ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠವು ಕರ್ನಾಟಕದ ಪ್ರತಿಯೊಂದು ಹಳ್ಳಿಯಲ್ಲಿಯೂ ವಿಚಾರ ಸಂಕಿರಣವನ್ನು ಆಯೋಜಿಸುವುದರ ಮೂಲಕ ಅಲ್ಲಿನ ಸಂಸ್ಕೃತಿ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸ್ಥಿತಿಗತಿಗಳನ್ನು ಸಂಗ್ರಹಿಸುವಂಥ ಮಹತ್ತರವಾದ ಕೆಲಸವನ್ನು ನಿರ್ವಹಿಸುತ್ತಾ ಬಂದಿದೆ. ಕರ್ನಾಟಕದ ಪ್ರತಿ ಹಳ್ಳಿಗಳಿಗಷ್ಟೇ ಸೀಮಿತಗೊಳಿಸದೇ ಕರ್ನಾಟಕ ಮಹಾರಾಷ್ಟ್ರ ಗಡಿಯ ಅಥಣಿಯಲ್ಲಿ ಮೂರು ದಿನಗಳ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ತಳ ಸಮುದಾಯದ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ, ಒಟ್ಟಾರೆಯಾಗಿ ಅವರ ಜೀವನದ ಸ್ಥಿತಿಗತಿಗಳನ್ನು ಸಂಗ್ರಹಿಸಿ, ಅವರ ಕಷ್ಟ, ಸುಖ, ದುಃಖ ದುಮ್ಮಾನಗಳನ್ನು ಇಡೀ ಸಮಾಜಕ್ಕೆ, ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಒಂದು ಕಿರು ಪ್ರಯತ್ನವಷ್ಟೇ ಈ ತಳ ಸಮುದಾಯದವರ ಐತಿಹಾಸಿಕ ಚರಿತ್ರೆ, ಅನನ್ಯವಾದ ಜನಪದ ಸಂಸ್ಕೃತಿಯನ್ನು ನಾಗರಿಕ ಪ್ರಪಂಚಕ್ಕೆ ಪರಿಚಯಿಸಿ, ಅದರಲ್ಲೂ ಆತ್ಮಾಭಿಮಾನದ ಬದುಕನ್ನು ರೂಪಿಸಿಕೊಳ್ಳುವಂಥ, ಧೈರ್ಯ ತುಂಬುವ ಕಾರ‌್ಯ ಮಾಡುತ್ತಿ ರುವುದು ಸರಿಯಷ್ಟೇ. ಅದರಲ್ಲೂ ಗಡಿ ಭಾಗದಲ್ಲಿ ಚದುರಿ ಹೋಗಿರುವ ವಾಲ್ಮೀಕಿ ಸಮುದಾಯದ ಬಗೆಗೆ ಸ್ಥಳೀಯ ವಿದ್ವಾಂಸರುಗಳಿಂದಲೇ ಮಾಹಿತಿ ಸಂಗ್ರಹಿಸಿ, ವಿಶ್ಲೇಷಣೆಗೆ ಒಳಪಡಿಸುತ್ತಿರುವುದು ನಿಜಕ್ಕೂ ಇದೊಂದು ಸಮಾಜಮುಖಿಯಾದ ಕಾರ್ಯವೆನ್ನಬಹುದು.

