ಭಾಷೆ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ. ಮನುಷ್ಯನ ಬೆಳವಣಿಗೆ ಯಾದಂತೆಲ್ಲ ಭಾಷೆ ಬದಲಾಗುತ್ತ, ಬೆಳವಣಿಗೆ ಹೊಂದುತ್ತಿರುತ್ತದೆ. ಮಗು ಬೆಳೆಯುತ್ತಿದ್ದಂತೆಯೇ ಅವನು ಮನೆಯಲ್ಲಿ ಆಡುವ ನುಡಿಗಳು, ಪರಿಸರದ ಮೂಲಕ ದೊರೆಯುವ ಶಬ್ದಗಳು ಅವನ ಭಾಷೆಯಾಗಿ ಅದುವೇ ಅವನ ಮಾತೃ ಭಾಷೆಯಾಗುತ್ತದೆ. ಅಂದಿನಿಂದಲೇ ಅವನಿಗೆ ತಾಯ್ನುಡಿ, ತನ್ನ ಮಾತೃ ಭಾಷೆಯಾಗಿ, ತನ್ನ ಭಾಷೆಯಾಗಿ, ತುಂಬಾ ಆತ್ಮೀಯವಾಗುತ್ತದೆ. ಅದಕ್ಕಾಗಿಯೇ ಅವನಲ್ಲಿ ತಾನು ವಾಸಿಸುವ ನಾಡಿನ ಬಗ್ಗೆ, ಆಡುವ ಭಾಷೆಯ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಮೂಡುತ್ತದೆ. ಕೆಲವೊಮ್ಮೆ ಈ ಅಭಿಮಾನ ಅತಿಯಾಗಿ, ಅನಾಹುತ, ಅಚಾತುರ್ಯಕ್ಕೆ ಕೂಡ ಎಡೆಯಾಗುತ್ತದೆ. ನಾವು ನಮ್ಮ ಮಾತೃಭಾಷೆ, ಮಾತೃ ಭೂಮಿಯ ಬಗ್ಗೆ ಎಷ್ಟೇ ಅಭಿಮಾನ ಹೊಂದಿದ್ದರೂ, ಬೇರೆಯವರ ಭಾಷೆ, ಆಚಾರ, ವಿಚಾರ ಸಂಸ್ಕೃತಿಯನ್ನು ಅರ್ಥಮಾಡಿಕೊಂಡು, ಅವರೊಡನೆ ಮಧುರವಾಗಿ ಸಂಬಂಧ ಹೊಂದಿರಬೇಕಾದುದು ಇಂದಿನ ಅವಶ್ಯಕತೆ ಆಗಿದೆ.

‘ಪಂಜಾಬ- ಸಿಂಧ, ಗುಜರಾಥ-ಮರಾಠಾ, ದ್ರಾವಿಡ, ಉತ್ಕಲವಂಗ’ ಎಂದು ಹಾಡಿದ ವಿಶ್ವಕವಿ ರವೀಂದ್ರನಾಥ ಟಾಗೋರರ ಆಶಯವು ಅಖಂಡ ಭಾರತದ ಕಲ್ಪನೆಯನ್ನು ನೀಡುತ್ತದೆ. ಭಾಷೆ ಬೇರೆ, ವೇಷ ಬೇರೆ, ರೀತಿ ನೀತಿಗಳು ವಿಭಿನ್ನವಾಗಿದ್ದರೂ ನಾವೆಲ್ಲರೂ ಭಾರತೀಯರು, ಭಾರತ ಮಾತೆಯ ಮಕ್ಕಳು, ವಿವಿಧತೆಯೇ ನಮ್ಮ ಅಪಾರ ಸಂಪತ್ತು, ಸಂಸ್ಕೃತಿ, ಅಂತಹ ಏಕತೆಯ ಬಲದ ಮೇಲೆ ನಾವು ನಮ್ಮ ದೇಶವನ್ನು, ಸಂಸ್ಕೃತಿಯನ್ನು ಇಂದಿನವರೆಗೂ ಕಾಪಾಡಿಕೊಂಡು, ಬೆಳೆಸಿದ್ದೇವೆ. ವಿದೇಶದ ಆಕ್ರಮಣ, ಭಾಷೆ, ಸಂಸ್ಕೃತಿಯ ಮೇಲೆ ನಡೆದ ದಬ್ಬಾಳಿಕೆಯನ್ನು ಸಮರ್ಥವಾಗಿ ಎದುರಿಸಿ, ತನ್ನತನದಿಂದ ಮೆರೆದ ನಾಡು ನಮ್ಮ ಭಾರತ, ಭಾರತದ ವಿಜ್ಞಾನಿಗಳು ಪ್ರಪಂಚಕ್ಕೆ ನೀಡಿದ ಕೊಡುಗೆಗಳು ಅನನ್ಯ, ಅಪೂರ್ವ, ಅರ್ಥಪೂರ್ಣ, ಭಾರತ ಇಂದು ಸ್ವಾವಲಂಬಿಯಾಗಿ, ತನ್ನ ಸಾಮರ್ಥ್ಯದ ಮೇಲೆ ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ನೆರೆ ರಾಷ್ಟ್ರಗಳೊಡನೆ ಸೌಹಾರ್ದಯುತ ಸಂಬಂಧವನ್ನು ಬೆಳೆಯಿಸಿಕೊಂಡು, ಅಲಿಪ್ತ ದೇಶಗಳ ಒಕ್ಕೂಟದ ಸದಸ್ಯರಾಗಿ ಶಾಂತಿ-ಸಹಬಾಳ್ವೆಯ ತತ್ವವನ್ನು ಆಚರಣೆಯಲ್ಲಿ ತಂದಿದೆ. ಭಾಷೆ ಭಾಷೆಗಳ ನಡುವೆ ಸೌಹಾರ್ದತೆ ಭಾರತದ ರಾಷ್ಟ್ರೀಯ ಏಕತೆಗೆ ಅವಶ್ಯ.

