ರಾಜನೀತಿಯನ್ನು ಕುರಿತು ಭಾರತೀಯ ಚರಿತ್ರೆ, ಸಂಸ್ಕೃತಿ ಮತ್ತು ನಾಗರಿಕತೆಯ ಮೂಲಕ ಅನೇಕ ಸಂಗತಿಗಳನ್ನು ಬೆಳೆಕಿಗೆ ತರಬೇಕಾಗುತ್ತದೆ. ಚಠಾರಿತ್ರಿಕ ವಿವಿಧ ಕಾಲಘಟ್ಟಗಳನ್ನು ಅಂದರೆ ರಾಜಪ್ರಭುತ್ವದಲ್ಲಿ ವಂಶಪಾರಂಪರ್ಯ ಆಳ್ವಿಕೆ, ರಕ್ತಸಂಬಂಧ, ಪುರುಷ ಪ್ರಾಬಲ್ಯ, ವೈದಿಕ ಸಂಸ್ಕೃತಿ, ಯಜ್ಞಯಾಗಾದಿಗಳನ್ನು ಮಾಡುವುದು, ವಿಗ್ರಹ ಆರಾಧನೆ, ತೀರ್ಥಯಾತ್ರೆ, ಅಶ್ವಮೇಧಯಾಗ, ವರ್ಣಾಶ್ರಮ ವ್ಯವಸ್ಥೆ, ಪುರೋಹಿತಶಾಹಿ. ಪಟ್ಟಾಭಿಷೇಕ, ಹುಟ್ಟು, ನಾಮಕರಣ, ಉಪನಯನ, ಮದುವೆ, ಶ್ರಾದ್ಧ, ವಲಸೆ, ಕೌಟುಂಬಿಕ ಸಂಗತಿಗಳನ್ನು ಈ ಹಿನ್ನೆಲೆಯಲ್ಲಿ ವಿವರಿಸಲಾಗಿದೆ.

ಭಾರತೀಯ ಚರಿತ್ರೆಯಲ್ಲಿ ರಾಜನೀತಿಯನ್ನು ಕುರಿತಂತೆ ಕೌಟಿಲ್ಯ, ಭಾಸ, ಶೂದ್ರಕ, ಕಾಳಿದಾಸ, ಬಾಣಭಟ್ಟ, ಭಾರವಿ, ದುರ್ವಿನೀತ, ಚಾವುಂಡರಾಯ, ತಿಳಿಯಬಹುದು. ರಾಜಪ್ರಭುತ್ವದಲ್ಲಿ ರಾಜನೇ ಕೇಂದ್ರ ಬಿಂದು. ನಿರಂಕುಶ ಪ್ರಭುತ್ವ, ಹೆಣ್ಣಿನ ಶೋಷಣೆ, ದತ್ತಿ, ದಾನ, ಯುದ್ಧ – ಒಪ್ಪಂದ, ಹಿಂಸೆ – ಅಹಿಂಸೆಗಳನ್ನು ನೋಡುತ್ತೇವೆ. ಆದರೆ ಮೌರ್ಯ, ಶಾತವಾಹನ, ಕದಂಬ, ಗಂಗ, ಚಾಲುಕ್ಯ ರಾಷ್ಟ್ರಕೂಟ, ಹೊಯ್ಸಳ ಇತರೆ ರಾಜಪ್ರಭುತ್ವಗಳಲ್ಲಿ ರಾಜನೀತಿಯ ಸ್ವರೂಪವೇ ಪ್ರಧಾನವಾಗಿತ್ತು. ವಿಜಯನಗರ ಪೂರ್ವದ ಕುಮ್ಮಟದುರ್ಗ ನಾಯಕ ಅರಸ ಕಂಪಿಲರಾಯನ ಮಗ ಕುಮಾರರಾಮನಿಗೆ ಹರಿಹರದೇವಿ ರಾಜನೀತಿಯನ್ನು ಬೋಧಿಸುತ್ತಾಳೆ. ವಿಜಯನಗರ ಕಾಲದಲ್ಲಿ ಕವಿ, ಪಂಡಿತರು, ದಾರ್ಶನಿಕರು, ತತ್ವಜ್ಞಾನಿ, ರಾಜತಾಂತ್ರಿಕರು, ರಾಜನಿಗೆ – ಯುವರಾಜನಿಗೆ ರಾಜನೀತಿಯ್ನು ತಿಳಿಸುತ್ತಿದ್ದರು. ವಿಜಯನಗರ ನಂತರ ಏಳಿಗೆಯಾದ ಪಾಳೆಯಗಾರರಿಗೆ ಬಹುತೇಕ ವೀರಶೈವ ಮಠ – ಮಠಾಧೀಶರು ನೀತಿ, ನಡವಳಿಕೆ, ಆಳ್ವಿಕೆ ಕುರಿತಂತೆ ಸಲಹೆ ನೀಡಿರುವುದು ಅವರಲ್ಲಿದ್ದ ಧರ್ಮ ಮತ್ತು ರಾಜಕಾರಣದ ಸಂಬಂಧವನ್ನು ಅವರ ಆಡಳಿತ ಒಲಗೊಂಡಿತ್ತು. ಚಿತ್ರದುರ್ಗದ ಮದಕರಿನಾಯಕ ವಂಶಸ್ಥರಿಗೆ ಮುರುಘಾಮಠ, ಜರಿಮಲೆನಾಯಕರಿಗೆ ಉಜ್ಜಿನಿ ಜಗದ್ಗುರುಗಳು, ಹರಪನಹಳ್ಳಿ ಪಾಳೆಯಗಾರರಿಗೆ ಕೊಟ್ಟೂರೇಶ್ವರನನ್ನು ತಮ್ಮ ರಾಜಧರ್ಮ ಹಾಗೂ ಕೇಂದ್ರಗಳಾಗಿ ಪರಿಗಣಿಸಿದ್ದರು. ಅರಮನೆ ಮತ್ತು ಗುರು ಮನೆಯನ್ನು ಧರ್ಮ ಮತ್ತು ರಾಜಕಾರಣದ ಹಿನ್ನೆಲೆಯಲ್ಲಿ ವಿಶ್ಲೇಷಿಸಬಹುದು. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಬ್ರಿಟಿಷರ ಆಳ್ವಿಕೆಯು ಒಡೆದು ಆಳುವ ನೀತಿ, ದಬ್ಬಾಳಿಕೆ, ಸರ್ವಾಧಿಕಾರ ಧೋರಣೆ ತಳೆದಿತ್ತು. ಬ್ರಿಟಿಷರ ರಾಜ್ಯಾಳ್ವಿಕೆಯ ಸ್ವರೂಪವೇ ಬೇರೆ ಆಗಿತ್ತು. ಸ್ಥಳೀಯ ಅಥವಾ ಯಾವುದೇ ಹಿಮದೂ ಅರಸರ ಆಲ್ವಿಕೆಯ ರಾಜನೀತಿಯೇ ಬೇರೆ ಆಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ನಮ್ಮದೇ ಆದ ಸಂವಿಧಾನವನ್ನು ಡಾ. ಬಿ. ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿಕೊಂಡೆವು. ಇಂದು ಸಂವಿಧಾನ(ಲಿಖಿತ)ದ ಮೂಲಕ ರಾಜನೀತಿಯನ್ನು ಪಾಲಿಸಲಾಗುತ್ತಿದೆ. ಪ್ರಧಾನಿ, ರಾಷಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿ, ಮಂತ್ರಿ, ಶಾಸಕ ಮೊದಲಾದವರು ಹೇಗೆ ಆಯ್ಕೆ – ಆಳ್ವಿಕೆ – ಆಡಳಿತ ನಡೆಸಬೇಕೆಂಬ ನೀತಿ, ನಿಯಮ, ಕಾನೂನು, ಕಾಯಿದೆ, ವಿಧಿಗಳನ್ನು ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟು, ಹೈಕೋರ್ಟುಗಳು ಸಹ ರಾಜ್ಯಾಂಗಕ್ಕೆ ಸಹಕಾರ, ಮಾರ್ಗದರ್ಶನ ನೀಡುತ್ತವೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಅಧಿಕಾರವೇ ಆದ್ಯತೆಯಲ್ಲಿ ಮೊದಲ ಸ್ಥಾನದಲ್ಲಿದೆ. ಶಾಸಕಾಂಗ, ನ್ಯಾಯಾಂಗ ಮತ್ತು ರಾಜ್ಯಾಂಗವು (ಕಾರ್ಯಾಂಗ) ಭಾರತೀಯ ಸಂವಿಧಾನದಲ್ಲಿ ಬಹುಮುಖ್ಯ ಪಾತ್ರವಹಿಸಿವೆ. ಇಂದು ನಾಲ್ಕನೇ ಅಂಗವಾಗಿ ಪತ್ರಿಕಾರಂಗವನ್ನು (ಸಮೂಹ ಮಾಧ್ಯಮ) ಗುರುತಿಸಿಕೊಂಡಿರುತ್ತಾರೆ.

