ಬೇಡರ ಸಂಸ್ಕೃತಿಯ ಮೂಲವನ್ನು ಮಾದಿಗರ ಸಾಂಸ್ಕೃತಿಕ ವಿಘಟನೆಯೊಂದಿಗೆ ಗುರುತಿಸಬಹುದಾದ ಕುರುಹುಗಳು ಕಂಡುಬರುತ್ತವೆ. ಐತಿಹ್ಯವೊಂದರಂತೆ ಭೂಮಿಯನ್ನು ಸೀಳಿಕೊಂಡು ಮೊದಲಿಗೆ ಆದಿಜಾಂಬವನು ಹುಟ್ಟಿದ. ನಂತರ ಬೇಡರ ಬೊಮ್ಮಣ್ಣನು ಭೂಮಿಯಿಂದ ಹೊರಬರಲು ಪ್ರಯತ್ನಿಸುತ್ತಿದ್ದ. ಆದರೆ ಆದಿಜಾಂಬವನು ಅಂಥ ಸ್ಥಳಗಳನ್ನು ಕಾಲಿನಿಂದ ಹೊಸೆಯತೊಡಗಿದ. ಇದರಿಂದ ಬೊಮ್ಮಣ್ಣನಿಗೆ ಭೂಮಿಯಿಂದ ಹೊರಬರಲು ಅಸಾಧ್ಯವಾಯಿತು. ಕೊನೆಗೆ ಜಾಲಿಯ ಮುಳ್ಳಿನ ಪೊದೆಗಳಲ್ಲಿ ಹೊರ ಮೂಡಿದ. ತನ್ನ ಬುಡಕಟ್ಟಿನ ವೇಷ ಭೂಷಣಗಳಾದ ಕೋರಿ, ಲಂಗೋಟಿ, ನಾರಿನ ಉಡುದಾರಗಳನ್ನು ಹೊಂದಿ ಕೈಯಲ್ಲಿ ರುಡ್ಡಿ ಕಟ್ಟಿಗೆ (ಬೇಟೆಯ ದೊಣ್ಣೆ)  ಇತ್ಯಾದಿ ಅಧಿಕೃತತೆಗಳೊಂದಿಗೆ ಬಂದವನೇ ತನ್ನ ಎದುರಾಳಿಯನ್ನು ನಿಯಂತ್ರಿಸಿದ. ಆಗ ಅಷ್ಟರಲ್ಲಿ ಒಂದು ವರ್ಷದವನಾಗಿ ಬೆಳೆದಿದ್ದ ಆದಿಜಾಂಬವನನ್ನು ಒಂದು ದಿನದ ತಂಗಟೆಯ ಗಿಡದ ಬರಲಿನಿಂದ ನಿಯಂತ್ರಿಸಿದ. ಆತನು ಬೊಮ್ಮಣ್ಣನನ್ನು ತಂದೆಯ ಸ್ಥಾನದಲ್ಲಿಟ್ಟು ಗೌರವಿಸುವುದಾಗಿ ಸಂಧಾನ ಮಾಡಿಕೊಂಡ. ಅಂದಿನಿಂದ ತಂದೆ-ಮಕ್ಕಳ ಸಂಬಂಧವನ್ನು ರೂಢಿಸಿಕೊಂಡರು. ಈ ಐತಿಹ್ಯದ ಪ್ರಕಾರ ಮಾದಿಗರು ಬೇಡರಿಗಿಂತ ಪ್ರಾಚೀನರು, ಆದರೆ ಬೇಡರ ಆಕ್ರಮಣಕ್ಕೆ ಒಳಗಾದವರೆಂದು ತಿಳಿಯಬಹುದು. ಅಂತೆಯೇ ಅಂದಿನ ಸಂಧಾನದ ನೆನಪುಗಳು ಈಗಲೂ ಪರಂಪರೆಯ ಸಾಮರಸ್ಯಗಳಾಗಿ ಮಾರ್ಪಟ್ಟಿರುವುದು ವಿಸ್ಮಯ ತರಿಸುವ ಸಂಗತಿಯಾಗಿದೆ.

ಬೇಡರು ಮತ್ತು ಮಾದಿಗರ ಬಹುಪಾಲು ಗೋತ್ರಗಳು ಒಂದೇ ಆಗಿವೆ. ಅಂತೆಯೇ ಬೇಡ ಕುಟುಂಬಗಳ ಆಚರಣೆಗಳಲ್ಲಿ ಮಾದಿಗ ನಿರ್ದಿಷ್ಟ ಕುಟುಂಬಗಳ ಹಿರಿಯರು ಆಯಗಾರರ ಹಕ್ಕಿನೊಂದಿಗೆ ಕೆಲಸ ನಿರ್ವಹಿಸುತ್ತಾರೆ. ನಂತರ ಈ ಸಂಬಂಧಿ ಮರ್ಯಾದೆಗಳೊಂದಿಗೆ ಹೊಸ ಬಟ್ಟೆಗಳನ್ನು ಆಯದ ರೂಪದಲ್ಲಿ ಧಾನ್ಯಗಳನ್ನು, ಕಾಣಿಕೆಯಾಗಿ ಹಣವನ್ನು ಅಧಿಕಾರಯುತವಾಗಿ ಪಡೆಯುತ್ತಾರೆ. ಬೇಟೆಗಾರಿಕೆಯಲ್ಲಿ ಬೇಡರೊಂದಿಗೆ ಭಾಗವಹಿಸುತ್ತಾರೆ ಹಾಗೂ ಬೇಟೆಯ ಪಾಲನ್ನು ತಮ್ಮ ಹಕ್ಕಿನ ಅಧಿಕೃತತೆಯೊಂದಿಗೆ ಸ್ವೀಕರಿಸುತ್ತಾರೆ. ಊರೊಟ್ಟಿನ ಮಾರಿಯ ಜಾತ್ರೆಯಲ್ಲಿ ಕೋಣವನ್ನು ಕಡಿಯುವ ಹಕ್ಕು ಬೇಡರದಾಗಿರುತ್ತದೆ. ಅಂತೆಯೇ ಮಾದಿಗರ ದೊಡ್ಡಿ ದ್ಯಾವರ ಆಚರಣೆಯಲ್ಲಿ ಬೇಡರ ಮುಖಂಡರು ಭಾಗವಹಿಸುತ್ತಾರೆ. ತಂಗಟೆಯ ಗಿಡಕ್ಕೆ ಮಾದಿಗರಲ್ಲಿ ದೈವದ ಸ್ಥಾನವಿದ್ದು ತಂಗಟೆದ್ಯಾವರ ಆಚರಣೆ ಮಹತ್ವ ಪಡೆದಿದೆ. ಬೇಡರು ತಲೆ ಕಡಿದು ಕೊಲೆಗೈದ ಪಾಪವು ತಂಗಟೆಗಿಡವನ್ನು ದಾಟಿದರೆ ನಿವಾರಣೆಯಾಗುತ್ತದೆಂದು ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ‘‘ತಲೆ ಕಡಿದು ತಂಗಟೆಗಿಡ ದಾಟುವವರು’ ಎಂದೂ ಹೇಳಿಕೆ ಜನಪದರಲ್ಲಿ ಜನಜನಿತವಾಗಿದೆ. ಮ್ಯಾಸಬೇಡರ ಸಾವಿನ ಆಚರಣೆಗಳಲ್ಲಿ ತಂಗಟೆಯ ಗಿಡಕ್ಕೆ ವಿಶೇಷ ಮಹತ್ವವಿರುವುದನ್ನು ಗಮನಿಸಬಹುದು.

ಬೇಡರ ಕೆಲವು ಗೋತ್ರಗಳು ಲಿಂಗಾಯಿತ ಸಾದರರ ಕೆಲವು ಗೋತ್ರಗಳು ಒಂದೇ ರೀತಿಯಲ್ಲಿ ಕಂಡುಬರುತ್ತವೆಯೆಂದು ಹೇಳಲಾಗುತ್ತದೆ. ಪಾಳೆಯಗಾರ ಕಾಲದಲ್ಲಿ ವೀರಶೈವ ಧರ್ಮಕ್ಕೆ ಮಾರ್ಪಾಟದ ಬೇಡ ಸಂಸ್ಕೃತಿಯ ಕೆಲವು ಕುಟುಂಬಗಳ ಪಲ್ಲಟ ಈಗಾಗಲೇ ಸ್ಪಷ್ಟವಾಗಿದೆ. ಪಾಳೆಯಗಾರರು ಲಿಂಗಾಯತರಾಗಿ ಪರಿವರ್ತನೆಯಾದಾಗಲೂ ತಮ್ಮ ಗೋತ್ರದ ಅಧಿಕೃತತೆಯನ್ನು ಉಳಿಸಿಕೊಂಡಿದ್ದರ ಅನನ್ಯತೆ ಇದಾಗಿದೆ. ಅಂತೆಯೇ ತೆಲುಗಿನ ಆರ್ಯ ವೈದಿಕರ ಕೆಲವು ಗೋತ್ರಗಳಿಗೂ ಬೇಡರ ಗೋತ್ರಗಳಿಗೂ ಸೌಮ್ಯತೆ ಇರುವುದೆಂದು ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಮಾದಿಗರು ತಮ್ಮ ಅನನ್ಯತೆಯನ್ನು ಈ ಕೋಮುಟಿಗಳ ಸಂಸ್ಕೃತಿಯೊಂದಿಗೆ ಗುರುತಿಸಿಕೊಳ್ಳುವುದನ್ನು ಪರಿಗಣಿಸಬೇಕಾಗು ತ್ತದೆ. ತಾವು ಕೋಮುಟಿಗಳ ಅಣ್ಣ-ತಮ್ಮಂದಿರೆಂದು ಮಾದಿಗರ ನಂಬಿಕೆ ಐತಿಹ್ಯಗಳು ಸಮರ್ಥಿಸುತ್ತದೆ. ಆದರೆ ಕೋಮಟಿಗಳು ಇದನ್ನು ಒಪ್ಪುವುದಿಲ್ಲ; ಸಾರಾಸಗಟಾಗಿ ತಳ್ಳಿ ಹಾಕುತ್ತಾರೆ. ಮಾದಿಗರ ಪ್ರಕಾರ ಅರುಂಧತಿ ಅಥವಾ ಅರಂಜ್ಯೋತಿ ತಮ್ಮ ಮೂಲ ಮನೆತನದ ಹೆಣ್ಣುಮಗಳು. ಆಕೆಯನ್ನು ವಶಿಷ್ಟನು ವರಿಸಿ ಮದುವೆಯಾದ. ಆಗ ಮದುವೆಗೆ ಅಡ್ಡಿಪಡಿಸಿದ ಅಣ್ಣತಮ್ಮಂದಿರ ಗುಂಪಿಗೆ ಆಕೆ ಶಾಪ ನೀಡಿದಳು. ‘‘ಅಂಗಡಿ ಅಕ್ಕಿ; ತಂಗಟೆ ಪ್ರರ್ಲೆ (ಉರುವಲು)  ನಿಮ್ಮದಾಗಲಿ’’ ಎಂದು. ಆದ್ದರಿಂದ ಈ ಸಹೋದರರು ದರಿದ್ರವಂತರಾದ ಮಾದಿಗರಾದರು. ತನ್ನ ಮದುವೆಯನ್ನು ಪುರಸ್ಕರಿಸಿದ ಅಣ್ಣ ತಮ್ಮಂದಿರಿಗೆ ‘‘ನಿಮ್ಮಲ್ಲಿ ಸದಾ ಕಾಲ ಲಕ್ಷ್ಮಿ ನೆಲೆಸಿದ್ದು ಸುಖವಾಗಿರಿ’’ ಎಂದು ಹಾರೈಸಿದಳು. ಅಂತೆಯೇ ಅವರು ಕೋಮಟಿಗಳಾಗಿ ಬೇರ್ಪಟ್ಟರು ಎಂದು ಹೇಳುತ್ತಾರೆ.

ತಾವು ಮೂಲತಃ ಬೇಡರು ಎಂದು ಹೇಳಿಕೊಳ್ಳುವ ದುರುಗ-ಮುರುಗಿಯರು ಬೇಟೆಗಾರಿಕೆ, ಪಾಳೆಗಾರಿಕೆ, ಕೃಷಿ, ಪಶುಪಾಲನೆ ಇತ್ಯಾದಿ ಬೇಡರ ವೃತ್ತಿ ವಿಕಾಸದ ನೆನಪುಗಳಿಂದ ವಂಚಿತರಾಗಿದ್ದಾರೆ. ಮೂಲತಃ ಗಂಗಮತಸ್ಥ ಅಥವಾ ಮೀನುಗಾರ ಬೇಡರೆಂದು ಹೇಳುತ್ತಾರೆ. ಪಾಳೆಯಗಾರರ ದುರ್ಗಗಳ ಅಧಿದೇವತೆಯ ಆರಾಧಕರು ಇವರು. ಬೇಡರು ದುರ್ಗಮಯ ಪ್ರದೇಶಗಳಲ್ಲಿ ವಾಸಮಾಡುತ್ತಾ ಮುಂದುವರಿದು ಅಲ್ಲಿ ಕೋಟೆ-ಕೊತ್ತಳಗಳನ್ನು ಕಟ್ಟಿಕೊಂಡಾಗ ದುರ್ಗಮ್ಮ, ಕೊತ್ತಲಮ್ಮ ಎಂದು ದೇವತೆಗಳನ್ನು ಆರಾಧಿಸತೊಡಗಿದರು. ಆಗ ಇದೇ ಸಮುದಾಯದ ಅರ್ಚಕ ವೃತ್ತಿಯವರು ಶತ್ರು ದಾಳಿಗಳಿಂದ ತಮ್ಮ ದೇವತೆಗಳನ್ನು ಸಂರಕ್ಷಿಸಿ ಅಲೆಮಾರಿಗಳಾಗಿರಬಹುದು. ದುರ್ಗಿಯು ರಾಕ್ಷಸನೊಬ್ಬನನ್ನು ಸಂಹಾರ ಮಾಡಿದ ಐತಿಹ್ಯವನ್ನು ಸಾರುತ್ತಾ, ಪೆಟ್ಟಿಗೆ ಗುಡಿಯಲ್ಲಿ ದೇವಿಯನ್ನು ಹೊತ್ತು ಭಿಕ್ಷೆ ಬೇಡುತ್ತಾರೆ. ಪೂಜಾರಿ ದೇವಿಯ ಆವಾಹನೆಯಾದ ರಾಕ್ಷಸನ ಸಂಕೇತವಾಗಿ ತನ್ನನ್ನು ತಾನು ರಕ್ತ ಬರುವಂತೆ ಚಾಟಿಯಿಂದ ತೀಡಿಕೊಳ್ಳುತ್ತಾ ಶಿಕ್ಷಿಸಿಕೊಳ್ಳುತ್ತಾನೆ. ಅದೇ ಸಮಯದಲ್ಲಿ ಪೂಜಾರಿಣಿಯು ಉರುಮೆ ಬಡಿಯುತ್ತಾ ಪ್ರದರ್ಶನಕ್ಕೆ ಆಕರ್ಷಣೆಯ ಮೆರುಗು ನೀಡುತ್ತಾಳೆ. ಇದು ದುಷ್ಟ ಶತ್ರುವನ್ನು ಬೇಡರ ಹೆಣ್ಣು ಮಗಳು ಶಿಕ್ಷಿಸಿದ್ದರ ಸಂಕೇತವಾಗಿದೆ.

ಬೇಡ ಎಂಬ ಬುಡಕಟ್ಟು ಮೂಲದಲ್ಲಿ ಬೇಟೆಗಾರಿಕೆಯನ್ನು ಅವಲಂಭಿಸಿದ್ದುದು ವೃತ್ತಿ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡರು. ಆಗ ಗುಂಪುಗಳು ವಿಂಗಡಣೆಗೊಂಡು ಹಾಲುಬೇಡ, ಮೊಂಡಬೇಡ, ಸಂಚಲವರು, ಕೊಂಡರಾಜಲು, ಪರಿವಾರದವರು, ಬಿಲ್ಲರು ಎಂದು ಗುರುತಿಸಿಕೊಂಡದ್ದಲ್ಲದೆ, ನಾಯಕ, ತಳವಾರ ಎಂಬಿತ್ಯಾದಿ ಆಡಳಿತಾತ್ಮಕ ಹುದ್ದೆಗಳಲ್ಲಿ ಹಂಚಿಹೋದರು. ಅಂತೆಯೇ ಪಾಳೆಯಗಾರ ದೊರೆ ಎಂಬ ಅಧಿಕಾರಗಳನ್ನು ಕೆಲವರು ತಮ್ಮದಾಗಿಸಿಕೊಂಡರು. ಈ ನಾಯಕರು ತಮ್ಮ ಕುಲದೇವತೆಯ ಅನನ್ಯತೆಯನ್ನು ಉಳಿಸಿಕೊಳ್ಳಲು ಮಾರಮ್ಮ ನಾಯಕರು, ಮುತ್ಯಾಲ ನಾಯಕರು ಮೊದಲಾಗಿ ಗುರುತಿಸಿಕೊಂಡಿದ್ದಾರೆ. ಪ್ರಾದೇಶಿಕವಾಗಿ ತಮ್ಮ ಆಡಳಿತ ಸೀಮೆಗಳೊಂದಿಗೆ ತಮ್ಮನ್ನು ಸಂಕೇತಿಸಿಕೊಳ್ಳುವಾಗ ಸುರಪುರದ ಪಾಳೆಯಗಾರರು, ಚಿತ್ರದುರ್ಗದ ಪಾಳೆಯಗಾರರು, ದಾರಿನಾಯಕನ ಪಾಳ್ಯದ ಅರಸು ವಂಶಸ್ಥರು, ಗುಮ್ಮನಾಯಕನ ಪಾಳ್ಯದ ದೊರೆಗಳು ಇತ್ಯಾದಿಯಾಗಿ ಕರೆಯಲ್ಪಟ್ಟರು.

ಬೇಡರು ಮೂಲತಃ ಕಾಡುಗಳಲ್ಲಿ ವಾಸಿಸುತ್ತಿದ್ದರಾದರೂ ನಾಡಿನ ಪ್ರಭಾವಕ್ಕೆ ಒಳಗಾಗುತ್ತ ಬಂದರು ಆಗ ಕೆಲವು ಗುಂಪುಗಳು ಊರುಗಳಲ್ಲಿ ನೆಲೆಸಿದರು. ಊರಿನ ಇತರೆ ಸಮುದಾಯಗಳ ಸಾಂಸ್ಕೃತಿಕ ವಾಹಿನಿಯಲ್ಲಿ ಬೆರೆತರು. ಹಲವು ವೃತ್ತಿಗಳಲ್ಲಿ ಮಿಲಿತಗೊಂಡರು. ಅಲ್ಲದೆ ತಮ್ಮ ಮೂಲಸಂಸ್ಕೃತಿಯ ನೆನಪುಗಳನ್ನು ಆಚರಣೆಗಳಲ್ಲಿ ಉಳಿಸಿಕೊಂಡರು. ಆಗ ಕಾಡಿನಲ್ಲಿಯೇ ಉಳಿದಿದ್ದ ಬೇಡರೊಂದಿಗೆ ಇವರ ಸಂಬಂಧಗಳು ಮುರಿದುಬಿದ್ದವು. ಬೇಟೆಗಾರಿಕೆಯ ಜೊತೆಗೆ ದನಕರುಗಳನ್ನು ಮೇಯಿಸುತ್ತಾ ಕಾಡುಗಳಲ್ಲಿಯೇ ಉಳಿದವರನ್ನು ಮ್ಯಾಸ ಬೇಡರೆಂದು ಕರೆದರು. ಇಂಥ ಪರಿಸರದಲ್ಲಿ ಊರುಗಳಲ್ಲಿನ ಬೇಡರು ಊರು ಬೇಡ ಅಥವಾ ಊರು ನಾಯಕರಾದರು. ಮ್ಯಾಸನಾಯಕರಿಲ್ಲದ ಪ್ರದೇಶಗಳಲ್ಲಿ ಊರು ನಾಯಕರೆಂದು ಪ್ರತ್ಯೇಕವಾಗಿ ಕರೆಯುವ ವಾಡಿಕೆ ಇಲ್ಲ. ಅವರನ್ನು ಬೇಡರು, ನಾಯಕರು ಎಂಬಿತ್ಯಾದಿಯಾಗಿ ಕರೆಯುತ್ತಾರೆ. ಆದರೆ ಮ್ಯಾಸಬೇಡರು ಎಲ್ಲೇ ಇದ್ದರೂ ತಾವು ಮ್ಯಾಸರು, ಮ್ಯಾಸನಾಯಕರು ಎಂಬುದಾಗಿ ಕರೆದುಕೊಳ್ಳುತ್ತಾರೆ.

ಮ್ಯಾಸಬೇಡರಲ್ಲಿ ಕಳ್ಳಮ್ಯಾಸ, ಮುಂಜಿಮ್ಯಾಸ, ಅಡವಿಮ್ಯಾಸ, ಊರು ಮ್ಯಾಸ ಮೊದಲಾದ ಪ್ರಭೇದಗಳಿವೆ. ಇವರು ಕಾಡುಗಳಲ್ಲಿ ಪಶುಪಾಲನೆ ಮಾಡುತ್ತಿದ್ದರಾದರೂ ಕ್ರಮೇಣ ಕಾಡುಗಳು ನಾಶವಾದಂತೆ ಊರುಗಳಿಗೆ ಸಮೀಪವಾಗುತ್ತ ಬಂದರು. ಆದರೆ ಊರುಗಳೊಂದಿಗೆ ಬೆರೆಯುವಲ್ಲಿ ಇವರಿಗೆ ಕೆಲವು ತೊಡಕುಗಳು ಎದುರಾಗಿರಬಹುದು. ಆದ್ದರಿಂದ ಇವರು ಊರುಗಳ ಹೊರಗೆ ತಮ್ಮದೇ ಆದ ಹಟ್ಟಿಗಳನ್ನು ರೂಪಿಸಿಕೊಂಡು ಪಶುಪಾಲನೆಯೊಂದಿಗೆ ಕೃಷಿಯನ್ನು ರೂಢಿಸಿಕೊಂಡರು. ಇಂದು ಊರುಗಳು ವಿಸ್ತಾರಗೊಂಡು ಮ್ಯಾಸಬೇಡರ ಹಟ್ಟಿಗಳವರೆಗೆ ವ್ಯಾಪಿಸುತ್ತಿದ್ದರೂ ಇವರು ತಮ್ಮ ಹಟ್ಟಿಗಳ ಸಂಸ್ಕೃತಿಯನ್ನು ಬಿಟ್ಟುಕೊಟ್ಟಿಲ್ಲ. ತಮ್ಮದೇ ಆದ ಆಚರಣೆಗಳನ್ನು ಉಳಿಸಿಕೊಂಡಿದ್ದಾರೆ. ಇವುಗಳೆಲ್ಲವೂ ಬುಡಕಟ್ಟು ಮೂಲವನ್ನು ಸಮರ್ಥಿಸುವಂಥವೇ ಆಗಿದೆ. ಕಾಡುಗೊಲ್ಲರ ಸಂಸ್ಕೃತಿಗೂ ಮ್ಯಾಸಬೇಡರ ಸಂಸ್ಕೃತಿಗೂ ಸಾಮ್ಯತೆಗಳು ಕಂಡುಬಂದಂತೆ ಊರುಬೇಡರಲ್ಲಿ ಕಾಣಲಾಗುವುದಿಲ್ಲ. ‘‘ಊರನಾಯಕರು ಮ್ಯಾಸ ನಾಯಕರಿಗಿಂತ ರೂಢಿ, ಸಂಪ್ರದಾಯ, ಸಂಸ್ಕಾರ ಆಚರಣೆಗಳಲ್ಲಿ ಭಿನ್ನವಾಗಿ ಕಂಡು ಬರುತ್ತಾರೆ. ಅಲ್ಲದೆ ಮದುವೆ ಸಂಸ್ಕಾರದ ಆಚರಣೆಗಳಲ್ಲಿ ವ್ಯತ್ಯಾಸವನ್ನು ಕಾಣುತ್ತೇವೆ.’’ (ಡಾ.ಕೋರಿಶೆಟ್ಟಿರುದ್ರಪ್ಪ, ಸಂ.ಡಾ.ಮಂಜುನಾಥ ಬೇವಿಕಕಟ್ಟಿ, ಪು.೨೮)  ಇವರ ಗೋತ್ರಗಳು ಸಸ್ಯ ಸೂಚಕಗಳು, ಪ್ರಾಣಿ ಸೂಚಕಗಳೇ ಅಲ್ಲದೆ, ವೃತ್ತಿ ಸೂಚಕಗಳೂ ಕಳೆದ ಸಂದರ್ಭದ ಸೂಚಕಗಳೂ ಆಗಿವೆ.

ಐತಿಹ್ಯವೊಂದರಂತೆ, ಬೇಡರು ಭಿನ್ನಾಭಿಪ್ರಾಯಗಳಿಂದಾಗಿ ಹೊಡೆದಾಡಿ ಪರಸ್ಪರ ಪ್ರಾಣಗಳನ್ನು ತೆಗೆದುಕೊಳ್ಳಲಾರಂಭಿಸಿದರು. ಆಗ ಮಣಿಭಟ್ಟ ರಾಜನೆಂಬ ಬೇಡರ ಹಿರಿಯನು ಅಲ್ಲಿಗೆ ಧಾವಿಸಲಾಗಿ ಅವನಿಗೆ ಹೆದರಿದ ಬೇಡರು ಹಲವು ಗುಂಪುಗಳಾಗಿ ಅಲ್ಲಲ್ಲಿ ಅವಿತುಕೊಂಡರು. ಅಂತೆಯೇ ಆತನು ಆ ಜನಮಂದೆಯನ್ನು ಪ್ರತ್ಯೇಕಗೊಳ್ಳುವಂತೆ ಸೂಚಿಸಿದನು. ಇದರಿಂದ ಹಲವು ಗುಂಪುಗಳು ಪ್ರತ್ಯೇಕವಾಗಿ ವಾಸಿಸುವುದರ ಮೂಲಕ ಭಿನ್ನ ಗೋತ್ರಗಳು ಏರ್ಪಟ್ಟವು. ಮಣಿಭಟ್ಟನನ್ನು ಮಂದೆಗಳನ್ನು (ಗುಂಪುಗಳನ್ನು)  ನಿರ್ಮಿಸುವ ಯಜಮಾನನೆಂದು ಗೌರವಿಸಿ ‘ಮಂದಲ ತಾತ’ನೆಂದು ಗೌರವಿಸಿದರು. ಇವನ ಸಂತತಿ ಮಂದಲಗೋತ್ರವೆಂದು ಕರೆಯಲ್ಪಟ್ಟಿದೆ.

ಅಡವಿ ಸಂಚರು ಬೇಡರ ಮೂಲದವರೆಂದು ಹೇಳುತ್ತಾರೆ. ಅವರ ಚಂಚು ಲಕ್ಷ್ಮಿಯನ್ನು ನರಸಿಂಹದೇವನು ವರಿಸಿ ವಿವಾಹವಾದನೆಂಬ ಐತಿಹ್ಯವಿದೆ. ಆ ಸಂತತಿಯ ಮೂಗನಾಯಕನ ವಂಶಸ್ಥರೆಂದು ಮ್ಯಾಸನಾಯಕರು ಹೇಳಿಕೊಳ್ಳುತ್ತಾರೆ. ಪಶುಪಾಲನೆಯ ಹಂತದಲ್ಲಿ ವೈಷ್ಟವಧರ್ಮದ ಪ್ರಭಾವಕ್ಕೆ ಒಳಗಾದ ನೆನಪುಗಳು ಈ ಐತಿಹ್ಯದಲ್ಲಿ ಕಂಡುಬರುತ್ತವೆ.

ಮ್ಯಾಸಬೇಡರು ಊರಿನ ಸಂಪರ್ಕವನ್ನು ಕಳೆದುಕೊಂಡದ್ದಕ್ಕೆ ಕಾರಣವೊಂದನ್ನು ಈ ಐತಿಹ್ಯವು ಸಮರ್ಥಿಸುತ್ತದೆ; ‘‘ಒಬ್ಬ ಬೇಡರ ಜಾತಿಯ ಹೆಣ್ಣಿಗೆ ಇಬ್ಬರು ಗಂಡು ಮಕ್ಕಳಿದ್ದರು. ಹಿರಿಯವನು ಊಟವಾದ ಮೇಲೆ ಹೊಲಕ್ಕೆ ಹೋಗಿದ್ದನು. ಚಿಕ್ಕವನು ಮನೆಗೆ ಬಂದು ತಾಯಿಯನ್ನು ಊಟಕ್ಕೆ ಕೇಳಿದಾಗ ತಾಯಿಯು ರೊಟ್ಟಿ ಹಾಗೂ ತರಕಾರಿಯನ್ನು ನೀಡಿದಳು. ಊಟ ಮಾಡುತ್ತಿರುವ ಅವನಿಗೆ ಮಾಂಸದ ವಾಸನೆ ಬಂದಿತು. ಆಗ ತಾಯಿಯನ್ನು ಕೇಳಿದ. ತಾಯಿ ಮಾಂಸವನ್ನು ಕೊಡದಾದಾಗ ಸಿಟ್ಟಿಗೆದ್ದ ಮಗ ಅವಳನ್ನು ಕೊಂದು ಹಾಕಿದನು. ಅನಂತರ ಅವನು ಮನೆಯಲ್ಲಿ ಹುಡುಕಿದಾಗ ಒಂದು ಗಡಿಗೆ ಸಿಕ್ಕಿತು. ಅದನ್ನು ತೆಗೆದು ನೋಡಿದಾಗ ಅದರಲ್ಲಿ ಕೊಳೆತು ನಾರುವ ಒಂದು ಬೇರು ಸಿಕ್ಕಿತು. ಅದಕ್ಕೆ ಮಾಂಸದ ವಾಸನೆಯಿತ್ತು. ಇದನ್ನರಿತ ಅವನು ತನ್ನ ಮುಂಗೋಪಿತನಕ್ಕೆ ವ್ಯಥೆ ಪಟ್ಟು ಕಠಿಣ ತಪಸ್ಸಿನಿಂದ ಋಷಿಯ ಹಂತಕ್ಕೇರಿದ ಆತನೇ ಮ್ಯಾಸನಾಯಕ ಜನಾಂಗದ ಮೂಲ ಪುರುಷನಾದನು.’’ (ಕೋರಿಶೆಟ್ಟಿರುದ್ರಪ್ಪ, (ಸಂ)  ಮಂಜುನಾಥ ಬೇವಿನಕಟ್ಟಿ, ಪು.೬೧, ೨೦೦೭)  ಇದರ ಪ್ರಕಾರ ಮಾಂಸಾಹಾರದ ಆಕರ್ಷಣೆಯಿಂದಾಗಿ ಮ್ಯಾಸನಾಯಕರು ಊರಿನ ಸಂಸ್ಕೃತಿಗೆ ಒಗ್ಗಲಿಲ್ಲವೆಂಬುದು ಸ್ಪಷ್ಟವಾಗುತ್ತದೆ.

