(೧) ವಾಲ್ಟರ್ ಬೆಂಜಮಿನ್ನರನ್ನು ಗೆಳೆಯರಾದ ಪಟ್ಟಾಭಿ ಅವನ ಆಳದಲ್ಲಿ ಗುರುತಿಸಿದಂತೆ ನನೆ ತೋರುತ್ತಿಲ್ಲ. ನಾನೂ ನನ್ನ ಲೇಖನದ ಇಕ್ಕಟ್ಟಿನಲ್ಲಿ ಅವನನ್ನು ಬಳಸಿ ಅವನ ಗಾಢವಾದ ವೈಚಾರಿಕತೆಗೆ ಕೊಡಬೇಕಾದ ಮಹತ್ವ ಕೊಟ್ಟಿಲ್ಲವೆಂಬುದನ್ನು ರಾಜಶೇಖರ ಸರಿಯಾಗಿಯೇ ಗುರುತಿಸಿದ್ದಾರೆ. ಅವನು auraಕ್ಕಾಗಿ, ‘ಪ್ರಭೆ’ಗಾಗಿ ತನ್ನ ಶೋಧದಲ್ಲಿ ತೊಡಗಿದ್ದ ಎನ್ನುವುದರ ಬದಲಾಗಿ, ಈ ನಿತ್ಯ ವಾಸ್ತವದ ಅರ್ಥಲೋಕದಲ್ಲಿ ಇದ್ದೇ ಪರಮಾರ್ಥದ ಹುಡುಕಾಟದಲ್ಲೂ ಇದ್ದನೆಂಬುದನ್ನು, ಮಾರ್ಕ್ಸನಷ್ಟೇ, ಪ್ರಾಚೀನ ಯಹೂದ್ಯಸಂತರು ಅವನ ‘ಇತಿಹಾಸದ ತಾತ್ವಿಕ ಭಾಷ್ಯಗಳು’ (Thesis on the Philosophy of History) ಎಂಬ ದೀರ್ಘ ಲೇಖನದಲ್ಲಿ ಮುಖ್ಯರಾಗುತ್ತಾರೆ ಎಂಬುದನ್ನು ನಾನು ಹೇಳಬೇಕಿತ್ತು. ಇವತ್ತು ಮತ್ತೆ ಈ ದೀರ್ಘ ಭಾಷ್ಯಗಳನ್ನು ಓದುತ್ತಿದ್ದಂತೆ ಅಡಿಗರ ಭೂತ ಪದ್ಯ ನನಗೆ ನೆನಪಾಯಿತು. ಅಡಿಗರು ಬೆಂಜಮಿನ್ನರನ್ನು ಓದಿರಲಾರರು. ಅಪರೂಪದ ಸಾದೃಷ್ಯ ಅಡಿಗ ಮತ್ತು ಬೆಂಜಮಿನ್ನರ ಈ ಎರಡು ಬರಹಗಳ ನಡುವೆ ಇದೆ. ಕಷ್ಟದಲ್ಲಿ ಚೇತರಿಸಿಕೊಂಡು ಬೆಂಜಮಿನ್ ಹೇಲಿದ್ದನ್ನು ಇನ್ನಷ್ಟು ಚುರುಕಾಗಿ, ಹಗುರಾಗಿ ಅಡಿಗರು ಹೇಳುತ್ತಾರೆ. ಬೆಂಜಮಿನ್ ಮಾರ್ಕ್ಸ್‌ವಾದದ ಐರೋಪ್ಯ ಇಕ್ಕಟ್ಟುಗಳಿಂದ ಚೇತರಿಸಿಕೊಳ್ಳುವ ಶ್ರಮ ಅಡಿಗರಿಗೆ ಅನಗತ್ಯವಾದರೂ, ಅದನ್ನು ನಮ್ಮದೆಂದೇ ಭಾವಿಸಿ ದೇಶೀಯ ನೆಲೆಗಳಿಂದ ಯೋಚಿಸುವುದನ್ನು ಮರೆತು ಸೋಷಲಿಸ್ಟ್ ದೇಶಗಳಿಂದ ಮೋಸಹೋದ ಮೇಲೆ ಈಗ ಎಚ್ಚರಾಗಿ, ಹೊಸ ನೆಲೆಗಳನ್ನು ನಮ್ಮ ಪೂರ್ವಜರಿಂದ ಕಲಿಯುತ್ತಿರುವ ನನ್ನಂಥವರಿಗೆ ಬೆಂಜಮಿನ್ ಬಹಳ ಮುಖ್ಯಣಾಗುತ್ತಾನೆ.

