ಕಾಸಿ ಕಮ್ಮಾರನಾದ
ಬೀಸಿ ಮಡಿವಾಳನಾದ
ಹಾಸವನಿಕ್ಕಿ ಸಾಲಿಗನಾದ
ವೇದವನೋದಿ ಹಾರುವನಾದ

ಎಂಬ ಬಸವಣ್ಣನವರ ವಚನದಂತೆ

‘ಬೇಟೆಯನಾಡಿ ಬೇಡನಾದ’ ಎಂದು ಹೇಳಬಹುದು.

ಭಾರತದಲ್ಲಿ ಶಿಕ್ಷಣ ಎಂಬುವುದು ಇಂದು ಸಾರ್ವತ್ರಿಕವಾಗಿದೆ. ಆದರೆ ಪುರಾತನ ಕಾಲದಲ್ಲಿ ವಾಲ್ಮೀಕಿ (ಬೇಡ)  ಸಮುದಾಯ ಉನ್ನತ ವರ್ಗದವರ ಶೋಷಣೆಗೆ ಒಳಗಾಗಿದ್ದರು. ಕಾಡಿನಲ್ಲಿ ವಾಸವಾಗಿ, ಜನಸಂಪರ್ಕದಿಂದ ದೂರವಾಗಿ ವಾಸಿಸುತ್ತಿದ್ದರು. ಇವರು ಬೇಟೆಯಾಡುವುದೇ ತಮ್ಮ ಧರ್ಮ ಎಂದು ತಿಳಿದಿದ್ದರು. ಆದರೆ ಅವರು ಕ್ಷತ್ರಿಯರಲ್ಲ ಎಂಬ ಕಾರಣಕ್ಕಾಗಿ ಬಿಲ್ವಿದ್ಯೆ, ಧನುರ್ವಿದ್ಯೆ ಮುಂತಾದ ಕ್ಷಾತ್ರ ವಿದ್ಯೆಗಳಿಂದ ವಂಚಿತರಾದವರು. ಇದನ್ನು ನಾವು ಏಕಲವ್ಯನಿಗೆ ದ್ರೋಣ ಶಿಕ್ಷಣ ಕೊಡದೇ ಇರುವ ಉದಾಹರಣೆಯ ಮೂಲಕ ತಿಳಿದುಕೊಳ್ಳಬಹುದು. ತನ್ನ ಸ್ವಸಾಮರ್ಥ್ಯದಿಂದ ಏಕಲವ್ಯ ಧನುರ್ವಿದ್ಯಾ ಪರಿಣಿತಿ ಹೊಂದಿದರೂ ದ್ರೋಣ ಅರ್ಜುನನ್ನು ಶ್ರೇಷ್ಠ ಧನುರ್ಧಾರಿಯನ್ನಾಗಿ ಮಾಡಲೆಂದು ಏಕಲವ್ಯನ ಹೆಬ್ಬೆರಳನ್ನೇ ಕತ್ತರಿಸಿ ದ್ರೋಹ ಬಗೆದ. ಆದರೆ, ಏಕಲವ್ಯ ಗುರು ಭಕ್ತಿಯಲ್ಲಿ ಅಮರನಾದ. ಏನೇ ಎಂದರೂ, ಕ್ಷತ್ರಿಯನನ್ನು ಮೀರಿಸುವಷ್ಟು ಕ್ಷಾತ್ರ ವಿದ್ಯೆಯಲ್ಲಿ ಈ ಸಮುದಾಯದವರು ಪರಿಣಿತರು ಮತ್ತು ಧೈರ್ಯಶಾಲಿಗಳು ಎಂದು ಹೇಳಬಹುದು.

ವೇದ, ಪುರಾಣ, ಶಾಸ್ತ್ರ, ಗ್ರಂಥಗಳ ಗಂಧ ಇವರಿಗಿರಲಿಲ್ಲ. ಈ ವಿದ್ಯೆಯಿಂದಲೂ ಅಮರ ಎನಿಸಿಕೊಂಡ ರಾಮಾಯಣವನ್ನು ರಚಿಸಿದ ‘ವಾಲ್ಮೀಕಿ’ ಬೇಡ ಸಮುದಾಯದವ. ವಾಲ್ಯಾ ಕೋಳಿ ಎಂಬುನವನು ಮನ ಪರಿವರ್ತನೆ ಹೊಂದಿ ‘ವಾಲ್ಮೀಕಿಯಾದ’; ಮಹಾನ್ ‘ಋಷಿಯಾದ’. ಅಲ್ಲದೇ ಬೇಡರ ಕಣ್ಣಪ್ಪ ಯಾವ ಶಾಸ್ತ್ರದ ಜ್ಞಾನವಿಲ್ಲದೇ ಶಿವನನ್ನು ಒಲಿಸಿಕೊಂಡು ಆಧ್ಯಾತ್ಮದ ರಾಶಿಯಲ್ಲಿ ಅಮರನಾಗಿದ್ದಾನೆ. ವಾಲ್ಮೀಕಿ ರಚಿಸಿದ ರಾಮಾಯಣ, ಬೇಡ ಸಮುದಾಯದ ಶೈಕ್ಷಣಿಕ ಮೊದಲ ಹೆಜ್ಜೆ ಎಂದು ಹೇಳಬಹುದು.

