತ್ನಗಳು ಮಾಡಿರುವ ಈ ಕೆಲಸದಿಂದಾಗಿ ಕನ್ನಡ ಭಾಷೆ ತನ್ನ ಸಾತತ್ಯ ಕಾಪಾಡಿಕೊಂಡೇ ಆಧುನಿಕವಾಗಿದೆ; ಶ್ರೀಮಂತವಾಗಿದೆ.

ಈ ಹಿರಿಯರು ಯಾರೂ ಈಗ ಬದುಕಿಲ್ಲ. ಆದರೆ, ನಮ್ಮ ಮನೋಲೋಕದ ದೇವತೆಗಳಾಗಿದ್ದಾರೆ. ಕುವೆಂಪು ಶತಮಾನೋತ್ಸವದ ಸಂದರ್ಭದಲ್ಲಿ ನಾವು ತೆಗೆದುಕೊಳ್ಳಬೇಕಾದ ನಿರ್ಧಾರಗಳು ಇವು:

೧. ನಮ್ಮ ಮನೋಲೋಕದ ದೇವತೆಗಳಾದ ಲೇಖಕರನ್ನು ನಾವು ಪೂಜಿಸಿದರೆ ಸಾಲದು. ಅವರ ಕೃತಿಗಳನ್ನು ವಿಮರ್ಶಾತ್ಮಕವಾಗಿ ಅಭ್ಯಾಸಮಾಡಿ-ಕುವೆಂಪು, ಶೇಕ್ಸ್‌ಪಿಯರ್, ಟ್ಯಾಗೂರರನ್ನೂ ವಿಮರ್ಶಿಸಿದಂತೆ – ವಿಮರ್ಶಿಸಿಕೊಳ್ಳಬೇಕು. ನಮ್ಮ ಅಗತ್ಯಗಳಿಗೂ ಜರೂರುಗಳಿಗೆ ಅವರೇನು ಕೊಡಬಲ್ಲರು ಎಂಬುದನ್ನು ಶೋಧಿಸಬೇಕು.

೨. ನಮ್ಮ ಮಕ್ಕಳು ಶಾಲೆಯಲ್ಲಿ ಬೆಳೆದು ಕಾಲೇಜುಗಳಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸುವ ಮುನ್ನ ಈ ಮೇಲಿನ ಲೇಖಕರ ಕೆಲವು ಕೃತಿಗಳನ್ನಾದರೂ ಅಭ್ಯಾಸ ಮಾಡುವಂತೆ ನಮ್ಮ ಪಠ್ಯಪುಸ್ತಕಗಳನ್ನು ನಿರ್ಮಿಸಬೇಕು. ಜಾತಿ, ಪ್ರದೇಶ ಇತ್ಯಾದಿ ಒತ್ತಡಗಳಿಗೆ ಮಣಿದೋ ಅಥವಾ ರಾಜಕೀಯ ಕಾರಣಕ್ಕಾಗಿಯೋ ಅಲ್ಪವಾದ ಗುಣಮಟ್ಟದ ಪುಸ್ತಕಗಳನ್ನು ಪಠ್ಯವಾಗಿ ಮಾಡದೆ ಕನ್ನಡವನ್ನು ಕಟ್ಟಿದ ಈ ಹಿರಿಯರನ್ನು ಓದಲೇಬೇಕಾದ ವ್ಯವಸ್ಥೆ ಇರಬೇಕು.

೩. ಕುವೆಂಪು ಅವರ ಪಾರಮಾರ್ಥಿಕ ಹಾಗೂ ಲೌಕಿಕ ಆಶಯಗಳೆರಡೂ ಸಫಲವಾಗಬೇಕಾದಾದರೆ ಎಲ್ಲ ಮಕ್ಕಳಿಗೂ ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಕಲಿಸಬೇಖು. ಆದರೆ ಮಾಧ್ಯಮ ಮಾತ್ರ ಕನ್ನಡವೇ ಆಗಿರಬೇಕು.

೪. ಕರ್ನಾಟಕದ ಎಲ್ಲೆಡೆಯಲ್ಲೂ ಮೆಳ್ಳಗಣ್ಣಿನ ದೃಷ್ಟಿಯ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗಿಂತ ಒಳ್ಳೆಯ ಮಾಧ್ಯಮ ಶಾಲೆಗಳನ್ನು ತೆರೆಯಬೇಕು. ‘ಮಾದರಿ ಕುವೆಂಪು ಶಾಲೆ’ಗಳೆಂದು ಇವನ್ನು ಕರೆದು ಒಳ್ಳೆಯ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಖು.

೨೯೧೨೨೦೦೩ರಂದು ಕುವೆಂಪು ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಡಿದ ಭಾಷಣ.
ಕೃಪೆ: ಯುಗದ ಕವಿ ಜಗದ ಕವಿ.
ಸಂ ಆರ್.ಜಿ.ಹಳ್ಳಿ ನಾಗರಾಜ್.

* * *