ಋಗ್ವೇದದಲ್ಲಿ ‘ಕಲೆ’ ಎಂಬ ಪದಕ್ಕೆ ‘ಅಂಶ’ ಎಂಬ ಅರ್ಥವಿದೆ. ದಿವ್ಯ ಶಕ್ತಿಯೆ, ಕಾಂತಿಯ ಕಿರಣವೇ ಕಲೆಯಾಗಿದೆ. ‘ಉಪಾಯ’ ಕೌಶಲ’ ಎಂಬುದನ್ನು ಕಲೆಗೆ ಇರುವ ಸಾಮಾನ್ಯ ಅರ್ಥಗಳು. ವ್ಯಕ್ತಿಯೊಬ್ಬನು ತನ್ನ ಕೌಶಲದಿಂದ ತನ್ನ ಭಾವನೆಗಳನ್ನು, ಆಲೋಚನೆಗಳನ್ನು ಮನಮುಟ್ಟುವಂತೆ ತಿಳಿಸುವ ವಿಧಾನವೇ ಕಲೆಯಾಗಿದೆ.

ಅಕ್ಷರ, ಗಣಿತಗಳಿಂದ ಪ್ರಾರಂಭವಾಗಿ ತಂತ್ರ ಸಿದ್ದಿಯವರೆಗಿನ ೬೪ ಕಲೆಗಳನ್ನು ಗುರುತಿಸಲಾಗಿದೆ. ಇದನ್ನೇ ‘ಚೌಷಷ್ಟ ಕಲಾಪ್ರವೀಣ’ ಚೌಷಿಷ್ಟ ವಿದ್ಯೆಗಳು’ ಎಂದು ಕರೆಯಲಾಗಿದೆ. ಸೇಡಿಂಬ ಎಂಬ ಅಗ್ರಹಾರದ ಮುನ್ನೂರ್ವ ಮಹಾರಾಜರನ್ನು ಒಂದು ಶಾಸನದಲ್ಲಿ ‘ಚೌಷಷಿಂ ಕಳಾನ್ವಿತ ವಸುಮತೀ ಗರ್ವಾಣರುಂ’ ಎಂದು ವರ್ಣಿಸಲಾಗಿದೆ. ಅಲ್ಲದೆ ಮಂಡಳೇಶ್ವರ ಕಾಲಿಂಗ ಭೂಪನನ್ನು ಚತುಷ್ಟ ಕಳಾವಿಳಾಸಿ ಭುಜಗಂ ಎಂದು ಮತ್ತೊಂದು ಕಡೆ ಗುರುತಿಸಲಾಗಿದೆ. ಜೈನ ಗ್ರಂಥಗಳಲ್ಲಿ ಈ ಕಲೆಗಳ ಸಂಖ್ಯೆ ೭೨, ಹಾಗೂ ಯಶೋಧರನ ಕಾಮಸೂತ್ರದ ವ್ಯಾಖ್ಯಾನದಲ್ಲಿ ೫೧೨ರವರೆಗೆ ಬೆಳೆಯುತ್ತದೆ.

ಸಾಹಿತ್ಯ ಸಂಗೀತ ಕಲಾವಿಹೀನಃ
ಸಾಕ್ಷಾತ್ ಪಶುಃ ಪ್ರಚ್ಛವಿಷಾಣ ಹೀನಃ

ಸಾಹಿತ್ಯ, ಸಂಗೀತ, ಕಲೆಗಳನ್ನು ಅರಿಯದ ಮಾನವನು ಬಾಲ ಹಾಗೂ ಕೋಡುಗಳಿಲ್ಲದ ಪಶುವಾಗಿದ್ದಾನೆ ಎಂಬುದನ್ನು ಈ ಶ್ಲೋಕ ವಿವರಿಸಿ ಅವುಗಳ ಮಹತ್ವವನ್ನು ತಿಳಿಸಿ ಕೊಡುತ್ತದೆ.

ಸಾಹಿತ್ಯ, ಸಂಗೀತ, ಕಲೆಗಳು ವ್ಯಕ್ತಿಯೊಬ್ಬನ ನಿರ್ಮಿತಿಗಳೇ ಆಗಿದ್ದು, ರಚನಾಕಾರನಿಗೆ ಮತ್ತು ಸಹೃದಯರಿಗೆ ತತ್‌ಕ್ಷಣದಲ್ಲಿ ಆನಂದ, ಸಂತೋಷ, ರಸಾನಂದಗಳನ್ನುಂಟು ಮಾಡುತ್ತವೆ. ಅಲ್ಲದೆ ಇವು ಬ್ರಹ್ಮಾನಂದ ಸ್ವರೂಪದವುಗಳಾಗಿ ಮೋಕ್ಷವನ್ನು ಗುರಿಯಾಗಿರಿಸಿಕೊಂಡಿರುತ್ತವೆ.

ಜನಪದರು ಈ ಕಲೆಗಳನ್ನು ಎಂದಿನಿಂದ ಕರಗತ ಮಾಡಿಕೊಂಡರು ಎಂಬುದಕ್ಕೆ ಗ್ರಂಥಸ್ಥ ಆಧಾರಗಳಿಲ್ಲ. ಆದರೆ ಹಾಗೆ ಹುಡುಕುವುದೂ ತಪ್ಪು. ಅವರ ಬದುಕೆ ಇದಕ್ಕೆ ಆಧಾರವಾಗಿ ನಿಲ್ಲುತ್ತದೆ.ಆದಿ ಮಾನವನಿಗೆ ಬೇಟೆ ಸಿಕ್ಕಾಗಿನ ಸಂತೋಷ ಮತ್ತು ಅದನ್ನು ಸುಡುವಾಗ ಬೆಂಕಿಯ ಸುತ್ತ ಅವರೆಲ್ಲರು ಚಪ್ಪಾಳೆ ತಟ್ಟುತ್ತ ನಲಿದಾಡುವಾಗಿನ ಆನಂದವೇ ಕಲೆಯಾಗಿ ಅರಳಿದೆ ಎಂಬುದನ್ನು ಎಲ್ಲರೂ ಒಪ್ಪ ತಕ್ಕ ಸಂಗತಿಯೇ ಆಗಿದೆ. ಗಾಳಿ, ಮಳೆ, ಸಿಡಿಲುಗಳ ಭಯದಿಂದ ಆರಾಧನೆ, ಪೂಜೆ, ಅರ್ಪಣೆಗಳಿಂದಲೂ ಈ ಕಲೆಗಳು ಜನ್ಮತಾಳಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ಸಂತೋಷ ಮತ್ತು ಕಷ್ಟ ಪರಿಹಾರಕ್ಕಾಗಿ ಜನ್ಮತಾಳಿದ ‘ಜನಪದ ಕಲೆ’ ‘ಶಿಷ್ಟ ಜನಪದ ಕಲೆ’ಗಿಂತ ಪ್ರಾಚೀನವಾದುದು.

ಪ್ರಸ್ತುತ, ವಾಲ್ಮೀಕಿ ಸಮುದಾಯದ ಕಲಾವಿದರು ಎಂಬ ವಿಷಯವನ್ನು ಅಧ್ಯಯನಕ್ಕೆ ಒಳಪಡಿಸುವಾಗ ಗಮನಿಸಬೇಕಾದ ಅಂಶವೊಂದಿದೆ. ಅದೇನೆಂದರೆ, ಡೊಳ್ಳಿನ ಪದ ಎಂದಾಗ ಕುರುಬ ಸಮುದಾಯ ಚೌಡಕಿ ಪದ ಎಂದಾಗ ದೇವದಾಸಿ ಸಮುದಾಯ, ಕಸೂತಿ ಕಲೆ, ವಾಣಿ ಕುಣಿತ ಎಂದಾಗ ಲಂಬಾಣಿ ಸಮುದಾಯ, ಗೊಂದಲಿಗ ಪದ ಎಂದಾಗ ಗೊಂದಲಿಗ ಸಮುದಾಯ ನೆನೆಪಗುವಂತೆ ವಾಲ್ಮೀಕಿ ಸಮುದಾಯದ್ದೇ ಎಂದು ಹೇಳಬಹುದಾದ ಕಲೆ ಇಲ್ಲವೆನಿಸುತ್ತದೆ. ‘ಬೇಡರ ಕುಣಿತ’ ಎಂಬುದೊಂದು ಕಲೆ ಉತ್ತರ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಹೋಳಿ ಹಬ್ಬದಲ್ಲಿ ಮನರಂಜನೆಗಾಗಿ ಕುಣಿಯುವ ಈ ಕಲೆ ಅಖಂಡ ಕರ್ನಾಟಕದ ಮಟ್ಟಿಗೆ ಬೆಳೆದು ಸಮುದಾಯದ ಕಲೆ ಎಂದು ಗುರುತಿಸುವಷ್ಟು ವ್ಯಾಪಕವಾಗಿ ಅದು ಬೆಳೆದಿಲ್ಲ ಎಂಬುದು ಖೇದಕರ ಸಂಗತಿಯೇ ಸರಿ.

ವಾಲ್ಮೀಕಿ ಸಮುದಾಯದ ಕಲಾಕಾರರು ಈ ವ್ಯಕ್ತಿಗತ ಆಸಕ್ತಿ ಹವ್ಯಾಸಗಳಿಂದ ಜನಪದ ಕಲೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಪ್ರಸಿದ್ದಿ, ಪ್ರಶಸ್ತಿ ಮತ್ತು ಉತ್ತಮ ಅವಕಾಶಗಳನ್ನು ಪಡೆದುಕೊಂಡಿದ್ದಾರೆ ಎಂಬುದು ಈ ಪ್ರಬಂಧಕ್ಕಾಗಿ ಕೈಕೊಂಡ ಕ್ಷೇತ್ರಕಾರ್ಯದಿಂದ ಮನದಟ್ಟಾದ ಅಂಶ.

ಕರ್ನಾಟಕದಲ್ಲಿ ಲಿಂಗಾಯತ, ಬ್ರಾಹ್ಮಣ, ಕುರುಬ, ದಲಿತ ಸಮುದಾಯದಷ್ಟು ಸಂಖ್ಯಾ ಬಲದ ವಾಲ್ಮೀಕಿ ಸಮುದಾಯ ಇಲ್ಲ. ಅದೇ ರೀತಿಯಾಗಿ ಅಥಣಿ ತಾಲೂಕಿನಲ್ಲಿ ಬಡಚಿ, ಕಟಗೇರಿ, ಚಮಕೇರಿ, ಶೇಡಬಾಳ, ಉಗಾರ, ಐನಾಪೂರ, ಹಲ್ಯಾಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಇತರ ಗ್ರಾಮಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಇದ್ದಾರೆ. ಕಲ್ಲೂತ್ತಿ, ಬೇಡರ ಹಟ್ಟಿ, ರಡ್ಡೇರಹಟ್ಟಿ ನಂದೇಶ್ವರ, ಅಡಾಳಟ್ಟಿ ಕೆಲವು ಹಳ್ಳಿಗಳಲ್ಲಿ ಮಾತ್ರ ಈ ಸಮುದಾಯದವರು ಕೂಲಿ ಮತ್ತು ವ್ಯವಸಾಯವನ್ನೇ ನಂಬಿಕೊಂಡು ಬದುಕಿದ್ದಾರೆ. ಆಧುನಿಕ ಸಂಶೋಧನೆಗಳಿಂದ, ವ್ಯಾವಹಾರಿಕವಾದ ಒತ್ತಡದ ಇಂದಿನ ಜೀವನ ಶೈಲಿಯಲ್ಲಿ ಜನಪದ ಕಲೆ ಸಾಹಿತ್ಯ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು ವಿಶ್ವವಿದ್ಯಾಲಯಗಳು ಅದನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವಂತೆಯೇ ಕಲಾಕಾರರೂ ಸಹ ತಮ್ಮ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ ಎಂಬುದು ಸಮಾಧಾನವನ್ನು ತರುವ ಸಂಗತಿಯಾಗಿದೆ. ಇಂಥ ಕಲಾಕಾರರ ಪಟ್ಟಿಯಲ್ಲಿ ವಾಲ್ಮೀಕಿ ಸಮುದಾಯದ ಕಲಾಕಾರರ ಹೆಸರುಗಳು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.

ಶಿಷ್ಟ ಕಲೆಗಳಿಗೆ ಎಣಿಕೆಯ ಮಿತಿ ಇರುವಂತೆ ಜನಪದ ಕಲೆಗಳಿಗೆ ಮಿತಿ ಎಂಬುದೇ ಇಲ್ಲ. ಅದು ಸಾಗರವಿದ್ದಂತೆ. ಹೆಕ್ಕಿದಷ್ಟು ಸಿಗುವ ಆಳವನ್ನು ಹೊಂದಿದ್ದು. ಜನಪದದ ಬಹುಮಟ್ಟಿನ ಕಲೆಗಳಲ್ಲಿ ವಾಲ್ಮೀಕಿ ಸಮುದಾಯದವರು ಕಂಡುಬರುತ್ತಾರೆ.

ಅಡಾಳಟ್ಟಿಯ ಮಾರುತಿ ನಿಂಗಪ್ಪ ನಾಯಕ, ಹಣಮಂತ ಧರ್ಮಣ್ಣಾ ನಾಯಕ, ಗುರಪ್ಪ ನಾಯಕ, ಶಿವಾನಂದ ನಾಯಕ ಕಲಾವಿದರು ಮುಸ್ಲೀಮರ ಮೊಹರಂ ಹಬ್ಬದ ಸಂದರ್ಭದಲ್ಲಿ ಕರ್ಬಲ್ ಗೀತೆಗಳನ್ನು ಹಾಡುತ್ತಾರೆ. ಈ ತಂಡದವರು ಮಹಮ್ಮದ್ ಪೈಗಂಬರರ ಮೊಮ್ಮಕ್ಕಳಾದ ಹಸೇನ ಹುಸೇನರ ಹೆಸರಿನ ಮೇಳದ ಪರವಾಗಿ ಹಾಡಿದರೆ ಇವರ ವಿರುದ್ಧವಾಗಿ ನಂದೇಶ್ವರದ ಮಾರುತಿ ಹಳಮನಿ ಅವರು ‘ಯಜೀದನ’ ಮೇಳದಲ್ಲಿ ಹಾಡುತ್ತಾರೆ. ಪರಸ್ಪರ ವಿರುದ್ಧದ ಹಾಡುಗಳು ಹುಸೇನರು ಕರ್ಬಲ್ ಮರುಭೂಮಿಯಲ್ಲಿ ತನ್ನ ಅರವತ್ತು ಜನರ ಅನುಯಾಯಿಗಳೊಂದಿಗೆ ‘ಯಜೀದನ’ ಸೈನ್ಯದೊಡನೆ ಹೋರಾಡುತ್ತ ಸಾವನ್ನಪ್ಪಿದ ಸಂಗತಿಗಳೆಲ್ಲವನ್ನು ನೆನಪಿಗೆ ತರುತ್ತವೆ. ಹಸೇನ-ಹುಸೇನ ಮೇಳವು ಸಂಪೂರ್ಣವಾಗಿ ವಾಲ್ಮೀಕಿ ಸಮುದಾಯದ ಕಲಾಕಾರರಿಂದ ಕೂಡಿದ್ದರೆ, ಯಜೀದನ ಮೇಳದಲ್ಲಿ ಜೈನ ಸಮಾಜದವರಿದ್ದಾರೆಂಬುದೊಂದು ವಿಶೇಷ.

