ಜೀವನಾವರ್ತನವು ಮನುಷ್ಯನ ಹುಟ್ಟಿನಿಂದ ತೊಡಗಿ ಸಾವಿನಲ್ಲಿ ಕೊನೆ ಗೊಳ್ಳುತ್ತವೆ. ಇವುಗಳ ನಡುವೆ ಅನೇಕ ಸ್ಥಿತ್ಯಂತರದ ಹಂತಗಳಿರುತ್ತವೆ. ಇಂತಹ ಸಂದರ್ಭದಲ್ಲಿ ನಡೆಯುವ ಆಚರಣೆಗಳನ್ನು ಸ್ಥಿತ್ಯಂತರದ ಆಚರಣೆಗಳು ಅಥವಾ ಪರಿವರ್ತನೆಯ ವಿಧಿಗಳೆಂದು ಕರೆಯಬಹುದು. ಇಂತಹ ವಿಧಿ-ಆಚರಣೆಗಳು ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ ವ್ಯತ್ಯಾಸವಾಗುತ್ತ ಹೋಗುತ್ತವೆ. ಭಾರತೀಯ ಸಂದರ್ಭವನ್ನು ಗಮನಿಸಿ ಹೇಳುವುದಾದರೆ ಹೆಂಗಸರಲ್ಲಿ ಇಂತಹ ಸ್ಥಿತ್ಯಂತರ ಹಾಗೂ ಸ್ಥಿತ್ಯಂತರದ ವಿಧಿಗಳೇ ಹೆಚ್ಚು. ಹದಿಹರೆಯ, ಮೈನೆರೆಯುವಿಕೆ, ಮದುವೆ, ಸೀಮಂತ, ಹುಟ್ಟಿನ ಆಚರಣೆ, ಸಾವಿನ ಆಚರಣೆ ಹೀಗೆ ವೈವಿಧ್ಯಮಯ ಆಚರಣೆಗಳೆಲ್ಲವೂ ಜೀವನಾವರ್ತನದ ಆಚರಣೆಗಳಾಗುತ್ತವೆ. ಸಮಾಜವು ಒಬ್ಬ ವ್ಯಕ್ತಿಯನ್ನು ಅಂಗೀಕರಿಸುವಂತೆ ಮಾಡುವಲ್ಲಿ ಈ ಜೀವನಾವರ್ತನದ ಆಚರಣೆಗಳು ನೆರವಾಗುತ್ತವೆ.

ಇಂತಹ ಜೀವನಾವರ್ತನದ ಆಚರಣೆಗಳು ಕರ್ನಾಟಕದ ಮಟ್ಟಿಗೆ ಪ್ರಾದೇಶಿಕವಾಗಿ ಬದಲಾವಣೆಯನ್ನು ಹೊಂದುತ್ತಾ ಬರುತ್ತವೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಈ ರೀತಿಯ ಆಚರಣೆಗಳು ವಿಭಿನ್ನ ರೀತಿಯಲ್ಲಿ ನಡೆಯುತ್ತವೆ. ಅಂತೆಯೇ ಅಥಣಿ ಪರಿಸರದ ವಾಲ್ಮೀಕಿ ಸಮುದಾಯದವರು ಆಚರಿಸುವ ಜೀವನಾವರ್ತನದ ಆಚರಣೆಗಳನ್ನು ಕುರಿತು ವಿವೇಚಿಸುವುದು ಇಲ್ಲಿನ ಮುಖ್ಯ ಉದ್ದೇಶ.

ಕರ್ನಾಟಕದ ಬಹುಭಾಗದಲ್ಲಿ ವಾಲ್ಮೀಕಿ ಸಮುದಾಯದವರು ವಾಸಿಸುತ್ತಾ ಬಂದಿದ್ದು, ಈ ಪರಿಸರದಲ್ಲಿ ವಾಲ್ಮೀಕಿ ಸಮುದಾಯವು ಬಹಳ ಕಡಿಮೆ ಪ್ರದೇಶದಲ್ಲಿ ದೊರೆಯುತ್ತಿದ್ದು ಕಡಿಮೆ ಸಂಖ್ಯೆಯ ಜನರು ವಾಸಿಸುತ್ತಾರೆ. ಅಥಣಿ ತಾಲೂಕಿನ ಬೇಡರ ಹಟ್ಟಿ; ರಡ್ಡೇರ ಹಟ್ಟಿ, ಶೇಡಬಾಳ, ಅಡಳ ಹಟ್ಟಿ; ಕೋಹಳ್ಳಿ ಮುಂತಾದ ಕೆಲಹಳ್ಳಿಗಳಲ್ಲಿ ಮಾತ್ರ ವಾಲ್ಮೀಕಿ ಜನಾಂಗದವರು ವಾಸಿಸುತ್ತಿದ್ದಾರೆ. ಇವರುಗಳ ಕುಲ ಕಸುಬು ಪಾರಂಪರಾಗತ ವಾಗಿ ನಡೆದುಕೊಂಡು ಬಂದಿರುವ ಬೇಟೆಯಾಡುವ ಪದ್ಧತಿಯಾಗಿದೆ. ಆದರೆ ಇಂದು ಈ ಜನರು ಕೂಡ ನಗರೀಕರಣದ ವಾಸನೆಗೆ ಒಳಗಾಗಿರುವುದರಿಂದ, ವೈಜ್ಞಾನಿಕವಾಗಿ ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ ಕಾಲಕ್ಕನುಗುಣವಾಗಿ ಈ ಸಮುದಾಯದ ಜನರು ವೃತ್ತಿಯಲ್ಲಿ ಬದಲಾವಣೆಯನ್ನು ಕಂಡುಕೊಂಡಿದ್ದು. ಒಕ್ಕಲಿಗರಂತೆ ಹೊಲ ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವನವನ್ನು ಸಾಗಿಸುವುದರ ಜೊತೆಗೆ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸುತ್ತಾ ಸರಕಾರಿ ಮತ್ತು ಸರಕಾರೇತರ ಕಛೇರಿಗಳಲ್ಲಿ ಕೆಲಸವನ್ನು ನಿರ್ವಹಿಸಿಕೊಂಡು ತಮ್ಮ ಜೀವನವನ್ನು ಮುನ್ನಡೆಸಿಕೊಂಡು ಬರುವುದಕ್ಕೆ ದಾರಿ ಮಾಡಿ ಕೊಡುತ್ತಿದ್ದಾರೆ. ಆದಾಗಲೂ ತಮ್ಮ ಕುಲದ ಕುಲಕಸುಬು ಆಗಿರುವಂತಹ ಬೇಟೆಯಾಡುವ ಕೆಲಸವನ್ನು ವಿನೋದಕ್ಕಾಗಿಯಾದರೂ ಹಬ್ಬ-ಹರಿದಿನಗಳಲ್ಲಿ ಮುಂದುವರಿಸಿಕೊಂಡು ಬಂದಿರುವುದನ್ನು ನಾವು ಕಾಣಬಹುದು.

ಅಥಣಿ ಪರಿಸರದಲ್ಲಿ ಹಲ ಕೆಲವು ಹಳ್ಳಿಗಳಲ್ಲಿ ವಾಸಿಸುತ್ತಿರುವ ವಾಲ್ಮೀಕಿ ಜನಾಂಗದವರ ಜೀವನಾವರ್ತನದ ಆಚರಣೆಗಳು ಒಂದೇ ನಮೂನೆಯವಾಗಿದ್ದುದು ಕ್ಷೇತ್ರಕಾರ್ಯದಿಂದ ತಿಳಿದುಬರುತ್ತಿದೆ. ಅವುಗಳಲ್ಲಿ ಮೊದಲಿಗೆ