ಭಾಷೆ, ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ. ತಾನು ವಾಸಿಸುವ ನಾಡಿನ ಬಗ್ಗೆ, ಆಡುವ ಭಾಷೆಯ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಮೂಡುತ್ತದೆ. ನನ್ನ ಮಾತೃಭೂಮಿ, ಮಾತೃಭಾಷೆಯ ಬಗ್ಗೆ ಎಷ್ಟೇ ಅಭಿಮಾನ ಹೊಂದಿದ್ದರೂ ಬೇರೆಯವರ ಭಾಷೆ, ಆಚಾರ, ವಿಚಾರ, ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಅವರೊಡನೆ ಸುಮಧುರವಾದ ಬಾಂಧವ್ಯವನ್ನು ಹೊಂದಬೇಕಾದ ಅವಶ್ಯಕತೆ ಇಂದು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿಯೇ ಗಡಿನಾಡು ಅಥಣಿ ಪರಿಸರದ ಜೀವನವು ಮಹಾರಾಷ್ಟ್ರ ಜನರ ಜೀವನದೊಡೆನೆ ಬೆರೆತು ಒಂದಾಗಿದೆ. ಇಲ್ಲಿಯ ಅನೇಕ ಅಕ್ಕತಂಗಿಯರು ಮಹಾರಾಷ್ಟ್ರದ ಸೊಸೆಯರಾಗಿ ಹಾಗೂ ಅಲ್ಲಿಯ ಹೆಣ್ಣುಮಕ್ಕಳು ಕನ್ನಡನಾಡಿನ ಮಗಳಾಗಿ ಬಂದು ತಮ್ಮ ಸಂಸ್ಕೃತಿ, ಪರಂಪರೆಯ ಏಕತೆಗೆ ಸಾಕ್ಷಿಯಾಗಿದ್ದಾರೆ. ಜಯದೇವಿತಾಯಿ ಲಿಗಾಡೆಯವರ ಮನೆಯ ಭಾಷೆಯು ಮರಾಠಿಯಾದರೂ, ಅವರ ಕನ್ನಡ ಪ್ರೇಮ ನಮಗೆಲ್ಲರಿಗೂ ಮಾದರಿ ಎನ್ನಲೇಬೇಕು. ಇಲ್ಲಿ ಇದನ್ನು ಪ್ರಸ್ತಾಪಿಸಲು ಕಾರಣವೇನೆಂದರೆ ಅಥಣಿ ಪರಿಸರದಲ್ಲಿರುವ ವಾಲ್ಮೀಕಿ ಸಮುದಾಯದವರ ಕುರಿತ ಅಧ್ಯಯನ ಮಾಡಿದರೂ, ಆ ಪರಿಸರದಲ್ಲಿ ಬದುಕನ್ನು ಸಾಗಿಸುತ್ತಿರುವ ಇನ್ನಿತರ ಸಮುದಾಯಗಳ ಬಗೆಗೂ ಅಧ್ಯಯನ ಮಾಡಲಾಗಿದೆ. ಪ್ರಸ್ತುತ ವಿಚಾರ ಸಂಕಿರಣದಲ್ಲಿ ೨೭ ಲೇಖನಗಳನ್ನು ಮಂಡಿಸಲಾಯಿತು. ಮೊದಲ ೧೨ ಲೇಖನಗಳು ಅಥಣಿ ಪರಿಸರದ ಚಾರಿತ್ರಿಕ ಅಂಶಗಳು, ಸ್ಥಳನಾಮ, ಐತಿಹ್ಯ, ಧಾರ್ಮಿಕ, ರಾಜಕಿಯ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿಗಳ ಬಗ್ಗೆ ಹಾಗೂ ಜನಪದಕಲೆ, ಜಾನಪದೀಯ ನೆಲೆಗಳ ವಿವೇಚನೆ ನಡೆಸಲಾಯಿತು. ಆ ಮೂಲಕ ಅಥಣಿ ಪರಿಸರದ ವಿವಿಧ ಸಮುದಾಯಗಳ ಸ್ಥಿತಿ-ಗತಿಗಳ ಬಗ್ಗೆ, ಸಾಂಸ್ಕೃತಿಕ ಅನನ್ಯತೆಯ ಬಗ್ಗೆ ಗುರುತಿಸುವ ಪ್ರಯತ್ನವನ್ನೂ ಮಾಡ ಲಾಗಿದೆ. ಇದರಿಂದ ವಾಲ್ಮೀಕಿ ಸಮಮುದಾಯದವರು ಸಮಾಜದ ಇತರ ಸಮುದಾಯ ಗಳೊಡನೆ ಇರುವ ಸಾಮರಸ್ಯ, ಬಾಂಧವ್ಯ ಮತ್ತು ಒಡನಾಟದ ಅಂಶಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿತ್ತು. ಇನ್ನು ಉಳಿದ ಲೇಖನಗಳು ತಳಸಮುದಾಯವಾದ ವಾಲ್ಮೀಕಿ ಸಮುದಾಯದ ಅನನ್ಯತೆ, ಆಚರಣೆ, ನಂಬಿಕೆ, ವಿಧಿ, ನಿಷೇಧ, ಅವರ ಸ್ಥಿತಿ-ಗತಿಯ ಬಗ್ಗೆ ಅಧ್ಯಯನ ಮಾಡಲಾಗಿದೆ.