ಆದರೆ, ವಾಲ್ಮೀಕಿಯಂತೆ ಉಳಿದ ಬೇಡ (ವಾಲ್ಮೀಕಿ)  ಸಮುದಾಯ ಯಾವುದೇ ಅಧ್ಯಯನ ಗೈಯ್ಯದೇ ತಮ್ಮ ಬೇಟೆಯಾಡುವ ಕಸುಬನ್ನೇ ಮಾಡಹತ್ತಿದ್ದಾರೆ. ವಾಲ್ಮೀಕಿಯ ಸಮುದಾಯವನ್ನು ಜಗತ್ತಿನ ಎಲ್ಲ ಭಾಗದಲ್ಲಿ ಕಾಣಬಹುದು. ಅಲ್ಲಿ ಅವರನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುವುದು. ಆದರೆ ಭಾರತದಲ್ಲಿ ಇವರನ್ನು ವಾಲ್ಮೀಕಿ, ಬೇಡ, ನಾಯಕ ಸಮುದಾಯ ಎಂದು ಕರೆಯಲಾಗುತ್ತಿದೆ. ಇವರು ತಮ್ಮದೇ ಆದ ವಿಶೇಷ ಆಧ್ಯಾತ್ಮಿಕ ಸಾಂಪ್ರದಾಯಿಕ ಸಾಮಾಜಿಕ ವಿಚಾರಗಳನ್ನು ಹೊಂದಿದವ ರಾಗಿರುವುದರಿಂದ ಶಿಕ್ಷಣದ ಕಡೆಗೆ ಇವರ ಗಮನ ಕಡಿಮೆಯಾಗಿದೆ.

ಅಥಣಿ ಪರಿಸರದಲ್ಲಿ ಬೇಡ ಸಮುದಾಯ ಅಧಿಕವಾಗಿದ್ದಾರೆ. ಇಲ್ಲಿ ಒಂದು ಗ್ರಾಮದ ಹೆಸರೇ ‘ಬ್ಯಾಡರ ಹಟ್ಟಿ’ ಎಂದಿದೆ. ಅಂದರೆ, ಬೇಡರು ವಾಸವಾಗಿರುವ ಗ್ರಾಮ ಎಂಬರ್ಥವನ್ನು ಇದು ಸೂಚಿಸುತ್ತದೆ. ಅಲ್ಲದೇ ರಡ್ಡೇರಟ್ಟಿ, ಚವಕೇರಿ, ಸವದಿ, ಸತ್ತಿ ಮುಂತಾದ ಗ್ರಾಮಗಳಲ್ಲಿ ಇವರನ್ನು ಕಾಣಬಹುದು. ಇವರ ಶೈಕ್ಷಣಿಕ ಸ್ಥಿತಿಗತಿ ಅಲ್ಪಸ್ವಲ್ಪ ಸುಧಾರಿಸಿದೆ. ಆದರೆ ಇವರು ಸಾಂಪ್ರದಾಯಿಕ ನಂಬಿಕೆಗಳಿಂದ ಹೊರಬಂದಿಲ್ಲ. ಮೂಢ ನಂಬಿಕೆ, ಪಶುಬಲಿ, ಬೇಟೆಯಾಡುವುದು ಇವರ ದಿನಚರಿಯಾಗಿದೆ. ಈ ಸಮುದಾಯದಲ್ಲಿ ದೇವದಾಸಿಯರನ್ನು ಕಾಣಬಹುದಾಗಿದೆ. ಇದರ ಕೆಟ್ಟ ಪರಿಣಾಮ ಅವರ ಮಕ್ಕಳ ಮೇಲೆ ಬೀರಿ, ಅವರನ್ನು ಅನಕ್ಷರಸ್ಥ, ಅಜ್ಞಾನಿಗಳನ್ನಾಗಿ ಮಾಡುತ್ತಿದ್ದಾರೆ.

ಇಂದಿನ ಆಧುನಿಕ ಯುಗ ಅತ್ಯಂತ ವೇಗವಾಗಿ ಸಾಗುತ್ತಿದ್ದರೂ, ವಾಲ್ಮೀಕಿ ಸಮುದಾಯ ಮಾತ್ರ ಆಮೆಯ ಓಟವನ್ನೇ ಹೊಂದಿದೆ. ಈ ಸಮುದಾಯವನ್ನು ಅವಲೋಕಿಸಿದಾಗ ಇವರು ಅನೌಪಚಾರಿಕ ಶಿಕ್ಷಣವನ್ನೂ ತಮ್ಮ ಪರಿಸರ ಮತ್ತು ಕುಟುಂಬದಿಂದ ಸಂಗೀತ, ಕಲೆ, ನಾಟಕ, ಕಾವ್ಯ, ನಾಟ್ಯ ಮುಂತಾದ ಕಲಾ ಕೌಶಲ್ಯವನ್ನೂ ಹೊಂದಿದ್ದಾರೆ. ಆದರೆ ಇವರ ಪ್ರತಿಭೆಯನ್ನು ಗುರುತಿಸುವವರೇ ಇಲ್ಲದಂತಾಗಿದೆ.

ಈ ಸಮುದಾಯದ ಜನರು ಬೆರಳೆಣಿಕೆಯಷ್ಟೇ ಸಾರ್ವಜನಿಕ ಉನ್ನತ ಹುದ್ದೆಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಉಳಿದ ಸಮುದಾಯ ಸಾರ್ವಜನಿಕ ಹುದ್ದೆ ಹೊಂದದೇ ಇರಲು ಇವರ ಅನಕ್ಷರತೆಯೇ ಮೂಲ ಕಾರಣವಾಗಿದೆ. ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದರೆ ಇತರೇ ಸಮುದಾಯದವರು ಹೊಂದಿದಷ್ಟು ಸೌಲಭ್ಯ ಈ ಸಮುದಾಯದವರು ಹೊಂದಿಲ್ಲ. ಇದಕ್ಕೆ ಕಾರಣ ಇವರು ಹೆಚ್ಚಾಗಿ ಗ್ರಾಮ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿದ್ದಾರೆ ಹಾಗೂ ಅನಕ್ಷರರಾಗಿದ್ದಾರೆ.

ಬೇಡ ಸಮುದಾಯ ಸಾಕಷ್ಟು ಕೃಷಿ ಭೂಮಿಯನ್ನು ಹೊಂದಿಲ್ಲ. ಹೊಂದಿದವರೂ ಅದೇ ಓಬೀರಾಯನ (ಹಳೆಯ)  ಕಾಲದ ಕೃಷಿ ಪದ್ಧತಿಯನ್ನು ಮುಂದುವರೆಸಿದ್ದಾರೆ. ಅದಕ್ಕಾಗಿ ಇವರಿಗೆ ‘ಕೃಷಿ ಶಿಕ್ಷಣ’ ನೀಡುವುದು ಅವಶ್ಯಕವಾಗಿದೆ. ಅಲ್ಲದೇ ಈ ಸಮುದಾಯ ಎಲ್ಲೆಡೆ ಚದುರಿ ವಾಸವಾಗಿರುವುದರಿಂದ ಇವರಿಗೆ ಪ್ರತ್ಯೇಕ ಶಾಲಾ ತರಬೇತಿ ನೀಡುವುದು ಕಠಿಣವಾಗಿದೆ. ಅಲ್ಲದೇ ಇವರು ಆರ್ಥಿಕವಾಗಿ ಹಿಂದುಳಿದಿರುವುದರಿಂದ ಆಧುನಿಕ ಯಂತ್ರ ಸೌಲಭ್ಯ ಹೊಂದುವುದು ಮತ್ತು ಆಧುನಿಕ ಕೃಷಿಗೆ ತಗಲುವ ವೆಚ್ಚ ಭರಿಸುವುದು ಇವರಿಂದ ಅಸಾಧ್ಯವಾಗಿದೆ.

ಮೀಸಲಾತಿ ವ್ಯವಸ್ಥೆಯನ್ನು ನಮ್ಮ ಸರಕಾರ ಕಲ್ಪಿಸಿದರೂ, ವಾಲ್ಮೀಕಿ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಸಾಮಾನ್ಯ ಅಂಕ ಹೊಂದಿದ್ದು ಸ್ಪರ್ಧೆಯಲ್ಲಿ ಆಯ್ಕೆಯಾಗದೆ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಕೌಟುಂಬಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವುದರಿಂದ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯಗಳಿಗೆ ಕಳುಹಿಸಿ ಶಿಕ್ಷಣ ಕೊಡಿಸುವಷ್ಟು ಸಾಮರ್ಥ್ಯ ಇವರಿಗಿಲ್ಲ.

