ಬೇಡ ಸಮುದಾಯ ಒಂದು ಪಶುಪಾಲಕ ದ್ರಾವಿಡ ಸಂಸ್ಕೃತಿಗೆ ಸೇರಿದ ಬುಡಕಟ್ಟು ಸಮುದಾಯ. ಪಶುಪಾಲನೆಯನ್ನೇ ನಂಬಿ ಅಲೆದಾಡಿದ ಈ ಸಮುದಾಯ ಕೃಷಿಯನ್ನು ಪ್ರಾರಂಭಿಸಿದ ಮೇಲೆ ಒಂದೆಡೆ ನೆಲೆಸಲು ಆರಂಭಿಸಿತು. ಕೃಷಿಯೊಂದಿಗೆ ತನ್ನ ಪರಂಪರಾಗತ ಪಶುಪಾಲನೆ, ಬೇಟೆಗಾಗಿ, ತನ್ನ ವಾಸಕ್ಕಾಗಿ ಗಿರಿ ಬೆಟ್ಟಗಳನ್ನೇ ಆಯ್ಕೆ ಮಾಡಿಕೊಂಡಿತು. ಈ ಕಾರಣದಿಂದ ಭಾರತದಾದ್ಯಂತ ಈ ಸಮುದಾಯ ಕೆಲವು ಆಯ್ದ ಗಿರಿಬೆಟ್ಟಗಳಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದೆ. ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಈ ಸಮುದಾಯವನ್ನು ಕಾಣಬಹುದು. ಆದ್ದರಿಂದಲೇ ಈ ಸಮುದಾಯವನ್ನು ವಿಶೇಷವಾಗಿ ಉತ್ತರ ಭಾರತದಲ್ಲಿ ಈಗಲೂ ಗಿರಿಜನ, ಬೆಟ್ಟದ ಜನ, ಬುಡಕಟ್ಟು ಪಂಗಡ ಮೊದಲಾದ ಶಬ್ಧಗಳಿಂದ ಕರೆಯಲಾಗುತ್ತದೆ. ಬೆಟ್ಟ ಗುಡ್ಡಗಳ ಸಾಲುಗಳ ಒತ್ತರಿನಲ್ಲಿರುವ ಹಲವಾರು ಪ್ರದೇಶಗಳು ಈ ಸಮುದಾಯದ ವಾಸದ ಊರುಗಳಾಗಿವೆ.

ಕರ್ನಾಟಕ ರಾಜ್ಯದಲ್ಲಿಯೂ ಈ ಸಮುದಾಯವನ್ನು ಗಿರಿ ಬೆಟ್ಟ, ದಟ್ಟವಾದ ಅರಣ್ಯ ವಿರುವ ಪ್ರದೇಶದಲ್ಲಿಯೇ ಕಾಣಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶ, ರಾಜ್ಯ ವನ್ನು ಆಳಿದ ಅನೇಕ ದೇಸೀ ಸಂಸ್ಥಾನಗಳು ಹೆಚ್ಚಾಗಿ ರಕ್ಷಣೆಯ ದೃಷ್ಠಿಯಿಂದ ಗಿರಿ ಬೆಟ್ಟಗಳನ್ನೇ ಅರಿಸಿಕೊಂಡಿದ್ದವು. ಸೈನಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೇಟೆಗಾರಿಕೆ, ಧೈರ್ಯ, ಸಾಹಸ, ಕುಸ್ತಿ ವಿದ್ಯೆಗಳಲ್ಲಿ ಹೆಚ್ಚಿನ ಪರಿಣಿತ ಹೊಂದಿದ್ದವರು ಈ ಸಮುದಾಯ ದವರಾಗಿದ್ದರು.ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಬೆಳಗಾವಿ, ಚಿತ್ರದುರ್ಗ, ಬಳ್ಳಾರಿ, ಧಾರವಾಡ, ಕಲುಬುರ್ಗಿ, ರಾಯಚೂರು ಜಿಲ್ಲೆಗಳಲ್ಲಿ ಈ ಸಮುದಾಯ ಹೆಚ್ಚಿದೆ.