ನಾವು ಇತಿಹಾಸವನ್ನು ಅವಲೋಕಿಸಿದಾಗ ಕರ್ನಾಟಕವನ್ನು ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಯಾದವರು (ಸೇವುಣರು) , ಹೊಯ್ಸಳರು, ವಿಜಯನಗರ ಅರಸರು, ಬಹುಮನಿಗಳು, ಆದಿಲ್ ಶಾಹಿ, ಕೆಳದಿ ಅರಸರು, ಮೈಸೂರು ಅರಸರು ಹಾಗೂ ಬ್ರಿಟಿಷರು. ಸ್ವಾತಂತ್ರ್ಯಾನಂತರ ಕರ್ನಾಟಕವು ಐದು ಪ್ರಾಂತಗಳಾಗಿ ಆಡಳಿತಕ್ಕೆ ಒಳಪಟ್ಟಿತ್ತು. ಮುಂಬಯಿ, ಮದ್ರಾಸ್, ಕೊಡಗು, ಮೈಸೂರು, ಹೈದ್ರಾಬಾದ್ ಪ್ರಾಂತ್ಯ, ಫಲಜಲ್ ಅಲಿ ಆಯೋಗದ ಶಿಫಾರಸ್ಸಿನಂತೆ ಏಕೀಕೃತ ಕರ್ನಾಟಕ ೧೯೫೬ ನವೆಂಬರ್ ೧ರಂದು ಉದಯವಾಯಿತು. ೧೯೭೩ರಲ್ಲಿ ಕರ್ನಾಟಕ ಎಂದು ನಾಮಕರಣವೂ ಆಯಿತು.

ಬ್ರಿಟೀಷರ ಕಾಲದಲ್ಲಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ವಿಜಾಪುರ, ಕಾರವಾರಗಳನ್ನು ಮುಂಬಯಿ ಪ್ರಾಂತ್ಯಕ್ಕೆ ಜೋಡಿಸಿದ್ದರಿಂದ ಕರ್ನಾಟಕದ ಸಂಬಂಧ ಮಹಾರಾಷ್ಟ್ರದ ಜೊತೆಗೆ ಹೆಚ್ಚು ನಿಕಟವಾಗಿದೆ. ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳು ಭೌಗೋಳಿಕವಾಗಿ ಹೊಂದಿಕೊಂಡಿವೆ. ಇವುಗಳ ಸಂಬಂಧ ಕೇವಲ ಭೌಗೋಳಿಕವಾಗಿರದೇ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಹಿತ್ಯಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಹಾಸು ಹೊಕ್ಕಾಗಿದೆ. ಖ್ಯಾತ ಸಂಶೋಧಕ ಶಂ.ಭಾ.ಜೋಶಿ ಅವರು ಉಲ್ಲೇಖಿಸಿದ ಹಾಗೆ ಕರ್ನಾಟಕ-ಮಹಾರಾಷ್ಟ್ರಗಳು ಅವಳಿ-ಜವಳಿಯ ಹಾಗೆ ಬೆಳೆದು ಬಂದಿವೆ.

ಕನ್ನಡ-ಮರಾಠಿ ಈ ಎರಡೂ ಭಾಷೆಗಳು ಸುಮಾರು ೨೦೦೦ ವರ್ಷಗಳಿಂದ ಬೇರೆ ಬೇರೆ ರಾಜವಂಶದ ಆಡಳಿತಗಳನ್ನು ಕಂಡಿವೆ. ತಮಿಳು ಭಾಷೆಯನ್ನು ಬಿಟ್ಟರೆ ಕನ್ನಡವು ಎಲ್ಲ ಭಾರತೀಯ ಭಾಷೆಗಳಲ್ಲಿ ಅತಿ ಪ್ರಾಚೀನವಾದುದು. ಕನ್ನಡ ಭಾಷೆಯ ಉಗಮ ಕ್ರಿ.ಶ.೫ನೇ ಶತಮಾನವೆಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ಯಾದವರ ಕಾಲವು ಮಹಾರಾಷ್ಟ್ರ ಸಂಸ್ಕೃತಿಯ ಉದಯ ಕಾಲವೆಂದು ಹಾಗೂ ಮರಾಠಿ ಭಾಷೆ ೬ನೇ ಶತಕದಲ್ಲಿ ಉಗಮವಾಗಿದೆ ಎಂದು ಇತಿಹಾಸಕಾರರು ತಿಳಿಸಿದ್ದಾರೆ. ೧೩ನೇ ಶತಮಾನದ ಜ್ಞಾನೇಶ್ವರರ ಕಾಲದಲ್ಲಿ ಕನ್ನಡ ಭಾಷೆಯ ಪ್ರಭಾವ ಮರಾಠಿ ಭಾಷೆಯ ಮೇಲೆ ಆಗಿರುವುದು ಸಹಜ ಎಂಬ ಸಂಗತಿ ಗಮನಾರ್ಹ. ಕರ್ನಾಟಕ, ಮಹಾರಾಷ್ಟ್ರ ಇವುಗಳ ನಡುವೆ ಸುಮಾರು ೧೫೦೦ ವರ್ಷಗಳ ಆಡಳಿತಾತ್ಮಕ ಸಂಬಂಧವಿದೆ. ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರು ಈ ವಿಷಯ ಕುರಿತು ಶಾಸನಗಳನ್ನು ಅಧ್ಯಯನ ಮಾಡಿ ಖಚಿತಪಡಿಸಿದ್ದಾರೆ.

ಕರ್ನಾಟಕದಲ್ಲಿ ಶಿವ ಶರಣರು, ದಾಸರು ಜನ ಸಾಮಾನ್ಯರಿಗೆ ತಮ್ಮ ವಚನ, ಪದಗಳಿಂದ ಸರಳ ಜೀವನ ಮಾರ್ಗವನ್ನು ತಿಳಿಸಿಕೊಟ್ಟಂತೆ, ಮಹಾರಾಷ್ಟ್ರದಲ್ಲಿ ಜ್ಞಾನೇಶ್ವರ, ತುಕಾರಾಮ, ರಾಮದಾಸ, ಏಕನಾಥ, ನಾಮದೇವ ಮುಂತಾದವರು ಸುಲಭ ಭಕ್ತಿಮಾರ್ಗವನ್ನು ತೋರಿಸಿದರು. ಗುರುದೇವ ರಾನಡೆಯವರು ಕನ್ನಡ-ಮರಾಠಿ-ಹಿಂದಿ ಸಂತರ ವಿಚಾರದಲ್ಲಿಯ ಸಾಮ್ಯತೆಯನ್ನು ತಮ್ಮ ‘ಪಾಥವೇ ಟು ಗಾಡ್’ ಎಂಬ ಗ್ರಂಥದಲ್ಲಿ ವಿವರಿಸಿದ್ದಾರೆ. ೧೧ನೇ ಶತಮಾನದ ಕನ್ನಡ ಸಾಹಿತ್ಯದ ಪ್ರಭಾವ, ಮುಂದೆ ೧೩ ರಿಂದ ೧೭ನೇಶತಮಾನದ ಮರಾಠಿ ಸಾಹಿತ್ಯದ ಮೇಲೆ ಆಗಿರುವುದನ್ನು ಕಾಣುತ್ತೇವೆ.

ಅದರಂತೆ ಕನ್ನಡದ ಯಕ್ಷಗಾನ, ಬಯಲಾಟಗಳು ಮಹಾರಾಷ್ಟ್ರದಲ್ಲಿಯೂ ಜನಪ್ರಿಯವಾದವು. ಮರಾಠಿ ರಂಗಭೂಮಿಯ ಪಿತಾಮಹರೆಂದು ಪ್ರಸಿದ್ದಿ ಪಡೆದ ಅಣ್ಣಾ ಸಾಹೇಬ ಕಿರ್ಲೋಸ್ಕರರು ಕರ್ನಾಟಕದವರು. ಅವರ ನಾಟಕಗಳಿಗೆ ಕನ್ನಡ ನಾಟಕ ಹಾಗೂ ಸಂಗೀತವು ಪ್ರೇರಣೆ ನೀಡಿದ್ದು ಉಲ್ಲೇಖನಿಯ. ಮುಂದೆ ಕನ್ನಡದ ‘ಶ್ರೀ ಕೃಷ್ಣಪಾರಿಜಾತ’ವನ್ನು ಅವರು ಮರಾಠಿ ಭಾಷೆಗೆ ಅನುವಾದ ಮಾಡಿ ಪ್ರಯೋಗಿಸಿದ್ದಾರೆ. ಪ್ರಾರಂಭದಲ್ಲಿ ಮರಾಠಿ ನಾಟಕಕಾರರು ಕನ್ನಡ ಹಾಡುಗಳನ್ನು ಬಳಸಿಕೊಂಡರು. ಮರಾಠಿ ನಾಟಕಕಾರರಾದ ಆಚಾರ್ಯ ಅತ್ರೆ, ರಾಂಗಣೇಕರ, ಪು.ಲ.ದೇಶಪಾಂಡೆ, ವಿಜಯ ತೆಂಡೂಲ್ಕರ, ಕನೇಟಕರ ಇವರ ಜನಪ್ರಿಯ ನಾಟಕಗಳು ಕನ್ನಡಕ್ಕೆ ಅನುವಾದವಾಗಿ ಪ್ರಯೋಗಗೊಂಡಿವೆ. ಶ್ರೀರಂಗ, ಗಿರೀಶ್ ಕಾರ್ನಾಡ, ಚಂದ್ರಶೇಖರ ಕಂಬಾರ ಮುಂತಾದ ಕನ್ನಡ ನಾಟಕಕಾರರ ನಾಟಕಗಳು ಮಹಾರಾಷ್ಟ್ರದಲ್ಲಿ ಮರಾಠಿಯಲ್ಲಿ ಅನುವಾದಗೊಂಡು ರಂಗಭೂಮಿಯ ಮೇಲೆ ತುಂಬಾ ಯಶಸ್ವಿಯಾಗಿ ಪ್ರಯೋಗಗೊಂಡಿವೆ. ಹೀಗೆ ರಂಗ ಭೂಮಿ ಕನ್ನಡ-ಮರಾಠಿ ಸಂಬಂಧಗಳನ್ನು ಹೆಚ್ಚು ಗಟ್ಟಿಗೊಳಿಸಿದೆ.

