ಗ್ರಾಮೀಣ ಆಚರಣೆಗಳು ಎಂದರೆ ಜನಪದ ಆಟಗಳೇ ಆಗಿವೆ. ಆಧುನಿಕ ಸಂದರ್ಭದಲ್ಲಿ ನಾವು ಕ್ರಿಕೆಟ್ ಮತ್ತು ಬೇಸ್‌ಬಾಲ್ ನಂತಹ ಆಟಗಳನ್ನು ನೋಡುತ್ತಿದ್ದೇವೆ. ಅವುಗಳು ನಮ್ಮ ಗ್ರಾಮೀಣರಿಗೆ ಪರಿಚಿತವಿರುವ ಚಿನ್ನಿದಾಂಡು ಮತ್ತು ಚೆಂಡಾಟಗಳ ವಿಕಾಸ ಸ್ವರೂಪಗಳು ಎಂಬುದು ಆಶ್ಚರ್ಯಕರವಾದರೂ ಸತ್ಯ.

ಜನಪದ ಆಟಗಳು ಬಹುತೇಕ ಅನುಕರಣೆಯಿಂದ; ಪೀಳಿಗೆಯಿಂದ ಪೀಳಿಗೆಗೆ ಉಳಿದುಕೊಂಡು ಬಂದಂತವುಗಳು. ಹಾಗೆಯೇ ಸಾಮಾಜಿಕ ಅಗತ್ಯಗಳನ್ನು ಪೂರೈಸುವ ಕಾರಣದಿಂದ ಕಲಿಕೆಯಾಗಿ ಮೈಗೂಡಿಸಿ ಕೊಂಡಂತವುಗಳು. ಉದಾ: ಮಣ್ಣಿನಲ್ಲಿ ಆಡುವ ಮಣ್ಣಾಟ ಮಕ್ಕಳಿಗೆ ಪ್ರಿಯ. ಮಣ್ಣಿನಿಂದ ಮಡಿಕೆ, ಕುಡಿಕೆ ಇತ್ಯಾದಿಗಳನ್ನು ಇಂದಿನ ತನಕವೂ ಕುಂಬಾರರು ಮಾಡಿಕೊಂಡು ಬಂದಿರುವುದನ್ನು ನಾವು ಕಾಣಬಹುದು. ಹಾಗೆಯೇ ಮಣ್ಣನ್ನು ಹದಗೊಳಿಸಿ ಆಟಿಕೆಗಳನ್ನು ಆ ಸಮುದಾಯದ ಮಕ್ಕಳು ಹಾಗೂ ಇತರೆ ಸಮುದಾಯದ ಮಕ್ಕಳು ಕೂಡ ಸೃಷ್ಟಿಸಿ ಬಿಡುತ್ತಾರೆ. ಅಂತೆಯೇ ಬಿಲ್ಲುಗಾರಿಕೆ; ಗುರಿಗಾರಿಕೆ, ಇತ್ಯಾದಿಗಳು ಅಗತ್ಯವನ್ನು ಪೂರೈಸಲು ಬೆಳೆದು ಬಂದ ಗ್ರಾಮೀಣ ಆಟಗಳಾಗಿವೆ.

ಕ್ರೀಡೆ ಅಥವಾ ಆಟವೆಂಬುದು ಏಕ ಘಟಕ ಕ್ರಿಯೆಯಲ್ಲ. ಅಂದರೆ ಇಲ್ಲಿ ನಿರ್ದಿಷ್ಟವಾಗಿ ಇಬ್ಬರು ಅಥವಾ ಮುಖಾ ಮುಖಿಯಾಗಿ ಎರಡು ತಂಡಗಳು ಬೇಕಾಗುತ್ತವೆ. ಇಬ್ಬರಲ್ಲೂ ಸ್ಪರ್ಧೆ ಇರುತ್ತದೆ. ಸೋಲು-ಗೆಲುವು ಎಂಬುದೇ ಇಲ್ಲಿನ ನಿರ್ಣಾಯಕ. ಯಾವುದೇ ಗ್ರಾಮೀಣ ಆಟದಲ್ಲಿ ಸಂವಹನ ಮತ್ತು ಕ್ರಿಯೆಗಳ ಸಹಚರ್ಯ ಇದ್ದೇ ಇರುತ್ತದೆ. ಈ ಸಂವಹನವು ಕ್ರಿಯಾತ್ಮಕವಾಗಿ ಆಟಗಾರರ ಚಾತುರ್ಯ ಬುದ್ದಿ; ಸಾಂಘಿಕತೆ, ಶಿಸ್ತು, ನೀತಿ, ನಿಯಮಾವಳಿಗಳನ್ನು ಪ್ರಚೋದಿಸುತ್ತದೆ. ಸಮಾಜದಲ್ಲಿ ಸಮಚಿತ್ತತೆಯ ಮನೋಭಾವವನ್ನು ರೂಪಿಸಿಕೊಳ್ಳಬೇಕೆಂಬ ಪಾಠವನ್ನು ಪರೋಕ್ಷವಾಗಿ ವರ್ತಿಸುವಂತೆ ಮಾಡುತ್ತದೆ. ಅಂದರೆ ಮನಸ್ಸನ್ನು ಹದಗೊಳಿಸುವ ಮಾಧ್ಯಮವಾಗಿ ಜನಪದ ಆಟಗಳು ಕೆಲಸ ಮಾಡುತ್ತವೆ.

