ಆಚರಣೆ ಎಂದರೆ ಆಚರಿಸುವುದು, ಅನುಸರಿಸುವುದು. ಸಂಪ್ರದಾಯದಂತೆ ನಡೆಯುವುದು ಎಂದು ಅರ್ಥೈಸಬಹುದು. ಮನುಷ್ಯನು ಆಗೋಚರವಾದ ದೈವ ಶಕ್ತಿಗಳ ಪ್ರೀತಾರ್ಥವಾಗಿ ನಡೆಸುವ ಮತಾ ಚಾರಗಳು ಮತ್ತು ಕರ್ಮವಿಧಿಗಳನ್ನು ಆಚರಣೆಗಳೆಂದು ಕರೆಯುವರು. ಇವು ತಲಾ ತಲಾಂತರದಿಂದ ಸಮಾಜದ ಅಂಗೀಕಾರವನ್ನು ಪಡೆದು ಬಳಕೆಯಲ್ಲಿರುವಂತಹ ಮಾಟ-ಮಂತ್ರ ಮತ್ತು ಧಾರ್ಮಿಕ ವಿಧಿ-ವಿಧಾನಗಳನ್ನು ಜನಪದ ಆಚರಣೆಗಳೆನ್ನಬಹುದು.

ನಂಬಿಕೆ ಮತ್ತು ಆಚರಣೆಗಳು ಧರ್ಮದ ಎರಡು ಅಂಗಗಳೆನ್ನಬಹುದು. ನಂಬಿಕೆಯು ಒಂದು ಮಾನಸಿಕ ಕಲ್ಪನೆ. ಅದರ ಕ್ರಿಯಾತ್ಮಕ ರೂಪವೇ ಆಚರಣೆ.

ನಿರ್ಧಿಷ್ಟ ಸಮಾಜದಲ್ಲಿ ನಿರ್ಧಿಷ್ಟ ಸಮಯದಲ್ಲಿ ಒಂದು ಜಾತಿ ಮತ್ತು ಉಪ ಜಾತಿಗಳಲ್ಲಿ ಬಳಕೆಯಲ್ಲಿರುವ ಆಚರಣೆಗಳ ಹುಟ್ಟಿಗೆ ಪ್ರಬಲ ಕಾರಣಗಳು ಇರಲೇಬೇಕು. ಅದು ಆರ್ಥಿಕ, ಸಾಮಾಜಿಕ, ಭಾವನಾತ್ಮಕ ಹೀಗೆ ಏನಾದರೂ ಆಗಿರಬಹುದು. ಒಬ್ಬ ವ್ಯಕ್ತಿ ಇಷ್ಟಪಟ್ಟು ಒಂದು ಆಚರಣೆಯನ್ನು ಮಾಡಲು ಸಾಧ್ಯವಿಲ್ಲ. ಒಂದು ಸಮುದಾಯದ ಜೀವನ ವಿಧಾನದ ಬೇಕು-ಬೇಡಿಕೆಗಳ ಅಂಗವಾಗಿ ಆಚರಣೆ ರೂಪು ಪಡೆಯುತ್ತದೆ. ಪ್ರಕೃತಿಯಲ್ಲಿ ಮಾನವನ ದೇಹದಲ್ಲಿ ಉಂಟಾಗುವ ಬದಲಾವಣೆಗಳನ್ನು ಆಚರಣೆಗಳ ಮೂಲಕ ಗುರುತಿಸಬಹುದು. ಮಾನವನ ಬದುಕಿಗೆ ಮತ್ತು ಅವನ ಭಾವ ಪ್ರಪಂಚಕ್ಕೆ ಸಂಬಂಧಿಸಿದ ಆಚರಣೆಗಳು ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಆಚರಣೆಗಳು ನೈಸರ್ಗಿಕ ಕ್ರಿಯೆಗಳಿಗೆ ಸಂಬಂಧಿಸಿದ ಆಚರಣೆಗಳು. ಸಾಮಾಜಿಕ ರಚನೆಗಳಿಗೆ ಸಂಬಂಧಿಸಿದ ಆಚರಣೆಗಳೆಂದು ಇದನ್ನು ಸ್ಥೂಲವಾಗಿ ವಿಂಗಡಿಸಬಹುದು.

ದೈವಕ್ಕೆ ಸಂಬಂಧಿಸಿದ ಆಚರಣೆಗಳನ್ನು ಜನಪದರು ದಿನಕ್ಕೊಂದು ಸಾರಿ, ವಾರಕ್ಕೊಂದು ಸಾರಿ, ತಿಂಗಳಿಗೊಂದು ಸಾರಿ, ವರ್ಷಕ್ಕೊಂದು ಸಾರಿ ಒಂದು ದೇವತೆಯ ಆರಾಧನೆಯ ಹಿನ್ನೆಲೆಯಲ್ಲಿ ಆಚರಿಸುತ್ತಾರೆ. ಹೀಗೆ ಸಕಲ ಪೂರ್ವ ಸಿದ್ಧತೆಗಳೊಂದಿಗೆ ಆಗುವ ಹಬ್ಬ-ಹರಿದಿನ, ತಿಥಿ-ಮತಿಗಳು ಅನೇಕ ಆಚರಣೆಗಳ ಮೊತ್ತವಾಗಿವೆ.

ಆಚರಣೆಗಳನ್ನು ದೈನಿಕಾವರ್ತನದ ಆಚರಣೆಗಳು ಮತ್ತು ವಾರ್ಷಿಕಾವರ್ತನದ ಆಚರಣೆಗಳು, ಜೀವನಾವರ್ತನದ ಆಚರಣೆಗಳು ಎಂದು ಮೂರು ರೀತಿಯಲ್ಲಿ ವಿಂಗಡಿಸಬಹುದು.

ವರ್ಷವಿಡೀ ಒಂದಲ್ಲಾ ಒಂದು ಸಂದರ್ಭದಲ್ಲಿ ಆಚರಿಸುವ ಆಚರಣೆಗಳನ್ನು ವಾರ್ಷಿಕಾವರ್ತನದ ಆಚರಣೆಗಳೆಂದು ಕರೆಯಬಹುದು. ಈ ರೀತಿಯಾಗಿ ಆಚರಿಸುವಂತಹ ಆಚರಣೆಗಳನ್ನು ಬೆಳಗಾವಿ ಜಿಲ್ಲೆಯ ಅಥಣಿ ಪರಿಸರದಲ್ಲಿ ವೀರಶೈವರು, ಬ್ರಾಹ್ಮಣರು, ಕಮ್ಮಾರರು, ಕುಂಬಾರರು, ಬಡಿಗೇರು, ಅಕ್ಕಸಾಲಿಗರು, ಕುರುಬರು, ಮುಸ್ಲಿಂರು ನಾಯಕರು, ಹರಿಜನ-ಗಿರಿಜನರು ಎಲ್ಲರು ತಮ್ಮ ತಮ್ಮ ಮತಕ್ಕೆ ಅನುಗುಣವಾಗಿ ಆಚರಿಸುತ್ತಾ ಬಂದಿದ್ದಾರೆ. ಕೆಲವೊಮ್ಮೆ ಎಲ್ಲಾ ಮತದವರು ಯಾವುದೇ ಒಂದು ಆಚರಣೆಯನ್ನು ಒಟ್ಟಾಗಿಯೂ ಆಚರಿಸಬಹುದು. ಉದಾ : ಅಥಣಿಯ ಸಿದ್ದೇಶ್ವರ ಸ್ವಾಮಿಗೆ ಸಂಬಂಧಿಸಿದ ಜಾತ್ರೆ-ಉತ್ಸವದಂತಹ ಕಾರ್ಯಕ್ರಮದಲ್ಲಿ ಅಥಣಿಯವರಷ್ಟೇ ಅಲ್ಲದೆ ಸುತ್ತಮುತ್ತಲಿನ ಊರುಗಳ ಎಲ್ಲಾ ಮತ-ವರ್ಗದ ಜನರು ಪಾಲ್ಗೊಂಡು ಆಚರಣೆಗಳನ್ನು ಮಾಡುತ್ತಾರೆ. ಎಲ್ಲಾ ಮತದ ಮನೆಗಳಲ್ಲಿಯೂ ಹೋಳಿಗೆಯ ಊಟವನ್ನು ಈ ರಥದ ದಿನ ಮಾಡಿರುತ್ತಾರೆ. ಆದಾಗ್ಯೂ ಆವರ್ತನದ ಆಚರಣೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ವಾರ್ಷಿಕ ಹಾಗೂ ಜೀವನಾವರ್ತನಗಳು ಸಂಸ್ಕೃತಿಯ ಮೂಲವಾಗಿವೆ. ಶಿಷ್ಟವು ಇದರಿಂದ ರೂಪುಗೊಳ್ಳುತ್ತದೆ. ಅಂದರೆ ಸಂಸ್ಕೃತಿಯು ಇವುಗಳಿಂದ ರೂಪುಗೊಳ್ಳುತ್ತದೆ. ಈ ಎರಡೂ ಆವರ್ತಗಳು ಸಂಸ್ಕೃತಿಯನ್ನು ಪ್ರಕಾಶಮಾನವನ್ನಾಗಿಸಲು ದುಡಿಯುತ್ತವೆ. ಈ ಆವರ್ತಗಳು ಎಲ್ಲಿ ಸಂಧಿಸುತ್ತವೆಯೋ ಅಲ್ಲಿ ಸಂಸ್ಕೃತಿಯ ಮೂಲ ದ್ರವ್ಯ ಉಂಟಾಗುತ್ತದೆ. ವಾರ್ಷಿಕಾವರ್ತನದ ಕಾಲದಲ್ಲಿ ಪರಿವರ್ತನೆಯು ಬಹಳ ಮಟ್ಟಿಗೆ ಮಳೆ-ಬೆಳೆಗಳನ್ನು ಆಧರಿಸಿಕೊಂಡಿವೆ. ಇದು ಕಾಲದಿಂದ ಕಾಲಕ್ಕೆ ಬದಲಾಗುವ ಋತುಮಾನಗಳನ್ನು ಅವಲಂಭಿಸಿದ್ದು, ಉತ್ಪಾದನಾ ವಿಧಾನಗಳೊಂದಿಗೆ ನೇರ ಸಂಬಂಧ ಹೊಂದಿದೆ. ಆಹಾರ ಧಾನ್ಯಗಳನ್ನು ಬೆಳೆಸುವ; ಆರ್ಥಿಕ ಮಟ್ಟವನ್ನು ಎತ್ತರಿಸುವ ವ್ಯವಹಾರಿಕವಾದ ರೀತಿ ನೀತಿಗಳನ್ನು ಅದು ಒಳಗೊಳ್ಳುತ್ತದೆ.

ಹೀಗೆ ಋತುಮಾನಗಳಿಗೆ ಹೊಂದಿಕೊಂಡು ವರ್ಷವೊಂದರಲ್ಲಿ ಆವರ್ತನಗೊಳ್ಳುವ ಕೃಷಿ ಆಧಾರಿತ ಹಾಗು ದೈವಗಳ ಆಧಾರಿತ ಆಚರಣೆಗಳನ್ನು ವಾರ್ಷಿಕಾವರ್ತನದ ಆಚರಣೆಗಳು ಎಂದು ಕರೆಯಬಹುದು.

ವಾರ್ಷಿಕಾವರ್ತನಗಳು ಆಯಾ ಭೂ ಪ್ರದೇಶದ ವಾತಾವರಣಕ್ಕೆ ತಕ್ಕಂತೆ ಬೆಳೆಯುವ ಧವಸ – ಧಾನ್ಯಗಳಿಗನುಗುಸಾರವಾಗಿ ವಿವಿಧ ರೂಪವನ್ನು ಪಡೆಯುತ್ತವೆ. ಬಯಲು ಸೀಮೆಯಲ್ಲಿ ಜೋಳ, ರಾಗಿ, ಮುಂತಾದ ಬೆಳೆಯನ್ನು ಬೆಳೆಯುತ್ತಾರೆ. ಕಾರಣ ಅವುಗಳನ್ನು ಕೊಯ್ಲು ಮಾಡಿ ರಾಶಿ ಮಾಡುವ ಸಂದರ್ಭದಲ್ಲಿ ಅಲ್ಲಿ ಆಚರಿಸುವ ವಿಧಾನವೇ ಬೇರೆ. ಇನ್ನೊಂದೆಡೆ ಭತ್ತ, ಕಬ್ಬು, ದಾಕ್ಷಿ ಇನ್ನಿತರೆ ಬೆಳೆಗಳನ್ನು ಬೆಳೆಯುತ್ತಾರೆ. ಆ ಫಸಲು ಬಂದಾಗ ಆಚರಿಸುವ ವಿಧಾನವೇ ಬೇರೆ.

ಒಟ್ಟಿನಲ್ಲಿ ರೈತಾಪಿ ಜನರು ಹೊಲಗದ್ದೆಗಳ ಪೈರು ತೆನೆಯಾಗಿ ನಿಂತಾಗ ಅಥಣಿ ಪರಿಸರದಲ್ಲಿನ ಜನರು ಅದರಲ್ಲಿಯೂ ವಾಲ್ಮೀಕಿ ಸಮುದಾಯದವರು ಬೆಳೆದು ನಿಂತ ಪೈರನ್ನು ಚರುಗ ಚೆಲ್ಲುವುದರ ಮುಖಾಂತರ ಪೂಜಿಸಿ ಕಟಾವು ಮಾಡುತ್ತಾರೆ. ಈ ಪರಿಸರದಲ್ಲಿ ದೀಪಾವಳಿಯ ಹಬ್ಬವನ್ನು ವಿಶೇಷವಾಗಿ ಕೃಷಿ ಕಾರ್ಮಿಕರು, ಜಾನುವಾರುಗಳನ್ನು ಪೂಜಿಸಿ ಹಟ್ಟಿ ಹಾಕುವುದರ ಮುಖಾಂತರ ಆಚರಿಸುತ್ತಾರೆ. ಇದಕ್ಕೆ ಈ ಭಾಗದಲ್ಲಿ ಹಟ್ಟಿ ಹಬ್ಬ ಎಂತಲೇ ಕರೆಯುತ್ತಾರೆ.

ಈ ಬಾಗದ ವಾಲ್ಮೀಕಿ ಸಮುದಾಯದ ಜನರು ಬೆಳೆಗಳು ಕೈಗೆ ಬಂದ ಸಮಯದಲ್ಲಿ ಇದನ್ನು ಒಂದು ಸಮೃದ್ದಿಯ ಕಾಲವೆಂದು ಕರೆದಿದ್ದಾರೆ. ಈ ಸಂಮೃದ್ದಿಯು ಜೀವನಾವರ್ತನವನ್ನು ಪ್ರಭಾವಿಸಿ ಬಗೆ-ಬಗೆಯ ಕುಣಿತ, ಹಾಡು, ಆಟ-ಪಾಠಗಳನ್ನು ಉಂಟು ಮಾಡುತ್ತದೆ. ಚೆಂಡು, ಕರ್ಬೊಲು, ಭೂತ ಕುಣಿತ, ಹೌಂದ್ರಾಯನ ವಾಲ್ಗ, ಸಿದ್ದವೇಷಗಳು ಇಲ್ಲಿ ವಿಶೇಷವಾಗಿ ನಡೆಯುತ್ತವೆ. ಮದುವೆ, ಗೃಹ ಪ್ರವೇಶ ಮೊದಲಾದ ಆಚರಣೆಗಳಿಗೆ ಇಂತಹ ಸಮಯಗಳು ಪ್ರಸಕ್ತ ಎಂತಲೂ ತಿಳಿದು ಕಾರ್ಯಗಳನ್ನು ನಿರ್ವಹಿಸುತ್ತಾರೆ.

ಶಿಶು ಜನನ, ಮೈನೆರೆಯುವಿಕೆ, ಮದುವೆ ಮುಂತಾದುವುಗಳಿಗೆ ಸಮೃದ್ದಿಯ ಕಾಲವು ಪ್ರಸಕ್ತ ಕಾಲವೆಂಬ ನಂಬಿಕೆಗಳು ಇವೆ. ಇದಕ್ಕೆ ವೈರುಧ್ಯವಾಗಿ ಮಳೆಗಾಲದ ಆಷಾಢದ ತಿಂಗಳನ್ನು ಗಮನಿಸಬಹುದು. ಬೇಸರ ತರಿಸುವ ಧಾರಾಕಾರ ಮಳೆ, ತಿನ್ನಲು ಉಣ್ಣಲು ಏನೂ ಇಲ್ಲದ ಬರಡು ಕಾಲ, ಒಳಗೆ ಶೀತ, ನೆಗಡಿ ಜ್ವರದಂತಹ ಅನಿಷ್ಟ ಕಾಯಿಲೆಗಳು, ಸಮೃದ್ಧವಾಗಿರುವ ಈ ಸಮಯದಲ್ಲಿ ಉಲ್ಲಾಸ, ಉತ್ಸಾಹ ಇರುವುದಿಲ್ಲ. ಸಂತೋಷದ, ಸಂಭ್ರಮದ ಕಾರ್ಯಕ್ರಮಗಳು ಇರುವುದಾದರೂ ಹೇಗೆ? ಯಾವ ಶುಭ ಶೋಭನಾದಿಗಳು ನಡೆಯುವುದಿಲ್ಲ. ನಾಡಿನ ದುರಂತವನ್ನು ಓಡಿಸುವ ಮಾಂತ್ರಿಕ ಆಟಕಾಳಂಜನ ಆಚರಣೆಯನ್ನು ಆ ಸಂದರ್ಭದಲ್ಲಿ ಕಾಣಬಹುದು.

ಹೀಗೆ ನಮ್ಮ ಸಂಸ್ಕೃತಿಯು ರೂಪುಗೊಳ್ಳುವುದರಲ್ಲಿ ಹವಾಮಾನ; ಬೆಳೆಯುವ ಬೆಳೆ; ಕುಟುಂಬ ರಚನೆ, ಜಾತಿ, ಎಲ್ಲವೂ ಪಾಲ್ಗೊಳ್ಳುತ್ತವೆ. ಆ ಮೂಲಕ ವಾರ್ಷಿಕಾವರ್ತನ ಗಳನ್ನು ರೂಪಿಸುತ್ತವೆ. ಜಗತ್ತಿನ ಬೇರೆ ಬೇರೆ ಕಡೆ ಇಂಥ ಆಚರಣೆಗಳು ರೂಪುಗೊಂಡಿವೆ. ಇದಕ್ಕೆ ಅಥಣಿ ಪರಿಸರವು ಹೊರತಲ್ಲ.

ಅಥಣಿ ಪರಿಸರದೊಳಗೆ ವಾಲ್ಮೀಕಿ ಸಮುದಾಯವು ಬಹಳ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದರೂ, ಬೇಡರಹಟ್ಟಿ ಎನ್ನುವ ಗ್ರಾಮವು ನೂರಕ್ಕೆ ತೊಂಭತ್ತರಷ್ಟು ಜನ ಸಂಖ್ಯೆಯನ್ನು ಹೊಂದಿದ್ದು, ಈ ಗ್ರಾಮಕ್ಕೆ ಬೇಡರ ಹಟ್ಟಿ ಎಂದೇ ಹೆಸರು. ಇನ್ನು ರಡ್ಡೇರಹಟ್ಟಿ ಎನ್ನುವ ಗ್ರಾಮದಲ್ಲಿ ನೂರಕ್ಕೆ ಐವತ್ತರಷ್ಟು ಜನಸಂಖ್ಯೆಯನ್ನು ವಾಲ್ಮೀಕಿ ಸಮುದಾಯವು ಹೊಂದಿದೆ. ಅಲ್ಲದೆ, ಅವರಕೋಡು ಇಲ್ಲಿನ ಆರಾಧ್ಯ ದೈವ. ಅವರ ಕೋಡು ಆಂಜನೇಯ. ಹಾಗೆಯೇ ಕೋಹಳೀ, ಶೇಡಬಾಳು, ನಂದೀಶ್ವರ, ಸಪ್ತಸಾಗರ, ರಾಮತೀರ್ಥ, ಕೊಟ್ಟಲಗಿ, ಕೊಕಟನೂರು, ಕಟಗೇರಿ, ಸಂಕ್ರಟ್ಟಿ, ಸಂಕೋನಹಟ್ಟಿ. ಈ ರೀತಿ ಹಟ್ಟಿ ಎಂದು ಕರೆಯಿಸಿಕೊಳ್ಳುವ ಹಳ್ಳಿಗಳಲ್ಲಿ ಬಹುತೇಕ ವಾಲ್ಮೀಕಿ ಸಮುದಾಯದ ವರು ಕಾಣಬರುತ್ತಿದ್ದು, ಇವರುಗಳ ಆರಾಧ್ಯ ದೈವ ಆಂಜನೇಯ; ರೇಣುಕಾದೇವಿ; ಯಲ್ಲಮ್ಮ; ದುರುಗಮ್ಮ ಇತ್ಯಾದಿ.

ಅಲ್ಲದೇ ಈ ಪರಿಸರದ ವಾಲ್ಮೀಕಿ ಸಮುದಾಯದವರು ಇತರೆ ಸಮುದಾಯ ದವರೊಂದಿಗೆ ಸಾಮರಸ್ಯವನ್ನು ಹೊಂದಿದ್ದು ಅಥಣಿಯ ಅದಿದೇವತೆಯಾದ ಸಿದ್ದೇಶ್ವರ ಸ್ವಾಮೀಜಿಯ ರಥೋತ್ಸವದಂತಹ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಭಾಗವಹಿಸುತ್ತಾರೆ. ಹಾಗೂ ಶ್ರೀ ಮುರುಘರಾಜೇಂದ್ರ ಶಿವಯೋಗಿಗಳ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ. ಕಾರಣ ವಾರದ ಎಲ್ಲಾ ವಾರಗಳು ಇವರಿಗೆ ಪ್ರಮುಖ ವಾರಗಳಲ್ಲಿ ಕಂಡುಬರುತ್ತವೆ. ಸೋಮವಾರ ಶಿವಯೋಗಿಗಳಿಗೆ, ಶನಿವಾರ ಆಂಜನೇನಿಗೆ, ಗುರುವಾರ ರಾಘವೇಂದ್ರ ಸ್ವಾಮಿಗೆ, ಮಂಗಳವಾರ, ಶುಕ್ರವಾರ ಮಹಾಲಕ್ಷ್ಮೀ, ದುರುಗಮ್ಮ, ಯಲ್ಲವ್ವರಂತಹ ದೇವತೆಗಳಿಗೆ ನಡೆದುಕೊಳ್ಳುತ್ತಾರೆ. ಅಥಣಿ ಪರಿಸರವು ಧಾರ್ಮಿಕ ಪರಂಪರೆಯುಳ್ಳ ಪ್ರದೇಶವಾಗಿರುವುದರಿಂದ ಎಲ್ಲಾ ಜಾತಿಯರು ಮೇಲು ಕೀಳು ಎನ್ನದೇ ದೇವರಲ್ಲಿ ಪೂಜೆ ಸಲ್ಲಿಸಿ ಆರಾಧಿಸುತ್ತಾರೆ.

ಆದಾಗ್ಯೂ ವಾಲ್ಮೀಕಿ ಸಮುದಾಯಕ್ಕೆ ಸಂಬಂಧಿಸಿದಂತೆ ವಾರ್ಷಿಕಾವರ್ತನದ ಆಚರಣೆಗಳನ್ನು ವಿವರಿಸುವುದಾದರೆ,

ದಿನಪ್ರತಿ : ಈ ಪರಿಸರದ ಪ್ರತಿಮನೆಯ ವಾಲ್ಮೀಕಿ ಜನಾಂಗದ ಹಿರಿಯರು ಹಲ-ಕೆಲ ಕಿರಿಯರು ಬೆಳಿಗ್ಗೆ ಸ್ನಾನಾದಿಗಳನ್ನು ಮಾಡಿಕೊಂಡು ಆಯಾ ಗ್ರಾಮಗಳ ಆರಾಧ್ಯ ದೈವಕ್ಕೆ ಅಥವಾ ಆಂಜನೇಯನಿಗೆ ಇಲ್ಲವೆ ತಮ್ಮ ಮನೆಗಳಿಗೆ ಸಮೀಪವಾಗುವ ದೇವತೆಗಳಿಗೆ ಅರಿಷಿಣ-ಕುಂಕುಮ, ಅಕ್ಕಿ ಕಾಳು, ಕರ್ಪೂರ ತೆಗೆದುಕೊಂಡು ಹೋಗಿ ಪೂಜೆ ಮಾಡಿಕೊಂಡು ಬರುವುದು ಕಂಡುಬರುತ್ತದೆ. ಎದುರಿಗೆ ಅಥವಾ ದೇವಸ್ಥಾನದಲ್ಲಿ ಯಾರಾದರೂ ಮುತ್ತೈದೆಯರು ಬಂದರೆ ಅವರಿಗೂ ಕುಂಕುಮ ಕೊಡುವ ಪದ್ಧತಿಯೂ ರೂಢಿಯಾಗಿದೆ. ನಂತರವೇ ಮನೆಯ ಎಲ್ಲಾ ಕೆಲಸಕಾರ್ಯಗಳನ್ನು ಮಾಡುತ್ತಾರೆ.

ವಾರದ ಶ್ರೇಷ್ಠ ದಿನವೆಂದು ಈ ಜನರು ಶನಿವಾರ ಮತ್ತು ಮಂಗಳವಾರಗಳನ್ನು ಪರಿಗಣಿಸಿಕೊಂಡು ಬಂದಿದ್ದು, ಆಯಾ ದಿನವಂತೂ ಬಹಳಷ್ಟು ಮಡಿ-ಮೈಲಿಗೆಯಿಂದ ದೇವಾಲಯಕ್ಕೆ ಹೋಗಿ ಪೂಜಿಸಿಕೊಂಡು ಬರುತ್ತಾರೆ. ದೇವಸ್ಥಾನವನ್ನು ಸುತ್ತುವುದು, ದೀಪ-ಧೂಪಗಳನ್ನು ಅರ್ಪಿಸುವುದು ಇಲ್ಲಿನ ಜನರಲ್ಲಿ ಎದ್ದು ಕಾಣುತ್ತದೆ.

ಆಂಜನೇಯ ಸ್ವಾಮಿಗೆ ಮತ್ತು ಆಯಾ ಊರುಗಳಲ್ಲಿರುವ ದೇವತೆಗಳಿಗೆ ವಾರಕ್ಕೊಮ್ಮೆ ತೆಂಗಿನ ಕಾಯಿ ಆರ್ಪಿಸುವುದು, ಇನ್ನಿತರ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ.

ಪ್ರತಿ ಅಮವಾಸ್ಯೆ ಹುಣ್ಣಿಮೆಗೊಮ್ಮೆ ಮನೆಯನ್ನು ಸಾರಿಸಿ ಹೋಳಿಗೆಯನ್ನು ಮಾಡಿ ತಮ್ಮ ತಮ್ಮ ಆರಾಧ್ಯ ದೈವಕ್ಕೆ ನೈವೇದ್ಯವನ್ನು ಅರ್ಪಿಸಿ ಪೂಜೆ ಮಾಡುವರು. ಮನೆ ಮಂದಿಯೆಲ್ಲ ಶುಭ್ರವಾಗಿ ಉಡುಗೆಗಳನ್ನು ಧರಿಸಿ, ಹಬ್ಬದ ವಾತಾವರಣವೆಂಬಂತೆ ಕಾಣುವ ತೆರದಿ ಮನೆಯಲ್ಲಿ ಕಂಡುಬರುತ್ತಾರೆ.

ಇನ್ನು ಹಬ್ಬ-ಹರಿದಿನಗಳಲ್ಲಿ ಮಾನವನ ಜೀವನವನ್ನು ರೂಪಿಸುವಲ್ಲಿ ಸಂಸ್ಕೃತಿಯನ್ನು ಪೋಷಿಸುವಲ್ಲಿ ನಾಗರೀಕತೆಯನ್ನು ಬೆಳೆಸುವಲ್ಲಿ ಸಂಪ್ರದಾಯಾಚರಣೆಗಳಿಗೆ ವಿಶೇಷ ಮಹತ್ವವಿರುತ್ತದೆ. ಸಮಾಜವನ್ನು ಒಂದುಗೂಡಿಸುವ ಮತ್ತು ಮುಂದಕ್ಕೊಯ್ಯುವ ಶಕ್ತಿಪುಂಜಗಳಾಗಿವೆ. ಅವನ ನಡವಳಿಗಳು ಹಾಗೂ ವ್ಯವಹಾರಗಳು ಸಂಪ್ರದಾಯ ಬದ್ಧವಾಗಿಯೇ ಜರುಗುತ್ತದೆ. ಈ ಸಂಪ್ರದಾಯ ಮತ್ತು ನಂಬಿಕೆಗಳ ಕ್ರಿಯಾ ರೂಪಗಳೇ ಹಬ್ಬಗಳು. ಅವುಗಳ ಬೇರು ಮಾಟದಲ್ಲಿ ಅಡಗಿದೆ. ನಿಸರ್ಗಾರಾಧನೆಯಲ್ಲಿ ಪಸರಿಸಿದೆ.

ಪ್ರತಿಯೊಂದು ಯುಗದ ಜನರು ಆಯಾ ಕಾಲದ ಅಭಿರುಚಿ ಮನೋಧರ್ಮ ಗಳಿಗನುಸಾರವಾಗಿ, ತಮ್ಮ ತಮ್ಮ ಕಲ್ಪನೆಗಳಿಗನುಸಾರವಾಗಿ ಹಬ್ಬಗಳ ರೂಪ ಸ್ವರೂಪಗಳು ಮಾರ್ಪಾಡುಗಳನ್ನು ಮಾಡಿಕೊಂಡು ಬಂದಿದ್ದಾರೆ. ಹೊಸ ಹೊಸ ವಿಧಿ ನಿಷೇಧಗಳನ್ನು ಉಪಸನಾ ವಿಧಾನಗಳನ್ನು ಸೇರಿಸುತ್ತಾ ಬಂದಿದ್ದಾರೆ.

ನಿಸರ್ಗವನ್ನು ನಿಯಂತ್ರಿಸುವ ಮತ್ತು ದೇವರನ್ನು ಒಲಿಸಿಕೊಳ್ಳುವ ಸತತ ಪ್ರಯತ್ನಗಳ ಫಲವಾಗಿ ಹಬ್ಬಗಳು ಹುಟ್ಟು ಪಡೆದವು. ಹೀಗಾಗಿ ಹಲವು ಸಂಪ್ರದಾಯಗಳ ಒಟ್ಟು ಮೊತ್ತವೇ ಈ ಹಬ್ಬಗಳು. ಇಂತಹ ಹಬ್ಬಗಳು ಮತೀಯ; ಸಾಮಾಜಿಕ ರಾಷ್ಟ್ರೀಯ ಮತ್ತು ವೈಯಕ್ತಿಕವಾಗಿಯು ಜರುಗುತ್ತವೆ. ಆಯಾ ಮತದವರು ತಂತಮ್ಮ ಇಷ್ಟ ದೇವತೆಗಳ ಉತ್ಸವವನ್ನು ವಿದ್ಯುಕ್ತ ರೀತಿಯಲ್ಲಿ ವರ್ಷಕ್ಕೊಮ್ಮೆ ಆಚರಿಸುವುದು ವಾಡಿಕೆ. ಸಾಮಾನ್ಯವಾಗಿ ಪ್ರತಿವರ್ಷ ಸಾಮಾಜಿಕ ಕ್ಷೇಮಕ್ಕಾಗಿ ವಿಶೇಷ ಸಂದರ್ಭದಲ್ಲಿ ಆಚರಿಸುವ ಜನಪದ ಸಂಗತಿಗಳ ಮತ್ತು ಸಂಪ್ರದಾಯಗಳ ಸಮ್ಮಿಶ್ರ ಜಟಿಲ ಘಟಕವೇ ಹಬ್ಬವಾಗಿರುತ್ತದೆ. ಈ ನಿಟ್ಟಿನಲ್ಲಿ ಸಮುದಾಯದವರು ಮತ್ತು ನೆಂಟರು ಎಲ್ಲಾ ಸೇರಿ ಒಂದು ಕಡೆ ಕೂಡುವಾಗ ಮೈತ್ರಿ ಹಿಗ್ಗುತ್ತದೆ. ಭಾವೈಕ್ಯತೆ ಕುಸುಮಿಸುತ್ತದೆ. ವಿಚಾರ ವಿನಿಮಯ ಸುಲಭವಾಗುತ್ತದೆ. ‘‘ಬಂಧುಗಳ ದರ್ಶನ ಫಲಾಫಲ ಸಂಸಾರ ತರುವಿಂಗೆ’’ ಎನ್ನುವ ಸುಭಾಷಿತದಂತೆ ಬಂಧುಗಳ ನೆರವಿಯೇ ಹಬ್ಬವಾಗುತ್ತದೆ.

ಈ ಹಿನ್ನೆಲೆಯಲ್ಲಿ ಅಥಣಿ ಪರಿಸರದ ವಾಲ್ಮೀಕಿ ಸಮುದಾಯದವರು ಆಚರಿಸುವಂತಹ ಹಟ್ಟಿಗಳು. ಈ ಹಬ್ಬದಲ್ಲಿನ ಆಚರಣೆಗಳು ಆಯಾ ಗ್ರಾಮಗಳ ಗ್ರಾಮ ದೇವತೆಗೆ ಅನುಗುಣವಾಗಿ ನಡೆಸಿಕೊಂಡು ಬಂದಿದ್ದಾರೆ. ಈ ತಾಲೂಕಿನ ರಡ್ಡೇರ ಹಟ್ಟಿ, ಬೇಡರ ಹಟ್ಟಿ, ಕೋಹಳ್ಳಿ, ಸಂಕೋನಹಟ್ಟಿ ಮುಂತಾದ ಸ್ಥಳಗಳಲ್ಲಿ ಈ ಜನರು ವನದ ಹುಣ್ಣಿಮೆಯ ದಿನ ಹನುಮನ ಜಯಂತಿಯನ್ನು ಬಹಳಷ್ಟು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಅನ್ನದಾಸೋಹ, ಪೂಜೆಗಳು ದಿನಾಲು ಬೆಳಿಗ್ಗೆ ಆ ದಿನಗಳಲ್ಲಿ ನಡೆಯುತ್ತದೆ. ಆಂಜನೇಯ ಸ್ವಾಮಿಗೆ ಆಭರಣಗಳನ್ನು ತೊಡಿಸಿ ತೊಟ್ಟಿಯೊಳಗೆ ಹಾಕಿ ನಾಮಕರಣ ಮಾಡುತ್ತಾರೆ. ಬೆಳಿಗ್ಗೆಯಿಂದ ಸಾಯಂಕಾಲ ನಾಲ್ಕು ಘಂಟೆಯ ತನಕವೂ ಈ ಕಾರ್ಯಕ್ರಮ ಜರುಗುತ್ತದೆ. ನಂತರ ದೀವಟಿಗೆ, ನಿಶಾನೆ, ನಗಾರಿಗಳನ್ನು ತೆಗೆದು ಕೊಂಡು ವಿಠೋಬನ ಪಾಲಿಕೆ; ದುರ್ಗಾದೇವಿ ಪಾಲಕಿಯನ್ನು ಊರಿನೆಲ್ಲೆಡೆ ಮೆರವಣಿಗೆ ಮಾಡುತ್ತಾರೆ. ಕಂಬಿ ಉತ್ಸವ ಎನ್ನುವ ಒಂದು ಉತ್ಸವವನ್ನು ಆಚರಿಸುತ್ತಾರೆ.

ಭಕ್ತರು ದೀಡು ನಮಸ್ಕಾರ ಹಾಕುತ್ತಾರೆ. ಇನ್ನು ಯುಗಾದಿಯ ಸಂದರ್ಭ, ಮಹಾನವಮಿ; ದೀಪಾವಳಿ ಸಂದರ್ಭದಲ್ಲಿ ವಿಶೇಷ ಆಚರಣೆಗಳನ್ನು ಮಾಡುತ್ತಾರೆ.

ಯುಗಾದಿಯ ನಂತರದ ದಿನ ಓಕುಳಿಯನ್ನು ಗಂಡು ಮತ್ತು ಹೆಣ್ಣು ಮಕ್ಕಳು ಸೇರಿ ಎರಚಾಡುತ್ತಾರೆ. ನಂತರ ಯುಗಾದಿಯ ಬ್ಯಾಟಿಗೆಂದು ಊರಿನ ನಾಯಕ ಸಮುದಾಯದ ಪುರುಷರು ಅಡವಿಗೆ ಹೋಗಿ ಬೇಟೆಯಾಡಿಕೊಂಡು ಬರುತ್ತಾರೆ. ಆ ಸಂದರ್ಭದಲ್ಲಿ ನಾಟಕ ಪ್ರದರ್ಶನ ಕಡ್ಡಾಯವಾಗಿ ಮಾಡುತ್ತಾರೆ. ಪಾರಿಜಾತ, ಸಾವರಿಕೆ ಮುಂತಾದ ಪ್ರದರ್ಶನಗಳು ನಡೆಯುತ್ತವೆ. ದುರ್ಗಮ್ಮನ ಜಾತ್ರೆಯಲ್ಲಿ ವಿಶೇಷ ಪೂಜೆಯನ್ನು ನೆರವೇರಿಸುತ್ತಾರೆ.

ಕಾರ ಹುಣ್ಣಿಮೆಯ ದಿನ ಎತ್ತುಗಳಿಂದ ಕರಿ ಹರಿಸುವುದು, ನಂತರ ಕಾರಹುಣ್ಣಿಮೆಯ ಪ್ರಯುಕ್ತ ಬ್ಯಾಟಿಗೆ ಹೋಗುವುದು, ಎಳ್ಳ ಅಮವಾಸ್ಯೆ ದಿನದಂದು ಹೊಲಕ್ಕೆ ಹೋಗಿ ಚರಗ ಚೆಲ್ಲುವುದು, ಪಾಂಡವರನ್ನು ನಿರ್ಮಿಸಿ ಪೂಜೆ ಮಾಡಿಕೊಂಡು ಬರುವುದು ಇಲ್ಲಿಯ ಜನರ ವಾರ್ಷಿಕಾವರ್ತನದ ಆಚರಣೆಗಳಾಗಿವೆ. ಮಹಾನವಮಿಗೆ ಗಟ್ಟಿ ಹಾಕುವುದು. ಐದು ದಿನಸಿನ ಧಾನ್ಯಗಳನ್ನು ಒಟ್ಟಿಗೆ ಹಾಕಿ ಅವುಗಳನ್ನು ಸನೆ ಮಾಡಿ ಅದರಿಂದ ಕರಗ ಕಟ್ಟುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ.

ನಾಗರ ಪಂಚಮಿಯ ಸಂದರ್ಭದಲ್ಲಿ ಹುತ್ತಕ್ಕೆ ಹೋಗಿ ಹಾಲನೆರೆಯುವುದು. ವಿವಿಧ ಬಗೆಯ ಉಂಡಿಗಳನ್ನು ಮಾಡುವುದು. ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಈಶ್ವರ-ಬಸವಣ್ಣನ ಪೂಜೆಯನ್ನು ಉಪವಾಸದಿಂದ ಮಾಡುವುದು. ಒಟ್ಟಿನಲ್ಲಿ ಈ ಪರಿಸರದಲ್ಲಿ ಬರುವ ವಾಲ್ಮೀಕಿ ಸಮುದಾಯದವರು ಹತ್ತು-ಹಲವು ಬಗೆಯ ಆಚರಣೆಯನ್ನು ಮಾಡಿಕೊಂಡು ಬಂದಿದ್ದಾರೆ. ಈ ಜನರು ತಮ್ಮ ಮೂಲ ವೃತ್ತಿ ಬೇಟೆಯಾಡುವುದನ್ನು ಮಾತ್ರ ಇನ್ನೂತನಕವು ಮುಂದುವರಿಸಿಕೊಂಡು ಬಂದು ಉಳಿದ ಸಮುದಾಯಕ್ಕಿಂತ ವಿಶೇಷವಾದ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದಾರೆ.