ಸಾರಾಂಶ

ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದಿದ್ದರೂ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿನ ನಂಬಿಕೆಗಳು, ವಿಧಿ ನಿಷೇಧಗಳು ಮಾನವನ ನಿತ್ಯ ಬದುಕಿನೊಂದಿಗೆ ಬೇರ್ಪಡಿಸಲಾಗದ ಸಂಬಂಧವನ್ನು ಹೊಂದಿವೆ. ಇಂತಹ ನಂಬಿಕೆಗಳು, ವಿಧಿ-ನಿಷೇಧಗಳನ್ನು ಕೆಲವು ವರ್ಗಗಳು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಜಾರಿಗೊಳಿಸಿದ್ದರೆ, ಇನ್ನು ಕೆಲವು ಅನುಭವದಿಂದ ಜಾರಿಗೆ ಬಂದವುಗಳಾಗಿವೆ. ಆದರೆ ವಿವಿಧ ಜಾತಿ, ಧರ್ಮ ಮತ್ತು ಕೋಮುಗಳ ನಡುವೆ ಸಾಮಾಜಿಕ-ರಾಜಕೀಯ ಸಂದರ್ಭದಲ್ಲಿ ಮಾನವನ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡುತ್ತಿವೆ.

ಪೀಠಿಕೆ

ನಂಬಿಕೆಯು ಮಾನವನಲ್ಲಿ ಪರಂಪರಾನುಗತವಾಗಿ ಅಂಗೀಕೃತವಾದ ಒಂದು ಪರಿಕಲ್ಪನೆ. ಇಂತಹ ಪರಿಕಲ್ಪನೆಯಿಂದ ನಂಬಿಕೆ, ವಿಧಿ-ನಿಷೇಧಗಳು ಹುಟ್ಟಿಕೊಂಡಿವೆ. ಇವು ಮಾನವನ ಬದುಕಿನೊಂದಿಗೆ ಬೇರ್ಪಡಿಸಲಾರದ ಸಂಬಂಧವನ್ನು ಹೊಂದಿವೆ. ಅವು ಸೂಚನೆ, ನಿಯಮ, ವಿಧಿ-ನಿಷೇಧ, ನಿರ್ದೇಶನ, ಅಗ್ರಹ, ಅದೇಶ ಮತ್ತು ಆಜ್ಞೆಗಳ ರೂಪದಲ್ಲಿ ಮಾನವನ ನಿತ್ಯ ಬದುಕಿನೊಂದಿಗೆ ಸಂಬಂಧವನ್ನು ಕಂಡುಕೊಂಡಿವೆ. ಆಲೋಚನೆ, ರೂಢಿ, ಜೀವನಕ್ರಮ, ಸಂಪ್ರದಾಯ, ಆಚರಣೆಗಳು ಮೂಲಭೂತವಾಗಿ ನಂಬಿಕೆಗಳಿಂದ ಪ್ರೇರಿತವಾದವುಗಳೆಂದೇ ಹೇಳಬಹುದು. ವ್ಯಕ್ತಿಯ ಜೀವನದ ಘಟ್ಟಗಳಲ್ಲಿ ಆಕಸ್ಮಿಕವಾಗಿ ಯಾವುದೇ ಒಂದು ಘಟನೆ ಪದೇ ಪದೇ ಪುನರಾವರ್ತನೆಗೊಂಡಾಗ ಅದು ನಂಬಿಕೆಯಾಗಿ ಉಳಿದುಕೊಂಡು ಬರುತ್ತದೆ. ಉದಾ : ಗರ್ಭಿಣಿಯರು ನದಿ ದಾಟಬಾರದು ಎಂಬ ನಂಬಿಕೆ, ಬೆಕ್ಕು, ಹೆಣ, ಒಂಟಿ ಬ್ರಾಹ್ಮಣ,ವಿಧವೆ ಎದುರು ಬಂದರೆ ಅಪಶಕುನ ಎನ್ನುವ ನಂಬಿಕೆ. ಇದರಿಂದ ಪರಿಹಾರ ಪಡೆದುಕೊಳ್ಳಲು, ತನ್ನ ಮೇಲೆ ತಾನೇ ಕೆಲವು ವಿಧಿ-ನಿಷೇಧಗಳನ್ನು ಹಾಕಿಕೊಂಡು ಅದರ ಚೌಕಟ್ಟಿನಲ್ಲಿಯೇ ಬದುಕನ್ನು ನಡೆಸುವ ರೂಢಿಯನ್ನು ಕಲಿತುಕೊಂಡನು. ಇಂತಹ ನಂಬಿಕೆಗಳನ್ನು ಆರ್.ಎಸ್.ಬಾಗ್ಸ್ ವೈಜ್ಞಾನಿಕ ಬಗೆಯಾಗಿ ಅರ್ಥೈಸಿದ್ದಾರೆ.

ಮೂಲತಃ ಕಾಲ್ಪನಿಕ ಆಲೋಚನೆಯೊಂದು ವೈಯಕ್ತಿಕ ಅನುಭವದ ನೆಲೆಯಲ್ಲಿ ಹುಟ್ಟಿಕೊಂಡು ಸಾಮೂಹಿಕವಾಗಿ ಮಾನ್ಯತೆ ಪಡೆದುಕೊಂಡರೆ ಅದು ನಂಬಿಕೆಯಾಗುತ್ತದೆ. ಪ್ರಕೃತಿಯ ರಹಸ್ಯವನ್ನು ಭೇದಿಸುವಲ್ಲಿ ವಿಫಲನಾದ ಮಾನವ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟ, ಆಚರಣೆಗಳ ಫಲವಾಗಿ ನಂಬಿಕೆಗಳು ಹುಟ್ಟಿಕೊಂಡಿವೆ. ಭಾರತದ ಬಹುತೇಕ ಎಲ್ಲ ಗ್ರಾಮಗಳಲ್ಲಿ ಇನ್ನೂ ಕೆಲವು ನಂಬಿಕೆಗಳು ಧಾರ್ಮಿಕ ನೆಲೆಗಟ್ಟನ್ನು ಪಡೆದುಕೊಂಡಿರುವುದರಿಂದ, ಸಾಮಾಜಿಕ ಜೀವನದೊಂದಿಗೆ ಹಾಸು ಹೊಕ್ಕಾಗಿದ್ದು, ಇನ್ನೂ ಮುಂದುವರೆದುಕೊಂಡು ಬಂದಿವೆ.

ಮಾನವನ ಇಂತಹ ಎಲ್ಲ ನಂಬಿಕೆಗಳನ್ನು ಮೂಢನಂಬಿಕೆಗಳೆಂದು ತಿರಸ್ಕರಿಸಲು ಸಾಧ್ಯವಿಲ್ಲ. ಏಕೆಂದರೆ ಅವು ಮೂಢನಂಬಿಕೆಗಳಾಗಿ ಕಂಡುಬಂದರೂ, ಕೆಲವೊಂದು ನಂಬಿಕೆಗಳು, ನಿಷೇಧಗಳು ವೈಜ್ಞಾನಿಕ ಸ್ವರೂಪವನ್ನು ಪಡೆದುಕೊಂಡಿವೆ. ಮತ್ತೆ ಕೆಲವು ನಂಬಿಕೆಗಳು, ವಿಧಿ-ನಿಷೇಧಗಳು ಸಮಾಜದಲ್ಲಿನ ಅಹಿತಕರ ಘಟನೆಗಳನ್ನು ನಿವಾರಿಸು ವುದರೊಂದಿಗೆ ಸಮಾಜದ ಅನ್ಯೋನ್ಯ ಬಾಂಧವ್ಯಕ್ಕೂ ಕಾರಣವಾಗಿವೆ. ಜಾತಿ, ಧರ್ಮ, ಲಿಂಗ, ಕೋಮುಗಳ ನಡುವೆ ಸಾಮಾಜಿಕ-ರಾಜಕೀಯ ಸಂದರ್ಭದಲ್ಲಿ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡುತ್ತವೆ.

ಇನ್ನು ಭಯ ಮತ್ತು ಭಾವನಾ ಮೂಲವಾದ ಒಂದು ನಂಬಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತಹದ್ದು ಅಥವಾ ಬಲಗೊಳಿಸುವಂತಹದ್ದು ನಿಷೇಧವಾಗಿದೆ. ಇದನ್ನು ಮಾಡಬಾರದು. ಇದು ಕೆಡುಕು ಎನ್ನುವ ಸಾಮಾಜಿಕ, ಧಾರ್ಮಿಕ ಪ್ರತಿಬಂಧಕವೇ ನಿಷಿದ್ಧ. ಹೀಗಾಗಿ ಲಿಖಿತ ಕಾನೂನನ್ನು ಮೀರಿಸುವಂತಹ ಶಕ್ತಿ ನಿಬಂಧನೆಯಾಗಿ ನಿಷೇಧ ಕಾರ್ಯ ನಿರ್ವಹಿಸುತ್ತದೆ. ನಿಷೇಧಕ್ಕೆ ಮತ್ತು ಸಾಮಾಜಿಕ ನಿಯಮಗಳಿಗೂ ಅವಿನಾಭಾವ ಸಂಬಂಧವಿದೆ. ಏಕೆಂದರೆ ನಿಷೇಧದ ಹಿಂದೆ ಸಾಮಾಜಿಕ ನಿಯಮಗಳು ಇರುತ್ತವೆ. ಆದ್ದರಿಂದ ನಿಷೇಧವನ್ನು ಮೀರುವುದೆಂದರೆ ಸಾಮಾಜಿಕ ನಿಯಮಗಳನ್ನು ಮೀರಿದಂತಾಗು ತ್ತದೆ. ಹೀಗೆ ಸಾಮಾಜಿಕ ನಿಯಮಗಳನ್ನು ಉಲ್ಲಂಘಿಸಿದ ನಿಷೇಧವೇ ಸೇಡನ್ನು ತೀರಿಸಿ ಕೊಳ್ಳುತ್ತದೆ ಎಂದೇ ತಿಳಿಯಲಾಗುತ್ತದೆ. ಕೆಲವು ಸಮುದಾಯಗಳಲ್ಲಿ ನಿಷೇಧ ಮುರಿಯುವ ವ್ಯಕ್ತಿಗೆ ‘ಅಪವಿತ್ರ’ ಎಂದು ಭಾವಿಸಲಾಗುತ್ತದೆ ಮತ್ತು ಆತನಿಗೆ ಶಿಕ್ಷೆ ವಿಧಿಸಲಾಗುತ್ತದೆ.

