ನಮ್ಮನ್ನು ಕಾಯುವ ವಿವೇಕ, ಸಂಸ್ಕೃತಿಯ ಸಾತತ್ಯ, ಸಾವಿರ(ಗಟ್ಟಲೆ) ವರ್ಷಗಳ ಪರಂಪರೆ-ಮುಂತಾದವು ಉಂಟು ಎಂದರೆ ಉಂಟು, ಇಲ್ಲ ಎಂದರೆ ಇಲ್ಲ. ತಾನುಂಟೋ ಮೂರು ಲೋಕವುಂಟೋ ಎಂಬ ಧಿಮಾಕಿಗೂ ಸಾವಿರಗಟ್ಟಲೆ ವರ್ಷಗಳ ಪರಂಪರೆ ಖಂಡಿತ ಇದ್ದೀತು.

ಇದೇ ಅಕ್ಟೋಬರ್ ಒಂದರಿಂದ ತೊಡಗಿ ಎರಡು ವಾರ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪ್ರದೇಶಗಳನ್ನು ನಡುಗಿಸಿದ ಭೀಕರ ವಿದ್ಯಮಾನವೊಂದು ಸದ್ದಿಲ್ಲದೇ ನಡೆಯಿತು. ತಥಾಕಥಿತವಾಗಿ ಅದನ್ನು ಕೋಮುಗಲಭೆ ಎಂದೇ ಹೆಸರಿಸಿ ನಿವಾರಿಸಿಕೊಳ್ಳಲಾಯಿತು. ಆದರೆ, ಸುಮಾರು ಒಂದು ವಾರ ಕಾಲ ಮನೆಗಳಿಗೂ, ಆಸ್ಪತ್ರೆ ಮದ್ರಸಾ ಮಸೀದಿಗಳಿಗೂ, ದೇವಸ್ಥಾನ ಅಂಗಡಿಗಳಿಗೂ ತಿರುಗಿ ನಾವು ಸಂಗ್ರಹಿಸಿದ ಮಾಹಿತಿಗಳ ಪ್ರಕಾರ, ಕರ್ನಾಟಕದಲ್ಲಿ ಭೀಕರ ಹೊಸ ಅಧ್ಯಾಯವೊಂದರ ನಿರ್ವಿಣ್ಣ (clinical) ಅನಾವರಣವೊಂದು ನಮಗೆ ಕಂಡುಬಂತು. ನಾನು, ಜಿ.ರಾಜಶೇಖರ್ ಮತ್ತು ಹರ್ಷದ್ ವರ್ಕಾಡಿ ಜೊತೆಗೂಡಿ ಸಂಗ್ರಹಿಸಿದ ಮಾಹಿತಿಗಳನ್ನು ಆಧರಿಸಿ ವರದಿಯೊಂದು ಮೂರು ಕಂತುಗಳಲ್ಲಿ ಗೌರಿ ಲಂಕೇಶ್ ಸಂಪಾದಕತ್ವದ ಲಂಕೇಶ್‌(ನವೆಂಬರ್ ೧,೮,೧೫ರ) ಸಂಚಿಕೆಗಳಲ್ಲಿ ಪ್ರಕಟವಾಗಿದೆ. ಮಸೀದಿಯೊಂದರ ಒಳಗೆ ಹಾಗೂ ಬೀದಿಯ ಮೇಲೆ ನಡೆದ ಗಫೂರ್ ಮತ್ತು ಇಬ್ರಾಹಿಂ ಎಂಬ ಮುಸ್ಲಿಮರಿಬ್ಬರ ಭೀಕರ ಕೊಲೆಗಳು, ಹದಿನೈದಕ್ಕೂ ಮಿಕ್ಕು ಮುಸ್ಲಿಮರ, ಒಬ್ಬಿಬ್ಬರು ಮುಸ್ಲಿಮೇತರರ ಮಾರಣಾಂತಿಕ ಇರಿತಗಳು; ನೂರಾರು ಮುಸ್ಲಿಮರು ಹಾಗು ನಾಲ್ಕಾರು ಮುಸ್ಲಿಮೇತರರು ಮತ್ತೆಂದೂ ಚೇತರಿಸಿಕೊಳ್ಳಲಾಗದಂತೆ ಉಂಟಾಗಿರುವ ಅಪಾರ ಆಸ್ತಿಪಾಸ್ತಿ ಲೂಟಿ ಮತ್ತು ಹಾನಿ: ಬಹಳಷ್ಟು ಮುಸ್ಲಿಮರು ಆಚರಿಸುವ ಪವಿತ್ರ ರಮಜಾನ್ ಉಪವಾಸ ಆಚರಣೆ ಹಾಗು ಬಿರುಸಿನ ರಮಜಾನ್ ವ್ಯಾಪಾರ ವಹಿವಾಟುಗಳ ಮೇಲೆ ಕೇಂದ್ರೀಕೃತಗೊಂಡ ಹಲ್ಲೆ; ಹಾಗೂ, ಬಜ್ಜೆಯಲ್ಲಿ ಶಾರದಾ ಮಾತೆಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಬಪ್ಪ ಬ್ಯಾರಿಯ ಟ್ಯಾಬ್ಲೋ ಮೆರವಣಿಗೆಯನ್ನು ಮುಸ್ಲಿಮರು ತಡೆಹಿಡಿದಿದ್ದಾರೆ, ಮತ್ತು ಕುದ್ರೋಳಿಯಲ್ಲಿ ಅಕ್ರಮ ದನಸಾಗಾಟದ ವ್ಯಾನೊಂದು ದಿಕ್ಕಾಪಾಲಾಗಿ ಓಡಿ ಮಹಿಳೆಯೊಬ್ಬಳನ್ನು ಮಾರಣಾಂತಿಕವಾಗಿ ಘಾಸಿಗೊಳಿಸಿ ಎರಡು ವಾಹನಗಳಿಗೆ ಢಿಕ್ಕಿ ಹೊಡೆದು ಪರಾರಿಯಾಯಿತು ಎಂಬ, ಇಡೀ ವಿದ್ಯಮಾನವನ್ನು ಹುಟ್ಟಿಸಿ ಸಾಕಿ ಕೊಬ್ಬಿಸಿದ, ಎರಡು ಚಿಲ್ಲರೆ ಗಾಳಿ ಸುದ್ದಿಗಳ (ಮಾಧ್ಯಮ ಘೋಷಿತ) ಮಾಹಿತಿ ಕ್ರಾಂತಿ-ಇವು ಮಾತ್ರವೇ ಈ ವಿದ್ಯಮಾನದ ವಿವರಗಳಲ್ಲ.

ನಮಗೆ ಕಂಡಂತೆ ಈ ಇಡೀ ವಿದ್ಯಮಾನವನ್ನು ಆಳಿದ ಮುಖ್ಯ ಸೂತ್ರಗಳು ಈ ಕೆಳಗಿನಂತಿವೆ;

೧) ತಲೆಬುಡವಿಲ್ಲದ ಗಾಳಿ ಸುದ್ದಿಗಳನ್ನು ಪರಮಸತ್ಯಗಳನ್ನಾಗಿ ಪರಿವರ್ತಿಸುವ/ಪ್ರವರ್ತಿಸುವ ಹೊಸ ವ್ಯಾಕರಣ/ಭಾಷೆ ಹಾಗೂ ಬೃಹತ್ ಕೈಗಾರಿಕೆಯ ವ್ಯಾಪಕ ಕಾರ್ಯಾಚರಣೆ;

(ಅ) ವಿಭಜಿತ ದಕ್ಷಿಣ ಕನ್ನಡದಲ್ಲಿ ಈಗ ಒಂದೂವರೆ ದಶಕದಿಂದ ಅವ್ಯಾಹತವಾಗಿ, ಹಾಗೂ ಕಳೆದ ಏಳೆಂಟು ವರ್ಷಗಳಿಂದ ಉಗ್ರವಾಗಿ, ಮಾರಣಾಂತಿಕವಾಗಿ ಇದು ಚಾಲ್ತಿಯಲ್ಲಿದೆ. ದನ ಸಾಗಾಟ, ಹಾಗೂ ಹುಡುಗ ಹುಡುಗಿಯರ ಮಾತುಕತೆಗಳು-ಎಂಬ ಎರಡೇ ವಿರಗಳು ಇದರ ಬಂಡವಾಳಗಳು. ಉದಾಹರಣೆಗೆ, ‘ಮುಸ್ಲಿಮನೊಬ್ಬ’ ಎಂದು ಇತರರು ಇತ್ತೀಚೆಗೆ ಬಳಸುತ್ತಿರುವ ಪದದ ಬದಲಾಗಿ, ಉದಯವಾಣಿ ಪತ್ರಿಕೆಯ ನೇತೃತ್ವದಲ್ಲಿ ರೂಢಿಸಲಾಗಿರುವ ಹೊಸ ವ್ಯಾಕರಣ/ಭಾಷೆಯಲ್ಲಿ ಚಾಲ್ತಿಯಲ್ಲಿರುವುದು ‘ಅನ್ಯ ಮತೀಯನೊಬ್ಬ’ ಎಂಬ ಪದ/ಪರಿಕಲ್ನೆ. ಆದರೆ ಭಾರತದ ಘನ ಸಂಹಿತೆಯಾದ ಸಂವಿಧಾನದ ಪ್ರಕಾರ, ಭಾರತೀಯರೆಲ್ಲರೂ `We the people of India, that is Barath.’ ಉದಯವಾಣಿಯ ಭಾಷಾಕೋಶ ಎಷ್ಟು ಅಸ್ಖಲಿತವೂ ಸಂಪದ್ಭರಿತವೂ ಆಗಿದೆಯೆಂದರೆ, ‘ಮುಸ್ಲಿಮನೊಬ್ಬ’ ಎಂಬ ಪದ/ಪರಿಕಲ್ಪನೆಗೆ ಉದಯವಾಣಿ ದೇಣಿಗೆ ನೀಡಿರುವ ಬಾಹುಳ್ಯದ ಪ್ರಕಾರ, ಭಯೋತ್ಪಾದಕನೊಬ್ಬ, ಜನದ್ರೋಹಿಯೊಬ್ಬ, ಹಿಂದೂ ಧರ್ಮದ ಹಂತಕನೊಬ್ಬ, ಕ್ರೂರ ಮೃಗವೊಬ್ಬ, ವ್ಯಭಿಚಾರಿಯೊಬ್ಬ, ಪರದೇಸಿಯೊಬ್ಬ, ದೇವರ ಶತ್ರವೊಬ್ಬ ಎಂಬಿತ್ಯಾದಿ ಹಲವಾರು ಅರ್ಥಗಳಲ್ಲಿ ಅದು ಮುದ್ರಣ ಭಾಷೆಯಾಗಿ ಬಳಕೆಯಾಗುತ್ತದೆ. ದನಗಳನ್ನು ಮುಂದಿಟ್ಟುಕೊಂಡು ಜನರನ್ನು ಒಡೆದು ಆಳುವ, ದನಗಳ ಮೇಲೆಯೇ ಅವಲಂಬಿತವಾಗಿರುವ ಉದಯವಾಣಿಯನ್ನು ದನಪತ್ರಿಕೆ ಎಂದೇ ಕರೆಯಬಹುದಾಗಿದೆ.