ಪ್ರಮುಖವಾಗಿ ತೇರದಾಳ ತುಕಾರಾಮ ಬರೆದ ಹಾಡುಗಳನ್ನು ಹಸೇನ ಹುಸೇನ ಮೇಳದವರು ಹಾಡುತ್ತಾರೆ. ಇದರೊಂದಿಗೆ ಹಿಡಕಲ್ , ನಾಗರಾಳ, ಶಿರೂರ, ದಿಗ್ಗೇವಾಡಿ ಗುರುಗಳು ಬರೆದ ಹಾಡುಗಳನ್ನೂ ಹಾಡುತ್ತಾರೆ.

ಕಟಗೇರಿಯ ನಾಗಪ್ಪ ಆಲಕನೂರು ಇವರು ಹಂತಿ ಹಾಡು, ಡೊಳ್ಳಿನ ಹಾಡು, ಕುಬಸದ ಹಾಡು, ಸೋಬಾನದ ಹಾಡು, ಕರ್ಬಲ ಹಾಡುಗಳನ್ನು ಹಾಡುವ ಪ್ರಮುಖ ಕಲಾವಿದರು. ಬೇರೆ ಊರುಗಳಿಗೂ ಹೋಗಿ ಇವರು ಕಲಾ ಮೇಳಗಳನ್ನು ನಡೆಸಿ ಕೊಡುತ್ತಾರೆ.

ಅಢಾಳಟ್ಟಿಯ ಗೌರವದ ನಾಯಕ, ಸಾವಿತ್ರಿ ಸ ನಾಯಕ, ಕಾಶವ್ವ ಮ.ನಾಯಕ, ಕಾಶವ್ವ ನಿಂ. ನಾಯಕ ಮಹಿಳೆಯರು ಸೋಬಾನೆ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವಲ್ಲಿ ಪ್ರಸಿದ್ಧರು. ಮುಂಡಗಿ ಪದ್ಯಗಳನ್ನು ಹಣಮಂತ ನಾಯಕ ಹಾಡುತ್ತಾರೆ.

ಹಲ್ಯಾಳಿ ಗ್ರಾಮದ ಶಿವಪ್ಪ ಪರಸಪ್ಪ ಬಿಸಲನಾಯಕ ಇವರು ಹುಟ್ಟು ಕಲಾವಿದರು. ಅನೇಕ ವೃತ್ತಿಗಳನ್ನು ಕೈಕೊಂಡಂತೆ ಅನೇಕ ಕಲೆಗಳಲ್ಲಿ ಇವರು ಸಿದ್ಧಹಸ್ತರು. ಇವರೊಂದಿಗೆ ವಿಠಲ ಬ ನಾಯಕ ಜೊತೆಗಾರರು. ಕರ್ಬಲ್ ಗೀತೆಗಳನ್ನು ಜಿಲ್ಲಾ ಮಟ್ಟದವರೆಗೂ ಹಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕರ್ಬಲ್ ಗೀತೆಗಳನ್ನು ಹಾಡು ವುದರಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಮೇಳದಲ್ಲಿ ಸತತ ಮೂರು ವರ್ಷ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಈ ಮೇಳದಲ್ಲಿ ಬೇರೆ ಸಮಾಜದ ಕಲಾವಿದರೂ ಇದ್ದಾರೆ ಎಂಬುದು ವಾಲ್ಮೀಕಿ ಸಮುದಾಯವರು ಬೇರೆ ಸಮಾಜದವರೊಂದಿಗೂ ಅನ್ಯೋನ್ಯವಾಗಿ ದ್ದಾರೆಂಬುದನ್ನು ತಿಳಿಸಿ ಕೊಡುತ್ತದೆ.

ಶಿವಪ್ಪ ಪ.ನಾಯಕ ಇವರು ಭಜನಾ ತಂಡವನ್ನು ಕಟ್ಟಿ ಸ್ಥಾನಿಕವಾಗಿ ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಲೇಜಿಮ್ ಆಡುತ್ತಾ ಹಗ್ಗ ಎಸೆಯುವ ಆಟದಲ್ಲಿ ಇವರು ಪ್ರವೀಣರಾದಂತೆಯೇ ಕೈ ಕಾಲುಗಳನ್ನು ನೆಲಕ್ಕೆ ತಾಗಿಸದೆ ಅಂದರೆ ತಿಕದಿಂದಲೇ ಜಿಗಿಯುತ್ತ ನಂದೇಶ್ವರದ ವಿಶಾಲವಾದ ಹನುಮಂತ ದೇವರ ಗುಡಿಯನ್ನು ಮೂರು ಸಲ ಸುತ್ತು ಹಾಕಿದ್ದಾರೆ ಎಂಬ ಕಲೆಯನ್ನು ಅಲ್ಲಿಯ ಜನಪದರು ಇನ್ನೂ ಸ್ಮರಿಸಿಕೊಳ್ಳುತ್ತಾರೆ. ಕರ್ಬಲ್ ದಲ್ಲಿ ಬರುವ ದಂಗಲ್ ಮೇಳಕ್ಕೆ ಇವರು ಹೆಜ್ಜೆ ಹಾಕುವ ಕಲೆಯನ್ನು ಹೇಳಿಕೊಡುತ್ತಾರೆ. ಈ ಎಲ್ಲ ಕಲೆಗಳಿಂದ ಹಲ್ಯಾಳದ ಜನರು ಇವರನ್ನು ‘ಮಾಸ್ತರ’ ಎಂದೇ ಗೌರವಿಸುತ್ತಾರೆ. ಗ್ರಾಮದ ಪ್ರೀತಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇವರು ಕಡ್ಡಾಯವಾಗಿ ಇರಲೇಬೇಕು ಎಂಬಷ್ಟು ಪ್ರಖ್ಯಾತಿಯನ್ನು ಪಡೆದಿದ್ದಾರೆ.

ನಂದೇಶ್ವರದ ದಿ. ರಾಮಪ್ಪ ಶಿವಲಿಂಗ ಭೋಜನ್ನವರ, ಪರಗೊಂಡ ಹುಲ್ಯಾಳ, ರಾಮಪ್ಪ ಜೋಗನ್ನವರ ಗಂಗಪ್ಪ ಜೋಗನ್ನನವರ ಪೀರಪ್ಪ ಬಸಲನಾಯಕ ಇವರು ಕರ್ಬಲ್, ಹಾಡುಗಳಿಗೆ ಲೇಜಿಮ್ ಆಟಕ್ಕೆ ಸಿದ್ಧಹಸ್ತರು. ಲೇಜಿಮ್ ನೃತ್ಯದೊಂದಿಗೆ ಹಗ್ಗ ಎಸೆಯುವ ಕಲೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿದವರು.

ಮಾರುತಿ ಬೋಜನ್ನವರ ಕಲ್ಲಪ್ಪ ಹಲ್ಯಾಳ, ರಾಮಪ್ಪ ಜೋಗನ್ನವರ, ವಿಠಲ ಹಲ್ಯಾಳ ಭಜನಾ ತಂಡವನ್ನು ಕಟ್ಟಿಕೊಂಡು ಮೇಲಿಂದ ಮೇಲೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಪ್ರಮುಖವಾಗಿ ನಿಜಗುಣ ಶಿವಯೋಗಿಗಳ ಕೈವಲ್ಯ ಪದಗಳನ್ನು ಮತ್ತು ಪುರಂದರದಾಸರ ಕೀರ್ತನೆಗಳನ್ನು ಹಾಡುತ್ತಾರೆ.

ಬ್ಯಾಡರಟ್ಟಿಯ ದಿ.ಗುರುಬಸಪ್ಪ ಮಾದಪ್ಪಗೋಳ, ಭಜನಾ ಸಂಘವನ್ನು ಕಟ್ಟಿ ಬೆಳೆಸಿದ್ದರು. ಕೈಪಟ್ಟಿ ವಾದನ ನುಡಿಸುವುದರಲ್ಲಿ ಜನರ ಪ್ರೀತಿಗೆ ಪಾತ್ರವಾಗಿದ್ದರು. ಹಲ್ಯಾಳ ಗ್ರಾಮದ ಮುತ್ತಪ್ಪ ಹುಲ್ಯಾಳ ಇವರು ಭಜನಾ ಪದ, ಕೈಪಟ್ಟ ವಾದನ, ಕರಡಿ ಮಜಲಿನಲ್ಲಿ ತಾಳ ಬಾರಿಸುವುದರೊಂದಿಗೆ ವಿವಿಧ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಅಡಾಳಹಟ್ಟಿಯ ಲಕ್ಕಪ್ಪ ಗುಂಡಪ್ಪ ನಾಯಕ ಇವರು ಬಸವೇಶ್ವರ ಭಜನಾ ಮೇಳ’ವನ್ನು ಕಟ್ಟಿ ಆಕಾಶವಾಣಿ ಧಾರವಾಡ ಕೇಂದ್ರದಿಂದ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಈ ತಂಡದ ಕೆಲವರಿಗೆ ಆಕಾಶವಾಣಿ ಕೇಂದ್ರದಿಂದ ಸಂಭಾವನೆ ಬರುತ್ತದೆ ಎಂಬುದು ಅವರ ಕಲಾ ಪರಿಣತಿಯನ್ನು ಸೂಚಿಸುತ್ತದೆ.

ಶಕ್ತಿ, ಸಾಮರ್ಥ್ಯ, ನೈಪುಣ್ಯತೆಯ ಪ್ರತೀಕವಾದ ಡೊಳ್ಳು ಕುಣಿತದಲ್ಲಿಯೂ ವಾಲ್ಮೀಕಿ ಸಮುದಾಯದವರು ಸಾಕಷ್ಟು ಹೆಸರು ಮಾಡಿದ್ದಾರೆ. ರಡ್ಡೇರಹಟ್ಟಿಯ ಜ್ಞಾನೇಶ್ವರ ಅಪ್ಪಣ್ಣ ಪೂಜಾರಿ ಮತ್ತು ಸಂಗಡಿಗರು, ಬಡಚಿನ ಕೋಡಿ ಮತ್ತು ತಂಡದವರು ಈ ಕಲೆಯಲ್ಲಿ ಪಳಗಿದವರು. ಹಲ್ಯಾಳ ಗ್ರಾಮದ ಹಣಮಂತ ಪರಸಪ್ಪ ಬಿಸಲನಾಯಕ ಇವರು ಬೇರೆ ಸಮಾಜದವರ ತಂಡದಲ್ಲಿ ಕೂಡಿಕೊಂಡು ಡೊಳ್ಳು ಕುಣಿತ, ಮತ್ತು ಪದಗಳನ್ನು ಹೇಳುವಲ್ಲಿ ನಿಪುಣರಾಗಿದ್ದಾರೆ. ಕಟಗೇರಿಯ ನಾಗಪ್ಪ ಆಲಕನೂರು ಇವರು ಸಹ ಡೊಳ್ಳಿನ ಹಾಡುಗಳನ್ನು ಹಾಡುತ್ತಾರೆ.

ನಾಟಕ ಕಲಾ ಕ್ಷೇತ್ರಕ್ಕೂ ವಾಲ್ಮೀಕಿ ಸಮುದಾಯದ ಕಲಾಕಾರರು ವಿಶಿಷ್ಟವಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಅಢಾಳಟ್ಟಿಯ ಮಾರುತಿ ನಿಂಗಪ್ಪ ನಾಯಕ ಇವರು ‘ಕಂಗೆಟ್ಟ ಹುಲಿ’ ನಾಟಕದಲ್ಲಿ ಖಳನಾಯಕನ ಪಾತ್ರವನ್ನು ಜೀವ ತುಂಬಿ ಅಭಿನಯಿಸುವ ಕಲಾವಿದರು. ದುಃಖ, ಸಂತೋಷಗಳ ಏಕಾಭಿನಯವನ್ನು ಮಾಡುತ್ತಾರೆ. ನಂದೇಶ್ವರದ ವಾಲ್ಮೀಕಿ ಸಂಘದ ವತಿಯಿಂದ ವರ್ಷಕ್ಕೊಂದು ಸಲ ‘ಸಿಂಧೂರ ಲಕ್ಷ್ಮಣ’ ನಾಟಕವನ್ನು ಆಡುತ್ತಾರೆ. ಹಲ್ಯಾಳ ಗ್ರಾಮದ ರಮೇಶ ಶಿವಪ್ಪ ಬಿಸಲನಾಯಕ ಹವ್ಯಾಸಿ ನಾಟಕ ಕಲಾವಿದರು. ಅತ್ತಿಗೆ ಹೆತ್ತಮ್ಮ, ಬಡವ ಬದುಕಲೇಬೇಕು, ತವರು ಮನೆ ಕುಂಕುಮ, ‘ಅಣ್ಣನ ಒಡಲು ಬಂಗಾರದ ಕಡಲು’ ಮುಂತಾದ ನಾಟಕಗಳಲ್ಲಿ ಖಳನಾಯಕನ ಪಾತ್ರವನ್ನು ಮನೋಜ್ಞವಾಗಿ ಅಭಿನಯಿದ್ದಾರೆ. ತಾಯಿಯಿಲ್ಲದೆ ಜಗವಿಲ್ಲ, ಹೆಂಡತಿ ಇಲ್ಲದ ಬಾಳಿಲ್ಲ ಎಂಬ ನಾಟಕದ ಸಿದ್ಧತೆಯಲ್ಲಿದ್ದು ಇದೇ ಆರತಿ ಅಮಾವಾಸ್ಯೆಗೆ ಇರುವ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಆಡುವವರಿದ್ದಾರೆ. ವೇಷ ಭೂಷಣ ರಂಗಮಂದಿರದ ಖರ್ಚುಗಳೆಲ್ಲವನ್ನು ಅವರೆ ನಿಭಾಯಿಸಿಕೊಂಡು ಪುಕ್ಕಟ್ಟೆ ಆಡಿ ಗ್ರಾಮೀಣ ಪ್ರದೇಶಗಳಲ್ಲಿ ಕಂಪನಿ ನಾಟಕಗಳನ್ನು ಜೀವಂತವಾಗಿ ಇಡುತ್ತಿದ್ದಾರೆ. ಮಾರುತಿ ನಿಂಗಪ್ಪ ನಾಯಕ ಇವರು ನಾಟಕ ಕಂಪನಿಯೊಂದನ್ನು ಕಟ್ಟುವ ಕನಸನ್ನು ಹೊಂದಿರುವ ಉತ್ಸಾಹಿ ಕಲಾವಿದರು. ಸಂಘ, ಸಂಸ್ಥೆ ವಿಶ್ವವಿದ್ಯಾಲಯಗಳು ಆರ್ಥಿಕ ಸಹಾಯ ನೀಡಿದರೆ ಇಂತಹ ಕಲೆಗಳಲ್ಲಿ ತಾವು ಸಂಪೂರ್ಣ ತೊಡಗಿ ಕೊಳ್ಳಲು ಸಿದ್ದರಿದ್ದೇವೆ ಎಂಬ ಮನದಿಂಗಿತವನ್ನು ತೋರಿ ಕೊಳ್ಳುತ್ತಾರೆ. ನಂದೇಶ್ವರದ ಬಿ.ಆರ್.ಬೋಜನವರ ಸಿಂಧೂರ ಲಕ್ಷ್ಮಣ, ಕೆಟ್ಟ ಮೇಲೆ ಬುದ್ದಿ ಬಂತು, ರೀತಿ ತಪ್ಪಿದರೂ ನೀತಿ ಬಿಟ್ಟಿಲ್ಲ ಮುಂತಾದ ನಾಟಕಗಳಲ್ಲಿ ಅಭಿನಯಿಸು ವುದರೊಂದಿಗೆ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಾರೆ. ಇವರು ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರಾಗಿದ್ದರೂ ತಮ್ಮ ಕಲಾ ಆಸಕ್ತಿಯನ್ನು ಜೀವಂತವಾಗಿಡಲು ಖಿಳಾಗಾಂವ, ರಬಕವಿಗಳಲ್ಲಿ ನಾಟಕ ಪ್ರಯೋಗಗಳನ್ನು ನಡೆಸಿದ್ದಾರೆ. ಗಿರೀಶ ಬಿಸಲನಾಯಕ ಇವರು ಚಿಕ್ಕೋಡಿ ಶೈಕ್ಷಣಿಕ ವಲಯದಲ್ಲಿ ದೈಹಿಕ ಶಿಕ್ಷಕರು. ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷರು, ಕರ್ನಾಟಕ ರಾಜ್ಯ ಶಿಕ್ಷಕ ಪ್ರತಿಭಾ ಪರಿಷತ್ತಿನ ನಿರ್ದೇಶಕರು. ಈ ಎಲ್ಲ ಜವಾಬ್ದಾರಿಗಳೊಂದಿಗೆ ಅಭಿನಯ, ನಿರ್ದೇಶನ, ಭಜನೆ, ಕರ್ಬಲ, ಹಲಗೆ, ಲೇಜಿಮು, ಕುದುರೆ ಕುಣಿತ ಮುಂತಾದ ಕಲೆಗಳನ್ನು ಮೈಗೂಡಿಸಿಕೊಂಡು ತಾವೊಬ್ಬ ಅಪ್ಪಟ ಕಲಾವಿದರೆಂದು ಗುರುತಿಸಿಕೊಂಡಿದ್ದಾರೆ. ಸುನಂದಾ ಹೊಸಪೇಟೆ, ಲಕ್ಷ್ಮಿ ಹೊಸಪೇಟೆ, ವಸುಂಧರಾ ಹೊಸಪೇಟೆ ಇವರು ನಾಟಕಗಳಲ್ಲಿ ಅಭಿನಯಿಸುವ ವಾಲ್ಮೀಕಿ ಸಮುದಾಯದ ಮಹಿಳಾ ಕಲಾವಿದರು. ಇವರು ಮೂಲತಃ ಹುಬ್ಬಳ್ಳಿಯವರು.

ಕಡಿಮೆ ಖರ್ಚಿನ ಬಯಲಾಟವನ್ನು ವಾಲ್ಮೀಕಿ ಸಮುದಾಯದ ತರುಣರು ಹಳ್ಳಿ ಹಳ್ಳಿಗಳಲ್ಲಿ ಆಡುತ್ತಾರೆ. ಅಢಾಳಟ್ಟಿಯ ಮಾರುತಿ ಸತ್ಯಪ್ಪ ಸನದಿ ಇವರು ಸತ್ಯ ಹರಿಶ್ಚಂದ್ರ ಬಯಲಾಟದಲ್ಲಿ ವಿಶ್ವಮಿತ್ರನ ಪಾತ್ರವನ್ನಾಡುತ್ತಾರೆ. ಬಡಚಿ ಗ್ರಾಮದ ನಾಯಕ ಸಮಾಜದ ಕಲಾವಿದರು ‘ಸತ್ಯವಾನ ಸಾವಿತ್ರಿ’ ಬಯಲಾಟವನ್ನು ಆಡುತ್ತಾರೆ.

ಹಲ್ಯಾಳ ಗ್ರಾಮದ ಶಿವಪ್ಪ ಪರಸಪ್ಪ ಬಿಸಲನಾಯಕ ಇವರು ‘ಸಂಗ್ಯಾಬಾಳ್ಯಾ’ ಬಯಲಾಟದಲ್ಲಿ ಬಾಳ್ಯಾನ ಪಾತ್ರವನ್ನು ಮಾಡುತ್ತಾರೆ. ಶ್ರೀಕೃಷ್ಣ ಪಾರಿಜಾತ ಬಯಲಾಟದ ಮಾಲೀಕರಾಗಿದ್ದು ಅದರಲ್ಲಿ ಭಾಗವತನ ಪಾತ್ರ ಮಾಡಿದ್ದಾರೆ. ಸತತವಾಗಿ ಹನ್ನೆರಡು ವರ್ಷಗಳವರೆಗೆ ಈ ಕಂಪನಿಯನ್ನು ನಡೆಸಿಕೊಂಡು ಬಂದಿದ್ದಾರೆ. ರಾಯಭಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಮೋಹರಂ ಹಬ್ಬಕ್ಕೆ ಸತತವಾಗಿ ಐದು ವರ್ಷ ಈ ಆಟವನ್ನು ಆಡಿದ್ದಾರೆ. ಇದು ಸತತ ಏಳು ದಿನಗಳವರೆಗೂ ಆಡುವ ಆಟವಾಗಿದೆ. ಇವರು ಸಿಂಧೂರ ಲಕ್ಷ್ಮಣ ನಾಟಕದಲ್ಲಿ ನರಸ್ಯಾನ ಪಾತ್ರವನ್ನು ಮಾಡುವುದಲ್ಲದೆ ಸಂಪೂರ್ಣ ಚರಿತ್ರೆಯನ್ನು ತೊಂಡಿಯಲ್ಲಿಯೇ ಹೇಳುತ್ತಾರೆ.

ನಂದೇಶ್ವರದ ಕಲಾವಿದರು ‘ಕೌರವರು ಪಾಂಡವರು’ ಬಯಲಾಟವನ್ನು ಆಡುತ್ತಾರೆ. ಸದಾಶಿವ ನಿಡೋಣಿ ದುರ್ಯೋಧನನ ಪಾತ್ರದಲ್ಲಿ, ಭೀಮಪ್ಪ ಕಲ್ಲಪ್ಪ ಬಿಸಲನಾಯಕ ಧೃತರಾಷ್ಟ್ರನ ಪಾತ್ರದಲ್ಲಿ, ಹಣಮಂತ ಅಡಳ್ಳಿ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಗಂಗಪ್ಪ ಹಲಗಲಿ, ಹಾಸ್ಯಪಾತ್ರವನ್ನು ನಿರ್ವಹಿಸುತ್ತಾರೆ. ಹಣಮಂತ ಅಡಳ್ಳಿ ಇವರು ಕೃಷ್ಣನ ಪಾತ್ರದೊಂದಿಗೆ ಹಾಸ್ಯಪಾತ್ರವನ್ನು ಮಾಡಿ ತಮ್ಮ ಬಹುಮುಖ ಅಭಿನಯ ಪ್ರತಿಭೆಯನ್ನು ಹೊರಹಾಕುತ್ತಾರೆ.

ಈ ರೀತಿಯಾಗಿ ವಾಲ್ಮೀಕಿ ಸಮುದಾಯದ ಕಲಾವಿದರು ಜನಪ್ರಿಯ ಕಲೆಗಳಲ್ಲದೆ ಕುದುರೆ ಕುಣಿತ, ಹರತಿ ಪದ, ಸೋಬಾನೆ ಹಾಡು, ಮುಂತಾದ ಜನಪದ ಕಲೆಗಳನ್ನು ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದಾರೆ.

 

ಆಕರ ಗ್ರಂಥಗಳು

೧. ಕರ್ನಾಟಕ ಜನಪದ ಕಲೆಗಳು : ಗೊ.ರು.ಚನ್ನಬಸಪ್ಪ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು

೨. ಶಿಲ್ಪಾಧಾರ ಜಗತ್ – ಸ್ಮರಣ ಸಂಚಿಕೆ, ಲೇಖನ – ವಿಶ್ವಕರ್ಮ ಮಹಿಳೆ ಮತ್ತು ಕಲೆ, ಲೇ.ಪ್ರಭಾ ಬಾ ಬೋರಗಾಂವಕರ, ಕರ್ನಾಟಕ ವಿಶ್ವಕರ್ಮ ಸಾಹಿತ್ಯ ಕಲಾ ಅಕಾಡೆಮಿ ಶಿಲ್ಪೋತ್ಸವ ೫ ಜೂನ್ ೧೯೯೪

 

ಮಾಹಿತಿ ನೀಡಿದವರು

೧. ಮಾರುತಿ ನಿಂಗಪ್ಪ ನಾಯಕ

೨. ಲಕ್ಷ್ಮಣ ಶಿವಪ್ಪ ಬಿಸಲನಾಯಕ

೩. ಭೀಮಪ್ಪ ರಾಮಪ್ಪ ಬೋಜನವರ

 

ಸಹಕಾರ

೧. ರಾಜೇಶ ಕೆರೂರ

೨. ವಿಠಲ ತಕತರಾವ್