ಬಳ್ಳಾರಿ ಜಿಲ್ಲೆಯ ಬೇಡ ಸಮುದಾಯದ ಜನ ಜೀವನದ ಬಗ್ಗೆ ತಿಳಿಯಬೇಕಾದರೆ ೧೪ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಮೂಸೆಯಲ್ಲಿಯೇ ಗಮನಿಸುವುದು ಸೂಕ್ತವಾಗುತ್ತದೆ. ಈ ವಿಜಯನಗರ ಸಾಮ್ರಾಜ್ಯದ ಸಂದರ್ಭದಲ್ಲಿ ಕರ್ನಾಟಕದಾದ್ಯಂತ ಅನೇಕ ಪಾಳೆಗಾರರ ನೆಲೆಗಟ್ಟುಗಳಿದ್ದವು. ಈ ಪಾಳೆಗಾರರಲ್ಲಿ ಬಹುತೇಕರು ‘ನಾಯಕ’ ರಾಗಿದ್ದರು. ಅವರು ಹೊಂದಿದ್ದ ಸೈನ್ಯ ಬಲದಲ್ಲಿ ಹೆಚ್ಚಿನ ಸೈನಿಕರು ಈ ಸಮುದಾಯಕ್ಕೆ ಸೇರಿದ್ದರು. ವಿಜಯನಗರದ ೧೦ ಲಕ್ಷ ಸೈನಿಕರಲ್ಲಿ ಮುಕ್ಕಾಲು ಭಾಗ ಸ್ಥಳೀಯ ನಾಯಕ ಸಮುದಾಯದ ಸೈನಿಕರಿದ್ದರೆಂದು ಚರಿತ್ರೆಯಲ್ಲಿ ಹೇಳಲಾಗಿದೆ. ವಿಜಯನಗರದ ಅರಸರು ನಡೆಸಿದ ಅನೇಕ ದಂಡಯಾತ್ರೆಗಳಲ್ಲಿ ಈ ಸೈನಿಕರು ಯುದ್ಧದಲ್ಲಿ ಹೋರಾಡಿ ಮಡಿದು ವೀರರೆನಿಸಿಕೊಂಡರು. ಯುದ್ಧಕ್ಕೆ ಹೋದ ಸೈನಿಕರು ಯುದ್ಧದಲ್ಲಿ ಸಾವನಪ್ಪಿದಾಗ ಇವರ ಹೆಂಡತಿಯರು ಇಡೀ ಕುಟುಂಬವನ್ನು ನಡೆಸಿ ಕುಟುಂಬಕ್ಕೆ ಆಧಾರ ಸ್ಥಂಭವಾಗಿದ್ದರು. ‘ರಾಜಾಶ್ರಯ’ ಇಲ್ಲದೆಯೂ ಸಂಸಾರದ ಹೊಣೆ ನಿಭಾಯಿಸಿದ ಖ್ಯಾತಿ ಈ ಸಮುದಾಯದ ಮಹಿಳೆಯರಲ್ಲಿ ಕಾಣಬಹುದು. ಸತ್ತು ಹೋದ ಸೈನಿಕರ ವಿಧವಾ ಪತ್ನಿಯರು ತಮ್ಮ ಸಂಸಾರದ ನಿರ್ವಹಣೆಗೆ ಅನೇಕ ವೃತ್ತಿಗಳನ್ನು ಅವಲಂಬಿಸಿದರು. ಕೃಷಿ ಜಮೀನುಗಳಲ್ಲಿ ಕೂಲಿಗಳಾಗಿ, ಮನೆಕೆಲಸದ ಆಳಾಗಿ, ಸಂಗೀತ ನೃತ್ಯಪಟುಗಳಾಗಿ, ಅನೇಕ ರಾಜರ, ದಂಡನಾಯಕರ ಭೋಗದ ವಸ್ತುಗಳಾಗಿ, ಪಾರಂಪರಿಕ ದೇವದಾಸಿಗಳಾಗಿ ವಿವಿಧ ವೃತ್ತಿಗಳನ್ನು ಅವಲಂಬಿಸಿರುವ ಬಗ್ಗೆ ಐತಿಹಾಸಿಕ ಪುರಾವೆಗಳಿವೆ. ವಿಜಯನಗರದ ಅರಸರಲ್ಲಿ ಎರಡನೆಯ ಹರಿಹರನು ತನ್ನ ಅಧೀನದ ಪ್ರಾಂತ್ಯಗಳಲ್ಲಿ ಸುಮಾರು ೨೬ ಪಟ್ಟಣ ಮತ್ತು ನಗರಗಳಲ್ಲಿ ಪ್ರತಿವಾರದ ‘ಸಂತೆ’ಗಳು ನಡೆಯುವಂತೆ ಏರ್ಪಾಡು ಮಾಡಿದ್ದನು. ಈ ಕಾರಣಕ್ಕಾಗಿ ಮಡ್ಡಿಯ ದಂಡನಾಯಕನನ್ನು ಸಂತೆಯಲ್ಲಿ ತೆರಿಗೆಗಳನ್ನು ಸಂಗ್ರಹಿಸಲು ನೇಮಕ ಮಾಡಿದ್ದನು. ಸಂತೆಯ ವ್ಯಾಪಾರ ಹಾಗೂ ತೆರಿಗೆ ಸಂಗ್ರಹದಲ್ಲಿ ತನ್ನ ಸಮುದಾಯದ ಬೇಡರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದನು. ತೆರಿಗೆ ಸಂಗ್ರಹದ ಕಾರ್ಯವನ್ನು ಗಂಡಸರಿಗೆ ವಹಿಸಿದ್ದರೆ, ‘ಸಂತೆಯ’ ವ್ಯಾಪಾರ ಅದರಲ್ಲೂ ತರಕಾರಿ, ಹಣ್ಣು, ಹೂ ವ್ಯಾಪಾರವನ್ನು ಸಂಪೂರ್ಣವಾಗಿ ತನ್ನ ಸಮುದಾಯದ ಬೇಡ ಮಹಿಳೆಯರಿಗೆ ನೀಡಿದ್ದನು. ಅದೇ ಪರಂಪರೆ ಈಗಲೂ ಮುಂದುವರೆದಿದೆ ಎಂದು ಹೇಳಲಾಗಿದೆ. ಅಂದಿನ ಯುದ್ಧಕೋರ ದಿನಗಳಲ್ಲಿ ಸೈನಿಕರ ಪತ್ನಿಯರು ಸಂಸಾರದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಸಂಸಾರದ ಆರ್ಥಿಕ, ಸಾಮಾಜಿಕ ಜೀವನದಲ್ಲಿ ನಿರ್ಣಾಯಕ ಸಂದರ್ಭದಲೆಲ್ಲಾ ಗಂಡಸರಿಗಿಂತ ಈ ಸಮುದಾಯದ ಮಹಿಳೆಯರ ಪಾತ್ರವೇ ಮುಖ್ಯವಾಗಿರುವುದು ತಿಳಿದುಬರುತ್ತದೆ. ಮಕ್ಕಳ ಲಾಲನೆ ಪೋಷಣೆ, ಹಬ್ಬ ಹರಿದಿನಗಳ ಆಚರಣೆ, ಆರ್ಥಿಕ ಚಟುವಟಿಕೆಗಳ ನಿರ್ವಹಣೆ ಮೊದಲಾದ ಯಾವುದೇ ರಂಗದಲ್ಲಿ ಮಹಿಳೆಯರ ಪ್ರಾಧಾನ್ಯತೆ ಕಂಡುಬರುತ್ತದೆ.

ಮಹಿಳಾ ಪ್ರಧಾನ ಅಥವಾ ಸ್ತ್ರೀ ಪ್ರಧಾನ ಕುಟುಂಬ ವ್ಯವಸ್ಥೆ ಹೊಸಪೇಟೆ ತಾಲೂಕಿನಲ್ಲಿ ಬೇಡ ಸಮುದಾಯದಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಕುಟುಂಬದಲ್ಲಿ ಗಂಡನಿದ್ದರೂ ಹೆಂಡತಿಯ ಯಜಮಾನಿಕೆಯನ್ನು ಈ ಸಮುದಾಯದ ಬಹುತೇಕ ಕುಟುಂಬಗಳಲ್ಲಿ ಕಾಣಬಹುದು. ಇದಕ್ಕೆ ಈ ಸಮುದಾಯದ ಪುರುಷರ ಅನ್ಯ (?)  ಕಾರ್ಯಗಳು ಕಾರಣವಿರಬಹುದು. ಗಂಡಸರ ದುಂದುಗಾರಿಕೆಯೂ ಈ ಕಾರಣಗಳಲ್ಲಿ ಒಂದಾಗಿರಬಹುದು. ವಿವಿಧ ಕಾರಣಗಳಿಗಾಗಿ ಕುಟುಂಬದ ಯಜಮಾನಿಕೆ ಈ ಸಮುದಾಯದ ಮಹಿಳೆಯರಿಗೆ ಲಭಿಸಿರುವುದು ಸ್ಪಷ್ಠವಾಗಿದೆ. ವಿಜಯನಗರ ಸಾಮ್ರಾಜ್ಯದ ಕಪ್ಪುಚುಕ್ಕೆಯ ಅವಶೇಷಗಳಲ್ಲಿ ಒಂದು ಸಾಮಾಜಿಕ ಪಿಡುಗಾಗಿರುವ ಈಗಲೂ ಜ್ವಲಂತ ಸಮಸ್ಯೆಯಾಗಿರುವ ದೇವದಾಸಿ ‘ಪದ್ಧತಿ’ಯೂ ಒಂದು ಕಾರಣವೆಂದೇ ಹೇಳಬೇಕಾಗುತ್ತದೆ. ಯುದ್ಧದಲ್ಲಿ ದಣಿದ ಸೈನಿಕರ ಭೋಗದ ವಸ್ತುಗಳನ್ನಾಗಿ ಸ್ಥಳೀಯ ಹೆಣ್ಣು ಮಕ್ಕಳನ್ನು ಬಳಸಿ ಕೊಳ್ಳುತ್ತಿದ್ದರು. ಈ ರೀತಿ ಬಳಸಿಕೊಂಡ ಹೆಣ್ಣುಮಕ್ಕಳಿಗೆ ಸಾಮಾಜಿಕ ಅಂಗೀಕಾರಕ್ಕಾಗಿ ‘ದೇವದಾಸಿ’ ಪದ್ಧತಿಯನ್ನು ಪೋಷಿಸಿದರು. ದೇವದಾಸಿ ಪದ್ಧತಿ ವಂಶದ ಶ್ರೇಷ್ಠ ಪರಂಪರೆ ಎಂಬಂತೆ ಬೆಳೆದುಕೊಂಡು ಬಂದಿತಲ್ಲದೆ ಇದಕ್ಕೆ ಪೂರಕವಾದ ಹಲವು ಸಾಮಾಜಿಕ ಅನಿಷ್ಠಗಳೂ, ಅನಾಚಾರಗಳು ಹುಟ್ಟಿಕೊಳ್ಳಲು ಈ ಪದ್ಧತಿ ಬಹುಮಟ್ಟಿಗೆ ಕಾರಣವಾಯಿತು. ದೇವದಾಸಿ ಪದ್ಧತಿ ಬಗ್ಗೆ ನಮ್ಮ ಸರಕಾರಗಳು ಏನೇ ಹೇಳಿದರೂ ಈ ಪದ್ಧತಿ ಇಂದಿಗೂ ಈ ಸಮುದಾಯವನ್ನು ಬೆಂಬಿಡದೆ ಕಾಡುತ್ತಿದೆ. ಈ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿರುವ ಕುಟುಂಬಗಳಲ್ಲಿಯ ಆರ್ಥಿಕ ಸ್ಥಿತಿಗತಿಗಳು, ಶೈಕ್ಷಣಿಕ ಸ್ಥಿತಿವಂತರಿರುವುದನ್ನು ಗಮನಿಸಬಹುದು. ಈ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲಿ ಅನೇಕರು ವಿದ್ಯಾ ವಂತರಿದ್ದು, ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸಾಮಾಜಿಕ ಅನಿಷ್ಟ ಪದ್ಧತಿಯಾದ ‘ದೇವದಾಸಿ’ ಪದ್ಧತಿಯಿಂದ ಏನೆಲ್ಲಾ ಬದಲಾವಣೆಯಾದರೂ ಆರ್ಥಿಕ, ಶೈಕ್ಷಣಿಕ ಸ್ಥಿತ್ಯಂತರಗಳನ್ನು ಕಂಡರೂ ಈ ಪದ್ಧತಿಯ ನಿರ್ಮೂಲನೆ ಅಸಾಧ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಬೇಡ ಸಮುದಾಯದ ಮಹಿಳೆಯರನ್ನು ನೋಡಿದಲ್ಲಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಬೇಡ ಸಮುದಾಯದ ಮಹಿಳೆಯರ ಜೀವನದ ಬಗ್ಗೆ ತಿಳಿಯಬಹುದು.

೧. ತರಕಾರಿ ಮಾರುವ ಬೇಡ ಮಹಿಳೆಯರು : ವಿಜಯನಗರ ಸಾಮ್ರಾಜ್ಯದ ಎರಡನೆ ಹರಿಹರನ ಕಾಲದಿಂದ ತರಕಾರಿ ಹಾಗೂ ದಿನಸಿ ವ್ಯಾಪಾರಕ್ಕೆ ವಾರದ ಸಂತೆಗಳು ಪ್ರಸಿದ್ದಿ ಪಡೆದಿವೆ. ಏರುತ್ತಿರುವ ಜನಸಂಖ್ಯೆಗೆ ಪೂರಕವಾಗಿ ವಾರದ ಸಂತೆಗಳು ಕೇವಲ ಸಾಂಕೇತಿಕವಾಗಿದ್ದು ನಗರದಲ್ಲಿ ಪ್ರತಿನಿತ್ಯವೂ ತರಕಾರಿ ವ್ಯಾಪಾರ ನಡೆಯುತ್ತಿದ್ದು ತಾಲೂಕಿನ ಪ್ರಮುಖ ಹಳ್ಳಿಗಳಲ್ಲಿ ವಾರದ ಸಂತೆಗಳು ಇಂದಿಗೂ ನಡೆಯುತ್ತಿವೆ. ಹೊಸಪೇಟೆ ನಗರದಲ್ಲಿಯೂ ಪ್ರತಿ ಭಾನುವಾರ ವಾರದ ಸಂತೆ ನಡೆಯುತ್ತಿದ್ದರೂ ಇದು ಕೇವಲ ವಾಡಿಕೆಯಾಗಿ ಮಾತ್ರ ಕಂಡುಬರುತ್ತದೆ. ಪ್ರತಿ ದಿನ ಹೊಸಪೇಟೆ ನಗರದ ಎರಡು ಸ್ಥಳಗಳಲ್ಲಿ ಪ್ರಮುಖ ತರಕಾರಿ ವ್ಯಾಪಾರ ನಡೆಯುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದಲ್ಲಿ ನಡೆಯುವ ತರಕಾರಿ ವ್ಯಾಪಾರ ತುಂಬಾ ವೈಶಿಷ್ಟ್ಯವಾದದ್ದು. ಯಾವುದೇ ಪೂರ್ವಬಾವಿ ಬಂಡವಾಳವಿಲ್ಲದೆ ಮಾರುಕಟ್ಟೆ ಪ್ರವೇಶ ಮಾಡುವ ಮಹಿಳೆ (ನಾಯಕ ಮಹಿಳೆ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ)  ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿ ಪಕ್ಕದಲ್ಲಿಯೇ ಚಿಲ್ಲರೆ ಬೆಲೆಗೆ ಮಾರಾಟ ಮಾಡಿ ತಾನು ಖರೀದಿಸಿದ ಮೊತ್ತವನ್ನು ಸರಿಬಂದ ಸಗಟು ವ್ಯಾಪಾರಿಗಳಿಗೆ ಪಾವತಿ ಮಾಡಿ ಉಳಿದ ಲಾಭದ ಹಣದಿಂದ ತನ್ನ ಕುಟುಂಬಕ್ಕೆ ಬೇಕಾದ ದಿನಸಿ ಖರೀದಿಸಿ ಮನೆ ಸೇರುವ ಅದೆಷ್ಟೋ ಮಹಿಳೆಯರು ತಮ್ಮ ಕುಟುಂಬಕ್ಕೆ ಪ್ರಮುಖ ಆಧಾರ ಸ್ತಂಭಗಳಾಗಿದ್ದಾರೆ. ಈ ಮಹಿಳೆಯರ ದುಡಿಮೆ ನೆನೆಸಿಕೊಂಡರೆ, ರೋಮಾಂಚನ ಆಗುತ್ತದೆ. ಬೆಳಿಗ್ಗೆ ೩ ಗಂಟೆಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಸಾಲುಗಳಲ್ಲಿ ಹೊರಡುವ ದೃಶ್ಯ ಬೇಡರ ಏಳು ಕೇರಿಗಳಲ್ಲಿ ಪ್ರತಿನಿತ್ಯವೂ ಸಾಮಾನ್ಯ ದೃಶ್ಯ. ಎರಡು ವರ್ಗದ ವ್ಯಾಪಾರಿ ಮಹಿಳೆ ಯರನ್ನು ಇಲ್ಲಿ ಗುರುತಿಸಬಹುದು. ಸ್ವಂತ ಅಲ್ಪಸ್ವಲ್ಪ ಜಮೀನಿನಲ್ಲಿ ತಾವೇ ಕೈಯಾರೇ ನೀರು ಹಾಕಿ ಬೆಳಸಿದ ಸೊಪ್ಪು, ತರಕಾರಿಗಳನ್ನು ತಲೆ ಮೇಲೆ ಹೊತ್ತು ನಗರದ ಪ್ರಮುಖ ತರಕಾರಿ ಮಾರುಕಟ್ಟೆಯಲ್ಲಿ ಮಾರುವ ವರ್ಗ ಒಂದಾದರೆ, ಮತ್ತೊಂದು ನಾನೀಗಾಗಲೇ ಹೇಳಿದಂತೆ ಕೃಷಿ ಮಾರುಕಟ್ಟೆಯಲ್ಲಿ ಸಗಟು ಬೆಲೆಯಲ್ಲಿ ಖರೀದಿಸಿ ಚಿಲ್ಲರೆ ಮಾರಾಟ ಮಾಡುವ ವರ್ಗ. ಈ ಎರಡೂ ವರ್ಗಗಳಲ್ಲಿ ಬೇಡ ಮಹಿಳೆಯರದೇ ಸಿಂಹಪಾಲು. ಈ ಕುಟುಂಬಗಳಲ್ಲಿ ವಂಶ ಪಾರಂಪರಿಕ ವೃತ್ತಿಯಾಗಿ ತರಕಾರಿ ಮಾರಾಟದ ವೃತ್ತಿ ನಡೆದುಕೊಂಡು ಬಂದಿದೆ.

