ವಾಲ್ಮೀಕಿ ಸಮುದಾಯದ ಮಹಿಳೆಯ ಬಗ್ಗೆ ಹೇಳುವಾಗ, ಈ ಸಮುದಾಯದ ಮಹಿಳೆಯನ್ನು ಉಳಿದ ಸಮುದಾಯದ ಮಹಿಳೆಯೊಂದಿಗೆ ನಾವು ತುಲನೆ ಮಾಡಿದಾಗ ಸಾಮಾನ್ಯವಾದ ಲಕ್ಷಣಗಳನ್ನು ನಾವು ಕಂಡುಕೊಳ್ಳುತ್ತೇವೆ.

ಆ ನಿಟ್ಟಿನಲ್ಲಿ ಹೆಣ್ಣು ಎಂದರೆ ಯಾರು? ಅಥವಾ ಏನು? ಎನ್ನುವುದನ್ನು ಲೇಖಕಿ ಡಾ.ಎಚ್.ಎಸ್.ಶ್ರೀಮತಿಯವರು ತುಂಬಾ ಮಾರ್ಮಿಕವಾಗಿ ಬರೆದಿದ್ದಾರೆ.

ಸ್ತ್ರೀ ವಾದವನ್ನು ಕುರಿತ ಚಿಂತನೆಗೆ ತೊಡಗುವ ಮೊದಲೇ ಹಾಕಿಕೊಂಡಿರುವ ಈ ಪ್ರಶ್ನೆ ಕೊಂಕು, ಕುಹಕ, ವ್ಯಂಗ್ಯದ್ದೆಂದೇ ಅಥವಾ ತಮಾಷೆಯೆಂದೇ ತೋರಬಹುದು. ಹಾಗೆಯೇ ಗಂಡು ಎಂದರೆ ಯಾರು? ಅಥವಾ ಏನು? ಎಂಬ ಪ್ರಶ್ನೆ ತೀರಾ ಅಸಂಗತವೆಂದೂ ಅನ್ನಿಸಬಹುದು. ಆದರೆ ಯಾವುದೇ ಚಿಂತನೆ ಅಥವಾ ಚರ್ಚೆಗಳಿಗೆ ಮೂಲಾಧಾರವಾದ ಭಾಷೆಯು ಒಂದು ವಿಚಿತ್ರ ಸಾಮಾಜಿಕ ಸಂಗತಿಯನ್ನು ಒಳಗೊಂಡಿದೆ. ಮಾನವ ಪ್ರಗತಿ, ಸಮಾಜದ ಸಮಸ್ಯೆಗಳು, ಮಗುವಿನ ಆರೋಗ್ಯ, ರೈತ ಸಂಘ, ರಾಷ್ಟ್ರಪತಿಗಳು, ಸಚಿವರು, ವಿಜ್ಞಾನಿಗಳು ಎಂಬಂತಹ ಪದ ಸಮುಚ್ಚಯಗಳನ್ನೋ ಇಡೀ ವಾಕ್ಯಗಳನ್ನೋ ಗಮನಿಸಿ. ನೇರವಾಗಿ ಇಲ್ಲಿ ಲಿಂಗಸೂಚಿ ಅಂಶಗಳಾವುವೂ ಇಲ್ಲ. ಆದರೆ ಇವು ಪುರುಷ ಸೂಚಿಗಳು ಆಗಿವೆ ಎಂದು ಮೊದಲಿಗೆ ಅಲಿಖಿತ ಒಪ್ಪಿಗೆಗೆ ಒಳಗಾಗಿ ಬಿಡುತ್ತವೆ. ಅಂದರೆ ಭಾಷಾ ಸಂಕಥನವು ಪ್ರಧಾನವಾಗಿ ಪುರುಷನದಷ್ಟೆ ಆಗಿರುತ್ತದೆ. ಮಹಿಳೆಯ ಭಾಗವಹಿಸುವಿಕೆ ಇರುವ ವಿಶೇಷ ಸಂದರ್ಭದಲ್ಲಿ ಆ ಸಂಕಥನದಲ್ಲಿ ಸ್ತ್ರೀವಾಚಿಗಳನ್ನು ಸೇರಿಸಲಾಗುತ್ತದೆ.

ನಮ್ಮ ಸುತ್ತಲಿನ ಜನರಲ್ಲಿ ಗಂಡು ಹೆಣ್ಣುಗಳನ್ನು ಗುರುತಿಸಲು ಪ್ರತ್ಯೇಕ ತರಬೇತಿಯೇನು ಬೇಕಿಲ್ಲ. ದೇಹ, ಮುಖ, ಹಾವಭಾವ, ನಡೆ ನುಡಿ, ಆಸಕ್ತಿ, ಕೆಲಸಗಳು ವರ್ತನೆಗಳು, ವೇಷ ಭೂಷಣಗಳು, ಎಲ್ಲದರಲ್ಲೂ ಸ್ತ್ರೀ ಪುರುಷರು ಪ್ರತ್ಯೇಕ ಚಹರೆಯನ್ನು ಹೊಂದಿದ್ದಾರೆ. ವಿಜ್ಞಾನದ ಮೊರೆಹೊಕ್ಕು ಮಾನವ ದೇಹ ರಚನೆಯ ಆಂತರಿಕ ವಿವರಗಳಿಗೆ ಹೋದರೆ, ಈ ಹೆಣ್ಣು ಗಂಡುಗಳ ದೇಹಗಳೆಲ್ಲ ಸಾಮಾನ್ಯ ಲಕ್ಷಣಗಳನ್ನು ಹೊಂದಿವೆಯಾದರೂ ಜನನಾಂಗಗಳ ರಚನೆಯಲ್ಲಿ ತೀರಾ ವಿಶಿಷ್ಟವಾದ ಹಾಗೂ ವಿಭಿನ್ನ ಗುಣ ಲಕ್ಷಣಗಳನ್ನು ಹೊಂದಿವೆ.