೨) ನಿರ್ವಿಣ್ಣ (clinical) ಪ್ರಯೋಗಕ್ಕೆ ತತ್‌ಕ್ಷಣ ಒದಗಿ ಬರುವಂತೆ ಸಮೂಹ ನಾಶದ ಅಸ್ತ್ರಗಳ ಜಮಾವಣೆ.

ನಾವು ಮೇಲಿಂದ ಮೇಳೆ ಗಮನಿಸಿದಂತೆ, ಪೆಟ್ರೋಲ್, ಸೀಮೆಎಣ್ಣೆ, ಸೋಡಾ ಬಾಟ್ಲಿಗಳು, ಸೈಜುಗಲ್ಲುಗಳು, ಮರದ ಸೋಂಟೆಗಳು, ಕಬ್ಬಿಣದ ರಾಡುಗಳು, ತಲವಾರುಗಳು, ಹೊಸ ನಮೂನೆಗಳ ಚೂರಿಗಳು-ಭಜರಂಗದಳ ಹಾಗೂ ಶ್ರೀರಾಮ-ಸೇನೆಗಳು ಸಂಗ್ರಹಿಸಿಟ್ಟುಕೊಂಡಿರುವ,ಯಾವುದೇ ಸಂದರ್ಭದಲ್ಲಿ ಎಲ್ಲೆಂದರಲ್ಲಿ ತತ್‌ಕ್ಷಣದ ಉಪಯೋಗಕ್ಕೆ ಒದಗುವ ಸಮೂಹ ನಾಶದ ಹತ್ಯಾರುಗಳು. ಇವಕ್ಕೆ ಪೊಲೀಸರ/ಸರಕಾರದ ಶ್ರೀ(ರಾಮ)ರಕ್ಷೆಯೂ ಇದೆ. ನಿಜ ಎಂದರೆ ಕರಾವಳಿಯಲ್ಲಿ ಒಂದು ಬದಲೀ ಸರಕಾರವೇ, ನ್ಯಾಯ ವ್ಯವಸ್ಥೆಯೇ ಚಾಲ್ತಿಯಲ್ಲಿದೆ. ಬಜ್ಪೆಯಲ್ಲಿ ಇದೇ ಅಕ್ಟೋಬರ್ ಮೊದಲ ವಾರದಲ್ಲಿ ನಡೆದ ಶಾರದಾ ಉತ್ಸವದ ಟ್ಯಾಬ್ಲೊ ಮೆರವಣಿಗೆ ಕೂಡಾ ಇದಕ್ಕೊಂದು ಉದಾಹರಣೆ; ಬಜ್ಪೆಯೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೪೪ನೇ ಸೆಕ್ಷನ್ ಜಾರಿಯಲ್ಲಿದೆ; ರಾತ್ರಿ ಗಂಟೆ ಹನ್ನೊಂದು; ಬಜ್ಪೆಯ ಬೀದಿಯಲ್ಲಿ ಹಠದ ಮೇಲೆ ಶಾರದಾ ಉತ್ಸವದ ಮೆರವಣಿಗೆ ನಡೆಯುತ್ತದೆ; ೫೦೦-೬೦೦ರಷ್ಟು ಜನರು ಮೇಲೆ ಕಾಣಿಸಲಾದ ಹತ್ಯಾರುಗಳನ್ನು ಭೀಕರವಾಗಿ ಬೀಸುತ್ತಾ ಶಾರದಾ ಮೆರವಣಿಗೆ ನಡೆಸುತ್ತಾರೆ; ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇವರೆಲ್ಲರೂ ಮೆರವಣಿಗೆಯ ಮುಂಭಾಗದಲ್ಲಿ ಭಕ್ತಿ ಭಾವದಿಂದ ನಡೆಯುತ್ತಿದ್ದಾರೆ; ಮುಸ್ಲಿಮರ ಏಳೆಂಟು ಅಂಗಡಿಗಳೂ ಒಂದೆರಡು ಮುಸ್ಲಿಮೇತರ ಅಂಗಡಿಗಳೂ ವ್ಯವಸ್ಥಿತವಾಗಿ ಬೆಂಕಿಗೆ ಆಹುತಿಯಾಗಿವೆ. ಬಜ್ಪೆ ಮಸೀದಿಯೆದುರು ಇಡೀ ಗುಂಪು ಹುಚ್ಚೆದ್ದು ಪಿಶಾಚ ನರ್ತನಗೈಯ್ಯುತ್ತದೆ; ಪೊಲೀಸ್ ವರಿಷ್ಠಾಧಿಕಾರಿಯವರ ಪೂರ್ವಷರತ್ತಿನಂತೆ, ಬಜ್ಪೆಯ ಹೆಚ್ಚೂ ಕಡಿಮೆ ಎಲ್ಲ ಮುಸ್ಲಿಮರೂ ಈ ಮಸೀದಿಯೊಳಗೆ ಹೊರಗೇಟಿನ ಬೀಗ ಹಾಕಿಕೊಂಡು, ಒಳಬಾಗಿಲ ಬೀಗವನ್ನೂ ಹಾಕಿಕೊಂಡು ಕೂತಿದ್ದಾರೆ; ಮಸೀದಿಯೊಂದೇ ಅವರ ರಕ್ಷಣೆಯ ತಾಣವಾಗಿದೆ, ಏಕೆಂದರೆ ಅದನ್ನು ಸದ್ಯಕ್ಕೆ ಜೈಲನ್ನಾಗಿ ಪರಿವರ್ತಿಸಲಾಗಿದೆ-ನಾವು ಕಂಡ ವಿಡಿಯೋ ಚಿತ್ರಣದಲ್ಲಿ ಇವಿಷ್ಟೂ ಯಥಾವತ್ತಾಗಿ ದಾಖಲಾಗಿವೆ.

೩) ಮಾರಣಾಂತಿಕ ಭೀತಿಯೇ ಉಂಡು ಉಡಬೇಕಾದ ದಿನಂಪತ್ರಿಯ ಸತ್ಯ ಎಂದು ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ನೆಲೆಯೂರಿಸುವ ಕ್ಷಿಪ್ರ ಕಾರ್ಯಾಚರಣೆ: ಮಂಗಳೂರು ನಗರದ ಹೃದಯಭಾಗದಲ್ಲರಿಉವ ಹಳೆ ಮಂಗಳೂರಿನ ಜನನಿಬಿಡ ಬಂದರು ಪ್ರದೇಶ, ಮಂಗಳೂರು ತಾಲೂಕಿನ ಉಳ್ಳಾಲ, ಬಂಟ್ವಾಳ ತಾಲೂಕಿನ ಗೂಡಿನಬಳಿ ಪ್ರದೇಶಗಳಲ್ಲಿ, ಹೆಚ್ಚೂ ಕಡಿಮೆ ಎಲ್ಲಾ ಮುಸ್ಲಿಮರ ಮನೆಗಳಲ್ಲೂ, ಕಡುಬಡವರೆನ್ನದೇ, ಅನುಕೂಲಸ್ಥರೆನ್ನದೇ, ಮಕ್ಕಳು, ರೋಗಿಗಳು, ಅಂಗವಿಕಲರು, ಹಣ್ಣು ಮುದುಕಿಯರೆನ್ನದೇ ಎಲ್ಲರಲ್ಲೂ ಈ ಸತ್ಯವನ್ನೂ ನೆಲೆಯೂರಿಸಲಾಗಿದೆ. ಪೊಲೀಸರೇ, ಪ್ರಭುತ್ವವೇ ತಮ್ಮನ್ನು ಕೊಲ್ಲುವ ದೈವ ಎಂಬುದು ಅವರೆಲ್ಲರಿಗೂ ಸಾಬೀತಾಗಿದೆ. ಈಗ ತಿರುಗಲು ಅವರಿಗೆ ಉಳಿದಿರುವುದು ದೇವರು ಮಾತ್ರ.

೪) ಹೆಂಗಸರನ್ನು ಅತಂತ್ರರಾಗಿ, ಅನಾಥರನ್ನಾಗಿ ಮಾಡುವ ಮುಖಾಂತರ ಯಾವುದೇ ಹಿಂಸಾತ್ಮಕ ಕಾರ್ಯಾಚರಣೆಗೆ ದೂರಗಾಮಿಯಾದ ಯಶಸ್ಸನ್ನು ಖಾತ್ರಿಪಡಿಸಿಕೊಳ್ಳಬಹುದು ಎಂಬ ನೇರ ತರ್ಕ.