ಈ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ತರಕಾರಿ ಮಾರಾಟದ ಮಹಿಳೆಯರೇ ವಹಿಸಿಕೊಂಡಿರುತ್ತಾರೆ. ಸಾಮಾನ್ಯವಾಗಿ ಮದುವೆ ಆದ ಹೆಣ್ಣು ಗಂಡನ ಮನೆಗೆ ಹೋಗುವುದು ಸಂಪ್ರದಾಯ. ಇತರೆಲ್ಲಾ ಕುಟುಂಬದಲ್ಲಿಯೂ ಇದು ಸರ್ವೇಸಾಮಾನ್ಯ. ಆದರೆ ತರಕಾರಿ ಮಾರಾಟದ ಕುಟುಂಬಗಳಲ್ಲಿ ಇದು ಅಷ್ಟಾಗಿ ಕಾಣುವುದಿಲ್ಲ. ಮದುವೆ ಆಗಿ ಹೆಂಡತಿಯ ಮನೆಗೆ ಗಂಡನೇ ಬರುವ ಅಥವಾ ತವರು ಮನೆಯ ಸಹಾಯದಿಂದ ಪ್ರತ್ಯೇಕ ಮನೆಯಲ್ಲಿ ವಾಸಿಸುವ ಪದ್ಧತಿ ಇದೆ. ಗಂಡನು ಈ ಕುಟುಂಬಗಳಲ್ಲಿ ಯಜಮಾನ ಅನ್ನುವುದಕ್ಕಿಂತ ಹೆಂಡತಿಯ ವ್ಯಾಪಾರಕ್ಕೆ ಸಾಥ್ ನೀಡುವುದೇ ಹೆಚ್ಚು ಕಂಡುಬರುತ್ತದೆ. ಮನೆಯ ಆರ್ಥಿಕ ಚಟುವಟಿಕೆಯ ಕೇಂದ್ರಬಿಂದು ಮಹಿಳೆಯೇ ಆಗಿರುತ್ತಾಳೆ. ಮಕ್ಕಳ ಲಾಲನೆ, ಪೋಷಣೆ, ವಿದ್ಯಾಭ್ಯಾಸ, ನೆಂಟಸ್ಥಿಕೆ ಎಲ್ಲದರಲ್ಲೂ ಹೆಂಗಸರೇ ನಿರ್ಣಯಕ ಪಾತ್ರಧಾರಿಗಳು. ಅಂತೆಯೇ ಈ ಕುಟುಂಬಗಳ ಆರಾಧ್ಯ ದೇವತೆ ಅಮ್ಮನೇ ಆಗಿರುತ್ತಾಳೆ. ಇದು ಈ ಸಮುದಾಯದ ವೈಶಿಷ್ಟ್ಯ. ಈ ಕುಟುಂಬಗಳಲ್ಲಿ ಇತ್ತೀಚೆಗೆ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವರ ಪ್ರಭಾವದಿಂದ ಪಾರಂಪರಿಕ ವೃತ್ತಿಯಿಂದ ಈ ಕುಟುಂಬಗಳು ಪರ್ಯಾಯ ಬದುಕನ್ನು ಕಂಡುಕೊಳ್ಳುತ್ತಿದ್ದಾರೆ. ಈ ಕುಟುಂಬಗಳಲ್ಲಿ ಜನಿಸಿದ ವಿದ್ಯಾವಂತ ಯುವಕರು ಸರಕಾರಿ, ಅರೆಸರಕಾರಿ, ಖಾಸಗಿ ಉದ್ದಿಮೆ, ಸಣ್ಣ ಕೈಗಾರಿಕೆ, ಫೈನಾನ್ಸ್‌ನಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾಜದ ಇನ್ನಿತರ ಸಮುದಾಯಗಳಂತೆ ಆರ್ಥಿಕವಾಗಿ ಸದೃಢರಾಗುತ್ತಿದ್ದುದು ಮಹತ್ತರ ಬೆಳವಣಿಗೆ ಆಗಿದೆ. ಹೊಸಪೇಟೆ ನಗರದ ಅನೇಕ ಸಮಸ್ಯೆಗಳಿಗಾಗಿ ನಡೆದ ನಡೆಯುತ್ತಿರುವ ಜನಪರ ಹೋರಾಟಗಳಲ್ಲಿ ಈ ಬೇಡ ಸಮುದಾಯದ ಯುವಕರ ಪಡೆಯನ್ನೇ ಕಾಣಬಹುದು.

೨. ಗಣಿಗಾರಿಕೆಯಲ್ಲಿ ಬೇಡ ಮಹಿಳೆ : ತಾಲೂಕಿನ ಶ್ರೀಮಂತ ಪ್ರಾಕೃತಿಕ ಸಂಪತ್ತಿನಲ್ಲಿ ಗಣಿಸಂಪತ್ತು ಅತ್ಯಂತ ಗಣನೀಯ ಕಾಣಿಕೆ ನೀಡಿದೆ. ಹೊಸಪೇಟೆ ತಾಲೂಕಿನ ಪಾಪಿ ನಾಯಕನಹಳ್ಳಿ, ಕಲ್ಲಹಳ್ಳಿ, ವ್ಯಾಸನಕೆರೆ ಭಾಗದಲ್ಲಿ ದಕ್ಷಿಣದಿಂದ ಉತ್ತರಾಭಿಮುಖವಾಗಿ ಚಾಚಿರುವ ಗಣಿ ಹೊಂದಿರುವ ಗುಡ್ಡ ಇಕ್ಕೆಲಗಳಲ್ಲಿ ಗಣಿ ಕಾರ್ಮಿಕರನ್ನು ಹೆಚ್ಚಾಗಿ ಕಾಣಬಹುದು. ಕೆಲವೇ ಕೆಲವು ಶ್ರೀಮಂತರು ಹಲವು ವರ್ಷಗಳಿಂದ ಗಣಿಗಾರಿಕೆಯ ಪರವಾನಿಗಿಯನ್ನು ಪಡೆದು ಗಣಿ ತೆಗೆಯುವುದು ಮುಂದುವರೆಸಿದ್ದರೂ, ಇತ್ತೀಚೆಗೆ ಚೈನಾ ದೇಶದಿಂದ ಬಂದ ಅತಿಯಾದ ಬೇಡಿಕೆಯಿಂದ ಗಣಿ ಮಾಲೀಕರು ದಿಢೀರನೆ ಶ್ರೀಮಂತ ರಾದರು. ಈ ದಿಢೀರ್ ಶ್ರೀಮಂತಿಕೆ ಎಲ್ಲರ ಕಣ್ಣು ಕುಕ್ಕಿದ ನಂತರವೇ ಈ ಪ್ರದೇಶದ ಸಾಮಾನ್ಯ ಜನರಿಗೆ ಗಣಿ ಸಂಪತ್ತಿನ ನಿಜವಾದ ಮೌಲ್ಯದ ಬಗ್ಗೆ ತಿಳುವಳಿಕೆ ಬರಲು ಪ್ರಾರಂಭವಾಯಿತು. ಹೊಸಪೇಟೆ ತಾಲೂಕಿನಲ್ಲಿಯೇ ತಿಂಗಳಿಗೆ ೪೦೦ ರಿಂದ ೪೫೦ ಕೋಟಿ ಮೌಲ್ಯದ ಕಬ್ಬಿಣದ ಅದಿರಿನ ಪುಡಿಯು ರಪ್ತಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಈ ಗಣಿ ಪ್ರದೇಶದಲ್ಲಿ ಕೂಲಿ ಕೆಲಸದಲ್ಲಿ ತೊಡಗಿರುವವರೆಂದರೆ ಹೆಣ್ಣು ಮಕ್ಕಳು, ಬಾಲಕಾರ್ಮಿಕರು. ಗಣಿ ಬೆಟ್ಟದ ಪದತಲದ ಹಳ್ಳಿಗಳಲ್ಲಿ ವಾಸಿಸುವ ದುಡಿಯುವ ಮಹಿಳೆಯರಲ್ಲಿ ನಾಯಕ ಸಮುದಾಯದ ಮಹಿಳೆಯರು ಹೆಚ್ಚಿನ ಸಂಖ್ಯೆ ಯಲ್ಲಿ ಗಣಿಗಾರಿಕೆಯಲ್ಲಿ ದುಡಿಯುತ್ತಿದ್ದಾರೆ. ಇವರು ಕನಿಷ್ಠ ಕೂಲಿಗಾಗಿ ಧೂಳಿನಲ್ಲಿ ದಾರುಣ ಬದುಕನ್ನು ಸವೆಸುತ್ತಿದ್ದಾರೆ. ಮನೆಯ ಗಂಡರಲ್ಲಿ ಕೆಲವರು ಗಣಿಗಾರಿಕೆಯಲ್ಲಿ ತೊಡಗಿರುವ ಮಹಿಳೆಯರೊಂದಿಗೆ ದುಡಿಮೆಯಲ್ಲಿ ಸಹಕರಿಸುತ್ತಿದ್ದರೂ ಒಟ್ಟಾರೆಯಾಗಿ ಗಣಿಗಾರಿಕೆಯಲ್ಲಿ ಈ ಸಮುದಾಯದ ಮಹಿಳೆಯರ ಸಂಖ್ಯೆ ಅತಿ ಹೆಚ್ಚು. ಆರೋಗ್ಯದ ಮೇಲೆ ತೀವ್ರ ರೀತಿಯ ದುಷ್ಪರಿಣಾಮವನ್ನು ಬೀರುತ್ತಿರುವ ಗಣಿಯ ಧೂಳಿನಿಂದ ಈ ಮಹಿಳೆಯರನ್ನು ಸಂರಕ್ಷಿಸುವ ಪ್ರಯತ್ನ ನಡೆಯಬೇಕಾಗಿದೆ. ಇತರೆ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮಹಿಳೆಯರೊಂದಿಗೆ ಗಣಿಗಾರಿಕೆಯಲ್ಲಿ ಜೀವ ತೇಯುವ ಈ ಮಹಿಳೆಯರ ಆಗತ್ಯ ರಕ್ಷಣೆಗೆ ಗಣಿಮಾಲೀಕರ, ಎಲ್ಲಕ್ಕಿಂತ ಮಿಗಿಲಾಗಿ ಸರಕಾರದ ಪ್ರಯತ್ನಗಳು ತೀರಾ ಕಡಿಮೆ. ಗಣಿಗಾರಿಕೆಯನ್ನು ದಿಢೀರನೆ ನೂರಾರು ಕೋಟಿ ರೂ.ಗಳ ಮಾಲೀಕರಾಗಿರುವ ಬೆರಳೆಣಿಕೆಯ ಶ್ರೀಮಂತರು, ಗಣಿ ಕಾರ್ಮಿಕರ ಅದರಲ್ಲೂ ಬೇಡ ಮಹಿಳೆಯರ ಸರ್ವತೋಮುಖ ಅಭಿವೃದ್ದಿಗೆ ಕಿಂಚಿತ್ತೂ ಪ್ರಯತ್ನಿಸದೇ ಇರುವುದು ನಾಗರೀಕ ಸಮಾಜಕ್ಕೆ ಸವಾಲಾಗಿದೆ. ಇವರ ಆರೋಗ್ಯ ಸುಧಾರಿಸುವ, ಇವರ ಸಾಂಸ್ಕೃತಿಕ ಜೀವನ ಸುಧಾರಿಸುವ, ಇವರ ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡುವ, ಇವರ ವಾಸಕ್ಕೆ ಶಾಶ್ವತ ವಸತಿಯಂತಹ ಮೂಲಭೂತ ಅವಶ್ಯಕತೆಗಳು ಇಂದಿಗೂ ಮರೀಚಿಕೆ ಆಗಿವೆ.

೩. ಕೃಷಿಯಲ್ಲಿ ಬೇಡ ಸಮುದಾಯದ ಮಹಿಳೆ : ತಾಲೂಕಿನ ೧೦೪ ಗ್ರಾಮಗಳಲ್ಲಿ ಅರ್ಧದಷ್ಟು ನೀರಾವರಿ ಅನುಕೂಲ ಹೊಂದಿದ್ದರೆ, ಇನ್ನರ್ಧ ಪೂರ್ತಿಯಾಗಿ ಭೂ ಬೇಸಾಯವನ್ನು ಅವಲಂಬಿಸಿದೆ. ನೀರಾವರಿ ಸೌಲಭ್ಯವಿಲ್ಲದ ಪ್ರದೇಶದಲ್ಲಿಯೇ ಅತಿ ಹೆಚ್ಚಿನ ಬೇಡ ಸಮುದಾಯದ ಕುಟುಂಬಗಳು ನೆಲೆಸಿರುವುದು ಕಂಡುಬರುತ್ತದೆ. ಇದಕ್ಕೆ ಐತಿಹಾಸಿಕ ಕಾರಣವೂ ಇದೆ. ಸೈನಿಕರ ನೆಲೆಗಳಾಗಿದ್ದ ಬೆಟ್ಟದ ಇಕ್ಕೆಲಗಳಲ್ಲಿ ಬೇಡರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರು ಇದ್ದರು. ಇವರಿರುವ ಪ್ರದೇಶಗಳು ನೀರಾವರಿಗೆ ಅಷ್ಟೊಂದು ಯೋಗ್ಯ ಪ್ರದೇಶ ಗಳಾಗಿರಲಿಲ್ಲ. ಹೀಗಾಗಿ ಇವು ಕೃಷಿಗೆ ಯೋಗ್ಯವಾಗಿರಲಿಲ್ಲ. ಯೋಗ್ಯವಾದ ಜಮೀನು ಮಳೆಯನ್ನೇ ಅವಲಂಬಿಸಿತ್ತು. ಅಲ್ಪಸ್ವಲ್ಪ ಸ್ವಂತ ಜಮೀನುಗಳನ್ನು ಹೊಂದಿದ ಈ ಸಮುದಾಯದ ಜೀವನೋಪಾಯಕ್ಕಾಗಿ ಇದು ಸಾಕಾಗುತ್ತಿರಲಿಲ್ಲ. ಇದರಿಂದ ನೀರಾವರಿ ಪ್ರದೇಶಕ್ಕೆ ಕೂಲಿ ಅರಸಿ ವಲಸೆ ಹೋದವು. ನೀರಾವರಿ ಪ್ರದೇಶದಲ್ಲಿ ಗುತ್ತಿಗೆ ಪಡೆದೋ ಅಥವಾ ಕೃಷಿ ಕೂಲಿಕಾರರಾಗಿ ಕೆಲಸ ಮಾಡುತ್ತಾ ತಮ್ಮ ಜೀವನಕ್ಕೆ ದಾರಿ ಮಾಡಿಕೊಂಡಿದ್ದವು. ತಲೆ-ತಲಾಂತರದಿಂದ ಕೃಷಿ ಕೂಲಿಕಾರರ ಕುಟುಂಬಗಳ ಪರಂಪರೆಯೇ ಈ ತಾಲೂಕಿನ ಬಹಳಷ್ಟು ಹಳ್ಳಿಗಳಲ್ಲಿದೆ. ಅವು ಹೆಚ್ಚಿನ ಸಂಖ್ಯೆಯಲ್ಲಿ ಬೇಡ ಸಮುದಾಯದ ಕುಟುಂಬಗಳೇ ಆಗಿರುತ್ತವೆಂಬುದು ಪ್ರಮುಖ ಸಂಗತಿ. ತಾಲೂಕಿನ ಭೂ ಬೇಸಾಯ ಕಂಡುಬರುವ ಪಾಪಿನಾಯಕನಹಳ್ಳಿ, ಮರಿಯಮ್ಮನಹಳ್ಳಿ, ಗರಗ, ಚಿಲಕನಹಟ್ಟಿ, ಡಣಾಯಕನ ಕೆರೆ ಮೊದಲಾದ ಹಳ್ಳಿಗಳಲ್ಲಿ ಕೃಷಿ ಕೂಲಿಕಾರರಲ್ಲಿ ಹೆಚ್ಚಿನವರು ಬೇಡ ಮಹಿಳೆಯರು. ಈ ಪ್ರದೇಶದಲ್ಲಿ ಇವರ ಕೂಲಿ ಕನಿಷ್ಠ ಪ್ರಮಾಣದ್ದಾಗಿದ್ದು, ಈ ಕುಟುಂಬಗಳಲ್ಲಿಯ ಸಾಮಾಜಿಕ, ಶೈಕ್ಷಣಿಕ ಸುಧಾರಣೆ ಅಷ್ಟಾಗಿ ಕಂಡುಬರಲಾರದು. ಸರಕಾರದ ಮೀಸಲಾತಿಯಿಂದ ಸ್ಥಳೀಯ ಸಂಸ್ಥೆಗಳಲ್ಲಿ ಕೆಲವು ಜನಪ್ರತಿನಿಧಿಗಳು, ಮಹಿಳಾ ಪ್ರತಿನಿಧಿಗಳನ್ನು ನೋಡಬಹುದು. ಈ ಸೀಮಿತ ಅನುಕೂಲ ಪಡೆದಿರುವ ಕೆಲವು ಕುಟುಂಬಗಳನ್ನು ಬಿಟ್ಟರೆ ಬಹುತೇಕ ಕುಟುಂಬಗಳಲ್ಲಿಯ ಮಹಿಳೆಯರು ಕುಟುಂಬದ ಆರ್ಥಿಕ ಆಧಾರ ಸ್ತಂಭಗಳಾಗಿದ್ದಾರೆ. ನೀರಾವರಿ ಸೌಲಭ್ಯವಿರುವ ಕಮಲಾಪುರ, ರಾಮಸಾಗರ, ದೇವಲಾಪುರ, ಮೆಟ್ರಿ, ಸೋಮಸಮುದ್ರ, ಸುಖಾಪುರ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಕೂಲಿ ಅರಸಿ ಬಂಧಿರುವ ಬೇಡ ಕುಟುಂಬಗಳಲ್ಲಿ ಕೆಲವು ಇತ್ತೀಚೆಗೆ ಸ್ವಂತ ಜಮೀನು ಹೊಂದಿದ ಕುಟುಂಬಗಳು. ಆದರೆ ಇವು ಬೆರಳೆಣಿಕೆಯಷ್ಟು ಮಾತ್ರ. ಆದರೆ ಅಸಂಖ್ಯಾತ ಕುಟುಂಬಗಳು ಕೂಲಿಯನ್ನೇ ನಂಬಿ ಬದುಕುತ್ತಿವೆ. ಕೃಷಿ ಕೂಲಿಕಾರರ ಕುಟುಂಬಗಳ ಗಂಡಸರೂ ಇತರರ ಜಮೀನುಗಳಲ್ಲಿ ದುಡಿದರೂ ಇವರ ದುಡಿಮೆಯ ಫಲ ಸಂಸಾರಕ್ಕೆ ಸಿಗುವುದು ಸ್ವಲ್ಪ ಮಾತ್ರ. ಮಹಿಳಾ ಕೃಷಿ ಕೂಲಿಕಾರರ ಅದರಲ್ಲೂ ಬೇಡ ಸಮುದಾಯದ ಮಹಿಳೆಯರ ದುಡಿಮೆಯಿಂದ ಹಲವಾರು ಕುಟುಂಬಗಳ ನಿರ್ವಹಣೆ ಸಾಗುತ್ತದೆ. ನೀರಾವರಿ ಪ್ರದೇಶದ ಕೃಷಿ ಕೂಲಿ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಹೀಗಾಗಿ ಭೂ ಬೇಸಾಯದ ಕೃಷಿ ಕೂಲಿಗಿಂತ ನೀರಾವರಿ ಪ್ರದೇಶದ ಬೇಡ ಮಹಿಳೆಯ ಜೀವನ ಮಟ್ಟ ಹೆಚ್ಚಿರುತ್ತದೆ.