ಪೀಠಿಕೆ

ಒಂದು ಪ್ರದೇಶದ ಶಿಕ್ಷಣದ ಸ್ಥಿತಿಗತಿಯನ್ನು ಅಧ್ಯಯನ ಮಾಡುವುದೆಂದರೆ ಸಂಪೂರ್ಣವಾದ ಮಾನವನ ಇತಿಹಾಸವನ್ನು ಅವಲೋಕನ ಮಾಡಬೇಕಾಗುತ್ತದೆ. ಯಾವಾಗ ಮಾನವನ ಶಿಕ್ಷಣ ಪ್ರಾರಂಭವಾಯಿತು ಎಂದು ಹೇಳುವುದು ಕಷ್ಟವಾಗುತ್ತದೆ. ಹಾಗೆಯೇ ಯಾವಾಗ ಮುಗಿಯಿತು ಎಂದು ನಿರ್ಧರಿಸಿ ಗೆರೆ ಎಳೆಯುವುದು ಅಸಾಧ್ಯ. ‘‘ಕಲಿಯುವುದೆಲ್ಲ ಮುಗಿದ ಮೇಲೆ ಏನಾದರೂ ಉಳಿದಿದ್ದರೆ ಅದು ಶಿಕ್ಷಣ’’ ಎಂದು ಐನ್‌ಸ್ಟೀನ ಹೇಳುವ ಮಾತು ಈ ಸಂದರ್ಭದಲ್ಲಿ ಮನನೀಯವಾದುದು.

ಅಥಣಿಯ ಗಮನೀಯತೆ ಸಂಶೋಧನೆಯಿಂದ ಇನ್ನೂ ಹೊರಹೊಮ್ಮಬೇಕಿದೆ. ಇತಿಹಾಸದ ಕಬಂಧ ಬಾಹುಗಳನ್ನು ಬಿಡಿಸಿ, ಅದರ ಅಂತರಂಗದಲ್ಲಿ ಹುದುಗಿದ ಗುಪ್ತ ಸೌಂದರ್ಯವನ್ನು ಹೊರಹೊಮ್ಮಿಸಬೇಕಿದೆ. ಅಥಣಿ, ಸಂಶೋಧಕನಿಗೆ ನಿಕ್ಷೇಪ, ಮುತ್ತುರತ್ನಗಳಿಂದ ತುಂಬಿದ ಅಗಾಧ ಗಣಿಯಾಗಿದೆ. ನಾನು ಇಲ್ಲಿ ನನ್ನ ಅಧ್ಯಯನದ ಅನುಕೂಲತೆಗಾಗಿ ಐದು ವಿಭಾಗ ಮಾಡಿಕೊಂಡು, ನನ್ನ ವಿಚಾರ ಅರಹಲು ಪ್ರಯತ್ನಿಸುತ್ತೇನೆ.

೧. ಪ್ರಾಚೀನ ಯುಗದಲ್ಲಿ ಶೈಕ್ಷಣಿಕ ಸ್ಥಿತಿಗತಿ

೨. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶೈಕ್ಷಣಿಕ ಸ್ಥಿತಿ

೩. ಮರಾಠಿ ಬೂಯಿಷ್ಠವಾದ ಶಿಕ್ಷಣ

೪. ಕನ್ನಡದಲ್ಲಿ ಶಿಕ್ಷಣ

೫. ಆಧುನಿಕ ಯುಗದಲ್ಲಿ ಶಿಕ್ಷಣ

ಪ್ರಾಚೀನ ಅಥಣಿಯಲ್ಲಿ ಶಿಕ್ಷಣ

ಅಸಹಾಯಕತೆಯೆಂದು ತುಳಿಯುತ್ತಾ ಬಂದ ಮಣ್ಣು ಒಂದು ದಿನ ಗೋಪುರವಾಗಿ ಮೆರೆಯುವುದು. ರುಬಾಯಿ

ಪ್ರಾಚೀನ ಅಥಣಿಯನ್ನು ಬಗೆಯುವುದು ಸುಲಭವಲ್ಲ. ಕನ್ನಡ ನಾಡಿನ ಇತಿಹಾಸದೊಂದಿಗೆ ಅಥಣಿ ಪರಿಸರದ ಚಾರಿತ್ರಿಕತೆಯೂ ಬೆಳೆದುಬಂದಿದೆ. ಬೆಟ್ಟ, ಕಾಡು ಹಳ್ಳ, ಕೊಳ್ಳ ಭೌಗೋಳಿಕ ಅಂಶಗಳೊಂದಿಗೆ ಮಾನವನ ಸಂಸ್ಕೃತಿ, ಶಿಕ್ಷಣ ಸಹ ಪ್ರಧಾನ ಪಾತ್ರವಹಿಸಿವೆ. ‘ಶಿಕ್ಷಣ ಜನಾಂಗದ ಇತಿಹಾಸವಾಗಿದೆ’ ಎಂಬುದು ಇಲ್ಲಿ ಸತ್ಯವಾಗಿದೆ.

೧. ಕಳಚೂರಿನ ಶಿಲಾಶಾಸನ

ಕ್ರಿ.ಶ.೧೧೧೫ ರಾಮತೀರ್ಥದ ಶಿಲಾಶಾಸನದಲ್ಲಿ, ರಾಮತೀರ್ಥದ ರಾಮೇಶ್ವರ ದೇವರ ಅರ್ಚಕನಾದ ಚಂದ್ರಭಾರಣ ಪಂಡಿತದೇವ, ಮುನಿಗಳ ಶ್ರೇಣಿಗಳ ಪ್ರಥಮಸ್ಥಾನದಲ್ಲಿ ಗುರುತಿಸಲಾಗುತ್ತಿತ್ತು. ಇವನು ವೇದಗಳ ಬಗ್ಗೆ ಅಪಾರ ಜ್ಞಾನ ಪಡೆದಿದ್ದ. ವೇದಗಳ ಬಗ್ಗೆ ತಿಳಿಸಲು ಪರದೇಶಕ್ಕೆ ಪ್ರಯಾಣ ಬೆಳೆಸಿದರ ಬಗ್ಗೆ ಉಲ್ಲೇಖ ಕಾಣುತ್ತೇವೆ.

