ಯು.ಆರ್. ಅನಂತಮೂರ್ತಿ ಖ್ಯಾತಿ, ಮನ್ನಣೆಗಳನ್ನು ಪಡೆದಿರುವ ಭಾರತದ ಬಹು ದೊಡ್ಡ ಲೇಖಕರು. ಅವರ ಕ್ರಿಯಾಶೀಲ ಬರವಣಿಗೆಯ ಅವಧಿ ಭಾರತದ ರಾಜಕೀಯ, ಸಾಮಾಜಿಕ ಜೀವನ ಹಲವು ಬಗೆಗಳಲ್ಲಿ ಸ್ಥಿತ್ಯಾಂತರಗಳನ್ನು ಕಂಡಿರುವ ಕಾಲಾವಧಿಯೂ ಹೌದು. ತಮ್ಮ ಕಾವ್ಯ, ಕತೆ, ಕಾದಂಬರಿ ಹಾಗೂ ವೈಚಾರಿಕ  ಬರಹಗಳಲ್ಲಿ ಹೇಗೋ ಹಾಗೆ ಸಾರ್ವಜನಿಕ ಬದುಕಿನಲ್ಲೂ, ದೇಶದ ವಿದ್ಯಮಾನಗಳ ಜೊತೆ ಅನಂತಮೂರ್ತಿ ಆಸ್ಥೆಯಿಂದ ಮುಖಾಮುಖಿಯಾಗುತ್ತ ಬಂದಿರುವವರು; ಈ ಕಾರಣಕ್ಕಾಗಿಯೇ, ಅನಂತಮೂರ್ತಿ, ದೊಡ್ಡ ಸಂಖ್ಯೆಯ ಅಭಿಮಾನಿಗಳ ನಿರೀಕ್ಷೆ, ಬರಹಗಾರನಿಗೆ ಒತ್ತಾಸೆಯಾಗುವುದೇನೋ ಸರಿ; ಆದರೆ ಟೀಕಾಕಾರ ಕಟುಕಿಯೂ ಅನಂತಮೂರ್ತಿಯವರ ಬರೆಯುವ ಮತ್ತು ಸಾರ್ವಜನಿಕವಾಗಿ ಮಾತನಾಡುವ ಉತ್ಸಾಹವನ್ನು ಇಮ್ಮಡಿಗೊಳಿಸುವುದು, ಅವರ ಕ್ರಿಯಾಶೀಲ ಬದುಕಿನುದ್ದಕ್ಕೂ ನಡೆದುಕೊಂಡೇ ಬಂದಿದೆ. ಉದಯವಾಣಿ ಪತ್ರಿಕೆಯಲ್ಲಿ ಅವರು ಬರೆಯುತ್ತಿರುವ ಸಾಪ್ತಾಹಿಕ ಅಂಕಣ ‘ಋಜುವಾತು’ ಮತ್ತು ಇದೀಗ ಪ್ರಕಟಣೆಗೆ ಸಿದ್ಧವಾಗಿ ನಿಂತಿರುವ ಅವರ ಏಳನೇ ಪ್ರಬಂಧ ಸಂಕಲನ ವಾಲ್ಮೀಕಿಯ ನೆವದಲ್ಲಿ ಅನಂತಮೂರ್ತಿಯವರ ಚಿಂತನೆಯ ಉತ್ಸಾಹ, ಚಲನಶೀಲತೆಗಳಿಗೆ ಕನ್ನಡಿ ಹಿಡಿದಿರುವ ಹಾಗೆ ಇವೆ. ಹೀಗಿರುವಾಗ, ಅನಂತಮೂರ್ತಿ ಅವರ ಪ್ರಸ್ತುತ ಸಂಕಲನಕ್ಕೆ ನನ್ನ ಪ್ರತಿಕ್ರಿಯೆ ಅವಶ್ಯವೋ? ಎಂಬ ಅನುಮಾನವಂತೂ ನನ್ನನ್ನು ಕಾಡಿತು. ಆದರೆ ಇಂಥ ಅನುಮಾನಗಳು ಬರುವುದು ಅನಂತಮೂರ್ತಿಯವರನ್ನು ವ್ಯಕ್ತಿಗತವಾಗಿ ‘ದೊಡ್ಡ ಪ್ರತಿಭೆ’ ಎಂದು ಪರಿಭಾವಿಸಿಕೊಂಡು, ಅವರ ಚಿಂತನೆಗಳಿಗೆ ಪ್ರತಿಕ್ರಿಯಿಸುವುದು ವೈಯಕ್ತಿಯ ಅಹಂಮಿಕೆಯ ಸಂಗತಿ ಎಂದುಕೊಂಡಾಗ ಮಾತ್ರ ಸ್ವತಃ ಅನಂತಮೂರ್ತಿಯವರು ತಾನು,ಪೂರ್ವಜರಿಂದ ಪಡೆದ ಲೋಕಜ್ಞಾನ ಮತ್ತು ತನ್ನ ಕಾಲದ ಕ್ರಿಯಾಶೀಲರ ‘ಮಾತುಗಳಿಗೆ ತನ್ನದೂ ಒಂದು ಮಾತು ಸೇರಿ’ ಕಟ್ಟಿಕೊಂಡಿರುವ ಪ್ರಜ್ಞೆಯಿಂದ ರೂಪಪಡೆದ ಬರಹಗಾರ ಎಂದು ಭಾವಿಸಿರುವವರು. ಈ ದೃಷ್ಟಿಯಿಂದ ಸಂಕಲನದ ಬರಹಗಳು ವ್ಯಕ್ತಪಡಿಸುವ ವಿಚಾರಗಳನ್ನು ಭಿನ್ನಕ್ರಮದಲ್ಲಿ ಗ್ರಹಿಸುವ ಸಾಧ್ಯತೆಯ ಜೊತೆ ಒಟ್ಟಂದದಲ್ಲಿ ಪ್ರಕಟಿಸಬೇಕು ಎನ್ನುವುದು ಅವರ ಇಚ್ಛೆ. ವಾಗ್ವಾದಗಳನ್ನು ವ್ಯಕ್ತಿಗತ ಪ್ರತಿಷ್ಠೆಯ ವಿಷಯ ಮಾಡಿಕೊಳ್ಳದೆ ಸಮಯ ಪರೀಕ್ಷೆಯ ಸಾಮೂಹಿಕ ಜವಾಬ್ದಾರಿ ಎಂದು ಸ್ವೀಕರಿಸುವ ಹಿರಿಯರ ಜೊತೆ ವಾದ ಮಾಡುವುದು ಅಂತಹ ಸುಲಭದ ಕೆಲಸವೇನು ಅಲ್ಲ-ಅದು ಇಡಿ ಕಾಲ-ದೇಶಗಳೇ ಕಟಕಟೆಯಲ್ಲಿ ನಿಂತು, ಪ್ರಶ್ನೆ ಕೇಳುವ ನಮ್ಮ ದಾಷ್ಟ್ಯವನ್ನು ಪರೀಕ್ಷಿಸಿದ ಹಾಗೆ.

ಅನಂತಮೂರ್ತಿಯವರ ಅರ್ಧ ಶತಮಾನದ ಬರಹಗಳು ಆಧುನಿಕತೆ ಹಾಗು ಪರಂಪರೆಗಳನ್ನು ಈ ಕಾಲದ ನಮ್ಮ ಸಮಾಜ ಗ್ರಹಿಸುತ್ತಿರುವ, ಜೀವನಕ್ರಮದ ಭಾಗ ಮಾಡಿಕೊಂಡಿರುವ ಪರಿಗಳನ್ನು ಕುರಿತ ವಿಮರ್ಶಾತ್ಮಕ ನಿರೂಪಣೆಗಳಾಗಿವೆ. ಅವರ ವಿಮರ್ಶಾ ದೃಷ್ಟಿ, ಆಧುನಿಕತೆ-ಪರಂಪರೆಗಳ ಬಗೆಗಿನ ಎಡ, ಬಲ ಪಂಥಗಳ ಸ್ಥಾಪಿತ ವೈಚಾರಿಕ ನಿಲುವುಗಳಿಗಿಂತ ಭಿನ್ನವಾದ ಚಿಂತನಾಕ್ರಮಗಳನ್ನು ನೆಚ್ಚಿಕೊಂಡಿರುವುಂತಹುದು ಹೌದು, ಭಾರತದ ಸಮಾಜವಾದಿ ಚಳುವಳಿಯ ವೈಚಾರಿಕ ಸೂಕ್ಷ್ಮಗಳಿಂದ ಪ್ರಭಾವಿತವಾಗಿರುವುದೂ ಹೌದು. ಅವರು ತಮ್ಮಪ್ರಬಂಧಗಳಲ್ಲಿ, ಪರಸ್ಪರ ಸಾಂಗತ್ಯವಿಲ್ಲದಂತೆ ತೋರುವ ಚಿಂತನಾಕ್ರಮಗಳನ್ನು ಒಟ್ಟಿಗೆ ತಂದು, ಜೀವನ ಸೂಕ್ಷ್ಮಗಳನ್ನುಕಲಿಯಲು ಇಂತಹುದೆಲ್ಲ ಅಗತ್ಯ ಎನ್ನುವ ‘ಎಕ್‌ಲೆಕ್ಟಿಕ್’ ಧೋರಣೆಯನ್ನು ಸಾಕಾಷ್ಟು ಪ್ರಕಟಿಸಿದ್ದಾರೆ (ಈ ಸಂಕಲನದಲ್ಲಿ ಇರುವ ಮಧುಲಿಮಯೆಯವರನ್ನು ಕುರಿತ ಬರಹ ಒಂದು ಉತ್ತಮ ಉದಾಹರಣೆ). ಈ ರೀತಿಯ ‘ಎಕ್‌ಲೆಕ್ಟಿಕ್’ ನೆಲೆಯನ್ನು ದೋಷವೆಂದು ಟೀಕಿಸುವುದು ಸುಲಭ; ಆದರೆ ಬಹುಪಾಲು ಅಂತಹ ಟೀಕೆಗಳಿಗೆ ತಾವು ಅಂಟಿಕೊಂಡಿರುವ ವಿಚಾರಕ್ರಮದ ನೆಲವೇ ಕುಸಿಯುತ್ತಿರುವುದರ ಬಗ್ಗೆ ಒಂದು ಚೂರೂ ವಿಷಾದವಿರುವುದಿಲ್ಲ. ಖ್ಯಾತ ಇತಿಹಾಸ ತಜ್ಞ ಎರಿಕ್ ಹಾಬ್ಸ್‌ಬಾಮ್ ಇಪ್ಪತ್ತನೆ ಶತಮಾನವನ್ನು ಲಘುವಾದ ಶತಮಾನಷಾರ್ಟ್ ಸೆಂಚುರಿ-ಎನ್ನುತ್ತಾನೆ; ಈ ಶತಮಾನಕ್ಕೆ ವಿಶಿಷ್ಟವಾದ ವೈಚಾರಿಕ ಸಂಕಲ್ಪಗಳು ೧೯೨೦ರ ದಶಕದಲ್ಲಿ ಹೊಮ್ಮಿ, ೧೯೭೦ರ ದಶಕದ ಹೊತ್ತಿಗೆ ದುರ್ಬಲವಾಗಿಬಿಟ್ಟವು ಎನ್ನುವುದ ಹಾಬ್ಸ್‌ಬಾಮ್‌ನ ಅರ್ಥ. ಅಧಿಕಾರಸ್ಥರು ನಿತ್ಯವಾಸ್ತವವಾಗಿಸಿರುವ ದಬ್ಬಾಳಿಕೆಗೆ ಪ್ರತಿರೋಧವಾಗಿ ಜನರಿಗೆ ಸಮುದಾಯ ಸಂಕಲ್ಪವನ್ನು ಕಟ್ಟಿಕೊಟ್ಟ ವಿಚಾರಧಾರೆಗಳ ಕುರಿತಾಗಿ ಹಾಬ್ಸ್‌ಬಾಮ್ ಈ ಮಾತುಗಳನ್ನು ಹೇಳಿರುವುದು; ಅಂದರೆ ಇಪ್ಪತ್ತನೇ ಶತಮಾನಕ್ಕೆ ವಿಶಿಷ್ಟವಾದ ಸಮಾಜವಾದ, ವಸಾಹತುಶಾಹಿ ವಿರೋಧದ ಚಿಂತನಾಕ್ರಮಗಳ ವಿಮೋಚನಾ ಸಂಕಲ್ಪ ಅರ್ಧ ಶತಮಾನಗಳ ಅವಧಿಯಲ್ಲಿ ಮೊಂಡಾಗಿಬಿಟ್ಟವು ಎನ್ನುವುದನ್ನು ಹಾಬ್ಸ್‌ಬಾಮ್ ಸೂಚಿಸುತ್ತಾನೆ. ಅನಂತಮೂರ್ತಿಯವರಿಗೆ ಪ್ರತಿಕ್ರಿಯಿಸುವಾಗಲೆಲ್ಲ. ನಮ್ಮ ಕಾಲದ ವಾಸ್ತವತೆಯ ಬಗೆಗಿನ ಹಾಬ್ಸ್‌ಬಾಮ್‌ನ ಈ ಹೊಳಹು, ನಮ್ಮನ್ನು ಎಚ್ಚರಿಸುತ್ತಲೇ ಇರಬೇಖು. ಆಧುನಿಕತೆ ಮತ್ತು ಪರಂಪರೆಗಳನ್ನು ಕುರಿತ ಅನಂತಮೂರ್ತಿಯವರ ಗ್ರಹಿಕೆಗಳ ಸಮ್ಮುಖ ನನಗಿರುವ ಒಂದೆರಡು ತಕರಾರುಗಳನ್ನು ಹೇಳುವುದಕ್ಕೆ ಇಷ್ಟು ಸಮಜಾಯಿಷಿ ಅವಶ್ಯ ಎಂದು ನನಗನಿಸಿದೆ.

ಆಧುನಿಕತೆ-ಪರಂಪರೆಗಳ ಕುರಿತಾಗಿ ಅನಂತಮೂರ್ತಿ ಅತಿಯಾದ ನಿಲುವುಗಳನ್ನು ತೆಗೆದುಕೊಂಡವರಲ್ಲ. ಅವರು ಪರಂಪರೆಯನ್ನು ನೆಚ್ಚಿಕೊಂಡ ಜೀವನ ಕ್ರಮಗಳ ಸಮ್ಮುಖ ತಮ್ಮನ್ನು ‘ಕ್ರಿಟಿಕಲ್ ಇನ್ಸೈಡರ್’ ಎಂದು ಗುರುತಿಸಿಕೊಳ್ಳುತ್ತಾರೆ. ಹಾಗೆಯೇ ಪರಂಪರೆಯಿಂದ ಬಂದ ಶಠವಾದಗಳನ್ನು ಆಧುನಿಕ ವಿಮೋಚನಾ ವಿಚಾರಗಳ ಮೂಲಕವು, ಆಧುನಿಕ ವೈಚಾರಿಕತೆಯ ದರ್ಪ-ಅಹಂಕಾರಗಳನ್ನು ಪರಂಪರೆಯಿಂದ ಒದಗಿ ಬರುವ ಜೀವನ ಕಾಣ್ಕೆಗಳ ಮೂಲಕವೂ ನೀಗಿಕೊಳ್ಳುವ ಒಂದು ಮಾರ್ಗದ ಹುಡುಕಾಟವೇ ಲೇಖಕನಾಗಿ ತಮ್ಮನ್ನು ಪೊರೆಯುತ್ತಿದೆ ಎಂದು ಹಲವು ಬಗೆಗಳಲ್ಲಿ ಅವರು ಹೇಳುತ್ತಿದ್ದಾರೆ. ಮತ್ತು ಈ ನಮೂನೆಯ ಪರಾಮರ್ಶೆಗೆ ಅನಂತಮೂರ್ತಿ ಆತ್ಮಕಥನಾ ಮಾರ್ಗವನ್ನು ಆಯ್ದುಕೊಳ್ಳುವುದು ಕುತೂಹಲಕರ (ಈ ಸಂಕಲನದ ಮುಕ್ಕಾಲುವಾಸಿ ಬರಹಗಳು ಈ ಶೈಲಿಯನ್ನು ನೆಚ್ಚಿಕೊಂಡಿರುವುದನ್ನು ಗಮನಿಸಬಹುದು). ಕುಶಲ ಸಂಸಾರಸ್ಥರು ಹಾಲಿನಿಂದ ಬೆಣ್ಣೆಯನ್ನು, ಮಜ್ಜಿಗೆಯನ್ನೂ ಪಡೆದ ಹಾಗೆ, ತಮ್ಮ ಬದುಕನ್ನು ಕಡೆದು, ಪರಂಪರೆ-ಆಧುನಿಕತೆಗಳ ಸಹಜ ಸಹಯೋಗವನ್ನು ಪಡೆಯುವ ಆಕಾಂಕ್ಷೆಯುಳ್ಳ ಅವರ ವಿಚಾರದ ಅಶ್ವಮೇಧದ ಕುದುರೆ ಬಡಪೆಟ್ಟಿಗೆ ಬಗ್ಗುವಂತಹದಲ್ಲ. ಮೇಲಾಗಿ, ಇಂಥಾ ವಾಗ್ವಾದಗಳಲ್ಲಿ ಅನಂತಮೂರ್ತಿ ಪಳಗಿದ ಜಟ್ಟಿ; ಸತ್ವಶಾಲಿ ರೂಪಕಗಳ ಮೂಲಕ ಚಿತ್ತು ಹಾಕುವ ಪಟ್ಟುಗಳನ್ನು ಬಲ್ಲ ಜಟ್ಟಿ! ಹಾಗಾಗಿ, ಕೊಂಚ ನಾಟಕೀಯತೆಯಿಂದಲೇ ನನ್ನ ತಕರಾರು ಶುರುಮಾಡುತ್ತೇನೆ.

ಅನಂತಮೂರ್ತಿಯವರು ತಮ್ಮ ಇತ್ತೀಚಿನ ಬರಹ ಒಂದರಲ್ಲಿ, ಕಮ್ಯುನಿಸ್ಟ್ ಆಡಳಿತವಿರುವ ಉತ್ತರ ಕೊರಿಯಾದಲ್ಲಿ ಬೌದ್ಧ ವಿಹಾರಗಳು ಹಾಗೂ ಅವುಗಳ ಉಸ್ತುವಾರಿ ನೋಡಿಕೊಳ್ಳುವ ಭಿಕ್ಷುಗಳು ತಲುಪಿರುವ ದೈನಾಸಿ ಸ್ಥಿತಿಯನ್ನು ಕಂಡು, ತಮಗೆ ಅನ್ನಿಸಿದ್ದನ್ನು ಹೀಗೆ ವಿವರಿಸಿದ್ದಾರೆ:

‘ನನಗೆ ಬಡಪಾಯಿಯಂತೆ ಕರುಣಾಜನಕನಾಗಿ ಕಂಡ ಬೌದ್ಧ ಭಿಕ್ಷು ಮತ್ತು ಅವನ ಹಿರಿಯರು ಹಿಂದೆ ಹೇಗಿದ್ದಿರಬಹುದೆಂದು ಊಹಿಸಿದೆ. ಪ್ರಾಯಶಃ ಸುತ್ತ ಮುತ್ತಲಿನ ಗ್ರಾಮದ ಎಲ್ಲರೂ ಅವರ ಗೇಣಿದಾರರಾಗಿದ್ದಿರಬೇಕು. ಅವರು ಗೇಣಿ ಕೊಡದಿದ್ದರೆ ಅವರನ್ನು ಶಿಕ್ಷಿಸುವ ಅಧಿಕಾರ ಈ ಭಿಕ್ಷುಗಳಿಗೆ ಇದ್ದಿರಬೇಕು. ಒಂದು ಮಠದ ಜಗತ್ತಿನಿಂದ ಬಂದ ನನಗೆ ಹೇಗೆ ಮಠದಲ್ಲಿ ನಿತ್ಯದ ಪೂಜೆಯ ಜತೆಗೇ ನಿತ್ಯದ ಜಪ್ತಿಗಳೂ ನಡೆಯುತ್ತಿದ್ದುವೆಂಬುದು ಇನ್ನೂ ನೆನಪಿದೆ. ಆದರೂ ನನಗೆ ಬುದ್ಧ, ಕ್ರಿಸ್ತ, ಪೈಗಂಬರ, ಶಂಕರ, ಆನಂದತೀರ್ಥ ರಾಮಾನುಜ, ರಮಣ, ಪರಮಹಂಸ-ಎಲ್ಲರೂ ಬೇಕು. ಅವರ ವಿರೋಧಿಗಳಾದ ಮೆಟೀರಿಯಲಿಸ್ಟರಿಂದಲೂ ಮುಕ್ತರಾಗಿ ಬೇಕು; ಅವರ ಕಪಟ ಭಕ್ತರಿಂದಲೂ ಮುಕ್ತರಾಗಿ ಬೇಕು. ಅವರೇ ಆಗಿಬೇಕು; ಅವರ ಕಾಲದವರೂ ಆಗಿ ಬೇಕು; ನಮ್ಮ ಕಾಲಕ್ಕೆ ಸಲ್ಲುವವರೂ ಆಗಿರಬೇಕು.’ (‘ಉತ್ತರ ಕೊರಿಯಾ ಜೊತೆ ರಾಗಿ ಸಂಬಂಧ’, ಋಜುವಾತು ಅಂಕಣ, ಉದಯವಾಣಿ, ೨೧.೧೦.೨೦೦೬)