(೨) ಈ ಭಾಷ್ಯಗಳು ಬೆಂಜಮಿನ್ ಹತಾಶನಾಗಿ ಫ್ಯಾಸಿಸ್ಟ್ ಯೂರೋಪಿನಿಂದ ಓಡಿಹೋಗಲಾರದೆ ತನ್ನ ಪ್ರಾಣವನ್ನು ತಾನೇ ಕಳೆದುಕೊಂಡ ಮೇಲೆ ಪ್ರಕಟವಾದ್ದು. ಪ್ರಗತಿಯೇ ಚರಿತ್ರೆಯ ಪರಮೋದ್ದೇಶವೆಂದೂ, ಪ್ರಕೃತಿಯನ್ನು ಏನಕೇನ ಗೆದ್ದು ಮನುಷ್ಯ ಸುಖಸಂಪತ್ತಿನಲ್ಲಿ ವಿಜೃಂಭಿಸಬೇಕೆಂದೂ ಮಾರ್ಕ್ಸ್‌ನನ್ನು ಅರ್ಥಮಾಡಿಕೊಂಡಿದ್ದ ಸ್ಟಾಲಿನ್ನಿನ ಕಮ್ಯುನಿಸ್ಟ್ ರಷ್ಯ ಹಿಟ್ಲರನ ಜೊತೆ ಒಪ್ಪಂದ ಮಾಡಿಕೊಂಡ ಬಳಿಕ ಬೆಂಜಮಿನ್ ಸತ್ತದ್ದು. ಉಣ್ಣುವ ತಿನ್ನುವ ಅಹಮಿಕೆಯನ್ನು ಮೆರೆಯುವ ಬಹ್ಯುತ್ಪನ್ನವನ್ನು ಮಾತ್ರ ಗುರಿ ಮಾಡಿಕೊಂಡ ಪ್ರಗತಿ ಕಲ್ಪನೆ ಬಂಡವಾಳಶಾಹಿ ಅಮೆರಿಕನ್ ನಾಗರಿಕತೆಗೂ, ರಷ್ಯ ಮತ್ತು ಚೀನಾ ವ್ಯವಸ್ಥೆಗಳಿಗೂ, ಗಾಂಧಿ ಅಥವಾ ಹಿಂದುತ್ವದ ಹೆಸರಿನಲ್ಲಿ ಆಳುವ ಭಾರತೀಯ ಅಧಿಕಾರಶಾಹಿಗೂ ಮುಖ್ಯವಾದ್ದರಿಂದ, ಇದನ್ನು ತೊರೆದು ಬಹುಜನಹಿತವನ್ನು, ಸಮಾನತೆಯನ್ನು, ಸೌಖ್ಯಸಮಾಧಾನಗಳನ್ನು ಬಯಸುವವರೆಲ್ಲರೂ ಹುಡುಕುವ ಪರ್ಯಾಯವನ್ನು ನಾವು ಹುಡುಕುವವರಾದರೆ ಆಗ ಮಾತ್ರ ಬೆಂಜಮಿನ್ ನಮಗೆ ಮುಖ್ಯನಾಗುತ್ತಾನೆ. ಪ್ರಕೃತಿಯನ್ನು ಗೆಲ್ಲುವ ಪ್ರಗತಿಯನ್ನು ನಿರಾಕರಿಸಿದ್ದ ಬೆಂಜಮಿನ್, ಹೆಗಲ್ ಮತ್ತು ಮಾರ್ಕ್ಸ್‌ರಿಂದ ಪಡೆಯಬೇಕಾದ್ದನ್ನು ಪಡೆದು, ಅವರಿಂದ ಕಳಚಿಕೊಂಡು, ಪ್ರಾಚೀನ ಸನ್ಯಾಸಿಗಳ ವೈರಾಗ್ಯವನ್ನು ತನ್ನ ಅಂತರಂಗದಲ್ಲಿ ಬಯಸಿದವನು. ಸರ್ವಜನ ಹಿತವನ್ನು ಇವನು ಬಯಸಿದ ರೀತಿ, ಸೈಂಟಿಫಿಕ್ ಸೊಷಲಿಸ್ಟರಾದ ಪ್ರಗತಿಶೀಲರು ಬಯಸುವ ರೀತಿ ಬೇರೆ ಬೇರೆಯಾದ್ದು, ಅಲೌಕಿಕದ ಸಾಕ್ಷಾತ್ಕಾರಕ್ಕಾಗಿಯೂ, ಹಿಟ್ಲರನ ವಿರೋಧವಾಗಿಯೂ ಏಕಕಾಲದಲ್ಲಿ ಸೆಣೆಸಿದ ಸಿಮೋನ್‌ವೇಲರನ್ನು ಬೆಂಜಮಿನ್ನರ ಪಕ್ಕದಲ್ಲಿಟ್ಟು ನಾನು ನೋಡಬಯಸುತ್ತೇನೆ. ಶೋಲೆಮ್ ಎನ್ನುವ ಅವನ ಆಪ್ತ ಸ್ನೇಹಿತನ ಪ್ರಕಾರ ಬೆಂಜಮಿನ್ ತನ್ನ ಇತಿಹಾಸದ ಮೇಲಿನ ಭಾಷ್ಯದಲ್ಲಿ ಮಾರ್ಕ್ಸ್‌ವಾದದ ಹಿಸ್ಟಾರಿಕಲ್ ಮೆಟೀರಿಲಿಯಸಂನಿಂದ ಬಿಡುಗಡೆಯಾಗಿದ್ದನೆಂದೇ ತಿಳಿಯುತ್ತಾನೆ. ಇತಿಹಾಸ ಭಾಷ್ಯದ ಒಂಬತ್ತನೇ ಭಾಗದಲ್ಲಿ ಇತಿಹಾಸವನ್ನು ಒಬ್ಬ ಏಂಜೆಲ್ ಎಂದು (ದೇವತೆ) ಎಂದು ಭಾವಿಸಿ ಬೆಂಜಮಿನ್ ಹೀಗೆನ್ನುತ್ತಾನೆ. ‘ಈ ಏಂಜಲ್‌ನ ಕಣ್ಣುಗಳು ದೊಡ್ಡದಾಗಿ ಅರಳಿವೆ. ಅವನ ಬಾಯಿ ತೆರೆದಿದೆ. ರೆಕ್ಕೆಗಳನ್ನು ಬಿಚ್ಚಿಟ್ಟುಕೋಂಡು ಯಾವುದರಿಂದಲೋ ದೂರವಾಗಲೂ ಇವನು ದಿಟ್ಟಿಸುತ್ತ ನಿಂತಿರುವಂತೆ ತೋರುತ್ತದೆ’. ಅವನ ಮುಖ ದಿಟ್ಟಿಸಿ ನೋಡುತ್ತಿರುವುದು ಭೂತಕಾಲವನ್ನು ನಾವೆಲ್ಲರೂ ಹಲವು ಘಟನೆಗಳ ಸರಪಳಿಯಾಗಿ ಕಾಣುವುದನ್ನು ಇವನು ಒಂದು ಘೋರಾತಿಘೋರ ಘಟನೆಗಳ ನಂತರದ ಘಟನೆಗಳ ಅನವರತವಾದ ಪಾಳುಬಿದ್ದ ರಾಶಿಯಾಗಿ ಕಾಣುತ್ತಾನೆ. ಅವನ ಕಾಲಿನಡಿ ಇದು ರಾಶಿರಾಶಿಯಾಗಿ ಬೆಳೆಯುತ್ತಲೇ ಇದೆ. ಒಂದು ಕ್ಷಣವಾದರೂ ನಿಶ್ಚಲನಾಗಿ, ಗಯತೆಯ ಅರ್ಥದಲ್ಲಿ ‘ಫೇರ್’ ಆಗಿ, ಸತ್ತವರನ್ನು ಎಬ್ಬಿಸಿ ಚೂರೂಚೂರಾದ್ದನ್ನು ಕೂಡಿಸಿ ಜೋಡಿಸಲು ಇವನು ಬಯಸುತ್ತಾನೆ. ಆದರೆ ಸ್ವರ್ಗದಿಂದೊಂದು ಬಿರುಗಾಳಿ ಬೀಸುತ್ತ ಇದೆ. ಇವನ ಬಿಚ್ಚಿದ ರೆಕ್ಕೆಗಳನ್ನು ಈ ಬಿರುಗಾಳಿ ತುಂಬಿದೆ. ಇವನು ರೆಕ್ಕೆಗಳನ್ನು ಮಡಚಲಾರ. ತಡೆಯಲಾರದಷ್ಟು ತೀವ್ರವಾಗಿ ಈ ಬಿರುಗಾಳಿ ಭವಿಷ್ಯಕ್ಕೆ ಬೆನ್ನು ತಿರುಗಿಸಿದವನನ್ನು ಬೀಸಿ ತಳ್ಳಿ ಒಯ್ಯುತ್ತದೆ. ಆದರೆ ಅವನ ಮುಖದಿದಿರು ಬಿದ್ದಿರುವ ಪಾಳು ಕಸದ ರಾಶಿ ಮುಗಿಲೆತ್ತರಕ್ಕೆ ಬೆಳೆಯುತ್ತಲೇ ಹೋಗುತ್ತದೆ. ನಾವು ಪ್ರಗತಿಯೆಂದು ಕರೆಯುವುದು ಈ ಬಿರುಗಾಳಿಯನ್ನು.

(೩) ಅವನ ಮೊದಲ ಭಾಷ್ಯದಲ್ಲಿ ಛೆಸ್ ಆಟದೊಂದು ಚಿತ್ರವಿದೆ. ಈ ಆಟದಲ್ಲಿ ಸದಾ ಗೆಲ್ಲುವುದು ಮಾರ್ಕ್ಸ್‌ವಾದಿಗಳು ಕರೆಯುವ `historical materialism’ ಎಂದು ಕಂಡರೂ, ಈ ಗತಿತಾರ್ಕಿಕವಾದ ತಾನೇ ಆಡುತ್ತಿರುವಂತೆ ಕಾಣುವ, ಜೊತೆಗೇ ಹಾಗೆಂದು ಭಾವಿಸಿಕೊಂಡಿರುವ, ಒಂದು ಪಪೆಟ್ ಮಾತ್ರ. ಯಾವ ಎದುರಾಳಿಯನ್ನಾದರೂ ಸೋಲಿಸಬಲ್ಲಂತೆ ಇದನ್ನು ನಿಯಂತ್ರಿಸುತ್ತಿರುವುದು ಕಣ್ಣಿಗೆ ಕಾಣಿಸದಂತೆ ಈ ಛೆಸ್ ಪಂದ್ಯದ ನಿರ್ವಹಣೆಮಾಡುತ್ತಿರುವ ಒಬ್ಬ ಕುಬ್ಜ. ಅದು ಅಡಗಿ ಕೂತಿರುವ ಥಿಯಾಲಜಿ.

(೪) ಈ ಭಾಷ್ಯಗಳ ಒಳಾರ್ಥಗಳನ್ನು ನಾನಿನ್ನೂ ಪೂರ್ಣವಾಗಿ ಗ್ರಹಿಸಿಲ್ಲ. ಸ್ವಹಿತ ಚಿಂತನೆಯಲ್ಲೂ ಕೇವಲ ಮಾನವಕೇಂದ್ರಿತ ಆಸಕ್ತಿಗಳಲ್ಲೂ ತತ್ಪರನಾಗದೆ, ನಮ್ಮ ನಡುವಿನ ದುಃಖಕ್ಕೆ ಮಿಡಿಯುತ್ತ, ಅನ್ಯಾಯ ದೌರ್ಜನ್ಯಗಳ ವಿರುದ್ಧ ಹೋರಾಡುತ್ತ, ಭೂತಕಾಲವನ್ನು ಪ್ರಗತಿಶೀಲ ಹುರುಪಿನಲ್ಲಿ ಅಲ್ಲಗೆಳೆಯದೆ, ಸಲೀಸಾದ ವಿಸ್ಮರಣೆಯಲ್ಲಿ ಆಗಿ ಹೋದದ್ದನ್ನು ಕಳೆದುಕೊಳ್ಳದೆ, ನಮ್ಮ ಈಗಿನ ದುಷ್ಟಕಾಲಕ್ಕಿಂತಲೂ ಹೆಚ್ಚು ದುಷ್ಟವಾದ, ಅಥವಾ ಹಾಗೆಂದುಕೊಳ್ಳುವುದೂ ಅರ್ಥ-ಹೀನವಾದ, ಕಾಲದಲ್ಲಿ ದಾರ್ಶನಿಕನಾಗಿ ಬದುಕಿ ತನ್ನ ನಲವತ್ತ ಎಂಟನೇ ವಯಸ್ಸಿನಲ್ಲಿ ಸತ್ತವನು ವಾಲ್ಟರ್ ಬೆಂಜಮಿನ್. ವೇದವ್ಯಾಸರ ಕಾಲದಿಂದಲೂ, ಅವರುತಿಳಿದಂತೆಯೇ, ದುಷ್ಟತನ ಅವ್ಯಾಹತವಾಗಿ ಗೆಲ್ಲುತ್ತ ಗದ್ದುಗೆಯೇರುತ್ತ ಹರಿದು ಬಂದಿದೆ; ಹಾಗೆಯೇ, ಮಹಾಭಾರತವನ್ನು ಬರೆದವರು ಮಾತ್ರವಲ್ಲದೆ ಅದರಲ್ಲೊಬ್ಬ ಪಾತ್ರಧಾರರೊ ಆದ ಈ ಕವಿ ತಿಳಿದಂತೆಯೇ, ಒಳಿತಿನ ಹಂಬಲವೂ ಗೆಲ್ಲಲು ಹೆಣಗಾಡುತ್ತ, ಕನಸುಗಳನ್ನುಕಾಣುತ್ತ ಹರಿದು ಬಂದಿದೆ. ಹಿಂದಿನ ಒಳಿತಿನ ಬಯಕೆಯ ಇತಿಹಾಸವನ್ನು, ಅದು ಪಟ್ಟ ಸೋಲು ಸಂಕಟಗಳನ್ನು ನೋಡಿ ಮುಂದನ್ನು ಕಟ್ಟು; ಎಲ್ಲ ಸಲೀಸಾಗುವ ಸ್ವರ್ಗದ ಭವಿಷ್ಯದ ಕನಸನ್ನು ಮಾತ್ರ ಕಾಣಬೇಡ ಎಂದು ಹೇಳುತ್ತಿದ್ದ, ಭರವಸೆಯ ಜೊತೆಯೇ ವ್ಯಾಕುಲವನ್ನೂ ಮೈಗೂಡಿಸಿಕೊಂಡಿದ್ದ ಬೆಂಜಮಿನ್ನರನ್ನು ನನ್ನ ಗೆಳೆಯರಾದ ಪಟ್ಟಾಭಿ ಮತ್ತು ರಾಜಶೇಖರರ ನಡುವಿನ ಸಂವಾದದಲ್ಲಿ ಬೆಳೆಸಿಕೊಳ್ಳಲು ಬಯಸುತ್ತೇನೆ.