ಕರ್ನಾಟಕದ ಬಹುಭಾಗದಲ್ಲಿ ವಾಲ್ಮೀಕಿ ಜನಾಂಗದವರು ವಾಸಿಸುತ್ತಾ ಬಂದಿದ್ದು, ಈ ಪರಿಸರದಲ್ಲಿ ವಾಲ್ಮೀಕಿ ಸಮುದಾಯವು ಬಹಳ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತಿದ್ದು ಹರಿದು ಹಂಚಿ ಹೋಗಿದ್ದಾರೆ. ವಾಲ್ಮೀಕಿಗಳು, ಬೇಡರು, ನಾಯಕರು, ಪುಳಿಂದರು ಮೊದಲಾದ ಹೆಸರುಗಳಿಂದ ಗುರುತಿಸಲ್ಪಡುತ್ತಿರುವ ಬೇಡರು ಮೂಲತಃ ಕಾಡಿನಲ್ಲಿ ವಾಸಿಸುವತ್ತಿದ್ದ ರಾದರೂ ನಾಡಿನ ಪ್ರಭಾವಕ್ಕೆ ಒಳಗಾಗುತ್ತಾ ಬಂದರು. ಆಗ ಕೆಲವು ಗುಂಪುಗಳು ಊರುಗಳಲ್ಲಿ ನೆಲೆಸಿದರು. ಊರಿನ ಇತರೆ ಸಮುದಾಯಗಳ ಸಾಂಸ್ಕೃತಿಕ ವಾಹಿನಿಯಲ್ಲಿ ಬೆರೆತರು. ಜೀವನೋಪಾಯಕ್ಕಾಗಿ ಹಲವು ವೃತ್ತಿಗಳನ್ನು ಕೈಗೊಂಡರೂ ತಮ್ಮ ಮೂಲ ಸಂಸ್ಕೃತಿಯ ನೆನಪುಗಳನ್ನು ಆಚರಣೆಗಳಲ್ಲಿ ಉಳಿಸಿಕೊಂಡು ಬಂದಿದ್ದಾರೆ. ತಮ್ಮ ಹೊಟ್ಟೆಯನ್ನು ಹೊರೆಯುವುದಕ್ಕಾಗಿ ನಾಗರಿಕ ಜಗತ್ತಿನೊಂದಿಗೆ ತಮ್ಮನ್ನು ಗುರುತಿಸಿಕೊಂಡರೂ, ಅವರ ಸಂಸ್ಕೃತಿಯ ಮೂಲ ಬೇರುಗಳು ಆಳವಾಗಿ ಬೇರು ಬಿಟ್ಟಿರುತ್ತವೆ. ಆ ಮೂಲ ಬೇರುಗಳ ಹುಡುಕಾಟ ಮಾಡಿ, ಒಂದೇ ಸಮುದಾಯಗಳಲ್ಲಿನ ಒಳಪಂಗಡಗಳನ್ನು ಒಗ್ಗೂಡಿಸಿ ಪುನರಾವಲೋಕನ ಮಾಡಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆ ಪ್ರಸ್ತುತ ಸಂದರ್ಭದಲ್ಲಿ ಇದೆ. ಈ ಆಧುನಿಕ ಸಂದರ್ಭದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕಾದರೆ ತನ್ನ ಭವ್ಯ ಪರಂಪರೆಯ, ಶ್ರೀಮಂತ ಸಂಸ್ಕೃತಿಯನ್ನು, ಉನ್ನತವಾದ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ಬಾಳಿ ಬದುಕಿದ ಹಾಗೂ ಕಾರ‌್ಯ, ಸಾಹಸಗಳಿಂದ ಹೆಸರಾದ ಕುಮಾರ-ರಾಮ, ವೀರಮದಕರಿನಾಯಕ, ಸುರಪುರದ ವೆಂಕಟಪ್ಪನಾಯಕ, ಇದೇ ಪರಿಸರದ ಸಂಗೊಳ್ಳಿರಾಯಣ್ಣ, ಸಾಂಸ್ಕೃತಿಕ ನಾಯಕರುಗಳಾದ ಮಹರ್ಷಿ ವಾಲ್ಮೀಕಿ, ಶಬರಿ, ಬೇಡರ ಕಣ್ಣಪ್ಪ, ಏಕಲವ್ಯ ಇವರ ಆದರ್ಶಪ್ರಾಯವಾದ ವ್ಯಕ್ತಿತ್ವ ತಿಲಕಪ್ರಯವಾಗಿದೆ

ವಾಲ್ಮೀಕಿ ಸಮುದಾಯಗಳಲ್ಲಿ ಹಲವಾರು ನಂಬಿಕೆ, ವಿಧಿ ನಿಷೇಧಗಳು ಮತ್ತು ನ್ಯಾಯ ಪದ್ಧತಿಗಳು ಅಸ್ತಿತ್ವದಲ್ಲಿದ್ದವು. ಈಗ ಬಹುತೇಖ ಪದ್ಧತಿ, ನಂಬಿಕೆಗಳು ಈ ಆಧುನಿಕತೆಯ ಜಾಗತೀಕರಣದ ಪ್ರಭಾವಕ್ಕೆ ಸಿಕ್ಕಿ ಕಣ್ಮರೆಯಾಗುತ್ತಿವೆ. ಗ್ರಾಮಗಳ ಸಾಮರಸ್ಯ, ಮಾನವೀಯತೆ, ಅಂತಃಕರಣ ಮತ್ತು ಸಮಾನತೆಯ ಮೌಲ್ಯಗಳು ಇಲ್ಲವಾಗುತ್ತಾ ದಿನನಿತ್ಯದ ಬದುಕಿನಲ್ಲಿ ಆತಂಕ ತಲ್ಲಣಗಳನ್ನು ತಂದೊಡ್ಡಿವೆ. ಹಿರಿಯರು ನೀಡಿದ ಸಲಹೆ, ಹಿತನುಡಿಗಳಿಗೆ ಆಧುನಿಕ ಯುವಕರು ಮೂಗು ಮುರಿಯುತ್ತಿದ್ದಾರೆ. ಕುಡಿತ, ಮಟಕಾಗಳಿಂದ ಹಳ್ಳಿಗಳು ನಾಶದ ಅಂಚಿನಲ್ಲಿ ಸಾಗುತ್ತಿವೆ. ಇಂಥ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಜಾನಪದ ನೆಲೆಯಲ್ಲಿ ಕಂಡುಬರುವ ಕ್ರೀಡೆ, ಸಂಸ್ಕೃತಿ, ನಂಬಿಕೆ, ನಿಯಮ, ವಿಧಿ ನಿಷೇಧಗಳಿಗೆ ತಮ್ಮನ್ನು ತೆರೆದುಕೊಂಡು ಪುನರುಜ್ಜೀವನಗೊಳಿಸಬೇಕಾಗಿದೆ. ಹಳ್ಳಿಗಳು ಇಲ್ಲದಿದ್ದರೆ ಸಮಸ್ಯೆಗಳ ಸರಮಾಲೆಗೆ ಎದುರಾಗಿ ಬದುಕು ದುಸ್ತರ ಆಗುತ್ತದೆ. ಜನಪದ ಆಟಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜದೊಳಗಿನ ಏರುಪೇರುಗಳನ್ನು ಸರಿಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಗ್ರಾಮೀಣ ಪರಿಸರದ ಆಟಗಳು ಮನುಷ್ಯನ ಮಾನಸಿಕ ಬೆಳವಣಿಗೆ, ಆಂತರಿಕ ವಿಕಾಸಕ್ಕೆ ಕಾರಣವಾಗುತ್ತವೆ. ಜೊತೆಗೆ ಸ್ಪರ್ಧಾ ಮನೋಭಾವ ಜಾಗೃತಗೊಳ್ಳಲು ನೆರವಾಗುತ್ತವೆ ಎನ್ನುವುದನ್ನು ಮರೆಯುವಂತಿಲ್ಲ. ಆದರೂ ವಾಲ್ಮೀಕಿ ಸಮುದಾಯದ ಜನ-ಜೀವನ ನಿರ್ವಹಣೆ ದುಸ್ಥಿತಿಯಲ್ಲಿದೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಗ್ರಾಮೀಣ ಪರಿಸರದಲ್ಲಿರುವ ಈ ಸಮುದಾಯದ ವಾಸ್ತವಿಕ ಸಮಸ್ಯೆಗಳನ್ನು ಚರ್ಚೆಗೊಳಪಡಿಸಿ ಪರಿಹಾರದ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಸಮುದಾಯದವರು ವಿಶೇಷವಾಗಿ ಬಡತನ, ಹಸಿವು, ನಿರ್ವಸತೀಕರಣ, ಶೈಕ್ಷಣಿಕ ಹಿಂದುಳಿಯುವಿಕೆ, ನಿರುದ್ಯೋಗ, ರಾಜಕೀಯ ಜ್ಞಾನದ ಕೊರತೆಯಿಂದ ಭಾದಿಸುತ್ತಿದ್ದಾರೆ. ಇವೆಲ್ಲದರಿಂದ ವಿಮುಕ್ತಿಯನ್ನು ಪಡೆಯಲು ಸಂಘಟನಾತ್ಮಕ ಹೋರಾಟ ಅವಶ್ಯ. ಆದರೆ ಸಂಘಟನಾತ್ಮಕ ಹೋರಾಟವಾಗಲೀ, ಸಂವಿಧಾನಬದ್ಧವಾಗಿರುವ ಹಕ್ಕೊತ್ತಾಯಕ್ಕಾಗಲಿ ಪ್ರಭಾವಿಯುತವಾಗಿ, ಪರಿಣಾಮಕಾರಿಯಾಗಿ ಹೋರಾಡಲು ಸಾಧ್ಯವಾಗುತ್ತಿಲ್ಲ. ಕಾರಣ ವಿದ್ಯಾವಂತರ, ಪ್ರಜ್ಞಾವಂತರ ಸಂಖ್ಯೆ ಕಡಿಮೆ. ಬೆರಳೆಣಿಕೆಯ ವಿದ್ಯಾವಂತರು ಇದ್ದರೂ ತನ್ನ ಸಮುದಾಯದಲ್ಲಿ ಗುರುತಿಸಿಕೊಳ್ಳದೆ, ಇಲ್ಲವೇ ನಾವು ಮುಂದುವರೆದಿದ್ದೇವೆ ಸಾಕು ಎಂಬ ಧೋರಣೆಯೇ ಮನೆ ಮಾಡಿದೆ. ಈಗಾಗಲೇ ಸಮುದಾಯದವರಿಗಾಗಿರುವ ಅನ್ಯಾಯವನ್ನು ಪ್ರತಿಭಟಿಸಿ ನಮ್ಮನ್ನು ನಾವು ಸಜ್ಜುಗೊಳಿಸ ಬೇಕಾಗಿದೆ. ಆಧುನಿಕ ಸಂಸ್ಕೃತಿಯ ಈ ದಿನಮಾನಗಳಲ್ಲಿ ನಮ್ಮ ಸಮುದಾಯದ ಬದುಕನ್ನು ಸಂರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಪ್ರಸ್ತುತವಾಗಿ ಸಮಾಜದಲ್ಲಿ ಯಾಗಲೀ, ಸರ್ಕಾರದಲ್ಲಿ ಆಗಲಿ ನಮ್ಮ ಒಂಟಿ ಧ್ವನಿಯನ್ನು ಆಲಿಸುವರೇ ಇಲ್ಲದಂತಾಗಿದೆ. ಕಾರಣ ರಾಜಕೀಯ ನಿರ್ಣಾಯಕ ಶಕ್ತಿಯಾಗಿ ಹೊರ ಹೊಮ್ಮಲು ಮತ್ತು ಪ್ರಬಲವಾದ ಯಾವುದೇ ಪರಿಣಾಮಕಾರಿಯಾದ ಸಂಘಟನೆ ಇಲ್ಲದಿರುವುದೇ ಆಗಿದೆ. ಆದ್ದರಿಂದ ಯಾವ ರಾಜಕೀಯ ನಾಯಕರೂ ನಮ್ಮ ಕಡೆ ಗಮನ ಹರಿಸಿಯೇ ಇಲ್ಲ. ಕೇವಲ ನಮ್ಮಗಳ ಮಾತು ಅರಣ್ಯರೋಧನವಾಗಿದೆ. ಸಮುದಾಯ ದವರೆಲ್ಲ ಒಂದೇ ಛತ್ರಿಯಡಿಯಲ್ಲಿ ಬೆರೆತು ರಾಜಕೀಯ ನಿರ್ಣಾಯಕ ಶಕ್ತಿಯಾಗಿ ಮಾರ್ಪಾಡುವ ಅಗತ್ಯತೆ ಈಗ ತುಂಬಾ ಇದೆ.

ಸಮುದಾಯವು ಶೈಕ್ಷಣಿಕವಾಗಿ ತುಂಬ ಹಿಂದುಳಿದಿದೆ. ಹೀಗೆ ಹಿಂದುಳಿದಿರುವುದರಿಂದ ಸರ್ಕಾರದಿಂದ ಬರಬೇಕಾದ ಎಷ್ಟೋ ಯೋಜನೆಗಳು ಕೈ ತಪ್ಪುತ್ತಿವೆ. ನಮ್ಮ ಹಕ್ಕನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾದ ವಿದ್ಯಾವಂತ ಸಮೂಹದ ಅವಶ್ಯಕತೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಅಶಿಕ್ಷತರಾಗಿ ಬಡತನದ ಬದುಕನ್ನು ಸಾಗಿಸುತ್ತಿರುವ ಸಮುದಾಯದವರಿಗೆ ಸರ್ಕಾರವು ಕೈಗೊಂಡಿರುವ ಕೆಲವು ಯೋಜನೆಗಳಾದರೂ ಪ್ರಾಮಾಣಿಕವಾಗಿ ದೊರಕಿಸಿ ಕೊಳ್ಳಲು, ಯೋಜನೆಯ ಸದುಪಯೋಗ ಪಡೆಯಲು, ಸಮುದಾಯದವರನ್ನು ಜಾಗೃತಗೊಳಿಸಲು ಇಂಥ ವಿಚಾರ ಸಂಕಿರಣಗಳಿಂದ ಸಾಧ್ಯ ಎಂಬುದು ನನ್ನ ಅಭಿಮತ.

ಡಾ. ಮಂಜುನಾಥ ಬೇವಿನಕಟ್ಟಿ