ಇದೇ ಅರ್ಥಧ್ವನಿಸುವ ಸಾಲುಗಳನ್ನು ಅನಂತಮೂರ್ತಿಯವರ ಕಳೆದ ಎರಡು ದಶಕಗಳ ಅನೇಕ ಬರಹಗಳಲ್ಲಿ ನಾವು ಕಾಣಬಹುದು. ಈ ಸಾಲುಗಳನ್ನು ಕಾಲಕ್ರಮದಲ್ಲಿ ಹತ್ತಿರದ್ದು ಎಂಬ ಕಾರಣಕ್ಕಾಗಿಯಲ್ಲದೆ, ತಮ್ಮ ಚಿಂತನೆಯಲ್ಲಿ ಅವರು ವ್ಯಕ್ತಪಡಿಸುತ್ತಿರುವ ವೈಚಾರಿಕ ಸಂಕಲ್ಪಕ್ಕೆ (ಇಂಟೆಲೆಕ್ಟುಯಲ್ ವಿಲ್-ವಾಸ್ತವ ಬದಲಾಗದು ಎನ್ನುವಂತಹ ಸ್ಥಿತಿಯಲ್ಲಿ, ವಾಸ್ತವವನ್ನು ಭಿನ್ನ ಬಗೆಯಲ್ಲಿ ಕಂಡು, ಬದಲಾವಣೆಯ ಒಳದಾರಿಗಳನ್ನು ಅರಿಸುವ ಬುದ್ಧಿಯ ಛಲ) ಉದಾಹರಣೆಯಾಗಿ ಮಾತ್ರ ತೆಗೆದುಕೊಂಡಿದ್ದೇನೆ. ಅನಂತಮೂರ್ತಿಯವರ ವಿಚಾರಧಾರೆಯಲ್ಲಿ ಇದು ತಕ್ಷಣಕ್ಕೆ ಹೊಳೆದು ಕರಗಿಬಿಡುವ ವಿಲಾಸದ ಮಾತಲ್ಲ. ಈ ಸಂಕಲದಲ್ಲಿರುವ ತೀವ್ರ ಪರಿಶೋಧದ ಬರಹ ‘ವಾಲ್ಮೀಕಿಯ ನೆವದಲ್ಲಿ’ ಅನಂತಮೂರ್ತಿ, ‘ಕವಿ ಕಂಡು ಹೇಳುವುದು ಕೇಳಿಸಿಕೊಂಡವನಿಗೆ ಅಷ್ಟೇ ಸದ್ಯವಾಗಿ’ ಕಾಣಿಸುವ, ‘ಅಂದ ಮಾತು ತತ್ತ್‌ಕ್ಷಣವೇ ನಿಜವೆನ್ನಿಸುವ’, ವಾಕ್ಸಿದ್ಧಿಯ ವರವನ್ನು ವಾಲ್ಮೀಕಿ ಬ್ರಹ್ಮನಿಂದ ಪಡೆದದ್ದನ್ನು ಹೇಳಿ ‘ಕಾವ್ಯದ ಮಾಂತ್ರಿಕತೆ ಎಂದರೆ ಇದೇ’ ಎನ್ನುತ್ತಾರೆ. ಮೇಲಿನ ಸಾಲುಗಳಲ್ಲಿ ಪ್ರಕಟವಾಗಿರುವ ವಿಚಾರ, ಆಧುನಿಕನಾಗಿದ್ದುಕೊಂಡೇ ಪರಂಪರೆಯ ಚೈತನ್ಯವನ್ನು ಆವಾಹಿಸಿಕೊಳ್ಳುವ ಅವರ ವಾಕ್ಸಿದ್ಧಿಯ ಹಂಬಲವಾಗಿದೆ ಎನ್ನುವುದರ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ. ಈಗ, ಅನಂತಮೂರ್ತಿಯವರ ಕಾಣ್ಕೆಯನ್ನು ಸ್ವಲ್ಪ ತಿರುಚಿ ಹೀಗೆ ಬರೆಯಬಹುದು (ಅನಂತಮೂರ್ತಿಯವರ ಉತ್ತರ ಕೊರಿಯಾ ಪ್ರವಾಸದಲ್ಲಿ, ಅವರ ಜೊತೆ ಇರುವವರು ಅಲ್ಲಿನ ಕಮ್ಯುನಿಸ್ಟ್ ಪ್ರಭುತ್ವ ನಿಯೋಜಿಸಿರುವ ಇಬ್ಬರು ಮಾರ್ಗದರ್ಶಿಗಳು):

‘ನನಗೆ ತಿಂದುಂಡು ಆರೋಗ್ಯವಂತರಂತೆ ಕಾಣುವ ಹಾಗೂ ಈಗ ಅಧಿಕಾರಸ್ಥರ ಬೆಂಬಲವಿರುವ ಇಬ್ಬರು ಮಾರ್ಗದರ್ಶಿಗಳು ಮತ್ತು ಅವರ ಹಿರಿಯರು ಹೇಗಿದ್ದಿರಬಹುದು ಎಂದು ಊಹಿಸಿದೆ. ಪ್ರಾಯಶಃ ಅವರ ಕುಟುಂಬದವರು ಹಾಗು ಅವರ ಸುತ್ತಮುತ್ತಲಿನ ಗ್ರಾಮದ ಎಲ್ಲರೂ ಭಾರಿ ಜಮೀನುದಾರರ ಗೇಣಿದಾರರೊ, ಜೀತದಾಳುಗಳೋ ಆಗಿದ್ದಿರಬೇಕು. ಆ ಜಮೀನುದಾರರಿಗೆ ಇವರನ್ನು ನಿರಂಕುಶವಾಗಿ ದುಡಿಸಿಕೊಳ್ಳುವ ಅಧಿಕಾರವೂ ಇದ್ದಿರಬೇಕು. ನನ್ನೂರಿನ ಸುತ್ತಮುತ್ತಲಿನ ಜಮೀನುದಾರರ ಅಧಿಕಾರ ಜಗತ್ತನ್ನು ಕಂಡಿರುವ ನನಗೆ ಯಾವ ನಮೂನೆಗಳಲ್ಲಿ ನಿತ್ಯದ ದಬ್ಬಾಳಿಕೆಗಳು ನಡೆಯುತ್ತಿದ್ದುವೆಂಬುದು ಇನ್ನೂ ನೆನಪಿದೆ. ಈ ಕಾರಣವಾಗಿಯೇ ನನಗೆ ಮಾಕ್ಸ್‌, ಲೆನಿನ್, ಸ್ಟ್ಯಾಲಿನ್, ಮಾವೋ, ಕಿಮ್‌ಸಾಂಗ್, ನಬೂಂದ್ರಿಪಾದ್, ಚಾರು ಮುಜುಂದಾರ್, ದೇವರಾಜ ಅರಸು-ಎಲ್ಲರೂ ಬೇಕು. ಅವರ ವಿರೋಧಿಗಳಾದ ಭೂಮಾಲೀಕರು, ಕ್ಯಾಪಿಟಲಿಸ್ಟರಿಂದಲೂ ಮುಕ್ತರಾಗಿ ಬೇಕು; ಅವರ ಕಪಟ ಭಕ್ತರಿಂದಲೂ ಮುಕ್ತರಾಗಿ ಬೇಕು. ಅವರೇ ಆಗಿರಬೇಕು; ಅವರ ಕಾಲದವರೂ ಆಗಿ ಬೇಕು; ನಮ್ಮ ಕಾಲಕ್ಕೆ ಸಲ್ಲುವವರೂ ಆಗಿರಬೇಕು.’

ಈ ಸಾಲುಗಳು ಪ್ರಜ್ಞಾಪೂರ್ವಕ ಅಣಕವಾದರೂ ಸುಳ್ಳನ್ನೇನೂ ಹೇಳುವುದಿಲ್ಲ; ಆದರೆ ಈ ಸಾಲುಗಳು ಧ್ವನಿಸುವುದು ವಾಸ್ತವದ ಅರ್ಧ ಸತ್ಯವನ್ನು ಮಾತ್ರ. ಹಾಗೆಯೇ, ಅನಂತಮೂರ್ತಿಯವರ ಸಾಲುಗಳು ಉಳಿದ ಅರ್ಧಸತ್ಯವನ್ನು ಧ್ವನಿಸುತ್ತವೆ ಎಂದಿಟ್ಟುಕೊಂಡೂ, ಎರಡನ್ನು ಜೋಡಿಸಿದರೂ ಒಂದು ಪೂರ್ಣ ರೂಪ ಸಿಕ್ಕುವುದಿಲ್ಲ. ಯಾಕೆಂದರೆ, ಎರಡೂ ಒಂದಕ್ಕೊಂದು ತಲೆ ಕೆಳಗಾದ ಚಿತ್ರಗಳು, ಒಟ್ಟಾದರೆ ದಕ್ಕುವುದು ಕ್ರೂರ ಪರಿಹಾಸ. ಕಂಪ್ಯೂಟರ್ ಗ್ರಾಫಿಕ್ಸ್‌ನಲ್ಲಿ ಚಿತ್ರದ ಕಣ ಕಣಗಳನ್ನು ಛಿದ್ರ ಮಾಡಿ, ಡಿಜಿಟಲ್ ರೂಪದಲ್ಲಿ-ಅಂದರೆ ೦ ಮತ್ತು ೧ರ ತಾರ್ಕಿಕ ಸಮೂಹವಾಗಿ-ಶೇಖರಿಸಿ ಇಟ್ಟುಕೊಳ್ಳುತ್ತಾರಂತೆ; ಆ ಸ್ವರೂಪದಲ್ಲಿ ಚಿತ್ರಗಳನ್ನು ಸಂಗ್ರಹಿಸುವುದರಿಂದಲೇ, ಶೇಖರ ಮಾಡಿದ ಡಿಜಿಟಲ್ ಚಿತ್ರದ ತರ್ಕವನ್ನು ಬದಲಾಯಿಸಿ, ಇಚ್ಛಿಸಿದ ರೂಪದಲ್ಲಿ ಚಿತ್ರ ಪಡೆಯಬಹುದಂತೆ. ಹಾಗೆ ಮಾಡಿದರೂ, ಅದೊಂದು ಭ್ರಮೆಯೇ ಹೊರತು ವಾಸ್ತವ ಚಿತ್ರವಲ್ಲ. ಅನಂತಮೂರ್ತಿಯವರ ಕಥಾನಿರೂಪಣೆಯ ಭಾಗವನ್ನು ಮಾತ್ರ ಓದಿಕೊಂಡರೆ, ಅದರಲ್ಲಿ ಸಾಕಷ್ಟು ಒಳನೋಟಗಳು ಸಿಕ್ಕುತ್ತವೆ. ಅನಂತಮೂರ್ತಿ, ಬಲಪಂಥೀಯರ ಹಾಗೆ, ಸಾಂಸ್ಥಿಕವಾಗಿ ಬೌದ್ಧವಿಹಾರಗಳು ದಬ್ಬಾಳಿಕೆ ಮಾಡುವ ಅಧಿಕಾರ ವ್ಯವಸ್ಥೆಯ ಅವಿಚ್ಛಿನ್ನ ಭಾಗಗಳಾಗಿದ್ದವು ಎನ್ನುವುದನ್ನು ಮುಚ್ಚಿಹಾಕುವುದಿಲ್ಲ, ದಬ್ಬಾಳಿಕೆಗೆ ತುತ್ತಾದವರು ಈಗ ಅಧಿಕಾರಹೀನವಾದ ಸಂಸ್ಥೆಗಳಿಗೆ ತೋರುವ ಕಟು ಪ್ರತಿಕ್ರಿಯೆಗಳ ಬಗ್ಗೆ ಹೀಯಾಳಿಕೆಯ ಧೋರಣೆ ತಾಳುವ ಅಸೂಕ್ಷ್ಮತೆಯನ್ನೂ ಅವರು ತೋರುವುದಿಲ್ಲ. ಭೂಹೀನರನ್ನು ಲೌಕಿಕ ಸಂಕೋಲೆಗಳಿಂದ ಮುಕ್ತಗೊಳಿಸಿದ ಕಮ್ಯುನಿಸ್ಟ್ ಕ್ರಾಂತಿಯ ತತ್ವಾಚರಣೆಗಳಿಗೆ, ಬೌದ್ಧ ಧರ್ಮವು ಲೋಕಸಮಾನತೆಯ ಆಧ್ಯಾತ್ಮವನ್ನು ಸಂಚಯಿಸಿಕೊಂಡಿರುವ ಸಿರಿಯಾಗಿ, ತಾನು ನಿರೂಪಿಸಲು ಹೊರಟಿರುವ ಲೌಕಿಕ ಸಮಾನತೆಗೆ ಅಪೂರ್ವ ಸಹಯೋಗವಾಗಿ ಕಾಣದೆ, ಪ್ರತಿಕಾರಕ್ಕೆ ತಕ್ಕುದಾದ ಸಾಂಸ್ಥಿಕ ರೂಪದಲ್ಲಿ ಮಾತ್ರ ಕಾಣುವುದು ಒಂದು ದುರಂತ, ಪ್ರತಿಕಾರಕ್ಕೆ ತಕ್ಕುದಾದ ಸಾಂಸ್ಥಿಕ ರೂಪದಲ್ಲಿ ಮಾತ್ರ ಕಾಣುವುದು ಒಂದು ದುರಂತ. ಬೌದ್ಧ ಧರ್ಮವನ್ನು ಸಾಂಸ್ಥಿಕವಾಗಿ ನಿರ್ವಿಣ್ಣಗೊಳಿಸುವ ಭರದಲ್ಲಿ, ಕಮ್ಯುನಿಸ್ಟ್ ಸಮಾಜಕ್ಕೆ ನಿಜಕ್ಕೂ ಅರ್ಥಪೂರ್ಣ ಅಂತಃಚೇತನವನ್ನು ಒದಗಿಸಬಲ್ಲ ಆಧ್ಯಾತ್ಮಿಕ ಪರಂಪರೆಯನ್ನು ನಾಶಮಾಡುತ್ತಿರುವ ಕಮ್ಯುನಿಸ್ಟ್ ಪ್ರಭುತ್ವದ ಅಧಿಕಾರ ದರ್ಪ, ಅದು ಪ್ರತಿನಿಧಿಸುತ್ತಿದ್ದೇನೆ ಎಂದು ಸಾರಿಕೊಳ್ಳುತ್ತಿರುವ ಜನರ ಸಾಮುದಾಯಿಕ ಜೀವನಕ್ಕೆ ಮಾರಕ. ಇವುಗಳನ್ನೆಲ್ಲ ಅನಂತಮೂರ್ತಿ ನಮಗೆ ಕಾಣಿಸುತ್ತಾರೆ. ಆದರೆ, ಈ ಪ್ರಸಂಗ ನಿರೂಪಣೆಗೆ ಉಪಸಂಹಾರದಂತೆ ಅವರು ಕೊಡುವ ಪರಂಪರೆಯ ಕುರಿತಾದ ಸಂಕಲ್ಪದ ವ್ಯಾಖ್ಯಾನದ್ದೇ ಒಂದು ಸಮಸ್ಯೆ. ಕೊರಿಯಾದ ಕಮ್ಯುನಿಸ್ಟ್ ಪ್ರಭುತ್ವ ಮತ್ತು ಅದನ್ನು ಮನಸಾರೆ ಅನುಮೋದಿಸುವ ಆ ಇಬ್ಬರು ಮಾರ್ಗದರ್ಶಿಗಳು, ಬೌದ್ಧ ಪರಂಪರೆಯನ್ನು ಮೂಲೆಗುಂಪು ಮಾಡುವುದೇ ಪ್ರಗತಿ ಎಂಬಂತೆ ವರ್ತಿಸುವುದರ ಸಮ್ಮುಖ ಅನಂತಮೂರ್ತಿ ಪರಂಪರೆಯನ್ನು ಉದ್ದೀಪಿಸಲು ನೀಡುವ ನಾಮಾವಳಿಯೂ, ಭಕ್ತನ ಹಾಗೆ ತನ್ನ ಸ್ವಾಮಿಯನ್ನು ಸದ್ಯದ ತುರ್ತಿಗೆ ತಕ್ಕ ಆಕಾರದಲ್ಲಿ ಕಲ್ಪಿಸಿಕೊಳ್ಳುವ ಆಕಾಂಕ್ಷೆಯೂ, ಆ ಸನ್ನಿವೇಶದಲ್ಲಿ ‘ಮೆಲೋಡ್ರಾಮ್ಯಾಟಿಕ್’ ಗುಣ ಪಡೆದುಕೊಂಡುಬಿಡುತ್ತದೆ. ನಾವು ಸಂಕಷ್ಟ ಒಂದರಲ್ಲಿ ಸಿಲುಕಿ, ದಿಕ್ಕು ಕಾಣದೆ ಇರುವಾಗ, ಯಾರಾದರೂ ಅನಿರೀಕ್ಷಿತವಾಗಿ ಒದಗಿ ಆಸರೆ ನೀಡಿದರೆ ‘ಅವರು ದೇವರ ಹಾಗೆ ಬಂದರು’ ಎನ್ನುತ್ತೇವೆ-ಇದು ಲೋಕ ಸಹಜತೆ. ಅದೇ, ನಮ್ಮ ಸಂಕಷ್ಟಕ್ಕೆ ಲೋಕದ ಆಸರೆಯೇ ಇಲ್ಲ ಎನ್ನುವಾಗ, ಸಾಕ್ಷಾತ್ ದೇವರು ಪ್ರತ್ಯಕ್ಷನಾಗಿ, ಇಡೀ ಸಂಕಷ್ಟದ ಸನ್ನಿವೇಶವನ್ನೇ ತನ್ನ ಪ್ರಭೆಯ ಮೂಲಕ ಕ್ಷುಲ್ಲಕಗೊಳಿಸುವುದು ‘ಮೆಲೋಡ್ರಾಮ್ಯಾಟಿಕ್’ ಅನಂತಮೂರ್ತಿಯವರು ಹೇಳುವ ಉದ್ದಂಡ ನಾಮಾಳಿ ‘ಎಕ್ಲೆಕ್ಟಿಕ್’ ಆಗಿದೆ ಎನ್ನುವುದು ನನ್ನ ತಕರಾರು ಅಲ್ಲ. ಆಧುನಿಕ ವಾಸ್ತವಕ್ಕೆ ವೈದೃಷ್ಯವಾಗಿ ಅವರು, ಆ ನಾಮಾವಳಿಯ ಮೂಲಕ, ಪರಂಪರೆಯ ಪ್ರತಿಮೆಯನ್ನು ಕಟ್ಟಿಕೊಡಲು ಇಚ್ಛಿಸುತ್ತಿದ್ದಾರೆ. ಆದರೆ ಆ ವಾಸ್ತವಕ್ಕೂ, ಪರಂಪರೆಯ ಅವರ ಪ್ರತಿಮೆಗೂ, ಪ್ರಮಾಣ (ಸ್ಕೇಲ್‌)ದಲ್ಲಿ ವ್ಯತ್ಯಾಸ ಇದೆ-ಅದು ಸಾಮಾನ್ಯ ಎತ್ತರದ ಮನುಷ್ಯರು ಅಡ್ಡಾಡುವ ವಾತವರಣದಲ್ಲಿ, ಗಾಳಿ ತುಂಬಿದ ಬೃಹತ್ ಬೊಂಬೆಯನ್ನು ತೇಲಿಸಿ, ದಿಗ್ಭ್ರಮೆಗೊಳಿಸುವ ಹಾಗಿದೆ! ಉತ್ತರ ಕೊರಿಯಾದಲ್ಲಿ ನಿತ್ಯ ಜೀವನ ನಡೆಸುತ್ತಲೇ, ಪ್ರಭುತ್ವದ ವರ್ತನೆಗೆ ಪ್ರತಿರೋಧ ತೋರುವ ಭೌದ್ಧರು-ಅವರ ಸಂಖ್ಯೆ ಮುಖ್ಯವಲ-ಅವರು ನನ್ನ ಪ್ರಕಾರ ಪರಂಪರೆಗೆ ವಾರಸುದಾರರು. ಅಂತಹವರು ಇರದ ವಾತಾವರಣ ಅಲ್ಲಿದೆ ಎಂದರೆ, ಪ್ರಭುತ್ವದ ದರ್ಪಕ್ಕೆ ಸಾಮಾನ್ಯರ ಸಮ್ಮತಿ ಇರುವ ಲಕ್ಷಣವದು-ದರ್ಪಕ್ಕೆ ಸಹಮತ ದುರಂತ, ಅದು ಬರಿ ಆಧುನಿಕತೆಯ ವಾಸ್ತವವಲ್ಲ, ಆಧ್ಯಾತ್ಮಿಕತೆಯ ವಾಸ್ತವ ಸ್ಥಿತಿಯೂ ಹೌದು. ಬರ್ಮ ದೇಶವೂ ಭೌದ್ಧರು ಬಹುಸಂಖ್ಯಾತರಾಗಿರುವ ದೇಶವೇ. ಆದರೆ ಅಲ್ಲಿನ ಪ್ರಭುತ್ವದ ನೀಚತನದ ಎದಿರು ನಾವು ಪ್ರತಿರೋಧವಾಗಿ ಕಾಣುವುದು ಆಂಗ್ ಸಾನ್ ಸೂಕಿಯನ್ನೇ ಹೊರತು, ಬುದ್ಧನನ್ನಲ್ಲ. ಆಕೆಯನ್ನು ರೂಪಿಸಿದ ಚಳುವಳಿ ಇಲ್ಲದಿದ್ದಲ್ಲಿ, ಯಾವ ಬೌದ್ಧ ಧರ್ಮ, ಯಾವ ಆಧ್ಯಾತ್ಮಿಕತೆಯನ್ನು ನಾವು ಕೊಂಡಾಡಬೇಕು? ಇನ್ನು ಹತ್ತಿರಕ್ಕೆ ಬಂದರೆ, ನರ್ಮದಾ ಕಣಿವೆಯ ಆದಿವಾಸಿಗಳು ಯಾವ ಪರಂಪರೆಯ ಮೂಲಕ ವಿನಾಶಕಾರಿ ಆಧುನಿಕತೆಯನ್ನು ಎದುರಿಸುತ್ತಿದ್ದಾರೆ ಎನ್ನುವುದು ನನಗಿಂತ ಹೆಚ್ಚು ಸ್ಪಷ್ಟವಾಗಿ ಅನಂತಮೂರ್ತಿಯವರಿಗೆ ಗೊತ್ತಿದೆ-ನಮೆಲ್ಲರಿಗಿಂತ ಮಿಗಿಲಾಗಿ, ಮೇಧಾರನ್ನು ಲೌಕಿಕವಾಗಿಯೂ, ವೈಚಾರಿಕವಾಗಿಯೂ ಬೆಂಬಲಿಸಿರುತ್ತಿರುವವರು ಅವರು. ಸೋಜಿಗದ ಸಂಗತಿ ಎಂದರೆ, ನರ್ಮದಾ ಕಣಿವೆಯ ವಿಷಯಕ್ಕೆ ಬಂದಾಗ, ಅನಂತಮೂರ್ತಿಯವರು, ಮೇಧಾರ ಚಳುವಳಿಯನ್ನು ಆಧುನಿಕತೆ ಸಮ್ಮುಖ ಆಧ್ಯಾತ್ಮಿಕ ಎಂದು ಸ್ವೀಕರಿಸುವವರು (ನಾವು ಈ ತೆರನಾದ ಪಾಠ ಕಲಿತಿರುವುದು ಅವರಿಂದಲೇ, ಇದನ್ನು ಹೇಳಲು ನನಗೆ ಯಾವ ಸಂಕೋಚವೂ ಇಲ್ಲ). ಅಂದರೆ, ನರ್ಮದಾ ವಿಷಯದಲ್ಲಿ ಅನಂತಮೂರ್ತಿ, ಮೇಲಿನ ತರಹದ ‘ಮೆಲೋಡ್ರಾಮ್ಯಾಟಿಕ್’ ಆದ ಪರಂಪರೆಯನ್ನು ಉದ್ದೀಪಿಸದೇ-ಅಲ್ಲಿ ರಮಣ, ಮದ್ವಚಾರ್ಯರಿರಲಿ ಗಾಂಧಿಯನ್ನೂ ಅನಂತಮೂರ್ತಿ, ಅನವಶ್ಯವಾಗಿ ಎಳೆದು ತರುವುದಿಲ್ಲ-ಲೌಕಿಕ ವಾಸ್ತವಕ್ಕೆ ಪ್ರತಿರೋಧ ಒಡ್ಡುತ್ತಿರುವವರನ್ನು ಆಧ್ಯಾತ್ಮ ಪ್ರತಿಮೆಯಾಗಿ ಸ್ವೀಕರಿಸುತ್ತಾರೆ. ಕಾಲ-ದೇಶ ಸಮೀಪವಾದ ಈ ಆಧ್ಯಾತ್ಮದ ಮೂಲಕ ಅನಂತಮೂರ್ತಿಯವರಿಗೆ, ನಮ್ಮ ಪ್ರಭುತ್ವ ಪ್ರಜಾಪ್ರಭುತ್ವದ ನೀತಿ-ನಡಾವಳಿಗಳನ್ನು ಕ್ಷುಲ್ಲಕಗೊಳಿಸುತ್ತಿರುವುದನ್ನೂ, ಇಂಥಾ ವರ್ತನೆ ತರುವ ಗಂಡಾಂತರವನ್ನೂ ಆತಂಕದಿಂದ ತೋರಿಸಲು ಸಾಧ್ಯವಾಗುತ್ತದೆ. ಇಂತಹ ಕಡೆಗಳಲ್ಲಿ, ಅನಂತಮೂರ್ತಿಯವರಿಗೆ ಪರಂಪರೆ, ಆಧ್ಯಾತ್ಮಗಳನ್ನು ಮೆಲೋಡ್ರಾಮ್ಯಾಟಿಕ್ ಆಗಿ ಪ್ರಕಟಿಸುವುದಿರಲಿ, ವಾಚ್ಯಗೊಳಿಸುವ ಅವಶ್ಯಕತೆಯೂ ಕಂಡುಬರುವುದಿಲ್ಲ. ಅದುಲೋಕಪ್ರತಿರೋಧದಲ್ಲಿ ಪ್ರಕಟಗೊಳಿಸುವ ಅವಶ್ಯಕತೆಯೂ ಕಂಡುಬರುವುದಿಲ್ಲ. ಅದುಲೋಕಪ್ರತಿರೋಧದಲ್ಲಿ ಪ್ರಕಟಗೊಳಿಸುವ ಜೀವಂತ ಆಧ್ಯಾತ್ಮ (ಲಂಕೇಶ್ ಮತ್ತು ಡಿ.ಆರ‍್. ನಾಗರಾಜ್‌, ಸೂಕಿಯ ಬಗ್ಗೆ ಬರೆಯುವಾಗ ಪ್ರಕಟಿಸುವುದು ಇದೇ ಅಧ್ಯಾತ್ಮವನ್ನು). ಹೀಗಿರುವಾಗ, ಅನಂತಮೂರ್ತಿ, ಪರಂಪರೆಯನ್ನು ಉತ್ಪ್ರೇಕ್ಷಿತ ಪ್ರಮಾಣದಲ್ಲಿ ಪ್ರಕಟಿಸುವುದನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ನನಗೆ ಇಷ್ಟವಾದ ಅನಂತಮೂರ್ತಿಯವರ ಕವನದಲ್ಲಿ ‘ಅಧ್ವಾನೀಜೀಗೊಂದು ಕಿವಿಮಾತು’ ಒಂದು (ಪತ್ರಿಕೆ ಪ್ರಕಾಶನ, ಬೆಂಗಳೂರು, ೧೯೯೩,ಪು.೧೫೦). ಎಲ್.ಕೆ.ಅಧ್ವಾನಿಯ ರಥಯಾತ್ರೆ ಶುರುಮಾಡಿದ ಹಿಂಸೆಯ ರಾಜಕೀಯ, ಇವತ್ತು ನಾನು ವಾಸಿಸುವ ಕೇರಿಗೂ ಹಬ್ಬಿಕೊಂಡಿದೆ. ಈ ರಾಜಕೀಯ ತನ್ನ ವರಸೆಯನ್ನು ತೋರಿಸಿ, ಹಲ್ಲು ಉಗುರುಗಳನ್ನು ಬೆಳೆಸಿಕೊಳ್ಳುತ್ತಿದ್ದ ಸನ್ನಿವೇಶದಲ್ಲೇ-೧೯೯೧ರಲ್ಲಿ ಅನಂತಮೂರ್ತಿ ಈ ಕವನ ಬರೆದಿದ್ದಾರೆ. ಯಾವ ವೀರಾವೇಶವೂ ಇಲ್ಲದೆ, ತಣ್ಣಗೆ ಅಧ್ವಾನಿಯ ರಾಜಕೀಯ ಬಂಡವಾಳದ ಕಚ್ಚೆಗೆ ಕೈ ಹಾಕುವ ಈ ಕವನದ ಸ್ತಿಮಿತ ರಚನೆ ಅಪರೂಪದ್ದು. ಕವಿಯಾಗಿ ಅನಂತಮೂರ್ತಿ, ಈ ದೇಶದಲ್ಲಿ ವ್ಯಕ್ತಿಯೊಬ್ಬ ಪಡೆದುಕೊಳ್ಳುವ ಅಸ್ಮಿತೆಯೂ ಹೇಗೆ ಅಸ್ತಿತ್ವದ ಪದರು ಪದರುಗಳಲ್ಲಿ ಬಹುರೂಪ ಪಡೆಯುತ್ತದೆ ಎನ್ನುವುದನ್ನು, ನಿತ್ಯ ಸಹಜವೆನ್ನುವ ಧ್ವನಿಯಲ್ಲಿ-ಅದೂ ಕಿವಿ ಮಾತಾಗಿ-ಅಧ್ವಾನಿಗೆ ಹೇಳುತ್ತಾರೆ; ಅದೇ ಸಹಜತೆಯಲ್ಲಿ ನಾವು ಬೇಡವೆಂದರೂ ಬಿಡಿಸಿಕೊಳ್ಳಲಾಗದ ಪರಂಪರೆಯ ಸ್ವರೂಪವನ್ನು ಹೀಗೆ ನಿರೂಪಿಸುತ್ತಾರೆ:

ತನ್ನಜ್ಜಿಯಂತೆ ನನ್ನಜ್ಜಿ ದೇವರಕೋಣೆಯ ಗಿಂಡಿಯಲ್ಲಿರುವ
ಗಂಗೆ ಕುಡಿದೇ ಪ್ರಾಣಬಿಟ್ಟಿದ್ದು.
ಇನ್ನೂ ಉಳಿದಿದೆ ಗಂಗೆ
ಅದೇ ಕಿಲುಬು ಗಿಂಡಿಯಲ್ಲಿ.

ಇಷ್ಟೇ ಹೇಳಿದರೆ-ಹೇಳಿದ್ದು ಯಾವುದೂ ಸುಳ್ಳಲ್ಲವಾದರೂ-ಅದು ಬರಿ ವಾಚ್ಯವಾದ ನೈತಿಕತೆಯಾಗಿ, ನಾವೆಲ್ಲರು ಸಿಕ್ಕಿಕೊಂಡಿರುವ ಕಾಲದ ಸ್ಥಿತಿಯ ಬಗ್ಗೆ ಏನನ್ನೂ ಹೇಳಿದಂತೆ ಆಗುವುದಿಲ್ಲ ಎಂಬ ಅರಿವಿನ ಸೂಕ್ಷ್ಮವನ್ನು ಉಳ್ಳ ಅನಂತಮೂರ್ತಿ, ಕಾವ್ಯಾರ್ಥವನ್ನು ಈ ರೀತಿ ಸ್ಪೋಟಿಸುತ್ತಾರೆ:

ನನ್ನಂತ ತನ್ನ ಅಡ್ರೆಸ್ ಕೊಡಬೇಕಾದ ಪಾಡು
ಅಜ್ಜಿಗಿರಲಿಲ್ಲ.
ಯಾಜ್ಞವಲ್ಕ್ಯರಿಗೂ ಇರಲಿಲ್ಲ.
ಪೂರ್ವ ಸೂರಿಗಳಿಗೆ ನಮಸ್ಕಾರ.

‘ಅಜ್ಜಿಗೆ ಇರಲಿಲ್ಲ. ಪೂರ್ವ ಸೂರಿಗಳಿಗೆ ನಮಸ್ಕಾರ’. ಎಂದು ಕವನ ಮುಕ್ತಾಯವಾಗುವುದಕ್ಕು, ಮಧ್ಯ ಯಾಜ್ಞವಲ್ಕ್ಯರು ಬಂದು ಮುಗಿಯುವುದಕ್ಕೂ ಇರುವ ವ್ಯತ್ಯಾಸ ಅಗಾಧವಾದದ್ದು. ೨೦೦೨ರ ಗುಜರಾತ್ ಹಿಂಸಾಚಾರದ ಬೆನ್ನಿಗೇ, ಗೆಳೆಯ ಮುರಾರಿ ಉಡುಪಿಯಲ್ಲಿ ‘ಧರ್ಮ, ಹಿಂಸೆ’ಗಳ ಕುರಿತು ಒಂದು ಸಂವಾದ ಏರ್ಪಡಿಸಿದ್ದರು. ಅಲ್ಲಿ, ಅಹ್ಮಾದಬಾದಿನಿಂದ ಬಂದಿದ್ದ ಶಿವ್ ವಿಶ್ವನಾಥನ್, ಎಂದಿನ ತಮ್ಮ ತೀಕ್ಷ್ಣ ಒಳನೋಟಗಳೊಂದಿಗೆ, ತಾನು ಖುದ್ದಾಗಿ ಕಂಡ ಗುಜರಾತಿನ ಹಿಂಸೆಯನ್ನು ಆಧುನಿಕ ಭಾರತದ ಜನ ಸಹಜವಾಗಿ ರೂಢಿಸಿಕೊಂಡುಬಿಟ್ಟಿರುವ ಹಿಂಸೆಯ ಬಹುರೂಪಗಳ ಸಹಿತ ವಿವರಿಸಿದರು. ಆ ಹೊತ್ತಿಗಾಗಲೇ, ಗುಜರಾತಿನ ಹಿಂಸೆಯ ವಿವರಗಳನ್ನು  ತಕ್ಕಮಟ್ಟಿಗೆ ತಿಳಿದಿದ್ದ ನಮ್ಮಲ್ಲಿ, ಶಿವ್‌ರ ಮಾತುಗಳು ಹೊಸ ‘ಆತಂಕಿತ ಎಚ್ಚರ’ವನ್ನು ಹುಟ್ಟಿಸಿತು (ಆತಂಕಿತ ಎಚ್ಚರ-ನಮಗೆ ಎಡಪಂಥದ ವಿಚಾರಗಳಿಂದ ರೂಢಿಯಾಗಿಬಿಟ್ಟಿರುವ ‘ವಿ ಷಲ್ ಓವರ್  ಕಮ್’ ನಮೂನೆಯ ಬೋಳೆ ಆಶಾವಾದವನ್ನು ಝಾಡಿಸಿ, ನಾವು ಭಾಗಿಯಾಗಿರುವ ಆಧುನಿಕ ಹಿಂಸೆಯ ವಾಸ್ತವ ರೂಪವನ್ನು ಕಾಣಿಸಿ, ಆತಂಕ ಸಹಿತ ಜಾಗೃತಗೊಳಿಸುವುದು) ನಂತರದಲ್ಲಿ ಮಾತನಾಡಿದ ಬೌದ್ಧ ಭಿಕ್ಷು ಒಬ್ಬರು ‘ಭೂಮಿಯ ಮೇಲಿನ ಜೀವನ ಆವರ್ತದ ಅನಂತತೆಯಲ್ಲಿ, ಈ ಹಿಂಸ್ರಾಕಾಲದ್ದು ಒಂದು ತೃಣ ಗಾತ್ರದ ಪಾಲು ಮಾತ್ರ. ಕಾಲದ ಸಾತತ್ಯದಲ್ಲಿ ಮನಸ್ಸು ನೆಟ್ಟು ನಾವು ಹಿಂಸೆಯ ತಾತ್ಕಾಲಿಕ ಸ್ಥಿತಿಯನ್ನು ಮೀರಬೇಕು’ ಎಂಬ ಅರ್ಥ ಬರುವ ಮಾತುಗಳನ್ನು ಆಡಿದರು. ತಾರ್ಕಿಕವಾಗಿ ಅವರ ಮಾತುಗಳು ಸುಳ್ಳಲ್ಲವಾದ್ದರಿಂದ, ಅದರಿಂದ ಮೂಡಿದ ಪ್ರಸನ್ನತೆಯಲ್ಲಿ ನಾವು ಒಂದಷ್ಟು ಹೊತ್ತು ತೇಲಿಬಿಟ್ಟೆವು! ಅನಂತಮೂರ್ತಿಯವರ ಕವನದಲ್ಲಿ ಪೂರ್ವಸೂರಿಯಾಗಿ ಅಜ್ಜಿ ಶಿವ್‌ರ ಮಾತುಗಳ ಎಚ್ಚರವನ್ನು ಕೊಟ್ಟರೆ, ಯಾಜ್ಞವಲ್ಕ್ಯರ ಪ್ರವೇಶ, ಭೌದ್ಧ ಭಿಕ್ಷುವಿನ ನಿರಾಳತೆಯನ್ನು ತಂದುಬಿಡುತ್ತದೆ. ಸದ್ಯದ ಆತಂಕಗಳ ನಡುವೆ ಈ ರೀತಿಯ ನಿರಾಳತೆಯನ್ನು ಮೂಡಿಸುವ ಪರಂಪರೆಯ ಕಲ್ಪನೆಯನ್ನೇ ನಾನು ‘ಮೆಲೋಡ್ರಾಮ್ಯಾಟಿಕ್’ ಆದ ಪರಂಪರೆಯ ಕಲ್ಪನೆಯ ಬಗ್ಗೆ ನನಗಂತೂ ಸದಾ ಅನುಮಾನ-ಅದು ನನ್ನ ಬುದ್ಧಿವೈಕಲ್ಯ ಎಂದಾದರೂ ಸರಿ, ನಾನು ಈ ಅನುಮಾನವನ್ನೇ ನೆಚ್ಚಿಕೊಳ್ಳುವವನು.

ನಾನು ಬೆಳೆದದ್ದು, ಶಿವಮೊಗ್ಗದಿಂದ ನೂರುಕಿಲೋಮೀಟರ್ ದೂರದಲ್ಲಿರುವ, ಅತ್ತ ಹಳ್ಳಿಯೂ ಅಲ್ಲದ ಇತ್ತ ಪೇಟೆಯೂ ಅಲ್ಲದ ಹರಪನಹಳ್ಳಿ ಎಂಬ ಊರಿನಲ್ಲಿ. ಯಾರಾದರೂ ಶಿವಮೊಗ್ಗೆಯಲ್ಲಿ ಹರಪನಹಳ್ಳಿ ಕಡೆ ಹೊರಡುವ ಬಸ್ಸು ಹತ್ತಿ ಪ್ರಯಾಣ ಮಾಡಿದರೆ, ಜನರಾಡುವ ಕನ್ನಡಭಾಷೆಯ ರಾಗ-ಲಯಗಳು ಲೀಲಾಜಾಲಕ್ಕೆ ಸ್ವಲ್ಪ ಸ್ವಲ್ಪ ಬದಲಾಗುತ್ತ, ಹೊನ್ನಾಳಿಯಲ್ಲಿ ಒಂದು ತಿರುವನ್ನು, ಹರಿಹರದಲ್ಲಿ ಮತ್ತೊಂದು ತಿರುವನ್ನು ಪಡೆದುಕೊಳ್ಳುವುದು ನಿರಾಯಾಸವಾಗಿ ಗಮನಿಸಬಹುದು. ಇದು ಈ ಭಾಗದ ವಿಶೇಷವೇನೂಅಲ್ಲ, ಉಡುಪಿಯಿಂದ ಯಾವ ದಾರಿಯಲ್ಲಿ ಶಿವಮೊಗ್ಗಕ್ಕೆ ಹೋದರೂ, ಕರ್ನಾಟಕದ ಒಂದೂರಿನಿಂದ ದಶದಿಕ್ಕುಗಳಲ್ಲಿ ಪ್ರಯಾಣಿಸಿದರೂ, ಈ ಭಾಷಾಲೀಲೆಯನ್ನು ಗಮನಿಸಬಹುದು. ಇರಲಿ. ನಾನು ಬೆಳೆದ ಹರಪನಹಳ್ಳಿಯಲ್ಲಿ (೧೯೬೦-೭೦ರ ದಶಕ) ಮನೆಗಳಲ್ಲಿ ‘ತಿಂಡಿ ತಿನ್ನುವ’ ಪರಿಪಾಟವಿದ್ದದ್ದು ಒಂದೋ ತಿಂಗಳ ಸಂಬಳ ಪಡೆಯುವ ನೌಕರರ ಮನೆಯಲ್ಲಿ ಮತ್ತು ಬ್ರಾಹ್ಮಣರ ಮನೆಗಳಲ್ಲಿ ಬ್ರಾಹ್ಮಣರು ‘ತಿಂಡಿ’ ಎನ್ನದೆ ‘ಫಳ್ಹಾರ’ (ಫಲಹಾರ) ಎನ್ನುತ್ತಿದ್ದರು. ಈ ತಿಂಡಿ ತಿನ್ನುವ ಮನೆಯಲ್ಲಿ ಊಟಕ್ಕೆ ಮುಖ್ಯವಾಗಿ ಅನ್ನವಿರುತ್ತಿತ್ತು. ಜೊತೆಗೆ ಜೋಳದ ರೊಟ್ಟಿಯೂ ಇರಬಹುದಿತ್ತು. ಬ್ರಾಹ್ಮಣೇತರರ ಮನೆಗಳಲ್ಲಿ ಊಟಕ್ಕೆ ಜೋಳದ ರೊಟ್ಟಿ ಅಥವ ಮುದ್ದೆ ಮುಖ್ಯವಾಗಿತ್ತು. ಈ ವಾತಾವರಣದಲ್ಲಿ ಬ್ರಾಹ್ಮಣರು ರೊಟ್ಟಿ/ಮುದ್ದೆ ಹಾಗೂ ಇತರೆ ‘ತಿಂಡಿ’ಗಳನ್ನು ಸೇವಿಸುವುದನ್ನು ‘ತಿನ್ನುತ್ತೇವೆ’ ಎಂತಲೂ, ಅನ್ನವನ್ನು ‘ಉಣ್ಣುತ್ತೇವೆ’ ಎಂತಲೂ ಹೇಳುತ್ತಿದ್ದರು. ಆದರೆ ಬ್ರಾಹ್ಮಣೇತರರು ರೊಟ್ಟಿ, ಮುದ್ದೆ ಸಹಿತ ಸೇವಿಸುವ ಎಲ್ಲವನ್ನೂ ‘ಉಣ್ಣುತ್ತೇವೆ’ ಎನ್ನುತ್ತಿದ್ದರು. ಅಂದಿನಿಂದ ನನ್ನಲ್ಲಿ, ‘ಉಣ್ಣು’ ಎಂದರೆ ಜೀವಪೋಷಣೆಗೆ ಅಗತ್ಯವಾದ ಸೇವನೆ ಎಂದು, ‘ತಿನ್ನು’ ಎಂದರೆ ಚಪಲಕ್ಕೋ, ಸರಿಯಾಗಿ ‘ಉಣ್ಣದ್ದರಿಂದ’ ಅಪವೇಳೆಯಲ್ಲಿ ಖಾಲಿಯಾಗಿರುವ ಹೊಟ್ಟೆಯನ್ನು ತುಂಬಿಸಿಕೊಳ್ಳಲಿಕ್ಕೋ ಮಾಡುವ ಸೇವನೆ ಎನ್ನುವ ಅರ್ಥ ನೆಟ್ಟುಕೊಂಡುಬಿಟ್ಟಿದೆ. ಹೇಗೋ ನನ್ನ ಸಮಾಜವಾದಕ್ಕೆ ‘ಉಣ್ಣು’ ಎಂಬ ಪದವೇ ಆಧ್ಯಾತ್ಮವಾಗಿ, ‘ಊಟ’ದ ಪ್ರತಿ ತುತ್ತು-ತುಂಡು ಪವಿತ್ರತೆಯ ಪ್ರತಿಮೆಗಳಾಗಿಬಿಟ್ಟಿವೆ. ಇದರಲ್ಲಿ ಯಾವ ದೊಡ್ಡಸ್ತಿಕೆಯೂ ಇಲ್ಲ, ಪಾಮರರೆಲ್ಲರ ಆಧ್ಯಾತ್ಮವೂ ಇಂತಹುದೇ-ಸ್ವಾರ್ಥದೊಳಗಿಂದಲೇ ಎದ್ದು ಬರುವ ಪರಮಾರ್ಥ. ಗ್ರಾಮ್ಶಿ ಇದನ್ನು ‘ಫಿಲಾಸಫಿ ಆಫ್ ಪ್ರಾಕ್ಟಿಸ್’ (ಆಚರಣೆಯಲ್ಲಿರುವ/ಆಚರಿಸಬಲ್ಲ ತತ್ವಶಾಸ್ತ್ರ) ಎನ್ನುತ್ತಾನೆ. ಬಸವಣ್ಣ ‘ಆಡುತ್ತ ಹಾಡುತ್ತ ಭಕ್ತಿ ಮಾಡಬಹುದು ಲಿಂಗಕ್ಕೆ-/ಅದು ಬೇಡದು, ಬೆಸಗೊಳದು!’ ಎನ್ನುತ್ತಾನೆ. ಅಷ್ಟೇ ಯಾಕೆ, ಮೇಲೆ ಉದ್ಧರಿಸಿರುವ ಅನಂತಮೂರ್ತಿಯವರ ಉತ್ತರಕೊರಿಯಾ ಯಾತ್ರೆಯ ಅನುಭವ ನಿರೂಪಣೆಯ ಶೀರ್ಷಿಕೆಯೇ ‘ಉತ್ತರಕೊರಿಯಾ ಜೊತೆ ರಾಗಿ ಸಂಬಂಧ’ ಅಲ್ಲಿ, ಅನಂತಮೂರ್ತಿಯವರಿಗೆ ಮಾರ್ಗದರ್ಶಿಗಳಾದ ಆ ಇಬ್ಬರು ಕಮಿಸರ್‌ಗಳು, ಇವರು ಲೇಖಕರು ಹಾಗು ವಿಶ್ವವಿದ್ಯಾಲಯ ಒಂದರ ಉಪಕುಲಪತಿ ಎಂದು ಗೊತ್ತಾದದ್ದೇ ಇಡುವ ಬೇಡಿಕೆ ಎಂದರೆ: ೧. ತಮ್ಮಕಮ್ಯುನಿಸ್ಟ್ ಮಹಾನಾಯಕ ಕಿಮ್ಗೆ ಒಂದು ಗೌರವ ಡಾಕ್ಟರೇಟ್ ಕೊಡಿಸಿ ೨. ತಮ್ಮ ಮಹಾನಾಯಕನ್ನು ಹಾಡಿಹೊಗಳಿ ಒಂದು ಪುಸ್ತಕ ಬರೆಯಿತಿ. ಅನಂತಮೂರ್ತಿ ತುಂಬ ಚತುರವಾಗಿ ಈ ಬೇಡಿಕೆಗಳನ್ನು ನಿರಾಕರಿಸುತ್ತಾರೆ. ಆದರೆ ಅಲ್ಲಿನ ಪ್ರೊಫೆಸರ್ ಒಬ್ಬರಿಗೆ, ಪ್ರತಿಕೂಲ ಹವಾಮಾನದಲ್ಲೂ ಬೆಳೆಯಬಹುದಾದ ರಾಗಿಯ ಬಗ್ಗೆ ತಿಳಿಸುತ್ತಾರೆ ಮತ್ತು ಕೇರಳಕ್ಕೆ ವಾಪಾಸು ಬಂದವರು ರಾಗಿ ತಳಿಯನ್ನು ಅವರಿಗೆ ಕಳಿಸಿಕೊಡುತ್ತಾರೆ. ಆಧುನಿಕ ಅಭಿವೃದ್ಧಿ ಕಲ್ಪನೆಯ ಆಟಾಟೋಪದ ಎದಿರು, ಆಧ್ಯಾತ್ಮ ಎಂದರೆ ಇದೇ ಎಂದು ಗಟ್ಟಿಯಾಗಿ ನಂಬುವವನು ನಾನು. ಆಧುನಿಕ ಅಭಿವೃದ್ಧಿಯ ದುರಹಂಕಾರವನ್ನು ಎದುರಿಸಲು ಬರಿ ಲೌಕಿಕ ಉಪಯುಕ್ತತೆ, ಆರ್ಥಿಕ ಲಾಭ-ನಷ್ಟಗಳ ಲೆಕ್ಕಾಚಾರ ಮಾತ್ರ ಸಾಲದು; ಅದಕ್ಕೆ ಒಂದು ಆಧ್ಯಾತ್ಮಿಕ ಚೇತನ ಬೇಕು, ಈ ಚೇತನವನ್ನು ಉದ್ದೀಪಿಸುವ ಪಾವಿತ್ರ್ಯದ ಕಲ್ಪನೆಯೂ ಬೇಕು ಎನ್ನುವ ಅನಂತಮೂರ್ತಿಯವರ ನಿಲುವನ್ನು ನಾನು ಬೇಷರತ್ತಾಗಿ ಒಪ್ಪುತ್ತೇನೆ. ಆದರೆ ಈ ‘ಆದ್ಯಾತ್ಮ’ ಮತ್ತು ‘ಪಾವಿತ್ರ್ಯ’ಗಳ ಸ್ವರೂಪದ ನಿರ್ವಚನದಲ್ಲಿ ಅನಂತಮೂರ್ತಿಯವರು ತರುವ ‘ಮೆಲೋಡ್ರಾಮ್ಯಾಟಿಕ್ ಪರಂಪರೆಯ’ ಕಲ್ಪನೆಯ ಬಗ್ಗೆ ನಾನು ನನ್ನ ಭಿನ್ನಮತವನ್ನು ಉಳಿಸಿಕೊಳ್ಳುವವನು. ಉಡುಪಿ ಸಮೀಪದ ಪಾಜಕದ ಗ್ರಾನೈಟ್ ಗಣಿಗಾರಿಕೆಯನ್ನು ವಿರೋಧಿಸಲು, ‘ಬಾಲಕನಾದ ಮಧ್ವಾಚಾರ್ಯರು ಆ ಬಂಡೆಗಳ ಮೇಲೆ ಓಡಾಡಿದ್ದರು’ ಎಂಬ, ಕುದುರೆಮುಖದಲ್ಲಿ ಗಣಿಗಾರಿಕೆಯನ್ನು ವಿರೋಧಿಸಲು ‘ಶೃಂಗೇರಿಯ ಧರ್ಮ ಪೀಠದಿಂದಾಗಿ ಭದ್ರಾನದಿಗೆ ಧಾರ್ಮಿಕ ಪಾವಿತ್ಯ್ರವಿದೆ; ಇಂಥ ಪವಿತ್ರ ನದಿಯನ್ನು ಕಲುತಗೊಳ್ಳಲು ಬಿಡಬಾರದು’ ಎಂಬ ಪಾವಿತ್ಯ್ರೆದ ಕಲ್ಪನೆಗಳನ್ನು ಅನಂತಮೂರ್ತಿ ಪ್ರಕಟಿಸಿದ್ದಾರೆ. ಇವುಗಳಿಗಿಂತ ಭಿನ್ನವಾದ, ಲೋಕ ಸಮಾನತೆ, ಲೋಕಪಾವಿತ್ಯ್ರದ ಸಂಗತಿಗಳನ್ನು, ಈ ಎರಡೂ ಪ್ರಸಂಗಗಳಲ್ಲಿ ಅವರು ಹೇಳಿದ್ದಾರೆ ಎನ್ನುವುದನ್ನು ಮರೆಯದೆ, ಈ ನಮೂನೆಯ ಪಾವಿತ್ಯ್ರತೆಯ ಸಂಗತಿಗಳನ್ನು, ಈ ಎರಡೂ ಪ್ರಸಂಗಗಳಲ್ಲಿ ಅವರು ಹೇಳಿದ್ದಾರೆ ಎನ್ನುವುದನ್ನು ಮರೆಯದೆ, ಈ ನಮೂನೆಯ ಪಾವಿತ್ಯ್ರತೆಯ ಕಲ್ಪನೆಗಳು ಆಧುನಿಕ ಅಭಿವೃದ್ಧಿಯ ದರ್ಪಕ್ಕೆ ತೋರುವ ಪ್ರತಿಭಟನೆಗೆ ಅನಿವಾರ್ಯವೋ? ಎಂದು ಅನಂತಮೂರ್ತಿಯವರನ್ನು ಕೇಳಬೇಕು ಎಂದು ನನಗೆ ಅನ್ನಿಸುತ್ತಿದೆ. ಇದು ಖಂಡಿತಕ್ಕು ನಾಸ್ತಿಕನಾಗಿ ನಾನು ಕೇಳುತ್ತಿರುವ ಪ್ರಶ್ನೆಯಲ್ಲ. ಆಧುನಿಕ ಪ್ರಗತಿಯ ಕಲ್ಪನೆಯ ನಿರೂಪಣೆಯಲ್ಲಿ ನನ್ನಂತಹ ಆಧುನಿಕರ, ಅಷ್ಟೇನು ಸುಪ್ತವಲ್ಲದ, ನಿತ್ಯದ ಆಸೆಗಳ ಪಾತ್ರವೂ ದೊಡ್ಡದೇ. ಹಾಗಾಗಿ, ಒಂದೇ ಹೊತ್ತಿನಲ್ಲಿ, ಈ ಅಭಿವೃದ್ಧಿ ಕಲ್ಪನೆಯನ್ನು ವಿರೋಧಿಸುತ್ತಲೂ, ಉಡುಪಿಯಲ್ಲಿ ಸಂಸಾರವಂದಿಗನಾಗಿ ಬದುಕುತ್ತಲೂ ಇರುವ ಒಬ್ಬನ ಸಂಕಟದ ಪ್ರಶ್ನೆ ಇದು.

ಈ ಸಂಕಲನದಲ್ಲಿ ಅನಂತಮೂರ್ತಿ ನಮ್ಮ ಸೌಂದರ್ಯಪ್ರಜ್ಞೆಗೂ, ನಮ್ಮ ನಿತ್ಯದ ಬದುಕಿನ ಸ್ವಾಸ್ಥ್ಯಕ್ಕೂ ಸವಾಲಾಗಿರುವ ಅನೇಕ ವರ್ತಮಾನದ ವಿದ್ಯಮಾನಗಳ ಬಗ್ಗೆ ತುಂಬು ಕಾಳಜಿಯಿಂದ ಪ್ರತಿಕ್ರಿಯಿಸುತ್ತ, ತಮ್ಮ ಆಸ್ಥೆ, ಒಳನೋಟಗಳ ಮೂಲಕ ನಮ್ಮನ್ನು ಕಾರ್ಯಶೀಲರಾಗಿಸುವ ದಾರಿಗಳನ್ನು ತೋರಿಸಿದ್ದಾರೆ. ಅವರು ಪ್ರಸ್ತಾಪಿಸಿರುವ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದು ಎಂದರೆ ನಮ್ಮ ಬದುಕಿನ ಹುಳುಕುಗಳನ್ನು ನಾವೇ ಕಂಡುಕೊಳ್ಳುವುದು ಎಂಬ ತುರ್ತಿನಲ್ಲಿಯೇ ಈ ಪ್ರತಿಕ್ರಿಯೆ ಬರೆದಿದ್ದೇನೆ. ಆದರೆ ನನ್ನ ಇಂಥಾ ಪ್ರತಿಕ್ರಿಯೆಯನ್ನೇ ವಿಸಂಗತಗೊಳಿಸುವ ವಿದ್ಯಮಾನಗಳೂ ನಮ್ಮ ದೇಶದಲ್ಲಿ ನಡೆಯುತ್ತಿವೆ. ನಾನು ಅನಂತಮೂರ್ತಿಯವರ  ವಿಚಾರಗಳಿಗೆ ಸ್ಪಂದಿಸಲು ಎತ್ತಿಕೊಂಡಿರುವ ವಿಷಯಕ್ಕೆ (ಥೀಮ್) ಸಂಬಂಧಿಸಿದ ಮತ್ತು ನನ್ನ ಪ್ರತಿಕ್ರಿಯೆಯನ್ನು ಲೇವಡಿ ಮಾಡುವಂತಿರುವ ಒಂದು ಘಟನೆಯನ್ನು ಸಂಗ್ರಹವಾಗಿ ಹೇಳಿ ಮುಗಿಸಿಬಿಡುತ್ತೇನೆ. ಮೊದಲು ಉತ್ತರಪ್ರದೇಶದಲ್ಲೂ, ಈಗ ಉತ್ತರಾಂಚಲದಲ್ಲೂ ಇರುವ ತೆಹ್ರಿ ಎಂಬ ಊರು ಹಾಗು ಅಲ್ಲಿ ಭಾಗೀರಥಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟಿನ ದುರಂತ ಕಥನಕ್ಕೆ ವಕ್ರವ್ಯಂಗ್ಯವಾಗಿರುವ ಪ್ರಸಂಗವಿದು. ತೆಹ್ರಿ ಒಂದು ಸಕ್ರಿಯ ಭೂಕಂಪನ ಪ್ರದೇಶದಲ್ಲಿ ಇರುವುದರಿಂದ ಅಲ್ಲಿ ಅಣೆಕಟ್ಟು ನಿರ್ಮಿಸುವುದು ಅಪಾಯಕಾರಿ ಎಂದು ತಂತ್ರಜ್ಞರು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಆದರೆ, ಪ್ರಭುತ್ವಗಳು ವೈಜ್ಞಾನಿಕ ತರ್ಕಗಳ ಬೊಂಬಡ ಬಜಾಯಿಸುವುದು ತಮಗೆ ಅನುಕೂಲವಾಗಿದ್ದಾಗ ಮಾತ್ರ ತಾನೇ! ಕ್ಯಾರೇ, ಅನ್ನದೇ ಆಣೆಕಟ್ಟಿನ ಯೋಜನೆ ಶುರುವಾಯಿತು. ಈ ಯೋಜನೆಯಿಂದ ಅಲ್ಲಿನ ಜೀವಸಂಕುಲಕ್ಕು, ಜನರ ಬದುಕಿಗೂ ಗಂಡಾಂತರ ಇರುವುದನ್ನು ಮುಖ್ಯವಾಗಿಸಿಕೊಂಡು ಸುಂದರಲಾಲ್ ಬಹುಗುಣ ಯೋಜನೆಯ ವಿರುದ್ಧ ಸಾತ್ವಿಕ ಪ್ರತಿಭಟನೆ ಶುರು ಮಾಡಿದರು. ಅಂಥ ಸಾತ್ವಿಕ ಪ್ರತಿಭಟನೆಗಳನ್ನು ನಿರ್ಲಕ್ಷಿಸುವ  ಮೂಲಕ ಸಾಮಾನ್ಯಜನರ ಪ್ರತಿರೋಧಶಕ್ತಿಯನ್ನು ನಿಷ್ಪ್ರಯೋಜಕ-ಗೊಳಿಸಬಹುದು ಎಂದು ಗೊತ್ತಿರುವ ಪ್ರಭುತ್ವ, ಸರಿಯಾಗಿ ಅದನ್ನೇ ಮಾಡಿತು. ಅಣೆಕಟ್ಟಿನಯೋಜನೆ ಪ್ರಗತಿಯಲ್ಲಿದ್ದರೂ ಬಹುಗುಣರ ನೇತೃತ್ವದಲ್ಲಿ ಜನ ಪ್ರತಿಭಟಿಸುತ್ತಲೇ ಹೋದರು. ಯೋಜನೆ ಇನ್ನೇನು ಮುಗಿಯುತ್ತದೆ ಎನ್ನುವಾಗ ವಿಶ್ವ ಹಿಂದು ಪರಿಷತ್ತು ನಾಟಕೀಯವಾಗಿ ರಂಗಪ್ರವೇಶ ಮಾಡಿತು! ಆಗ ಕೇಂದ್ರದಲ್ಲಿ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ. ಸರಕಾರ ಅಸ್ತಿತ್ವದಲ್ಲಿತ್ತು. ವಿ.ಹಿಂ.ಪ. ಯೋಜನೆಯನ್ನು ವಿರೋಧಿಸುವುದಕ್ಕೆ ಕೊಟ್ಟ ಕಾರಣವೆಂದರೆ: ಭಾಗೀರಥಿ ಹಿಂದುಗಳಿಗೆ ಪವಿತ್ರವಾದ ನದಿ; ಅದು ಹರಿದು ಗಂಗೆ, ಯಮುನೆಯರನ್ನು ಸೇರಿ ತ್ರಿವೇಣಿ ಸಂಗಮವಾಗುತ್ತದೆ; ಈ ಸಂಗಮ ಸ್ಥಾನವೂ ಹಿಂದುಗಳಿಗೆ ಮೋಕ್ಷದಾಯಕ; ತೆಹ್ರಿ ಅಣೆಕಟ್ಟಿನಿಂದ, ತೆಹ್ರಿಯ ನಂತರದಲ್ಲಿ ಭಾಗೀರಥಿಯ ಹರಿವೇ ನಿಂತು, ತ್ರೀವೇಣಿ ಸಂಗಮವೇ ಆಗುವುದಿಲ್ಲ. ಇದನ್ನು ಹಿಂದುಗಳ ಹಿತರಕ್ಷಣೆಯ ದೊಣ್ಣಿನಾಯಕರ ಪಾತ್ರವನ್ನು ಯಾರೂ ಬೇಡದೆ ನಿರ್ವಹಿಸುತ್ತಿರುವ, ವಿ.ಹಿಂ.ಪ. ಒಪ್ಪುವುದಿಲ್ಲ. ಇಲ್ಲಿ ಸುಂದರಲಾಲ್ ಬಹುಗುಣರ ಲೋಕದೃಷ್ಟಿಗೂ, ಈ ದೊಣ್ಣಿನಾಯಕರ ಲೋಕದೃಷ್ಟಿಗೂ ಇರುವ ವ್ಯತ್ಯಾಸವನ್ನು ವಿವರಿಸುವ ಅಗತ್ಯವಿಲ್ಲ, ಬಿಡಿ. ಅಲ್ಪಸಂಖ್ಯಾತರ ಮೇಲೆ ಕತ್ತಿ ಮಸಿಯುವ ರಾಜಕೀಯ ಅಂಜೇಡಾಗಳನ್ನು ರೂಪಿಸುವಾಗ ಕಲಬೆರೆಕೆ ‘ಹಿಂದು ಪರಂಪರೆ’ಯನ್ನು ಸೃಷ್ಟಿಸುವ ಬಿ.ಜೆ.ಪಿ., ಆಧುನಿಕ ಅಭಿವೃದ್ಧಿ ಯೋಜನೆಗಳ ವಿಷಯದಲ್ಲಿ ಪ್ರಗತಿಪರ! ತನ್ನ ಆಡಳಿತ ಇರುವಾಗಲೇ ತೆಹ್ರಿ ಯೋಜನೆ ಪೂರ್ಣಗೊಳ್ಳುತ್ತಿರುವಾಗ, ತನ್ನ ಚೆಡ್ಡಿಮಿತ್ರರು ಅಡ್ಡಗಾಲು ಹಾಕುತ್ತಿರುವುದು ಆ ಪಕ್ಷಕ್ಕೆ ಒಂದು ಸಮಸ್ಯೆಯಾಯಿತು. ಆಗ ಅವರು, ಎರಡು ಕಡೆಯೂ ಸಲ್ಲುವ, ಆಗ ಕೇಂದ್ರದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿದ್ದ ಮುರುಳಿ ಮನೋಹರ ಜೋಷಿಯನ್ನು ರಾಯಭಾರಿಯಾಗಿ ನೇಮಿಸಿದರು. ಜೋಷಿ ಒಂದು ಪರಿಹಾರ ಸೂತ್ರ ರೂಪಿಸಿ ವಿ.ಹಿಂ.ಪ. ಮುಂದಿಟ್ಟರು. ಖುಷಿಯಿಂದ ವಿ.ಹಿಂ.ಪ. ಅದನ್ನುಒಪ್ಪಿತು. ತೆಹ್ರಿ ಆಣೆಕಟ್ಟು ಪೂರ್ಣವಾಗಿ, ಆ ಊರು, ಆ ಪ್ರದೇಶದ ಹಳ್ಳಿಯ ಜನರು, ಅಲ್ಲಿನ ಜೀವಸಂಕುಲವೂ ನಿರ್ಗತಿಕವಾದವು. ಮುಳುಗುತ್ತಿರುವ ಊರನ್ನು ಬಿಡೆನೆಂಬ ಸತ್ಯಾಗ್ರಾಹಿ ಬಹುಗುಣರನ್ನು ಬಲತ್ಕಾರದಲ್ಲಿ ಪೊಲೀಸರು ಎಳೆದು ಕೊಂಡಯ್ದರು. ಇಷ್ಟಕ್ಕೂ, ಹಿಂದುಗಳ ಪಾವಿತ್ಯ್ರವನ್ನು, ಆಣೆಕಟ್ಟು ಯೋಜನೆಯನ್ನೂ ಒಟ್ಟಿಗೇ ಕಾಪಾಡಿದ ಮುರಳಿ ಮನೋಹರ್ ಜೋಷಿಯ ಮಂತ್ರವಾದರೂ ಏನು ಗೊತ್ತಾ! ಅಣೆಕಟ್ಟಿನಲ್ಲಿ ಒಂದು ಸಣ್ಣ ತೂಬನ್ನು ಮಾಡಿ, ಒಂದು ಹತ್ತು ಬೊಗಸೆ ಭಾಗೀರಥಿಯನ್ನು ತ್ರಿವೇಣಿ ಸಂಗಮಕ್ಕೆ ಕಳಿಸುವುದು!

ಮೇಷ್ಟ್ರ ಪ್ರೀತಿಗೆ ನಾನು ಋಣಿ.

* * *