ಕುಟುಂಬ ವ್ಯವಸ್ಥೆಯ ಮುಖ್ಯ ಘಟಕ ಮನೆ. ಇಂತಹ ಮನೆಯಲ್ಲಿ ತಾಯಿ, ತಂದೆ, ಮಕ್ಕಳು, ಅಣ್ಣ, ಅಕ್ಕ, ತಮ್ಮ, ತಂಗಿ, ಅಜ್ಜ, ಅಜ್ಜಿ ಹೀಗಿರುವ ಸಂಬಂಧಗಳ ಸರಮಾಲೆಯೇ ನೆಮ್ಮದಿಯ ಜೀವನಕ್ಕೆ ನಾಂದಿಯಾಗಿದೆ. ಇವರೆಲ್ಲರಿಗೂ ಬೇಕಾದ ಮಾನಸಿಕ ಶಾಂತಿ, ಧಾರ್ಮಿಕ ನಂಬಿಕೆ, ಸಮಾನವಾಗಿ ಬಾಳುವುದು ಇನ್ನೂ ಮುಂತಾದವು ಪರಿಪೂರ್ಣಾವಸ್ಥೆಯಲ್ಲಿದ್ದಾಗಲೇ ಆ ಮನೆ ಸುಖೀ ಮನೆ ಎನಿಸಿಕೊಳ್ಳುವುದು. ಇಂತಹ ಸಮಾನತೆಯಿಂದ ಬಾಳುವ ಮನೆಯನ್ನು ರೂಪಕಾರ್ಥದಲ್ಲಿ ಗ್ರಹಿಸಿದರೆ ಸಾಕು, ಇಡೀ ಸಮಾಜದ ಸ್ವರೂಪವನ್ನೇ ನಾವು ನಮ್ಮ ಮುಂದೆ ಕಲ್ಪಿಸಿಕೊಳ್ಳಬಹುದು. ಆದರೆ ಈ ದೇಶದ ಸಾಂಸ್ಕೃತಿಕತೆಯನ್ನು ಚಾರಿತ್ರಿಕವಾಗಿ ಗಮನಿಸಿದರೆ, ಎಲ್ಲೋ ಕೆಲವೊಂದು ಘಟ್ಟಗಳನ್ನು ಹೊರತುಪಡಿಸಿದರೆ ಸಮಾನತೆ ಎಂಬುದು ಕನಸಿನ ಮಾತಾಗಿದೆ. ಏಕೆಂದರೆ ಸಮಾಜದ ಪ್ರತಿಯೊಂದು ಹಂತದಲ್ಲೂ ಜಾತಿ, ಲಿಂಗಾಧಾರಿತ ತಾರತಮ್ಯಗಳನ್ನು ನಾವು ಕಾಣುತ್ತೇವೆ. ಶೂದ್ರರು ಮತ್ತು ಹೆಣ್ಣುಗಳು ಜಾತಿ ಮತ್ತು ಲಿಂಗದ ಆಧಾರದಲ್ಲಿ ಮೊದಲಿನಿಂದಲೂ ತುಳಿತಕ್ಕೊಳಗಾಗುವುದರ ಜೊತೆಗೆ ಅನೇಕ ಬಗೆಯ ರೀತಿ ರಿವಾಜು, ವಿಧಿನಿಷೇಧಗಳಿಂದಾಗಿ ದ್ವಿತೀಯ ದರ್ಜೆಯ ಪ್ರಜೆಯಾಗಿದ್ದಾರೆ. ಆದರೆ ಮೊದಲಿನಿಂದಲೂ ಹೆಣ್ಣು ಹೀಗೆ ಇದ್ದಳು ಎಂದು ಹೇಳುವಂತಿಲ್ಲ. ಏಕೆಂದರೆ ದ್ರಾವಿಡ ಸಂಸ್ಕೃತಿಯ ಉಚ್ಛ್ರಾಯ ಅವಸ್ಥೆಯಲ್ಲಿ ಹೆಣ್ಣು ಮುಖ್ಯ ಸ್ಥಾನದಲ್ಲಿದ್ದು, ಮಾತೃಪ್ರಧಾನ ವ್ಯವಸ್ಥೆಯ ಮುಂಚೂಣಿಯಲ್ಲಿದ್ದಳು ಎನ್ನುವ ವಿಷಯ ಚರಿತ್ರೆಯ ಪುಟಗಳಿಂದಲೇ ತಿಳಿದುಬರುತ್ತದೆ. ಅನ್ಯಸಂಸ್ಕೃತಿಯ ಆಕ್ರಮಣಶೀಲತೆ ಮತ್ತು ಅದರ ಪಿತೃಪ್ರಧಾನ ವ್ಯವಸ್ಥೆ ತನ್ನ ಹಿಡಿತವನ್ನು ಭದ್ರ ಮಾಡಿಕೊಳ್ಳುವ ಹಂತದಲ್ಲಿ ಈ ಮಾತೃ ಪ್ರಾಧಾನ್ಯ ನಷ್ಟಗೊಂಡು ನಿಧಾನವಾಗಿ ಪಿತೃಪ್ರಧಾನ್ಯತೆ ಜಾರಿಗೆ ಬಂದಂತೆ ತೋರುತ್ತದೆ. ಪಿತೃಪ್ರಾಧಾನ್ಯತೆಯಲ್ಲಿ ಹೆಣ್ಣು ಅನೇಕ ದಿಗ್ಬಂಧನಗಳ ನಡುವೆ ಬದುಕಬೇಕಾಗಿ ಬಂತು. ಆಕೆ ದೇವತೆ ಎಂದು ಕರೆಸಿಕೊಳ್ಳುವಲ್ಲಿಯೇ ಸ್ವಾತಂತ್ರ್ಯ ಹೀನಳಾಗಿ ಕಾಣಿಸಿಕೊಳ್ಳುವುದು ವಿಪರ್ಯಾಸ. ಅತ್ಯಂತ ನಾಜೂಕಿನಲ್ಲಿ ಹೆಣೆಯಲಾದ ಈ ಮಿಥ್ ಕಂಗೆಡಿಸುವಂಥದು.

ವೇದಗಳ ಕಾಲವನ್ನು ನೋಡಿದಾಗ ಗಾರ್ಗಿ ಮುಂತಾದ ಹೆಣ್ಣುಮಕ್ಕಳ ಹೆಸರುಗಳಿರು ವುದನ್ನು ಗಮನಿಸಿದರೆ, ಆಗ ಮಾತೃಮೂಲ ವ್ಯವಸ್ಥೆ ಇನ್ನೂ ಜೀವಂತವಾಗಿತ್ತು ಎಂದು ಗ್ರಹಿಸಿಕೊಳ್ಳಲು ಸಾಧ್ಯತೆಯಿದೆ. ಪಿತೃಪ್ರಧಾನ ವ್ಯವಸ್ಥೆಯ ಆರ್ಯರು ದ್ರಾವಿಡ ಸಂಸ್ಕೃತಿಯ ಸೋಲಿನಿಂದ ಉಂಟಾಗಿರಬಹುದಾದ ರಕ್ತಸಂಬಂಧಗಳು ಮತ್ತು ದ್ರಾವಿಡ ಮೌಲ್ಯಗಳನ್ನು ಕಸಿ ಮಾಡಿಕೊಂಡ ರೀತಿ ಇವೆಲ್ಲ ಪ್ರಾಯಶಃ ವೇದೋಕ್ತ ಕಾಲದಲ್ಲಿ ಆಗಿ ಬಂದಿರಬೇಕು. ಅಥವಾ ದ್ರಾವಿಡರ ರೀತಿ, ನೀತಿ, ವಿಧಿ ವಿಧಾನಗಳನ್ನು ಎರವಲು ಪಡೆದಿರಲೂಬಹುದು. ಕಾಲಾನಂತರದಲ್ಲಿ ಆಗಮ, ಸ್ಮೃತಿಗಳ ಕಾಲಕ್ಕೆ ತನ್ನ ಮೂಲರೂಪಕ್ಕೆ ಆರ್ಯಸಂಸ್ಕೃತಿ ವಾಪಸ್ಸು ಹೋಗಿರಬಹುದು. ಇದೊಂದು ತರಹದ ಜಾಣತನವಾಗಿರಲೂ ಬಹುದು. ಸೋತವರ ಜೊತೆ ಕೂಡು ಬಾಳ್ವೆ ಮಾಡುತ್ತಾ ಕಾಲ, ಸಂದರ್ಭಗಳ ಹಿಡಿತ ದಿಂದ ಸಾವಧಾನವಾಗಿ ತನ್ನ ಹಳೆಯ ರೂಪದಲ್ಲೇ ಅದು ಪ್ರಕಟಗೊಂಡಿರಲೂ ಬಹುದು. ಏನೇ ಆಗಿರಲಿ, ಮುಂದಿನ ಯುಗಗಳಲ್ಲಿ ಆರ್ಯ ಧರ್ಮ ತನ್ನ ವೈದಿಕ ಧನಾತ್ಮಕ ಅಂಶಗಳಿಗೂ ತಿಲಾಂಜಲಿ ನೀಡಿ ನೇತ್ಯಾತ್ಮಕ ಚೌಕಟ್ಟಿನಲ್ಲಿ ಪ್ರತಿಷ್ಠಾಪನೆ ಗೊಂಡಿರುವುದಂತೂ ಪುರಾವೆ ಸಮೇತವೇ ನಿಷ್ಕರ್ಷಗೊಂಡ ಸತ್ಯ. ಯಾಕೆಂದರೆ ಇಂದಿಗೂ ಅದು ತನ್ನ ಯಜಮಾನಿಕೆಯನ್ನು ಕುತೂಹಲಕಾರಿಯಾಗಿಯೇ ಉಳಿಸಿಕೊಂಡಿದೆ. ಎಂಥಾ ಬಲಿಷ್ಠ ಪೆಟ್ಟನ್ನೂ ಸಹಿಸಿಕೊಳ್ಳಬಲ್ಲ ಶಕ್ತಿ ಅದಕ್ಕಿರುವುದರಿಂದೇ ತನ್ನ ಮಾಯಾ ರೂಪವನ್ನು ಧರಿಸಿಕೊಂಡೇ ಬೇರೆ ಬೇರೆ ರೂಪಗಳಲ್ಲಿ ಅದು ಮುಂದುವರಿಯುತ್ತಲೇ ಇದೆ.

ಪುರಾತನ ಕಾಲದಲ್ಲಿ, ಅಂದರೆ ವೇದಗಳು ಮತ್ತು ಅದಕ್ಕೂ ಮೊದಲಿನ ಕಾಲದಲ್ಲಿ, ಭಾರತೀಯ ಮಹಿಳೆ ಪುರುಷನಷ್ಟೇ ಸ್ಥಾನಮಾನಗಳನ್ನು ಬದುಕಿನ ಎಲ್ಲ ರಂಗಗಳಲ್ಲಿಯೂ ಪಡೆದಿದ್ದಳು. ಹೆಣ್ಣು ಹುಟ್ಟಿದರೆ ಆಗ ಯಾರೂ ಮೂಗು ಮುರಿಯು ತ್ತಿರಲಿಲ್ಲ. ಹೆಣ್ಣು ಮಗುವಿಗೂ ಗಂಡು ಮಗುವಿಗೆ ಸಿಗುವಷ್ಟು ಸ್ವಾಗತ ಸಿಗುತ್ತಿತ್ತು. ಋಗ್ವೇದ ಕಾಲದ ಸ್ತ್ರೀ ಶಕ್ತಿಶಾಲಿನಿಯಾಗಿದ್ದಳು. ಆಕೆಯನ್ನು ನೋಡಿದರೆ ಗೌರವದ ಭಾವನೆ ಮೂಡುತ್ತದೆ. ಬಹುಬೇಗ ಅಂದರೆ, ಮಹಾಭಾರತದ ಕಾಲದ ಹೊತ್ತಿಗೆ ಆಕೆಯ ಅಧೋಗತಿ ಮೊದಲಿಟ್ಟಿತು. ಸೀತೆಯಾದರೇನು, ದ್ರೌಪದಿಯಾದರೇನು ಎಲ್ಲರೂ ವ್ಯವಸ್ಥೆಯ ಚಕ್ರಕ್ಕೆ ಸಿಲುಕಿ ನುಚ್ಚು ನೂರಾಗುತ್ತಾರೆ. ನಾರಿಯರು ಅನುಭವಿಸಿದ ಅಧೋಗತಿ ಸತತವಾಗಿ ಮುಂದುವರಿದುಕೊಂಡು ಹೋಯಿತು. ಅವಳನ್ನು ಜೂಜಿನಲ್ಲಿ ಪಣವಾಗಿ ಒಡ್ಡುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿತು, ನಳನ ಪರಂಪರೆಯನ್ನು ಪಾಂಡವರು ಮುಂದುವರಿಸಿ ಕೊಂಡು ಬಂದರು. ಸ್ವಾಭಿಮಾನಿಯಾಗಿದ್ದರೂ ದ್ರೌಪದಿ ಇದರ ಪರಿಣಾಮಗಳನ್ನು ಅನುಭವಿಸಬೇಕಾಗಿ ಬಂತು. ರಾಮಾಯಣ ಮಹಾಭಾರತಗಳ ಕಾಲದ ನಾರಿಗೆ ಹಿರಿಮೆ ಏನಾದರೂ ಸಂದಿದ್ದರೆ, ಅದು ಅವಳು ತನ್ನ ಗಂಡನಿಗೆ ನೆರಳಾಗಿದ್ದಳು ಎಂಬ ಕಾರಣಕ್ಕಾಗಿ. ರಾಮನ ನೆರಳಿನಂತೆ ಇದ್ದ ಕಾರಣದಿಂದಾಗಿಯೇ ಸೀತೆಗೆ ದೊಡ್ಡವಳೆಂಬ ಪಟ್ಟವನ್ನು ನೀಡಲಾಗಿದೆ. ತನ್ನ ಗಂಡನಾದ ಧೃತರಾಷ್ಟ್ರ ಕಾಣಲಾಗದೇ ಇದ್ದ ಜಗತ್ತಿನ ಸೌಂದರ್ಯವನ್ನು ತಾನೂ ನೋಡಬಾರದೆಂದು ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿದ್ದರಿಂದಲೇ ಗಾಂಧಾರಿ ಆದರಣೀಯಳಾಗಿದ್ದಾಳೆ. ಅನೇಕ ಮಂದಿ ಪ್ರೇಯಸಿಯರನ್ನು ಹೊಂದಿದ್ದ ತಮ್ಮ ಪತಿಗಳಿಗೆ ವಿರುದ್ಧವಾಗಿ ಶಕುಂತಲೆ ಮತ್ತು ದ್ರೌಪದಿ ಅವರುಗಳು ಎತ್ತಿದ್ದ ಪ್ರತಿಭಟನೆಯ ಧ್ವನಿ ತುಂಬ ದುರ್ಬಲವಾಗಿಯೇ ಉಳಿದು ಹೋಯಿತು.

ಯಾವ ಸ್ತ್ರೀಯೇ ಆಗಿರಲಿ, ಧರ್ಮಶಾಸ್ತ್ರಗಳ ಪ್ರಕಾರ ವಿದ್ಯೆಯ ಹಕ್ಕಿನಿಂದ ವಂಚಿತಳಾದಳು. ಪವಿತ್ರ ಗ್ರಂಥಗಳ ತಂಟೆಗೆ ಬರಬಾರದು, ಸ್ವಗೃಹದಲ್ಲೇ ಆದರೂ ಬಾಲಕಿಯಾಗಲೀ, ಕನ್ಯೆಯಾಗಲೀ, ವಯಸ್ಸಾದ ಹೆಂಗಸಾಗಲೀ ಸ್ವತಂತ್ರವಾಗಿ ಏನನ್ನೂ ಮಾಡಕೂಡದು. ಅವಳು ಜೀವನದ ವಿವಿಧ ಹಂತಗಳನ್ನು ಹಾದುಬಂದಂತೆಲ್ಲ ತಂದೆಯನ್ನು, ಗಂಡನನ್ನು ನಂತರ ಮಕ್ಕಳನ್ನು ಆಶ್ರಯಿಸಿ ಜೀವಿಸಬೇಕು ಎಂಬ ಕಟ್ಟು ಪಾಡುಗಳನ್ನು ಶಾಸ್ತ್ರದಲ್ಲಿ ವಿಧಿಸಿ, ಅದರಂತೆ ನಡೆಸಿಕೊಂಡು ಬರುತ್ತಿದ್ದಾರೆ. ಮುಂದುವರೆದು ಇಂದ್ರಿಯಗಳು ನಿಗ್ರಾಹಾತೀತವೂ ಜ್ಞಾನಿಗಳನ್ನು ಕೂಡಾ ವಿಹ್ವಲಗೊಳಿಸಬಲ್ಲ ಶಕ್ತಿಯನ್ನುಳ್ಳವೂ ಆಗಿರುವುದರಿಂದ ಪುರುಷನು ತಾಯಿಯಾಗಲಿ, ಸಹೋದರಿಯಾಗಲಿ, ಮಗಳಾಗಲಿ ಅವಳೊಂದಿಗೆ ಏಕಾಂತದಲ್ಲಿರಬಾರದು ಎನ್ನುವಂಥ ಕೀಳು ಮಟ್ಟಕ್ಕಿಳಿದು ಯೋಚಿಸಿದವನು ಮನು. ಮೇಲ್ಜಾತಿಯ ಸ್ತ್ರೀಯರಿಗೂ ಸಂಸ್ಕೃತ ಜ್ಞಾನ ನಿಷೇಧವಾಗಿತ್ತು. ಸಂಸ್ಕೃತ ನಾಟಕದಲ್ಲಿ ಬರುವ ಮಹಾರಾಣಿ ಅಥವಾ ರಾಜಕುಮಾರಿಗಳಂತಹ ಸ್ತ್ರೀ ಪಾತ್ರಗಳೂ ಕೂಡ ಪ್ರಾಕೃತ ಮತ್ತಿತರ ಅಪಭ್ರಂಶ ಭಾಷೆಯಲ್ಲಿ ಸಂಭಾಷಣೆಯನ್ನು ನಿರ್ವಹಿಸಬೇಕಾಗಿತ್ತು.

ಒಟ್ಟಾರೆ ಇಂಡಿಯಾದ ಈ ಸಾಂಸ್ಕೃತಿಕತೆಯಲ್ಲಿ ಮಹಿಳೆಯ ಸ್ಥಿತಿ ಹೀಗಿರುವಾಗ, ಈ ಸಂಸ್ಕೃತಿಯ ಭಾಗವಾಗಿರುವ ವಾಲ್ಮೀಕಿ ಸಮುದಾಯದ ಮಹಿಳೆಯ ಸ್ಥಿತಿಗತಿಯು ಸಹ ಇದಕ್ಕಿಂತ ಉತ್ತಮವಾಗಿದೆ ಎಂದು ಹೇಳಲು ಕಷ್ಟಸಾಧ್ಯವಾದುದು. ಆದರೆ ವಾಲ್ಮೀಕಿ ಸಮುದಾಯದ ಚರಿತ್ರೆಯನ್ನು ಗಮನಿಸಿದಾಗ ಇವರು ಕರ್ನಾಟಕದ ಅತಿ ಪ್ರಾಚೀನ ಸಮುದಾಯ ಎಂಬುದು ತಿಳಿಯುತ್ತದೆ. ಬೇಡ ಸಮುದಾಯ ತನ್ನ ರಾಜಕೀಯ ಹಾಗೂ ಸಾಂಸ್ಕೃತಿಕ ಚರಿತ್ರೆಯಲ್ಲಿ ನಿರಂತರವಾಗಿ ಹೋರಾಡುತ್ತಲೇ ಬಂದಿದೆ.

ಬೇಡ ಸಮುದಾಯದ ಇತಿಹಾಸವನ್ನು ಕರ್ನಾಟಕ ಪ್ರಾಗೈತಿಹಾಸಿಕ ಕಾಲದಿಂದಲೂ ಗಮನಿಸಬಹುದು. ಕರ್ನಾಟಕದ ಅತಿ ಪ್ರಾಚೀನ ಸಮುದಾಯವಾದ ಬೇಡ ಸಮುದಾಯ ಇಲ್ಲಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಮಾನವ ಸಮಾಜದಲ್ಲಿ ಬೇಟೆಗಾರಿಕೆ ಒಂದು ಪ್ರಾಚೀನ ಪ್ರವೃತ್ತಿಯಾಗಿದ್ದು, ಆ ನಂತರವೇ ಬೇರೆ ಕಸಬುಗಳು ಜೀವನೋಪಾಯ ಮಾರ್ಗಗಳಾಗಿ ರೂಪುಗೊಂಡವು ಎಂಬುದು ಪ್ರಾಗೈತಿಹಾಸಕಾರರ ನಿಲುವು. ಬೇಟೆಗಾರ ಸಮುದಾಯವಾಗಿ ಮುಂದುವರಿದ ಬೇಡರು ತಮ್ಮ ಆಯುಧ ಬಳಕೆಯ ಕಲೆ ಹಾಗೂ ಸಾಹಸಿ ಜೀವನದ ಅಂಗವಾಗಿ ಯುದ್ಧ ಕಲೆಯನ್ನು ಅಳವಡಿಸಿಕೊಂಡರು. ಮಿಕ ಹಿಡಿಯಲು ಬಳಸುವ ನಾನಾ ತಂತ್ರಗಳೇ ಮುಂದೆ ಸಮರವ್ಯೆಹ ರಚನೆಯ ತಳಹದಿಗಳಾದವು. ಬೇಟೆಯ ಜೊತೆ ಯೋಧತ್ವವನ್ನು ಬೆಳೆಸಿಕೊಂಡ ಬೇಡ ಸಮುದಾಯವು ನಂತರದಲ್ಲಿ ರಾಜ್ಯ ವಿಸ್ತರಣೆ ಹಾಗೂ ನಿರ್ವಹಣೆಯಲ್ಲಿ ಸಾಮ್ರಾಜ್ಯಗಳಿಗೆ ಸೇವೆ ಸಲ್ಲಿಸಿತು.

ಕರ್ನಾಟಕದಲ್ಲಿ ಹಲವು ಅರಸು ಮನೆತನಗಳು ಬೇಡ ಜಾತಿ ಮೂಲದಿಂದ ರೂಪು ಗೊಂಡವಾಗಿದ್ದವು. ಕಂಪಿಲದುರ್ಗ, ಉಚ್ಚಂಗಿದುರ್ಗ, ಸುರಪುರ, ಚಿತ್ರದುರ್ಗ, ಹರಪನಹಳ್ಳಿ, ನಿಡಗಲ್ಲು, ಇಕ್ಕೇರಿ ಮುಂತಾದ ಹಲವಾರು ಪಾಳೆಯಪಟ್ಟುಗಳನ್ನು ಆಳ್ವಿಕೆ ಮಾಡಿದ ಬೇಡ ಕುಲದ ರಾಜರು ಪಾಳೆಯಗಾರ ಎಂದರೆ ಬೇಡರ ಕುಲದವನು ಎಂಬ ಅನ್ವರ್ಥನಾಮ ಉಂಟಾಗುವ ಹಾಗೆ ಆಳ್ವಿಕೆ ನಡೆಸಿದರು. ಪಾಳೆಯಗಾರರು ಸಾಮಾನ್ಯವಾಗಿ ಪ್ರಾಂತೀಯ ಸಂಸ್ಥಾನಗಳ ನಿರ್ಮಾಪಕರು. ಕರ್ನಾಟಕದಲ್ಲಿ ಹದಿನೈದು, ಹದಿನಾರು, ಹದಿನೇಳನೇ ಶತಮಾನದಲ್ಲಿ ಪಾಳೆಯಗಾರರು ಹೆಚ್ಚು ಸಂಖ್ಯೆಯಲ್ಲಿದ್ದರು. ಪಾಳೆಯ ಎಂಬುದು ಆಗಿನ ಸಾಮ್ರಾಜ್ಯಾಡಳಿತದ ಒಂದು ಘಟಕವಾಗಿ ರೂಪುಗೊಂಡಿತ್ತು. ಪಾಳೆಯಗಾರರ ವಿಶೇಷವೆಂದರೆ ಅವರು ಭಾಗವಾಗಿದ್ದ ಸಾಮ್ರಾಜ್ಯದಲ್ಲಿ ತಾವೂ ಒಬ್ಬ ರಾಜನಂತೆಯೇ ಒಡ್ಡೋಲಗ ನಡೆಸುತ್ತಿದ್ದರು. ತಮ್ಮ ಸ್ವಂತ ಹೆಸರಿನಲ್ಲಿ ದಾನ ದತ್ತಿ ನೀಡುವ ಸ್ವಾತಂತ್ರ್ಯ ಹೊಂದಿ ದ್ದರು.  ಸಂದರ್ಭದ ಅನುಕೂಲ ದೊರೆತರೆ ತಾವೂ ಕೂಡ ಚಕ್ರವರ್ತಿಯಾಗುವ ಹಂಬಲ ಹೊಂದಿದ್ದರು. ಈ ಅಂಶ ಒಂದು ಮುಖ್ಯ ಸಾಮಾಜಿಕ ಮನೋಭಾವದ ನಿರೂಪಣೆಗೆ ಕಾರಣವಾಗಿತ್ತು. ತಾನು ಚಕ್ರವರ್ತಿಯ ಅಧೀನ ಅಧಿಕಾರಿ ಎಂಬ ಧೋರಣೆಯಲ್ಲಿ ಆಳ್ವಿಕೆ ಮಾಡುವ ಮಂಡಲಾಧಿಪತಿಗಳಿಗೂ, ಪಾಳೆಯಗಾರರಿಗೂ ಇದ್ದ ಮನೋಭಾವ ವ್ಯತ್ಯಾಸ ಬಹಳ ಗಮನಾರ್ಹ. ತಾನೂ ಒಬ್ಬ ರಾಜ, ಆದರೆ ಸಾಕಷ್ಟು ಬಲ ಹಾಗೂ ಸಂಪನ್ಮೂಲ ದೊರೆತೊಡನೆ ತಾನೂ ಚಕ್ರವರ್ತಿಯಾಗಬೇಕು ಎಂಬ ಹಂಬಲದಲ್ಲಿ ಪ್ರತಿ ಪಾಳೆಯಗಾರನೂ ಆಶಿಸುತ್ತಿದ್ದ. ಈ ಧೋರಣೆಯ ಹಿನ್ನೆಲೆಯಲ್ಲಿ ತನ್ನ ಆಡಳಿತದ ಪ್ರಾಂತ್ಯವನ್ನು ಒಂದು ಅಭಿವೃದ್ದಿಶೀಲ ಪ್ರದೇಶವನ್ನಾಗಿ ಮಾಡಲು ಅದರಿಂದ ಜನಾನುರಾಗವನ್ನು ಹೊಂದಲು ಯತ್ನಿಸುತ್ತಿದ್ದ. ಸಾಮ್ರಾಜ್ಯ ನಿರ್ವಹಣೆಯ ಅಂಶದಲ್ಲಿ ಯಾವ ಚಕ್ರಾಧಿಪತಿಯೂ ಒಂದು ಪಾಳೆಯಪಟ್ಟನ್ನು ನಿರ್ಮಿಸಿ ಅದನ್ನು ಒಂದು ಪ್ರಾಂತ್ಯ ಎಂದು ಮಾಡಿ ಅದಕ್ಕೆ ಪಾಳೆಯಗಾರರನ್ನು ನೇಮಿಸುತ್ತಿರಲಿಲ್ಲ. ಬದಲಿಗೆ ತನ್ನ ಪರಿಶ್ರಮ ಹಾಗೂ ಸ್ವಂತ ಬಲದಿಂದ ರೂಪುಗೊಂಡ ಪಾಳೆಯಗಾರನಿಗೆ ಅಧಿಕೃತವಾಗಿ ಮಾನ್ಯತೆ ನೀಡಿ ಅದಕ್ಕೆ ಪಡೆಯಬೇಕಾದ ಕಪ್ಪವನ್ನು ಪಡೆಯುತ್ತಿದ್ದ. ಪಾಳೆಯಗಾರರ ರಾಜಕೀಯಾರ್ಥಿಕತೆ ಅಧ್ಯಯನ ಮಾಡುವಲ್ಲಿ ಈ ಸ್ವಂತ ಪ್ರಾಂತೀಯ ಪ್ರತಿಪತ್ತಿಯನ್ನು ನಾವು ಬಹಳ ಮುಖ್ಯವಾದ ಆಯಾಮವಾಗಿ ಗುರುತಿಸಬೇಕು.

ಈ ಸ್ವಂತ ಪ್ರತಿಪತ್ತಿಯೇ ಪಾಳೆಯಗಾರನ ಸ್ವತಂತ್ರ ಮನೋಭಾವವನ್ನು ಪೋಷಿಸುತ್ತದೆ. ಅವನು ಬೇಕಾದರೆ ತನ್ನ ನಿಷ್ಠೆಯನ್ನು ಬದಲಿಸಬಲ್ಲ. ಹಾಗಾಗಿ ಚಕ್ರವರ್ತಿಯೂ ಅವನನ್ನು ಗೌರವದಿಂದಲೇ ನಡೆಸಿಕೊಳ್ಳಬೇಕು. ಯುದ್ಧಗಳಲ್ಲಿ ಗೆದ್ದಾಗ ಮತ್ತಷ್ಟು ಪ್ರಾಂತ್ಯಗಳ ಮೇಲಿನ ಅಧಿಕಾರವನ್ನು ಮಾನ್ಯ ಮಾಡಬೇಕು. ಹೀಗಾಗಿ ಶೌರ್ಯ ಪರಾಕ್ರಮ ಎಂಬುದು ಒಂದು ಸಾಮಾಜಿಕ ಮೌಲ್ಯ ಎಂಬಂತೆ ಬೇಡರು ಬೆಳೆಸಿಕೊಂಡರು. ಸ್ಥಳೀಯ ಕೃಷಿ ವಿಸ್ತರಣೆ, ಕೆರೆ, ಕಟ್ಟೆ ನಿರ್ಮಾಣ, ದೇವಸ್ಥಾನ ದೇಣಿಗೆ, ಕಲೆ ಸಾಹಿತ್ಯದ ಪೋಷಣೆಗೆ ಬೇಡ ಕುಲದ ಅರಸರು ಬೇಕಾದಷ್ಟು ಕೊಡುಗೆ ನೀಡಿದ್ದಾರೆ. ಚಿತ್ರದುರ್ಗದ ಪಾಳೆಯಪಟ್ಟಿನ ಉದಾಹರಣೆ ಮಾತ್ರವಲ್ಲ, ಉಮ್ಮತ್ತೂರು, ತೆರಕಣಾಂಬಿ, ಹದಿನಾಡು ಮುಂತಾದ ಪಾಳೆಯಗಾರರ ಆಳ್ವಿಕೆಯನ್ನು ನೋಡಿದರೆ ತಿಳಿದುಬರುವ ಸಾಮಾನ್ಯ ಅಂಶವಿದು.