(೫) ಇನ್ನು ನನ್ನ ರೂಪಕ ಭಾಷೆಯ ಬಗ್ಗೆ ಪಟ್ಟಾಭಿ ಹೇಳುವ ಮಾತು. ಅವರಷ್ಟು ಸಾಮಾಜಿಕ ಸಂಘರ್ಷಗಳಲ್ಲಿ ಕ್ರಿಯಾಶೀಲನಾಗಲಾರದಿದ್ದರೂ, ಅವರಷ್ಟೇ ಮತಾಂಧತೆಯನ್ನು ದ್ವೇಷಿಸುವ ನಾನು ನನ್ನ ಅಂತಃಕರಣದಲ್ಲಿ ಅದೃಷ್ಟವಶಾತ್ ಮೂಡಿಬರುವ ಸಾಂಕೇತಿಕವಾದ ವೈಚಾರಿಕತೆಯನ್ನು ಕಳೆದುಕೊಳ್ಳಕೂಡದು. ಯಾಕೆಂದರೆ ಅದೂ ಒಂದು ಸತ್ಯಕ್ಕೆ ಹತ್ತಿರವಾಗಲು ನನ್ನಲ್ಲಿ ಇರುವ ಸಾಧನ. ಪಟ್ಟಾಭಿಯಂತಹವರಿಗೂ ಅವರ ಸಮಾಧಾನದ ಘಳಿಗೆಗಳಲ್ಲಿ, ಅವರ ಹಿನ್ನೋಟದ ಅಗತ್ಯಗಳಲ್ಲಿ ಹತ್ತಿರವಾಗಲು ನಾನು ಆಗೀಗ ಅದೃಷ್ಟವಶಾತ್ ಹೊಳೆಯಿಸಿಕೊಳ್ಳಬಲ್ಲ ಸಾಧನ.

(೬) ಇಲ್ಲಿನ ಹಲವು ಲೇಖನಗಳಲ್ಲಿ ನಾನು ಹೇಳುತ್ತಿರುವುದಲ್ಲ. ಹೇಳಿಕೊಳ್ಳುತ್ತಿರುವುದು ಎಂಬುದು ಓದುಗರಿಗೆ, ಮುಖ್ಯವಾಗಿ ಪಟ್ಟಾಭಿಗೆ, ತಿಳಿಯುವುದು ಮುಖ್ಯವೆನ್ನಿಸಿದ್ದರಿಂದ ಈ ಎಲ್ಲ ವಿವರಣೆ. ನನ್ನನ್ನು ನಾನೇ ನಿರಾಕರಿಸುತ್ತ ಬರೆದುಕೊಳ್ಳುವುದು ಗೊಂದಲಹುಟ್ಟಿಸುವುದಕ್ಕಲ್ಲ. ಸತ್ಯ ಹೊಳೆಯಲು ಬೇಕಾದ ಅವಕಾಶಕ್ಕಾಗಿ. ಇದನ್ನು ರಾಜಶೇಕರರು ತಮ್ಮದೇ ರೀತಿಯಲ್ಲಿ ಗುರುತಿಸಿದ್ದಾರೆ.

(೭) ಗೆಳೆಯ ರಾಜಶೇಖರರ ಮುಕ್ತ ಮನಸ್ಸಿನ ಒಪ್ಪಿಗೆಗೂ, ಅವರ ಒಂದು ಟೀಕೆಗೂ, ಪಟ್ಟಾಭಿಯ ತೀವ್ರ ದುಗಡದ ಪ್ರತಿಕ್ರಿಯೆಗೂ ನಾನು ಋಣಿಯಾಗಿದ್ದೇನೆ. ನನ್ನ ಮಾತು ಓದುಗರಲ್ಲಿ ಮುಂದುವರಿಯುವಂತೆ ಅವರು ವಿಭಿನ್ನ ರೀತಿಯಲ್ಲಿ ಸಹಕರಿಸಿದ್ದಾರೆ.

(೮) ರಾಜಶೇಖರರನ್ನು ಮತ್ತೆ ಓದಿದ ಮೇಲೆ ಬೆಂಜಮಿನ್ನನ ಬಗ್ಗೆ ಇಷ್ಟು ದೀರ್ಘ ವ್ಯಾಖ್ಯೆಯನ್ನು ನಾನು ಬರೆಯುವುದು ಅಗತ್ಯವಿರಲಿಲ್ಲ ಎನ್ನಿಸುತ್ತಿದೆ.