ಹುಟ್ಟು : ಅಥಣಿ ಪರಿಸರದ ವಾಲ್ಮೀಕಿ ಸಮುದಾಯದಲ್ಲಿ ಯಾವುದೇ ಕುಟುಂಬದಲ್ಲಿ ಒಬ್ಬ ಸ್ತ್ರೀಯು ಮಗುವನ್ನು ಹೆರುವ ಸಂದರ್ಭದಲ್ಲಿ ಬಂಧು ಬಳಗದವರೆಲ್ಲರು ಮತ್ತು ಸೂಲಗಿತ್ತಿಯರು ಸೇರಿಕೊಂಡು ಆಕೆಗೆ ಮಕ್ಕಳನ್ನು ಹೆತ್ತ ಅನುಭವ ಇರುವ ಸ್ತ್ರೀಯರು ಮೊದಲಿಗೆ ಆಕೆಗೆ ತಿಳುವಳಿಕೆ ಹೇಳುವುದರ ಜೊತೆಗೆ ಧೈರ್ಯವನ್ನು ಕೊಡುತ್ತಿರುತ್ತಾರೆ. ಹೆರಿಗೆಯಾದ ನಂತರ ಗಂಡು ಮಗುವಾದರೆ ಪೇಡ ಹಂಚುತ್ತಾರೆ. ಹೆಣ್ಣು ಮಗು ಹುಟ್ಟಿದರೆ ಜಿಲೇಬಿಯನ್ನು ಹಂಚುತ್ತಾರೆ. ತದನಂತರ ಕೂಡಿದಂತಹ ಹೆಂಗಳೆಯರು ಮಗುವನ್ನು ಮತ್ತು ಬಾಣಂತಿಯನ್ನು ಸ್ನಾನ ಮಾಡಿಸಿ, ತಾವೂ ಕೂಡ ಸ್ನಾನ ಮಾಡಿ ಹೆರಿಗೆಯಾದ ಮನೆಯಲ್ಲಿನ ಸೀರೆಗಳನ್ನು ಉಟ್ಟುಕೊಂಡು ಉಡಿ ಅಕ್ಕಿ ಹಾಕಿಕೊಂಡು ಹೋಗುತ್ತಾರೆ.

ಈ ಸಂದರ್ಭದಲ್ಲಿ ಹೆರಿಗೆಯಾದ ಆ ಮನೆಗೆ ಸೂತಕ ಸಂಭವಿಸುತ್ತದೆ. ಇಂತಹ ಸೂತಕವನ್ನು ಮೂರನೇ ದಿನ ಹೊಲೆಯನ್ನು ತೆಗೆಯುವ ಕಾರ್ಯಕ್ರಮವೆಂದು ಆಚರಿಸು ವುದರ ಮುಖಾಂತರ ಮೈಲಿಗೆಯನ್ನು ಹೋಗಲಾಡಿಸುತ್ತಾರೆ. ನಂತರ ಐದನೆ ದಿನದಂದು ವಿಧಿ ಮುಂಡಿಯು ಮಗುವಿಗೆ ಹಣೆ ಬರಹವನ್ನು ಬರೆಯಲು ಬರುತ್ತಾಳೆಂದು ಈ ಜನರ ನಂಬುಗೆ. ಕಾರಣ ಈ ಸಮುದಾಯದವರು ಮನೆಯನ್ನೆಲ್ಲಾ ಸಾರಿಸಿ, ಸ್ವಚ್ಛಗೊಳಿಸಿ, ಮನೆಯಲ್ಲಿ ಪೂಜಾದಿಗಳನ್ನು ನೆರವೇರಿಸಿ, ಸಿಹಿ ಅಡುಗೆಯನ್ನು ಮಾಡಿ ದೇವರಿಗೆ ನೈವೇದ್ಯ ಮಾಡಿ, ಎಲ್ಲರೂ ಊಟ ಮುಗಿಸಿಕೊಂಡು ರಾತ್ರಿಯೆಲ್ಲಾ ಎಳವೆಯು (ವಿಧಿ ಮುಂಡಿ)  ಬಂದು ಹಣೆಬರಹ ಬರೆದು ಹೋಗುವವರೆಗೂ ಕಾಯುವುದು, ಅದಕ್ಕಾಗಿ ದೇವರ ಮನೆಯಲ್ಲಿ ಅಥವಾ ಬಾಣಂತಿಯ ಹೊರಸಿನ ಕೆಳಗೆ ಒಂದು ಮೊರದಲ್ಲಿ ಒಂದು ಕಲ್ಲನ್ನು ಇಟ್ಟು ಅದಕ್ಕೆ ಕುಂಚಿಗಿ ಹಾಕಿ; ಐದು ದೀಪಗಳನ್ನು ಹಚ್ಚಿ, ಕೇರು ಹರಳು ಮತ್ತು ಒಂದು ಸೂಜಿಯನ್ನು ಇಟ್ಟು ಪೂಜಿಸುತ್ತಾರೆ. ಹೀಗೆ ಬರಹವನ್ನು ಬರೆಯುತ್ತಾಳೆ ಎನ್ನುವ ನಂಬಿಕೆ. ಆ ದಿನ ಮನೆಯವರೆಲ್ಲ ತೆರೆದ ಬಾಗಿಲನ್ನು ಹಾಗೆಯೇ ತೆರೆದಿರುತ್ತಾರೆ. ಬಾಣಂತಿಯ ತಲೆದಿಂಬಿನ ಕೆಳಗೆ ನಿಂಬೆಹಣ್ಣು, ಕುಡುಗೋಲು ಇಟ್ಟಿರುತ್ತಾರೆ. ಕಾರಣ ಈಕೆಗೆ ಭಯವಾಗದಿರಲಿ ಎನ್ನುವುದು ಇವರ ತಿಳುವಳಿಕೆ. ವಿಶೇಷವೆಂದರೆ ಮಗುವು ಎಷ್ಟೇ ಅತ್ತರೂ ಕರೆದುಕೊಳ್ಳುವುದಿಲ್ಲವಂತೆ, ತಾಯಿಯೂ ಕೂಡ ಮಗುವನ್ನು ಕರೆದುಕೊಳ್ಳುವುದಿಲ್ಲವಂತೆ. ಕಾರಣ ಯಾರಾದರೂ ಎತ್ತಿಕೊಳ್ಳಲು ಹೋದರೆ ಸೆಟಿತಾಯಿ (ವಿಧಿಮುಂಡೆ) ಯು ಓಡಿ ಹೋಗುತ್ತಾಳೆ ಎನ್ನುವ ಭಯ. ಹಾಗಾಗಿ ರಾತ್ರಿಯೆಲ್ಲಾ ತೆರೆದ ಮನೆಯನ್ನು ತೆರೆದುಕೊಂಡೆ ಇರುವುದು ನಿಯಮ.

ಮಗು ಹುಟ್ಟಿದ ಒಂಭತ್ತನೆಯ ದಿನಕ್ಕೆ ಬಾಣಂತಿಯನ್ನು ಗಂಗಾ ಪೂಜೆಗೆಂದು ಬಾವಿಗೋ, ಹಳ್ಳಕ್ಕೋ ಕರೆದುಕೊಂಡು ಹೋಗಿ ಪೂಜೆ ಮಾಡಿಕೊಂಡು ಬರುತ್ತಾರೆ. ನಂತರದ ದಿನದಿಂದ ಬಾಣಂತಿಯು ಹೆರಿಗೆಯ ಕೋಣೆಯಿಂದ ಮನೆಯಲ್ಲೆಲ್ಲಾ ಓಡಾಡಿಕೊಂಡು ಮನೆಯ ಕೆಲಸ ಮಾಡಿಕೊಂಡು ಇರಬಹುದು. ಇನ್ನು ಹದಿನಾರನೆಯ ದಿನ ಅಥವಾ ತಿಂಗಳು ತುಂಬುವುದರೊಳಗೆ ಬಾಣಂತಿಯ ತವರು ಮನೆಯಲ್ಲಿಯೇ ಮಗುವಿಗೆ ನಾಮಕರಣ ಮಾಡುವುದು ರೂಢಿ. ಕಾರಣ ಈ ಕುಟುಂಬಕ್ಕೆ ಸಂಬಂಧಿಸಿದ ಎಲ್ಲಾ ಬಂಧು ಬಳಗದವರು, ಅಕ್ಕಪಕ್ಕದವರು ಅಲ್ಲದೆ ಕೂಸಿನ ಅಪ್ಪನ ತಂಗಿ ಇಲ್ಲವೆ ಅಕ್ಕ ಯಾರಾದರೂ ಸೇರಿ ಮಗುವಿಗೆ ನಾಮಕರಣ ಮಾಡುತ್ತಾರೆ. ಮೊದಲಿಗೆ ಮನೆಯ ದೇವರಾದ ಹನುಮಪ್ಪ, ದುರುಗವ್ವ, ಯಲ್ಲವ್ವ ಮುಂತಾದ ದೇವತೆಗಳ ಹೆಸರು ಕರೆದು ನಂತರ ಪ್ರೀತಿಯ ನಾಮವನ್ನು ಕರೆಯುತ್ತಾರೆ. ನಂತರ ಮೂರು ತಿಂಗಳಲ್ಲಿ ಅಥವಾ ಐದು ತಿಂಗಳಲ್ಲಿ ಮಗುವನ್ನು ಮತ್ತು ಬಾಣಂತಿಯನ್ನು ತಂದೆಯ ಮನೆಗೆ ಕಳುಹಿಸಿ ಕೊಡುತ್ತಾರೆ. ತೊಟ್ಟಿಲು-ಬಟ್ಟಲನ್ನು ಮಗುವಿಗೆ ಬಂಗಾರ-ಬೆಳ್ಳಿಯ ಸಾಮಾನುಗಳನ್ನು, ಅರಿವೆಯನ್ನು ಕೊಡಿಸಿ, ಮಗಳಿಗೆ ಹೊಸ ಸೀರೆ ಉಡುಸಿ ಉಡಿಅಕ್ಕಿ ಹಾಕಿ ಕಳಿಸಿ ಕೊಡುತ್ತಾರೆ. ಗಂಡನ ಮನೆಯಲ್ಲಿಯೂ ನಾಮಕರಣದ ಪದ್ಧತಿಯು ಅವರವರ ಸ್ಥಿತಿಗತಿಗನುಗುಣವಾಗಿ ನೆರವೇರುತ್ತದೆ. ಬಾಣಂತಿಯ ತಾಯಿಗೆ ಮತ್ತು ನಾಮಕರಣ ಮಾಡಿದ ಅತ್ತೆಯವರಿಗೆ ಹೊಸ ಸೀರೆ ಉಡಿಸುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಈ ದಿನದ ತನಕವೂ ಕೂಡ ಒಬ್ಬ ತಾಯಿ ಮಗುವಿಗೆ ಒಂದು ವೇಳೆ ಆಸ್ಪತ್ರೆಯಲ್ಲಿ ಜನ್ಮ ನೀಡಿದರೆ, ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ಎಲ್ಲಾ ನಿಯಮಗಳನ್ನು ಮಾಡುವುದು ರೂಢಿಯಾಗಿ ಬಂದಿದೆ.

ಋತುಮತಿಯಾದ ಸಂದರ್ಭ

ಅಥಣಿ ಪರಿಸರದಲ್ಲಿ ವಾಲ್ಮೀಕಿ ಸಮುದಾಯದಲ್ಲಿ ಬಾಲಕಿಯು ಋತುವತಿಯಾದರೆ ಅಥವಾ ಮೈನೆರೆದಂತಹ ಸಂದರ್ಭದಲ್ಲಿ ಆಕೆಯನ್ನು ವಾಸಸ್ಥಾನದಿಂದ ಪ್ರತ್ಯೇಕಿಸಲಾಗುತ್ತದೆ. ಮನೆಯ ಆಯದ ಹೊರಗೆ ಹಳೆಯ ಮರದ ಹಲಗೆಯ ಮೇಲೆ ಆಕೆಯನ್ನು ಕುಳ್ಳಿರಿಸುವುದು ಮೈನೆರೆದಂದಿನಿಂದ ಸ್ನಾನದವರೆಗೂ ಅಂದರೆ ಐದು ದಿನಗಳವರೆಗೆ ಆಕೆಗೆ ಸಂಕ್ರಮಣದ ಕಾಲಾವಧಿ. ಈ ಕಾಲಾವಧಿಯಲ್ಲಿ ಆಕೆಯ ಅಪ್ಪನ ತಂಗಿಯೋ ಅಥವಾ ಅಕ್ಕ ಯಾರಾದರೂ ಸರಿ ದಿನಾಲು ಅರಿಷಣ ಹಚ್ಚಿ, ತಲೆಗೆ ತುಪ್ಪ-ಹಾಲು ಹಾಕಿ ಬಿಸಿ ನೀರಿನ ಸ್ನಾನ ಮಾಡಿಸುತ್ತಾರೆ. ಈ ಸಂದರ್ಭದಲ್ಲಿ ಆಕೆಗೆ ವಿಶಿಷ್ಟ ಆಹಾರ ಕೊಡುತ್ತಾರೆ. ಕೆಲವು ವಿಧಿ-ನಿಷಿದ್ಧಗಳು ಆಕೆಗೆ ಇರುತ್ತವೆ. ಐದನೆಯ ದಿನ ಅಥವಾ ಒಂಭತ್ತನೆಯ ದಿನ ಸಮುದಾಯದ ಮುತ್ತೈದೆಯರೆಲ್ಲರೂ ನೀರು ಹಾಕಿ ಸ್ನಾನ ಮಾಡಿಸಿ, ಗಂಗಾಪೂಜೆ ಮಾಡಿಸಿ ಹೊಸ್ತಿಲು ಬರುವಿಕೆ ಅಂದರೆ ಮನೆಯಲ್ಲಿ ಪ್ರವೇಶ ಕಲ್ಪಿಸುತ್ತಾರೆ. ನಂತರ ದೇವಸ್ಥಾನದ ಭೇಟಿಯ ಮೂಲಕ ಆಕೆಯನ್ನು ಸಮಾಜದೊಳಗೆ, ಕರೆತರುವುದು ಒಂದು ಪದ್ಧತಿಯಾಗಿ ನಡೆದುಬಂದಿದೆ. ನಂತರದ ಹದಿನಾರನೆಯ ದಿನದವರೆಗೂ ಆಕೆಯನ್ನು ಶೃಂಗರಿಸಿ ಕೂಡಿಸಿ, ಮುತ್ತೈದೆಯರೆಲ್ಲ ಆರತಿ ಮಾಡುತ್ತಾರೆ. ವಿಶೇಷವೆಂದರೆ ಅಥಣಿ ಪರಿಸರದ ವಾಲ್ಮೀಕಿ ಸಮುದಾಯದಲ್ಲಿ ಹೆಣ್ಣು ಮಗುವಿಗೆ ಬಹಳಷ್ಟು ಮಟ್ಟಿಗೆ ಮೈನೆರೆಯುವುದಕ್ಕೆ ಮುನ್ನವೆ ಮದುವೆಯನ್ನು ಮಾಡುವುದು. ಹೀಗೆ ಮದುವೆಯಾದ ನಂತರ ಮೈ ನೆರೆದರೆ ಒಂಭತ್ತು ಅಥವಾ ಹದಿನಾರನೆಯ ದಿನದವರೆಗೂ ಆಕೆಯ ಜೊತೆಗೆ ಆಕೆಯ ಗಂಡನನ್ನು ಕೂಡ್ರಿಸಿ ಆರತಿ ಮಾಡುವುದುಂಟು. ೨೧ನೇಯ ಶತಮಾನದ ಈ ಸಂದರ್ಭದಲ್ಲಿ ಸಮುದಾಯದ ಜನರಿಗೆ ಕಾನೂನಿನ ಅರಿವು ಉಂಟಾಗಿ ಸ್ವಲ್ಪ ಮಟ್ಟಿಗೆ ಹೆಣ್ಣು ಮಕ್ಕಳಿಗೆ ಮದುವೆಯನ್ನು ಸ್ವಲ್ಪ ತಡ ಮಾಡಿ ಮಾಡುತ್ತಾರಾದರೂ ಬಹಳಷ್ಟು ಕುಟುಂಬಗಳಲ್ಲಿ ಇನ್ನೂ ಬಾಲ್ಯವಿವಾಹದಂತಹ ವಿವಾಹ ಪದ್ಧತಿಯು ಉಳಿದುಕೊಂಡು ಬಂದಿದೆ. ಹೀಗೆ ಆರತಿಯನ್ನು ಮಾಡುವುದರ ಜೊತೆಗೆ ಆಕೆಗೆ ಆಯರು ಮಾಡುವುದುಂಟು. ಅತ್ತೆಯಾದವರು ಹಸಿರು ಬಳೆ ತೊಡಿಸಿ ಸೀರೆ ಕುಪ್ಪಸನ್ನು ಆಯರು ಮಾಡುತ್ತಾರೆ. ಹಾಗೆಯೇ ನೀರನ್ನು ಹಾಕಿದ ಅತ್ತೆಯವರಿಗೂ ಅರಿವೆಯನ್ನು ಉಡುಗೊರೆಯಾಗಿ ಕೊಡುವುದು ರೂಢಿಯಂತೆ ನಡೆದು ಬಂದಿದೆ.

ಮದುವೆಯ ಸಂದರ್ಭ

ಹಿಂದಕ್ಕೆ ಭಾರತೀಯ ಪರಂಪರೆಯ ಹಿನ್ನೆಲೆಯಲ್ಲಿ ನಮ್ಮ ಯಾವುದೇ ಸಮುದಾಯ ಗಳು ಮದುವೆ ಎನ್ನುವ ಶುಭ ಕಾರ್ಯದಲ್ಲಿ ಐದು ದಿನಗಳ ಕಾಲ ಬಹಳಷ್ಟು ವಿಜೃಂಭಣೆಯಿಂದ ಆಚರಿಸುತ್ತಿದ್ದವು. ಈಗಲೂ ಕೆಲ ಸಮುದಾಯಗಳು ಕೆಲ ವರ್ಗದವರು ಈ ರೀತಿಯ ಐದು ದಿನಗಳ ಕಾಲ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನೆರವೇರಿಸುವುದುಂಟು. ಹಾಗೆಯೇ ಸಮಯದ ಅಭಾವವನ್ನು ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಹಲ-ಕೆಲವು ವಿವಾಹಗಳು ಒಂದೇ ದಿನದಲ್ಲಿ ಮುಗಿದು ಬಿಡುತ್ತವೆ.

ಅಲ್ಲದೆ ಅಥಣಿ ಪರಿಸರದಲ್ಲಿ ಯಾವುದೇ ಸಮುದಾಯವಾದರೂ ಸರಿ, ಮದುವೆಯ ವಿಷಯದಲ್ಲಿ ಬಹಳಷ್ಟು ಸರಳತೆಯನ್ನು ಸರಳತೆಯ ವಿಧಾನವನ್ನು ಕಂಡುಕೊಂಡಿದೆ. ಅಂದರೆ ‘‘ಯಾದಿಮೆ ಶ್ಯಾದಿ’’ ಎನ್ನುವ ಪದ್ಧತಿಯು. ಇದು ಮರಾಠಿ ಮೂಲದ್ದೆಂದು ತಿಳಿಯುತ್ತಿದ್ದರೂ, ಇವತ್ತಿನ ಈ ವೇಗದ ಸಂದರ್ಭದಲ್ಲಿ ಯಾವುದೇ ಸಮುದಾಯವು ಅನುಸರಿಸುವುದು ಸೂಕ್ತವೆನಿಸುತ್ತದೆ. ಅಂತೆಯೇ ಖರ್ಚು ಕಡಿಮೆ. ಬಂಧು-ಬಳಗದವರ ನಿರೀಕ್ಷೆ ಇಲ್ಲಿ ಇರುವುದಿಲ್ಲ. ಯಾರು ಬಂದರೂ ಸರಿಯೇ ಬರದಿದ್ದರೂ ಸರಿಯೇ. ಒಂದು ವೇಳೆ ಹತ್ತಿರದ ಸಂಬಂಧಿಕರು ನಮ್ಮನ್ನು ಮದುವೆಗೆ ಕರೆಯಲೇ ಇಲ್ಲವೆಂದು ಕೇಳಿದರೆ ಸುಲಭವಾಗಿ ಜಾರಿಕೊಳ್ಳಬಹುದು. ಕ್ಷಮಿಸಿ ಇದ್ದಕ್ಕಿದ್ದಂತೆ ‘ಯಾದಿಮೆ ಶ್ಯಾದಿ’ಯಾಗಿ ಹೋಯ್ತು ಎಂದು ಹೇಳಿದರೆ ಅದೆಷ್ಟೋ ಸಮಾಧಾನ ಕೇಳುಗರಿಗೆ. ಒಂದಿಷ್ಟು ಕೋಪವಿಲ್ಲ; ಮನಸ್ಸಿನಲ್ಲಿ ಎರಡಿಲ್ಲ. ಅಂದ ಹಾಗೆ ಈ ಎರೆಡು ರೀತಿಯ ವಿವಾಹದ ಸಂದರ್ಭಗಳು ವಾಲ್ಮೀಕಿ ಸಮುದಾಯದಲ್ಲಿ ಜಾರಿಯಲ್ಲಿರುವುದು ಕಂಡು ಬರುತ್ತದೆ.

ಮೊದಲಿಗೆ ಐದು ದಿನಗಳ ಮದುವೆಯ ಸಂದರ್ಭವನ್ನು ನೋಡಬಹುದು. ಇಂತಹ ಮದುವೆಗಳಲ್ಲಿ ಮದುವೆಯ ಮುನ್ನ ವಧು ಮತ್ತು ವರನ ಎರಡೂ ಕಡೆಯ ಮನೆ ಯಲ್ಲಿ ವಿವಿಧ ಶಾಸ್ತ್ರಗಳು ನಡೆಯುತ್ತವೆ. ವಧುವಿನ ಮನೆಯಲ್ಲಿ ಮದುವೆಯಾದರೆ ವರನು ಹೆಣ್ಣಿನ ಮನೆಯ ಚಪ್ಪರ ಪ್ರವೇಶ, ಹಾಗೆಯೇ ಗಂಡಿನ ಮನೆಯಲ್ಲಿ ಮದುವೆಯಾದರೆ, ವಧುವು ಗಂಡನ ಮನೆಯ ಚಪ್ಪರ ಪ್ರವೇಶ ಮಾಡಬೇಕಾಗುತ್ತದೆ. ಇಂತಹ ಐದು ದಿನಗಳ ವಿವಾಹ ಮಹೋತ್ಸವದಲ್ಲಿ ಮೊದಲ ದಿನದಂದು ಸಮುದಾಯದವರೆಲ್ಲ ಸೇರಿಕೊಂಡು ವರನ ಅಥವಾ ವಧುವಿನ ಮನೆಯ ಮುಂದೆ ಚಪ್ಪರ ಹಾಕುತ್ತಾರೆ. ಹಿರಿಯರೆಲ್ಲರು ಸೇರಿಕೊಂಡು ಚಪ್ಪರ (ಹಂದರ)  ಪೂಜೆಗೆ ವ್ಯವಸ್ಥೆ ಮಾಡುತ್ತಾರೆ. ಈ ಹಂದರದ ಪೂಜೆಯನ್ನು ಮನೆಯ ದೊಡ್ಡ ಅಳಿಯ ಹಾಗೂ ಹಿರಿಯ ಮಗಳು ಪೂರೈಸುತ್ತಾರೆ. ಇವರಿಗೆ ಹೊಸ ಉಡುಗೆಗಳನ್ನು ಉಡುಗೊರೆಯಾಗಿ ಕೊಡುವುದು ರೂಢಿ. ನಂತರ ಇವರೆ ಮನೆಯ ಹೊರಗೋಡೆಗೆ ಸುಣ್ಣದ ಮತ್ತು ಕೆಂಪು ಮಣ್ಣಿನ ಹಸ್ತಗಳನ್ನು ಒತ್ತುತ್ತಾರೆ. ಸುಣ್ಣದ ಮತ್ತು ಕೆಮ್ಮಣ್ಣಿನ ನೀರನ್ನು ಗೋಡೆಯಗುಂಟ ಸುರಿಯುತ್ತಾರೆ. ನಂತರ ಹೆಂಗಳೆಯರೆಲ್ಲ ಸೇರಿ ಒಳಕಲ್ಲು ಪೂಜೆ, ಬೀಸುವ ಕಲ್ಲಿನ ಪೂಜೆಯನ್ನು ನೆರವೇರಿಸುತ್ತಾರೆ. ಮಾರನೆಯ ದಿನ ಮನೆ ದೇವರ ಪೂಜೆಯು ನಡೆಯುತ್ತದೆ. ಸಿಹಿ ಅಡುಗೆಯನ್ನು ಮಾಡಿ, ಮದುವೆಗೆ ತಂದಂತಹ ಉಡುಗೆಗಳನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಆ ದಿನ ಬಂಧು-ಬಳಗದವರು ಸೇರಿಕೊಂಡು ಈ ಪೂಜಾ ಕ್ರಮವನ್ನು ನೆರವೇರಿಸುತ್ತಾರೆ. ಮೂರನೆಯ ದಿವಸ ವಧು-ವರರನ್ನು ಆಯಾ ಮನೆಯಲ್ಲಿ ಮಧುಮಕ್ಕಳನ್ನು ಮಾಡುವ ಪದ್ಧತಿ. ಈ ಮೊದಲೇ ಜ್ಯೋತಿಷಿಗಳಿಂದ ಮದುವೆಯ ಎಲ್ಲಾ ಶುಭಕಾರ್ಯಗಳು ಯಾವಾಗ ಹೇಗೆ ನಡೆಯಬೇಕು ಎಂಬುದನ್ನು ತಿಳಿದಿರುತ್ತಾರೆ. ಅಂತೆಯೇ ಯಾರಿಗೆ ಎಣ್ಣೆ ಬಲ, ಅರಿಷಣ ಬಲ, ನೀರಿನ ಬಲ ಬಂದಿದೆ ಎಂದು ತಿಳಿದು ಆ ಹೆಸರಿನವರು ಮಧು ಮಗ ಅಥವಾ ಮಧುಮಗಳಿಗೆ ಎಣ್ಣೆ ನೀರು, ಅರಿಷಣ ನೀರು ಹಾಕುವುದುಂಟು. ಕ್ಷೌರಿಕರಿಗೆ ಉಲುಪೆ ಮತ್ತು ದಕ್ಷಿಣೆಯನ್ನು ಮೊರದಲ್ಲಿಟ್ಟುಕೊಟ್ಟು ವರನಿಗೆ ಮುಖ ಕ್ಷೌರ ಮಾಡಿಸುತ್ತಾರೆ. ನಂತರ ಅರಿಷಣ ಹಚ್ಚಿ ನೀರನ್ನು ಹಾಕಿ ಸ್ನಾನ ಮಾಡಿಸುತ್ತಾರೆ. ಹೊಸ ಪಂಚೆ ಉಡುಸಿ ಮುಂಡಾಸು ಅಥವಾ ಟೊಪ್ಪಿಗೆ ಹಾಕುತ್ತಾರೆ. ನಂತರ ಬಾಸಿಂಗ ಬಿಗಿಯುತ್ತಾರೆ. ಅತ್ತ ವಧುವಿಗೂ ಅರಿಷಣ ಹಚ್ಚಿ ಸ್ನಾನ ಮಾಡಿಸಿ ಅಲಂಕಾರ ಮಾಡುತ್ತಾರೆ. ಈ ಸಂದರ್ಭ ದಲ್ಲಿ ಹೆಂಗಳೆಯರು ಶೋಬಾನೆಯ ಹಾಡುಗಳನ್ನು ಹಾಡುತ್ತಿರುತ್ತಾರೆ. ಆ ದಿನವೇ ಸಾಯಂಕಾಲದ ಸಮಯಕ್ಕೆ ಬೀಗರನ್ನು (ನಿಬ್ಬಣದವರನ್ನು)  ಎದುರುಗೊಳ್ಳುವ ಶಾಸ್ತ್ರವಿರು ತ್ತದೆ. ಬಂಧು-ಬಳಗದವರ ಜೊತೆಗೂಡಿ ಮದುವೆಯ ಮನೆಯವರು ಪೌಣ್ಯಾರನ್ನು ಎದುರುಗೊಳ್ಳಲು ಕಳಸ-ಕನ್ನಡಿ, ಆರತಿಗಳನ್ನು ತೆಗೆದುಕೊಂಡು ವಾಧ್ಯಗಳ ಸಮೇತ ಬರುತ್ತಾರೆ. ಅದೇ ಸಂದರ್ಭಕ್ಕೆ ಹೆಣ್ಣಿನ ಕಡೆಯವರು/ಗಂಡಿನ ಕಡೆಯವರು ಎತ್ತಿನ ಗಾಡಿಗಳಲ್ಲಿಯೋ, ಮೇಟಾರು ಗಾಡಿಯಲ್ಲಿಯೋ ಊರಿಗೆ ಆಗಮಿಸಿ ಅಗಸಿಯ ಬಳಿ ನಿಂತಿರುತ್ತಾರೆ. ಅವರನ್ನು ಬೀಗರು ಬೆಲ್ಲ-ಬೇಳೆ, ನೀರು ಕೊಡುವುದರ ಜೊತೆಗೆ ಪೂಜಿಸಿ, ತಾಂಬೂಲು ಸ್ವೀಕರಿಸಿ ಸಕ್ಕರೆಯನ್ನು ಒಬ್ಬರಿಗೊಬ್ಬರು ಜಗ್ಗಾಡಿ ಮೋಜಿನ ಪ್ರಸಂಗವನ್ನು ಉಂಟು ಮಾಡುತ್ತಾರೆ. ವಿಶೇಷವೆಂದರೆ ಗಂಡಿನವರು ಹೆಣ್ಣಿನವರನ್ನು ಎಳೆದುಕೊಂಡರೆ ಹೆಣ್ಣು ಗಂಡನ ಮನೆಯಲ್ಲಿ ತಗ್ಗಿ-ಬಗ್ಗಿ ನಡೆದುಕೊಳ್ಳುತ್ತಾಳೆಂದೂ, ಒಂದು ವೇಳೆಯಲ್ಲಿ ಹೆಣ್ಣಿನವರು ಗಂಡಿನವರನ್ನು ಎಳೆದುಕೊಂಡರೆ ಹೆಣ್ಣು ಗಂಡನಮನೆಯಲ್ಲಿ ಅಧಿಕಾರವನ್ನು ಚಲಾಯಿಸುತ್ತಾಳೆಂದು ನಂಬಿಕೊಂಡು ಬಂದಿದ್ದಾರೆ. ಇದಾದ ನಂತರ ಬೀಗರನ್ನು ದೇವಸ್ಥಾನಕ್ಕೆ ಕರೆತಂದು ಅಲ್ಲಿ ಎರಡೂ ಕಡೆಯವರನ್ನು ಐದೈದು ಜನರಂತೆ ಕೂಡ್ರಿಸಿ ಆರತಿ ಮಾಡಿ, ತಾಂಬೂಲ ಸ್ವೀಕರಿಸಿ ಹಾಡುಗಳನ್ನು ಹೇಳುತ್ತಾ ಅಲ್ಲಿನ ಕಾರ್ಯಕ್ರಮ ಮುಗಿಸಿ (ಬೀಗರು ಒಂಟಿಯ ಮೇಲೆ ಬರತಾರಂದರ ಒಂಟಿಯಾಗಿ ಬಂದಾರ)  ಮನೆಗೆ ಕರೆತರುತ್ತಾರೆ. ನಂತರ ಅವರನ್ನು ಮನೆ ತುಂಬಿಸಿಕೊಂಡು ಅವರಿಗೆ ಊಟ ಮಾಡಿಸಿ ರಾತ್ರಿಯ ಕಾರ್ಯಗಳನ್ನು ಮುಗಿಸಿ ಬಿಡದಿ ಮನೆಗೆ ಕರೆತಂದು ಬಿಡುತ್ತಾರೆ. ಅವರನ್ನು ಪ್ರತಿಸಲಕ್ಕೂ, ಊಟಕ್ಕೆ, ಉಪಾಹಾರಕ್ಕೆ, ಯಾವುದೇ ಕೆಲಸಕ್ಕೆ ಕರೆಯುವುದಾದರೆ ವಾದ್ಯಗಳ, ಕಳಸ ಕನ್ನಡಿಗಳ ಮುಖಾಂತರವೇ ಆಗಬೇಕು. ಇಲ್ಲದಿದ್ದರೆ ಅವರಿಗೆ ಕೋಪ ಬರುತ್ತದೆ.

ಇನ್ನು ಮುಹೂರ್ತದ ದಿನ ಬೆಳಗಿನ ಜಾವ ಮನೆಯ ಹಿರಿಯರು ಎದ್ದು; ಊರಿನ ಗ್ರಾಮದೇವತೆಗಳಿಗೆ ಎಣ್ಣೆ ಹಾಕುವುದು, ಕುಂಬಾರರ ಮನೆಗೆ ಹೋಗಿ ಐರಾಣಿಯನ್ನು ಅಂದರೆ ನಾಲ್ಕು ಚಿಕ್ಕ ಮಡಿಕೆಗಳನ್ನು ಹಾಗು ಒಂದು ದೊಡ್ಡ ಮಡಿಕೆಯನ್ನು ಶಾಸ್ತ್ರೋಕ್ತವಾಗಿ ತಂದು ಚಪ್ಪರದ ಅಡಿಯಲ್ಲಿ ನಾಲ್ಕು ಮಡಿಕೆಗಳನ್ನು ನಾಲ್ಕು ಮೂಲೆಯಲ್ಲಿ ಇಟ್ಟು ಅದಕ್ಕೆ ದಾರಸುತ್ತಿ ಕಂಕಣಕಟ್ಟಿ ಸುರಗಿ ಸುತ್ತುವ ಪದ್ಧತಿ. ಹೀಗೆ ಸುರಗಿ ಸುತ್ತಿ ವಧು-ವರರಿಗೆ ಮುತ್ತೈದೆಯರು ನೀರು ಹಾಕಿ ಹೊಸ ಬಟ್ಟೆಗಳನ್ನು ಉಡುಸಿ ಹಸೆಮಣಿಗೆ ತರುತ್ತಾರೆ. ಸುರಗಿ ಸುತ್ತಿದ ದಾರವನ್ನು ವಧುವರರಿಗೆ ಬಲಗೈಗೆ ಕಟ್ಟುತ್ತಾರೆ. ಇದು ಮದುವೆಯ ಎಲ್ಲಾ ಕಾರ್ಯಕ್ರಮಗಳು ಮುಗಿಯುವವರೆಗೂ ಕೈಯಲ್ಲಿಯೇ ಇರಬೇಕು. ಉಳಿದಂತೆ ಹಲ-ಕೆಲ ಜನರು ಮುಹೂರ್ತಕ್ಕೆ ಜಗಲಿ ಕಟ್ಟಿಯನ್ನು ಕಟ್ಟಿ ಅದನ್ನು ಸಾರಿಸಿ, ಶೃಂಗಾರ ಮಾಡಿ ರಂಗೋಲಿ ಹಾಕಿ ಅಲಂಕರಿಸಿ ಆ ಕಟ್ಟೆಯ ಮೇಲೆ ವಧು-ವರರನ್ನು ಕೂಡ್ರಿಸಿ ಮಾಂಗಲ್ಯಧಾರಣ ಮಾಡಿಸುತ್ತಾರೆ. ಹಿಂದಿನ ಕಾಲದಿಂದ ಹಿಡಿದು ಇಂದಿನವರೆಗೂ ಅಥಣಿ ಪರಿಸರದ ವಾಲ್ಮೀಕಿ ಸಮುದಾಯದ ಬಾಂಧವರಲ್ಲಿ ಈ ರೀತಿಯ ಪದ್ಧತಿಯೊಂದು ರೂಢಿಯಲ್ಲಿದೆ. ಅಲ್ಲದೆ. ಈ ಸಮುದಾಯದಲ್ಲಿ ಇಂದಿಗೂ ಕೂಡ ವಧುವಿಗೆ ತೆರವು ಕೊಡುವ ಪದ್ಧತಿಯು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ.

ಹೀಗೆ ವಧು-ವರರು ವಿವಾಹ ಬಂಧನಕ್ಕೆ ಒಳಗಾದ ನಂತರ ಇವರಲ್ಲಿರುವ ಸಂಕೋಚದ ಭಾವನೆಯು ದೂರಾಗಲಿ ಎಂದು ಕೊಬ್ಬರಿ ಕಡಿಯುವ ಆಟ; ಹೂವಿನ ಚೆಂಡಿನ ಆಟ. ಧೂಮ ತೂಗುವುದು ಇತರೆ ಆಚರಣೆಗಳು ಈ ಭಾಗದಲ್ಲಿ ನಡೆದುಕೊಂಡು ಬಂದಿವೆೆ. ಮದುವೆಯಾದ ಐದು ದಿನಗಳವರೆಗೂ, ಗಂಡಿನ ಮನೆಯಲ್ಲಿ ಮೂರು, ಹೆಣ್ಣಿನ ಮನೆಯಲ್ಲಿ ಎರಡು ನೀರು ಎನ್ನುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆರತಿಯನ್ನು ಮಾಡುತ್ತಾರೆ. ಇಲ್ಲಿಗೆ ಮದುವೆ ಕಾರ್ಯಗಳು ಮುಗಿಯುತ್ತಿದ್ದಂತೆ, ಒಂಭತ್ತು ಅಥವಾ ಹದಿನಾರನೆಯ ದಿನಕ್ಕೆ ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮ ನಡೆಯುತ್ತದೆ.

ಇನ್ನು ‘ಯಾದಿಮೆ ಶಾದಿ’ ಎನ್ನುವುದು ಬಹುಸರಳವಾದ ಕಡಿಮೆ ಸಮಯದಲ್ಲಿಯೇ ಅಂದರೆ ಒಂದೆರಡು ಘಂಟೆಗಳಲ್ಲಿ ಮಾತ್ರ ಮುಗಿದು ಬಿಡುವ ಹಾಗೆಯೇ ಕಡಿಮೆ ಖರ್ಚಿನಲ್ಲಿ ಮುಗಿಯುವ ವಿವಾಹ ಪದ್ಧತಿಯಾಗಿದೆ. ಇದು ಮರಾಠಿ ಮೂಲದ್ದಾಗಿದ್ದರೂ ನಮಗೂ ಕೂಡ ವರದಾನವೆನಿಸುವಂತಿದೆ. ಈ ಮೊದಲೇ ಗಂಡು ಹೆಣ್ಣಿಗೆ ನಿಶ್ಚಯವಾಗಿದ್ದರೆ ಅಲ್ಲದೆ ಮದುವೆಗೆ ಸಂಭವನಿಯಗಳಿದ್ದರೆ, ಮದುವೆಯ ವಿಷಯ ಕುರಿತು ಮಾತಾಡುತ್ತಲೇ ಬಾಂಡ ಪತ್ರಿಕೆಯ ಮೇಲೆ ಕುಳಿತಿರುವ ಸಮಯದಲ್ಲಿಯೇ ಕೊಡು-ಕೊಳ್ಳುವ ವಿಚಾರ ಮಾತಾಡಿ ಬರಹಕ್ಕಿಳಿಸುತ್ತಲೇ, ಕೂಡಲೇ ಮಾಂಗಲ್ಯ ಅರಿವೆಗಳನ್ನು ತರಿಸಿ ಬಿಟ್ಟು ದೈವದವರ ಮುಖಾಮುಖಿಯಲ್ಲಿಯೇ ವಧು-ವರರನ್ನು ವಿವಾಹ ಬಂಧನಕ್ಕೆ ಕಾಲಿಡಿಸಿ ಬಿಡುತ್ತಾರೆ. ಆ ಕ್ಷಣದೊಳಗೆ ಅವರವರ ಯೋಗ್ಯತೆಗ ತಕ್ಕಂತೆ ಸಿಹಿ ಅಡುಗೆಯನ್ನು ಮಾಡಿರುತ್ತಾರೆ. ಅಲ್ಲಿ ನೆರೆದವರೆಲ್ಲರು ಅಕ್ಷತೆ ಕಾಳನ್ನು ವಧು-ವರರಿಗೆ ಹಾಕಿ ಊಟ ಮುಗಿಸಿಕೊಂಡು ಹೋಗುತ್ತಾರೆ. ಉಳಿದಂತೆ ಯಾರು ಬಂದರಾಯ್ತು, ಬರದಿದ್ದರಾಯ್ತು, ಮದುವೆ ನಡೆದು ಬಿಡುತ್ತದೆ. ನಂತರ ಉತ್ತಮ ಸ್ಥಿತಿವಂತರು ನಂತರದಲ್ಲಿ ಎಲ್ಲರಿಗೂ ಆರತಕ್ಷತೆಯನ್ನು ಮಾಡುವುದು ರೂಢಿಯಲ್ಲಿದೆ. ಆದರೆ ಅದು ಕಡ್ಡಾಯವೇನೂ ಈ ‘ಯಾದಿಮೆ ಶಾದಿ’ ಎನ್ನುವ ಮದುವೆಯು ಈ ಭಾಗದಲ್ಲಿ ನಡೆಯುತ್ತಿದ್ದು, ಬಡ ಬಗ್ಗರಿಗೆ, ಸಮಯದ ಅಭಾವ ಇದ್ದವರಿಗೆ ಅನುಕೂಲವಾಗಿದೆ. ಈ ಪದ್ಧತಿಯ ವಿವಾಹವನ್ನು ವಾಲ್ಮೀಕಿ ಸಮುದಾಯದವರಲ್ಲದೆ ಎಲ್ಲಾ ಸಮುದಾಯದ ಎಲ್ಲಾ ವರ್ಗದ ಜನರಲ್ಲಿ ನಡೆಯುವಂತಹ ಸರಳ ವಿವಾಹ ಪದ್ಧತಿಯಾಗಿದೆ.

ಸೀಮಂತ : ಮನೆಯ ಮಗಳು ಅಥವಾ ಸೊಸೆಯು ಮೊದಲ ಸಲ ಅಂದರೆ ಚೊಚ್ಚಲು ಗರ್ಭಿಣಿಯಾದರೆ ಆಕೆಗೆ ಮೂರನೇ ತಿಂಗಳಲ್ಲಿ ಅಥವಾ ಐದನೆಯ ತಿಂಗಳಲ್ಲಿ ಬಯಕೆಯ ಬುತ್ತಿಯನ್ನು ಕೊಟ್ಟು, ಕಳ್ಳಕುಪ್ಪಸವೆಂದು ಅರಿಷಣ, ಕುಂಕುಮ, ಹಸಿರುಬಳೆ, ಕುಪ್ಪಸದ ಬಟ್ಟೆಯನ್ನು ಉಡಿಯಲ್ಲಿ ಕೊಡುವುದರ ಜೊತೆಗೆ ಕುಪ್ಪಸದ ಕಾರ್ಯ ನೆರವೇರಿಸುವುದನ್ನು ಈ ಪರಿಸರದ ವಾಲ್ಮೀಕಿ ಸಮುದಾಯದಲ್ಲಿ ನಾವು ಕಾಣಬಹುದು.

ನಂತರ ಎಂಟನೆ ತಿಂಗಳಲ್ಲಿ ಗರ್ಭಿಣಿ ಹೆಣ್ಣಿನ ತವರಿನವರು ಬಂಧು-ಬಳಗದವರೊಡಗೂಡಿ ವಿವಿಧ ರೀತಿಯ ಅಡುಗೆಯ ತಯಾರಿಯನ್ನು ಮಾಡಿಕೊಂಡು ಬಂದು ಗಂಡನ ಮನೆಯಲ್ಲಿರುವ ಮಗಳಿಗೆ ಸೀಮಂತ ಮಾಡುವ ಪದ್ಧತಿಯು ರೂಢಿಯಲ್ಲಿದೆ. ಗರ್ಭಿಣಿ ಸ್ತ್ರೀಗೆ ಸ್ನಾನಾದಿಗಳನ್ನು ಮಾಡಿಸಿ ಹೊಸ ಸೀರೆ ಉಡುಸಿ ಹಸಿರು-ಕೆಂಪು ಬಳೆಗಳನ್ನು ತೊಡಿಸಿ ಅಲಂಕಾರ ಮಾಡಿ ಒಂದು ವೇದಿಕೆಯನ್ನು ನಿರ್ಮಿಸಿ ಅಲ್ಲಿ ಆಕೆಗೆ ಕೂಡ್ರಿಸಿ ಹೆಂಗಳೆಯರೆಲ್ಲರೂ ಹುಡಿ ತುಂಬಿ ಆರತಿ ಮಾಡಿ ಹರಸುವುದುಂಟು. ಬಂದಿರುವಂತಹ ಪೌಟ್ಯಾರೆಲ್ಲರು (ಬೀಗರೆಲ್ಲರು)  ಬಂಧು-ಬಳಗದವರು ಸೀರೆ-ಕುಪ್ಪಸ, ಹಣ ವಸ್ತುಗಳನ್ನು ಆಯರು ಮಾಡುವುದು ಪದ್ಧತಿ. ಬಂದಂತಹ ಎಲ್ಲರಿಗೂ ವಿಶೇಷ ಭೋಜನದ ವ್ಯವಸ್ಥೆ ಇರುತ್ತದೆ.ಹೀಗೆ ಗರ್ಭಿಣಿ ಸ್ತ್ರೀಯ ಜೊತೆಗೆ ಆಕೆಯ ಗಂಡನಿಗೂ ಹೊಸ ಬಟ್ಟೆಯನ್ನು ಮತ್ತು ಬಂಗಾರ ಆಯರು ಮಾಡುತ್ತಾರೆ. ಮಾರನೆಯ ದಿನ ಆಕೆಯನ್ನು ತವರು ಮನೆಗೆ ಮೊದಲ ಬಾಣಂತನಕ್ಕೆ ಕರೆದುಕೊಂಡು ಬರುತ್ತಾರೆ. ಆಕೆ ಬಯಸಿದ ಊಟೋಪಚಾರವನ್ನು ತವರು ಮನೆಯವರು ತಪ್ಪದೇ ನೆರವೇರಿಸುತ್ತಾರೆ.

ಸಾವು : ಅಥಣಿ ಪರಿಸರದಲ್ಲಿ ಬರುವ ಯಾವುದೇ ವಾಲ್ಮೀಕಿ ಸಮೂದಾಯದ ಕುಟುಂಬಗಳಲ್ಲಿ ಒಂದು ವೇಳೆ ಸಾವು ಸಂಭವಿಸಿದರೆ, ಆ ಕೂಡಲೇ ಆಯಗಾರರನ್ನು ಕರೆಸಿ ಬಂಧು ಬಳಗದವರಿಗೆ ಸುದ್ದಿ ಮುಟ್ಟಿಸುವಂತೆ ಅವರಿಗೆ ದಾರಿಯ ಖರ್ಚು ಕೊಟ್ಟು ಕಳಿಸಿಕೊಡುತ್ತಾರೆ. ಈಗೀಗ ವೈಜ್ಞಾನಿಕವಾಗಿ ಮುಂದುವರಿದಿರುವ ಸಂದರ್ಭದಲ್ಲಿ ದೂರವಾಣಿಯ ಮುಖಾಂತರವೂ ಸುದ್ದಿಯನ್ನು ಮುಟ್ಟಿಸುತ್ತಾರೆ. ಬಂಧು-ಬಳಗದವರು ಸೇರುವವರೆಗೂ ಶವ ಸಂಸ್ಕಾರ ನಡೆಸುವಂತಿಲ್ಲ. ಇತ್ತ ಸಾವು ಸಂಭವಿಸಿದ ಕೂಡಲೇ ಮೃತ ದೇಹವನ್ನು ಬಿಸಿ ನೀರಿನಿಂದ ಸ್ನಾನ ಮಾಡಿಸಿ ಒಂದು ಗೊತ್ತಾದ ಸ್ಥಳದಲ್ಲಿ ಕೂಡಿಸುತ್ತಾರೆ. ನಂತರ ಪೂಜೆಯನ್ನು ಮಾಡುತ್ತಾರೆ. ಅಲ್ಲದೆ ವೀರಶೈವ ಮತದ ಲಿಂಗ ಸ್ವರೂಪಿ ಜಂಗಮನನ್ನು ಮನೆಗೆ ಕರೆಯಿಸಿ ಮೃತದೇಹಕ್ಕೆ ಪೂಜೆ ಮಾಡಿಸುತ್ತಾರೆ. ಈ ಲಿಂಗ ಸ್ವರೂಪಿಯು ಹೆಣದ ಮೇಲೆ ಕಾಲಿಟ್ಟು, ಪಾದ ಪೂಜೆಯನ್ನು ನೆರವೇರಿಸಿ ಕೊಳ್ಳುತ್ತಾನೆ. ಇದನ್ನು ಮನೆಯ ಹಿರಿಯರು ಮಾಡುತ್ತಾರೆ. ಈ ಕ್ರಿಯೆಯಿಂದ ತಿಳಿಯುವುದೆಂದರೆ ಈ ಸಮುದಾಯದವರು ಸತ್ತ ವ್ಯಕ್ತಿ ಮುಂದಿನ ಜನ್ಮದಲ್ಲಿ ನಮ್ಮ ಮನೆಯಲ್ಲಿಯೇ ಹುಟ್ಟುವನೆಂದು ಭಾವಿಸಿದ್ದಾರೆ. ಅಲ್ಲದೆ ಸತ್ತ ವ್ಯಕ್ತಿಗೆ ಆ ರೀತಿ ಪೂಜೆ ಮಾಡಿಸುವುದರಿಂದ ಆತನು ಪರಿಶುದ್ಧನಾಗುತ್ತಾನೆ. ಕರ್ಮಗಳನ್ನು ಕಳೆದು ಕೊಳ್ಳುತ್ತಾನೆ ಎನ್ನುವ ನಂಬಿಕೆ ಈ ಜನರದು.

ಹಾಗೆಯೇ ಒಂದು ವೇಳೆ ಸತ್ತಿರುವ ಮನುಷ್ಯನ ದೇಹವನ್ನು ರಾತ್ರಿಯೆಲ್ಲಾ ಇರಿಸುವ ಸಂದರ್ಭ ಬಂದರೆ ರಾತ್ರಿಯೆಲ್ಲಾ ಪುರಾಣ ಹೇಳುವುದು, ಭಜನೆ ಮಾಡುವುದು ರೂಢಿ. ಅಂದರೆ ರಾತ್ರಿಯೆಲ್ಲಾ ಆ ದೇಹವನ್ನು ಕಾಯುವುದು. ಅಂತಿಮ ಸಂಸ್ಕಾರವಾಗುವವರೆಗೂ ಆ ಮನೆಯಲ್ಲಿ ಊಟ ಮಾಡುವಂತಿಲ್ಲ. ಹೆಣದ ಪೂಜೆಗೆ ಬೇರೆಯವರು ಹೂ-ಹಣ್ಣು-ಕಾಯಿ ಊದುಕಡ್ಡಿಯನ್ನು ತರುವುದಿಲ್ಲ. ಇನ್ನು ವ್ಯಕ್ತಿಯು ಸತ್ತ ಕೂಡಲೇ ಪಂಚಾಂಗವನ್ನು ನೋಡಲಾಗುವುದು. ಪಂಚಾಂಗ ಫಲದಲ್ಲಿ ಏನಾದರೂ ಕೆಟ್ಟದ್ದು ಇದ್ದರೆ ಮನೆಯನ್ನು ಸ್ವಲ್ಪ ದಿನಗಳ ಕಾಲ ಬಿಡುವುದು. ಅಥವಾ ಸತ್ತ ಸ್ಥಳವನ್ನು ಮುಚ್ಚುವುದು ರೂಢಿ ಯಲ್ಲಿದೆ. ಅಂತ್ಯಕ್ರಿಯೆಯ ಸಂದರ್ಭದಲ್ಲಿ ಮನೆಯಲ್ಲಿ ದೀಪವನ್ನು ನೋಡುವಂತಿಲ್ಲ. ನೋಡಿದರೆ ಅವರಿಗೆ ದೋಷ ಬರುತ್ತದೆ ಎನ್ನುವುದು ಅವರ ತಿಳುವಳಿಕೆ. ಕಾರಣ ಅವರೆಲ್ಲರು ಶವ ಶವಸಂಸ್ಕಾರ ಮುಗಿದ ಕೂಡಲೇ ಅಲ್ಲಿಯೇ ತೋಟಗದ್ದೆಗಳಲ್ಲಿ, ಬಾವಿ, ಹಳ್ಳಗಳಲ್ಲಿ ಸ್ನಾನ ಮಾಡಿ ಶುದ್ಧವಾಗಿ, ಶವದ ಮನೆಯವರಿಗೆ ಹೇಳದೆ, ಕೇಳದೆ ತಮ್ಮ ತಮ್ಮ ಊರಿಗೆ ತೆರಳುತ್ತಾರೆ. ಅಲ್ಲದೆ ಶವವನ್ನು ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗುವಾಗ ನವಣೆಯನ್ನು ಚೆಲ್ಲಲಾಗುತ್ತದೆ. ಇದರ ಹಿನ್ನೆಲೆ ಏನೆಂದರೆ ಆ ವ್ಯಕ್ತಿಯು ಮನೆಯ ಆಸ್ತಿ-ಪಾಸ್ತಿಯ ಮೇಲೆ, ಮಕ್ಕಳ ಮೇಲೆ, ಮಡದಿಯ ಮೇಲೆ ವ್ಯಾಮೋಹ ಉಳ್ಳವರು ಅವರಾಗಿದ್ದರೆ; ಅವರು ಪುನಃ ದೆವ್ವ ಭೂತಗಳಾಗಿ ಮನೆಗೆ ಬಂದು ಬಿಡಬಹುದು. ಹಾಗೇನಾದರೂ ಬಂದರೆ ಬರುವಾಗ ನವಣೆಯನ್ನು ಹೆಕ್ಕಿಕೊಳ್ಳುತ್ತಾರೆ ಬರುವುದರೊಳಗೆ ಬೆಳಗಾಗುವುದು. ಬೆಳಗಾದ ಕೂಡಲೇ ಪುನಃ ಸ್ಮಶಾನಕ್ಕೆ ತೆರಳುತ್ತವೆ ಎನ್ನುವ ನಂಬಿಕೆಯು ಇಲ್ಲಿಯ ಜನರದು. ಇನ್ನು ಯಾವ ವ್ಯಕ್ತಿ ಯಾರ ಮನೆಯಲ್ಲಿ ಸತ್ತಿರುತ್ತಾನೋ ಆ ಮನೆಗೆ ಸೂತಕ ಸಂಭವಿಸುತ್ತದೆ. ಮನೆಯನ್ನು ಸ್ವಚ್ಛಗೊಳಿಸಿ ಮೂರನೆ ದಿನದಂದು ಮೂರು ಕೂಳು ಎಂದು ಮಾಡಿ, ಅದರಲ್ಲಿ ಆ ವ್ಯಕ್ತಿಯು ಏನನ್ನು ತಿನ್ನುತ್ತಿದ್ದನೋ ಅಥವಾ ಆತನಿಗೆ ಏನು ಪ್ರಿಯವೋ, ಆ ಅಡುಗೆಯನ್ನು ಮಾಡಿಕೊಂಡು ಸ್ಮಶಾನಕ್ಕೆ ತಂದು ಶವಸಂಸ್ಕಾರವಾದ ಸ್ಥಳದಲ್ಲಿ ಇಡುತ್ತಾರೆ. ಮತ್ತು ಅಂದು ಮನೆಯಲ್ಲಿ ಸಿಹಿ ಅಡುಗೆಯನ್ನು ಮಾಡಿರುತ್ತಾರೆ. ಹೊರಗಿನವರು ಆ ಮನೆಯಲ್ಲಿ ಆ ದಿನ ಊಟ ಮಾಡುವುದಿಲ್ಲ. ಹಾಗೆಯೇ ಸ್ಮಶಾನದಲ್ಲಿಟ್ಟಿದ್ದ ಅನ್ನವನ್ನು ಕಾಗೆಗಳು ಮುಟ್ಟಿದರೆ ಶುಭ ಶಕುನ. ನಂತರ ೯ ಅಥವಾ ೧೬ನೇ ಶ್ರಾದ್ಧವನ್ನು ಮಾಡಿ ಊರಿನವರಿಗೆ ಮತ್ತು ಬಂಧು-ಬಳಗದವರಿಗೆ ಊಟ ಮಾಡಿಸಿ ಆ ಒಂದು ಕ್ರಿಯೆಯನ್ನು ಕೊನೆಗೊಳಿಸುತ್ತಾರೆ. ನಂತರ ಆ ಮನೆಯ ಸೂತಕ ತಪ್ಪುತ್ತದೆಯಂತೆ.