ಕುಟುಂಬಗಳ ಸೌಖ್ಯಕ್ಕೆ, ಗ್ರಾಮಗಳ ಶಾಂತಿಗೆ, ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಲು ತಮ್ಮದೇ ಆದ ನ್ಯಾಯ ಪರತೆಯನ್ನು ರೂಢಿಸಿಕೊಂಡು ಬರಲಾಗಿದೆ. ಅವು ಸಾಮಾಜಿಕ ಚೌಕಟ್ಟಿನಲ್ಲಿ ರೂಪಿತವಾಗಿರುತಿದ್ದರಿಂದ ಕಾನೂನಿನ ಅನ್ವಯ ಜಾರಿಗೆ ಬರುವ ಕಟ್ಟಳೆಗಳಿಗಿಂತ ಹೆಚ್ಚು ಆತ್ಮೀಯವಾಗಿರುತ್ತವೆ. ಹೆಚ್ಚು ಮುಖ್ಯವೆನಿಸುತ್ತವೆ. ಆದ್ದರಿಂದಲೇ ಇಂತಹ ಕಟ್ಟಳೆಗಳಿಗೆ ಹಿಂದಿನ ಸಮಾಜದಲ್ಲಿ ಹೆಚ್ಚು ತಲೆಬಾಗುತ್ತಿದ್ದರು. ಅವುಗಳನ್ನು ಯಾರೂ ಉಲ್ಲಂಘಿಸುತ್ತಿರಲಿಲ್ಲ. ಅಂದಿನ ಸಮಾಜದಲ್ಲಿ ನ್ಯಾಯ ಪದ್ಧತಿಯು ಅಪರಾಧಕ್ಕೆ ತಕ್ಕಂತೆ ಬೇರೆ ಬೇರೆಯಾಗಿರುತ್ತಿತ್ತು. ಕಳ್ಳತನ, ಕುಡಿತ, ಹಲ್ಲೆ, ಹೆಣ್ಣು ಮಕ್ಕಳ ಮಾನ ಅಪಹರಣಕ್ಕೆ ಸಂಬಂಧಿಸಿದ ಅಪರಾಧಗಳು ಹಳ್ಳಿಗಳಲ್ಲಿ ತೀವ್ರವಾಗಿ ಪರಿಗಣಿಸಲ್ಪಡುತ್ತಿದ್ದವು. ಅದು ದಂಡದ ರೂಪದಲ್ಲಿರುತ್ತಿತ್ತು. ದೈವದವರಿಗೆ ಊಟ ಹಾಕಿಸುವ ಪರಿಪಾಠವಿತ್ತು. ಇದಕ್ಕಿಂತ ಘೋರವಾದುದೆಂದರೆ, ಕುಲದವರು ಹಾಕಿದ ಬಹಿಷ್ಕಾರ ಮತ್ತು ಊರಿನವರು ಹಾಕುವ ಬಹಿಷ್ಕಾರ. ಕುಲದವರು ಬಹಿಷ್ಕಾರ ಹಾಕಿದರೆ ಜಾತಿ-ಬಾಂಧವರು ಅಪರಾಧಿಯನ್ನು ಯಾವುದೇ ಮದುವೆ ಮುಂಜಿಗೆ ಮೊದಲಾದ ಶುಭಕಾರ್ಯಗಳಲ್ಲಿ ಪ್ರವೇಶ ನೀಡುವುದಿಲ್ಲ. ಊರಿನವರು ಬಹಿಷ್ಕಾರ ಹಾಕಿದರೆ ಇಡೀ ಊರಿನ ಹೊರಗೆ ಇರುವುದು. ಅಂತಹ ವ್ಯಕ್ತಿಗೆ ಬೆಂಕಿ, ನೀರು ಕೊಡುವುದಿಲ್ಲ. ಇಂತಹ ಶಿಕ್ಷೆಯನ್ನು ಯಾರೂ ಉಲ್ಲಂಘಿಸುತ್ತಿರಲಿಲ್ಲ. ಎಲ್ಲ ತಮ್ಮ ಒಳ್ಳೆಯದಕ್ಕಾಗಿಯೇ ಎಂಬ ಮನೋಭಾವನೆ ಗ್ರಾಮಸ್ಥರಲ್ಲಿದ್ದುದು ಅದಕ್ಕೆ ಕಾರಣ.

ಇಂತಹ ನಿಷೇಧಗಳು ಹಲವಾರು ಉದ್ದೇಶಗಳಿಂದ ಬಳಕೆಗೆ ಬಂದಿರಬಹುದು. ಮೊದಲನೆಯದಾಗಿ ಗ್ರಾಮ, ಹಳ್ಳಿಗಳ ಹಿರಿಯ ಮುಖಂಡರು, ಪೂಜಾರಿಗಳು ಮೊದಲಾದ ಪ್ರಮುಖರು ತಮ್ಮ ರಕ್ಷಣೆಗಾಗಿ ಮಾಡಿಕೊಂಡಿರುವ ನಿಷೇಧಗಳು. ನಿಗೂಢ ಶಕ್ತಿಗಳ ಪ್ರಭಾವದಿಂದ ಸಾಮಾನ್ಯ ಮಾನವರ ರಕ್ಷಣೆ, ಆಹಾರ ಸೇವನೆ ಮೊದಲಾದ ಅನಿಷ್ಟ ಶಕ್ತಿಗಳಿಂದ, ರೋಗಗಳಿಂದ ರಕ್ಷಣೆ ಉದಾ : ರಾತ್ರಿ ವೇಳೆಯಲ್ಲಿ ಊಟ ಮಾಡಬಾರದು. ರಾತ್ರಿ ವೇಳೆ ಎಲ್ಲೆಂದರಲ್ಲಿ ಓಡಾಡಬಾರದು ಎನ್ನುವುದು. ಮೂರನೆಯದಾಗಿ ಕಳ್ಳಕಾರರಿಂದ ಆಸ್ತಿಪಾಸ್ತಿಗಳನ್ನು ರಕ್ಷಿಸಿಕೊಳ್ಳುವುದು. ಇದೇ ಅರ್ಥದಲ್ಲಿ ಮನೋವಿಜ್ಞಾನಿ ಸಿಗ್ಮಾಂಡ್ ಫ್ರಾಯ್ಡಾ ಯಾವುದೇ ಒಂದು ವಸ್ತು ಅಥವಾ ವ್ಯಕ್ತಿಯಿಂದ ಅಪಾಯವಾದೀತು ಎನ್ನುವ ಮನುಷ್ಯನ ಸೂಕ್ತ ಮನಸ್ಸಿನ ಪ್ರೇರಣೆಯೇ ನಿಷೇಧದ ಹಿನ್ನೆಲೆಯಲ್ಲಿದೆ ಎಂದಿದ್ದಾರೆ. ವೂಂಟ್ ಅವುಗಳನ್ನು ‘‘ಮಾನಸಿಕ ರಕ್ಷಕ’’ ಎಂದು ಕರೆದಿದ್ದಾರೆ. ಆದರೆ ಇಂತಹ ನಿಷೇಧಗಳ ಅಗತ್ಯತೆ ಅರ್ಥವನ್ನು ಸಂಶೋಧನೆಗೆ ಒಳಪಡಿಸಿ ಆಯ್ಕೆಮಾಡಿ ಅಳವಡಿಸಿಕೊಂಡರೆ ಉತ್ತಮ ಪ್ರಯೋಜನವಾಗುವುದು.

ಇಂತಹ ನಂಬಿಕೆ ಮತ್ತು ನಿಷೇಧಗಳನ್ನು ಮೀರಿ ವರ್ತಿಸಿದ ವ್ಯಕ್ತಿಯಿಂದ ಸಮಾಜದ ಸೌಹಾರ್ದತೆಗೆ ಧಕ್ಕೆಯುಂಟಾಗುತ್ತದೆ ಎನ್ನುವುದನ್ನು ಭಾವಿಸಿಯೋ, ಸಮಾಜದ ಕಟ್ಟುಪಾಡು ಗಳನ್ನು ಮೀರಿದ ವ್ಯಕ್ತಿಗೆ ಶಿಕ್ಷಿಸಲು, ಸಮಾಜದ ಜಗಳಗಳನ್ನು ನಿವಾರಿಸಲು ನ್ಯಾಯ ಪದ್ಧತಿಯು ಅಸ್ತಿತ್ವಕ್ಕೆ ಬಂದಿರಬಹುದು. ಹಿಂದೆಲ್ಲ ರಾಜರ ಅಥವಾ ಸಂಸ್ಥಾನಿಕರ ಪರವಾಗಿ ಗೌಡನೋ, ಪಟೇಲನೋ ಊರಿನ ಆಡಳಿತವನ್ನು ನಿಯಂತ್ರಿಸುತ್ತಿದ್ದ. ಸಾಮಾನ್ಯವಾಗಿ ನಮ್ಮ ಬಹುಪಾಲು ಗ್ರಾಮಗಳು, ಉಚ್ಚಕುಲದವರು, ಶ್ರೀಮಂತರು, ಮದುವೆ ಮುಂಜಿಗಳಲ್ಲಿ, ಅಣ್ಣ-ತಮ್ಮಂದಿರ ಜಗಳಗಳಲ್ಲಿ ಬೇರೆಯಾಗುವುದರಲ್ಲಿ ಅನಿವಾರ್ಯವಾಗಿದ್ದರು. ಒಂದರ್ಥದಲ್ಲಿ ಇವರು ಅಧಿಕೃತ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಆಧುನಿಕತೆ ಕಾಲಿಟ್ಟಂತೆ ಇಂತಹ ನ್ಯಾಯ ಪದ್ಧತಿಯು ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಿದೆ.

ಇಂತಹ ನಂಬಿಕೆಗಳು, ವಿಧಿ-ನಿಷೇಧಗಳು ಮತ್ತು ನ್ಯಾಯಪದ್ಧತಿಗಳು ಪ್ರತಿಯೊಂದು ಸಮುದಾಯಗಳಲ್ಲೂ ಏಕ ಪ್ರಕಾರವಾಗಿ ಕಂಡುಬರುತ್ತಿದ್ದರೂ ಕೆಲವೊಂದು ನಂಬಿಕೆಗಳು, ವಿಧಿ-ನಿಷೇಧಗಳು ಸಮುದಾಯದಿಂದ ಸಮುದಾಯಕ್ಕೆ ಭಿನ್ನವಾಗಿರುತ್ತವೆ. ಈ ಲೇಖನದಲ್ಲಿ ಅಥಣಿ ಪರಿಸರದಲ್ಲಿನ ವಾಲ್ಮೀಕಿ ಸಮುದಾಯದ ನಂಬಿಕೆ, ವಿಧಿ-ನಿಷೇಧ ಮತ್ತು ನ್ಯಾಯಪದ್ಧತಿಯನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ.

ನಂಬಿಕೆ ಮತ್ತು ನಿಷೇಧಗಳು ಕಣ್ಣು ಹಾರುವುದು

ಮಹಿಳೆಯರಿಗೆ ಎಡಗಡೆಯ ಕಣ್ಣು ಹಾರಿದರೆ ಶುಭ ಶಕುನವೆಂದೂ, ಮನೆಗೆ ಸಂಬಂಧಿಕರು ಬರುವರೆಂದು ನಂಬುತ್ತಾರೆ. ಪುರುಷರಿಗೆ ಬಲಗಣ್ಣು ಹಾರಿದರೆ ಕಾರ್ಯಸಿದ್ದಿ ಎನ್ನುವ ನಂಬಿಕೆ ಇದೆ.

ಹಲ್ಲಿ ಶಕುನ

ಮನೆಗಳಲ್ಲಿ ಯಾವುದಾದರೂ ಶುಭಕಾರ್ಯಗಳ ಬಗ್ಗೆ ಕುರಿತು ಮಾತನಾಡುವಾಗ ಬಾಗಿಲ ಮೇಲೆ, ಬೇರೆ ಬೇರೆ ಸ್ಥಳಗಳಲ್ಲಿ ಹಲ್ಲಿ ಲೊಚಗುಟ್ಟಿದಾಗ ಅದು ಲೊಚಗುಟ್ಟುವ ಶಬ್ದಗಳ ಸಂಖ್ಯೆಯ ಆಧಾರದ ಮೇಲೆ ಎರಡು ಬಾರಿ ಲೊಚಗುಟ್ಟಿದರೆ ಶುಭವೆಂದು, ಕಾರ್ಯಸಿದ್ದಿಯೆಂದು ಮೂರುಬಾರಿ ಲೊಚಗುಟ್ಟಿದರೆ ಅಶುಭವೆಂದು, ಭಾವಿಸುವ ಪ್ರತೀತಿ ವಾಲ್ಮೀಕಿ ಸಮುದಾಯಗಳಲ್ಲೂ ಇದೆ.

ಕಾಗೆ ಶಕುನ

ಹಿಂದೂ ಸಂಪ್ರದಾಯಗಳಲ್ಲಿ ಕಾಗೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಕಾಗೆ ಮನೆಯ ಒಳಗೆ ಬಂದರೆ ಅಪಶಕುನವಾಗುತ್ತದೆ ಎಂದು ಭಾವಿಸಿ ಇಡೀ ಮನೆಯನ್ನು ಸಾರಿಸಿ ಸಿಹಿ ಅಡುಗೆಗಳನ್ನು ಮಾಡಿ ದೇವರಿಗೆ ನೈವೇದ್ಯ ಮಾಡಬೇಕು. ಆಗ ಯಾವುದೇ ತೊಂದರೆಯಾಗುವುದಿಲ್ಲವೆಂಬ ನಂಬಿಕೆಯಿದೆ. ಕಾಗೆ ಮನೆಯ ಮೇಲಿಂದ ಅರಚುತ್ತಾ ಹಾದು ಹೋದರೆ ನೆಂಟರಿಷ್ಟರು ಬರುತ್ತಾರೆ. ಮನೆಯನ್ನು ಸುತ್ತು ಹಾಕುತ್ತಾ ಅರಚುತ್ತಿದ್ದರೆ ಸಾವಿನ ಸುದ್ದಿ ಬಂದೇ ಬರುತ್ತದೆ. ಇದು ಅನುಭವದ ಮಾತು ಎನ್ನುವುದು ಈ ಸಮುದಾಯದ ಅಭಿಪ್ರಾಯ ಮಾತ್ರವಾಗಿಲ್ಲ ಎಲ್ಲ ಸಮುದಾಯದ ಅಭಿಪ್ರಾಯವಾಗಿದೆ. ಕಾಗೆ ತಲೆಗೆ ಬಡಿದು ಹೋದರೆ ಸ್ನಾನ ಮಾಡಿ ದೇವರಿಗೆ ಎಣ್ಣೆ ನೀಡಿ ಬರುವವರೆಗೆ ಮನೆಯೊಳಗೆ ಬರಬಾರದೆಂಬ ನಿಷೇಧವಿದೆ.

ಸತ್ತ ವ್ಯಕ್ತಿಯು ೩ ದಿನಗಳ ನಂತರ ಮಾಡುವ ತಿಥಿಗಳಲ್ಲಿ ಆ ವ್ಯಕ್ತಿಯ ಇಚ್ಛೆ ಯನ್ನು ಪೂರೈಸಲು ಕಾಗೆಯ ಅವಶ್ಯಕತೆ ಎಲ್ಲ ಸಮುದಾಯಗಳಿಗೂ ಇರುತ್ತದೆ. ಅಂದಿನ ದಿನ ಸಗಣಿಯ ಕುಳ್ಳಿನಿಂದ ಬೇಯಿಸಿದ ಅನ್ನವನ್ನು ಕಂಚಿನ ತಟ್ಟೆಯಲ್ಲಿ ಹಾಕಿ ಪೂಜಿಸಿ ಕಾಗೆಗೆ ಕೂಳು ಹಾಕಲು ಹೋದಾಗ ತಕ್ಷಣವೇ ಕಾಗೆ ಮುಟ್ಟಿದರೆ ಸತ್ತ ವ್ಯಕ್ತಿಯ ಋಣ ಇಲ್ಲಿಗೆ ಮುಗಿಯಿತು ಎಂದು ತಿಳಿಯಲಾಗುತ್ತದೆ. ಒಂದು ವೇಳೆ ಆತನಲ್ಲಿ ಆಸೆಗಳಿದ್ದರೆ ಅಂದರೆ ಮಕ್ಕಳಿದ್ದರೆ ಅವರನ್ನು ಸಾಕುವ ಜವಾಬ್ದಾರಿಯಲ್ಲಿಯೇ ಕೊರಗಿದ್ದರೆ ಅಂತಹ ಸಮಯದಲ್ಲಿ ಯಾರು ತನ್ನ ಮಕ್ಕಳನ್ನು ಸಾಕಬಲ್ಲರೂ ಎಂದು ನಂಬಿರುತ್ತಾನೋ ಅಂತಹವರ ಕೈಯಿಂದ ಇಟ್ಟ ಕೂಳನ್ನು ಕಾಗೆ ಮುಟ್ಟುತ್ತದೆ ಎಂದು ಭಾವಿಸಲಾಗುತ್ತದೆ. ಇದು ಸತ್ಯವೂ ಹೌದು.

ಟಿವುಕದ ಶಕುನ

ಈ ಪಕ್ಷಿಯು ರಾತ್ರಿ ವೇಳೆ ಮನೆಯ ಮೇಲೆ ಅರಚುತ್ತಾ ಮೂರುದಿನ ಹಾರಿದರೆ ಆ ಮನೆಯಲ್ಲಿ ಯಾರಾದರೂ ರೋಗದಿಂದ ಬಳಲುತ್ತಿದ್ದರೆ ಅವರು ಸಾಯುತ್ತಾರೆ. ಇಲ್ಲವೇ ಸಾವಿನ ಸುದ್ದಿ ಬರುತ್ತದೆ ಎನ್ನುವುದು ಒಂದು ನಂಬಿಕೆಯಾಗಿದೆ.

ಬೆಕ್ಕು

ಬೆಕ್ಕು ಪ್ರತಿಯೊಬ್ಬರು ಮನೆಯಲ್ಲಿ ಸಾಕುವ ಮುದ್ದು ಪ್ರಾಣಿ. ಇಂತಹ ಬೆಕ್ಕು ಮನೆಯಲ್ಲಿ ಬೆಳಿಗ್ಗೆ ಎದ್ದು ಯಾವ ದಿಕ್ಕಿನಲ್ಲಿ ಕುಳಿತು ನಾಲಿಗೆಯಿಂದ ತನ್ನ ಕಾಲಿಗೆ ತಿಕ್ಕಿ ಮುಖ ತೊಳೆದುಕೊಳ್ಳುತ್ತದೆಯೋ ಆ ದಿಕ್ಕಿನಲ್ಲಿರುವ ನೆಂಟರಿಷ್ಟರು ಮನೆಗೆ ಬರುತ್ತಾರೆ ಎಂಬುದನ್ನು ಪರೀಕ್ಷಿಸಿದ್ದೇವೆ. ಅದು ಹಾಗೆ ಕೂಡ ಆಗಿದೆ. ಅದೇ ಬೆಕ್ಕು ಶುಭ ಕೆಲಸಗಳಿಗೆ ಹೋಗುವಾಗ ಕಾಲಿಗೆ ಅಡ್ಡ ಬಂದರೆ ಇಲ್ಲವೇ ಬಲದಿಂದ ಎಡಕ್ಕೆ ಹಾದು ಹೋದರೆ ಶುಭವಾಗುವುದಿಲ್ಲ. ಹೋದ ಕೆಲಸವೂ ಆಗುವುದಿಲ್ಲ. ಅದಕ್ಕೆ ಆ ಕೆಲಸ ಮಾಡವುದನ್ನು ಅಲ್ಲಿಗೆ ನಿಷೇಧಿಸುತ್ತೇವೆ ಎನ್ನುವುದು ಬ್ಯಾಡರಹಟ್ಟಿ ವಾಲ್ಮೀಕಿ ಸಮುದಾಯದ ಅಭಿಪ್ರಾಯವಾಗಿದೆ.

ನಾಲಿಗಿಗೆ ತುದಿಯಲ್ಲಿ ಮಚ್ಚೆ ಇರುವವರ ನುಡಿಗಳು

ಇಂತಹ ಯಾವುದೇ ಪುರುಷ ಅಥವಾ ಮಹಿಳೆಯರು ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಈ ಕೆಲಸ ಆಗುವುದಿಲ್ಲ, ಅದು ಉತ್ತಮವಾಗಿಲ್ಲವೆಂದು ಮಾತನಾಡಿದರೆ ಅಂತಹ ಯಾವ ಕೆಲಸವೂ ಆಗುವುದಿಲ್ಲ ಆದ್ದರಿಂದ ಅವರಿಗೆ ಬೈದು ಸುಮ್ಮನಿರಿಸುತ್ತೇವೆ ಎನ್ನುತ್ತಾರೆ.