ಇಂದು ಅನೇಕ ಬುಡಕಟ್ಟುಗಳು ಅನೇಕ ಕಾರಣಗಳಿಂದಾಗಿ ಕಾಡುಗಳಿಂದ ಕಾಲ್ತೆಗೆದು ನಾಡಿನ ಮುಖ್ಯ ವಾಹಿನಿಯೊಂದಿಗೆ ಸೇರ್ಪಡೆಯಾಗಿದ್ದಾರೆ. ಇನ್ನೂ ಕೆಲವು ಬುಡಕಟ್ಟುಗಳು ಇಂದಿಗೂ ಕಾಡುಗಳಲ್ಲಿ ವಾಸಿಸುತ್ತಿದ್ದರೂ ನಾಡಿನ ಸಂಪರ್ಕದಲ್ಲಿದ್ದಾರೆ. ನಾಡ ಜೀವನದ ಸೌಲಭ್ಯಗಳು ಆಕರ್ಷಕವಾದ್ದರಿಂದ ನಾಡಿನಲ್ಲಿ ಹಲವು ವೃತ್ತಿಗಳನ್ನು ಅನುಸರಿಸುತ್ತಿದ್ದಾರೆ. ಇಂದು ಮ್ಯಾಸರು ಕಾಡುಗಳಿಂದ ದೂರ ಸರಿದು ಬಯಲು ಸೀಮೆಯ ಊರುಗಳ ಸಮೀಪದ ಹಟ್ಟಿಗಳಲ್ಲಿ ವಾಸಿಸುತ್ತಿದ್ದಾರೆ. ಆಚರಣೆಗಳಲ್ಲಿ ತಮ್ಮ ಅನನ್ಯತೆಯನ್ನು ಉಳಿಸಿಕೊಂಡಿದ್ದರೂ ಆಹಾರ ಪದ್ಧತಿ, ಉಡುಗೆ-ತೊಡುಗೆ, ಜೀವನಕ್ರಮ ಮತ್ತು ವೃತ್ತಿ ವಲಯಗಳಲ್ಲಿನ ಬದಲಾವಣೆಗಳನ್ನು ಸ್ವೀಕರಿಸಿದ್ದಾರೆ. ಆಧುನಿಕ ಶಿಕ್ಷಣ ಉದ್ಯೋಗ ಆಡಳಿತ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರೂ ಇವರಲ್ಲಿದ್ದಾರೆ. ಅಕ್ಷರಸ್ಥರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ವಿದ್ಯಾಭ್ಯಾಸ ಉದ್ಯೋಗ ಹಾಗೂ ವೃತ್ತಿ ಬದಲಾವಣೆಗಳಿಗೆ ಅನುಗುಣವಾಗಿ ಇವರು ಗ್ರಾಮ ಪಟ್ಟಣ ನಗರಗಳವರೆಗೂ ವ್ಯಾಪಿಸುತ್ತಿದ್ದಾರೆ.

ಮ್ಯಾಸಬೇಡರ ಸಂಸ್ಕೃತಿಯಲ್ಲಿ ಮೂಲತಃ ಏಳು ಗೋತ್ರಗಳಿದ್ದು, ಗೋಜಲವಾರು, ಗೋಸಲುವಾರು ಅಥವಾ ಗೊರ್ಲವಾರು, ಬಾಡಮುಂಡಲಕರು, ಸಾರಂಗಬಸಿರವಾರು, ಪಿಂಗಳ ರಂಗಮಾನ್ಯರು, ತಾಯದ ಸಾಮಂತು ಮತ್ತು ರಾಜಾಧಿರಾಜಲು ಎಂಬ ಹೆಸರುಗಳಲ್ಲಿವೆ. ಸಂಸ್ಕೃತಿಯ ಸಾಂಸ್ಕೃತಿಕ ದೈವಗಳು, ವೀರರು, ಪಶುಪಾಲನೆ ಮತ್ತಿತರ ವೃತ್ತಿ ಪೂರಕಗಳಾಗಿ ಬೆಳವಣಿಗೆಯನ್ನು ಪಡೆದಿವೆ. ಮೂಲ ಗೋತ್ರಗಳ ಸೃಷ್ಟಿಗೆ ಕಾರಣವಾದ ಐತಿಹ್ಯವೊಂದು ಹೀಗಿದೆ : ಸೌರವ್ಯೆಹದ ಗೋತಿರಾಜ ಎಂಬ ವ್ಯಕ್ತಿಯ ತೊಡೆಯಿಂದ ಋಷಿಗಳು ಕಪ್ಪಗಿನ ರಾಕ್ಷಸನೊಬ್ಬನನ್ನು ಸೃಷ್ಟಿಸಿದರು. ಈತನು ರಾಜ್ಯಭಾರ ಮಾಡುವುದರಲ್ಲಿ ಅಯೋಗ್ಯನಾಗಿದ್ದ ಕಾರಣ ಬಹಿಷ್ಕರಿಸಲ್ಪಟ್ಟನು. ನಂತರ ಕಾಡಿನಲ್ಲಿ ಬೇಟೆಯಾಡುತ್ತ ಜೀವಿಸುತ್ತಿದ್ದಾಗ ಮೋಹಿನಿಯನ್ನು ಕಂಡು ಮೋಹಗೊಂಡು ಕೂಡುತ್ತಾನೆ. ಅವರಿಗೆ ಏಳು ಜನ ಗಂಡು ಮಕ್ಕಳಾದರು. ಅವರ ಹೆಸರುಗಳಿಂದ ಬೆಳೆದ ವಂಶಗಳು ಅವುಗಳನ್ನೆ ಗೋತ್ರಗಳಾಗಿ ಗುರುತಿಸಿಕೊಂಡರು.

ಮೇಲಿನ ಐತಿಹ್ಯದಲ್ಲಿ ಬುಡಕಟ್ಟಿನ ಮೂಲಪುರುಷನಾದ ಗೋತಿರಾಜನ ಮಗನು ಬುಡಕಟ್ಟಿನ ಮೂಲ ಲಕ್ಷಣವಾದ ಕಪ್ಪು ಬಣ್ಣದಿಂದ ಕೂಡಿದವನು. ಇವನ ಜನ್ಮ ಮೂಲದಲ್ಲಿ ಋಷಿಗಳ ಬುದ್ದಿಶಕ್ತಿ ಹಾಗೂ ಗೋತಿರಾಜನ ತೊಡೆಯ ಶಕ್ತಿಗಳೆರಡೂ ಸಂಕರಗೊಂಡಿವೆ. ಈತನು ರಾಜ್ಯವಾಳುವ ನಗರ ಅಥವಾ ನಾಡಿನ ಸಂಸ್ಕೃತಿಗೆ ಯೋಗ್ಯವಾದವನಲ್ಲ ಎಂದು ಋಷಿಗಳು ಹೊರಗೆ ಹಾಕಿರಬಹುದು. ಮುಂದೆ ಕಾಡಿನಲ್ಲಿಯೂ ದೇವತಾ ಮೂಲ ಹಾಗೂ ಋಷಿ ಮೂಲದಿಂದ ಸಂಪನ್ನಗೊಂಡ ಮೇನಕೆಯನ್ನು ಕೂಡಿದನೆಂದು ಹೇಳುತ್ತಾರೆ. ಮತ್ತೊಮ್ಮೆ ಇಲ್ಲಿ ಸಾಂಸ್ಕೃತಿಕ ಸಂಕರವೇರ್ಪಟ್ಟಿದೆ. ಅಲ್ಲಿಂದ ಇವರ ವೃತ್ತಿ ಬೇಟೆಗಾರಿಕೆ ಪಲ್ಲಟಗೊಂಡಿದೆ. ಒಂದೇ ಐತಿಹ್ಯ ಅಲ್ಪ ಸ್ವಲ್ಪ ಮಾರ್ಪಾಡುಗಳೊಂದಿಗೆ ಹಲವೆಡೆ ಪಸರಿಸುತ್ತದೆ. ಇದಕ್ಕೆ ಉದಾಹರಣೆಯಾದ ಐತಿಹ್ಯ ಹೀಗಿದೆ. ಹೋತಿ ಎಂಬ ಅರಸನಿದ್ದನು. ಆಳ್ವಿಕೆಗೆ ಆಯೋಗ್ಯನೂ ಆಗಿದ್ದನು. ಒಮ್ಮೆ ಅವನು ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ ಮನಿಕಾ ಎಂಬ ಸುಂದರಿಯನ್ನು ಕಂಡು ಮೋಹಿಸಿ ಮದುವೆಯಾದನು. ಇವರಿಗೆ ಏಳು ಜನ ಮಕ್ಕಳಾದರು. ಇವರ ಹೆಸರುಗಳು ಗೋತ್ರ (ಬಳಿ) ಗಳಾಗಿ ಬೇಡರಲ್ಲಿ ಉಳಿದವು. ಅಲ್ಲದೆ ವೃತ್ತಿಗಳಿಗೆ ಅನುಗುಣವಾಗಿ ಇವರಲ್ಲಿ ಗುಂಪುಗಳಲ್ಲಿ ಉಳಿದವು.

ಕರ್ನಾಟಕದ ಬೇಡರ ಸಂಸ್ಕೃತಿ ವೀರಶೈವ ಧರ್ಮದ ಪ್ರಭಾವಕ್ಕೆ ಒಳಗಾದ ಪ್ರದೇಶಗಳಲ್ಲಿನ ಐತಿಹ್ಯದ ಪ್ರಕಾರ ಬಸವಣ್ಣನ ಕಣ್ಣುಗಳಿಂದ ಕಣ್ಣಯ್ಯ ಮತ್ತು ಕನಕವ್ವ ಹುಟ್ಟಿಬಂದರು ಮುಂದೆ ಇವರ ಸಂತತಿಯು ಬೇಡರೆನಿಸಿದರು. ಈ ಬಸವಣ್ಣನು ವಚನಕಾರನೇ ಅಥವಾ ಶಿವನ ವಾಹನವಾದ ಬಸವನೇ ಎಂಬುದು ಸ್ಪಷ್ಟವಿಲ್ಲ.

ಸಾಮಾಜಿಕ ಕಟ್ಟಳೆಗಳನ್ನು ಬಿಂಬಿಸುವ ಐತಿಹ್ಯಗಳು

ಬುಡಕಟ್ಟಿನ ನಿಯಮಗಳನ್ನು ಮೀರಿದವರಿಗೆ ಆಯಾ ಬುಡಕಟ್ಟು ತನ್ನದೇ ಆದ ನ್ಯಾಯಪದ್ಧತಿಯಂತೆ ಶಿಕ್ಷೆ ವಿಧಿಸಿದೆ. ಬುಡ್ಡಕಟ್ಟಿನ ಹೊರಗೆ ವಿವಾಹ ಸಂಬಂಧಗಳನ್ನು ಮಾಡಿದರೆ ಅಂಥವರಿಗೆ ಬಹಿಷ್ಕಾರವನ್ನು ಹಾಕುತ್ತಾರೆ. ತಪ್ಪು ಮಾಡಿದವರು ಬುಡಕಟ್ಟಿನೊಂದಿಗೆ ತಪ್ಪೊಪ್ಪಿಕೊಂಡು ತನ್ನ ಪ್ರಾದೇಶಿಕ ಗುಂಪಿಗೆ ಬೇಟೆ ಕಡಿಸಿ ಮಾಂಸದೂಟ ಹಾಕಿಸುವ ಕ್ರಮವು ಮ್ಯಾಸ ನಾಯಕರಲ್ಲಿದೆ. ಅಂಥ ಸಂದರ್ಭಗಳಲ್ಲಿ ತಪ್ಪಿತಸ್ಥರ ನಾಲಿಗೆಗೆ ಕೆಂಪಗೆ ಕಾಯಿಸಿದ ತಾಮ್ರದ ಕಡ್ಡಿಯಿಂದ ಬರೆ ಹಾಕುತ್ತಾರೆ. ಅಲ್ಲಿಗೆ ಆ ವ್ಯಕ್ತಿಯು ಪರಿಶುದ್ಧನಾದಂತೆ. ಕೋಳಿಯನ್ನು ತಿಂದವರಿಗೆ, ಮಧ್ಯಸೇವನೆ ಮಾಡಿದವರಿಗೆ, ಚಪ್ಪಲಿ ಏಟು ತಿಂದವರಿಗೆ ಮೊದಲಾದವರಿಗೆ ಇಂಥ ಪರಿಷ್ಕಾರವಿರುತ್ತದೆ. ಬುಡಕಟ್ಟಿನೊಳಗೆ ಸೋದರ ಮಾವನ ಸಂಬಂಧದಲ್ಲಿ ಮದುವೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿರುವುದರಿಂದ ಹುಟ್ಟುವ ಮಕ್ಕಳಿಗೆ ತಂದೆಯ ಸ್ಥಾನದ ಸಾಮಾಜಿಕ ಭದ್ರತೆ ಇರುತ್ತದೆ. ಯಾವ ಅಚಾತುರ್ಯದ ಘಟನೆಗಳು ಸಂಭವಿಸಿದರೂ ಮಕ್ಕಳ ಪಾಲಿಗೆ ಪಿತೃತ್ವದ ಹಕ್ಕು ಭದ್ರವಾಗಿರುತ್ತದೆ. ಪ್ರತ್ಯೇಕ ಸಂಸ್ಕೃತಿಗಳ ಕಾರಣದಿಂದ ಬೇರ್ಪಟ್ಟ ಮ್ಯಾಸನಾಯಕ-ಊರನಾಯಕರ ನಡುವೆ ಮದುವೆ ಸಂಬಂಧಗಳು ಏರ್ಪಟ್ಟ ಸಂದರ್ಭಗಳಲ್ಲಿ ಮ್ಯಾಸರಲ್ಲಾದ ಪ್ರತಿರೋಧವನ್ನು ಒಂದು ಐತಿಹ್ಯ ಉದಾಹರಿಸುತ್ತದೆ. ಅದರ ಪ್ರಕಾರ ನಿಡುಗಲ್ಲು ಪ್ರದೇಶದ ಕಾಮರಾಜನು ತನ್ನ ಮಗಳನ್ನು ಹರ್ತಿಕೋಟೆಯ ರಾಜಕುಮಾರನಿಗೆ ಕೊಟ್ಟು ಮದುವೆ ಮಾಡಿದ ರಾಜಕುಮಾರನು ಊರಬೇಡನಾದ್ದರಿಂದ ಕಾಮರಾಜನ ಸಂಬಂಧಿಕರು ಆ ಮದುವೆಗೆ ಪ್ರತಿಭಟನೆಯಾಗಿ ಕಾಮರಾಜನಿಂದ ದೂರ ಸರಿದರು. ಆಗ ಕಾಮರಾಜನ ಮಗ ಹುನುಮನಾಯಕನು ನಿಡುಗಲ್ಲಿನಿಂದ ಎರಡು ಲಿಂಗಗಳನ್ನು ಗೌರಸಮುದ್ರದ ಬಳಿಗೆ ತಂದು ಅಲ್ಲಿನ ಎರಡು ಹುತ್ತಗಳಿಗೆ ಹಾಕಿದ ಆಗ ಒಂದು ಹುತ್ತದಲ್ಲಿ ಬೊಮ್ಮಣ್ಣ ಹಾಗೂ ಮತ್ತೊಂದು ಹುತ್ತದಲ್ಲಿ ಮಾರಮ್ಮ ದೇವತೆಗಳು ಕಾಣಿಸಿಕೊಂಡರು. ಈ ಪವಾಡದಿಂದಾಗಿ ಚದುರಿದ ಮ್ಯಾಸರೆಲ್ಲರೂ ಅಲ್ಲಿ ನೆಲೆಸತೊಡಗಿದರು. ಹನುಮ ನಾಯಕನಿಗೆ ಮದುವೆ ಮಾಡಿಸಿದರು. ಅವನಿಗೆ ದ್ಯಾಸಳನಾಯಕ, ಯರ‌್ರಾಳ ನಾಯಕ ಮತ್ತು ಬುಕ್ಕಾಳುನಾಯಕ ಎಂಬ ಮೂರು ಜನ ಗಂಡು ಮಕ್ಕಳಾದರು. ಮುಂದೆ ಬುಕ್ಕಾಳನಾಯಕನು ತನ್ನ ತಂದೆಯ ನೆನಪಿಗಾಗಿ ಹನುಮಂತನ ದೇವಸ್ಥಾನವನ್ನು ಕಟ್ಟಿಸಿ ಅಲ್ಲಿ ತನ್ನ ಜನಾಂಗದವರಿಗೆಂದು ಊರನ್ನು ನಿರ್ಮಿಸಿದ ಅಂದಿನಿಂದ ಅಲ್ಲಿನ ಅನುಯಾಯಿಗಳು ಹನುಮಂತ ದೇವರ ಮುದ್ರೆಯನ್ನು ಒತ್ತಿಸಿಕೊಳ್ಳತೊಡಗಿದರು. ಈ ಐತಿಹ್ಯದಲ್ಲಿ ಪವಾಡ ದೈವಗಳಾಗಿರುವ ಬೊಮ್ಮಣ್ಣ ಹಾಗೂ ಮಾರೆಮ್ಮ ಮ್ಯಾಸನಾಯಕರ ಸಂಸ್ಕೃತಿಯಲ್ಲಿ ನಾಯಕರ ಸ್ಥಾನ ಪಡೆದವಳು. ಮಾರಮ್ಮನನ್ನು ಬೊಮ್ಮಣ್ಣನ ತಂಗಿ ಎಂದು ಆರಾಧಿಸುತ್ತಾರೆ. ಆದ್ದರಿಂದ ಇವರ ನೆನಪಿನ ಪ್ರತಿಷ್ಠಾಪನೆ ಚದುರಿದ ಗುಂಪನ್ನು ಒಗ್ಗೂಡಿಸಲು ಇಲ್ಲಿ ಬಳಕೆಯಾಗಿದೆ. ಇದು ಊರಮ್ಯಾಸ ಎಂಬ ಗುಂಪಿಗೆ ಸಮರ್ಥನೆ ಇರಬಹುದು.

ಮ್ಯಾಸನಾಯಕರಲ್ಲಿ ಕೋಳಿಯನ್ನು ಸಾಕುವುದು, ತಿನ್ನುವುದು ನಿಷೇಧವೆಂಬುದಕ್ಕೆ ಕಾರಣವಾದ ಐತಿಹ್ಯ ಓಬಳದೇವರು ತಾನು ಕೋಳಿಕೂಗದ ಊರಿನಲ್ಲಿ ವಾಸಿಸುವುದಾಗಿ ಹೇಳಿ ವಾಸವಾಗಿರುವುದರಿಂದ ಮ್ಯಾಸರ ಹಟ್ಟಿಗಳಲ್ಲಿ ಕೋಳಿ ಸಾಗಾಣಿಕೆ ಮಾಡುವಂತಿಲ್ಲ. ಆಕಸ್ಮಾತ್ತಾಗಿ ಹಟ್ಟಿಗಳಿಗೆ ಹೋದ ಕೋಳಿಗಳು ಬದುಕುವುದಿಲ್ಲ ಎಂಬ ನಂಬಿಕೆಯೂ ಇದೆ. ಅಂತೆಯೇ ಕೆಲವು ಮ್ಯಾಸರು ಮುಸ್ಲೀಂರಂತೆ ಮುಂಜಿ ಮಾಡಿಕೊಳ್ಳುವ ಸಂಪ್ರದಾಯದ ಸಮರ್ಥನೆಗೊಂದು ಮೌಖಿಕ ಚರಿತ್ರೆ ಇದೆ. ಅದರಂತೆ ಮ್ಯಾಸನಾಯಕ ಪಾಳೆಯಗಾರನೊಬ್ಬನು ನನ್ನೆಮ್ಮನೆಂಬ ಮುಸ್ಲಿಂ ಹೆಣ್ಣನ್ನು ಮದುವೆಯಾಗಿದ್ದ. ಅವರ ಸಂತತಿಯು ಮುಂಜಿ ಆಚರಣೆಯನ್ನು ರೂಢಿಸಿಕೊಂಡಿದ್ದರಿಂದ ಮುಂಜಿಮ್ಯಾಸರೆಂದೇ ಕರೆಯಲ್ಪಟ್ಟರು ಈಗಲೂ ಮೋಹರಂ ಅನ್ನು ಮ್ಯಾಸನಾಯಕರು ವಿಶೇಷವಾಗಿ ಆಚರಿಸುತ್ತಾರೆ. ಎಲ್ಲ ಸಮುದಾಯಗಳು ಈ ಆಚರಣೆಯನ್ನು ಮಾಡುತ್ತಾರಾದರೂ ಇವರ ಪಾಲ್ಗೊಳ್ಳುವಿಕೆಗೆ ಅರ್ಥವಿದೆ. ಕೆಲವರು ಮೋಹರಂ ಆಚರಣೆಗಳಿಗೆ ವಿಗ್ರಹಗಳನ್ನು ನೀಡಿದ್ದಾರೆ. ಅವು ಈ ಗುಂಪುಗಳ ಪೂರ್ವಿಕರಿಗೆ ನದಿದಡಗಳಲ್ಲಿ ಲಭಿಸಿದ್ದವೆಂಬ ನಂಬಿಕೆಯಿದೆ.

ಮ್ಯಾಸರ ಉಪ ಪಂಗಡವಾದ ಕಳ್ಳಮ್ಯಾಸ ಅಥವಾ ಕಳ್ಳೇಮ್ಯಾಸ ವಿಶಿಷ್ಟ ಅರ್ಥಗಳನ್ನು ಒಳಗೊಂಡಿದೆ. ಈ ಬುಡಕಟ್ಟಿನಲ್ಲಿ ಕಳ್ಳು (ಹೆಂಡ)  ನಿಷಿದ್ಧವಾದದ್ದು. ಆದ್ದರಿಂದ ಈ ಹಿನ್ನೆಲೆಯನ್ನು ಪರಿಗಣಿಸುವಲ್ಲಿ ಯೋಚಿಸಿ ನಿರ್ಧರಿಸಬೇಕಾಗಿರುತ್ತದೆ. ಬುಡಕಟ್ಟಿನೊಳಗೆ ಕಳ್ಳತನವೂ ನಿಷೇಧಿಸಲ್ಪಟ್ಟಿದೆ. ಕಳ್ಳೇ>ಕಡಲೇ (ಗುಗ್ಗುರಿ) ಯು ಮ್ಯಾಸನಿರಬಹುದು. ಏಕೆಂದರೆ ಇವರ ಆಚರಣೆಗಳಲ್ಲಿ ಕಡಲೆಗುಗ್ಗುರಿಗೆ ಮಹತ್ವವಿದೆ. ನಂಬಿಕೆ ಆಚರಣೆ ಜೀವನಕ್ರಮ ದೇವತಾರಾಧನೆ ಹಾಗೂ ವೃತ್ತಿಗೆ ಸಂಬಂಧಿಸಿದ ಬುಡಕಟ್ಟು ಕಟ್ಟಳೆಗಳು ಮ್ಯಾಸಬೇಡರಲ್ಲಿ ವಿಶಿಷ್ಟವಾಗಿದ್ದು, ಕಾಡುಗೊಲ್ಲ ಸಂಸ್ಕೃತಿ ಯೊಂದಿಗೆ ಸಾಮ್ಯತೆಯನ್ನು ಪಡೆದಿವೆ. ಹಾಗೆಯೇ ಊರುಬೇಡರ ಸಂಸ್ಕೃತಿಗೂ ಇವರಿಗೂ ಅಜಗಜಾಂತರ ವ್ಯತ್ಯಾಸಗಳು ಕಂಡುಬರುತ್ತವೆ. ಅದರೆ ಕಾಡುಗೊಲ್ಲ ಮತ್ತು ಮ್ಯಾಸಬೇಡರಲ್ಲಿ ಉಂಟಾದುವೆಂದು ಹೇಳಲಾಗುವ ಪರಂಪರಾಗತ ಸಂಸ್ಕೃತಿಯ ಸಂಘರ್ಷಗಳು ಊರಬೇಡರೊಂದಿಗೆ ಕಂಡುಬರುವುದಿಲ್ಲ. ಊರ ಬೇಡರೊಂದಿಗೆ ವಿವಾಹ ಸಂಬಂಧ ಏರ್ಪಡಿಸಿಕೊಂಡ ಮ್ಯಾಸರಿಗೆ ತಮ್ಮ ಸಂಸ್ಕೃತಿಯಿಂದ ಬಹಿಷ್ಕಾರ ಹಾಕಿದ ನೆನಪುಗಳು ಇವೆಯಾದರೂ, ಅಂಥ ಬಹಿಷ್ಕೃತ ತನ್ನ ಗುಂಪಿನೊಂದಿಗೆ ಸ್ವತಂತ್ರನಾಗಿ ತನ್ನ ಅಸ್ತಿತ್ವವನ್ನು ರೂಪಿಸಿಕೊಂಡ ನಿದರ್ಶನಗಳಿವೆ. ಇಂಥ ಸಂಕರದ ಸ್ಮೃತಿಗಳು ಊರಬೇಡರಲ್ಲಿ ಇಲ್ಲ. ಮ್ಯಾಸನಾಯಕರು ತಮ್ಮ ಪೆಟ್ಟಿಗೆ ದೇವತೆಗಳನ್ನು ಮ್ಯಾಸ ಬುಡಕಟ್ಟಿನ ವೀರರನ್ನು ದೇವರ ದನಗಳನ್ನು ಪೂಜಿಸುತ್ತಾರೆ. ಈ ಸಂಬಂಧ ಆಚರಣೆಗಳು ಇವರಿಗೆ ಮಾತ್ರ ಸೀಮಿತವಾಗಿದ್ದು ಊರ ಜನರ ಪಾಲ್ಗೊಳ್ಳುವಿಕೆಗೆ ನಿಷೇಧವಿರುತ್ತದೆ. ಇವರ ಆಚರಣೆಗಳು ಬುಡಕಟ್ಟಿನ ಮೌಲ್ಯಗಳನ್ನು ಬಿಂಬಿಸುವುದರಿಂದ ಇತರರು ಭಾಗವಹಿಸುವುದನ್ನು ಮೈಲಿಗೆ ಎಂು ಪರಿಗಣಿಸುತ್ತಾರೆ.

ಊರ ನಾಯಕರಲ್ಲಿ ಅವರದೇ ಆದ ಪ್ರತ್ಯೇಕ ಆಚರಣೆಗಳು ಕಡಿಮೆಯೆಂದೇ     ಹೇಳಬೇಕು. ಊರೊಟ್ಟಿನ ಜನ ಪೂಜಿಸುವ ದೈವಗಳನ್ನು ಇವರೂ ಪೂಜಿಸುತ್ತಾರೆ. ಜನಪದರಲ್ಲಿ ಇವರ ಸಮುದಾಯ ಗಳಿಸಿಕೊಂಡ ಮಹತ್ವದ ನೆನಪುಗಳಿದ್ದರೆ ಆಗ ಸಂಬಂಧಿಸಿದ ಆಚರಣೆಗಳಲ್ಲಿ ಇವರ ಅಧಿಕೃತತೆ ಇರುತ್ತದೆ. ಉದಾಹರಣೆಗೆ ಗ್ರಾಮ ದೇವತೆಗಳಿಗೆ ಬಲಿ ಕೊಡುವ ಆಚರಣೆಗೆ ಬೇಡರು ಪರಂಪರಾಗತವಾಗಿ ನಿಗಧಿಯಾಗಿದ್ದಾರೆ. ಏಕೆಂದರೆ ಮೂಲತಃ ಬೇಟೆಗಾರರಾಗಿದ್ದ ಇವರು ಪ್ರಾಣಿಗಳನ್ನು ಕೊಲ್ಲುವುದರಲ್ಲಿ ಪಳಗಿದ್ದರು. ಆದ್ದರಿಂದಲೇ ಪ್ರಾಣಿಗಳನ್ನು ಕತ್ತರಿಸಿದಾಗ ಅವು ಚಡಪಡಿಸುವುದಾಗಲಿ ರಕ್ತಹರಿಯುವುದಾಗಲಿ ಇವರಿಗೆ ಹೆದರಿಕೆಯ ವಿಷಯವಾಗಿರಲಿಲ್ಲ. ಆದ್ದರಿಂದ ಪ್ರಾಣಿಗಳನ್ನು ದೇವತೆಗಳಿಗೆ ಬಲಿ ನೀಡುವಲ್ಲಿ ಬೇಡರಿಗೆ ಮಹತ್ವವಿದೆ. ಮಾರಿಯ ಹಬ್ಬದ ಆಚರಣೆಯಲ್ಲಿ ಬೇಡರು ಕೋಣವನ್ನು ಕತ್ತರಿಸಬೇಕೆಂಬ ನಿಯಮವೂ ಸಾಂಸ್ಕೃತಿಕ ಆಯಾಮವನ್ನು ವಿಸ್ತರಿಸುತ್ತದೆ. ಅದು ತಪ್ಪು ಮಾಡಿದವರನ್ನು ಕತ್ತರಿಸುವ ಶಿಕ್ಷೆಯ ಸಂಕೇತವಾಗಿದೆ. ಹಿಂದೆಲ್ಲಾ ಇಂಥ ಶಿಕ್ಷೆಗಳನ್ನು ನೆರವೇರಿಸಲು ಬೇಡರನ್ನು ಬಳಸಿಕೊಂಡಿರ ಬಹುದು. ಅಸ್ಪೃಶ್ಯನು ಮೇಲ್ಜಾತಿಯ ಮಾರಿಯನ್ನು ಮದುವೆಯಾದನೆಂದು ಅವನಿಗೆ ಆ ಸಮಾಜವು ವಹಿಸಿದ ಶಿಕ್ಷೆ ಮಾರಿ ಜಾತಿಯ ಮುಖ್ಯ ಆಚರಣೆ. ಹೀಗೆ ಊರೊಟ್ಟಿನ ಸಂಸ್ಕೃತಿಯ ಕಟ್ಟಳೆ-ಕಟ್ಟುಪಾಡುಗಳಲ್ಲಿ ಬೇಡರಿಗೂ ಕೆಲವು ಜವಾಬ್ದಾರಿಗಳಿವೆ.

ಹನುಮಂತ, ಶಿವ, ನರಸಿಂಹ, ವೆಂಕಟರಮಣ ಇತ್ಯಾದಿ ಶಿಷ್ಟ ದೈವಗಳನ್ನು ತಮ್ಮ ಸಂಸ್ಕೃತಿಯೊಂದಿಗೆ ಜನಪದೀಕರಣಗೊಳಿಸಿಕೊಂಡು ಪೂಜಿಸುವುದು ಊರನಾಯಕರ ಸಂಸ್ಕೃತಿಯ ಲಕ್ಷಣ. ನರಸಿಂಹದೇವರು ತಮ್ಮ ಹೆಣ್ಣು ಮಗಳಾದ ಚಂಚುಲಕ್ಷ್ಮಿಯ ಗಂಡನೆಂದು ಆರಾಧಿಸಿದಂತೆ, ಶಿವನ ಹೆಂಡತಿ ಪಾರ್ವತಿಯು ತಮ್ಮ ಹೆಣ್ಣು ಮಗಳೆಂದು ಪೂಜಿಸುತ್ತಾರೆ. ನಾಗಲಮ್ಮನೆಂಬ ಹೆಸರಿನ ಪಾರ್ವತಿಯ ಆರಾಧನೆಯು ನಾಗಾರಾದನೆಯನ್ನು ಮಾತೃಮೂಲದ ಆಚರಣೆಯನ್ನಾಗಿ ರೂಢಿಸಿಕೊಂಡಿದ್ದರ ಸಂಕೇತವಾಗಿದೆ. ಹಾಗೆಯೇ ಸಪ್ತಮಾತೃಕೆಯರನ್ನು ‘ಕನ್ನಿ’ಕೆಯರು ಎಂದು ಕರೆದು ಆರಾಧಿಸುವುದಕ್ಕೂ ಇಂಥದ್ದೊಂದು ಮಹತ್ವವಿದೆ. ಇವರು ವಿಶೇಷವಾಗಿ ಪೂಜಿಸುವ ಮಾಸ್ತಿ ಅಥವಾ ಮಹಾಸತಿಯರು ತಮ್ಮ ವಂಶದ ಇತಿಹಾಸದಲ್ಲಿ ಹುತಾತ್ಮರು. ಹಾಗೆಯೇ ಒಟ್ಟಾರೆ ಊರಿನ ಚರಿತ್ರೆಯಲ್ಲಿ ಸ್ಮರಣಾರ್ಹರು. ಇವರ ವೀರಗಲ್ಲುಗಳ ಆರಾಧನೆಯ ನೆನಪಾಗಿರುವ ಸಾಂಸ್ಕೃತಿಕ ವೀರರೂ ಒಟ್ಟಾರೆ ಊರಿನ ಹಿತಕ್ಕಾಗಿ ಪ್ರಾಣಾರ್ಪಣೆ ಮಾಡಿದವರಾಗಿದ್ದಾರೆ. ಕೆಲವು ಗ್ರಾಮದೇವತೆಗಳು ಆ ಊರಿನ ನಾಯಕ (ಬೇಡ) ರ ಮನೆಯ ಎಡೆಯು (ನೈವೇಧ್ಯ)  ತನಗೆ ಪಟ್ಟು ಹಿಡಿಯುವ ಪರಂಪರೆ ಇದೆ. ಊರನಾಯಕರ ಮನೆಯು ಮೊದಲ ಆರತಿ ಮೊದಲ ಬಲಿ ನೆರವೇರುವವರೆಗೂ ಇತರರಿಗೆ ಅವಕಾಶವಿರುವುದಿಲ್ಲ. ಹಿಂದೊಮ್ಮೆ ಊರನಾಯಕನು ಯುದ್ಧ ಇತ್ಯಾದಿ ಕಾರಣಗಳಿಗಾಗಿ ಪರವೂರುಗಳಿಗೆ ಹೋಗಿದ್ದಾಗ ಕೆಲವು ಅಲ್ಲಿನ ದೇವತೆಗಳು ಇವರ ಬೆನ್ನಿಗೆ ಬಿದ್ದು ಹಿಂಬಾಲಿಸಿ ಬಂದು ಇವರೊಂದಿಗೆ ನೆಲೆಸಿದ ಆಧಾರಗಳಿವೆ. ಇಂಥ ದೇವತೆಗಳು ಊರಿನ ಎಲ್ಲ ಸಮುದಾಯದವರಿಂದ ಪೂಜಿಸಲ್ಪಡುತ್ತವೆಯಾದರೂ ಬೇಡರಿಗೆ ಪ್ರಥಮ ಆಧ್ಯತೆ ಇರುತ್ತದೆ.

ಬೇಡ-ನಾಯಕರು ಎಲ್ಲೆಲ್ಲಿ ಹೋಗಿ ನೆಲೆಸಿದರೂ ತಮ್ಮ ಮೂಲ ನೆಲೆಯ ದೇವತೆಗಳನ್ನು ತಾವು ವಾಸಿಸುವ ನೆಲೆಯಲ್ಲಿ ಪೂಜಿಸುತ್ತಾರೆ. ಆದ್ದರಿಂದ ಬೇಡರು ನೆಲೆಸಿರುವ ಊರುಗಳಲ್ಲಿ ಅಹೋಬಲ ನರಸಿಂಹ, ಕದರಿ ನರಸಿಂಹ, ತಿರುಪತಿ ತಿಮ್ಮಪ್ಪ ಮೊದಲಾದ ದೈವಗಳ ಗುಡಿಗಳನ್ನು ಕಟ್ಟಿಕೊಂಡಿರುತ್ತಾರೆ. ಹೀಗೆ ಬೇಡರ ಮೂಲ ನೆಲೆಯಿಂದ ಬಂದ ಆರಾಧನಾ ದೈವಗಳು ಅಗಸ, ಉಪ್ಪಾರ, ವಡ್ಡ, ಹೊಲೆಯ, ಮಾದಿಗ ಇತ್ಯಾದಿ ಕೆಳ ಸಮುದಾಯಗಳ ಜನರಿಂದ ಏಕಕಾಲಕ್ಕೆ ಒಂದೇ ರೀತಿಯ ನೆನಪುಗಳಿಂದ ಪುಷ್ಠಿಗೊಂಡಿರುತ್ತದೆ. ಈ ಎಲ್ಲ ಪರಿವಾರವೂ ಒಟ್ಟಿಗೆ ವಲಸೆ ಬಂದ ಆ ಊರಿನಲ್ಲಿ ನೆಲೆಸಿದ ನೆನಪು ಊರ ಸಂಸ್ಕೃತಿಯಲ್ಲಿ ಮಿಳಿತಗೊಂಡಿದ್ದರ ದ್ಯೋತಕವಾಗಿ ಇಂಥ ಸಮುದಾಯಗಳು ದೈವೋಪಾಸನೆಯಲ್ಲಿ ಸಮಾನವಾಗಿ ಭಾಗವಹಿಸುತ್ತವೆ.

ಮ್ಯಾಸಬೇಡರಲ್ಲಿ ಅಕ್ಕಮ್ಮನ ಆಚರಣೆ ಅಥವಾ ಅಕ್ಕನ ಗಂಡನ ಪೂಜೆ ಎಂಬ ಪದ್ಧತಿ ಇದೆ. ಇದಕ್ಕೂ ಇತರರು ಸಾರ್ವತ್ರಿಕವಾಗಿ ಜನಸಮುದಾಯಗಳು ಪೂಜಿಸುವ ಏಳು ಜನ ಅಕ್ಕಂದಿರು (ಸಪ್ತಮಾತೃಕೆಗಳು)  ಇವರಿಗೂ ಸಂಬಂಧವಿರುವಂತೆ ಕಂಡು ಬರುವುದಿಲ್ಲ. ಐತಿಹ್ಯದ ಪ್ರಕಾರ ಮ್ಯಾಸಬೇಡರ ಏಳು ಜನ ಅಣ್ಣ-ತಮ್ಮಂದಿರು ನಿಧಿಯ ಪ್ರಲೋಭನೆಗಾಗಿ ತಮ್ಮ ಏಕೈಕ ತಂಗಿ ಅಕ್ಕಮ್ಮನನ್ನು ಬಲಿ ನೀಡಿದರು. ವಿಷಯ ತಿಳಿದ ತಾಯಿಯು ಇವರಿಗೆ ಶಾಪನೀಡಿದಳು. ಅಮಾಯಕಳಾಗಿದ್ದ ಅಕ್ಕಮ್ಮನನ್ನು ಸಹೋದರರು ಮೋಸದಿಂದ ಬಲಿ ನೀಡಿದಾಗಿನ ಆಕೆಯ ಅಸಹಾಯಕತೆ ದೇವತೆಯ ರೂಪಕ್ಕೆ ಕಾರಣವಾಯಿತು. ಇದಕ್ಕೆ ಸ್ಪಂದಿಸುತ್ತಾ ಬಂದಿರುವ ಆ ಸಮುದಾಯದ ಹಾಗೂ ಆ ಪರಿಸರದ ಇತರ ಹೆಣ್ಣು ಮಕ್ಕಳು ಅಕ್ಕಮ್ಮನನ್ನು ಆರಾಧಿಸುತ್ತಾರೆ. ತಮ್ಮ ದೈಹಿಕ-ಮಾನಸಿಕ ಅಸಹಾಯಕತೆಗಳನ್ನು ನಿವಾರಿಸುವಂತೆ ಹರಕೆಗಳನ್ನು ಕಟ್ಟುತ್ತಾರೆ.

ಸಾಂಸ್ಕೃತಿಕ ನಾಯಕರಿಗೆ ಸಂಬಂಧಿಸಿದ ಐತಿಹ್ಯಗಳು
ವಾಲ್ಮೀಕಿಯ ಮೂಲ

ವಾಲ್ಮೀಕಿಯು ಮೂಲತಃ ಕಿರಾತರ ಯಜಮಾನನಾಗಿದ್ದನೆಂದು ಜನಪದರಲ್ಲಿ ನಂಬಿಕೆಯಿದೆ. ಇದಕ್ಕೆ ಪುರಾಣದಲ್ಲಿಯೂ ವಾಲ್ಮೀಕಿ ಬೇಡರ ಸಂಸ್ಕೃತಿಯ ಮೂಲದಿಂದ ಬಂದವನೆಂಬ ಆಧಾರಗಳು ಪುಷ್ಠಿ ನೀಡುತ್ತವೆ. ವಾಲ್ಮೀಕಿಯ ಮೂಲ ಹೆಸರು ಕಾಮಕೇತುವೆಂದೂ, ಈತನಿಗೆ ಲಕ್ಷ, ಮೀನು, ಮಲ್ಲ ಎಂಬಿತ್ಯಾದಿ ಏಳು ಜನ ಗಂಡು ಮಕ್ಕಳಿದ್ದರೆಂದು ಐತಿಹ್ಯವಿದೆ. ಇದರ ಪ್ರಕಾರ ಕಾಮಕೇತುವು ತನ್ನ ಏಳು ಮಕ್ಕಳ ನೇತೃತ್ವದಲ್ಲಿ ಏಳು ಪಡೆಗಳನ್ನು ರಚಿಸಿ ಕಳ್ಳತನ, ದರೋಡೆ ನಡೆಸುತ್ತಿದ್ದ. ಮುಂದೆ ಕಾಮಕೇತು ವಾಲ್ಮೀಕಿಯಾಗಿ ರಾಮಾಯಣವನ್ನು ರಚಿಸಿ ಪ್ರಸಿದ್ದಿ-ಕೀರ್ತಿಗಳನ್ನು ಗಳಿಸಿಕೊಂಡ. ಆದರೆ ಬೇಡ ಪಡೆಗಳು ಕಾಡಿನಲ್ಲಿ ಚದುರಿ ಹೋದರೆಂದು, ಹೀಗೆ ದೇಶದಾದ್ಯಂತ ಹರಡಿದರೆಂದು ಹೇಳುತ್ತಾರೆ.

ಬೇಡ ಬುಡಕಟ್ಟಿನಲ್ಲಿ ವಾಲ್ಮೀಕಿಯ ಬಗ್ಗೆ ಗೌರವಾಧಾರಗಳು ಇದ್ದರೂ, ಈತನ ಶಿಷ್ಟ ಸಂಪ್ರದಾಯಕ್ಕೆ ಸಮುದಾಯವು ಸ್ಪಂದಿಸಿದಂತಿಲ್ಲ. ಏಕೆಂದರೆ ‘ವಾಲ್ಮೀಕಿ’ ಎಂಬ ಗೋತ್ರ (ಬಳು) ವಾಗಲಿ, ರಾಮಾಯಣ ಕಾವ್ಯಕ್ಕೆ ಸಂಬಂಧಿಸಿದ ಗೋತ್ರಗಳಾಗಲಿ ಕಂಡುಬರು ವುದಿಲ್ಲ. ‘ಸಾಕೇತಲವರು’ ಎಂಬ ಗೋತ್ರದ ಮೂಲವನ್ನು ಕೆಲವರು ಸಾಕೇತ ವಂಶದ ಪ್ರಭಾವದಿಂದ ವಿವರಿಸಿದ್ದಾರೆ. ಆದರೆ ಅದು ತೆಲುಗಿನ ಸಾಕು ಗೇತಲವಾರು (ಪಶು ಪಾಲಕರು)  ಎಂಬುದಾಗಿರಬಹುದು. ಅಂತೆಯೇ ಬೇಡರಲ್ಲಿ ಕಾಮಗೇತಲವರು ಎಂಬ ಗೋತ್ರವೂ ಇದೆ. ಇದು ವಾಲ್ಮೀಕಿಯ ಮೂಲ ನಾಮದ ಸ್ಮೃತಿ ಎಂದೂ ಸಮರ್ಥಿಸ ಬಹುದು. ಅಥವಾ ವಾಲ್ಮೀಕಿಯು ಕಾಮಗೇತಲ ಗೋತ್ರದವನಿರಬಹುದೆಂದು ಊಹಿಸಬಹುದು. ಏಕೆಂದರೆ ಬೇಡರಲ್ಲಿ ಕೆಲವು ವಿಶೇಷಣಗಳು ಗೇತಲು (ಪಶುಗಳು)  ಎಂಬ ಉತ್ತರ ಪದದ ಜೊತೆಗೆ ಸೇರಿಕೊಂಡು ಹಲವು ಬಳಿ (ಗೋತ್ರ) ಗಳಿವೆ. ಉದಾ : ನಲ್ಲಗೇತಲು, ಯರ‌್ರಗೇತಲು, ತೆಲ್ಲಗೇತಲು ಇತ್ಯಾದಿ ನಿರ್ದಿಷ್ಟ ಗುಂಪುಗಳು ಯಾವ ಬಣ್ಣದ ಪಶುಗಳನ್ನು ಸಾಕುತ್ತಿದ್ದರೆಂಬುದನ್ನು ಸಂಕೇತಿಸುತ್ತವೆ.

