ಪ್ರಾಚೀನ ಭಾರತದ ಇತಿಹಾಸವನ್ನು ನಾವು ಅವಲೋಕಿಸಿದಾಗ ಭಾರತದಲ್ಲಿ ಅನೇಕ ಬುಡಕಟ್ಟು ಸಮುದಾಯಗಳು ಇರುವುದು ನಮಗೆ ಕಂಡುಬರುತ್ತದೆ ಇಂತಹ ಬುಡಕಟ್ಟುಗಳಲ್ಲಿ ವಾಲ್ಮೀಕಿ ಸಮುದಾಯವು ಕೂಡಾ ಒಂದಾಗಿದೆ. ಈ ಬುಡಕಟ್ಟಿನಲ್ಲಿ ಪ್ರಮುಖರಾದವರೆಂದರೆ ಬೇಡರು, ನಾಯಕರು, ಪಾಳೆಗಾರರು, ತಳವಾರರು ಮುಂತಾದವರು. ಈ ಎಲ್ಲ ಸಮುದಾಯದವರನ್ನು ನಾವು ಇಂದು ಪರಿಶಿಷ್ಟ ಪಂಗಡಕ್ಕೆ ಸೇರಿಸಿರುವುದನ್ನು ಕಾಣಬಹುದಾಗಿದೆ. ಈ ವಾಲ್ಮೀಕಿ ಸಮುದಾಯದವರು ಇಂದು ತಮ್ಮ ಧಾರ್ಮಿಕ ಪದ್ಧತಿಯ ಮೂಲಕ ಪ್ರಸಿದ್ದಿಯನ್ನು ಪಡೆದಿದ್ದು, ಇವರು ಅಥಣಿ ತಾಲೂಕಿನ ಅನೇಕ ಹಳ್ಳಿಗಳಾದ ಬ್ಯಾಡರಟ್ಟಿ, ಕಲ್ಲೂತಿ, ರಡ್ಡೇರಹಟ್ಟಿ, ಬಡಚಿ ಮದಬಾವಿ, ಅನಂತಪೂರ, ಹಾಗೂ ಕೊಕಟನೂರ ಮುಂತಾದ ಗ್ರಾಮಗಳಲ್ಲಿ ವಾಸವಾಗಿದ್ದು, ಇವರು ಪೂಜಿಸುವ ದೇವರುಗಳ ಬಗ್ಗೆ ಹಾಗೂ ಅವರ ಧಾರ್ಮಿಕ ಆಚರಣೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

ವಾಲ್ಮೀಕಿ ಸಮುದಾಯದವರು ಪ್ರಾಚೀನ ಕಾಲದಲ್ಲಿ ಆರ್ಯರ ಆಕ್ರಮಣದಿಂದಾಗಿ ಕಾಡಿನಲ್ಲಿ ವಾಸ ಮಾಡಲಿಕ್ಕೆ ಪ್ರಾರಂಭಿಸಿದರು. ಅಲ್ಲಿಯೇ ಮೊದಲು ಇವರು ಕಾಡು ದೇವತೆಯನ್ನು ಬಹಳ ನಿಷ್ಠೆಯಿಂದ ಪೂಜಿಸುತ್ತಿದ್ದರು. ಕಾಡು ದೇವತೆಯಲ್ಲಿ ಅಪಾರವಾದ ನಂಬಿಕೆಯನ್ನು ಹೊಂದಿದ್ದ ಇವರು, ಈ ದೇವತೆಯನ್ನು ಸಂತೃಪ್ತಪಡಿಸಲು ಈ ದೇವತೆಗೆ ಪ್ರಾಣಿಬಲಿ ಹಾಗೂ ನರಬಲಿಗಳನ್ನು ನೀಡುತ್ತಿದ್ದರು; ಹಾಗೂ ಸಾಮೂಹಿಕವಾಗಿ ದೇವರ ಮುಂದೆ ಹಾಡುತ್ತ ನೃತ್ಯವನ್ನು ಮಾಡುತ್ತ ಉತ್ಸವಗಳನ್ನು ನೇರವೇರಿಸುತ್ತಿದ್ದರು. ಒಂದು ವೇಳೆ ಈ ದೇವತೆಗೆ ಬಲಿಗಳನ್ನು ಕೊಡದಿದ್ದರೆ ದೇವರು ಕೋಪಗೊಂಡು ನಮ್ಮನ್ನು ಕಾಡುತ್ತದೆ ಮತ್ತು ನಮ್ಮ ಜನಾಂಗದವರಿಗೆ ಅನೇಕ ರೀತಿಯ ಕಾಯಿಲೆಗಳು ಬರುವಂತೆ ಮಾಡುತ್ತದೆ ಎಂಬ ಒಂದು ಮೂಢನಂಬಿಕೆಯಿಂದಾಗಿ, ಅವರು ನರಬಲಿಗಳನ್ನು ನೀಡುತ್ತಿದ್ದರು ಎಂಬುವುದು ನಮಗೆ ಇತಿಹಾಸದ ಪುಟಗಳಿಂದ ತಿಳಿದುಬರುವುದು.

