‘ವಾಲ್ಮೀಕಿ’ ಭಾರತದ ಮತ್ತು ಪ್ರಪಂಚದ ಚರಿತ್ರೆಯಲ್ಲಿ ಎಂದೋ ಮಿನುಗಿದ ಧೃವತಾರೆ. ಆದಿಕವಿ, ಮಹರ್ಷಿ, ಮುನಿಪುಂಗವ, ತಪಸ್ವಿ ಎಂದೆಲ್ಲಾ ಖ್ಯಾತಿ ಪಡೆದಿರುವ ‘ವಾಲ್ಮೀಕಿ’ ಒಂದು ರೀತಿಯಲ್ಲಿ ಸರ್ವತೋಮುಖಿ: ಚಿಂತಕ, ಚರಿತ್ರೆಕಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ರಾಜನೀತಿಜ್ಞ, ತತ್ವಜ್ಞಾನಿ, ಶೋಷಿತರ ನೇತಾರ, ಕವಿಯಾಗಿ ಬಹು ವೈವಿಧ್ಯಮಯಾವಾಗಿ ಜನರ ಮನಸೂರೆಗೊಂಡಿದ್ಧಾನೆ. ಇಂಥ ಮಹಾನ್ ವ್ಯಕ್ತಿಯ ಹೆಸರು ಜಗತ್ತಿಗೆ ಪರಿಚಯವಾದದ್ದು ರಾಮಾಯಣ ಕಾವ್ಯದ ಮೂಲಕ. ಸಂಸ್ಕೃತದಲ್ಲಿ ರಾಮಾಯಣವು ಭಾರತದ ಆದಿಕಾವ್ಯ. ಜಗತ್ತಿನ ಮಹಾಕಾವ್ಯಗಳ ಸಾಲಿನಲ್ಲಿ ಇದಕ್ಕೆ ಪ್ರಮುಕ ಸ್ಥಾನ ಲಭಿಸಿದೆ. ವಾಲ್ಮೀಕಿಯ ಮುಖೇನ ರಾಮಾಯಣವನ್ನು ರಾಮಾಯಣದ ಮುಖೇನ ಭಾರತದ ಜನಜೀವನವನ್ನು ಅರ್ಥೈಸಬೇಕಾದ ಅನಿವಾರ್ಯತೆ ಇಂದಿನದಾಗಿದೆ. ವಾಲ್ಮೀಕಿ ಮೂಲತಃ ಬೇಟೆಗಾರರ ಬುಡಕಟ್ಟಿಗೆ ಸೇರಿದ ಬೇಡ ಸಮುದಾಯದನು. ವೈದಿಕ ಮತ್ತು ಪುರೋಹಿತಶಾಹಿಗಳು ವಾಲ್ಮೀಕಿಯ ಪ್ರತಿಭೆ ಕಂಡು ಬ್ರಾಹ್ಮಣನೆಂದು ತಪ್ಪಾಗಿ ನಿರೂಪಿಸಿದ್ದಾರೆ. ಇಂಥ ಅನೇಕ ಸಂಗತಿಗಳನ್ನು ಪುನಾರಚನೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾಲ್ಮೀಕಿಯ ಜೀವನ, ಕಾವ್ಯ, ವಿಶ್ವದಲ್ಲಿ ಅದು ಪಡೆದ ವಿವಿಧ ರೂಪಗಳು ಇವುಗಳನ್ನು ಹೊಸ ಬಗೆಯ ಚಿಂತನೆಗೆ ಒಳಪಡಿಸುವ ಪ್ರಯತ್ನ ಮಾಡಬೇಕಾಗಿದೆ.

ವಾಲ್ಮೀಕಿಯ ತಂದೆ ಪ್ರಚೇತಸೇನ, ವಾಲ್ಮೀಕಿ ಪೂರ್ವಾಶ್ರಮದಲ್ಲಿ ಒಬ್ಬ ಬೇಟೆಗಾರ. ಸಂಪ್ರದಾಯದಂತೆ ಈತನ ಮೊದಲ ಹೆಸರು ರತ್ನಾಕರ. ಈ ಬಗ್ಗೆ ಭಾರತದಲ್ಲಿ ವಿಭಿನ್ನ ಕಥೆಗಳಿರುವುದು ಸ್ಪಷ್ಟ. ಒಂದು ಮೂಲದ ಪ್ರಕಾರ ಕಳ್ಳತನ, ದರೋಡೆಯಲ್ಲಿ ನರತನದ ಈತನಿಗೊಮ್ಮೆ ನಾರದನಿಂದ ಪರೀಕ್ಷೆ ನಡೆಯಿತು. ನಿನ್ನ ಅಪರಾಧಕ್ಕೆ ನಿನ್ನ ಹೆಂಡತಿ – ಮಕ್ಕಳು ಭಾದ್ಯಸ್ಥರೇ (ಪಾಲುದಾರರು) ಎಂದು ತಿಳಿಸಿದ. ಅವನು ತನ್ನ ಕುಟುಂಬ ಪರಿವಾರವನ್ನು ವಿಚಾರಿಸಲಗಿ ನಿನ್ನ ಅಪರಾಧಕ್ಕೆ ನೀನೇ ಹೊಣೆ ಎಂದರು. ಇದರಿಂದ ಮನಃಪರಿವರ್ತನೆಗೊಂಡ ವಾಲ್ಮೀಕಿಗೆ ಅದರಂತೆ ಜ್ಞಾನೋದ ಯಾದ ಉತ್ತುಂಗ ಶಿಖರ ತಲುಪಿ ಮಹಾಕಾವ್ಯ ರಚಿಸಿದನೆಂದು ಹೇಳಲಾಗಿದೆ. ಮತ್ತೊಂದು ಮೂಲಕ ಪ್ರಕಾರ (ಬ್ರಾಹ್ಮಣೀಕರಿಸಿ) ವಾಲ್ಮೀಕಿ ಚ್ಯವನಮುನಿಯ ಪುತ್ರ, ಶೂದ್ರನಾದ ವಾಲ್ಮೀಕಿಯನ್ನು ಭಾರತಿಯ ಸಂಸ್ಕೃತಿ ಹಿನ್ನೆಲೆಯಲ್ಲಿ ಅರ್ಥಮಾಡಿ ಕೊಂಡರೆ ನಿಜವಾಗಿಯೂ ಆತ ಬೇಟೆಗಾರ. ಅಂದು ತಪಸ್ಸು, ಧರ್ಮ, ಸತ್ಯ, ಪ್ರಾಮಾಣಿಕತೆ ವಾಲ್ಮೀಕಿಯಲ್ಲಿದ್ದವು.

ಕಾವ್ಯ ರಚನೆ (ಬರಹ) ಬ್ರಾಹ್ಮಣರಿಗೆ ಮೀಸಲಾಗಿತ್ತು. ಹೀಗಾಗಿ ಆತ್ಮನಿಗ್ರಹ, ತಪಸ್ಸು, ದಾನ, ಅಹಿಂಸಾ ಮತ್ತು ಸತ್ಯ, ಮತ್ಸರಾರಾಹಿತ್ಯ, ಕಪಟರಾಹಿತ್ಯ, ದೀನತ್ವ, ದಯಾಗುಣ ಮತ್ತು ತಪಸ್ ಇವು ಬ್ರಾಹ್ಮಣನಲ್ಲಿರಬೇಕು. ಅವು ವಾಲ್ಮೀಕಿಯಲ್ಲಿದ್ದವು. ವಾಲ್ಮೀಕಿ ಬೇಡರೊಡನೆ ಸೇರಿಕೊಂಡು. ದಾರಿಹೋಕರ ತಲೆ ಹೊಡೆದು ಅವರಿಂದ ಕಿತ್ತುಕೊಂಡ ಹಣ. ಸಂಪತ್ತಿನಿಂದ ಬದುಕುತ್ತಿದ್ದನಂತೆ. ಒಮ್ಮೆ ಇವನು ಸಪ್ತರ್ಷಿಗಳ ಪರಿಚಯವಾಗಿ ಅವರಿಂದ ರಾಮಮಂತ್ರೋಪದೇಶವನ್ನು ಪಡೆದು. ತಪಸ್ಸು ಮಾಡುವಾಗ ಈತನ ಮೇಲೆ ಹುತ್ತ (ವಾಲ್ಮೀಕ) ಬೆಳೆದು, ಸಪ್ತರ್ಷಿಗಳಿಂದ ವಾಲ್ಮೀಕಿಯಾದನು. ತಮಸಾ ನದಿಗೆ ಸ್ನಾನ್ನಕ್ಕೆ ಹೋದ ವಾಲ್ಮೀಕಿ ಅಲ್ಲಿ ಬೇಡನೊಬ್ಬ ಕ್ರೌಂಚ ಗಂಡು – ಹೆಣ್ಣು ಪಕ್ಷಿಗಳಲ್ಲಿ ಗಂಡನ್ನು ಕೊಲ್ಲಲು ಹೆಣ್ಣು ಗಂಡಿಗಗಿ ಗೋಳಿಡುವುದನ್ನು ಕಂಡು ದುಃಖಿತನಾಗಿ ಆ ಬೇಡನಿಗೆ ಶಾಪಕೊಟ್ಟನು. ಚಿಂತಾಕ್ರಾಂತನಾದ ಇವನಿಗೆ ಬ್ರಹ್ಮನು ಆಶಿರ್ವದಿಸಿ, ರಾಮಾಯಣವನ್ನು ಬರೆಯುವಂತೆ ಹೇಳಿದಂನಂತೆ. ವಾಲ್ಮೀಕಿಯು ದೈವಾನುಗ್ರಹದಿಂದ ರಾಮಾಯಾಣ ಕಾವ್ಯವನ್ನು ರಚಿಸಿದನು. ಅಂದಿನಿಂದ ಆತನ ಬಗ್ಗೆ.

ಕಾವ್ಯಶ್ರೀಯ ಕೊಂಬೆಯನ್ನೇರಿ ರಾಮ ರಾಮ ಎಂಬ ಮಧುರ ಅಕ್ಷರಗಳನ್ನು ಮಧುರವಾಗಿ ಧ್ವನಿಗೈಯುವ ವಾಲ್ಮೀಕಿ ಕೋಗಿಲೆಯನ್ನು ವಂದಿಸುತ್ತೇನೆ

ಎಂಬ ಶ್ಲೋಕ ಇವರ ಕಾವ್ಯಸ್ಪೂರ್ತಿಗೆ ಉದಾಹರಣೆ ಮೂಲ ಶಾಶ್ವತವಾಗಿ ಉಳಿದುಬಂತು. ಹೋಮರ್ ನಂತೆ ವಾಲ್ಮೀಕಿಯು ಜಗತ್ತಿಗೆ ಮಾದರಿಯಾಗುವಂತೆ, ಮೆಚ್ಚುವಂತೆ, ಕಾವ್ಯವನ್ನು ರಚಿಸಿದ್ದು ಸ್ಮರಣೀಯ.

ರಾಮಾಯಣ ಭಾರತ ದೇಶದ ಮೊದಲ ಕಾವ್ಯ ಇದನ್ನು ಪ್ರತಿಯೊಬ್ಬ ಭಾರತೀಯನು ಬಲ್ಲ. ವಾಲ್ಮೀಕಿಯ ಬಗ್ಗೆ ತಿಳಿಯುವುದಕ್ಕಿಂತ ರಾಮಾಯಣವನ್ನು ಓದಿದರೆ ಆತನ ಬಗ್ಗೆ ಅರ್ಥವಾಗುತ್ತದೆ. ಭಾರತಿಯ ಸಂಸ್ಕೃತಿ ಹಿನ್ನೆಲೆಯಲ್ಲಿ ರಾಮ ಏಕಪತ್ನಿ ವ್ರತಸ್ಥ. ಸೀತೆ ಪತಿವ್ರತೆ, ಕುಂಭಕರ್ಣನೆಂದರೆ ನಿದ್ದೆಯ ಮನುಷ್ಯ ರಾವಣನೆಂದರೆ ರಾಕ್ಷಸ ಎಂದು ರಾಮಾಯಣದ ಪ್ರಸಂಗಗಳ ಬಗ್ಗೆ ಆಯಾ ಪ್ರಾದೇಶಿಕತೆಗೆ ತಕ್ಕಂತೆ ಜನಮನದಲ್ಲಿ ಬೇರೆ ಬೇರೆ ಕಥೆಗಳಿವೆ. ರಾಮಾಯಣವನ್ನು ಬುಡಕಟ್ಟು ಮಹಾಕಾವ್ಯ ಎಂದು ಕೆಲವರು ಕರೆದರೆ, ಐತಿಹಾಸಿಕವಾದುದೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಇನ್ನು ಕೆಲವರು ಪಾರಂಪರಿಕವಾಗಿ ಬಂದ ಮೌಖೀಕ ಮಹಾಕಾವ್ಯ (ಚರಿತ್ರೆ) ಎನ್ನುತ್ತಾರೆ. ಹೀಗೆ ಎನೆಲ್ಲಾ ಕಥಾ ಪ್ರಸಂಗಗಳು ಜೀವಂತವಾಗಿರುವುದುಂಟು.

ಇಂದಿಗೂ ರಾಮಾಯಣದ ರಚನೆಯ ಕಾಲಮಾನ ಖಚಿತವಾಗಿ ತಿಳಿದು ಬಂದಿಲ್ಲ. ಏಕವ್ಯಕ್ತಿಯಿಂದ ಮಾತ್ರ ರಚನೆಯಾದುದು ಸ್ಪಷ್ಟ. ಅವನೇ ಆದಿಕವಿ, ಮಹರ್ಷಿ ಕ್ರಿ.ಪೂ. ೯೦೦೦ರಲ್ಲಿ ಈತನ ಮಹಾಕಾವ್ಯ ರಚಿತವಾಗಿದೆ ಎಂದು ಹೇಳಿದರೆ, ಕೆಲವರು ಕ್ರಿ.ಪೂ ೫೦೦ಕ್ಕಿಂತ ಮೊದಲು ರಾಮಾಯಣ ರಚನೆಯಾಗಿರಬೇಕೆಂದು ಅಭಿಪ್ರಾಯಿಸಿದ್ದಾರೆ. ಆರ್.ಎಸ್.ಶರ್ಮ ಅವರು ಕ್ರಿ.ಶ. ೪೦೦ರ ಹೊತ್ತಿಗೆ ಎರಡು ಮಹಾಕಾವ್ಯಗಳು ಸ್ಪಷ್ಟಸ್ವರೂಪವನ್ನು ತಾಳಿದಂತಿವೆ ಎನ್ನುತ್ತಾರೆ. ರಾಮಾಯಣ ಕ್ರಿ.ಶ. ೫ – ೬ನೆಯ ಶತಮಾನಕ್ಕಿಂತ ಹಿಂದಿನದಲ್ಲ ಎಂಧು ಎಚ್.ಡಿ. ಸಂಕಾಲಿಯಾ ಅವರು ವಾದಿಸಿದ್ದಾರೆ. ಇವರ ಪ್ರಕಾರ ಮಹಾಭಾರತ ಪ್ರಾಚೀನವಾದುದು. ಇದು ಕ್ರಿ.ಪೂ. ೧೦ರಿಂದ ಕ್ರಿ.ಶ. ೪ನೆಯ ಶತಮಾನದವರೆಗಿನ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆಯಂತೆ. ಆದಿಬುಡಕಟ್ಟುಗಳ ಕಥೆಯಾದ ಮಹಾಭಾರತದಲ್ಲಿ ೧,೦೦,೦೦೦ ಶ್ಲೋಕಗಳಿವೆ. ಕೌರವ – ಪಾಂಡವರ ಯುದ್ಧ ವೇದಕಾಲ, ವೇದೋತ್ತರ ಕಾಲವನ್ನು ಮೌರ್ಯರ ಗುಪ್ತರ ಕಾಲದ ಪರಿಸ್ಥಿತಿಯನ್ನು ಇವು ಪ್ರತಿನಿಧಿಸಿವೆ.

ಆದಿಕವಿ ವಾಲ್ಮೀಕಿ ವಿರಚಿತ ರಾಮಾಯಣವು ೬೦೦೦ ಶ್ಲೋಕಗಳಿಂದ ಆರಂಭ ಗೊಂಡು ೧೨,೦೦೦ಕ್ಕೆ ಏರಿ, ಕೊನೆಗೆ ೨೪,೦೦೦ ಶ್ಲೋಕಗಳ ಸ್ಪಷ್ಟರೂಪ ಪಡೆದಿವೆ. ಮಹಾಭಾರತಕ್ಕಿಂತ ಸಮಗ್ರವಾದ ಮಹಾಕಾವ್ಯವಿದು. ಕ್ರಿ.ಪೂ. ೫ನೆಯ ಶತಮಾನದಲ್ಲಿ ರಚಿತವಾಗಿ ಆನಂತರ ಐದು ಹಂತಗಳನ್ನು ದಾಟಿ, ಕ್ರಿ.ಶ. ೧೨ನೆಯ ಶತಮಾನದಲ್ಲಿ ಈಗಿನ ರೂಪ ತಳೆದಿದೆ ಎಂದು ಆರ್.ಎಸ್.ಶರ್ಮಾ ಎಂಬ ಖ್ಯಾತ ಇತಿಹಾಸಕಾರ ಹೇಳುತ್ತಾನೆ. ಅನೇಕ ವಿದ್ವಾಂಸರು ವಾಲ್ಮೀಕಿಯು ರಾಮನ ಸಮಕಾಲೀನವನೆಂದು. ‘ರಾಮರಾಜ್ಯ’ವು ಹೀಗಿರಬೇಕೆಂದು ವರ್ತಮಾನದ ಚರಿತ್ರೆಯನ್ನು ತಿಳಿಸಿರುವನೆಂದು ಅಭಿಪ್ರಾಯಿಸುತ್ತಾರೆ. ಮತ್ತೆ ಕೆಲವರು ರಾಮಾಯಣ ಭೂತವಾದದ್ದು, ವಾಲ್ಮೀಕಿ ಅದನ್ನು ಸಂಗ್ರಹಿಸಿ ಬರೆದಾಗ ಬ್ರಾಹ್ಮಣ ಪಂಡಿತರಿಗೆ ಅವಮಾನವಾಗಿ ಆತನ ರಾಮಾಯಣವನ್ನು ಅರಬ್ಬೀ ಸಮುದ್ರಕ್ಕೆ ಎಸೆದರೆಂದು ಹೇಳುತ್ತಾರೆ. ವಾಲ್ಮೀಕಿ ರಾಮಾಯಣವು ಸಮಕಾಲೀನ ಚರಿತ್ರೆ ಕುರಿತಂಥದ್ದು ಎನ್ನುವುದಕ್ಕೆ ಶ್ರೀರಾಮ ಸೀತೆಯನ್ನು ಕಾಡಿಗೆ ಕಳುಹಿಸಿದಾಗ ಅಲ್ಲಿ ಹೆರಿಗೆ ಆದದ್ದು ವಾಲ್ಮೀಕಿ ಆಶ್ರಮದಲ್ಲಿ ಎಂಬುದು ಸ್ಪಷ್ಟ. ಲವ – ಕುಶರಿಗೆ ಸಕಲ ಕ್ಷತ್ರಿಯ ವಿದ್ಯೆಯನ್ನು ಬೋಧಿಸಿದ ಕೀರ್ತಿ ವಾಲ್ಮೀಕಿಗೆ ಸಲ್ಲುತ್ತದೆ. ಹೀಗಾಗಿ ಮೇಲಿನಂತೆ ತಿಳಿಯಬಹುದಾಗಿದೆ.

ವಾಲ್ಮೀಕಿ ಜಾತ್ಯತೀತ ವ್ಯಕ್ತಿ. ದೇಶ, ಭಾಷೆ ಹೀಗೆ ಸಂಕುಚಿತ ಪ್ರಜ್ಞೆ ವಾಲ್ಮೀಕಿಗೆ ಕಾಡಿದಂತಿಲ್ಲ. ಜಾತ್ಯತೀತ ದೇಶ ಭಾರತವಾದರೂ ಇಂದು ಜಾತಿಯ ವಿಷಮಗಾಳಿ ಬೀಸುವುದು ನಿಂತಿಲ್ಲ. ಹಿಂದೆ ಜಾತಿವರ್ಗ – ಭೇದಗಳಿರದೆ ಕೆಳವರ್ಗದವರು ಮೇಲುಗೈ ಪಡೆದದ್ದು ಗಮನಾರ್ಹ. ಈ ದೇಶಕ್ಕೆ ಮಹಾಕಾವ್ಯವಾದ ಮಹಾಭಾರತ ವನ್ನು ಕೊಟ್ಟವರು ಅಂಬಿಗರ ಕುಲಕ್ಕೆ ಸೇರಿದ ವ್ಯಾಸನು. ವಾಲ್ಮೀಕಿ ಬೇಡರವನು ವಶಿಷ್ಟ ಮುನಿಯು ವೇಶ್ಯೆಯ ಮಗನಂತೆ. ಶರಣ ಹರಳಯ್ಯ ಮಾದಿಗ ಜನಾಂಗ ದವನು. ಹನುಮಂತ (ಆಂಜನೇಯ) ಶ್ರೀರಾಮನ ಆಪ್ತ ಬಂಟ ಮುಂಡಾ ಬುಡಕಟ್ಟಿಗೆ ಸೇರಿದ್ದಾನೆ. ಗುಹಾನು ರಾಮನ ಸ್ನೇಹಿತ ಬೇಡ (ಮಿಂಗುಲಿಗ) ಜನಾಂಗಕ್ಕೆ ಸೇರಿದವನು. ಶ್ರೀರಾಮನ ಗೋತ್ರ ಸಾಕೆತಲ. ಇದು ಬೇಡರ ಬೆಡಗುಗಳಲ್ಲೊಂದು. ರಾಮಾಯಣವು ಬೇಟೆಗಾರರ (ಮಾಯಾಮೃಗ, ಬಂಗಾರದ ಜಿಂಕೆ, ಮರೀಚೆ) ಚರಿತ್ರೆ ಆಗಿರುವಂತಿದೆ. ಸೀತೆಯನ್ನು ಬೇಡರವಳೆಂದು ಆಂಧ್ರರ ನೆರೆಯ ಚೀನದಲ್ಲಿ ಕರೆದರೆ, ಕರ್ನಾಟಕದಲ್ಲಿ ವಾಲ್ಮೀಕಿ, ರಾಮೋಶಿಗಳೂ (ಮಹಾರಾಷ್ಟ್ರ) ರಾಮನ ವಂಶೀಯರೆಂದು ಕರೆದುಕೊಳ್ಳುವರು. ಈ ಹಿನ್ನೆಲೆಯಲ್ಲಿ ವಾಲ್ಮೀಕಿಯ ವಿವಿಧ ಭಂಗಿಗಳನ್ನು, ದೃಷ್ಟಿಕೋನ, ರಾಜನೀತಿ ಪರಿಕಲ್ಪನೆ ಹಾಗೂ ಪಾತ್ರವನ್ನು ಅರ್ಥೈಸಿಕೊಳ್ಳುವ ಅಗತ್ಯವಿದೆ.

ವಾಲ್ಮೀಕಿ ಐತಿಹಾಸಿಕ ವ್ಯಕ್ತಿಯೇ?

ಈವರೆಗಿನ ಅಧ್ಯಯನ, ಸಂಶೋಧನೆಗಳು ವಾಲ್ಮೀಕಿ ಒಬ್ಬ ಚಾರಿತ್ರಿಕ ಪುರುಷನೆಂದು ಸಾರಿವೆ. ಆತನ ರಾಮಾಯಣದಲ್ಲಿ ವ್ಯಕ್ತಿ. ಸ್ಥಳ, ಘಟನೆ, ವಿಚಾರ, ನೀತಿಸಂಹಿತೆ ಕಟ್ಟಳೆ, ತಾತ್ವಿಕ, ದೃಷ್ಟಿಕೋನಕ್ಕೆ ಒತ್ತುಕೊಟ್ಟಿರುವುದರಿಂದ ಆ ರೀತಿ ಹೇಳಬಹುದು. ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲಿ ಮತ್ಯ್ಸಪುರಾಣ, ಭಾರ್ಗವ ವಾಲ್ಮೀಕಿ, ದಸ್ಯು ವಾಲ್ಮೀಕಿ ಮತ್ತು ಕವಿ ವಾಲ್ಮೀಕಿಗಳೆಂಬ ಮೂರು ಉಲ್ಲೇಖಗಳಿವೆ. ಇವನನ್ನು ಭಾರದ್ವಜ ಗೋತ್ರದವನೆಂದು, ಬೇಡನು ಕ್ರೌಂಚಪಕ್ಷಿಯನ್ನು ಕೊಂದಾಗ ಅವುಗಳ ಮಿಲನ ಮತ್ತು ಅಗಲುವಿಕೆ, ಸಾವನ್ನು ಕಂಡು ಮರುಗಿದವನೇ ವಾಲ್ಮೀಕಿ. ಮತ್ತೊಂದು (ಸ್ಕಂದ ಪುರಾಣ) ಮೂಲದ ಪ್ರಾಕರ ಬ್ರಹ್ಮರ್ಷಿ – ಸುಮತಿ ಎಂಬ ಬ್ರಾಹ್ಮಣ ದಂಪತಿಗಳ ಮಗನೆಂದು, ಚಿಕ್ಕಂದಿನಲ್ಲೇ ತಂದೆ – ತಾಯಿಗಳ ಸಾವಿನಿಂದ ಬೇಡನ ಬಳಿ ಬಂದು ತಪಸ್ಸು ಮಾಡಿದಾಗ ಬ್ರಾಹ್ಮಣತ್ವ ಮರೆತು, ಬೇಡನಾದನಂತೆ. ವಿಷ್ಣು ಪುರಾಣದಲ್ಲಿ ವಾಲ್ಮೀಕ ಭೃಗುಋಷಿಯ ಸಹೋದರನೆಂದು ಹೇಳಲಾಗಿದೆ. ತನ್ನ ಲೂಟಿಕ, ದರೋಡೆ, ಕಳ್ಳತನಗಳನ್ನು (ಕೆಟ್ಟ ಗುಣ) ಋಷಿಗಳ ಉಪದೇಶದಿಂದ ಬಿಟ್ಟಾಗ ಜ್ಞಾನೋದಯವಾಯಿತಂತೆ. ಇಷ್ಟೆಲ್ಲಾ ಹೇಳಿದರೂ ವಾಲ್ಮೀಕಿ ಬೇಡನೆಂಬುದು ಸತ್ಯ. ರಾಮನಾಮದಿಂದ ಪವಿತ್ರನದ ವಾಲ್ಮೀಕಿ ರಾಮನ ಸಮಕಾಲೀನ ವ್ಯಕ್ತಿಯಾಗಿ ಕಂಡುಬರುತ್ತಾನೆ. ವಾಲ್ಮೀಕಿ ಸರ್ವತೋಮುಖಿ: ಭಾಷಿಕ, ಐತಿಹಸಿಕ, ಪ್ರಾಕ್ತನಶಾಸ್ತ್ರ, ಭೋಗೋಳ, ಜನಂಗಿಕ, ತತ್ವಶಾಸ್ತ್ರೀಯ, ಧಾರ್ಮಿಕ, ಸಸ್ಯಶಾಸ್ತ್ರ ಹೀಗೆ ನಾನು ಕ್ಷೇತ್ರಗಳ ದರ್ಶನವನ್ನು ರಾಮಾಯಣದಲ್ಲಿ ಮೂಡಿಸಿದ್ದಾನೆ.

ಸಮಾಜ ಸುಧಾರಕ ವಾಲ್ಮೀಕಿ

ಪ್ರಾಚೀನ ಜನಜೀವನವನ್ನು ಸುಧಾರಣೆಗೊಳಿಸುವಲ್ಲಿ, ಪವಿತ್ರಗೊಳಿಸುವಲ್ಲಿ ವಾಲ್ಮೀಕಿಯ ಪಾತ್ರ ದೊಡ್ಡದು. ತಂದೆ – ತಾಯಿಗಳಿಗೆ ಕುಟುಂಬದಲ್ಲಿರುವ ಸ್ಥಾನಮಾನ, ಸಹೋದರರಲ್ಲಿ ಪರಸ್ಪರ ಅರಿವು. ತಿಳುವಳಿಕೆ. ಹೊಂದಾಣಿಕೆಗಳಿಲ್ಲದ ಸಹಬಾಳ್ವೆಯಲ್ಲಿ ಸಾಗಿಸುವ ಬಗ್ಗೆ ಚಿತ್ರಿಸಿದ್ದಾರೆ. ಜಾತಿ ವರ್ಗಗಳನ್ನು ಮೀರಿ ಸಮುದಾಯಗಳು ತಳವರ್ಗದಿಂದ ಮೇಲ್ವರ್ಗಕ್ಕೆ ಬರಲು ಪ್ರಯಾಸ ಪಡಬೇಕಾಯಿತು. ವಾಲ್ಮೀಕಿ ಸಮಾಜದಲ್ಲಿ ಹೆಣ್ಣಿನ ಸ್ಥಾನ – ಮಾನದ ಕುರಿತು ಚಿಂತಿಸಿದ ಮೊದಲ ಸಮಾಜ ವಿಜ್ಞಾನಿ. ಸೀತೆ, ಶೂರ್ಪನಖಿ, ಮಂಡೋದರಿ ಮೊದಲಾದವರ ಪತ್ರ ಚಿತ್ರಣವನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಏಕಪತ್ನಿತ್ವವು ಶ್ರೀ ರಾಮಚಂದ್ರನ ಮೂಲಕ ಸಮಾಜದಲ್ಲಿ ಬಹುಪತ್ನಿತ್ವಗಳಿಂದ ಆಗುವ ಕಲಹ, ಸಂಘರ್ಷ, ಪಾತಿವ್ರತ್ಯ, ಅಧಿಕಾರ, ಯುದ್ಧ ಹೊಂದಾಣಿಕೆ, ಬಡತನ, ಸಂಪತ್ತು ಸುಖ – ದುಃಖ – ಹೀಗೆ ಸಮಾಜದಲ್ಲಿ ಒಳ್ಳೆಯದನ್ನು ಮತ್ತು ಕೆಟ್ಟ ಸಂಗತಿಗಳನ್ನು ರಾಮಾಯಣದಲ್ಲಿ ಉಲ್ಲೇಖಿಸಿ ಸಮಾಜಕ್ಕೆ ಮಾದರಿಯಾಗಿರಬೇಕಾದರೆ ಪಾಲಿಸಬೇಕಾದ ಗುಣಗಳ ಬಗೆಗೂ ವಿವರಿಸಿದ್ದಾನೆ.

ಶಿಕ್ಷಣತಜ್ಞ (ಶಿಕ್ಷಕ)

ರಾಮಾಯಣದ ಕರ್ತೃ ವಾಲ್ಮೀಕಿ ಕೇವಲ ಪಂಡಿತನಲ್ಲದೆ ಶಿಕ್ಷಣಪ್ರೇಮಿ, ಆದರ್ಶ ಶಿಕ್ಷಕನೂ ಆಗಿದ್ದವನು. ಸೀತೆಯನ್ನು ಶ್ರೀರಾಮನು ತ್ಯಜಿಸಲು ಆಕೆಯು ವಾಲ್ಮೀಕಿಯ ಆಶ್ರಮವನ್ನು ಸೇರಿ ಅಲ್ಲಿಬ್ಬರು ಮಕ್ಕಳನ್ನು ಹೆತ್ತಲೂ. ವಾಲ್ಮೀಕಿ ಒಮ್ಮೆ ರಾಮಾಯಣವನ್ನು (ಕಾವ್ಯ) ರಚಿಸಿ, ಸೀತಾ – ಶ್ರೀರಾಮನ ಮಕ್ಕಳಾದ ಕುಶ – ಲವರಿಗೆ ಕಂಠಪಠ ಮಾಡಿಸಿದರಂತೆ. ಈ ಮಕ್ಕಳಿಗೆ ಸಕಲ ಶಸ್ತ್ರ ಮತ್ತು ಶಾಸ್ತ್ರಾಭ್ಯಾಸ ಮಾಡಿಸಿದವರು ವಾಲ್ಮೀಕಿ. ಇವರು ಕೊಟ್ಟ ಶಿಕ್ಷಣದ ಪ್ರಭಾವದಿಂದ ರಾಜ್ಯಾಳ್ವಿಕೆ, ಸಹೋದರ ಭಾವನೆ, ಯುದ್ಧ, ಸಾವು ಮೊದಲಾದವುಗಳ ಅರಿವು ಬಂದು ಮೊಳಕೆಯಲ್ಲಿ ಭವಿಷ್ಯದ ಹೆಮ್ಮರದಂಥ ಕನಸು ಕಂಡಿದ್ದರು. ಶ್ರೀರಾಮನ ಅಶ್ವಮೇಧ ಯಾಗದ ಕುದುರೆಯನ್ನು ಬಂಧಿಸಿದ ಈ ಮಕ್ಕಳೊಡನೆ ಶತ್ರುಘ್ನ, ಭರತ ಲಕ್ಷ್ಮಣ, ರಾಮರು ಕಾದಾಡಿ ಮೂರ್ಛೆ ಹೋದರಂತೆ. ಸಕಲ ವಿದ್ಯೆಗಳಲ್ಲಿ ಪಾರಂಗತರಾದ ಲವ – ಕುಶರು ಉನ್ನತ ಶಿಕ್ಷಣ ಪಡೆದಿದ್ದು ಆ ಋಷಿಯಿಂದಲೇ. ಹೀಗಾಗಿ ಅಂದಿನ ಶಿಕ್ಷಣ ವ್ಯವಸ್ಥೆ ಋಷಿ – ಮುನಿಗಳಿಂದ ಆಶ್ರಮ, ಕುಟೀರಗಳಲ್ಲಿ ನಡೆಯುತ್ತಿತ್ತು.

ರಾಜನೀತಿಜ್ಞ

ವಾಲ್ಮೀಕಿ ತನ್ನ ರಾಮಾಯಣದಲ್ಲಿ ರಾಜ್ಯ ಮಂತ್ರಿ, ದಂಡನಾಯಕ, ಸೈನಿಕ, ಗೂಢಾಚಾರ, ತಳವಾರ, ರಾಣಿ, ರಾಜಕುಮಾರ, ಯುವರಾಜ ಮೊದಲಾದವರ ಸಮಗ್ರ ವಿಚಾರಗಳನ್ನು ಚಿತ್ರಿಸಿದ್ದಾನೆ. ರಾಜಪ್ರಜೆಗಳ ರಕ್ಷಕನೆಂದು ಪ್ರಜಪ್ರಭುತ್ವದ ಪರಿಕಲ್ಪನೆಯ ಅರಿವನ್ನು ಜಾರಿಗೆ ತಂದವನು ವಾಲ್ಮೀಕಿ. ರಾಜ ಎಷ್ಟೇ ನಿರಂಕುಶ ಪ್ರಭುವಾದರೂ ಪ್ರಜೆಗಳ ಮನೋಧೋರಣೆಗಳನ್ನು ಅರ್ಥಮಾಡಿಕೊಳ್ಳಬೇಕು. “ರಾಮ ರಾಜ್ಯ’ದ ಕನಸು ‘ಗ್ರಾಮ ರಾಜ್ಯ’ವೇ ಆಗಿತ್ತು. ಸರ್ ಥಾಮಸ್ ಮೊರ್‌ನ್ ಕನಸಿನ ರಾಜ್ಯದಂತೆ ಆಗಿದ್ದರೆ (ಯುಟೋಫಿಯಾ), ವಾಲ್ಮೀಕಿ ವಾಸ್ತವಕ್ಕೆ, ವರ್ತಮಾನಕ್ಕೆ ಸ್ಪಂದಿಸುವಂತೆ ಚಿಂತಿಸುತ್ತಿದ್ದನು. ದಾರ್ಶನಿಕ ಪ್ಲೇಟೋನ ‘ಆದರ್ಶ ರಾಜ್ಯ’, ಡಾಂಟೆಯ ಡಿವೈನ್ ಕಾಮಿಡಿ, ಹೋಮರನ ಈಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯ ಗ್ರಂಥಗಳಾಗಿವೆ. ವಾಲ್ಮೀಕಿ ಇವರಿಗಿಂತ ಮೇರು ಪರ್ವತದಂತೆ ಕಂಡುಬರುತ್ತಾನೆ. ಪ್ರಾಚೀನ ರಾಷ್ಟ್ರದ ಪರಿಕಲ್ಪನೆಯನ್ನು, ಆಳ್ವಿಕೆಯ ಪೈಪೋಟಿಯನ್ನು ಭಾರತೀಯ ಸಂಸ್ಕೃತಿ ಮೂಲಕ ಹೇಳಿದ್ದಾನೆ. ರಾಜಕಾರಣ ಎನ್ನುವುದು ಐಕ್ಯತೆ, ಸಮನ್ವಯತೆಯನ್ನು ಸಾಧಿಸಲಾಗದ ವ್ಯವಸ್ಥೆ. ಸ್ವಾತಂತ್ರ್ಯ, ಸಹೋದರತೆ, ಸಮಾನತೆಗಳಿರಬೇಕೆಂದು ಶ್ರೀರಾಮ, ಭರತ, ಲಕ್ಷ್ಮಣನ ಪಾತ್ರಗಳ ಮೂಲಕ ದಶರಥ ಕೌಸಲ್ಯ, ಕೈಕೇಯಿ ಮೊದಲಾದವರು ಪಾತ್ರ, ಚಿತ್ರಣಗಳನ್ನು ಗಮನಿಸಬಹುದು. ಪಿತೃವಾಕ್ಯ ಪರಿಪಾಲನೆ, ವನವಾಸ, ಸಿಂಹಾಸನತ್ಯಾಗ ಇವೆಲ್ಲವೂ ರಾಜ್ಯಾಡಳಿತದಲ್ಲಿ ಕೆಲಸ ಮಾಡಿದೆ. ವಾಲ್ಮೀಕಿಗೆ “ಆದರ್ಶ ರಾಜ್ಯದ” ಪರಿಕಲ್ಪನೆಯಿತ್ತು. ಅದು ಪ್ರಜೆಗಳ ರಾಜ್ಯ (ವೆಲ್ಫೇರ್ ಸ್ಟೇಟ್) ಕಲ್ಯಾಣ ರಾಜ್ಯ (೨೦ ಶ್ಲೋಕಗಳು) ಶ್ರೀರಾಮನ ರಾಜ್ಯಭಾರವೆಂದು ತಿಳಿದು ಪ್ರಜೆಗಳೆಲ್ಲಾ ಸುಖಿಗಳಾಗಿದ್ದರು. ಬರಗಾಲ, ಕ್ಷಾಮಗಳೂ ಆಗ ಉಲ್ಬಣಗೊಂಡಿರಲಿಲ್ಲ. ಇಂಥ ಸುಭಿಕ್ಷೆ ಕಾಲ ಮತ್ತೊಮ್ಮೆ ಬರಬೇಕೆಂದು ಬಯಸುವ ಕನಸು ಪ್ರಜೆಗಳಿಗೆ ಕಾಡಿದೆ. ರಾಮ, ಸೀತೆ, ಲಕ್ಷ್ಮಣ ಹಾಗೂ ಹನಮಂತನ ಆದರ್ಶಗಳನ್ನು, ಕಲ್ಯಾಣ ಗುಣಗಳನ್ನು ಕಾವ್ಯದಲ್ಲಿ ಹೃದಯಂಗಮವಾಗಿ ಚಿತ್ರಿಸಲಾಗಿದೆ.

