ಮನುಷ್ಯ ಭೂಮಿಯ ಮೇಲೆ ಉಗಮವಾಗಿ ವಿಕಾಸದ ಹಾದಿಯಲ್ಲಿ ಪ್ರಜ್ಞಾವಂತ ನಾದಂತೆಲ್ಲ ತನ್ನ ಬದುಕಿನ ಬಗೆಗೆ ಆಲೋಚನಾ ಪರನಾಗಿ ರೂಢಿಸಿಕೊಂಡ ಅಂಶಗಳೆಲ್ಲವು ಜನಪದ ಸಂಸ್ಕೃತಿ ಎಂದೆನಿಸಿಕೊಳ್ಳುತ್ತವೆ. ಪ್ರಾಚೀನ ಕಾಲದ ಸಂಪ್ರದಾಯಬದ್ಧ ಸಂಸ್ಕೃತಿಯ ಅಮೂಲ್ಯ ಅಂಶಗಳನ್ನು ಅರ್ಥಪೂರ್ಣವಾಗಿ ಗರ್ಭಿಕರಿಸಿಕೊಂಡಿರುವಂತದ್ದು ಜನಪದ.

ಜನರಿಗೆ ಸಂಬಂಧಪಟ್ಟ ವಸ್ತು ವಿಷಯಗಳೆಲ್ಲವೂ ಜಾನಪದವಾಗಿ ಪರಿಣಮಿಸುತ್ತವೆ. ಮೊದಲಿಗೆ ಇದನ್ನು ಪಾಮರವೆಂದು ಉಪೇಕ್ಷಿಸಲಾಗಿದ್ದು, ಇಂದು ಜಗತ್ತಿನಾದ್ಯಂತ ಸರ್ವಶ್ರೇಷ್ಠ ಎಂದು ಭಾವಿಸಲಾಗಿದೆ. ಆದಿ ಮಾನವನಿಂದ ರೂಪಿತವಾಗಿ ತಲೆಮಾರಿನಿಂದ ತಲೆಮಾರಿಗೆ ಅನುಕರಣಾತ್ಮಕವಾಗಿ ಸಾಗಿ ಬಂದು ನೆನಪಿನಲ್ಲಿ ಉಳಿಯುತ್ತ ತನ್ನ ಪರಂಪರೆಯನ್ನು ಉಳಿಸಿಕೊಂಡಿದೆ.

ಜಾನಪದದ ಅರ್ಥಕ್ಕೆ

ಜನಪದ ಇದು ಇಂಗ್ಲೀಷಿನ Folk ಪದದ ಪ್ರತಿರೂಪವಾಗಿ ತೋರುತ್ತದೆ. Folkನಲ್ಲಿರುವ ಮೂಲಾರ್ಥ ನಮ್ಮಲ್ಲಿ ಬಳಕೆಯಲ್ಲಿರುವ ‘‘ಜನಪದ’’ದಲ್ಲಿಯೂ ಕಂಡುಬರುತ್ತದೆ. ಇಂಗ್ಲೀಷನಲ್ಲಿಯ Folk ಒಂದು ಜನಾಂಗ. ಸಮಾಜದ ಕೆಳಗಿನ ಸ್ತರ, ಸಂಕೀರ್ಣ ಸ್ವಭಾವದ ನಾಗರೀಕ ಸಮಾಜದಲ್ಲಿ ಹಳೆಯ ಗುಂಪು, ಮೂಲ ಸಂಸ್ಕೃತಿಯನ್ನು ಒಯ್ಯುವ ಸಾಮಾಜಿಕ ವರ್ಗ, ಸಂಪ್ರದಾಯದೊಂದಿಗೆ ಹೆಣೆದ ಸಮಾಜ ಮುಂತಾದ ಅರ್ಥಗಳನ್ನು ಒಳಗೊಂಡು ಹಳೆಯ ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿರುವ ಸಾಮಾನ್ಯರ ಸಮೂಹ. ನಗರ ಜೀವನದಲ್ಲಿನ ಸಾಂಸ್ಕೃತಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಹೊಂದಿರುವ ಸಾಮಾನ್ಯರು ಎಂಬ ಅರ್ಥವನ್ನು ನೀಡುತ್ತದೆ. ಇಂತಹ Folkಗೆ ಸಂಬಂಧಿಸಿದ ಪರಂಪರಾನುಗತ ವಸ್ತು ವಿಷಯಗಳನ್ನೇ Folklore ಎನ್ನಲಾಗಿದೆ. Folk ಎಂದರೆ ಜನಪದ ಎಂದೇ ಆರ್ಥ. ಜನರು ರೂಢಿಸಿಕೊಂಡಿರುವ ಅಥವಾ ಅವರಿಗೆ ಸಂಬಂಧಿಸಿದ ಅವರ ಸ್ಥಳ, ದೇಶ, ಪುರಾಣ, ಭಾಷೆ, ಅವರ ಜಾತಿ-ಪಂಗಡ,ಆಚಾರ-ವಿಚಾರ, ಕಲೆ-ಸಾಹಿತ್ಯ, ಅವರ ಐತಿಹ್ಯ, ಕತೆ, ಗೀತೆ, ಗಾದೆ, ಒಗಟು, ಲಾವಣಿ, ಸಂಪ್ರದಾಯಗಳು, ನಂಬಿಕೆಗಳು, ಹಬ್ಬಗಳು ಆಚರಣೆಗಳು, ನಿಷಿದ್ಧಗಳು, ವೈದ್ಯ,ವ್ಯವಸಾಯ ಕ್ರಮ, ಅಡಿಗೆ, ಬೇಟೆಯಾಡುವ ವಿಧಾನ ಮಾಟ-ಮಂತ್ರ ಮುಂತಾದ ಪರಿಕಲ್ಪನೆಗಳೆಲ್ಲವೂ ವೈವಿಧ್ಯತೆಯನ್ನು ಒಳಗೊಂಡಿರುವಂತಹವು. ಇವುಗಳಲ್ಲಿ ಒಂದೊಂದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದು ಜನಪದವಾಗುತ್ತದೆ. ‘‘ಇವುಗಳ ಸಮಗ್ರ ಸಂಸ್ಕೃತಿಯ ತಾತ್ವಿಕತೆಯನ್ನು ಕುರಿತು ಹೇಳುವುದು ಜಾನಪದವಾಗುತ್ತದೆ.’’ ಈ ರೀತಿ ವಿಸ್ತಾರವಾಗಿ ಬೆಳವಣಿಗೆಯಾದ ಸಮಗ್ರ ಸಂಸ್ಕೃತಿಯ ಒಟ್ಟು ಮೊತ್ತವೇ ಅದರ ವ್ಯಾಪ್ತಿಯಾಗುತ್ತದೆ.

ಜಾನಪದದ ವ್ಯಾಖ್ಯೆಗಳು

೧. ಬಿ.ಎ.ಬಾಟ್ಕಿನ್ ಅವರ ಪ್ರಕಾರ : ‘‘ಶುದ್ಧ ಮೌಖಿಕ ಸಂಸ್ಕೃತಿಯಲ್ಲಿ ಪ್ರತಿಯೊಂದು ಜಾನಪದವೇ’’ ಎಂದಿದ್ದಾರೆ.

೨. ಮೇರಿಯಸ್ ಬಾರ್ಬೆ : ‘‘ಗ್ರಂಥಸ್ಥ ಮೂಲಕ್ಕೆ, ಮುದ್ರಣಕ್ಕೆ, ಶಾಲಾ ಉಪಾಧ್ಯಾಯರಿಗೆ ಸಂಬಂಧಪಡದೇ, ತಲೆಮಾರಿನಿಂದ ತಲೆಮಾರಿಗೆ, ಹಿರಿಯರಿಂದ ಕಿರಿಯರಿಗೆ ನಿದರ್ಶನಗಳ ಮೂಲಕ ಅಥವಾ ಮಾತಿನ ಮೂಲಕ ಸಾಗಿ ಬರುವ ಹಿಂದಿನ ಜ್ಞಾನ, ಅನುಭವ, ಜಾಣ್ಮೆ, ಕೌಶಲ, ಹವ್ಯಾಸ ಹಾಗೂ ಆಚರಣೆಗಳು ಜಾನಪದ’’ ಎಂದಿದ್ದಾರೆ.

೩. ಲಾವಣಿ ವಿದ್ವಾಂಸರಾದ ಮ್ಯಾಕ್ ಎಡ್ವರ್ಡ್ ಲೀಚ್ : ‘‘ಸಂಗ್ರಹಗೊಂಡ ಅನುಭವ ಭಂಡಾರ’’ ಎಂದಿದ್ದಾರೆ.

ಕರ್ನಾಟಕದಲ್ಲಿ ಜಾನಪದ ನಡೆದು ಬಂದ ದಾರಿ

ಕರ್ನಾಟಕದ ಮಟ್ಟಿಗೆ ಜಾನಪದ ಅಧ್ಯಯನ ಆರಂಭ ಪಾಶ್ಚಾತ್ಯರಿಂದಲೇ ಆಯಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಕಂಡುಬರುವ ಪಾಶ್ಚಾತ್ಯ ವಿದ್ವಾಂಸರು ಹಾಗೂ ಮಿಷನರಿಗಳು ಜಾನಪದ ಸಂಗ್ರಹ ಕಾರ್ಯದಲ್ಲಿ ತೊಡಗಿದರು. ಅಂತಹ ಪ್ರಮುಖರೆಂದರೆ, ಜಾನ್ ಲೆಡೆನ್, ಅಬ್ಬೆದುಬಾಯ್, ಚಾರ್ಲ್ಸ್ ಇ ಗೋವರ್, ಮೇರಿ ಫ್ರೀರೆ, ಪ್ಲೀಟ್, ಕಿಟೆಲ್ ಮುಂತಾದವರು.

ಜಾನ್ ಲೇಡನ್ ೧೮೦೩ರಲ್ಲಿ ಶ್ರೀರಂಗಪಟ್ಟಣದ ಪತನದ ನಂತರ ಆ ಸಂಬಂಧವಾದ ಲಾವಣಿಯೊಂದನ್ನು ಸಂಗ್ರಹಿಸಿ ಇಂಗ್ಲೀಷಿಗೆ ಅನುವಾದಿಸಿದರು. ಹಾಗೆಯೇ ಚಾರ್ಲ್ಸ್ ಇ ಗೋವರ್‌ರವರು ತಮ್ಮ ‘The Folk Song’s of Southern India’ ಕೃತಿಯಲ್ಲಿ ದಕ್ಷಿಣ ಭಾರತದ ಪ್ರಮುಖ ಭಾಷೆಗಳ ಶಿಷ್ಟ ಮೂಲದ ಗೀತೆಗಳನ್ನು ಸಂಗ್ರಹಿಸಿರು ವುದುಂಟು. J.F.ಪ್ಲೀಟರ್ ಅವರು ೧೮೮೫ ರಿಂದ ೧೮೯೦ರವರೆಗೆ ಉತ್ತರ ಕರ್ನಾಟಕದಲ್ಲಿನ ಎಂಟು ಲಾವಣಿಗಳನ್ನು ಸಂಗ್ರಹಿಸಿ ಇಂಡಿಯನ್ ಆ್ಯಂಟಿಕ್ಟಿರಿಯಲ್ಲಿ ಪ್ರಕಟಿಸಿದ್ದಾರೆ. ಆರ್.ಎಫ್.ಕಿಟೆಲ್ ಅವರು ೧೮೯೪ಕ್ಕೂ ಮುಂಚೆಯೇ ಸಂಗ್ರಹಿಸಿದ ಗಾದೆಗಳ ಕೋಶದಲ್ಲಿ ೩೦೦೦ ಸಾವಿರಕ್ಕೂ ಹೆಚ್ಚು ಕನ್ನಡ ಗಾದೆಗಳು ಸಂಗ್ರಹವಾಗಿವೆ. ಹೀಗೆ ಮೊದಲ ಬಾರಿಗೆ ಕರ್ನಾಟಕ ಜಾನಪದದ ಕಡೆ ಗಮನಹರಿಸಿ ಸಂಗ್ರಹಿಸಿದ ಕೀರ್ತಿ ಪಾಶ್ಚಾತ್ಯರದು ಎಂದು ಹೇಳಬಹುದು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಜಾನಪದವು ಯಾವ ರೀತಿಯಲ್ಲಿ ಹೇಗೆ ಸಂಗ್ರಹವಾಯಿತು ಎಂಬುದನ್ನು ಗ್ರಹಿಸಿದಾಗ ಕನ್ನಡ ಜಾನಪದ ವಿದ್ವಾಂಸರಿಂದ ನವೋದಯದ ಜೊತೆ ಜೊತೆಯಲ್ಲಿಯೇ ಕನ್ನಡದ ದೇಶಿಯ ಸಂಸ್ಕೃತಿಯಾದ ಜಾನಪದದ ಅಧ್ಯಯನವು ಆರಂಭವಾಗಿರುವುದು ಕಂಡುಬರುತ್ತದೆ.

ಕರ್ನಾಟಕದ ಜಾನಪದ ಅಧ್ಯಯನ ಸಾರ್ಥಕವಾದ ರೀತಿಯಲ್ಲಿ ಹೆಜ್ಜೆ ಹಾಕಿದ್ದು ೧೯೨೪ರಲ್ಲಿ. ನಡಕೇರಿ ಚಿನ್ನಪ್ಪನವರು ಕೊಡವ ಸಂಸ್ಕೃತಿಗೆ ಸಂಬಂಧಿಸಿದ ‘‘ಪಟ್ಟೋಲೆ ಪಳಮೆ’’ ಎಂಬ ಕೃತಿಯನ್ನು ಪ್ರಕಟಿಸಿದರು. ಕನ್ನಡ ಜಾನಪದದ ಹೊಸ ಶಕೆಯನ್ನು ಆರಂಭಿಸಿದರು. ಸ್ವಾತಂತ್ರ್ಯಪೂರ್ವದ ಮತ್ತೋರ್ವ ವ್ಯಕ್ತಿಯಾದ ಅರ್ಚಕ ಬಿ.ರಂಗಸ್ವಾಮಿ ಯವರು ೧೯೩೩ರಲ್ಲಿ ಹುಟ್ಟಿದ ಹಳ್ಳಿ ‘‘ಹಳ್ಳಿಯ ಹಾಡು’’ ಗ್ರಂಥಗಳನ್ನು ಪ್ರಕಟಿಸಿದರು. ಹುಟ್ಟಿದ ಹಳ್ಳಿಯ ಕೃತಿಯನ್ನು ತಿ.ನಂ.ಶ್ರೀಯವರು ಹಳ್ಳಿಯ ಬದುಕಿನ ವಿಶ್ವಕೋಶವೆಂದಿದ್ದಾರೆ. ೧೯೨೫ರಲ್ಲಿ ಪ್ರಕಟಗೊಂಡ ಮಾಸ್ತಿಯವರ ‘‘ಕನ್ನಡ ಲಾವಣಿ ಸಾಂಗತ್ಯ’’ ಕೂಡ ಮಹತ್ವಪೂರ್ಣ ಗ್ರಂಥವಾಗಿ ಕಂಡುಬಂದಿತು. ೧೯೨೮ರಲ್ಲಿ ಪ್ರಹ್ಲಾದ ನರೆಗಲ್ಲ ಎಂಬುವರು ಕನ್ನಡ ತ್ರಿಪದಿಗಳನ್ನು ಸಂಗ್ರಹಿಸಿ ‘‘ಜಯ ಕರ್ನಾಟಕ’’ ಪತ್ರಿಕೆಯಲ್ಲಿ ಪ್ರಕಟಿಸಿದರು. ೧೯೩೦ರಲ್ಲಿ ಬೆಟಗೇರಿ ಕೃಷ್ಣಶರ್ಮರ ‘‘ಹಳ್ಳಿಯ ಹಾಡುಗಳು’’ ಜನಪದ ಗೀತೆಯಾಧಾರಿತವಾದುದಾಗಿದೆ.

ಜನಪದ ಸಾಹಿತ್ಯದ ಪ್ರಚಾರದ ದೃಷ್ಠಿಯಿಂದ ಹಲಸಂಗಿ ಗೆಳೆಯರ ಗುಂಪಿನ ಮಧುರ ಚೆನ್ನ, ಕಾಪಸೆ ರೇವಪ್ಪ ಮತ್ತು ಸಿಂಪಿಲಿಂಗಣ್ಣನವರು ಕೂಡಿ ೧೯೩೧ರಲ್ಲಿ ಸಂಪಾದಿಸಿ ಹೊರತಂದ ‘‘ಗರತಿಯ ಹಾಡು’’ ಅದ್ವಿತೀಯ ಕೃತಿಯಾಗಿ ಪರಿಣಮಿಸಿದೆ. ಸಿಂಪಿಲಿಂಗಣ್ಣ ಮತ್ತು ಧೂಲಾ ಸಾಹೇಬರ ‘‘ಜೀವನ ಸಂಗೀತ’’ ೧೯೩೪, ಕಾಪಸೆ ರೇವಪ್ಪನವರ ‘‘ಮಲ್ಲಿಗೆ ದಂಡೆ’’ ವಿಠೋಲ ವೆಂಕಟನಾಯಕ ತೊರ್ಕೆಯವರ ‘‘ಹಳ್ಳಿಯ ಹಾಡುಗಳು’’ ಬಿ.ಎಸ್ .ರಂಗಸ್ವಾಮಿಯವರ ‘ಹಳ್ಳಿಯ ಪದಗಳು’ ೧೯೪೦, ಗೊರೂರು ರಾಮಸ್ವಾಮಿ ಅಯ್ಯಂಗಾರರು ಸಂಗ್ರಹಿಸಿದ ‘ಹಳ್ಳಿಯ ಹಾಡುಗಳು’ ೧೯೩೮, ಹಳ್ಳಿಯ ಬಾಳು ೧೯೪೩ ೧೯೪೪ರಲ್ಲಿ ರಬಕವಿಯಲ್ಲಿ ಜರುಗಿದ ‘‘ಜನಪದ ಸಾಹಿತ್ಯ ಗೋಷ್ಠಿ’’ ೧೯೪೭ರಲ್ಲಿ ಎಲ್.ಗುಂಡಪ್ಪನವರು ಸಂಪಾದಿಸಿದ ‘‘ನಾಡಪದಗಳು’’ ಇನ್ನೂ ಹಲವಾರು ಕೃತಿಗಳು ಎಂದು ಹೇಳಬಹುದು. ಸ್ವಾತಂತ್ರ್ಯಾನಂತರದ ಕಾಲದಲ್ಲಿ ಕಾಳಿಂಗರಾವ್, ಕೆ.ಆರ್.ಲಿಂಗಪ್ಪ, ಕರೀಂಖಾನ್ ಮುಂತಾದವರು ಜನಪದ ಗೀತೆಗಳನ್ನು ಹಾಡಿ ನಾಡಿನಾದ್ಯಂತ ಅವುಗಳಿಗೆ ಜನಪ್ರಿಯತೆ ದೊರಕಿಸಿಕೊಟ್ಟರು.

ಎಪ್ಪತ್ತನೆಯ ದಶಕದ ಉತ್ತರಾರ್ದದಿಂದೀಚೆಗೆ ಜಾನಪದವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿರುವುದು ಕಂಡುಬರುತ್ತದೆ. ಡಾ.ಎಂ.ಎಸ್.ಸುಂಕಾಪುರ, ಡಾ.ಸೋಮ ಶೇಖರ ಇಮ್ರಾಪುರ, ಡಾ.ದೇವೇಂದ್ರ ಕುಮಾರ ಹಕಾರಿ ಡಾ.ಎಂ.ಎಸ್.ಲಠ್ಠೆ ಡಾ. ಎಂ.ಜಿ.ಬಿರಾದಾರ ಮುಂತಾದವರು ಜಾನಪದದ ಬಗೆಗೆ ವಿಶೇಷವಾದ ಆಸಕ್ತಿ ತಳೆದು ಜಾನಪದ ಗ್ರಂಥಗಳನ್ನು ಹೊರತಂದಿದ್ದಾರೆ. ಜಾನಪದದ ಸಮರ್ಪಕ ಅಧ್ಯಯನದ ದೃಷ್ಠಿಯಿಂದ ಕರ್ನಾಟಕ ಜಾನಪದ ಅಕಾಡೆಮಿ ಕನ್ನಡ ಸಾಹಿತ್ಯ ಪರಿಷತ್ತು, ಯಕ್ಷಗಾನ ಅಕಾಡೆಮಿಗಳು, ಜಾನಪದ ಟ್ರಸ್ಟ್, ಜನಪದ ಪತ್ರಿಕೆ ಮುಂತಾದವು ಬೆಳಕಿಗೆ ಬಂದು ಅನೇಕ ಜಾನಪದ ವಿದ್ವಾಂಸರುಗಳು ಅವುಗಳ ಮುಖ್ಯ ಕಾರ್ಯ ನಿರ್ವಾಹಕರಾಗಿ ಜಾನಪದ ಅಧ್ಯಯನಕ್ಕೆ ಪೂರಕ ಉತ್ತೇಜನ ನೀಡಲು ಜಾನಪದ ಸಂಸ್ಕೃತಿ ಆಧಾರಿತ ಗ್ರಂಥಗಳು ಅಪಾರ ಪ್ರಮಾಣದಲ್ಲಿ ಪ್ರಕಟಗೊಂಡವು. ಇಂದು ಸಹ ವಿಶ್ವವಿದ್ಯಾಲಯಗಳಲ್ಲಿ ಜಾನಪದದ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಅನೇಕ ಸಂಶೋಧನ ಪ್ರಬಂಧಗಳು ಹೊರಬರುತ್ತಿರುವ ಈ ಸಂದರ್ಭದಲ್ಲಿ ಅಥಣಿ ಪರಿಸರದ ವಾಲ್ಮೀಕಿ ಸಮುದಾಯದ ಜಾನಪದ ಸಾಹಿತ್ಯದ ಕುರಿತು ವಿವೇಚಿಸುವುದು ಇಲ್ಲಿನ ಮುಖ್ಯ ಉದ್ದೇಶವಾಗಿದೆ.

ಕರ್ನಾಟಕದ ವಿವಿಧ ಭಾಗಗಳಲ್ಲಿ ವಾಲ್ಮೀಕಿ ಸಮುದಾಯದವರು ವಾಸಿಸುತ್ತಿದ್ದು ಅಥಣಿ ಪರಿಸರದಲ್ಲಿ ಈ ಸಮುದಾಯದ ಜನರು ಬಹಳ ಕಡಿಮೆ ಪ್ರಮಾಣದಲ್ಲಿ ವಾಸಿಸುತ್ತಿದ್ದಾರೆ. ಅಥಣಿ ತಾಲೂಕಿನಲ್ಲಿ ಬೇಡರಹಟ್ಟಿ, ರಡ್ಡೇರಹಟ್ಟಿ, ಮಹಿಷವಾಡಗಿ, ಶೇಡಬಾಳ, ಅಡಹಳಟ್ಟಿ, ಕೊಹಳ್ಳಿ, ಕೊಟ್ಟಲಗಿ ಮುಂತಾದ ಕೆಲಹಳ್ಳಿಗಳಲ್ಲಿ ಮಾತ್ರ ವಾಲ್ಮೀಕಿ ಸಮುದಾಯದವರು ವಾಸಿಸುತ್ತಿದ್ದಾರೆ.

ಈ ಪರಿಸರದಲ್ಲಿ ವಾಲ್ಮೀಕಿ ಸಮುದಾಯವು ಕಡಿಮೆ ಪ್ರಮಾಣದಲ್ಲಿರುವುದರಿಂದ ಈತರ ಸಮುದಾಯದೊಡನೆ ಬೆರೆತು ಸಹಜೀವನ ನಡೆಸುತ್ತಿದ್ದು ಜನಜೀವನದ ಜೊತೆಗೆ ಬೆರೆತು ಹೋಗಿದ್ದಾರೆ. ಇತರ ಸಮುದಾಯದ ಹಾಗೆಯೇ ಇವರಲ್ಲಿ ಕೂಡ ಮೈನೆರೆಯುವಿಕೆ ಮದುವೆ, ಸೀಮಂತ, ಹುಟ್ಟಿನ ಸಂದರ್ಭ, ಸಾವಿನ ಸಂದರ್ಭ, ಒಕ್ಕಲುತನದ ಕೆಲಸ ಕಾರ್ಯಗಳ ಸಂದರ್ಭ, ಮನೆಗೆಲಸದ ಸಂದರ್ಭ, ಬಿಡುವಿನ ಸಂದರ್ಭ, ಹರಟೆ, ದೇವತಾರಾಧನೆ, ಹಬ್ಬ ಹರಿದಿನಗಳ ಆಚರಣೆ, ಹೀಗೆ ವಿವಿಧ ಸಂದರ್ಭಗಳಲ್ಲಿ ಈ ಸಮುದಾಯದ ಜಾನಪದ ಸಾಹಿತ್ಯ ಓತ ಪ್ರೋಹರಿದು ಬಂದದ್ದು ಕಾಣುತ್ತೇವೆ.

ಗೀತೆಗಳು

ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿರುವ ಈ ಜನಪದ ಗೀತೆಗಳು ಜಾನಪದ ಸಂಸ್ಕೃತಿಯ ಅಂಗವೂ ಹೌದು. ಇದು ಗ್ರಾಮೀಣ ಅನಕ್ಷರಸ್ಥರ ಸೃಷ್ಟಿಯಾದುದರಿಂದ ಇದನ್ನು ಹಳ್ಳಿಯ ಹಾಡು ಎಂದು ಕರೆಯಲಾಗಿದೆ. ಪಲ್ಲವಿಯ ಮೂಲಕ ಕಟ್ಟಿದ ಈ ಹಾಡು ಕರ್ಣ ಕರ್ಣಿಯಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗಿಬರುವಾಗ ಆಸಕ್ತಿಯುಳ್ಳ ತೀಕ್ಷ್ಣ ಮತಿಗಳ ನಾಲಗೆಯ ಮೇಲೆ ನಲಿಯುತ್ತದೆ. ಸಾಮಾನ್ಯವಾಗಿ ಜನರು ಹೇಳುವಂತೆ ಇದು ಒಂದು ಪದ ಅಥವಾ ಹಾಡು. ಹಳ್ಳಿಯ ಅವಿದ್ಯಾವಂತ ಜನರು ಈ ಹಾಡನ್ನು ಮೈಗೂಡಿಸಿಕೊಂಡವರಿಗೆ ಒಂದು ಪದ ಹೇಳು, ಒಂದು ಹಾಡೇಳು ಎನ್ನುತ್ತಾರೆ. ಆದ್ದರಿಂದ ಹಳ್ಳಿಗರ ಬಾಯಲ್ಲಿ ಹಾಡಾಗಿ ಹರಿಯುವ ಇದು ಕಂಠಸ್ಥ ಪರಂಪರೆಯ ಜೀವಾಳವೂ ಹೌದು.

ಪರಿಸರಕ್ಕನುಗುಣವಾಗಿ ಹಾಡುವ ದಾಟಿಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಒಂದೇ ಜನಪದ ಗೀತೆಯನ್ನು ಒಂದೊಂದು ಕಡೆಯವರು ಒಂದೊಂದು ರೀತಿಯಲ್ಲಿ ಧ್ವನಿ ವ್ಯತ್ಯಾಸ ಮಾಡಿ ಹಾಡಿದ್ದುಂಟು.

ಈ ಹಾಡುಗಳನ್ನು ಅವಲೋಕಿಸಿದಾಗ

೧. ಕೆಲಸದ ಹಾಡುಗಳಲ್ಲಿ
೧. ಹಂತಿಯ ಹಾಡುಗಳು
೨. ಬೀಸುವ ಪದಗಳು
೩. ಕುಟ್ಟುವ ಪದಗಳು

೨. ಹಬ್ಬದ ಹಾಡುಗಳು
೧. ಗುಳ್ಳವನ ಪದಗಳು
೨. ಹೋಳಿ ಹಬ್ಬದ ಹಾಡುಗಳು
೩. ಗುರ್ಚಿ ಪದಗಳು
೪. ಮೊಹರಂ ಪದಗಳು
೫. ಜೋಕುಮಾರನ ಹಾಡುಗಳು

೩. ಜೀವನ ಚಕ್ರದ ಮುಖ್ಯ ಘಟ್ಟಗಳಲ್ಲಿ
೧.ಬಾಲ್ಯ, ಯೌವನ, ಮದುವೆ
೨.ಸಾವು ಹಾಡುಗಳು
೩.ಜೋಗುಳ ಹಾಡುಗಳು
೪.ಸೊಬಾನೆ ಪದಗಳು
೫.ಮದುವೆ ಹಾಡುಗಳು
೬.ಸಾವಿನ ಸಂದರ್ಭದ ಹಾಡುಗಳು

೪.ಕುಣಿತದ ಹಾಡುಗಳು
೧. ಕೋಲಾಟದ ಹಾಡುಗಳು
೨. ಡೊಳ್ಳಿನ ಹಾಡುಗಳು
೫. ದೇವರ ಸ್ತುತಿಸುವ ಹಾಡುಗಳು ದೇವರ ಕುರಿತು ನಾಮಸ್ಮರಣೆ ಮಾಡುವ ಹಾಡುಗಳು

ಈ ರೀತಿಯಾಗಿ ಹಲವಾರು ಪ್ರಕಾರಗಳಲ್ಲಿ ಹಾಡುಗಳು ಕಂಡುಬರುತ್ತವೆ. ಈ ಮುಂದೆ ಒಂದೊಂದಾಗಿ ನೋಡೋಣ.

ಕೆಲಸದ ಹಾಡುಗಳಲ್ಲಿ

ಹಂತಿಯ ಹಾಡು : ಸಾಮಾನ್ಯವಾಗಿ ರೈತರು ಈಗಿನ ಹಾಗೆ ತಾಂತ್ರಿಕ ವ್ಯವಸ್ಥೆ ಮುಂದುವರೆಯದ ಪ್ರಾಚೀನ ಕಾಲದಲ್ಲಿ ರೈತರು ತಮ್ಮ ಹೊಲಗಳಲ್ಲಿ ಎಲ್ಲಾ ಧಾನ್ಯಗಳನ್ನು ರಾಶಿ ಮಾಡುವ ಸಂದರ್ಭದಲ್ಲಿ ರೈತಾಪಿ ಜನರು ಬೇಜಾರು ಕಳೆಯುವಂತೆ ತಮ್ಮದೇ ಆದ ದಾಟಿಯಲ್ಲಿ ಮುಂಜಾವಿನ ಸಮಯದಲ್ಲಿ ಎದ್ದು ಎತ್ತುಗಳಿಂದ ಧಾನ್ಯಗಳ ತೆನೆಗಳನ್ನು ತುಳಿಸುವ ಸಂದರ್ಭದಲ್ಲಿ ಹೇಳುತ್ತಿದ್ದ ಹಾಡು ಈ ರೀತಿಯಾಗಿದೆ.

ಹಂತಿ ಹೊಡೆಯುತ, ಎಂತವನ ನೆನಿಬೇಕು
ಗಂತಪಿತನಾದ ಗಣಪನ | ಗಂತಪಿತನಾದ ಗಣಪನ
ನೆನೆದರೆ ತಪ್ಪತ್ತಿನ ಹಂತಿ ತುಳದಾವೊ ||

ತಮ್ಮ ಕೆಲಸ ಕಾರ್ಯಗಳು ಸುಗಮವಾಗಿ ಸಾಗುವುದಕ್ಕೆ ವಿಘ್ನವಿನಾಶಕ ಗಣಪನನ್ನು ಸ್ಮರಿಸುವ ಪರಿಪಾಠವೂ ಇದ್ದುದು ಇದರಿಂದ ಕಂಡುಬರುತ್ತದೆ.

ಗುಡ್ಡರ ವಾಯ್ಯಗ ಗುಗ್ಗಳ ಹೋಗಿ ಎದ್ದ
ಅಪ್ಪ ಬಸವಯ್ಯನ ಶಿವಪೂಜೆ, ಅಪ್ಪ ಬಸವಯ್ಯ
ನ ಶಿವಪೂಜಿ ಆಗುವಾಗ ಆಕಾಶದ ಗಂಟಿ ನುಡಿದಾವೊ

ಈ ರೀತಿ ಬಸವನ ಪೂಜೆಯ ಸಂದರ್ಭವನ್ನು ಅನುಸರಿಸಿ ಹಾಡು ಹೇಳುವುದುಂಟು.

ಇನ್ನೂ ಒಕ್ಕಲಿಗನಿಗೆ ಪವಿತ್ರವಾದ ಆಕಳು (ಗೋಮಾತೆ)  ಕುರಿತು ಪದ

ಆಕಳ ಪರಿ ಬಿಟ್ಟು ನಾಲ್ಕು ಮೂಲಿಗಿ ನಿಂತು
ಯಾಕ ಗೋಪವ್ವ ಕರಿವಲ್ಲಿ ನಿನ್ನ ಮಗ
ಹಾಲಿಲ್ಲದ ಬಾನ ಉಣವಲ್ಲ

ಈ ರೀತಿಯ ಹಲವಾರು ಪದ್ಯಗಳನ್ನು ಹೇಳುತ್ತಾ ಹಂತಿಯನ್ನು ಕಮ್ತ ಹೊಡೆಯುವುದು ವಾಡಿಕೆಯಿದೆ.

ಅದರಂತೆ ಬೀಸಲು ಕುಳಿತಾಗ ಹಾಡುವ
ಬೀಸುಕಲ್ಲಿಗಿ ಶರಣ, ಗೋಧಿ ಮುಕ್ಕಿಗಿ ಶರಣ
ಆಗು ಮಿಕ್ಕಿಗಿ ಶಿವಶರಣ ಬೀಸಾಕ ಕುಂತಿನಿ
ಚಂದಾನ ಬದುಕಲ್ಲ ಬಂಗಾರ ಬಿಳಿಜೋಳ
ತಾಸ ಹೊತ್ತಿನಾಗ ತರವಿನ ಬೀಸಾಕ ಕುಂತಿನಿ

ಮತ್ತೊಂದು ಪದ್ಯದಲ್ಲಿ

ಆಕಳ ಹೆಂಡಿ ತಂದ ಅರಮನಿ ಸಾರಿಸಿ
ಗೋಪಿ ತಾಯಿಗಿ ತರಿ ಹೊಡದ ಬಿಸಾಕ ಕುಂತಿನ
ಆಕಳ ಹೊಟ್ಟಿಲಿ ಹುಟ್ಯಾನ್ರಿ ಬಸವಣ್ಣ
ತರಿಹೊಡದ ನೀರ ಕುಡಸಿನ ಬಿಸಾಕ ಕುಂತಿನ

ಸಾಮಾನ್ಯವಾಗಿ ಬೀಸುವ ಸಂದರ್ಭದಲ್ಲಿ ಹೆಣ್ಣು ಮಗಳಿಗೆ ಮನೆಗೆ ಜನರು ಬಂದಿರುವ ಸಂದರ್ಭ ಅವಸರಿಸುವ ಸಂದರ್ಭದಲ್ಲಿ ಎಷ್ಟು ಜನರು ಎಂಬುದನ್ನು ಹೇಳಿ ಎಷ್ಟು ಅಡಿಗೆ ಮಾಡುವ ಎಂದು ಹೇಳುವ ಸೂಚನೆ ಈ ಕೆಳಗಿನ ಪದ್ಯದಲ್ಲಿ ಕಾಣಬಹುದು.

ಬಿಸಲಾರ ಕುಂತಿವಿರಿ ಬಿಗದಿಡಿರಿ ನಿಮ್ಮ ಕುದರಿ
ನಮಗೆಳರಿ ಏಸ ಮಂದ್ಯಾರ, ಏಸನಿ ಮಂದ್ಯಾರ
ನಮಗೇಳ ಸಂಗಯ್ಯ ಸ್ವಾಮಿ ನಿಡತಿವರಿ ನೋಡಿ
ಬಂದಡಿಗೆ

ಇನ್ನೂ ಬಿಸುವ ಕಾರ್ಯ ಮುಕ್ತಾಯವಾಗುವ ಸಂದರ್ಭಕ್ಕೆ ಈ ರೀತಿಯಾಗಿ ಹೇಳುತ್ತಾರೆ.

ಆಗು ಮುಕ್ಕಿಗಿ ಶರಣ ಗೋದಿಕಲ್ಲಿಗಿ ಶರಣ
ಶಿವಶರಣ ಅತ್ತಿ ಮಾವರಿಗೆ
ಅತ್ತಿ ನಿ ಮಾವರಿಗೆ ಶಿವಶರಣ ಬಿಸಿದ ಹಿಟ್ಟ
ಕೊಡ ಶಿವನ ಉಣ್ಣವರಿಗಾಸೆ

ಇನ್ನು ಬದುಕಿನಲ್ಲಿ ಹಲವಾರು ವ್ಯಕ್ತಿಗಳು ಹಲವಾರು ರೀತಿಯ ಗುಣಗಳನ್ನು ಹಲವಾರು ರೀತಿಯ ವ್ಯಕ್ತಿತ್ವವನ್ನು ನಾವು ಕಾಣಬಹುದಾಗಿದೆ. ಅಂತಹದಲ್ಲಿ ವಿಶ್ವಾಸವಿರದ ವ್ಯಕ್ತಿಯ ಗೆಳೆತನದ ಕುರಿತು ಹೇಳುವ ಪದ್ಯ

ಹಸುವ ಇಲ್ಲದ ಊಟ
ಕುಸಿಯ ಇಲ್ಲದ ನಗೆಯ
ವಿಶ್ವಾಸವಿಲ್ಲದವರ ಗೆಳೆತನ / ಕಟ್ಟಿದರ
ಬಿಸಲಾಗ ಹಾದಿ ನಡದಂಗ

ಕುಟ್ಟುವ ಪದಗಳು

ಓಂ ಎಂದು ಕುಟ್ಟುವೆ | ಸೊಂ ಎಂ ಬಿಸುವೆ
ಓಂ ಸೊಂ ಎರಡು ತಿಳಿಯಬೇಕ ನಾರಿ
ಹಾಕವ್ವ ಹೇರಿ
ಓಂ ಮನೆಂದು ಅಕ್ಕಿ ತರಿಸಿ
ಸೂಕ್ಷ್ಮನೆಂದು ಹಳ್ಳಗಳೆಂದು
ಓಂ ಸೊಂ ಅನ್ನ ಮಾಡಿ
ಗುರುವಿಗಿ ಎಡಿ ಮಾಡಿ ಹಾಕವ್ವ ಹೇರಿ

ಇನ್ನೂ ಈ ರೀತಿಯಾಗಿ ಬೀಸುವ ಸಂದರ್ಭದಲ್ಲಂತೂ ತನ್ನ ಗುರುವಿನ ದೈವದ ಸ್ಮರಣೆ ಮಾಡುತ್ತಾ ಕಾರ್ಯಮಾಡುವುದು ಅವಿಸ್ಮರಣೀಯ

ಹಬ್ಬ ಹರಿದಿನಗಳಂತೂ ಪ್ರತಿಯೊಂದಕ್ಕೂ ಅರ್ಥಪೂರ್ಣವಾದ ಹಾಡುಗಳನ್ನು ಹಾಡುತ್ತ ತನ್ನ ಬದುಕು ಸುಂದರವಾಗಿ ಹಾಗೂ ಸಂತೋಷವಾಗುವತ್ತ ಸಾಗಿದ್ದು ಈ ಕೆಳಗಿನಂತೆ ಕಂಡುಬರುತ್ತದೆ.

ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಹಾಡುವ ಹಾಡು

ಹೋಳಿ ಹುಣ್ಣಿಮೆ ಬತ್ತು ಹೋಳಿಗಿ ಮಾಡುವ ಬತ್ತು
ಬೋಳೆಮ್ಮ ತುಪ್ಪ ಕಾಶ್ಯಾಳೊ| ಬೋಳೆಮ್ಮ ತುಪ್ಪ
ಕಾಶ್ಯಾಳ ಎಲೆ ಹುಡುಗಿ ಹೊಳ ಬಾಯಿ ಹಿಡಿದ
ಸುರವ್ಯಾಳ

ಇನ್ನು ದೀಪಾವಳಿ ಹಬ್ಬದಲ್ಲಿ ಒಕ್ಕಲಿಗರ ಮಕ್ಕಳು ಆಡು, ಎಮ್ಮೆ, ಎತ್ತು ಇವುಗಳಿಗೆ ತೊಂದರೆ ಬರದಿರಲಿ ಎಂದು ‘‘ಆಡಿ-ಪಿಡಿ’’ ಬೆಳಗುವ ಸಂದರ್ಭ ಇದೆ ಆವಾಗ ಹಾಡುವ ಹಾಡು ಈ ಕೆಳಗಿನಂತಿದೆ.

ಆಡಾ ಪಡಾ ತಂದಿರಬೇಕ ಸಾರಬರ ಹಿಂಡಿರಬೇಕ
ಒಲಿಮ್ಯಾಗ ಇಟ್ಟಿರಬೇಕ, ಬೆಕ್ಕ ಬಂದ ಕುಡಿದಿರಬೇಕ
ಆಯಿ ಬಂದ ಬಡದಿರಬೇಕ, ಮುತ್ಯಾ ಬಂದ ಬಿಡಿಸಿರ
ಬೇಕ ಆಡಿ ಪಿಡಿ ಮಂತ್ರೋಷೆ

ಇದು ಆಡಿನ ಬಗ್ಗೆ ಹಾಡುತ್ತಾರೆ.

ಇನ್ನು ಎಮ್ಮೆಯ ಕುರಿತು

ಹೊತ್ತು ಮುಣಗಿತೊ ಹೊಲೆ ಎಲ್ಲ ಹನ್ನೆರಡೆತ್ತಿನ ಬಾಲ ಬಾಲಮ್ಯಾಲ ಬಂಡಿ ಬಂಡಿಮ್ಯಾಗ ನವಿಲ, ನವಲಪುಚ್ಚ ತೊಡಿ ಚಿಗರಿ ಕೊಡಿಗಿ ಹಾಕಿ ಚಿಗರಿ ಹೊಗೊ ಜಾಣಾ ಅದಕೆನ ದಾಡಿ ಹುಣಚಿನ ರಾಡಿ ಆಡಿ ಪಿಡಿ ಮಂತ್ರಾಷೋ ಸಾಮಾನ್ಯವಾಗಿ ಮೋಡ, ಮಳೆ, ಬೆಳೆ, ಎಲ್ಲ ದೇವರ ಕೊಡುಗೆಗಳು ಎಂಬ ನಂಬಿಕೆ ಜನಪದರಲ್ಲಿ ಹೀಗೆ ಮಳೆಯಾಗದ ಸಂದರ್ಭದಲ್ಲಿ ಗುರ್ಚಿ ಎಂದು ಆಕಳ ಸೆಗಣಿಯಿಂದ ದುಂಡಗೆ ಆಕಾರ ಮಾಡಿ ಕಪ್ಪೆಯನ್ನು ಆ ಸೆಗಣಿಯಲ್ಲಿ ಕೂಡಿಸಿ ಅದನ್ನು ರೊಟ್ಟಿ ಬೇಯಿಸುವ ತವೆಯ ಮೇಲೆ ಇಟ್ಟುಕೊಂಡು ಮನೆಮನೆಗೆ ಹೋಗಿ ನೀರು ಹಾಕಿಸಿಕೊಳ್ಳುವ ಪದ್ಧತಿ, ಈ ಸಂದರ್ಭದಲ್ಲಿ ಆ ತವೆಯನ್ನು ಹೊತ್ತ ಮಗು ಬರಿಮೈಯಿಂದ ಇರುತ್ತದೆ. ಆವಾಗ ಹಾಡುವ ಹಾಡು

