(ಗಂಗಾತೀರದ ಅರಣ್ಯ. ಸೀತಾದೇವಿ ಗರ್ಭಿಣಿಯಾದರೂ ಸಡಗರದಿಂದ ಬೇಗನೆ ನಡೆದು ಬರುತ್ತಾಳೆ. ಆಯಾಸವಾದರೂ ಉತ್ಸಾಹ ಭರದಲ್ಲಿ ಆಕೆಗೆ ಅದು ತಿಳಿಯುವುದಿಲ್ಲ.)

ಸೀತೆ
ಸೌಮಿತ್ರಿ,
ಈ ಬನದ ಪಸುರರ್ಗತ್ತಲೆ ಕಣ್ಗೆನಿತು ತಣ್ಣಗಿದೆ!
ಬಾನ ನಡುನೆತ್ತಿಯೊಳು
ನಡುವಗಲ ನೇಸರು ನಿಶ್ಛಲಂ ಪೊಳೆದಿರ್ದೊಡಂ
ಬಿಸಿಲ ಕಾಯ್ಪಿಲ್ಲಿ ತೋರದಿದೆ.
ಈ ಹೆಮ್ಮರಗಳೇಂ
ತಳಿರ್ಗೊಡೆವಿಡಿದು ನಿಂದಿಹವು
ನಮಗೆ ನೆಳಲೀಯಲೆಂಬಂತೆ! —
ಅಲ್ಲಿ ನೋಡಯ್ ! — ತನ್ನ ನೀರೆದೆಯೊಳು
ತೆರೆತೆರೆ ಪರ್ಬಿ ಮಾರ್ಪೊಳೆದು ಮಿಂಚುತಿಹ
ರವಿಯ ಬಿಂಬಮಂ ಪೊತ್ತು
ತುಂಬು ಬಸಿರಿಂ
ಇಕ್ಕೆಲದ ಬನಸಿರಿಯ ನಡುವೆ ಮೆಲ್ಲಮೆಲ್ಲನೆ ಪರಿವ
ಗಂಗೆಯೇಂ ಕಣ್ಗೆಡ್ಡಮಾಗಿಹಳು!
ಆಹ! —
ಮುಂಗಾಲ್ಗಳಂ ನೆಲದೊಳೂರಿ ಪಿಂಗಾಲ್ಗಳಿಂ ನಿಂತು
ಮೋರೆಯಂ ನೀರ್ ಗಿಟ್ಟು ನೀರ್ ಕುಡಿವ
ಆ ಹರಿಣಿಯೇಂ ಚೆಲ್ವಂ ಮೆರೆದಪುದು!
ಅದರೆಡೆಯೊಳಿಹ ಮರಿಯೇಂ ಬಾಲವನೊಲೆದು ಚಿಮ್ಮುತಿದೆ!
(ಹಿಂತಿರುಗಿ ನೋಡಿ ಲಕ್ಷ್ಮಣನು ದೂರದಲ್ಲಿ ಬರುವುದನ್ನು ಕಂಡು)
ಅಯ್ಯೊ, ನಾನಾರೊಡನೆ ನುಡಿಯುತಿಹೆನಿಂತು? — (ಗಟ್ಟಿಯಾಗಿ)
ಇದೇನಯ್, ಸೌಮಿತ್ರಿ, ಹಿಂದುಳಿದೆ?
ಹಾದಿಯೊಳು ಕಲ್ಲುಮುಳ್ಳುಗಳಿಲ್ಲ;
ತಗ್ಗುದಿಣ್ನೆಗಳಿಲ್ಲ;
ಸಮತಟ್ಟಾಗಿರ್ಪುದೀ ಬನಂ
(ಲಕ್ಷ್ಮಣನು ಬಿಲ್ಲು ಬತ್ತಳಿಯೊಡನೆ ಬರುವನು. ಒಂದು ದೊಡ್ಡ ಗಂಟನ್ನು ಹೊತ್ತಿರುವನು. ಸೀತೆ ಮುಗುಳ್ನಗೆಯಿಂದ)
ಲೇಸಾಯ್ತು! ನಿಡುಲೇಸಾಯ್ತು!
ಹೆಣ್ಣಾದ ನಾನೆ ಸಾಗಿಬರೆ,
ಗಂಡುಗಲಿ ನೀನೆ ನಡೆಯಲಾರದಿರೆ, ನಾಣಲ್ತೆ?
ಇರು, ಇರು; ಊರ್ಮಳೆಗಿದನೊರೆದಪೆಂ:
ನಿನ್ನನಿಯಂ, ನಚ್ಚಿನ ನಿನ್ನನಿಯಂ
ಪೆಣ್ಣೊಡಗೂಡಿ ನಡೆಯಲಾರದೆ
ಬಸವಳಿದು ಪಿಂದಾದಂ ಎಂದು!