ಮಂಗಳೂರಿನ ಬಂದರು ಪ್ರದೇಶ, ಉಳ್ಳಾಲ, ಬಂಟ್ವಾಳ ತಾಲೂಕಿನ ಗೂಡಿನ ಬಳಿ-ಇಲ್ಲೆಲ್ಲಾ ಮನೆಯ ಒಳಗಿನ ಸಾಮಾನುಗಳೆಲ್ಲಾ ಪೊಲೀಸರಿಂದ ಲೂಟಿಯಾಗಿ, ಗಂಡಸರೆಲ್ಲಾ ಜೈಲುಪಾಲಾಗಿ ದಿಕ್ಕು ಕಾಣದೇ ನಿಂತಿರುವವರು-ಹೊರಜಗತ್ತಿನ ಏನೇನೂ ಹೊಕ್ಕು ಬಳಕೆಯಿಲ್ಲದ ಕಡುಬಡವರಾದ ಮುಸ್ಲಿಮ್ ಹೆಂಗಸರು. ಪೊಲೀಸರೇ ಮನೆಗಳಿಗೆ ನುಗ್ಗಿ ನಡೆಸಿದ ಈ ದರೋಡೆಯಿಂದಾಗಿ ಈ ಹೆಂಗಸರು ಕಳೆದುಕೊಂಡಿರುವ ವಿಶ್ವಾಸ, ಪಡುತ್ತಿರುವ ಕಂಗಾಲು ನಮ್ಮ ಅಂದಾಜಿಗೆ ಮೀರಿದ್ದು.

೫) ಮರ್ಯಾದೆಯ ಜೀವನವನ್ನು ನಡೆಸಲು ರೂಢಿಸಿಕೊಂಡ ಮುಸ್ಲಿಮರ ಹೊಟ್ಟೆಪಾಡಿನ ಅರ್ಥವ್ಯವಸ್ಥೆಯ (subsistence economy) ಸರ್ವನಾಶ.

(ಅ) ವಿಭಜಿತ ಕರಾವಳಿ ಜಿಲ್ಲೆಗಳ ಎದ್ದು ತೋರುವ ಸಂಪತ್ತು, ಹಾಗೂ ನಳನಳಿಸುವ ನೆಲಜಲಗಳ ಸಂದುಗೊಂದುಗಳಲ್ಲಿ ಲಾಗಾಯ್ತಿನಿಂದ ಬಡವರಾದ ಮುಸ್ಲಿಮರು ರೂಢಿಸಿ ಈ ಜಿಲ್ಲೆಗಳನ್ನು ದಟ್ಟವಾಗಿ ಹೊಸೆದು ಬೆಸೆದೊರಿವ ಅದೃಶ್ಯಕೊಂಡಿಗಳಾದ ಹಲವಾರು ಹೇಳಹೆಸರಿಲ್ಲದ ಮರ್ಯಾದಸ್ಥ ಉದ್ಯೋಗಗಳಿವೆ; ಪಾತ್ರೆ, ಬಟ್ಟೆ, ಪೇರು ಖರೀದಿ/ಮಾರಾಟ: ದನ ಸಾಗಣೆ; ಮೀನು ಮಾರಾಟ; ಮರಮಟ್ಟುಗಳ ವ್ಯಾಪಾರ; ಬೀಡಿ ತಯಾರಿಕೆ/ಮಾರಾಟ; ಮೇಸ್ತ್ರಿ ಕೆಲಸ; ಮೆಟ್ಟುಗಳ ವ್ಯಾಪಾರ; ಡ್ರೈವರ್ ಮತ್ತು ಕ್ಲೀನರ್ ಕೆಲಸಗಳು ಇನ್ನೂ ಮುಂತಾದವು. ಈ ಇಡೀ ವಹಿವಾಟು ಜಾಲವನ್ನೇ ಸರ್ವನಾಶ ಮಾಡಿ ಅನಕ್ಷರರೂ, ಬಡವರೂ, ಆಧುನಿಕ ಹೊಸ ಆಥಿರ್ಕತೆಗೆ ಹೊರಗಿನವರೂ ಆದ, ಆದರೆ (ಅ) ವಿಭಜಿತ ಕರಾವಳಿ ಜಿಲ್ಲೆಗಳನ್ನು ಸದೃಢವಾಗಿ ಆರ್ಥಿಕವಾಗಿ ಸಲಹುತ್ತಿರುವವರಾದ ಕಡುಬಡವರಾದ ಮುಸ್ಲಿಮರನ್ನು ನಿಂತ ನೆಲದಲ್ಲೇ ಅನಾಥರನ್ನಾಗಿ ಮಾಡುವ ವ್ಯಾಪಕ ಕಾರ್ಯಯೋಜನೆಯಿದು.

೬) ಮುಸ್ಲಿಮರ ವಿರುದ್ಧದ ವ್ಯವಸ್ಥಿತ ಕಾರ್ಯಾಚರಣೆಗಾಗಿ-ಆಡಳಿತ ಯಂತ್ರ, ರಾಜಕೀಯ ನಾಯಕರು, ಮಂತ್ರಿಗಳು, ಪೊಲೀಸ್‌ಪಡೆ, ಭಜರಂಗದಳ-ಶ್ರೀರಾಮ ಸೇನೆಗಳ ಮುಂಚೂಣಿ ತಂಡವನ್ನು ಹೊಂದಿದ ಸಂಘಪರಿವಾರ, ಹಾಗೂ ಮಾಧ್ಯಮ ಇವುಗಳನ್ನು ಒಳಗೊಂಡ ಸಮ್ಮಿಶ್ರ ಸರಕಾರ.

ಭಜರಂಗದಳ-ಶ್ರೀರಾಮ ಸೇನೆಗಳು ನೀಡುವ ಬೀದಿ ನ್ಯಾಯ, ನಡುರಾತ್ರಿಯಲ್ಲಿ ಮನೆಗಳಿಗೆ ನುಗ್ಗಿ ಪೊಲೀಸರು ಸ್ಥಳದಲ್ಲೇ ನೀಡುವ ನ್ಯಾಯ, ಅಪಪ್ರಚಾರ ಮತ್ತು ಸಮರ್ಥನೆಗಳ ಮುಖಾಂತರ ಮಾಧ್ಯಮದವರು ದಿನಂಪ್ರತಿ ನೀಡುವ ಅಂತಿಮ ತೀರ್ಪುಗಳು-ಇವುಗಳ ಮುಖಾಂತರ ಈ ಬದಲೀ ಸರಕಾರ ಕಾರ್ಯ ನಿರ್ವಹಿಸುತ್ತಿದೆ. ಮುಸ್ಲಿಮ್ ಗಂಡಸರು ಜಾಮೀನು ಸಿಗದಂತೆ ಜೈಲು ಪಾಲಾಗುತ್ತಾರೆ; ಮುಸ್ಲಿಮರ ದೂರುಗಳು ಠಾಣೆಗಳಲ್ಲಿ ಸ್ವೀಕೃತವಾಗುವುದಿಲ್ಲ; ಮತ್ತು ಮುಖ್ಯವಾಗಿ, ಮುಸ್ಲಿಮರಿಗೆ ಆದ ಅವಮಾನ, ಹಾನಿ ಮತ್ತು ಹಿಂಸೆಗಳು ಮಾಧ್ಯಮದಲ್ಲಿ ಪ್ರಕಟವಾಗುವುದಿಲ್ಲ; ಅಪ್ಪಿತಪ್ಪಿ  ಪ್ರಕಟಗೊಂಡಲ್ಲಿ ಅದರಿಂದ ಅವರಿಗೆ ಪ್ರಯೋಜನವಾಗುವ ಬದಲು ನ್ಯಾಯನೀತಿಗಳು ಇನ್ನೂ ಜೀವಂತವಾಗಿವೆ, ಮಳೆಬೆಳೆಗಳಿಗೆ ಇನ್ನು ತೊಂದರೆಯಿಲ್ಲ ಎಂಬ ನೆಮ್ಮದಿಯ ಭಾವವನ್ನು ಅವು ಮುಸ್ಲಿಮೇತರರಲ್ಲಿ ಉಂಟುಮಾಡುತ್ತವೆ.

೭) ಪಶ್ಚಾತ್ತಾಪವಿಲ್ಲದ ಹಿಂಸಾಚಾರ

ಹಿಂದೂತ್ವವಾದಿಗಳೂ, ಮಾಧ್ಯಮದವರೂ ಎಗ್ಗಿಲ್ಲದೇ ತಮ್ಮ ಕಾರ್ಯಾಚರಣೆಗಳನ್ನು ಸಮರ್ಥಿಸಿಕೊಳ್ಳುತ್ತಾ ಒಂದು ಹೊಸ ಲೋಕಜ್ಞಾನವೇ (commonsense) ಈಗ ಚಾಲ್ತಿಯಲ್ಲಿದೆ. ಅದರ ಪ್ರಕಾರ, ಆತ್ಮ ನಿರೀಕ್ಷಣೆ ಮತ್ತು ಪಶ್ಚಾತ್ತಾಪಗಳು ಅಸಂಗತ, ಹಾಗೂ ಮುಸ್ಲಿಮರು ರಾಕ್ಷಸರು.

ಮೇಲಿನ ಮಾತುಗಳ ನೆರಳಿನಲ್ಲಿ, ಅನಂತಮೂರ್ತಿಯವರ ಈ ಪುಸ್ತಕದಲ್ಲಿ ಚಾಲ್ತಿಯಲ್ಲಿರುವ ಒಂದೆರಡು ಎಳೆಗಳನ್ನು ನನ್ನ ಮಿತಿಯೊಳಗೆ, ಪರಿಶೀಲಿಸುತ್ತಿದ್ದೇನೆ.