೨. ವೇದ ಪಾಠಶಾಲೆ

ರಾಮತೀರ್ಥದ ರಾಮೇಶ್ವರ ದೇವಸ್ಥಾನದಲ್ಲಿ ‘ವೇದ ಪಾಠಶಾಲೆ’ ಇತ್ತು. ಸುಮಾರು ಒಂದು ನೂರು ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಿಂದ ಆಗಮಿಸಿ, ವೇದಾಧ್ಯಾಯನ ಮಾಡುತ್ತಿದ್ದರು. ಪಂಚಾಂಗ ರಚಿಸುವುದು ಹೇಗೆ ಎಂಬುವುದನ್ನು ಇಲ್ಲಿ ಹೇಳಿ ಕೊಡಲಾಗುತ್ತಿತ್ತು. ಅಥಣಿಯ ಗೋಪಾಳಾಚಾರ್ಯ ಬಳ್ಳಾರಿಯವರು ಆ ರೀತಿ ರಾಮತೀರ್ಥದಲ್ಲಿ ಅಧ್ಯಯನ ಮಾಡಿ, ಪಂಚಾಂಗ ಕರ್ತರಾಗಿ ಪ್ರಸಿದ್ದಿ ಪಡೆದರು.

ಕೊಕಟನೂರು, ಸತ್ತಿ, ಬಳ್ಳಿಗೇರಿ, ತೆಲಸಂಗಗಳು ಪ್ರಾಯಶಃ ಶೈವಪೀಠದ ಅಗ್ರಹಾರಗಳನ್ನು ಹೊಂದಿದ್ದು, ಅವುಗಳ ಉದ್ದೇಶ, ವೇದಾಧ್ಯಯನವಾಗಿರಬೇಕು ಎಂದು ಊಹಿಸಬಹುದಾಗಿದೆ.

೩. ತೆಲಸಂಗದ ಶಾಸನ

ಕ್ರಿ.ಶ.ಸುಮಾರು, ತೆಲಸಂಗದ ಶಿಲಾಶಾಸನದಲ್ಲಿ ೫೦೦ ಬ್ರಾಹ್ಮಣೋತ್ತರನ್ನು ಸನ್ಮಾನಿಸಿ, ಧವಸ, ಧಾನ್ಯಗಳನ್ನು ನೀಡಿದುದರ ಬಗ್ಗೆ ಉಲ್ಲೇಖವಿದೆ. ಪಂಡಿತರನ್ನು ಜ್ಞಾನವಂತರನ್ನು ಸನ್ಮಾನಿಸಿ, ಆಧರಿಸುವ ಪರಂಪರೆಯನ್ನು ಈ ಶಿಲಾಶಾಸನದಿಂದ ತಿಳಿಯಬಹುದಾಗಿದೆ.

೪. ಸಾಲಿಮಠಗಳು

ಅಂದು ಮಠಗಳು ಶಾಲೆಗಳಾಗಿದ್ದವು. ಗತವೈಭವದ ಉಜ್ವಲ ಇತಿಹಾಸ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಮಠಗಳ ಪಾತ್ರ ಮನನಿಯವಾಗಿದೆ. ಮೋಟಗಿಮಠವು ವಿದ್ಯಾದಾನದ ಕೇಂದ್ರವಾಗಿತ್ತು. ಮನಿಪ್ರ ಶ್ರೀಗುರುಬಸವ ಮಹಾಸ್ವಾಮಿಗಳು, ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು, ಪೂಜ್ಯ ಶ್ರೀ ಶಿವಪಂಚಾಕ್ಷರಿ ಮಹಾಸ್ವಾಮಿಗಳು ಈ ಪರಂಪರೆಯಲ್ಲಿ ಪ್ರಮುಖರಾಗಿದ್ದಾರೆ. ಇಲ್ಲಿ ‘ಸಂಸ್ಕೃತ ಪಾಠಶಾಲೆ’ಯು ಇತ್ತು ಎಂಬುದು ಮಠದ ಇತಿಹಾಸ ಅವಲೋಕಿಸಿದಾಗ ತಿಳಿದುಬರುತ್ತದೆ. ‘ಸಾಲಿಮಠ’ ಎಂಬ ಅಡ್ಡಹೆಸರು ಸಹ ಮಠದಲ್ಲಿ ಶಾಲೆಯಿದ್ದುದರಿಂದ ಬಂದಿರಬೇಕು ಎಂದು ಊಹಿಸಬಹುದಾಗಿದೆ.

ತವನಿಧಿ ಶ್ರೀಮುರುಘೇಂದ್ರ ಶಿವಯೋಗಿಗಳು

ಗಚ್ಚಿನಮಠವು ಒಂದು ಶಿಕ್ಷಣ ಕೇಂದ್ರವಾಗಿತ್ತು. ಪರಮಪೂಜ್ಯ ಶ್ರೀ ಮರುಳಶಂಕರ ಶಿವಯೋಗಿಗಳ ನೇತೃತ್ವದಲ್ಲಿ ಪೂಜ್ಯ ಶ್ರೀಮುರುಘೇಂದ್ರ ಶಿವಯೋಗಿಗಳು ತಮ್ಮ ಅಧ್ಯಯನ ಮುಂದುವರೆಸಿದರು. ಗಚ್ಚಿನ ಮಠವು ಸಹ ಸಂಸ್ಕೃತ ಪಾಠಶಾಲೆಯನ್ನು ಹೊಂದಿತ್ತು. ಮುರುಘೇಂದ್ರ ಶಿವಯೋಗಿಗಳ ಆಹಾರ ಸಾಹಿತ್ಯ ಭಾಂಡಾರ ಇನ್ನೂ ಸಂದೂಕಗಳಲ್ಲಿ ಬಂಧಿಯಾಗಿರುವುದು ವಿಪರ್ಯಾಸ. ಅವು ಬೆಳಕು ಕಾಣಬೇಕಾದುದು ಐತಿಹಾಸಿಕ ಅಗತ್ಯವಾಗಿದೆ.

