ಆಧಾರವಿಲ್ಲದೇ ಇರುವುದು ಇತಿಹಾಸವಲ್ಲ. ಇತಿಹಾಸವು ಗತಕಾಲದ ಘಟನೆಗಳ ಅಧ್ಯಯನವಾದ್ದರಿಂದ ವರ್ತಮಾನದಲ್ಲಿ ನಿಂತು ಇತಿಹಾಸವನ್ನು ರಚಿಸುವುದು ಅಷ್ಟು ಸುಲಭವಲ್ಲ. ಈ ಕಾರಣದಿಂದಲೇ ಇತಿಹಾಸದಲ್ಲಿ ಅನೇಕ ವಿಷಯಗಳು ಭಿನ್ನಾಭಿಪ್ರಾಯ, ಜಿಜ್ಞಾಸೆಗಳಿಂದ ಕೂಡಿವೆ. ಈ ಜಿಜ್ಞಾಸೆ, ಭಿನ್ನಾಭಿಪ್ರಾಯಗಳಲ್ಲಿ ಭಾರತದ ಮೂಲ ನಿವಾಸಿಗಳ ಕುರಿತ ವಿಷಯವು ಒಂದಾಗಿದೆ. ಬಹುಜನ ವಿದ್ವಾಂಸರು, ಪ್ರಾಚ್ಯಶಾಸ್ತ್ರ ತಜ್ಞರು ಒಪ್ಪಿರುವಂತೆ ಭಾರತದ ಮೂಲ ನಿವಾಸಿಗಳು ದ್ರಾವಿಡರು. ಈ ದ್ರಾವಿಡರು ಆರ್ಯರಿಂದ ದಕ್ಷಿಣ ಭಾರತಕ್ಕೆ ತಳ್ಳಲ್ಪಟ್ಟರು. ಹೀಗಾಗಿ ದ್ರಾವಿಡ ಸಮುದಾಯದ ಹೆಚ್ಚು ಜನರು ದಕ್ಷಿಣ ಭಾರತದಲ್ಲಿ ವಾಸಿಸುತ್ತಿದ್ದಾರೆ. ಈ ದ್ರಾವಿಡ ಜನಾಂಗದ ಒಂದು ಪ್ರಮುಖ ಸಮುದಾಯವೇ ವಾಲ್ಮೀಕಿ ಸಮುದಾಯ.

ಭಾರತವು ವೈವಿಧ್ಯಮಯವಾದ, ಬಹುಸಂಸ್ಕೃತಿಯಿಂದ ಕೂಡಿದ ರಾಷ್ಟ್ರವಾಗಿದೆ. ೪೦೦೦ಕ್ಕಿಂತಲೂ ಹೆಚ್ಚು ಜಾತಿ, ಉಪಜಾತಿಗಳು ಇಲ್ಲಿ ಕಂಡುಬರುತ್ತವೆೆ. ಈ ದೇಶದಲ್ಲಿ ಜಾತಿಯ ಬೇರುಗಳು ಆಳವಾಗಿ ಊರಲ್ಪಟ್ಟಿವೆ. ಅಲ್ಲದೇ ಈ ಜಾತಿ ಪದ್ಧತಿಯು  ಶ್ರೇಣಿ ವ್ಯವಸ್ಥೆಯಲ್ಲಿ ಕಂಡುಬರುತ್ತದೆ. ಈ ಜಾತಿ ವ್ಯವಸ್ಥೆಯು ಊಟೋಪಚಾರಗಳ ಮೇಲೆ, ವೃತ್ತಿಗಳ ಮೇಲೆ, ವಿವಾಹದ ಮೇಲೆ, ಉಡುಗೆಯ ಮೇಲೆ, ಹಲವಾರು ನಿರ್ಬಂಧಗಳನ್ನು ರೂಪಿಸಿಕೊಂಡು ಅಥವಾ ಹೇರಿಕೊಂಡು ಬಂದಿವೆ. ಇಂತಹ ಜಾತಿಗಳೊಂದಿಗೆ ಅಂಟಿಕೊಂಡು ಬಂದಿರುವ ಮೇಲು-ಕೀಳು, ಶ್ರೇಷ್ಠ-ಕನಿಷ್ಠ, ಕಪ್ಪು-ಬಿಳಿ, ಉಚ್ಚ-ನೀಚ ಮೇಲ್ವರ್ಗ-ಕೆಳವರ್ಗ, ಹೀಗೆ ತಾರತಮ್ಯಗಳು ಸೇರಿಕೊಂಡು ಬಂದಿರಬೇಕು.

ಭಾರತವು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ, ಹಲವಾರು ಜಾತಿಯ ಜನರು ಇಲ್ಲಿ ವಾಸವಾಗಿದ್ದಾರೆ. ವಲಸೆ ಬಂದವರೂ ಇದ್ದಾರೆ. ಅಥಣಿ ತಾಲೂಕಿನಲ್ಲಿ ರಡ್ಡೇರಹಟ್ಟಿ, ಕಲ್ಲೂತಿ ಮತ್ತು ಬ್ಯಾಡರಟ್ಟಿ ಗ್ರಾಮಗಳಲ್ಲಿ ಈ ವಾಲ್ಮೀಕಿ ಸಮುದಾಯ ಹೆಚ್ಚಾಗಿ ಕಂಡುಬರುತ್ತದೆ. ಹಾಗೆಯೇ ಅಥಣಿಯ ಪರಿಸರವು ಹಲವಾರು ಜಾತಿ, ವರ್ಗ, ವರ್ಣಗಳಿಂದ ಕೂಡಿದ ಜನರನ್ನು ಹೊಂದಿದೆ. ಈ ಪರಿಸರದಲ್ಲಿ ಬ್ರಾಹ್ಮಣರು, ವೀರಶೈವರು, ಜೈನರು, ಕುರುಬರು, ಬಡಿಗೇರು, ಅಕ್ಕಸಾಲಿಗರು, ನಾಯಕರು, ಹರಿಜನರು, ನೇಕಾರರು ಇನ್ನೂ ಮುಂತಾದ ಜನಾಂಗದವರು ವಾಸವಾಗಿದ್ದು ಇವರುಗಳೆಲ್ಲಾ ತಮ್ಮ ಜಾತಿಗನುಗುಣವಾದ ಆಚರಣೆಗಳನ್ನು, ಊಟೋಪಚಾರಗಳನ್ನು, ಸಂಪ್ರದಾಯಗಳನ್ನು ರೂಪಿಸಿಕೊಂಡು ಬಂದಿದ್ದಾರೆ. ಅದರಲ್ಲಿ ಈ ವಾಲ್ಮೀಕಿ ಸಮುದಾಯದವರು ನಾಯಕರು, ತಳವಾರ, ಕೋಳಿ, ನಾಯಿಕ, ಬೇಡರು ಎಂದೆಲ್ಲ ಇಲ್ಲಿ ಗುರುತಿಸಿಕೊಳ್ಳುತ್ತಿದ್ದು, ಸರಕಾರಿ ನಿಯಮದಂತೆ ಪರಿಶಿಷ್ಟ ಪಂಗಡ (ST)  ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಈ ಸಮುದಾಯದವರು ಆದಿವಾಸಿ ಜನರು ಎಂತಲೂ, ಇವರು ಪ್ರಾಚೀನ ಕಾಲದಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ವಾಸವಾಗಿದ್ದು, ಗೆಡ್ಡೆಗೆಣಸುಗಳನ್ನು ತಿಂದುಕೊಂಡು ಜೊತೆಗೆ ಬೇಟೆ, ಪಶುಪಾಲನೆಯನ್ನು ಮುಖ್ಯ ಕಸುಬಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆಂದು ತಿಳಿದುಬರುತ್ತದೆ. ದ್ರಾವಿಡರೆಂದು ಕರೆಯಿಸಿಕೊಳ್ಳುವ ಇವರಿಗೂ ಮತ್ತು ಆರ್ಯರಿಗೂ ನಡೆದ ಘರ್ಷಣೆಗಳಿಂದಾಗಿಯೇ ಇವರು ಗುಡ್ಡಗಾಡು ಪ್ರದೇಶಗಳನ್ನು ಸೇರಿ ಅಲ್ಲಿಯೇ ನೆಲೆಸಿರಬೇಕು. ಇವರು ಅಲ್ಲಿಂದ ದಕ್ಷಿಣ ಭಾರತದ ನದಿದಂಡೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ಮೂಲೆ ಮೂಲೆಗಳಲ್ಲಿ ಬಂದು ನೆಲೆಸಿದ್ದಾರೆ.

ಅದೇನೆ ಇದ್ದರೂ, ವಾಲ್ಮೀಕಿ ಅಥವಾ ಬೇಡ ಸಮುದಾಯವು ಭಾರತದ ಪ್ರಾಚೀನ ಸಮುದಾಯಗಳಲ್ಲಿ ಪ್ರಮುಖವಾದ ಪುರಾತನ ಸಮುದಾಯವಾಗಿದೆ. ಇವರ ಮೂಲವೃತ್ತಿ ಕೋಟೆಗಳನ್ನು ಕಟ್ಟುವುದು, ಪಶುಪಾಲನೆ, ಮತ್ತು ಬೇಟೆಯಾಡುವುದು ಆಗಿದ್ದಿತು. ಅಲ್ಲದೇ ಪಾಳೇಯಗಾರಿಕೆಯಂತಹ ಸಂದರ್ಭದಲ್ಲಿ ರಾಜ-ಮಹಾರಾಜರುಗಳ ಕೈಯಲ್ಲಿ ಸೇವಕರಾಗಿ, ಸೈನಿಕರಾಗಿ, ಅವರುಗಳ ರಕ್ಷಣೆಗೆಂದು ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಡುವಂತಹ ಸಂದರ್ಭಗಳು ಬಂದು ಹೋಗಿದೆ. ಇವರುಗಳು, ರಾಜರುಗಳು ಕೊಡುವಂತಹ ಅಷ್ಟು ಇಷ್ಟು ಸವಲತ್ತನ್ನೇ ಮಹಾಪ್ರಸಾದವೆಂದು ತಿಳಿದು ತೃಪ್ತರಾಗಿದ್ದರು ಎನಿಸುತ್ತದೆ.

ಒಂದು ಕಡೆ ಬೇಟೆಯಾಡಿಕೊಂಡು ಕಾಡು-ಮೇಡು ಅಲೆದಾಡುತ್ತಾ ತಮ್ಮ’ ಉಪಜೀವನವನ್ನು ನಡೆಸುತ್ತಾ, ಮತ್ತೊಂದೆಡೆ ರಾಜರುಗಳ ಆಳುಗಳಾಗಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಇವರುಗಳಿಗೆ ಅವರದೇ ಆದಂತಹ ಭೂ ಒಡೆತನವಾಗಲಿ, ಸಂಪತ್ತಾಗಲಿ ಇರಲಿಲ್ಲ.

‘ಇರುವ ಭಾಗ್ಯವನ್ನು ನೆನೆದು, ಬಾರದೆಂಬುದನ್ನು ಬಿಡು, ಹರುಷಕ್ಕಿದೆ ದಾರಿ’ ಎಂಬ ಡಿ.ವಿ.ಜಿ.ಯವರ ಅರ್ಥಪೂರ್ಣ ಮಾತಿನಂತೆ ಸಿಕ್ಕಷ್ಟರಲ್ಲೇ ತೃಪ್ತಿಪಟ್ಟುಕೊಂಡು ಬಂದಿದ್ದಾರೆ.

ಇಂತಹ ಶೋಷಿತ ವರ್ಗ ಅಥವಾ ಸಮುದಾಯದಲ್ಲಿ ನೆಳಲು-ಬೆಳಕಿನ ಜೀವನ ಕಳೆದು ಸಾಮಾನ್ಯ ಬೇಡನಂತೆ ಅಡವಿಯೊಳಗೆ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡುತ್ತಾ, ಹೆಂಡತಿ ಮಕ್ಕಳ ಲಾಲನೆ-ಪಾಲನೆಗಾಗಿ ಸಣ್ಣಪುಟ್ಟ ಕಳ್ಳತನ ಮಾಡುತ್ತಾ ಜೀವನವನ್ನು ಕಳೆಯುತ್ತಾ ಬಂದ ಈ ಸಮುದಾಯದ ಜನರುಗಳಲ್ಲಿ ವಾಲ್ಮೀಕಿ ಮಹರ್ಷಿಯು ಒಬ್ಬ. ಈ ಹಲವಾರು ದುಷ್ಟ ಚಟಗಳನ್ನು ಬಿಟ್ಟ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ, ಮಹಾಜ್ಞಾನಿ ಯಾಗಿ, ವೇದಾಂತಿಯಾಗಿ ಮಹಾಕಾವ್ಯವನ್ನು ನೀಡುವ ಮಟ್ಟಕ್ಕೆ ಬೆಳೆದರು. ಇಂತಹ ಮಹಾನ್ ವ್ಯಕ್ತಿಯನ್ನು ಪಡೆದ ಈ ಸಮುದಾಯವು ಧನ್ಯ ಎಂದು ಸಂತೋಷಪಟ್ಟುಕೊಂಡರೆ ಸಾಲದು. ಉಳಿದ ಸಮುದಾಯದವರ ಸ್ಥಿತಿ ಅಂದಿನಿಂದಲೂ ಇಂದಿನ ತನಕವೂ ಏರು-ಪೇರುಗಳಿಂದ ಕೂಡಿದ್ದು, ಇಂದಿನ ಈ ಆಧುನಿಕ ಸಂಕೀರ್ಣ ಸಮಾಜದಲ್ಲಿ ವಿವಿಧ ಸಮುದಾಯದವರೊಡನೆ ಪೈಪೋಟಿ ಮಾಡುತ್ತಾ ಜೀವನ ಸಾಗಿಸುವುದು ಕಷ್ಟಕರವಾಗಿದೆ.

ಬ್ರಿಟೀಷರ ಕಾಲದಲ್ಲಿ ಜಾರಿಗೊಂಡ ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯಡಿಯಲ್ಲಿ ಬೇಡರು ಶಸ್ತ್ರಾಸ್ತ್ರಗಳನ್ನು ತ್ಯಾಗ ಮಾಡುವಂತಾಯಿತು. ಒಂದೆಡೆ, ನಿರಾಯುಧರಾಗಿದ್ದು, ಮತ್ತೊಂದೆಡೆ ಭೂಮಿ ಇಲ್ಲದವರಾದ್ದರಿಂದ ಇವರುಗಳ ಜೀವನ ನಿರ್ವಹಣೆಯ ಕಷ್ಟ ಹೇಳತೀರ ದಂತಾಯಿತು.

ಇಂದಿನ ಪ್ರಪಂಚ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದರೂ ವಾಲ್ಮೀಕಿ ಸಮುದಾಯದ ಹಿಂದುಳಿಯುವಿಕೆಗೆ ಹಲವಾರು ಕಾರಣಗಳಿವೆ:

  • ವಾಲ್ಮೀಕಿ ಸಮುದಾಯದಲ್ಲಿ ಸರಿಯಾದ ಮಾರ್ಗದರ್ಶನ ನೀಡುವ ನಾಯಕರುಗಳ ಕೊರತೆಯು ಕಂಡುಬರುತ್ತದೆ. ಈ ಸಮುದಾಯವನ್ನು ಪ್ರತಿನಿಧಿಸಿ ಸೌಲಭ್ಯಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸುವಂಥ ನಾಯಕರ ಅವಶ್ಯಕತೆ ಇದೆ.
  • ಅನಕ್ಷರತೆ ಇವರ ಹಿಂದುಳಿಯುವಿಕೆಗೆ ಪ್ರಮುಖ ಕಾರಣವಾಗಿದೆ.
  • ಸರಕಾರದಿಂದ ದೊರೆತ ಸೌಲಭ್ಯಗಳನ್ನು ಮುಂದುವರೆದ ಸಮುದಾಯಗಳು ಇವರ ಹೆಸರಿನಲ್ಲಿ ಗಿಟ್ಟಿಸಿಕೊಳ್ಳುತ್ತಿದ್ದು, ಇವರ ಹಿಂದುಳಿಯುವಿಕೆಗೆ ಇದು ಪ್ರಮುಖ ಕಾರಣವಾಗಿದೆ.
  • ಅಜ್ಞಾನ-ಮೂಢನಂಬಿಕೆಗಳು, ದುಶ್ಚಟಗಳಿಗೆ ಬಲಿಯಾಗಿರುವುದು.
  • ಜನಸಂಖ್ಯೆ ಅಲ್ಪ ಪ್ರಮಾಣದಲ್ಲಿದ್ದು ಅದು ಚದುರಿಕೊಂಡಿರುವುದು.
  • ಸಾಂಪ್ರದಾಯಿಕ ಕಸುಬು
  • ಕಾಡಿನಲ್ಲಿ ವಾಸವಾಗಿರುವುದು
  • ಭೂಮಿ ಇಲ್ಲದೇ ಇರುವುದು
  • ಸಂಪ್ರದಾಯಗಳು, ಕಟ್ಟುಪಾಡುಗಳು
  • ಸರಕಾರದ ನಿರ್ಲಕ್ಷ್ಯ ಧೋರಣೆ

ಹೀಗೆ ಇವರು ಶೋಷಣೆಗೊಳಗಾಗುತ್ತಿದ್ದು, ಈ ಸಮುದಾಯದ ಏಳಿಗೆಗಾಗಿ, ಅಭಿವೃದ್ದಿಗಾಗಿ ಆಧುನೀಕತೆಯತ್ತ ಸಾಗುವಂತೆ ಮಾಡಲು ನಾವು ಅವರಿಗೆ ಅಕ್ಷರ ಜ್ಞಾನವನ್ನು ಮಾಡಿಸಬೇಕಿದೆ. ಭೂಮಿಯನ್ನು ಒದಗಿಸುವುದಾಗಬೇಕು. ಸಾಂಪ್ರದಾಯಿಕ ಕಸುಬುಗಳು ಇಂದು ಲಾಭ ತರುವುದಿಲ್ಲವಾದ್ದರಿಂದ ಬೇರೆ ಉದ್ಯೋಗದ ತರಬೇತಿಯನ್ನು ಅವರಿಗೆ ನೀಡಬೇಕಾಗಿದೆ. ಅವರ ಆರ್ಥಿಕ, ಸಾಮಾಜಿಕ ಜೀವನದ ಮಟ್ಟವನ್ನು ಎತ್ತರಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.