ಈ ಪುಸ್ತಕವೂ ಸ್ಪಷ್ಟಪಡಿಸುವಂತೆ, ಅನಂತಮೂರ್ತಿ ಒಬ್ಬ ದಣಿವರಿಯದ ಮಾತುಗಾರ. ಇತ್ತೀಚೆಗಂತೂ, ಬಹುಶಃ ಪೂರ್ವಾಪರದ ಅನಂತರವಂತೂ, ಅನಂತಮೂರ್ತಿಯವರ ವಾಜ್ಞಯದಲ್ಲಿ ಮಹಾತ್ಮಾ ಗಾಂಧೀ ಪದೇ ಪದೇ ಎದುರಾಗುತ್ತಾರೆ. ಮಾತು ಮತ್ತು ಸಂವಾದಗಳಲ್ಲಿ ಗಾಂಧಿಗೆ ಇದ್ದ ನಂಬುಗೆ ಅಸ್ತಿತ್ವವಾದೀ ಜರೂರಿನದು. ಅಂತರಾತ್ಮದ ಪಿಸುದನಿಯೂ, ಕಟ್ಟಕಡೆಯ ಮನುಷ್ಯನ ಮೌನವೂ ಗಾಂಧಿಯ ಮಾತುಗಳಲ್ಲಿ ಜೀವಶಕ್ತಿಯಾಗಿ ಹರಿಯುತ್ತದೆ. ಅನಂತಮೂರ್ತಿಯವರದೇ ಅಭಿಪ್ರಾಯದಂತೆ, ಗಾಂಧಿಯ ಮಾತುಗಳು ಶಬ್ದ ಸೂತಕವನ್ನು ಕಳೆದುಕೊಂಡವು. ಗಾಂಧಿ ದಣಿವರಿಯದ ಸಂವಾದಗಾರನಾಗಲು ಅಹಿಂಸೆಯಲ್ಲಿ ಅವರಿಗಿದ್ದ ಛಲ, ನಂಬಿಕೆಗಳೇ ಕಾರಣ. ಮಾತು ನಿಂತ ಹೊತ್ತು ಕದನ ಎಂದೇ ಗಾಂಧಿಯ ತಿಳುವಳಿಕೆ; ಹಿಂದ್ ಸ್ವರಾಜ್ ನಡೆಸುವ ಸಂವಾದದ ತಳಗಟ್ಟು ಅದೇ. ಅಂದರೆ, ಅಹಿಂಸೆಯೇ ಗಾಂಧಿಯನ್ನು ಕಾಯ್ದ ಏಕಮಾತ್ರ ದೈವ. ಆದರೆ, ಈ ಅಹಿಂಸೆಯೂ, ಗಾಂಧಿಯಲ್ಲಿ, ಸಂವಾದದಂತೆ ಬಹುಮುಖಿಯಾದದ್ದು. ನೊಂದವರನ್ನೂ ಕೊಂದವರನ್ನು ಒಳಗೊಂಡಂತದ್ದು, ಹಾಗೂ ಅಹಿಂಸೆಯ ಸೋಲನ್ನು ನೋವಿನಲ್ಲಿ ಎದುರಾದಂಥದ್ದು.

ಅನಂತಮೂರ್ತಿಯವರ ಮಾತುಗಳಲ್ಲಿ ಗಾಂಧಿ ವ್ಯಾಫಕವಾಗಿ ಪ್ರಸ್ತಾಪವಾಗುತ್ತಿರುವುದು ಒಂದು ಶುಭಲಕ್ಷಣ. ಆದರೆ, ಕತ್ತು ತುಸುವೇ ಓರೆಯಾಗಿ, ಅರ್ಧನಿಮೀಲಿತ ನೇತ್ರದ ಧ್ಯಾನಸ್ಥ ಮುಖಮುದ್ರೆಯ; ಪಟುವಾದ ದೇಹ ಮತ್ತು ಎದೆಕಟ್ಟಿನ ಅರೆಬೆತ್ತಲೆಯ; ತನಗಿಂತ ಉದ್ದದ ಕೋಲು ಹಿಡಿದು ಬರಿಗಾಲಲ್ಲಿ ನವಾಖಲಿಯಲ್ಲಿ ದಾಪುಗಾಲು ಹಾಕುತ್ತಿರುವ ಅನಂತಮೂರ್ತಿಯವರ ಗಾಂಧಿ ಒಬ್ಬ ಸಂತ ಮತ್ತು ದೇವತಾಪುರುಷನಾಗಿ ಎದುರಾಗುವುದೇ ಹೆಚ್ಚು ಎಂದು ನನ್ನ ಸಂದೇಹ. ಆದರೆ, ‘ಮಧುಲಿಮಯೆ ನೆನಪು’ ಲೇಖನದಲ್ಲಿ, ‘ನನ್ನ ತಲೆಮಾರಿನ ಅನೇಕರಂತೆ, ನನಗೆ ಇವತ್ತಿಗೂ ಗಾಂಧಿ ಮತ್ತು ನೆಹರೂ ನಡುವಿನ ತಿಕ್ಕಾಟದಲ್ಲಿ, ಯಾವ ದ್ವಂದ್ವಗಳೂ ಇಲ್ಲದ ನಿಲುವನ್ನು ಹೇಗೆ ತೆಗದುಕೊಳ್ಳಬೇಕು ಎಂಬುದು ಸ್ಪಷ್ಟವಾಗುತ್ತಿಲ್ಲ’ ಎಂಬ ಮಾತನ್ನೂ ಅನಂತಮೂರ್ತಿ ಹೇಳಿದ್ದಾರೆ. ನಿಜಕ್ಕಾದರೆ, ಈ ಎರಡೂ ನಿಲುವುಗಳು ಒಂದೇ ನಾಣ್ಯದ ಎರಡು ಮುಖಗಳು. ಹಾಗಾಗಿ, ಅನಂತಮೂರ್ತಿ ಅವರ ಮಾತುಗಳಲ್ಲಿ ಗಾಂಧಿ ವ್ಯಾಪಕವಾಗಿ, ಗೌರವಯುತವಾಗಿ, ಎಚ್ಚರಿಸುವಂತೆ ನಮ್ಮ ನೆನಪುಗಳಿಗೆ ಒದಗಿಬರುತ್ತಾರೆ ಎಂಬುದು ನಿಜ. ಆದರೆ, ಸತ್ಯ, ಅಹಿಂಸೆ ಮತ್ತು ದೇಹಶ್ರಮವೇ ಆಧಾರವಾದ ಆರ್ಥಿಕತೆ/ನೈತಿಕತೆಗಳ ಕುರಿತು ಗಾಂಧಿ ನಡೆಸಿದ ಪ್ರಯೋಗಗಳು, ಹಾಗೂ ಅವುಗಳ ಸಮಕಾಲೀನ ಪ್ರಯೋಜನಗಳ ಕಾರಣ ಮತ್ತು ಪರಿಣಾಮಗಳು-ಅವರ ಮಾತುಗಳಲ್ಲಿ ಅಷ್ಟೇನೂ ಸ್ಪಷ್ಟವಾಗುವುದಿಲ್ಲ. ಮಾತ್ರವಲ್ಲದೇ, ಆ ಮೂಲಕ-ಜಾಗತೀಕರಣ, ಅಮೆರಿಕಾ/ಪಶ್ಚಿಮದ ಯಜಮಾನಿಕೆ, ಮತ್ತು ಮತಧರ್ಮಗಳ ಹಿಂಸಾಚರ/ಕಂದಾಚಾರಗಳನ್ನು ಗಾಂಧಿಯ ಎದುರಾಳಿಯನ್ನಾಗಿ ನಿರೂಪಿಸುವುದಕ್ಕಿಂತ ಹೆಚ್ಚಿನ ಪ್ರಯೋಜನವೇನೂ ಆದಂತೆ ಕಾಣುವುದಿಲ್ಲ. ಅಂದರೆ, ಗಾಂಧಿ ನಮ್ಮ ಪ್ರಜ್ಞಾಲೋಕಕ್ಕಿಂತ ಹೊರಗೆ ನಿಂತು ಆಗಾಗ ಕೆಣಕುತ್ತಿರುವ ಹೊರಶಕ್ತಿಯಾಗಿಯೇ ಉಳಿದಂತಾಯಿತು ಎಂಬುದು ನನ್ನ ವಾದ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಹೀಗೆ (ಅನಂತಮೂರ್ತಿಯವರಲ್ಲಿ) ಕಲ್ಪಿತವಾಗುವ ಗಾಂಧಿಯ ವ್ಯಕ್ತಿತ್ವಕ್ಕಿಂತ ಬೇರೆಯಾದ, ನಮ್ಮ ಪ್ರಜ್ಞೆಯ ಭಾಗವಾಗಬಹುದಾದ, ಬಹುಶಃ ಛಿದ್ರವಾದ, ಗಾಂಧಿಯ ವ್ಯಕ್ತಿತ್ವಗಳನ್ನು ರೂಢಿಸುವ ಪ್ರಯತ್ನಗಳು ನನಗೆ ಕಂಡುಬರುತ್ತಿಲ್ಲ. ಅಂದರೆ, ಸತ್ಯ ಅಹಿಂಸೆ ಮತ್ತು ದೈಹಿಕಶ್ರಮ ಕೇಂದ್ರಿತವಾದ ಆರ್ಥಿಕತೆ/ನೈತಿಕತೆಗಳ ಪ್ರಯೋಗ ನಡೆಸುವ ಗಾಂಧಿಯನ್ನು ಆಧ್ಯಾತ್ಮಿಕ ಹಂಬಲಗಳ ವ್ಯಕ್ತಿವವಾಗಿಯೇ ಎದುರಾಗಬೇಕು ಎಂಬ ಹಠ ಯಾಕೆ ಎಂದು ನನ್ ಪ್ರಶ್ನೆ. ಒಟ್ಟು ವಿವೇಕಕ್ಕೆ ಒಪ್ಪಿತವಾಗುವ, ಲೋಕಜ್ಞಾನದಲ್ಲಿ (common sense) ರೂಢಿಗೊಳಿಸಲ್ಪಡುವ, ಕಾನೂನು ಕಟ್ಟಳೆ ನ್ಯಾಯ ನೀತಿಗಳನ್ನು ಗೌರವಿಸುವ-ಧರ್ಮ ಮೂಲವಾದ ಆಧ್ಯಾತ್ಮಿಕತೆಯಿಂದ ಮುಕ್ತವಾದ-ಮರ್ಯಾದಸ್ಥ ಬದುಕಿನ ಪ್ರರ್ಶನೆಯಾಗಿ ಗಾಂಧಿಯನ್ನು ಅರ್ಥೈಸುವ ಪ್ರಯತ್ನಗಳು ಯಾಕೆ ಮುಖ್ಯವಾಗುವುದಿಲ್ಲ? ಆದುದರಿಂದ, ಅನಂತಮೂರ್ತಿಯವರ ಮಾತುಗಳಲ್ಲಿ ಒಡಮೂಡುವ ಗಾಂಧಿ ಅನಂತಮೂರ್ತಿಯವರ ಉದಾರವಾದ ಹಾಗೂ ರೂಪಕ ಪ್ರೀತಿಗಳ ಪ್ರತಿಬಿಂಬವಾಗಿ ಕಾಣುವುದೇ ಹೆಚ್ಚಿರಬಹುದು ಎಂದು ನನ್ನ ಪರಿಮಿತ ತಿಳುವಳಿಕೆ.

ಅನಂತಮೂರ್ತಿಯವರು ನವ್ಯ ಪಂಥದ ಪ್ರಮುಖ ಪ್ರವರ್ತಕರು ಹಾಗೂ ಬಳಕೆದಾರರು. ಕನ್ನಡದ ನವ್ಯ ಯುರೋಪಿಯನ್ ನವ್ಯದ ಯಥಾನಕಲಲ್ಲ ಎಂಬ ವಾದಕ್ಕೆ ನನ್ನ ಅಭ್ಯಂತರವಿಲ್ಲ. ಆದಾಗ್ಯೂ, ಈ ಪುಸ್ತಕದಲ್ಲಿ ಮೇಲಿಂದ ಮೇಲೆ ಕಾಣುವಂತೆ-ಅಂಗಳ, ವಿಶ್ವವೆಂಬ ಹಳ್ಳಿ-ಹಳ್ಳಿಯೆಂಬ ವಿಶ್ವ, ಹಳ್ಳಿ/ಕನ್ನಡ/ಭಾರತೀಯ-ಪಶ್ಚಿ/ಅಮೆರಿಕಾ, ಆಧ್ಯಾತ್ಮ-ಮತಧರ್ಮ ಮುಂತಾದ ದ್ವಂದ್ವಮಾನ ವೈರುದ್ಧ್ಯಗಳಲ್ಲಿ (binary oppositions) ಅನಂತಮೂರ್ತಿಯವರ ಚಿಂತನೆಗಳು ಧೃವೀಕರಣಗೊಳ್ಳುತ್ತವೆ. ದ್ವಂದ್ವಮಾನ ವೈರುದ್ಧ್ಯಗಳ ಮುಖಾಂತರ ಗ್ರಹಿಕೆಯೇ ನವ್ಯ ವಾಜ್ಮಯದ ವ್ಯಾಕರಣ; ಅದೇ ನವ್ಯ ವಾಜ್ಮಯದ ಪ್ರಮುಖ ಶಕ್ತಿ ಮತ್ತು ಮಿತಿ. ಭೋಳೇತನದಲ್ಲಿ, ಅಥವಾ ಸುಲಭದಲ್ಲಿ ತಲುಪಬಹುದಾದ (ಸರಳೀಕೃತ) ತೀರ್ಮಾನಗಳಿಗೆ-ಉದಾಹರಣೆಗೆ, ನವೋದಯದ ರಮ್ಯತೆಗೆ ಆಗೀಗ ಆರೋಪಿಸಲಾಗುವ ನಿಲುವುಗಳಿಗೆ ದ್ವಂದ್ವಮಾನ ವೈರುದ್ಧ್ಯಗಳಲ್ಲಿ ಒಡಮೂಡುವ ಚಿಂತನೆ ಒಂದು ಪ್ರಬಲವಾದ ಪೆಟ್ಟು ಎಂಬುದು ನಿಜವೇ. ಆದರೆ, ಸಾರರೂಪದ (essentialized) ನಡೆಗಳಲ್ಲಿ, ಎರಡು ದೋಣಿಗಳಲ್ಲಿ, ಸಾಗುವ ದ್ವಂದ್ವಮಾನ ವೈರುದ್ಧ್ಯಗಳ ಚಿಂತನೆಗೆ ವಿಚ್ಛಿದ್ರಕಾರಿ (subversive),  ವಿಘಟಿತ (fragmented), ಸಂದುಕಡಿದ (Discontionuous/distracted) ವಿವರಗಳು, ವಾಸ್ತವಗಳು, ಪರಂಪರೆಗಳು, ಸತ್ಯಗಳು ಪ್ರಮುಖ ಬಲಿಪಶುಗಳಾಗುತ್ತವೆ. ಮಾತ್ರವಲ್ಲ, ದ್ವಂದ್ವಮಾನ ವೈರುದ್ಧ್ಯಗಳಲ್ಲಿ ಚಿಂತಿಸದಿದ್ದರೆ, ಒಡೆದುನಿಂತ ಸತ್ಯಗಳನ್ನು ವೈವಿಧ್ಯ ಮತ್ತು ಏಕತೆಗಳು ಅನುಲೋಮವಾಗಿಯೋ ಪ್ರತಿಲೋಮವಾಗಿಯೋ ಅನುಸಂಧಾನದಲ್ಲಿ ದುಡಿಯುತ್ತವೆ ಎಂದೂ ಸಾಧಿಸಲಾಗುವುದಿಲ್ಲ. ದ್ವಂದ್ವಮಾನ ವೈರುದ್ಧ್ಯಗಳು ಸಂರಚನಾವಾದದ ಸಿಗ್ನಿಫೈಯರ್ ಮತ್ತು ಸಿಗ್ನಿಫೈಡ್‌ಗಳಂತೆ. ಒಡೆದು ಬಿಡಿಬಿಡಿಯಾಗಿ ನಿಂತಿರುವಂತೆ ಕಂಡಾಗಲೂ ಅರ್ಥಸ್ಫೋಟವೆಂಬ ಅನುಸಂಧಾನದ ಶುಭಮುಹೂರ್ತದಲ್ಲಿ ಕಾಣಿಸಿಕೊಳ್ಳುವ ಡೀಲಕ್ಸ್ ಬಸ್ಸಿನಲ್ಲಿ ಸಹಪ್ರಯಾಣಕ್ಕಾಗಿ, ಸುಖಪ್ರಯಾಣಕ್ಕಾಗಿ ಅವು ಕಾದಿರುತ್ತವೆ.

ಸೂಕ್ತ ಪರಿಶೀಲನೆಗೆ ಒಳಗಾಗದೇ ಉಳಿದಿರುವ ಲಂಕೇಶರ ಅರಾಜಕ (anarchist) ವಿಧಾನ ನನಗೆ ಇಲ್ಲಿ ನೆನಪಾಗುತ್ತದೆ. ಕೆಳಮಧ್ಯಮ ವರ್ಗದ ಹಾಗೂ ಹೆಣ್ಣುಮಕ್ಕಳ ಸ್ವಾಭಿಮಾನದ; ಅವಮಾನ ಮತ್ತು ಹಿಂಸ್ರಬುದ್ಧಿಗಳಲ್ಲಿ (sadism) ನಲುಗುವ; ಆತುಕೊಳ್ಳಲು ಪರಂಪರೆಗಳಾಗಲೀ, ಸಂತತ್ವಗಳ ದೊಡ್ಡ ನಾಯಕರಾಗಲೀ, ಆದರ್ಶಗಳಾಗಲೀ ಪ್ರಜ್ಞಾಕ್ಷಿತಜದಲ್ಲಿ ಗೋಚರವಾಗದ; ದಿಕ್ಕು ತಪ್ಪಿಸುವ ನೂರಾರು ಸಂಜ್ಞೆಗಳನ್ನು ನಮ್ಮತ್ತ ಎಸೆಯುತ್ತಲೇ ಇರುವ; ಭೂತವಿಲ್ಲದ ವರ್ತಮಾನ ಯಾಕೆ ಲಂಕೇಶರ ‘ನವ್ಯ’ವಾಗುತ್ತದೆ ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರಗಳಲ್ಲಿಲ್ಲವಾದರೂ, ಈ ಚಿಂತನ ವಿಧಾನ, ದ್ವಂದ್ವಮಾನ ವೈರುದ್ಧ್ಯಗಳ ನಡೆಯ ಅಂತಿಮ ತರ್ಕಗಳಿಂದ ತಕ್ಕ ಮಟ್ಟಿಗೆ ಬಚಾವಾಗಿದೆ ಎಂದೇ ನನ್ನ ಅಭಿಪ್ರಾಯ. ‘ಕನ್ನಡದ ಮೂರು ಹಸಿವುಗಳು’ ಎಂಬ ಅನಂತಮೂರ್ತಿಯವರ ಲೇಖನವನ್ನೇ ಗಮನಿಸಿ. ‘ಸಂಘರ್ಷವಾಗದ ಅನುಸಂಧಾನದ’ ಪ್ರತಿಷೇಧಗಳಿರುವ ಮಾರ್ಗವೊಂದನ್ನು (ಅಥವಾ, ದೇಸಿಯೊಂದನ್ನು) ಅನಂತಮೂರ್ತಿ ಇಲ್ಲಿ ಕಾಣಿಸುತ್ತಿದ್ದಾರೆ/ ಪ್ರತಿಪಾದಿಸುತ್ತಿದ್ದಾರೆ. ಇದನ್ನು, ‘ಸಾತತ್ಯ ಕೆಡದಂತೆ ಆಧುನಿಕವಾಗುವ ಪ್ರೇರಣೆ’ ಎಂದು ಅವರು ಕರೆಯುತ್ತಾರೆ. ಇದರಲ್ಲಿ, ಸಾಹಿತ್ಯಕವಾಗಿ (ಕನ್ನಡದಲ್ಲಿ)ಕವಿರಾಜಮಾರ್ಗಕಾರ, ಪಂಪ, ವಚನಕಾರರು, ಕುಮಾರವ್ಯಾಸ, ಬಿಎಂ.ಶ್ರೀ, ಕುವೆಂಪು, ಕಾರಂತ, ಬೇಂದ್ರೆ, ಅಡಿಗ ಮುಂತಾದವರು, (ಭಾರತೀಯವಾಗಿ) ಕಾಳಿದಾಸ, ವಾಲ್ಮೀಕಿ, ವ್ಯಾಸ, ಪಂಪ, ಕುಮಾರವ್ಯಾಸ, ಎಡುತ್ತಚ್ಚನ್, ಕಬೀರ, ತುಕಾರಾಂ, ತುಳಸೀದಾಸ, ಠಾಗೂರ್ ಮುಂತಾದವರು, ಹಾಗೂ (ಸ್ಫೂರ್ತಿ ಚೇತನಗಳಾಗಿ) ಪರಮಹಂಸರು, ಗಾಂಧಿ ಮುಂತಾದವರು ಸೇರಿಕೊಳ್ಳುತ್ತಾರೆ. ಅಂದರೆ, ಈ ಅನುಸ್ಯೂತತೆಯು. ಪರಿಣಾಮದಲ್ಲಿ, ಸಂಘರ್ಷವಾಗದ, ಸಾತತ್ಯ ಕೆಡದ, ಸಂದು ಕಡಿಯದ ಕಥನವೊಂದನ್ನು ಒತ್ತಾಯಿಸುತ್ತದೆ. ಹಲವು ಕಾಲಗಳೂ ಹಲವು ಶಿಸ್ತುಗಳೂ ಇಲ್ಲಿ ಕೂಡಿ ದುಡಿಯುತ್ತವೆ; ಹಾಗಿದ್ದಾಗಲೂ, ಶೇಕ್ಸ್‌ಪಿಯರ್, ಡಾಂಟೆ, ಬ್ಲೇಕ್, ವರ್ಡ್ಸವರ್ತ್, ಯೇಸುಕ್ರಿಸ್ತ ಮುಂತಾದವರು ಕೂಡಿ ದುಡಿಯುತ್ತಾರೆಂದು ತಿಳಲಿಯಲಾಗುವ ಇನ್ನೊಂದು ತಂಡದಿಂದ ಹೊರಗಾಗಿ ನಿಲ್ಲುತ್ತದೆ.

ಕನ್ನಡಕ್ಕೆ ಹಸಿವುಗಳು ಮೂರಲ್ಲ, ನೂರಾರು ಎಂಬುದು ನನ್ನ ಅಭ್ಯಂತರವಲ್ಲ. ಆ ಮೂರು ಹಸಿವುಗಳು ವಾಮನನ ಮೂರು ಹೆಜ್ಜೆಗಳಂತೆ ಕ್ರಮಿಸುವ ಲೋಕಗಳು ಅಗಾಧವಾದರೂ, ಅವಕ್ಕೆ ಎರವಾಗುವ ಚೆಲ್ಲಾಪಿಲ್ಲಿ ಸತ್ಯಗಳು ಕಡಿಮೆಯೇನಲ್ಲ ಎಂಬುದೂ ನನ್ನ ಅಭ್ಯಂತರವಿಲ್ಲ. ಆದರೆ, ಇಲ್ಲಿ ಹಸಿವು ಎಂಬುದು ರೂಪಕನಿಷ್ಠ ಭಾಷೆ ಎಂಬುದು ನನ್ನ ಗಮನದಲ್ಲಿದೆ. ಹಾಗೂ, ಆ ಮೂರು ಹಸಿವುಗಳು-ಸಮಾನತೆಯ ಹಸಿವು, ಆಧ್ಯಾತ್ಮಿಕ ಹಸಿವು, ಮತ್ತು ಆಧುನಿಕವಾಗಬೇಕೆಂಬ ಹಸಿವುಗಳು-ಅಸಮಾನತೆ, (ಸಂಕುಚಿತ) ಮತಧರ್ಮ, ಮತ್ತು ಪ್ರಾಚೀನತೆಗಳೆಂಬ ಸಾರರೂಪಿ (essesntialized)  ಅರ್ಜೀಣಗಳ ಸುಸ್ಪಷ್ಟ ಗೈರು ಹಾಜರಿಯಲ್ಲಿ (inabsentia) ಧೃವೀಕರಣಗೊಳ್ಳುತ್ತವೆ ಎಂಬುದೂ ನನ್ನ ಗಮನದಲ್ಲಿದೆ. ಹಾಗೂ, ಮೂರನೆಯದಾಗಿ, ದೇಶ ಕಾಲಗಳ ಬಹು ವ್ಯಾಪ್ತಿಯ ಈ ಎಲ್ಲಾ ಚಿಂತನೆಗಳೂ ಸಾಹಿತ್ಯ ಎಂಬ ಕೇಂದ್ರಪ್ರಜ್ಞೆಯಲ್ಲಿ ನೆಲೆಗೊಳ್ಳುತ್ತವೆ ಎಂಬುದೂ ನನ್ನ ಗಮನದಲ್ಲಿದೆ. ರೂಪಕಗಳ ಗ್ರಹಣ ಶಕ್ತಿ, ಹಾಗೂ ಸಾಹಿತ್ಯದ ಮಾನವೀಯಗೊಳಿಸುವ ಶಕ್ತಿಗಳಿಗೂ ಎರಗುವ ಶಬ್ದ ಸೂತಕವನ್ನು ಪ್ರತ್ಯೇಕವಾಗಿ ಪರಿಶೀಲಿಸಬಹುದು.

ಈಗ, ಅನಂತಮೂರ್ತಿಯವರ ಪ್ರಸ್ತಾಪಿಸುವ ಕನ್ನಡದ ಮೂರು ಹಸಿವುಗಳಲ್ಲಿ ‘ಸಮಾನತೆಯ ಹಸಿವು’ ಎಂಬ ಪರಿಕಲ್ಪನೆಯನ್ನು ಪರಿಶೀಲಿಸಬೇಕೆಂದು ನನಗನ್ನಿಸುತ್ತದೆ. ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ಮೂಡಿಬಂದ ಮಂತ್ರಗಳಲ್ಲಿ ಸಮಾನತೆಯ ಮಂತ್ರವೂ ಒಂದು (ಫ್ರೆಂಚ್‌ಕ್ರಾಂತಿಗೂ, ಸ್ವಾತಂತ್ರ್ಯ-ಸಮಾನತೆ- ಸಹೋದರತೆಗಳೆಂಬ ಮೂರು ಹಸಿವುಗಳು). ಸಮಾನತೆಯ ಹಸಿವಿನ ಆಕರ್ಷಕತೆ, ಹಾಗೂ ಅದನ್ನೊಂದು ಮಂತ್ರವಾಗಿ ಘೋಷಿಸಬಹುದಾದ ಅನುಕೂಲಗಳು ಏನೇ ಇದ್ದರೂ, ಈ ಸಮಾನತೆಯ ಹಸಿವಿಗೆ, ಚಾರಿತ್ರಿಕವಾಗಿ ಮೂಲದೋಷವೊಂದು (original sin) ಅಂಟಿಕೊಂಡಿದೆ: ಅದು, ಹೆಚ್ಚು ಸಮಾನರಾದವರು, ತಮಗಿಂತ ಹೆಚ್ಚು ಸಮಾನರಾದವರ ಎದುರು ಘೋಷಿಸಿದ ಮಂತ್ರ ಎಂಬುದೇ ಆ ಮೂಲ ದೋಷ. ಆ ದೋಷವನ್ನು ಕಳೆದುಕೊಳ್ಳುವುದು ಅದಕ್ಕೆ ಇಂದಿಗೂ ಸಾಧ್ಯವಾಗಿಲ್ಲ. ಇದು, ಉದಾತ್ತ ಆದರ್ಶಗಳ ಹೊರತಾಗಿಯೂ ಜನತಾಂತ್ರಿಕ ಉದಾರವಾದ (democratic iberalism) ಪಡೆದಿರುವ ಮಿತಿಗಳ ಕಡೆಯೇ ಬೊಟ್ಟು ಮಾಡುತ್ತದೆ. ಹಾಗಾಗಿ, ಸಮಾನತೆ ಎಂಬ ತೀರದ, ದೂರದ ಹಸಿವಿನ ಬದಲು ಅದನ್ನು ತೀರಬೇಕಾದ ಈಗಿಂದೀಗಿನ ಹಸಿವನ್ನಾಗಿ ಯಾಕೆ ಪರಿವರ್ತಿಸಿಕೊಳ್ಳಬಾರದು? ಹಾಗೆ ಪರಿವರ್ತಿಸಿಕೊಂಡಾಗ ಅದು ಸಮಾನತೆಯ ಹಸಿವಾಗಿ ಉಳಿಯಲಾರದು. ಪ್ರಾಯಶಃ ಗಾಂಧಿಯೂ ಸೇರಿದಂತೆ ಆಧುನಿಕ ಕಾಲದ ಎಷ್ಟೊಂದು ಹೋರಾಟಗಳ ಒಂದು ಪ್ರಮುಖ ಗುರಿ, ‘ನಮಗೂ ಬದುಕಲು ಬಿಡಿ’ ಎಂಬ ಮರ್ಯಾದೆಯ ಬದುಕಿನ ಪ್ರಶ್ನೆ. ಇದು, ಹೊಸದಾಗಿ ಹೇರಲ್ಪಡುವ ಅವಮಾನಗಳನ್ನು, ಪ್ರಭುತ್ವ ಮತ್ತು ಆಧುನಿಕ ಸಿದ್ಧಾಂತಗಳಿಂದ (ರಾಷ್ಟ್ರೀಯವಾದ, ಮತೀಯವಾದ, ಬಹುರಾಷ್ಟ್ರೀಯ ಬಂಡವಾಳಶಾಹಿ, ಸಾಮ್ರಾಜ್ಯಶಾಹಿ, ಮುಂತಾಗಿ) ಬಂದೆರಗುವ ಹಿಂಸೆಯನ್ನು ಎದುರಿಸಬಯಸುತ್ತದೆ; ಕಾನೂನು ನ್ಯಾಯ ನೀತಿಗಳಿಗೆ ಮನುಷ್ಯತ್ವ ಮತ್ತು ಮರ್ಯಾದೆಯನ್ನು ಒದಗಿಸಬಯಸುತ್ತದೆ; ಕಾನೂನು ಕಟ್ಟಳೆಗಳಿಗೆ ತಕ್ಕಮಟ್ಟಿಗಾದರೂ ಮರ್ಯಾದೆ ಕೊಡುವಂತೆ ಒತ್ತಾಯಿಸುತ್ತದೆ. ಆದುದರಿಂದ, ಈ ಮರ್ಯಾದೆಯ ಬದುಕಿನ ಪ್ರಶ್ನೆಯೊಂಬುದು ಕನಿಷ್ಟತೆಯ ಪ್ರರ್ಶನೆ; ಇದು ಗರಿಷ್ಟಗಳ ವಿಚಾರವಲ್ಲ: ಹೊಸದಿರಲಿ, ಹಳೆಯದಿರಲಿ ಯಾವುದೇ ದೊಡ್ಡ ಆದರ್ಶಗಳ/ಸಮರ್ಥನೆಗಳ ಮುಖಾಂತರ ತನಿಖೆಗಳಲಿಗೆ ಒಳಪಡಿಸದೇ ಬಡಪಾಯಿಗಳನ್ನು ಅವರ ಪಾಡಿಗೆ ಬಿಡಿ ಎಂಬ ಒತ್ತಾಯವೂ ಅದರಲ್ಲಿದೆ. ಈಗಲೂ ಜೀವಂತವಾಗಿರುವ ಸಾಮಾಜಿಕ ಚಳುವಳಿಗಳ ಬಲ ಈ ಹಸಿವಿನಿಂದ ಉಗಮಿಸಿದ್ದೇ ಹೊರತು, ಅದಕ್ಕಿಂತ ದೊಡ್ಡ ಹಸಿವುಗಳಿಗೆ ಜನರನ್ನು ಒಗ್ಗೂಡಿಸುವ ಸಂಭಾವಿತತೆಯಾಗಲೀ, ಸಾಮರ್ಥ್ಯವಾಗಲೀ ಇದೆ ಎಂದು ನನಗನ್ನಿಸದು.

ಮೇಲಿನ ಮಾತುಗಳ ತಾತ್ಪರ್ಯವೆಂದರೆ, ಸಾರರೂಪಿ ಗ್ರಹಿಕೆಗಳು, ರೂಪಕನಿಷ್ಠ ಭಾಷೆ ಸೊಕ್ಕಬಲ್ಲವು. ಬೀಗಬಲ್ಲವು. ‘ಬಾಗುವುದನ್ನೂ ಬಾಗೆ ಸೆಟೆವುದನ್ನೂ’ ಅಷ್ಟೇನೂ ಕ್ರಮವಿಲ್ಲದೇ ಅಳವಡಿಸಿಕೊಂಡ ದಿನಂಪ್ರತಿಯ ಒತ್ತಡಗಳಲಿಂದ ಸುಲಭದಲ್ಲಿ ಕಳಚಿಕೊಳ್ಳಬಲ್ಲವು. ನಾನು ಈ ಮೊದಲು ಎತ್ತಿದ ರೂಪಕ ಮತ್ತು ಸಾಹಿತ್ಯದ ಪ್ರಶ್ನೆಗೆ ಈಗ ತಿರುಗಬಹುದು.

ನಮ್ಮ ಕಾಲದ ಹಲವಾರು ವಾದ ಮತ್ತು ವಿವಾದಗಳಲ್ಲಿ ಅನಂತಮೂರ್ತಿ ಅವರು ಗಂಭೀರವಾಗಿ, ಮೇಲು ಪಂಕ್ತಿಯವರಾಗಿ, ಹೃದಯ ಶುದ್ಧಿಯಿಂದ ತೊಡಗಿಕೊಂಡದ್ದರ ಸಾಕಷ್ಟು ಉದಾಹರಣೆಗಳು ಈ ಪುಸ್ತಕದಲ್ಲೂ ಇವೆ. ಅವರು ತೋರಿಸುವ ಅಪಾರ ಪ್ರೀತಿಯ ಉದಾಹರಣೆಗಳಾಗಿ ಈ ಪುಸ್ತಕದ ಎರಡನೆಯ ಭಾಗದ ಕಿರುಬರಹಗಳಿವೆ. ಬಹೂದಕನಂತೆ ಅವರು ಎಲ್ಲೆಲ್ಲಿಂದ ತಂದದ್ದನ್ನೆಲ್ಲ ಕನ್ನಡದ ಹಿತ್ತಲಲ್ಲಿ ನೆಟ್ಟು ಬೆಳೆಸಿದ್ದಾರೆ. ಪ್ರೀತಿ, ವಿಶ್ವಾಸ ಮತ್ತು ಜವಾಬ್ದಾರಿಗಳ ಅಪೂರ್ವ ಹದದೊಂದಿಗೆ, ಎದುರಾಳಿಗಳನ್ನೂ ಒಳಗೊಂಡಂತೆ ಎಲ್ಲರನ್ನೂ ಸಂವಾದದಲ್ಲಿ ಬೆಸೆಯಬಲ್ಲ ಇನ್ನೊಬ್ಬ ವ್ಯಕ್ತಿ ಕರ್ನಾಟಕದಲ್ಲಿ ಈಗ ದುರ್ಲಭ. ಹಾಗಾಗಿ ಅನಂತಮೂರ್ತಿಯವರ ಸದಾಶಯಗಳು ಈ ಪುಸ್ತಕದಲ್ಲಿ ವ್ಯಕ್ತವಾಗಿವೆ ಎಂಬುದಷ್ಟೇ ಮುಖ್ಯವಲ್ಲ. ಅವು ಪರಿಣಾಮಕಾರಿಯೂ ಆಗಿವೆ. ಎಷ್ಟೊಂದು ಅವಿವೇಕಿಗಳ ಕೈ ಬಾಯಿ ಕಟ್ಟಿಸಿವೆ. ಆದರೆ ರೂಪಕಗಳ ಹುಡುಕಾಟದಲ್ಲಿ, ಹಾಗೂ ಮಾನವೀಯಗೊಳಿಸುತ್ತದೆ ಎನ್ನಲಾಗುವ ಸಾಹಿತ್ಯದ (ಅಥವಾ, ಕಲೆಯ) ಸಾಮಥ್ಯದಲ್ಲಿ ಅವರು ಇಟ್ಟ ನಂಬಿಕೆ ಅವರ ಸಾಮರ್ಥ್ಯ ಮತ್ತು ತೊಡಗುವಿಕೆಗಳನ್ನು ನಿರ್ಬಂಧಿಸುತ್ತಲೂ ಇದೆ ಎಂದು ನನ್ನ ತಿಳುವಳಿಕೆ. ಶಬ್ದ ಸೂತಕವಿಲ್ಲದ ಗಾಂಧಿಯ ಮಾತುಗಳಲ್ಲಿ ಈ ತರ್ಕ ಹೀಗೆ ಪ್ರಕಟವಾಗಿದೆ (ಇದು ವಿದೇಶೀ ವಸ್ತ್ರ ದಹನದ ಕುರಿತು ತಕರಾರು ಎತ್ತಿದ, ಗುರುದೇವ ಎಂದು ಗಾಂಧಿ ಕರೆಯುವ, ರವೀಂದ್ರನಾಥ ಠಾಗೂರರಿಗೆ ಗಾಂಧಿಕೊಟ್ಟ ಉತ್ತರದ ಒಂದು ತುಣುಕು) ಗಾಂಧಿಯ ಈ ಮಾತುಗಳು ಅನಂತಮೂರ್ತಿಯವರಿಗೂ ಮೆಚ್ಚುಗೆಯಾದ ಮಾತುಗಳೇ; ಕಾವ್ಯಮಯವಾದ ಈ ಮಾತುಗಳಲ್ಲಿ ಹಸಿವೆ ಎಂದರೆ ಹಸಿವೆಯೇ; ಅಲ್ಲದೇ, ಅನಂತಮೂರ್ತಿಯವರ ಈ ಕಾಲದ ಹಿರೋಗಳಲ್ಲಿ ಗಾಂಧಿಯೂ ಸೇರಿದಂತೆ ಸಾಹಿತಿಗಳಲ್ಲದ, ಕಲಾವಿದರಲ್ಲದ ಆಶಿಶ್ ನಂದಿ, ಶಿವ ವಿಶ್ವನಾಥನ್, ಮೇಧಾ ಪಾಟ್ಕರ್, ಪಿ. ಸಾಯಿನಾಥ್ ಮುಂತಾದವರು ಸೇರಿದ್ದಾರೆ ಎಂಬುದೂ ನಿಜವೇ; ಸಾಹಿತ್ಯವನ್ನು ‘ಅಸಾಯಿತ್ಯಿಕ’ವಾಗಿ ಓದುವ ಪ್ರಯತ್ನಗಳನ್ನೂ ಅನಂತಮೂರ್ತಿ ಮಾಡಿದ್ದಾರೆ; ಆದರೂ, ಗಾಂಧಿಯ ಈ ಮಾತುಗಳ ಪ್ರಮುಖ ತರ್ಕಕ್ಕೆ ಅನಂತಮೂರ್ತಿಯವರ ಒಪ್ಪಿಗೆ ಇರಲಾರದು ಎಂದು ನನ್ನ ಅನಿಸಿಕೆ;

… I have never been able to make a fetish of literaray training. My experience has proved to my satisfaction that literary training by itself adds not an inch to one’s moral height and that character-building is independent of literary training…

… To a peple famishing and idle, the only acceptable form in which god can dare appear is work and promise of food as wages….

…. True to his poetical instinct the Poet lives for the morrow and would have us do likewise. He presents to our admiring gaze the beautiful picture of the birds early in the morning singing hymns of praise as they soar into the sky. These birds had their day’s food and soared with rested wings in whose veins new blood had flown during the previous night. But I have had the pain of watching birds who for want of strength could not be coaxed even into a fltter of their wings. The human bird under the Indian sky gets up weaker than when he pretended to retire. For millions it is an eternal vigil or an eternal trance. It is an indescribably painful state which has to be experienced to be realized. I have found it impossible to sooth suffering patients with a song from Kabir. The hungry millions ask for one poem-invigorating food. They cannot be given it. They must earn it. And they can earn it only by the sweat of their brow.

ಕಡೆಯದಾಗಿ, ನನಗೆ ಸಾಕಷ್ಟು ಅಸಮಾಧಾನವನ್ನು ಉಂಟುಮಾಡಿರುವ ‘ಆಧುನಿಕ ತಾಂತ್ರಿಕತೆ ಮತ್ತು ಪ್ರಭೆ’ ಎಂಬ ಲೇಖನ. ನಾನು ಮೇಲೆ ಸೂಚಿಸಿದ ಟೀಕೆಗಳೆಲ್ಲವೂ ಇದಕ್ಕೆ ಲಗಾವಾಗುತ್ತವೆ. ವಾಲ್ಟರ್ ಬೆಂಜಮಿನ್ನನ ಸುಪ್ರಸಿದ್ಧಿ `The Work of Art in the Age of Mechanical Reproduction’ ಎಂಬ ಲೇಖನದಿಂದ ಪ್ರೇರಿತರಾಗಿ ಅನಂತಮೂರ್ತಿ ಈ ಲೇಖನವನ್ನು ಬರೆದಿದ್ದಾರೆ. ಬೆಂಜಮಿನ್ನನನ್ನು ತಕ್ಕಮಟ್ಟಿಗೆ ವಿವರವಾಗಿ, ನೇರವಾಗಿ ಅದರಲ್ಲಿ ಪ್ರಸ್ತಾಪಿಸಿಯೂ ಇದ್ದಾರೆ. ರೂಪಕಗಳು ಬಲಿಯುವುದಕ್ಕಾಗಿ ಕಾಯುತ್ತಿರುವ ಆಶಯದೊಂದಿಗೆ ಮುಕ್ತಾಯವಾಗುವ ಈ ಲೇಖನದಲ್ಲಿ, ‘ಕೇವಲ ಮನುಷ್ಯರಾದ ನಮ್ಮಲ್ಲಿ ಪ್ರಭೆಯ ಬಗ್ಗೆ ಗುಪ್ತವಾದ ‘ವಾಸನೆ’ ಇದ್ದೇ ಇರುತ್ತದೆ. ಅದನ್ನು ಒಂದಲ್ಲ ಒಂದರಲ್ಲಿ-ಕಾವ್ಯ, ಕಲೆ, ಸಂಗೀತ ಇತ್ಯಾದಿಗಳಲ್ಲಿ ಹುಡುಕುತ್ತಲೇ ಇರುತ್ತೇವೆ’. ಅಂದರೆ, ಆಧುನಿಕತೆಯನ್ನು ಬಹುವಚನವಾಗಿ; ತಾಂತ್ರಿಕತೆಯನ್ನು ಹೊಸ ಕಟ್ಟೋಣಗಳ, ಗ್ರಹಿಕೆಗಳ ಲೋಕವಾಗಿ; ಚರಿತ್ರೆಯನ್ನು ಹೊಸ ಪಲ್ಲಟಗಳ ಅವಸ್ಥಾಂತರಗಳಾಗಿ; ಹೊಸ ಕಾಲವನ್ನು ಹೊಸ ಸವಾಲುಗಳ ರಂಗಭೂಮಿಯಾಗಿ-ಕಾಣಬಲ್ಲ ಬೆಂಜಮಿನ್ ಮರೆಗೆ ಸರಿದು, ಪ್ರಭೆಯು ನಿಸ್ತೇಜವಾಗುವುದರ ಕುರಿತ ಆತನ ಮಾತುಗಳು ಹಳಹಳಿಕೆಯಾಗಿ ಪರಿವರ್ತನೆಗೊಂಡು ಅನಂತಮೂರ್ತಿಯವರ ವಾದಗಳನ್ನು ಕಟ್ಟುತ್ತದೆ.

ಬೆಂಜಮಿನ್ನನ ಈ ಮಾತುಗಳನ್ನು ಗಮನಿಸಿ:

The adjustment of reality to the masses and of the masses to reality is a process of unlimited scope, as much for thinking as for perception.

ಈ ರೀತಿಯ ಸಾಂಕ್ರಾಮಿಕ ಉತ್ಸಾಹದ ಎಲ್ಲ ಎಳೆಗಳೂ ಮರೆಯಾಗಿ ಗಾಢ ವಿಷಾದವೊಂದೇ ಅನಂತಮೂರ್ತಿಯವರ ಲೇಖನದಲ್ಲಿ ಮೆಲುಗೈ ಸಾಧಿಸುತ್ತದೆ. ಚಾರಿತ್ರಿಕ ಅವಸ್ಥಾಂತರಗಳಿಂದ ತಪ್ಪಿಸಿಕೊಂಡು ಸಾರರೂಪಿಯಾಗಿ (essentialized) ಎದುರಾಗುವ ಕಲೆಗೆ ಶರಣಾಗತಿಯೇ ಬಿಡುಗಡೆಯ ಮಾರ್ಗ ಎಂದು ಸೂಚಿತವಾಗುತ್ತದೆ. ಲೇಖನದ ಹೆಸರು ‘ಆದುನಿಕ ತಾಂತ್ರಿಕತೆ ಮತ್ತು ಪ್ರಭೆ’ ಎಂದೇ ಇದೆಯಾದರೂ, ಆಧುನಿಕತೆ ಮತ್ತು ತಾಂತ್ರಿಕತೆಗಳೆಂಬ ಹೊಸದಕ್ಕೆ ಎದುರಾಳಿಯಾಗಿ ಪ್ರಾಚೀನ/ಸಾರ್ವಕಾಲಿಕ ಪ್ರಭೆ ಎಂಬುದೇ ಅದರ ಇಂಗಿತ. ಹಾಗಾಗಿ, ಆಧುನಿಕತೆಯೆಂಬುದು (ಜನಾರ್ದನನ) ನಿಸ್ತೇಜ ಸರಾಸರಿ ಜೀವನವಾಗಿ, ತಾಂತ್ರಿಕತೆ/(ವಿಡಿಯೋ) ಸಿನಿಮಾ ಎಂಬುದು ಪ್ರದರ್ಶನ ಎಂಬ ಆಡಂಬರವಾಗಿ ನಿರೂಪಣೆಗೊಳ್ಳುತ್ತವೆ. ಹಾಗೂ ಅದು ಕಲೆಯಲ್ಲಿ ಸಂಚಯನಗೊಳ್ಳುತ್ತದೆ: ಅಂದರೆ. ಕಲೆ/ಪ್ರಭೆ ನಮ್ಮ ರೋಗಗಳಿಗೆಲ್ಲಾ ಮದ್ದು ಎಂದಾಗುತ್ತದೆ (‘ಕಾವ್ಯದ ಔಷಧ ಗುಣ’ ಎಂಬ ಲೇಖನವೂ ಇದೆ).

ಅದೇ, ಕನ್ನಡ, ಕಾಮನ್ ಸ್ಕೂಲ್, ಕೋಮುವಾದ, ನಕ್ಸಲಿಸ್ಂ, ಪರಿಸರ ಚಳುವಳಿಗಳು, ರಾಷ್ಟ್ರೀಯವಾದ, ವಿಕೇಂದ್ರಿಕರಣ ಮುಂತಾದ ಪ್ರಸ್ತಾಪಗಳ ಮುಖಾಂತರ ಅನಂತಮೂರ್ತಿ ಎಲ್ಲರನ್ನೂ ಹಿಗ್ಗಿಸಿ ತೊಡಗಿಸುವ ಸಂವಾದದ ನಿಲುವಿಗೆ ಮರಳುತ್ತಾರೆ. ದಾರುಣ ದ್ವಂದ್ವದ ಇಕ್ಕಟ್ಟಿನಲ್ಲಿ ನಮ್ಮನ್ನು ಸಿಲುಕಿಸುತ್ತಾರೆ.

* * *