(೯) ಫಣಿರಾಜ್ ಪ್ರತಿಕ್ರಿಯೆಗೆ ನಾನು ಯಾಖೆ ಋಣಿಯೆನ್ನುವುದನ್ನು ಹೇಗೆ ಹೇಳಬೇಕೆಂದು ಯೋಚಿಸುತ್ತಿದ್ದೇನೆ. ನನ್ನ ಬರವಣಿಗೆಯ ಕೊರತೆಯೊಂದನ್ನು ಅವರು ತುಂಬಿದ್ದಾರೆ. ನಾನು ಭಾವವಶನಾಗಿಯೋ, ನನ್ನ ಬಾಲ್ಯದ ಧಾರ್ಮಿಕ ನೆನಪುಗಳಿಗೆ ಆತುಕೊಂಡೋ ಸದ್ಯದ ಸಂದಿಗ್ಧಗಳನ್ನು ದಾಟುವ ಅಸಮರ್ಪಕತೆಯನ್ನು ನಾನು ಹುಟ್ಟಿಸುವ ನಿರೀಕ್ಷೆಗಳ ಮುಖೇನವೇ ಅವರು ಆಳವಾಗಿ ಚರ್ಚಿಸಿದ್ದಾರೆ. ಉತ್ತರ ಕೊರಿಯಾ ಬಗ್ಗೆ ನಾನು ಬರೆದದ್ದು ಈ ಪುಸ್ತಕದಲ್ಲಿ ಇಲ್ಲ. ಆದರೆ ನಾನು ಅವರು ಅಣಕದಲ್ಲಿ ಹೇಳಿದ್ದನ್ನೂ ಹೇಳಬಹುದಿತ್ತು. ಈಗ ನಾನು ಹೇಳುವುದು ಎಷ್ಟು ನಿಜವೋ ಅದೂ ಅಷ್ಟೇ ನಿಜವಾಗಬಹುದಿತ್ತು. ಆದರೆ ಎರಡು ವಾದಗಳು ನಿಜವೆನ್ನಿಸಿದರೂ ಅರ್ಧ ಸತ್ಯಗಳು ಅಲ್ಲ; ಕೂಡಿ ಇಡಿಯಾಗುವುದೂ ಇಲ್ಲ. ಹೀಗೆ ಹೇಲಿ ಏನನ್ನೂ ನನ್ನ ತುರ್ತಿಗೆ ಮುಖ್ಯವಾಗುವಂತೆ ಹೇಳಿದಂತಾಗುವುದಿಲ್ಲ.

ನಿಜ. ಆದರೆ ನನ್ನ ಅಧ್ವಾನಿಜೀಗೆ ಒಂದು ಕಿವಿಮಾತು ಎನ್ನುವಲ್ಲಿ ನಾನುಯಾಜ್ಞವಲ್ಕ್ಯರನ್ನು ನನ್ನ ಸಾಮಾನ್ಯ ಅಜ್ಜಿಯ ಜೊತೆ ಬಳಸುವುದು, ಈ ಮೂಲಕ ನಾನೂ ಅಸಾಮಾನ್ಯನೆಂದು ತಿಳಿದ ಋಷಿಯೊಬ್ಬನನ್ನು ನನ್ನ ಅಜ್ಜಿಯ ಜೊತೆ ಪರಂಪರೆಯಲ್ಲಿಡುವುದು, ಇದು ಹಿಂದುತ್ವವಾದಿಯಾದ ಅಧ್ವಾನಿಜೀಗೆ ಹೇಳುವುದು, ಹೀಗೆ ಹೇಳುವುದರಲ್ಲೇ ಯಾಜ್ಞವಲ್ಕ್ಯರ ಬಗ್ಗೆ ನನಗಿರುವ ಬೆರಗಿನ ಗೌರವನ್ನು ವಕ್ರಗೊಳಿಸಿ ಮಿಂಚಿಸಿಕೊಳ್ಳುವುದು-ನನಗೆ ಸಾಧ್ಯವಾಗಿದೆ ಎಂದು ಫಣಿರಾಜರಿಗೆ ಅನ್ನಿಸಬಹುದೇನೋ?