ಮನೆಯ ಸೊಸೆಯಾಗಿ ಬಂದವಳ ಕಾಲ್ಗುಣ ಚೆನ್ನಾಗಿದ್ದರೆ ಮನೆಯಲ್ಲಿ ಸುಖ ಸಮೃದ್ದಿ ಇರುತ್ತದೆ. ಇಲ್ಲವಾದರೆ ಅದು ಸರ್ವನಾಶವಾಗುತ್ತದೆ ಎನ್ನುತ್ತಾರೆ. ಅದನ್ನು ಹಾಗೆ ಪರೀಕ್ಷಿಸುತ್ತೀರಾ ಎಂದು ಕೇಳಿದಾಗ ನೀಡಿದ ಉತ್ತರವೆಂದರೆ; ಮದುವೆಯಾದ ಮಹಿಳೆ ಗಂಡನ ಮನೆಗೆ ಬರುವಾಗ ಗೊತ್ತಿಲ್ಲದೆ ಎಡುವುದು, ಕಾಲನ್ನು ಸವರಿ ನಡೆಯುವುದು. ಬಾಗಿಲನ್ನು ದಾಟುವಾಗ ಬಾಗಿಲಿಗೆ ಬೆರಳು ಬಡಿಯುವುದು. ಇನ್ನೊಬ್ಬರ ಮೇಲೆ ಜೋ ಹೊಡೆಯುವುದು. ಮನೆ ತುಂಬಿಸಿ ಕೊಳ್ಳುವ ಸಮಯದಲ್ಲಿ ಬಾಗಿಲಲ್ಲಿ ಬೆಕ್ಕು ಅಡ್ಡ ಬರುವುದು, ಇಲ್ಲವೇ ಬಾಗಿಲ ಮೇಲೆ ದವಸ ಧಾನ್ಯಗಳನ್ನು ಅಳೆಯುವ ಸೇರಿನಲ್ಲಿ ಇಡುವ ಸಂದರ್ಭದಲ್ಲಿ ಅಂತಹ ಧಾನ್ಯಗಳು ಆ ಮನೆಯಲ್ಲಿ ಇಲ್ಲದೇ ಹೋದರೆ ಅವುಗಳ ಮೇಲೆ ಆಕೆಯ ಕಾಲ್ಗುಣವನ್ನು ತಿಳಿಯುತ್ತೇವೆ ಎನ್ನುತ್ತಾರೆ. ಇದು ಅನುಭವದ ಮಾತು ಎನ್ನುತ್ತಾರೆ. ಪಕ್ಕದ ಮನೆಯ ಸೊಸೆಯನ್ನು ಅಮಾವಾಸ್ಯೆಯ ದಿನ ಮನೆಯಿಂದ ಹೊರದಬ್ಬಿದರು. ಇದರಿಂದ ಮದುವೆಯಾದ ಹುಡುಗನ ಮನೆಯಲ್ಲಿದ್ದ ೩೦ ಎಕರೆ ಭೂಮಿ, ಭಾವಿ, ಆಸ್ತಿ, ಮನೆ ಎಲ್ಲಾ ಬರಿದಾಗಿ ಇಂದು ಕೂಲಿ ಮಾಡುತ್ತಿ ದ್ದಾರೆ. ಅದೇ ಹುಡುಗಿಯ ಮನೆಯಲ್ಲಿ ಏನೂ ಇರಲಿಲ್ಲ. ಹುಡುಗಿ ತನ್ನ ಅಪ್ಪನ ಮನೆ ಸೇರಿದ್ದರಿಂದ ಅವರು ಅತ್ಯಂತ ಶ್ರೀಮಂತರಾಗಿದ್ದರೆ ಎನ್ನುವ ಅಭಿಪ್ರಾಯವನ್ನು ಹೇಳುತ್ತಾರೆ. ಮನೆ ಅನುಕೂಲವಾಗಿದ್ದರೆ ಹೆಣ್ಣು ಮನೆಗೆ ಬಂದ ನಂತರ ಮನೆಯಲ್ಲಿ ಏರಿಕೆಯು ಇಳಿಯುತ್ತಾ ಬಂದರೆ ಆಕೆಯ ಕಾಲ್ಗುಣ ಸರಿಯಲ್ಲ ಎಂದು ತಿಳಿಯಲಾಗುತ್ತದೆ.

ಮದುವೆ ಸಮಯದಲ್ಲಿನ ನಂಬಿಕೆ, ವಿಧಿನಿಷೇಧ

ಹಿಂದೂ ಸಮುದಾಯಗಳು ಮದುವೆ ಒಂದು ಪವಿತ್ರ ಬಂಧನವೆಂದು ನಂಬಿವೆ. ಮದುವೆಯ ಸಂದರ್ಭದಲ್ಲಿ ವಧುವಿನ ಮನೆಯಲ್ಲಿ ಮದುವೆಯಾದರೆ ಗಂಡಿನ ಚಪ್ಪರ ಪ್ರವೇಶವಾಗಬೇಕು. ಹಿಂದಿನ ಮದುವೆಗಳು ೧೦ ದಿನಗಳವರೆಗೆ ಜರುಗುತ್ತಿದ್ದು, ಒಂದೊಂದು ದಿನ ಒಂದೊಂದು ನಿಯಮಗಳನ್ನು ಅನುಸರಿಸಲಾಗುತ್ತಿತ್ತು. ಗಂಡು ಹೆಣ್ಣಿಗೆ ತಾಳಿ ಕಟ್ಟುವಾಗ ಅರ್ಥೆಚ್ಚ, ಕಾಮೇಚ್ಚ, ಧರ್ಮೆಚ್ಚ ಎಂದು ಹೇಳಿ ಮೂರು ಗಂಟನ್ನು ಹಾಕಬೇಕು. ಅದರಿಂದ ಬಹುಕಾಲ ಜೀವನ ನಡೆಸಬಹುದು ಎನ್ನುವ ನಂಬಿಕೆ. ಅದಕ್ಕಿಂತ ಮೊದಲು ಧಾರೆ ಮಾಡಿಕೊಡುವಾಗ ಸುರಿಗೆ ಕಟ್ಟುವುದನ್ನು ಮಾಡಲಾಗುವುದು. ನಾಲ್ಕು ಮೂಲೆಗೆ ನಾಲ್ಕು ಕುಂಬಾರ ಮಾಡಿದ ಮಡಿಕೆಗಳಿಗೆ ದಾರವನ್ನು ಸುತ್ತಲಾಗುವುದು. ಅನಿಷ್ಠ ಶಕ್ತಿಗಳು ಅದರಿಂದ ಒಳಗೆ ಹೋಗಬಾರದು ಎಂಬ ನಂಬಿಕೆಯಿಂದ ಹೀಗೆ ಮಾಡಲಾಗುತ್ತದೆ. ಈ ಸುರಿಗೆಯನ್ನು ಯಾರು ದಾಟಬಾರದು ನಾಯಿದಾಟಿ ಹೋದರೆ ಅದು ಅಪಶಕುನವೆಂದು ಒಂದು ವರ್ಷದಲ್ಲಿ ಗಂಡಿಗೆ ಏನಾದರು ಗಂಡಾಂತರವಾಗುತ್ತದೆ ಎಂಬ ನಂಬಿಕೆ. ಆದ್ದರಿಂದ ಯಾರು ಅದನ್ನು ದಾಟಬಾರದೆಂದು ನಿಷೇಧವಿರುತ್ತದೆ. ಮದುವೆಯಾದ ನಂತರ ಮನೆ ತುಂಬಿಸಿಕೊಳ್ಳುವಾಗ ಬಾಗಿಲಲ್ಲಿ ಅಳೆಯುವ ಮಾಪನಗಳಲ್ಲಿ ದವಸ ಧಾನ್ಯಗಳನ್ನು ಇಟ್ಟು ಕಾಲಿನಿಂದ ಜೋರಾಗಿ ಒದೆಯಲು ಹೇಳುತ್ತಾರೆ. ಒದ್ದಾಗ ಮನೆ ತುಂಬಿ ಚೆಲ್ಲಿದರೆ ಮನೆ ಸವುೃದ್ದಿಯಾಗಿ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಪ್ರಸ್ತುತ ಯಾದಿ ಮೇ ಶಾದಿ ನಡೆಯುತ್ತಿರುವುದರಿಂದ ಇಂತಹ ಪದ್ಧತಿಗಳು ಕಡಿಮೆಯಾಗಿವೆ ಎನ್ನುವುದು ಈ ಸಮುದಾಯದ ಅಭಿಪ್ರಾಯ.

ಗರ್ಭವತಿ ಮಹಿಳೆ

ಮಹಿಳೆಯು ಗರ್ಭವತಿಯಾದ ನಂತರ ೭ ರಿಂದ ೮ ತಿಂಗಳ ಒಳಗೆ ಸೀಮಂತ ಕಾರ್ಯಮಾಡಲಾಗುವುದು. ಇದನ್ನು ಮಾಡುವ ಉದ್ದೇಶ ಗರ್ಭದಲ್ಲಿರುವ ಮಗುವಿಗೆ ಉತ್ತಮ ಸಂಸ್ಕಾರ ಸಿಗಲಿ ಎಂಬುದು. ಗರ್ಭವತಿಯಾದ ಮಹಿಳೆ ನದಿಯನ್ನು, ಹಳ್ಳ ವನ್ನು ದಾಟುವಂತಿಲ್ಲ ಎಂಬ ನಿಷೇಧವಿದೆ. ಗಂಗೆ ಪವಿತ್ರಳಾಗಿರುವುದರಿಂದ ಆಕೆಯ ಮೇಲೆ ಹಾದು ಹೋಗಬಾರದು. ಹೋಗುವುದಾದರೆ ಮೊದಲು ಗಂಗೆಗೆ ಪೂಜೆ ಮಾಡಿ ದಾಟಬೇಕು. ಈಗ ಇದು ಇಲ್ಲವಾಗಿದೆ.

ಅದೇ ರೀತಿ ಗರ್ಭವತಿಯಾದ ಹೆಣ್ಣು, ಸತ್ತ ಹೆಣವನ್ನು ನೋಡಬಾರದು. ಸತ್ತ ಹೆಣವನ್ನು ಸ್ನಾನ ಮಾಡಿಸಿದ ನೀರನ್ನು ಹಾದು ಹೋಗಬಾರದು ಎಂಬ ನಿಷೇಧವಿದೆ. ಹಾದು ಹೋದರೆ ಗರ್ಭದಲ್ಲಿರುವ ಮಗುವಿಗೆ ಬಿಳಿತೊನ್ನಿನ ರೂಪದಲ್ಲಿ ರೋಗಬರುತ್ತದೆ. ಮಗು ಅಶಕ್ತವಾಗುತ್ತದೆ. ಕಣ್ಣು ಮುಚ್ಚಿದಂತೆ ಇರುತ್ತದೆ. ಅದು ಪರಿಹಾರವಾಗಬೇಕಾದರೆ ೩ ಶನಿವಾರ ಬೆಳಿಗ್ಗೆ ಒದ್ದೆ ಬಟ್ಟೆಯಲ್ಲಿ ಯಾರೊಂದಿಗೂ ಮಾತನಾಡದೆ ಹನುಮಂತ ದೇವರಿಗೆ ಹೋಗಿಬರಬೇಕು. ೩ನೇ ವಾರ ಮಗುವಿಗೆ ಬಟ್ಟೆಯನ್ನು ಅಲ್ಲಿಯೇ ತೆಗೆದು ಹಾಕಿಬರಬೇಕು. ಮನೆ ಒಳಗೆ ಬರುವಾಗ ಮಗುವಿಗೆ ಗೋ ಮೂತ್ರದಿಂದ ಸ್ನಾನ ಮಾಡಿಸಿ ಒಳಗೆ ಕರೆದುಕೊಂಡು ಹೋದರೆ ರೋಗವಾಸಿಯಾಗುತ್ತದೆ ಎಂಬುದು ನಂಬಿಕೆಯೂ ಹೌದು, ಸತ್ಯವು ಹೌದು ಎನ್ನುವುದು ಕೆಲವರ ಅಭಿಪ್ರಾಯ ಇದೆ. ಇದೇ ಸಮುದಾಯದ ಕೆಲವರಲ್ಲಿ ಔಷಧಿ ಕೊಡಿಸಿದರೆ ಹೋಗುತ್ತದೆ ಎಂದು ತಿಳಿಸಿದ್ದಾರೆ. ಮದುವೆಯಾದ ನಂತರ ಆಷಾಢದಲ್ಲಿ ಗಂಡ ಹೆಂಡತಿ ಮುಖ ನೋಡುವಂತಿಲ್ಲ. ನೋಡಿದರೆ ಗಂಡನಿಗೆ ದೋಷ, ಅತ್ತೆ ಸೊಸೆ ಒಂದೇ ಬಾಗಿಲಲ್ಲಿ ಓಡಾಡಬಾರದೆಂಬ ನಿಷಿದ್ಧವಿದೆ. ಒಂದೇ ಮನೆಯಲ್ಲಿ ಗರ್ಭವತಿಯರಿರಬಾರದು. ಒಂದೇ ಮನೆಯಲ್ಲಿ ೨ ಮಕ್ಕಳು ತೊಟ್ಟಿಲು ಕಟ್ಟಬಾರದು ಎಂದು ಹೇಳುತ್ತಾರೆ.

ಮಗುವಿನ ಜನನ

ಮಗು ಜನಿಸಿದರೆ ಜನಿಸಿದ ಮನೆಯಲ್ಲಿ ಸಡಗರ ಆದರೆ ಮಗುವಿಗೆ ಜನ್ಮ ನೀಡಿದ ತಾಯಿಗೆ ಸೂತಕ. ಆಕೆ ಪ್ರತ್ಯೇಕವಾಗಿರಬೇಕು. ಯಾರೂ ಮುಟ್ಟುವಂತಿಲ್ಲ. ಅಡಿಗೆ ಮಾಡುವಂತಿಲ್ಲ ಎನ್ನುವ ನಿಷಿದ್ಧವಿದೆ. ಮಗುವಿಗೆ ಜನ್ಮ ಮಾಡಿಸಲು ಸೂಲಗಿತ್ತಿ ಬರುವಳು. ಜನ್ಮ ಮಾಡಿಸಿದ ನಂತರ ಮೊರದಲ್ಲಿ ಅನ್ನವನ್ನು ಸುತ್ತ ಗುಂಡಿಗೆ ಉಂಡೆ ಮಾಡಿ ಅದರಲ್ಲಿ ದೀಪ ಹಚ್ಚಿಡಲಾಗುವುದು. ಆ ದೀಪವನ್ನು ಸೂಲಗಿತ್ತಿ ತನ್ನ ಮನೆಗೆ ತೆಗೆದುಕೊಂಡು ಹೋಗಬೇಕು. ಹೋಗುವಾಗ ದಾರಿಯ ಮಧ್ಯದಲ್ಲಿ ಕೆಟ್ಟು ಹೋದರೆ ಮಗುವಿನ ಆಯಸ್ಸು ಅರ್ಧ ಇದೆ ಎಂದು ನಂಬಲಾಗುವುದು. ಆರದಿದ್ದರೆ ಪೂರ್ಣ ಆಯಸ್ಸು ಇದೆ ಎಂದು ನಂಬಲಾಗುವುದು. ಆ ದೀಪ ತನ್ನಿಂದ ತಾನೇ ಕೆಟ್ಟು ಹೋಗುವವರೆಗೆ ಆರಿಸುವಂತಿಲ್ಲ ಎಂಬ ನಿಷಿದ್ಧವಿದೆ. ಹುಟ್ಟಿದ ಮಗು ಮೂಲಾ ನಕ್ಷತ್ರದಲ್ಲಿ ಹುಟ್ಟಿದರೆ ೩ ವರ್ಷಗಳಲ್ಲಿ ತಂದೆ ಅಥವಾ ತಾಯಿಗೆ ದೋಷವಾಗುತ್ತದೆ ತಂದೆ ಇಲ್ಲವೆ ತಾಯಿ ಮರಣ ಹೊಂದಬಹುದು. ಇದು ಸತ್ಯವಾಗಿಯೂ ನಡೆಯುತ್ತದೆ ಎನ್ನುತ್ತಾರೆ.

ಮಗುವಿನ ನಾಮಕರಣ

ಈ ಸಮುದಾಯದವರು ಮಗು ಹುಟ್ಟಿದ ಐದು ದಿನಗಳಲ್ಲಿ ನಾಮಕರಣ ಮಾಡಬೇಕು. ನಾಮಕರಣ ಮಾಡಲು ಮಗುವಿನ ಸೋದರತ್ತೆಯೇ ಬರಬೇಕು. ಆಕೆಗೆ ಹೊಸ ಬಟ್ಟೆ ಕೊಟ್ಟು ಮಗುವಿನ ಕಿವಿಯಲ್ಲಿ ಮೂರು ಬಾರಿ ಹೆಸರನ್ನು ಹೇಳಬೇಕು. ಅಂದು ರಾತ್ರಿ ಸೆಟಿದೇವಿ (ವಿಧಿಮುಂಡೆ/ವಿಧಿದೇವಿ)  ಮಗುವಿಗೆ ವಿಧಿ ಬರೆಯಲು ಬರುತ್ತಾಳೆ. ಅದಕ್ಕಾಗಿ ನೆಲ ಸಾರಿಸಿ ರಾತ್ರಿ ಬಚ್ಚಲು ಮನೆ ಮತ್ತು ಮಗುವಿನ ತಲೆಯ ಹತ್ತಿರ ವೀಳ್ಯದೆಲೆ, ಅಡಿಕೆ, ಕುಂಕುಮ ಇಟ್ಟು ಸೆಟಿದೇವಿ ವಿಗ್ರಹಕ್ಕೆ ಪೂಜೆ ಮಾಡಿ ತಂಬಿಗೆಯಲ್ಲಿ ನೀರನ್ನು ಇಡಲಾಗುವುದು. ಸೆಟಿ ದೇವಿ ಬಂದು ಹೋಗುವವರೆಗೂ ಅದನ್ನು ಯಾರು ಮುಟ್ಟಬಾರದು. ರಾತ್ರಿ ದೀಪವನ್ನು ಹಚ್ಚಬಾರದು. ಬಾಗಿಲನ್ನು ತೆರೆದಿರಬೇಕು. ಮಗು ಅತ್ತರೂ ಮುಟ್ಟಬಾರದು, ಯಾರೂ ಮಾತನಾಡಬಾರದು ಎನ್ನುವ ನಿಷಿದ್ಧವಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಅನಾಹುತ ತಪ್ಪಿದ್ದಲ್ಲ. ಏಕೆಂದರೆ ೮೫ ವರ್ಷದ ದ್ಯಾಮವ್ವ ನಾಯಕ ಎನ್ನುವ ಮಹಿಳೆಯ ಅನುಭವದ ಪ್ರಕಾರ ತನ್ನ ೨ನೇ ಮಗುವಿಗೆ ಸೆಟಿದೇವಿ ವಿಧಿ ಬರೆಯಲು ಬರುವ ದಿನ ಪದ್ಧತಿಯಂತೆ ಸೆಟಿದೇವಿಯ ಮೂರ್ತಿ ಅದರ ಪೂಜೆಗೆ ಬೇಕಾದ ಸಾಮಾನುಗಳನ್ನು ತಂದು ಪೂಜೆ ಮಾಡಿದ ನಂತರ ಮಗು ಅದನ್ನು ಮುಟ್ಟಿ ತಿಂದಿತು. ಕೋಪ ಬಂದು ಮಗುವಿಗೆ ಹೊಡೆದು ಮಲಗಿದೆ. ರಾತ್ರಿ ೧೨ರ ಸಮಯವಿರಬೇಕು ಸೆಟಿದೇವಿಯ ಬಂದು ಬಚ್ಚಲಿಗೆ ಹೋಗಿ ನನ್ನ ಕಡೆ ಕೆಟ್ಟ ದೃಷ್ಠಿಯಿಂದ ನೋಡಿದಂಗೆ ಆಯಿತು ತಕ್ಷಣವೇ ನನಗೆ ಚಳಿ ಜ್ವರ ನಡುಗು ಚಾಲೂ ಆಯ್ತು ನಾನಿನ್ನು ಬದುಕೊಲ್ಲ, ಸಾಯೊಳು ಸಾಯ್ತೀನಿ ಮಗೂಗೆ ಹಾಲಾದ್ರೂ ಕೊಡುಸ್ತೀನಿ ಅಂತೆಕೇಳಿ ಮಗೂಗೆ ಎದೆ ಹಾಲು ಕೊಟ್ಟು ನನಗೆ ಬಂದು ಜ್ವರ ಚಳಿ ತಕ್ಷಣ ಹೋಗಿ ಮಗೂಗೆ ಬಂತು ಯಾವ ಔಷಧಿ ಕೊಟ್ರೂ ಉಪಯೋಗ ಆಗ್ಲಿಲ್ಲ.