ತತ್ವಜ್ಞಾನಿ

ಮೇಲಿನ ಎಲ್ಲಾ ಸಂಗತಿಗಳ ಮೂಲಕ ವಾಲ್ಮೀಕಿಯನ್ನು ತತ್ವಜ್ಞಾನಿಯೆಂದು ಒಪ್ಪಿಕೊಳ್ಳಲೇಬೇಕು. ರಾಮಾಯಣ ಕಾವ್ಯದಲ್ಲಿ ಹಿಂಸೆ, ಕ್ರೌರ್ಯವನ್ನು ತೆಗಳಿ ಇದು ಸಾಮಾಜಕ್ಕೆ ಮಾರಕ ಎಂದಿದ್ದಾನೆ. ಏಕ ಪತ್ನಿಯಿಂದ ಸುಖ, ನೆಮ್ಮದೆ ಇದೆ. ಇದನ್ನು ಮೀರಿದರೆ ಜೀವನವೇ ಅಸ್ತವ್ಯಸ್ತವೆಂಬುದು ನಿಜವೇ ಆಗಿದೆ, ಕ್ರಾಂತಿ, ಯುದ್ಧಗಳು ತಾತ್ವಿಕ, ನ್ಯಾಯಪರವಾಗಿ ನಡೆಯಬೇಕು. ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ರಾವಣ, ವಾಲಿ, ಸುಗ್ರೀವ, ಆಂಜನೇಯನ ಕಥಾ ಪ್ರಸಂಗಗಳನ್ನು ಅರ್ಥೈಸಿದ್ದಾನೆ. ಅವಿಭಕ್ತ, ವಿಭಕ್ತ ಕುಟುಂಬ, ವಂಶಾಡಳಿತ, ನಿರಂಕುಶ ಮತ್ತು ಪ್ರಜಾಪ್ರಭುತ್ವಗಳ ಬಗ್ಗೆ ಚಿಂತಿಸಿದ್ದ ವಾಲ್ಮೀಕಿ ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯನ್ನು ಸಾರಿದ್ಧಾನೆ. ಅಖಂಡ ಭಾರತ ಒಂದು ರಾಷ್ಟ್ರ ಎನ್ನುವುದಾದರೆ. ಪ್ರತಿಯೊಂದು ಜಾತಿ, ವರ್ಗಗಳು ಸಾಮರಸ್ಯದಿಂದ ಇರಬೇಕೆಂದು ಬಯುಸುತ್ತಾನೆ. ಪ್ರತಿಯೊಂದು ಕಾರಣಕ್ಕೂ ಉತ್ತರವನ್ನು ರಾಮಾಯಣದಲ್ಲಿ ಕೊಟ್ಟಿದ್ದಾನೆ ವಾಲ್ಮೀಕಿ. ರಾಜರ, ವ್ಯಕ್ತಿತ್ವ – ಜನಾಂಗಗಳ ಅಸ್ತಿತ್ವದ ಬಗ್ಗೆ ಆತ ಚಿಂತಿಸಿದ್ದಾನೆ. ಸ್ಥಳ. ನಿವೇಶನ, ಸ್ಮಾರಕ – ವಿಗ್ರಹ, ಆಭರಣ, ಮರ – ಗಿಡ, ಹೂವು – ಹಣ್ಣು, ಪ್ರಾಣಿ – ಪಕ್ಷಿಗಳ ಬಗ್ಗೆ ವಿವರಿಸಿದ್ದಾನೆ.

ಶೋಷಿತರ ನೇತಾರ

ವಾಲ್ಮೀಕಿ ನೊಂದವರ, ಶೋಷಿತರ ಪರ ಬಂಡಾಯ ಮಾಡಿದ ಒಬ್ಬ ಹೋರಾಟಗಾರನು ಹೌದು. ಇಲ್ಲಿ ಬೇಟೆಗಾರರು (ಮೀನುಗಾರರು) ಅಂಬಿಗರು ದೋಣಿ ಸಾಗಾಣಿಕೆದಾರರು, ಪತ್ನಿಯನ್ನು (ಲಂಬಾಣಿ) ಕಳೆದುಕೊಂಡವರು, ಅಣ್ಣ –ತಮ್ಮಂದಿ ರಿಂದ ಥಳಿಸಿಕೊಂಡವರು, ಹಕ್ಕು – ಸ್ಥಾನಕ್ಕಾಗಿ ಹಂಬಲಿಸಿ ಹತಾಶೆ ಆದವರ ಬಗ್ಗೆ ಅನುಕಂಪ ತೋರಿಸುತ್ತಾನೆ. ಸರಂಗ ಕೊರೆಯುವವರು, ಗಣಿ ತೋಡುವವರು, ರಸ್ತೆ ಹಾಗೂ ಸೇತುವೆ ನಿರ್ಮಾಣಗಾರರು, ಶಿಲ್ಪಿ – ತಂತ್ರಜ್ಞರು ಮೇಸ್ತ್ರಿ – ಬಡಗಿಗಳ ಬಗ್ಗೆ ವಾಲ್ಮೀಕಿ ತಿಳಿಸಿದ್ದಾನೆ. ಅನುವಂಶಿಕ ವೃತ್ತಿಗಳೂ ಆ ಕಾಲಕ್ಕಾಗಲೇ ಇದ್ದವು. ರಾಮಾಯಣವು ಒಂದು ಬುಡಕಟ್ಟಿನ ಕಾವ್ಯವಿದ್ದಂತಿದೆ. ಅದರಲ್ಲಿ ಭಾರತೀಯ ಸಂಸ್ಕೃತಿ ಲಕ್ಷಣಗಳು ವ್ಯಾಪಕವಾಗಿ ದಾಖಲಾಗಿವೆ. ಹೀಗೆ ಚರಿತ್ರೆ ಮತ್ತು ಸಂಸ್ಕೃತಿಯಲ್ಲಿ ಇಂದಿನ ಸಮುದಾಯಗಳು ತಮ್ಮ ಪಾತ್ರವನ್ನು ಗುರುತಿಸಲು ಇಷ್ಟಪಡುತ್ತವೆ. ಇಲ್ಲಿನ ಸಂಘಟನೆ, ಹೋರಾಟ, ನ್ಯಾಯಪರವಾದದ್ದು. ವೈರಾಗ್ಯ, ವನವಾಸ ತ್ಯಜಿಸುವುದು ಮತ್ತೊಬ್ಬರ ಅನುಮೋದನೆಯಿಂದಲೇ, ಹೀಗಾಗಿ ರಾಮಾಯಣದಿಂದ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಪಾಠ ಕಲಿಯಬೇಕಾಗಿದೆ.

ಭ್ರಾತೃತ್ವದ ಹರಿಕಾರ

ಅಣ್ಣ – ತಮ್ಮಂದಿರು ಈ ಸಮಾಜದಲ್ಲಿ ಹೇಗಿರಬೇಕೆಂದು ವಾಲ್ಮೀಕಿ ಶ್ರೀರಾಮ, ಲಕ್ಷ್ಮಣ, ಲವ – ಕುಶರನ್ನು ಉದಾಹರಿಸಿದ್ದಾನೆ. ಉನ್ನತ ವ್ಯಕ್ತಿಗಳ ಉದಾತ್ತ ಗುಣಗಳನ್ನು ಹೊಗಳುವುದೇ ಅಲ್ಲ, ವಾಲಿ – ಸುಗ್ರೀವರೆಂಬ ಅಣ್ಣ – ತಮ್ಮಂದಿರ ಜಗಳವು ಸಮಾಜವನ್ನು ಅಸ್ತವ್ಯಸ್ತಗೊಳಿಸಬಹುದು. ವಾಲ್ಮೀಕಿ ಸ್ನೇಹ, ಪ್ರೀತಿ, ಸಹೋದರ ಭಾವನೆಯನ್ನು ಬಂಧು ಪ್ರೇಮ, ಮಾತೃಪ್ರೇಮ, ಪಿತೃವಾಕ್ಯ ಪರಿಪಾಲನೆಯನ್ನು ಮನೋಜ್ಞವಾಗಿ ಚಿತ್ರಿಸಿದ್ಧಾನೆ. ಭರತನ ಪಟ್ಟಾಭಿಷೇಕ, ರಾಮ ವನವಾಸದ ಘಟನೆ ಅಣ್ಣ – ತಮ್ಮಂದಿರ ನಡುವಿನ ಹೊಂದಾಣಿಕೆಯನ್ನು ಸಂಕೇತಿಸುತ್ತದೆ. ನಿಷಾದ ದೊರೆ ಗುಹನು ರಾಮ – ಸೀತೆಯರು ಚಿತ್ರಕೂಟ ತಲುಪುವಾಗ ರಾತ್ರಿಯಿಡೀ ಅವರನ್ನು ಕಾಯುತ್ತಾನೆ. ಗುಹನು ಸ್ಥಪತಿ. ನಾವೆ (ದೋಣಿ) ಮೂಲಕ ರಾಮ – ಸೀತೆಯನ್ನು (ಗಂಗಾ) ನದಿ ದಾಟಿಸುವುದು ಧರ್ಮ ಎನ್ನುತ್ತಾರೆ ಗುಹ. ಅದು ನಿಷಾಧ ಜಾತಿಯ ವೃತ್ತಿ ಕೂಡ ಆಗಿತ್ತು.

ಆದರ್ಶ ಕಲ್ಪನೆ

ರಾಮಾಯಣ ಕಾವ್ಯ ಇತಿಹಾಸವಲ್ಲ ಎನ್ನುತ್ತಾರೆ ಡಾ. ಪಿ.ವಿ.ಕಾಣೆ. ಹಾಗೆಯೇ ಸುವರ್ಣ ಯುಗ, ರಾಮರಾಜ್ಯ ಇಲ್ಲ ಎನ್ನುತ್ತಾರೆ ಕೆಲವರು. ಓರ್ವ ಬ್ರಾಹ್ಮಣನ ಮಗ ಮಾಡಿದ್ದುದಕ್ಕೆ ಸೀತೆ ಕಾಡಿಗೆ ಹೋಗುವಂತಾಗಬೇಕಾಗುತ್ತದೆ. ಕೆಲವು ಸಂಗತಿಗಳು ಹೀಗಿವೆ:

೧. ಸೀತಾ ಕಲ್ಯಾಣ, ಪಿತೃವಾಕ್ಯ ಪರಿಪಾಲನೆ.

೨. ರಾಮನ ವನವಾಸದ ಆರಂಭ ಮತ್ತು ಮುಕ್ತಾಯ.

೩. ಸೀತಾಪಃರಣ, ದುಷ್ಟರ ನಿಗ್ರಹ ಶಿಷ್ಟರ ರಕ್ಷಣೆ ಕಂಡುಬರುತ್ತದೆ.

೪. ಹನುಮಂತನ ಸಮುದ್ರೋಲ್ಲಂಘನೆ ಮೂಲಕ ಕವಿ ಆದರ್ಶ ಲಕ್ಷಣ ಮತ್ತು ಗುಣಗಲನ್ನು ಚಿತ್ರಿಸಿದ್ಧಾನೆ.

೫. ವೈಷ್ಣವ – ಸೈವ ಧರ್ಮಗಳ ಪ್ರಭಾವ ಇದೆ.

೬. ಏಕಪತ್ನಿತ್ವ, ಪಾತಿವ್ರತ್ಯದ ಬಗ್ಗೆ ವಿವರಗಳಿವೆ.

೭. ಉದಾತ್ತಗುಣ, ಆದರ್ಶದ ಮೌಲ್ಯ ಆದರ್ಶ ಪತ್ನಿ, ತಮ್ಮಂದಿರು, ಮಕ್ಕಳ ಬಗ್ಗೆ ತಿಳಿಸಿದ್ದಾರೆ. ಆದರ್ಶ ರಾಜ್ಯವು ಗಾಂಧೀಜಿಗೆ ರಾಮರಾಜ್ಯ – ಗ್ರಾಮ ರಾಜ್ಯವಾಗಿ ಪರಿಣಮಿಸಿತು.

೮. ಧರ್ಮ ಸ್ಥಾಪನೆ – ಅಧರ್ಮ ಹೋಗಲಾಡಿಸುವುದು ಇಲ್ಲಿನ ಉದ್ದೇಶ.

ವಾಲ್ಮೀಕಿ ಮತ್ತು ಬೌದ್ಧ ಧರ್ಮ

ಬುದ್ಧನನ್ನು ನಾಸ್ತಿಕ, ಕಳ್ಳ, ದರೋಡೆಕೋರನೆಂದು ಕರೆಯಲಾಗಿದ್ದು ಬೌದ್ಧ ಧರ್ಮದ ಉಲ್ಲೇಖಗಳನ್ನು ರಾಮಾಯಣದಲ್ಲಿ ಕಾಣುತ್ತೇವೆ. ರಾಮನು ಬುದ್ಧನ ನಂತರ ಬಂದವನೆಂದು, ಅವನ ಅವತಾರ ಎಂದು ಸೇನ್‌ಗುಪತ್ರು ಭಾವಿಸುತ್ತಾರೆ. ಅಶ್ವಘೋಷನನ್ನು ಬುದ್ಧ ಚರಿತೆಯಲ್ಲಿ ವಾಲ್ಮೀಕಿ ಬಗ್ಗೆ ಉಲ್ಲೇಖಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಏಕೆಂದರೆ, ರಾಮಾಯಣದಲ್ಲೇ ಬುದ್ಧ ತಥಾಗತ, ಭಿಕ್ಷು, ಶ್ರಮಣ ಹಾಗೂ ಚೈತ್ಯ ಪ್ರಸಾದ ಮುಂತಾಗಿ ಬುದ್ಧನನ್ನು ಕುರಿತು ಉಲ್ಲೇಖಗಲಿವೆ. ಅಜಾತಶತ್ರು ಬುದ್ಧನ ಬಗ್ಗೆ ಅಶೋಕ ಚಕ್ರವರ್ತಿ ಪುಷ್ಯಮಿತ್ರ ಮೊದಲಾದವರ ಬಗ್ಗೆ ಇತ್ತೀಚೆಗೆ ವಿಶ್ಲೇಷಿಸಿದ್ಧಾರೆ. ಹಿಂಸೆಯನ್ನು ಮಾಡಬೇಡಿರೆಂದು ಕರೆಕೊಡುತ್ತಾನೆ ವಾಲ್ಮೀಕಿ. ‘ಶಬರಿ’ ತಪಸ್ಸು ಮಾಡಿದ್ದರಿಂದ ಶ್ರಮಣಿ ಎಂದರೆ ಶಬರಿ – ಬೌದ್ಧ ಧರ್ಮಿಯಳು ಎಂದು ಕರೆಯಲಾಗಿದೆ (ಎಚ್.ಡಿ. ಸಂಕಾಲಿಯ). ವೈದಿಕ ರೀತಿಯಲ್ಲಿ ತಪಸ್ಸು ಮಾಡಲು ಆಸ್ಪದವಿಲ್ಲದ ಕಾರಣ ಶೂದ್ರಳಾಗಿ ಆದಿವಾಸಿಯಾಗಿದ್ದಳು ಶಬರಿ. ಶೂದ್ರನಾದ ಶಂಭೂಕನನ್ನು ರಾಮ ವಧಿಸುತ್ತಾನೆ. ಇತರರನ್ನು ಮರೆಯುತ್ತಾನೆ.

ಖನಿಜ ಸಂಪತ್ತು ಮತ್ತು ಪರಿಸರಪ್ರೇಮಿ

ವಾಲ್ಮೀಕಿ ನಿಸರ್ಗ ಪ್ರೇಮಿ. ರಾಮಾಯಣದಲ್ಲಿ ಕಬ್ಬಿಣ, ಬೆಳ್ಳಿ, ಸೀಸ, ಇತರ ಲೋಹಗಳ ಉಲ್ಲೇಖ ಉಪಯೋಗಗಳನ್ನು ತಿಳಿಸಿದ್ದಾರೆ. ವನ್ಯಜೀವಿಗಳನ್ನು ಸಂರಕ್ಷಿಸಬೇಕೆಂದು ಕ್ರೌರ್ಯವನ್ನು ವಾಲ್ಮೀಕಿ ವಿರೋಧಿಸುತ್ತಾನೆ. ಬೇಟೆ. ಕೃಷಿ ಮತ್ತು ಪಶುಪಾಲನೆ ಬಗ್ಗೆ ವಿವರಿಸಲಾಗಿದೆ.

ವಾಲ್ಮೀಕಿ ಮತ್ತು ಕರ್ನಾಟಕ

ವಾಲ್ಮೀಕಿ ಮೂಲ ನೆಲೆ ಅಂದರೆ ತಪಸ್ಸು ಮಾಡಿದ್ದು ಕರ್ನಾಟಕದ ಅವನಿ (ಕೋಲಾರ ಜಿಲ್ಲೆಯಲ್ಲಿದೆ) ಬೆಟ್ಟದಲ್ಲಿ ಎನ್ನಲಾಗಿದೆ. ಹಂಪಿ ಬಳಿ ಇರುವ ಪಂಪಾ ಸರೋವರ, ಮಾತಂಗ ಬೆಟ್ಟ, ಶಬರಿ ಆಶ್ರಮ, ಸುಗ್ರೀವನು ವಾಸವಾಗಿದ್ದ ರಹಷ್ಯ ಮೂಕ ಪರ್ವತ ಇವೆಲ್ಲವೂ ಹಂಪೆ ಪರಿಸರದಲ್ಲಿವೆ. ರಾವಣನು ಗೋಕರ್ಣ ಮೊದಲಾದ ಸ್ಥಳಗಳಿಗೆ ಬರುವ ಚಿತ್ರಣವೂ ರಾಮಾಯಣದಲ್ಲಿದೆ.

ವಾಲ್ಮೀಕಿ ವಿಜ್ಞಾನಿ ಮತ್ತು ತಂತ್ರಜ್ಞಾನಿಯಾಗಿದ್ದನೆ?

ಪುಷ್ಟಕ ವಿಮಾನವನ್ನು ಪರಿಚಯಿಸಿದ ವಾಲ್ಮೀಕಿ ವಿಜ್ಞಾನಿ – ತಂತ್ರಜ್ಞಾನಿಯಾಗಿರಲಿಕ್ಕೆ ಉದಾಹರಣೆ ಎನ್ನಬಹುದು. ದಕ್ಷಿಣ ಅಮೆರಿಕಾದಲ್ಲಿ ಈ ವಿಮಾನದ ಪ್ರತಿಕೃತಿ ಇದೆ. ಪಲ್ಲಕ್ಕೆ, ಕುದುರೆ, ಕತ್ತೆ, ರಥಗಳಲ್ಲದೆ ಜಲಸಾರಿಗೆ – ದೋಣಿ, ವಾಯು ಸಾರಿಗೆ ಬಗ್ಗೆ ವಿಶ್ಲೇಷಿಸಿದ್ದಾನೆ. ವನಸ್ಪತಿಗಳ ವಿವರಗಳು ಸದುಪಯೋಗವಿದೆ. ಯುದ್ಧದಲ್ಲಿ ಬಳಸುವ ಆಯುಧ, ಮದ್ದು, ಆಂಜನೇಯ ಸಾಗರೋಲ್ಲಂಘನೆ ಇವೆಲ್ಲಾ ಸಾಹಸ ಚಿತ್ರಣಗಳಾಗಿವೆ. ಕಾರ್ಬನ್ ಮೂಲಕ ಪ್ರಾಚೀನ ಪಳಯುಳಿಕೆಗಳನ್ನು ಇಂದು ಕಂಡುಹಿಡಿದಿದ್ದಾರೆ. ಅದರ ಬಗ್ಗೆ ನಿಖರವಾಗಿ ವಿಶ್ಲೇಷಿಸುತ್ತಿದ್ದಾರೆ.

ವಾಲ್ಮೀಕಿ ವಾಸ್ತವವಾದಿ

‘ಜಂಬೂದ್ವೀಪ’ ಎನ್ನುವುದು ಭೂಮಂಡಲದ ಭಾಗವನ್ನು ತೋರಿಸುತ್ತದೆ. ಪಾತಾಳವೆಂದರೆ ೪ – ೫ ಸಾಗರಗಳು, ಅಮೇರಿಕಾ! ಕೊಲಂಬಸ್‌ನು ನೋಡಿದ ಅಮೆರಿಕಾ ವಾಲ್ಮೀಕಿಯ ಪಾತಾಳಲೋಕವೇ ಎಂಬ ವಿವರಗಳಿವೆ. ಲಂಕಪಟ್ಟಣ ಎನ್ನುವ ಬಗ್ಗೆ ಮಲಯ, ಸುಮಾತ್ರ, ಜಾವಾ, ಶ್ರೀಲಂಕಾ ಭೌಗೋಳಿಕತೆಯನ್ನು ಗುರುತಿಸುತ್ತಾನೆ.

ಭಾರತಿಯ ಚರಿತ್ರೆ ಮತ್ತು ಸಂಸ್ಕೃತಿಗೆ ವಾಲ್ಮೀಕಿಯ ಕೊಡುಗೆ

ವಿದೇಶಿಯರು ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇಲ್ಲ ಎನ್ನುತ್ತಿದ್ದರು. ಆದರೆ ಭವ್ಯವಾದ ಪರಂಪರೆಯಿದೆ ಎಂದು ತೋರಿಸಿಕೊಟ್ಟವರು ವಾಲ್ಮೀಕಿ. ಚರಿತ್ರೆಯಲ್ಲಿ ಮೊಟ್ಟಮೊದಲು ರಾಮಾಯಣ ಕೃತಿ ಮೂಲಕ ಭಾರತೀಯರಿಗೆ ಜನಜೀವನದ ಚಿತ್ರಣವನ್ನು ಕೊಟ್ವರಲ್ಲಿ ಈತನೇ ಮೊದಲಿಗ. ಸೂರ್ಯ, ಚಂದ್ರ ವಂಶಗಳ ಆಳ್ವಿಕೆ, ಕ್ಷತ್ರಿಯ ವಿಕಾಸವನ್ನು ರಾಜ್ಯಾಳ್ವಿಕೆ ಮೂಲಕ ಚರ್ಚಿಸಿದ್ದಾನೆ. ಶಿಲಾಯುಗದ ಮಾನವನ ಜೀವನ (ಉಡುಗೆ, ತೊಡುಗೆ, ಆಹಾರ)ವನ್ನು ಬೇಟೆ, ಪಶುಪಾಲನೆ ಮತ್ತು ಕೃಷಿಯ ಹಂತಗಳಿಗೂ ಪೂರ್ವದಲ್ಲಿದ್ದ, ವಾನರ – ಕಿರಾತರ ಚರಿತ್ರೆಯನ್ನು ಹೇಳುತ್ತಾನೆ ವಾಲ್ಮೀಕಿ. ಹಿಮಾಲಯ, ವಿಂದ್ಯಾ, ಕಿಷ್ಕಿಂಧ, ಅವನಿ, ಪಶ್ಚಿಮ ಪೂರ್ವ ಘಟ್ಟಗಳು, ಗಂಗಾ, ಯಮುನಾ, ಬ್ರಹ್ಮಪುತ್ರಾ, ಕೃಷ್ಣಾ, ತುಂಗಭದ್ರಾ ಮತ್ತು ಕಾವೇರಿ ನದಿಗಳನ್ನು ಇಲ್ಲಿ ಉಲ್ಲೇಖಿಸುತ್ತಾ ಜನರ ಬದುಕಿನ ವೈವಿಧ್ಯತೆಯನ್ನು ತೋರಿಸಿ ಕೊಟ್ಟಿದ್ದಾನೆ. ಪ್ರತಿಯೊಬ್ಬ ಭಾರತೀಯನು ರಾಮಾಯಣವನ್ನು ಮತ್ತೊಮ್ಮೆ ಓದಿ. ಮರುವ್ಯಾಕ್ಯಾನ ಮಾಡುವ ಅಗತ್ಯತೆ ಉಂಟು. ಬದುಕಿನ ಬಗ್ಗೆ ಚಿಂತಿಸುವವರು ವಾಲ್ಮೀಕಿ ಸಂದೇಶದ ಸಾರವನ್ನು ಮರೆತರೆ ಭಾರತದ ಚರಿತ್ರೆಯೇ ಅಪೂರ್ಣವಾದಂತಾಗುತ್ತದೆ. ಈ ಹಿಂದೆ ರಾಮನು ವಾಲ್ಮೀಕಿಗೆ ಆದರ್ಶವ್ಯಕ್ತಿಯಾಗಿ, ರಾಜನಾಗಿ ಕಂಡುಬಂದರೆ; ಗಾಂಧೀಜಿಗೆ ಶ್ರೀರಾಮನು ಮಹಾತ್ಯಾಗಿ, ಸುಧಾರಕ, ದೇವರಾಗಿ ಕಂಡುಬಂದಿರುತ್ತಾನೆ. ಗಾಂಧೀಜಿ ಕೊನೆಯವರೆಗೂ ದಿನಕ್ಕೆರಡು ಭಾರಿ ರಾಮನಾಮ ಪಠಿಸುತ್ತಿದ್ದರು. ಇಂದಿನ ಬಲಪಂಥೀಯ ಸಂಘಟನೆಗಳು ರಾಮನನ್ನು ತಮ್ಮ ಆದರ್ಶದ ಸಂಕೇತವಾಗಿ ಬಳಸಿಕೊಂಡಿರುವುದು, ಜಾತಿ, ಧರ್ಮ, ದೇಶಕ್ಕೆ ಸೀಮಿತಗೊಳಿಸಿಕೊಂಡಿರುವುದು ಚರ್ಚಾಸ್ಪದ. ಅಲಕ್ಷಿತ ಬುಡಕಟ್ಟುಗಳಿಗೆ ರಾಮ ಸೀತೆ ಇಂದಿಗೂ ದೇವತೆಗಳೇ. ಸಂತಾಲ, ಬಿಲ್ಲ, ಬೇಡ ಮತ್ತು ಚೆಂಚು ಮೊದಲಾದವರು ಇವನರನು ಪೂಜಿಸುವುದುಂಟು. ಇಂದು ಪುರೋಹಿತಶಾಹಿ, ಉನ್ನತವರ್ಗವು ವಾಲ್ಮೀಕಿಯನ್ನು ಶ್ರೀರಾಮನನ್ನು ತಮಗಿಷ್ಟ ಬಂದಂಥೆ ಚಿತ್ರಿಸಿಕೊಂಡಿದ್ದಾರೆ. ಆದರೂ ಅಖಂಡ ಭಾರತಕ್ಕೊಂದು ವಾಲ್ಮೀಕಿ ರಾಮಾಯಣ ಇದೆ ಎಂದು ಸಂತೋಷಪಟ್ಟರು. ಜಾತಿ, ಧರ್ಮದ ಹಿನ್ನೆಲೆಯಲ್ಲಿ ಸಹಸ್ರಾರು ರಾಮಾಯಣಗಳೂ ಹುಟ್ಟಿಕೊಂಡಿವೆ. ಇವುಗಳ ಪರಿಷ್ಕರಣೆ, ಏಕ – ಭಿನ್ನ ಪಾಠಗಳು ದಾರಿ ತಪ್ಪಿಸುವುದುಂಟು, ಚೀನಾ, ಜಪಾನ್, ಮಲ್ಲೆಷಿಯಗಳಲ್ಲಿಯೂ ರಾಮಾಯಣದ ಬಗ್ಗೆ ವಿಭಿನ್ನ ಕಥೆಗಳಿವೆ.

ರಾಮಸೇತು

ರಾಮೇಶ್ವರ ತಮೀಳುನಾಡಿನ ಪ್ರಸಿದ್ದ ಯಾತ್ರ ಸ್ಥಳ. ಶ್ರೀರಾಮಚಂದ್ರ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿದ್ದನಂತೆ. ಅಂದಿನಿಂದ ರಾ,ಮಾಥೇಶ್ವರ ಬೃಹತ್ ದೇವಾಲಯ ಜಗತ್ಪ್ರಸಿದ್ಧಿಯಾಯಿತೆಂಬ ನಂಬಿಕೆ ಇದೆ. ರಾಮಸೇತುವು ಭಾರತ ಮತ್ತು ಶ್ರೀಲಂಕಾವನ್ನು ಕೂಡಿಸುವ ಸೇತುವೆ. ಇದನ್ನು ರಾಮ ಕಟ್ಟಿಸಿದ್ದನೆಂದು ಹೇಳಲಾಗುತ್ತದೆ. ರಾಮಸೇತು ಇಂದು ದೊಡ್ಡ ವಿವಾದವಾಗಿದೆ. ಸರ್ಕಾರ ಇದನ್ನು ನಾಶಪಡಿಸಲು ಮುಂದಾದಾಗ ಅದು ಚಾರಿತ್ರಿಕ ಸ್ಮಾರಕವಿದ್ದಂತೆ ಎಂದು ಬಲಪಂಥೀಯರು ವಿರೋಧಿಸಿದ್ದಾರೆ.

ವಾಲ್ಮೀಕಿ ಸೃಷ್ಟಿಸಿದ ನೆಲೆಗಳು

ಕರ್ನಾಟಕದ ಗೋಕರ್ಣವು (ಉತ್ತರ ಕನ್ನಡ ಜಿ. ಕುಮಟಾ ತಾ.) ರಾವಣ ಈಶ್ವರ ಲಿಂಗವನ್ನು ತಪಸ್ಸು ಮಾಡಿ ಆತ್ಮಲಿಂಗವನ್ನು ಪಡೆದುಕೊಂಡ ಕ್ಷೇತ್ರ ಹಂಪೆಯು ಕಿಷ್ಕಿಂಧಾ ಕ್ಷೇತ್ರ ವಾನರರು ನೆಲೆಸಿದ ತಾಣ. ಶಬರಿ, ವಾಲಿ – ಸುಗ್ರೀವರು ಮತ್ತು ಹನುಮಂತನು ನೆಲೆಸಿದ್ದು ಇಲ್ಲಿಯೇ. ಮಾತಂಗ, ಮಾಲ್ಯವಂತ, ಋಷ್ಯಮೂಕ, ಅಂಜನಾದ್ರಿ ಅನೆಗೊಂದಿ ಮತ್ತು ತುಂಗಭದ್ರಾ ನೆಲೆಗಳು ಪಂಪ ಕ್ಷೇತ್ರದ ಮಡಿಲಲ್ಲಿವೆ. ಕಿಷ್ಕಿಂಧಾ ಕಾಂಡದಲ್ಲಿ ಶಬರಿ ಹಂಪಿಯವಳು. ಕೋಲಾರದ ಅವನಿ ಬೆಟ್ಟಗಳು ವಾಲ್ಮೀಕಿ ತಪಸ್ಸು ಮಾಡಿದ ಕ್ಷೇತ್ರವೆಂದು ಇಂದು ಪ್ರಸಿದ್ಧಿಯಾಗಿದೆ. ಹೀಗೆ ಕರ್ನಾಟಕವಲ್ಲದೆ ನೆರೆಯ ಆಂಧ್ರದಲ್ಲಿಯೂ. ಇತರ ರಾಜ್ಯಗಳಲ್ಲೂ ರಾಮಾಯಣದ ಕುರುಹುಗಳೂ ಸಂಕೇತಿಸುತ್ತಾರೆ. ತಾಮಸ ನದಿ ಮತ್ತು ಚಿತ್ರಕೂಟವು ಕಿರಾತ, ವ್ಯಾದ, ಶಬರ, ಪುಳಿಂದ, ವಾಲ್ಮೀಕಿ ಸಮುದಾಯಕ್ಕೆ ಪವಿತ್ರ ಸ್ಥಳಗಳಾಗಿವೆ. ವಾಲ್ಮೀಕಿ ತಪಸ್ಸು ಮಾಡಿದ್ದು ತಾಮಾಸಾ ನದಿ ದಂಡೆಯ ಮೇಲೆ, ಚಿತ್ರಕೂಟವು ಮಥುರ ಪರಿಸರದಲ್ಲಿದೆ. ಬ್ರಹ್ಮವರ್ತದಲ್ಲಿ ವಾಲ್ಮೀಕಿ ಆಶ್ರಮವಿದೆ. ಲವ – ಕುಶನಗರದ ವಿಠೂರ (ಬ್ರಾಹ್ಮವರ್ತ) ಕಾನ್ಪೂರ (ಉತ್ತರ ಪ್ರದೇಶ) ದಿಂದ ೩೦ ಕಿ.ಮೀ. ದೂರದಲ್ಲಿದೆ. ಮಹರ್ಷಿ ವಾಲ್ಮೀಕಿಯವರ ತೃತೀಯ ಶಿಷ್ಟ ಕತ್ಯಾಯನ ಋಷಿಯವರ ಕಲ್ಯಾಣಪುರ ಬ್ರಹ್ಮವರ್ತದಿಂದ ಲವಕುಶನಗರದ ವಿಠೂರದಲ್ಲೊಂದು ವಾಲ್ಮೀಕಿ ಆಶ್ರಮವಿದೆ. ಹೀಗೆ ಉತ್ತರದಲ್ಲಿ ತಲಸೀದಾಸ ರಾಮಾಯಣವನ್ನು ಜನಪ್ರಿಯಗೊಳಿಸಿದರೆ, ಮಹಾರಷ್ಟ್ರದಲ್ಲಿ ಸಂತರಾಮದಾಸ ಮಾಡುತ್ತಾನೆ. ಮಹಾರಾಷ್ಟ್ರದ ಹಳ್ಳಿಗಳಲ್ಲಿ ರಾಮ, ಸೀತೆ, ಹುಮಂತನ ದೇವಾಲಯ ಮೂರ್ತಿಗಳಿವೆ. ಹೀಗಾಗಿ ವಾಲ್ಮೀಕಿಗೆ ಋಷಿ, ಭಗವಾನ್ ಎಂದು ಕರೆದಿದ್ದಾರೆ. ರಾಮಾಯಣವನ್ನು ಮಹಾಕಾವ್ಯವಾಗಿ ಒಪ್ಪಿಕೊಂಡು ಭಾರತವು ಈ ಮೂಲಕ ರಾಮರಾಜ್ಯ, ಸರ್ವೋದಯಕ್ಕೆ ನಾಂದಿ ಹಾಡಿತು. ಅಷ್ಟೇ ಅಲ್ಲದೆ ಇದನ್ನು ನಾನು ಬಗೆಯಾಗಿ ವಿಂಗಡಿಸಿಕೊಂಡು ಅರ್ಥೈಸುವ ಅಗತ್ಯವಿದೆ. ಇದು ಚರಿತ್ರೆ ವಿಜ್ಞಾನವಲ್ಲದೆ ವಿಶ್ವಕೋಶವಾಗಿದೆ. ಅಖಂಡ ಭಾರತ ದರ್ಶನ, ಐಕ್ಯತೆ, ಸಮಗ್ರತೆಯನ್ನು ಇಲ್ಲಿ ಕಾಣಬಹುದು.

ವಾಲ್ಮೀಕಿ ರಾಮಾಯಣದಲ್ಲಿ ಸಮಾಜವಾದಿ ಧೋರಣೆ, ದೇಶಿಯ ಜನಜೀವನದ ಬದುಕು ನಿರೂಪಿತಗೊಂಡಿರುವುದನ್ನು ದೇಶೀಯ ಮತ್ತು ಪಶ್ಚಾತ್ಯ ವಿದ್ವಾಂಸರು ವಿಶ್ಲೇಷಿಸಿದ್ದಾರೆ. ಇದರಲ್ಲಿ ಶ್ಲೋಕ, ಸರ್ಗ ಮತ್ತು ಕಾಂಡಗಳು ಕಥೆಯನ್ನು ಇಬ್ಬಾಗಿಸುತ್ತವೆ (ಬಾಲಕಾಂಡ, ಯುದ್ಧಕಾಂಡ, ಉತ್ರಕಾಂಡ, ಕಿಷ್ಕಿಂಧಾ ಕಾಂಡ, ಸುಂದರಕಾಂಡ, ಅಯೋಧ್ಯಕಾಂಡ). ವಾಲ್ಮೀಕಿ ರಾಮಾಯಣದಲ್ಲಿ ಶಾಪ ಮತ್ತು ವರಗಳ (೬೧+೮೨) ಚಿತ್ರಣ ವ್ಯಾಪಕವಾಗಿದೆ. ರಾಮಾಯಣ ಮತ್ತು ಸಮಕಾಲೀನ ಜನಜೀವನಕ್ಕೆ ವಾಲಿಯ ವಧೆ, ಸೀತಾ ತ್ಯಾಗಗಳು ಸ್ಪಂದಿಸುವುದಿಲ್ಲ. ಲೌಕಿಕ ಮತ್ತು ಅಲೌಕಿ ಸಂಗತಿಗಳೆರಡು ಇಲ್ಲಿ ಮಹತ್ವದ ಪಾತ್ರ ವಹಿಸಿವೆ. ಶಪತ, ಸತ್ಯಕ್ರಿಯೆ, ಆಶೀರ್ವಾದ, ಹರಕೆ, ಆಕಾಶವಾಣಿ, ಪುಷ್ಪವೃಷ್ಟಿ ಮೊದಲಾದ ವಿವರಗಳು ಮುಖ್ಯವಾಗಿವೆ. ರಾಮಾಯಣ ಮಾನವನ ಬದುಕಿನ ಕಥೆ ಹೊರತು ದೇವರ ಕಥೆಯಲ್ಲ. ರಾಮಾಯಣ, ಮಾನವನು ಮಾನವನಾಗಿ ಬಾಳಲು ಸೋಪಾನವಾದುದು ಹೆಣ್ಣಿನ ಬಗ್ಗೆ ವಾಲ್ಮೀಕಿಯ ಅನುಕಂಪ, ಪಾತಿವ್ರತ್ಯ, ಪರದಾಟ, ಹೋರಾಟ, ಆದರ್ಶ ಬದುಕು ಇಂದಿಗೂ ಅನುಕರಣೀಯ. ಬೇಟೆಗಾರನಾದ ವಾಲ್ಮೀಕಿ ಮತ್ತು ರಾಮಾಯಣಕ್ಕೆ ಒಂದು ತಿರುವು ಸಿಗುವುದು ಬಂಗಾರದ ಜಿಂಕೆಯಿಂದ. ಈ ದೇಶಕ್ಕೆ ಮತ್ತು ವಾಲ್ಮೀಕಿ ಸಮುದಾಯಕ್ಕೆ ಕೊಟ್ಟ ಕೊಡುಗೆ ರಾಮಾಯಣವೆಂದರೂ ಈ ಜಗತ್ತಿನ ಮಹಾಕಾವ್ಯಗಳ ಸಾಲಿಗೆ ಸರಿಸಾಟಿಯಾಗಿ ನಿಲ್ಲುವಂಥಾದ್ದಾಗಿದೆ. ರಾಮಯಣ ಅಥವಾ ಆನಂತರ ಕಾಲದಲ್ಲಿ ವಾಲ್ಮೀಕಿ ಭಾರತೀಯ ಸಂಸ್ಕೃತಿ ಜೀವನಾದರ್ಶನಗಳ ನೈಜ ಚಿತ್ರಣವನ್ನು ರಾಮಾಯಣದಲ್ಲಿ ವಿವರಿಸಿದ್ದಾನೆ. ಈ ಜನಸಮುದಾಯದ ಹೆಗ್ಗಳಿಕೆಯೆಂದರೆ, ಬ್ರಹ್ಮದೇವನ ವರದಿಂದ ರಾಮನು ಹುಟ್ಟುವ ಮೊದಲೇ ಆತನ ಚರಿತ್ರೆಯನ್ನು ಬರೆದವನು ವಾಲ್ಮೀಕಿ ಎಂಧು ಹೇಳುತ್ತಾರೆ. ನಿಜಕ್ಕೂ ವಾಲ್ಮೀಕಿ ಒಂದು ಸಮುದಾಯಕ್ಕಲ್ಲದೆ ಇಡೀ ದೇಶಕ್ಕೆ ಮಾದರಿಯಾಗಿದ್ದಾನೆ. ಅವರನ್ನು ದೇವರೆಂದು, ಋಷಿ ಮುನಿ ಎಂದು ಪೂಜಿಸಿ, ಪ್ರತಿ ವರ್ಷ ಸೀಗೆ ಹುಣ್ಣಿಮೆ ದಿನ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಸಾರ್ವಜನಿಕ ಹಬ್ಬವಾಗಿ ಆಚರಿಸಲು ಮತ್ತು ಆ ದಿನವನ್ನು ಸರ್ಕಾರಿ ರಜೆಯನ್ನಾಗಿ ಘೋಷಿಸಿದೆ.