ಪದ್ಯಗಳನ್ನು ಬರೆದವನೋ ಡಿಫಂಡ್ ಮಾಡಬಾರದು. ನಿಜವೆಂದರೆ, ಈಗಲೂ ಸಾರ್ವಜನಿಕ ಸಭೆಗಳಲ್ಲಿ ಜನರನ್ನು ತಲುಪುವಂತೆ ಮಾತಾಡುವುದನ್ನು ನನ್ನ ಸೋಷಲಿಸ್ಟ್ ಪಕ್ಷದ ಜೊತೆಗಿನ ಸಹವಾಸದಿಂದ ರೂಢಿಸಿಕೊಂಡ ನನಗೆ ಗೊತ್ತಾಗದಂತೆ (ಗೊತ್ತಿದ್ದೂ ಗೊತ್ತಾಗದಂತೆ?) ಹುಸಿ ಹಿಂದುತ್ವದಿಂದ ಪ್ರಭಾವಿತರಾದವರನ್ನು ಗೆಲ್ಲುವ ರಾಜಕೀಯ ಉಪಾಯವಾಗಿಯೂ, ಅಷ್ಟೇ ಅಲ್ಲದೆ ನನ್ನ ಅಂತರಂಗದ ತುಡಿತವಾಗಿಯೂ ಪೂರ್ವಸೂರಿಗಳು ನನ್ನ ಬರಹದ ಒಳಗೆ ಬರುತ್ತಿರಬಹುದು ಎಂದು ನನಗೆ ಅನುಮಾನ ಬರುವಂತೆ ಫಣಿರಾಜ್ ವಾದಿಸಿದ್ದಾರೆ. ಆಧ್ಯಾತ್ಮ ಕೇವಲ ‘ಉಪಾಯ’ವಾದರೆ, (ಎರಡು ಅರ್ಥದಲ್ಲೂ ಉಪ+ಆಯ, ಹತ್ತಿರಾಗುವುದು; ಮತ್ತು ಮಾತಿನಲ್ಲಿ ಎದುರಾಳಿಯನ್ನು ಗೆಲ್ಲುವ ಸಾಧನ) ಅದು ಒಂದೋ ಅಸಮರ್ಪಕವಾಗಿಯೇ ಉಳಿಯುತ್ತದೆ, ಅಥವಾ ಕಿಲುಬುಗೊಳ್ಳುತ್ತದೆ. ಈ ಅಪಾಯ ನನಗೆ ಗೊತ್ತಿಲ್ಲವೆಂದಲ್ಲ. ಆದರೆ ಬರವಣಿಗೆಯಲ್ಲಿ ಗುರಾಣಿ ಬಳಸದೆ ಬೆತ್ತಲಾಗಬೇಕು. ಅದರ ತುಡಿತವೂ ನನ್ನಲ್ಲಿದೆ.

ತನ್ನ ಅನುಭವಗಳನ್ನೇ ನನ್ನ ಸಂದರ್ಭದಲ್ಲಿ ತಂದು ಅವರು ಬರೆದಿರುವುದು ಅಪೂರ್ವವಾದ ಒಂದು ಲೇಖನವಾಗಿಬಿಟ್ಟಿದೆ. ಇಂತಹ ಒಂದು ಬರವಣಿಗೆಯನ್ನು ನನ್ನ ಪುಸ್ತಕ ಪ್ರೇರೇಪಿಸಿರುವುದು ನನ್ನ ಬರವಣಿಗೆಯ ಸಾಧನೆಯೆಂದು ತಿಳಿದು ಲೇಖಕನಾಗಿ ನನಗೆ ಖುಷಿಯಾಗಿದೆ.

ಫಣಿರಾಜರ ಟೀಕೆಯಿಂದ ನಾನು ಹಿಗ್ಗಿದ್ದೇನೆ; ನನ್ನ ವಿಚಾರಗಳು ಹಿಗ್ಗಿವೆ.

* * *