ಮಾನವನಿಗೆ ದೇವರು ಭಾಷೆಯನ್ನು ಕಾಣಿಕೆಯನ್ನಾಗಿ ನೀಡಿದ್ದಾನೆ. ‘‘ಭಾಷೆಯೊಂದು ಇರದಿದ್ದರೇ ಮನುಕುಲವು ಕತ್ತಲೆಯಲ್ಲಿ ಇರಬೇಕಾಗುತ್ತಿತ್ತು’’ ಎಂದು ಲಾಕ್ಷಣಿಕಕಾರ ‘ದಂಡಿ’ಯು ಬಹುಕಾಲದ ಹಿಂದೆ ವ್ಯಕ್ತಪಡಿಸಿದ್ದಾನೆ. ಭಾಷೆಯು ಕೇವಲ ಮಾನವನ ವ್ಯವಹಾರಕ್ಕಷ್ಟೆ ಅಲ್ಲ; ಸಂಸ್ಕೃತಿಯ ವಾಹಿನಿಯ ಶಕ್ತಿಯಾಗಿದೆ. ಮಾನವನ ನಾಗರೀಕ ಸಂಸ್ಕೃತಿಯು ತಲೆಮಾರಿನಿಂದ ತಲೆಮಾರಿಗೆ ಜೀವಂತವಾಗಿ ಸಾಗುತ್ತದೆ. ಇದರ ಭಾಷೆಯು ಸಹಾಯಕ ಪಾತ್ರವಹಿಸಿ ಜನರ ರೀತಿ-ನೀತಿ, ಆಚರಣೆ ಸಂಪ್ರದಾಯಗಳಂತೆ ಪರಿಣಾಮ ಬೀರುವ ಅಂಶಗಳಾಗಿವೆ.

ಭಾರತ ಸರಕಾರವು ೧೫ ಲಿಪಿಬದ್ಧವಾದ ಭಾಷೆಗಳನ್ನು ಗುರುತಿಸಿದೆ. ಲಿಪಿರಹಿತ ಭಾಷೆಗಳು ಭಾರತದಲ್ಲಿದ್ದು, ಅವುಗಳನ್ನು ಆರ್ಯ, ದ್ರಾವಿಡ, ಮುಂಗೋಲಿಯನ್, ಅರೇಬಿಕ್ ವರ್ಗಗಳೆಂದು ವಿದ್ವಾಂಸರು ಗುರುತಿಸಿದ್ದಾರೆ. ಭೌಗೋಳಿಕ ಸ್ತರದ ನೆಲೆಯಲ್ಲಿ ಒಂದೇ ಭಾಷೆ ಮಾತನಾಡುವವರೂ ಸಹ ಆಯಾ ಪ್ರದೇಶದಲ್ಲಿ ಉಪಭಾಷೆಯಾಗಿ ಪರಿವರ್ತನೆಗೊಳ್ಳುವುದು ಭಾಷೆಯ ವೈಶಿಷ್ಟ್ಯವಾಗಿದೆ. ಉಪಭಾಷೆ (dilcet)  ಒಂದೇ ಪ್ರದೇಶದ ವಿಭಿನ್ನ ಸ್ಥಳಗಳಲ್ಲಿ ಭಿನ್ನತೆ ಹೊಂದಿ ಪ್ರಚಲಿತದಲ್ಲಿರುತ್ತದೆ. ಕರ್ನಾಟಕದ ಮಟ್ಟಿಗೆ ಕನ್ನಡ ಪ್ರಮುಖ ಭಾಷೆಯಾದರೂ, ಅನ್ಯ ಭಾಷೆ ಸಂಸರ್ಗ, ಕಾಲಾಂತರ ಭೇದದಿಂದ, ಪ್ರಾದೇಶಿಕತೆಯಿಂದ ಕನ್ನಡ ಭಾಷೆ ತನ್ನ ಅಸ್ತಿತ್ವವನ್ನು ಬದಲಾಯಿಸಿಕೊಳ್ಳುತ್ತಿದೆ. ಪ್ರಾಚೀನ ಕಾಲದಲ್ಲಿ ಸಂಸ್ಕೃತವು ಕನ್ನಡದ ಶಿಷ್ಟರೂಪದಲ್ಲಿ ಸಮಿಶ್ರಣಗೊಂಡು ಬಳಕೆಗೊಂಡಿತು. ಸಂಸ್ಕೃತ ಶಬ್ದಗಳು ಕನ್ನಡ ಶಬ್ದಗಳೇ ಎನ್ನುವಷ್ಟರ ಮಟ್ಟಿಗೆ ಬೇರೂರಿವೆ. ಅದರಂತೆ ಇಂದು ಇಂಗ್ಲೀಷ್ ಭಾಷೆಯ ಪದಗಳು ಬರಹ ರೂಪದಲ್ಲಿ ಅಷ್ಟೆ ಅಲ್ಲ ಆಡು ನುಡಿಯಲ್ಲಿ ಹಾಸುಹೊಕ್ಕಾಗಿ ಬಳಕೆಗೊಂಡು ‘ಕಂಗ್ಲೀಷ್’ ಎಂದು ಹೆಸರಿಸಬೇಕಾಗಿದೆ. ಕರ್ನಾಟಕದ ಇಂದಿನ ಭಾಷೆ ಕನ್ನಡವಲ್ಲ ‘ಕಂಗ್ಲೀಷ್’ ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ. ನಮ್ಮ ಹಳ್ಳಿಗರು ‘ಕಂಗ್ಲೀಷ್ ’ ಬಳಸುವುದು ವೈಶಿಷ್ಟ್ಯವಾಗಿದೆ.