ಜನಪದ ಆಟಗಳು ಕೇವಲ ಮನೋರಂಜನೆಯನ್ನು ಉಂಟು ಮಾಡುವುದಲ್ಲದೆ ಸಮಾಜದೊಳಗಿನ ಏರು ಪೇರುಗಳನ್ನು ಸರಿಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಗ್ರಾಮೀಣ ಪರಿಸರದ ಆಟಗಳು ಮನುಷ್ಯನ ಮಾನಸಿಕ ಬೆಳವಣಿಗೆಗೆ ಆಂತರಿಕ ವಿಕಾಸಕ್ಕೆ ಕಾರಣವಾಗುತ್ತವೆ ಎಂಬುದು ಸತ್ಯ. ಅಂದರೆ ಇಂತಹ ಆಟಗಳು ಸಾಂದರ್ಭಿಕ ಅಗತ್ಯಕ್ಕಾಗಿ ಅನೇಕ ಮಾರ್ಪಾಡುಗಳನ್ನು ಪಡೆದವು. ಉದಾ : ಕೋಟೆ ಕಾಳಗ ಎಂಬುದು ಯುದ್ಧದ ಸಂದರ್ಭದಲ್ಲಿ ಬಳಕೆಯಾಗಿರುವ ಯುದ್ಧ ವಿಧಾನಗಳಲ್ಲಿ ಒಂದು. ಕೋಟೆಯ ಮೇಲಿನ ಸೈನಿಕರು ಕೆಳಗಿರುವ ವೈರಿಗಳನ್ನು ಕಲ್ಲು ಎಸೆಯುವ ಮೂಲಕ ಹಿಮ್ಮೆಟ್ಟಿಸುತ್ತಿದ್ದರು. ಇಲ್ಲಿನ ಕಲ್ಲು ಎಸೆಯುವ ಕ್ರಿಯೆಯು ಗುರಿಯನ್ನು ಹೊಡೆಯುವ ತಂತ್ರಗಾರಿಕೆಯನ್ನು ಸೂಚಿಸುತ್ತದೆ. ಅಂದರೆ ಕವಣೆ ಕಲ್ಲಾಟ, ಕಲ್ಲು ಬೀಸುವಾಟ, ಗುರಿಯಿಟ್ಟು ತೆಂಗಿನ ಕಾಯಿ ಒಡೆಯುವಾಟ. ಗುರಿಯಿಟ್ಟು ಒಬ್ಬರಿಂದೊಬ್ಬರಿಗೆ ಚಂಡಿನಿಂದ ಬಡೆದಾಡುವಾಟ ಇತ್ಯಾದಿಗಳಲ್ಲಿ ಈ ತಂತ್ರಗಾರಿಕೆ ಕಂಡುಬರುತ್ತದೆ. ಬಿಲ್ಲುಗಾರಿಕೆಯು ಇಂತದೇ ಪ್ರಯತ್ನದ ಫಲವಾಗಿದೆ. ಪ್ರಾಣಿಯನ್ನು ಕೊಲ್ಲುವುದಕ್ಕಾಗಿ ಬಿಲ್ಲುಗಾರಿಕೆಯ ಕಲಿಕೆಯು ಆರಂಭವಾಗಿದೆಯಾದರೂ ಕ್ರಮೇಣ ರಕ್ಷಣೆಯ ತಂತ್ರಗಾರಿಕೆಯು ಬಳಕೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜನಪದ ಆಟಗಳು ಬಹಳಷ್ಟು ವೈವಿಧ್ಯಮಯವಾಗಿರುವುದನ್ನು ಕಾಣಬಹುದು. ಆಟಕ್ಕೆ ಬಳಸುವಂತ ವಸ್ತುಗಳನ್ನೇ ಆಧರಿಸಿ ಹೇಳುವುದಾದರೆ, ಹರಳಾಟ, ಬೆರಳಾಟ, ತುಳದಾಟ, ಸುತ್ತಾಟ, ಹುಡುಕಾಟ, ಕುಂಟಾಟ, ಮುಟ್ಟಾಟ, ಎಳೆದಾಟ, ಗುರಿಯಾಟ, ಬೆನ್ನಟ್ಟುವಾಟ, ಅನುಕರಣದ ಆಟ, ಗೋಲಿಗುಂಡಿನಾಟ, ಚಿಣ್ಣಿದಂಡಿನಾಟ, ಬುಗುರಿಯಾಟ, ಕಬ್ಬಡ್ಡಿಯಾಟ ಇತ್ಯಾದಿಗಳು. ಇವುಗಳಲ್ಲಿ ಬುದ್ದಿಯಾಟವು ಮತ್ತು ಭಾವದಾಟಗಳು ಹಾಗೂ ಶಕ್ತಿ ಪ್ರದರ್ಶನದ ಆಟಗಳು ಎಂದು ವಿಂಗಡಿಸಬಹುದು. ಇಂತಹ ಎಲ್ಲಾ ಆಟಗಳು ಅಥಣಿ ಪರಿಸರದ ವಾಲ್ಮೀಕಿ ಸಮುದಾಯದಲಿ್ಲ ನಾವು ಕಾಣಬಹುದು. ಯಾವುದೇ ರೀತಿಯ ಜನಪದ ಕ್ರೀಡೆಗಳು ಗ್ರಾಮೀಣರ ಬದುಕಿನೊಂದಿಗೆ ಬೆರೆತುಕೊಂಡು ಬಂದಿರುತ್ತವೆ. ಅವುಗಳು ಮನೋರಂಜನೆಗೆ ಇರಬಹುದು ಇಲ್ಲವೆ ಏಕಕಾಲಕ್ಕೆ ಬಲಸಂವರ್ಧನೆಗೂ ಇರಬಹುದು. ಈ ಎರಡಕ್ಕೂ ಇವು ಸಹಾಯಕವಾಗಿ ಕೆಲಸ ನಿರ್ವಹಿಸುತ್ತವೆ. ಹಳ್ಳಿಯ ಮಕ್ಕಳು ಚಿಕ್ಕವರಿರುವಾಗಲೇ ಕೇವಲ ಮನೋರಂಜನೆಗಾಗಿ ಆಟಗಳನ್ನು ಆಡುತ್ತಿರುತ್ತಾರೆ. ಅನಂತರ ಈ ಮಕ್ಕಳ ಮನುಷ್ಯನ ಹುಟ್ಟು ಪ್ರವೃತ್ತಿಯಾದ ಸ್ಪರ್ಧಾ ಮನೋಭಾವನೆಯನ್ನು ಜಾಗೃತಗೊಳಿಸುತ್ತಾ ಹೋಗುತ್ತವೆ. ಪ್ರಾಯಕ್ಕೆ ಬಂದಂತೆ ಈ ಸ್ಪರ್ಧಾ ಮನೋಭಾವನೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ.

ಇಂತಹ ಜನಪದ ಆಟಗಳು ಕೆಲವು ನಿತ್ಯದಂತೆ ನಡೆಯುತ್ತಿದ್ದರೆ. ಇನ್ನು ಕೆಲವು ಹಬ್ಬ-ಹರಿದಿನಗಳಿಗೆ ಸಂಬಂಧಿಸಿದಂತೆ ಆಯಾ ಹಬ್ಬಗಳಲ್ಲಿ ಇನ್ನೂ ಕೆಲವು ಕೆಲ ಕಾಲದಲ್ಲಿ; ಕೆಲ ಸಮಯದಲ್ಲಿ ನಡೆಯುತ್ತವೆ. ಇಂತಹ ಆಟಗಳನ್ನು ಗಂಡಸರು, ಹೆಂಗಸರು, ಹಾಗು ಮಕ್ಕಳು ಕೂಡ ಆಡಿಕೊಳ್ಳುತ್ತಾ ಬಂದಿರುವುದನ್ನು ನಾವು ಕರ್ನಾಟಕದ ತುಂಬೆಲ್ಲಾ ಕಾಣುತ್ತಾ ಬರುತ್ತವೆ. ಇದಕ್ಕೆ ಅಥಣಿ ಪರಿಸರದ ವಾಲ್ಮೀಕಿ ಸಮುದಾಯವು ಹೊರತಲ್ಲ. ಈ ಹಿನ್ನೆಲೆಯಲ್ಲಿ ಬರುವ ಈ ಸಮುದಾಯದ ಕ್ರೀಡೆಗಳನ್ನು ಕುರಿತು ವಿವರಿಸುವುದು ಇಲ್ಲಿನ ಉದ್ದೇಶವಾಗಿದೆ.

ಇಲ್ಲಿನ ಈ ಸಮುದಾಯದವರು ಆಡುವ ಆಟಗಳನ್ನು

೧. ಚಿಕ್ಕ ಮಕ್ಕಳು ಆಡುವ ಆಟಗಳು

೨. ಗಂಡಸರು ಆಡುವ ಆಟಗಳು

೩. ಹೆಂಗಸರು ಆಡುವ ಆಟಗಳು

೪. ಪ್ರಾಣಿ ಸಂಬಂಧಿ ಆಟಗಳು ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು.

ಚಿಕ್ಕ ಮಕ್ಕಳು ಆಡುವ ಆಟಗಳು : ಮಕ್ಕಳ ಆಟಗಳು ಕೇವಲ ಮನೋರಂಜನೆಯನ್ನು ಮಾತ್ರ ಗುರಿಯಾಗಿರಿಸಿ ಕೊಂಡಿರುತ್ತವೆ. ಮಕ್ಕಳು ಸಂತೋಷದಿಂದ ಆಡುತ್ತಾ ಬೆಳೆಯ ಬೇಕೆಂಬುದೇ ಇಲ್ಲಿಯವರ ಸಾಮಾಜಿಕ ಪ್ರಜ್ಞೆಯಾಗಿರಬೇಕು. ಈ ಮಕ್ಕಳ ಆಟಗಳಲ್ಲಿ ಸ್ಪರ್ಧೆ ಇರುವುದಿಲ್ಲವೆನಿಸಿದರೂ ಕೆಲ ಆಟಗಳಲ್ಲಿ ಸ್ಪರ್ಧೆಯನ್ನು ಕಾಣಬಹುದು.

ಹೊಳೆ-ಹಳ್ಳಗಳ ದಂಡೆಯ ಮೇಲೆ ಮತ್ತು ಯಾರಾದರು ಮನೆಯನ್ನು ಕಟ್ಟಲು ಉಸುಕನ್ನು ತಂದು ಅಂಗಳದಲ್ಲಿ ಸುರಿವಿದ್ದರೆ ಅಂತಹ ಉಸುಕಿನ ಮೇಲೆ ಕಾಲನ್ನು ಇಟ್ಟು, ಗುಬ್ಬಿ ಮತ್ತು ಕಾಗೆಯಂತೆ ಗೂಡನ್ನು ಕಟ್ಟುವ ರೀತಿಯಲ್ಲಿ ಸಣ್ಣ-ಸಣ್ಣ ಮನೆಯನ್ನು ಕಟ್ಟುವುದಾಗಿರಬಹುದು. ಗಾಳಿಪಟವನ್ನು ಹಾರಿಸುವುದಿರಬಹುದು; ಕಲ್ಲಿನ ಎತ್ತುಗಳನ್ನು ಮಾಡಿಕೊಂಡು ಹೊಲವನ್ನು ಉಳುವ ತೆರದಿ ಮನೆಯ ಹಿತ್ತಲಿನಲ್ಲಿ ಆಡುವುದು, ಇಂತಹ ಕಡೆ ಬಹುತೇಕ ಸ್ಪರ್ಧೆ ಇರುವುದಿಲ್ಲವೆನಿಸಿದರೂ, ಯಾರ ಮನೆಯು ಎಷ್ಟು ಸುಂದರವಾಗಿದೆ, ಯಾರ ಗಾಳಿಪಟ ಎಷ್ಟು ಎತ್ತರ ಹಾರುವುದು, ಯಾರ ಕಲ್ಲಿನ ಎತ್ತುಗಳು ಸುಂದರವಾಗಿವೆ ಎನ್ನುವುದನ್ನು ಬೇರೆಯವರು ತಿಳಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆಂದು ಮಕ್ಕಳು ಹಿರಿಯರಲ್ಲಿ ಆಸೆ ಪಡುತ್ತವೆ. ಶಹಬ್ಬಾಶ್ ಗಿರಿಯು ಸಿಕ್ಕ ಮಕ್ಕಳು ಕುಣಿದಾಡುತ್ತಾರೆ. ಈ ನಿಟ್ಟಿನಲ್ಲಿ ಇಂತಹ ಆಟಗಳನ್ನು ವಾಲ್ಮೀಕಿ ಸಮುದಾಯದ ಮಕ್ಕಳು ಆಡಿಕೊಂಡು ಬಂದಿರುವುದನ್ನು ಈ ಪರಿಸರದಲ್ಲಿ ಕಾಣಬಹುದು.

ಅಲ್ಲದೆ ಈ ಸಮುದಾಯದ ಮಕ್ಕಳು ಬಳೆಚೂರಿನ ಆಟ, ಕುಂಟ ಬಿಲ್ಲೆಯ ಆಟ, ಕಣ್ಣ ಮುಚ್ಚಾಲೆಯಾಟ, ಮುಟ್ಟಾಟ, ಕಪ್ಪೆಯಾಟ, ಗಿಡ ಮಂಗನಾಟ, ಬುಗುರಿಯಾಟ, ಗೋಲಿಗುಂಡಿನಾಟ, ಅಂಟ್ಯಾಳ ಆಟ (ಕಲ್ಲುತೂರುವ ಆಟ)  ಮುಂತಾದ ಸ್ಪರ್ಧಾ ರಹಿತ ಹಾಗೂ ಸ್ಪರ್ಧಾಸಹಿತ ಆಟಗಳನ್ನು ಆಡಿಕೊಂಡು ಬಂದಿರುವುದನ್ನು ನಾವು ಕಾಣಬಹುದು.

ನಂತರ ಟೊಪ್ಪಿಗೆಯಾಟ, ಲಡ್ಡು-ಲಡ್ಡು ತಿಮ್ಮಣ್ಣ ಮುಂತಾದ ಮನೋರಂಜನೆಯ ಆಟಗಳನ್ನು ನಾವು ಕ್ಷೇತ್ರಕಾರ್ಯಕ್ಕೆ ಹೋದ ಸಮಯದಲ್ಲಿ ಕಂಡೆವು. ಅಲ್ಲದೆ ಹಗ್ಗದ ಆಟ, ಲಗೋರಿ ಆಟ, ಉಪ್ಪು ಮಾರುವ ಆಟ, ಜೋಡಿ ಆಟ, ಈಜುವುದು ಮುಂತಾದ ಆಟಗಳನ್ನು ಈ ಪರಿಸರದ ಗ್ರಾಮೀಣ ಮಕ್ಕಳಲ್ಲಿ ಪ್ರಚಲಿತದಲ್ಲಿರುವುದು ಕಂಡುಬರುತ್ತದೆ.

ಗಂಡು ಮಕ್ಕಳ ಆಟಗಳು

ಗಂಡಸರ ಆಟಗಳಲ್ಲಿ ಶಾರೀರಿಕ ಶ್ರಮ ಹೆಚ್ಚಿರುತ್ತದೆ. ಹಾಗೆಯೇ ಬೌದ್ದಿಕ ಕಸರತ್ತು ಪ್ರಧಾನವಾಗಿರುತ್ತದೆ. ಗಂಡಸು ನಮ್ಮ ಜನಪದರಲ್ಲಿ ದುಡಿದು ತಂದು ಹಾಕುವುದು. ಅವನು ಬಲಾಢ್ಯವಾಗಿ ಇರಬೇಕು. ಹೀಗಾಗಿ ಜಾಣ್ಮೆ, ತಂತ್ರಗಾರಿಕೆ, ಸಾಹಸ, ಶಕ್ತಿ ಪ್ರಧಾನವಾದ ಆಟಗಳೆಲ್ಲ ಗಂಡಸರ ಆಟಗಳಾಗುತ್ತವೆ. ಗೋಲಿಯಾಟ, ಗಜ್ಜುಗದಾಟ, ಕಬ್ಬಡ್ಡಿಯಾಟ, ಕಂದುಕದಾಟ, ಗೂಳಿಕಾಳಗ, ಪಗಡೆಯಾಟ, ಚದುರಂಗ, ಬಿಲ್ಲುಗಾರಿಕೆ, ಗುಂಡು ಕಲ್ಲು ಎತ್ತುವುದು, ಕುಸ್ತಿ, ಕಾಲಿಗೆ ಕಲ್ಲು ಕಟ್ಟಿಕೊಂಡು ಎತ್ತುವುದು, ಉಸುಕಿನ ಚೀಲವನ್ನು ಬೆನ್ನ ಮೇಲೆ ಹೊತ್ತು ನಿರ್ದಿಷ್ಟ ಗುರಿ ಮುಟ್ಟುವುದು ಮುಂತಾದ ಕ್ರೀಡೆಗಳಲೆಲ್ಲ ಶಕ್ತಿ, ತಂತ್ರ-ಬುದ್ದಿ, ಪ್ರಧಾನವಾಗಿ ಕೆಲಸ ಮಾಡುವುದನ್ನು ನಾವು ಕಾಣಬಹುದು. ಇವುಗಳೆಲ್ಲವೂ ಹೊರಾಂಗಣದ ಆಟಗಳೂ ಆಗಿವೆ.

ಅಥಣಿ ಪರಿಸರದ ವಾಲ್ಮೀಕಿ ಸಮುದಾಯದವರು ಈ ರೀತಿಯ ಆಟಗಳನ್ನು ಆಡಿಕೊಂಡು ಬಂದಿರುವುದನ್ನು ಕಾಣಬಹುದು. ಇವುಗಳಲ್ಲಿ ದಿನನಿತ್ಯದಂತೆ ಮತ್ತು ಹಬ್ಬ ಹರಿದಿನಗಳಲ್ಲಿ ಆಡಿಕೊಂಡು ಬಂದಿರುವುದು ರೂಢಿಯಾಗಿದೆ. ದಿನನಿತ್ಯದಲ್ಲಿ ಚಿಣ್ಣಿ ದಾಂಡುವಿನ ಆಟ, ಮರಕೋತಿ ಆಟ, ಹುಲಿಮನಿಯಾಟ, ಲಗ್ಗಿಯಾಟ, ಗಜ್ಜಗದಾಟ ಕಬ್ಬಡ್ಡಿ ಮುಂತಾದ ಆಟಗಳನ್ನು ಈ ಸಮುದಾಯದ ಗಂಡಸರು ಆಡಿಕೊಂಡು ಬಂದಿದ್ದಾರೆ. ನಾಲ್ಕು ಜನರು ಹೊಲ ಮನೆಗಳಲ್ಲಿ ಕೆಲಸ ಮಾಡಿ ದಣಿದುಕೊಂಡು ಬಂದು ಊರಿನ ಯಾವುದಾದರು ದೇವಸ್ಥಾನದಲ್ಲಿಯೋ ಅಥವಾ ಬಯಲಿನಲ್ಲಿಯೋ ವಿಶ್ರಾಂತಿಗೆಂದು ಬಂದು ಹುಲಿಮನಿಯಾಟವನ್ನೋ, ಗಜ್ಜುಗದ ಆಟವನ್ನೊ ಪ್ರಾರಂಭಿಸಿ ಬಿಡುತ್ತಾರೆ. ಹೆಚ್ಚು ಹೆಚ್ಚು ಇಂತಹ ಆಟಗಳನ್ನು ಆಡಿದಂತೆ ವಿಶೇಷ ರೀತಿಯ ಪರಿಣತಿಯು ಇವರಿಗೆ ಬಂದು ಬಿಡುತ್ತದೆ. ಇದಕ್ಕಾಗಿ ಇವರು ವಿಶೇಷವಾಗಿ ತಾಲೀಮು ಮಾಡಬೇಕಾಗಿ ಬರುವುದಿಲ್ಲ.

ಇನ್ನು ಪ್ರತಿದಿನ ಸಾಯಂಕಾಲದ ಸಮಯದಲ್ಲಿ ಇಲ್ಲವೇ, ರಾತ್ರಿಯ ಸಮಯದಲ್ಲಿ ಊರೊಳಗೆ ಯುವಕರನ್ನು ಸೇರಿಸಿಕೊಂಡು ವಯಸ್ಕರು ಕಬ್ಬಡ್ಡಿ ಆಟವನ್ನು ಪ್ರಾರಂಭಿಸುತ್ತಾರೆ. ಇದು ಸಂಪೂರ್ಣ ಸ್ಪರ್ಧಾ ಸಹಿತವಾಗಿದ್ದು, ಸೋತವರು ಇಂತಿಷ್ಟು ಹಣವನ್ನು ಊರಿನ ಗ್ರಾಮ ದೇವತೆಯ ಹುಂಡಿಗೆ ಹಾಕಬೇಕು ಎಂದು ಷರತ್ತು ಮಾಡಿರುತ್ತಾರೆ. ಅದರಂತೆ ಸೋತವರು ಊರಿನ ದೇವತೆಯ ಹುಂಡಿಗೆ ಹಣವನ್ನು ಹಾಕುವುದು ಈ ಭಾಗದ ಕೆಲವು ಕಡೆ ಪದ್ಧತಿಯಾಗಿ ನಡೆದುಕೊಂಡು ಬಂದಿದೆ. ಹೀಗೆ ಇನ್ನು ಎಷ್ಟೋ ಆಟಗಳಲ್ಲಿ ಸೋತವರು ದೇವರಿಗೆ ಇಂತಿಷ್ಟು ಹಣವನ್ನು ಒಪ್ಪಿಸಬೇಕು ಎನ್ನುವುದರ ಹಿನ್ನೆಲೆಯಲ್ಲಿ ದೇವತಾ ಕಾರ್ಯಗಳಿಗೆ ಉಪಯೋಗವಾಗುವಂತೆ ಹಣವನ್ನು ಕೂಡಿಸಲು ಸಹಾಯಕ ವಾಗುವಂತೆ ಆಟಗಳನ್ನು ಆಡಿಕೊಂಡು ಬಂದಿದ್ದಾರೆ.

ಇನ್ನು ಹಬ್ಬ ಹರಿದಿನಗಳಲ್ಲಿ ಗ್ರಾಮೀಣ ಜನರ ಆಟಗಳು ವಿಶೇಷವಾಗಿ ನಡೆಯುತ್ತವೆ. ಉತ್ಸವ, ಜಾತ್ರೆ, ಓಕುಳಿಯಂತಹ ಸಂದರ್ಭದಲ್ಲಿ ಈ ಸಮುದಾಯದವರು ಆಟವಾಡಲು ಮುಂದಾಗುತ್ತಾರೆ. ಅಥಣಿ ತಾಲೂಕಿನ ರಡ್ಡೇರಹಟ್ಟಿಯಲ್ಲಿ ವಾಲ್ಮೀಕಿ ಸಮುದಾಯದವರು ಹನುಮಪ್ಪ ದೇವರ ಉತ್ಸವವನ್ನು ಓಕುಳಿಯಾಡುವುದರ ಮೂಲಕ ಯುಗಾದಿಯ ಸಂದರ್ಭದಲ್ಲಿ ನೆರವೇರಿಸುತ್ತಾರೆ. ಹನುಮಪ್ಪನ ಗುಡಿಯ ಮುಂದಿನ ಹೊಂಡಕ್ಕೆ ರಾತ್ರಿಯೆಲ್ಲಾ ಕೊಡಗಳನ್ನು ತೆಗೆದು ಕೊಂಡು ಯುವಕರು, ಹಿರಿಯರು, ಸ್ತ್ರೀಯರು ಎನ್ನದೇ ಎಲ್ಲರೂ ಬಾವಿಗಳಿಂದ, ನಳಗಳಿಂದ, ಹಳ್ಳ-ಕೊಳ್ಳಗಳಿಂದ ನೀರನ್ನು ತಂದು ತುಂಬಿಸುತ್ತಾರೆ. ಹೊಂಡಕ್ಕೆ ಹಂದರವನ್ನು ಹಾಕಿ ಯುಗಾದಿಯ ಪಾಡ್ಯದ ಮರುದಿನ ಓಕುಳಿಯಾಡುತ್ತಾರೆ. ಇದರಲ್ಲಿ ಹೊಂಡದ ನೀರನ್ನು ಕೊಡ ಮತ್ತು ಬಕೆಟ್ಟುಗಳಲ್ಲಿ ತುಂಬಿಕೊಂಡು ಊರೊಳಗೆ ಎಲ್ಲರೂ ಒಬ್ಬರಿಗೊಬ್ಬರು ಮೈಮೇಲೆ ಎರಚಿಕೊಳ್ಳುತ್ತಾರೆ. ಇಲ್ಲಿ ಯಾವುದೇ ತರಹದ ಭೇದ-ಭಾವಗಳು ಇರುವುದಿಲ್ಲ. ಊರಿನ ಎಲ್ಲಾ ಮತಧರ್ಮದ, ವರ್ಗದ ಜನರು ನೀರು ಎರಚಾಡುವುದನ್ನು ನೋಡಲು ಕಣ್ಣಿಗೆ ಮನೋರಂಜನೆಯನ್ನು ನೀಡುವಂತೆ ಇರುತ್ತದೆ. ನಂತರ ಊರಿನ ಜನರಲ್ಲಿ ಗಟ್ಟಿಗರೆನಿಸಿರುವವರು ಸಂಗ್ರಾಣದ ಕಲ್ಲುಗಳನ್ನು ಎತ್ತುವುದು ಒಂದು ಶಕ್ತಿ ಪ್ರದರ್ಶನದ ಕ್ರೀಡೆಯಾಗಿದೆ. ಇದರಲ್ಲಿ ಬಹಳಷ್ಟು ಶಕ್ತಿಯುಳ್ಳ ಜಟ್ಟಿಗಳು ಭಾಗವಹಿಸುತ್ತಾರೆ. ಇವರು ಮೊದಲೇ ತಾಲೀಮು ಮಾಡಿದವರಾಗಿರುತ್ತಾರೆ. ಇಂತಹ ಸಾಲಿಗ್ರಾಮದ ಕಲ್ಲುಗಳನ್ನು ನಾವು ವಿಶೇಷವಾಗಿ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಕಾಣಬಹುದು. ಇವುಗಳಲ್ಲಿ ದೊಡ್ಡ-ದೊಡ್ಡ ದುಂಡಾದ ಕಲ್ಲುಗಳು; ಡೆಂಬಲ್ಸ್ ಮಾದರಿಯ ಕಲ್ಲುಗಳು ಇರುತ್ತವೆ. ಇಂತಹ ಭಾರಿ ತೂಕದ ಕಲ್ಲುಗಳನ್ನು ಕೋಹಳ್ಳಿಯ ವಾಲ್ಮೀಕಿ ಸಮುದಾಯದ ಯುವಕರು, ನಡು ವಯಸ್ಸಿನವರು, ಅವರವರ ಶಕ್ತಿಗೆ ಅನುಗುಣವಾಗಿ ಕಲ್ಲುಗಳನ್ನು ಎತ್ತುತ್ತಾರೆ. ಇದು ಕೂಡ ಒಂದು ರೀತಿಯ ಸ್ಪರ್ಧಾತ್ಮಕ ಕ್ರೀಡೆಯಾಗಿದೆ. ಅತೀ ಹೆಚ್ಚು ಭಾರವಿರುವ ಕಲ್ಲನ್ನು ಯಾರು ಎತ್ತುವರೋ ಅವರಿಗೆ ವಿಜಯದ ಮಾಲೆಯನ್ನು ಹಾಕುವರು. ಅಲ್ಲದೇ ಅವರಿಗೆ ಉಡುಗೊರೆಯಾಗಿ, ಬಹುಮಾನವೆಂದು ಬೆಳ್ಳಿ, ಕಂಚಿನ ಕಾಲುಕಡಗವನ್ನು ನೀಡುವುದು ರೂಢಿಯಾಗಿದೆ.

ಅಲ್ಲದೆ ಗಂಡಸರಲ್ಲಿ ಕ್ರೀಡೆಯಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಕಣ್ಣು ಕಟ್ಟಿ ಮೂರು ಸುತ್ತು ತಿರುಗಿಸಿ ಊರಿನ ಯಾವುದೇ ಮೂಲೆಯಿಂದ ಅವರನ್ನು ಕೈಬಿಟ್ಟು ಊರಿನಲ್ಲಿರುವ ಆಂಜನೇಯನ ದೇವಸ್ಥಾನದಲ್ಲಿನ ಘಂಟೆಯನ್ನು ಬಾರಿಸುವಂತೆ ಪ್ರೇರೇಪಿಸುತ್ತಾರೆ. ಇದು ಮನೋರಂಜನೆಯನ್ನುಂಟು ಮಾಡುವ ಆಟವಾಗಿದೆ. ಇದನ್ನು ಸ್ತ್ರೀ ಪುರುಷರು ಕೂಡ ಆಡಬಹುದು. ಅಲ್ಲದೆ ಪಂಚಮಿ ಹಬ್ಬದಂತಹ ಸಂದರ್ಭದಲ್ಲಿ ನಿಂಬೆಹಣ್ಣನ್ನು ಇಂತಿಷ್ಟು ಎಸೆತದಲ್ಲಿ ಇಂತಿಷ್ಟು ದೂರ ಎಸೆಯಬೇಕು ಎನ್ನುವ ಜೂಜಾಟವನ್ನು ಈ ಪರಿಸರದ ಜನರು ಆಡುತ್ತಾ ಬಂದಿರುವುದು ತಿಳಿಯುತ್ತದೆ. ಯುವಕರು, ಹಿರಿಯರು ಎನ್ನದೇ ಕೋಲಾಟದಂತಹ ಆಟಗಳನ್ನು ಈ ಪರಿಸರದೊಳಗೆ ತಂಡಗಳನ್ನು ಕಟ್ಟಿಕೊಂಡು ಪ್ರತಿದಿನ ಸಾಯಂಕಾಲ ಇಲ್ಲವೇ ಹಬ್ಬ ಹರಿದಿನಗಳಲ್ಲಿ ಆಡಿಕೊಂಡು ಬಂದಿರುವುದು ತಿಳಿಯುತ್ತದೆ.

ಹೆಂಗಸರ ಆಟಗಳು

ನಮ್ಮ ಭಾರತೀಯ ಪರಂಪರೆಯಲ್ಲಿ ಲಿಂಗ ತಾರತಮ್ಯ ಭಾವವಿರುವುದು. ಇದಕ್ಕೆ ಅಥಣಿ ತಾಲೂಕು ಪರಿಸರವೂ ಹೊರತಲ್ಲ. ನಾವು ಇದನ್ನು ಅತ್ಯಂತ ಸಹಜ ಎಂದೇ ಸ್ವೀಕರಿಸಿದ್ದೇವೆ. ಜನಪದ ಆಟಗಳಲ್ಲಿಯೂ ಸಹ ಹೆಣ್ಣು ಮಕ್ಕಳ ಆಟಗಳು, ಗಂಡಸರ ಆಟಗಳು ಎಂದು ವಿಂಗಡಿಸುತ್ತಾರೆ. ಹೆಣ್ಣು ಮಕ್ಕಳು ಆಡುವ ಆಟಗಳನ್ನು ಗಂಡು ಮಕ್ಕಳು ಆಡಿದರೆ ಗೇಲಿ ಅಥವಾ ಟಿಂಗಲ್ ಮಾಡುವುದು. ಗಂಡು ಮಕ್ಕಳು ಆಡುವ ಆಟಗಳನ್ನು ಹೆಂಗಸರು ಆಡಿದರೆ ಗಂಡು ಬಸವಿ ಎಂದು ಕರೆಯುವುದು ಸಾಮಾನ್ಯ. ಇಲ್ಲಿ ಹೆಣ್ಣು-ಗಂಡುಗಳ ಶಾರೀರಿಕ ರಚನೆ ಮತ್ತು ದುಡಿಮೆಯ ನಿರೀಕ್ಷೆಗೆ ತಕ್ಕಂತೆ ಆಟಗಳು ಸೃಷ್ಟಿಯಾಗಿವೆ. ಅಥವಾ ಬಳಕೆಗೊಂಡು ಆಟಗಳನ್ನು ಆಡಿಕೊಂಡು ಬಂದಿರುವುದು ಸರಿ ಎನಿಸುತ್ತದೆ.

ಸಾಮಾನ್ಯವಾಗಿ ನಾವುಗಳು ಕುಟುಂಬ ವ್ಯವಸ್ಥೆಯನ್ನು ಒಪ್ಪುವ, ಪ್ರೀತಿಸುವ ಜನರು. ಕುಟುಂಬದ ವ್ಯವಸ್ಥೆಯಲ್ಲಿ ಪ್ರಧಾನ ಪಾಲು ಸಲ್ಲುವುದು ತಾಯಿಗೆ ಮಾತ್ರ. ಅಂತೆಯೇ ಆಕೆಯ ಮನಸ್ಸು ಕೂಡ ಮೃದು; ಹಾಗು ಕೋಮಲವೂ ಆಗಿರುತ್ತದೆ. ನಡವಳಿಕೆಯಲ್ಲಿ ನಯ-ನಾಜೂಕು ಇರುತ್ತದೆ. ಆಲೋಚನಾ ಕ್ರಮದಲ್ಲಿಯೂ ತಾಯ್ತನದ ಸ್ವಭಾವ ಇರುತ್ತದೆ. ಮನೆಯೊಳಗಣ ಕಸುಬು ಅಚ್ಚುಕಟ್ಟಾಗಿ ಹೆಣ್ಣಿಗೆ ಸೇರಿರುವುದರಿಂದ ಅವಳ ಆಟಗಳ ಸ್ವರೂಪ ಮತ್ತು ಆಟದಾಡುವ ಪರಿವೇಶವು ಒಳಾಂಗಣಕ್ಕೆ ಮೀಸಲು. ಕುಂಟ ಬಿಲ್ಲೆಯಂತಹ ಆಟವು ಮನೆಯ ಮುಂದಿನ ಅಂಗಳವಾಯ್ತೆ ಹೊರತು, ಬೀದಿ ಯಾಗುವುದಿಲ್ಲ. ಆಕೆಯ ಸ್ವಾತಂತ್ರವಾದ ಹೊರಗಿನ ಕೆಲಸವು ಹೆಚ್ಚೆಂದರೆ ಹೊಲ-ಗದ್ದೆಗಳ ಕೆಲಸವಾಗಿರುತ್ತದೆ. ಹೀಗಾಗಿ ಅವಳ ಆಟಗಳು ಹೆಚ್ಚು ಶ್ರಮದಾಯಕವಲ್ಲದ ಬೌದ್ದಿಕ ಕಸರತ್ತು ಇಲ್ಲದ ಆಟಗಳೇ ಆಗಿರುತ್ತವೆ. ಗಂಡಸರಿಗೆ ಹೋಲಿಸಿದರೆ ಹೆಂಗಸರ ಆಟಗಳು ಕಡಿಮೆ ಎಂದೇ ಹೇಳಬಹುದು. ಇದಕ್ಕೆ ಕಾರಣವು ಇಲ್ಲದಿಲ್ಲ. ಸನಾತನ ಭಾರತೀಯ ಪರಂಪರೆಯಲ್ಲಿ ಅದರಲ್ಲೂ ಕನ್ನಡ ಸಂಸ್ಕೃತಿಯ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳನ್ನು ಬೇಗನೆ ಮದುವೆ ಮಾಡುವುದು ನಮ್ಮ ಹಳ್ಳಿಗಳಲ್ಲಿ ಇಂದಿಗೂ ರೂಢಿಯಾಗಿ ಬಂದಿದೆ. ಹುಡುಗಿಯೊಬ್ಬಳು ದೊಡ್ಡವಳಾದ ಮೇಲೆ ಓಣಿಯಲ್ಲಿ; ಬೀದಿಯಲ್ಲಿ, ನಿಂತು-ಕುಂತು ಆಟವಾಡುವುದನ್ನು ನಮ್ಮ ಜನಪದ ಸಂಸ್ಕೃತಿಯು ಒಪ್ಪುವುದಿಲ್ಲ. ಇದು ಸರಿಯೋ? ತಪ್ರೋ? ಆದರೂ ೧೩-೧೪ನೇ ವರ್ಷಕ್ಕೆ ಹೆಣ್ಣು ಮಕ್ಕಳ ಕ್ರೀಡಾ ಲೋಕ ನಮ್ಮ ಜನಪದರಲ್ಲಿ ಬಹುಮಟ್ಟಿಗೆ ಕುಂಠಿತವಾಗುತ್ತದೆ. ಆದಾಗ್ಯೂ ಮುಕ್ತ ಜನಪದರಲ್ಲಿ ಇಂದಿಗೂ ಹಬ್ಬ-ಹರಿದಿನಗಳಲ್ಲಿ ಮಹಿಳೆಯರಿಗೆ ಸಂಬಂಧಸಿದ ಆಟಗಳು ಮುಂದುವರಿದು ಕೊಂಡು ಬಂದಿವೆ.

ಅಂಟ್ಯಾಳ (ಕಲ್ಲುಗಳನ್ನು ತೆಗೆದುಕೊಂಡು ಕೈಯಿಂದ ತೂರಿ ಹಿಡಿಯುವ ಆಟ)  ಬಳೆ ಚೂರಿನಾಟ, ಸರಿಬೆಸದಾಟ; ಪಗಡೆಯಾಟ, ಚಕ್ಕದ ಆಟ; ಮುಂತಾದುವುಗಳನ್ನು ನಮ್ಮ ಹೆಂಗಸರು ಆಡುತ್ತಲೇ ಬಂದಿದ್ದಾರೆ. ಆದರೆ ಪುರುಷರು ದಟ್ಟೈಸಿ ಆಟವಾಡಿದಂತೆ ನಮ್ಮ ಮಹಿಳೆಯರಿಗೆ ಆಟವಾಡಲು ಆಗುತ್ತಿಲ್ಲವೆಂದೇ ಹೇಳಬಹುದು. ಇತ್ತಿತ್ತಲಾಗಿ ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ ಇಂದು ಗ್ರಾಮೀಣ ಯುವ ಶಕ್ತಿ ಕ್ರೀಡಾಸಕ್ತಿಗೆ ಮಹತ್ವ ಕೊಡುತ್ತಿರುವುದರಿಂದ ಎಲ್ಲಾ ತರಹದ ಕ್ರೀಡೆಗಳಲ್ಲಿ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಆದರೆ ಅಥಣಿ ಪರಿಸರದಲ್ಲಿ ವಾಲ್ಮೀಕಿ ಸಮುದಾಯದ ಮಹಿಳೆಯರು ಅಷ್ಟಾಗಿ ಮುಂದುವರಿದಿಲ್ಲವೆಂದೇ ಹೇಳಬಹುದು. ಆದಾಗ್ಯೂ ಗ್ರಾಮೀಣ ಕ್ರೀಡೆಗಳಲ್ಲಿ ಹೆಂಗಸರು ಪ್ರತಿನಿಧಿಸುತ್ತಲೇ ಬಂದಿದ್ದಾರೆ. ಬೀಸುವ ಕುಟ್ಟುವ ಕ್ರಿಯೆಗಳು ಸಹಜ ಕ್ರಿಯೆಗಳಾಗಿದ್ದರೂ, ಅವುಗಳಲ್ಲದೇ ಕ್ರೀಡಾ ಅಥವಾ ಸ್ಪರ್ಧಾಭಾವನೆಯನ್ನು ನಾವು ಈ ಭಾಗದ ಮಹಿಳೆಯರಲ್ಲಿ ಕಾಣಬಹುದು. ಅಲ್ಲದೇ ಅಥಣಿ ಪರಿಸರದಲ್ಲಿ ದೊರೆಯುವ ಕೋಹಳ್ಳಿ, ರಡ್ಡೇರಹಟ್ಟಿ ಬೇಡರಹಟ್ಟಿ, ಶೇಡಬಾಳ, ಅಡಳಹಟ್ಟಿ, ಊರುಗಳಲ್ಲಿ ವಾಲ್ಮೀಕಿ ಸಮುದಾಯದ ಮಹಿಳೆಯರು ಕುಂಬಳಕಾಯಿ ಆಟ, ಓಡಾಟ, ಕುಂಬಾರ ಆಟ, ಅಸಿ-ಬಿಸಿ ಆಟ (ಕಾಲು ತೆವಳುತ್ತ ಆಡುವುದು)  ಈ ಆಟದಲ್ಲಿ ಸೋತವರು ಸವತಿಯರು ಗೆದ್ದವರು ಗೆಳತಿಯರು ಎನ್ನುವ ಮಾತಿದೆ. ಈ ಹಿನ್ನೆಲೆಯನ್ನೊಳಗೊಂಡ ಈ ಆಟವನ್ನು ರಡ್ಡೇರ ಹಟ್ಟಿಯ ವಯಸ್ಸಾದ ಮಹಿಳೆಯು ವಿವರಿಸಿದ್ದುಂಟು. ಅಂದ ಹಾಗೆ ಈ ಆಟವು ಸಂಪೂರ್ಣ ಸ್ಪರ್ಧಾಭಾವನೆಯ ಆಟವಾಗಿದೆ. ನಂತರ ಕಣ್ಣು ಕಟ್ಟಿಕೊಂಡು ಗೆಳತಿಯರನ್ನು ಮುಟ್ಟುವುದು; ಕಣ್ಣ ಮುಚ್ಚಾಲೆ ಆಟ, ಉಪ್ಪೊಮ್ಮೆ ಉಪ್ಪು ಎಂದು ನಾಲ್ಕು ಕಂಬಗಳ ನಡುವೆ ಓಡಾಡಿಕೊಂಡು ಆಡುವ ಆಟ, ಬೋ ಬೋ, ಕುಂಟುತ್ತಾ ಮುಟ್ಟುವ ಆಟ, ಜೋಕಾಲಿ ಜೋಕುವ ಆಟ, ನಿಂಬೆಹಣ್ಣು ಚಮಚದಲ್ಲಿ ಇಟ್ಟುಕೊಂಡು ಅದು ಬೀಳದಂತೆ ನಿಗಧಿತ ಗುರಿಯನ್ನು ಮುಟ್ಟಲು ಓಡುವುದು ಮುಂತಾದ ಕ್ರೀಡೆಗಳನ್ನು ನಾವು ಈ ಭಾಗದ ವಾಲ್ಮೀಕಿ ಸಮುದಾಯದಲ್ಲಿ ಕಂಡುಬರುತ್ತವೆ.

ಇನ್ನು ಹೊಲಗದ್ದೆಗಳಲ್ಲಿಯೂ ಕೆಲಸ ಮಾಡುವ ಸಮಯದಲ್ಲಿ ಕೂಲಿಗಾಗಿಯೂ ಶ್ರಮದಾಯಕವಾದ ಆಟಗಳನ್ನು ಆಡಲು ಮುಂದಾಗುತ್ತಾರೆ. ಹೇಗೆಂದರೆ ಒಂದು ಎಕರೆ ಭೂಮಿಯಲ್ಲಿನ ಸುಲುಗಾಯಿ (ಹಸಿಕಡ್ಡಿಯನ್ನು)  ಕೇವಲ ಎರಡು ತಾಸು-ನಾಲ್ಕು ತಾಸಿನಲ್ಲಿ ಕಿತ್ತು ಮುಗಿಸುತ್ತೇನೆ ಎನ್ನುವ ಸ್ಪರ್ಧೆ. ಇದು ಶಕ್ತಿ ಪ್ರದರ್ಶನದ ಆಟವೇ ಸರಿ. ಇದರಿಂದ ಅವರಿಗೆ ಕಡಿಮೆ ಸಮಯದಲ್ಲಿ ಬಹಳ ಹಣವನ್ನು ಸಂಪಾದಿಸಲು ಸಾದ್ಯ. ಇಂತಹ ಇನ್ನೂ ಇತರೆ ಸಂದರ್ಭಗಳಲ್ಲಿಯೂ ನಡೆಯುತ್ತದೆ. ಗೆದ್ದವರನ್ನು ಊರಿನವರು ಹಾಡಿ ಹೊಗಳುತ್ತಾರೆ.

ಪ್ರಾಣಿ ಸಂಬಂಧಿ ಆಟಗಳು

ತಮ್ಮ ಒಡನಾಟದ ಆಟಗಳನ್ನು ತಮ್ಮ ಬದುಕಿನ ಒಂದು ಭಾಗವೆಂದೇ ತಿಳಿದಿರುವ ಈ ಸಮುದಾಯದ ಜನರು ಈ ಪರಿಸರದಲ್ಲಿ ಸಾಕು ಪ್ರಾಣಿಗಳ ಮುಖಾಂತರವೂ ತಮ್ಮ ಕ್ರೀಡಾ ಮನೋಭಾವನೆಯನ್ನು ಮೆರೆಯುತ್ತಾರೆ. ಇಂತಹ ಆಟಗಳು ಬೇರೆ ಕಡೆಯಲ್ಲಿಯೂ ನಡೆಯುತ್ತವೆ.

ಪ್ರಾಣಿಗಳಲ್ಲಿ ಎತ್ತುಗಳಿಗೆ ಸಂಬಂಧಿಸಿದಂತೆ ಕ್ರೀಡೆಗಳು ಇಲ್ಲಿ ಕಂಡುಬರುತ್ತವೆ. ಉದಾ : ಕಾರಹುಣ್ಣಿಮೆಯ ದಿನದಂದು ಎತ್ತುಗಳಿಂದ ಕರಿ ಹರಿಯುವ ಒಂದು ಪದ್ಧತಿ. ಈ ಸಂದರ್ಭದಲ್ಲಿ ಹಳ್ಳಿಗಳ ಬಹಳಷ್ಟು ಎತ್ತುಗಳನ್ನು ಊರ ಮುಂದಿನ ಅಗಸಿ ಬಾಗಿಲಿಗೆ ತಂದು ಅಲಂಕಾರಗೊಳಿಸಿ, ಒಂದು ನಿಗಧಿತ ದೂರದಲ್ಲಿ ಊರಿನ ಒಂದು ಬೀದಿಯಲ್ಲಿ ಹೂ-ತೋರಣ ಕಟ್ಟಿ, ಅಲ್ಲಿ ಜನರೆಲ್ಲರೂ ಕಾದು ನಿಂತಿರುತ್ತಾರೆ. ಈ ಕಡೆ ಎತ್ತುಗಳನ್ನು ಹುರಿದುಂಬಿಸುವುದರ ಮುಖಾಂತರ ಎತ್ತುಗಳ ಮಾಲೀಕರು ಅವುಗಳ ಹಿಂದೆ ಓಡುತ್ತಾ ಬರುತ್ತಾರೆ. ಯಾರ ಎತ್ತು, ಯಾವ ಬಣ್ಣದ ಎತ್ತು ಕರಿ ಹರಿಯುತ್ತದೆಯೊ ಅವರನ್ನು ಆ ಎತ್ತನ್ನು ಮೆರವಣಿಗೆಯ ಮುಖಾಂತರ ಎತ್ತನ್ನು ಪೂಜಿಸಿ ಅವರ ಮನೆಗೆ ಕರೆ ತರುತ್ತಾರೆ. ಅಲ್ಲದೇ ಯಾವ ಬಣ್ಣದ ಎತ್ತು ಕರಿ ಹರಿಯುತ್ತದೋ ಆ ಬಣ್ಣದ ಮಾಲು ಹುಲುಸಾಗಿ ಬೆಳೆಯುತ್ತದೆ ಎನ್ನುವ ನಂಬಿಕೆ ಇವರದು. ಹಾಗೂ ಬಿಳಿ ಎತ್ತು ಕರಿ ಹರಿದರೆ ಮುಂಗಾರು ಬೆಳೆ, ಕಪ್ಪು ಅಥವಾ ಕೆಂಪು ಎತ್ತು ಕರಿ ಹರಿದರೆ ಹಿಂಗಾರು ಬೆಳೆಗಳು ಹುಲುಸಾಗಿ ಬೆಳೆಯುತ್ತವೆ ಎನ್ನುವ ನಂಬಿಕೆ ಇವರದು.

ಅಲ್ಲದೆ ಟಗರುಗಳ ಗುದ್ದಾಟ, ಕೋಳಿಗಳ ಜಗಳವನ್ನು ಇಲ್ಲಿ ಕಾಣಬಹುದು. ಒಟ್ಟಾರೆಯಾಗಿ ಜನಪದ ಆಟಗಳೆಲ್ಲವೂ ದೇಶಿಯ ನೆಲೆಗಳಾಗಿವೆ. ಏಕೆಂದರೆ ಬಹುತೇಕ ಆಟಗಳು ಧಾರ್ಮಿಕ ಉತ್ಸವದ ಅಂಗವಾಗಿಯೋ ಪುರಾತನದ ಮತಾಚರಣೆ, ವಿವಾಹಾದಿ ವಿಧಿಕ್ರಿಯೆಗಳು, ಹಾಗೂ ಅಲೌಕಿಕ ಶಕ್ತಿಗಳ ಸಂಬಂಧವಾದ ನಂಬಿಕೆಗಳು ಹಾಗು ಕೃಷಿ ಸಂಬಂಧವಾದ ಆಚರಣೆಗಳೊಂದಿಗೆ ತಳಕು ಹಾಕಿಕೊಂಡಿರುವುದನ್ನು ಕರ್ನಾಟಕದ ಯಾವ ಭಾಗದಲ್ಲಿಯೇ ಆಗಲಿ ಕಂಡುಬರುತ್ತದೆ. ಇದಕ್ಕೆ ಅಥಣಿ ಪರಿಸರವು ಹೊರತಲ್ಲ. ಉದಾ: ಓಕುಳಿಯಾಟ, ಹೋಳಿ ಹಬ್ಬದ ಜೊತೆಯಲ್ಲಿ ಬರುವಂತದು. ಎತ್ತಿನ ಗಾಡಿಯಾಟ ಸಂಕ್ರಾಂತಿಯ ಹಬ್ಬದಲ್ಲಿ ಹೆಚ್ಚಾಗಿ ಜರುಗುತ್ತದೆ. ಓಕುಳಿಯಾಟದಂತಹ ಆಟವು ಶೃಂಗಾರ ಸಂಕೇತವೇ ಆಗಿದ್ದರೂ ಶುಭದ ಸಂಕೇತವಾಗಿಯೂ ದೇವಾಲಯಗಳಲ್ಲಿ ನಡೆದುಕೊಂಡು ಬಂದಿದೆ.