ದೇಹ ರಚನೆಯ ಈ ವಿಭಿನ್ನತೆಗೆ ವಿಶೇಷ ಉದ್ದೇಶವಿದೆ. ಸಂತಾನೋತ್ಪತ್ತಿಯ ಕಾರಣಕ್ಕಾಗಿ ನಿಸರ್ಗವೇ ಹೆಣ್ಣು ಗಂಡುಗಳಲ್ಲಿ ಇಂಥ ವಿಭಿನ್ನತೆಯನ್ನು ಅಳವಡಿಸಿದೆ. ಈ ವಿಭಿನ್ನ ಹಾಗೂ ವಿಶಿಷ್ಟ ಲಿಂಗಭೇದಗಳು ಬೆರೆತು ಒಂದಾಗುವ ಮೂಲಕ ಹೊಸದೊಂದು ಜೀವನದ ಸೃಷ್ಟಿಯಾಗುವುದು ನಿಸರ್ಗವು ರೂಪಿಸಿರುವ ಪ್ರಕ್ರಿಯೆಯಾಗಿದೆ. ಹಾಗಾಗಿ ನಿಸರ್ಗ ಸಹಜವಾದ ಲಿಂಗಭೇದ ನೀತಿಯಲ್ಲಿ ಗಂಡು ಹೆಣ್ಣುಗಳಿಬ್ಬರೂ ಸಮಾನವಾಗಿ ಮುಖ್ಯರೂ, ಪ್ರಧಾನರೂ ಆಗಿರುತ್ತಾರೆ.

ಆದರೆ ಸಮಾಜದಲ್ಲಿ ಮಾತ್ರ ಸ್ತ್ರೀ ಪುರುಷರ ಈ ಸಹಜ ಗುಣ ವೈಶಿಷ್ಟ್ಯಗಳು ಸಮಾನವೆಂದು ಪರಿಗಣಿತವಾಗುವುದಿಲ್ಲ. ಸಮಾಜ ಎಂಬ ಸಂಸ್ಥೆ ರಚನೆಗೊಂಡದ್ದೇ ನಿಸರ್ಗವನ್ನು ತನಗೆ ಅನುಕೂಲವಾಗುವಂತೆ ದುಡಿಸಿಕೊಳ್ಳಬೇಕೆಂಬ ಮಾನವ ಪ್ರಯತ್ನದ ಫಲವಾಗಿ. ಈ ಸಮಾಜ ಎಂಬ ಸಂಸ್ಥೆ ಹುಟ್ಟುವ ಮೊದಲು ಸಕಲ ಪ್ರಾಣಿ ಸಂಕುಲಗಳಂತೆ ಮಾನವ ಸಂಕುಲವೂ ಕೂಡ ನಿಸರ್ಗದ ಕೂಸೇ ಆಗಿತ್ತು.

ಆದರೆ ಮಾನವ ಸಂಕುಲಕ್ಕೆ ಮಾತ್ರ ನಿರಂತರವಾಗಿ ನಿಸರ್ಗದ ಕೂಸಾಗಿ ಬದುಕುವುದು ಬೇಡವಾದ ಸಂಗತಿಯಾಯಿತು. ಉಳಿದ ಪ್ರಾಣಿಗಳಿಗಿಂತ ವಿಶಿಷ್ಟವಾದ ಯೋಚನಾಶಕ್ತಿಯನ್ನು ಹೊಂದಿರುವ ಮಾನವನಿಗೆ ನಿಸರ್ಗವನ್ನು ತನ್ನ ಇಚ್ಛೆಗೆ ಅನುಕೂಲವಾಗಿ ದುಡಿಸಿಕೊಳ್ಳುವ ಹಂಬಲ ಮೊದಲಾಯಿತು. ಸ್ತ್ರೀ ಪುರುಷರಲ್ಲಿ ನಿಸರ್ಗ ಸಹಜವಾಗಿ ಇದ್ದ ಲಿಂಗ ಭೇದ ವೈಶಿಷ್ಟಗಳೇ ಸಮಾಜ ವ್ಯವಸ್ಥೆಯಲ್ಲಿ ಲಿಂಗ ತಾರತಮ್ಯ ನೀತಿಗೆ ಕಾರಣವಾಗಿಬಿಟ್ಟವು ಎಂಬುದು ಹೆಣ್ಣಿನ ಬದುಕಿನ ದುರಂತ.

ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಅನೇಕ ಸಮಸ್ಯೆಗಳ ನಡುವೆ ಬದುಕು ಸಾಗಿಸಬೇಕಾಗಿದೆ. ಸಮಸ್ಯೆ ಎನ್ನುವುದು ಕೇವಲ ಒಂದು ಹೆಣ್ಣಿನ ಅಥವಾ ಒಂದು ಸಮುದಾಯದ ವೈಯಕ್ತಿಕ ವಿಷಯವಾಗಿರದೆ ಇದು ರಾಷ್ಟ್ರದಿಂದ ರಾಷ್ಟ್ರಕ್ಕೆ, ರಾಜ್ಯದಿಂದ ರಾಜ್ಯಕ್ಕೆ, ಕುಟುಂಬದಿಂದ ಕುಟುಂಬಕ್ಕೆ, ಸಮುದಾಯದಿಂದ ಸಮುದಾಯದವರೆಗೆ ಆವರಿಸಿಕೊಂಡಿದೆ. ಈ ಎಲ್ಲಾ ಸಮಸ್ಯೆಗಳು ಪುರುಷರಿಂದಲೇ ಹುಟ್ಟಿಕೊಂಡಿವೆಯಾದರೂ ರೂಢಿ, ಸಂಪ್ರದಾಯ, ಸಾಮಾಜಿಕ, ಧಾರ್ಮಿಕ, ಕಟ್ಟುಪಾಡುಗಳಿಂದಾಗಿ ಪ್ರತಿಭಟಿಸುವ ಸ್ವಾತಂತ್ರ್ಯ ಮಹಿಳೆಯರಿಗೆ ಇಲ್ಲವಾಗಿದೆ. ಅವಳು ಹಲವು ಸೌಲಭ್ಯ ಹಕ್ಕುಗಳಿಂದ ಇಂದು ವಂಚಿತಳಾಗಿದ್ದಾಳೆ.

ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗಿನ ಮಹಿಳೆಯರ ಸ್ಥಾನಮಾನದ ಒಂದು ಹಿನ್ನೋಟ

ಭಾರತೀಯ ಸಮಾಜದಲ್ಲಿ ಪುರಾತನ ಕಾಲದಿಂದಲೂ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವನ್ನು ನೀಡಿ ಗೌರವಿಸುವುದು ಸಂಪ್ರದಾಯವಾಗಿದೆ. ಮಹಿಳೆಯು ಪೂಜ್ಯಳೂ ವಂದ್ಯಳೂ ಆಗಿ ಶಿವನ ತಲೆಯ ಮೇಲೂ, ಹರಿಯ ಹೃದಯದಲ್ಲೂ, ಬ್ರಹ್ಮನ ತೊಡೆಯ ಮೇಲೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವುದನ್ನು ಪುರಾಣಗಳಿಂದ ತಿಳಿದು ಕೊಳ್ಳಬಹುದು.

ನೀತಿ ಸಂಹಿತೆಯ ರಚನಾಕಾರನಾದ ಮನು ಹೀಗೆ ಹೇಳುತ್ತಾನೆ. ‘‘ಯತ್ರ ನಾರ್ಯಸ್ತುಃ ಪೂಜ್ಯಂತೆ ರಮಂತೀ ತತ್ರ ದೇವತಾ’’, ಅಂದರೆ ಎಲ್ಲಿ ಸ್ತ್ರೀ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು. ಹಾಗೆಯೇ ವೇದ ಬಹಳ ಸುಂದರ ವಿವರಣೆಯನ್ನು ನೀಡುತ್ತದೆ:  ‘‘ಮನುಷ್ಯನ ಬುದ್ದಿ ಮತ್ತು ಹೃದಯ ಮಹಿಳೆಯ ರಕ್ತದಿಂದ ಮಾಡಲ್ಪಟ್ಟಿದೆ.’’ ಎಂದು ಜೊತೆಗೆ ಪ್ರತಿಯೊಬ್ಬ ಮಹಾ ಪುರುಷನ ಮಹಾಸಾಧನೆಯ ಹಿಂದೆ ಒಂದು ಹೆಣ್ಣಿನ ಪ್ರೋಸಹಕಾರವಿರುತ್ತದೆ. ಅವನ ಮಹಾಸಾಧನೆಗೆ ಅವಳು ಸ್ಫೂರ್ತಿಯಾಗುತ್ತಾಳೆ.

ಪ್ರಾಚೀನ ಕಾಲದಲ್ಲಿ ಮಹಿಳೆ

ಇತಿಹಾಸದಲ್ಲಿ ಮಹಿಳೆಯರ ಪಾತ್ರ ಹಾಗೂ ಅವರ ಸ್ಥಾನಮಾನಗಳು ಮೊದಲಾದ ಸ್ತ್ರೀ ಸಂಬಂಧಿತ ಅಧ್ಯಯನಗಳಿಗೆ ಭಾರತದಲ್ಲಿ ಪ್ರಾಮುಖ್ಯತೆ ದೊರೆತಿರುವುದು ಕಳೆದೆರಡು ದಶಕಗಳಿಂದ ಮಾತ್ರ. ಅಲ್ಲಿಯವರೆಗೆ ಸ್ತ್ರೀ ಸಂಬಂಧಿತ ವಿಚಾರಗಳ ಕುರಿತು ಬೆರಳೆಣಿಕೆಯ ಕೃತಿಗಳು ರಚನೆಯಾಗಿದ್ದವು.

ಪ್ರಾಚೀನ ಭಾರತದಲ್ಲಿ ಸ್ತ್ರೀಯರ ಸ್ಥಾನಮಾನದ ಅಧ್ಯಯನಕ್ಕೆ ಸ್ಪಷ್ಟವಾದ ಆಧಾರಗಳು ದೊರಕುವುದು ವೇದಗಳ ಕಾಲದಿಂದ. ಅದಕ್ಕಿಂತ ಮೊದಲಿನ ಸಿಂಧೂ ಕಣಿವೆಯ ನಾಗರಿಕತೆ ಕಾಲದ ಸ್ತ್ರೀಯರ ಸ್ಥಿತಿಗತಿ ಬಗ್ಗೆ ದೊರೆತಿರುವ ಅವಶೇಷಗಳನ್ನಾಧರಿಸಿ ಕೆಲವು ಊಹೆಗಳು ಮಾತ್ರ ಇವೆ.

ವೇದ ಕಾಲದ ಆರಂಭದಲ್ಲಿ ಸ್ತ್ರೀಯರು ಹೆಚ್ಚು ಕಡಿಮೆ ಪುರುಷರಷ್ಟೇ ಮಾನ್ಯತೆ ಹೊಂದಿದ್ದರು. ಇದನ್ನು ಋಗ್ವೇದದ ಅನೇಕ ಉಲ್ಲೇಖಗಳು ಸಮರ್ಥಿಸುತ್ತವೆ. ಲಿಂಗ ತಾರತಮ್ಯ ಮನೋಭಾವ ಸಮಾಜದಲ್ಲಿ ಅಸ್ತಿತ್ವ ಪಡೆದಿರಲಿಲ್ಲ. ಆರಂಭದ ವೈದಿಕ ಸಮಾಜದಲ್ಲಿ ಸ್ತ್ರೀಯರು ಉಪನಯನ ಸಂಸ್ಕಾರಕ್ಕೆ ಅರ್ಹರಾಗಿದ್ದರು. ವೇದಾಧ್ಯಯನ ಸೇರಿದಂತೆ ಯೋಗ್ಯ ಶಿಕ್ಷಣವನ್ನು ಅವರಿಗೆ ನೀಡಲಾಗುತ್ತಿತ್ತು. ಋಗ್ವೇದ ಕಾಲದ ಸ್ತ್ರೀಯು ಆಸ್ತಿ ಹಕ್ಕನ್ನು ಹೊಂದಿದ್ದಳು. ಇದು ಅಂದಿನ ಸ್ತ್ರೀಯರಿಗಿದ್ದ ಆರ್ಥಿಕ ಬಲವನ್ನು ಸೂಚಿಸುತ್ತದೆ. ವಿಧವಾ ವಿವಾಹಕ್ಕೆ ಅವಕಾಶವಿದ್ದಿತು. ಧಾರ್ಮಿಕವಾಗಿಯೂ ಸ್ತ್ರೀಯರು ಸಮಪಾಲು ಹೊಂದಿದ್ದು ಯಜ್ಞಯಾಗಗಳಲ್ಲಿ ಭಾಗವಹಿಸುತ್ತಿದ್ದರು.

ಮಹಾಕಾವ್ಯಗಳ ಕಾಲದಲ್ಲಿ ಮಹಿಳೆಯರಿಗೆ ಸಾಮಾಜಿಕ ಪ್ರಾಮುಖ್ಯತೆಯಿದ್ದರೂ ಋಗ್ವೇದ ಕಾಲಕ್ಕಿಂತ ಸ್ಥಿತಿ ಭಿನ್ನವಾಗಿದ್ದಿತು. ಸ್ತ್ರೀಯರು ಪುರುಷರನ್ನು ಆಧರಿಸಿ ಬಾಳುವುದೇ ಸೂಕ್ತ ಮತ್ತು ಅದುವೇ ಆದರ್ಶವೆಂದು ಮಹಾಕಾವ್ಯಗಳು ಬಿಂಬಿಸುತ್ತವೆ. ಹೀಗಾಗಿ ಸೀತೆ, ಗಾಂಧಾರಿಯಂತಹ ಪಾತ್ರಗಳನ್ನು ಚಿತ್ರಿಸಲಾಗಿದೆ. ಸ್ವಯಂವರ ವ್ಯವಸ್ಥೆಯಿತ್ತು. ದ್ರೌಪದಿಯನ್ನು ಸ್ವಾಭಿಮಾನಿ ಮತ್ತು ಪ್ರೌಢ ಸ್ತ್ರೀಯಾಗಿ ಬಿಂಬಿಸಿರುವಂತೆ ಸ್ತ್ರೀಯರನ್ನು ಸಮಸ್ಯೆಗಳ ಮೂಲ, ಸಂಕುಚಿತ ಸ್ವಭಾವದವರು, ಅಸಮರ್ಥರು ಮೊದಲಾಗಿ ಉಲ್ಲೇಖಿಸಲಾಗಿದೆ.

ವೈದಿಕ ಯುಗದ ನಂತರ ಭಾಗದಲ್ಲಿ ಅಂದರೆ ಬ್ರಾಹ್ಮಣಕ ಉಪನಿಷತ್‌ಗಳು ಮತ್ತು ಧರ್ಮಶಾಸ್ತ್ರಗಳು ರಚನೆಯಾದ ಕಾಲದಲ್ಲಿ ಸ್ತ್ರೀಯರ ಸ್ಥಾನಮಾನಗಳಲ್ಲಿ ಗಮನಾರ್ಹ ಬದಲಾವಣೆಗಳಾದವು. ಪುರುಷರಿಗೆ ವಿಶೇಷ ಹಕ್ಕು ಅಧಿಕಾರಗಳನ್ನು ನೀಡಲಾಯಿತು. ಹೆಣ್ಣು ಮಾಯೆ, ಪಾಪದ ಮೂಲ, ಪರಮಾರ್ಥ ಸಾಧನೆಗೆ ಅಡ್ಡಿ ಎಂಬ ಉಲ್ಲೇಖಗಳು ಸಾಮಾನ್ಯವಾದವು. ಸ್ತ್ರೀಯರಿಗೆ ಶಿಕ್ಷಣಾಭ್ಯಾಸಕ್ಕೆ ಕಡಿವಾಣ ಹಾಕಲಾಯಿತು. ಈ ಅವಧಿಯಲ್ಲಿ ವಿವಾಹ ಕಡ್ಡಾಯವೆನಿಸಿತು. ಬಾಲ್ಯ ವಿವಾಹ ಇರುವುದರಿಂದಾಗಿ ಮುಂದೆ ವರದಕ್ಷಿಣೆ ಪಿಡುಗು ಕಾಣಿಸಿಕೊಂಡಿತು. ‘‘ಅಷ್ಟಾವರ್ಷಾಭವೇದ್ಗೌರಿ’’ ಎಂಬುದು ಸಾಮಾನ್ಯ ವಾಯಿತು. ಪಾತಿವ್ರತ್ಯ ಕಲ್ಪನೆಯನ್ನು ವೈಭವೀಕರಿಸಲಾಯಿತು. ‘ಪತಿಯೇ ಪರದೈವ’ವೆಂದು ಬಿಂಬಿಸಲಾಯಿತು. ಸ್ತ್ರೀಯರನ್ನು ಗುಲಾಮರ ಸ್ಥಾನಕ್ಕಿಳಿಸಲಾಯಿತು. ಸಾಮಾಜಿಕ, ಧಾರ್ಮಿಕ, ಚಟುವಟಿಕೆಗಳಲ್ಲಿ ಸ್ತ್ರೀಯರು ನೆಪಮಾತ್ರರಾದರು ಇದು ಪ್ರಾಚೀನ ಕಾಲದಿಂದ ಇಂದಿನವರೆಗೆ ಸಾಗಿ ಬಂದಿದೆ.

ವಾಲ್ಮೀಕಿ ಸಮುದಾಯದ ಮಹಿಳೆ

ಈ ಸಮುದಾಯದವರು ಅಥಣಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಾಗಿರುವಂತಹ ಬ್ಯಾಡರಟ್ಟಿ, ರಡ್ಡೇರಟ್ಟಿ, ಕಲ್ಲೋತಿ, ಕತ್ರಾಳ, ಕಾಗವಾಡ, ಎಲ್ಲಮ್ಮನವಾಡಿ, ಕೊಕಟನೂರ, ಕಟಗೇರಿ, ಸತ್ತಿ, ಶೇಡಬಾಳ, ಕೋಹಳ್ಳಿ ಮೊದಲಾದವುಗಳಲ್ಲಿ ಕಂಡುಬರುತ್ತಾರೆ.

ಬೇಟೆಯಾಡುವ ಮೂಲ ಕಸುಬುಳ್ಳ ಜನಾಂಗವೇ ಬೇಡರು. ಬೇಟೆಯಾಡಿಯೇ ಬದುಕುವ ಈ ಸಮುದಾಯ ಇಂದು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರಿದು ವ್ಯವಸಾಯ ಮಾಡುವುದರ ಮೂಲಕ ಕೃಷಿಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದೆ ಈ ಎಲ್ಲಾ ರಂಗಗಳಲ್ಲಿಯೂ ಹಿಂದುಳಿದಿದ್ದ ಈ ಸಮುದಾಯದಲ್ಲಿ ಮಹಿಳೆಯರು ಶೈಕ್ಷಣಿಕವಾಗಿ ಹಿಂದುಳಿದಿದ್ದು ಕೇವಲ ನಾಲ್ಕುಗೋಡೆಯ ಮಧ್ಯದಲ್ಲಿ, ಅಡುಗೆ ಮನೆಯಲ್ಲಿಯೇ ತಮ್ಮ ಜೀವನವನ್ನು ಕಳೆಯುತ್ತಿದ್ದರು. ಆದರೆ ಇಂದು ಎಲ್ಲಾ ಸಮುದಾಯದವರೊಡನೆ ಬೆರೆತು ತಮ್ಮ ಆಚರಣೆ ಸಂಪ್ರದಾಯಗಳನ್ನು ಅನುಸರಿಸುವುದರ ಜೊತೆಗೆ ಇತರರಂತೆ ತಾವೂ ಕೂಡ ಬದುಕಬೇಕೆಂಬ ಉತ್ಸಾಹವನ್ನು ತೋರುತ್ತಿದ್ದಾರೆ.