ಕನ್ನಡದ ವಿದ್ವಾಂಸರು ಇಂದಿನವರೆಗೆ ಧಾರವಾಡ ಕನ್ನಡ, ಮೈಸೂರು ಕನ್ನಡ, ಹೈದ್ರಾಬಾದ್ ಕನ್ನಡ ಎಂದು ಪ್ರಾದೇಶಿಕ ಹಿನ್ನೆಲೆಯಲ್ಲಿ ಗುರುತಿಸಿದ್ದಾರೆ. ಆದರೆ ಇಂದು ಈ ಹಿನ್ನೆಲೆಯಲ್ಲಿ ಗುರುತಿಸುವ ಮನೋಭಾವ ಬದಲಾಗಬೇಕಾಗಿದೆ. ಜಾಗತೀಕರಣದ ಮಟ್ಟದಲ್ಲಿ ಇಂಗ್ಲೀಷ್ ವಿಪರೀತ ಪ್ರಭಾವ ಬೀರಿರುವುದರಿಂದ ನಮ್ಮ ಹಳ್ಳಿಯ ರೈತನೂ ಇಂಗ್ಲೀಷ್ ಪದಪ್ರಯೋಗಿಸುವುದು ವಿಸ್ಮಯ ಮೂಡಿಸುತ್ತಿದೆ. ಭಾಷೆ ಮತ್ತು ಉಪಭಾಷೆಗಳ ಅಂತರ್ಯದಲ್ಲಿ ಬದಲಾವಣೆ ಇದೆ.

ನಮ್ಮ ಮೂಲ ಗ್ರಾಮೀಣ ಮಾತಿನ ಧಾಟಿಯಲ್ಲಿ ಬದಲಾವಣೆಯುಂಟಾಗಿದೆ. ಹಳ್ಳಿಗರ ಮಾತುಗಳೆಲ್ಲವು ಆಧುನಿಕರಣಗೊಂಡಿವೆ. ಇಂದಿನ ‘ಸಂಚಾರವಾಹಿನಿ’ (Mobile) ಗಳಂತೂ, ಹಳ್ಳಿಗರ ಕೈಗಳಿಗೆ ಎಟುಕಿವೆ. ಹಳ್ಳಿಗರು ಬೇರೆ ಬೇರೆ ನಾಡಿನ ಸಂಪರ್ಕದಲ್ಲಿದ್ದಾರೆ. ಆದ್ದರಿಂದ ಕನ್ನಡದ ಪ್ರಾದೇಶಿಕ ಉಪಭಾಷೆಗಳೂ ಸಹ ತಮ್ಮ ಅಸ್ತಿತ್ವ ಅಳಿಸಿಕೊಳ್ಳುತ್ತಿವೆ. ಉಪಭಾಷೆಯ ಆಡುನುಡಿಯು ಪರಿವರ್ತನಾಶೀಲವಾಗಿದೆ. ಕನ್ನಡದ ಉಪಭಾಷೆಗಳ ಮೇಲೆ ಇಂಗ್ಲೀಷ್ ಭಾಷೆ ಪ್ರಮುಖವಾಗಿ ಪ್ರಭಾವ ಬೀರಿದರೆ; ಕನ್ನಡದ ಗಡಿಯ ಉಪಭಾಷೆಗಳ ಮೇಲೆ ಮರಾಠಿ, ತೆಲುಗು, ತಮಿಳು ಮಲೆಯಾಳಿ, ಉರ್ದು, ಕೊಂಕಣಿ ಇತರ ಭಾಷೆಗಳು ಪರಿಣಾಮ ಬೀರಿವೆ. ಪ್ರಸ್ತುತ ಅಥಣಿ ಪ್ರದೇಶದ ವಾಲ್ಮೀಕಿ ಪರಿಸರದ ಭಾಷೆಯು ಈ ಮೇಲಿನ ಮಾತುಗಳಿಂದ ಹೊರತಾಗಿಲ್ಲ. ಅಥಣಿ ಪ್ರದೇಶದ ಆಡುನುಡಿ ಉಪಭಾಷೆಯನ್ನು ಅವಲೋಕಿಸುವುದು ಅವಶ್ಯ.

ಅಥಣಿ ಕರ್ನಾಟಕ ರಾಜ್ಯದ ಉತ್ತರ ಪಶ್ಚಿಮ ಗಡಿಯ ಒಂದು ತಾಲ್ಲೂಕು ಬೆಳಗಾವಿ ಜಿಲ್ಲೆಯಲ್ಲಿದೆ. ಇದರ ಉತ್ತರ ಮತ್ತು ಪಶ್ಚಿಮಕ್ಕೆ ಹೊಂದಿಕೊಂಡು ಮಹಾರಾಷ್ಟ್ರ ರಾಜ್ಯವಿದೆ. ನೂರಾರು ವರ್ಷಗಳಿಂದ ಈ ಭಾಗದ ಮೇಲೆ ಮರಾಠಿ ಪ್ರಭಾವ ಹಾಗೂ ಪ್ರಾಬಲ್ಯ ಇದ್ದವು. ಮೊದಲು ಇದು ಮುಂಬಯಿ ಪ್ರಾಂತ್ಯದಲ್ಲಿತ್ತು. ಮೊದಲು ಈ ಪ್ರದೇಶ ಮರಾಠಿಗರ ಕೈವಶವಾಗಿದ್ದ ಕಾರಣ ಅಥಣಿ ಪ್ರದೇಶದ ಮೇಲೆ ಮರಾಠಿ ಪ್ರಭಾವ ಬೀರಿದೆ. ಈ ಪ್ರದೇಶದ ಮೇಲೆ ಬಹುಮನಿ, ವಿಜಾಪುರ ಸುಲ್ತಾನರು ಆಡಳಿತ ನಡೆಸಿರುವುದರಿಂದ ಉರ್ದುವಿನ ಪ್ರಭಾವವೂ ಸಹ ಇರುವುದು. ಇತ್ತೀಚೆಗೆ ಹಿಂದಿ, ಇಂಗ್ಲೀಷ ಭಾಷೆಗಳೂ ಪರಿಣಾಮ ಬೀರಿವೆ. ಈ ತಾಲೂಕಿಗೆ ಹೊಂದಿಕೊಂಡಿರುವ ಕರ್ನಾಟಕದ ಬಿಜಾಪುರ ಜಿಲ್ಲೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಬೆಳಗಾವಿ ಜಿಲ್ಲೆಯ ರಾಯಭಾಗ, ಚಿಕ್ಕೋಡಿ, ತಾಲೂಕುಗಳು. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕು ಸಾಂಗಲಿ ಜಿಲ್ಲೆಯ ಮಿರಜ, ಜತ್ತ ತಾಲೂಕಿನ ಗಡಿಗಳಿವೆ. ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಯ ತಾಲೂಕುಗಳಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಅಚ್ಚಕನ್ನಡವನ್ನು ಮಾತಾನಾಡಿದರೆ; ಕೊಲ್ಲಾಪುರ, ಸಾಂಗಲಿ ಜಿಲ್ಲೆ ಹೊಂದಿಕೊಂಡಿರುವ ತಾಲೂಕುಗಳ ಸೀಮೆಯಲ್ಲಿ ಮರಾಠಿ ಪ್ರಭಾವ ಹೆಚ್ಚಾಗಿದೆ.

ಅಥಣಿ ತಾಲೂಕಿನಲ್ಲಿ ಬೇಡ ಅಥವಾ ವಾಲ್ಮೀಕಿ ಸಮುದಾಯವು ತುಂಬ ಹರಡಿದ್ದರೂ, ‘ಬ್ಯಾಡರಟ್ಟಿ’ ಎಂಬ ಹಳ್ಳಿ ಅವರಿಗೆ ಮೀಸಲಿದ್ದಂತೆ ಹೆಸರು ಸೂಚಿಸುತ್ತದೆ. ಅಥಣಿ ತಾಲೂಕಿಗೆ ಹೊಂದಿಕೊಂಡ ಜತ್ತ ತಾಲೂಕಿನ ‘ಸಿಂಧೂರ’ ಗ್ರಾಮದ ಬೇಡ ಸಮುದಾಯದ ಲಕ್ಷ್ಮಣನ ಧೀರತೆ ಇವರಿಗೆ ಆದರ್ಶವಾಗಿದೆ. ಈತನು ಬ್ರಿಟೀಷರ ಆಡಳಿತದಲ್ಲಿ ಸರಕಾರಕ್ಕೆ ಸಿಂಹ ಸ್ವಪ್ನನಾಗಿದ್ದನು.

ಅಥಣಿ ತಾಲೂಕಿನ ರಡ್ಡೇರಟ್ಟಿ, ಬೇಡರಹಟ್ಟಿ, ಅಥಣಿ ಇತರ ಪ್ರದೇಶದಲ್ಲಿ ಬೇಡ ಸಮುದಾಯ ಹೆಚ್ಚು ಕಂಡುಬರುವುದು. ಮೂಲತಃ ಪ್ರಾಚೀನ ಕಾಲದಿಂದ ಬೇಟೆಯಾಡುವುದು ಇವರ ವೃತ್ತಿಯಾದರೂ ಇಂದು ಸರಕಾರ ಬೇಟೆಯಾಡುವುದು ನಿಷೇಧಿಸುವುದರಿಂದ ಇವರ ಮೂಲವೃತ್ತಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಇಂದು ಇವರು ಬೇರೆ ಉದ್ಯೋಗ ಅರಸಿರುವುದು ಈ ಸಮುದಾಯಕ್ಕೆ ಶುಭದ ಸಂಕೇತವಾಗಿದೆ. ಇವರು ಕೆಳವರ್ಗದ ಸಮುದಾಯಕ್ಕೆ ಸೇರಿರುವುದರಿಂದ ಇವರ ಮಾತಿನ ಧಾಟಿಯಲ್ಲಿ ಬಿರುಸುತನ ಎದ್ದು ತೋರುತ್ತದೆ. ಹೆಣ್ಣಿರಲಿ, ಗಂಡಿರಲಿ ಮಾತಿನ ಶೈಲಿಯಲ್ಲಿ ಗಂಡು ಭಾಷೆಯ ದಿಟ್ಟ ಧ್ವನಿ ಅಡಗಿದೆ. ಆದರೆ ಅವರ ಹೃದಯಲ್ಲಿ ಕುಹಕತನಕ್ಕೆ ಆಸ್ಪದವಿಲ್ಲ. ನೇರ ನಡೆ-ನುಡಿ ಬೇರೆಯಾಗದೆ ಎರಡೂ ಒಂದೇಯಾಗಿರುವುದು. ಸಮುದಾಯದ ಭಾಷೆಯು ಅಥಣಿ ತಾಲೂಕಿನ ಜನರಾಡುವ ಭಾಷೆಯಂತಿದೆ.

ಕನ್ನಡದ ಹೆಸರಾಂತ ಬರಹಗಾರರಾದ ದುಂ.ನಿಂ. ಬೆಳಗಲಿಯವರು ಅಥಣಿ ತಾಲೂಕಿನ ಭಾಷೆಯ ಆಡು ನುಡಿಯ ಕುರಿತು ಈ ಪ್ರದೇಶದ ಭಾಷಾ ವೈಶಿಷ್ಟ್ಯಗಳನ್ನು ಗುರುತಿಸಿದ್ದಾರೆ. (ಅಥಣಿ ತಾಲೂಕ ಸಮಗ್ರ ದರ್ಶನ, ಪು.೯೩-೧೦೦)

೧. ಅನುಸ್ವಾರ ವ್ಯತ್ಯಾಸ

ಅ. ಅನುಸ್ವಾರ ಪಲ್ಲಟ : ಉದಾ: ಸಿಂಪಿಗ್ಯಾ > ಸಿಪ್ಪಿಗ್ಯಾ, ಕೆಂಪು > ಕೆಪ್ಪು, ಗಂಟ್ಟು > ಗಟ್ಟು, ವಂಶ > ಓಸ, ಗಂಡಸು > ಗನಸು

ಆ. ಅನುಸ್ವಾರ ಆದೇಶ : ಉದಾ : ಅಹುದು > ಹೌದು, ಆದರೆ ಇದರ ಬದಲಾಗಿ ಹೋಂದ, ಹೊಯಿಂದ ಬಳಕೆಗೊಳ್ಳುತ್ತಿದೆ. ಅದರಂತೆ ಗೊತ್ತು > ಗೊಂತು, ಕುಳಿತುಕೊ > ಕೂಡು > ಕುಂಡು ಎಂದು ಆದೇಶ ಪ್ರಯೋಗಗೊಳ್ಳುವುದು.

೨. ಹ್ರಸ್ವ ದೀರ್ಘವಾಗಿ ಪ್ರಯೋಗಗೊಂಡಿದೆ. ಒಂದು ಪದದಲ್ಲಿ ವ್ಯಂಜನ ದುರ್ಬಲವಾಗಿದ್ದರೆ ಪರಿಹಾರ ದೀರ್ಘೀಕರಣಗೊಂಡಿದೆ. ಇದಕ್ಕೆ ಕಾರಣ ಮರಾಠಿ ಪ್ರಭಾವವಾಗಿದೆ. ಉದಾ: ಎಷ್ಟು>ಏಟು, ಹೆಂಡತಿ>ಹ್ಯಾಣತಿ, ಏನು>ಯಾನಾ, ಮಾಡುವುದು> ಮಾಡೋದು, ನೋಡುವುದು > ನೋಡೋದು, ವರ್ಷ > ವರ್ಷಾ>ವರಸಾ, ಹಾಲು>ಹಾಲಾ, ಮೊಸರು>ಮಸರಾ.

೩. ದೀರ್ಘ ಹ್ರಸ್ವವಾಗಿ ಬಳಕೆಗೊಳ್ಳುವುದು : ಉದಾ : ಬರಲಿಕ್ಕೇ > ಬರ್ಲಾಕ, ಹೋಗಲಿಕ್ಕೇ > ಹೋಗ್ಲಾಕ, ಕರೆಯಲಿಕ್ಕೇ > ಕರಿಲಾಕ, ಹಸಿದ > ಹಸ್ದ ಇತ್ಯಾದಿ.

೪. ವಿಭಕ್ತಿ ಪ್ರತ್ಯಯ ಪಲ್ಲಟ ನಪುಂಸಕ ಲಿಂಗ ಷಷ್ಠಿ ವಿಭಕ್ತಿ ಪ್ರತ್ಯಯದಲ್ಲಿ ಒಮ್ಮೊಮ್ಮೆ ‘ದ’ ಸೇರುತ್ತದೆ. ಉದಾ : ದನಧ>ದನದ>ದನೀನ, ಹುಡುಗ>ಹುಡುಗನ, ಹುಡುಗಿಯ > ಹುಡುಗೇ, ತಾಯಿಯ > ತಾಯೀದ ಇತ್ಯಾದಿ.

೫. ಪದಗಳಲ್ಲಿ ಅಕ್ಷರ ವ್ಯತ್ಯಾಸಗಳು ಪಲ್ಲಟವಾಗುವುದರಿಂದ ಲೋಪ, ಆದೇಶ ಸಹಜವಾಗಿದೆ.

ಉದಾ : ಸಂಗಡ > ಸಂಗಾಡ, ಸ್ವತಂತ್ರ > ಸ್ವತಂತ್ರ, ಅವನ ಕೂಡ > ಅವನ ಗೂಡಾ, ಹೊಟ್ಟೆ ಕಿಚ್ಚು > ಹೊಟ್ಟೆ ಕಿಚ್ಚು, ಚೌಗುಲೆ > ಚೇಲಗ್ಯಾರು, ನಾಲ್ಕು > ನಾಕು, ಎರಡು > ಎಡ್ಡು ಇತ್ಯಾದಿ.

೬. ಹೆಚ್ಚಿನ ಅಕ್ಷರಗಳು ಮಾತನಾಡುವ ಸಂದರ್ಭದಲ್ಲಿ ಪದಗಳ ಮದ್ಯ ಒಂದು ಸೇರುತ್ತವೆ.

ಉದಾ : ಬರುವ ತನಕ > ಬರುತನಕ > ಬರೂಸ್ತನಕಾ ಹೋಗುವ ತನಕ > ಹೋಗೂ ತನಕಾ > ಹೋಗುಸ್ತಾನಕ್ಕಾ, ಮೇಲಿನ ಗೊಡೆ > ಮ್ಯಾಲಿನ ಗ್ವಾಡಿ > ಮ್ಯಾಲ್ತಿನ ಗ್ವಾಡಿ ಇತ್ಯಾದಿ

೭. ಒಂದೊಂದು ಶಬ್ದ ಅರ್ಥ ವ್ಯತ್ಯಾಸವಾಗುವುದು

ಉದಾ : ಮಳಿಗೆ > ಅಂಗಡಿ ಎಂದು ಅರ್ಥವಿದೆ. ಆದರೆ ಇಲ್ಲಿ ಮಳಿಗೆ ಎಂದರೆ ಹೊಳೆಯ ದಂಡೆಯ ಹೊಲ ಎಂದು ಅರ್ಥವಿದೆ.

೮. ಕೆಲವು ಪಡೆ ನುಡಿಗಳ ಬಳಕೆ ಇದೆ.

ಉದಾ : ದಂಹಿಡಿ > ತಡೆ, ಸುಮ್ಮನಿರು, ಪಂಚೇತಿ ಆಗು > ತೊಂದರೆ ಆಗು, ಪರ್ಲಹರಿ > ಸಂಬಂಧ ಕಡೆದುಕೊಳ್ಳು, ನಜರ ಬಂದ್ಯಾಗ ಇಡು > ಕಣ್ಣ ನೋಟದಲ್ಲಿ ಇಡು, ದಾದ ಮಾಡು > ಗಮನ ಕೋಡು, ಧಾರೇಕ ಹತ್ತು > ಗತಿಗೆ ಹತ್ತು, ಪಂಟಬಡಿ > ನೆಪ ಹೇಳು, ಅಪಸತ ಮಾಡಿಕೊ > ಒಪ್ಪಂದ ಮಾಡಿಕೊಳ್ಳು ಇತ್ಯಾದಿ.

೯. ನಿಷೇದಾರ್ಥಕ ‘ಬೇಡ’ ಎಂಬ ಪದ ‘ಓಲ್ಲೆ’ ಎಂದು ಪ್ರಯೋಗಗೊಳ್ಳುತ್ತಿದೆ.

ಉದಾ : ‘‘ನೀ ಊರ‌್ಗಿ ಹೋಗುವ ಓಲ್ಲಿ’’ > ನೀನು ಊರಿಗೆ ಹೋಗುವುದು ಬೇಡ

ನಾ ಉಗೋದ ಒಲ್ಲಿ > ನಾನು ಊಟ ಮಾಡುವುದು ಬೇಡ

ನೀವ ಬರೂಕ ಒಲ್ಲಿ > ನೀವು ಬರಲಿಕ್ಕೆ ಬೇಡ ಇತ್ಯಾದಿ.

೧೦. ಮರಾಠಿ ಪದಗಳ ಬಳಕೆ

‘‘ಪೈಲೆ ಪಾಸೂನ ನಂ ದುಕಾನ ಮೋಠಾ ಪ್ರಮಾಣ ಐತಿ’’ ಎಂಬ ವಾಕ್ಯದಲ್ಲಿ ಏಳು ಪದಗಳಲ್ಲಿ ಎರಡು ಶಬ್ದಗಳು ಕನ್ನಡವಾದರೆ ಉಳಿದವು ಮರಾಠಿಯಾಗಿವೆ. ಇದರ ಅರ್ಥ ಮೊದಲಿನಿಂದಲೂ ನಮ್ಮ ಅಂಗಡಿ ದೊಡ್ಡ ಪ್ರಮಾಣದಲ್ಲಿದೆ. ಹಾಗೆಯೇ ಅನೇಕ ಉದಾಹರಣೆಗಳು ಗಮನಾರ್ಹ.

ಪೋರಿನ ಪೋಚಾಸಿ ಬರ್ತಿವ > ಹುಡುಗಿಯನ್ನು ಕಳಿಸಿ ಬರುತ್ತೇವೆ.

ಉದ್ದರೆ ಬಂದ ಆಗೇತಿ > ಸಾಲನಿಂತಿದೆ.

ಮೇವಗ್ಯಾಂದ ಸ್ಥಿತಿ ಬಿಗಡೈಸಿತಿ > ಭಾವನ ಸ್ಥಿತಿ ಕೆಟ್ಟಿದೆ

ತಬ್ಬೇತ ಬರಿ ಇಲ್ಲ > ಆರೋಗ್ಯ ಸರಿ ಇಲ್ಲ. ಇತ್ಯಾದಿ

ಮರಾಠಿ ಪದಗಳು ಈ ಪ್ರದೇಶದ ಭಾಷೆಯಲ್ಲಿ ಸಮ್ಮಿಳಿತಗೊಂಡಿವೆ.

ಕ್ಯಾಣ್ಯಾ (ಜಾಣ) , ಖರೆ (ನಿಜ) , ಮಸ್ತ (ಬಹಳ) , ತಾಬಡತೋಬ (ಬೇಗ) , ಹಾಲ್ (ಕಷ್ಟ) , ಲಾಲಭಡಕ (ಅತಿ ಕೆಂಪು) , ತೋಂಡಿ (ಮೌಖಿಕ) , ಕಬೂಲಿ (ಒಪ್ಪಿಗೆ) , ಖೂನಿ (ಕೊಲೆ) , ಅಜುಬಾಜು (ನೆರೆಹೊರೆ) , ಠಣ್ಯಾ (ಮೋಸಗಾರ)  ಸಮ್ಮಸು (ತಿಳಿ)  ಹರಕತ್ತ (ಅಡ್ಡಿ) , ಥೋಡೆ (ಸ್ವಲ್ಪ) , ನುಸ್ತೆ (ಈಗ)  ನಿಮ್ಮೆ (ಅರ್ಧ) , ಫರಕ (ಅಂತರ) , ವಾಡಾಸು (ಹೆಚ್ಚಿಸು) , ಏಕದಂ (ಒಮ್ಮೆಲೆ) , ಪಾರ (ಹುಡುಗ) , ಪೋರಿ (ಹುಡುಗಿ) , ಇತ್ಯಾದಿ ಪದಗಳು.

೧೧. ಮರಾಠಿ ಸಂಖ್ಯಾವಾಚಕ ಪದಗಳ ಬಳಕೆ

ಒಂದು, ಎರಡು ಸಂಖ್ಯೆಗಳನ್ನು ಬಳಸುವಲ್ಲಿ ಮರಾಠಿಯ ಎಕ, ದೋನ ಎಂದು ಬಳಸುವರು, ನೂರು, ಶಂಬರ, ಐವತ್ತು>ಪನ್ನಾಸ ಎಂದು ಬಳಸುತ್ತಾರೆ.

ಉದಾ : ಏಕರ ಗಾಡೀಗಿ ಹೋಗಬೇಕು > ಒಂದು ಗಂಟೆಯ ಬಸ್ಸಿಗೆ ಹೋಗಬೇಕು.

ದೀಡ ರೂಪಾಯಿಕೊಟ್ಟ > ಒಂದು ರೂಪಾಯಿ ಐವತ್ತು ಪೈಸೆ ಕೊಟ್ಟನು.

ವೇಳೆಯನ್ನು ತಿಳಿಸುವಲ್ಲಿಯು ವೈಶಿಷ್ಟ್ಯವಿದೆ. ಉದಾ : ಸಾಡೆ ಅಕರಾ > ಹನ್ನೊಂದುವರೆ, ಸವ್ವಾ ಅರಣ > ಹನ್ನೊಂದು ಕಾಲು, ಪೋಣೆ ಮೂರು > ಮೂರು ಮುಕ್ಕಾಲು ಇತ್ಯಾದಿ.

೧೨. ಇತರ ದೇಶಿ ಪದಗಳ ಬಳಕೆ

ಜಡಿ (ಹೊಡೆ)  ಕಪಾರಕಿ (ಜಡ್ಡು) , ಮೋಕಳೀಕ (ಮುಕ್ತ) , ಕಾಸಡೇ (ಬೆಲೆಮಣಿ) , ಅಬಟಿ (ಚಿಕ್ಕಮ್ಮ) , ದಸಮಿ (ಹಾಲಿನಲ್ಲಿ ಮಾದಿದ ರೊಟ್ಟಿ) , ದೇಳವ (ಸಿರಿವಂತ) , ಗರಜ (ಅವಶ್ಯಕತೆ) , ದಗದ (ಕೆಲಸ) , ಪ್ಯಾಲಿ (ಮೂರ್ಖ) , ದೀಡಿ (ವ್ಯಂಗ್ಯ) , ಬಾಟಿ (ಹಸಿದಂಟು) , ಗಸಕ್ಕನ (ಲಗುಬಗೆಯಿಂದ) , ತರಬು (ನಿಲ್ಲಿಸು) , ಪಾಡ (ಲೇಸು)  ಜಿಕೇರಿ (ಜಿಪುಣತನ) , ಹರಿವತ್ತು (ಬೆಳಗು) , ಸನೇ (ಸಮೀಪ) , ಅಗಾವು (ಮುಂಚಿತ) , ಬೆರಕಿ (ಚತುರ) , ಗರ್ದಿ (ಸಡಗರ) , ಆಯಾರ (ಉಡುಗೊರೆ)  ಇತ್ಯಾದಿ ಅಪರೂಪದ ಪದಗಳಿವೆ.

ದು.ನಿಂ.ಬೆಳಗಲಿಯವರು ಈ ಪ್ರದೇಶದ ಆಡುನುಡಿ ಸೊಗಡನ್ನು ಗುರುತಿಸಿ ಈ ಪ್ರದೇಶದ ಕನ್ನಡಕ್ಕೆ ಹಂಡ ಬಂಡ ಕನ್ನಡ ಎಂದು ಹೆಸರಿಸಿರುವರು. ವಾಸ್ತವವಾಗಿ ಈ ಪ್ರದೇಶದಲ್ಲಿ ಇಂಗ್ಲೀಷಿನ ಪದಗಳಾದ ಬಸ್ಸು, ರೈಲು, ವಿಮಾನ, ರೋಡ್, ಪೋಸ್ಟ್, ಆಪೀಸ್, ಕಾಲೇಜ್, ಹೈಸ್ಕೂಲ್, ಬಿಲ್ಡಿಂಗ್, ಸೈಕಲ್, ಮೋಟರ, ಬೊಬಾಯೀ, ಟಿವಿ, ರೇಡಿಯೋ, ವಾಕಿಂಗ್, ಅನೇಕ ಪದಗಳು ಪ್ರಯೋಗಗೊಂಡಿವೆ. ಹಿಂದಿ, ಉರ್ದು, ಅರೇಬಿಕ ಭಾಷೆಯ ಪದಗಳಿಂದ ಜಬರದಸ್ತ, ಜವಾಬು, ಜಮೀನ, ಮಸೀದಿ, ಖಬರ, ಮಂದಿರ ಇತ್ಯಾದಿ ಬಳಕೆಗೊಳ್ಳುವುದು ವೈಶಿಷ್ಟ್ಯವಾಗಿದೆ.

ಸಮುದಾಯ ಹಿನ್ನೆಲೆಯಲ್ಲಿ ಕೆಲವು ಪದಗಳು ಈ ಪ್ರದೇಶದಲ್ಲಿ ವೈಶಿಷ್ಟ್ಯ ಪಡೆದಿವೆ. ಊಟ ಮಾಡುವುದನ್ನು ಜೈನರು ಇಕ್ಕು ಎಂದರೆ, ಬ್ರಾಹ್ಮಣರು ಹಾಕು ಎನ್ನುವರು. ವೀರಶೈವರು ಊಟ ನೀಡು ಎಂದು ಬಳಸುತ್ತಾರೆ. ವಾಲ್ಮೀಕಿ ಸಮುದಾಯದವರು ಊಟ ಹಾಕು ಎಂದು ಬಳಸುತ್ತಿರುವುದು ವೈಶಿಷ್ಟ್ಯವಾಗಿದೆ. ನಾವು ಈ ಪ್ರದೇಶದ ಭಾಷೆಯಲ್ಲಿ ಪಂಚಮಿ ವಿಭಕ್ತಿ ಪ್ರತ್ಯಯ ಬಳಸುತ್ತಿರುವುದನ್ನು ಗುರುತಿಸಿದ್ದೇವೆ. ಉದಾ : ನಾನು ಅಕೆಯದಸಿಂದ ಬನ್ನಿ > ನಾನು ಆಕೆಯ ದೆಸೆಯಿಂದ ಬನ್ನಿ ಇಂತಹ ಭಾಷಿಕ ಪದ ಪ್ರಯೋಗ ಕನ್ನಡದ ಬೇರೆ ನಾಡಿನಲ್ಲಿ ಕಂಡು ಬರುವುದಿಲ್ಲ. ಇಂತಹ ಅನೇಕ ಭಾಷಾ ವೈಶಿಷ್ಟ್ಯಗಳು ಈ ಪ್ರದೇಶದಲ್ಲಿವೆ. ಅಥಣಿ ಪರಿಸರದ ವಾಲ್ಮೀಕಿ ಸಮುದಾಯವು ಈ ಪ್ರದೇಶದ ಪದಗಳನ್ನು ಬಳಸಿದರು. ಕೆಲವು ಅವರ ಪದ ಗುರುತಿಸಬಹುದು. ಉದಾ : ಹೊಡೆ > ಕೊಲ್ಲು ಎಂದು ಬಳಸಿದರೆ, ಕೊಡ್ಲಿ, ಬಿಲ್ಲ, ಕೆಲವು ಸಾಂಪ್ರದಾಯಕ ಪದ ಬಳಸುವುದುಂಟು. ಈ ಪ್ರದೇಶದ ಜನರು ಈ ಪದಗಳನ್ನು ಬಳಸುತ್ತಾರೆ.