ರಾಜಕಾರಣದಲ್ಲಿ ಭಾರತಕ್ಕೆ ಒಂದು ಹೊಸ ತಿರುವು ತಂದವರು ಜವಾಹರಲಾಲ್ ನೆಹರು. ಅವರು ಭಾರತದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಶತಪ್ರಯತ್ನ ಮಾಡಿ ಆಧುನಿಕತೆಗೆ ಕೊಂಡೊಯ್ದರು. ಅವರು ಅನುಸರಿಸಿದ ಪಂಚಶೀಲ ತತ್ವಗಳು, ಅಲಪ್ತನೀತಿ, ವಿದೇಶಾಂಗನೀತಿ, ತಟಸ್ತ ಮನೋಭಾವನೆ, ಯುದ್ಧವನ್ನು ವಿರೋಧಿಸುವುದು, ಅಭಿವೃದ್ಧಿಯನ್ನು ಕೈಗೊಳ್ಳುವುದು ಮೊದಲಾದ ಅಭಿವೃದ್ಧಿಯ ಸಂಗತಿಗಳ ಸೂತ್ರಗಳನ್ನು ಅನುಸರಿಸಿದರು.

ಸ್ವಾತಂತ್ರ್ಯ ಬಂದು ಅವರತ್ಮೂರು ವರ್ಷಗಳಾದರೂ ನಮ್ಮದೇ ಆದ ರಾಜನೀತಿಯನ್ನು ಅನುಸರಿಸುವಲ್ಲಿ ವಿಫಲವಾಗಿರುತ್ತೇವೆ. ಗ್ರಾಮಾಡಳಿತದಲ್ಲಿ ಅಧಿಕಾರ ಹೇಗೆ ಚಲಾವಣೆ ಆಗಬೇಕೆಂದು ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ, ಲೋಕಸಭಾ ಕ್ಷೇತ್ರಗಳಿವೆ. ಪ್ರತಿನಿಧಿ, ಶಾಸಕ, ಸಂಸದರೆಂದು ಈ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಕರೆಯುತ್ತಾರೆ.

ಆಧುನಿಕ ಸಂದರ್ಭದಲ್ಲಿ ರಾಜನೀತಿಯು ಆಡಳಿತದ ಸೂತ್ರವಾಗಿದೆ. ಆಡಳಿತ ವ್ಯವಸ್ಥೆಯ ಕಾನೂನು ರೂಪಿಸುವ ಆಯಾ ಕಾಲಘಟ್ಟದ ಒತ್ತಸ, ಒಲವು, ನಿಯಮ, ಸಂಪ್ರದಾಯ, ಸಂಸ್ಕೃತಿಯನ್ನು ಅವಲಂಭಿಸಿರುತ್ತದೆ. ಹಾಗಾಗಿ ಸಾಮಾಜಿಕ ಮೌಲ್ಯಗಲೂ (ನೈತಿಕ) ರಾಜನೀತಿಗೆ ತುಂಬ ಉಪಯುಕ್ತವಾಗಿರುತ್ತವೆ.

ಪ್ರಾಚೀನ ಕಾಲದಲ್ಲಿ ರಾಜನೀತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಕನ್ನಡ ನಿಘಂಟಿನ ಸಂಪುಟ ಏಳರಲ್ಲಿ ತಿಳಿಸಿರುವಂತೆ ರಾಜನೀತಿ – ಅರಸನಿಗೆ ಅಥವಾ ರಾಜ್ಯದ ಆಡಳಿತಕ್ಕೆ ಸಂಬಂಧಿಸಿದ ನೀತಿ; ಆಡಳಿತ ವ್ಯವಹಾರ; ರಾಜಕಾರಣ; ‘ಸಾಮವೆಂಬುದು ರಾಜನೀತಿಗೆ ತಾ ಮನೋಹರ ರೂಪು ಬದುಕುವ ಭೂಮಿ ಪಾಲರನಂತ ವಿಭವಕ ಬೀಜಮಂತ್ರವಿದು’ ಎಂಬ ಮಾತು ಕುಮಾರವ್ಯಾಸ ಭಾರತದಿಂದ ತಿಳಿಯುತ್ತದೆ.

ಕೇವಲ ಮನುಷ್ಯನಷ್ಟೆ ಅಲ್ಲದೆ ಪ್ರಾಣಿ – ಪಕ್ಷಿಗಳು ರಾಜನೀತಿಯನ್ನು ಅರಿತಿದ್ದವು. ಗಿಣಿಯು ಸಹ ರಾಜನೀತಿಯ ಕುರಿತು ಸಮಯೋಚಿತವಾಗಿ ಮಾತನಡಬಲ್ಲದು ಎಂದು ಅರ್ಥೈಸಲಾಗಿದೆ. ರಾಜ್ಯಾಡಳಿತದಲ್ಲಿ ಮೋಸ, ವಂಚನೆ, ದ್ರೋಹ ಕೆಲಸಗಳುಂಟು. ಅದಕ್ಕೆ ರಾಜದ್ರೋಹಿ… ಇನ್ನಿವನ ಜೀವದಿಂದಿರಲೀವ ಕರುಣಿ ಏತರ ರಾಜನೀತಿ? ಎಂದು ‘ಗೋಲ್ಗೋಥಾ’ದಲ್ಲಿ ವಿವರವಿದೆ. ಒಂದು ಬಗೆಯ ಲೆಕ್ಕದಲ್ಲಿ (೮ ವಿಧದ ಗಣಿತ) ರಾಜನೀತಿಯು ಒಂದು.

ರಾಜನೀತಿಯನ್ನು ತಿಳಿದವನಿಗೆ ರಾಜನೀತಿಜ್ಞ ಎನ್ನುತ್ತಾರೆ. ರಾಜ್ಯದ ಆಡಳಿತ ವ್ಯವಹಾರವನ್ನು ತಿಳಿದವರು, ಆಂಗ್ಲ ನೀತಿಜ್ಞರು ನಿರೂಪಿಸಿದ ವಿದ್ಯಾಭ್ಯಾಸ ವಿನ್ಯಾಸ ಇವೆರಡಕ್ಕೂ ಪುಷ್ಟಿಕೊಟ್ಟಿತು ಎಂದು ತಿಳಿದುಬರುತ್ತದೆ.

ಬಹುತೇಕ ನಮ್ಮ ದಿನಿತ್ಯದ ವ್ಯವಹಾರದಲ್ಲಿ ಈ ಪದದ ಬಳಕೆಯನ್ನು ಗಮನಿಸುತ್ತೇವೆ. ರಾಜನಿಷ್ಟೆ ರಾಜಭಾಷೆ, ರಾಜಭೋಗ, ರಾಜನ ಮನೆತನ, ರಾಜಮುಖ, ರಾಜಭವನ, ರಾಜಮನ್ನಣೆ, ರಾಜಮರ್ಯಾದೆ, ರಾಜಯೋಗ ಮೊದಲಾದ ಪದಗಳು ಕಂಡುಬರುತ್ತವೆ. ಒಂದು ವ್ಯವಸ್ಥೆಯಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವೆ ನ್ಯಾಯ, ನೀತಿ, ಧರ್ಮ, ಹಿಂಸೆಗಳು ನಡೆದಾಗ ಈ ಪರಿಕಲ್ಪನೆ ಪದದ ಉಪಯೋಗ ಎಷ್ಟೆಂಬುದು ಮನದಟ್ಟಾಗುತ್ತದೆ.

ಪ್ರಸ್ತುತ ಈ ಕಿರುಹೊತ್ತಿಗೆಯನ್ನು ಬರೆಯಲು ಸ್ಪೂರ್ತಿ ಮತ್ತು ಉತ್ಸಾಹ ಬಂದಿದ್ದು ಪೆರಿಯಾರ್ ಅವರ ವಿಚಾರಗಳಿಂದ. ಅವರ ಲೇಖನಗಳನ್ನು ಒಂದೆಡ ಸಂಗ್ರಹ ಮಾಡುವಾಗ ಮತ್ತು ನಾನು ಚರಿತ್ರೆಯಲ್ಲಿ ಸಂಗಂ ಸಾಹಿತ್ಯವನ್ನು ಓದುವಾಗ ಐನ್‌ತೀಣೈ (ಐದು ಪ್ರದೇಶಗಳು) ಕುರಿತಂತೆ ಕುತೂಹಲವಿತ್ತು. ೧೯೮೯ ಮತ್ತು ೨೦೦೪ರಲ್ಲಿ ತಮಿಳುನಾಡಿನಲ್ಲಿ ಪ್ರವಾಸ ಕೈಗೊಂಡಾಗ ಊಟಿ, ತಂಜಾವೂರು, ತಿರುಚಿ, ಮಧುರೆ, ಶ್ರೀರಂಗಂ, ರಾಮೇಶ್ವರಂ, ಕನ್ಯಾಕುಮಾರಿ, ಪಳನಿ ಮೊದಲಾದ ಯಾತ್ರಾ ಮತ್ತು ಧಾರ್ಮಿಕ ಸ್ಥಳಗಳನ್ನು ನೋಡಿದ ನಂತರ ಜೊತೆಗೆ ೨೦೦೯ರಲ್ಲಿ ಅಂತಾರಾಷ್ಟ್ರಿಯ ವಿಚಾರ ಸಂಕಿರಣ ಬೆಂಗಳೂರಿನಲ್ಲಿ ನಡೆದಾಗ ಖ್ಯಾತ ವಿದ್ಯಾಂಸರುಗಳೂ ಆಗಮಿಸಿದ್ದರು. ಅದರಲ್ಲಿ ನಾನು ವಾಲ್ಮೀಕಿಯ ರಾಜನೀತಿಯನ್ನು ಕುರಿತು ಪ್ರಬಂಧ ಮಂಡಿಸಿದ್ದೆನು. ಆನಂತರ ವಿವಿಧ ಚಾರಿತ್ರಿಕ ಕಾಲಘಟ್ಟಗಳಲ್ಲಿಯೂ ಸಹ ಈ ಬಗೆಯ ರಾಜನೀತಿ ಇರುವುದನ್ನು ಖಚಿತಪಡಿಸಿಕೊಂಡೆನು. ಈ ಹಿನ್ನೆಲೆಯಲ್ಲಿ ಪ್ರಾಚೀನ ಕಾಲದ ರಾಜನೀತಿ ಆಧುನಿಕ ಕಾಲದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೇಗೆ ಪೂರಕವಾಗಿರುತ್ತದೆ ಎಂಬುದನ್ನು ಇಂದೂ ಮನಗಾಣಬೇಕಿದೆ.