ಆದರೆ ತೀರ ಇತ್ತೀಚಿಗೆ ಈ ಸಮುದಾಯದವರು ವಿವಿಧ ದೇವರುಗಳನ್ನು ಪೂಜಿಸುತ್ತಿರುವುದು ನಮಗೆ ಕಂಡುಬರುತ್ತದೆ. ಅಥಣಿ ಪರಿಸರದಲ್ಲಿ ವಾಸಿಸುವ ಈ ವಾಲ್ಮೀಕಿ ಸಮುದಾಯದವರು ಮುಖ್ಯವಾಗಿ, ಇಂದಿಗೂ ಕೂಡಾ ಅತ್ಯಂತ ಶ್ರದ್ಧೆಯಿಂದ ಸ್ತ್ರೀ ದೇವತೆಗಳಾದ ಸವದತ್ತಿಯ ಎಲ್ಲಮ್ಮ, ಲಕ್ಕಮ್ಮ, ಮರಗುಬಾಯಿ, ಉದಕಟ್ಟಿ ಉದ್ದವ್ವ, ಚಂದ್ರಗಿರಿಯ ಚಂದ್ರವ್ವ ತಾಯಿ ಮುಂತಾದ ದೇವತೆಗಳ ಜೊತೆಗೆ ಪುರುಷ ದೇವರುಗಳಾದ ಶಿವ, ಬಸವಣ್ಣೆಪ್ಪ, ಬೇಡರ ಕಣ್ಣಪ್ಪ, ರಾಮ ಮುಂತಾದ ಹಿಂದೂ ದೇವರುಗಳ ಜೊತೆಗೆ, ಮುಸ್ಲಿಂ ಸಮುದಾಯದ ವೀರ, ಯಮನೂರಪ್ಪ ಮುಂತಾದ ದೇವರುಗಳನ್ನು ಕೂಡಾ ಇವರು ಅತ್ಯಂತ ಶೃದ್ಧೆ, ಭಕ್ತಿ ನಂಬಿಕೆಗಳಿಂದ ಆರಾಧಿಸುವುದನ್ನು ನಾವು ಕಾಣಬಹುದಾಗಿದ್ದು, ಇದರ ಸಂಕ್ಷಿಪ್ತ ಪರಿಚಯವನ್ನು ಈ ರೀತಿಯಾಗಿ ಕಾಣಬಹುದು.

ಕೊಕಟನೂರ ಹಾಗೂ ಸವದತ್ತಿಯ ಎಲ್ಲಮ್ಮನನ್ನು ಈ ಸಮುದಾಯದ ಜನರು ಅತ್ಯಂತ ವೈಭವ ಪೂರಿತವಾಗಿ ಪೂಜಿಸುತ್ತಾರೆ. ಇವರು ಈ ದೇವರುಗಳನ್ನು ಸಂತೃಪ್ತಪಡಿಸಲೆಂದು ವರ್ಷಕ್ಕೊಮ್ಮೆ ಈ ದೇವಾಲಯದ ಜಾತ್ರೆ, ಉತ್ಸವಗಳಿಗೆ ಹೋಗಿ, ಅಲ್ಲಿ ತಮ್ಮ ಹರಕೆಯನ್ನು ಸಲ್ಲಿಸುವ ಸಲುವಾಗಿ ಬೆತ್ತಲೆ ಸೇವೆ ಅಂದರೆ ಬೇವಿನ ತಪ್ಪಲಿನಿಂದ ಮಾತ್ರ ತಮ್ಮ ಮಾನ ಮುಚ್ಚಿಕೊಂಡು ಸೇವೆಯನ್ನು ಸಲ್ಲಿಸುತ್ತಾರೆ. ಅಲ್ಲದೆ ಈ ತಾಯಿಯ ಮೇಲಿನ ಅಚಲವಾದ ನಂಬಿಕೆಯಿಂದ ಸರ್ಕಾರದ ನಿಷೇಧವಿದ್ದರೂ ಕೂಡ ಮುತ್ತು ಕಟ್ಟಿಸಿಕೊಂಡು ದೇವದಾಸಿಯರಾಗುವುದನ್ನು ಸಹ ನೋಡಬಹುದು. ಅಲ್ಲದೆ ಈ ದೇವರಿಗೆ ನೈವೇದ್ಯ ರೂಪದಲ್ಲಿ ಅನೇಕ ಪ್ರಾಣಿಗಳಾದ ಕುರಿ, ಕೋಳಿ, ಟಗರು ಮುಂತಾದ ಪ್ರಾಣಿಗಳನ್ನು ಬಲಿಕೊಡುವುದನ್ನೂ ನಾವು ಕಾಣಬಹುದಾಗಿದೆ. ಕೇವಲ ಇಂತಹ ಅಮಾನುಷ ಕೃತ್ಯಗಳನ್ನು ಈ ಸಮುದಾಯದವರು ಅಷ್ಟೇ ಅಲ್ಲ ಅನೇಕ ಜನಾಂಗದ ಭಕ್ತರೂ ಕೂಡಾ ಆಚರಿಸುವುದನ್ನು ನಾವು ತಿಳಿದುಕೊಳ್ಳಬಹುದಾಗಿದೆ.

ಸಾಮಾನ್ಯವಾಗಿ ಎಲ್ಲಾ ವಾಲ್ಮೀಕಿ ಸಮುದಾಯದವರು ಪೂಜಿಸುವ ಇನ್ನೋರ್ವ ದೇವತೆಯೆಂದರೆ ಸ್ಥಳೀಯ ದೇವತೆ ಮರಗುಬಾಯಿ. ಈ ದೇವತೆಯನ್ನು ಇವರು ತಮ್ಮ ಕುಲದ ದೇವತೆಯೆಂದು ತಿಳಿದು, ಈ ದೇವತೆಯ ಜಾತ್ರೆಯನ್ನು ಅತ್ಯಂತ ವೈಭವ ಪೂರಿತವಾದ ನೆರವೇರಿಸುವರು. ಜಾತ್ರೆಯ ದಿನ ದೇವಾಲಯವನ್ನು ತಳಿರು ತೋರಣಗಳಿಂದ ಶೃಂಗರಿಸಿ ಅತ್ಯಂತ ವೈಭವ ಪೂರಿತವಾಗಿ ಪೂಜಿಸುವರು. ನಮ್ಮ ಅಥಣಿಯಲ್ಲಿರುವ ಮರಗು ಬಾಯಿಯ ದೇವಸ್ಥಾನವು ಆರಕ್ಷಕ ಠಾಣೆಯ ಸಮೀಪವಿದ್ದರೂ ಕೂಡಾ ಅಲ್ಲಿ ಪ್ರಾಣಿಗಳನ್ನು ಅಧಿಕಾರಿಗಳ ಕಣ್ಣು ತಪ್ಪಿಸಿ ಬಲಿಕೊಡುವುದನ್ನು ನೋಡಬಹುದಾಗಿದೆ. ಅನೇಕ ಪ್ರಾಣಿಗಳನ್ನು ಇಲ್ಲಿ ಬಲಿಕೊಟ್ಟು ತಮ್ಮ ಹರಕೆಯನ್ನು ಮುಟ್ಟಿಸುವ ಪರಿಪಾಠ ಬೆಳಸಿಕೊಂಡು ಬಂದಿದ್ದಾರೆ.

ಅಥಣಿ ತಾಲೂಕಿನಲ್ಲಿಯೇ ಇರುವ ಈ ಸಮುದಾಯದ ಇನ್ನೆರಡು ಪ್ರಮುಖ ದೇವಾಲಯಗಳೆಂದರೆ, ಕಟಗೇರಿಯ ಲಕ್ಕವ್ವ ಹಾಗೂ ಬ್ಯಾಡರಟ್ಟಿಯ ಲಕ್ಕಮ್ಮನ ದೇವಸ್ಥಾನಗಳು. ಈ ದೇವಾಲಯಗಳು ಹಲವಾರು ಶತಮಾನಗಳ ಐತಿಹಾಸಿಕ ಚರಿತ್ರೆಯನ್ನು ಒಳಗೊಂಡಿವೆ. ಈ ದೇವಸ್ಥಾನಗಳಲ್ಲಿರುವ ದೇವತೆಗಳು ಅತ್ಯಂತ ಶಕ್ತಿಯುತವಾದ ದೇವತೆಗಳೆಂದು ಇವರು ನಂಬಿಕೆ ಹೊಂದಿದ್ದಾರೆ. ವರ್ಷಕ್ಕೊಮ್ಮೆಯಾದರು ಈ ದೇವಸ್ಥಾನಗಳಿಗೆ ಭೇಟಿ ನೀಡಿ ಹೋಳಿಗೆಯ ನೈವೇದ್ಯ ಹಾಗೂ ಅನೇಕ ಪ್ರಾಣಿಗಳನ್ನು ಬಲಿಕೊಡುವ ವಾಡಿಕೆಯನ್ನು ಇವರು ಬೆಳೆಸಿಕೊಂಡು ಬಂದಿದ್ದಾರೆ. ಒಂದು ವೇಳೆ ಇಲ್ಲಿ ಭೇಟಿ ನೀಡಿ ಹರಕೆಯನ್ನು ತೀರಿಸದಿದ್ದರೆ ಈ ದೇವತೆಗಳು ತಮಗೆ ಅಪಾರವಾದ ತೊಂದರೆಯನ್ನು ನೀಡುತ್ತವೆ ಎಂಬ ನಂಬಿಕೆಯನ್ನು ಇವರು ಹೊಂದಿದ್ದಾರೆ. ಅಲ್ಲದೇ ಕಟಗೇರಿಯ ಲಕ್ಕವ್ವನ ಬಗ್ಗೆ ಇನ್ನೊಂದು ಪ್ರತೀತವೇನೆಂದರೆ ಈ ದೇವಾಲಯದಲ್ಲಿ ಹಸುಗೂಸುಗಳನ್ನು ಕೊಂಡೊಯ್ಯುವಂತಿಲ್ಲ. ಏಕೆಂದರೆ ಈ ತಾಯಿ ಆ ಮಕ್ಕಳನ್ನು ನುಂಗುವಳೆಂಬ ಭಯ ಸುತ್ತಮುತ್ತಲಿನ ಎಲ್ಲ ಜನಾಂಗದವರಿಗೆ ಇದೆ. ಇದೊಂದು ಮೂಢ ನಂಬಿಕೆ ಎನ್ನಬಹುದಾಗಿದೆ.

ಇನ್ನೊಂದು ಆಘಾತಕಾರಿ ವಿಷಯವೇನೆಂದರೆ ಉದಕಟ್ಟಿಯಲ್ಲಿರುವ ಉದ್ದವ್ವನಿಗೆ ಈ ಸಮುದಾಯದವರು ಹಲವಾರು ವರ್ಷಗಳ ಹಿಂದೆ ಇಲ್ಲಿನ ದೇವತೆಗೆ ಪ್ರಾಣಿಗಳ ಬಲಿಯ ಜೊತೆಗೆ ಅನೇಕ ಚಿಕ್ಕ ಮಕ್ಕಳನ್ನು ನರಬಲಿಯಾಗಿ ನೀಡುವುದನ್ನು ನಾವು ಇತಿಹಾಸದಿಂದ ತಿಳಿಯಬಹುದು. ಇವರು ಒಂದು ವೇಳೆ ನರಬಲಿಯನ್ನು ನೀಡದೆ ಹೋದರೆ ದೇವತೆ ತಮ್ಮನ್ನು ಕಾಡುವಳು ಎಂಬ ನಂಬಿಕೆಯಿತ್ತು. ಆದರೆ ಇತ್ತೀಚಿಗೆ ಪೊಲೀಸ್ ಕಾರ್ಯಾಚರಣೆಯಿಂದ ಸಂಪೂರ್ಣವಾಗಿ ಈ ಅನಿಷ್ಟ ಪದ್ಧತಿಯನ್ನು ತಡೆ ಹಿಡಿಯಲಾಗಿದೆ. ಆದರೂ ಕೂಡ ಇಲ್ಲಿ ಇಂದಿಗೂ ಅನೇಕ ರೀತಿಯ ಪ್ರಾಣಿಗಳನ್ನು ಬಲಿಕೊಡುವುದನ್ನು ಕಾಣಬಹುದು.

ಅಥಣಿ ತಾಲೂಕಿನಲ್ಲಿಯೇ ಕಲ್ಲೂತಿ ಗ್ರಾಮದ ಶೇಕಡಾ ೮೦ ಕ್ಕಿಂತಲೂ ಹೆಚ್ಚು ಜನರು ವಾಲ್ಮೀಕಿ ಸಮುದಾಯದವರಾಗಿದ್ದಾರೆ. ಇವರೂ ಸಹ ಸ್ಥಳೀಯ ದೇವತೆಯಾದ ಮರಗುಬಾಯಿಯನ್ನು ಅತ್ಯಂತ ವೈಭವಪೂರಿತವಾಗಿ ಪೂಜಿಸುವರು.

ಈ ಮೇಲಿನ ಸ್ತ್ರೀ ದೇವತೆಗಳ ಜೊತೆಗೆ ಅನೇಕ ಪುರುಷ ದೇವರುಗಳಾದ ಶಿವ, ಬಸವಣ್ಣೆಪ್ಪ, ಬೇಡರಕಣ್ಣಪ್ಪ ಶ್ರೀರಾಮಪೀರ ಹಾಗೂ ಯಮನೂರಪ್ಪ ಮುಂತಾದ ದೇವರುಗಳನ್ನು ಇವರು ಪೂಜಿಸುತ್ತಾರೆ. ಇಲ್ಲಿನ ಕೆಲವು ದೇವರುಗಳ ಅನೇಕ ಜಾತ್ರೆ ಗಳಲ್ಲಿ ಭಾಗವಹಿಸಿ ತಮ್ಮ ಹರಕೆಯನ್ನು ಈ ಸಮುದಾಯದವರು ತೀರಿಸುತ್ತಾರೆ.

ಇವರು ಪೂಜಿಸುವ ಇನ್ನೋರ್ವ ಪ್ರಮುಖ ದೇವತೆ ಎಂದರೆ ನಮ್ಮ ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿರುವ ಐತಿಹಾಸಿಕ ದೇವಾಲಯ ಶ್ರೀ ಗುಡ್ಡಾಪುರ ದಾನಮ್ಮ ತಾಯಿಯನ್ನು ಪೂಜಿಸುವರು. ಅನೇಕ ಜನರು ಇಂದಿಗೂ ಕೂಡಾ ಅಲ್ಲಿಗೆ ಭೇಟಿಯನ್ನು ನೀಡಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ಆದರೆ ಇಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿಯನ್ನು ನೀಡುವುದಿಲ್ಲ.

ಒಟ್ಟಿನಲ್ಲಿ ವಾಲ್ಮೀಕಿ ಸಮುದಾಯದವರು ತಮ್ಮದೆಯಾದ ಕೆಲವು ವಿಶಿಷ್ಟ ಧಾರ್ಮಿಕ ನಂಬಿಕೆಗಳನ್ನು ಹೊಂದಿದ್ದು ಸ್ಥಳೀಯವಾಗಿ ಅಥಣಿ ತಾಲೂಕಿನಲ್ಲಿಯೇ ಇರುವ ಅನೇಕ ದೇವರುಗಳಾದ ಲಕ್ಕಮ್ಮ, ಎಲ್ಲಮ್ಮ, ಮರಗುಬಾಯಿ, ರಾಮ, ಪೀರ, ಶಿವ, ಯಮನೂರಪ್ಪ ಮುಂತಾದ ದೇವರುಗಳನ್ನು ಅತ್ಯಂತ ವೈಭವ ಪೂರಿತವಾಗಿ ಶ್ರದ್ಧೆ, ಭಕ್ತಿ, ನಂಬಿಕೆಗಳಿಂದ ಪೂಜಿಸುವುದನ್ನು ನಾವು ತಿಳಿದುಕೊಂಡೆವು ಒಟ್ಟಿನಲ್ಲಿ ಇವರ ಧಾರ್ಮಿಕ ಆಚರಣೆಗಳು ವೈಶಿಷ್ಟ್ಯತೆಯಿಂದ ಕೂಡಿವೆ ಎಂದು ಹೇಳಬಹುದು.