ಶ್ರೀ ರಾಮಕೃಷ್ಣಪರಮಹಂಸರು ಹೇಳಿದ ಒಂದು ಕತೆ ಹೀಗಿದೆ;

ಇಬ್ಬರು ಗೆಳೆಯರು ಮಾರ್ಗದಲ್ಲಿ ಭೇಟಿಯಾದರು. ಅವರಿಬ್ಬರೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದರು. ಒಬ್ಬ ಒಂದು ಹೆಣ್ಣಿನ ಸಂಗವನ್ನು ಬಯಸಿ ಹೋಗುತ್ತಿದ್ದ. ಇನ್ನೊಬ್ಬ ದಾಸರ ಹರಿಕತೆಯನ್ನು ಕೇಳಲೆಂದು ಹೋಗುತ್ತಿದ್ದ.

ಹರಿಕತೆಗೆ ಹೋಗುತ್ತಿದ್ದ ಗೆಳೆಯ ಇನ್ನೊಬ್ಬನಿಗೆ ಹೇಳಿದ, ‘ನೀನು ಆ ಹೆಣ್ಣಿನ ಸಂಗ ಮಾಡಲು ಯಾಕೆ ಹೋಗ್ತಿಯಾ? ನನ್ಜೊತೆ ಹರಿಕತೆಗೆ ಬಾ. ದಾಸರು ಚೆನ್ನಾಗಿ ಮಾತಾಡ್ತಾರೆ. ಕತೆ ಹೇಳ್ತಾರೆ, ಹಾಡ್ತಾರೆ, ಕುಣಿತಾರೆ. ಬಾ ನನ್ನ ಜೊತೆ’. ಆಗ ಇನ್ನೊಬ್ಬ ಗೆಳೆಯ ‘ನೀನ್ಯಾಕೆ ನನ್ಜೊತೆ ಬರಬಾರದು? ಒಬ್ಬಳು ಚೆಲುವೆಯಾದ ಹೆಣ್ಣನ್ನು ನಿನಗೆ ಗೊತ್ತು ಮಾಡಿಕೊಡ್ತೇನೆ. ನಿಸ್ಸಾರವಾದ ಇಂತಹ ಪ್ರವಚನಗಳಿಗೆ ಯಾಕೆ ಸಮಯ ಹಾಳುಮಾಡುತ್ತೀ?’ ಎಂದು ಹೇಳಿದ.

ಒಬ್ಬರ ಮಾತು ಮತ್ತೊಬ್ಬರು ಕೇಳಲಿಲ್ಲ. ಅವರು ತಂತಮ್ಮ ದಾರಿ ಹಿಡಿದು ಹೊರಟರು.

ಹರಿಕತೆಗೆ ಹೋದವನಿಗೆ ಅದರಲ್ಲಿ ಮನಸ್ಸನ್ನು ತೊಡಗಿಸಲು ಆಗಲಿಲ್ಲ. ತನ್ನ ಗೆಳೆಯ ಚೆಲುವೆಯಾದ ಹೆಣ್ಣಿನ ತೋಳತೆಕ್ಕೆಯಲ್ಲಿ ಕಾಲಕಳೆಯುವ ಚಿತ್ರವೇ ಮತ್ತೆ ಮತ್ತೆ ಮನಸ್ಸಿನಲ್ಲಿ ಮೂಡುತ್ತಿತ್ತು. ತಾನು ಈ ದರಿದ್ರ ಹರಿಕತೆ ಕೇಳುತ್ತಾ ಸಮಯ ಹಾಳು ಮಾಡುತ್ತಿದ್ದೇನಲ್ಲ ಎಂದು ಅವನಿಗನ್ನಿಸಿತು.

ಹೆಣ್ಣಿನ ಸಂಗದಲ್ಲಿ ಕಾಲ ಕಳೆಯುತ್ತಿದ್ದವನಿಗೂ ಏಕೋ ಸುಖ ಸಿಗಲಿಲ್ಲ. ಸಾಧು ಸಂತರ ಪ್ರವಚನಗಳು, ಅವರು ಹೇಳುವ ದೇವ ದೇವತೆಗಳ ಕತೆಗಳು ಹಾಗು ಶ್ಲೋಕಗಳನ್ನು ಕೇಳುತ್ತಾ ಪುಣ್ಯಸಂಪಾದನೆ ಮಾಡಿಕೊಂಡು ಸ್ವರ್ಗಕ್ಕೆ ಹೋಗುವ ತನ್ನ ಗೆಳೆಯನೆಲ್ಲಿ? ಕ್ಷುಲ್ಲಕ ಹೆಣ್ಣಿನ ದೇಹಸುಖದಲ್ಲಿ ಮುಳುಗಿರುವ ತಾನೆಲ್ಲಿ? ತನ್ನ ಜೀವನ ವ್ಯರ್ಥ ಎಂದು ಅವನಿಗೆ ಅನ್ನಿಸಿತು. ಆದುದರಿಂದಲೇ ಒಂದು ಮಾತು ರೂಢಿಗೆ ಬಂದಿದೆ. ಅದೇನೆಂದರೆ ಮನುಷ್ಯ ಇಹಲೋಕದ ಮೋಹದಿಂದ ಪರವನ್ನು ತ್ಯಾಗ ಮಾಡುವುದಿಲ್ಲ; ಪರಲೋಕದ ಸುಖ ಪ್ರಾಪ್ತಿಗಾಗಿ ಇಹವನ್ನು ಬಿಡುವುದಿಲ್ಲ. (ಭಾರತೀಯ ಜನಪದ ಕಥೆಗಳು-ಸಂ ಎ.ಕೆ. ರಾಮಾನುಜನ್. ಅನು: ಮಹಾಬಳೇಶ್ವರರಾವ್ ಎನ್.ಬಿ.ಟಿ. ನವದೆಹಲಿ ೨೦೦೦. ಪುಟ ೧೯೨-೧೯೩)

ಪರಮಹಂಸರ ಈ ಕಥೆಯಲ್ಲಿ ಇಬ್ಬರು ವ್ಯಕ್ತಿಗಳಿದ್ದರೂ ವಾಸ್ತವದಲ್ಲಿ ಅವರು ಒಂದೇ ಚಿತ್ತವೃತ್ತಿಯನ್ನು ಪ್ರತಿನಿಧಿಸುವಂತಹವರು. ಅನಂತಮೂರ್ತಿ ತನ್ನ ಕತೆ ಕಾದಂಬರಿಗಳಲ್ಲಿ ಮತ್ತೆ ಮತ್ತೆ ಈ ದ್ವಂದ್ವವನ್ನೇ-ಅದು ಮನುಷ್ಯನ ಅನಿವಾರ್ಯ ಪಾಡು ಎಂಬಂತೆ ಶೋಧಿಸುತ್ತಾ ಬಂದವರು. ಈ ದ್ವಂದ್ವ ಸ್ವತಃ ಲೇಖಕರದ್ದೂ ಹೌದು ಎಂಬುದು ಈ ಸಂಕಲನದ ಲೇಖನಗಳಿಂದ ವ್ಯಕ್ತವಾಗುತ್ತದೆ. ಪರಮಹಂಸರ ಕತೆ ನಮ್ಮ ಇಹಪರಗಳ ನಡುವಿನ ತೊಳಲಾಟಕ್ಕೆ ಮಾತ್ರ ದೃಷ್ಟಾಂತವಾದರೆ, ಅನಂತಮೂರ್ತಿಯರ ಸಮಸ್ಯೆ ಅಷ್ಟಕ್ಕೇ ಮುಗಿಯುವುದಿಲ್ಲ. ಪೂರ್ವ-ಪಶ್ಚಿಮ, ಪ್ರಾಚೀನ-ಆಧುನಿಕ, ಆಸ್ವಾದದ ಸಂಯಮ-ಕೊಳ್ಳುಬಾಕ ಉಪಭೋಗ, ಗಾಂಧಿ-ನೆಹರೂ-ಹೀಗೆ ತಾವು ಅನುಭವಿಸದ, ಹಲವು ತೆರನ ಇಬ್ಬಂದಿತನಗಳನ್ನು ಅವರು ಓದುಗರ ಮುಂದಿಟ್ಟು ಕಂಗೆಡಿಸುತ್ತಾರೆ. ಈ ಅರ್ಥದಲ್ಲಿ ಅವರ ಕಥೆ, ಕವಿತೆಗಳಂತೆ ಅವರ ಪ್ರಬಂಧಗಳು ಸಹ ಆತ್ಮನಿವೇದನೆಗಳು. ಅನಂತಮೂರ್ತಿ ಅವರ ಸಂಸ್ಕಾರ, ಅವಸ್ಥೆ ಮುಂತಾದ ಕಾದಂಬರಿಗಳು, ಸೂರ್ಯನ ಕುದುರೆ ಮತ್ತು ಇತರ ಕಥೆಗಳು ಹಾಗೂ ಅವರ ಹಲವು ಪದ್ಯಗಳಿಗೆ ಪ್ರಸ್ತುತ ಸಂಕಲನದ ಬರಹಗಳ ಜೊತೆ ಸಮಾನ ಮನೋಧರ್ಮದ ಸಂಬಂಧವಿದೆ. ಅವರ ಕತೆ, ಕಾದಂಬರಿ ಮತ್ತು ಕಾವ್ಯಕ್ಕೂ ಈ ಪ್ರಬಂಧಗಳಿಗೂ ನಡುವೆ ಇನ್ನೊಂದು ಸಮಾನ ಮನೋಧರ್ಮದ ಸಂಬಂಧವಿದೆ. ಅವರ ಕತೆ, ಕಾದಂಬರಿ ಮತ್ತು ಕಾವ್ಯಕ್ಕೂ ಈ ಪ್ರಬಂಧಗಳಿಗೂ ನಡುವೆ ಇನ್ನೊಂದು ಸಮಾನ ಗುಣವಿದೆ. ತಮ್ಮ ಪ್ರಬಂಧಗಳಲ್ಲಿ ಎಲ್ಲಿಯೂ ಅವರು ಇದೇ ಕೊನೆಯ ಮಾತು ಎಂಬಂತೆ ಏನೂ ಹೇಳುವುದಿಲ್ಲ. ಕಪ್ಪು-ಬಿಳುಪು, ಸರಿ-ತಪ್ಪು, ಅದು ಅಥವಾ ಇದು ಎಂದು ಜಗತ್ತಿನ ಬಗ್ಗೆ ಸರಳ ತೀರ್ಮಾನಗಳಿಗೆ ಬರುವುದು, ಪಕ್ಷ ವಹಿಸಿ ಮಾತನಾಡುವುದು, ತನ್ನ ಸಿದ್ಧಾಂತಕ್ಕೆ ವ್ಯತಿರಿಕ್ತವಾದ ಅನುಭವವನ್ನು ಒಂದೋ ಅಲ್ಲಗಳೆಯುವುದು, ಅಥವಾ ಅಂತಹ ಅನುಭವಕ್ಕೇ ತನ್ನನ್ನು ಒಡ್ಡಿಕೊಳ್ಳದೆ ಜಡನಾಗುವುದು-ಸುಲಭವೂ ಆ ಕಾರಣಕ್ಕೇನೇ ಬಹಳಬೇಗ ಚಟವೂ ಆಗುವ ಬರವಣಿಗೆಯ ಈ ಸಲೀಸು ನಮೂನೆಗಳು ಅನಂತಮೂರ್ತಿಯವರ ಜಾಯಮಾನದಲ್ಲೇ ಇಲ್ಲ. ಹೀಗಾಗಿ ಹೊರದಾರಿಗಳಿಲ್ಲದ ಇಬ್ಬಂದಿತನದಲ್ಲಿ ತಾನೂ ಸಿಕ್ಕಿಕೊಂಡು ಅವರು ಓದುಗರನ್ನೂ ದಿಕ್ಕುತಪ್ಪಿಸುತ್ತಾರೆ. ಅವರ ತೊಳಲಾಟವನ್ನು ಇಬ್ಬಂದಿತನ ಎಂದು ಕರೆಯುವುದೂ ಪ್ರಾಯಶಃ ಅಷ್ಟು ಸರಿಯಲ್ಲ. ಆ ನುಡಿಗಟ್ಟು ಸೂಚಿಸುವುದು ಎರಡು ಸ್ಥಿತಿಗಳ ನಡುವೆ ಆಯ್ಕೆಯ ಸಮಸ್ಯೆಯನ್ನು ಆದರೆ ಅನಂತಮೂರ್ತಿಯವರಾದರೋ ಹಲವು ದೋಣಿಗಳಲ್ಲಿ ಕಾಲಿಟ್ಟು ದಡ ಸೇರಲು ಯತ್ನಿಸುತ್ತಿರುವವರು.

ನಮ್ಮ ಕಾಲದ ಬಿಕ್ಕಟ್ಟುಗಳು-ಪ್ರಾಚೀನ-ಆಧುನಿಕ, ಪೂರ್ವ-ಪಶ್ಚಿಮ, ಸಂಯಮ-ಉಪಭೋಗ, ದೇಶೀಯತೆ – ವಿಶ್ವಾತ್ಮಕತೆ – ಇವು ಗೆರೆಹೊಡೆದಷ್ಟು ಸ್ಪಷ್ಟವಾಗಿ ಒಂದಕ್ಕೆ ಎದುರಾಗಿ ಇನ್ನೊಂದು, ಒಂದರಿಂದ ಪ್ರತ್ಯೇಕವಾಗಿ ಇನ್ನೊಂದು ಎಂಬಂತೆ ನಮಗೆ ಎದುರಾಗುತ್ತವೆಯೇ ಎಂಬ ಸಂದೇಹವೂ ಅನಂತಮೂರ್ತಿ ಅವರಿಗಿದೆ. ಸಂಕರ, ಮಾಲಿನ್ಯ ಮತ್ತು ಒಂದು ಇನ್ನೊಂದರಲ್ಲಿ ಕಲಸಿಕೊಂಡಿರುವ ಸ್ಥಿತಿ ಅವರ ಚಿಂತನೆಗೆ ಒಂದು ಪೂರ್ವ ಪಕ್ಷ ಮತ್ತು ಗೃಹೀತ, ಹಾಗಾಗಿ ಒಂದು ಕಡೆ ಪ್ರಾಚೀನ, ಪೂರ್ವ, ಸಂಯಮ ದೇಶೀಯತೆ ಮತ್ತು ಅದಕ್ಕೆ ಎದುರಾಗಿ ಇನ್ನೊಂದು ಕಡೆ ಆಧುನಿಕ, ಪಶ್ಚಿಮ, ಉಪಭೋಗ ವಿಶ್ವಾತ್ಮಕತೆ-ಸಾಮಾನ್ಯವಾಗಿ ಎಲ್ಲರೂ ಅಭ್ಯಾಸಬಲದಿಂದ ಮಾಡುವ ಈ ವರ್ಗೀಕರಣವನ್ನು ಅನಂತಮೂರ್ತಿ ನಿರಾಕರಿಸುತ್ತಾರೆ. ಅವರ ಕಣ್ಣಿಗೆ ಬೀಳುವುದು ಹೈಟೆಕ್ ಯೋಗಿಗಳು ಮತ್ತು ನಮ್ಮ ಶ್ರೀಮಂತರ ಕೊಳ್ಳುಬಾಕುತನದಂತಹ ಸರಳ ಅಭಾಸಗಳು ಮಾತ್ರವಲ್ಲ, ಗಾಂಧೀಜಿ ಮತ್ತು ನೆಹರೂ ನಡುವೆ ಮತಬೇಧಗಳಿದ್ದಾಗ್ಯೂ ಅವರಿಬ್ಬರ ನಡುವೆ ಇದ್ದ ಆಕರ್ಷನೆ ಹಾಗು ತನ್ನ ಶಿಷ್ಯ ನರೇಂದ್ರ ಎಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾನೆ ಎಂದು ಪರಮಹಂಸರಿಗಿದ್ದ ಬೆರಗು-ಇವುಗಳಲ್ಲೂ ಅನಂತಮೂರ್ತಿ ವಿಭಿನ್ನ ಸಂಸ್ಕೃತಿಗಳ ಮುಖಾಮುಖಿಯನ್ನು ಗುರುತಿಸುತ್ತಾರೆ. ಈ ಸನ್ನಿವೇಶದಲ್ಲಿ ಎಲ್ಲ ಏಕಪಕ್ಷೀಯ ಆಯ್ಕೆಗಳೂ ಒಂದೋ ಮೂರ್ಖತನ, ಇಲ್ಲವೇ ಆತ್ಮವಂಚನೆ. ಪಶ್ಚಿಮ ಮತ್ತು ಆಧುನಿಕ ಕಾಲದ-ಅವೆರಡೂ ಒಂದೇ ಎಂದು ಅನಂತಮೂರ್ತಿ ಕರ್ನಾಟಕದಲ್ಲಿ ಒಂದನೆಯ ತರಗತಿಯಿಂದಲೇ ಇಂಗ್ಲಿಷ್‌ಕಲಿಕೆ ಅವಶ್ಯ ಎಂದು ಪ್ರತಿಪಾದಿಸುತ್ತಾರೆ; ನಮ್ಮ ನಮ್ಮ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಕಾರಣವಾದ ಆಕ್ಷೇಪಗಳನ್ನು ಹೇಳುತ್ತಲೇ, ಈ ಮಾದರಿಯ ಅಭಿವೃದ್ಧಿ ನಮ್ಮ ಅತೀವ ಹಂಬಲವೂ ಹೌದಲ್ಲವೇ ಎಂದು ಅವರು ತಮಗೆ ತಾವೇ ಎಂಬಂತೆ ಪ್ರಶ್ನಿಸುತ್ತಾರೆ. ಯಾವ ಆಯ್ಕೆಯೂ ಸುಲಭವಲ್ಲ; ಸ್ವಯಂಸಿದ್ಧವೂ ಅಲ್ಲ. ಹೇಗೆ ಆಯ್ದುಕೊಂಡರೂ ಪಾಡು ತಪ್ಪಿದ್ದಲ್ಲ ಎಂಬ ಸಂಕಟದಲ್ಲೇ ಈ ಸಂಕಲನದಲ್ಲೂ ಅನಂತಮೂರ್ತಿ ಮಾತಾಡುವುದು.

ಸಂಸ್ಕೃತಿ, ಧರ್ಮ ಮತ್ತು ಪರಂಪರೆ ಸಂಕಲನದ ಪ್ರಬಂಧಗಳಲ್ಲಿ ಮತ್ತೆ ಮತ್ತೆ ಚರ್ಚಿತವಾಗಿರುವ ವಿಷಯಗಳು. ಈ ಚರ್ಚೆಯಲ್ಲಿ ಅನಂತಮೂರ್ತಿಯವರದ್ದು ಈ ಲೋಕದ ಬದುಕಿನಲ್ಲಿ ತನ್ಮಯನಾಗದೆ ತನ್ನ ಎಚ್ಚರವನ್ನು ಉಳಿಸಿಕೊಂಡಿರುವವನ ನಿಲುವು. ಕವಿಗೆ, ತನ್ಮಯತೆ, ಪರವಶತೆಗಳಿಗೆ ತನ್ನನ್ನು ಒಪ್ಪಿಸಿಕೊಳ್ಳದೆ ಕೆಲವು ಅನುಭವಗಳು ದಕ್ಕುವುದಿಲ್ಲ. ಆದರೆ ಈ ಬಗೆಯ ತಾದಾತ್ಯ್ಮದಲ್ಲಿ ಜಗತ್ತಿನ ಕೆಲವು ಸತ್ಯಗಳು ಕಾಣಿಸುವುದೂ ಇಲ್ಲ. ಕವಿಯೂ, ವೈಚಾರಿಕನೂ ಆದ ಅನಂತಮೂರ್ತಿ ತನ್ನ ಬರವಣಿಗೆಯಲ್ಲಿ ತನ್ಮಯತೆ ಮತ್ತು ಎಚ್ಚರ ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಯತ್ನಿಸುವವರು. ಹಾಗಾಗಿ ಸಂಸ್ಕೃತಿ ಅವರಮಟ್ಟಿಗೆ ನಮ್ಮ ಬದುಕಿನಲ್ಲಿ ಸೇರಿಹೋಗಿರುವ ಅಂತಃಸತ್ವ ಮಾತ್ರವಲ್ಲ. ಈ ಸಂಕಲನದ ಒಂದು ಮುಖ್ಯ ಪ್ರಬಂಧ ‘ಸಂಪ್ರದಾಯ, ಆಧುನಿಕತೆ ಮತ್ತು ಪರ್ಯಾಯ ಸಂಸ್ಕೃತಿ’ಯ ಮೊದಲಿಗೇ ಅವರು ಹೇಳುತ್ತಾರೆ. ‘ನಮ್ಮ ಸಂಸ್ಕೃತಿಗೆ ಮುಖಾಮುಖಿಯಾಗುವ ಸಂದರ್ಭದಲ್ಲಿ ನಾವು ಮೊದಲು ಎದುರಿಸುವ ವಿರೋಧಾಭಾಸಗಳ ಬಗ್ಗೆ ವಿವೇಚಿಸಲು ಪ್ರಯತ್ನಿಸುತ್ತೇನೆ’, ‘ಸಂಸ್ಕೃತಿಗೆ ಮುಖಾಮುಖಿಯಾಗುವುದು’ ಎಂಬ ಮಾತೇ ಸಂಸ್ಕೃತಿಯನ್ನು ಪ್ರಶ್ನಿಸುವುದು, ಬೆಲೆಗಟ್ಟುವುದು, ಅವಶ್ಯಬಿದ್ದರೆ ಎದುರಿಸುವುದು ಎಂಬ ಅರ್ಥಗಳನ್ನು ಧ್ವನಿಸುತ್ತದೆ. ಸಂಸ್ಕೃತಿಯ ಆರಾಧಕನಿಗೆ ಸಂಸ್ಕೃತಿ ಜೊತೆ ಮುಖಾಮುಖಿಯಾಗುವ ಜರೂರು ಇಲ್ಲ. ಸಂಸ್ಕೃತಿಯನ್ನು ಆಧುನಿಕ ರಾಷ್ಟ್ರಪ್ರಭುತ್ವದ ಜೊತೆ ಸಮೀಕರಿಸುವ ಹಿಂದುತ್ವವಾದಿಗೆ ಈ ಮಾತೇ ದೈವ ರಾಷ್ಟ್ರನಿಂದೆಯಹಾಗೆ ಕೇಳಿಸುತ್ತದೆ. ಇನ್ನು ವಿರೋಧಾಭಾಸಗಳ ಮಾತಿಗೆ ಬಂದರೆ, ಹಿಂದುತ್ವ ಮಾತ್ರವಲ್ಲ; ಯಾವ ಸಿದ್ಧಾಂತವೂ ವಿರೋಧಾಭಾಸಗಳನ್ನು ಒಪ್ಪಿಕೊಳ್ಳುವುದಿಲ್ಲ. ಸಿದ್ಧಾಂತಗಳ ತಾರ್ಕಿಕಲೋಕದೃಷ್ಟಿಗೆ ವಿರೋಧಾಭಾಸಗಳನ್ನು ಅಲ್ಲಗಳೆಯುವುದು ಅನಿವಾರ್ಯ. ಅನಂತಮೂರ್ತಿ ಸಮಾಜವಾದಿಯಾದರೂ ಅದರ ಸಿದ್ಧಾಂತಕ್ಕೆ ಬದ್ಧರಾದವರಲ್ಲ. ಈ ಸಂಕಲನದಲ್ಲಿ ಅವರು ಒಂದೆಡೆ ಹೇಳುವ ‘ನಿಲುವಿಗೆ ಬದ್ಧರಾಗಿ ಸತ್ಯಕ್ಕೆ ಕುರುಡಾಗುವ’ ಮಾತೇ ಎಲ್ಲ ಬಗೆಯ ಸೈದ್ಧಾಂತಿಕ ಬದ್ಧತೆಗಳ ಬಗ್ಗೆ ಅವರಿಗೆ ಇರುವ ಭಯವನ್ನು ಸೂಚಿಸುತ್ತದೆ. ಸಿದ್ಧಾಂತಗಳ ವಕ್ತಾರರಿಗೆ ತಲೆಹರಟೆ ಎಂದೋ, ವ್ಯಕ್ತಿವಾದ ಎಂದೋ ಕಾಣುವ ಈ ಸ್ವಾತಂತ್ರದಲ್ಲಿಯೇ ಲೇಖಕ ವಿರೋಧಾಭಾಸಗಳನ್ನು ಗುರುತಿಸುವುದು. ಉದಾಹರಣೆಗೆ ಅನಂತಮೂರ್ತಿ  ಪು.ತಿ.ನ. ಬಗ್ಗೆ ಬರೆಯುತ್ತಾ ರಿಚುಯಲ್‌ಗಳು ಪು.ತಿ.ನ.ಗೆ ಸೌಂದರ್ಯದ ಅಭಿವ್ಯಕ್ತಿಯಾಗಿರುವುದನ್ನು, ಆ ದೃಷ್ಟಿಗೆ ತನ್ನದೇ ಆದ ನೆಲೆಗಟ್ಟು ಇರುವುದನ್ನು ಹೇಳುತ್ತಲೇ ಇರುವುದನ್ನು ಹೇಳುತ್ತಲೇ ತಾನು ಯಾಕೆ ರಿಚುಯಲ್‌ಗಳನ್ನು ಪು.ತಿ.ನರಂತೆ ನೋಡಲಾರೆ ಎಂಬುದನ್ನು ಹೇಳುತ್ತಾರೆ. ಆ ಬಗ್ಗೆ ಅವರಿಗೆ ಪಶ್ಚಾತ್ತಾಪವೂ ಇಲ್ಲ. ಯಾಕೆಂದರೆ ಭಾರತದಲ್ಲಿ ರಿಚುಯಲ್‌ಗಳನ್ನು ಸೃಷ್ಟಿಸಿದ ವರ್ಗವೇ ಅಸ್ಪೃಶ್ಯತೆಗೂ ಕಾರಣವಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಅನಂತಮೂರ್ತಿ ಪು.ತಿ.ನ ಬಗ್ಗೆ ಬರೆಯುತ್ತಾ ರಿಚುಯಲ್‌ಗಳು ಪು.ತಿ.ನಗೆ ಸೌಂದರ್ಯದ ಅಭಿವ್ಯಕ್ತಿಯಾಗಿರುವುದನ್ನು, ಆ ದೃಷ್ಟಿಗೆ ತನ್ನದೇ ಆದ ನೆಲೆಗಟ್ಟು ಇರುವುದನ್ನು ಹೇಳುತ್ತಲೇ ತಾನುಯಾಕೆ ರಿಚುಯಲ್‌ಗಳನ್ನು ಪು.ತಿ.ನರಂತೆ ನೋಡಲಾರೆ ಎಂಬುದನ್ನು ಹೇಳುತ್ತಾರೆ. ಆ ಬಗ್ಗೆ ಅವರಿಗೆ ಪಶ್ಚಾತ್ತಾಪವೂ ಇಲ್ಲ. ಯಾಕೆಂದರೆ ಭಾರತದಲ್ಲಿ ರಿಚುಯಲ್‌ಗಳನ್ನು ಸೃಷ್ಟಿಸಿದ ವರ್ಗವೇ ಅಸ್ಪೃಶ್ಯತೆಗೂ ಕಾರಣವಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಅನಂತಮೂರ್ತಿ ಪು.ತಿ.ನ ಬಗ್ಗೆ ತೋರುವ ಈ ಪ್ರತಿಕ್ರಿಯೆ, ಸರಳವಾದ ಪ್ರಗತಿ-ಶೀಲತೆಯೂ ಅಲ್ಲ, ಸರ್ವಜ್ಞ ಗರ್ವದ ಯುರೋ ಕೇಂದ್ರಿತ ಆಧುನಿಕತೆಯೂ (ಅವರದ್ದೇ ಮಾತು) ಅಲ್ಲ. ನಮ್ಮಲ್ಲಿ ಚಾಲ್ತಿಯಲ್ಲಿರುವ ಪ್ರಗತಿಶೀಲತೆಯೂ ಇದೇ ಆಧುನಿಕತೆಯ ಒಂದು ಬಳುವಳಿ. ಅನಂತಮೂರ್ತಿ ಇದರ ಆಶಯಗಳನ್ನು ಮತ್ತು ಸ್ವಾತಂತ್ರ್ಯದ ಭರವಸೆಗಳನ್ನು ಸಂದೇಹಿಸುತ್ತಾರೆ. ಈ ಆಧುನಿಕತೆಯ ಕಾಲಗಣನೆಗೆ ಯುರೂಪ್‌ನ ಜ್ಞಾನಯುಗವೇ ನಿಕಷ. ಅದು ಕಾಲದ ಹರಿವನ್ನು, ಇತಿಹಾಸದ ಗತಿಯನ್ನೂ ಸರಳರೇಖೆಯಲ್ಲಿ ಸಾಗಿಬಂದಿರುವ ವಿಕಾಸಪಥವೆಂದು ಬಗೆಯುತ್ತದೆ. ಈ ಕಾಲಗಣನೆಯಲ್ಲಿ ಮನುಷ್ಯ ಇತಿಹಾಸಪೂರ್ವ ಕಾಲದಿಂದ ಈಚೆಗೆ ಹಲವು ಮಜಲುಗಳನ್ನು ದಾಟಿ, ಹಂತ ಹಂತವಾಗಿ ವಿಕಾಸ ಹೊಂದುತ್ತಾ ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರದ ನಂತರ ಸದ್ಯದ ಐ.ಟಿ. ಕ್ರಾಂತಿಯ ಸ್ಥಿತಿಗೆ ತಲುಪಿದ್ದಾನೆ. ಅರ್ಥಾತ್ ಈ ಅಭಿವೃದ್ಧಿ ಪಥದಲ್ಲಿ ಅಮೆರಿಕ ಮತ್ತು ಯೂರೋಪ್ ಭಾರತಕ್ಕಿಂತ ತುಂಬ ಮುಂದೆ ಇದೆ; ಆದರೆ ನಾವು ಆ ಹಾದಿಯಲ್ಲಂತೂ ಇದ್ದೇವೆ. ವಸಾಹತುಶಾಹಿ ಪರಿಭಾಷೆಯಲ್ಲಿ ಹೇಳುವುದಾದರೆ ಅಮೆರಿಕ ಮತ್ತು ಯುರೋಪ್ ಪ್ರೌಢಾವಸ್ಥೆಗೆ ತಲುಪಿದ್ದರೆ ನಾವು ಸಧ್ಯಕ್ಕೆ ಕಿಶೋರಾವಸ್ಥೆಯಲ್ಲಿ ಇದ್ದೇವೆ. ಅಮೆರಿಕ ಯುರೋಪ್‌ಗಳಂತೆ ಪ್ರೌಢರಾಗುವುದೇ ನಮ್ಮ ಮುಂದಿರುವ ಏಕೈಕ ಮಾರ್ಗ. ಭಾರತದ ಮಧ್ಯಮ ವರ್ಗದವರ ಹಂಬಲವೂ ಅದೇ. ಅನಂತಮೂರ್ತಿ ಈ ಐರೋಪ್ಯ ಕಾಲಗಣನೆಯನ್ನೂ ನಮ್ಮ ಮಧ್ಯಮವರ್ಗದ ಹಂಬಲವನ್ನೂ ತಿರಸ್ಕರಿಸುತ್ತಾರೆ. ಸರಳ ರೇಖಾತ್ಮಕ ಐರೋಪ್ಯ ಕಾಲಗಣನೆ ಮತ್ತು ನಮ್ಮ ಮಧ್ಯಮ ವರ್ಗದ ಆಧುನಿಕತೆಯ ಹಂಬಲ ಎರಡನ್ನೂ ಒಟ್ಟಾಗಿ ಪ್ರತಿನಿಧಿಸುವುದು ಸ್ವಾತಂತ್ರೋತ್ತರ ಭಾರತ ಆಯ್ದುಕೊಂಡ ಅಭಿವೃದ್ಧಿಯ ಮಾದರಿ. ಉದ್ಯಮ, ಅಣೆಕಟ್ಟು, ಹೆದ್ದಾರಿಗಳು, ಗಣಿಗಾರಿಕೆ ಮತ್ತು ಯದ್ವಾತದ್ವಾ ನಗರೀಕರಣ-ಇವು ಈ ಅಭಿವೃದ್ಧಿಯ ಮೂರ್ತ ರೂಪಗಳು. ಒಂದು ಅಂದಾಜಿನ ಪ್ರಕಾರ, ಅಭಿವೃದ್ಧಿಯ ಯೋಜನೆಗಳು ಭಾರತದಲ್ಲಿ ೫ ಕೋಟಿ ಜನರನ್ನು ತಮ್ಮ ಊರು ಮನೆಗಳಿಂದ ಬಲಾತ್ಕಾರವಾಗಿ ಒಕ್ಕಲೆಬ್ಬಿಸಿವೆ. ಈ ಪ್ರಕ್ರಿಯೆಯಲ್ಲಿ ನಾಶಗೊಂಡ ಸಮುದಾಯ ಸಂಸ್ಕೃತಿಗಳು ಹಾಗು ನದಿ, ಕಾಡುಗಳ ಜೀವಜಗತ್ತು ಯಾವ ಲೆಕ್ಕಕ್ಕೂ ಸಿಗುವಂತಹುದಲ್ಲ. ಈ ಅಭಿವೃದ್ಧಿ ಮಾದರಿಯ ಇತ್ತೀಚಿಗಿನ ಬಲಿ ನರ್ಮದಾ ಯೋಜನೆಯ ಸಂತ್ರಸ್ಥರು. ಈ ಸನ್ನಿವೇಶದಲ್ಲಿ ಸೂಕ್ಷ್ಮಜ್ಞನಾದವನಿಗೆ ಗತಕಾಲವೂ ಸಮಸ್ಯೆ. ವರ್ತಮಾನವೂ ಸಮಸ್ಯೆ. ಸಂಕಲನದಲ್ಲಿ ಅನಂತಮೂರ್ತಿ ಬರೆಯುತ್ತಾರೆ ‘ವಿಘಟನೆಗೊಳಗಾದ ಸಂಸ್ಕೃತಿಯಲ್ಲಿ ಬದುಕುತ್ತಿರುವ ನಮಗೆ ನಮ್ಮ ಕಾಣ್ಕೆಯ ಬಗ್ಗೆ ಪ್ರಾಮಾಣಿಕವಾಗಿರುವುದು ಕಷ್ಟಕರವಾಗಿದೆ… ನೆಲಕ್ಕೆ ಬೇರೂರಿದ್ದರೂ ಸಾಲದು; ವೈಚಾರಿಕರಷ್ಟೇ ಆಗಿದ್ದರೂ ಸಾಲದು’ ಈ ಸ್ಥಿತಿಯಲ್ಲಿ ಲೇಖಕನಾಗಿ ಅನಂತಮೂರ್ತಿ ಪೂರ್ತಿ ಒಳಗಿನವರೂ ಅಲ್ಲ, ಪೂರ್ತಿ ಹೊರಗಿನವರೂ ಅಲ್ಲ; ಹೊಸ್ತಿಲ ಮೇಲೆ ನಿಂತವರು. ಅಥವಾ ಅವರೇ ತಮ್ಮ ಬಗ್ಗೆ ಹೇಳಿಕೊಂಡಿರುವಂತೆ ‘ಕ್ರಿಟಿಕಲ್ ಇನ್‌ಸೈಡರ್’.

ಲೇಖಕನಿಗೆ ಮಾತ್ರವಲ್ಲ, ಯಾರಿಗೂ ಯಾವ ಆಸರೆಯೂ ಇಲ್ಲದಂತಹ ದಿನಗಳು ಇವು. ಅನಂತಮೂರ್ತಿಯವರ ಈ ಪುಸ್ತಕ ಪ್ರಕಟವಾಗುತ್ತಿರುವ ಸಂದರ್ಭ ಹೇಗಿದೆ ನೋಡಿ; ಕರ್ನಾಟಕದ ಗಣಿಗಾರಿಕೆಯ ವಿವಾದ-ಈ ಕುರಿತು ಅನಂತಮೂರ್ತಿಯವರೂ ಸಾಕಷ್ಟು ಬರೆದಿದ್ದಾರೆ-ನಮ್ಮ ಬದುಕಿನ ಹಂದವರೇ ಎಷ್ಟು ಭ್ರಷ್ಟಗೊಂಡಿದೆ ಎಂಬುದನ್ನು ಸೂಚಿಸುವಂತಿದೆ. ಇದರ ಮೂಲದಲ್ಲಿರುವುದು ಕೇವಲ ರಾಜಕಾರಣಿಗಳ ಅನೈತಿಕತೆ ಎಂದು ನಾವು ಭಾವಿಸಕೂಡದು. ಕರ್ನಾಟಕದ ಬಳ್ಳಾರಿಯಲ್ಲಿ ನೆಲದ ಮೈಕೆರೆದು ತೆಗೆದ ಕಬ್ಬಿಣದ ಅದಿರು ಹೋಗುತ್ತಿರುವುದು ಚೀನಾಕ್ಕೆ. ಚೀನಾ ತನ್ನನ್ನು ಸಮಾಜವಾದಿ ಎಂದು ಕರೆದುಕೊಂಡರೂ ಅದು ಈಗ ಅನುಸರಿಸುತ್ತಿರುವುದು ಮಾತ್ರ ಪಶ್ಚಿಮ ಹಾಕಿಕೊಟ್ಟ ಅಭಿವೃದ್ಧಿ ಪಥವನ್ನೇ. ನಮ್ಮ ನರ್ಮದಾ ಯೋಜನೆಯಂತಹ ಹಳವಂಡಗಳು ಅಲ್ಲಿಯೂ ಇವೆ. ಚೀನಾದ ಪ್ರಭುತ್ವಕ್ಕೆ ಇದು ನಿವಾರಿಸಬೇಕಾದ ಸಮಸ್ಯೆ ಅನ್ನಿಸಿಲ್ಲ. ನಿವಾರಿಸಬೇಕಾದ್ದು ಈ ಯೋಜನೆಗಳಿಂದ ನಿರ್ವಹಿತರಾಗುವ ಜನರನ್ನು. ಜನರನ್ನು ನಿವಾರಿಸುವುದರಲ್ಲಿ ವಾಸ್ತವವಾಗಿ ಭಾರತದ ಪ್ರಭುತ್ವಕ್ಕೆ ಚೀನಾವೇ ಕೆಲವು ಪಾಠಗಳನ್ನು ಕಲಿಸೀತು. ಭಾರತದ ಹಾಗೆಯೇ ಅಭಿವೃದ್ಧಿ ಪಥದಲ್ಲಿರುವ ಭಾರತಕ್ಕಿಂತ ತುಂಬ ಮುಂದೆಯೂ ಇರುವ ಚೀನಾಕ್ಕೆ ಈಗ ಭಾರೀ ಪ್ರಮಾಣದ ಕಬ್ಬಿಣ ತುರ್ತಾಗಿ ಬೇಕಾಗಿದೆ. ಮುಂದಿನ ಒಲಂಪಿಕ್ಸ್‌ನಿಂದಾಗಿ ಚೀನಾಕ್ಕೆ ಯುರೋಪ್‌, ಅಮೆರಿಕಗಳ ಎದುರು ಸರೀಕನಂತೆ ತಲೆ ಎತ್ತಿ ನಿಲ್ಲಲ್ಲು ಸಾಧ್ಯವಾಗುತ್ತದೆ. ಬೃಹತ್ ಸ್ಟೇಡಿಯಂಗಳಲ್ಲಿ ರಾಶಿ ರಾಶಿ ಜನ ಮ್ತು ಹಾರಾಡುವ ಧ್ವಜಗಳ ಎದುರು ನಡೆಯುವ ಕ್ರೀಡಾಕೂಟಗಳು ಆಧುನಿಕ ರಾಷ್ಟ್ರ ಪ್ರಭುತ್ವಗಳ ಹೆಗ್ಗುರುತು. ಅವು ನಾಝಿ ಜರ್ಮನಿಗೂ ಬಂಡವಾಳಶಾಹಿ ಅಮೆರಿಕಕ್ಕೂ ಸೋವಿಯತ್ ರಷ್ಯಾಕ್ಕೂ, ಸಮಾಜವಾದಿ ಚೀನಾಕ್ಕೂ ಸಮಾನವಾಗಿ ಪ್ರಯೋಜನಕ್ಕೆ ಬರುತ್ತವೆ. ಹೀಗೆ, ಈಗ ಚೀನಾಕ್ಕೆ ಕಬ್ಬಿಣದ ಹಸಿವು; ಅದನ್ನು ನೀಗಿಸಲು ಬಳ್ಳಾರಿಯ ಅದಿರು. ಇಲ್ಲಿ ಅದು ಅಸಹನೀಯ ಪರಿಸ್ಥಿತಿಯಲ್ಲಿ, ತಮ್ಮ ಆಯುರಾರೋಗ್ಯವನ್ನು ಬಲಿಕೊಟ್ಟು ದಿನಗೂಲಿಗೆ ದುಡಿಯುತ್ತಿರುವ ಕೂಲಿಯಾಳುಗಳನ್ನೂ ದಿನಕ್ಕೆ ಕೋಟಿಗಟ್ಟಲೆ ಸಂಪಾದಿಸುತ್ತಿರುವ ಗಣಿ ಮಾಲೀಕರನ್ನೂ, ಅವರಿಂದ ದುಡ್ಡು ಹೊಡೆದುಕೊಳ್ಳುವ ರಾಜಕಾರಣಿಗಳನ್ನೂ ಸೃಷ್ಟಿಸಿದೆ. ಗಣಿಗಾರಿಕೆಯನ್ನು ಖಾಸಗೀಕರಣಗೊಳಿಸಿದ ಸರ್ಕಾರದ ಹೊಸ ಆರ್ಥಿಕ ನೀತಿ ಈ ಬಗೆಯ ಗಣಿಗಾರಿಕೆಯನ್ನು ನ್ಯಾಯಸಮ್ಮತಗೊಳಿಸಿಬಿಟ್ಟಿದೆ. ಕೆಲವು ವರ್ಷಗಳ ಹಿಂದೆ, ವಿಜಯನಗರ ಉಕ್ಕಿನ ಕಾರ್ಖಾನೆಗಾಗಿ ರ್ಯಾಲಿ, ಜಾಥಾ, ಮೆರವಣಿಗೆಗಳ ಮುಖಾಂತರ ಸರಕಾರವನ್ನು ಆಗ್ರಹಪಡಿಸುತ್ತಿದ್ದ ಕಮ್ಯೂನಿಷ್ಟರು, ಹೊಸ ಆರ್ಥಿಕ ಸನ್ನಿವೇಶದಲ್ಲಿ ತಮ್ಮ ಕೂಗನ್ನು ಕೇಳುವವರೇ ಇಲ್ಲವೆಂಬುದನ್ನು ಮನಗಂಡು ಮೌನವಾಗಿದ್ದಾರೆ. ಬಳ್ಳಾರಿಯ ಗರ್ಭಪಾತಮಾಡಿಸಿ ಹೊರತೆಗೆಯುವ ಅದಿರು ಚೀನಾಕ್ಕೆ ಹೋಗುತ್ತಿರುವುದರ ಅರ್ಥವೇನು? ಎಂದು ಸಹ ಅವರು ಈಗ ತಮ್ಮನ್ನು ತಾವು ಕೇಳಿಕೊಳ್ಳುತ್ತಿಲ್ಲ. ತಾವೇ ಇಷ್ಟು ವರ್ಷ ಕಣ್ಣುಮುಚ್ಚಿ ಪ್ರತಿಪಾದಿಸುತ್ತಿದ್ದ ಅಭಿವೃದ್ಧಿ ದೇಶವನ್ನುಎಲ್ಲಿಗೆ ಮುಟ್ಟಿಸಿದೆ ಎಂಬ ಪ್ರಶ್ನೆಯನ್ನಂತೂ ಅವರು ಇದುವರೆಗೆ ಕೇಳಿಕೊಂಡಿಲ್ಲ. ಕಳೆದ ವರ್ಷ, ಜೂನ್ ತಿಂಗಳ ಸುರಿಯುವ ಮಳೆಯಲ್ಲಿ ಮಹಾರಾಷ್ಟ್ರ ಸರಕಾರ ಮುಂಬಯಿ ಷಹರಿನಲ್ಲಿ ಒಂದು ಲಕ್ಷದಷ್ಟು ಕೊಳಗೇರಿ ನಿವಾಸಿಗಳನ್ನು ಒಕ್ಕಲೆಬ್ಬಿಸಿ, ಅವರ ಜೋಪಡಿಗಳನ್ನು ಬುಲ್ಡೋಜರ್‌ಗಳಿಂದ ನೆಲಸಮ ಮಾಡಿತು ಷಹರನ್ನು ‘ಅಭಿವೃದ್ಧಿ’ಪಡಿಸಲು. ಆ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ‘ಮುಂಬಯಿಯನ್ನು ಶಾಂಘ್ಯಾ ಮಾಡುವುದಾಗಿ ಘೋಷಿಸಿದರು. ಚೀನಾದ ಒಲಂಪಿಕ್ಸ್‌ಗೆ ಬಳ್ಳಾರಿಯ ಅದಿರು: ಮುಂಬೈಯನ್ನು ಶಾಂಘ್ಯಾ ಮಾಡಲು ಕಡುಬಡವರ ಮನೆದ್ವಂಸ! ಇದರ ವ್ಯಂಗ್ಯ ಬಲ ಪಂಥೀಯರಿಗಾಗಲೀ; ಸ್ವಘೋಷಿತ ಎಡಪಂಥೀಯರಿಗಾಗಲೀ ಹೊಳೆಯುವುದಿಲ್ಲ. ಸಿದ್ದಾಂತ ಅಥವಾ ಪಾರ್ಟಿಪ್ರೋಗ್ರಾಮುಗಳ ವಶಕ್ಕೆ ತನ್ನನ್ನು ಯಾವತ್ತೂ ಒಪ್ಪಿಸಿಕೊಳ್ಳದೆಯೂ ಸಮಾಜವಾದಿಯಾಗಿರುವ ಅನಂತಮೂರ್ತಿಯಂತಹವರು ಮಾತ್ರ ನಮ್ಮ ಸದ್ಯದ ಸನ್ನಿವೇಶದ ಈ ದುರ್ಬರ ವೈಪರಿತ್ಯಗಳನ್ನು ಗ್ರಹಿಸಬಲ್ಲರು. ನಿಜವಾಗಿ ನೋಡಿದರೆ ಈ ಕಾಲದ ಅಸಂಗತತೆಯನ್ನು ಗ್ರಹಿಸಲು ಸಮಾಜವಾದಿ ದರ್ಶನವೇ ಬೇಕು. ಈ ಹಿನ್ನೆಲೆಯಲ್ಲಿ ಇಲ್ಲಿನ ಪ್ರಬಂಧಗಳು-ಅವುಗಳ ವಿಷಯ ಯಾವುದೇ ಇರಲಿ-ನಮ್ಮ ಕಾಲದ ದಾಖಲೆಗಳಂತೆಯೂ ಇವೆ.

*

ಒಂದು ಝೆನ್‌ಕಥೆ:

ಗುರು ಶುಜನ್ ಮುಂದೆ ಕೂತಿದ್ದ ಬಿಕ್ಷುಗಳ ಎದುರು ತನ್ನ ದಂಡವನ್ನು ಎತ್ತಿ ಹಿಡಿದು ಗಾಳಿಯಲ್ಲಿ ಆಡಿಸಿದ

ಕೇಳಿದ.

‘ನೀವು ಇದನ್ನು ದಂಡ ಎಂದ ಪಕ್ಷದಲ್ಲಿ ಇದರ ಭವಿಷ್ಯದ ಅವಸ್ಥಾಂತರಗಳನ್ನು ಎಂದರೆ ಇದರ ಅನಂತ ಅಸ್ತಿತ್ವದ ಸತ್ಯವನ್ನು ಅಲ್ಲಗಳೆಯುತ್ತೀರಿ. ದಂಡ ಎನ್ನದೆ ಹೋದ ಪಕ್ಷದಲ್ಲಿ ಇದರ ವರ್ತಮಾನ ಸ್ಥಿತಿಯನ್ನು ನಿರಾಕರಿಸುತ್ತೀರಿ. ಈಗ ಹೇಳಿ, ಇದಕ್ಕೆ ಏನೆನ್ನುತ್ತೀರಿ? (ಝೆನ್‌ಕೆ.ವಿ. ಸುಬ್ಬಣ್ಣ. ಅಕ್ಷರ ಪ್ರಕಾಶನ. ಸಾಗರ ೧೯೮೫. ಪು.೭೫)

ಅನಂತಮೂರ್ತಿ, ತನ್ನ ಪಾಡಿಗೆ ತಾನಿರುವ ಲೇಖಕರಲ್ಲ. ಈ ಕಾಲದ ಎಲ್ಲ ಉಪದ್ವಾಪ್ಯಗಳನ್ನು ಹಚ್ಚಿಕೊಂಡು, ಸಾರ್ವಜನಿಕ ವಿದ್ಯಮಾನಗಳೀಗೆ ಮೊದಲಿನಿಂದಲೂ ಪ್ರತಿಕ್ರಿಯೆ ನೀಡುತ್ತಲೇ ಬಂದಿರುವ ಬುದ್ಧಿಜೀವಿ ಅವರು ಪಬ್ಲಿಕ್ ಇಂಟೆಲೆಕ್ಚುಯಲ್. ಆಧುನಿಕ ಕನ್ನಡ ಲೇಖಕರಲ್ಲಿ ಹೆಚ್ಚಿನವರು ಈ ಬಗೆಯ ಸಾರ್ವಜನಿಕ ಬುದ್ದಿಜೀವಿಗಳು. ಅನಂತಮೂರ್ತಿ ತಮ್ಮ ಬರವಣಿಗೆಯಲ್ಲಿ ಈ ಪರಂಪರೆಯನ್ನೇ ಮುಂದುವರೆಸಿದ್ದಾರೆ. ಸಾರ್ವಜನಿಕರಿಗೆ ಮುಖಮಾಡಿನಿಂತ ಬುದ್ಧಿಜೀವಿಗೆ ಕೆಲವು ನಿಲುವುಗಳು ಸಲೀಸಾಗಿಬಿಡುವುದೇ ಒಂದು ಸಮಸ್ಯೆ. ಸರಳವಾದ ಪ್ರಗತಿಶೀಲತೆ ಮತ್ತು ಅದರೊಟ್ಟಿಗೆ ಬರುವ ಆಧುನಿಕತೆಯ ಅಷ್ಟೂ ಸರಕು, ಇಂತಹ ಬುದ್ಧಿಜೀವಿಗಳಿಗೆ ಸುಲಭವಾಗಿ ಒದಗಿ ಬರುವಂತಹದ್ದು. ಜನರಿಗೆ ಸಮ್ಮತವಾಗುವಂತೆ ಬ್ಯಾಡ್‌ಫ಼ೈತ್‌ನಲ್ಲಿ ಮಾತಾಡುವುದು, ಅಪ್ರಿಯ ಸತ್ಯಗಳನ್ನು ಮರೆಮಾಚುವುದು, ಖಾಸಗೀ ಬದುಕು ಮತ್ತು ಸಾರ್ವಜನಿಕ ಪ್ರತಿಪಾದನೆಗಳ ನಡುವೆ ಬಿರುಕು ಮೂಡುವುದು-ಇವು ಕೂಡ ಸಾರ್ವಜನಿಕ ಬುದ್ಧಿಜೀವಿಗಳಿಗೆ ತಗಲಿಕೊಳ್ಳುವ ಸೋಂಕುಗಳು. ತನ್ನೊಳಗೆ ತಾನು ಮುಳುಗಿಹೋಗುವ ಅಂತರ್ಮುಖತೆ ಅಥವಾ ಹೊರಜಗತ್ತಿನ ಗದ್ದಲಗಳಿಗೆ ಸದಾ ತೆರೆದುಕೊಳ್ಳುವುದು-ಎರಡು ಸ್ಥಿತಿಗಳಲ್ಲೂ ಲೇಖಕ ಕಳೆದುಹೋಗುತ್ತಾನೆ. ಹಾಗಾಗಿ ಸೃಜನಶೀಲತೆಯ ಎದುರು ಇರುವ ಆಯ್ಕೆ ಅದೋ ಅಥವಾ ಇದೋ ಎಂಬುದಲ್ಲ. ಈ ಬಿಕ್ಕಟ್ಟಿಗೆ ಅನಂತಮೂರ್ತಿ ಉತ್ತರ ಕಂಡುಕೊಂಡಿರುವುದು ವಾಲ್ಮೀಕಿಯಲ್ಲಿ. ದೀರ್ಘತಪಸ್ಸಿನಲ್ಲಿ ಹುತ್ತಗಟ್ಟಿದ್ದರೂ ಆತ ರೇಶಿಮೆ ಹುಳದಂತೆ ಜಿನುಗಬಲ್ಲ, ದ್ರವಿಸಬಲ್ಲ ಹಸಿಮೈಯವನಾಗಿದ್ದ. ಧ್ಯಾನಸ್ಥನಾದರೂ ವ್ಯಾಮೋಹಿಯಾಗಿದ್ದ. ಋಷಿಯಾದ ವಾಲ್ಮೀಕಿ ಕವಿಯೂ ಆದದ್ದು ಹಾಗೆ. ಈ ಸಂಕಲನದಲ್ಲಿ ನನಗೆ ಅತ್ಯಂತ ಪ್ರಿಯವಾದ ‘ವಾಲ್ಮೀಕಿಯ ನೆವದಲ್ಲಿ’ ಪ್ರಬಂಧದಲ್ಲಿ ಅನಂತಮೂರ್ತಿ ವಾಲ್ಮೀಕಿಯಲ್ಲಿ ಆದರ್ಶ ಋಷಿಯನ್ನು ಕಂಡರೆ ಗಾಂಧೀಜಿಯಲ್ಲಿ ಆದರ್ಶ ಋಷಿ/ಸಾರ್ವಜನಿಕ ಬುದ್ಧಿಜೀವಿಯನ್ನು ಕಾಣುತ್ತಾರೆ. ಇಬ್ಬರೂ ತಮ್ಮ ಅಹಂನಿಂದ ಬಿಡುಗಡೆಗೊಂಡವರು. ಈ ಅಹಂ ಜಾಗೃತವಾದಾಗ ತಾನುಂಟೋ ಮೂರುಲೋಕ ಉಂಟೋ ಎಂಬ ಧಿಮಾಕು. ಈ ಜಗತ್ತಿನ ಸಮಸ್ತವೂ ತನ್ನ ಉಪಭೋಗಕ್‌ಎಕ ಎಂದು ತಿಳಿಯುವ ರಾಕ್ಷಸ ಹಸಿವು ಅದಕ್ಕೆ. ‘ಆದರೆ ಅಹಂ ನಿವೃತ್ತಿಯಾದ ಕಾಲದಲ್ಲಿ ಯಾವುದು ತಾನು? ಯಾವುದು ಪರ? ಮಾನವಕುಲ ಮಾತ್ರವಲ್ಲ; ಸಕಲ ಜೀವಜಂತುಗಳ ಲೋಕವೂ ತನಗೆ ಹೊರಗಾದ ಪರವಲ್ಲ’. ಆದರೆ ಹೀಗೆ ಅಹಂನಿಂದ ಮುಕ್ತವಾದ ಮಸ್ಸು, ನೋಯಬಲ್ಲ, ಹಸಿಮೈಯ ಬೆತ್ತಲೆ ಸ್ಥಿತಿ ಕಳಚಿಕೊಂಡು ಕೊರಡಿನಂತಾಗಿ ವರ್ತಮಾನದ ಸತ್ಯಗಳಿಗೆ ವಿಮುಖವಾಗಿ ಬಿಡಬಹುದು. ಅನಂತಮೂರ್ತಿ ಹೇಳುತ್ತಾರೆ: ‘ತಾನು ಮುಕ್ತನೆಂಬ ಭಾವನೆ ನಾವೆಲ್ಲರೂ ಚರಿತ್ರೆಯಲ್ಲಿ ತಿಳಿದೋ ತಿಳಿಯದೆಯೋ ಪಾಲುದಾರರು ಎನ್ನುವ ಸತ್ಯವನ್ನು ಮರೆಸಬಹುದು’. ವಾಲ್ಮೀಕಿ ಅಹಂನಿಂದ ನಿವೃತ್ತಿ ಪಡೆದೂ ಕ್ರೌಂಚವಧದ ಉದ್ವೇಗದ ಅಳಲಿನ ಆರ್ದ್ರಸ್ಥಿತಿಯನ್ನೂ, ಹಸಿಮೈಯನ್ನೂ ಉಳಸಿಕೊಂಡಿದ್ದ. ಗಾಂಧೀಜಿ ತನ್ನ ಸುತ್ತಲಿನ ಹಿಂಸೆಯನ್ನು ಸ್ವತಃ ಅನುಭವಿಸಿದರು. ಮಾತ್ರವಲ್ಲ; ಈ ಹಿಂಸೆ ತನ್ನಿಂದ ಘಟಿಸಿದ್ದಿರಬಹುದೆ ಎಂದು ಆತಂಕಪಟ್ಟುಕೊಂಡರು. ‘ತಾವು ಮನುಷ್ಯ ಮಾತ್ರರು ಎಂಬುದನ್ನು ಮರೆಯದ ಋಷಿಗಳಿಗೆ ಮಾತ್ರ ನೋವು ನೈತಿಕ ಕಾಣ್ಕೆಯಾಗಬಲ್ಲದು’

ಆಧುನಿಕರಿಗೆ ಸಂಪ್ರದಾಯವಾದಿಯ ಹಾಗೆಯೂ ಸಂಪ್ರದಾಯವಾದಿಗಳಿಗೆ ಆಧುನಿಕನ ಹಾಗೆಯೂ, ಒಂದು ಮಾದರಿಯ ಪ್ರಗತಿಶೀಲರಿಗೆ ಈಗೀಗ ಜಾತಿವಾದಿಯಂತೆಯೂ ಕಾಣುತ್ತಿರುವ ಅನಂತಮೂರ್ತಿ ವಾಸ್ತವವಾಗಿ ಇದು ಯಾವುದೂ ಅಲ್ಲ ಎಂಬುದನ್ನು ಅವರ ಮಾತುಗಳಲ್ಲಿಯೇ ರುಜುವಾತು ಪಡಿಸಬಹುದು. ಹಾಗೆಂದು ಅವರ ನಿಲುವುಗಳನ್ನು ಸಂಕ್ಷೇಪಿಸಲು ಹೊರಟರೆ ಅವರ ಗದ್ಯದಲ್ಲಿ ಎಲ್ಲೆಲ್ಲೂ ವಿರೋಧಾಭಾಸಗಳೇ ಕಂಡೀತು. ಅದು ಸತ್ಯವನ್ನು ಕಂಡುಕೊಂಡವನ ದೃಢನಿರ್ಧಾರದ, ಆತ್ಮವಿಶ್ವಾಸದ ಗದ್ಯವೂ ಅಲ್ಲ; ಪ್ರವಾದಿ/ದಾರ್ಶನಿಕನ ವಾಕ್ಕು ಕೂಡ ಅಲ್ಲ. ಅನಂತಮೂರ್ತಿ ಸತ್ಯವನ್ನು ಸಾಪೇಕ್ಷ ಎಂದು ಯಾವತ್ತೂ ಭಾವಿಸಿದವರಲ್ಲ, ಆಗೆ ಭಾವಿಸುವುದು, ಯಾವ ಬಗೆಯ ಒಪ್ಪಂದಕ್ಕಾದರೂ ತಾನು ಸಿದ್ಧ ಎಂಬ ಮನಃಸ್ಥಿತಿಯಲ್ಲಿ ಮಾತ್ರ ಸಾಧ್ಯ. ಪ್ರಭುತ್ವದ ಸರ್ವಾಧಿಕಾರಕ್ಕೆ ಹೇಳಿಮಾಡಿಸಿದ ಸ್ಥಿತಿ ಅದು. ‘ಆದರೆ ಈ ಲೋಕದ ಸತ್ಯವನ್ನು ಅರಿತುಬಿಟ್ಟೆನೆಂದು ತಿಳಿಯುವ ಸರ್ವಜ್ಞಭಾವದ ಘನವಂತಿಕೆಗೆ ಉದ್ವೇಗವೂ ಇಲ್ಲ; ಸತತವಾಗಿ ಕಾಡುವ, ಒಳಗಿನಿಂದ ಕೊರೆಯುವ ಅಳಲೂ ಇಲ್ಲ. ಎರಡೂ ಇಲ್ಲದವನು ಕವಿಹೃದಯಿಯಂತೂ ಖಂಡಿತ ಅಲ್ಲ. ಅಷ್ಟೇಕೆ ಮಾನವನೂ ಅಲ್ಲ’. (‘ವಾಲ್ಮೀಕಿಯ ನೆವದಲ್ಲಿ’) ಅನಂತಮೂರ್ತಿಯವರ ಗದ್ಯದಲ್ಲಿ ಅಂತಿಮ ಸತ್ಯಗಳೂ ಇಲ್ಲ; ಶಾಶ್ವತ ಸತ್ಯಗಳೂ ಇಲ್ಲ. ಹಾಗೆಂದು ಸತ್ಯವನ್ನು ಸಾಪೇಕ್ಷವೆಂದಾಗಲೀ, ಹಂಗಾಮಿಯೆಂದಾಗಲೀ ಎಂದೂ ಅವರು ಸುತರಾಂ ಭಾವಿಸುವವರಲ್ಲ. ಸತ್ಯವು ಕಾಲದೇಶಬದ್ಧ ಎಂಬ ಮಾತನ್ನು ಅವರು ತಿರಸ್ಕರಿಸುತ್ತಾರೆ. ವ್ಯಾಸ, ವಾಲ್ಮೀಕಿ, ಬಸವ ಅಲ್ಲಮರನ್ನು ಅನಂತಮೂರ್ತಿ ಸಮಕಾಲೀನರೆಂದೇ ತಿಳಿಯುವವರು. ನಮ್ಮ ಕಾಲ ಅವರುಗಳ ಕಾಲಕ್ಕಿಂತ ಮುಂದುವರೆದಿದ್ದು’ ಎಂಬ ಗ್ರಹಿಕೆಯನ್ನಂತೂ ಅವರು ಖಡಾಖಂಡಿತವಾಗಿ ತಿರಸ್ಕರಿಸುತ್ತಾರೆ. ತಮ್ಮ ಗದ್ಯದಲ್ಲಿ ಅನಂತಮೂರ್ತಿ ಖಂಡತಿವಾದಿಯಾಗಿರುವುದು ಕೆಲವೇ ಕೆಲವು ಕಡೆಗಳಲ್ಲಿ-ಹಿಂದುತ್ವದ ಹಿಂಸೆಯನ್ನು ಖಂಡಿಸುವಾಗ, ನರ್ಮದಾ ನದಿ ಯೋಜನೆಯನ್ನು ಪ್ರತಿಭಟಿಸುವಾಗ ಮತ್ತು ಸತ್ಯವು ಕಾಲದೇಶಬದ್ಧ ಅಥವಾ ಸಾಪೇಕ್ಷ ಎಂಬ ಮಾತನ್ನು ತಿರಸ್ಕರಿಸುವಾಗ. ಹಾಗಾಗಿ ಅವರ ಈ ಪ್ರಬಂಧ ಸಂಕಲನದ ನಿಲುವುಗಳನ್ನು ಸಾರಾಂಶರೂಪದಲ್ಲಿ ಹೇಳುವುದಾಗಲೀ ಅದರ ಪರ ಯಾ ವಿರುದ್ಧ ತೀರ್ಮಾನ ನೀಡುವುದಾಗಲೀ ದುಸ್ಸಾಧ್ಯವಾದ ಮಾತು.

ಪ್ರಸ್ತುತ ಸಂಕಲನದಲ್ಲಿ ಒಂದೆಡೆ ಅನಂತಮೂರ್ತಿ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ನನ್ನ ಆಕ್ಷೇಪ ಹೇಳಿ ನನ್ನ ಪ್ರತಿಕ್ರಿಯೆಯನ್ನು ಮುಗಿಸುತ್ತೇನೆ. ಸಂಕಲನದ ‘ಆಧುನಿಕತೆ ಮತ್ತು ಪ್ರಭೆ’ ಎಂಬ ತನ್ನ ಲೇಖನದಲ್ಲಿ ಅನಂತಮೂರ್ತಿ ವಾಲ್ಟರ್ ಜೆಂಬಮಿನ್‌ನ ಸುಪ್ರಸಿದ್ದ ಲೇಖನ The work of art in the age of Mechanical Reproductionನ ನಿಲುವನ್ನು ಹೀಗೆ ವಿವರಿಸುತ್ತಾರೆ ‘… ಸತತ ಉತ್ಪನ್ನವನ್ನು, ಪ್ರತಿಕೃತಿಯನ್ನು ಸಾಧ್ಯಗೊಳಿಸಿದ ಯಂತ್ರದ ತಂತ್ರಜ್ಞಾನದಿಂದ ನಾಶವಾದದ್ದು-ವಾಲ್ಟರ್ ಬೆಂಜಮಿನ್‌ನ ವಿಶಿಷ್ಟವಾದ ಮಾತುಗಳಲ್ಲಿ ಹೇಳುವುದಾದರೆ ಕಲಾಕೃತಿಗಳನ್ನು ಆವರಿಕೊಂಡಿರುವ ಪ್ರಭೆ (aura). ಕಲೆ ಕಳಾಹೀನವಾಗಿ ಸಾಮಾನ್ಯನಿಗೆ ಎಟಕುವಂತಾಗುವುದನ್ನು ಪ್ರಜಾಸತ್ತೆಯಲ್ಲಿ ನಂಬುವ ಬೆಂಜಮಿನ್ ಸ್ವಾಗತಿಸುತ್ತಾನೆ’. ನನ್ನ ಅಸಮಾಧಾನವಿರುವುದು, ಅನಂತಮೂರ್ತಿ ಬೆಂಜಮಿನ್‌ನನ್ನು ಹೀಗೆ ಸಂಕ್ಷೇಪಿಸುವುದರ ಮೂಲಕ ಅವನನ್ನು ಒಂದು ಸರಳ ಮಾರ್ಕ್ಸ್‌‌ವಾದಿ ನಿಲುವಿಗೆ ಕಟ್ಟಿ ಹಾಕುತ್ತಾರೆ ಎಂಬ ಬಗ್ಗೆ. ಬೆಂಜಮಿನ್ ಮಾರ್ಕ್ಸ್‌‌ವಾದದಿಂದ ಅನೇಕ ಅಂಶಗಳನ್ನು ಪಡೆದುಕೊಂಡಿದ್ದರೂ ಯಾವತ್ತೂ ಅದರ ಜೊತೆ ತನ್ನನ್ನು ಇಡಿಯಾಗಿ ಗುರುತಿಸಿಕೊಂಡಿರಲಿಲ್ಲ. ಆತನ ನಿರಂತರ ತೊಳಲಾಟದಲ್ಲಿದ್ದ ಒಬ್ಬ ಸೂಕ್ಷ್ಮಜ್ಞ. ಮೇಲೆ ಹೇಳಿದ ಪ್ರಬಂಧವಿರುವ ಅವನ ಸಂಕಲನ ILLUMINATIONSಗೆ ಬರೆದ ಮುನ್ನುಡಿಯಲ್ಲಿ ಹ್ಲಾನಾ ಆರೆಂಡ್ಟ್‌ ಮಾರ್ಕ್ಸ್‌ವಾದವನ್ನು ಬೆಂಜಮಿನ್ ಒಂದು ಅಂತಿಮ ಪರಿಹಾರ ಅಥವಾ ಗುರಿ ಎಂದು ಯಾವತ್ತೂ ಒಪ್ಪಿಕೊಂಡಿರಲಿಲ್ಲ ಎಂಬ ಅಂಶವನ್ನು ಎತ್ತಿ ತೋರಿಸುತ್ತಾರೆ. ಅವನ ಕಾಲದ ಬೆಳವಣಿಗೆಗಳ ಬಗ್ಗೆ ಮಾರ್ಕ್ಸ್‌ವಾದ ನೀಡುವ ವಿವರಣೆಗಳು ಮತ್ತು ಆಕ್ಷೇಪಗಳ ಮಟ್ಟಿಗೆ ಮಾತ್ರ ಬೆಂಜಮಿನ್ ಮಾರ್ಕ್ಸ್‌ವಾದವನ್ನು ಸ್ವೀಕರಿಸುತ್ತಾನೆ. ಆತ ನಾಝಿ ಜರ್ಮನಿಯಲ್ಲಿ ಬದುಕಿದ್ದ ಒಬ್ಬ ಎರಡಪಂಥೀಯ ಲೇಖಕ ಮತ್ತು ಯಹೂದಿ. ತನ್ನ ಯಹೂದಿ ಧಾರ್ಮಿಕ ಮೂಲಕ್ಕೆ ಮರಳುವ ಬಗ್ಗೆಯೂ ಆತ ಯೋಚಿಸಿದ್ದುಂಟು. ಈ ತೊಳಲಾಟ ಕೊನೆಯವರೆಗೂ ಆತನಲ್ಲಿತ್ತು. ಬೆಂಜಮಿನ್ ತನ್ನ ಕಾಲ ಮತ್ತು ದೇಶ ಎರಡನ್ನೂ ತನ್ನ ಪಾಡು ಎಂದು ಬಗೆದವನು. ಆತ ತನ್ನ ಕಾಲದ ಯಾವ ವಿದ್ಯಮಾನವನ್ನಾದರೂ ಸ್ವಾಗತಿಸುತ್ತಾನೆ ಎಂದು ಹೇಳುವುದೇ ಅವನ ಒಳಮನಸ್ಸಿನ ತುಮುಲಗಳನ್ನು ಅಲ್ಲಗಳೆದಂತೆ.

ಕಲಾಕೃತಿಗಳ ಯಾಂತ್ರಿಕ ಪ್ರತಿಕೃತಿಗಳ ಬಗ್ಗೆ ಬರೆಯುತ್ತಾ ಬೆಂಜಮಿನ್ ಏನು ಹೇಳುತ್ತಾನೆ? ಅವನ ಪ್ರಕಾರ ಕಲಾಕೃತಿಯೊಂದರ ಅತ್ಯಂತ ಕರಾರುವಾಕ್ಕಾದ ಪ್ರತಿಕೃತಿಯಲ್ಲಿಯೂ ಮೂಲದ ಕಾಲದೇಶಗಳು ಕಣ್ಮರೆಯಾಗುತ್ತವೆ. ಜೊತೆಗೆ ಕಲಾಕೃತಿಯ ಅನನ್ಯತೆಯೂ ನಾಶವಾಗುತ್ತದೆ. ಬೆಂಜಮಿನ್‌ನ ಮಾತುಗಳಲ್ಲಿಯೇ ಹೇಳುವುದಾದರೆ ‘ಕಲಾಕೃತಿಗಳ ಯಾಂತ್ರಿಕ ಪ್ರತಿಕೃತಿಗಳಿಂದ ದೇವಮಂದಿರ-ಕೆಥೆಡ್ರಲ್ ಕಲಾಪ್ರೇಮಿಯ ಸ್ಟುಡಿಯೋಕ್ಕೆ ರವಾನೆಯಾಗುತ್ತದೆ’ ಹೀಗೆ ಕಲಾಕೃತಿಯೊಂದರ ಇರಸ್ತಿಕೆಯಿಂದಲೇ ಅದಕ್ಕೆ ಪ್ರಾಪ್ತವಾಗುವ ಗುಣ-the quality of Presence ನಾಶವಾಗುತ್ತದೆ. ಕಲಾಕೃತಿಯೊಂದರ ಅನನ್ಯ ಅಸ್ತಿತ್ವದ ಬದಲು ಅದರ ಪ್ರತಿಕೃತಿಗಳು ಈಗ ಸುಲಭವಾಗಿ ದೊರೆಯುವುದರಿಂದ, ಕಲಾಕೃತಿ ತನ್ನ ಪರಂಪರೆಯಿಂದ ಬೇರ್ಪಡಿಸಲು ಬರುವುದಿಲ್ಲ. ತನ್ನ ಪ್ರಬಂಧದಲ್ಲಿ ಒಂದೆಡೆ ಬೆಂಜಮಿನ್ ಹೀಗೆ ಹೇಳುತ್ತಾನೆ: ‘ಫೋಟೋಗ್ರಫಿ ಮತ್ತು ಅದರ ತಾರ್ಕಿಕ ಬೆಳವಣಿಗೆಯಾದ ಸಿನೆಮಾದ ಸಾರ್ವಜನಿಕ ಮಹತ್ವದ ಕುರಿತು ಅದರೊಟ್ಟಿಗೆ ಸಂಭವಿಸಿದ ಸಾಂಸ್ಕೃತಿಕ ಪರಂಪರೆಯ ವಿನಾಶವನ್ನು ಮರೆತು ಯೋಚಿಸುವಂತಿಲ್ಲ.’ ಕಲೆಗೆ ಆರಣೆಯ ಮಹತ್ವವಿದೆ. ಆದರೆ ಆಚರಣೆಯಲ್ಲಿ ಕಲೆಗೆ ಪ್ರದರ್ಶನಗೊಳ್ಳುವ ಉದ್ದೇಶವಿರುವುದಿಲ್ಲ. (ತನ್ನ ಸಂಕಲನದಲ್ಲಿ ಇನ್ನೊಂದೆಡೆ ಬೆಂಜಮಿನ್‌ಹೇಳುತ್ತಾನೆ; ‘ಯಾವ ಕವಿತೆಯೂ ಓದುಗನಿಗಾಗಿ ಇಲ್ಲ; ಯಾವ ಚಿತ್ರವೂ ನೋಡುಗನಿಗಾಗಿ ಇಲ್ಲ; ಯಾವ ಸಂಗೀತವೂ ಕೇಳುಗನಿಗಾಗಿ ಇಲ್ಲ’.) ಕಲಾಕೃತಿಗಳ ಯಾಂತ್ರಿಕ ಪುನರ್‌ನಿರ್ಮಾನದ ಯುಗದಲ್ಲಿ, ಚರಿತ್ರೆಯಲ್ಲೇ ಮೊದಲಬಾರಿಗೆ ಕಲಾಕೃತಿ ಆಚರಣೆಯಿಂದ ಮುಕ್ತವಾಯಿತು. ಹೆಚ್ಚು ಹೆಚ್ಚು ಪ್ರತಿಗಳನ್ನು ತೆಗೆಯಲು ಅನುಕೂಲವಾಗುವಂತೆ, ಕಲೆ ಸೃಷ್ಟಿಯಾಗತೊಡಗಿತು. ಹಾಗಾಗಿ ಕಲೆ ತನ್ನ ಅರ್ಥವಂತಿಕೆಗೆ, ಆಚರಣೆಯ ಬದಲು ಈಗ ರಾಜಕೀಯವನ್ನು ಅವಲಂಬಿಸುವಂತಾಯಿತು. ಆದಾಗ್ಯೂ ಫೋಟೋಗ್ರಫಿ ತನ್ನ ಪ್ರಾರಂಭದ ದಿನಗಳಲ್ಲಿ ಆರಣೆಯ ಮೌಲ್ಯವನ್ನು ಉಳಿಸಿಕೊಳ್ಳಲು ಹೆಣಗಿತು. ಕ್ಯಾಮರಾದಲ್ಲಿ ಹಿಡಿದ ಮೊತ್ತಮೊದಲ ಭಾವಚಿತ್ರಗಳು ಮುಖಕೇಂದ್ರಿತವಾಗಿದ್ದು, ನಮಗೆ ಆತ್ಮೀಯರಾದವರ ಮುಖಗಳು ‘ಪ್ರಭೆ’ ಅದಕ್ಕಿತ್ತು. ಆದರೆ ಇದು ಕಟ್ಟಕಡೆಯ ಉದಾಹರಣೆಯೆಂದು ಬೆಂಜಮಿನ್ ಹೇಳುತ್ತಾನೆ. ಫೋಟೋಗ್ರಫಿ ಬಗ್ಗೆ ಬರೆಯುತ್ತಾ ಅವನು ರಾಜಕೀಯ ಪ್ರಚಾರದ ಮಹತ್ವವುಳ್ಳ ನ್ಯೂಸ್ ರೀಲುಗಳನ್ನು ಉದಾಹರಿಸುತ್ತಾನೆ. (ನಾಝಿ ಜರ್ಮನಿಯಲ್ಲಿ ತೆಗೆದ ನ್ಯೂಸ್‌ರೀಲುಗಳು ಈಗ ಕಲಾಕೃತಿಗಳೆಂದೇ ಪರಿಗಣಿಸಲ್ಪಟ್ಟಿವೆ) ನ್ಯೂಸ್‌ರೀಲ್‌ನ ಕ್ಯಾಮರಾ ಕೆಲಸ ಮತ್ತು ಧ್ವನಿಮುದ್ರಣ ಭಾರೀ ಮೆರವಣಿಗೆ ರ್ಯಾಲಿ ಹಾಗು ಕ್ರೀಡಾಕೂಟಗಳನ್ನು ಯಥಾವತ್ತಾಗಿ ಪುನರ್ ಸೃಷ್ಟಿಸುತ್ತಿದ್ದವು. ಮಾತ್ರವಲ್ಲ ಸ್ವತಃ ನ್ಯೂಸ್‌ರೀಲ್‌ಗಳೇ ಜನಸಮುದಾಯವನ್ನು ಕಟ್ಟಿದವು. ಈ ಮಾತುಗಳನ್ನು ಬರೆಯುವಾಗ ಬೆಂಜಮಿನ್ ಮನಸ್ಸಿನಲ್ಲಿ ನಾಝಿ ಜರ್ಮನಿಯ ಸಮೂಹ ಸನ್ನಿಯಲ್ಲದೆ ಬೇರೆ ಏನು ಇರಲು ಸಾಧ್ಯ?

ತನ್ನ ಪ್ರಬಂಧದಲ್ಲಿ ಬೆಂಜಮಿನ್ ಯುದ್ಧದ ಬಗ್ಗೆಯೂ ಪ್ರಸ್ತಾಪಿಸುತ್ತಾನೆ. ಆಧುನಿಕ ಕಾಲದಲ್ಲಿ ತಾಂತ್ರಿಕತೆ ಕಲಾಕೃತಿಗಳ ಪ್ರತಿಕೃತಿ ತೆಗೆಯಲು ಮಾತ್ರವೇ ಅಲ್ಲದೆ ಯುದ್ಧದಲ್ಲಿ ಸಹ ಬಳಕೆಯಾಗುತ್ತದೆ. ಯುದ್ಧವೆಂದರೆ ಬೆಂಜಮಿನ್ ಪ್ರಕಾರ ಹಾಲಿ ಆಸ್ತಿ ಸಂಬಂಧಗಳನ್ನು, ವರ್ಗಸಮಾಜವನ್ನೂ ಹಾಗೆ ಉಳಿಸಿಕೊಂಡು ಅನುಸಮುದಾಯವನ್ನು ರಾಜಕೀಯ ಸಂಘಟನೆಗೆ ಸಜ್ಜುಗೊಳಿಸುವುದು. ಇದಕ್ಕೆ ಸರಿಯಾಗಿ ಆ ಕಾಲದಲ್ಲಿ ಮುನ್ನೆಲೆಗೆ ಬಂದ ಫ್ಯಾಸಿಸಿಂ, ಆಸ್ತಿ ಸಂಬಂಧಗಳನ್ನು ಬದಲಾಯಿಸದೆ ಜನರಿಗೆ ಒಂದು ಹೊಸ ಅಭಿವ್ಯಕ್ತಿ ಮತ್ತು ಸೌಂದರ್ಯಾನುಭೂತಿಗಳನ್ನು (ಏಸ್ತೆಟಿಕ್ಸ್-ಬೆಂಜಮಿನ್ ಬಳಸುವ ಪದ) ಕೊಡಲೆತ್ನಿಸಿತು. ಹೀಗೆ ಬೆಂಜಮಿನ್ ತನ್ನ ಪ್ರಬಂಧದ ಕೊನೆಯಲ್ಲಿ ಕಲಾಕೃತಿಗಳ ಯಾಂತ್ರಿಕ ಪುನರ್‌ನಿರ್ಮಾಣ, ಯುದ್ಧ ಮತ್ತು ಫ್ಯಾಸಿಸಂಗಳನ್ನು ಸಮಾನಾಂತರ ಬೆಳವಣಿಗೆಗಳು ಎಂದು ನಿರೂಪಿಸುತ್ತಾನೆ. ಕಲಾಕೃತಿಗಳ ಯಾಂತ್ರಿಕ ಪುನರ್ ನಿರ್ಮಾಣದ ಯುಗದಲ್ಲಿ ಅವನಿಗೆ ಸ್ವಾಗತಾರ್ಹ ಎಂದು ಕಂಡದ್ದು ಕೇವಲ ಒಂದು ಸಂಗತಿ-ಪಿಕಾಸೋನ ವರ್ಣಚಿತ್ರಗಳಿಗೆ ಜನ ತೋರಿಸಿದ ಪ್ರತಿಗಾಮಿ ಪ್ರತಿಕ್ರಿಯೆಗೆ ಬದಲಾಗಿ ಚಾಪ್ಲಿನ್‌ನ ಸಿನೆಮಾಗಳಿಗೆ ತೋರಿದ ಪ್ರಗತಿಶೀಲಸ್ಪಂದನ. ಆದರೆ ಆಧುನಿಕ ಯುಗದಲ್ಲಿ ಕಲೆ ತನ್ನ ಅರ್ಥವಂತಿಕೆಯನ್ನು ಆಚರಣೆಯ ಬದಲು ರಾಜಕೀಯದಿಂದ ಪಡೆದುಕೊಂಡಿತು ಎನ್ನುವಾಗ ಬೆಂಜಮಿನ್ ಮನಸ್ಸಿನಲ್ಲಿ ಇದ್ದದ್ದು ಪ್ರಜಾಪ್ರಭುತ್ವಕ್ಕಿಂತ ಹೆಚ್ಚಾಗಿ ಫ್ಯಾಸಿಸಂ ಮತ್ತು ಯುದ್ಧಂ.

ಮೇಲೆ ಹೇಳಿದ ಪ್ರಬಂಧ ಮಾತ್ರವಲ್ಲ ತನ್ನ ಯಾವ ಬರಹದಲ್ಲೂ ಬೆಂಜಮಿನ್ ಆಧುನಿಕಯುಗದ ಯಾವ ಬೆಳವಣಿಗೆಯಲ್ಲೂ ಸ್ವಾಗತಿಸುವುದಿಲ್ಲ. ಕಾಷ್ಕ, ಬೋದಿಲೇರ್ ಮತ್ತು ಪೌಸ್ಟ್‌ಕುರಿತು ಆತ ಬರೆದಿರುವ ಪ್ರಬಂಧಗಳಲ್ಲಂತೂ ಅವನು ಆಧುನಿಕಕಾಲದ ಲಕ್ಷಣಗಳನ್ನು ರೋಗಚಿಹ್ನೆಗಳೆಂಬಂತೆ ವಿವರಿಸುತ್ತಾನೆ. ILLUMINATIONSನಲ್ಲಿರುವ ಬೆಂಜಮಿನ್‌ನ ಇನ್ನೊಂದು ಮಹತ್ವದ ಪ್ರಬಂಧ The Story Teller: Reflections on the works of Nikoloi Leskovನಲ್ಲಿ ಅವನು ಆಧುನಿಕ ಪೂರ್ವ ಅಂದರೆ ಇತಿಹಾಸದ ಮೊದಲ ದಿನಗಳಿಂದಲೂ ಜನರ ಬಾಯಿಂದ ಬಾಯಿಗೆ ಹರಿದು ಬಂದಿರುವ ಕತೆಗಳ ಪರಂಪರಾಗತ ಕಸುಬುಗಾರಿಕೆ ಈಗ ನಾಶಗೊಂಡಿರುವುದರ ಬಗ್ಗೆ ಹೇಳುತ್ತಾನೆ. ಈ ಮೌಖಿಕ ಕತೆಗಳ ಸ್ಥಾನದಲ್ಲಿ ಈಗ ಮುದ್ರಣಯಂತ್ರಗಳಿಂದಾಗಿ ಸಾಧ್ಯವಾದ ಕಾದಂಬರಿಯ ಹೊಸ ಪ್ರಕಾರ ತಲೆ ಎತ್ತಿರುವುದನ್ನು ಅವನು ಹೇಳುತ್ತಾಣೆ. ಆದರೆ ಮೌಖಿಕ ಕತೆಗಳ ಅವಸಾನಕ್ಕೆ ಮುದ್ರಣದ ಆವಿಷ್ಕಾರ ಕಾರಣವಲ್ಲ. ಬೆಂಜಮಿನ್ ಪ್ರಕಾರ ನಮ್ಮ ಕಾಲದಲ್ಲಿ ಅನುಭವವೇ ಬೆಲೆಕಳೆದುಕೊಂಡಿದೆ. ಅನುಭವದ ಸ್ಥಾನದಲ್ಲಿ ಈಗ ವೃತ್ತಪತ್ರಿಕೆಗಳ ಮಾಹಿತಿ ಬಂದುಕೂತಿದೆ. ಪರಸ್ಪರ ಅನುಭವ ಹೇಳಿಕೊಳ್ಳುವುದರಲ್ಲಿ ಈಗ ಯಾರಿಗೂ ಉತ್ಸಾಹವಿಲ್ಲ. ಹಾಗಾಗಿ ಜೀವನಾನುಭವವನ್ನು ತಮ್ಮ ಸಾರರೂಪಿ ವಿವರಗಳಲ್ಲಿ ಕಾಪಿಟ್ಟುಕೊಳ್ಳುವ, ಮುಂದಿನ ತಲೆಮಾರುಗಳಿಗೆ ಅದನ್ನು ದಾಟಿಸುವ ಕತೆಗಳು ಮುಖಾಮುಖಿಯಾಗದ ನಿಸ್ಸಾರ ಶಾಶ್ವತದಲ್ಲಿ ಬದುಕುತ್ತಿರುವವನು. ಪುನರ್‌ಜನ್ಮ ಮತ್ತು ಅನಂತತೆಗಳಲ್ಲಿ ನಂಬಿಕೆ ಕಳೆದುಕೊಂಡ ಅವನಿಗೆ ಕತೆಗಳ ಅವಶ್ಯಕತೆಯೂ ಇಲ್ಲ ಎಂದು ಬೆಂಜಮಿನ್ ಹೇಳುತ್ತಾನೆ. ಯಾಂತ್ರಿಕ ಪ್ರತಿಕೃತಿಗಳಿಂದಾಗಿ ಕಲೆ ಸಾಮಾನ್ಯನಿಗೆ ಎಟುಕುವಂತಾಯಿತು ನಿಜ; ಆದರೆ ಈ ಪ್ರಕ್ರಿಯೆಯಲ್ಲಿ ಆತ ಕಳೆದುಕೊಂಡಿದ್ದು ಏನನ್ನು? ಬೆಂಜಮಿನ್‌‌ನನ್ನು ಯಾವಜ್ಜೀವ ಕಾಡಿದ ಪ್ರಶ್ನೆ ಇದು.

ತಮ್ಮ ಈ ಸಂಕಲನಕ್ಕೆ ನನ್ನ ಪ್ರತಿಕ್ರಿಯೆಯನ್ನು ಬರೆಸಿದ ಅನಂತಮೂರ್ತಿ ಅವರ ಪ್ರೀತಿ ವಿಶ್ವಾಸಗಳಿಗೆ ನಾನು ಕೃತಜ್ಞ.

* * *