ಆಧುನಿಕ ಸಾಹಿತ್ಯದ ಪ್ರಕಾರದಲ್ಲಿಯೂ ಕನ್ನಡ ಮರಾಠಿ ಭಾಷೆಗಳಲ್ಲಿ ಅನ್ಯೋನ್ಯತೆ ಯನ್ನು ಕಾಣುತ್ತೇವೆ. ಕನ್ನಡ ಕಾದಂಬರಿಗಳ ಮೇಲೆ ಬಂಗಾಳಿ, ಮರಾಠಿ ಸಾಹಿತ್ಯದ ಪ್ರಭಾವವನ್ನು ಕಾಣುತ್ತೇವೆ. ಗಳಗನಾಥರು ಮರಾಠಿ ಕಾದಂಬರಿಗಳನ್ನು ಅನುವಾದಿಸಿದ್ದಾರೆ. ಕನ್ನಡದ ಶ್ರೇಷ್ಠ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಗೋಕಾಕ, ಕಾರಂತ, ಮಾಸ್ತಿ ಇವರ ಸಾಹಿತ್ಯ ಹಾಗೂ ಮಹಾರಾಷ್ಟ್ರದ ಸಮಕಾಲೀನ ಸಾಹಿತಿಗಳಾದ ಘಡಕೆ, ಅತ್ರೆ, ಖಾಂಡೇಕರ, ಸಾನೇ ಗುರೂಜಿ ಇವರ ಸಾಹಿತ್ಯದಲ್ಲಿ ಅನೇಕ ಸಮಾನ ಗುಣಗಳನ್ನು ಗಮನಿಸುತ್ತೇವೆ. ಅಂದಿನ ಸಾಹಿತಿಗಳು ಬೇರೆ ಬೇರೆ ಭಾಷೆಯಲ್ಲಿ ಬರೆಯುತ್ತಿದ್ದರೂ ಅವರ ವಿಚಾರ ಧಾರೆಗಳು ಒಂದೇ ಆಗಿದ್ದವು. ಶಿವರಾಮ ಕಾರಂತ, ಭೈರಪ್ಪ, ಕಾರ್ನಾಡ, ಕಂಬಾರ, ಯು.ಆರ್. ಅನಂತಮೂರ್ತಿ, ಶ್ರೀಮತಿ ಸುಧಾ ಮೂರ್ತಿ ಅವರ ಅನೇಕ ಕೃತಿಗಳು ಮರಾಠಿಯಲ್ಲಿ ಅನುವಾದಗೊಂಡಿವೆ. ಕನ್ನಡದ ಅನೇಕ ಲೇಖಕರು ಮರಾಠಿ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಕನ್ನಡಕ್ಕೆ ಅನುವಾದಿಸಿ ಓದುಗರಿಗೆ ಪರಿಚಯಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಮುಂತಾದ ಕ್ಷೇತ್ರದ ಸಾಧಕರು ಕನ್ನಡ-ಮರಾಠಿಗಳ ನಡುವೆ ಮಧುರ ಬಾಂಧವ್ಯದ ಸೇತುವೆಯಾಗಿ ಅಮೂಲ್ಯ ಕೊಡುಗೆ ನೋಡಿದ್ದಾರೆ.

ಅಥಣಿ ಬೆಳಗಾವಿ ಜಿಲ್ಲೆಯ ಉತ್ತರಕ್ಕಿರುವ ತಾಲೂಕು. ಉತ್ತರ ಮತ್ತು ಪಶ್ಚಿಮದಲ್ಲಿ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡು, ಈಶಾನ್ಯ ಮತ್ತು ಪೂರ್ವದಲ್ಲಿ ವಿಜಾಪುರ ಜಿಲ್ಲೆ ಇದೆ. ಆಗ್ನೇಯದಲ್ಲಿ ಬಾಗಲಕೋಟೆ ಜಿಲ್ಲೆ, ದಕ್ಷಿಣಕ್ಕೆ ರಾಯಭಾಗ ತಾಲೂಕ ಹಾಗೂ ನೈರುತ್ಯದಲ್ಲಿ ಚಿಕ್ಕೋಡಿ ತಾಲೂಕು ಇದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡು, ಮುಂಬಯಿ ಪ್ರಾಂತ್ಯದ ಭಾಗವಾಗಿದ್ದರಿಂದ ಅಥಣಿ ಹಾಗೂ ಅಥಣಿ ತಾಲೂಕಿನ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಮರಾಠಿಯ ಪ್ರಭಾವ ಅಲ್ಲಿಯ ಜನರ ಜೀವನ ನಡೆ-ನುಡಿ, ವ್ಯವಹಾರಗಳಲ್ಲಿ ಅನಿವಾರ್ಯವಾಗಿತ್ತು. ಉದಾರ ಮನೋಭಾವವನ್ನು ಹೊಂದಿದ ನಮ್ಮ ಕನ್ನಡಿಗರು, ಮರಾಠಿ ಭಾಷೆಯನ್ನು ವ್ಯವಹಾರದಲ್ಲಿ ಚೆನ್ನಾಗಿಯೇ ಅಳವಡಿಸಿಕೊಂಡಿದ್ದರು. ಅಥಣಿಯ ಪೇಟೆಯಲ್ಲಿ ವ್ಯಾಪಾರಸ್ಥರು ೧೯೫೦-೬೦ನೇ ಇಸ್ವಿಯವರೆಗೂ ತಮ್ಮ ಲೆಕ್ಕವನ್ನು ಮರಾಠಿಯಲ್ಲಿಯೇ ಬರೆಯುತ್ತಿದ್ದುದು ಈ ಮಾತಿಗೆ ಸಾಕ್ಷಿಯಾಗಿದೆ. ವ್ಯಾಪಾರಕ್ಕಾಗಿ ನಾವೆಲ್ಲರೂ ಸಮೀಪದ ಸಾಂಗಲಿ ಪೇಟೆಗೆ ಇಂದಿಗೂ ಹೋಗುತ್ತೇವೆ. ನಮ್ಮ ಧಾನ್ಯಗಳನ್ನು ಸಾಂಗಲಿ ಪೇಟೆಗೆ ಮಾರಾಟಕ್ಕಾಗಿ ಕಳಿಸುತ್ತೇವೆ. ಮನೆ ಕಟ್ಟಲು ಬೇಕಾಗುವ ಸಾಮಗ್ರಿ, ಯಂತ್ರೋಪಕರಣ ಮುಂತಾದವುಗಳಿಗಾಗಿ ನಾವು ಕೊಲ್ಲಾಪುರ, ಸಾಂಗಲಿ ಪೇಟೆಗೆ ಹೋಗುವುದು ಸಾಮಾನ್ಯವಾಗಿದೆ. ಸುತ್ತಮುತ್ತಲೂ ಬೆಳೆಯುವ ಕಬ್ಬು, ಕಾಯಿಪಲ್ಯೆ, ಹಾಲು ಇವುಗಳಿಗೆ ಹೆಚ್ಚಿನ ಬೇಡಿಕೆ ಇರುವುದು ನೆರೆ ಪ್ರದೇಶವಾದ ಮಹಾರಾಷ್ಟ್ರದಲ್ಲಿ ಎಂದರೆ ತಪ್ಪಾಗಲಿಕ್ಕಿಲ್ಲ. ಉದ್ಯೋಗಕ್ಕಾಗಿ, ಕೂಲಿ ಕೆಲಸಕ್ಕಾಗಿ, ವೈದ್ಯಕೀಯ ಸೇವೆ ಪಡೆಯಲು, ರೇಲ್ವೆ ಸೌಲಭ್ಯ ಹೀಗೆ ಹತ್ತು ಹಲವು ಕಾರಣಕ್ಕಾಗಿ ಈ ಭಾಗದ ಜನರು ಮಿರಜ, ಸಾಂಗಲಿ, ಕೊಲ್ಲಾಪುರ, ಕರಾಡ, ಪುಣೆ ಹೀಗೆ ದಿನಾಲು ನಾವು ಪ್ರಯಾಣ ಬೆಳೆಯಿಸುತ್ತೇವೆ.

ಅಥಣಿ ತಾಲೂಕು ಧಾರ್ಮಿಕ ಕೇಂದ್ರವಾಗಿರುವುದರಿಂದ ಮಹಾರಾಷ್ಟ್ರದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಮಂಗಸೂಳಿ ಮಲ್ಲಯ್ಯ, ಬಿಳೇಗಾವ ಬಸವಣ್ಣ, ಕೊಕಟನೂರು ಎಲ್ಲಮ್ಮ, ಶ್ರೀ ಶಿವಯೋಗಿ ಮುರಘೇಂದ್ರ ಸ್ವಾಮಿಗಳ ಗಚ್ಚಿನ ಮಠ, ರಾಮತೀರ್ಥ ಹೀಗೆ ಅನೇಕ ಕ್ಷೇತ್ರಗಳಿಗೆ ದೂರದಿಂದ ಭಕ್ತರು ಆಗಮಿಸುತ್ತಾರೆ. ಕರ್ನಾಟಕದ ಭಕ್ತರು ಕೊಲ್ಲಾಪುರದ ಮಹಾಲಕ್ಷ್ಮಿಗೆ, ಜ್ಯೋತಿಬಾ ದತ್ತ ಕ್ಷೇತ್ರ, ನರಸೋಬಾವಾಡಿ ಹೀಗೆ ಅಲ್ಲಿಗೆ ಹೋಗುವುದು ರೂಢಿಯಾಗಿದೆ. ಸಹಜವಾಗಿ ಮರಾಠಿ ಭಾಷೆಯ ಜ್ಞಾನ ಇಲ್ಲಿ ಜನಸಾಮಾನ್ಯರಿಗೂ ಇದೆ. ಉಗಾರಬುರ್ದದಲ್ಲಿ ಸಕ್ಕರೆ ಕಾರ್ಖಾನೆಯ ಸ್ಥಾಪಕರಾದ ಶಿರಗಾವಕರ ಇವರು ಮಹಾರಾಷ್ಟ್ರದವರಾಗಿದ್ದು, ಇಲ್ಲಿಯ ಜನರಿಗೆ ಉದ್ಯೋಗ ಅವಕಾಶ ಒದಗಿಸಿದ್ದಾರೆ. ಕಲೆ, ಸಂಸ್ಕೃತಿ, ಸಾಹಿತ್ಯ ಶಿಕ್ಷಣಕ್ಕೆ ಸೂಕ್ತ ವಾತಾವರಣ ನಿರ್ಮಿಸಿದ್ದಾರೆ. ಗಜಾನನ ಉತ್ಸವದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ-ಮರಾಠಿಗರ ಬಾಂಧವ್ಯಕ್ಕೆ ಜೀವಂತ ಉದಾಹರಣೆಯಾಗಿವೆ. ಎರಡೂ ಭಾಷೆಯ ಶ್ರೇಷ್ಠ ನಾಟಕಗಳು ಪ್ರದರ್ಶನಗೊಂಡು ಜನರಿಗೆ ಆಸಕ್ತಿ ಮೂಡಿಸುತ್ತವೆ.

