ಶ್ರೀರಾಮಚಂದ್ರನ ಪಿಸುಣ್ಗೆ ಕಿವಿಗೊಟ್ಟ ಕಟ್ಟಾಣತಿಯಂತೆ ಸೌಮಿತ್ರಿ ಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ಅರಣ್ಯದಲ್ಲಿ ಬಿಟ್ಟು ಹೋಗುವ ಹೃದಯ ವಿದ್ರಾವಕವಾದ ಸನಿವೇಶವನ್ನು ಚಿತ್ರಿಸಲು ಈ ದೃಶ್ಯ ಪ್ರಯತ್ನಮಾಡಿದೆ. ಲಕ್ಷ್ಮೀಶನು ಪದ್ಯದಲ್ಲಿಯೂ ಮುದ್ದಣನು ಗದ್ಯದಲ್ಲಿಯೂ ಈ ಸನ್ನಿವೇಶವನ್ನೆ ಎಷ್ಟು ಸರಸಪ್ರೌಢವಾಗಿ ಬರೆದಿದ್ದಾರೆ ಎಂಬುದು ಪ್ರಸಿದ್ಧವಾಗಿದೆ. ಆ ಕವಿಗಳ ಸರಸ ಪ್ರೌಢಿಮೆ ಅನನುಕಣೀಯವಾದುದಾದರೂ ಅವರನ್ನು ಆಶ್ರಯಿಸಿ ಅನುಸರಿಸಿಯೆ ಈ ದೃಶ್ಯ ರಚಿತವಾಗಿದೆ. ಕೆಲವೆಡೆಗಳಲ್ಲಿ ಆ ಕವಿಗಳ ಮಾತು ಹಾಗೆಹಾಗೆಯೆ ಪಾತ್ರಗಳ ಬಾಯಿಂದ ಹೊರಹೊಮ್ಮುವುದನ್ನು ಓದುಗರು ಕಾಣಬಹುದು.

ಹಿಂದಿನ ಆ ಕವಿವರ್ಯರು ಶ್ರೀರಾಮನು ಸೀತೆಯನ್ನು ತೊರೆದುದಕ್ಕೆ ಹಲವು ಕಾರಣಗಳನ್ನು ಹೇಳಿರುವರು. ಲೋಕಾಪವಾದದ ನಿವಾರಣೆ, ರಘುಕುಲದ ಕೀರ್ತಿಸಂರಕ್ಷಣೆ, ಶ್ರೀರಾಮನ ಸ್ವಕೀರ್ತಿಪಾಲನೆ ಮೊದಲಾದವು. ಆ ಕಾರಣಗಳಲ್ಲಿ ಕೆಲವು ಕುಂಟು; ಮತ್ತೆ ಕೆಲವು ಕುರುಡು; ಎಂಬುದು ಈ ಕಾವ್ಯಗಳಲ್ಲಿಯೆ ರಾಘವಾನುಜರಾಡುವ ಪ್ರತಿವಾದದಿಂದ ತಿಳಿದುಬರುತ್ತದೆ. ಈ ‘ದೃಶ್ಯ’ ದಲ್ಲಿ ವಾಲ್ಮೀಕಿಯ ಭಾಗ್ಯವನ್ನು ಕಾರಣವಾಗಿ ಇಟ್ಟುಕೊಂಡಿದೆ. ಅದರಿಂದಲೆ ‘ದೃಶ್ಯ’ ಆ ಹೆಸರನ್ನೆ ಕೊಟ್ಟಿದೆ. ಈ ಕಾರಣವನ್ನು ಹೇಳಿದುದರಿಂದ ಸೀತಾಪರಿತ್ಯಾಗದ ಸಮಸ್ಯೆ ಪರಿಹಾರವಾಗದಿದ್ದರೂ ಅದು ಭಾವಪುರ್ಣವಾಗುವುದೆಂದು ಬರೆದವನ ಆಶಯ.

ಕುವೆಂಪು