೫. ಕೋಹಳ್ಳಿಯ ಕೋವುರ ಬೊಮ್ಮಯ್ಯ

ಕೋವುರ ಬೊಮ್ಮಯ್ಯ ಕೋಹಳ್ಳಿಯವನಿರಬೇಕು. ಈ ಬಗ್ಗೆ ಸಂಶೋಧನಾ ಅಧ್ಯಯನ ತುಂಬಾ ಅಗತ್ಯವಾಗಿದೆ. ಬಸವಣ್ಣನವರ ಅನುಭವ ಮಂಟಪವು ಒಂದು ಶ್ರೇಷ್ಠ ಸಾಕ್ಷರತಾ ಕೇಂದ್ರವಾಗಿತ್ತು. ಮಡಿವಾಳ ಮಾಚಿದೇವ, ಮಾದರ ಚೆನ್ನಯ್ಯ, ಅಂಬಿಗರ ಚೌಡಯ್ಯನಂಥ ಹಿಂದುಳಿದ ವರ್ಗದ ಜನರು ಶ್ರೇಷ್ಠವಾದ ವಚನಗಳನ್ನು ರಚಿಸುತ್ತಿದ್ದರೆಂದರೆ ಅಂದಿನ ಕಪಿಮುಷ್ಠಿಯಂಥ ಸಮಾಜದಲ್ಲಿ ಇವರಿಗೆ ಯಾರು ಅಕ್ಷರ ಕಲಿಸಿದರು….? ಬಸವಣ್ಣನವರು ಸಾಕ್ಷರತಾ ಕೇಂದ್ರ ಪ್ರಥಮ ಪ್ರೇರಕರಾಗಿರಬೇಕು. ಅಕ್ಕಮಹಾದೇವಿ ಪ್ರೇರಕಿಯಾಗಿರಬೇಕು. ಅಲ್ಲಮ ಪ್ರಭುಗಳು ಈ ಸಾಕ್ಷರತಾ ಕೇಂದ್ರದ ಅಧಿಕಾರಿಯಾಗಿರಬೇಕು. ಕೋವುರ ಬೊಮ್ಮಯ್ಯ, ಅನುಭವ ಮಂಟಪದ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿ ಈ ಭಾಗದ ಧ್ವನಿಯಾಗಿದ್ದ. ಕವಿ ಹರಿಹರ ಈತನನ್ನು ಕುರಿತು ರಗಳೆಯನ್ನು ರಚಿಸಿರುವನು. ಆತ ಅಂಬುಧಾರಾ ರಾಮನಾಥನ ಭಕ್ತನೆಂದು ಹರಿಹರನು ಬಣ್ಣಿಸಿದ್ದಾನೆ. ಅಂಬುಧಾರಾ ರಾಮನಾಥನೆಂದರೆ ಕೋಹಳ್ಳಿಯ ಸಮೀಪದ ರಾಮತಿರ್ಥವೇ ಆಗಿರಬೇಕು. ಕ್ರಿ.ಶ.೧೧೧೫ರ ರಾಮತೀರ್ಥದ ಶಾಸನದಲ್ಲಿ ರಾಮೇಶ್ವರನ ಪ್ರಸ್ತಾಪವಿದೆ. ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಕೋವುರ ಬೊಮ್ಮಯ್ಯ ಹಾಗೂ ಆತನ ಮಗ ಮಲ್ಲದೇವ (ಭೀಮಯ್ಯ) ರ ವಚನಗಳನ್ನು ಅನ್ವೇಷಣೆ ಮಾಡಬೇಕಿದೆ.

ಮಗಧದ ನಂದ ಮನೆತನ, ಮೌರ್ಯ ಮನೆತನದ ಚಂದ್ರಗುಪ್ತಮೌರ್ಯ ಮತ್ತು ದೇವನಾಂಪ್ರಿಯ ಅಶೋಕ ಚಕ್ರವರ್ತಿಯ ಆಳ್ವಿಕೆಯ ಪ್ರಭಾವ ಅಥಣಿಯ ಮೇಲಿತ್ತು ಎಂಬುವುದನ್ನು ಕರ್ನಾಟಕದಲ್ಲಿ ದೊರೆತ ಇನ್ನುಳಿದ ಶಾಸನಗಳು ಹಾಗೂ ಸಾಹಿತ್ಯಿಕ ಆಕರಗಳು ಪರೋಕ್ಷವಾಗಿ ದೃಢಪಡಿಸುತ್ತವೆ. ನಾಲಂದಾ ವಿದ್ಯಾಪೀಠದಲ್ಲಿ ಈ ಭಾಗದ ಜನರು ಯಾರಾದರೂ ಅಧ್ಯಯನ ಕೈಗೊಂಡಿದ್ದರೆ ಎಂಬುದು ಅಧ್ಯಯನ ಯೋಗ್ಯ ಸಂಗತಿಯಾಗಿದೆ. ಈ ವಿದ್ಯಾಪೀಠದಲ್ಲಿ ಉಚ್ಚ ಶಿಕ್ಷಣದ ಸೌಲಭ್ಯವಿತ್ತು. ಇದು ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನೆಯ ಕೇಂದ್ರವಾಗಿತ್ತು. ಇಲ್ಲಿ ಪಡೆದ ಪದವಿ ಮತ್ತು ಶಿಕ್ಷಣಗಳಿಗೆ ವಿಶ್ವದಾದ್ಯಂತ ಮಾನ್ಯತೆಯಿತ್ತು. ಇಲ್ಲಿ ಬಯಸಿದವರಿಗೆಲ್ಲಾ ಪ್ರವೇಶ ಸಿಗುತ್ತಿರಲಿಲ್ಲ. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಇಲ್ಲಿ ಪ್ರವೇಶ ಪಡೆಯುತ್ತಿದ್ದರು. ಈ ಪರೀಕ್ಷೆಗಳನ್ನು ತೆಗೆದುಕೊಳ್ಳುವವರು ಗೇಟ ಕೀಪರ್‌ಗಳು ಎಂಬುದು ಎಂಥ ಅಚ್ಚರಿಯ ಸಂಗತಿಯಲ್ಲವೆ..? ಇವರಿಗೆ ‘ದ್ವಾರಪಂಡಿತರು’ ಎಂದು ಕರೆಯುತ್ತಿದ್ದರು. ಈ ಪರೀಕ್ಷೆಯಲ್ಲಿ ಕೇವಲ ಇಪ್ಪತ್ತರಷ್ಟು ವಿದ್ಯಾರ್ಥಿಗಳು ಮಾತ್ರವೇ ಉತ್ತೀರ್ಣರಾಗುತ್ತಿದ್ದರು. ನಾಲಂದಾ ವಿದ್ಯಾಪೀಠದ ಗ್ರಂಥಭಂಡಾರವು ‘ಧರ್ಮಗುಂಜ’ ಎಂಬ ಹೆಸರನ್ನು ಪಡೆದಿತ್ತು.

೬. ಶೇಡಬಾಳದ ಜೈನ ಆಶ್ರಮ

ಅಥಣಿ ತಾಲೂಕಿನಲ್ಲಿ ಜೈನರ ಬಸದಿಗಳು ಹೆಚ್ಚಾಗಿವೆ. ಈ ತಾಲೂಕಿನ ಶೇಡಬಾಳದಲ್ಲಿ ಶ್ರೀ ಶಾಂತಿಸಾಗರ ಅನಾಥ ಛತ್ರಾಶ್ರಮ ಇದೆ. ಇದು ಜೈನರ ವಿದ್ಯಾಕೇಂದ್ರವಾಗಿತ್ತು ಎಂಬುವುದನ್ನು ಮಿರ್ಜಿ ಅಣ್ಣಾರಾಯರು ಉಲ್ಲೇಖಿಸುತ್ತಾರೆ. ಜೈನರ ಬಸದಿಗಳು ಪಾಠಶಾಲೆ ಗಳಂತೆ ಕಾರ್ಯನಿರ್ವಹಿಸಿದುವೆ ಎಂಬುದು ಸಂಶೋಧನೆಯ ಸಂಗತಿಯಾಗಿದೆ.

೭. ಜಾಳಪಳ

ಗಾಂಧೀಜಿಯವರ ಕೊಲೆಯಾದ ಸಂದರ್ಭದಲ್ಲಿ ದೇಶ ಒಂದು ಮೂಕವೇದನೆಯನ್ನು ಅನುಭವಿಸುತ್ತಿತ್ತು. ಈ ಶೂನ್ಯ ಯಾತನೆಯಲ್ಲಿ ರೊಚ್ಚಿಗೆದ್ದ ಜನತೆ ಬ್ರಾಹ್ಮಣರ ವಿರುದ್ಧ ತಮ್ಮ ರೋಷ ಪ್ರಕಟಿಸಿತು. ಈ ಸಂದರ್ಭದಲ್ಲಿ ರಾಮತೀರ್ಥದ ವೇದಪಾಠ ಶಾಲೆಯು ಬ್ರಾಹ್ಮಣರ ಮನೆಗಳೊಂದಿಗೆ ಉರಿದು ಹೋಯಿತು. ಜ್ಞಾನದ ನಿಧಿಯಾಗಿದ್ದ ಅಗ್ರಹಾರಗಳು ಸಂಪೂರ್ಣವಾಗಿ ನಿರ್ನಾಮಗೊಂಡವು. ಬಹಳಷ್ಟು ವೈದಿಕರು ವಲಸೆ ಹೋಗಲು ಇದು ಕಾರಣವಾಯಿತು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶೈಕ್ಷಣಿಕ ಸ್ಥಿತಿ

‘‘ರಾಷ್ಟ್ರವೆಂದರೆ ಮಣ್ಣಲ್ಲ ಚಿನ್ನವಲ್ಲ
ನಕ್ಷೆ, ಭೂಪುಟವಲ್ಲ, ನಿರೋಗಿಗಳು
ಧೃಢಚಿತ್ತರು ಆದ ಪ್ರಜೆಗಳು’’ ನೆಪೋಲಿಯನ್

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಥಣಿಯ ಪಾತ್ರ ತುಂಬಾ ಹಿರಿದಾಗಿದೆ. ‘‘In the freedom of History of India, Athani taluk will remain on the Indian map, as one of the historic batlle fields’’ ಎಂದು ಎ.ಎಸ್.ಕಲಕರ್ಣಿಯವರು ತಮ್ಮ ಪುಸ್ತಕ ‘Gift of Patriotism’ದಲ್ಲಿ ಬರೆಯುತ್ತಾರೆ. ೧೯೧೭ರಲ್ಲಿ ಅಥಣಿಗೆ ಭೇಟಿ ನೀಡಿದ ಲೋಕಮಾನ್ಯ ಬಾಲಗಂಗಾಧರ್ ತಿಲಕರ ಪ್ರೇರಣೆಯಿಂದ ಅಥಣಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಪಂಜು ಧಗಧಗನೆ ಉರಿಯತೊಡಗಿತು. ಎ.ಎಸ್.ಕುಲಕರ್ಣಿ, ದಳವಾಯಿ ವಕೀಲರು, ಅಂಬಾಬಾಯಿ ಬಳಗಾರ ಶಿವಪ್ಪಾಜಮಖಂಡಿ ಮುಂತಾದವರು ಸ್ವಾತಂತ್ರ್ಯ ಸಂಗ್ರಾಮದ ಅಗ್ನಿಕುಂಡಕ್ಕೆ ಧುಮುಕಿದರು.

೧. ಶಿಕ್ಷಣಕ್ಕೆ ತೀಲಾಂಜಲಿ ನೀಡಿದ ಯುವ ತಂಡ : ೦೯-೧೦-೧೯೪೩ ರಂದು ಶಾಲಾ ಕಾಲೇಜು ಮುಚ್ಚಿ ಪ್ರಭಾತಪೇರಿ ಹೊರಟ ಯುವಕರ ತಂಡವನ್ನು ವಾಂಡಕರ ಎಂಬ ಪೋಲಿಸ್ ಅಧಿಕಾರಿ ಬಂಧಿಸಿದರು. ಗುರುಮಾಸ್ಟರ ಜೇರೆ ತಮ್ಮ ಮಾಸ್ತರಿಕೆ ಬಿಟ್ಟು, ಸ್ವಾತಂತ್ರ್ಯ ದೊರೆಯುವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದು ನಿರ್ಧರಿಸಿದರು. ಎ.ಎಸ್.ಕುಲಕರ್ಣಿ, ದಳವಾಯಿ ವಕೀಲರು ತಮ್ಮ ವಕೀಲಿ ವೃತ್ತಿಯನ್ನು ನಿಲ್ಲಿಸಿದರು.

೨.ಖೋತನಟ್ಟಿ ಬಂಗ್ಲೆ ಭಸ್ಮ ಪ್ರಕರಣ : ೨೪-೧೧-೧೯೪೨ ರಂದು ಖೋತನಟ್ಟಿ ಬಂಗಲೆಯನ್ನು ಭಸ್ಮಗೊಳಿಸಿದ್ದು ಪ್ರಮುಖ ಸಂಗತಿಯಾಗಿದೆ. ಕರ್ನಾಟಕ ಪ್ಯಾಟರ್ನ ಮಾದರಿಯ ಹೋರಾಟ ಮಾಡಲು ಅಂದಿನ ಯುವಕರು ನಿರ್ಧರಿಸಿದರು.