ಅಥಣಿಗೆ ೧೯೧೭ರಲ್ಲಿ ಲೋಕಮಾನ್ಯ ತಿಲಕರು ಭೇಟಿ ನೀಡಿ, ಇಲ್ಲಿಯ ಪೂಜ್ಯ ಶ್ರೀ ಶಿವಯೋಗಿ ಮುರಘೇಂದ್ರ ಸ್ವಾಮಿಗಳನ್ನು ಭೇಟಯಾದುದು, ಶ್ರೀ ಸಿದ್ಧೇಶ್ವರ ಮೋಘತ ವಾಚನಾಲಯವು ಸ್ಥಾಪನೆಗೊಂಡಿರುವುದು, ನಮ್ಮ ನಾಡಿನ ನೆಲದ ಗೌರವವನ್ನು ಹೆಚ್ಚಿಸಿದೆ. ೧೯೧೮ರಲ್ಲಿ ಪ್ರಾರಂಭವಾದ ಅಥಣಿ ಶಿಕ್ಷಣ ಸಂಸ್ಥೆ ಸ್ಥಾಪನೆಗೊಳ್ಳಲು, ಪ್ರೇರಕವಾದದ್ದು, ಪುಣೆ ಡೆಕ್ಕನ ಎಜ್ಯುಕೇಶನ್ ಸೊಸೈಟಿ ಎಂಬ ವಿಷಯ ಗಮನಾರ್ಹ ವಾದುದು. ನಂತರ ಅದುವೇ ಜಾಧವಜಿ ಶಿಕ್ಷಣ ಸಂಸ್ಥೆಯಾಗಿ ಇಂದಿಗೂ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಲಿದೆ. ಈ ಸಂಸ್ಥೆಯಲ್ಲಿ ಮರಾಠಿ ಮಾಧ್ಯಮ ದಲ್ಲಿಯೂ ಶಿಕ್ಷಣ ವ್ಯವಸ್ಥೆ ಮಾಡಿರುವುದು ಕನ್ನಡ ಮರಾಠಿ ಎರಡೂ ಭಾಷೆಗೆ ಗಡಿನಾಡಿನಲ್ಲಿ ಸಮಾನ ಗೌರವ, ಅವಕಾಶ ನೀಡಿರುವುದಕ್ಕೆ ಸಾಕ್ಷಿಯಾಗಿದೆ.

ಹಿಂದಿನ ತಲೆಮಾರಿನ ಲೇಖಕರಾದ ಬಾಬಾಸಾಹೇಬ ಸಂಗೋರಾಮ, ಮನೋಹರ ರಾವ್ ದೇಶಪಾಂಡೆ, ಆರ್.ಪಿ.ಕುಲಕರ್ಣಿಯವರು ಮರಾಠಿ, ಕನ್ನಡ ಹೀಗೆ ಎರಡೂ ಭಾಷೆಗಳ ಕೃತಿಗಳನ್ನು ರಚಿಸಿದ್ದಾರೆ. ಆರ್.ಪಿ.ಕುಲಕರ್ಣಿಯವರು ಉತ್ತಮ ವಾಗ್ಮಿ ಗಳಾಗಿದ್ದರು. ಆಧ್ಯಾತ್ಮಿಕ ಪ್ರವಚನಗಳನ್ನು ನೀಡುವುದಕ್ಕಾಗಿ ಸಾಂಗಲಿ, ಪುಣೆ ಮುಂತಾದ ಕಡೆಗೆ ಅವರಿಗೆ ಆಹ್ವಾನ ಇರುತ್ತಿತ್ತು. ಏನಾಪೂರದವರಾದ ಡಾ.ಅ.ರಾ. ತೋರೋ ಅವರು ಮಹಾರಾಷ್ಟ್ರದಲ್ಲಿ ನೆಲೆಸಿ, ಸೇವೆ ಸಲ್ಲಿಸುವುದರ ಜೊತೆಗೆ ಕನ್ನಡ-ಮರಾಠಿ ಭಾಷಾ – ಬಾಂಧವ್ಯದ ರೂವಾರಿಗಳೂ ಎಂದರೆ ತಪ್ಪಾಗಲಿಕ್ಕಿಲ್ಲ. ಪುಣೆಯಲ್ಲಿ ಕನ್ನಡ ಮರಾಠಿ ಸ್ನೇಹ ಸಂವರ್ಧನ ಸಂಘವನ್ನು ಸ್ಥಾಪಿಸಿ, ಅಧ್ಯಕ್ಷರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಪು.ಲ.ದೇಶಪಾಂಡೆಯ ಸತ್ಕಾರ ಸಮಾರಂಭವನ್ನು ಪುಣೆಯಲ್ಲಿ ಆಯೋಜಿಸಿ, ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯ ಕುರಿತು ಕನ್ನಡ ಭಾಷೆಯ ಜನರನ್ನು, ಸಾಹಿತಿಗಳನ್ನು ಒಂದುಗೂಡಿಸಿದ್ದಾರೆ. ಶಿವರಾಮ ಕಾರಂತ, ಎಸ್.ಎಲ್.ಭೈರಪ್ಪ, ಗಿರೀಶ ಕಾರ್ನಾಡ ಮೊದಲಾದವರು ಮಹಾರಾಷ್ಟ್ರದ ಓದುಗರ ಹೃದಯವನ್ನು ತಲುಪಿರುವುದು ಒಂದು ವಿಶೇಷವೇ ಆಗಿದೆ. ಪುಣೆ, ಮುಂಬಯಿ, ದಿಲ್ಲಿ ಮುಂತಾದ ಭಾಗದಲ್ಲಿ ವಾಸಿಸುತ್ತಿರುವ ಕನ್ನಡಿಗರು ಕರ್ನಾಟಕ ಸಂಘಗಳನ್ನು ಸ್ಥಾಪಿಸಿ, ಅಲ್ಲಿಯ ಆಸಕ್ತರೊಂದಿಗೆ ಬೆರೆತು ಎಡೂ ಭಾಷೆಗಳ, ಸಂಸ್ಕೃತಿಗಳ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಥಣಿ ತಾಲೂಕಿನ ಶೇಡಬಾಳದ ಪ್ರಸಿದ್ಧ ಲೇಖಕರಾಗಿದ್ದ ಮಿರ್ಜಿ ಅಣ್ಣಾರಾಯರು ತಮ್ಮ ಕಾದಂಬರಿಗಳಲ್ಲಿ ಗಡಿನಾಡಿನ ಭಾಷೆ, ಅಲ್ಲಿಯ ಪರಿಸರದ ವರ್ಣನೆ, ಜೀವನದ ಶೈಲಿಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಅವರ ‘ನಿಸರ್ಗ’ ಕಾದಂಬರಿಯು ಕನ್ನಡ ಸಾಹಿತ್ಯ ಲೋಕಕ್ಕೆ ಅಪೂರ್ವವಾದ ಕೊಡುಗೆ ಎಂದು ಎಲ್ಲಾ ವಿಮರ್ಶಕರು ವಿಶ್ಲೇಷಿಸಿದ್ದಾರೆ. ಅದೇ ರೀತಿ ಏನಾಪೂರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ತಮ್ಮ ಬಾಲ್ಯ ಜೀವನವನ್ನು ಸಾಗಿಸಿದ್ದ ದು.ನಿಂ.ಬೆಳಗಲಿ ಅವರು ತಮ್ಮ ಕಥೆ, ಕಾದಂಬರಿಗಳಲ್ಲಿ ಗಡಿಭಾಗದ ನೈಜ ಚಿತ್ರಣವನ್ನು, ಆಡು ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಓದುಗರಿಗೆ ಒಂದು ಹೊಸ ಅನುಭವವನ್ನು ಒದಗಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಲೇಖಕರಾದ ಶ್ರೀ ಚಂದ್ರಕಾಂತ ಪೋಕಳೆ, ಸರಜೂಕಾಟ್ಕರ್, ಡಾ. ರಾಮಕೃಷ್ಣ ಮರಾಠೆ, ಡಿ.ಎಸ್.ಚೌಗುಲೆ ಅವರು ಅನೇಕ ಮರಾಠಿ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ, ಪರಿಚಯಿಸಿದ್ದಾರೆ. ನಿಜವಾಗಿಯೂ ಅವರ ಸೇವೆ ಸ್ಮರಣೀಯ. ಮರಾಠಿಯ ಜ್ಞಾನೇಶ್ವರಿಯ ಮೇಲೆ ಕನ್ನಡದ ಪ್ರಭಾವ ಕುರಿತು ಬೆಳಗಾವಿಯ ಖ್ಯಾತ ಸಂಶೋಧಕ ಶ್ರೀ ರಂ.ಶಾ.ಲೋಕಾಪುರ ಅವರ ಗ್ರಂಥ ನಿಜಕ್ಕೂ ಅಭ್ಯಾಸಪೂರ್ಣ ಹಾಗೂ ಅಪೂರ್ವ ಕೊಡುಗೆಯಾಗಿದೆ. ಹೀಗೆ ಅನೇಕರು ಕನ್ನಡ-ಮರಾಠಿ ಎರಡೂ ಭಾಷೆಗಳನ್ನು ಅಧ್ಯಯನ ಮಾಡಿ ಪರಸ್ಪರ ಕೊಡುಕ್ಕೊಳ್ಳುವಿಕೆಯ ತಿಳುವಳಿಕೆಯನ್ನು ನೀಡಿದ್ದಾರೆ.

ಅಥಣಿಯಲ್ಲಿ ೧೯೫೨ರಲ್ಲಿ ಸಾಹಿತ್ಯ ಸಾಂಸ್ಕೃತಿಕ ಸಂಘವು ವರಕವಿ ದ.ರಾ.ಬೇಂದ್ರೆ ಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಸಾಂಗಲಿ ವಿಲಿಂಗ್ಡನ್ ಕಾಲೇಜಿನ ಪ್ರಾಚಾರ್ಯರಾದ ಡಾ.ರಂ.ಶ್ರೀ.ಮುಗಳಿಯವರು ಆಗಾಗ್ಗೆ ಅಥಣಿಗೆ ಬರುತ್ತಿದ್ದರು. ಅಥಣಿಯ ಅನೇಕ ವಿದ್ಯಾರ್ಥಿಗಳೂ ಕನ್ನಡ ವಿಷಯವನ್ನು ಆಯ್ಕೆ ಮಾಡಿಕೊಂಡು ರಂ.ಶ್ರಿ.ಮುಗಳಿ ಅವರ ಮಾರ್ಗದರ್ಶನದಿಂದ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾದ ಸಂಗತಿ ವಿಶೇಷವಾಗಿದೆ. ಈ ದಿಶೆಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಸಂಘವು ಕನ್ನಡ-ಮರಾಠಿ ಭಾಷೆಯ ಸಾಹಿತಿಗಳನ್ನು ಬರಮಾಡಿಕೊಂಡು ಗಡಿಭಾಗದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸುವಲ್ಲಿ ಸಫಲವಾಗಿದೆ. ೨೦೦೫ ಫೆಬ್ರವರಿಯಲ್ಲಿ ಜರುಗಿದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಗಡಿನಾಡ ಗೋಷ್ಠಿಯನ್ನು ಅರ್ಥಪೂರ್ಣವಾಗಿ ಏರ್ಪಡಿಸಿ, ಭಾಷಾ ಬಾಂಧವ್ಯದ ಪರಂಪರೆಯನ್ನು ಜೀವಂತವಾಗಿರಿಸಿದೆ.

ಅಥಣಿ ಪರಿಸರದ ಜೀವನವು, ಮಹಾರಾಷ್ಟ್ರದ ಜನರ ಜೀವನದೊಡನೆ ಬೆರೆತು ಒಂದಾಗಿದೆ. ಇಲ್ಲಿಯ ಅನೇಕ ಅಕ್ಕ ತಂಗಿಯರು ಮಹಾರಾಷ್ಟ್ರದ ಸೊಸೆಯಾಗಿ ಹಾಗೂ ಅಲ್ಲಿಯ ಹೆಣ್ಣುಮಕ್ಕಳು, ಕನ್ನಡ ನಾಡಿನ ಮಗಳಾಗಿ ಬಂದು ತಮ್ಮ ಸಂಸ್ಕೃತಿ, ಪರಂಪರೆ, ಏಕತೆಗೆ ಸಾಕ್ಷಿಯಾಗಿದ್ದಾರೆ. ಜೀವನದಲ್ಲಿ ಕೂಡಿ ಬಾಳುವ ಕಲೆ ಕರಗತವಾದಾಗ ಬಾಳು ಸುಂದರವಾಗುವುದು, ಸಾರ್ಥಕವಾಗುವುದು. ಅಂತೆಯೇ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ರು ‘ನಾವೆಲ್ಲ ಒಂದು ಮನೆಯವರಣ್ಣ ತಮ್ಮಂದಿರು, ನಮ್ಮೆಲ್ಲರನು ಪಡೆದುದೊಂದೆ ನಾಡಿನ ಬಸಿರು’ ಕನ್ನಡ ತಾಯಿಗೆ ಒಡವೆಯ ಇಡಿಸುವೆ ಪದಗಳ ಎಂದು ಜಯದೇವಿತಾಯಿ ಲಿಗಾಡೆ ಅವರು ಕನ್ನಡ ಪ್ರೇಮವನ್ನು ಬಿಚ್ಚುಮನಸ್ಸಿನಿಂದ ಅರುಹಿದ್ದಾರೆ. ಅವರ ಆಶಯದಂತೆ ನಾವೆಲ್ಲ ಒಂದಾಗಿ, ಚೆಂದಾಗಿ, ಪ್ರೀತಿ, ವಿಶ್ವಾಸದಿಂದ ಬಾಳಬೇಕು. ಒಟ್ಟಾಗಿ ಬಾಳಿದರೆ ಅಭಿವೃದ್ದಿ ಸಾಧ್ಯ. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ವಿಶಾಲ ಮನಸ್ಸಿನಿಂದ, ತೆರೆದ ಹೃದಯದಿಂದ, ಅಂತಃಕರಣದಿಂದ ಬಾಳನ್ನು ಸಾಗಿಸುತ್ತ ಎಲ್ಲರಿಗೂ ಮಾದರಿಯಾಗೋಣ.

ರಾಜಕೀಯ ಲಾಭಕ್ಕಾಗಿ, ಜನರ ಮನಸ್ಸಿನಲ್ಲಿ ಕಹಿ ಭಾವನೆ ಮೂಡಿಸಿ, ನಮ್ಮ ಪ್ರೀತಿ, ವಿಶ್ವಾಸಕ್ಕೆ, ಶಾಂತಿ, ಸಮಾಧಾನಕ್ಕೆ ಪೆಟ್ಟು ನೀಡುವ ಹುನ್ನಾರ ನಡೆದೇ ಇರುತ್ತದೆ. ನಾವು ಅದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೇ, ಶಾಂತ ಚಿತ್ತರಾಗಿ, ವಿಚಾರವಂತರಾಗಿ, ಸತ್ಯಾಸತ್ಯತೆ ಅರಿತು ಸರಿಯಾದ ಮಾರ್ಗದಲ್ಲಿ ಸಾಗಿ, ಅನಾಹುತಗಳನ್ನು ತಪ್ಪಿಸಿ, ನಮ್ಮ ದೇಶದ ಏಕತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ನಾವು ಭಾರತೀಯರು, ಶಾಂತಿ ಪ್ರಿಯರು, ಸ್ನೇಹ ಜೀವಿಗಳು ಎಂಬುದನ್ನು ಮರೆಯದೇ ನಮ್ಮ ರಾಷ್ಟ್ರದ ಗೌರವವನ್ನು ಕಾಪಾಡಬೇಕು. ‘ಸಾರೇ ಜಹಾಂಸೆ ಅಚ್ಚಾ ಹಿಂದುಸ್ತಾನ, ಹಮಾರಾ’ ಎಂಬ ಮಾತನ್ನು ಸಾಕಾರಗೊಳಿಸಬೇಕಾಗಿದೆ. ‘ಒಂದು-ಒಂದು ನಾವೆಲ್ಲ ಒಂದು’ ಎಂಬುದು ನಮ್ಮ ಪ್ರತಿಜ್ಞೆ. ಆ ದಿಶೆಯಲ್ಲಿ ನಾವು ಪರಸ್ಪರ ಭಾಷೆ, ಸಂಸ್ಕೃತಿ, ಜೀವನವನ್ನು ಗೌರವಿಸಿಕೊಂಡು ಬಾಂಧವ್ಯ ಬೆಳೆಸೋಣ.