ಮತ್ತೊಂದು ಐತಿಹ್ಯದಂತೆ ರಾಮಾಯಣವನ್ನು ಬರೆದ ವಾಲ್ಮೀಕಿಯನ್ನು, ಬ್ರಹ್ಮನು ಬ್ರಹ್ಮಪೀಠಕ್ಕೆ ಸೇರಿಸಿಕೊಂಡ. ಅಂತೆಯೇ ಆತನಿಗೆ ಜನಿವಾರವನ್ನು ನೀಡಿದ. ಅಂದಿನಿಂದ ವಾಲ್ಮೀಕಿಯು ತನ್ನ ಮಕ್ಕಳಿಗೂ ಜನಿವಾರಧಾರಣೆ ಮಾಡಿದ, ಆದರೆ ಮಕ್ಕಳು ವಾಲ್ಮೀಕಿಗೆ ತಿಳಿಯದಂತೆ ಬೇಟೆಗಾರಿಕೆ ಹಾಗೂ ಮಾಂಸಾಹಾರಗಳನ್ನು ನಡೆಸುತ್ತಿದ್ದರು. ಅಂಥ ಸಂದರ್ಭಗಳಲ್ಲಿ ಜನಿವಾರಕ್ಕೆ ಅಪವಿತ್ರತೆಯಾಗಬಾರದೆಂದು ಕಾಡಿನಲ್ಲಿ ಗಿಡವೊಂದಕ್ಕೆ ನೇತು ಹಾಕುತ್ತಿದ್ದರು. ಒಮ್ಮೆ ಅದು ಗಾಳಿಗೆ ಹಾರಿ ಹೋಗಿ ಬ್ರಾಹ್ಮಣನಿಗೆ ಸಿಕ್ಕಿತ್ತು. ಇದರಿಂದ ಪೂಜೆ, ಅರ್ಚನೆಗಳೆಲ್ಲವೂ ಬ್ರಾಹ್ಮಣರ ಪಾಲಾದುವು ಎಂದು ಹೇಳುತ್ತಾರೆ. ಇದೆ ಐತಿಹ್ಯದ ಮತ್ತೊಂದು ಪಾಠಾಂತರದಲ್ಲಿ ವಾಲ್ಮೀಕಿಯ ಮಕ್ಕಳು ತಮ್ಮ ಜನಿವಾರ ಗಳನ್ನು ಬ್ರಾಹ್ಮಣರಿಗೆ ನೀಡಿದರೆಂದು ತಿಳಿದುಬರುತ್ತದೆ. ಇದರ ಪ್ರಕಾರ ಬೇಟೆಗಾರಿಕೆ ಹಾಗೂ ಮಾಂಸಾಹಾರದ ಬುಡಕಟ್ಟು ಜೀವನ ಮತ್ತು ಜನಿವಾರ ಭರಿತವಾದ ಶಿಷ್ಟ ಸಂಸ್ಕೃತಿಗಳ ನಡುವೆ ಹೊಂದಾಣಿಕೆ ಮಾಡಿಕೊಳ್ಳುವ ಅನಿರ್ವಾಯತೆ ಬಂದಾಗ ಮೂಲಬದುಕಿನ ಆಯ್ಕೆಯೇ ಬೇಡರದಾಗಿರುವುದು ತಿಳಿದುಬರುತ್ತದೆ. ಇಂಥ ಸಂದರ್ಭ ದಲ್ಲಿ ಬ್ರಾಹ್ಮಣ ಸಮುದಾಯದ ಶಿಷ್ಟತೆಗೆ ವಾಲ್ಮೀಕಿ ಮಾತ್ರ ಬದ್ಧನಾಗಿರಬಹುದು.

ಪೌರಾಣಿಕ ನಿದರ್ಶನಗಳು ವಾಲ್ಮೀಕಿಯು ಶಿಷ್ಟನಾಗಿದ್ದನೆಂಬ ನಿದರ್ಶನಗಳನ್ನೆ ವಿವರಿಸುತ್ತವೆ. ಅಲ್ಲದೆ, ಬೇಡರಲ್ಲಿ ಕಣ್ವ ಋಷಿಯ ವಂಶಸ್ಥರೆಂಬ ನಂಬಿಕೆ ಇದೆ. ಭಾಗವತ್, ವಿಷ್ಣು ಪುರಾಣಗಳಿಂದಲೂ ಬೇಡರ ಸಂಸ್ಕೃತಿಯ ಬಗ್ಗೆ ಹುಡುಕಾಟಗಳು ನಡೆದಿವೆ. ಅದರ ಪ್ರಕಾರ ಇವರು ಧೃವ ಚಕ್ರವರ್ತಿಯ ವಂಶಸ್ಥರು ಆತನ ಮಗ ಅಂಗನೆಂಬ ಚರ್ಕವರ್ತಿಯ ಸಂತತಿಯವರು, ಪುರಾಣದ ಪ್ರಕಾರ ಅಂಗಚಕ್ರವರ್ತಿಯು ತನ್ನ ಪಿತೃಗಳಿಗೆ (ಸ್ವರ್ಗಸ್ಥ)  ಹವಿಸ್ಸನ್ನು ನೀಡುವ ಉದ್ದೇಶಕ್ಕಾಗಿ ಪುತ್ರಕಾಮೇಷ್ಠಿಯಾಗದಿಂದ ಮಗನನ್ನು ಪಡೆಯುತ್ತಾನೆ. ಆತನೇ ವೇನನೆಂಬುವವನು. ಈತನು ಬೇಟೆಗಾರಿಕೆಯಂಥ ಹಿಂಸಾತ್ಮಕ ವೃತ್ತಿಗಳನ್ನು ಅನುಸರಿಸುತ್ತಿದ್ದನು. ಈತನು ರಾಜನಾದ ಮೇಲೆ ಯಾಗ- ಯಜ್ಞಗಳಂಥ ಧರ್ಮಕಾರ್ಯಗಳನ್ನು ನಿಲ್ಲಿಸಿದ್ದಲ್ಲದೆ ಸ್ವರ್ಗಸ್ಥರಿಗೆ ಹವಿಸ್ಸು ನೀಡುವ ಬದಲು ತನಗೇ ನೀಡಬೇಕೆಂದು ಪೀಡಿಸತೊಡಗಿದನು. ಹೀಗೆ ನಾಸ್ತಿಕನೂ ದುಷ್ಟನೂ ಆದ ಇವನನ್ನು ಋಷಿಗಳು ಕೊಂದರು. ಆದರೆ ಇವನಿಗೂ ಮಕ್ಕಳಿಲ್ಲದ್ದರಿಂದ ಇವನ ಶರೀರವನ್ನು ಮಥಿಸಲಾಗಿ ಈತನ ಹಿರಿಯ ಮಗನಾಗಿ ಬಾಹುಕನೆಂಬ ಕುಬ್ಜನೂ ಕುರೂಪಿಯೂ ಆದ ವಿಕಲಾಂಗನು ಜನಿಸಿದನು. ಈತನು ರಾಜ್ಯಭಾರಕ್ಕೆ ಅನರ್ಹನೆಂದು ತಿಳಿದ ಋಷಿಗಳು ವೇನನ ಬಲಗೈಯನ್ನು ಕಡಿದರು. ಆಗ ಪೃಥುವೆಂಬ ಮಗನು ಜನಿಸಿ ರಾಜ್ಯಭಾರ ಮಾಡಿದನು.

ಹಿರಿಯ ಮಗನಾಗಿದ್ದರೂ ತಮ್ಮನ ಅಧೀನದಲ್ಲಿ ಬದುಕು ಅಪಮಾನವೆಂದು ಅರಿತ ಬಾಹುಕನು ಕಾಡಿಗೆ ತೆರಳಿದನು. ಬೇಟೆಗಾರಿಕೆ, ಪಶುಪಾಲನೆ ಹಾಗೂ ವ್ಯವಸಾಯದಂಥ ವೃತ್ತಿಗಳಲ್ಲಿ ಮುಂದುವರೆದನು. ಕಾಲಾನಂತರ ಇವನ ಸಂತತಿ ಕಾಡುಗಳಿಂದ ನಾಡಿನ ಕಡೆಗೆ ನಡೆದು ಬಂದರೆಂದು ನಂಬಿದ್ದಾರೆ. ಹಾಗೆಯೇ ಪುರಾಣ ವೃತ್ತಿಗಳಾದ ಧರ್ಮವ್ಯಾಧ, ಏಕಲವ್ಯ, ಗುಹ, ಶಬರಿ ಮುಂತಾದವರ ಸ್ಮೃತಿಗಳು ಬೇಡ ಸಮುದಾಯದಲ್ಲಿವೆ. ಆದರೆ ಪುರಾಣ ಮೂಲದ ತಮ್ಮ ಸಾಂಸ್ಕೃತಿಕ ವ್ಯಕ್ತಿಗಳ ಕುರಿತ ಆಚರಣೆಗಳು ಈ ಸಮುದಾಯದ ಭಾಗವಾಗಿ ಎಲ್ಲೂ ಕಂಡುಬರುವುದಿಲ್ಲ.

ಪುರಾಣ ಮೂಲದ ಧರ್ಮವ್ಯಾಧನ ಕತೆಯು ಬೇಡ ಸಂಸ್ಕೃತಿಯ ವೃತ್ತಿ ಸಂಸ್ಕಾರವನ್ನು ಅನುಮೋದಿಸುವುದಾಗಿದೆ. ಬೇಡರು ಮೂಲತಃ ಮಾಂಸಾಹಾರಿಗಳು. ಆದರೆ ಕಾಲಕ್ರಮೇಣ ಮಾಂಸಾಹಾರವನ್ನು ಕಡಿಮೆ ಮಾಡಿಕೊಂಡು ಸಸ್ಯಾಹಾರವನ್ನು ರೂಢಿಸಿಕೊಂಡವರು ಊರುಬೇಡರಿರಬಹುದು. ಈ ಕಾರಣಕ್ಕಾಗಿಯೇ ಇವೆರಡು ಗುಂಪುಗಳು ಬೇರ್ಪಟ್ಟ ನಿದರ್ಶನಗಳು ಕೆಲವು ಐತಿಹ್ಯಗಳಲ್ಲಿವೆ. ಅಣ್ಣ-ತಮ್ಮಂದಿರಿಬ್ಬರು ತಮ್ಮ ದನ-ಕರು ಗಳನ್ನು ಮೇಯಿಸುತ್ತಿದ್ದಾಗ ಹಿಂದೆ ಬರುತ್ತಿದ್ದ ತಮ್ಮನು ಆಕಳು ಕರುವಿನ ಕಾಲನ್ನು ಕುಡಿಯಲಾರಂಭಿಸಿದನಂತೆ. ಇದನ್ನು ಕಂಡ ಅಣ್ಣನು ತಮ್ಮನನ್ನು ಕಾಡಿನಲ್ಲಿಯೇ ಬಿಟ್ಟು ಬಂದ. ಹೀಗೆ ಊರುಬೇಡ ಮ್ಯಾಸಬೇಡರು ಬೇರೆಯಾದರೆಂದು ಹೇಳುತ್ತಾರೆ. ಇದೇ ಐತಿಹ್ಯವನ್ನು ಕಾಡುಗೊಲ್ಲ ಹಾಗೂ ಮ್ಯಾಸಬೇಡರ ಪ್ರತ್ಯೇಕತೆಗೆ ಸಂಬಂಧಿಸಿದಂತೆಯೂ ಹೇಳುತ್ತಾರೆ.

ವಾಲ್ಮೀಕಿಯ ಮೂಲದಿಂದ ತಮ್ಮನ್ನು ಬೇಡರು ಗುರುತಿಸಿಕೊಳ್ಳುವಾಗಲೂ ಮ್ಯಾಸಬೇಡರು ಅಡವಿಯಲ್ಲಿದ್ದ ಹೆಂಡತಿಯ ಮಕ್ಕಳೆಂದೂ, ಊರು ಬೇಡರು ಊರಿನಲ್ಲಿದ್ದ ಹೆಂಡತಿಯ ಮಕ್ಕಳೆಂದೂ ಹೇಳುತ್ತಾರೆ. ಕನಕದಾಸರನ್ನು ಬೇಡರು ಮೂಲತಃ ತಮ್ಮ ವನೆಂದೇ ಗುರುತಿಸುತ್ತಾರೆ. ಅಂತೆಯೇ ಕುರುಬ ಮೂಲದವನೆಂಬ ವಾದವೂ ಇದೆ. ಏನೇ ಆದರೆ ಬೇಡರು ನಂಬುವ ಕನಕದಾಸನೆಂಬ ವ್ಯಕ್ತಿ ವ್ಯಾಸರಾಯರ ಪ್ರೀತಿಯ ಶಿಷ್ಯನಾಗಿದ್ದುದಲ್ಲದೆ, ‘ವ್ಯಾಸರಾಯ ಸಂಸೇವಿತಾಃ’ ಎಂದು ಹೇಳಿದ್ದರಿಂದ ಆತನ ವಂಶಸ್ಥರು ಅದನ್ನೆ ಅನುಸರಿಸಿದರು. ಈ ವ್ಯಾಸ ಪರಂಪರೆಯ ಅನುಯಾಯಿಗಳನ್ನು ಮ್ಯಾಸರೆಂದು ಅಪಭ್ರಂಶಗೊಳಿಸಿ ಉಚ್ಛರಿಸುತ್ತಾ ಬಂದರೆಂದು ಕೆಲವರು ಸಮರ್ಥಿಸುತ್ತಾರೆ.

ಕ್ಷತ್ರಿಯ ಮೂಲ

ಬೇಡರು ಕ್ಷತ್ರಿಯ ಮೂಲದವರೆಂದು ಸಮರ್ಥಿಸಿಕೊಳ್ಳುವ ಐತಿಹ್ಯ ಹೀಗಿದೆ : ಚಂದ್ರವಂಶದ ಕ್ಷತ್ರಿಯನಾದ ಕಾರ್ತವೀರ್ಯಾರ್ಜುನನು ಜಮದಗ್ನಿಯನ್ನು ಕೊಲ್ಲುತ್ತಾನೆ. ಇದರಿಂದ ಕುಪಿತನಾದ ಜಮದಗ್ನಿ ಪುತ್ರ ಪರಶುರಾಮನು ಕಾರ್ತಿವೀರ್ಯನನ್ನು ಕೊಂದನಲ್ಲದೆ ಅವನ ವಂಶವನ್ನು ಸರ್ವನಾಶ ಮಾಡಲು ಇಪ್ಪತ್ತೊಂದು ಭಾರಿ ದಂಡಯಾತ್ರೆ ನಡೆಸುತ್ತಾನೆ. ಇದರಿಂದ ಹೆದರಿದ ಕ್ಷತ್ರಿಯರೆಲ್ಲರು ಕಾಡುಗಳನ್ನು ಸೇರಿ ಬೇಡರಾದರು.

ರೇಣುಕೆ ಅಥವಾ ಎಲ್ಲಮ್ಮನ ಆರಾಧಕ ಪಂಗಡವಾದ ಬೇಡರಲ್ಲಿನ ಐತಿಹ್ಯದಂತೆ ಇವರು ಪರಶುರಾಮನ ಪರಂಪರೆಯವರು; ಎಲ್ಲಮ್ಮನ ಆರಾಧಕರಾದರು. ಗಂಧರ್ವನನ್ನು ನೋಡಿ ಯಲ್ಲಮ್ಮನು ಚಿತ್ತ ಚಂಚಲೆಯಾಗಿದ್ದಾಳೆಂದು ನಿರ್ಧರಿಸಿದ ಪತಿ ಜಮದಗ್ನಿಯು ಆಕೆಯನ್ನು ಕೊಲ್ಲುವಂತೆ ಮಗನಾದ ಪರಶುರಾಮನಿಗೆ ತಿಳಿಸುತ್ತಾನೆ. ಅಂತೆಯೇ ಪರಶುರಾಮನು ತನ್ನ ತಾಯಿಯ ತಲೆಯನ್ನು ಕತ್ತರಿಸುತ್ತಾನೆ. ಈ ರುಂಡವು ಹಲವು ಪವಾಡಗಳಿಂದಾಗಿ ಮಹತ್ವ ಪಡೆಯುತ್ತದೆ. ನಂತರ ಪರಶುರಾಮನು ತಾಯಿಯ ಆರಾಧಕನಾಗುತ್ತಾನೆ. ಈ ಐತಿಹ್ಯವು ಪ್ರಾದೇಶಿಕವಾಗಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಪುರುಷ ಪ್ರಾಬಲ್ಯದೊಂದಿಗೆ ಸಂಘರ್ಷಗೊಂಡು ಸ್ವಂತಿಕೆಯ ಅಸ್ಥಿತ್ವವನ್ನು ಉಳಿಸಿಕೊಂಡಿದ್ದರ ಸಂಕೇತವಾಗಿ ತೋರುತ್ತದೆ. ಆಗ ಅಲ್ಲಿನ ಬೇಡರು ಕೂಡ ಮಾತೃ ಮೌಲ್ಯಗಳನ್ನು ಒಪ್ಪಿಕೊಂಡು ಅನುಸರಿಸಿರಬಹುದು.

ಕಾರ್ತಿವೀರ್ಯನ ನಿರ್ದೇಶನದ ಐತಿಹ್ಯವು ಕ್ಷತ್ರಿಯ ಹಾಗೂ ಬೇಡರ ಸಾಮರಸ್ಯಕ್ಕೆ ನಿದರ್ಶನವೆನ್ನಬಹುದು. ಕಾರಣಾಂತರಗಳಿಂದ ಕಾಡು ಸೇರಿದ ಕ್ಷತ್ರಿಯರು ಬೇಡರ ಆಶ್ರಯದಲ್ಲಿ ನೆಲೆಯನ್ನು ಕಂಡುಕೊಳ್ಳುತ್ತಿದ್ದರು. ಆಗ ಬೇಡರ ಬೆಂಬಲದೊಂದಿಗೆ ಬಲಗೊಳ್ಳುತ್ತಿದ್ದರು.ಹಾಗೆಯೇ ಬೇಡರು ಕೂಡ ರಾಜತಂತ್ರದ ಯುಕ್ತಿಗಳನ್ನು, ಕ್ಷತ್ರಿಯ ಬೇಡರು ಕೂಡ ರಾಜತಂತ್ರದ ಯುಕ್ತಿಗಳನ್ನು, ಕ್ಷತ್ರಿಯ ಧರ್ಮದ ಸೂಕ್ಷ್ಮಗಳನ್ನು ಅರಿತುಕೊಂಡರು. ಇದರಿಂದ ಇವರಿಗೆ ಆಡಳಿತದಲ್ಲಿ ಅಸ್ಥಿತ್ವವನ್ನು ಸ್ಥಾಪಿಸಿಕೊಳ್ಳಲು ಸುಲಭ ಸಾಧ್ಯವಾಯಿತು ಎನ್ನಬಹುದು. ಐತಿಹ್ಯವೊಂದರಂತೆ ಮ್ಯಾಸನಾಯಕರು ರಾಜರಾಗಿದ್ದರಂತೆ.ಮ್ಯಾಸರಾಜರೆಂದು ಗುರುತಿಸಿಕೊಳ್ಳುತ್ತಿದ್ದರು. ಪರಶುರಾಮನು ರಾಜರುಗಳನ್ನು ನಾಶಮಾಡುತ್ತಾ ಬಂದಾಗ ರಾಜರ ವೇಷವನ್ನು ಮರೆಸಿ ದನ ಕರುಗಳನ್ನು ಕುರಿಗಳನ್ನು ಮೇಯಿಸುತ್ತಾ ಹೊರಟರಂತೆ. ಮೇಯಿಸುವ ವೃತ್ತಿಯವರು ಮ್ಯಾಸರು ಆದರಂತೆ.

ಪರಶುರಾಮನ ಹೆದರಿಕಗೆ ರಾಜರಾಗಿದ್ದವರು ವೇಷ ಬದಲಿಸಿದಂತೆ, ಬೇಹುಗಾರರಾಗಿ ವೇಷ ಬದಲಿಸಿಕೊಂಡು ರಾಜರಿಗೆ ಗುಪ್ತ ಮಾಹಿತಿಗಳನ್ನು ನೀಡುತ್ತಿದ್ದ ವೇಷಬೇಡರು ಮ್ಯಾಸಬೇಡರಾದರೆಂದು ಕೆಲವರು ಹೇಳುತ್ತಾರೆ. ಊರು ಮಾರಮ್ಮನವರು (ದುರಗ-ಮುರುಗಿ) , ಮೊಂಡರು, ಕೊಂಡಮಾಮರು ಮೂಲತಃ ಬೇಹುಗಾರರಾಗಿದ್ದವರು ಬೇಡರು. ಇವರು ಕಾಲಕ್ರಮೇಣ ಆಯಾ ವೃತ್ತಿಗಳಿಗೆ ಅಂಟಿಕೊಂಡು ಬೇಡರಿಂದ ಪ್ರತ್ಯೇಕವಾದದ್ದನ್ನು ಗಮನಿಸಿಬಹುದು. ಆದರೂ ಈ ಕುರುಹುಗಳು ಮ್ಯಾಸಬೇಡರಲ್ಲಿ ಇಂದಿಗೂ ಉಳಿದಿರುವುದಕ್ಕೆ ಗಾವು ಸಿಗಿಯುವ ಪೋತ ರಾಜರ ಸಂಸ್ಕೃತಿ ಹಾಗೂ ರಥೋತ್ಸವಗಳಲ್ಲಿ ದೇವರನ್ನು ಹೊತ್ತ ಹೆಂಗಸರು ಅಥವಾ ಮುದ್ರೆ ಹಾಕಿಸಿಕೊಂಡ ಹೆಣ್ಣು ಮಕ್ಕಳು ಓಕುಳಿಯಾಡುವುದು ಇತ್ಯಾದಿ ಸಾಕ್ಷಿಗಳಾಗಿವೆ.

ಚಾಮರಾಜನಗರ ಜಿಲ್ಲೆಯಲ್ಲಿ ಕಂಡುಬರುವ ಕಂಪಣಬೇಡರೆಂಬ ಪ್ರಭೇದವು ಬೇಡರ ಕಣ್ಣಯ್ಯನ ವಂಶಸ್ಥರೆಂದು ಗುರುತಿಸಿಕೊಂಡಿದೆ. ಇವರು ತಮ್ಮ ಬಂಧು-ಬಳಗದ ಸಂಬಂಧಗಳನ್ನು ತಮಿಳುನಾಡಿನ, ಈರೋಡ್ ಜಿಲ್ಲೆಯ ನೆಲೆಗಳಿಂದ ಬೆರೆಸಿಕೊಳ್ಳುತ್ತಾ ಬಂದಿದ್ದಾರೆ. ಮಲೆಯ ಮಹಾದೇಶ್ವರನ ಪರಂಪರೆಯಲ್ಲಿ ಕಂಡುಬರುವ ಬೇಡಗಂಪಣ ಈ ಕಂಪಣಬೇಡರೇ ಇರಬಹುದು. ಐತಿಹ್ಯದಂತೆ, ಕರ್ನಾಟಕಕ್ಕೆ ಬಂದ ಮಲೆಯ ಮಹದೇಶ್ವರನು ದೇವರುಗಳನ್ನು ಸೆರೆಯಿಟ್ಟಿದ್ದ ಶ್ರವಣ ಎಂಬುವವನನ್ನು ನಾಶಪಡಿಸಿ ಜನರಲ್ಲಿ ತಾನೇ ದೇವರೆಂದು ಬಿಂಬಿಸಿಕೊಂಡ.ಅಲ್ಲದೆ ಬೇಡರ ಕಣ್ಣಪ್ಪನಿಂದ ಪೂಜಿಸಿಕೊಂಡ, ಅಲ್ಲಿನ ಬೇಡರ ಮನೆಯ ಹೆಣ್ಣನ್ನು ಕೊಂಗರು ಕೇಳಲಾಗಿ ಅವರು ಅಲ್ಲಿಂದ ಬೇರೆಡೆಗೆ ಕಣ್ಮರೆಯಾಗಲು ಪ್ರಯತ್ನಿಸಿದರು. ಆಗ ಹರಿಯುತ್ತಿದ್ದ ತುಂಗಭದ್ರ ನದಿಯನ್ನು ದಾಟುವುದು ಕಷ್ಟವಾಗಿ ಮಹದೇಶ್ವರನನ್ನು ಪ್ರಾರ್ಥಿಸಿದರು. ಆಗ ನದಿ ಇಬ್ಬಾಗವಾಗಿ ದಾರಿ ಬಿಟ್ಟಿತು. ನಂತರ ನೆಲೆಸಿದೆಡೆಯಲ್ಲಿ ಲಿಂಗಾಧಾರಣೆಗೆ ಒಳಗಾದರು. ಇಂತ ತಮ್ಮ ಕಂಪಣ ನಾಯಕ ಗಂಪಣನೆಂಬುವವನನ್ನು ಮೂಲ ಪುರುಷನೆಂದು ಹೇಳುತ್ತಾರೆ.

ಲಿಂಗಧಾರಣೆ ಹಾಗೂ ರಾಜ ಮಹಾರಾಜರು ಇವರಿಗೆ ತೆರಿಗೆ ರಹಿತ ಮಾನ್ಯಗಳನ್ನು ನೀಡಿದ್ದರೆಂದೂ, ಇಂಥವುಗಳಿಂದ ಇವರು ಮೂಲ ಬೇಡರಿಂದ ಪ್ರತ್ಯೇಕವಾಗ ಬೇಕಾಯಿತೆಂದೂ ಹೇಳುತ್ತಾರೆ. ಕಂಪ್ಲಿಯ ಅರಸ ಕುಮಾರ ರಾಮ ಹಾಗೂ ಆತನ ತಂದೆ ಕಂಪಿಲನ ಪ್ರಭಾವಗಳು ಮಹದೇಶ್ವರ ಬೆಟ್ಟದ ಸುತ್ತಲಿನ ಪರಿಸರದವರೆಗೂ ವ್ಯಾಪಿಸಿರಬಹುದು ಎಂಬ ಆಧಾರಗಳನ್ನು ಸಂಶೋಧಕರು ಸಮರ್ಥಿಸಿದ್ದಾರೆ. ವಲಸೆಗಾರ ಬೇಡರ ಗುಂಪುಗಳನ್ನು ಬೇಡಗಂಪಣ ಅಥವಾ ಬೇಡಕಂಪಣ ಎನ್ನುವುದುಂಟು. ಈ ನೆಲೆಯಲ್ಲಿ ಕಂಪಣಬೇಡರು ವಿಶಿಷ್ಟರು.

ಇತಿಹಾಸದ ಸ್ಮೃತಿಗಳಲ್ಲಿ ಬೇಡ ನಾಯಕರ ಐತಿಹ್ಯಗಳು

ಚಿತ್ರದುರ್ಗದ ಪಾಳೆಯಗಾರರು ಎಂದ ತಕ್ಷಣ ನೆನಪಿಗೆ ಬರುವುದು ಒನಕೆ ಓಬವ್ವನ ಐತಿಹ್ಯ. ಹೈದರಾಲಿಯ ಸೈನ್ಯವು ದುರ್ಗಕ್ಕೆ ಮುತ್ತಿಗೆ ಹಾಕಿ ಕಳ್ಳಕಿಂಡಿಯಿಂದ ಕೋಟೆಯೊಳಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಓಬವ್ವ ಕೋಟೆಯನ್ನು ರಕ್ಷಿಸಿ ದಳೆಂಬುದು ಹಿರಿಮೆ. ಇದಕ್ಕೆ ಪೂರಕವಾಗಿ ಬೆಳೆಯುವ ಪ್ರಸಂಗದಂತೆ ಓಬವ್ವಳು ಕೋಟೆಯನ್ನು ಕಾಯುವವನ ಹೆಂಡತಿ. ಮದಕರಿ ನಾಯಕನ ಮೇಲೆ ಶತ್ರು ಸೈನ್ಯ ದಂಡೆತ್ತಿ ಬಂದಾಗ ಕೋಟೆಯ ಕಾವಲುಗಾರ ಊಟಕ್ಕೆಂದು ಮನೆಗೆ ಹೋಗಿದ್ದ. ಅದೇ ಸಮಯದಲ್ಲಿ ಮನೆಯಲ್ಲಿ ಕುಡಿಯಲು ನೀರು ಇರಲಿಲ್ಲ. ಗಂಡನಿಗೆ ಊಟ ನೀಡಿದ ಓಬವ್ವ ಕೊಡವನ್ನು ಹೊತ್ತು ನೀರಿಗೆಂದು ಕೋಟೆಯ ಕಡೆಗೆ ಹೋಗುತ್ತಾಳೆ. ಅಲ್ಲಿ ರಹಸ್ಯವಾಗಿ ಶತ್ರು ಸೈನ್ಯ ಮುತ್ತಿಗೆ ಹಾಕಿರುವುದನ್ನು ಗಮನಿಸಿದಳು. ತಕ್ಷಣವೇ ಮನೆಗೆ ಹಿಂದಿರುಗಿ ಮನೆಯಿಂದ ಒನಕೆಯನ್ನು ಒಯ್ದಳು. ರಹಸ್ಯ ಕಿಂಡಿಯ ಬಳಿ ನಿಂತು ಒಳ ನುಸುಳಿ ಬರುತ್ತಿದ್ದ ಶತ್ರುಗಳನ್ನು ಒನಕೆಯಿಂದ ಚಚ್ಚಿ ಚಚ್ಚಿ ಕೊಲ್ಲ ತೊಡಗಿದಳು. ಕೊನೆಗೆ ಒಬ್ಬ ಶತ್ರುವಿನ ಮೋಸದಿಂದ ಸಾವನ್ನಪ್ಪಿದಳು.

ಈ ಓಬವ್ವಳನ್ನು ಬೇಡನಾಯಕರು ತಮ್ಮ ಸಮುದಾಯದವಳೆಂದು ನಂಬುತ್ತಾರೆ. ಕೆಲವು ಸಂಶೋಧಕರು ಆಕೆ ಕಟ್ಟೆಲರೆಂದು ಹೇಳುತ್ತಾರೆ. ಏನೇ ಆದರೂ ಈ ಐತಿಹ್ಯ ದಂತೆ ಜನಪದರು ಓಬವ್ವನಿಗೆ ಕೊಡುವ ಮಹತ್ವ ಯಾವ ರಾಣಿಗೂ ಲಭಿಸಿಲ್ಲವೆಂದು ಹೇಳಬಹುದು. ಅದರೆ ಈಕೆ ಸಾಮಾನ್ಯಳು ವೀರತ್ವವನ್ನು ಮೆರೆದಳೆಂಬುದೇ ಈಕೆಯ ಹೆಗ್ಗಳಿಕೆಯ ಹೆಗ್ಗುರುತು ಆಗಿದೆ. ಆದ್ದರಿಂದ ಮದಕರಿ ನಾಯಕನಿಗಿಂತ ಮಿಗಿಲಾದ ಮಹತ್ವ ಒನಕೆ ಓಬವ್ವಳಿಗೆ ಲಭಿಸಿದೆ.

ಹೀಗೆ ಬೇಡ-ನಾಯಕರು ತಮ್ಮ ಸಮುದಾಯದ ಆಡಳಿತಾತ್ಮಕ ನೆನಪುಗಳನ್ನು ಲಾವಣಿ-ಐತಿಹ್ಯ ಕಥೆ-ಗೀತೆಗಳಂಥ ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಉಳಿಸಿಕೊಂಡಿದ್ದಾರೆ. ತರೀಕೆರೆ ಪಾಳೆಯಗಾರರು, ಚಿತ್ರದುರ್ಗದ ಪಾಳೆಯಗಾರರು, ಗುಮ್ಮ ನಾಯಕನ ಹಳ್ಳಿಯ ಪಾಳೆಯಗಾರರು, ಸುರಪುರದ ಪಾಳೆಯಗಾರರು ಹೀಗೆ ಬೇಡ ಪಾಳೆಯಗಾರರ ಬಹುಪಾಲು ಇತಿಹಾಸವು ಮೌಖಿಕ ಪರಂಪರೆಯಲ್ಲಿ ಜನಜನಿತವಾಗಿದೆ.

ಸರ್ಜಪ್ಪ ನಾಯಕ

ತರೀಕೆರೆಯ ಪಾಳೆಯಗಾರನಾದ ಸರ್ಜಪ್ಪ ನಾಯಕನು ಬ್ರಿಟೀಷರ ಕುಟಿಲ ತಂತ್ರಕ್ಕೆ ಬಲಿಯಾಗಿ ಅವಸಾನ ಹೊಂದಿದ ಸಂಗತಿ ಐತಿಹಾಸಿಕವಾದದ್ದು. ಆದರೆ ಒಟ್ಟಾರೆ ಬೇಡ ಸಮುದಾಯ ಮೌಖಿಕ ಚರಿತ್ರೆಯನ್ನು ಕಟ್ಟಿಕೊಡುವ ಸರ್ಜಪ್ಪನಾಯಕನ ಐತಿಹ್ಯವು ಲಾವಣಿಗಳಲ್ಲಿ ಮೂಡಿಬಂದಿದೆ. ಇದರ ಪ್ರಕಾರ ಪರಾಕ್ರಮಿಯಾದ ಸರ್ಜಪ್ಪ ನಾಯಕನು ರಸಿಕತೆಯ ದ್ಯೋತಕವಾಗಿ ಕುರುಬರ ನಿಂಗಮ್ಮಳೆಂಬ ಹೆಣ್ಣಿನ ಸಂಬಂಧ ಹೊಂದಿರುತ್ತಾನೆ. ಆಕೆಯನ್ನು ಬಹಳವಾಗಿ ಪ್ರೀತಿಸುತ್ತಿದ್ದ ಅಲ್ಲದೆ ಆಕೆಯೊಂದಿಗೆ ಜೀವನವನ್ನು ಕಳೆಯುವ ಕ್ಷಣಗಳಲ್ಲಿ ತನ್ನ ಆಡಳಿತದ ವಿಷಯಗಳನ್ನೆಲ್ಲ ಹೇಳುತ್ತಿದ್ದ. ಹೀಗೆ ಆತನ ನಂಬಿಕೆಗೆ ಪಾತ್ರಳಾಗಿದ್ದ ನಿಂಗವ್ವನನ್ನು ಬ್ರಿಟೀಷರು ಆಮಿಷವೊಡ್ಡಿ ಮರುಳುಗೊಳಿಸುತ್ತಾರೆ.

ಬ್ರಿಟೀಷರ ಮೋಸದ ಜಾಲಕ್ಕೆ ನಿಂಗವ್ವನ ಸಹಕಾರ ದೊರೆಯುತ್ತದೆ. ಈ ರಹಸ್ಯವನ್ನು ಅರಿಯದ ಸರ್ಜಪ್ಪನಾಯಕನು ನಿಂಗವ್ವನ ಮನೆಗೆ ಹೋದಾಗ ಕೊಲೆಯಾಗುತ್ತಾನೆ. ಹೀಗೆ ಸರ್ಜಪ್ಪನಾಯಕನು ತನ್ನ ಪ್ರೇಯಸಿಯಿಂದ ದುರಂತದ ಸಾವನ್ನಪ್ಪಿದ ದುರ್ಘಟನೆ ಬೇಡರ ನೆನಪುಗಳ ಪರಂಪರೆಯಲ್ಲಿ ಉಳಿದುಬಂದಿದೆ.

ಸಿಂಧೂರ ಲಕ್ಷ್ಮಣನನ್ನು ಬ್ರಿಟೀಷರು ಸೆರೆಹಿಡಿದ ನೆನಪು ಜನಪದ ಕಲೆಗಳಲ್ಲಿ ಲಾವಣಿಗಳಲ್ಲಿ ಐತಿಹ್ಯಗಳಾಗಿ ಅರಳಿ ಜೀವಂತಿಕೆಯನ್ನು ಪಡೆದಿದೆ.

ಬೇಡರ ಕಣ್ಣಪ್ಪನ ಮೂಲ ಐತಿಹ್ಯದಂತೆ

ಬೇಟೆಗಾರನಾಗಿದ್ದ ಈತನು ಶಿವನ ಮುಗ್ಧ ಭಕ್ತ. ಒಮ್ಮೆ ಬೇಟೆ ದೊರೆಯದಿದ್ದಾಗ ತನಗೆ ದೊರೆತ ಬೇಟೆಯಲ್ಲಿ ಅರ್ಧಪಾಲನ್ನು ಶಿವನಿಗೆ ಅರ್ಪಿಸುವುದಾಗಿ ಶಿವನಲ್ಲಿ ಹರಕೆ ಮಾಡಿಕೊಂಡ. ಅಂತೆಯೇ ದೊರೆತ ಬೇಟೆಯಲ್ಲಿ ಶಿವನಿಗೆ ಅರ್ಧಭಾಗವನ್ನು ನೈವೇದ್ಯ ಮಾಡಿದ. ದೇವಾಲಯದ ಅರ್ಚಕ ವರ್ಗದಿಂದ ಮಾಂಸದ ಎಡೆಗೆ ಪ್ರತಿರೋಧವೇಳುತ್ತದೆ; ಮೈಲಿಗೆಯಾಯಿತೆಂದು ಅವರೆಲ್ಲ ಸಿಡಿದೇಳುತ್ತಾರೆ. ಆದರೆ ಶಿವನಿಗೆ ಈ ಬೇಟೆಗಾರನ ಭಕ್ತಿಯ ಬಗ್ಗೆ ಸಂತೋಷವಾಗುತ್ತದೆ. ಆನಂದ ಭಾಷ್ಪ ಕಣ್ಣುಗಳಿಂದ ಹರಿಯುತ್ತದೆ. ಇದರಿಂದ ಗಾಬರಿಗೊಂಡ ಭಕ್ತನು ದೇವರಿಗೆ ಕಣ್ಣು ನೋಯುತ್ತಿದೆಯೆಂದು ತಿಳಿದು ತನ್ನ ಕಣ್ಣುಗಳನ್ನು ತೆಗೆದು ಶಿವಲಿಂಗಕ್ಕೆ ಕಸಿ ಮಾಡುತ್ತಾನೆ. ಇದರಿಂದ ಈತನಿಗೆ ಕಣ್ಣಪ್ಪನೆಂಬ ಹೆಸರು ಬಂದಿತು. ಬಹುಷಃ ಈತನೇ ಮೊದಲ ನೇತ್ರದಾನಿ ಹಾಗೂ ಒಬ್ಬರ ಕಣ್ಣುಗಳನ್ನು ಮತ್ತೊಬ್ಬರಿಗೆ ಕಸಿ ಮಾಡಬಹುದೆಂಬ ಪ್ರಯೋಗದಲ್ಲಿ ಯಶಸ್ವಿಯಾದವನು.

ಕಣ್ಣಪ್ಪನ ಈ ಐತಿಹ್ಯ ಪ್ರಸಂಗವು ಶೈವ ಪಂಥದ ಬೇಡರ ಸಾಂಸ್ಕೃತಿಕ ವಿಕಾಸದಲ್ಲಿ ಎದುರಾದ ಸಂಘರ್ಷವನ್ನು ಹೇಳುತ್ತದೆ. ಅದೆಂದರೆ ಕಣ್ಣಪ್ಪನು ಶಿವನಿಗೆಂದು ದೇವಾಲಯದಲ್ಲಿ ಮಾಂಸದ ನೈವೇದ್ಯ ಮಾಡಿದಾಗ ಅರ್ಚಕನು ಅದನ್ನು ವಿರೋಧಿಸು ವುದಾಗಿದೆ. ಆದರೆ ಅರ್ಚಕನ ಮಗನು ಅದನ್ನು ಅನುಮೋದಿಸುತ್ತಾನೆಂಬ ಅಂಶವು ಮುಖ್ಯವಾಗುತ್ತದೆ. ಶಿವನು ಅರ್ಚಕನ ಶಿಷ್ಟಚಾರದ ಅರ್ಚನೆಗೆ ಒಲಿಯದೆ ಕಣ್ಣಪ್ಪನ ಮುಗ್ಧಭಕ್ತಿಗೆ ಒಲಿದನೆಂಬ ಸಂಗತಿಯು ಸ್ವಾರಸ್ಯವನ್ನು ನೀಡಿದೆ. ಐತಿಹ್ಯವು ಮುಂದುವರೆದಂತೆಲ್ಲ ಸಂಸ್ಕೃತಿಯ ಬೆಳವಣಿಗೆಯನ್ನು ಬಿಂಬಿಸುವ ಸುಳಿವುಗಳನ್ನು ಒಳಗೊಂಡಿರುವುದು ಸ್ಪಷ್ಟವಾಗಿದೆ. ಕಣ್ಣಪ್ಪನ ಭಕ್ತಿಗೆ ಪ್ರತ್ಯಕ್ಷವಾದ ಶಿವನು ವರಗಳನ್ನು ಬೇಡುವಂತೆ ಸೂಚಿಸುತ್ತಾನೆ. ಆದರೆ ಕಣ್ಣಪ್ಪನು ನಿನ್ನ ದರ್ಶನ ಭಾಗ್ಯದ ಹೊರತಾಗಿ ತನಗೇನು ಬೇಡವೆಂದು ತಿಳಿಸಿದನು. ಶಿವನು ತಾನು ಒಮ್ಮೆ ಪ್ರತ್ಯಕ್ಷನಾದ ಮೇಲೆ ವರ ನೀಡದೆ ಅದೃಶ್ಯವಾಗುವಂತಿಲ್ಲವಾದ್ದರಿಂದ ಏನಾದರೂ ಬೇಡಿಕೋ ನೀಡುತ್ತೇನೆಂದು ಸೂಚಿಸಿದರೂ, ಈ ಭಕ್ತನು ನಿರಾಕರಿಸಿದನಂತೆ. ಕೊನೆಗೆ ಶಿವನೇ ವಿಧವಿಧದ ವರಗಳನ್ನು ವಿವರಿಸಿ ನೀಡಲೇ ಎಂದು ಕೇಳತೊಡಗಿದ ಎಲ್ಲವನ್ನೂ ಬೇಡ ಬೇಡವೆಂದು ಕಣ್ಣಪ್ಪನು ಹೇಳಿದ್ದರಿಂದ ಬೇಡ ಎಂಬ ಜಾತಿ ಸೃಷ್ಟಿಯಾಯಿತೆಂದು ಹೇಳುತ್ತಾರೆ. ಇದು ಬೇಡರ ಸ್ವಾಭಿಮಾನದ ಮೂಲವೆಂದು ನಂಬುತ್ತಾರೆ. ಶಿವನಿಗೆ ಅಸಮಾಧಾನವಾಗಲೆಂದು ಕಣ್ಣಪ್ಪನು ಅಂತಿಮವಾಗಿ ಒಂದು ಕೋರಿಕೆಯನ್ನು ಮಾಡಿಕೊಂಡನಂತೆ. ಸದಾಕಾಲವಾಗಿ ಶಿವನ ಪಾದಗಳು ತನ್ನ ತಲೆಯ ಮೇಲೆ ಇರಬೇಕೆಂದು ಕೇಳಿಕೊಳ್ಳಲು ಪ್ರಯತ್ನಿಸಿದ ಆದರೆ ಭಕ್ತಿ ಪರವಶತೆಯಲ್ಲಿ ಆಡಬೇಕೆಂದಿದ್ದ ಮಾತುಗಳು ತಿರುಗು-ಮುರುಗು ಆಗಿ ಸದಾ ನನ್ನ ಪಾದಗಳು ನಿನ್ನ ತಲೆಯ ಮೇಲಿರಲಿ ಎಂದು ಬೇಡಿದನಂತೆ. ಇದರ ಫಲವಾಗಿಯೇ ತುಂಬೆಯ ಗಿಡವನ್ನು ಸೃಷ್ಟಿಸಿದನೆಂದು ಹೇಳುತ್ತಾರೆ. ತುಂಬೆಯ ಚೆಂಡು ಶಿವನ ತಲೆಯೆಂದು ಚಂಡಿನಲ್ಲಿನ ಬಿಳಿಯ ಹೂಗಳು ಕಣ್ಣಪ್ಪನ ಪಾದಗಳೆಂದು ಸಂಕೇತಿಸಿ ಪೂಜಿಸುತ್ತಾರೆ. ಈ ಕಾರಣ ತುಂಬೆಯ ಗಿಡ ಹಾಗೂ ಹೂವು ಪೂಜೆಯಲ್ಲಿ ಪ್ರಾಶಸ್ತ್ಯ ಪಡೆದಿವೆ.

ಶೈವ ಧರ್ಮದ ಪ್ರಭಾವವು ಈ ಸಮುದಾಯದ ಮೇಲೆ ಬೀರಿದ ಪರಿಣಾಮಗಳನ್ನು ಗಮನಿಸಬೇಕಾದ ಅನಿರ್ವಾತೆ ಇದೆ.