ಗುರ್ಚಿ ಗುರ್ಚಿ ಎಲ್ಲಾಡಿ ಬಂದ
ಹಳ್ಳಾ ಕೊಳ್ಳಾ ಹರದ್ಯಾಡಿ ಬಂದಿ
ಕಾರ ಮಳಿಯ ಕಪಾಟ ಮಳಿಯ
ಬಣ್ಣ ಕುಡತನ ಬಾ ಮಳಿಯ ಬಾ ಮಳಿಯ
ಸುಣ್ಣಾ ಕುಡತನ ಸುರಿಮಳಿಯ ಸುರಿಮಳಿಯ
ಎಂದು ಹಾಡುತ್ತ ಮನೆಗೆ ತಿರುಗಾಡುವದುಂಟು.

ಸೋಬಾನೆ ಪದಗಳು

ಹೆಣ್ಣು ಮಗಳು ಮೈನೆರೆದಾಗ ಪ್ರಬುದ್ಧಾವಸ್ಥೆಗೆ ಬಂದ ಬಗ್ಗೆ ಅವರಿಗೆ ಬರುವುದಕ್ಕಾಗಿ ಒಮ್ಮೊಮ್ಮೆ ಮದುವೆಯಾಗಿರದಿದ್ದರೆ ಪ್ರಬುದ್ಧ ಅವಸ್ಥೆಗೆ ಬಂದಾಗ ಸೋಬಾನೆ ಮಾಡುತ್ತಾರೆ. ಆವಾಗ ಕೂಡ ಈ ಹಾಡುಗಳನ್ನು ಹಾಡುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಬಾಲ್ಯ ವಿವಾಹವಾಗಿದ್ದರೆ ಮದುವೆ ನಂತರ ಈ ಕಾರ್ಯ ನಡೆಯುತ್ತದೆ. ಆ ಸಂದರ್ಭದಲ್ಲಿ ಕೆಳಗಿನಂತೆ ಹಾಡು ಹಾಡುತ್ತಾರೆ.

ಸಿರಿ ಉಡಿಸಿರಿ ನನ್ನ ಶೀಲ ಮಲ್ಲಮ್ಮಗ
ಕುಬಸ ತೊಡಿಸಿರಿ ನನ್ನ ಕೂಸ ಮಲ್ಲಮ್ಮಗ
ಅರಿಷಿಣ ಹಚ್ಚಿರಿ ನನ್ನ ಸರಸ ಮಲ್ಲಮ್ಮಗ
ಕುಂಕಮ ಹಚ್ಚಿರ ನನ್ನ ಕೂಸ ಮಲ್ಲಮ್ಮಗ
ದಂಡಿ ಕಟ್ಟಿರಿ ನನ್ನ ದುಂಡ ಮಲ್ಲಮ್ಮಗ
ಹುಚ್ಚ ಭರಮ ರಡ್ಡಿ ಮಡದಿಗೆ ಸೊ||

ಲಾವಣಿ ಪದಗಳು

ಪರಗಾನಿ ಜತ್ತಿ ಉಮರಾಣಿ, ದೇಶಕ್ವಾಯೆನಿ
ಆಳುವಂತ ಧಣಿ ಢಪಳೆ ಸರಕಾರ
ಜತ್ತಿ ಸಂಸ್ಥಾನ ಪೈಕಿ ಸಣ್ಣ ಹಳ್ಳಿ ಸಿಂಧೂರ ||ಪ||

ಸಿಂಧೂರಾಗ ಲಕ್ಷ್ಮಣ ಹುಟ್ಟ್ಯಾನು ಬಂಟ ಅನಸ್ಯಾನು ಕೊಟ್ಟ ವಚನ ಹುಟ್ಟ ತಪ್ಪಲಿಲ್ಲ, ಹುಟ್ಟತಪ್ಪಲಿಲ್ಲ. ಘಟ ಹೋಗುವ ತನಕ ಹಿಡಿದ ಹಟ ಬಿಡಲಿಲ್ಲ. ||೧||

ಒಬ್ಬ ಐನವರ ಕಾಲಾಗ ಬಿದ್ದಿತರಿವರ್ಮ
ಮಾಡಿದಿಪರಿತ ಒಂದಿನ ಲಕ್ಷ್ಮಣನ ಮ್ಯಾಲ
ಐನವರ ತಳ್ಳಿ ಮಾಡ್ಯಾನಲ್ಲಿ ಐನರ ಇದ್ದರ
ಒಂದರ ರಿಪೇಟ ಕಳಿಸ್ಯಾರ ಇನ್ಸಪೆಕ್ಟರಗ

ಇನ್ಸಪೆಕ್ಟರ ಸಿಂಧೂರಗೆ ಬಂದಾ ಲಕ್ಷ್ಮಣನ ಕರಿಯಾಕ ಕಳಿಸಿದ ಸಂದನಿತ್ತ ಲಕ್ಷ್ಮಣ ಹೇಳಿದ್ದ ಬಾಳ ಹುಳ್ಯಾರದಿಂದ ಬಾ ಮುಂದ ಲಕ್ಷ್ಮಣಗ ಇನ್ಸಪೆಕ್ಟರಗ ವಾದ ಆದಿತ್ತಲ್ಲ ಇನ್ಸಪೆಕ್ಟರ ಲಕ್ಷ್ಮಣನ ಮ್ಯಾಲ ಏರಿ ಹೋದನಲ್ಲ ಲಕ್ಷ್ಮಣ ಚಾವಡಿ ಜಿಗದ ಓಡಿ ಹೋದನಲ್ಲ ಕರಕರ ತಿಂದೋ ಹಲ್ಲ.

ಮಗು ದಿನ ಲಕ್ಷ್ಮಣ ನೆದರ ಇಟ್ಟನಲ್ಲ
ಲಕ್ಷ್ಮಣ ಕಲ್ಲೊಳ್ಳಿ ಗುಡ ಸೆರ್ಯನಲ್ಲ
ಕಟಕ ಇನ್ಸಪೆಕ್ಟರಗ ಅಂವಗ ವಾದ ಆದಿತಲ್ಲ.
ನಾಳಿ ಹುಶ್ಯಾರದಿಂದ ಇರೋ ಗುಡ್ಡದೊಳಗ

ಸಾಬ್ಯಾ, ಗೋಪಾಲ್ಯಾ, ನರಸ್ಯಾ, ಮೂವರು ಕೂಡಿ ಮಾತಾಡ್ಯಾರೊ ತಮ್ಮ ಮನಿಯಾಗ, ನಾಳೆ ತುರಂಗ ಮುರದ ತರುನು ಮಾಮಾಗ ಇಷ್ಟ ಹೇಳಿ ಹೊಂಟರಲ್ಲ, ಲಕ್ಷ್ಮಣನ ಮ್ಯಾಲ ಅವರ ಜೀವ.

ಮರುದಿನ ಜತ್ತಿಗೆ ಹೋದರಲ್ಲ. ತುರಂಗ ಮುಂದಾರಲ್ಲ
ಕಟಕ ಪೊಜಾರನ ಜಗ್ಗಿ ತಗದ ಕಡದಾರಲ್ಲ.
ಬೆಳಗಾಗುದರೊಳಗ ಜತ್ತಿ ಅಗಸಿಗಿ ಚಂಡ
ಕಡ್ಯಾರಲ್ಲ

ಅಲ್ಲಿಂದ ಮುಂದ ನಡದಾರಲ್ಲ ಅರಬಾವಿ ಮಠಸೆರ್ಯಾರಲ್ಲ ಅಜ್ಜಯನವರ ಆಶೀರ್ವಾದ ಪಡೆದರಲ್ಲ ಗುಣದಾಳ, ಗದ್ಯಾಳ ಗೊಠೆ ಮೇಲಿಂದ ಹಾದ ಗಲಗಲಿ ಹೊಗ್ಯಾರಲ್ಲ, ಗುಜ್ಜರ ಮನಿ ಒಡದ ಅನ್ನ ಕೊಟ್ಟವಂಗಿ ದಾನ ಮಾಡ್ಯಾರಲ್ಲ. ನಿಡೋಣಿ ದುಂಡ್ಯಾ ಬಂದ ಕುಡ್ಯಾನಲ್ಲ ಒಳ್ಳೆ ಜೀವದ ಮೈತ್ರ ಕಲ್ಲೊಳ್ಳಿ ಗುಡ್ಡದಾಗ ತಿರಗಾಡ್ಯಾರಲ್ಲ, ಜಮಖಂಡ್ಯಾಗ ಅಡ್ಯಾಡರಲ್ಲಿ ಹಲ್ಲಿಗಿ ಬಂಗಾರ ಬಿಡಿಸಿಕೊಂಡಾರಲ್ಲ, ಲಕ್ಷ್ಮಣನ ಹಲ್ಲ ಮುಂತ ಮನಸಿಗಿ ಸಂಶಯ ತಂದರಲ್ಲ.

ಗವರ್ನರ ನೆದರ ಇಟ್ಟಾನಲ್ಲ, ಅಲ್ಲಿಂದ ಜಾಗ ಬಿಟ್ಟಾನಲ್ಲ ಮರುದಿನ ಬಂದ ಮುತ್ತಿಗಿ ಹಾಕ್ಯಾರಲ್ಲ, ಗುಂಡ ಹಾರಸ್ಯಾರಲ್ಲ ಸಪ್ಪಳಕ ಎದ್ದ ನಾಲ್ಕ ಅರಡಿ ಬಾವಿ ಜಿಗದ ಓಡಿ ಹೋದರಲ್ಲ.

ಹಿಂದರಕಿ ಓಡುವಾಗ ಕವಣಿಕಲ್ಲ ಒಗದ ಕುದರಿ ಕಾಲ ಮುರದರಲ್ಲ. ಗವರ್ನರ ತಿರುಗಿ ಹೋದನಲ್ಲ. ಗವರ್ನರ ಪಿತೂರಿ ನಡಸ್ಯನಲ್ಲ, ತೆಗ್ಲಿ ನಾಯ್ಕಗ ಗಂಟ ಬಿದ್ದನಲ್ಲ ಪಿತೂರಿ ನಡಸ್ಯರಲ್ಲ.

ಕಪ್ಪರ ಪಡಿಯವ್ವನ ಗುಡಿಯಲ್ಲಿ
ಜಾತ್ರೆ ನೆಮಿಷ್ಯರಲ್ಲಿ, ಊಟಕ ಹೇಳ್ಯಾನಲ್ಲ
ಸೋಮಲ್ಯಾ ಲಾಟನ ಇಟ್ಟ ತೊರ್ಯಾನಲ್ಲ
ಲಕ್ಷಣಗ ಎದಿ ಒಳಗ ಗುಂಡ ಬಡದಾರಲ್ಲ

ಸಾಖ್ಯಾಗೊ ಪಾಲ್ಯಾನರಸ್ಯಾ ಓಡಿ ಹೋದರಲ್ಲ ಬೇಕಂತ ಹೋಗಿ ಸಿಕ್ಕರಲ್ಲಾ ಅವರ್ನ ಓದ ಒಗದಾರೊ ಜಮಬರಡಿ ಝೇಲ.

ಸಿಂಧೂರ ಲಕ್ಷ್ಮಣನ ಈ ಗೀತೆ ವೀರಗೀತೆ ಆಗಿದ್ದು ವಾಲ್ಮೀಕಿ ಸಮುದಾಯದಲ್ಲಿ ಜನಿಸಿದ ಈತ ಅಥಣಿ ತಾಲೂಕಿಗೆ ಹತ್ತಿರದ ಹಳ್ಳಿ ಮಹಾರಾಷ್ಟ್ರದ ಸಿಂಧೂರ. ಆದರೆ ಇಂದು ಗಡಿಭಾಗದ ಈ ಹಳ್ಳಿಯ ಜನಕ್ಕೆ ಆತನ ಶೂರತನ ಬಹಳಷ್ಟು ಮಾರ್ಗದರ್ಶಕವೆಂದೇ ಹೇಳಬೇಕು. ಅಲ್ಲದೆ ಆದರ್ಶವೆಂದು ತಿಳಿಯಬೇಕು.

ಮದುವೆಯಲ್ಲಿ ಹಾಡುವ ಹಾಡು

ಮದುಮಕ್ಕಳಿಗೆ ಎಣ್ಣೆ ಹಚ್ಚುವ ಸಂದರ್ಭದಲ್ಲಿ ಈ ರೀತಿಯಾಗಿ ಹಾಡನ್ನು ಹಾಡುತ್ತಾರೆ.

ನಿ ಎಣ್ಣಿ ನಿ ಎಣ್ಣಿ ಯಾವ ದೇವರೆಣ್ಣಿ
ತಂದಿ ಬಸವಣ್ಣನ ನೆಯ ಎಣ್ಣಿ
ತಂದಿ ನಿ ಬಸವಣ್ಣನ ನಿ ಎಣ್ಣೆ ಏರ್ಯಾವ
ಐವತ್ತೊಂದೈದ ಗಳಿಗ್ಯಾಗ

ಇನ್ನೂ ಎಣ್ಣಿ ಇಳಿಸುವ ಸಂದರ್ಭದಲ್ಲಿ

ನಿ ಎಣ್ಣಿ ನಿ ಎಣ್ಣಿ ಯಾವ ದೇವರೆಣ್ಣಿ
ತಂದಿ ಗಿರಿವಾಸ್ಯಾಗ ನೆಯಾ ಎಣ್ಣಿ
ತಂದಿ ನಿ ಎಣ್ಣಿ ಇಳಿದಾವ
ನಾಲವತ್ತೊಂದನಾಕ ಗಳಿಗ್ಯಾಗ

ಹೀಗೆ ಮದುವೆಯಲ್ಲಿ ಎಣ್ಣಿ ಎರಿಸುವ ಸಂದರ್ಭದಲ್ಲಿ ಐವತ್ತೊಂದೈವಗಳಿಗೆ ಹಾಗೂ ಇಳಿಸುವ ಸಂದರ್ಭದಲ್ಲಿ ನಾಲವತ್ತೊಂದ ನಾಕ ಗಳಿಗೆಯ ಹಾಡು ಹೇಳುತ್ತಾರೆ.

ಇನ್ನೂ ಸ್ತ್ರೀಯಳು ಗರ್ಭಿಣಿಯಾದ ಸಂದರ್ಭದಲ್ಲಿ ಅವಳನ್ನು ಕುರಿತು ಹಾಡುವ ಹಾಡಂತು ಬಹು ಮಾರ್ಮಿಕವಾದದ್ದು.

ಇಂದ್ರ ಜಾನಗೆ ನಿನಗ ಚಂದ್ರ ಮೂಡಿದನೆನ
ನಾರಿ ಜಾನಕಿ ನಿನಗ ಸೂರ್ಯ ಮಾಡಿದನೆನ
ಒಂದೊಂದು ತಿಂಗಳಿಗಿ ಬಂದೆನ ಬಗಸ್ಯಾಳ
ಒಂದೇಲಿ ಬರದ ಉಳಿಹುಣಚೆಳವ್ವ ತಾಯಿ ||೧||

ಎರಡೆಂಟು ತಿಂಗಳಿಗೆ ಎರಡೆನ ಬಗಸ್ಯಾಳ
ಎರಡೆಲಿ ಒರದ ಉಳಿ ಹುಣಚೆಳವ್ವ ತಾಯಿ ||೨||

ಮೂರೆಂಬು ತಿಂಗಳಿಗೆ ಮೂರೆನ ಬಗಸ್ಯಾಳ
ಮೂಡಲದಾಗ ಹರಿವ ತಿಳಿನೀರ ಏಳವ್ವ ತಾಯಿ ||೩||

ನಾಕಂಬು ತಿಂಗಳಿಗೆ ನಾಕೆನ ಬಗಸ್ಯಾಳ
ಕಾಕಮಿ ಹಣ್ಣ ಕೈತುಂಬೆಳವ್ವ ತಾಯಿ ||೪||

ಐದಂಬು ತಿಂಗಳಿಗಿ ಐದೆನ ಬಗಸ್ಯಾಳ
ಕೊಯ್ದ ಮಲ್ಲಿಗಿ ನೆನೆದಂಡೆಳವ್ವ ತಾಯಿ ||೫||

ಆರಂಬು ತಿಂಗಳಿಗಿ ಆರೆನ ಬಗಸ್ಯಾಳ
ಹಾರಕದ ಬಾನ ಕೆನಿ ಮಸರೆಳವ್ವ ತಾಯಿ ||೬||

ಏಳೆಂಟು ತಿಂಗಳಿಗೆ ಏಳೆನ ಬಗಸ್ಯಾಳ
ಹೇಳಿ ಕಳವ್ಯಾಳ ತವರಿಗೆಳವ್ವ ತಾಯಿ ||೭||

ಎಂಟಂಬು ತಿಂಗಳಿಗೆ ಎಂಟೆನ ಬಗಸ್ಯಾಳ
ಕಂಟಲ ಉತ್ತ ಕರಿಬರಲೇಳವ್ವ ತಾಯಿ ||೮||

ಒಂಬತ್ತ ತಿಂಗಳಿಗಿ ಒಂಬತ್ತೆನ ಬಗಸ್ಯಾಳ
ಸಂದಿನ ಸಂದೆಲ್ಲ ಕಿರಿಬ್ಯಾನೆಳವ್ವ ತಾಯಿ ||೯||

ಹತ್ತಂಬು ತಿಂಗಳಿಗಿ ಹತ್ತೆನ ಬಯಸ್ಯಾಳ
ಮುತ್ತಿನಂತ ಮಗನ ಬಗಲಾಗೆಳವ್ವ ತಾಯಿ ||೧೦||

ಈ ರೀತಿಯಾಗಿ ಗರ್ಭಿಣಿ ಸ್ತ್ರೀಯಳು ಗರ್ಭಿಧರಿಸಿದಂದಿನಿಂದ ಮಗುವನ್ನು ಹೆರುವವರೆಗೆ ತನ್ನ ಬಯಕೆಗಳನ್ನೆಲ್ಲ ತಾಯಿಯ ಮುಂದೆ ವರ್ಣಿಸುವ ರೀತಿಯನ್ನು ಮೇಲಿನ ಪದ್ಯದಲ್ಲಿ ಬಹುಸುಂದರವಾಗಿ ಕಾಣಬಹುದಾಗಿದೆ.

ಇನ್ನು ಸೀಮಂತದ ಸಂದರ್ಭದಲ್ಲಿ ಅಳಿಯನಿಗೆ ಆಯೆರ ಮಾಡುವ ಬೀಗರ ಕುರಿತು ಈ ರೀತಿಯಾಗಿ ಹೇಳುತ್ತಾರೆ. ಬೀಗರನ್ನು ಟೀಕೆ ಮಾಡುವ ರೀತಿ ಕೂಡ ಹೇಗೆ ಎಂಬುದು ಈ ಕೆಳಗಿನ ಪದ್ಯದಿಂದ ಕಂಡುಬರುತ್ತದೆ.

ಹೇ ರಾಮವ್ವ ಹೆಣ್ಣ ಕೊಟ್ಟವರೆನಕೊಟ್ಟವ್ವ
ಹೆಣ್ಣ ಕೊಟ್ಟವರೆನ ಕೆಟ್ಟ ಮುನ್ನುರಂಬರಸಿರಿ ಉಟ್ಟ
ಟೋಪ ಸೆರಗ ಮೆಲ ಮಾಡಿ ಟಿಪನಾಗಿ ನಿಂತಾಳ
ಕೈಯಾಗ ಗಡಿಯಾರ ತರಲಿಲ್ಲ
ರಂಗಿನ ಮಾತೊಂದೇಳಲಿಲ್ಲ
ಟೋಪಸೆರಗ ಮೇಲೆ ಮಾಡಿ
ಟಿಪನಾಗಿ ನಿಂತಾಳ
ಹೇ ಚಂದ್ರವ್ವ ಹೆಣ್ಣಕೊಟ್ಟವರೆನ ಕೆಟ್ಟ
ಕೈಯಾಗ ಉಂಗರಾ ತರಲಿಲ್ಲ
ರಂಗಿನ ಮಾತೊಂದೇಳಲಿಲ್ಲ
ಎನ ಹೇಳಲವ್ವ ಹೆಣ್ಣ ಕೊಟ್ಟವರೆನ ಕೆಟ್ಟವ್ವ
ಕೊಳ್ಳಗ ಚೈನ ತರಲಿಲ್ಲ
ರಂಗಿನ ಮಾತೊಂದೇಳಲಿಲ್ಲ
ಟೋಪಸೆರಗ ಮೇಲ್ ಮಾಡಿ
ಟಿಪನಾಗಿ ನಿಂತಾಳ
ಹೆಣಕೊಟ್ಟವರೆನ ಕೆಟ್ಟವ್ವ

ಜೋಗುಳ ಹಾಡುಗಳು

ಈ ಹಾಡುಗಳು ಸಾಮಾನ್ಯವಾಗಿ ಗಂಡು ಮಗು ಹುಟ್ಟಿದ ಹನ್ನೆರಡನೇ ದಿನಕ್ಕೆ ಹೆಣ್ಣು ಹುಟ್ಟಿದ ಹದಿಮೂರನೆ ದಿನಕ್ಕೆ ಹೀಗೆ ಈ ನಾಮಕರಣದ ಸಂದರ್ಭದಲ್ಲಿ ಹಾಡುತ್ತಾರೆ.

ತೂಗಿರಿ ರಂಗನ ತೂಗಿರಿ ಕೃಷ್ಣನ
ತೂಗಿರಿ ಅಚ್ಯುತನಂತನ
ನಾಗಲೊಕದೊಳಗ ನಾರಾಯಣ ಮಲಗ್ಯಾರ
ನಾಗಗನ್ಯಕ್ಯಾರು ತೊಗರೆ | ನಾಗಗನ್ಯಾಕ್ಯಾರು ನಲಕಾವ
ಪಾಡಿರಿ ಸ್ವಾಮಿಯ ತೊಟ್ಟಿಲ ತೂಗಿದೆ.
ಇಂದ್ರ ಲೊಕದೊಳಗ ಮಂದಾರ ಮಲಗ್ಯಾರ
ಬಂದೊಮ್ಮೆ ತೊಟ್ಟಿಲ ತೂಗಿರೆ | ಬಂದೊಮ್ಮೆ ತೊಟ್ಟಿಲ
ಚಂದದಿಂದಲಿ ನೀವು ಚಂದರನ ತೊಟ್ಟಿಲ ತೂಗಿರೆ
ಶಾಶಲ ಮಡಿಮ್ಯಾಲ ಸೂಸಲ ಹೊಯ್ದಂಗ
ಲೇಸಣಾರನ್ನ ತೂಗಿರೆ | ಲೇಸಗಾರನ್ನ ಸರ್ವೇದ್ದು
ಬರುವಾಗ ಗಿರೀಶನ ತೊಟ್ಟಿಲ ತೂಗಿರೆ
ಹುಲಿಯ ಉಗರದ ಮೇಲೆ ಕೊರಳ ಪಾದಕದಲ್ಲಿ
ತರುಳನ ತೊಟ್ಟಿಲ ತೂಗಿರೆ | ತರುಳನ ತೊಟ್ಟಿಲ
ಪುರಂದರ ವಿಠ್ಠಲನ | ಸ್ವಾಮಿಯ ತೊಟ್ಟಿಲ ತೂಗಿರೆ

ತಾಯಂದಿರು ಮಕ್ಕಳನ್ನು ಆಡಿಸುವ ಸಂದರ್ಭದಲ್ಲಿ ಹಾಡುವ ಅಕ್ಕರೆಯ ಹಾಡುಗಳು

೧.       ಆಡಿ ಬಾ ನನಕಂದ ಅಂಗಾಲ ತೊಳದೆನ
ತೆಂಗಿನ ಕಾಯಿ ತಿಳಿನೀರ ತಕ್ಕೊಂಡ | ನಿನ
ಬಂಗಾರ ಮೋರೆ ತೊಳೆದೆನು

೨.       ಹಾಲಕುಡದ ಬೆಕ್ಕ ಬೂದ್ಯಾಗ ಮಲಗೈತಿ
ಬೆಳ್ಳಂತ ಕಣ್ಣ ತಗದೈಲೆ
ಬೆಳ್ಳಂತ ಕಣ್ಣ ತಗೆದೈತಿ ನನ್ನ ಮಗನ
ಆಡುನ ಬಾ ಎಂದು ಕರದೈತಿ

೩.       ನನ್ನ ಮಗ ಎಂದರ ಸೂರ್ಯ ಚಂದಿರ
ಅಂದದೊಳಗ ಅಂದ ಚಂದ|

ಹೀಗೆ ಹಲವಾರು ರೀತಿಯಲ್ಲಿ ಹಾಡುತ್ತ ಹೇಳುತ್ತಾಳೆ

ಮುರುಕು ತೊಟ್ಟಿಲಕೊಂಡು ಹರಕು ಚಾಪೆಯ ಹಾಸಿ ಅರಚು ಪಾಪನ ಮಲಗಿಸಿ| ಅವರಕ್ಕ ಕಲಕೇತ ಹಾಡಿ ಹಿಗ್ಗ್ಯಾಳ.