ಸೀತೆ
ಬೇಡ, ಬೇಡ, ಈ ಅಮಂಗಳದ ನುಡಿ!
ರಾಮ, ರಾಮ,!
ಸುಮಿತ್ರಾದೇವಿ ಚಿರಾಯುವೆಕ್ಕೆ!

ಲಕ್ಷ್ಮಣ
ಮಾತೆ ಅಯೋಧ್ಯೆಯೊಳು ಸುಖದಿನಿರ್ಕೆ!

ಸೀತೆ
ಮತ್ತೇನೈ ನೀನಾಡುವುದು?

ಲಕ್ಷ್ಮಣ
ದೇವೀ, ನಾನಿಲ್ಲಿ ಕೊಲೆಯಾದಪೆಂ
ನೀಂ ಪಿಂತಿರುಗಿಂ!

ಸೀತೆ
ಇದೇನಯ್, ಸೌಮಿತ್ರಿ?
ನಿನಗೇಂ ಪುರ್ಚೆ?

ಲಕ್ಷ್ಮಣ
ಅಹುದಹುದು, ಪುರ್ಚು ಪಿಡಿದಿರ್ಪುದು!
ನಿಮ್ಮೊಡನೆ ನಾಂ ಮರಳಲಾರೆಂ!

ಸೀತೆ
ಮತ್ತೆತ್ತಣ್ಗೆ ಪೋದಪೈ?

ಲಕ್ಷ್ಮಣ
ನಾನೀ ಎಡೆಯೊಳೆ ಮಡಿವೆಂ ಶಸ್ತ್ರಮಂ ಪಾಯ್ದು!

ಸೀತೆ
ತೆಗೆತೆಗೆ! ಎನ್ನಾಣೆ! ಮರಳು, ಪಿಂತಿರುಗು!

ಲಕ್ಷ್ಮಣ
ನಾವಿರ್ವುಂ ಅಯೋಧ್ಯೆಗೆ ಮರಳಲಾಗದೈ!

ಸೀತೆ
ಅದೇಕೈ? — ಮರೆತೋಡೇಂ? —
ಮರಳಿ ಬಟ್ಟೆಯನರಸಿ ಪೋಗುವಂ,
ಬಾ, ಕಂದಾ!

ಲಕ್ಷ್ಮಣ
ಅಯ್ಯೋ, ಈ ಪಾಪಿಯಂ ‘ಕಂದಾ’ ಎನ್ನದಿರಿ!

ಸೀತೆ
ಕಂದಾ, ಪುರ್ಚಂ ಪಿಡಿಸದಿರೆನಗುಂ!

ಲಕ್ಷ್ಮಣ
(ಗದ್ಗದದಿಂದ)
ನಾನಾಗಲಿ ನೀಮಾಗಲಿ
ಇರ್ವರೊಲೋರ್ವರೆಯೆ
ರಾಜಧಾನಿಯಂ ಮರಳಿ ಪುಗವೇಳ್ಕುಂ!

ಸೀತೆ
ಅದೇನೈ?

ಲಕ್ಷ್ಮಣ
ರಾಘವೇಶ್ವರನ ಕಟ್ಟಾಣೆ!

ಸೀತೆ
ಕಂದಾ, ಬೆದರದಿರು.
ನಾನೊರೆದಪೆನೆಲ್ಲಮಂ ರಘರಾಮಂಗೆ: —
ದಟ್ಟಡವಿಯೊಳು ಬಟ್ಟೆದಪ್ಪಿತು;
ಮರಳ್ದೆವದರಿಂ ಎಂದು. —
ಆರಾದೊಡಂ ಗೈವರೇನಂ ಬಟ್ಟೆದಪ್ಪಿದಮೇಲೆ?
ನಿನ್ನದೇಂ ತಪ್ಪು?
ಶ್ರೀರಾಮನಾಗಿರ್ದೊಡಂ ಮರಳ್ದಿರುತಿರ್ದುನೇ?

ಲಕ್ಷ್ಮಣ
(ಸುಯ್ದು)
ಅಯ್ಯೋ ನಾನದನರಿಯೆಂ!
ನಾನಂತುಂ ಮರಳಲಾರೆಂ, ನಿಮ್ಮೊಡನೆ!

ಸೀತೆ
ಮತ್ತೇನಂ ಮಾಡುವೈ? (ನಸುಸಿಡುಕಿ)
ಎನ್ನನಿಲ್ಲಿಯೆ ಬಿಟ್ಟು ನೀನೊರ್ವನೆ ಪೋಗು!

ಲಕ್ಷ್ಮಣ
ಹಾ ತಾಯೆ, ಶ್ರೀರಾಮನಂತಾಡದಿರಿ!

ಸೀತೆ
ಏನಾಡಿದಂ ರಾಮಚಂದ್ರಂ?
ಪೇಳಯ್ !
ಎನ್ನೊಡನೇತರ್ಕಯ್ ಮುಚ್ಚುಮರೆ?

ಲಕ್ಷ್ಮಣ
ಅಯ್ಯೋ, ನಾನೆಂತದನೊರೆವೆಂ,
ಆ ಕಠೋರವಾಕ್ಯಮಂ? (ಮರುಗುತ್ತಾನೆ)

ಸೀತೆ
ಪೇಳಯ್, ಸೌಮಿತ್ರಿ; ಎನ್ನಾಣೆ, ಪೇಳಯ್!

ಲಕ್ಷ್ಮಣ
(ತಡೆತಡೆದು ಬಿಕ್ಕಿಬಿಕ್ಕಿ)
ದೇವೀ,
ನಿನಗಿನ್ನೆಗಂ ಪೇಳ್ದುದಿಲ್ಲಂ! —
ಅಪವಾದಮಾವರಿಸೆ ನಿನ್ನನೊಲ್ಲದೆ,
ರಘುಕುಲೋದ್ವಹಂ ಸೀವರಿಸಿ ಬಿಟ್ಟು
ಕಾಂತಾರಕ್ಕೆ ಕಳುಹಿ ಬಾ ಎಂದೆನಗೆ —
ನೇಮಿಸಿದೊಡೆ —
ಆ ವಿಭುವಿನಾಜ್ಞೆಯಂ ಮೀರಲರಿಯದೆ
ನಿಮ್ಮನೀ ವಿಪಿನಕೊಡಗೊಂಡು ಬಂದೆಂ! —
(ಸೀತೆ ಕಳವಳಗೊಂಡು ನೋಡುತಿರೆ)
ಇನ್ನೊಯ್ಯೊಯ್ಯನಾವಲ್ಲಿಗಾದೊಡಂ ಪೋಗಿಂ! —

ಸೀತೆ
ಅಯ್ಯೋ ಕೆಟ್ಟೆಂ! (ಹಮ್ಮೈಸಿ ಬಿದ್ದು ಮೂರ್ಛೆ ಹೋಗುತ್ತಾಳೆ)

ಲಕ್ಷ್ಮಣ
ಹಾ ರಾಮ! ಹಾ ರಾಮ!
ಮಾತೆಯಂ ಪೊರೆಯೈ!
ಕರುಣಾಕರ, ರಕ್ಷಿಸೈ! (ಸೆರಗಿನಿಂದ ಗಾಳಿ ಬೀಸುತ್ತಾನೆ)
ಅಯ್ಯೋ
ರಾಮನ ಸೇವೆ ಸಂದುದೇ ಎನಗಿಂದು?
ಇಂದಿಗೆ ಅಯೋಧ್ಯೆಯ ಋಣತೀರಿತೇ ಎನಗೆ? —
ಓ ಜಗನ್ಮಾತೆ,
ಹೇ ತ್ರಿಲೋಕಪೂಜಿತೆ,
ಕೊಲೆಗಾರನಂ ಮನ್ನಿಸೌ!
ಕಣ್ ಬಿಟ್ಟು ನೋಡೌ! — (ಅತಿಶಯ ಶೋಕದಿಂದ)
ಇಲ್ಲದಿರೆ, ಇಲ್ಲದಿರೆ,
ಆನೀಯೆಡೆಯೊಳೆ ಬಾಳ್ಗೊಲೆಯಾದಪೆಂ!
ನಿಶ್ಚಯಂ!

ಸೀತೆ
(ಮೆಲ್ಲನೆ ಕಣ್ದೆರೆದು ದೈನ್ಯದಿಂದ)
ಹಾ ಕಂದಾ! ಲಕ್ಷ್ಮಾಣಾ! ಅನಾಥೆಯಾದೆನೈ! —
ರಘುರಾಮನಂ ಪಿಸುಣ್ಗೆ ಕಿವಿಗೊಟ್ಟು
ಕವಡಿಯದಬಲೆಯಂ ಬಲಿದೆತ್ತನೇ?
ಹಾ ಕರುಣಾನಿಧಿ,
ಊರೊಳಗೆ ಮಾರಿಯೆಂದು
ಮನೆವೋರಿಯಂ ಮಾರುಗುಡುವರೆ? —
ಆನಿಲ್ಲದೆಂತು ಆರೆಮೈಯೊಳಿರುವೈ?
ಎಂತು ಪಟ್ಟವಣೆಯನೇರುವೈ? —
ಹಾ ರಾಘವಾ, ನಿನ್ನಡಿಗಳಾಣೆ!
ಎನ್ನೊಳು ಕೊರತೆಯಿರೆ ಮನ್ನಿಸಿ ಕಾವುದೈ;
ಕೈಮುಗಿದು ಬೇಡವೆಂ. —
ಸೌಮಿತ್ರಿ,
ಕೊಯ್ಯಲೊಲ್ಲದೆ ಕೊರಲಂ ಇಂತುಟೆನ್ನಂ ಬಿಡಲು
ಮಾಡಿದಪಾರಧಮುಂಟೇ?
ಕಯ್ಯಾರೆ ಖಡ್ಗಮಂ ಕೊಟ್ಟು
ತನ್ನರಸಿಯಂ ಹೊಯ್ ಎಂದು ಪೇಳದೆ
ಅಡವಿಗೆ ಕಳುಹಿ ಬಾ ಎಂದನೇ? —
ಅಯ್ಯಯ್ಯೊ, ರಾಘವಂ ಕಾರುಣ್ಯನಿಧಿಯಲ್ತೆ!

ಲಕ್ಷ್ಮಣ
ತಾಯೆ, ನಾಮೆಲ್ಲರಾಡಿದ ಮಾತಂ ಕಡೆಗೊತ್ತಿ
ತನ್ನ ಪಿಡಿದ ಚಲಮನೆ ಸಾಧಿಸಿ
ಎನ್ನನೀ ಕೆಲಸಕ್ಕೆ ನೂಂಕಿದಂ.

ಸೀತೆ
ಅಯ್ಯೋ
ಬಿಟ್ಟನೇ ರಘುಶ್ರೇಷ್ಠನೆನ್ನಂ?
ತಾ ಮುಟ್ಟನೇ?
ನೆಗಳ್ದ ಬಾಳ್ಕೆಗೆ ಸಂಚಕಾರಮಂ ಕೊಟ್ಟನೇ?
ಓ ಸುಮಿತ್ರಾತನುಜ,
ಕಟ್ಟರಣ್ಯದೊಳ್ ಕಳುಹಿ ಬಾ ಎಂದು
ಕೊಟ್ಟನೇ ನಿನಗೆ ನಿರೂಪಮಂ?
ಅಯ್ಯೋ, ನನ್ನ ಕಣ್ಬಟ್ಟೆಗೆಟ್ಟನೇ?
ಇನಿಯನಂ ಅಗಲ್ದು
ಅಡವಿಯೊಳೆಂತು ಪಿಶಾಚದವೊಲಿಹೆನೊ?
ಕೆಟ್ಟೆನೈ! — ಅಯ್ಯೋ ಕೆಟ್ಟೆನೈ!

ಲಕ್ಷ್ಮಣ
ತಾಯೇ……

ಸೀತೆ
ಹಾ ಪ್ರಾಣನಾಥ,
ಅಂದು
ಕೌಶಿಕಮುನಿಪನೊದನೆ ಮಿಥಿಳಾಪುರಕೆ ಬಂದು
ಇದಕೆಂದೆ ಹರದನುವಂ ಮುರಿದೆಯಾ?
ಇದಕೆಂದೆ ಎನ್ನಂ ಮದುವೆಯಾದೆಯಾ? —
ನಾನಗಲ್ದೊಡೆ ನವೆಯುತಿರ್ದೆ. —
ಅಯ್ಯೊ ಇದಕಾಗಿಯೇ ಕಪಿವೃಂದಮಂ ನೆರಪಿ
ಕಡಲಂ ಕಟ್ಟಿ ದೈತ್ಯರಂ ಕೊಂದೆಯಾ?
ಅಗ್ನಿಮುಖದೊಳ್ ಪರೀಕ್ಷಿಸಿದೆನ್ನೊಳ್
ಅಪರಾಧಮಂ  ಕಾಣಿಸಿದೆಯಾ?

ಲಕ್ಷ್ಮಣ
ತಾಯೆ, ಸೈರಿಸು, ಶ್ರೀರಾಮಂ ಕಾವಂ.

ಸೀತೆ
ಕಾವಂ! ಕಾವಂ!
ಓ ಲಕ್ಷ್ಮಣಾ, ನೀನಂದು
ಕಲ್ಮುಳ್ಳಿಡಿದ ಕಾಡೊಳೆನ್ನನುಪಚರಿಸಿದೆ;
ಪಲ್ಮಸೆದು ಗರ್ಜಿಪ ವಿರಾಧನಂ ಮರ್ದಿಸಿದೆ;
ಬಲ್ಮೆಯಿಂ ನಾಂ ಕಳುಹಿದೊಡೆ ಜನಸ್ಥಾನದಿಂ
ಪೋದೆ ರಾಘವನ ಬಳಿಗೆ.
ಆ ನಿನ್ನ ನಲ್ಮೆಯಂ ಮರೆದಪೆನೆ, ಸೌಮಿತ್ರಿ? —
ನೀನೆಲ್ಲರೊಲ್ ಮೈದುನನೆ ಎನಗೆ?
ನಿನಗೆ
ಕಾನನದೊಳೆನ್ನಂ ನಿಲಿಸೆ ಮನಂ ಬಂದುದೇ, ತಂದೇ?

ಲಕ್ಷ್ಮಣ
ಜನನೀ, ಮುಂದೆ ನಾನೇನಂ ಗೈಯಲಿ?
ನೀಮೆ ಬೆಸಸಿಂ.
ನಿಮ್ಮಂ ಬಿಟ್ಟು ಪೋಗಲಾರೆಂ;
ಪೋಗದೀಯವಸ್ಥೆಯೊಳಿರ್ದೊಡೆ
ಅಣ್ಣನೇಗೈದಪನೊ? (ರೋದಿಸುತ್ತಾನೆ)

ಸೀತೆ
ತಂದೆ, ಲಕ್ಷ್ಮಣಾ,
ನಿನ್ನೊಳಾಡಿದೊಡೇನಹುದು?
ನೀನಣ್ದು ಜನಸ್ಥಾನದಿಂ ಪೋಗಿ
ಎನ್ನಂ ರಕ್ಕಸನಿಗಿತ್ತಂತೆ
ಇಂದುಂ ಕಾಡಿಗೆನ್ನಂ ಕೊಟ್ಟು ಪೋಗು. —
ಅಯ್ಯೋ, ಕೊಂದು ಕೊಂಬೆನೇ?
ಈ ಬೆಂದೊಡಲೊಳಿದೆ ಬಸಿರ ದಂದುಗಂ!
ಕಾಡಿನೊಳ್ ಬಂದುದಂ ಕಾಣ್ಬೆನಾಂ:
ಇದೋ ಕೌಸಲೆಯಡಿಗೆ ವಂದಿಪೆಂ.
ಅಪರಾಧಮೊಂದುಮಿಲ್ಲದೆ
ತನ್ನ ಕಂದನೆನ್ನಂ ತೊರೆದುದಂ ದೇವಿಗೊರೆ.

ಲಕ್ಷ್ಮಣ
ಓ ಬನವೇ,
ಎನ್ನಂ ನುಂಗಿಕೊಳಲಾರೆಯೇಂ?
ಓ ಬಾಂದೊರೆಯೇ,
ನೀನೆನ್ನಂ ಮುಳುಗಿಸಲಾರೆಯೇಂ?
ಈ ಪಾಪಿಯನಾರೊಳಕೊಳ್ವರ್ ?
ಓ ಲಕ್ಷ್ಮಣಾ.
ನಿನಗೆ ನರಕದೊಳುಂ ಎಡೆಯಿಲ್ಲ! —
ಮಾಳ್ಕೆಯಿನ್ನಾವುದು?
ಇಬ್ಬಗಿಯಾಗೀ ಪಾಳೊಡಲಂ ಸೀಳ್ಕೆಡಹಬೇಡವೆ?
ಅಯ್ಯೋ, ಸುಡಲಿ ಈ ನಿಷ್ಠುರದ ಬಾಳ್ಕೆಯಂ!

ಸೀತೆ
ಏಕೆ ನಿಂದಿಹೆ? ಪೋಗು, ಸೌಮಿತ್ರಿ.
ಕೋಪಿಸನೆ ಶ್ರೀರಾಮಚಂದ್ರಂ ನೀನಿಲ್ಲಿ ತಳವಿದಡೆ?
ಏಕೆನ್ನಂ ನೋಡುತಿಹೆ?
ನೆರವುಂಟು ಎನಗೀ ಕಾಡೊಳುಗ್ರಜಂತುಗಳಲ್ಲಿ!
ಪಾಪ,
ಆ ರಘನಾಥನೇಕಾಕಿಯಾಗಿರ್ಪನಲ್ತೆ?
ಅಯ್ಯೊ ಲೋಕದರಸೇಗೈದೊಡಂ
ತನ್ನ ಕಿಂಕರರ್ ಬೇಕುಬೇಡೆಂದು ಪೇಳರೆ?
ಭರತ ಶತ್ರುಘ್ನರೀ ಕೆಲಸಕೊಪ್ಪಿದರೆ?
ಹನುಮಾಂತನಿರ್ದಪನೆ?

ಲಕ್ಷ್ಮಣ
ಭರತ ಶತ್ರುಘ್ನರೊಪ್ಪಿಗೆಯಿಲ್ಲ.
ಹನುಮಂತ ಜಾಂಬವ ಸುಗ್ರೀವರಾರುಂ
ಇದನರಿಯರೌ?

ಸೀತೆ
ಬಿಡು, ಬಿಡು, ಲಕ್ಷ್ಮಣಾ,
ಆರಿರ್ದೊಡೇಗೈವರ್?
ಇದು ತನ್ನ ಮರುಳಾಟಂ! —
ಆ ರಾವಣನ ತಮ್ಮನೈಸಲೆ ವಿಭೀಷಣಂ?
ಆತಂ ಭೀರುಗಳನರಿದಪನೆ?
ಸೋದರಂಗುರೆ ಮುಳಿದ ಸುಗ್ರೀವನೆಂಬವಂಗೆ
ಕಾರುಣ್ಯಮಿರ್ದಪುದೆ?
ಮತ್ತಳಿದ ಮಂತ್ರಿಗಳದಾರುಂಟು
ದೇವಂಗೆ ಪೇಳುವರ್?
ನೀನೆ
ಒಪ್ಪಿ ಘೋರಾಟವಿಗೆ ಕೊಂಡುಬಂದೆ!
ಇನ್ನೊರಲ್ದೊಡೇನಹುದು?

ಲಕ್ಷ್ಮಣ
(ಕಿವಿಮುಚ್ಚಿ ಶೋಕಿಸಿ)
ಮಾತ್ರೆ,
ಓ ಎನ್ನಮಾತೆ,
ಓ ಜಗನ್ಮಾತೆ,
ನಿಷ್ಕರುಣಿಯಂ
ಕುಲಘಾತುಕನಂ
ದುಷ್ಟನಂ
ಚಂಡಾನನಂ ಉದ್ಧರಿಸೌ! (ದೊಪ್ಪನೆ ಕೆಡೆದು ನಮಿಸುತ್ತಾನೆ)

ಸೀತೆ
(ಸಂತೈಸಿ ಎತ್ತಿ)
ಏಳೇಳು, ಕಂದಾ!
ಕೈಹಿಡಿದ ನಲ್ಲನೇ ಪೇಸಿಬಿಸುಟ್ಟರೆ
ಇನ್ನಾರೇನು ಮಾಡುವರು?
ನಿನ್ನೊಳೇನಪರಾಧಂ? —
ಕರುಣಾಳು ರಾಘವನೊಳುಂ ತಪ್ಪಿಲ್ಲ;
ಕಡುಪಾತಕಂಗೈದು ಪೆಣ್ಣಾಗಿ ಸಂಭವಿಸಿದೊಡಲಂ,
ಈ ಪಾಳೊಡಲಂ, ಪೊರೆವುದೆನ್ನಪರಾಧಂ!
ನೀನಿರಲ್ ಬೇಡ, ನಡೆ, ಪೋಗು;
ನಿಲ್ಲದಿರ್!
ನಿನ್ನಣ್ಣಂ ಕೇಳ್ದೊಡೆ
“ನಿನ್ನಾಣತಿಗಬಲೆ ಮರುಗಿದಳಿಲ್ಲ;
ಮಾರ್ನುಡಿದಳಿಲ್ಲ;
ಮುನಿಸಾಂತಳಿಲ್ಲ;
ಬೆರ್ಚಿದಳಿಲ್ಲ!
ನೀನೆ ಗತಿಯೆಂದು ನಿನ್ನಡಿಯಂ ನೆನೆಯುತೆ
ಕಡೆವೊಳ್ತಂ ಪಾರುತಿರ್ಪಳ್”
ಎಂದು ಬಿನ್ನವಿಸಯ್!
ಅತ್ತೆವಿರ್ಗಿಂತೊರೆ:
ನಿಮ್ಮಾಶೀರ್ವಾದಮಂ ಪಡೆಯದೆ ಬಂದುದರಿಂ
ಎನಗೀ ಗತಿಯಾದುದು ಎಂದು.
ಊರ್ಮಿಳೆಗೆ ಪೇಳಿಂತು:
ನಿಮ್ಮೊಳಾಲೋಚಿಸದೆ ಬಂದ ತಪ್ಪಂ ಮನ್ನಿಸಿ,
ಎನ್ನನಾವಗಂ ಮರೆಯಲಾಗದು ಎಂದು! —
ಎನ್ನುಡುಗೆ ತೊಡುಗೆಯಂ ದಾಸಿಯರ್ಗೆ ಪರ್ಚುಗುಡಯ್!
ನಿನಗೆನ್ನೊಳ್ ದಯೆಯಿರ್ಫೊಡೆ
ಲೋಗರನುವಿಂಗೊಂದು ದಮ್ಮಾಣಿಯನೇರ್ಪಡಿಸಯ್!
ಎನಗೆ ಬಳುವಳಿ ಬಂದಾವಿನ
ತಬ್ಬಲಿ ಎಳಗರುವಂ
ಬಡವಾಗದಂತೆ ನೋಡಿಕೊಳ್ವದೆಂದು
ನಿನ್ನನಿಯಳ್ಗೆ ಪೇಳಯ್!
ಊರ್ಮಿಳೆಗೆ ಕಿರುಗೂಸೊಂದು ಪುಟ್ಟಿದಂದು
ಅದಕ್ಕೆನ್ನಾಶಿರ್ವಾದಮಿರಲಿ! (ಲಕ್ಷ್ಮಣ ನೋಡುತ್ತಾನೆ)
ನೀನಿನ್ನು ಹೊರಡು;
ನಿನಗೆ ಮಾರ್ಗದೊಳಾಗಲಡಿಗಡಿಗೆ ಸುಖಂ!
ಪಯಣಂ ಸೊಗಮಕ್ಕೆ!
ಶ್ರೀರಾಮನಡಿದಾವರೆಯೊಲ್ಮೆಯೊಂದು ವಜ್ರಪಂಜರಮಕ್ಕೆ!

ಲಕ್ಷ್ಮಣ
(ಕೈಮುಗಿದುಕೊಂಡು)
ಎಲೆ ವನಸ್ಥಳಗಳಿರ, ವೃಕ್ಷಂಗಳಿರ, ಮೃಗಂಗಳಿರಾ,
ಕ್ರಿಮಿಕೀಟಂಗಳಿರ, ಲತೆಗಳಿರಾ,
ಪಂಚಭೂತಂಗಳಿರ, ದೆಸೆಗಳಿರಾ ಕಾವುದು!
ಎಲೆ ಧರ್ಮದೇವತೆಯೆ,
ಜಗಜ್ಜನನಿ ಜಾಹ್ನವಿಯೆ,
ಎನ್ನ ಮಾತೆಯಂ ಜಾನಕಿಯಂ ಸಲಹಿಕೊಳ್ವುದು!
ಎಲೆ ತಾಯೆ, ಭೂದೇವಿ,
ನಿನ ಮಗಳಿಹಳು, ಸಂರಕ್ಷಿಸೌ!
(ಸೀತೆಯನ್ನು ಬಲವಂದು ತುಸುದೂರ ನಿಲ್ಲುತ್ತಾನೆ)

ಸೀತೆ
ಏಕೆ ನಿಂದಿಹೆ? ನಡೆ, ಸೌಮಿತ್ರಿ!

ಲಕ್ಷ್ಮಣ
ತಾಯೆ, ನಿನ್ನನೆಂತು
ಈ ಘೋರ ವಿಪಿನದೊಳುಳಿದು ಪೋಗಲಿ?
ಶ್ರೀರಾಮನಾಜ್ಞೆಯನೆಂತು ಪಾಲಿಸಲಿ?

ಸೀತೆ
ಮೈದುನಾ,
ರಾಘವನಾಜ್ಞೆಯಂ ಮೀರದಿರು, ನಡೆ.
ಸೀತೆಗಿಂ ರಾಮನಾಣತಿ ಮಿಗಿಲಲ್ತೆ?
ಶ್ರೀರಾಮನಾಜ್ಞೆಯಂ ಪಾಲಿಸಿಹೆ!
ಇಗೋ ಎನ್ನಾಜ್ಞೆಯಂ ಪಾಲಿಸು:
ನಡೆ; ನಿನಗೆನ್ನಾಶೀರ್ವಾದಂ!
(ಲಕ್ಷ್ಮಣನು ಕೈಮುಗಿದು ಮನಸ್ಸಿಲ್ಲದ ಮಸ್ಸಿನಿಂದ ಗೋಗುತ್ತಾನೆ)
ಅಯ್ಯೋ,
ಮಿಥಿಲೇಂದ್ರ ವಂಶದೊಳ್ ಜನಿಸಿ
ರಘಕುಲದ ದಶರಥನೃಪನ ಸೊಸೆಯಾಗಿ
ಎನಗೆ ಕಟ್ಟಡವಿಯೊಳ್ ವ್ಯಥಿಸುವಂತಾಯ್ತೆ? —
ಹಾ ವಿಧಿಯೆ!
ಹರಣಮಂ ತೊರೆದಪೆನೆ?
ಬರ್ಪುದು ಭ್ರೂಣಹತ್ಯಾದೋಷಂ! —
ಎನ್ನ ನೋವನಾರ್ಗೊರೆಯಲಿ? —
ಲೋಕದೈಶ್ವರ್ಯಂ ಸುಖಮೆಲ್ಲಂ ನಶ್ವರಂ!
ಶ್ರೀರಾಮನೊಲ್ಮೆಯೊಂದೆ ಶಾಶ್ವತಂ!
ಆತನ ನಾಮಸ್ಮರಣೆಯೆ ಎನಗೆ ದಿಕ್ಕು:
ಹೇ ಕಲ್ಯಾಣರೂಪ, ನೀನೆನ್ನಂ ಕೈಬಿಡದಿರೈ!
ದೆಸೆಗೆಟ್ಟೆನ್ನಂ ಮರೆಯದಿರೈ!
ಹೇ ಕರುಣಾಕರ, ಪೆಣ್ಣೆನ್ನೊಳ್ ಕರುಣೆಯಿರಲೈ!
ರಾಮಾ! ರಾಮಾ! ರಾಮಾ!…
(ವಾಲ್ಮೀಕಿ ಮಹರ್ಷಿ ಮೆಲ್ಲಮೆಲ್ಲನೆ ಹುಡುಕುನೋಟದಿಂದ ಆಲಿಸುತ್ತ ಪ್ರವೇಶಿಸುತ್ತಾನೆ)

ವಾಲ್ಮೀಕಿ
ಮಖಕೆ ಯೂಪವನರಸುತಿರೆ
ಆರ್ತನಾದಂ ಕೇಳ್ದುದಲ್ತೆ? —
ಬನಮೆಲ್ಲಂ ಮರುಗಿದುದು ಆ ನಾದಂಗೇಳ್ದು!
ಎನ್ನೆರ್ದೆಯೊಳುಂ ಚಿಮ್ಮಿದುದು
ಅವುದೋ ಪೋಸತೊಂದಲೌಕಿಕಾವೇಶಂ! —
ಆ ದನಿ
ಸ್ವರ್ಗಮರ್ತ್ಯಂಗಳಂ ವನಗಿರಿಗಳಂ
ಮೇಘಮಂಡಲಮುಮಂ ತುಂಬಿ
ಎನೆರ್ದೆಯೊಳ್ ಅನುರಣಿತಮಾದುದಲ್ತೆ? — (ಮೆಲ್ಲಗೆ)
ರಾಮಾ! ರಾಮಾ! ರಾಮಾ! ಎಂಬ ಸವಿದನಿ?
ಅದೆನ್ನ ನಚ್ಚಿನ ಮಹಾಮಂತ್ರಂ!
ವ್ಯಾಧನಾಗಿರ್ದೆನಗೆ ಮಹರ್ಷಿತ್ವಮಂ ಕೃಪೆಗೈದ
ಮಹಾಮಂತ್ರಂ! — (ಮೆಲ್ಲಗೆ)
ರಾಮಾ! ರಾಮಾ! ರಾಮಾ!
ಆ ಎರಡಕ್ಷರಂಗಳೆನಗೆ ಸಂಕ್ಷಿಪ್ತ ಬ್ರಹ್ಮಾಂಡಂ!
ಸೂರ್ಯೋದಯಂ, ಚಂದ್ರೋದಯಂ,
ಹಿಮವತ್ ಪರ್ವತಂ, ವೇದಕಾವ್ಯಂಗಳೆಲ್ಲಂ,
ಗಂಗೆ ಮೊದಲಪ್ಪ ಪುಣ್ಯತೀರ್ಥಂಗಳುಂ,
ಎನ್ನ ಜೀವನದ ಎಲ್ಲ ಅನುಭವಂಗಳುಂ,
ಆ ದಿವ್ಯನಾಮದ ರಸಮಣಿಯ ಹೃದ್ದೇಶದೊಳೆ
ಕಬ್ಬಿಗನ ಬಗೆಯ ಕಬ್ಬದವೋಲಡಗಿರ್ಕುಂ! —
ರಾಮಾ! ರಾಮಾ! ರಾಮಾ! ಎಂದೊರೆದುದಲ್ತೆ?
ಸ್ತ್ರೀವಾಣಿಯಂತಿರ್ದುದು! — (ಆಲೋಚಿಸಿ)
ಎನ್ನ ಶಿಷ್ಯರಾರುಂ ಈ ದಿಕ್ಕಿಗೈತರಲಿಲ್ಲ!

ಸೀತೆ
ರಾಮಾ! ರಾಮಾ!

ವಾಲ್ಮ್ಕೀಕಿ
(ಬೆಚ್ಚಿನೋಡಿ)
ಈ ಎಡೆಯೊಳಾರೋ ರೋದಿಸುತಿರ್ಪರ್.
ಆರೀಕೆ?
ಗ್ರೀಷ್ಮರುತುವಿಂ ನವೆದ ಕಾಂತಾರದಧಿದೇವಿಯಂತಿಹಳ್!
ಆರೋ ನಾಗರಿಕ ಸ್ತ್ರೀ! (ಹತ್ತಿರ ಬರುತ್ತ)
ಎಲೆ ತಾಯಿ, ನೀನಾವಳೌ?
ಕಂಡ ಕುರುಪಾಗಿರ್ಪುದು!
ಅಕಟಾ,
ಈ ಘೋರತರ ಗಹನಕೊರ್ವಳೆ ಎಂತು ಬಂದೆ?

ಸೀತೆ
(ಬೆಚ್ಚಿ)
ಎನ್ನಾಣೆ! ಶ್ರೀರಾಮನಾಣೆ!
ಪತ್ತೆ ಸಾರದಿರ್, ಸಾರದಿರ್!

ವಾಲ್ಮೀಕಿ
ತಾಯೆ, ಬೆದರಬೇಡ.
ನಾಂ ಅನ್ಯರಲ್ತು: ತವಸಿಗಳ್ !
ಈ ಎಡೆಯ ಆಶ್ರಮದೊಳೆ ಇರ್ಪೆವು.

ಸೀತೆ
ಅಯ್ಯೋ ಬಳಿಸಾರದಿರ್.
ರಾವಣನೀ ವೇಷದೊಳೆ ಮುನ್ನಮೊಯ್ದಂ!
ಶ್ರೀರಾಮನಾಣೆ! ದೂರಸರಿ!

ವಾಲ್ಮೀಕಿ
ದೇವಿ
ಶ್ರೀರಾಮಚಂದ್ರಮನಾಣೆ! ಎನ್ನ್ಆಣೆ!
ನಾಂ ಕವಡುದವಸಿಯಲ್ತು;
ವಾಲ್ಮೀಕಿ ನಾಂ!
ಭೂರಿ ಶೋಕಾರ್ತರಾಗಿರ್ದರಂ ಕಂಡು
ಸುಮ್ಮನೆ ಪೋಪನಲ್ಲ.

ಸೀತೆ
(ಹರ್ಷ ಶೋಕ ಲಜ್ಜೆಗಳಿಂದ)
ಓ ಕವೀಸ್ವರಾ,
ನಾಂ ಜನಕರಾಜಂಗೆ ಮಗಳ್;
ದಶರಥಮಹಾರಾಜಂಗೆ ಸೊಸೆ;
ಶ್ರೀರಾಮಚಂದ್ರಂಗೆ ಪಟ್ಟದರಸಿ!
ಲೋಕಾಪವಾದಕೆ ಬೆದರಿ ಅಪರಾಧಿಯಲ್ಲದೆನ್ನಂ
ತರಣಿಕುಲ ಸಂಭವಂ ಬಿಟ್ಟನೆಂದು
ಈ ವನದೊಳಿರಿಸಿ ಪೋದಂ ಸುಮಿತ್ರಾತ್ಮಜಂ! —
ಜೀವಮಂ ತೊರೆವೆನೆಂಬೆನೆ
ಬಸಿರೊಳಿಹುದಳ್ಕರೆಯ ಪೊರೆ! —
ತಂದೆ, ಎನಗೆ ಬಟ್ಟೆದೋರೈ! (ಕೈಮುಗಿಯುತ್ತಾಳೆ)

ವಾಲ್ಮೀಕಿ
ದೇವಿ, ಬಿಡು ಶೋಕಮಂ:
ಪುತ್ರಯುಗಮಂ ಪಡೆವೆ.
ಭಾವಿಸದಿರಿನ್ನು ಸಂದೇಹಮಂ.
ಜನಕಂಗೆ ನಾವನ್ಯರಲ್ಲ!
ನಮ್ಮಾಶ್ರಮಕೆ ಬಂದು ನೀಂ ಸುಖದೊಳಿರ್ದೊಡೆ
ಆವಾವ ಬಯಕೆಯುಂಟೆಲ್ಲಮಂ ಸಲಿಸಿ
ನಿನ್ನಂನಾನೋವಿಕೊಂಡರ್ಪೆಂ.
ಅಂಜದಿರು, ಬಾ ನನ್ನೊಡನೆ!

ಸೀತೆ
ತಂದೆ,
ನಿಮ್ಮಂ ನಾಂ ಮೊದಲೆ ಕೇಳಿಬಲ್ಲೆಂ.
ಅರಿಯದೆಯೆ ಸಂದೇಹಪಟ್ಟುದಂ ಮನ್ನಿಸೈ!
(ಬಿದ್ದು ನಮಸ್ಕರಿಸುತ್ತಾಳೆ)

ವಾಲ್ಮೀಕಿ
(ಮೆಲ್ಲಗೆ ಹಿಡಿದೆತ್ತುತ್ತ)
ತಾಯಿ, ಮೇಲೇಳು.
ನಿನಗೆಲ್ಲಂ ಒಳ್ಳಿತಹುದು.
ನೀನೆನ್ನ ಮಹಾಕಾವ್ಯದ ಸವಿಗಣ್ಣಲ್ತೆ!
ಕಥಾನಾಯಿಕೆಯಲ್ತೆ!
ವಾಲ್ಮೀಕಿಯ ಭಾಗ್ಯಮಲ್ತೆ!

(ಪರದೆ ಬೀಳುತ್ತದೆ)