ಹಳ್ಳಿಹಳ್ಳಿಗಳಲ್ಲಿಯೂ ಸಾಕ್ಷರತಾ ಆಂದೋಲನದ ಮೂಲಕ ಜನರಿಗೆ ಅಕ್ಷರ ಜ್ಞಾನ ವನ್ನು ನೀಡಿ, ಸಮಾಜದಲ್ಲಿ ಹಿಂದುಳಿದವರ ಏಳಿಗೆಗಾಗಿ ಸಮಾಜ ಇಂದು ಶ್ರಮಿಸುತ್ತಿರುವು ದರಿಂದ ಹಿಂದುಳಿದ ಈ ಸಮುದಾಯದ ಮಹಿಳೆಯರೂ ಕೂಡ ವಿದ್ಯಾವಂತರಾಗಿದ್ದಾರೆ. ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಲ್ಲಿ ಮುಂದುವರಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ತ್ರೀಶಕ್ತಿ ಗುಂಪುಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಸಮುದಾಯದ ಮಹಿಳೆಯರು ಕೂಡ ಸ್ವಯಂಸ್ಫೂರ್ತಿಯಿಂದ ಇಂತಹ ಗುಂಪುಗಳನ್ನು ಕಟ್ಟಿಕೊಂಡು ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಬದಲಾವಣೆಗೆ ಸೂಕ್ತ ವಾತಾವರಣವನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮನೆಯಲ್ಲಿಯೇ ಬಟ್ಟೆ ಹೊಲೆಯುವುದು, ಬುಟ್ಟಿ ಹೆಣೆಯುವುದು, ಬತ್ತಿಹೊಸೆಯುವುದು, ಕಸೂತಿ ಮಾಡುವುದು, ಹಪ್ಪಳ ಸಂಡಿಗೆ ಮುಂತಾದವುಗಳನ್ನು ಮನೆಯಲ್ಲಿಯೇ ತಯಾರಿಸಿ ಅಲ್ಪಸ್ವಲ್ಪ ಹಣಗಳಿಸುವ ಸಾಹಸದಲ್ಲಿ ವಾಲ್ಮೀಕಿ ಸಮುದಾಯದ ಮಹಿಳೆಯರು ಮುಂದುವರಿದಿದ್ದಾರೆ.

ಸ್ತ್ರೀ ಶಕ್ತಿ ಹಲವು ಸುಧಾರಣೆಗಳನ್ನು ತಂದಿದೆ

೧. ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಮಹಿಳೆಯರ ಆರ್ಥಿಕ ಹಾಗೂ ಜೀವನ ಮಟ್ಟ ಸುಧಾರಿಸಿದೆ.

೨. ಒಂದು ಕಾಲಕ್ಕೆ ಮನೆಯ ಯಜಮಾನನನ್ನೇ ಅವಲಂಬಿಸಿದ್ದ ಕುಟುಂಬದಲ್ಲಿ ಇಂದು ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಮಹಿಳೆಯರು ಹೊತ್ತಿದ್ದಾರೆ.

೩. ಸ್ವಯಂ ಉದ್ಯೋಗ ಕೈಗೊಳ್ಳುವುದರ ಮೂಲಕ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ.

೪. ಬೇಟೆಯಾಡಿ ಬರುವ ಯಜಮಾನರ ಬರುವನ್ನೇ ಕಾದು ಮನೆಯ ಒಳಗೇ ಕುಳಿತು ಹೊಸ್ತಿಲು ದಾಟಲು ಹಿಂಜರಿಯುತ್ತಿದ್ದ ಮಹಿಳೆಯರು ಇಂದು ತಮ್ಮ ಹಕ್ಕಗಳಿಗಾಗಿ ಹೋರಾಟ ನಡೆಸುವಷ್ಟು ಸಂಘಟಿತರಾಗಿದ್ದಾರೆ.

೫. ನಾಯಕತ್ವ ಗುಣ ಬೆಳೆದಿದೆ. ಗ್ರಾಮದ ಅಭ್ಯುದಯ, ಸ್ವಚ್ಛತೆ, ಸಾಮಾಜಿಕ ಕಾಳಜಿ ಮೂಡಿದೆ.

೬. ರಾಜಕೀಯವಾಗಿ ಸಶಕ್ತಗೊಂಡಿದ್ದಾರೆ. ಪಂಚಾಯತಿ ಸಂಸ್ಥೆಗಳ ಸದಸ್ಯರೂ ಆಗಿದ್ದಾರೆ.

೭. ಸಹಕಾರಿ ಬ್ಯಾಂಕು ವ್ಯವಹಾರಗಳ ಜ್ಞಾನ ಮೂಡಿಸಿಕೊಂಡಿದ್ದಾರೆ.

೮. ಗುಡಿಕೈಗಾರಿಕೆಯ ಮೂಲಕ ಉದ್ಯೋಗವನ್ನು ಕಂಡುಕೊಂಡಿದ್ದಾರೆ.

೯. ತಮ್ಮ ಗ್ರಾಮಗಳಲ್ಲಿ ಶಾಲೆ, ಆಸ್ಪತ್ರೆ, ಬಸ್ಸು, ರಸ್ತೆ, ಕುಡಿಯುವ ನೀರು ಮುಂತಾದ ಸವಲತ್ತುಗಳನ್ನು ಪಡೆಯುವಲ್ಲಿ ತಮ್ಮ ಹೋರಾಟವನ್ನು ಪ್ರದರ್ಶಿಸುತ್ತಿದ್ದಾರೆ.

೧೦. ಸ್ತ್ರೀಶಕ್ತಿ ಮಹಿಳೆಯರು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

೧೧. ಶೋಷಿತ ಮತ್ತು ಬಡ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿದೆ. ಬಡತನ ನಿರ್ಮೂಲನೆ ಸಮುದಾಯ ಅಭಿವೃದ್ದಿಗೆ ನೆರವಾಗಿದೆ.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲು ಗುರುವು ಎನ್ನುವುದನ್ನು ಸಾಬೀತುಪಡಿಸುತ್ತಿರುವಂತೆ ವಾಲ್ಮೀಕಿ ಸಮುದಾಯದ ಮಹಿಳೆಯರು ಕೂಡ ಸುಶಿಕ್ಷಿತರಾಗಿದ್ದಾರೆ.

ಅಥಣಿಯ ಸುತ್ತಮುತ್ತಲಿನ ಗ್ರಾಮಪರಿಶೀಲನೆಯನ್ನು ಮಾಡಿದಾಗ ತಿಳಿದುಬರುವ ಸಂಗತಿಯೆಂದರೆ ವಾಲ್ಮೀಕಿ ಸಮುದಾಯದ ಮಹಿಳೆಯರು ಕೂಡ ಇತರ ಸಮುದಾಯದ ಮಹಿಳೆಯರಿಗಿಂತ ನಾವೇನು ಕಡಿಮೆಯಿಲ್ಲ ಎನ್ನುವುದನ್ನು ಸಾಮಾಜಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ತಮ್ಮ ಸಾಹಸವನ್ನು ಮೆರೆಯುತ್ತಿದ್ದಾರೆ.

ಹೀಗೆ ಮುಂದುವರಿಯುವುದರ ಜೊತೆಗೆ ‘‘ಹಳೆಬೇರು ಹೊಸ ಚಿಗುರು ಮರಕ್ಕೆ ಶೋಭೆ’’ ಎನ್ನುವಂತೆ ಆಧುನಿಕತೆಯ ಬದುಕಿನಲ್ಲಿಯೂ ಕೂಡ ತಮ್ಮ ಹಿರಿಯರು ಗಳಿಸಿರುವ ಆಸ್ತಿಯಾಗಿರುವ ರೂಢಿ, ಸಂಪ್ರದಾಯ, ಆಚರಣೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸಿಕೊಂಡಿರುವುದನ್ನು ಕಾಣಬಹುದು. ಹಿರಿಯರು ಆಚರಿಸಿರುವ ಅನೇಕ ರೂಢಿ, ಸಂಪ್ರದಾಯಗಳನ್ನು ಇಂದು ನಾವು ಮೂಢನಂಬಿಕೆ ಎಂಬ ಹೆಸರಿನಿಂದ ಕರೆದರೂ ಸಹ, ಇದು ಅದರಲ್ಲಿ ವೈಜ್ಞಾನಿಕ ದೃಷ್ಟಿಯಿಟ್ಟು ನೋಡಿದಾಗ ವಿಜ್ಞಾನದ ಸತ್ಯಾಂಶಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ವಾಲ್ಮೀಕಿ ಸಮುದಾಯದ ಜೀವನಾವರ್ತನ ಆಚರಣೆಗಳಲ್ಲಿ ಹೆಣ್ಣು ಮಗಳೊಬ್ಬಳು ಮೈನೆರೆದಾಗ ಐದು ದಿನಗಳ ಕಾಲ ವಸತಿಯಿಂದ ಹೊರಗೆ ಹಲಿಗೆಯಲ್ಲಿ ಅವಳನ್ನು ಕುಳ್ಳಿರಿಸಿ ಅಲಂಕಾರಗಳನ್ನು ಮಾಡುವುದು, ತಂದೆಯ ಸಹೋದರಿಯರಿಂದ ಧೈರ್ಯ ತಿಳುವಳಿಕೆಯನ್ನು ನೀಡುವುದು, ವಿಧ ವಿಧದ ಕಜ್ಜಾಯಗಳನ್ನು ನೀಡುವುದು ಇವು ಇಂದು ಬೆಳೆಯುತ್ತಿರುವ ಪಾಶ್ಚಾತ್ಯ ಸಂಸ್ಕೃತಿಯ ನಡುವೆ ಮೂಢನಂಬಿಕೆ ಯಂತೆ ಕಂಡರೂ ವಿಜ್ಞಾನದ ದೃಷ್ಟಿಯಲ್ಲಿ ನೋಡಿದಾಗ ಇದು ಅತ್ಯಾವಶ್ಯಕ. ಯಾಕೆಂದರೆ ಹೆಣ್ಣು ಮಗಳು ಮೈನೆರೆಯುವುದು ಎಂದರೆ ಮನೋವಿಜ್ಞಾನದ ದೃಷ್ಟಿಯಲ್ಲಿ ಬಾಲ್ಯಾವಸ್ಥೆ ಯನ್ನು ಮುಗಿಸಿ ಯೌವನಾವಸ್ಥೆಗೆ ಕಾಲಿಡುವ ಒಂದು ಹಂತ. ಆ ಒಂದು ಕಾಲವನ್ನು ಸಂಧಿಗ್ಧಾವಸ್ಥೆ ಎಂದು ಕರೆಯುವರು. ಆ ವೇಳೆಯಲ್ಲಿ ಉಂಟಾಗುವ ದೈಹಿಕ ಬದಲಾವಣೆ ಯಿಂದ ಗಾಬರಿಯಾಗಿ ತಳಮಳ, ಕುತೂಹಲ, ಯ, ಮಾನಸಿಕ ಒತ್ತಡಕ್ಕೆ ಒಳಗಾಗಿರುತ್ತಾರೆ. ಆಗ ಅನುಭವಸ್ಥ ಹಿರಿಯರ ತಿಳಿಯ ಹೇಳುವಿಕೆ ಅವಶ್ಯವಾಗಿರುತ್ತದೆ. ಹಾಗೆ ದೈಹಿಕವಾಗಿ ಬೆಳವಣಿಗೆಯ ಕಾಲವಾಗಿದ್ದು ಆಯಾಸ ಬಳಲಿಕೆಗಳು ಉಂಟಾಗದಂತೆ ಪೌಷ್ಠಿಕ ಆಹಾರದ ಕೊರತೆಯಾಗದಂತೆ ವಿವಿಧ ರೀತಿ ತಿನಿಸುಗಳನ್ನು ಕೊಡುವರು. ಆ ವೇಳೆಯಲ್ಲಿ ಬಳಲಿಕೆ ಯುಂಟಾಗ ದಂತೆ ಅವಳಿಗೆ ವಿಶ್ರಾಂತಿಯ ಅವಶ್ಯಕತೆ ಇರುವುದರಿಂದ ಮೈಲಿಗೆ ಎನ್ನುವ ಹೆಸರಿನಲ್ಲಿ ವಸತಿಯಿಂದ ಹೊರಗಿಟ್ಟು, ವಿಶ್ರಾಂತಿಯನ್ನು ನೀಡಲಾಗುತ್ತದೆ ಎನ್ನಬಹುದು. ದೈಹಿಕ ದಣಿವನ್ನು ನಿವಾರಿಸುವುದಕ್ಕಾಗಿ ಎಣ್ಣೆ ಹಾಕಿ ಬಿಸಿ ನೀರಿನ ಸ್ನಾನವನ್ನು ಮಾಡಿಸಿ, ಶುಭ ಸಂಕೇತವಾಗಿ ಅರಿಶಿಣ ಹೂಗಳಿಂದ ಅವಳನ್ನು ಅಲಂಕರಿಸುವುದು ಸಹಜವಾಗಿದೆ.

ಅದೇ ರೀತಿಯಲ್ಲಿ ಹೆರಿಗೆಯ ಕಾಲದಲ್ಲಿ ಸೂಲಗಿತ್ತಿಯ ಕಾರ್ಯದಲ್ಲಿ ಇಂದು ಶೈಕ್ಷಣಿಕವಾಗಿ ಮುಂದುವರೆದು ಪದವಿ ಪಡೆದು ಆಸ್ಪತ್ರೆಯಲ್ಲಿ ಕಾರ್ಯನಿರತರಾಗಿರುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಈ ವ್ಯವಸ್ಥೆ ಇಲ್ಲದ ಕಾರಣ ಅನುಭವದ ಅರ್ಹತೆ ಯಿಂದಾಗಿ ಆ ಹುದ್ದೆಯನ್ನು ಅಲಂಕರಿಸುತ್ತಾರೆ. ಇದು ನಿಜಕ್ಕೂ ಪ್ರಸಂಸನೀಯವಾಗಿದೆ.

ಒಟ್ಟಾರೆಯಾಗಿ ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ ಮಹಿಳೆ ಹಂತ ಹಂತವಾಗಿ ತನ್ನ ಸಾಮರ್ಥ್ಯವನ್ನು ಉಳಿಸಿ ಬೆಳೆಸಿಕೊಳ್ಳುತ್ತಿರುವುದನ್ನು ಮನಗಾಣಬಹುದು. ಅಂತೆಯೇ ತನ್ನ ಸಮುದಾಯದ ಸಂಸ್ಕೃತಿಯಾದ ಆಚಾರ-ವಿಚಾರ, ನಡೆ-ನುಡಿಯಲ್ಲಿ ವೈಶಿಷ್ಟ್ಯತೆ ಕಂಡರೂ ತನ್ನ ಕುರುಹುಗಳನ್ನು ಉಳಿಸಿ ಬೆಳೆಸುತ್ತಿರುವುದು ಸ್ಮರಣೀಯವಾದುದು. ಅದೇ ರೀತಿ ಈ ವಿಚಾರ ಗೋಷ್ಠಿಯನ್ನು ಕಂಡಾಗ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಗಳಾದಂಥ ಬಿ.ಎ.ವಿವೇಕ ರೈ ರವರು ಕನ್ನಡವು ಕಾಗದ ರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವುದಾಗಬೇಕು ಅಂದಾಗ ಸ್ತ್ರೀಯು ತನ್ನ ಅನಿಷ್ಠ ವಿಮೋಚನೆಗಾಗಿ ಸ್ತ್ರೀವಾದಿ ರಾಜಕಾರಣ ನಡೆಯಲು ಸಾಧ್ಯ ಎಂಬ ಮಾತನ್ನು ತಮ್ಮೆಲ್ಲರಿಗೂ ನೆನಪಿಸುತ್ತೇನೆ. ಅದೇ ರೀತಿ ಈ ವಿಚಾರ ಸಂಕಿರಣದಲ್ಲಿ ಸಮಾಜದ ಸಮಸ್ತ ಮಹಿಳೆಗೆ ಒಂದು ಕರೆಯನ್ನು ನೀಡಲಿಚ್ಚಿಸುತ್ತೇನೆ. ಮಹಿಳೆ ಯಾವುದೇ ಒಂದು ಸಮುದಾಯದಿಂದಾಗಲಿ, ವ್ಯಕ್ತಿಯಿಂದಾಗಲಿ ದೃಢೀಕರಿಸಿಕೊಳ್ಳುವುದನ್ನು ಬಿಟ್ಟು ತನ್ನನ್ನು ತಾನೇ ಸ್ವಯಂ ದೃಢೀಕರಿಸಿಕೊಳ್ಳಬೇಕು.