ನನ್ನ ಮಾತುಗಳಿಗೆ ಅನಂತಮೂರ್ತಿಯವರು ಪ್ರತಿಕ್ರಿಯಿಸಿದ್ದಾರೆ. ಮಾತಿಗೆ ಮಾತು ಬೆಳೆಸಿಲ್ಲ. ಬೆರೆಸಿದ್ದಾರೆ. ಅವರು ನನ್ನ ವಿದ್ಯಾಗುರುಗಳು. ಸಹಜವಾಗಿಯೇ, ನನ್ನ ದುಡುಕಿನ ಒರಟು ಮಾತುಗಳನ್ನು ಅವರು ಮನ್ನಿಸಿದ್ದಾರೆ. ಮಾತು/ರೂಪಕ/ಕಲೆ ಕುರಿತ ನನ್ನ ವಾದವನ್ನು ನಯವಾಗಿ ತಿರಸ್ಕರಿಸಿದ್ದಾರೆ. ಆದರೂ, ಮಾತು/ ರೂಪಕ/ ಕಲೆಗೆ ಕಲಾವಿದರು ದಯಪಾಲಿಸುವ ಕೇಂದ್ರಸ್ಥಾನವನ್ನು (centrality) ಸ್ವಲ್ಪ ಅಲುಗಾಡಿಸಿ ಪಲ್ಲಟಗೊಳಿಸುವುದು, ಬೇರೊಂದು ಅನುಸಂಧಾನಕ್ಕೆ ಅದನ್ನು ಒಗ್ಗಿಸುವುದು, ಹೇಗೆ ಎಂಬುದೊಂದು ನನ್ನ ಒಣ ಹಟ. ಹಾಗಾಗಿ, ಮತ್ತೆರಡು ಮಾತು. ನಾನು ರಚ್ಚೆ ಹಿಡಿದವನಂತೆ ಕಾಣುತ್ತಿದ್ದೇನೆಯೇ?

ಮಾತು-ಕತೆಯ ನಡುವಿನ ಕೂಡು/ಬಿಡು -ಗೆರೆಯ ಸ್ವರೂಪ, ಬಗೆಹರಿಯದ, ಹಲವು ದುರಂತಗಳ ಬಲಿಪೀಠವಾಗಿರುವ, ಆದರೆ ಹಾಗೆಂದು ಕೈ ಚೆಲ್ಲಿ ಕೂರಲಾಗದ, ದೊಡ್ಡದೊಂದು ಸಮಸ್ಯೆ. ಕವಿ ಬ್ಲೇಕ್, ಅಂಗೈಯಲ್ಲಿ ಅನಂತವನ್ನು ಕಂಡಾಗಲೂ, ಪಂಜರದೊಳಗೆ ಬಡಿಯುತ್ತಿರುವ ಹಕ್ಕಯ ರೆಕ್ಕೆ ಸಪ್ಪಳ ಇಡೀ ಸ್ವರ್ಗವನ್ನೇ ತಲ್ಲಣಗೊಳಿಸಬಲ್ಲುದು ಎಂದು ರೆಕ್ಕೆ ಸಪ್ಪಳದ ಏಣಿ ಹಿಡಿದು ಸ್ವರ್ಗದ ದುರಂತವನ್ನು ಬಯಲು ಮಾಡುವವನು. ಅನಂತ ಮತ್ತು ಸದ್ಯದ ನಡುವಿನ ಈ ಬಗೆಯ ಅನುಸಂಧಾನವೇ. ಸಂಘರ್ಷವೇ ಮಾತು-ಕತೆ ಎಂಬ ಕೂಡು/ಬಿಡು-ಗೆರೆ. ಆದರೆ ಸುಟ್ಟರೆ ವಿಭೂತಿಯಾಗಬಹುದಾದ ಈ ಗೆರೆ, ಬಿಟ್ಟರೆ ನಾರುವ ಗೊಬ್ಬರ. ಅಲ್ಲದೇ, ಮಾತುಕತೆಗಳ ದಿನಂಪ್ರತಿಯ ಹವಣು, ಹುರುಡು, ಹತಾಶೆ, ಹಾಹಾಕಾರ, ಹತ್ಯೆಗಳೂ ಪ್ರತಿದಿನದ ಸತ್ಯಗಳು. ನಡುವೆ ಮೀರುವ ಮಾತು, ಕೆಲವೊಮ್ಮೆ, ತುಟಿಮೀರುವ ಮಾತು ಎಂತಿದ್ದರೂ, ಮಾತೆಂಬುದೇ, ಭಾಷೆಯೆಂಬುದೇ ದೊಡ್ಡದೊಂದು ರೂಪಕ. ಬಳಸಿ ಬಳಸಿ ನಮ್ಮಂತೆಯೇ ಬಳಲಿರುವ ರೂಪಕ. ಅದನ್ನು (ಜೀವರಕ್ಷಕ) ಕಲೆಯ ಸುಪರ್ದಿಗೆ ಬಿಟ್ಟುಕೊಡುವುದು, ಇನ್ನೊಂದು ರೂಪಕಜಾಲದ ಮೊರೆಹೋದಂತೆಯೇ; ರೂಪಕಗಳ ವರ್ತುಲದೊಳಗೆ ಇನ್ನಷ್ಟು ಅಳವಟ್ಟಂತೆಯೇ. ಹಿಂಬಾಲಿಸಿದರೆ ಯಾವ ದಾರಿಯೂ, ಮಾತೂ, ರೂಪಕವೂ ಅನಾಕರ್ಷಕವಲ್ಲ. ಮಾತಿನ ದಾರಿಗಳು ಅನಂತ. ಜೀವದ ದುರಂತಗಳಿಗೆ ಅವೊಂದು ದಾರಿಹೋಕನ ಕರುಣೆ. ಆದರೆ, ಮಾತುಗಳು ಕಾಪಾಡದ, ನಿಗೂಢ ದುರಂತದಲ್ಲಿ ಹೆಣವಾಗಿ ಕೆಡೆಯಲ್ಪಡುವ ಜೀವ ಹಾತೊರೆಯುವುದು ಏದುವ ತನ್ನದೇ ಉಸಿರಿಗೆ, ತನ್ನದೇ ವಿಪ್ರಲಂಬ ಹಾವಭಾವಗಳಿಗೆ. ನೋವಿಗೆ/ಸಾವಿಗೆ ಸೂಕ್ತವಾಗಿ/ಸೂಕ್ಷ್ಮವಾಗಿ ಮಿಡಿಯಬಹುದೆನ್ನುವ ಹೊರಗುತ್ತಿಗೆಯೇ ಮಾತಿನ/ ಭಾಷೆಯ/ ರೂಪಕದ ದೊಡ್ಡ ಸಮಸ್ಯೆ ಕವಿ ಕೀಟ್ಸ್‌ನ ಪ್ರಕಾರ. ಕಲೆ ‘Cold pastoral’, ‘friend to man’ ಆಗಿದ್ದಾಗಲೂ.

ಕಾಫ್ಕಾನಂಥ ವಿಲಕ್ಷಣ ಚಿಂತಕನನ್ನು ಅಪೂರ್ವವಾಗಿ ಗ್ರಹಿಸಿದ, ಮೆಚ್ಚಿದ ಮೊದಲಿಗೆ ಬೆಂಜಮಿನ್ನನ ಮಾತುಗಳು ಹೀಗಿವೆ:

…. To do justice to the figure of Kafka in its purity and its peculiyar beauty one must never lose sight of one thing: it is the purity and beauty of a failure. The circumstences of this failure are manifold. One is tempted to say: once he was certain of eventual failure, everything worked out for him emroute as in a dream. There is nothing more memorable than the ferour with which Kafka emphasisezed his failure…

*

ಕಡೆಗೂ, ಅನಂತಮೂರ್ತಿಯವರ ದಣಿವರೆಯದ ಮಾತುಗಳಿಗೆ, ಚೇತೋಹಾರಿಯಾದ ರೂಪಕಗಳಿಗೆ, ಅವರು ಹುಟ್ಟಿಸುವ ಅಪಾರ ಭರವಸೆ ಮತ್ತು ಪಾರವಿಲ್ಲದ ನಿಷ್ಕಲ್ಮಶ ಪ್ರೀತಿಗೆ ನಾನು ಕೃತಜ್ಞ. ಎಲ್ಲರಂತೆ. ನನ್ಮಂತೆ.

*