೩. ಕೊಟ್ಟಲಗಿಯಲ್ಲಿ ಪಿಸ್ತೂಲು ಬಂದೂಕು ತಯಾರಿಸಿದ ಯುವಕರುೊ: ಬಾರ್ಡೋಲಿ ಯಲ್ಲಿ ವಲ್ಲಭಭಾಯಿ ಪಟೇಲರು ಕರೆ ನೀಡಿದ ತೆರಿಗೆ ನಿರಾಕರಣೆಯ ಸಿಂಹಗರ್ಜನೆ ೧೯೨೪ರಲ್ಲಿ ಅಥಣಿ ತಾಲೂಕಿನ ಕೊಟ್ಟಲಗಿಯಲ್ಲಿ ಮೊಳಗಿದೆ. ಇಡೀ ಗ್ರಾಮವೇ ಒಗ್ಗಟ್ಟಾಗಿ ತೆರಿಗೆ ನೀಡುವುದನ್ನು ನಿರಾಕರಿಸಿದ ಅಪೂರ್ವ ಘಟನೆ ಇಲ್ಲಿ ನಡೆದಿದೆ. ಮಾಧವಾನಂದ ಪ್ರಭು ಹುಬ್ಬಳ್ಳಿ ಇವರ ಪ್ರೇರಣೆಯಿಂದ ಮದ್ದು ಗುಂಡು, ಪಿಸ್ತೂಲ, ಬಂದೂಕುಗಳನ್ನು ಕೊಟ್ಟಲಗಿಯಲ್ಲಿ ಮಲ್ಲೇಶ ಮತ್ತು ಶಾಂತಪ್ಪ ಎನ್ನುವವರು ತಯಾರಿಸುತ್ತಿದ್ದರು.

ಅಥಣಿ ತಾಲೂಕಿನ ಹುಡುಗರು ರಾಷ್ಟ್ರಪ್ರೇಮದ ಉತ್ಸಾಹದಲ್ಲಿ ಶಾಲಾ, ಕಾಲೇಜುಗಳನ್ನು ಧಿಕ್ಕರಿಸಿದರು. ವೀರ ಸಿಂಧೂರ ಲಕ್ಷ್ಮಣನನ್ನು ನಾವು ಈ ದೃಷ್ಟಿಯಿಂದ ಸ್ಮರಿಸಬೇಕಿದೆ. ಅಥಣಿ ತಾಲೂಕಿನ ಹಳ್ಳಿಗಳಲ್ಲಿ ಸಂಚರಿಸಿದ ಲಕ್ಷಣ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ. ಯುವಕರ ನೇತಾರನಾಗಿದ್ದ.

೪. ಲಾರ್ಡ ಮೆಕಾಲೆ : ೧೮೩೫ರಲ್ಲಿ ಭಾರತದಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಬುಡಸಮೇತ ನಾಶ ಮಾಡಲು ಪಣ ತೊಟ್ಟ ವ್ಯಕ್ತಿಯೆಂದರೆ ಲಾರ್ಡ್ ಮೆಕಾಲೆ. ‘‘ನಡೆದಾಡುವ ದೇಹ ಭಾರತದ್ದಾಗಿದ್ದು, ಒಳಗಿನ ಮಿದುಳು ಮಾತ್ರ ಆಂಗ್ಲರದಾಗಿಸುವೆ’’ ಎಂದು ತನ್ನ ತಂದೆಗೆ ಪತ್ರ ಬರೆದಿದ್ದ. ಈಸ್ಟ್ ಇಂಡಿಯಾ ಕಂಪನಿಯ ಆದೇಶದಂತೆ ಭಾರತಕ್ಕೆ ಬಂದಿಳಿಯುವ ಲಾರ್ಡ್‌ಮೆಕಾಲೆ ಇಲ್ಲಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಗುರುಕುಲದ ಬಗ್ಗೆ ಸಮೀಕ್ಷೆ ಮಾಡಿಸಿದ. ೧೮೩೫ರಲ್ಲಿ ಸುಮಾರು ಒಂದುವರೆ ಸಾವಿರ ಆಂಗ್ಲ ಅಧಿಕಾರಿಗಳು ಸೇರಿಕೊಂಡು ಇಂಥದೊಂದು ಸಮೀಕ್ಷೆ ನಡೆಸಿ, ವರದಿಯೊಂದನ್ನು ಸಿದ್ಧಮಾಡಿ ಮೆಕಾಲೆಯ ಕೈಗಿತ್ತಾಗ ಆತ ದಂಗಾದ. ಅವತ್ತಿನ ಮದ್ರಾಸ್ಸಿನ ಪ್ರಾಂತ್ಯವೊಂದರಲ್ಲಿ ಸುಮಾರು ಒಂದೂವರೆ ಲಕ್ಷ ಕಾಲೇಜುಗಳಿದ್ದವು ಅವು ಗುರುಕುಲಗಳಾಗಿದ್ದವು.

ಆಂಗ್ಲರಿಗೆ ಸರ್ಜರಿ ಎಂದರೆ ಏನು ಎಂದು ತಿಳಿಯದಿದ್ದ ಸಮಯದಲ್ಲಿ ನಮ್ಮಲ್ಲಿ ಒಂದುವರೆ ಸಾವಿರ ಸರ್ಜರಿ ಕಾಲೇಜುಗಳಿದ್ದವು. ಈ ಗುರುಕುಲಗಳನ್ನು ಮುಚ್ಚಿಹಾಕ ಬೇಕೆಂದು ಲಾರ್ಡ್‌ಮೆಕಾಲೆ ನಿರ್ಧರಿಸಿದ. ಕಾನ್ವೆಂಟ್ ಸಂಸ್ಕೃತಿಯನ್ನು ಹುಟ್ಟುಹಾಕಿದ ಇದು ನಿಧಾನಗತಿಯ ವಿಷದಂತೆ ಈಗಲೂ ಪ್ರತಿಯೊಬ್ಬರ ಮೆದುಳಿನಲ್ಲಿ ಸೇರಿಕೊಳ್ಳುತ್ತಿದೆ.

ಈ ಗುಲಾಮಿ ಸಂಸ್ಕೃತಿಯ ವಿರುದ್ಧ ಒಂದು ಸಂಘಟನಾತ್ಮಕ ವಿರೋಧ ವ್ಯಕ್ತ ವಾಗದ್ದು ಭಾರತೀಯ ಶಿಕ್ಷಣ ಪದ್ಧತಿಗೆ ಒಂದು ದೊಡ್ಡ ಹೊಡೆತವಾಗಿದೆ. ಹಲವಾರು ಭಾಷೆಗಳಿಗೆ ಒಂದು ಅಸ್ತಿತ್ವವೇ ಸೃಷ್ಟಿಯಾಗದೆ ಅವು ನಶಿಸಿ ಹೋದವು ಎಂಬುದು ವಿಪರ್ಯಾಸದ ಸಂಗತಿಯಾಗಿದೆ. ಮೋಡಿ, ಪಾಲಿ, ಸಂಸ್ಕೃತ ಭಾಷೆಗಳಿಗೆ ಒಂದು ಅಸ್ತಿತ್ವ ಇಲ್ಲವಾಗಿದೆ. ಗುರುಮೆಕಾಲೆ ತುಂಬಿದ ವಿಷ ಇಂದು ಭಾರತ ದೇಶವನ್ನೇ ವಿರೋಧಿಸುವಂತೆ ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಮರಾಠಿಯಲ್ಲಿ ಶಿಕ್ಷಣ

ಅಥಣಿಯು ಮುಂಬಯಿ ಕರ್ನಾಟಕದ ಭಾಗವಾಗಿತ್ತು. ಗಡಿಭಾಗವಾದ ಅಥಣಿಯಲ್ಲಿ ಮರಾಠಿಯು ಒಂದು ಭಾಷೆಯಾಗಿ ಪ್ರಾಬಲ್ಯ ಪಡೆದಿದ್ದು ಸಹಜ. ಸಾಂಗಲಿ, ಜತ್ತ ಜಮಖಂಡಿಯ ಆಳರಸರ ಪ್ರಭಾವವು ಇದಕ್ಕೆ ಕಾರಣವಾಗಿರಬೇಕು. ಇಲ್ಲಿ ಕನ್ನಡದ ಶಾಲೆಗಳಿರಲಿಲ್ಲ. ಕನ್ನಡ ಕಲಿಯಬೇಕೆಂದು ಇಷ್ಟಪಟ್ಟರೂ ಇಲ್ಲಿ ಕಲಿಯುವ ವ್ಯವಸ್ಥೆಯಿಲ್ಲದೆ ಅನಿವಾರ್ಯವಾಗಿ ಮರಾಠಿ ಕಲಿಯಬೇಕಿತ್ತು. ಕನ್ನಡವು ಅಡಿಗೆ ಮನೆಯ ಭಾಷೆಯಾಗಿತ್ತು. ೧೮೫೬ರಲ್ಲಿ ಕರ್ನಾಟಕದ ಈ ಭಾಗದಲ್ಲಿ ಮರಾಠಿ ಶಾಲೆಗಳೇ ಹೆಚ್ಚಾಗಿದ್ದವು.

‘ಕನ್ನಡ ಬಿರಸ ಮರಾಠಿ ಅರಸ’ ಎಂಬ ಮಾತು ಈ ಭಾಗದಲ್ಲಿ ಪ್ರಚಲಿತವಾಗಿತ್ತು. ಮಹಾರಾಷ್ಟ್ರದ ಗಡಿ ಪ್ರದೇಶ ಅಥಣಿಯಾದ್ದರಿಂದ ಅಲ್ಲಿಯ ಜನರ ಸಂಪರ್ಕ ಭಾಷೆಯ ಪ್ರಭಾವ, ಆಚಾರ ವಿಚಾರಗಳು ಅಥಣಿಗರ ಜೀವನದಲ್ಲಿ ಹಾಸು ಹೊಕ್ಕಾಗಿದ್ದವು. ಅಂದು ಶಿಕ್ಷಣಕ್ಕಾಗಿ ಈ ಭಾಗದ ವಿದ್ಯಾರ್ಥಿಗಳು ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿಗೆ ಸೇರಿಕೊಳ್ಳುವುದು ಅನಿವಾರ್ಯವಾಗಿತ್ತು. ವ್ಯಾಪಾರ, ವಹಿವಾಟುಗಳ ಸಲುವಾಗಿ ಬೆಳಗಾವಿ, ವಿಜಾಪೂರಗಳಿಗಿಂತ ಮಿರಜ, ಸಾಂಗಲಿ ಇಲ್ಲಿಯ ಜನಕ್ಕೆ ತುಂಬಾ ಸಮೀಪ.

ಕನ್ನಡದಲ್ಲಿ ಶಿಕ್ಷಣ

ಓ ಕನ್ನಡಕಲಿ
ಮೊದಲು ಕನ್ನಡಕಲಿ
ಅನ್ಯ ಭಾಷೆಯ ಜ್ಞಾನ
ಆ ಮೇಲೆ ಬರಲಿ

ಹರಿನಾರಾಯಣ ಬಿಚ್ಚು ಎಂಬುವರು ಮಿರಜದಿಂದ ಅಥಣಿಗೆ ಬಂದು ಕ್ರಿ.ಶ. ೧೮೫೭ರಲ್ಲಿ ಪ್ರಥಮ ಕನ್ನಡ ಶಾಲೆಯನ್ನು ಆರಂಭಿಸಿದರು. ಅದುವೇ ಸ.ಕ.ಹಿ.ಪ್ರಾ.ಶಾಲೆ ನಂ.೧ ಅಂದರೆ ಕೇಂದ್ರ ಶಾಲೆ, ಇಂದಿಗೂ ಇತಿಹಾಸದ ಅವಜ್ಞೆಗೆ ಒಳಗಾಗಿದೆ. ನಮಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಈ ಕೇಂದ್ರಶಾಲೆಯನ್ನು ನವೀಕರಿಸಿ, ಇತಿಹಾಸ ಸೃಷ್ಟಿಸಿದ ಈ ಶಾಲೆಯೆಂದು ಗುರುತಿಸುವುದು ನಮಗಿನ್ನೂ ಸಾಧ್ಯವಾಗಿಲ್ಲ. ಗಡಿನಾಡು ಉತ್ಸವಗಳನ್ನು ಆಚರಿಸುವಾಗ, ಕನ್ನಡದ ಹಬ್ಬ ಆಚರಿಸುವಾಗ ಈ ಐತಿಹ್ಯದ ಶಾಲೆಯನ್ನು ಗೌರವಿಸಿ, ಗುರುತಿಸುವುದು ಸಾಧ್ಯವಾಗಿಲ್ಲ ಎಂದು ನೋವಾಗುತ್ತದೆ.

ಅಥಣಿಯಲ್ಲಿ ಪ್ರಥಮ ಪ್ರೌಢಶಾಲೆಯು ೧೯೧೮ರಲ್ಲಿ ಜಾಧವಜಿ ಶಿಕ್ಷಣ ಸಂಸ್ಥೆಯೊಂದು ಪ್ರಾರಂಭವಾಯಿತು. ಐನಾಪುರದಲ್ಲಿ ೧೯೨೪ರಲ್ಲಿ ಗ್ರಾಮೀಣ ವಿಭಾಗದ ಪ್ರಥಮ ಪ್ರೌಢಶಾಲೆಯ ಕೆ.ಆರ್.ಇ.ಸಂಸ್ಥೆಯಿಂದ ಪ್ರಾರಂಭವಾಯಿತು.

ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಕರು

ಪ್ರಾಥಮಿಕ ಶಿಕ್ಷಣ ರಂಗದಲ್ಲಿ ಈ ನಾಡಿನ ಶ್ರೇಷ್ಠ ಸಾಹಿತಿ ಮಿರ್ಜಿ ಅಣ್ಣಾರಾಯರು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಅವರ ಕೃತಿಗಳು ಕನ್ನಡ ಸಾರಸ್ವತ ಲೋಕದ ಅಮೂಲ್ಯ ರತ್ನಗಳಾಗಿವೆ. ಮಾಧ್ಯಮಿಕ ಶಿಕ್ಷಣ ರಂಗದಲ್ಲಿ ಎಸ್.ಎ.ರಾಮತೀರ್ಥಕರ, ಹರಿವಿದ್ಯಾಲಯ ಉಗಾರಬುರ್ದಕರವರು ಪಡೆದಿದ್ದಾರೆ. ಇನ್ನೂವರೆಗೆ ಈ ಎರಡು ಪ್ರಶಸ್ತಿಗಳ ನಂತರ, ರಾಷ್ಟ್ರಪ್ರಶಸ್ತಿ ಇನ್ಯಾವ ಶಿಕ್ಷಕರಿಗೂ ಒಲಿದು ಬಂದಿಲ್ಲ.

ಬೆಳಕು ಬೆಳೆದವರು

ಶಿಕ್ಷಣ ರಂಗದ ಧ್ರುವತಾರೆಗಳಾಗಿ ಮಿನುಗಿ, ಅಥಣಿಯ ಕೀರ್ತಿಯನ್ನು ಜಗದಗಲ ವಿಸ್ತರಿಸಿದ ಕೆಲವು ಧ್ರುವತಾರೆಗಳನ್ನು ಇಲ್ಲಿ ನೆನಪಿಸುತ್ತೇನೆ. ಈ ಪಟ್ಟಿಯು ತುಂಬಾ ವಿಶಾಲವಾದುದು ಮುಕ್ತಾಯವಿಲ್ಲದ್ದು.

ಪಂಡಿತರಾಜ ಮಾಡುಲಿ ಗೋಪಾಲಾಚಾರ್ಯರು ಕ್ರಿ.ಶ.೧೯೩೬ರಲ್ಲಿ ವಾಣಿ ವಿಹಾರ ವಿದ್ಯಾಲಯ ಎನ್ನುವ ಪ್ರಥಮ ಸಂಸ್ಕೃತ ವಿಶ್ವವಿದ್ಯಾಲಯವನ್ನು ಮುಂಬಯಿಯಲ್ಲಿ ಸ್ಥಾಪಿಸಿ, ತಾವೇ, ಪ್ರಥಮ ಉಪಕುಲಪತಿಗಳಾದರು. ಡಾ.ಜಿ.ಎನ್.ಮುತಾಲಿಕರವರು ೧೯೭೫ರಲ್ಲಿ WHO ದಕ್ಷಿಣ ರಾಷ್ಟ್ರಗಳ ಆರೋಗ್ಯ ನಿರ್ದೇಶಕರಾಗಿ ಆಯ್ಕೆಗೊಂಡರು. ಶ್ರೀ ಬಿಡಿ ಜತ್ತಿಯವರು ರಾಷ್ಟ್ರಪತಿಗಳಾಗಿ, ಉಪರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀ ಸನತಕುಮಾರ ಶಿವಣಗಿಯವರು ಅಮೇರಿಕೆಯ ಅಧ್ಯಕ್ಷರ ಆಪ್ತಕಾರ್ಯದರ್ಶಿ ಯಾಗಿದ್ದರು. ಶ್ರೀ ಸುಧೀಂದ್ರ ಕುಲಕರ್ಣಿಯವರು ಇನಫೋಸಿಸಿನ ಸುಧಾಮೂರ್ತಿಯವರ ತಂದೆಯವರು ‘ಸತ್ತಿಯಮಧ್ವ’ ಕೃತಿರಚಿಸಿದ ಬೋಧರಾವ ಕುಲಕರ್ಣಿಯವರು ರಾಜಸ್ಥಾನ ದಲ್ಲಿ ಇಂದಿರಾಗಾಂಧಿ ನೆಹರು ಪರಿಯೋಜನೆಯ ಕಾಲುವೆಯನ್ನು ಸಂಪೂರ್ಣಗೊಳಿಸಿ, ಪ್ರಖ್ಯಾತಿ ಪಡೆದಿದ್ದಾರೆ.

ಆಧುನಿಕ ಅಥಣಿಯಲ್ಲಿ ಶಿಕ್ಷಣ TO BE : OR NOT TOBE- HAMLET

ಗೊಂದಲ ಎಂಬುದು ಆಧುನಿಕ ಯುಗದ ದರ್ಪಣವಾಗಿದೆ. ನಾಯಿಕೊಡೆಯಂತೆ ಹುಟ್ಟುತ್ತಿರುವ ಸಂಸ್ಥೆಗಳು; ಆಂಗ್ಲಮಾಧ್ಯಮದ ವಿಪರೀತ ಮೋಹ; ತ್ವರಿತ ಗತಿಯಲ್ಲಿ ಗಗನ ಮುಟ್ಟುವ ಭ್ರಮೆ ತೋರಿಸುವ ಟ್ಯುಶನ್ ವರ್ಗಗಳು; ಬಡಕಲು ದೇಹದ ಸರಕಾರಿ ಶಾಲೆಗಳು ಇಂದು ಇಂದಿನ ಅಥಣಿಯಾಗಿದೆ. ಸರಿಯಾಗಿ ಕನ್ನಡ ಓದಲು ಬರೆಯಲು ಬರದ ಶಿಕ್ಷಕರು ಆಂಗ್ಲಮಾಧ್ಯಮದಲ್ಲಿ ಬೋಧಿಸುತ್ತಾರೆ. ಇತ್ತ ಕನ್ನಡ ಬಾರದೆ ಸರಿಯಾಗಿ ಇಂಗ್ಲೀಷಬಾರದೆ ಮಕ್ಕಳು ಕಂಗ್ಲೀಷ್ ಕಲಿಯುತ್ತಾರೆ. ಶಿಕ್ಷಕರಿಗೆ ಗೌರವವಿಲ್ಲದೆ, ಭಾಷೆಯ ಅಭಿಮಾನವಿಲ್ಲದೆ, ಸಂಸ್ಕೃತಿಯ ಪರಿಚಯವಿಲ್ಲದ ‘ಯಡಬಿಡಂಗಿ’ ಪರಂಪರೆ ಬೆಳೆಯುತ್ತಿದೆ. ಕ್ಯಾಸೆಟ್ ಹಾಕಿ ಅಪದ್ಧ ಕುಣಿಯುವ ಮಕ್ಕಳು ಸಿನಿಮಾವನ್ನೇ ಬದುಕುತ್ತಾರೆ. ಸಿನಿಮಾವನ್ನೇ ಉಸಿರಾಡುತ್ತಾರೆ. ಟಿವಿಯು ಮನೆ ಹೊಕ್ಕ ಭೂತವಾಗಿದೆ. ‘CONFUSION’ ಯುವಕರಲ್ಲಿ ಉಳಿದ ಅಂತಿಮ ನಿರ್ಣಯವಾಗುತ್ತಿದೆ. ನೈತಿಕತೆಯೆಂಬುದು ಇಂದು ಎಂದೋ ಕೇಳಿದ ಪದವಾಗಿದೆ. Thomas Hardy ‘Farfrom the Madding Growd’ ಎಂಬ ಕಾದಂಬರಿಯಲ್ಲಿ ನೀಡುವ ಪ್ರಗತಿಯ ಚಿತ್ರಣದ ಕತೆಯು ನೆನಪಾಗುತ್ತದೆ. ಕುರಿಗಳನ್ನು ಮುಂದೆ ತಳ್ಳುವ ನಾಯಿಯು ಪ್ರಗತಿಯ ಸಂಕೇತವಾಗಿದೆ. ಮುಂದೆ ಪ್ರಪಾತ ಎಂದು ಗೋಚರವಾಗುತ್ತಿದ್ದರೂ ಪ್ರತಿಯೊಂದು ಕುರಿಯನ್ನು ಮುಂದೆ ತಳ್ಳುತ್ತದೆ. ಪ್ರತಿಯೊಂದು ಕುರಿಯು ಪ್ರಪಾತದಲ್ಲಿ ಬಿದ್ದು ಸಾಯುತ್ತವೆ.

ಶಿಕ್ಷಣ ನಿರಂತರ ಪ್ರಕ್ರಿಯೆ. ಮಾನವನು ಹುಟ್ಟಿನಿಂದ ಕೊನೆಯವರೆಗೂ ಸತತ ಕಲಿಯುತ್ತಲೇ ಇರುತ್ತಾನೆ. ಯಯಾತಿಯ ಶರ್ಮಿಷ್ಠೆಯ ಒಂದು ಮಾತನ್ನು ಗಿರೀಶ ಕಾರ್ನಾಡರು ತುಂಬಾ ಚೆನ್ನಾಗಿ ಹೇಳುತ್ತಾರೆ. ‘‘ಗೆಳೆಯಾ, ಕಲ್ಲು ಮುಳ್ಳಿನ ದಾರಿಯಲ್ಲಿ ನಡೆಯಬಹುದು. ಕನಸುಗಳಿಲ್ಲದ ದಾರಿಯಲ್ಲಿ ಹೇಗೆ ನಡೆಯಲಿ ಹೇಳು?’’ ಯಾವಾಗ ಒಂದು ಜನಾಂಗ ಕನಸು ಕಾಣುವುದನ್ನು ನಿಲ್ಲಿಸುವುದೋ ಅದು ಸತ್ತು ಹೋಗುತ್ತದೆ ಎಂದೇ ಅರ್ಥ. ಶಿಕ್ಷಣ ಎಂದರೆ ಭೂಮಿಯಲ್ಲಿ ಹೂ ಚಿಗಿತಂತೆ; ಬರಡು ಮನದಲ್ಲಿ ಕವಿತೆ ಮೂಡಿದಂತೆ.

 

ಆಕರ ಗ್ರಂಥಗಳು

೧.GIFT OF PATRIOTISM- A.S.Kulkarni

೨. YOU CAN WIN- Shivkhera

೩. Karnatak state Gazetter of Belgaum district

೪. Warks of Shakespeare

೫. ದಳವಾಯಿ – ಪ್ರೊ.ಸಿದ್ದಣ್ಣ ಬಿ. ಉತ್ನಾಳ

೬. ಐನಾಪುರ (ಐತಿಹಾಸಿಕ ಅಧ್ಯಯನ)  ಸಂಪಾದಕರು: ಡಾ.ವ್ಹಿ.ಎಸ್.ಮಾಳಿ

೭. ಅಥಣಿ ತಾಲೂಕು : ಸಮಗ್ರ ದರ್ಶನ-ಸಂಪಾದಕ-ಡಾ.ವ್ಹಿ.ಎಸ್.ಮಾಳಿ

೮. ಸುವರ್ಣಸುಗಂಧ ಸಂಪಾದಕ : ನಾರಾಯಣ ತಿನಿಖಿಂಡಿ

೭. ಕೆ.ಆರ್.ಇ.ಸಂಸ್ಥೆ-ಅಮೃತಸಿಂಧು

೮. ಬಸವಪ್ರಭು-ಬಿ.ಎಲ್.ಪಾಟೀಲ ಅಭಿನಂದನಾಗ್ರಂಥ

೯. ಆಜಾದಿ-ರಾಜೀವದೀಕ್ಷಿತ್

೧೦.ಅಥಣಿ ತಾಲ್ಲೂಕು ದರ್ಶನ-ಡಾ.ಎಂ.ಎನ್ .ವಾಲಿ