ಈ ಸಮುದಾಯದ ಮಹಿಳೆಯರಂತೂ ಶಿಕ್ಷಣದಿಂದ ಸಾಕಷ್ಟು ವಂಚಿತರಾಗಿದ್ದಾರೆ. ಬಾಲ್ಯ ವಿವಾಹಗಳಿಗೆ ಸರಕಾರ ನಿಷೇಧ ಹೇರಿದ್ದರೂ, ಈ ಸಮುದಾಯದಲ್ಲಿ ಅವ್ಯಾಹತ ವಾಗಿ ಬಾಲ್ಯವಿವಾಹ ಜರುಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಅವರ ಶಿಕ್ಷಣ ಅರ್ಧಕ್ಕೆ ನಿಂತು ಕೌಟುಂಬಿಕ ಹೊರೆ ಬಹು ಬೇಗ ಮಹಿಳೆಯರ ಮೇಲೆ ಬೀಳುವುದು. ಎಂಬಂತೆ. ಇವರು ಸ್ತ್ರೀಯರಿಗೆ ಶಿಕ್ಷಣ ಕೊಡಿಸುವಲ್ಲಿ ಇಂದಿಗೂ ಮುಂದಾಗುತ್ತಿಲ್ಲ. ಆದರೂ ಅಲ್ಪಸ್ವಲ್ಪ ಆಧುನಿಕತೆಯ ಗಾಳಿಯಿಂದ ಶಿಕ್ಷಣ ನೀಡುತ್ತಿದ್ದಾರೆ. ಆದರೆ ಇದು ಇನ್ನೂ ಬೆಳೆಯಬೇಕಾಗಿದೆ.

ಅರಿಸ್ಟಾಟಲ್ ಹೇಳಿದಂತೆ ‘ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸನ್ನು ನಿರ್ಮಿಸುವುದೇ ಶಿಕ್ಷಣ.’ ವಾಲ್ಮೀಕಿ ಸಮುದಾಯದವರು ಸದೃಢ ಕಾಯ ಹೊಂದಿದ್ದಾ ರೇನೋ ನಿಜ, ಆದರೆ ಇವರಲ್ಲಿ ಸದೃಢವಾದ ಮನಸ್ಸಿಲ್ಲ. ಇದನ್ನು ನಿರ್ಮಿಸಬೇಕಾಗಿದೆ. ಸದೃಢ ಮನಸ್ಸು ಎಂದರೆ ಜ್ಞಾನದಿಂದ ಕೂಡಿದ ಬಲಿಷ್ಠ ಮನಸ್ಸು.

ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣಗಳು

೧. ಇಂದಿಗೂ ಅನೇಕ ಬೇಡ ಸಮುದಾಯದವರು ನಾಡಿನಿಂದ ದೂರ ಗುಡ್ಡಗಾಡಿನಲ್ಲಿ ವಾಸವಾಗಿದ್ದಾರೆ.

೨. ಸಾಂಪ್ರದಾಯಿಕ ಜೀವನ ಮತ್ತು ಮೂಢನಂಬಿಕೆ ಉಳ್ಳವರಾಗಿದ್ದಾರೆ.

೩. ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ.

೪. ಬೇಗ ವಿವಾಹವನ್ನು ಕೈಗೊಳ್ಳುತ್ತಾರೆ.

೫. ಮನೆ ವಾತಾವರಣ ಅನಕ್ಷರತೆಯಿಂದ ಕೂಡಿರುವುದು.

೬. ಸರಕಾರಿ ಯೋಜನೆಗಳ ಸಮರ್ಪಕ ಮಾಹಿತಿಯ ಕೊರತೆ.

ಪರಿಹಾರೋಪಾಯಗಳು

೧. ವಿಶೇಷ ಆರ್ಥಿಕ ನೆರವನ್ನು ನೀಡುವುದು.

೨. ಪ್ರತ್ಯೇಕವಾದ ಆಯೋಗ ರಚಿಸಿ ಸೂಕ್ತ ಕ್ರಮ ಕೈಗೊಳ್ಳುವುದು.

೩. ಔದ್ಯೋಗಿಕ ಮತ್ತು ಶೈಕ್ಷಣಿಕ ಮೀಸಲಾತಿಯನ್ನು ಹೆಚ್ಚಿಸುವುದು.

೪. ಸಾಂಪ್ರದಾಯಿಕ ಮತ್ತು ಮೂಢನಂಬಿಕೆಯಿಂದ ಹೊರಬರುವಂತೆ ಮಾಡುವುದು.

೫. ಪುನರ್ ವಸತೀಕರಣ ಕಾರ್ಯಕ್ರಮ ಕೈಗೊಳ್ಳುವುದು.

೬. ಮೂಲ ಸೌಕರ್ಯಗಳನ್ನು ಒದಗಿಸುವುದು.

೭. ಪ್ರತ್ಯೇಕ ವಸತಿ ಶಾಲೆಗಳನ್ನು ಸ್ಥಾಪಿಸುವುದು.

೮. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುವುದು.