ಪೀಠಿಕೆ

ಅಥಣಿ ತಾಲ್ಲೂಕು ಧರ್ಮ, ಸಂಸ್ಕೃತಿ, ಸಾಮಾಜಿಕ, ರಾಜಕೀಯ, ಸಾಹಿತ್ಯಿಕ ಮುಂತಾದ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ತನ್ನ ವೈಶಿಷ್ಟ್ಯವನ್ನು ಕಾಪಾಡಿಕೊಂಡು ಬಂದಿದೆ. ಅಥಣಿ ತಾಲೂಕು ಕರ್ನಾಟಕ ರಾಜ್ಯದ ವಾಯುವ್ಯದಲ್ಲಿರುವ ಬೆಳಗಾವಿ ಜಿಲ್ಲೆಯ ಉತ್ತರಕ್ಕಿದೆ. ಇಲ್ಲಿ ಕೃಷ್ಣಾ ನದಿ ಹರಿಯುತ್ತಿರುವು ದರಿಂದ ಸೃಷ್ಟಿ ಸೌಂದರ್ಯದ ತವರೂರು. ವೇದ ಪುರಾಣಗಳ ಕಾಲದಿಂದಲೂ ಇತಿಹಾಸ ಪ್ರಸಿದ್ಧವಾಗಿದೆ. ಅನೇಕ ಪುಣ್ಯ ಪುರುಷರ ಕರ್ಮಭೂಮಿ ಎನಿಸಿದೆ. ಬೆಳವಲ ನಾಡಿನಲ್ಲಿರುವ ಅಥಣಿ ಉತ್ತರದಲ್ಲಿ ಮಹಾರಾಷ್ಟ್ರ ರಾಜ್ಯವಿದೆ. ದಕ್ಷಿಣಕ್ಕೆ ರಾಯಭಾಗ ಮತ್ತು ಜಮಖಂಡಿ ತಾಲೂಕುಗಳಿವೆ. ಪೂರ್ವಕ್ಕೆ ಬಿಜಾಪುರ ಜಿಲ್ಲೆ ಪಶ್ಚಿಮಕ್ಕೆ ಮಹಾರಾಷ್ಟ್ರದ ಶಿರೋಳ ತಾಲೂಕಿದೆ. ಅಥಣಿ ತಾಲೂಕಿನಲ್ಲಿ ಒಟ್ಟು ೮೯ ಜೊತೆಗೆ ೨೭ ಮಜರೆ ಹಳ್ಳಿಗಳು, ಅವುಗಳನ್ನು ಅನಂತಪೂರ, ಅಥಣಿ, ಕಾಗವಾಡ ಹಾಗೂ ತೆಲಸಂಗ ಎಂದು ನಾಲ್ಕು ಹೋಬಳಿಗಳಾಗಿ ವಿಂಗಡಿಸಲಾಗಿದೆ. ಅಥಣಿ ಹಾಗೂ ಕಾಗವಾಡ ಎರಡು ವಿಧಾನ ಸಭಾ ಮತಕ್ಷೇತ್ರಗಳನ್ನು ಹೊಂದಿದ್ದು. ಚಿಕ್ಕೋಡಿ ಲೋಕ ಸಭಾಕ್ಷೇತ್ರಕ್ಕೆ ಒಳಪಟ್ಟಿವೆ. ಅಥಣಿ ತಾಲೂಕಿನಲ್ಲಿ ೩೬ ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳು. ಗ್ರಾಮ ಪಂಚಾಯತಿ ಕ್ಷೇತ್ರಗಳನ್ನು ಕಾಣುತ್ತೇವೆ. ಅಥಣಿ ಪಟ್ಟಣವು ಪುರಸಭೆಯನ್ನು ಹೊಂದಿದೆ. ಇದು ಕ್ರಿ.ಶ.೧೮೫೩ರಲ್ಲಿ ಸ್ಥಾಪನೆಯಾಯಿತು. ಬೆಳಗಾವಿಯು ೨೮/೪/೧೯೩೬ ರಂದು ಜಿಲ್ಲೆಯಾಗಿ ಘೋಷಿಸಲ್ಪಟ್ಟಾಗ ಗೋಕಾಕ, ಚಿಕ್ಕೋಡಿ, ಪಾಶ್ರಾದಿಂರ, ಬಿಟ, ಸಂಪಗಾಂವ ಪರಸಗಡು ಇವುಗಳ ಜೊತೆಗೆ ಅಥಣಿಯು ತಾಲೂಕಾಗಿ ಘೋಷಿಸಲ್ಪಟ್ಟಿತು.

ಅಥಣಿ ಮೂಲ ಹೆಸರು

 • ಕ್ರಿ.ಶ. ೧೬೩೯ರಲ್ಲಿ ಜರ್ಮನ್ ಪ್ರವಾಸಿಗ ಮಂಡೆಲ್ ಸ್ಲೂ ಎಂಬುವವರು ‘‘ಅಟ್ಟನಿ’’ ಎಂದಿದ್ದಾರೆ. ಆಗ ಬಿಜಾಪುರ-ಗೋವೆಯ ನಡುವೆ ವ್ಯಾಪಾರ ಕೇಂದ್ರವಾಗಿತ್ತು.
 • ಕ್ರಿ.ಶ.೧೬೭೫ರಲ್ಲಿ ಆಂಗ್ಲ ಪ್ರವಾಸಿಗ ‘‘ಪ್ಲೇಯರ್’’ ಇದಕ್ಕೆ ‘‘ಹಟ್ಟೇನಿ’’ ಎಂದನು. ಹಸ್ತಿನಿ-ಅಸ್ತಿನಿ-ಅಥನಿ-ಅಥಣಿ ಆಗಿರಬಹುದೆಂಬ ಪ್ರತೀತಿ ಇದೆ.
 • ಕ್ರಿ.ಶ.೧೯೩೪ರಲ್ಲಿ ಅಥಣಿಯಲ್ಲಿ ಜರುಗಿದ ಪ್ರಥಮ ಬೆಳಗಾವಿ ಜಿಲ್ಲಾ ಕ.ಸಾ. ಸಮ್ಮೇಳನದ ಅಧ್ಯಕ್ಷರಾಗಿ, ಬಿ.ಎಂ.ಶ್ರೀಯವರು ಮಾತನಾಡಿ, ಇದು ಗ್ರೀಸ್ ದೇಶದ ‘ಅಥೇನ್ಸ್’ ಪಟ್ಟಣದಂತೆ ಇರುವುದರಿಂದ ಅಥೇನ್ಸ್ ಪಟ್ಟಣದ ಮತ್ತೊಂದು ರೂಪವೇ ಅಥಣಿ ಎಂದಿದ್ದಾರೆ.
 • ಬಿಜಾಪುರ ಆದಿಲ್‌ಶಾಹಿ ಆಡಳಿತ ಒಂದೆಡೆಯಾದರೆ, ಇನ್ನೊಂದೆಡೆ ಶಿವಾಜಿಯ ಆಡಳಿತ ಇತ್ತು. ಈ ಎರಡೂ ಸಾಮ್ರಾಜ್ಯಗಳ ಸೀಮೆಯಲ್ಲಿರುವ ಪ್ರದೇಶವೇ ಅಥಣಿ. ಇದಕ್ಕೆ ಯಾರು ಧಣಿಯಾಗಿರಲಿಲ್ಲ. ಆದ್ದರಿಂದ ಇದನ್ನು ಅಧಣಿ ಎಂದು ಕರೆಯಲಾಯಿತು.
 • ಇಲ್ಲಿ ಶಿವಯೋಗಿಗಳೇ ಧಣಿಗಳಾಗಿರುವರು. ಅವರ ಬಿಟ್ಟು ಬೇರೆ ಧಣಿಗಳಾರೂ ಇಲ್ಲವೆಂಬ ನಂಬಿಕೆ ಕೂಡ ಇರುವುದರಿಂದ ಅಥಣಿ ಎಂದು ಪ್ರಸಿದ್ದಿ ಪಡೆಯಿತು.
 • ರಾಜಕೀಯ ಪಾತ್ರ – ರಾಜಕೀಯ ಎಂಬ ಪದವನ್ನು ಮಾನವನ ವಾಸ್ತವಿಕ ದೈನಂದಿನ ರಾಜಕೀಯ ಚಟುವಟಿಕೆಗಳನ್ನು ವಿವರಿಸಲು ಬಳಸುತ್ತೇವೆ.