ಚಾರಿತ್ರಿಕವಾಗಿ ರಾಜನೀತಿಯನ್ನು ಅಧ್ಯಯನ ಮಾಡುವುದು ಸುಲಭದ ಕೆಲಸವಲ್ಲ. ಹಾಗಾಗಿ ವಾಲ್ಮೀಕಿ ಮತ್ತು ತಿರುವಳ್ಳುವರ್ ಅವರ ಕಾಲಘಟ್ಟದ ರಾಜನೀತಿಯನ್ನು ಇಲ್ಲಿ ಅಧ್ಯಯನ ಮಾಡಲಾಗಿದೆ. ಇದನ್ನು ಬೇರೆ ಬೇರೆ ಕಾಲಘಟ್ಟಗಳಿಗೂ ಹೋಲಿಸಿ ನೋಡಿದಾಗ ಹೋಲಿಕೆ ಮತ್ತು ವ್ಯತ್ಯಾಸಗಳು ಕಂಡುಬಂದಿರುತ್ತವೆ.

ಚಾರಿತ್ರಿಕವಾಗಿ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಎತ್ತಿಹಿಡಿದ ಇಬ್ಬರು ಮಹಾನ್ ವ್ಯಕ್ತಿಗಳ ಚಿಂತನೆಗಳನ್ನು ಪ್ರಸ್ತುತ ಸಮಾಜಕ್ಕೆ ಉಪಯುಕ್ತವಾಗಬಹುದೆಂಬ ಕಾರಣದಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿದೆ. ಚಾರಿತ್ರಿಕ ವಿಧಾನದ ಮೂಲಕ, ಪ್ರಕಟಿತ ಕೃತಿಗಳನ್ನು ಈ ಬಗ್ಗೆ ಅವಲೋಕಿಸಿಕ ಮತ್ತು ಕ್ಷೇತ್ರಕಾರ್ಯದಿಂದ ಮಾಹಿತಿ ಸಂಗ್ರಹಿಸಿ ಇಲ್ಲಿ ವಿಶ್ಲೇಷಿಸಲಾಗಿದೆ. ವಿಭಾಗದ ವೈಯಕ್ತಿಕ ಯೋಜನೆಯಾಗಿ ಕೈಗೊಂಡು ಅಧ್ಯಯನ ಮಾಡಲು ಅವಕಾಶ ಕಲ್ಪಿಸಿದ ಕುಲಪತಿ ಡಾ. ಎ. ಮುರಿಗೆಪ್ಪ ಅವರಿಗೆ, ಪ್ರಕಟಿಸಿದ ಪ್ರಸಾರಾಂಗಕ್ಕೆ, ವಿಭಾಗದ ಸದಸ್ಯರಿಗೆ, ಬೆಂಗಳೂರಿನ ವಾಲ್ಮೀಕಿ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಮಾನ್ಯ ಶ್ರೀ ಎಂ. ನರಸಿಂಹಯ್ಯ ಅವರಿಗೆ, ವಿದ್ವಾಂಸರಾದ ನಾಡೋಜ ಡಾ. ಕಮಲ ಹಂಪನಾ ಅವರಿಗೆ, ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಗ್ರಂಥಪಾಲಕರಾದ ಜೆ.ಆರ್. ರಾಮಮೂರ್ತಿ ಅವರಿಗೆ, ಪತ್ನಿ ಪೂರ್ಣಿಮಾ ಅವರಿಗೆ, ಅಕ್ಷರ ಜೋಡಣೆ ಮಾಡಿದ ಯಾಜಿ ಗ್ರಾಫಿಕ್ಸ್‌ನ ಶ್ರೀಮತಿ ಸವಿತಾ ಯಾಜಿ ಮತ್ತು ಗಣೇಶ್ ಯಾಜಿ ಅವರಿಗೆ, ಕರ್ನಾಟಕ – ತಮಿಳುನಾಡಿನ ಕೆಲವು ಪ್ರದೇಶಗಳಿಗೆ ಭೇಟಿ (೨೦೧೦) ನೀಡಿದಾಗ ಸಹಕರಿಸದ ಎಲ್ಲ ಮಹನೀಯರಿಗೆ ತುಂಬು ಹೃದಯದ ಕೃತಜ್ಞತೆಗಳು.

ಡಾ.ವಿರೂಪಾಕ್ಷಿ ಪೂಜಾರಹಳ್ಳಿ