ಲಕ್ಷ್ಮಣ
(ಬಹಳ ಪ್ರಯತ್ನದಿಂದ ಮುಗುಳ್ನಗುತ್ತ)
ತಾಯೆ, ಬೇಗದಿಂ ನಡೆದು ಬರುತಿರೆ
ಹಳುವದೊಳಾವುದೊ ಬಲ್ಮಿಗಂ ಕಣ್ಗೆ ಮಿಂಚಿದುದು.
ಅದೇನೆಂದು ನೋಳ್ಪನಿತರೊಳೆ ನೀಂ ಮುಂದಾದಿರಿ.
ಅದಲ್ಲದೆ, ನಿಮ್ಮೀ ಕರಂಡಂ — (ಅದನ್ನು ನೋಡಿ)
ಬಹುಭಾರಮಾಗಿರ್ಪುದು —
ಇದರೊಳೇನಿರ್ಪುದೊ ನಾನರಿಯೆಂ.

ಸೀತೆ
(ನಸುನಗುತ್ತ)
ಎಂದಿನಿಂದಾದುದೈ ನಿನಗೀ ಕೋಮಲ ಸ್ವಭಾವಂ?
ವನವಾಸದಂದು ಎಮ್ಮೆಲ್ಲರ ಪೊರೆಯಂ
ನೀನೊರ್ವನೆ ಆಸರುಬೇಸರಿಲ್ಲದೆ ಪೊತ್ತು
ಜಿಂಕೆಯಂದದಿ ಚಿಮ್ಮುತಿರ್ದುದಂ ನಾನೆ ಕಂಡಿರ್ಪೆಂ.
ಲಂಕೆಯೊಳಂದು ಯುದ್ಧಕಾಲದೊಳು
ರಕ್ಕಸರೆಸೆದ ಬಲ್ಗುಂಡುಗಳೆಲ್ಲಂ
ಎನ್ನೀ ಕರಂಡಕಿಂ ಲಘುತರಮಾಗಿರ್ದುವೇಂ? —
(ಆಲೋಚಿಸಿದಂತೆ)

ಓಹೋ! ಈಗಳರಿತೆಂ!
ಅರಮನೆಯ ವಾಸಂ,
ಮೇಣೂರ್ಮಿಳೆಯ ಲಲಿತ ಸಹಾವಾಸಂ
ನಿನ್ನನಿಂತುಗೈದಿರ್ಪದೆ ಸಾಜಂ!

ಲಕ್ಷ್ಮಣ
ಎನ್ನನಣಕಿಸದಿರಿಂ, ತಾಯೆ;
ಕರಂಡದೊಳೇನಿರ್ಪುದೊ ಅದನರಿಯಲೆಂದಾಟಿಸಿ
ಕುತೂಹಲದಿಂ ಕೇಳ್ದೆನಲ್ತೆ!

ಸೀತೆ
ಅದರೊಳೇನಿರ್ಪುದೈ, ಸೌಮಿತ್ರಿ?
ತಪೋವನದ ಋಷಿಗಳ್ಗೆಂದುಂ ಮುನಿಪತ್ನಿಯರ್ಗೆಂದುಂ
ಪರಿಮಳದ್ರವ್ಯಂಗಳಂ ದಿವ್ಯಾಂಬರಂಗಳಂ
ಕೈಗಾಣ್ಕೆಯಾಗಿಟ್ಟಿಹೆಂ.
ಆಶ್ರಮದ ಕಿರುವರೆಯದ ನಲ್ಲುವರರ್ಗೆಂದು
ಒಂದೆರಳ್ವಗೆಯ ನಲ್ಲುಣಿಸನಿಟ್ಟಿಹೆಂ.
ಮತ್ತೇನೊಂದುಮಿಲ್ಲಂ! —  ಆಃ! ಮರೆತಿರ್ದೆಂ!
ಎನ್ನಿನಿಯನಡಿಗಳ ಚೆಂಬೊನ್ನ ಪಾವುಗೆಗಳಿಹವಲ್ಲಿ!
(ಲಕ್ಷ್ಮಣನು ಕರಂಡಕ್ಕೆ ನಮಸ್ಕಾರ ಮಾಡುವನು)
ನಿನದದು ಭಾರಮಾಗಿರ್ದೊಡೆ ಇತ್ತ ನೀಡು;
ನಾನೆ ಕೊಂಡೊಯ್ವೆಂ!
ಎಂತಾದರುಂ ನೀನೆನ್ನ ಸಮಕೆ ನಡೆದೊಡೆ
ಅದೆ ನನಗೆ ಸೌಭಾಗ್ಯಂ! —
ಪುರುಷರೆಲ್ಲರ್ಗೆ ಸಮರಮೆನೆ ಕಾಲ್ಗಳೋಟಂ!
ಮಿಕ್ಕೆಲ್ಲದರೊಳು ನೀಂ ಮಂದಗಾಮಿಗಳೆ ದಿಟಂ! (ಕೈ ನೀಡೆ)

ಲಕ್ಷ್ಮಣ
ತೆಗೆ ತೆಗೆ, ತಾಯೆ; ಸಾಲ್ಗುಮೀ ಪರಿಹಾಸ್ಯಂ!
ಭಕ್ತಂಗೆ ದೇವರಡಿದಾವರೆಗಳ್ ಭಾರಮೇ?

ಸೀತೆ
ಅಂತಾದೊಡೆ ನೀಂ ಪಿಂತುಳಿಯಲಾಗದು.

ಲಕ್ಷ್ಮಣ
ಅಪ್ಪುದಪ್ಪುದು, ನಾನಿಂ ಪಿಂತುಳಿಯೆಂ. (ತನ್ನಲ್ಲಿಯೆ)
ಅಯ್ಯೊ ರಾಘವೇಶ್ವರಂ ಕೋಮಲೆಯ ಕೊಲೆಗೆಲಸಕೆ
ಎಂತೆನ್ನಂ ಬೆಸಸಿದನೊ?
ನಿಷ್ಠುರದೊಳೆಂತೀ ಕೃತ್ಯಮೆಸಗುವೆನೊ?
ಕರುಣೆಯಿಲ್ಲದೀ ಬಾಳು ಪಾಳ್ಪೋಗಲಿ!
ತನ್ನ ಕೀರ್ತಿಯ ಕೋಡಿನೇಳ್ಗೆಗೆಂದು
ನಿರಪರಾಧಿನಿಯಂ ಬಲಿಗೊಡುವರೇ?
ಗೂಬೆ ನಿಂದಿಸಿತೆಂದು ಬೆಳ್ದಿಂಗಳಂ ಪಳಿವರೇ?
ಪಾಳಗಸನೊರ್ವಂ ಮುಳಿಸಿನಿಂ ಮುಂಗಾಣದೆ ಪಳಿದನೆಂದು
ಲೋಕಮಾತೆಯಂ ಅಡವಿಗಟ್ಟುವುದಾವ ಧರ್ಮಂ? (ನಿಡುಸುಯ್ದು)
ಧರ್ಮದ ಪೆಸರಿನೊಳೆ ಲೋಕದೊಳೆನಿತಧರ್ಮಂ ಗೈವರ್!

ಸೀತೆ
(ಎರಡು ಹೆಜ್ಜೆ ನಡೆದು)
ಮೈದುನಾ, ನೋಡಲ್ಲಿ: ಪೂತ ಆ ಚೆನ್ನಸುಗೆ
ಸಿಂಗರಿಸಿದ ಮದುಮಗಳಂತೆ ರಂಜಿಸುತ್ತಿದೆ!
ನೋಡು, ಆ ಕೊಂಬೆಯಿಂ ಜೋಲುತಿಹ ಹೆಜ್ಜೇನು ಹುಟ್ಟಿ
ಕರ್ದಿಂಗಳ ಪಲಕದಂತೆ
ಎನಿತು ಮನೋಜ್ಞ ಭೀಷಣಮಾಗಿದೆ!

ಲಕ್ಷ್ಮಣ
(ಗಮನಿಸದೆ ತನ್ನೊಳಗೇ)
ಆರೆಂದುದನುಂ ಗಣನೆಗೆ ತಾರದೆ
ತನ್ನ ಚಲಮೇ ನನ್ನಿಯೆಂದು ಸಾಧಿಸಿ
ಎನ್ನನೀ ಕಡುಗೆಯ್ಮೆಗೆ ನೂಂಕಿದಂ.
ಎಂತೀ ಸಿಡಿಲಸುದಿಯನೊರೆವೆಂ, ಮಾತೆಗೆ?
ಅಯ್ಯೋ ವಿಧಿಯೇ,
ಲಂಕೆಯೊಳೆನ್ನಂ ಕೊಲ್ಲದೆ ನೀನಿದಕೆಂದೆ ಉಳುಹಿದೆಯಾ?
ಪದಿನಾಲ್ಕು ಬರಿಸಮುಂ ನಾನಾರಂ
ಜಗನ್ಮಾತೆ ಎಂದಿರಿತು ಸೇವೆಗೈದೆನೋ
ಆ ಪುಣ್ಯಜನನಿಯಂ
ಇಂದೆಂತು ನಟ್ಟಡವಿಯೊಳೀಟ್ಟು ಪೋಗಲಿ?

ಸೀತೆ
(ಹಿಂತಿರುಗಿ)
ಇದೇನೈ, ಸೌಮಿತ್ರಿ, ನಿನ್ನೀ ತೆರಂ?
ನಡೆಯಲೊಲ್ಲೆ; ನುಡಿಸಿದರುಂ ನುಡಿಯಲೊಲ್ಲೆ.
ನುಡಿದರುಂ ಹುಂಕಾರಮೆ ಪಡಿನುಡಿಯಾಗಿರುರ್ಪುದು!
ಎನ್ನೊಡನೈತರಲು ನಿನಗಿಚ್ಚೆಯಿಲ್ಲೇಂ? (ನಸುಮುನಿಸಿನಿಂದ)
ಅರಮನೆಯೊಳೆ ನೀನಿಂತಾಡಿರ್ದಡೆ
ಭರತಶತ್ರುಘ್ನರೊಳಾರಾನುಮಂ ಕರೆತರುತಿರ್ದೆಂ.
ನಡುಗಾಡಿನೊಳು ನಿನ್ನಂತೆಸಪಂ ತರಮಲ್ತು!

ಲಕ್ಷ್ಮಣ
(ಹನಿಣ್ಣಾಗಿ)
ಜನನೀ, ಕೋಪಿಸದಿರಿಂ!

ಸೀತೆ
(ಕರುಣದಿಂದ ಕರಗಿ)
ಏನೈ ಕಂದಾ, ಕಣ್ಣು ಹನಿಯಾಡುತಿದೆ!
ನಿನ್ನರವಿಂದೇಕೊ ಸೋಜಿಗಮಾಗಿರ್ಪುದು!

ಲಕ್ಷ್ಮಣ
(ಸುತ್ತ ನೋಡಿ)
ದುಂಬಿಗಳಾಟದಿಂ ಕೆದರ್ದು ಪೂಗಳ ಪರಾಗಂ
ಕಣ್ಗೆ ಬಿಳ್ದುದು. (ಕಣ್ಣುಜ್ಜಿಕೊಳ್ಳುತ್ತಾ)
ಬಟ್ಟೆದಪ್ಪಿದೆನೊ ಏನೊ ಎಂದು ಕಳವಳಂ!