ಮೂರು ದಿನದ ನಂತರ ಮಗು ಸತ್ತು ಹೋಯಿತು ಎಂದು ಹೇಳುತ್ತಾಳೆ. ವಾಲ್ಮೀಕಿ ಸಮುದಾಯದಲ್ಲಿ ಒಂದು ವಿಶೇಷವೆಂದರೆ ಹುಟ್ಟಿದ ಮಗುವನ್ನು ಬೇಲಿದಾಟಿಸುವ ಪದ್ಧತಿ. ವಾಲ್ಮೀಕಿ ಸಮುದಾಯಕ್ಕೆ ಕಳ್ಳತನ ವೃತ್ತಿಯಾಗಿರುವುದರಿಂದ ಮಗು ಕಳ್ಳತನ ಸಮಯದಲ್ಲಿ ಎಂತಹ ಬೇಲಿಯನ್ನಾದರು ದಾಟಿ ತಪ್ಪಿಸಿಕೊಳ್ಳಲಿ ಎನ್ನುವ ಭಾವನೆ, ಅದು ಈಗ ಇಲ್ಲವಾಗಿದೆ.

ಪಂಚಕದಲ್ಲಿ ನಂಬಿಕೆಗಳು

ಅಮಾವಾಸ್ಯೆ ಮತ್ತು ಹುಣ್ಣಿಮೆಯ ಸಂದರ್ಭದಲ್ಲಿನ ಪಂಚಕದಲ್ಲಿ ಯಾವ ಶುಭ ಕಾರ್ಯವನ್ನು ನಡೆಸಬಾರದು ಎಂಬ ನಿಷಿದ್ಧವಿದೆ. ಪಂಚಕದಲ್ಲಿ ಗಂಡು ಹುಟ್ಟಿದರೆ ಮುಂದೆ ೫ ಗಂಡು ಮಕ್ಕಳೇ ಹುಟ್ಟುತ್ತವೆ ಎನ್ನುತ್ತಾರೆ. ಅದರಲ್ಲೂ ಧನಿಷ್ಟ ನಕ್ಷತ್ರ ಬಹಳ ಕೆಟ್ಟದ್ದು, ಆದರೆ ಈ ನಕ್ಷತ್ರದಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ ಏನು ಆಗುವುದಿಲ್ಲ ದೇವರು ಬಂದು ನೆಲೆಸುತ್ತಾನೆ. ಪಂಚಕಲ್ಲಿನ ೫ ನಕ್ಷತ್ರಗಳ ನಡುವೆ ಒಂದು ನಿಮಿಷ ಮಾತ್ರ ಪಂಚಕವಿರುತ್ತದೆ. ಕೃಷ್ಣ ಮತ್ತು ಸುಧಾಮರ ಜನನದ ನಿದರ್ಶನವನ್ನು ಇದಕ್ಕೆ ಉದಾಹರಣೆಯನ್ನಾಗಿ ನೀಡುತ್ತಾರೆ. ಇದಕ್ಕೆ ಕೆಲವೊಂದು ಶಾಸ್ತ್ರ ನಿಯಮಗಳನ್ನು ಮಾಡಲಾಗುವುದು ಇಲ್ಲವಾದರೆ ದೋಷ ತಪ್ಪುವುದಿಲ್ಲ, ಆದ್ದರಿಂದ ಪಂಚಕದ ದಿನ ಮನೆ ಕೆಲಸ ಮಾಡಬಾರದೆಂಬ ನಿಷೇಧವಿದೆ. ಅಂತೊ ಭೋಸಲೆ ಎನ್ನುವವರು ಪಂಚಕದಲ್ಲಿಯೇ ಮನೆ ಕಟ್ಟಿಸಿದ್ದಾರೆ ಅವರ ಸಲಹೆಯಂತೆ ಪಂಚಕದಲ್ಲೆ ಕಲ್ಲು ತರುವುದು. ಗೊಡೆ ಕಟ್ಟುವುದು. ಪಂಚಕದ ದಿನದಲ್ಲೇ ಮನೆಗೆ ಗೃಹ ಪ್ರವೇಶ ಮಡುವುದನ್ನು ಮಾಡಿಸಿದ್ದಾರೆ. ಮನೆಕಟ್ಟಲು ೨೦ ವರ್ಷ ಹಿಡಿದಿದೆ ಅಂತಹ ಮನೆಗೆ ಏನೂ ಆಗಿಲ್ಲ. ಆದರೆ ಅದನ್ನು ಶಾಸ್ತ್ರೋಕ್ತವಾಗಿ ಅವರಿಂದಲೇ ಮಾಡಿಸಬೇಕು ಎನ್ನುತ್ತಾರೆ. ಮಧಬಾವಿಯಲ್ಲಿ ಒಬ್ಬರ ತೋಟದಲ್ಲಿ ಮೇವು ಕಳ್ಳತನವಾಗುತ್ತಿತ್ತು ಅದಕ್ಕೆ ಅವರು ನಾನು ಹೇಳಿದಂತೆ ಾಡು ಎಂದು ಹೇಳಿ ಪಂಚಕದ ದಿನ ನಕ್ಷತ್ರ ನೋಡಿ ಬಣವೆ ಒಟ್ಟಲು ಹೇಳಿದರು. ಒಟ್ಟುವಾಗ ಒಂದು ಮೆದೆ ಹುಲ್ಲನ್ನು ಮೇಲಕ್ಕೆ ಎಸೆದರು ಅದಕ್ಕೆ ಮೇಲೆ ತಕ್ಷಣ ಬೆಂಕಿ ಹತ್ತಿತು. ಇದು ಕಣ್ಣಾರೆ ಕಂಡ ಅನುಭವ ಎನ್ನುತ್ತಾರೆ.

ಪಂಚಕದಲ್ಲಿ ಹೊರ ಪಂಚಕ, ಒಳಪಂಚಕವೆಂದು ಕರೆಯುತ್ತಾರೆ. ಅಮಾವಾಸ್ಯೆ ಮುಂದೆ ಬರುವ ಪಂಚಕವನ್ನು ಹೊರ ಪಂಚಕವೆಂದು ಕರೆಯುತ್ತಾರೆ. ಹುಣ್ಣಿಮೆಯ ಮೊದಲು ಬರುವ ಪಂಚಕವನ್ನು ಒಳ ಪಂಚಕವೆಂದು ಕರೆಯುತ್ತಾರೆ. ಹೊರ ಪಂಚಕದಲ್ಲಿ ಸತ್ತರೆ ಅಂತಹ ಸಂದರ್ಭದಲ್ಲಿ ಊರಿನ ಅಥವಾ ಕೇರಿಯಲ್ಲಿ ೫ ದಿನ ಐದು ಜನರು ಸಾಯುತ್ತಾರೆ. ಒಳಪಂಚಕವಾದರೆ ಮನೆಯವರು ಒಂದು ತಿಂಗಳಿನಿಂದ ಮೂರು ತಿಂಗಳವರೆಗೆ ಮನೆಯನ್ನು ಖಾಲಿ ಮಾಡಲಾಗುತ್ತದೆ, ಮನೆಗೆ ಬೀಗ ಹಾಕಲಾಗುತ್ತದೆ. ಮೂರು ತಿಂಗಳು ಮುಗಿದ ನಂತರ ಮನೆಯ ಬೀಗವನ್ನು ಗುರು ಬಂದು ತೆಗೆಯುವರು. ನಂತರ ಮನೆಯನ್ನು ಸಾರಿಸಿ ಅಡಿಗೆ ಮಾಡಿ ಊಟ ಹಾಕಿಸಿದ ನಂತರ ಮನೆಯಲ್ಲಿ ವಾಸಿಸಲು ಪ್ರಾರಂಭಿಸುತ್ತೇವೆ. ಇದು ಇಂದಿಗೂ ಇದೆ. ಪಂಚಕದಲ್ಲಿನ ಶ್ರಾವಣ, ಉತ್ತರಾಷಾಢ, ಪೂರ್ವಾಷಾಢ, ಶತತಾರ, ಧನಿಷ್ಟ ಈ ಐದು ನಕ್ಷತ್ರಗಳಿರುವ ಅವಧಿಯಲ್ಲಿ ಏನೂ ಶುಭ ಕಾರ್ಯ ಮಾಡಬಾರದೆಂಬ ನಿಷೇಧವಿದೆ. ಪಂಚಕದಲ್ಲಿ ಸತ್ತ ವ್ಯಕ್ತಿಯಿಂದ ಮತ್ತೊಬ್ಬರು ಬಲಿಯಾಗಬಾರದೆಂದು ಅದಕ್ಕಾಗಿ ೨ ಮೊಟ್ಟೆ ೨ ತೆಂಗಿನಕಾಯಿ, ನಿಂಬೆಹಣ್ಣು ಮತ್ತು ಒಂದು ಗೊಂಬೆಯನ್ನು ಮಾಡಿ ಸತ್ತ ವ್ಯಕ್ತಿಯ ಎದೆಯ ಮೇಲಿಟ್ಟು ಹೂಳಲಾಗುತ್ತದೆ. ಇದರಿಂದ ಗಂಡಾಂತರ ತಪ್ಪುತ್ತದೆ ಎನ್ನುವ ನಂಬಿಕೆ ಇದೆ. ಆದ್ದರಿಂದ ಪಂಚಕದಲ್ಲಿ ಯಾವುದೇ ಕೆಲಸವನ್ನು ಮಾಡಬಾರದೆಂಬ ನಿಷೇಧವಿದೆ.

ವಿಧವೆಯರಿಗೆ ನಿಷೇಧ

ಹಿಂದೂ ಸಂಪ್ರದಾಯದಲ್ಲಿ ಗಂಡನನ್ನು ಕಳೆದುಕೊಂಡ ಮಹಿಳೆಗೆ ನಿಷೇಧಗಳು ಹೆಚ್ಚಿವೆ. ಬ್ರಾಹ್ಮಣ ಸಮುದಾಯಗಳು ಚಿಕ್ಕವಯಸ್ಸಿನಲ್ಲಿ ವಿಧವೆಯಾದ ಹೆಣ್ಣು ಕುಂಕುಮ ಅಳಿಸುವುದು, ತಲೆ ಬೋಳಿಸುವುದು, ಬಿಳಿ ಸೀರಿ ಉಡಿಸುವುದು, ತಾನೆ ಕೈಯಿಂದ ಅಡುಗೆ ಮಾಡಿಕೊಂಡು ಊಟ ಮಾಡುವುದು, ಅಡುಗೆ ಮನೆ ಬಿಟ್ಟು ಹೊರಬರಬಾರದೆಂಬ ನಿಷಿದ್ಧಗಳಿವೆ. ಆದರೆ ವಾಲ್ಮೀಕಿ ಸಮುದಾಯಗಳಲ್ಲಿ ಇಂತಹ ನಿಷಿದ್ಧಗಳು ಅತಿಯಾಗಿ ಬಿಗುವಿನಿಂದ ಕೂಡಿಲ್ಲ. ಗಂಡ ಸತ್ತ ಮಹಿಳೆಯ ಕುಂಕುಮ ತೆಗೆಯಲಾಗುವುದು. ಹಸಿರು ಬಳೆ ಶುಭ ಸೂಚಕ ಇರುವುದರಿಂದ ಅವುಗಳನ್ನು ತೆಗೆದು ಹಾಕಲಾಗುವುದು. ಹೂ ಮುಡಿಸುವಂತಿಲ್ಲ. ಶುಭ ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ನಿಷಿದ್ಧವಿದೆ. ಶುಭ ಕಾರ್ಯಗಳಿಗೆ ಹೋಗುವಾಗ ಇಂತಹ ಮಹಿಳೆಯರು, ಅಡ್ಡ ಬಂದರೆ ಕೆಲಸಗಳಾಗುವುದಿಲ್ಲ ಎಂದು ನಂಬಲಾಗುತ್ತಿದೆ. ಇತ್ತೀಚೆಗೆ ಈ ನಿಷಿದ್ಧಗಳು ಸಡಿಲಿಕೆಯಾಗಿವೆ. ಈಗ ಕೆಲವರು ತಾಳಿಯನ್ನು ತೆಗೆಯುತ್ತಿಲ್ಲ. ಬಳೆಯನ್ನು ತೆಗೆಯುತ್ತಿಲ್ಲ. ಕಾಲ ಬದಲಾಗಿದೆ ಎನ್ನುವುದು ಈ ಸಮುದಾಯದ ಅಭಿಪ್ರಾಯವಾಗಿದೆ.

ಸ್ಮಶಾನಕ್ಕೆ ಮಹಿಳೆಯರ ನಿಷೇಧ

ಹಿಂದೂ ಸಂಪ್ರದಾಯದ ಪ್ರಕಾರ ಮಹಿಳೆಯರು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಬೇಗ ದೆವ್ವ, ಭೂತಗಳಿಗೆ ವಶೀಕರಣರಾಗಿರುತ್ತಾರೆ ಎನ್ನುವ ಭಾವನೆಯಿಂದ ಸ್ಮಶಾನಕ್ಕೆ ಕರೆದುಕೊಂಡು ಹೋಗಬಾರದೆಂಬ ನಂಬಿಕೆ ಇದೆ. ಅದಕ್ಕಾಗಿ ಮಹಿಳೆಯರು ಸ್ಮಶಾನಕ್ಕೆ ಹೋಗುವುದಕ್ಕೆ ನಿಷೇಧವಿದೆ. ಆದರೆ ವಾಲ್ಮೀಕಿ ಸಮುದಾಯದಲ್ಲಿ ಇಂತಹ ಸಂಪ್ರದಾಯಗಳು ಇರುವುದಿಲ್ಲ.

ಋತುಮತಿಯ ಸಂದರ್ಭದಲ್ಲಿ ನಂಬಿಕೆ, ವಿಧಿನಿಷೇಧಗಳು

ಮಹಿಳೆಯು ಋತುಮತಿಯಾದಾಗ ೧೨ ವರ್ಷದ ಸೂತಕವಿರುತ್ತದೆ. ಆದ್ದರಿಂದ ೫ ದಿನಗಳವರೆಗೆ ಆಕೆಯನ್ನು ಹೊರಗಡೆ ಇಲ್ಲವೆ, ಪ್ರತ್ಯೇಕವಾಗಿ ಇಡಲಾಗುವುದು. ಅಂತಹ ಸಂದರ್ಭದಲ್ಲಿ ಆಕೆಯನ್ನು ಯಾರು ಮುಟ್ಟುವುದಿಲ್ಲ. ಆಕೆಗೆ ಸ್ನಾನ ಮಾಡಿಸಿದವರು ಸ್ನಾನ ಮಾಡಿ ಮನೆಯ ಒಳಗೆ ಬರಬೇಕೆಂಬ ನಿಯಮವಿದೆ.

ನ್ಯಾಯ ಪದ್ಧತಿ

ಸಾಮಾಜಿಕ ನ್ಯಾಯ ಭಾರತೀಯ ಹಳ್ಳಿಗಳಲ್ಲಿ ಸಮಾಜದ ವ್ಯವಸ್ಥೆಯನ್ನು ನಿಯಂತ್ರಿಸುವುದರ ಮೂಲಕ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟುವುದಾಗಿತ್ತು. ಇದಕ್ಕಾಗಿ ತಮ್ಮದೇ ಆದ ಸಾಮಾಜಿಕ ಕಟ್ಟಳೆಗಳ ಮೂಲಕ ವಿಧಿ ವಿಧಾನಗಳ ಮೂಲಕ ನ್ಯಾಯ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಉಚ್ಚ ಕುಲದವರು, ಶ್ರೀಮಂತರು ಇಲ್ಲಿ ಹಿರಿಯರಾಗಿದ್ದರು. ಆಯಾ ಸಮುದಾಯದ ಹಿರಿಯ ಊರ ಗೌಡ, ನಾಯಕನಾದವನು ನ್ಯಾಯ ತೀರ್ಮಾನ ಮಾಡುತ್ತಿದ್ದನು. ಈ ನ್ಯಾಯ ನಿರ್ಣಯಗಳು ಸಾಮಾಜಿಕ, ಧಾರ್ಮಿಕ ಚೌಕಟ್ಟನ್ನು ಪಡೆದುಕೊಂಡಿರುತ್ತಿದ್ದರಿಂದ ಯಾರೂ ಉಲ್ಲಂಘಿಸುತ್ತಿರಲಿಲ್ಲ.

ಅಪರಾಧಗಳು ಭಿನ್ನವಾಗಿದ್ದರೆ ಅವುಗಳಿಗೆ ತಕ್ಕಂತೆ ನ್ಯಾಯ ನಿರ್ಧಾರ ಮಾಡಲಾಗುತ್ತಿತ್ತು. ಅಪರಾಧ ಮಾಡಿದರೆ ಅಪರಾಧಿಯಾರಾದರೂ ಕೈಯನ್ನು ಕಾಯ್ದ ಎಣ್ಣೆಯಲ್ಲಿ ಅದ್ದುವುದು, ದಂಡವನ್ನು ಕಟ್ಟುವುದು, ಬಾಡೂಟವನ್ನು ಹಾಕಿಸುವುದು, ಬಹಿಷ್ಕಾರ ಹಾಕುವುದು ಮೊದಲಾದ ಪದ್ಧತಿಗಳಿದ್ದವು. ವಾಲ್ಮೀಕಿ ಸಮುದಾಯದಲ್ಲಿಯೂ ಕೂಡ ಇದೇ ಪದ್ಧತಿಗಳು ಚಾಲ್ತಿಯಲ್ಲಿದ್ದವು.

ವಾಲ್ಮೀಕಿ ಸಮುದಾಯ ಹೆಸರೇ ಸೂಚಿಸುವಂತೆ ಕಳ್ಳತನವೇ ತಮ್ಮ ಮೊದಲ ಮೂಲ ವೃತ್ತಿಯಾಗಿರುವುದರಿಂದ ಅವರನ್ನು ಎಲ್ಲರೂ ಅನುಮಾನದಿಂದ ಕಾಣುತ್ತ, ಅವರೊಂದಿಗೆ ಹೆಚ್ಚಿನ ಸಂಬಂಧಗಳನ್ನು ಹೊಂದುತ್ತಿರಲಿಲ್ಲ. ಈ ಸಮುದಾಯದಲ್ಲಿ ಯಾರೂ ಹೆಚ್ಚು ಕಳ್ಳತನ ಮಾಡಿಕೊಂಡು ಬರುತ್ತಾನೆ ಅಂತಹ ವ್ಯಕ್ತಿಗೆ ಹೆಚ್ಚಿನ ಗೌರವ ನೀಡುತ್ತಿದ್ದರು. ಕಳ್ಳತನದ ಗುಂಪಿನ ನಾಯಕನನ್ನಾಗಿ ಮಾಡುತ್ತಿದ್ದರು. ವಾಲ್ಮೀಕಿ ಸಮುದಾಯದಲ್ಲಿ ಯಾರಾದರೂ ಇನ್ನೊಬ್ಬರ ಮನೆಗೆ ಹೋದಾಗ ಹಾಲನ್ನು ಕುಡಿಯಬಾರದೆಂಬ ನಿಯಮವನ್ನು ಹಾಕಿಕೊಂಡಿದ್ದರು. ಹಾಲು ಕುಡಿದರೆ ಅಂತಹ ಮನೆಯಲ್ಲಿ ಋಣಾನುಬಂಧ ಏರ್ಪಟ್ಟು ಕಳ್ಳತನ ಮಾಡಲಾಗುವುದಿಲ್ಲ ಎನ್ನುವ ಭಾವನೆ ಇತ್ತು. ಆದರೆ ಇತ್ತೀಚೆಗೆ ಕಳ್ಳತನ ಮಾಡಿದರೆ ಅದಕ್ಕೆ ತಕ್ಕಂತೆ ಹಳ್ಳಿಗಳಲ್ಲಿಯೂ ಹಿರಿಯರ ಸಮ್ಮುಖದಲ್ಲಿ ದಂಡವಿಧಿಸುವ ಪದ್ಧತಿ ಅಸ್ತಿತ್ವಕ್ಕೆ ಬಂದಿದೆ ಎನ್ನುತ್ತಾರೆ. ಈ ಸಮುದಾಯದಲ್ಲಿ ಗ್ರಾಮದ ಯಾವನೇ ವ್ಯಕ್ತಿಯು ಮಹಿಳೆಗೆ ಬಲತ್ಕಾರ ಮಾಡಿದರೆ ಅಂತಹ ವ್ಯಕ್ತಿಗೆ ಗ್ರಾಮಕ್ಕೆ ದೇವರ ಹುಂಡಿಗೆ ಇಂತಿಷ್ಟು ದಂಡ ಕಟ್ಟಬೇಕು ಎಂದು ನಿರ್ಧರಿಸುತ್ತಿತ್ತು. ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಾಗ ವಿವಾಹವಾಗದ ಮಹಿಳೆ ಗರ್ಭದರಿಸಿದರೆ ಅಂತಹ ಸಂದರ್ಭದಲ್ಲಿ ಇಡೀ ಊರಿನ ಗ್ರಾಮಸ್ಥರು ಸೇರಿ ಗರ್ಭಧರಿಸಿದ ಮಹಿಳೆಯ ಮನೆಯ ಮುಂದೆ ತಿಂದುಂಡು ತೊಳೆದ ಪಾತ್ರೆಗಳ ಮುಸುರೆಯನ್ನು ಚೆಲ್ಲಲು ಗುಂಡಿ ಮಾಡಿದಂತಹ ಸ್ಥಳದಲ್ಲಿ ಎಂಜಲು ಚೆಲ್ಲಲಾಗುತ್ತಿತ್ತು. ಎಂಜಲು ಚಲ್ಲದ್ದನ್ನು ಗರ್ಭಾವಸ್ಥೆಗೆ ಕಾರಣವಾದ ವ್ಯಕ್ತಿ ತೆವಳುತ್ತಾ ಅಂದರೆ ಕೈ ಮತ್ತು ಕಾಲುಗಳೆರಡೂ ಮೂಲಕ ಅಂಬೆಗಾಲಿಡುತ್ತ ಬರಬೇಕು. ಬಂದು, ನಾಯಿ ನಾಲಿಗೆಯಿಂದ ನೀರು ಕುಡಿಯುವ ತರ ನಾಲಿಗೆಯನ್ನು ಎಂಜಲು ಗುಂಡಿಗೆ ಹಾಕಬೇಕು. ಆಗ ಗರ್ಭಧರಿಸಿದ ಮಹಿಳೆ ಹಚ್ಚಾ (ನಾಯಿ ಓಡಿಸುವ ಭಾಷೆ)  ಎಂದು ಹೇಳಬೇಕು. ಹೇಳಿದ ತಕ್ಷಣ ತಾಯಿ ಓಡುವ ರೀತಿಯಲ್ಲಿ ಹಿಂದೆ ಹೋಗಿ ಪುನಃ ಬರಬೇಕು. ಹೀಗೆ ಮೂರು ಬಾರಿ ಮಾಡಬೇಕು. ಇದು ಮುಗಿದ ನಂತರ ಗರ್ಭಧರಿಸಿದ ಮಹಿಳೆಯ ಜೊತೆಗೆ ನಾಲ್ಕು ಜನರನ್ನು ಸೇರಿಸಿ ೩ ದಿನ ಒಲೆ ತೆಗೆದು ಬರಲು ಊರಿಂದ ಹೊರಗೆ ಕಳುಹಿಸಲಾಗುತ್ತಿತ್ತು. ಮರಳಿ ಬಂದ ನಂತರ ಅವರಿಬ್ಬರಿಗೆ ವಿವಾಹ ಮಾಡಲಾಗುತ್ತಿತ್ತು.

ವಿವಾಹವಾಗದ ಮಹಿಳೆ ಮತ್ತು ಗಂಡ ಸತ್ತ ಮಹಿಳೆ ಮಕ್ಕಳಿಗೆ ಜನ್ಮ ನೀಡಿದರೆ ವಿವಾಹವಾಗದ ಮಹಿಳೆಯನ್ನು ಊರಿಂದ ಹೊರಗೆ ಇಂತಿಷ್ಟು ದಿನ ಎಂದು ಇಡಲಾಗುತ್ತಿತ್ತು. ಗಂಡ ಸತ್ತ ಮಹಿಳೆ ಸೆರಗನ್ನು ಮುಚ್ಚಿಕೊಂಡೆ ಇರಬೇಕಾಗಿತ್ತು. ಇವರಿಗೆ ಹುಟ್ಟಿದ ಮಕ್ಕಳನ್ನು ಉಡಕಿಯವರೆಂದು ಕರೆಯುತ್ತಿದ್ದರು. ಅಂತಹವರಿಗೆ ರಾತ್ರೋ ರಾತ್ರಿ ಉಡಕಿಯವನೊಂದಿಗೆ ವಿವಾಹ ಮಾಡಲಾಗುತ್ತದೆ. ಆದರೆ ಇಂತಹ ನ್ಯಾಯ ಪದ್ಧತಿ ನಗರೀಕರಣ ಆಧುನೀಕರಣವಾಗುತ್ತಿದ್ದಂತೆ ಗ್ರಾಮೀಣ ಸೊಗಡಿನಿಂದ ಮಾಯವಾಗಿದೆ.

ಇನ್ನು ದೇವರ ಕಾರ್ಯದಲ್ಲಿ ಅಥವಾ ಗ್ರಾಮಸ್ಥರ ಗ್ರಾಮದ ಸಾಮಾಜಿಕ ಕಟ್ಟಳೆಗಳನ್ನು ಮೀರಿ ವರ್ತಿಸುವ ವ್ಯಕ್ತಿಯನ್ನು ಕುಲದಿಂದ ಗ್ರಾಮದಿಂದ ಇಂತಿಷ್ಟು ದಿನ ವರ್ಷ ಬಹಿಷ್ಕಾರ ಹಾಕಲಾಗುತ್ತಿತ್ತು. ಬಹಿಷ್ಕಾರಕ್ಕೆ ಒಳಗಾದವರಿಗೆ ಯಾರೂ ಸಹಾಯ ಮಾಡುವಂತಿರಲಿಲ್ಲ. ಇಂತಹ ಸಂದರ್ಭದಲ್ಲಿ ಅಪರಾಧಿಯು ಶರಣಾಗತನಾದರೆ, ದಂಡವನ್ನು ಕಟ್ಟಿ ಬಾಡೂಟವನ್ನು ಹಾಕಬೇಕಾಗಿತ್ತು.

ಹೀಗೆ ಗ್ರಾಮೀಣ ಸಮುದಾಯಗಳಲ್ಲಿ ಇನ್ನೂ ಹಲವಾರು ನಂಬಿಕೆಗಳು, ವಿಧಿ-ನಿಷೇಧ ಗಳು ಮತ್ತು ನ್ಯಾಯ ಪದ್ಧತಿಗಳು ಅಸ್ಥಿತ್ವದಲ್ಲಿದ್ದವು. ಇವುಗಳಲ್ಲಿ ಬಹುತೇಕ ಪದ್ಧತಿ ಗಳು, ನಂಬಿಕೆಗಳು ಆಧುನಿಕತೆ, ಜಾಗತೀಕರಣ ಅಸ್ತಿತ್ವಕ್ಕೆ ಬಂದಂತೆ ಕಣ್ಮರೆ ಯಾಗುತ್ತಿವೆ. ಹಳ್ಳಿಗಳ ಜನಪದ ನೆಲೆಯಲ್ಲಿನ ಇಂತಹ ವಿಧಿ-ನಿಷೇಧಗಳು, ಜಾಗತೀಕರಣದ ಜ್ವಾಲೆಯಲ್ಲಿ ಕಣ್ಮರೆಯಾಗುತ್ತಿರುವುದರಿಂದ ಗ್ರಾಮಗಳ ಸಾಮರಸ್ಯ, ಮಾನವೀಯತೆ-ಅಂತಃಕರಣ, ಸಮಾನತೆಯ ಮೌಲ್ಯಗಳು ಇಲ್ಲವಾಗುತ್ತಾ, ದಿನನಿತ್ಯದ ಬದುಕಿನಲ್ಲಿ ಆತಂಕ ತಲ್ಲಣಗಳನ್ನು ತಂದೊಡ್ಡಿವೆ. ಹಳ್ಳಿಗಳಿಗೆ ಫ್ಯಾಷನ್ ದಾಳಿಯಿಟ್ಟಿದೆ, ಹಿರಿಯರು ನೀಡಿದ ಸಲಹೆ ಹಿತನುಡಿಗಳಿಗೆ ಯುವಕರು ಮೂಗು ಮುರಿಯುತ್ತಿದ್ದಾರೆ. ಕುಡಿತ, ಗುಟಕಾ, ಮಟಕಾ, ಪ್ರೇಮ ಎಂಬ ಹೆಸರಿನಲ್ಲಿ ಹಳ್ಳಿಗಳು ನಾಶದ ಅಂಚಿನತ್ತ ಸಾಗುತ್ತವೆ.

ಇಂತಹ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಜನಪದ ನೆಲೆಯಲ್ಲಿ ಕಂಡುಬರುವ ಕ್ರೀಡೆ, ಸಂಸ್ಕೃತಿ, ನಂಬಿಕೆ, ನಿಯಮಗಳನ್ನು ಪುನರ್ ಜೀವನಗೊಳಿಸಬೇಕಾಗಿದೆ. ಇಲ್ಲವಾದರೆ ಹಳ್ಳಿಗಳು ಹಳ್ಳಿಗಳಾಗಿ ಉಳಿಯುವುದಿಲ್ಲ. ಸಮಸ್ಯೆಗಳ ಸರಮಾಲೆಗಳೇ ಎದುರಾಗಿ ಬದುಕು ದುಸ್ಥರವಾಗುವಂತೆ ಮಾಡುತ್ತವೆ.

ಆಕರ ಗ್ರಂಥಗಳು

೧. ಡಾ.ಸ.ಚಿ.ರಮೇಶ ‘‘ಜಾನಪದ ಕರ್ನಾಟಕ’’ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ೨೦೦೪

೨. ಕೆ.ಎಂ.ವಿಜಯಲಕ್ಷ್ಮಿ ‘‘ಬುಡಕಟ್ಟು ಮಹಿಳೆ’’ ಗ್ರಾಮ ಚೇತನ, ಅಭಿನಂದನಾ ಗ್ರಂಥ, ಲಕ್ಷ್ಮಿ ಮುದ್ರಣಾಲಯ ಬೆಂಗಳೂರು, ೨೦೦೫

೩. ಡಾ.ಎಂ.ಬಿ.ರಾಜಾಮನಿ ‘‘ಆದಿವಾಸಿಗಳು’’, ಗ್ರಾಮ ಚೇತನ, ಅಭಿನಂದನಾ ಗ್ರಂಥ, ಲಕ್ಷ್ಮಿ ಮುದ್ರಣಾಲಯ ಬೆಂಗಳೂರು, ೨೦೦೫

೪. ಗೊ.ರು.ಚನ್ನಬಸಪ್ಪಾ ‘‘ಜಾನಪದ ಲೋಕ’’ ಗ್ರಾಮ ಚೇತನ, ಅಭಿನಂದನಾ ಗ್ರಂಥ, ಲಕ್ಷ್ಮಿ ಮುದ್ರಣಾಲಯ ಬೆಂಗಳೂರು, ೨೦೦೫.

೫. ಅಂಬಳಿಕೆ ಹಿರಿಯಣ್ಣ ‘‘ಜಾನಪದ ಕೆಲವು ವಿಚಾರಗಳು’’ ಚೇತನ ಬುಕ್ ಹೌಸ್ ಮೈಸೂರು, ೧೯೯೬

೬. ‘‘ಜಾನಪದ ಕೈಪಿಡಿ’’