ಹೀಗೆ ಬೆಳೆದ ಪಾಳೆಯಪಟ್ಟುಗಳಲ್ಲಿ ಬೇಡ ಅರಸನಿರಲಿ ಅಥವಾ ಬೇರೆಯವರಿರಲಿ ಬೇಡ ಪಡೆಯಂತೂ ಖಾಯಂ. ರಣಪರಾಕ್ರಮವನ್ನೇ ನಂಬಿ ಬದುಕಿದ ಸಮುದಾಯ, ಸಾಮ್ರಾಜ್ಯಗಳ ಏಳುಬೀಳಿನಲ್ಲಿ ಪಾಲ್ಗೊಳ್ಳುತ್ತಾ ಕಡೆಗೆ ಬ್ರಿಟಿಷ್ ಆಳ್ವಿಕೆ ಶುರುವಾದ ಮೇಲೆ ದನೀಯ ಬಡತನಕ್ಕೆ ಗುರಿಯಾಯಿತು. ಸ್ಥಳೀಯ ರಾಜರಿಗೆ ಸೈನ್ಯ ಇಟ್ಟು ಕೊಳ್ಳುವ ಹಕ್ಕು ತೆಗೆದು ಹಾಕಿದ ಸಹಾಯಕ ಸೈನ್ಯ ಪದ್ಧತಿ, ಕಂದಾಚಾರದ ಪಡೆಗಳ ಅವನತಿಗೆ ಕಾರಣವಾಯಿತು. ಬ್ರಿಟಿಷರು ತಂದ ಅರಣ್ಯ ಕಾಯ್ದೆಗಳು ಬೇಡ ಸಮುದಾಯದ ಮುಖ್ಯ ಜೀವನಾಧಾರವಾಗಿದ್ದ ಅರಣ್ಯದಿಂದಲೂ ಹೊರದೂಡಿದವು. ಪಾಳೆಯಗಾರರು ಬೇಡ ಸಮುದಾಯದ ಸೈನಿಕ ಸೇವೆಗಾಗಿ ಒದಗಿಸಿದ್ದ ಇನಾಮ್ತಿ ಭೂಮಿಯೂ ಬಹಳ ಕಡೆಗಳಲ್ಲಿ ಜಮೀನ್ದಾರಿ ಪದ್ಧತಿಯ ಕಾರಣದಿಂದ ಕೈತಪ್ಪಿ ಹೋಯಿತು. ಸೈನ್ಯದ ಸೇವೆಗಾಗಿ ಬರುತ್ತಿದ್ದ ಉಂಬಳಿಯೂ ನಿಂತು ಹೋಯಿತು. ಈ ಹಿನ್ನೆಲೆಯಲ್ಲಿ ಬೇಡ ಸಮುದಾಯ ವಸಾಹತು ಶಾಹಿ ಆಳ್ವಿಕೆಯಲ್ಲಿ ಬಂಡುಕೋರ ಪಂಗಡವಾಗಿ ರೂಪುಗೊಂಡಿತು. ಹಲವಾರು ದಂಗೆ ಬಂಡಾಯಗಳನ್ನು ನಡೆಸಿದ ಬೇಡ ಸಮುದಾಯ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಯಿತು. ನಿಶ್ಯಸ್ತ್ರೀಕರಣ ಕಾಯ್ದೆಯಂತಹ ಕಾನೂನುಗಳು ಆಯುಧ ಹೊಂದಿರುವ ಹಕ್ಕನ್ನು ಕಸಿದುಕೊಂಡು ಬೇಡರನ್ನು ಪೂರ್ಣ ಬಡವರನ್ನಾಗಿಸಿದವು. ಈಸೂರು ಬೇಡರು ತಮ್ಮ ಆಯುಧ ಹೊಂದಿರುವ ಹಕ್ಕು ಪ್ರತಿಪಾದಿಸುವ ದಿಸೆಯಲ್ಲಿ ಸ್ವಾಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದರು; ಹುತಾತ್ಮರಾದರು. ಬದಲಾದ ರಾಜಕೀಯ ಸಾಮಾಜಿಕ ಸನ್ನಿವೇಶಗಳು ಹಾಗೂ ಈ ಆಧುನಿಕ ಸಮಾಜದಲ್ಲಿ ಬೇಡ ಸಮುದಾಯವನ್ನು ಒಂದು ಬಡ ಹಿಂದುಳಿದ ಪಂಗಡವಾಗುವಂತೆ ಮಾಡಿವೆ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ ಮೀಸಲಾತಿ ಸೌಲಭ್ಯ ಹಾಗೂ ಕರ್ನಾಟಕದಲ್ಲಿ ಎಲ್.ಜಿ. ಹಾವನೂರು ಮಂಡಿಸಿ, ದೇವರಾಜ ಅರಸರು ಜಾರಿಗೆ ತಂದ ಹಿಂದುಳಿದ ವರ್ಗಗಳ ಮೀಸಲಾತಿ ನೀತಿಯ ಹಿನ್ನೆಲೆಯಲ್ಲಿ ಸಮುದಾಯ ಈಗ ಚೇತರಿಸಿ ಕೊಳ್ಳುವ ಹಂತದಲ್ಲಿ ಬಂದು ನಿಂತಿದೆ. ಲಿಂಗಾಯತ, ಒಕ್ಕಲಿಗ, ಕುರುಬರ ನಂತರದ ಸ್ಥಾನದ ಸಂಖ್ಯಾ ಬಲವನ್ನು ಹೊಂದಿರುವ ಬೇಡ ಸಮುದಾಯಕ್ಕೆ ರಾಜ್ಯದಲ್ಲಿ ಪ್ರಬಲವಾದ ನಾಯಕತ್ವ ರೂಪುಗೊಂಡಿಲ್ಲ. ನಾಯಕರು ಇದ್ದಾರಾದರೂ ಅವರಿಗೆ ಸಾಕಷ್ಟು ರಾಜಕೀಯ ಪ್ರಾಮುಖ್ಯತೆ ಸಿಕ್ಕಿಲ್ಲ. ಉಪಪಂಗಡಗಳ ಸಂಕುಚಿತ ಮನೋಭಾವ, ಪ್ರಾದೇಶಿಕ ಭಿನ್ನತೆ ಇವು ಬೇಡ ಸಮುದಾಯದ ಸಮಗ್ರ ಐಕ್ಯತೆಗೆ ಹಾಗೂ ಆ ಮುಖಾಂತರ ವೇಗದ ಮುನ್ನಡೆಗೆ ಅಡ್ಡಗಾಲು ಹಾಕುತ್ತಿವೆ. ಮುಖ್ಯವಾಗಿ ಬೇಡರಲ್ಲಿ ಊರುಬೇಡರು, ಮ್ಯಾಸಬೇಡರು, ದುರುಗ ಮುರುಗಿಯವರು, ಕುರುಮಾಮರು, ಮೊಂಡ ಬೇಡರು, ವಾಲ್ಮೀಕಿ ತಳವಾರ, ಪರಿವಾರ, ವಾಲ್ಮೀಕಿ ಮಕ್ಕಳು, ಪೆದ್ದರು, ಕಂಪಣ ಬೇಡರು ಹೀಗೆ ಹಲವಾರು ಉಪಪಂಗಡಗಳುಂಟು.

ವಾಲ್ಮೀಕಿ ಸಮುದಾಯದ ಚರಿತ್ರೆಯನ್ನು ಗಮನಿಸಿದರೆ, ಇಡೀ ಸಮುದಾಯವು ತನ್ನ ಚರಿತ್ರೆಯಲ್ಲಿ ಹಲವಾರು ಏರಿಳಿತಗಳನ್ನು ಕಂಡಿದೆ. ಸಮುದಾಯದ ಮಹಿಳೆಯರೂ ಸಹ ಹಲವಾರು ಏಳಿರಿತಗಳನ್ನು ಕಂಡಿದ್ದಾರೆ. ವಾಲ್ಮೀಕಿ ಸಮುದಾಯದ ಮೂಲಪುರುಷ ಕಿರಾತರ ಯಜಮಾನನಾಗಿದ್ದನೆಂದು ಜನಪದರಲ್ಲಿ ನಂಬಿಕೆಯಿದೆ. ಇದಕ್ಕೆ ಪುರಾಣದಲ್ಲಿಯೂ ವಾಲ್ಮೀಕಿ ಬೇಡರ ಸಂಸ್ಕೃತಿಯ ಮೂಲದಿಂದ ಬಂದವನೆಂಬ ಆಧಾರಗಳು ಪುಷ್ಠಿ ನೀಡುತ್ತವೆ. ವಾಲ್ಮೀಕಿಯ ಮೂಲ ಹೆಸರು ಕಾಮಕೇತುವೆಂದೂ, ಈತನಿಗೆ ಏಳು ಜನ ಗಂಡುಮಕ್ಕಳಿದ್ದರೆಂದೂ ಐತಿಹ್ಯವಿದೆ. ಇದರ ಪ್ರಕಾರ ಕಾಮಕೇತುವು ತನ್ನ ಏಳು ಮಕ್ಕಳ ನೇತೃತ್ವದಲ್ಲಿ  ಏಳು ಪಡೆಗಳನ್ನು ರಚಿಸಿ ಕಳ್ಳತನ ದರೋಡೆ ನಡೆಸುತ್ತಿದ್ದ. ಮೂಲತಃ ಬೇಟೆಗಾರರಾಗಿದ್ದ ಇವರು ಬೇಟೆ ಸಿಗದಿದ್ದಾಗ ಕಳ್ಳತನ, ದರೋಡೆ ಮೊದಲಾದ ಮಾರ್ಗಗಳಿಂದ ಬದುಕಿಗೆ ಬೇಕಾದ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದರು.

ಬರುಬರುತ್ತಾ ಇದು ಅತಿಯಾಗಿ ಕೊಲೆ ಸುಲಿಗೆಗಳೇ ಇವರ ನಿತ್ಯದ ಕಾಯಕವಾಗಿ ಬಿಟ್ಟಿತು. ಇದನ್ನು ತಿಳಿದ ಶಿವನು ಸನ್ಯಾಸಿಯ ವೇಷದಲ್ಲಿ ಬರುತ್ತಿರುವಾಗ ವಾಲ್ಮೀಕಿಯು ಈ ಸನ್ಯಾಸಿಯನ್ನೇ ಹೆದರಿಸಿ ದರೋಡೆ ಮಾಡುವ ಭೀತಿ ಹುಟ್ಟಿಸಿದನಂತೆ. ಸನ್ಯಾಸಿ ಹೆದರದೆ ‘ಅಯ್ಯ ನನ್ನಲ್ಲಿರುವ ಆಹಾರ ಧಾನ್ಯಾದಿಗಳನ್ನೆಲ್ಲಾ ಕೊಟ್ಟು ಬಿಡುತ್ತೇನೆ. ಆದರೆ ನನ್ನ ಪ್ರಶ್ನೆಗೆ ಉತ್ತರ ಹೇಳು’ ಎಂದನಂತೆ. ಇವನು ಒಪ್ಪಿದಾಗ ಸನ್ಯಾಸಿ ‘‘ಅಯ್ಯ, ನೀನು ಹೀಗೆ ಕೊಲೆ, ದರೋಡೆ ಮಾಡಿ ನಿನ್ನ ಹೆಂಡತಿ ಮಕ್ಕಳನ್ನು ಪೊರೆಯುತ್ತೀಯಲ್ಲಾ, ಈ ಕೆಟ್ಟ ಕೆಲಸಗಳಿಂದ ಬರುವ ಪಾಪದ ಭಾರವನ್ನು ನಿನ್ನ ಹೆಂಡತಿ ಮಕ್ಕಳು ಹೊರತ್ತಾರಾ?’ ಎಂದು ಕೇಳಿದನಂತೆ. ಅದಕ್ಕೆ ವಾಲ್ಮೀಕಿಯು ‘ಏಕೆ ಹೊರುವುದಿಲ್ಲ ದುಡಿದು ಹಾಕುವವನು ನಾನು’ ಎಂದು ಹೇಳಿದನಂತೆ. ಸನ್ಯಾಸಿ ಗಂಭೀರವಾಗಿ ಮುಗುಳ್ನಗುತ್ತಾ ‘ಆಯಿತು. ನೋಡು, ಇಲ್ಲಿ ಒಂದು ಗೆರೆಯನ್ನು ಎಳೆಯುತ್ತೇನೆ’ ಎಂದು ಗೆರೆ ಎಳೆದು ನಂತರ ‘ನೀನು ಹೋಗಿ ನಿನ್ನ ಹೆಂಡತಿ ಮಕ್ಕಳನ್ನು ಈ ಬಗ್ಗೆ ವಿಚಾರಿಸಿಕೊಂಡು ಬಾ, ಅಲ್ಲಿಯವರೆಗೂ ನಾನು ಈ ಗೆರೆ ದಾಟಿ ಕಾಲಿಡುವುದಿಲ್ಲ’ ಎಂದು ಕಳಿಸಿದನಂತೆ. ಇವನು ಓಡಿ ಹೋಗಿ ಮನೆಯಲ್ಲಿದ್ದ ಹೆಂಡತಿ ಮಕ್ಕಳನ್ನು ವಿಚಾರಿಸಿದಾಗ ಅವರೆಲ್ಲಾ ‘ನೀನು ಏನೇನು ಪಾಪದ ಕೆಲಸ ಮಾಡುತ್ತೀಯೆಂದು ನಮಗೇನು ಗೊತ್ತು. ಅಲ್ಲದೆ ನಿನಗೆ ಬರುವ ಪಾಪವನ್ನು ನಾವು ಹೊರುವುದು ಹೇಗೆ ಸಾಧ್ಯ. ಅದನ್ನೆಲ್ಲಾ ನೀನೇ ಅನುಭವಿಸಬೇಕು’ ಎಂದರಂತೆ. ಈ ಪೌರಾಣಿಕ ಕಥೆಯನ್ನು ಗಮನಿಸಿದಾಗ, ವಾಲ್ಮೀಕಿಯ ಹೆಂಡತಿ ಸ್ವಾಭಿಮಾನಿಯಾಗಿದ್ದು, ತನ್ನ ಗಂಡನ ಎಲ್ಲಾ ಪಾಪ ಕೃತ್ಯಗಳಲ್ಲಿ ತಾನೂ ಪಾಲುದಾರಳಾಗಬೇಕು ಎಂದು ಕೇಳಿದ ಗಂಡನ ಮಾತಿನ ವಿರುದ್ಧ ಪ್ರತಿಭಟಿಸುವ ಧ್ವನಿಯನ್ನು ಹೊಂದಿರುವುದರ ಜೊತೆಗೆ ಸ್ವಾತಂತ್ರ್ಯವನ್ನು ಪಡೆದಿದ್ದಳು.

ಮನುಷ್ಯನು ಆಹಾರಾನ್ವೇಷಣೆಯ ಆರಂಭಿಕ ಹಂತದಲ್ಲಿ ಪ್ರಾಣಿ ವಲಯದ ಚಲನವಲನಗಳನ್ನು ಗಮನಿಸಿದ್ದಾನೆ. ಪ್ರಾಣಿಗಳು ತಮ್ಮ ಹೊಟ್ಟೆಪಾಡಿಗಾಗಿ ಸಸ್ಯ ಸಂಕುಲವನ್ನು ಕೆಲವು ಆಶ್ರಯಿಸಿದರೆ ಮತ್ತೆ ಕೆಲವು ಇತರೆ ಜೀವಿಗಳನ್ನು ತಿಂದು ಬದುಕುತ್ತಿದ್ದುದ್ದು ಮನುಷ್ಯನನ್ನು ಪ್ರಭಾವಿಸಿದೆ. ಈ ಆರಂಭಿಕ ಹಂತದಲ್ಲಿ ಮಹಿಳೆಯು ತನಗಾಗಿ ಹಾಗೂ ತನ್ನ ಮಕ್ಕಳಿಗಾಗಿ ಆಹಾರ ಸಂಗ್ರಹಿಸಲು ತಾನು ಮುಂದಾಗಿದ್ದಾಳೆ. ಸಸ್ಯಾಹಾರದ ಹಂತದಿಂದ ಮಾಂಸಾಹಾರಕ್ಕೆ ಪರಿವರ್ತನೆಯಾಗಲು ಕಾರಣವಾದ ಹಿನ್ನೆಲೆಗಳನ್ನು ಮಹಿಳೆ ಗ್ರಹಿಸಿದ್ದಾಳೆ. ಕಾಡಿನ ಹಂತದಲ್ಲಿ ಗೆಡ್ಡೆ-ಗೆಣಸುಗಳ ಸಂಗ್ರಹಣೆ ಮಾಡವಾಗ ಆ ಆಹಾರದಲ್ಲಿನ ಆರೋಗ್ಯ, ಔಷಧೀಯ ಗುಣ, ಪೂರಕ-ಮಾರಕಗಳ ಜ್ಞಾನ ಪರಿಣತಿಯನ್ನು ಮೂಲತಃ ಮಹಿಳೆ ಹೊಂದಿದ್ದಳು. ಸಸ್ಯ ಸಾಮಗ್ರಿಗಳನ್ನು ಯಾವ ಹದದಲ್ಲಿ ಅಡಿಗೆ ಮಾಡಬೇಕೆಂಬ ವಿಜ್ಞಾನವನ್ನು ಮಹಿಳೆ ರೂಪಿಸಿಕೊಂಡಿದ್ದಳು. ನಂತರ ಮಾಂಸಾಹಾರಿ ಪ್ರಾಣಿಗಳು ಯಾವ ಅಧೀನ ಪ್ರಾಣಿಗಳನ್ನು ತಿನ್ನುತ್ತವೆ. ಹಾಗೆ ತಿನ್ನಲು ಹಸಿವೆಯೊಂದೇ ಕಾರಣವೇ ಅಥವಾ ಆರೋಗ್ಯ ವರ್ಧನೆ ಇಲ್ಲವೇ ಅನಾರೋಗ್ಯದಿಂದ ವಿಮುಕ್ತಿ ಇತ್ಯಾದಿ ಕಾರಣಗಳಿವೆ. ಯಾವ ಅಧೀನ ಜೀವ ಸಂಕುಲವನ್ನು ಕೊಲ್ಲುತ್ತವೆ ಎಂಬುದನ್ನು ಅಧ್ಯಯನ ಮಾಡಿದ್ದಾಳೆ. ಬಲಿಷ್ಠ ಪ್ರಾಣಿಯು ಇತರೆ ಜೀವ ಜಾಲವನ್ನು ಏಕೆ ನಿಯಂತ್ರಿಸುತ್ತದೆ? ಇದರಲ್ಲಿ ಶತ್ರುತ್ವದ ಜಾಡುಗಳಿವೆಯೇ ಎಂಬಿತ್ಯಾದಿ ಸೂಕ್ಷ್ಮಾತಿಸೂಕ್ಷ್ಮಗಳನ್ನು ಮಹಿಳೆ ಸಂಶೋಧಿಸಿದ್ದಾಳೆ. ಇಂತಹ ಆರಂಭಿಕ ಹಂತಗಳಿಂದ ಮಾನವ ವಿಕಾಸದ ಎಲ್ಲ ವಲಯಗಳಲ್ಲೂ ಬೇಡತಿಯರು ಅನುಭವಿಗಳಾಗಿದ್ದಾರೆ.

ಸಾಂಸ್ಕೃತಿಕ ವಿಕಾಸದ ಎಲ್ಲ ಹಂತಗಳ ಮಾದರಿಗಳು ಬೇಡತಿಯಲ್ಲಿ ಇಂದಿಗೂ ನೆಲೆಯೂರಿರುವುದು ಕಂಡುಬರುತ್ತದೆ.

ಮನುಷ್ಯ ಪ್ರಾಣಿ ಹಂತದಿಂದ ಬೇರ್ಪಟ್ಟು ಸಮಾಜವನ್ನು ರೂಪಿಸಿಕೊಂಡ. ಆಗ ಸಂಬಂಧಗಳು ಏರ್ಪಟ್ಟವು. ಇಂಥ ಸಂಬಂಧಗಳು ಮೊದಲಿಗೆ ಮಾತೃ ಮುಖೇನ ರೂಪಿತವಾಗಿ ಗುರುತಿಸಲ್ಪಟ್ಟವು. ಆಗ ಪುರುಷನು ಸಂತಾನ ವೃದ್ದಿಗೆ ಸಹಕರಿಸುತ್ತಿದ್ದನೆ. ಹೊರತು ಸಾಮಾಜಿಕ ಹೊಣೆಗಾರಿಕೆಗೆ ಬದ್ಧನಾಗಿರಲಿಲ್ಲ. ಮಕ್ಕಳಿಗೆ ತಾಯಿಯ ಸಂಬಂಧಿಕರ ಪರಿಚಯವಿರುತ್ತಿತ್ತೇ ಹೊರತು ಜನ್ಮದಾತನ ಅಧಿಕೃತತೆಗೆ ಬದ್ಧವಾಗಿರಲಿಲ್ಲ. ಆಗ ಸಂತತಿಯ ರಕ್ಷಣೆಯನ್ನು ಪೋಷಣೆಯನ್ನು ಮಾಡುವ ಹೊಣೆಗಾರಿಕೆ ತಾಯಿಯ ಸಹೋದರರಿಗೆ ಇರುತ್ತಿತ್ತು. ಈ ಸಾಮಾಜಿಕ ಕಾರಣಕ್ಕಾಗಿ ಸೋದರ ಮಾವನ ವಾರಸುದಾರರಾಗಿ ಗಂಡು ಮಕ್ಕಳು ಬೆಳೆಯುತ್ತಿದ್ದರು. ಇಂದಿಗೂ ಸೋದರ ಮಾವನ ಹಕ್ಕು-ಬಾಧ್ಯತೆಗಳು ಬೇಡರ ಆಚರಣೆಗಳಲ್ಲಿವೆ. ನಾಗರೀಕತೆಯ ಹಂತದಲ್ಲಿ ಸ್ತ್ರೀಯರಿಗೆ ಸೋದರ ಮಾವ ಅಥವಾ ಆತನ ಸಂತತಿಯು ವೈವಾಹಿಕ ಭದ್ರತೆಯನ್ನು ನೀಡತೊಡಗಿದರು. ಆಗ ಬುಡಕಟ್ಟಿನ ಒಳಗೆ ರಕ್ತಸಂಬಂಧದಲ್ಲಿ ವಿವಾಹ ಅಥವಾ ಕೂಡಿಕೆಗಳು ಆಗುತ್ತಿದ್ದವು. ಇಂಥ ಪದ್ಧತಿಯಲ್ಲಿ ಪರಸ್ಪರ ಆಕರ್ಷಿತರಾದ ಜೋಡಿಗಳಿಗೆ ಹಿರಿಯರ ಅನುಮತಿ ದೊರೆಯುತ್ತಿತ್ತು. ಅಥವಾ ಹಿರಿಯರು ಸೂಚಿಸಿದ ತಮ್ಮದೇ ಸಂಬಂಧದ ನಡುವೆ ಮದುವೆಗಳು ಏರ್ಪಡುತ್ತಿದ್ದವು. ಕೆಲವೊಮ್ಮೆ ಬೇರೆ ಗುಂಪಿನ ವ್ಯಕ್ತಿಯು ಹೆಣ್ಣನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗುತ್ತಿದ್ದ. ಗುಂಪಿನಿಂದ ಹೊರಗೆ ಹೋದ ಹೆಣ್ಣಿಗೆ ಮತ್ತೆ ತನ್ನ ಮೂಲ ಗುಂಪಿನ ಜೊತೆಯ ಸಂಬಂಧಗಳು ಕಳೆದು ಹೋಗುತ್ತಿದ್ದವು.

ಮಾನವ ಸಮಾಜ ವೃದ್ದಿಯಾದಂತೆ ಶಿಷ್ಟ ಮತ್ತು ಬುಡಕಟ್ಟು ಸಂಸ್ಕೃತಿಗಳು ಭಿನ್ನವಾಗಿ ಆಹಾರ, ಆಚಾರ-ವಿಚಾರಗಳೂ ಪರಸ್ಪರ ಬೇರೆಯಾದುದು ಸತ್ಯ ಸಂಗತಿ. ಬೇಡರು ಬುಡಕಟ್ಟು ನೆಲೆಯಲ್ಲಿ ತಮ್ಮ ಅಧಿಕೃತತೆಯನ್ನು ಬೆಳೆಸಿಕೊಂಡು ಬಂದವರು. ಚರಿತ್ರೆಯ ಬೆಳವಣಿಗೆಯಲ್ಲಿ ಆಡಳಿತಾತ್ಮಕ ವಲಯಗಳಲ್ಲಿ ಬೇಡರ ಕೊಡುಗೆ ಗುರುತಿಸು ವಂಥದ್ದಾದರೂ ಬಹುಕಾಲದವರೆಗೆ ಇವರು ಹೋರಾಟದ ಹಾದಿಗೆ ಮಾತ್ರ ಬಳಕೆಯಾದುದು ಇವರ ವಿಪರ್ಯಾಸವೇ ಸರಿ. ಆರ್ಥಿಕ ಭದ್ರತೆ ಆಳುವವನ ವಶದಲ್ಲಿದ್ದು, ಎಲ್ಲ ಸಂಪನ್ಮೂಲಗಳ ಒಡೆತನ ಆಳುವವನದಾಗಿತ್ತು. ಈ ಕಾರಣಕ್ಕಾಗಿ ತನ್ನ ಪ್ರತಿಸ್ಪರ್ಧಿ ಶತ್ರು ಗುಂಪನ್ನು ಎದುರಿಸಲು ರಾಜನಾದವನು ತನ್ನ ರಾಜಶತ್ರುಗಳ ನಿವಾರಣೆಯ ಅಗತ್ಯಕ್ಕಾಗಿ ಯುದ್ಧ ಅನಿವಾರ್ಯವಾಗಿತ್ತು. ಇದರಲ್ಲಿ ಎರಡೂ ಕಡೆಯ ಹೋರಾಟಗಾರರು ಪರಸ್ಪರ ಮಾಡುವ ಯುದ್ಧವು ಶತ್ರು ಬೇಟೆಯೇ ಆಗಿರುತ್ತಿತ್ತು. ಈ ಹಿಂಸೆಯು ಮುಗಿದು ಗೆಲುವಿನೊಂದಿಗೆ ಸೋತ ರಾಜನ ಸಂಪತ್ತನ್ನು ಗೆದ್ದ ರಾಜನು ಕ್ರೋಡೀಕರಿಸುತ್ತಿದ್ದ. ಆದರೆ ಯುದ್ಧದಲ್ಲಿ ಸೋತ ಹಾಗೂ ಸತ್ತ ಸೈನಿಕರ ಸ್ಥಿತಿ-ಗತಿಗಳ ದುರಂತಗಳಿಗೆ ಮಿತಿ ಇಲ್ಲ. ಈ ಅನುಭವವು ಸೈನಿಕರಾಗಿದ್ದ ಬೇಡರ ಪಾಲಿಗೆ ನುಂಗಲಾರದ ತುತ್ತು ಆಗಿತ್ತು. ಸೈನಿಕರ ಕುಟುಂಬಗಳಿಗೆ ಯಾವ ಯಾವ ಸಾಮಾಜಿಕ ಭದ್ರತೆಗಳು ಇದ್ದುವೆಂಬ ಅಂಶಗಳು ಗೌಣವಾಗಿವೆ.

ಸೈನಿಕರಾಗುತ್ತಿದ್ದ ಬೇಡರಿಗೆ ಹೋರಾಟದ ಕೆಚ್ಚು ಹಂಬಲಗಳು ಪ್ರೇರೇಪಿತವಾಗುವಂತ ಧೈರ್ಯವು ವಂಶವಾಹಿಯಾಗಿ ಬಂದಂಥದ್ದಾಗಿತ್ತು. ಆದರೆ ಯುದ್ಧವು ಬಲಿ ತೆಗೆದು ಕೊಳ್ಳುತ್ತಿದ್ದ ಮರಣದ ಅನಿವಾರ್ಯತೆಯಿಂದಾಗಿ ಕುಟುಂಬದಲ್ಲಿ ವೈವಾಹಿಕ ಹಾಗೂ ಸಂತಾನದ ಅಧಿಕೃತತೆಯ ಭದ್ರತೆಗಳು ಕಳಚಿ ಹೋಗುತ್ತಿದ್ದವು. ಆಗ ಸೈನಿಕರ ಬೇಡ ಮಹಿಳೆಯರು ಬೀದಿ ಪಾಲಾಗುವ ಸಂಭವವು ಅಧಿಕವಾಗಿತ್ತು. ಇಂಥ ಸಂದರ್ಭಗಳಲ್ಲಿ ಗ್ರಾಮ ದೇವತೆಗಳ ಹೆಸರಿನಲ್ಲಿ ಧಾರ್ಮಿಕ ಸೇವಕಿಯರಾಗಿ ಕೆಲವರನ್ನು ಪರಿಗಣಿಸುತ್ತಿದ್ದರು. ದೈವ-ದೇವತೆಯ ಹೆಸರಿನ ಇವರ ಸೇವೆಯು ಸಮಾಜದ ಇತರೆ ಬಲಿಷ್ಟ ವರ್ಗಗಳ ಸ್ವಾರ್ಥದ ಧೋರಣೆಗೆ ಅಧೀನವಾಗುತ್ತಾ ಬೆಳೆಯಿತು. ಬೇಡ ಹೆಣ್ಣುಗಳ ದೈಹಿಕ ಶೋಷಣೆಗೆ ‘ದೇವದಾಸಿ’ ಅಥವಾ ‘ಬಸವಿ’ ಎಂಬಿತ್ಯಾದಿ ಹಣೆಪಟ್ಟಿಯನ್ನು ಕಟ್ಟಿ ಸಂಪ್ರದಾಯವನ್ನು ಬೆಳೆಸಿದರು. ವೈವಾಹಿಕ ಸಂಬಂಧಗಳಿಂದ ವಂಚಿತರಾಗುವಂಥ ಆಚರಣೆಗಳನ್ನು ಕೆಳಸಮುದಾಯಗಳಾದ ಬುಡಕಟ್ಟು ಅಥವಾ ಅಸ್ಪೃಶ್ಯ ಸಮಾಜಗಳಲ್ಲಿ ತಂದು ಊರೊಟ್ಟಿನ ಸಂಬಂಧ ಬೆಸೆಯುವ ಮೂಲಕ ಪ್ರಬಲ ಸಮುದಾಯಗಳ ಪುರುಷವರ್ಗವು ಶೋಷಿತ ಮಹಿಳೆಯರನ್ನು ಬಳಸಿಕೊಂಡಿದ್ದಾರೆ. ಇಂಥ ಸ್ತ್ರೀಯರ ಪಿತೃತ್ವದ ವಾರಸತ್ವವನ್ನು ಪರಿಗಣಿಸುವುದಿಲ್ಲ. ಏಕೆಂದರೆ ಈ ಸಂತಾನಕ್ಕೆ ಪಿತೃತ್ವದ ಅಧಿಕೃತತೆ ದಕ್ಕುವುದಿಲ್ಲ ಆದ್ದರಿಂದ ಅದು ಗೌಣವಾಗುತ್ತಾ ಬಂದಿತು. ಆಯಾ ಗ್ರಾಮದೇವತೆಯ ಆರಾಧನೆಯಲ್ಲಿ ನಡೆಯುವ ಆಚರಣೆಗಳಲ್ಲಿ ಬಸವಿ ಅಥವಾ ದೇವದಾಸಿಯರೆನಿಸಿದ ಬುಡಕಟ್ಟು ಮಹಿಳೆಯರಿಗೆ ಪ್ರಾಮುಖ್ಯತೆ ಇರುವುದು ಮಾತ್ರ ಒಂದು ಮೆರುಗು. ಆದರೆ ಇಂಥ ಧಾರ್ಮಿಕಾಚಾರಣೆಗಳೇ ಅವರ ಸಾಮಾಜಿಕ ಬದುಕಿಗೆ ಕಳಂಕ ಪ್ರಾಯವಾಗಿ ಪರಿಣಮಿಸಿದವು. ಜೋಗತಿಯರಂತಹ ಕಲಾವಿದೆಯರ ಜೌಡಿಗೆ ಗೀತೆ ಇತ್ಯಾದಿಗಳಲ್ಲಿ ಆಚರಣೆಗಳ ಮೌಖಿಕ ಇತಿಹಾಸವಿದೆಯಾದರೂ ಅಂಥ ಮಹಿಳೆಯರು ಕೀಳರಿಮೆಗೆ ಗುರಿಯಾಗುತ್ತಿದ್ದಾರೆ.

ಆಡಳಿತಾತ್ಮಕ ವಲಯದಲ್ಲಿ ರಾಜನ ರಕ್ಷಣೆಗಾಗಿ ತಳವಾರ, ಲೆಂಕ-ಗರುಡ, ವೇಳೆ ಪಾಳಿಗಳಾಗಿ ರಾಜ್ಯದ ರಾಜತ್ವದ ಆಪ್ತ ಪರಿಧಿಯವರೆಗೆ ಬೇಡ ಪುರುಷರ ಪ್ರಾಬಲ್ಯವು ಹೆಚ್ಚಳವಾಗಿರುವುದು ಕಂಡುಬರುತ್ತದೆಯೇ ಹೊರತು ಮಂತ್ರಿ-ರಾಜಗುರು, ರಾಜ ಪುರೋಹಿತರಂಥ ಆಪ್ತ ವಲಯಗಳ ಸಂಭಾವ್ಯತೆಯ ಬಗ್ಗೆ ಹುಡುಕಾಟ ನಡೆಸಬೇಕಾಗುತ್ತದೆ. ಆದರೆ ರಾಜನ ದೌರ್ಬಲ್ಯ ಅಥವಾ ದುರ್ಗುಣಗಳಿಂದ ರೋಸಿ ಹೋದ ಪಾಳೆಯಗಾರರು ಸ್ವತಂತ್ರ ರಾಜರಂತೆ ಸ್ಥಾನಭದ್ರರಾಗಿ ಜನಪರವಾಗಿ ಕಾರ್ಯಶೀಲರಾಗಿರುವ ಅಂಶಗಳು ಅಲ್ಲಲ್ಲಿ ಕಂಡುಬರುತ್ತವೆ. ಈ ಕಾಲಘಟ್ಟದಲ್ಲಿ ಇವರ ಕುಟುಂಬಗಳಲ್ಲಿ ಪುರುಷ ಪ್ರಧಾನತೆ ಹಾಗೂ ಶಿಷ್ಟ ಆಚರಣೆಗಳು ತಲೆದೋರಿ ಬೇಡ ಮಹಿಳೆಯರು ಘನತೆಯ ಕಾರಣಕ್ಕಾಗಿ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಬೇಡ ಪಾಳೆಯಗಾರ ಅಥವಾ ಬೇಡ ಅರಸರ ಆಳ್ವಿಕೆಗೆ ಸಂಬಂಧಿಸಿ ಬೇಡತಿಯರು ಯುದ್ಧ ಮಾಡಿದ, ಸಿಂಹಾಸನವನ್ನು ದಕ್ಕಿಸಿಕೊಂಡ ನಿದರ್ಶನಗಳು ಲಭಿಸುತ್ತವೆ. ಆದರೆ ಅದಕ್ಕೂ ಮೊದಲು ಇತರೆ ಅರಸರು ನಮ್ಮ ಮಹಿಳೆಯರ ಯುದ್ಧ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳದೆ ಕಡೆಗಣಿಸಿದ್ದಾರೆ ಎನ್ನಬಹುದು.

ಬೇಡ ಸಂಕುಲವು ವೃತ್ತಿ-ಪ್ರವೃತ್ತಿಗಳಲ್ಲಿ ಭಿನ್ನತೆ ವೈವಿಧ್ಯತೆಗಳನ್ನು ಸ್ಥಾಪಿಸುತ್ತ ತನ್ನ ಸಾಂಸ್ಕೃತಿಕ ವಿಕಾಸವನ್ನು ಸಾಧಿಸಿದೆ. ಕಾಡಿನ ನೆಲೆಯ ಬೇಡ ವಾಸ್ತವ್ಯವು ಬೇಟೆಗಾರಿಕೆಯ ಪ್ರಾಧಾನ್ಯತೆಯಿಂದ ಕೂಡಿದ್ದರೂ ಅದು ಪರಿಸರ ಸ್ನೇಹಿಯಾಗಿದ್ದಿತು. ಆಗ ಬೇಡ-ಬೇಡತಿಯರೇ ಆಹಾರದ ಅಗತ್ಯಕ್ಕಾಗಿ ಬೇಟೆಯಾಡುವುದು ಅನಿವಾರ್ಯವಾದಂತೆ ಮನುಷ್ಯ ಅಸ್ತಿತ್ವಕ್ಕೆ ಅಪಾಯಕಾರಿಗಳಾದ ಕಾಡು ಪ್ರಾಣಿಗಳ ಬೇಟೆಯ ಅಗತ್ಯವೂ ಇತ್ತು. ಹೇರಳವಾಗಿ ಬೇಟೆ ಒದಗಿದ ಸಂದರ್ಭಗಳು ಆಚರಣೆಗಳಿಗೆ, ಕಲೆಗಳಿಗೆ, ಕುಣಿತಗಳಿಗೆ ನಾಂದಿಯಾದವು. ಅಲ್ಲದೆ ಭಯ, ಭಕ್ತಿ, ಶ್ರದ್ಧೆಗಳು ಆಚರಣೆಗಳಿಗೆ ಪೂರಕವಾದುವು. ಇಂಥ ಸಂದರ್ಭಗಳ ಬೇಟೆಗಾರಿಕೆಯ ಎಲ್ಲ ನೆಲೆಗಳಲ್ಲೂ ಮಹಿಳೆಯ ಪಾಲ್ಗೊಳ್ಳುವಿಕೆ ವಿಶಿಷ್ಟವಾದ ಛಾಪನ್ನು ಮೂಡಿಸಿದೆ. ಬೇಡತಿಯು ಬೇಡನಿಗೆ ಸರಿಸಮವಾಗಿ ಸಹಕಾರಿಯಾಗಿ ಬೇಟೆಯಾಡುತ್ತಿದ್ದ ನಿದರ್ಶನಗಳು ಜನಪದ ಇತಿಹಾಸದಲ್ಲಿ ಹೇರಳವಾಗಿ ಲಭಿಸುತ್ತವೆ. ಅಪಾಯಕಾರಿ ಪ್ರಾಣಿಗಳ ದಾಳಿಯಿಂದ ತತ್ತರಿಸಿದ ಬೇಡನಿಗೆ ಚಿಕಿತ್ಸಕಳಾಗಿ ಬೇಡತಿಯು ರಕ್ಷಿಸಿದ್ದಾಳೆ. ಬೇಟೆಯ ಮಾಂಸವನ್ನು ಸಂರಕ್ಷಿಸುವಲ್ಲಿ ಆಹಾರ ತಯಾರಿಸುವಲ್ಲಿ ಎಚ್ಚರವಹಿಸಿದ್ದಾಳೆ.

ಪಶುಪಾಲನೆಯ ಹಂತದಲ್ಲಿ ಅಲೆಮಾರಿ ಜೀವನ ನಡೆಸುವ ಪರಿಸ್ಥಿತಿಯಲ್ಲಿ ಬೇಡತಿಯ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ದನಕರುಗಳನ್ನು ಹೈನಿನ ಉತ್ಪನ್ನಗಳ ಕಾರಣಕ್ಕಾಗಿ ಸಾಕುವ, ಮಾಂಸ-ಚರ್ಮ, ಉಣ್ಣೆಗಳ ಅಗತ್ಯಕ್ಕಾಗಿ ಕುರಿ-ಮೇಕೆಗಳನ್ನು ಮೇಯಿಸುವ, ಬೇಟೆಯ ದೀವಕ್ಕಾಗಿ ಪ್ರಾಣಿ ಪಕ್ಷಿಗಳನ್ನು ಪಳಗಿಸಿ ಸಾಕುವ ಕಾರ್ಯವು ಬೇಡತಿಯದಾಗಿತ್ತು. ಸಾಕು ಪ್ರಾಣಿಗಳಿಗೆ, ತಮಗೆ ಕಂಟಕಪ್ರಾಯವಾಗಿದ್ದ ಕಾಡುಪ್ರಾಣಿ ಗಳನ್ನು ಕೊಲ್ಲಲೇಬೇಕಾಗಿತ್ತು. ಪಶುಪಾಲನೆಯ ಹಂತದಲ್ಲೂ, ಬೇಡ ಸಮುದಾಯವು ಆಹಾರಕ್ಕಾಗಿ ಕಾಡಿನ ಪ್ರಾಣಿವರ್ಗವನ್ನು ಬೇಟೆಯಾಡುತ್ತಿದ್ದರು. ಬೇಟೆಗಾರಿಕೆಯ ಸಾಧನ-ಸಲಕರಣೆ, ಪರಿಕರ, ಆಯುಧ ವಿಶೇಷಗಳ ಆವಿಷ್ಕಾರ, ಬಳಕೆ ಇತ್ಯಾದಿಗಳಲ್ಲಿ ಬೇಡನಂತೆ ಬೇಡತಿಯೂ ಪರಿಣತಿ ಹೊಂದಿದ್ದಳು. ಇದು ಜನ್ಮತಃ ಸ್ವಭಾವಸಿದ್ಧವಾಗಿ ಲಭಿಸಿತ್ತು. ಈ ನಡುವೆ ತನ್ನ ಸಂತತಿಯ ಪೋಷಣೆ ರಕ್ಷಣೆಯ ಹೊಣೆ ಹೆಣ್ಣಿನ ಪಾಲಿಗೆ ಸಹಜವೆಂಬಂತೆ ರೂಪಿತವಾಗಿತ್ತು.

ಪಶುಪಾಲನೆಯ ನಂತರ ಕೃಷಿಯ ಕಡೆಗೆ ಬೇಡರ ಒಲವು ಆಸಕ್ತಿಗಳು ಮೂಡಿ ವೃತ್ತಿ ವ್ಯತ್ಯಯವಾದಾಗಲೂ ಬೇಟೆಗಾರಿಕೆ ಬೇರೊಂದು ಕಾರಣಕ್ಕೆ ಅನಿವಾರ್ಯವಾಯಿತು. ತಮ್ಮ ಬೆಳೆ, ತೋಟಗದ್ದೆಗಳನ್ನು ತಿಂದು ನಾಶ ಮಾಡುವ ಪಶು ಪಕ್ಷಿಗಳನ್ನು ಬೇಟೆಯಾಡಿ ಕೊಲ್ಲುವುದು ಅಗತ್ಯವಾಯಿತು. ಆಗ ಕೃಷಿ ಸಂರಕ್ಷಣೆ ಬೇಡತಿಗೆ ಆದ್ಯತೆಯಾಗುವುದರೊಂದಿಗೆ ಕೃಷಿ ಸಮೃದ್ದಿಯ ತಂತ್ರಗಳು ಬಿತ್ತನೆ, ಕೊಯ್ಲು, ಅಗೆತ ಮೊದಲಾದ ಕೃಷಿ ಚಟುವಟಿಕೆಗಳಲ್ಲಿ ಪ್ರಧಾನ ಭಾಗವಹಿಸುವಿಕೆ ಹೆಣ್ಣಿನದಾಗಿತ್ತು. ಆಯಾ ಸಂದರ್ಭದ ಆಚರಣೆಗಳು ಸ್ತ್ರೀ ಪ್ರಾಧಾನ್ಯತೆಯನ್ನು ಸಾಕ್ಷೀಕರಿಸುತ್ತವೆ. ಪಶುಪಾಲನೆಯ ಉತ್ಪನ್ನಗಳ ಮಾರಾಟ, ಬಳಕೆ ಸಗಣಿಗೊಬ್ಬರಗಳಂತಹ ಉಪ ಉತ್ಪನ್ನಗಳ ಬಳಕೆ ಉಣ್ಣೆ, ಚರ್ಮ, ಕೊಂಬು, ದಂತಗಳಂತ ಪೂರಕ ಉತ್ಪನ್ನಗಳಿಗೆ ಉಡುಗೆ ತೊಡುಗೆ ಅಲಂಕಾರ ಸಾಧನಗಳು ಆಯುಧ ವಿಶೇಷಗಳು ಮುಂತಾದವುಗಳ ತಯಾರಿ ಹಾಗೂ ಮಾರಾಟ ಇಂಥ ವ್ಯಾಪಾರದ ವಹಿವಾಟು ಬೇಡತಿಯರಿಂದ ನಡೆಯುತ್ತಿತ್ತು. ಮುಂದೆ ಸಂತೆ ಜಾತ್ರೆಗಳಲ್ಲಿ ಆಹಾರ ಪದಾರ್ಥಗಳಿಂದ ಹಣ್ಣು, ತರಕಾರಿಗಳವರೆಗೆ ಮಾರಾಟ ಮಾಡಲು ಅನುವಾಯಿತು. ಅಕ್ಷರ ಜ್ಞಾನದಿಂದ ಬಹುಪಾಲು ಬೇಡತಿಯರು ಬಹುಕಾಲ ವಂಚಿತರಾಗಿದ್ದಾಗಲೂ ವ್ಯವಹಾರ ಜ್ಞಾನದಲ್ಲಿ ಸಿದ್ದಿಯನ್ನು ಪಡೆದಿದ್ದಾರೆ. ಬೇಡತಿಯರು ಹುಟ್ಟು ಕಲಾವಿದೆಯರಾಗಿದ್ದರೂ ಅವಕಾಶಗಳಿಲ್ಲದೆ ಕೆಲವರು ರಂಗನಟಿಯರಾಗಿ ವಿಫಲರಾಗಿದ್ದಾರೆ. ಕಾಡಿನ ಉತ್ಪನ್ನಗಳಿಗೆ ಬೇಟೆಯ ಉತ್ಪನ್ನಗಳು, ಪಶುಪಾಲನಾ ಉತ್ಪನ್ನಗಳು ಕೃಷಿ ಉತ್ಪನ್ನಗಳು ಹಾಗೂ ಇವುಗಳಿಗೆ ಪೂರಕವಾಗುವ ಪರಿಕರ ಸಲಕರಣೆಗಳನ್ನು ತಯಾರಿಸಿ ಊರಿಂದ ಊರಿಗೆ ಹೊತ್ತು ಮಾರುವ ಧೈರ್ಯ ಬೇಡತಿಯರದಾಗಿತ್ತು. ಈ ಕಾರಣ ಅವರಿಗೆ ಲೋಕಜ್ಞಾನ ಅಪಾರವಾಗಿ ಲಭಿಸಿತ್ತು ಎನ್ನಬಹುದು. ಇಂದು ಅಕ್ಷರ ಜ್ಞಾನದ ಅರಿವು ಎಟುಕಿದಷ್ಟು ಎತ್ತರಕ್ಕೆ ಬೇಡ ಮಹಿಳೆಯ ಆಲೋಚನಾ ವಿಧಾನಗಳಲ್ಲೂ ಪ್ರಗತಿ ಕಂಡುಬರುತ್ತದೆ. ಸಮಾಜದ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಕೆಲವು ಬುಡಕಟ್ಟು ಆಚರಣೆಗಳ ಸ್ಥಾನದಲ್ಲಿ ಜನಪ್ರಿಯವಾದ ಶಿಷ್ಟ ಆಚರಣೆಗಳ ಪ್ರಭಾವಗಳನ್ನು ತಮ್ಮ ಆರಾಧನಾ ನೆಲೆಗಳಲ್ಲಿ ಸ್ಥಾಪಿಸಿಕೊಂಡಿದ್ದಾರೆ. ಗಾದರಿಪಾಲನೆಂಬ ಪಶುಪಾಲಕನ ಮಡದಿ ಯರು ಆತನನ್ನು ಹುಲಿ ಕೊಂದ ಸುದ್ದಿ ತಿಳಿದು ಮಹಾಸತಿಯರಾದರೆಂದು ಕೆಲವು ಮಾಸ್ತಿ ಕಲ್ಲುಗಳನ್ನು ತೋರಿಸಿ ಐತಿಹ್ಯವನ್ನು ಪುಷ್ಟಿಗೊಳಿಸುತ್ತಾರೆ. ಬುಡಕಟ್ಟು ಸಂಪ್ರದಾಯದ ಪಶುಪಾಲನಾ ಹಂತದಲ್ಲಿ ಶಿಷ್ಟಪರಂಪರೆಯ ಆಚರಣೆಗಳು ಪ್ರೇರಣೆಯಾಗಿದ್ದುವೇ ಎಂಬುದನ್ನು ಯೋಚಿಸಬೇಕಾಗುತ್ತದೆ. ಆದರೆ ಇದು ಸರಿಯೇ ಎಂಬ ಪ್ರಶ್ನೆಯು ಸಮಂಜಸವಲ್ಲ. ಏಕೆಂದರೆ ಪರಂಪರೆಯಲ್ಲಿ ಹೊಸತುಗಳು ಮಿಳಿತಗೊಳ್ಳುತ್ತ ಹಳೆಯದಾದ ಕೆಲವು ನಿರುಪಯುಕ್ತ ಎಂಬ ಅಂಶಗಳು ಮರೆಯಾಗುತ್ತಾ ಹೋಗುತ್ತವೆ. ಹೀಗೆ ಸಂಸ್ಕೃತಿ ವಿಕಸನಗೊಳ್ಳುತಿ್ತರುತ್ತದೆ. ಇಂದಿಗೂ ವಧುದಕ್ಷಿಣೆಯ ಆಚರಣೆ ಸಾಂಕೇತಿಕವಾಗಿ ಮುಂದುವರಿದು ವ್ಯವಹಾರಿಕವಾಗಿ ಅಲ್ಲಲ್ಲಿ ವರದಕ್ಷಿಣೆಯ ಸಂಪ್ರದಾಯ ತಲೆದೋರಿರುವು ದನ್ನು ಕಾಣುತ್ತೇವೆ. ವರನಿಗೆಂದು ವಾಚು, ಉಂಗುರ, ಸ್ಕೂಟರ್ ಇತ್ಯಾದಿ ವಸ್ತು ವಿಶೇಷ ಗಳನ್ನು ನೀಡಿ ವರದಕ್ಷಿಣೆಯಾಗಿ ಎಷ್ಟೋ ಪ್ರಮಾಣದ ಮೊತ್ತವನ್ನು ಕೊಡುವುದು ಮರ್ಯಾದೆಯೆಂದು ಹೆಣ್ಣಿನ ಕಡೆಯವರು ನಿರ್ಣಯಿಸಿರುತ್ತಾರೆ. ಕಾಲಕ್ರಮೇಣ ಹೆಣ್ಣಿನ ಕಡೆಯವರು ನಿರ್ಣಯಿಸಿರುತ್ತಾರೆ. ಕಾಲಕ್ರಮೇಣ ವರದಕ್ಷಿಣೆಯೂ ಸಾಂಕೇತಿಕವಾಗಿ ಬಳಕೆಗೆ ಬರಬಹುದು. ಮೀಸಲಾತಿ ಸೌಲಭ್ಯ ಮಹಿಳಾ ಸಬಲೀಕರಣದಂತಹ ಯೋಜನೆಗಳಿಗೆ ಇವರ ಸ್ಪಂದನೆ ಉತ್ತಮ ರೀತಿಯದಾಗಿದೆ.

ವಿಕಸನ ಶೀಲವಾದ ಬೇಡ ಪರಂಪರೆಯಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯನ್ನು ಅಸಹಾಯಕವೆಂದೂ ಅಪಮಾನಕರವಾದದ್ದೆಂದು ಪರಿಭಾವಿಸುವ ಕಾರಣ ಪಿತೃಪ್ರಧಾನ್ಯತೆ ಯನ್ನು ಕೌಟುಂಬಿಕ ಗೌರವವೆಂದು ತಿಳಿಯಲಾಗಿದೆ. ಹಾಗೆಂದ ಮಾತ್ರಕ್ಕೆ ಹೆಣ್ಣಿನ ಕೌಟುಂಬಿಕ ಹೊಣೆ ಹಾಗೂ ದುಡಿಮೆಯಿಂದ ಬಿಡುಗಡೆ ಲಭಿಸಿದೆಯೆಂದಲ್ಲ. ಗಳಿಸಿದ ದುಡಿಮೆಯ ಪ್ರತಿಫಲವನ್ನು ವ್ಯಯಿಸುವಾಗ ಪುರುಷ ಪರವಾನಿಗೆ ಅಗತ್ಯವಾಗಿ ಬೇಕಾಗುತ್ತದೆ. ಪಾರಂಪರಿಕವಾಗಿ ಬೇಡರು ಕಳ್ಳತನದ ವೃತ್ತಿಯನ್ನು ರಾಜಾರೋಷವಾಗಿ ಕೈಗೊಂಡಿದ್ದರೆಂದು ಸಂಸ್ಕೃತಿಯಲ್ಲಿ ಆರೋಪಿಸಲಾಗಿದೆ. ಆದರೆ ಬೇಡತಿಯರ ಬಗ್ಗೆ ಇಂಥ ಆರೋಪಗಳು ಇಲ್ಲ. ರಾಮಾಯಣ ಕಾಲಕ್ಕಾಗಲೇ ಬೇಡತಿಯರು ಶಿಷ್ಟತೆಗೆ ಆಕರ್ಷಿತರಾಗಿದ್ದರು ಎಂಬುದಕ್ಕೆ ಶಬರಿಯ ನಿದರ್ಶನವಿದೆ. ಪುರುಷ ಪ್ರಾಧಾನ್ಯತೆ ಮಹಾಭಾರತದ ಕಾಲಕ್ಕೆ ಬೇಡ ಸಂಸ್ಕೃತಿಗೆ ವ್ಯಾಪಕವಾಗುತ್ತಿತ್ತು ಎಂಬುದು ಏಕಲವ್ಯನ ನಿದರ್ಶನದಿಂದ ತಿಳಿದುಬರುತ್ತದೆ. ಇಂದಿಗೂ ಏಕಲವ್ಯನ ಪೌರಾಣಿಕ ಹಿನ್ನೆಲೆಯನ್ನು ಗಮನಿಸಿದಾಗ ಆತನ ತಂದೆಯ ಹೆಸರನ್ನು ತಿಳಿಯಬಹುದೇ ವಿನಃ ತಾಯಿಯ ಹೆಸರು ಏನೆಂದು ತಿಳಿದುಬರುವುದಿಲ್ಲ.

ಬುಡಕಟ್ಟು ಮೂಲದ ಬೇಡ ಪರಂಪರೆಯಲ್ಲಿ ಮಹಿಳೆಯ ವೈವಾಹಿಕ ಬದುಕು ಐಚ್ಛಿಕವಾಗಿತ್ತು. ಆದರೆ ಕೌಟುಂಬಿಕ ಹೊಣೆಯು ಪ್ರಧಾನವಾಗಿತ್ತು. ಶಬರಿಯಂಥ ಹೆಣ್ಣು ವೃದ್ಧಾಪ್ಯದವರೆಗೂ ಶ್ರೀರಾಮನ ಆರಾಧನೆಯಲ್ಲೇ ಬದುಕುವ ಸ್ವಾತಂತ್ರ್ಯವನ್ನು ಹೊಂದಿದ್ದಳು. ರಾಮದರ್ಶನದಿಂದ ಪುನೀತಳಾದ ಭಾವದಲ್ಲೇ ಕೊನೆಯುಸಿರೆಳೆದವಳು. ಆಕೆ ಎಂದೂ ರಾಮನನ್ನು ಪತಿ (ಗಂಡ)  ಆಗಿ ಭಾವಿಸಿದವಳಲ್ಲ. ಬದಲಿಗೆ ದೈವವಾಗಿ ಪೂಜಿಸಿದ್ದಾಳೆ. ಇಂಥ ಶಬರಿಯ ಬಗ್ಗೆ ಉಲ್ಲೇಖಿಸುವಾಗ ಆಕೆಯನ್ನು ‘ಪತಿವ್ರತೆ’ ಎಂದು ಹೆಸರಿಸಿದರೆ ಅಪಮಾನವಾಗುತ್ತದೆ. ಇಂಥ ಹೇರಿಕೆಗಳು ಶಿಷ್ಟ ಅಳತೆಗೋಲಿನ ಮಾನದಂಡ ಗಳಾಗಿವೆ. ಪ್ರಾಚೀನ ಬೇಡರ ಬಗೆಗೆ ದೊರೆಯುವ ವಿವರಗಳು ದುಷ್ಟರೆಂದು ತಿಳಿಯು ವಂತೆ ಬಿಂಬಿತವಾಗಿವೆಯೇ ಹೊರತು ಬೇಡರ ಯುದ್ಧ, ಸಾಹಸ, ಪರಾಕ್ರಮಗಳ ಪರಿಚಯ ವನ್ನು ಮರೆಮಾಡಲಾಗಿಲ್ಲ. ಬೇಡರು ಪ್ರಾಣಿ ದಯೆಯಿಲ್ಲದೆ ಬೇಟೆಯಾಡುವವರೆಂದೂ ನಿರ್ದಯವಾಗಿ ದಾರಿ ಹೋಕರನ್ನು ಹಿಂಸಿಸುತ್ತಿದ್ದವರೆಂದೂ, ದಟ್ಟ ದಾರಿದ್ರ್ಯದ ಕೌಟುಂಬಿಕ ಹಿನ್ನೆಲೆಯುಳ್ಳವರೆಂದೂ ಉಲ್ಲೇಖಿಸಲಾಗಿದೆ. ಆದರೆ ಬೇಡತಿಯರ ಪ್ರಸ್ತಾಪ ಕಥೆಗಳಲ್ಲಿ ಕಾಣುವಂತಿಲ್ಲ. ರಾಮಾಯಣದಲ್ಲಿ ಬರುವ ಉಲ್ಲೇಖದಂತೆ, ಬೇಡನಾಗಿದ್ದ ವಾಲ್ಮೀಕಿಯು ದರೋಡೆ ವೃತ್ತಿಯಿಂದ ಮುಕ್ತನಾಗಲು ಪರೋಕ್ಷವಾಗಿ ಆತನ ಪತ್ನಿ ಕಾರಣವಾಗುತ್ತಾಳೆ. ವಾಲ್ಮೀಕಿಯು ‘ಸಪ್ತ ಋಷಿಗಳ ಸಲಹೆಯಂತೆ ಪಾಪದ ಬಗ್ಗೆ ತನ್ನ ಪತ್ನಿಯ ಬಳಿ ಸಮಾಲೋಚಿಸಿದಾಗ ಆಕೆಯ ಪತಿಯ ಪಾಪಕ್ಕೆ ಸತಿ, ಪುತ್ರರು ಪಾಲುದಾರರಲ್ಲವೆಂದು ತಿಳಿಸಿದಳೆಂದು ಆತ ಎಚ್ಚೆತ್ತು ಕೊಳ್ಳುವಂತಾಯಿತು. ಇಂಥ ನಿಖರವಾದ ದಿಟ್ಟ ಉತ್ತರವನ್ನು ಬಹುಷಃ ಬೇಡ ಮಹಿಳೆಯಲ್ಲದೆ ಬೇರೆ ಯಾರೂ ನೀಡಲು ಸಾಧ್ಯವಾಗಲಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.

ಪ್ರಸ್ತುತ ಕಾಲಘಟ್ಟದಲ್ಲಿ ಬೇಡ ಮಹಿಳೆಯರ ಮನೋಸ್ಥೈರ್ಯ ಮೆಚ್ಚುವಂಥದ್ದು. ಅನಕ್ಷರಸ್ಥ ಔದ್ಯೋಗಿಕ ವಲಯಗಳಲ್ಲಿ ಗೃಹಿಣಿಯ ಚೌಕಟ್ಟಿನಲ್ಲಿ ಬೇಡತಿಯರ ಅನನ್ಯತೆ ಆಶಾದಾಯಕವಾದುದು. ಆದರೆ ಸಾಮಾಜಿಕ ಕೌಟುಂಬಿಕ ರಾಜಕೀಯ ದೌರ್ಜನ್ಯಗಳನ್ನೂ ಎದುರಿಸುವ ಸನ್ನಿವೇಶಗಳು ಅಲ್ಲಲ್ಲಿ ಎದುರಾಗುತ್ತಿರುವುದು ವಿಷಾಧನೀಯ.