ಬೆಳಗಾವಿ ಜಿಲ್ಲೆಯ ದೊಡ್ಡ ತಾಲೂಕು ಅಥಣಿ. ಇದು ಚಾರಿತ್ರಿಕವಾಗಿಯೂ ಕೂಡ ಪ್ರಸಿದ್ದಿ ಪಡೆದ ಸ್ಥಳ. ಇಲ್ಲಿ ದೊರೆತ ಅನೇಕ ಶಾಸನಗಳು, ಸ್ಮಾರಕಗಳು, ಅವಶೇಷಗಳು ಹಾಗೂ ಸಾಹಿತ್ಯಿಕ ಆಧಾರಗಳಿಂದ ಇಲ್ಲಿಯ ಚಾರಿತ್ರಿಕ ನೆಲೆಗಳ ಸ್ಥೂಲ ಪರಿಚಯವಾಗುತ್ತದೆ. ಹಳೆಯ ಶಿಲಾಯುಗದಿಂದ ಇಲ್ಲಿಯವರೆಗಿನ ಚರಿತ್ರೆಯ ಕಿರುಪರಿಚಯ ಇಲ್ಲಿದೆ.

ಪೀಠಿಕೆ

ನೀನೊಲಿದರೆ ಕೊರಡು ಕೊನರುವುದಯ್ಯ
ನೀನೊಲಿದರೆ ಬರಡು ಹಯನವುದಯ್ಯ

ಎನ್ನುವಂತೆ ಶಿವಯೋಗಿಸಿದ್ಧರು ಒಲಿದಿದ್ದರಿಂದ ಈ ಅಥಣಿ ಕ್ಷೇತ್ರ ಪಾವನ ಕ್ಷೇತ್ರವಾಯಿತು. ಪುಣ್ಯದ ನೆಲೆವೀಡಾಯಿತು.  ಯಾವ ಪ್ರದೇಶದಲ್ಲಿ ದಕ್ಷಿಣೋತ್ತರವಾಗಿ ಹಾಗೂ ಪೂರ್ವಪಶ್ಚಿಮವಾಗಿ ಹರಿಯುವ ನದಿ ಅಥವಾ ಹಳ್ಳ ಇರುವವೋ ಆ ಕ್ಷೇತ್ರ ಪುಣ್ಯಕ್ಷೇತ್ರವೆನಿಸುತ್ತದೆ. ತಪಸ್ವಿಗಳ ಬೀಡಾಗುತ್ತದೆ. ಇದು ಹಿಂದೂ ಧರ್ಮ, ಶಾಸ್ತ್ರಗಳ ನುಡಿ. ಆರ್ಯಾವರ್ತ ಭಾರತದ ಉತ್ತರ ಭಾಗದಲ್ಲಿನ ಕಾಶಿಯಲ್ಲಿ ಪವಿತ್ರ ಗಂಗಾನದಿಯು ದಕ್ಷಿಣೋತ್ತರವಾಗಿ ಹರಿಯುತ್ತಿದ್ದುದರಿಂದಲೇ ಅದು ಸುಪವಿತ್ರ ಕ್ಷೇತ್ರವೆನಿಸಿತು. ಇದರಂತೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ಈ ಅಥಣಿಯಲ್ಲಿಯೂ ಗಂಗಾನದಿಯ ಪರ್ಯಾಯ ಹೆಸರೆನಿಸಿದ ಭಾಗೀರಥಿ ನಾಮದ ಹಳ್ಳವು ಮೊದಲು ದಕ್ಷಿಣೋತ್ತರವಾಗಿ ಹರಿದು ಬಳಿಕ ಪೂರ್ವದಿಂದ ಪಶ್ಚಿಮಕ್ಕೆ ಹರಿದು, ಈ ತಾಣವು ಪಾವನ ಕ್ಷೇತ್ರವೆನಿಸಿದೆ.

ಮಹಾಭಾರತದ ಜನಮೇಜಯನ, ಹಳೆಯ ಶಿಲಾಯುಗದ ಪಳೆಯುಳಿಕೆ, ಮೌರ್ಯ, ಶಾತವಾಹನ, ಗಂಗ, ಕದಂಬ, ಚಾಲುಕ್ಯ, ಹೊಯ್ಸಳ ಮನೆತನಗಳ ಪ್ರಭಾವ ಈ ಎಲ್ಲ ಚಾರಿತ್ರಿಕ ವಿಷಯಗಳನ್ನು ತನ್ನಲ್ಲಿ ಇಟ್ಟುಕೊಂಡ ಈ ಪರಿಸರ ಸ್ವಾತಂತ್ರ ಹೋರಾಟದಲ್ಲಿಯೂ ಮಂಚೂಣಿಯಲ್ಲಿತ್ತು.

ಇಲ್ಲಿಯ ಧಾರ್ಮಿಕ ಕ್ಷೇತ್ರಗಳು ಕಲೆ ಹಾಗೂ ವಾಸ್ತುಶಿಲ್ಪದ ದೃಷ್ಟಿಯಿಂದ ಚರಿತ್ರೆಯಲ್ಲಿ ಅಜರಾಮರವಾಗಿವೆ.

ಚಾರಿತ್ರಿಕ ನೆಲೆಗಳು ಮಹಾಭಾರತದ ಕಾಲ

ಸಪ್ತಸಾಗರ : ಮಹಾಭಾರತದ ಕೊನೆಯ ಅರಸ ಜನಮೇಜಯ ಸರ್ಪಯಾಗದಲ್ಲಿ ಯಶಸ್ವಿಯಾಗದೆ ತೀರ್ಥಯಾತ್ರೆ ಕೈಗೊಂಡಾಗ ಈ ಪ್ರದೇಶಕ್ಕೆ ಭೇಟಿಕೊಟ್ಟು ಬಕದಾಲಬ್ದ ಋಷಿಗಳ ಆಶೀರ್ವಾದ ಪಡೆದು ಯಜ್ಞ ಪೂರ್ತಿಗೊಳಿಸಿದನೆಂಬ ಪ್ರತೀತಿ ಇದೆ. ಏಳು ಜನ ಋಷಿಗಳು ಯಜ್ಞಕುಂಡ ರಚಿಸಿ, ಯಾಗಮಾಡಿ, ಏಳು ಸಮುದ್ರಗಳ ನೀರನ್ನು ತಂದು ಹಾಕಿದ್ದರಿಂದ ಈ ಪ್ರದೇಶ ಸಪ್ತಸಾಗರವಾಯಿತು. ಕೃಷ್ಣ ತೀರದಲ್ಲಿರುವ ಈ ಗ್ರಾಮ ಈಗಲೂ ಯಜ್ಞಗಳು ನಡೆದ ಸಾಕ್ಷಿಗಾಗಿ ಬೂದಿಯ ಪ್ರದೇಶವನ್ನು ಹೊಂದಿರುವುದನ್ನು ಕಾಣುತ್ತೇವೆ.

ಶಿಲಾ ಮತ್ತು ತಾಮ್ರಯುಗ : ಈ ಪ್ರದೇಶದಲ್ಲಿ ಶಿಲಾ ಮತ್ತು ತಾಮ್ರಯುಗದ ಅವಶೇಷಗಳು ಕಂಡುಬಂದದ್ದನ್ನು ಡಾ. ಅ. ಸುಂದರ, ಡಾ.ಆರ್.ಎಸ್.ಪಂಚಮುಖಿ ಅವರ ಸಂಶೋಧನೆಗಳಿಂದ ಕಾಣುತ್ತೇವೆ. ಇಲ್ಲಿ ದೊರೆತ ಆಯುಧಗಳು, ಮಡಿಕೆಗಳು ಈ ಪರಿಸರದ ಪ್ರಾಚೀನತೆ ಹಾಗೂ ಮಾನವ ಪರಿಸರ ಬೆಳೆದು ಬಂದ ಬಗೆಯನ್ನು ತಿಳಿಸಿ ಕೊಡುತ್ತವೆ. ಐನಾಪೂರ, ರೋಲಿ, ಸಿಂದಿಗಿ ಗ್ರಾಮಗಳಲ್ಲಿ ಆದಿ ಹಳೆಯ ಶಿಲಾಯುಗ ಸಂಸ್ಕೃತಿಯ ಅಂದರೆ ಸುಮಾರು ಒಂದು ಲಕ್ಷದಿಂದ ನಾಲ್ಕು ಲಕ್ಷ ವರ್ಷಗಳಷ್ಟು ಹಳೆಯ ಆಯುಧೋಪಕರಣಗಳು ದೊರೆತಿವೆ. ಐನಾಪೂರ, ರೋಲಿ, ಶೇಗುಣಸಿ, ಸತ್ತಿ ಗ್ರಾಮಗಳಲ್ಲಿ ಹತ್ತು ಸಾವಿರದಿಂದ ನಲವತ್ತು ಸಾವಿರಗಳಷ್ಟು ಹಿಂದಿನ ಅಂದರೆ ಮಧ್ಯಹಳೆಯ ಶಿಲಾಯುಗದ ಉಪಕರಣಗಳು ಪತ್ತೆಯಾಗಿವೆ. ಶೇಗುಣಸಿ, ಸತ್ತಿ ಸಪ್ತಸಾಗರ, ಮಂಗಸೂಳಿ, ಕೊಡಗಾನೂರ ಗ್ರಾಮಗಳಲ್ಲಿ ಎರಡೂವರೆ ಸಾವಿರದಿಂದ ಹತ್ತು ಸಾವಿರ ವರುಷಗಳಷ್ಟು ಹಳೆಯದಾದ ಸೂಕ್ಷ್ಮ (ಮಧ್ಯ)  ಶಿಲಾಯುಗದ ವಿವಿಧ ವಸ್ತುಗಳು ಕಂಡುಬಂದಿವೆ. ಸತ್ತಿ, ಸಪ್ತಸಾಗರ ಗ್ರಾಮಗಳಲ್ಲಿ ನೂತನ ಶಿಲಾಯುಗದ ಸಂಸ್ಕೃತಿಯ ಅಂದರೆ ಕ್ರಿ.ಪೂ.ಸುಮಾರು ೨೦೦೦ ದಿಂದ ೧೦೦೦ರವರೆಗಿನ ಆಯುಧಗಳು ಸಿಕ್ಕಿವೆ. ನೇಸೂರ, ಶೇಗುಣಸಿ, ಸತ್ತಿ, ಸಪ್ತಸಾಗರ, ಗುಂಡೇವಾಡಿ ಗ್ರಾಮಗಳಲ್ಲಿ ಶಿಲಾ-ತಾಮ್ರಯುಗ ಸಂಸ್ಕೃತಿಯ ಉಪಕರಣಗಳು ಬೆಳಕಿಗೆ ಬಂದಿವೆ. ಹುಲಗಬಾಳಿ, ಐಗಳಿ, ಕಾಗವಾಡ, ಬನ್ನೂರ, ತೆಲಸಂಗ, ಕೊಟ್ಟಲಗಿ ಗ್ರಾಮಗಳಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಗೋಚರಿಸಿವೆ. ಈ ಕುರುಹುಗಳಲ್ಲಿ ಹುಲಗಬಾಳಿಯ ಬೂದಿ ದಿಬ್ಬವು ಮಹತ್ವದ್ದಾಗಿದೆ. ಸಂಬರಗಿಯಲ್ಲಿ ಇತಿಹಾಸ ಆರಂಭಯುಗ ಸಂಸ್ಕೃತಿಯ ಪ್ರಾಚ್ಯಾವಶೇಷಗಳು ಕಂಡುಬಂದಿವೆ. ಈ ಮೇಲಿನ ಎಲ್ಲಾ ಸಾಕ್ಷಿಗಳು ಸಮಕಾಲೀನ ಸಾಂಸ್ಕೃತಿಕ ಇತಿಹಾಸದ ಅಧ್ಯಯನಕ್ಕೆ ಉಪಯುಕ್ತವಾಗಿವೆ.

ವಿವಿಧ ಅರಸರ ಆಡಳಿತ ಕಾಲದ ಅಥಣಿ : ಕಾವೇರಿಯಿಂದ ಗೋದಾವರಿಯವರೆಗೆ ಹರಡಿದ ವಿಶಾಲ ಕನ್ನಡ ನಾಡನ್ನು ಆಳಿದ ಅರಸರು, ಅರಸು ಮನೆತನಗಳು ಅನೇಕ. ಪ್ರತಿಯೊಂದು ಅರಸು ಮನೆತನವು ತನ್ನ ಆಡಳಿತದ ಅನುಕೂಲತೆಗಾಗಿ ಹಲವು ಪ್ರಧಾನ ಹಾಗೂ ಉಪಪ್ರಾಂತಗಳಾಗಿ ಆಡಳಿತ ನಡೆಸಿತ್ತು. ಇಂದಿನ ಅಥಣಿ ಪರಿಸರವು ಅಂದು ಪರಿಸಿಗೆ ಸನ್ನಿಚ್ಚಾರಸಿರ, ಕರಹಾಡ ನಾಲ್ಕು ಸಾವಿರ ಮರಂಜಿ ಮೂನಾಸಿರ, ಕನ್ನಂಬಾಡೆ ಮುನ್ನೂರು ಕುಂತಳದೇಶ, ಸೇವುಣ ದೇಶ ಮೂವತ್ತಾರುಬಾಡ ಮೊದಲಾದ ಪ್ರಾಂತ್ಯಗಳಲ್ಲಿ ಅಂತರ್ಗತವಾಗಿತ್ತು.

ಮೌರ್ಯರ ಕಾಲದಲ್ಲಿ ಈ ಪ್ರದೇಶದಲ್ಲಿ ಯಾವ ಕುರುಹು ಕಾಣಬರದಿದ್ದರೂ ಶಾತವಾಹನರ ಕಾಲದಲ್ಲಿ ಪ್ರಾಚೀನ ಅವಶೇಷಗಳು ಸಂಬರಗಿಯಲ್ಲಿ ದೊರೆತಿವೆ. ಇಂದು ಈ ಪರಿಸರವು ಆ ಮನೆತನದ ಆಳ್ವಿಕೆಯ ಪ್ರಭಾವದಲ್ಲಿತ್ತೆಂಬುದನ್ನು ಸ್ಪಷ್ಟಪಡಿಸುತ್ತದೆ.

ರಾಷ್ಟ್ರಕೂಟರ ತರುವಾಯ ರಾಜಕೀಯ ರಂಗವನ್ನು ಪ್ರವೇಶಿಸಿದ ಕಲ್ಯಾಣದ ಚಾಲುಕ್ಯರು ಕ್ರಿ.ಶ.೯೭೩ ರಿಂದ ೧೧೮೯ರವರೆಗೆ ಆಳ್ವಿಕೆ ನಡೆಸಿದರು. ಇವರ ಸಾಮ್ರಾಜ್ಯ ಕನ್ನಡನಾಡು ಅಷ್ಟೇ ಅಲ್ಲದೇ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳನ್ನೊಳಗೊಂಡಿತ್ತು. ಈ ಆಳ್ವಿಕೆಯ ಪ್ರಾರಂಭದಿಂದ ಅಥಣಿ ಪರಿಸರದ ರಾಜಕೀಯ ಇತಿಹಾಸ ಸ್ಪಷ್ಟವಾಗಿದೆ. ಈ ಪರಿಸರದಲ್ಲಿ ಈ ಮನೆತನಕ್ಕೆ ಸಂಬಂಧಿಸಿದಂತೆ ಅನೇಕ ಶಾಸನಗಳು, ದೇವಾಲಯಗಳು, ಶಿಲ್ಪಗಳು, ನಾಣ್ಯಗಳು ಮೊದಲಾದ ಪುರಾತತ್ವ ಅವಶೇಷಗಳು ಬೆಳಕಿಗೆ ಬಂದಿವೆ. ಕೊಟ್ಟಲಗಿಯ ಕ್ರಿ.ಶ.೧೦೨೨ರ ಶಾಸನವು ಜಗದೇಕ ಮಲ್ಲದೇವನ (೨ನೇ ಜಯಸಿಂಹ ಕ್ರಿ.ಶ.೧೦೧೫-೧೦೪೪)  ಕೊಕಟನೂರಿನ ಕ್ರಿ.ಶ.೧೦೫೧)  ಶಾಸನವು ೧ನೆಯ ಸೋಮೇಶ್ವರನ (ಕ್ರಿ.ಶ.೧೦೪೪-೧೦೬೮) . ರಾಮತೀರ್ಥದ ಕ್ರಿ.ಶ.೧೧೧೫ರ, ತೆಲಸಂಗದ ಕ್ರಿ.ಶ.೧೧೨೨ ರ, ಕೊಕಟನೂರಿನ ಕ್ರಿ.ಶ.೧೧೨೬ರ, ಬಳ್ಳಿಗೇರಿಯ ಕ್ರಿ.ಶ.ಸುಮಾರು ೧೨ನೆಯ ಶತಮಾನದ ಶಾಸನಗಳು ೬ನೆಯ ವಿಕ್ರಮಾದಿತ್ಯನ (ಕ್ರಿ.ಶ.೧೦೭೬-೧೧೨೭) . ತೆಲಸಂಗದ ಕ್ರಿ.ಶ.೧೧೪೭ರ ಶಾಸನವು ೨ನೆಯ ಜಗದೇಕಮಲ್ಲ ದೇವನ (ಕ್ರಿ.ಶ.೧೧೩೯-೧೧೪೯)  ಆಳ್ವಿಕೆಗಳನ್ನು ಪರಿಚಯಿಸಿವೆ. ಈ ಪರಿಸರ ಮತ್ತು ಅವರ ಸಾಮಂತರ ಆಧೀನದಲ್ಲಿ ಅನೇಕ ಜನ ಪ್ರಭು ಗಾವುಂಡರು, ದಂಡನಾಯಕರು, ಪೆರ್ಗಡೆಗಳು, ಸೇನಬೋಗರು ಮೊದಲಾದವರು ಗ್ರಾಮ ಮಟ್ಟದಲ್ಲಿ ಆಳ್ವಿಕೆ ನಡೆಸಿರುವುದು ಸಮಕಾಲೀನ ಶಾಸನಗಳಿಂದ ಸ್ಪಷ್ಟವಾಗುತ್ತದೆ. ಕಲ್ಯಾಣ ಚಾಲುಕ್ಯರ ಮನೆತನದ ಆಳ್ವಿಕೆಯ ಕಾಲಾವಧಿಯಲ್ಲಿ ಈ ಪರಿಸರದಲ್ಲಿ ವಿಶಿಷ್ಠ ಶೈಲಿ ಮತ್ತು ವಿನ್ಯಾಸದ ದೇವಾಲಯಗಳು ನಿರ್ಮಾಣವಾಗಿವೆ. ಅವುಗಳಲ್ಲಿ ಅಥಣಿಯ ಅಮೃತಲಿಂಗೇಶ್ವರ, ಬಾಡಗಿಯ ತ್ರಿಕೂಟಾಚಲ (ಕಲ್ಮೇಶ್ವರ) , ಬಳ್ಳಿಗೇರಿಯ ತ್ರಿಕೂಟಾಚಲ (ನರಸಿಂಹ-ಬಸವಣ್ಣ) , ಘ್ರಿಕೂಟಾಚಲ ಜಿನಾಲಯ (ವೀರಭದ್ರ)  ರಾಮಲಿಂಗೇಶ್ವರ, ಐನಾಪುರದ ಆದಿನಾಥ, ಪಾರ್ಶ್ವನಾಥ, ಜಂಬುಲಿಂಗೇಶ್ವರ, ವಿಶ್ವನಾಥ, ರಾಮಲಿಂಗೇಶ್ವರ, ಸತ್ತಿಯ ಕಲ್ಮೇಶ್ವರ ಮಲ್ಲಿಕಾರ್ಜುನ, ತ್ರಿಕೂಟಾಚಲ (ಲಕ್ಷ್ಮೀ ನರಸಿಂಹ) , ಸವದಿಯ ತ್ರಿಕೂಟಾಚಲ (ಗೋಪಾಲಕೃಷ್ಣ) , ಆದಿನಾಥ ನಂದಗಾವದ ತ್ರಿಕೂಟಾಚಲ (ಬಸವಣ್ಣ)  ಕೊಕಟನೂರದ ತೈಪುರುಷ (ಘ್ರಿಕೂಟಾಚಲ) , ರಾಮತೀರ್ಥದ ತ್ರಿಕೂಟಾಚಲ (ರಾಮೇಶ್ವರ) , ಕೋಹಳ್ಳಿಯ ಸಂಗಮೇಶ್ವರ, ಕೊಟ್ಟಲಗಿಯ ಸಿದ್ಧೇಶ್ವರ, ಕಲಾಲಿಂಗೇಶ್ವರ, ಶೇಡಬಾಳದ ಬಸವಣ್ಣ, ಮಲ್ಲಿಕಾರ್ಜುನ, ತೆಲಸಂಗದ ಕಲ್ಮೇಶ್ವರ ದೇವಾಲಯಗಳು ಉತ್ತಮ ನಿದರ್ಶನಗಳಾಗಿವೆ. ಜೊತೆಗೆ ಸಮಕಾಲೀನ ಶೈವ, ವೈಷ್ಣವ, ಜೈನ, ಶಾಕ್ತ, ಮೊದಲಾದ ಪಂಥಗಳ ವೈಶಿಷ್ಟ್ಯ ವಾದ ಶಿಲ್ಪಗಳೂ ಈ ಪರಿಸರದಲ್ಲಿ ಗೋಚರಿಸುತ್ತವೆ.

ಕಲ್ಯಾಣದ ಚಾಲುಕ್ಯ ಮನೆತನದ ಅಧೀನದಲ್ಲಿ ಆಳ್ವಿಕೆಯನ್ನು ಪ್ರಾರಂಭಿಸಿದ ಕಲ್ಯಾಣದ ಕಲಚೂರಿ ಮನೆತನವು ಕ್ರಿ.ಶ.೧೧೬೨ ರಿಂದ ೧೧೮೪ರವರೆಗೂ ಆಳ್ವಿಕೆ ನಡೆಸಿದೆ. ಅಥಣಿ ಪರಿಸರವು ಆ ಮನೆತನದ ಆಳ್ವಿಕೆಯ ಪ್ರಭಾವದಲ್ಲಿತ್ತೆಂಬುದಕ್ಕೆ ಕೊಕಟನೂರಿನ ಕ್ರಿ.ಶ.೧೦೫೦-೫೧ರ, ಕ್ರಿ.ಶ.೧೧೬೯ರ, ಕ್ರಿ.ಶ.ಸುಮಾರು ೧೨ನೆಯ ಶತಮಾನದ ರಾಮತೀರ್ಥದ, ಕ್ರಿ.ಶ.೧೧೬೭ರ ಬಳ್ಳಿಗೇರಿಯ ಕ್ರಿ.ಶ.ಸುಮಾರು ೧೨ನೆಯ ಶತಮಾನದ, ತೆಲಸಂಗ ಕ್ರಿ.ಶ.ಸುಮಾರು ೧೨ನೇ ಶತಮಾನದ ಶಾಸನಗಳು ಪ್ರಮುಖ ಆಕರಗಳಾಗಿವೆ. ಈ ಮನೆತನದ ಆಳ್ವಿಕೆಯ ಕಾಲಾವಧಿಯಲ್ಲಿ ಈ ಪರಿಸರದಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾಗಿವೆ. ಅವುಗಳಲ್ಲಿ ಮದಭಾವಿಯ ರಾಮಲಿಂಗೇಶ್ವರ (ದ್ವಿಕೂಟ)  ಮತ್ತು ಮಹಾದೇವ ದೇವಾಲಯಗಳು ಮಹತ್ವದ್ದಾಗಿವೆ.

ಮಳಖೇಡದ ರಾಷ್ಟ್ರಕೂಟ ಮತ್ತು ಕಲ್ಯಾಣದ ಚಾಲುಕ್ಯರ ಅಧೀನ ಮನೆತನಗಳಲ್ಲಿ ಆಳ್ವಿಕೆಯನ್ನು ಪ್ರಾರಂಭಿಸಿದ ದೇವಗಿರಿಯ ಸೇವುಣ ಮನೆತನವು ಕ್ರಮೇಣ ಸ್ವತಂತ್ರವಾಗಿ ಕ್ರಿ.ಶ.ಸುಮಾರು ೧೨ ರಿಂದ ೧೪ನೆಯ ಶತಮಾನದವರೆಗೂ ಆಳ್ವಿಕೆ ನಡೆಸಿದೆ. ಅಥಣಿ ಪರಿಸರವು ಈ ಮನೆತನದ ಆಳ್ವಿಕೆಯ ಪ್ರಭಾವದಲ್ಲಿತ್ತು. ಈ ಪರಿಸರದ ಯಕ್ಕಂಚಿಯ ಕ್ರಿ.ಶ.೧೧೪೭ರ ಕೊಕಟನೂರದ ಕ್ರಿ.ಶ.೧೨೨೫ರ, ಮದಭಾವಿಯ ಕ್ರಿ.ಶ.೧೨೩೫ರ ಶಾಸನಗಳು ಆ ಮನೆತನದ ಸಿಂಘದೇವನ (ಕ್ರಿ.ಶ.೧೧೯೯-೧೨೪೭)  ಮತ್ತು ಕೊಕಟನೂರಿನ ಕ್ರಿ.ಶ.೧೩೦೬ರ ಶಾಸನವು ರಾಮಚಂದ್ರ ದೇವನ (ಕ್ರಿ.ಶ.೧೨೭೨-೧೩೧೨)  ಆಳ್ವಿಕೆಗಳನ್ನು ಪರಿಚಯಿಸಿವೆ. ಈ ಮನೆತನದ ಆಳ್ವಿಕೆಯ ಕಾಲಾವಧಿಯಲ್ಲಿಯೂ ಈ ಪರಿಸರದಲ್ಲಿ ವಿವಿಧ ಸಾಂಸ್ಕತಿಕ ಚಟುವಟಿಕೆಗಳು ಜರುಗಿರುವುದಕ್ಕೆ ಪ್ರಸ್ತುತ ಶಾಸನಗಳು ನಿದರ್ಶನ ಗಳಾಗಿವೆ. ಮಳಖೇಡದ ರಾಷ್ಟ್ರಕೂಟ ಮನೆತನದ ಅಧೀನದಲ್ಲಿ ಆಳ್ವಿಕೆಯನ್ನು ಪ್ರಾರಂಭಿಸಿದ ಕೋಲ್ಹಾಪೂರದ ಶಿಲಾಹಾರ ಮನೆತನದ ಆಳ್ವಿಕೆಯ ಪ್ರಭಾವಕ್ಕೂ ಅಥಣಿ ಪರಿಸರ ಒಳಪಟ್ಟಿತ್ತು. ಈ ಪರಿಸರದ ವಿಜಯಾದಿತ್ಯನ (ಕ್ರಿ.ಶ.೧೧೫೩ರ)  ಜೂಗುಳದ ಕ್ರಿ.ಶ.ಸುಮಾರು ೧೨ನೆಯ ಶತಮಾನದ ಶಾಸನಗಳು ಈ ಮನೆತನದ ವಿಜಯಾದಿತ್ಯನ (ಕ್ರಿ.ಶ.೧೧೩೮ ರಿಂದ ೧೧೭೫)  ಆಳ್ವಿಕೆಯನ್ನು ಪರಿಚಯಿಸಿವೆ. ಈ ಮನೆತನದ ಆಳ್ವಿಕೆಯ ಕಾಲಾವಧಿಯಲ್ಲಿಯೂ ಈ ಪರಿಸರದಲ್ಲಿ ದೇವಾಲಯಗಳ ಜೀರ್ಣೋದ್ಧಾರ, ಅವುಗಳಿಗೆ ದಾನದತ್ತಿಗಳು ಮೊದಲಾದ ಚಟುವಟಿಕೆಗಳು ಜರುಗಿವೆ.

ಹೊಯ್ಸಳ ಮನೆತನದ ತರುವಾಯ ರಾಜಕೀಯ ರಂಗವನ್ನು ಪ್ರವೇಶಿಸಿದ (ಕರ್ನಾಟಕ)  ವಿಜಯನಗರ ಮನೆತನದ (ಕ್ರಿ.ಶ.೧೩೩೬ ರಿಂದ ೧೫೬೫)  ಆಳ್ವಿಕೆಯ ಸಂದರ್ಭದಲ್ಲಿ ಆ ಮನೆತನದ ಅಧೀನದಲ್ಲಿ ಕೆಲವು ಅಧಿಕಾರಿಗಳು ಅಥಣಿ ಪರಿಸರದಲ್ಲಿ ಆಳ್ವಿಕೆ ನಡೆಸಿದ್ದಾರೆ. ಭೀಮಾನದಿ ತೀರದ ಅವರಾದಿ ಗ್ರಾಮದಿಂದ ಈ ಪರಿಸರಕ್ಕೆ ಆಗಮಿಸಿ ಅಧಿಕಾರ ನಡೆಸಿದ ಗದಿಗೆಪ್ಪನ ಆಡಳಿತವನ್ನು ಮೆಚ್ಚಿದ ಆನೆಗುಂದಿಯ ರಾಮರಾಜನು ಕೊಕಟನೂರು ಗ್ರಾಮವನ್ನು ಆತನಿಗೆ ಇನಾಮಾಗಿ ಕೊಟ್ಟನು. ಈ ಪರಿಸರವು ಕ್ರಿ.ಶ.೧೫೮೩ ರಿಂದ ೧೬೮೬ ರವರೆಗೆ ವಿಜಾಪೂರದ ಆದಿಲ್‌ಶಾಹಿ ಮನೆತನದ ಆಳ್ವಿಕೆಯ ಪ್ರಭಾವದಲ್ಲಿತ್ತು. ಮರಾಠರು ಪ್ರಬಲರಾಗಿ ವಿಜಾಪೂರ ಸುಲ್ತಾನನಿಂದ ಈ ಪರಿಸರವನ್ನು ವಶಪಡಿಸಿಕೊಂಡು ಕ್ರಿ.ಶ.ಸುಮಾರು ೧೭ನೆಯ ಶತಮಾನದ ಉತ್ತಾರಾರ್ಧದವರೆಗೂ ಇದರ ಮೇಲೆ ತಮ್ಮ ಪ್ರಭಾವ ಹೊಂದಿದ್ದರು. ತರುವಾಯ ಈ ಪರಿಸರವನ್ನು ಮೊಗಲ್ ಮನೆತನದ ಅಧಿಕಾರಿ ದಿಲೋರಖಾನನು ಮರಾಠರಿಂದ ವಶಪಡಿಸಿಕೊಂಡು ಆಳಿದನು. ಇದೇ ಸಂದರ್ಭದಲ್ಲಿ ಕಾಗವಾಡದಲ್ಲಿ ತ್ರೈಂಬಕರಾವ ಪಟವರ್ಧನ ವಂಶದ ಸಂಸ್ಥಾನವಿತ್ತು. ಇದರ ಆಡಳಿತದ ವ್ಯಾಪ್ತಿಯಲ್ಲಿ ೧೨೦ ಗ್ರಾಮಗಳಿದ್ದವು. ಪುಣೆ ಸರಕಾರದ ಅಧಿಕಾರಿ (ಪೇಶ್ವೆ)  ಪೋಳನು ಈ ಪರಿಸರಕ್ಕೆ ಆಗಮಿಸಿ ಇಲ್ಲಿಯ ಆಡಳಿತವನ್ನು ನೋಡಿಕೊಳ್ಳುತ್ತ ಅನೇಕ ಕೋಟೆ, ಕೊತ್ತಲಗಳನ್ನು ಕಟ್ಟಿಸಿದನು. ಕ್ರಿ.ಶ.೧೭೨೩ರಲ್ಲಿ ನಿಜಾಮ ಉಲ್ ಮುಲ್ಕನು ದಕ್ಷಿಣಕ್ಕೆ ಬಂದು ಈ ಪರಿಸರದಲ್ಲಿ ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸಿದನು. ಅನಂತರ ಈ ಪರಿಸರವು ಕೆಲಕಾಲ ಕೊಲ್ಹಾಪೂರ ಮತ್ತು ಸತಾರ ಪ್ರಾಂತಗಳ ಆಡಳಿತದ ಪ್ರಭಾವದಲ್ಲಿತ್ತು. ತರುವಾಯ ಇದು ಬ್ರಿಟೀಷರ ಆಡಳಿತಕ್ಕೊಳಪಟ್ಟು ಮುಂಬಯಿ ಪ್ರಾಂತ್ಯಕ್ಕೆ ಸೇರಿತು.

ಸ್ವಾತಂತ್ರ ಸಂಗ್ರಾಮದಲ್ಲಿ ಅಥಣಿ ಪರಿಸರದ ಪಾತ್ರ : ಸ್ವಾತಂತ್ರ ಸಂಗ್ರಾಮದಿಂದೀಚೆಗೆ ಬ್ರಿಟೀಷ ಆಡಳಿತದ ವಿರುದ್ಧ ಜರುಗುತ್ತ ಬಂದ ಹೋರಾಟಗಳಲ್ಲಿ ಈ ಪರಿಸರದ ಪಾತ್ರ ಚಿರಸ್ಮರಣೀಯವಾಗಿದೆ. ಸತ್ತಿ, ಮಂಗಸೂಳಿ, ಜೂಗುಳ ಗ್ರಾಮಗಳು ಹೋರಾಟಗಾರರ ಪ್ರಧಾನ ಕೇಂದ್ರಗಳಾಗಿದ್ದವು. ಅಂತಹ ಹೋರಾಟಗಳಲ್ಲಿ ಭಾಗವಹಿಸಿ ಕಾರ್ಯನಿರ್ವಹಿಸಿದ ಶ್ರೀ ಗುರು ಮಾಸ್ತರ ಜೇರೆ ಮುಂಚೂಣಿಯಲ್ಲಿದ್ದರು. ಎ.ಎಸ್.ಕುಲಕರ್ಣಿ, ಎ.ಜಿ.ಮಿರಜ, ಎನ್.ಬಿ.ದಳವಾಯಿ, ಎನ್.ಬಿ.ಕುಲಕರ್ಣಿ, ಡಾ.ಬಾಳಬಾ ಕುಲಹಳ್ಳಿ, ರಾಘವೇಂದ್ರ ಕುಲಕರ್ಣಿ, ಅನಂತರಾವ ಕುಲಕರ್ಣಿ, ವೆಂಕಟರಾವ್ ಜೋಶಿ, ರಾವಸಾಹೇಬ ಕುಲಕರ್ಣಿ, ಶಾಮರಾವ್ ಕುಲಕರ್ಣಿ, ಜಿ.ಎಮ್.ದೇಶಪಾಂಡೆ, ನಾರಾಯಣರಾಯ ದೇಶಪಾಂಡೆ, ರಾಜಭಡಜಿ ಜೋಶಿ, ರಾಮಕೃಷ್ಣ ಪೂಜಾರಿ, ಮಹಾದೇವ ಪತ್ತಾರ, ತಾತ್ಯಾಸಾಹೇಬ ಕುಲಕರ್ಣಿ ಅವರು ಇಂದಿಗೂ ಪರಿಸರದ ಜನಸಾಮಾನ್ಯರ ಹೃದಯಾಂತರಾಳದಲ್ಲಿ ಅಜರಾಮರರಾಗಿದ್ದಾರೆ.

ಅಥಣಿ ಪರಿಸರದ ಚಾರಿತ್ರಕ ಕ್ಷೇತ್ರಗಳು

ಸುಕ್ಷೇತ್ರ ಗಚ್ಚಿನ ಮಠ : ಶ್ರೀ ಮುರಘೇಂದ್ರ ಶಿವಯೋಗಿಗಳ ಹೆಸರು ಕೇಳದ ಜನರೇ ಕರ್ನಾಟಕದಲ್ಲಿ ಇಲ್ಲ ಎನ್ನಬಹುದು. ಅಂತಹ ಮಹಾತಪಸ್ವಿ, ಜಂಗಮ ಜ್ಯೋತಿಗಳ ನೆಲವೀಡು ಈ ಶ್ರೀ ಮಠದಲ್ಲಿ ಧಾರವಾಡದ ಮೃತ್ಯುಂಜಯ ಸ್ವಾಮಿಗಳು, ಮಹಾ ತಪಸ್ವಿಗಳು ಕಲಿತ ತಾಣವಿದು. ಬಸವತತ್ವ ಅನುಯಾಯಿಗಳ ಬೀಡಿದು.

ಅಭಿನವ ಮಂತ್ರಾಲಯ : ಆ ಮಂತ್ರಾಲಯದಷ್ಟೇ ಪಾವಿತ್ರ್ಯತೆ ಇರುವ ಇನ್ನೊಂದು ಕ್ಷೇತ್ರ ಅಥಣಿಯ ಶ್ರೀರಾಯರ ಮಠ. ದಿವಂಗತ ಭೀಮದಾಸರಿಂದ ಸ್ಥಾಪಿಸಲ್ಪಟ್ಟ ರಾಘವೇಂದ್ರ ಸ್ವಾಮಿಗಳ ಈ ಬೃಂದಾವನ ಕರ್ನಾಟಕ, ಮಹಾರಾಷ್ಟ್ರದ ಭಕ್ತ ಸಮೂಹವನ್ನು ಆಕರ್ಷಿಸುತ್ತಿದೆ.

ಬಿಳೇಗಾಂವ : ಸ್ವಯಂಭೂ ಬೃಹತ್ ಬಸವಣ್ಣನಿರುವ ತಾಣ. ಮಂಗಳಕರ ಪುಣ್ಯಕ್ಷೇತ್ರದ ಈ ಬಸವನಿಗೆ ನಿತ್ಯ ತ್ರಿಕಾಲ ಪೂಜೆ. ಮಹಾರಾಷ್ಟ್ರ ಹಾಗೂ ಕರ್ನಾಟದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿಯ ಮೂರ್ತಿ ದಿನೇ ದಿನೇ ಬೆಳೆಯುತ್ತಿದ್ದುದ್ದನ್ನು ತಡೆಯಲು ಬೆನ್ನಿನಲ್ಲಿ ಕಬ್ಬಿಣದ ಹಾರಿ ಜಡಿಯಲಾಗಿದೆ.

ನದಿ ಇಂಗಳಗಾಂವ : ಪವಿತ್ರ ಕೃಷ್ಣಾನದಿಯ ತಟದಲ್ಲಿರುವ ಈ ಗ್ರಾಮ ಶ್ರೀ ಶಿವಯೋಗಿಗಳವರ ಜನ್ಮಸ್ಥಳ.

ಮಂಗಸೂಳಿ ಮಲ್ಲಯ್ಯ : ಅಥಣಿಯಿಂದ ೨೦ ಕಿ.ಮೀ. ಅಂತರದಲ್ಲಿರುವ ಮಂಗಸೂಳಿಯಲ್ಲಿ ಮಲ್ಲಯ್ಯನ ಸುಪ್ರಸಿದ್ಧ ದೇವಾಲಯವಿದೆ. ಮಹಾರಾಷ್ಟ್ರದವರು ಖಂಡೋಬಾ ಎಂದು ಪೂಜಿಸುತ್ತಾರೆ. ಮಣಿಮಲ್ಲ ದೈತ್ಯರ ಉಪಟಳ ಭೂಲೋಕದಲ್ಲಿ ಹೆಚ್ಚಾದಾಗ ಕೈಲಾಸಪತಿ (ಮಲ್ಲಯ್ಯ)  ಮಣಿಮಲ್ಲ ದೈತ್ಯರ ವಧೆ ಮಾಡಿದ ಸ್ಥಳ ಇದಾಗಿದೆ. ಮಹಾನವಮಿ ಹಾಗೂ ಯುಗಾದಿಗಳಲ್ಲಿ ಹೀಗೆ ವರ್ಷದಲ್ಲಿ ಎರಡು ಸಲ ಆನೆಗೂ ಹರಿಯದ ಕಬ್ಬಿಣದ ಸರಪಳಿಯನ್ನು ಜಗ್ಗಿ ಹರಿಯುವ ದೈವಲೀಲೆ ನಡೆಯುತ್ತದೆ.

ರಾಮತೀರ್ಥ : ಅಥಣಿಯಿಂದ ೨೯ ಕಿ.ಮೀ. ಅಂತರದಲ್ಲಿರುವ ಈ ಗ್ರಾಮದಲ್ಲಿ ಉಮಾರಾಮೇಶ್ವರ ದೇವಾಲಯವಿದೆ. ಚಾಲುಕ್ಯ ಶಿಲ್ಪ ಮಾದರಿಯ ಸುಂದರವಾದ ಕೆತ್ತನೆ ಹೊಂದಿದ ಇದನ್ನು ದಕ್ಷಿಣದ ಕಾಶಿ ಎಂದು ಕರೆಯುತ್ತಾರೆ. ಈ ಬಗ್ಗೆ ಶೈವ ಪುರಾಣದ ರಾಮೇಶ್ವರ ಮಹಾತ್ಮೆಯಲ್ಲಿ ಉಲ್ಲೇಖವಿದೆ. ಶ್ರೀರಾಮಚಂದ್ರ ಇಲ್ಲಿ ಪೂಜೆ ಮಾಡಿ ಈಶ್ವರನ ಜೊತೆ ತನ್ನ ಹೆಸರನ್ನು ಶಾಶ್ವತವಾಗಿ ಇರಿಸಿದ್ದಾನೆ. ಹಲವಾರು ಐತಿಹ್ಯಗಳನ್ನು ಹೊಂದಿದ ಈ ಪ್ರದೇಶವು ಇತಿಹಾಸ ಪ್ರಸಿದ್ಧವಾಗಿದೆ.

ಅವರಖೋಡ : ಅವರಖೋಡ ಅಥಣಿಯಿಂದ ೧೧ ಕಿ.ಮೀ. ದೂರದಲ್ಲಿದೆ. ಇದರ ಪ್ರಾಚೀನ ಹೆಸರು ‘ಅಮರಕೂಟ’ ಹನುಮಂತನ ಮೂರ್ತಿ ಸ್ವಯಂಭೂ, ಮೊದಲು ಅಸ್ಪಷ್ಟವಾಗಿದ್ದು ಕಾಲಕಳೆದ ಹಾಗೆ ಸ್ಪಷ್ಟವಾಗುತ್ತಲಿದೆ.

ತೀರ್ಥ : ಪುರಾತನ ಪ್ರಸಿದ್ಧ ಜೈನ ಬಸದಿಯೊಂದು ಈ ಗ್ರಾಮದಲ್ಲಿದೆ. ಪ್ರಾಚೀನ ಕಾಲದಿಂದಲೂ ತೀರ್ಥ ಸ್ನಾನಕ್ಕೆ ಈ ಪ್ರದೇಶ ಪ್ರಸಿದ್ಧವಾಗಿದೆ.

ಸತ್ತಿ : ನದಿಯ ದಂಡೆಯ ಮೇಲಿರುವ ಇಲ್ಲಿ ಬ್ರಾಹ್ಮಣರೇ ಹೆಚ್ಚು. ಶ್ರೀರಾಮನ ಮಂದಿರವಿದೆ. ಹಳೆಯ ಈಶ್ವರ ದೇವಾಲಯ. ಮಸೀದಿಗಳೂ ಇವೆ.

ಮಹಿಷವಾಡಗಿ : ದುಷ್ಟರು ಗೋವನ್ನು ಅಪಹರಿಸುತ್ತಿರುವುದನ್ನು ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಷನೆಂಬ ಜಟ್ಟಿ ನೋಡಿದ. ಹಸುವಿನ ಬಿಡುಗಡೆಗಾಗಿ ಹೋರಾಡಿ ಹಸು ಇಲ್ಲವೆ ಅಸು ಎಂದು ಪ್ರಾಣತೆತ್ತನು. ಮಹಿಷನಿಂದ ಊರಿಗೆ ಈ ಹೆಸರು ಬಂತು. ಇಲ್ಲಿಯ ಬಸವಣ್ಣ ತುಂಬ ಜಾಗೃತ.

ಅನಂತಪೂರ : ತಾಲೂಕಿನ ದೊಡ್ಡ ಊರು. ರಾಸ್ತೆ ಸರಕಾರದ ದೊಡ್ಡವಾಡೆ ಇದೆ. ಇಲ್ಲಿ ಎಂಟು ಬುರುಜಿನ ಮಣ್ಣಿನ ಕೋಟೆ ಪ್ರಸಿದ್ಧವಾಗಿದೆ.

ಮದಭಾವಿ : ಈ ಊರಿನಲ್ಲಿ ಶ್ರೀ ಸಿದ್ಧೇಶ್ವರ ಹಾಗೂ ಮಧುಕೇಶ್ವರ ದೇವಾಲಯಗಳಿವೆ. ಈ ಊರು ಚರ್ಮದ ಉದ್ಯೋಗಕ್ಕೆ ಹೆಸರಾಗಿದೆ. ಇಲ್ಲಿಯ ಪಾದರಕ್ಷೆಗಳು ಹೊರದೇಶಗಳಿಗೆ ಮಾರಾಟಕ್ಕಾಗಿ ಹೋಗುತ್ತವೆ.

ಕಾಗವಾಡ : ಅಥಣಿಯಿಂದ ೪೦ ಕಿ.ಮೀ. ದೂರದಲ್ಲಿದೆ. ಕರ್ನಾಟಕದ ಗಡಿಗ್ರಾಮವಿದು. ಇಲ್ಲಿ ಶಾಂತಿನಾಥ ಜಿನಾಲಯವಿದೆ. ಯಕ್ಷಯಕ್ಷಿಣಿಯರ ಸುಂದರ ಮೂರ್ತಿಗಳಿವೆ. ನೆಲಮನೆಯಲ್ಲಿ ಪಾಶ್ವನಾಥನ ಮೂರ್ತಿ ಇದೆ. ಸಂತೂಬಾಯಿ ಈ ಊರಿನ ಅಧಿ ದೇವತೆ. ಶ್ರೀ ಮರಿಮಹಾರಾಜರ ಮಠವೂ ಇಲ್ಲಿದೆ.

ಉಗಾರ ಬುರ್ದಕ : ಕೃಷ್ಣನದಿ ಇಲ್ಲಿ ಉತ್ತರಾಭಿಮುಖವಾಗಿ ಹರಿದಿದೆ. ನದಿಯ ದಂಡೆಯ ಮೇಲೆ ಶ್ರೀರಾಮ ದೇವರ ಗುಡಿಯಿದೆ. ಇಲ್ಲಿ ಪದ್ಮಾವತಿ ದೇವಿ, ನರಸಿಂಹ, ಮಾರುತಿ ಗುಡಿಗಳು ಇವೆ.

ಜೂಗುಳ : ಇದು ಪಾರ್ವತಿಯ ಸುಂದರ ಮೂರ್ತಿಗೆ ಹಾಗೂ ಉತ್ಕೃಷ್ಟ ಶಿಲ್ಪಕಲೆಗೆ ಹೆಸರಾದ ಊರು. ಇಲ್ಲಿಯ ಸೃಷ್ಟಿಯ ಸೊಬಗನ್ನು ಅನುಭವಿಸಿಯೇ ಆನಂದಿಸಬೇಕು.

ಕಟಗೇರಿ : ಅಥಣಿಯಿಂದ ಅತೀ ಸಮೀಪದಲ್ಲಿರುವ ಗ್ರಾಮ. ಗ್ರಾಮದೇವತೆಯಾದ ಲಕ್ಷ್ಮೀದೇವಿಯು ಲಕ್ಕವ್ವಳೆಂದೇ ಪ್ರಸಿದ್ದಿ ಪಡೆದಿದ್ದಾಳೆ. ಅಸಂಖ್ಯಾತ ಭಕ್ತಸಮೂಹ ಹೊಂದಿದ್ದಾಳೆ.

ಕೊಕಟನೂರ : ಅಥಣಿಯಿಂದ ಪೂರ್ವಕ್ಕೆ ೧೮ ಕಿ.ಮಿ. ಅಂತರದಲ್ಲಿರುವ ಐತಿಹಾಸಿಕ ಗ್ರಾಮ. ಇಲ್ಲಿ ೧೧ ನೆಯ ಶತಮಾನದಷ್ಟು ಹಳೆಯದಾದ ಪ್ರಾಚೀನ ಕಲ್ಮೇಶ್ವರ ದೇವಾಲಯವಿದೆ. ನೆರೆಯ ಮಹಾರಾಷ್ಟ್ರದ ಹಾಗೂ ನಾಡಿನ ಅನೇಕ ಭಕ್ತರನ್ನು ಆಕರ್ಷಿಸುತ್ತಿರುವ ಶಕ್ತಿದೇವತೆ ಎಲ್ಲಮ್ಮ ಇಲ್ಲಿಯ ಹಳ್ಳದಲ್ಲಿ ನೆಲೆಸಿದ್ದಾಳೆ. ಸಂಸ್ಥಾನಿಕರ ಅಳಿದುಳಿದ ಕೋಟೆಯಿದೆ.

ತೆಲಸಂಗ : ೩೨ ಕಿ.ಮೀ. ಅಂತರದಲ್ಲಿರುವ ಈ ಗ್ರಾಮದಲ್ಲಿ ವಿರಕ್ತಮಠವಿದೆ. ಊರು ಹಾಳು ಬೀಡಾಗಿದ್ದು ಇಲ್ಲಿಯ ಕೆಲವು ಶಿಲಾಶಾಸನಗಳನ್ನು ಮುಂಬಯಿಯ ವಸ್ತು ಸಂಗ್ರಾಹಲಯಕ್ಕೆ ಸಾಗಿಸಲಾಗಿದೆ. ೧೨ನೆಯ ಶತಮಾನದ ಶಿವಶರಣರಿಗೆ ತೈಲ ಪೂರೈಸುವ ಜನಗಳಿಂದ ನಿರ್ಮಾಣವಾದ ಊರಿದು.

ಐಗಳಿ : ಇಲ್ಲಿ ಅಪ್ಪಯ್ಯ ಸ್ವಾಮಿಗಳ ಮಠವಿದೆ. ಅಪ್ಪಯ್ಯ ಸ್ವಾಮಿಗಳು ವಿರಕ್ತಯೋಗಿಗಳು. ಸಿದ್ಧಪುರುಷರಾಗಿದ್ದವರು. ಅಲ್ಲಿನ ದಿನ್ನೆಯ ಮೇಲೆ ಶ್ರೀ ಮಾಣಿಕ ಪ್ರಭುಗಳ ಆಶ್ರಮವಿದೆ. ಅಥಣಿಯಿಂದ ಬಿಜಾಪೂರಕ್ಕೆ ಹೋಗುವ ಮಾರ್ಗದಲ್ಲಿ ೩೩ ಕಿ.ಮೀ. ಅಂತರದಲ್ಲಿದೆ.

ಸಾಹಿತ್ಯಿಕ ನೆಲವೀಡು

ಮಿರ್ಜಿ ಅಣ್ಣಾರಾಯರಂತಹ ಸಾಹಿತಿಗಳನ್ನು ನಾಡಿಗೆ ನೀಡಿದ ಕೀರ್ತಿ ಈ ಪರಿಸರದ್ದು. ಅನೇಕ ಸಾಹಿತ್ಯಿಕ ಸಂಘ ಸಂಸ್ಥೆಗಳಿವೆ.

ಉಪಸಂಹಾರ

ಇವೆಲ್ಲ ಸಂಗತಿಗಳನ್ನು ನೋಡಿದಾಗ ಅಥಣಿ ಪರಿಸರ ಕನ್ನಡ ನಾಡಿನ ಇತಿಹಾಸದಲ್ಲಿ ಹಾಸು ಹೊಕ್ಕಾಗಿರುವುದು ಕಂಡುಬರುತ್ತದೆ. ಈ ಪರಿಸರದ ಪ್ರತಿಯೊಂದು ಅಂಶವು ಮಾನವ ಸಂಸ್ಕೃತಿ ಬೆಳೆದು ಬರುವಲ್ಲಿ ಪ್ರಮುಖ ಪಾತ್ರವಹಿಸಿದೆ. ನಾಡನ್ನಾಳಿದ ಅನೇಕ ರಾಜಮನೆತನಗಳು ವಿವಿಧ ಬಗೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಕೈಗೊಂಡು ಸ್ಥಳೀಯ ಇತಿಹಾಸ, ಸಂಸ್ಕೃತಿ, ವಾಸ್ತುಶಿಲ್ಪೊಮೊದಲಾದ ಕ್ಷೇತ್ರಗಳನ್ನು ಶ್ರೀಮಂತ ಗೊಳಿಸಿವೆ. ಸಂಪೂರ್ಣವಾಗಿ ಅಥಣಿ ಪರಿಸರದ ಪುರಾತತ್ವ ಅವಶೇಷಗಳನ್ನು ಕಲೆಹಾಕುವ ಕಾರ್ಯ ಇನ್ನೊಮ್ಮೆ ನಡೆಯಬೇಕಿದೆ. ಹೀಗೆ ನಡೆದಾಗ ಇನ್ನೂ ಅನೇಕ ಚಾರಿತ್ರಿಕ ವಿಷಯಗಳು ಬೆಳಕಿಗೆ ಬರಬಹುದು. ಆದ್ದರಿಂದ ಈ ಪರಿಸರದ ಜನರಿಗೆ ರಾಜಕೀಯ ಇತಿಹಾಸದ ವಿವಿಧ ಮುಖಗಳನ್ನು ಸ್ಪಷ್ಟವಾಗಿ ಚಿತ್ರಸಬಹುದು. ಈ ನಿಟ್ಟಿನಲ್ಲಿ ಇನ್ನೂ ಅನೇಕ ವಿಷಯಗಳು ಇಲ್ಲಿ ಬಿಟ್ಟು ಹೋಗಿರಬಹುದು. ಅವುಗಳ ಸಂಶೋಧನೆ ಅವಶ್ಯಕ. ಏನೇ ಇದ್ದರು ಅಥಣಿ ಪರಿಸರ ಇತಿಹಾಸದಲ್ಲಿ ತನ್ನದೇ ಆದ ಮಹತ್ವದ ಚಾರಿತ್ರಿಕ ನೆಲೆ ಹೊಂದಿರುವುದು ಸುಳ್ಳಲ್ಲ.