ಸೀತೆ
(ಸಮ್ಮತಿಸಿ)
ಆಹುದಹುದು, ಸೌಮಿತ್ರಿ.
ಎನಗಾಗಳೆಯೆ ಸಂಶಯಂ ತಲೆದೋರ್ದುದು.
ಆದೊಡಂ ನೀಂ ಬನಬಟ್ಟೆಯರಿತವಂ ಎಂದು
ಮಾತಾಡದೆಯೆ ಮುಂದುವರಿದೆಂ. —
ಈ ಕಾಡು ಅಟನಕದಳಮಾಗಿರ್ಪುದು. —
ಪುಣ್ಯಾಶ್ರಮದ ಜಟಿಗಳಂ ಕಾಣೆಂ;
ವಲ್ಕಲವನುಟ್ಟ ಮುನಿವಧುಗಳ ಸುಳಿವಿಲ್ಲ;
ವಟುಗಳೊರ್ವರು ಕಾಣಿಸರು;
ಶ್ರುತಿಘೋಷಂ ಕೇಳಿಸದು;
ಗಾಲಿಯೊಳೇಳ್ವ ಹೋಮಧೂಮಂ ಗೋಚರಿಸದು! —
ನಾನಂದು ಕಂಡ ಮುನಿಪೋತ್ತಮರ ವನದೆಡೆಗಳೆಲ್ಲಿ?
ಸಿದ್ಧಾಶ್ರಮಂಗಳ ಮಂಗಳ ಸ್ಥಳಗಳೆಲ್ಲಿ?
ಸುಹವಿಗಳ ಕಂಪೊಗೆದು ಪೊಗೆಯೇಳ್ವ
ಆ ಚೆಲ್ವಿನೆಲೆವನೆಗಳ ಸುಳಿವೆಲ್ಲಿ?
ಎನಗಂದು ಪರಿಚಿತಮಾದ ವಾದವೇದಧ್ವನಿಗಳೊಂದುಂ
ಈ ಎಡೆಯೊಳಲ್ಲಿಯೂ ಕೇಳಿಸದು!
ಅಯ್ಯೋ
ದಾರುಣದ ಕಟ್ಟಡವಿಗಿಲ್ಲಿಗೇಕೈತಂದೆ,
ತಂದೆ, ಸೌಮಿತ್ರಿ?

ಲಕ್ಷ್ಮಣ
(ತೋರುತ್ತಾ)
ತಾಯೆ, ಈ ದೆಸೆಯೊಳೇನಾದರುಂ
ದಾರಿಯ ಕುರುಪು ತೋರ್ಪುದೊ, ನೋಳ್ಪಂ, ಬನ್ನಿಂ
(ಸ್ವಲ್ಪದೂರ ಹೋಗಿ ತನ್ನಲ್ಲಿಯೆ)
ಅಯ್ಯೊ ಆನೀಗಳೇಗೈವೆಂ?
ಎಂತುಸಿರ್ವೆಂ ಆ ನಿಷ್ಠುರದ ವಿಷವಾರ್ತೆಯಂ?
ಇನೆನಿತು ಪೊಳ್ತು ಈ ಗರ್ಭಿಣಿಯಾದೆನ್ನ ಮಾತೆಯಂ
ಪುಸಿವೇಳ್ದು ಸುತ್ತಿಸಲಿ!
ಹಾ ವಿಧಿ; ಹಾ ರಾಮಚಂದ್ರಾ!

ಸೀತೆ
(ಬೆಚ್ಚಿ)
ರಾಮಚಂದ್ರಾ! ರಾಮಚಂದ್ರಾ!

ಲಕ್ಷ್ಮಣ
ಏನಾದುದೌ, ತಾಯೆ?

ಸೀತೆ
ಆಲಿಸು, ಸೌಮಿತ್ರಿ, ಬಳ್ಳೊರಲುತಿದೆ! —
ನೋಡಲ್ಲಿ, ಕುಳ್ಳಿರ್ದ ಮಿಗಮೆದ್ದು ಮಾರ್ಗಮಂ ದಾಂಟುತಿದೆ! —
ಅಯ್ಯೋ, ಎನ್ನ ಬಲದ ಕಣ್ಣದಿರುತಿದೆ!
ದುರ್ನಿಮಿತ್ತಂಗಳಂ ನೋಡಿ ಎನ್ನರ್ದೆ ಬೆದರುತಿದೆ!

ಲಕ್ಷ್ಮಣ
(ವ್ಯಸನದಿಂದ)
ಬೆದರದಿರಂ, ತಾಯೆ.
ಶ್ರೀರಾಮನೆಮ್ಮೆಲ್ಲರಂ ಕಾಪಾಡುವಂ.

ಸೀತೆ
ದಿಟಮದು, ಮೈದುನಾ.
ಎನಗೆನ್ನ ಕೇಡೊಳಳುಕಿನಿತಿಲ್ಲಂ. —
ಶ್ರೀರಾಮಚಂದ್ರಂ ಸೊಗದಿನಿರ್ದಪನೇ?

ಲಕ್ಷ್ಮಣ
ತಾಯೆ, ಸೈರಣೆ!
ಸರ್ವರಕ್ಷಕಂಗೆ ಕೇಡೆಂದರೇನು?
ರಘುಕುಲೇಶಂ ಅರಮನೆಯೊಳಾನಂದದಿಂದಿರ್ಪಂ.

ಸೀತೆ
ಶ್ರೀರಾಮಚಂದ್ರನಾಯುಷ್ಯಂ ಸುದೀರ್ಘಮಕ್ಕೆ! —
ಅಯ್ಯೋಧ್ಯೆಯ ಜನನಿಕರಕೇನಾದರುಂ
ಅಮಂಗಳಂ ಪ್ರಾಪ್ತಮಾದುದೇ?

ಲಕ್ಷ್ಮಣ
ಅದೆತ್ತಣ ಸಂದೇಹಂ?
ರಾಮನಾಳ್ವಿಕೆಯೊಳಾರ್ಗುಂ ಕೇಡಿಲ್ಲಂ;
ಇಂತಿರೆ ಅಯೋಧ್ಯೆಗೆಲ್ಲಿಯ ಅಮಂಗಳಂ?

ಸೀತೆ
ಮೈದುನಾ, ಮತ್ತಾರಿಗೀ ಅಮಂಗಳ ಸೂಚನೆ?

ಲಕ್ಷ್ಮಣ
(ನಿಡುಸುಯ್ದು)
ಬಟ್ಟೆಗೆಟ್ಟು ನಿಮ್ಮನೀ ವಿಪಿನಕೊಡಗೊಂಡು
ಮಂದಿರ್ಪೆನಗೆ! (ತೆಲೆಬಾಗುವನು)

ಸೀತೆ
ಮರುಗದಿರು, ಕಂದಾ.
ಶ್ರೀರಾಮಂಗೆ ನಚ್ಚಿನ ಸಹೋದರಂ ನೀಂ;
ನಿನಗೆಲ್ಲಿಯ ಅಶುಭಂ? — (ಚಿಂತೆಯಿಂದ)
ನಿನಗಲ್ಲಮಿ ದುಶ್ಯಕುನಂ; ನಿನಗಲ್ಲಂ! — (ದುಃಖದಿಂದ)
ಎನಗೆ! ಹತಭಾಗೈಯಾದ ಎನಗೆ!
ಪತಿಪಾದಮಂ ತೊರೆದು ಬನಕೈತಂದೆನಗೆ!
ಅಯ್ಯೋ
ಪಾವನಕೆ ಪಾವನಂ, ಮಂಗಳಕೆ ಮಂಗಳಂ
ಅದವನ ಚರಿತ್ರನಾಮಂಗಳೋ
ಆ ರಾಘವನೆ ಜೀವೇಶನಾಗಿರಲ್ಕೆ
ಆತನಂಘ್ರಿಯನಗಲ್ದು ನಾಂ ಬಂದ ಬಳಿಕ
ಈ ವನದೊಳಿನ್ನು ಪುಣ್ಯಾಶ್ರಮಂ ಗೋಚರಿಪುದೇ?
ತಾವರೆಯನುಳಿದಾರಡಿಗೆ ಬೊಬ್ಬುಳಿಯ ಪೂವಿನೊಳ್
ಮಧುವುಂಟೆ? — ಪೇಳೈ, ಸೌಮಿತ್ರಿ. (ಮರುಗುತ್ತಾಳೆ)

ಲಕ್ಷ್ಮಣ
(ಸ್ವಗತ)
ಅಯ್ಯೋ ಇನ್ನೇನಂ ನೆಗಳ್ದಪೆಂ?
ಕಠೋರ ಸತ್ಯಮನೆಂತುಸಿರ್ದಪೆಂ?
ಎಂತೀ ಕೋಮಲೆಯಂ ಕೊಲೆಗೆಯ್ವೆಂ? —
ಹಾ ರಾಘವೇಂದ್ರಾ, ಜಗನ್ಮಾರ್ಗದರ್ಶಕಾ ಬಟ್ಟೆದೋರೈ!
ಸೀತೆಯಂ,
ಜಗನ್ಮಾತೆಯಂ,
ಸರ್ವಲೋಕಪುನೀತೆಯಂ
ನಾನೆಂತು ಕಾಡುಪಾಲ್ಗೆಯ್ವೆಂ?
ಆವ ಮೊಗದೊಳಯೋಧ್ಯೆಗೆ ಮರಳ್ದಪೆಂ?
ಅಯ್ಯೋ, ಜನಂಗಳೆಲ್ಲರುಂ ನನ್ನಡೆಗೆ ಕೈದೋರಿ,
“ನೋಡಿವನೆ ಸೀತೆಯನಡವಿಯೊಳ್ ಬಿಟ್ಟವಂ;
ತಾಯಂ ಕೊಲೆಗೈದವಂ;
ನಿಷ್ಕರುಣಿ!”
ಎಂದಾಡಿಕೊಂಬುದಂ ಕೇಳ್ದು
ಹರಣವನೆಂತು ಪೊರೆದಪೆಂ?

ಸೀತೆ
ಓ ಲಕ್ಷ್ಮಣಾ,
ನಾನಿನ್ನು ನಡೆಯಲಾರೆನೈ. (ತೋರುತ್ತಾ)
ನೋಡು, ನೋಡಯ್:
ಕಲ್ಲೆಡಹಿ ಮುಳ್ನಾಂತಿ ಕಾಲಿಂ ಬಸಿವ ನೆತ್ತರಂ! —
ಬಸಿರ ಬೇನೆಯಿಂ ಕಡುನೊಂದೆಂ!
ಅಯ್ಯೋ ಕೆಟ್ಟಂ!
ಮುಂತೇನಯ್ ತನಗೆ ಬಟ್ಟೆ?
ಮಾತಾಡಯ್!
ಏಕಿಂತು ಕೆಮ್ಮನಿರ್ದಪೈ?

ಲಕ್ಷ್ಮಣ
(ಬಿಕ್ಕಿಬಿಕ್ಕಿ)
ಮಾತೆ,
ಬನಕೆ ಪೋಪೆನೆಂದು ಕಾಂತನನೇತರ್ಕೆ ಬೇಡಿದೌ?
ಎನ್ನನೇತರ್ಕೆ ಇಂತಪ್ಪ ಘೋರಕೀಡುಮಾಡಿದೌ? —
ಹಾ ವಿಧಿ!
ರಾವಣನಿಂ ತಪ್ಪಿಸಿ ಲಕ್ಷ್ಮಣನಿಂ ಕೊಲಿಸಲೆಂದೇ
ರಾಮಾಯಣವನಾಗಿಸಿದಯ್?

ಸೀತೆ
ಮೈದುನಾ, ಏಕೆ ರೋದಿಪಯ್?
ಅಯೋಧ್ಯೆಗೆ ಮರಳುವಂ;
ಪಿಂತಿರುಗು;
ಬಂದ ಬಟ್ತೆಯೊಳೆ ಪೋಪಂ.

ಲಕ್ಷ್ಮಣ
ಪಿಂತಿರುಗುದೆಂತು, ಜನನೀ?

ಸೀತೆ
ಏಕೈ? ಬಂದ ದಾರಿಯಂ ಮರೆತೆಯೇಂ?

ಲಕ್ಷಣ
ತಾಯೆ, ನಾನುರು ಚಂಡಾಲಂ!

ಸೀತೆ
ಚಿಃ ತೆಗೆ, ಕಂದಾ! ನಿನ್ನನ್ನರ್ಗೆ ತಗದಾತ್ಮನಿಂದೆ!

ಲಕ್ಷ್ಮಣ
ಅಯ್ಯೋ ನೀನರಿಯೈ, ತಾಯೆ.
ನಾನುರು ಚಂಡಾಲಂ!
ಮಾಹಾಪಾಪಿ!
ಮಾತೃಘಾತಕಂ!