ರಾಜಕೀಯ ಎಂದರೆ : ‘‘ಹೋರಾಟದ ಮೂಲಕ ಶಕ್ತಿಯನ್ನು ಸ್ವಾಧೀನ ಪಡಿಸಿಕೊಂಡು, ಅದರ ಮೂಲಕ ರಾಜಕೀಯ ಧ್ಯೇಯೋದ್ದೇಶಗಳನ್ನು ಜನರ ಏಳಿಗೆಗಾಗಿ ಅನುಷ್ಠಾನಕ್ಕೆ ತರುವುದರ ಜೊತೆಗೆ ಸರಕಾರ, ಅದರ ವಿವಿಧ ಲಿಂಗಗಳು ಹಾಗೂ ಜನರ ವಾಸ್ತವಿಕ ರಾಜಕೀಯ ಚಟುವಟಿಕೆಗಳ ಪ್ರಾಯೋಗಿಕ ನಿರ್ವಹಣೆಯೇ ರಾಜಕೀಯ ಅಥವಾ ರಾಜಕಾರಣ ಎನ್ನುವರು.

 • ರಾಜಕೀಯ ಮತ್ತು ಆಡಳಿತ : ರಾಜಕೀಯ ಎನ್ನುವುದು ಅಧಿಕಾರ ಪಡೆಯುವುದನ್ನು ತಿಳಿಸುತ್ತದೆ. ಆದರೆ ಅದೇ ಅಧಿಕಾರದಿಂದ ಆಡಳಿತಾತ್ಮಕ ಚಟುವಟಿಕೆಗಳನ್ನು ಅಭಿವೃದ್ದಿ ಪಡಿಸುವಲ್ಲಿ ರಾಜಕೀಯವು ಆಡಳಿತದ ಜೊತೆ ನಿಕಟವಾದ ಸಂಬಂಧವನ್ನು ಹೊಂದಿದೆ.
 • ರಾಜಕೀಯ ಮತ್ತು ನಾಯಕತ್ವ : ಭಾರತದಲ್ಲಿ ಪಕ್ಷ ಪದ್ಧತಿಯು ಪ್ರಭಾವಿತವಾಗಿದೆ. ಈ ಪಕ್ಷ ಪದ್ಧತಿಯಲ್ಲಿ ರಾಜಕೀಯ ಪಕ್ಷಗಳು ಭಾಗವಹಿಸುತ್ತವೆ. ಇದರ ಮೂಲಕ ಸಾಮಾನ್ಯ ಪ್ರಜೆಗಳು ರಾಜಕೀಯ ಚಟುವಟಿಕೆಗಳಲ್ಲಿ ಪಕ್ಷಗಳ ಮೂಲಕ ಸ್ಪರ್ಧಿಸುವುದರಿಂದ ನಾಯಕತ್ವದ ತರಬೇತಿಯನ್ನು ಪಡೆದುಕೊಳ್ಳುವುದರ ಜೊತೆಗೆ ರಾಜಕೀಯ ಸ್ಥಿತಿಗತಿಯನ್ನು ಕಂಡುಕೊಳ್ಳಬಹುದು.

ಸ್ವಾತಂತ್ರ್ಯ ಪೂರ್ವ ಅಥಣಿಯ ರಾಜಕೀಯ ಇತಿಹಾಸ

ಅಥಣಿ ಪ್ರದೇಶವು ಯಾವ ಯಾವ ರಾಜರ ಆಳ್ವಿಕೆಗೆ ಒಳಪಟ್ಟಿದೆಂಬುದನ್ನು ಗಮನಿಸಿದರೆ, ಕ್ರಿ.ಶ.೪೭೯ರ ವರೆಗೆ ಬನವಾಸಿಯ ಕದಂಬರು ಈ ಭಾಗದಲ್ಲಿ ಪ್ರಬಲ ರಾಗಿದ್ದರು. ಕನ್ನಡವನ್ನು ಮೊಟ್ಟ ಮೊದಲ ಆಡಳಿತ ಭಾಷೆಯನ್ನಾಗಿಸಿ ಶಿಲಾಶಾಸನಗಳನ್ನು ಕನ್ನಡದಲ್ಲೇ ಕೆತ್ತಿಸಿದರು. ಹಲ್ಮಿಡಿ ಶಿಲಾಶಾಸನ ಇವರ ಕಾಲದ್ದು. ಕೊಲ್ಲಾಪೂರದವರೆಗಿನ ಭಾಗವು ಅಚ್ಚ ಕನ್ನಡವಾಗಿದ್ದು ಕದಂಬರ ನಂತರ ಬಾದಾಮಿ ಚಾಲುಕ್ಯರು. ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಕಲಚೂರ್ಯರು ದೇವಗಿರಿಯ ಯಾದವರ ೯ನೇಯ ರಾಜನಾದ ರಾಮಚಂದ್ರದೇವನು ಅಲ್ಲಾವುದ್ದೀನ ಖಿಲ್ಜಿ ಫಿಯಾ ಸುದ್ದಿನ ತುಗಲಕ್, ವಿಜಯನಗರದ ಅರಸರು ೧೪ನೇ ಶತಮಾನದ ಮಧ್ಯಕಾಲದವರೆಗೆ ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಯ ಉತ್ತರಕ್ಕೆ ಚಿಕ್ಕೋಡಿ ಅಥಣಿ ಆದಿಲ್‌ಷನ ಅರಸರ ಅಧೀನದಲ್ಲಿತ್ತು. ಅನಂತರ ಯೂಸುಪ್ ಆದಿಲ್‌ಶಾನನ್ನು ಸುಲ್ತಾನರು ೧೭ನೇ ಶತಮಾನದ ಕೊನೆ ಭಾಗದಲ್ಲಿ ಅಥಣಿ ಶಿವಾಜಿ ಅಧೀನದಲ್ಲಿತ್ತು ನಂತರ ದಿಲೊರ ಖಾನನು ನಂತರ ಸಂಬಾಜಿ ನಂತರ ನಿಜಾಮ ಉಲ್ ಮಲ್ಖನು ಕೆಲ ಕಾಲ ಅಥಣಿಯು ಕೊಲ್ಲಾಪುರದ ಅಧೀನದಲ್ಲಿತ್ತು. ನಂತರ ಅಥಣಿ ತಾಸಗಾಂವಗಳು ಸತಾರಾ ಆಡಳಿತಕ್ಕೆ ಒಳಗಾದವು. ಬೆಳಗಾವಿಯು ೨೮-೪-೧೯೩೬ ರಂದು ಜಿಲ್ಲೆಯಾಗಿ ಘೋಷಿಸಲ್ಪಟ್ಟಿತ್ತು. ಆಗ ಪಾಶ್ಚಾಪೂರ ಬೀತಿ ಸಂಪಗಾಂವ ಪರಸಗಡ ಗೋಕಾಕ ಚಿಕ್ಕೋಡಿ ಅಥಣಿ ಹೀಗೆ ೭ ತಾಲೂಕುಗಳಾದವು ನಂತರ ೧೦ ತಾಲೂಕುಗಳಾದವು.

ಸ್ವಾತಂತ್ರ್ಯ ಚಳವಳಿಯಲ್ಲಿ ಅಥಣಿ ತಾಲೂಕಿನ ಪಾತ್ರ

ದೇಶದ ಬಗ್ಗೆ ಹೆಮ್ಮೆ ಪಡುವುದಕ್ಕಿಂತ ದೇಶವೇ ತನ್ನ ಬಗ್ಗೆ ಹೆಮ್ಮೆ ಪಡುವಂತೆ ಬದುಕಬೇಕು ಎಂಬ ಅಬ್ರಾಂ ಲಿಂಕನರ ಮಾತು ನೆನಪಿಸಿ ಕೊಂಡಾಗ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಗಳಿಗೆ ನೆನಪಿಗೆ ಬರುತ್ತದೆ. ಈ ಸಂಗ್ರಾಮದಲ್ಲಿ ಅಥಣಿ ಪರಿಸರವೂ ತನ್ನದೇಯಾದ ಕೊಡುಗೆಗಳನ್ನು ನೀಡಿ ಇತಿಹಾಸ ಪುಟ ಸೇರಿದೆ.

೧೯೧೭ರಲ್ಲಿ ಅಥಣಿಗೆ ಭೇಟಿ ನೀಡಿದ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಸ್ವಾತಂತ್ರ್ಯದಲ್ಲಿ ಹುಟ್ಟು, ಸ್ವಾತಂತ್ರ್ಯದಲ್ಲಿ ವಿರಮಿಸಿ, ಸ್ವಾತಂತ್ರ್ಯದಲ್ಲಿ ಲಯವಾಗುವುದೇ ಧಮಳ ಎಂದು ಹೋರಾಟದ ಕಿಚ್ಚನ್ನು ತುಂಬಿದರು. ಮುರುಘೇಂದ್ರ ಶಿವಯೋಗಿಗಳನ್ನು ಭೇಟಿ ಮಾಡಿದ ತಿಲಕರು ಅವರನ್ನು ತಾವು ಕಂಡ ಕನಸನ್ನು ಅರುಹಿ ಅದು ನನಸಾಗುವುದೇ ಎಂದು ಕೇಳಿದಾಗ ಶಿವಯೋಗಿಗಳು ನೀವು ಕಂಡ ಕನಸು ನನಸಾಗುತ್ತದೆ. ಆದರೆ ಅದನ್ನು ನೋಡಲು ನೀವು ಇರುವುದಿಲ್ಲ ಎಂದರಂತೆ. ಇದು ಸತ್ಯವೆಂಬಂತೆ ತಿಲಕರು ೧೯೨೦ರಲ್ಲಿ ಮುಂಬೈನಲ್ಲಿ ಮಡಿದರು. ಅವರ ಚಿತಾಭಸ್ಮವನ್ನು ಶಿವಪ್ಪ ಜಮಖಂಡಿ ಅವರು ಅಥಣಿಗೆ ತಂದು ಸಿದ್ದೇಶ್ವರ ಮೊಘತ್ತ ವಾಚನಾಲಯದಲ್ಲಿ ಸಂಗ್ರಹಿಸಿದರು ಹಾಗೂ ನೋರೊಂದಪ್ಪ ಶೆಟ್ಟಿಯವರ ಮನೆಯಲ್ಲಿ ಈಗಲೂ ತಿಲಕರು ಧರಿಸುತ್ತಿದ್ದ ಪೇಟ ಇದೆ ಎಂಬುದನ್ನು ಮರೆಯಬಾರದು.

೧೯೨೦ರಲ್ಲಿ ಗುರುಮಾಸ್ತರ ಪೆಜೆಯವರು ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟು, ಸ್ವಾತಂತ್ರ್ಯ ದೊರೆಯುವವರೆಗೂ ತಲೆಗೆ ಟೋಪಿ ಹಾಕದೇ ಕಾಲಿಗೆ ಚಪ್ಪಲಿ ಧರಿಸದೇ ಅಖಂಡ ಬ್ರಹ್ಮಚಾರಿಯಾದರು. ಅಲ್ಲದೇ ೧೯೨೩ರಲ್ಲಿ ನಾಗಪುರ್‌ದಲ್ಲಿ ನಡೆದ ಜೇಂಡಾ ಸತ್ಯಾಗ್ರಹದಲ್ಲಿ ಮಹಿಳಾ ಸ್ವಯಂ ಸೇವಕಿಯರಾದ ಭಾಗೀರಥಿ ಬಾಯಿ ಕುಲಕರ್ಣಿಯವರು ಹಾಗೂ ಶ್ರೀಮತಿ ಅಂಬಾಬಾಯಿ ಬಳೆಗಾರ ಭಾಗವಹಿಸಿ ೧೯೩೦, ೧೯೩೨ ಮತ್ತು ೧೯೪೧ರಲ್ಲಿ ಸೆರೆಮನೆವಾಸ ಅನುಭವಿಸಿದರು. ಇದರಿಂದ ರಾಜಕೀಯ ಹೋರಾಟದಲ್ಲಿ ಅಥಣಿಯ ಕೊಡುಗೆ ಆಗಲೇ ಇತ್ತು ಎಂಬುದು ತಿಳಿದು ಬರುತ್ತದೆ.

೧೯೨೪ರಲ್ಲಿ ಸರ್ದಾರ ಪಟೇಲರು ಕರೆ ನೀಡಿದ್ದ ತೆರಿಗೆ ನಿರಾಕಣೆಯ ಕೂಗು ಅಥಣಿ ತಾಲೂಕಿನ ಕೊಟ್ಟಲಗಿಯಲ್ಲಿ ಪ್ರತಿಧ್ವನಿಸಿತು. ಈಡಿ ಗ್ರಾಮವೇ ಒಗ್ಗಟ್ಟಾಗಿ ತೆರಿಗೆ ನಿರಾಕರಿಸಿತು. ತದನಂತರ ೧೯೨೪ರ ಬೆಳಗಾವಿ AICC ಅಧಿವೇಶನದಲ್ಲಿ ಕೊಟ್ಟಲಗಿ ಗ್ರಾಮಸ್ತರನ್ನು ಅಭಿನಂದಿಸಲಾಯಿತು ಎಂಬುದು ನಮಗೆಲ್ಲ ಹೆಮ್ಮೆ ತರುವ ಸಂಗತಿ.

ಅಲ್ಲದೇ ಕೊಟ್ಟಲಗಿಯಲ್ಲಿ ಮದ್ದು ಗುಂಡು ತಯಾರಿಸುವ ಕಾರ್ಖಾನೆ ಇತ್ತು. ೧೯೨೮ರಲ್ಲಿ ಸರ್ದಾರ್ ಪಟೇಲರು ೧೯೩೩ರಲ್ಲಿ ಮಹಾತ್ಮಗಾಂಧೀಜಿ, ೧೯೩೫ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರು ಅಥಣಿಗೆ ಬೇಟಿ ನೀಡಿದ್ದು ಅವಿಸ್ಮರಣೀಯವಾಗಿದೆ. ೧೯೨೦ರಲ್ಲಿ ಕವಲಗುಡ್ಡದ ಶಾಮರಾವ ಎಂಬುವ ಧೀರ, ಸರಕಾರಿ ನೌಕರಿ ತನಗೊಂದು ಚಾಕರಿ ಎಂದು ಭಾವಿಸಿ, ಪದವೀಧರನಾದರೂ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದು ಸರಿಯೇ.

೧೯೩೦ ರಿಂದ ೧೯೪೨ರ ಹೋರಾಟದಲ್ಲಿ ಅವರಕೊಡದ ಅಣ್ಣಾ ಸಾಹೇಬ ಗೋಪಾಲರಾವ್ ಕುಲಕರ್ಣಿ ಸತ್ತಿಯ ರಾವಸಾಹೇಬ ಅಣ್ಣುಕಾಕಾ ರಾಮ ಬಡೋಜ ಕೊಕಟನೂರು ಸ್ವಾತಂತ್ರ್ಯದ ಶಿಲ್ಪಿಗಳಾಗಿದ್ದರು. ತಂಗಡಿಯ ನಾರಾಯಣರಾಯರು ಹಿಂಡಲಗಾ ಜೈಲಿನಲ್ಲಿ ಕಾಲರಾ ಬೇನೆಯಿಂದ ಕೊನೆಯುಸಿರೆಳೆದರು.

೧೯೩೨ರಲ್ಲಿ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಭೆಗೆ ಅಣ್ಣಾ ಸಾಹೇಬ ಸಿದ್ಧಾಂತಿ, ಅಂಬಾಬಾಯಿ ಬಳೆಗಾರ, ಗೋಪಾಲರಾವ್ ಕುಲಕರ್ಣಿ ಕರ್ನಾಟಕದ ಪ್ರತಿನಿಧಿಗಳಾಗಿ ಭಾಗವಹಿಸಿದ್ದು ಒಂದು ಇತಿಹಾಸವೇ ಸರಿ.ಅಥಣಿ ತಾಲೂಕಿನ ಸತ್ತಿ, ಜುಗಳ, ಕೊಟ್ಟಲಗಿ, ಐನಾಪುರ, ಕೊಕಟನೂರ, ಅಡಹಳ್ಳಿ, ರಾಮತೀರ್ಥ, ಕಕಮರಿ, ಕೌಟಕೊಪ್ಪ, ಉಗಾರ ಕೂರ್ದ, ಶೇಡಬಾಳ, ಮಂಗಸೂಳಿ, ಶಂಕರ ಹಟ್ಟಿ, ಸೌದಿ, ಸಪ್ತಸಾಗರ. ಈ ಗ್ರಾಮಗಳು ಸ್ವಾತಂತ್ರ ಹೋರಾಟಗಾರರ ಕೇಂದ್ರ ಬಿಂದುಗಳಾಗಿದ್ದವು.

೧೯೪೨ರ ಅಗಸ್ಟ್ ೮ ರಂದು ಮುಂಬೈನಲ್ಲಿ ಜರುಗಿದ ಎ.ಐ.ಸಿ.ಸಿ.ಅಧಿವೇಶನದಲ್ಲಿ ಭಾಗವಹಿಸಿದ ಎ.ಎಸ್.ಕುಲಕರ್ಣಿ, ಎ.ಜೆ.ಮಿರಜ, ಎನ್.ವಿ. ದಳವಾಯಿ, ಎನ್.ವಿ. ಕುಲಕರ್ಣಿ ಮೊದಲಾದ ವಕೀಲ ವೃತ್ತಿಯ ಗೆಳೆಯರು ಭಾಗವಹಿಸಿ ಸ್ವಾತಂತ್ರ್ಯದ ಕಿರಣ ಅಥವಾ ಮರಣ ಎಂದು ಆಂದೋಲನದಲ್ಲಿ ಭಾಗವಹಿಸಿದ್ದು ಒಂದು ಐತಿಹಾಸಿಕ ಕ್ಷಣ ಎನ್ನಬಹುದು.

೨೪-೧೧-೧೯೪೨ರ ಕೊತನಟ್ಟಿ ಬಂಗ್ಲೆ ಬ್ರಿಟೀಷರ ಭದ್ರ ಆಸನವೆಂದು ತಿಳಿದು ಪ್ರಹ್ಲಾದರಾವ್ ಕುಲಕರ್ಣಿ, ಪಂಡಿತ ಸತ್ಯಪ್ಪ ದರಿಗೌಡರ ಮುಂತಾದವರು ಅದನ್ನು ಭಸ್ಮಗೊಳಿಸಿದರು. ೧೯೪೨ರ ಡಿಸೆಂಬರ್ ೧೬ ರಂದು ಇದೇ ತಂಡ ಕುಡಚಿಯ ರೈಲ್ವೆ ತಂತಿಗಳನ್ನು ಕಡಿದು ಹಾಕಲಾಯಿತು. ಯಲ್ಪಾರಟ್ಟಿ ಬಂಗ್ಲೆಯನ್ನು ಸುಟ್ಟು ಹಾಕಿತ್ತು. ಚಿಂಚಲಿ ಸ್ಟೇಷನ್ ಆಹುಯಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಜೈಲಿನಲ್ಲಿ ಬಂದಿತರಾದ ಅಡಹಳ್ಳಿಯ ಡಂಬಳಕರ ಬಂಧುಗಳ ಸಾಹಸ ಮರೆಯುವಂತಿಲ್ಲ.

ಅಥಣಿಯ ಶ್ರೀ ಎ.ಎಸ್.ಕುಲಕರ್ಣಿ ಅವರನ್ನು ತಂದೆ ವೀರ ಶ್ಯಾಮರಾಯರನ್ನು ಸತ್ತಿಯಲ್ಲಿ ಮುತ್ತಿಗೆ ಹಾಕಿದ ಪೊಲೀಸರು ಮಗನನ್ನು ಒಪ್ಪಿಸು ಇಲ್ಲದಿದ್ದರೆ ಪಿಸ್ತೂಲಿಗೆ ಎದೆ ಕೊಡು ಎಂದು ಹೆದರಿಸಿದಾಗ ಅವರು ಪಿಸ್ತೂಲಿಗೆ ಎದೆ ಒಡ್ಡಿದರು. ಇದರಿಂದ ಪೊಲೀಸರೆ ಸೋಲುವಂತಾಯಿತು. ೧೯೪೨ರ ಆಂದೋಲನದಲ್ಲಿ ಶ್ರೀ ಎಸ್.ಎಸ್. ಕುಲಕರ್ಣಿ ಐನಾಪೂರದ ಜೆ.ಎಂ.ದೇಶಪಾಂಡೆ ಶಂಕರಹಟ್ಟಿಯ ಮಾದೇವ ಸತ್ತಾರ ಮುಂತಾದವರು ಗಣೇಶವಾಡಿಯ ತರುಣರನ್ನು ಸಂಘಟಿಸಿ ಸಲಗರ ದೊಳಗಾಂವ ಬೆಳ್ಳಂಕ್ಕಿ ಸ್ಟೇಶನ್‌ಗಳನ್ನು ಸುಟ್ಟದ್ದು ಒಂದು ಇತಿಹಾಸವೇ ಸರಿ.

ದಾಂಡೇಲಿಯಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಮತ್ತು ನರಗುಂದದ ಬಾಬಾ ಸಾಹೇಬ ಎಂಬ ನಾಟಕಗಳಲ್ಲಿ ಅಥಣಿಯ ಭೀಮದಾಸರ ಪಾತ್ರ ಮೆಚ್ಚುವಂತದ್ದು. ಈ ನಾಟಕ ನೋಡಲು ಸ್ವತಃ ಗಾಂಧೀಜಿಯವರೇ ಬಂದಿದ್ದರು.

ಗುರುಮಾಸ್ತರ ಜರೆಯವರಿಂದ ಚಿಕ್ಕಟ್ಟಿಯಲ್ಲಿ, ಪ್ರಾರಂಭವಾದ ಸೇವಾದಳದ ಪಾತ್ರ, ಡಾ.ಬಾಬಾ ಕುಲಹಳ್ಳಿಯ ಭಜನೆ ಮಂಡಲ ಕರ್ನಾಟಕ ಪ್ಯಾಟರ್ನ ಮುಂತಾದವುಗಳು ರಾಜಕೀಯ ಸ್ವಾತಂತ್ರ್ಯದಲ್ಲಿ ಮಹತ್ವದ ಪಾತ್ರವಹಿಸಿದವು. ಲೋಕಮಾನ್ಯ ತಿಲಕರು ಹೇಳಿದಂತೆ ‘ಬೆಳಗಾಂವಿ ಸ್ವಾರಾಜ್ಯದ ಕೋಟೆ, ಈ ಕೋಟೆಕಟ್ಟಲು ಅಥಣಿಯು ಸುಭದ್ರ ಇಟ್ಟಿಗೆಯಾಗಿ ಕಾರ್ಯ ನಿರ್ವಹಿಸಿದೆ’ ಎಂಬುದನ್ನು ನೆನಪಿಸಿಕೊಂಡಾಗ ಮೈಯಲ್ಲಿ ರೋಮಾಂಚನಗೊಳ್ಳುತ್ತದೆ.

ಸ್ವಾತಂತ್ರ್ಯನಂತರ ಅಥಣಿಯ ರಾಜಕೀಯ ಸ್ಥಿತಿಗತಿ

ಭಾರತ ಸ್ವಾತಂತ್ರ್ಯನಂತರ ಸುಮಾರು ೨೦-೨೫ ವರ್ಷಗಳ ಕಾಲ ಒಂದೇ ಕುಟುಂಬದ ಅಂದರೆ ದೇಸಾಯಿಯವರ ಮನೆತನದವರ ರಾಜಕೀಯ ನಾಯಕತ್ವದಲ್ಲಿಯೇ ಮುಂದುವರೆಯಿತು. ಆಗಿನ ಪರಿಸ್ಥಿತಿಯಲ್ಲಿ ಅಥಣಿ ಭಾಗದಲ್ಲಿ ಡಿ.ಬಿ.ಪವಾರ ದೇಸಾಯಿ ಅವರು ರಾಜ್ಯ ಸರಕಾರದಲ್ಲಿ ಪ್ರಭಾವಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದು ಅವರ ವ್ಯಕ್ತಿತ್ವಕ್ಕೆ ಅಥಣಿ ಭಾಗದಲ್ಲಿ ಬಹಳಷ್ಟು ಗೌರವದ ಸ್ಥಾನವನ್ನು ಅವರು ಪಡೆದಿದ್ದರೆಂಬುದು ನಮಗೆ ಇತಿಹಾಸದಿಂದ ತಿಳಿದುಬರುತ್ತದೆ.

 • ತದನಂತರದಲ್ಲಿ ಅಥಣಿಯ ಜನರ ಪ್ರೀತಿಗೆ ಪಾತ್ರರಾದವರೆಂದರೆ ಶ್ರೀಮತಿ ಲೀಲಾದೇವಿ ಆರ್.ಪ್ರಸಾದ್ ಅಮ್ಮನವರು. ಅಥಣಿಯ ಶಾಸಕಿಯಾಗಿ ಸುಮಾರು ೨ ಭಾರಿ ಆಯ್ಕೆಗೊಂಡರು. ಅಲ್ಲದೇ ಕರ್ನಾಟಕ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ, ರಾಜ್ಯ ಸಭೆಯ ಸದಸ್ಯರಾಗಿ, ಮಹಿಳಾ ಲೇಖಕಿಯರ ಮುಖಂಡರಾಗಿ, ರಾಜಕೀಯ ಪಕ್ಷದ ಮಹಿಳಾ ವಿಭಾಗದ ಮುಖಂಡರಾಗಿ ಅವರು ಸಲ್ಲಿಸಿದ ಸೇವೆ ಗುರುತರವಾದದ್ದು. ಒಬ್ಬ ಮಹಿಳೆಯಾಗಿ ಅವರು ಏರಿದ ಎತ್ತರ ಅಥಣಿ ರಾಜಕೀಯ ಪರಿಸರದಲ್ಲಿ ಸ್ಮರಣಿಯ ವಾದದ್ದು. ಗಡಿನಾಡಿನ ಶಾಸಕಿಯಾಗಿ ಗಡಿನಾಡು ಉತ್ಸವಕ್ಕೆ ಚಾಲನೆ ಕೊಟ್ಟಿದ್ದು ಇನ್ನೂ ಹೆಮ್ಮೆಯ ಸಂಗತಿ.
 • ತದನಂತರದಲ್ಲಿ ಅಥಣಿಯ ಶಾಸಕರಾಗಿ ರಾಜಕೀಯ ಚುಕ್ಕಾಣಿ ಹಿಡಿದವರು  ಶಹಜಹಾನ ಡೋಂಗರಗಾಂವ ಇವರು. ತಮ್ಮ ಸರಳತೆ ಮತ್ತು ಉದಾತ್ತ ಹಂಬಲದಿಂದ ೫ ವರ್ಷಗಳ ತಮ್ಮ ಅಧಿಕಾರ ಅವಧಿಯಲ್ಲಿ ಸರ್ಕಾರದ ಹಲವಾರು ಇಲಾಖೆಗಳ ಸಚಿವರನ್ನು ಅಥಣಿಗೆ ಕರೆಸಿದ್ದು, ಅನೇಕ ರೀತಿಯ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ಕೊಟ್ಟರು ಮುಖ್ಯವಾಗಿ ನೀರಾವರಿ, ಕೃಷಿ, ಸಣ್ಣ ನೀರಾವರಿ, ಕಂದಾಯ, ಸಮಾಜಕಲ್ಯಾಣ, ಶಿಕ್ಷಣ ಮುಂತಾದ ಇಲಾಖೆಗಳ ಅಭಿವೃದ್ದಿಗೆ ಅವರು ಶ್ರಮಿಸುವ ಮೂಲಕ ಅಥಣಿಯ ಅಭಿವೃದ್ದಿಯಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಕೋಮು ಸೌಹಾರ್ದತೆ ಭಾವೈಕ್ಯತೆಯ ಪ್ರತಿನಿಧಿಯಾಗಿ ಈ ಭಾಗದ ಜನ ಮಾನಸದಲ್ಲಿ ತಮ್ಮ ಸೇವೆಯಿಂದ ರಾಜಕೀಯದಲ್ಲಿ ಗುರುತಿಸಿಕೊಂಡವರು ಎಂದರೆ ತಪ್ಪಾಗಲಿಕ್ಕಿಲ್ಲ.

೨೦೦೪ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆರಿಸಿ ಬಂದವರು ಶ್ರೀ ಲಕ್ಷ್ಮಣ ಸವದಿಯವರು. ಮೂಲತಃ ರೈತರ ಹಿತರಕ್ಷಣಾ ಸಮಿತಿ ಎಂಬ ಸಂಘಟನೆಯಿಂದ ಸಾರ್ವಜನಿಕ ರಂಗಕ್ಕೆ ಬಂದವರು ಶಾಸಕರಾಗಿ ಆಯ್ಕೆಗೊಂಡ ಮೇಲೆ ಅನೇಕ ಜನಪರ ಯೋಜನೆಗಳಿಗೆ ಚಾಲನೆ ದೊರಕಿಸಲು ಶ್ರಮಿಸಿದರು. ಕೃಷ್ಣಾನದಿ ಮಹಾಪೂರದ ಸಂದರ್ಭದಲ್ಲಿ ಅಂದಿನ ಮುಖ್ಯ ಮಂತ್ರಿಗಳನ್ನು ಕರೆದುಕೊಂಡು ಬಂದು ನೆರೆ ಸಂತ್ರಸ್ಥರ ನೆರವಿಗೆ ಪ್ರಯತ್ನಿಸಿದವರು ತಮ್ಮ ರಾಜಕೀಯ ವ್ಯಕ್ತಿತ್ವದಿಂದ ಕ್ಯಾಬಿನೆಟ್ ದರ್ಜೆಯ ಸಮನಾದ ಮುಖ್ಯ ಮಂತ್ರಿಯವರ ಸಂಸದೀಯ ಕಾರ್ಯದರ್ಶಿಗಳಾಗಿ ಬಡ್ತಿ ಪಡೆದವರು. ನೆನೆಗುದಿಗೆ ಬಿದ್ದಿದ್ದ ಹಿಪ್ಪರಗಿ ಆಣೆಕಟ್ಟು ಯೋಜನೆ, ಕರಿಮಸೂತಿ ಯೋಜ,ೆ ಖಿಳೇಗಾಂವ ಬಸವೇಶ್ವರ ಎತನೀರಾವರಿ ಯೋಜನೆಗೆ ಶ್ರಮಿಸಿದರು. ಗಡಿಭಾಗದ ಅಭಿವೃದ್ದಿಗೆ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವಲ್ಲಿ ಜನಮನ್ನಣೆ ಪಡೆದ ನಾಯಕರಾಗಿ ತಮ್ಮ ಸೇವೆ ಸಲ್ಲಿಸಿದವರೆಂದರೆ ತಪ್ಪಾಗಲಿಕ್ಕಿಲ್ಲ.

ಕಾಗವಾಡ ವಿಧಾನ ಸಭಾ ಕ್ಷೇತ್ರದ ರಾಜಕೀಯ ಸ್ಥಿತಿಗತಿ

ಆರಂಭದಲ್ಲಿ ಕಾಗವಾಡ ವಿಧಾನಸಭೆ ಕ್ಷೇತ್ರ ಮೀಸಲು ಕ್ಷೇತ್ರವಾಗಿತ್ತು. ಅಲ್ಲಿನ ಶಾಸಕರಾಗಿ ಆರಿಸಿ ಬಂದವರೆಂದರೆ ಆರ್.ಡಿ.ಕಿತ್ತೂರ. ಅವರ ತದ ನಂತರ ವ್ಹಿ.ಎಲ್.ಪಾಟೀಲರು. ನಂತರ ಜಕನೂರ ಅವರು. ನಂತರ ಪೋಪಟ ಪಾಟೀಲ, ಮೋಹನ ಶಹಾ ರಾಜು ಕಾಗೆ ೨ ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದವರು. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಕೃಷ್ಣಾ ತೀರದ ಹಳ್ಳಿಗಳನ್ನು ಹೆಚ್ಚಾಗಿ ಹೊಂದಿರುವುದು ಈ ಕ್ಷೇತ್ರದ ವೈಶಿಷ್ಟ್ಯ. ವಿ.ಎಲ್.ಪಾಟೀಲ ಅವರು ಕಂದಾಯ ಸಚಿವರಾಗಿಯೂ, ಜಕನೂರ ಅವರು ಸಹಕಾರ ಮಂತ್ರಿಗಳಾಗಿ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸಿದವರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸ್ಥಿತಿಗತಿ

ಅಥಣಿ ಪರಿಸರ ಜೊತೆಯಲ್ಲಿ ರಾಜಕೀಯ ಸಂಬಂಧವಿರುವುದೆಂದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರ. ರಾಜ್ಯದಲ್ಲಿ ಸ್ವಾತಂತ್ರ್ಯ ನಂತರದಿಂದ ಮೊನ್ನೆಯವರೆಗೂ ಮೀಸಲು ಕ್ಷೇತ್ರವಾಗಿಯೇ ಉಳಿದ ಕ್ಷೇತ್ರವೆಂದರೆ ಚಿಕ್ಕೋಡಿ ಕ್ಷೇತ್ರ ಮಾತ್ರ ಎನ್ನುವುದು ಒಂದು ವಿಶೇಷ. ಈ ಕ್ಷೇತ್ರವನ್ನು ಆರಂಭದಲ್ಲಿ ಪ್ರತಿನಿಧಿಸಿದ ಬಿ. ಶಂಕರಾನಂದ ಅವರು ಸುಮಾರು ೭ ಭಾರಿ ಸತತವಾಗಿ ಆಯ್ಕೆಗೊಂಡವರು. ಕೇಂದ್ರ ಸಂಪುಟದಲ್ಲಿ ಆರೋಗ್ಯ, ಸಕ್ಕರೆ ಮುಂತಾದ ಖಾತೆಗಳನ್ನು ನಿರ್ವಹಿಸುವ ಮೂಲಕ ಈ ಭಾಗದ ರಾಜಕೀಯಕ್ಕೆ ಒಂದು ಮಹತ್ವದ ತಿರುವನ್ನು ಕೊಟ್ಟರು. ಅವರ ನಂತರ ರತ್ನ ಮಾಲಾ ಸರ್ವಬಾರ ಒಂದು ಬಾರಿ, ರಮೇಶ ಜಿಗಜಿಣಗಿಯವರು ೨ ಬಾರಿ ಸಂಸದರಾಗಿ ಆಯ್ಕೆಗೊಂಡಿದ್ದಾರೆ.

ಸುಧೀಂದ್ರ ಕುಲಕರ್ಣಿ :  ವಾಜಪೇಯಿವರು ಪ್ರಧಾನಿಯಾದಾಗ ಅವರು ಪತ್ರಿಕಾ ಕಾರ್ಯದರ್ಶಿಯಾಗಿದ್ದರು. ಸುಧೀಂದ್ರ ಕುಲಕರ್ಣಿ ಅವರು ಅಥಣಿಯವರೆಂದರೆ ಆಶ್ಚರ್ಯವೆನಿಸುತ್ತದೆ. ಅಷ್ಟೆ ಅಲ್ಲ, ಶ್ರೀಯುತರು ಎಸ್.ಎಂ.ಎಸ್. ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಯೂ ಹೌದು. ತಮ್ಮ ವೈಯಕ್ತಿಕ ಪ್ರಭಾವ ಬೆಳೆಸಿ ರೂ.೧೧ ಕೋಟಿಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಕೇಂದ್ರದಿಂದ ಮಂಜೂರು ಮಾಡಿಸಿದರು. ಈ ಮೊತ್ತದ ಅನುದಾನ ಭಾರತದಲ್ಲಿಯೇ ಹೆಚ್ಚು ಎಂದು ಹೇಳಲಾಗಿದೆ.

ಡಾ. ಸಂಪತ್ತಕುಮಾರ ಶಿವಣಗಿ : ಅಮೇರಿಕಾ ದೇಶದ ಅಧ್ಯಕ್ಷರ ವಿಶೇಷ ಶಿಫಾರಸ್ಸಿನ ಮೇರೆಗೆ ಭಾರತ ಮತ್ತು ಅಮೇರಿಕಾ ಜಂಟಿ ಆರೋಗ್ಯ ಪಡೆಯ ರಾಷ್ಟ್ರೀಯ ಪರಿಷತ್ತಿನ ಸಲಹೆಗಾರರಾಗಿ ಸೇವೆಯಲ್ಲಿದ್ದು, ಅಲ್ಲದೆ ಅಲ್ಲಿನ ಅಧ್ಯಕ್ಷರ ಆರೋಗ್ಯ ಸಲಹೆಗಾರ ರಾಗಿಯೂ ಕಾರ್ಯನಿರ್ವಹಿಸುತ್ತಿದ್ದರೆಂದರೆ ನಮಗೆಲ್ಲ ಹೆಮ್ಮೆಪಡುವ ವಿಚಾರವಾಗಿದೆ.

ಅವರ ಇಬ್ಬರು ಮಕ್ಕಳಲ್ಲಿ ಒಬ್ಬರು ಆರ್ಥಿಕ ತಜ್ಞರಾಗಿ ಮತ್ತು ರಾಜಕೀಯ ತಜ್ಞರಾಗಿ ಅಮೇರಿಕಾದ ಪ್ರತಿಷ್ಠಿತ ‘ವೈಟ್‌ಹೌಸ್’ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

 • ಬನಸೂಡೆ : ಇವರು ಕರ್ನಾಟಕ ರಾಜ್ಯದಲ್ಲಿಯೇ ಅತೀ ಹೆಚ್ಚು ವಿದ್ಯಾರ್ಹತೆ ಹೊಂದಿದ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಕೀರ್ತಿಗೆ ಭಾಜನರಾಗಿದ್ದಾರೆ. ಇವರು ಹಲ್ಯಾಳ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇವರು ಪಡೆದ ಪದವಿ M.A, L.L.B, ಕ್ರಿಮಿನಾಲೋಜಿ, M.Phil
 • ಇಂದಿನ ಆಧುನಿಕತೆಯಲ್ಲಿ ಮಹಿಳೆಯರು ಕೂಡ ಅಥಣಿ ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್, ಗ್ರಾಮಪಂಚಾಯಿತ್ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ, ಸದಸ್ಯರಾಗಿ, ಹಲವಾರು ಅಭಿವೃದ್ದಿ ಕಾರ್ಯಗಳಲ್ಲಿ ಸಲ್ಲಿಸಿದ ಸೇವೆಯನ್ನು ಗಮನಿಸಿದರೆ ರಾಜಕೀಯದಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲವೆಂದು ಹೇಳಬಹುದು.

ಅಥಣಿಯ ರಾಜಕೀಯ ನಾಯಕತ್ವಕ್ಕೆ ಅಭಿವೃದ್ದಿಯ ಸವಾಲುಗಳು

ಕನ್ನಡದ ಗಡಿಭಾಗವಾಗಿರುವ, ಕೃಷ್ಣೆಯ ತಟದಲ್ಲಿರುವ ಅಥಣಿಯು ಅಗತ್ಯ ಸಂಪನ್ಮೂಲಗಳಿದ್ದರೂ, ಅಭಿವೃದ್ದಿ ಪಥದಲ್ಲಿ ಸಾಗದೇ ಇರುವುದಕ್ಕೆ ಹಲವಾರು ಸವಾಲುಗಳು, ಸಮಸ್ಯೆಗಳಿವೆ. ಅವುಗಳಲ್ಲಿ ಮುಖ್ಯವಾಗಿ;

 • ಕೃಷ್ಣಾ ನದಿಯು ಹರಿಯುತ್ತಿದ್ದರೂ ಅದರ ಪೂರ್ಣ ಉಪಯೋಗವಾಗುತ್ತಿಲ್ಲ. ಪರಿಣಾಮವಾಗಿ ತಾಲೂಕಿನ ಉತ್ತರ ಮತ್ತು ಪೂರ್ವ ಭಾಗಗಳು ಪದೇ ಪದೇ ಬರಗಾಲದಿಂದ ನರಳುತ್ತಿವೆ.
 • ಮುಖ್ಯವಾಗಿ ಐಗಳಿ, ತೆಲಸಂಗ, ಕಕಮರಿ, ಅಡಹಳ್ಳಿ, ಕೊಟ್ಟಲಗಿ, ಯಲಿಹಡಲಗಿ, ಕೋಹಳ್ಳಿ, ಬನ್ನೂರ, ಕನಾಳ, ಹಾಲಳ್ಳಿ ಇತ್ಯಾದಿಗಳು.
 • ಕೃಷ್ಣಾ ನದಿ ತೀರ ಪ್ರದೇಶದ ಗ್ರಾಮಗಳಲ್ಲಿನ ರೈತರು ಹೆಚ್ಚಾಗಿ ಕಬ್ಬಿನ ಬೆಳೆಗೆ ಮೊರೆಹೋಗುತ್ತಿರುವ ಪರಿಣಾಮವಾಗಿ ಸಾವಿರಾರು ಎಕರೆ ಫಲವತ್ತಾದ ಭೂಮಿ ತನ್ನ ಸತ್ವ ಕಳೆದುಕೊಂಡು ನಿರುಪಯುಕ್ತವಾಗುತ್ತಿರುವುದು ಆತಂಕಕಾರಿಯಾಗಿದೆ.
 • ೧೯೭೩ರಲ್ಲಿ ಕೈಗೆತ್ತಿಗೊಂಡ ಹಿಪ್ಪರಗಿ ಜಲಾಶಯ ಯೋಜನೆಯು ಪೂರ್ಣಗೊಂಡಿರುವುದು ಸಂತಸದ ವಿಚಾರ. ಆದರೆ ಈ ಯೋಜನೆಯ ಸಂಪೂರ್ಣ ಪ್ರಯೋಜನೆ ಪಡೆಯಲು ಮಂಜೂರಾಗಿರುವ ಕರಿಮಸೂತಿ ಮತ್ತು ಬಸವೇಶ್ವರ ಏತ ನೀರಾವರಿ ಯೋಜನೆಗಳನ್ನು ಆದಷ್ಟು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಪೂರ್ವ ಮತ್ತು ಉತ್ತರ ಭಾಗದ ಸಮಗ್ರ ನೀರಾವರಿ ಕಲ್ಪಿಸುವುದು ಅವಶ್ಯವಾಗಿದೆ.
 • ತಾಲೂಕಿನ ಉತ್ತರ ಮತ್ತು ಪೂರ್ವ ಭಾಗದ ಬರಪೀಡಿತ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಯೋಜಿತ ‘‘ಪುಟ್ಟಪರ್ತಿ ಶ್ರೀ ಸತ್ಯ ಸಾಯಿಬಾಬಾ ಪ್ರತಿಷ್ಠಾನ’’ದ ನೆರವಿನ ಯೋಜನೆಯೂ ಸಹ ಶೀಘ್ರವಾಗಿ ಸಾಕಾರಗೊಳ್ಳಲು ಜನಪ್ರತಿನಿಧಿಗಳು ಸ್ಪಂಧಿಸಬೇಕಾಗಿದೆ.
 • ಬರಗಾಲ ತಡೆಗಟ್ಟಲು ಶಾಶ್ವತ ಪರಿಹಾರದ ದಿಸೆಯಲ್ಲಿ ಅಥಣಿಗೆ ಸಮೀಪದ ಅಗ್ರಾಣಿ ಹಳ್ಳಕ್ಕೆ ೧೧ ನಾಲಾ-ಬಾಂದಾರಗಳನ್ನು ತ್ವರಿತವಾಗಿ ನಿರ್ಮಿಸುವ ೫ ಕೋಟಿ ರೂಪಾಯಿ ಯೋಜನೆಯ ಪ್ರಸ್ತಾವನೆಗೆ ಸರಕಾರದಿಂದ ಅಂಗೀಕಾರ ಪಡೆದು ಆರಂಭಿಸಬೇಕಾಗಿರು ವುದು ಅತೀ ಮುಖ್ಯವೆನಿಸುತ್ತದೆ.
 • ಅಥಣಿ ತಾಲೂಕಿನ ವೀಳೆದೆಲೆ, ಹತ್ತಿ, ಅರಿಷಿಣ ಮುಂತಾದ ವ್ಯಾಪಾರವು ಪಕ್ಕದ ಮಹಾರಾಷ್ಟ್ರದ ಸಾಂಗ್ಲಿ, ಈಚಲಕರಂಜಿ ಮತ್ತು ಕೊಲ್ಹಾಪೂರ ನಗರಗಳಿಗೆ ಸ್ಥಳಾಂತರಗೊಂಡಿದೆ. ಅದಕ್ಕಾಗಿ ಅಥಣಿಯಲ್ಲಿ ಸರಿಯಾದ ಮಾರುಕಟ್ಟೆ ವ್ಯವಸ್ಥೆ, ತೆರಿಗೆ ನೀತಿ ಪ್ರಕಟಿಸುವುದು ಅವಶ್ಯವೆನಿಸಿದೆ.
 • ಅಥಣಿಯ ಮೂಲಕ ಶೇಡಬಾಳ – ಬಿಜಾಪೂರ ರೈಲು ಮಾರ್ಗದ ನಿರ್ಮಾಣವೂ ಸಹ ತ್ವರಿತವಾಗಿ ಪೂರ್ಣಗೊಳ್ಳುವಂತೆ ಇಲ್ಲಿಯ ನಾಯಕರು ಪ್ರಯತ್ನಿಸಬೇಕಾಗಿದೆ.
 • ವಿಶ್ವಮಟ್ಟದಲ್ಲಿ ಹೆಸರು ಪಡೆದಿರುವ ಅಥಣಿಯ ಚರ್ಮೋದ್ಯಮವು ಉದಾರೀಕರಣದಿಂದ ತತ್ತರಿಸುವಂತಾಗಿದೆ. ಚರ್ಮೋದ್ಯಮದ ರಕ್ಷಿಸಲು ಅಥಣಿಯ ಜನಪ್ರತಿನಿಧಿಗಳು ಗಮನಹರಿಸುವುದು ಅವಶ್ಯವಾಗಿದೆ.
 • ಅಥಣಿ ನಗರದಲ್ಲಿ ಈಗಿರುವ ಉದ್ಯಾನದ ಪರಿಸ್ಥಿತಿ ನೋಡಬಾರದಂತಾಗಿದೆ. ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಒಂದು ಸುಂದರವಾದ ಉದ್ಯಾನವನದ ಬೇಡಿಕೆ ಬಹಳ ದಿನಗಳಿಂದ ಕೇಳಿಬರುತ್ತಿದೆ. ಆದರೂ ಈ ಕುರಿತಂತೆ ಸರಕಾರಗಳು ಇದುವರೆಗೂ ಯಾವುದೇ ಚಕಾರವೆತ್ತಿಲ್ಲ.
 • ಆಧುನಿಕತೆಯ ಗಾಳಿ ಎಲ್ಲೆಡೆ ಬೀಸುತ್ತಿದ್ದರೂ ಅಥಣಿ ಪಟ್ಟಣದ ಸರಕಾರಿ ಕಛೇರಿಗಳ ಮೇಲೆ ಬೀಸಿಲ್ಲವೆಂದರೆ ತಪ್ಪಾಗಲಿಕ್ಕಿಲ್ಲ. ಸಮಸ್ತ ಕಛೇರಿಗಳನ್ನೊಳಗೊಂಡ ‘‘ಮಿನಿ ವಿಧಾನಸೌಧ’’ದ ಕಟ್ಟಡ, ತಾಲೂಕಿನಲ್ಲಿ ಒಂದು ಕ್ರಿಡಾಂಗಣ, ಸಂಚಾರ ದಟ್ಟಣೆ ನಿಯಂತ್ರಣ, ವ್ಯವಸ್ಥಿತ ಮಾರುಕಟ್ಟೆ ಅವಶ್ಯವೆಂಬುದು ಜನಪ್ರತಿನಿಧಿಗಳು ತಿಳಿದುಕೊಳ್ಳಬೇಕಾಗಿದೆ.
 • ಅಥಣಿ ತಾಲೂಕಿನಲ್ಲಿ ನಿರುದ್ಯೋಗದ ಬವಣೆ ಎದ್ದು ಕಾಣುತ್ತಿದೆ. ತಾಲೂಕಿನ ಆರ್ಥಿಕ ಪ್ರಗತಿಗೆ ಔದ್ಯೋಗಿಕ ಕ್ಷೇತ್ರ ವಿಸ್ತಾರಗೊಳ್ಳಬೇಕು. ಸಣ್ಣ – ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಇದಕ್ಕಾಗಿ ಒಂದು ವ್ಯವಸ್ಥಿತವಾದ ತಾಲೂಕು ಕೈಗಾರಿಕಾ ವಸಹಾತು ಸೃಷ್ಟಿಸಬೇಕು. ಇದು ಬಹುಮುಖ್ಯವಾದ ವಿಚಾರವಾಗಿದೆ.
 • ಅಥಣಿಯ ಪೂರ್ವ ಭಾಗದಲ್ಲಿ ಮತ್ತು ವಿಜಾಪೂರ ಜಿಲ್ಲೆಯಲ್ಲಿಯೂ ಹೆಚ್ಚಾಗಿ ದ್ರಾಕ್ಷಿ ಬೆಳೆಯುವುದರಿಂದ ಅಥಣಿಯಲ್ಲಿ ‘ವೈನ್-ಪಾರ್ಕ್’ ಸ್ಥಾಪನೆ ಬಗೆಗೆ ಸರಕಾರದ ಕೇವಲ ಘೋಷಣೆಯಾಗಿಯೇ ಉಳಿದಿದೆ. ಇದರ ಅನುಷ್ಠಾನದ ಬಗ್ಗೆ ಗಮನಹರಿಸು ವುದು ಅವಶ್ಯವೆನಿಸುತ್ತದೆ.

ಉಪಸಂಹಾರ

ಒಟ್ಟಿನಲ್ಲಿ ಅಥಣಿಯ ಪರಿಸರ ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮುಂತಾದ ಕ್ಷೇತ್ರಗಳ ಜೊತೆಗೆ ರಾಜಕೀಯ ಪ್ರತಿಷ್ಠೆಯನ್ನು ಕಾಯ್ದುಕೊಂಡಿದೆ. ಅದರ ಅಭಿವೃದ್ದಿಯ ವೇಗವನ್ನು ಗಮನಿಸಿದಾಗ ಇನ್ನೂ ನಾವು ಸಾಗಬೇಕಾದ ಪಥ ಬಹಳಷ್ಟಿದೆ. ಕೃಷ್ಣಾ ನದಿಯು ಹರಿಯುತ್ತಿದ್ದರೂ ಅದರ ಪೂರ್ಣ ಪ್ರಮಾಣದ ಬಳಕೆಯಾಗದೇ ಇರುವುದರಿಂದ ತಾಲೂಕಿನ ದಕ್ಷಿಣ ಭಾಗ ಸಂಪದ್ಭರಿತವಾಗಿ ಕಂಡರೆ, ಉತ್ತರ ಭಾಗವು ಬರಗಾಲವೆನಿಸಿದೆ. ಒಟ್ಟಾರೆ ಅಥಣಿ ಪರಿಸರದ ರಾಜಕೀಯ ಸ್ಥಾನಮಾನಗಳನ್ನು ಅವಲೋಕಿಸಿದಾಗ ಹೆಮ್ಮೆ ಎನಿಸಿದರೂ, ಸ್ವಾತಂತ್ರ್ಯದಿಂದ ಇಲ್ಲಿಯವರೆಗೂ ಸಾಗಿದ್ದರೂ ನೀರಾವರಿ, ರಸ್ತೆ, ಕೃಷಿ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಥಣಿ ತಾಲೂಕು ನಿರೀಕ್ಷಿತ ಗುರಿ ಸಾಧನೆಯ ಮಟ್ಟವನ್ನು ತಲುಪಿಲ್ಲ ಯಾಕೆ? ಎನ್ನುವ ಪ್ರಶ್ನೆ ಕಾಡುತ್ತದೆ. ಇದಕ್ಕೆ ಮೇಲೆ ತಿಳಿಸಿದ ಸವಾಲುಗಳೇ ಸಾಕ್ಷಿಯಾಗಿವೆ. ಈ ನಿಟ್ಟಿನಲ್ಲಿ ರಾಜಕೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಮತ್ತು ಪ್ರಜ್ಞಾವಂತ ನಾಗರೀಕರು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಹೇಳಬಹುದು.